Friday, 24 April 2020

ಜೀವನ ಮೈತ್ರಿ ಭಾಗ ೬೭(67)



ಜೀವನ ಮೈತ್ರಿ ಭಾಗ ೬೭



           ಪುರೋಹಿತರು ಸಾಕಷ್ಟು ಆಲೋಚಿಸಿ ಲಾಭ  ನಷ್ಟ, ಅನುಕೂಲ ಅನಾನುಕೂಲ ಎಲ್ಲವನ್ನು ಲೆಕ್ಕ ಹಾಕಿ "ನಾನು ಬರುತ್ತೇನೆ "ಎಂದು ಒಪ್ಪಿಕೊಂಡರು. "ನೀವು ಬರಬೇಕು. ಅಷ್ಟೇ ಅಲ್ಲ . ನೀವೀಗ ಮಾಡಿದ ಆರೋಪವನ್ನು ನಿಮಗೆ ಯಾರು ಹೇಳಿದರು? ಏನು ಹೇಳಿದರು .ಎಂಬುದನ್ನು ಕೂಡ ಸ್ಪಷ್ಟವಾಗಿ ತಿಳಿಸಬೇಕು" ಎಂದು ಕಿಶನ್ ಪಟ್ಟುಹಿಡಿದು ಕುಳಿತ.


        ಯಾರದೋ ಮಾತನ್ನು ಕೇಳಿ ಸಿಕ್ಕಿಬಿದ್ದೆ ಮಾತನಾಡುವ ಮುನ್ನ ಸರಿಯಾಗಿ ಯೋಚಿಸಬೇಕಿತ್ತು. ಎಂದು ತನ್ನ ಮನದಲ್ಲಿ ಅಂದುಕೊಂಡರು ಪುರೋಹಿತರು.
"ಇರ್ಲಿ ಬಿಡಿ...  ಯಾರು ಹೇಳಿದರು ಏನು ಹೇಳಿದರು ಎಂಬುದನ್ನು ಇಲ್ಲಿಗೆ ಬಿಟ್ಟುಬಿಡೋಣ. ಅದನ್ನು  ಮನಸ್ಸಿಗೆ ತೆಗೆದುಕೊಳ್ಳಬೇಡಿ."

ಕಿಶನ್:-"ಇಲ್ಲ ..ಖಂಡಿತಾ ಸಾಧ್ಯವಿಲ್ಲ.. ಮಾಡದ ತಪ್ಪಿನ ಆರೋಪವನ್ನು ನಾನು ಹೊರಲು ಸಾಧ್ಯವಿಲ್ಲ... ಹೇಳಲೇಬೇಕು..."

      ಎಂದಾಗ ನಿರ್ವಾಹವಿಲ್ಲದೆ ಪುರೋಹಿತರು "ನಾನು ಯಾವಾಗಲೂ ಪೌರೋಹಿತ್ಯಕ್ಕೆ ಹೋಗುವ ಮನೆಯ ಶಶಿ ಎಂಬುವರು ಈ ಹುಡುಗಿಯ ಸೋದರತ್ತೆ.. ಅವರೇ ಹೇಳಿದ ಮೇಲೆ ನಂಬದಿರಲು ಸಾಧ್ಯವೇ?"


ಕಿಶನ್:-ಏನೆಂದು ಹೇಳಿದರು?

ಪುರೋಹಿತರು:-ನೀವು ತಪ್ಪು ಮಾಡಿಲ್ಲ ಅಂದಮೇಲೆ ಬಿಟ್ಟುಬಿಡೋಣ..

ಕಿಶನ್ :-ನೀವು ಹೇಳಲಿಲ್ಲ ಎಂದಾದರೆ ನಾನು ಮಾನನಷ್ಟ ಮೊಕದ್ದಮೆ ಹೂಡಿ ಮುಂದಿನ ಕ್ರಮ ಜರುಗಿಸುತ್ತೇನೆ.

ಪುರೋಹಿತರು:-(ತನ್ನ ಮೇಲೆ ಕೇಸು ದಾಖಲಾದರೆ ಎಂಬ ಭಯದಿಂದ  ) ಅಯ್ಯೋ ಅಷ್ಟೆಲ್ಲಾ ಮುಂದುವರಿಯುವುದು ಬೇಡ ಬಿಡಿ.. ನಾನು ಹೇಳುತ್ತೇನೆ ..ನಾಲ್ಕು ವರ್ಷದಿಂದ ತಮ್ಮನ ಮಗಳು ಒಬ್ಬನ ಜೊತೆ ಓಡಾಡುತ್ತಿದ್ದಳು.   ಇಬ್ಬರಿಗೂ ಬಹಳ ಅನ್ಯೋನ್ಯತೆಯಿದ್ದು ಆಕೆ ಗರ್ಭಿಣಿಯಾದಳು.. ಎರಡು ಕಡೆಯವರಿಗೂ  ಮದುವೆ ಮಾಡದೆ ನಿರ್ವಾಹವಿಲ್ಲ.. ಹೊಟ್ಟೆಯಲ್ಲಿ ಇರುವುದನ್ನು ತೆಗೆಸಿ ಮದುವೆಯನ್ನು   ನಿಶ್ಚಯಿಸಿದರು..
ಇದಿಷ್ಟು ಅವರೇ ಹೇಳಿದ್ದು ..ನನ್ನನ್ನು  ಬಿಟ್ಟುಬಿಡಿ ನಾನಿಲ್ಲ ಇನ್ನು ಈ ವಿಷಯಕ್ಕೆ..."

ಗಣೇಶ ಶರ್ಮ:-ಸರಿ ..ಈ ವಿಷಯವನ್ನು ನಾವು ನೋಡಿಕೊಳ್ಳುತ್ತೇವೆ.. ಇದು ಮಾತ್ರ ಸಂಪೂರ್ಣ ಸುಳ್ಳು.. ಯಾರೊಂದಿಗೂ ಈ ವಿಷಯವನ್ನು ಹಂಚಿಕೊಳ್ಳಲು ಹೋಗಬೇಡಿ .ಕಾರ್ಯಕ್ರಮಕ್ಕೆ ಬಂದು ಸಾಂಗವಾಗಿ ನಡೆಸಿಕೊಡಿ ಎಂದು ಕೋರಿ ಅಲ್ಲಿಂದ ಹೊರಟರು.

ಕಾರು ಸ್ಟಾರ್ಟ್ ಮಾಡಿ ಐದು ನಿಮಿಷ ಡ್ರೈವ್ ಮಾಡಿದ ಕಿಶನ್ ಮಾರ್ಗದ ಬದಿಯಲ್ಲಿ ಕಾರ್ ನಿಲ್ಲಿಸಿ ಮೈತ್ರಿಗೆ ಕರೆ ಮಾಡಿದ.

"ಅದು ಯಾರೇ ನಿನ್ನ ಸೋದರತ್ತೆ ಶಶಿಯಂತೆ?"

"ಏನಾಯ್ತು ಕಿಶನ್ ? ಯಾಕೆ ಶಶಿಯತ್ತೆಯ ಸುದ್ದಿ! ದನಿಯಲ್ಲಿ ಏನೋ ವ್ಯತ್ಯಾಸವಿದೆಯಲ್ಲ"


"ಹೌದು ..ಅವರಿಗೇನು ಬುದ್ಧಿ ಗಿದ್ಧಿ  ಸರಿ ಇಲ್ವಾ.
? ಇಲ್ಲಸಲ್ಲದನ್ನು ಪ್ರಚಾರ ಮಾಡುವುದು ತರವಲ್ಲ .."ಎಂದು ಸಿಟ್ಟಿನಿಂದಲೇ ಗುಡುಗಿದ.

 ಕಿಶನ್ ನ ಇಂತಹ ಸಿಡುಕು ಮಾತನ್ನು ಇದುವರೆಗೂ ಕೇಳದವಳಿಗೆ ಆತಂಕವಾಯಿತು.
 "ಏನಾಯಿತು ..?ಅದನ್ನಾದರೂ ಹೇಳಿ" ಎಂದಳು.


"ನಾ ಹೇಳಿದರೆ ನನ್ನ ನಾಲಿಗೆ ಹೊಲಸು ..ಕೇಳಿದರೆ ನಿನ್ನ ಕಿವಿಯ ಹಾಳು .
ನಮ್ಮ ಬಗ್ಗೆ ತೀರಾ ಕೆಟ್ಟದಾಗಿ ಮಾತನಾಡಿದ್ದಾರೆ.."

"ಅವರ ಸ್ವಭಾವ ಹಾಗೇನೆ"

"ಹಾಗೆಂದು ಒಪ್ಪಿ ಬಿಡಲು ಸಾಧ್ಯವೇ..? ನನಗೂ ನಿನಗೂ ಅನ್ಯೋನ್ಯ ಸಂಬಂಧವಿತ್ತಂತೆ. ಇಬ್ಬರೂ ಜೊತೆಯಾಗಿ ಸುತ್ತುತ್ತಿದ್ದೆವಂತೆ ..ಪರಿಣಾಮವಾಗಿ ನೀನು ಗರ್ಭಿಣಿಯಾಗಿ  ಮದುವೆ ಮಾಡುವುದು ಅನಿವಾರ್ಯವೆಂದು ಅಬಾರ್ಷನ್ ಮಾಡಿಸಿ   ಮದುವೆ ನಿಶ್ಚಯಿಸಿದರಂತೆ..ಇಷ್ಟೆಲ್ಲ ಕೇಳಿದ ಮೇಲೂ ಸುಮ್ಮನೆ ಇರ್ತೀಯ.. ಇರಬೇಕಾ..?
ಎಂದು ಒಂದೇ ಉಸಿರಿನಲ್ಲಿ ಗುಡುಗಿದ ಕಿಶನ್ ನ ಮಾತಿಗೆ ಮೈತ್ರಿ ನಡುಗಿದಳು.

ಆಕೆಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸೀದಾ ಹೋಗಿ ಅಮ್ಮನ ಬಳಿ ಹೇಳಿ ಕಣ್ಣೀರು ಹಾಕಿದಳು. ಮಂಗಳಮ್ಮನಿಗೆ ಶಶಿ ಅತ್ತಿಗೆಯ ಅಸಡ್ಡೆಯ ವರ್ತನೆಯನ್ನು ಮರೆಯುವ ಮುನ್ನವೇ ಈ ರೀತಿ ಸಿಡಿಲಿನಂತೆ ಅಪಪ್ರಚಾರ ವಾರ್ತೆಗಳು ಬಂದಾಗ ಆಘಾತ ಉಂಟಾಯಿತು.. ಈ ವಿಷಯದಲ್ಲಿ ಮಾತ್ರ ಸುಮ್ಮನಿರುವುದು ಸರಿಯಲ್ಲ ಗಂಡನಿಗೆ ಹೇಳಲೇಬೇಕು ಎಂದು ನಿರ್ಧರಿಸಿದರು.
ರಾತ್ರಿ ಊಟ ಮಾಡಿ ಬೇಗ ವೇಗವಾಗಿ ಅಡುಗೆ ಮನೆಯ ಕೆಲಸಗಳನ್ನು ಮುಗಿಸುತ್ತಿದ್ದಳು. ಅಲ್ಲಿಗೆ ಬಂದ ಮಹಾಲಕ್ಷ್ಮಿಅಮ್ಮ "ಏನು ಮಂಗಳ ..ಪಾತ್ರೆಗಳನ್ನೆಲ್ಲ ಸರಿಯಾಗಿ ತೊಳೆದಿಲ್ಲ.
 ಅಲ್ಲಿನೋಡು ಪಾತ್ರೆಯಲ್ಲಿ ಆಂಟಿ ಹಿಡಿದಿದೆ ಇನ್ನು ಸ್ವಲ್ಪ ತಿಕ್ಕು.. ಎಂದಾಗ ಮೊದಲೇ ಮನಸ್ಸು ಸರಿ ಇಲ್ಲದ ಮಂಗಳಮ್ಮ"  ಇನ್ನು ಬೇಕಾದರೆ ನೀವೇ ತಿಕ್ಕಿಕೊಳ್ಳಿ "ಎಂದು    ಉತ್ತರಿಸಿ ಬಿರಬಿರನೆ ರೂಮಿಗೆ ನಡೆದರು.ಮಂಗಳಮ್ಮ ಬರುವ ಹೊತ್ತಿಗೆ ಭಾಸ್ಕರ ಶಾಸ್ತ್ರಿಗಳು ಹಾಸಿಗೆ ಮೇಲೆ ಮಲಗಿ ಕಣ್ಣುಗಳಿಗೆ ನಿದ್ರೆ ಆವರಿಸಲು ಆರಂಭವಾಗಿತ್ತು.."ರೀ .." ಎಂದು ಕರೆದರು. ಎಚ್ಚರವಾಗಲಿಲ್ಲ ... ಪುನಃ ಅಲುಗಾಡಿಸಿ ಎಬ್ಬಿಸಲು ಎಚ್ಚೆತ್ತುಕೊಂಡರು .ಗಂಡನಲ್ಲಿ ಮೈತ್ರಿ ಹೇಳಿದ ವಿಷಯಗಳನ್ನೆಲ್ಲಾ ಚಾಚುತಪ್ಪದೆ ವರದಿ ಒಪ್ಪಿಸಿದರು. ನಿದ್ರೆಯ ಮಂಪರಿನಲ್ಲಿದ್ದ ಭಾಸ್ಕರ ಶಾಸ್ತ್ರಿಗಳು ಒಮ್ಮೆಲೆ ಎದ್ದುಕುಳಿತರು...
'ಏನು .. ಶಶಿ ಅಕ್ಕ ಈ ರೀತಿ ಹೇಳಿಕೊಂಡು ಬಂದಿದ್ದಾರೆಯೇ..? .ಇದನ್ನು ಮಾತ್ರ ಈ ಶಾಸ್ತ್ರಿ ಸಹಿಸಲಾರ ..ತಕ್ಕ ಪಾಠ ಕಲಿಸಲೇಬೇಕು.. ಎಲ್ಲವನ್ನು ಸಹಿಸುತ್ತಾ ಹೋದರೆ ತಿದ್ದಿಕೊಳ್ಳಲು ಅವಕಾಶ ಕೊಡದಂತಾಗುತ್ತದೆ.. ತಪ್ಪಿದವರಿಗೆ ತಪ್ಪನ್ನು ತಿದ್ದಿ ಹೇಳಿ ಸರಿದಾರಿಯಲ್ಲಿ ನಡೆಸುವುದು ಕರ್ತವ್ಯ "ಎಂದು  ಖಾರವಾಗಿ ನುಡಿದು ಚಾವಡಿಗೆ ಬಂದರು..


       ಊಟವಾದ ಮೇಲೆ ಮನೆಯ ಎದುರು ಬದಿಯ ಅಂಗಳದಲ್ಲಿ ಹತ್ತು ಹೆಜ್ಜೆ ನಡೆಯುತ್ತಿದ್ದ ತಂದೆಯವರನ್ನು ಕರೆದರು.ತನ್ನ ನೆಚ್ಚಿನ ಧಾರವಾಹಿ ನೋಡುತ್ತಿದ್ದ ಅಮ್ಮನನ್ನು ಕೂಡ ಟಿವಿ ಆಫ್ ಮಾಡಿ  ಕೂಡಲೇ ಬರಲು ಹೇಳಿದರು.. ಮೈತ್ರಿ ಮಹೇಶ್ ಕೂಡ ಜೊತೆಯಾಗಿದ್ದರು.

"ನೋಡಿ ...ನಾನೀಗ ಒಂದು ಬಹಳ ಗಂಭೀರವಾದ ವಿಷಯವನ್ನು ಚರ್ಚಿಸುತ್ತಿದ್ದೇನೆ.ಎಲ್ಲರೂ ಕಿವಿಗೊಟ್ಟು ಕೇಳಿ. ಅಮ್ಮ.. ಈಗ ನಾನು ಹೇಳುವುದನ್ನು ಕೇಳುವುದು ನಿಮಗೆ ಕೆಲಸ.. ಮಧ್ಯದಲ್ಲಿ ಬಾಯಿಹಾಕಿ ಇತರರ ಪರವಾಗಿ ಮಾತನಾಡಲು ಹೋಗಬಾರದು ..ಎಂದು ತಿಳಿಯಿತಾ "ಎಂದು ಮಗ ಅಮ್ಮನಿಗೆ ಹೇಳಿದಾಗ ಸುಮ್ಮನೆ ತಲೆ ಆಡಿಸಿದರು ಮಹಾಲಕ್ಷ್ಮಿ ಅಮ್ಮ... ಎಲ್ಲವನ್ನೂ ವಿವರವಾಗಿ ಹೇಳಿದ ಭಾಸ್ಕರ ಶಾಸ್ತ್ರಿಗಳು" ನಾವು ಇದರ ಬಗ್ಗೆ ಶಶಿಯನ್ನು ವಿಚಾರಿಸಬೇಕು. ಅವಳು ಮಾಡುತ್ತಿರುವ ತಪ್ಪನ್ನು  ಭಾವನಿಗೆ ಹೇಳಲೇಬೇಕು ..ಶಾಸ್ತ್ರೀ ವಂಶದಲ್ಲಿ ಬೆಳೆದು ಅನ್ನ ಹಾಕಿದ ಮನೆಗೆ ದ್ರೋಹ ಬಗೆಯುವವರನ್ನು ಎಂದಿಗೂ ಕ್ಷಮಿಸುವುದಿಲ್ಲ ಈ ಶಾಸ್ತ್ರಿ ವಂಶ.. ಅಪ್ಪ ನಾಳೆ ನಾನು ಅಕ್ಕನಲ್ಲಿಗೆ ತೆರಳಿ ಅವರನ್ನು ವಿಚಾರಿಸಿಕೊಳ್ಳುತ್ತೇನೆ.."

"ಮಗನೇ.. ಮಗಳು ಚಿಕ್ಕಂದಿನಲ್ಲಿ ಮಾಡುತ್ತಿದ್ದ ತಪ್ಪುಗಳಿಗೆ ನಾಗರ ಬೆತ್ತದ ರುಚಿ ತೋರಿಸಿ ತಿದ್ದಿದ್ದೇನೆ.. ಈಗಲೂ ಕೂಡ ತಪ್ಪು ಮಾಡಿದರೆ ಎಚ್ಚರಿಸುವ ಹಕ್ಕು ನನಗಿದೆ ..ಆದ್ದರಿಂದ ನಿನ್ನ ಜೊತೆಗೆ ನಾನು ಬರುತ್ತೇನೆ" ಎಂದರು ಶ್ಯಾಮ ಶಾಸ್ತ್ರಿಗಳು.

"ಆಗಲಿ ಅಪ್ಪ " ಎಂದು ಒಪ್ಪಿದರು ಭಾಸ್ಕರ ಶಾಸ್ತ್ರಿಗಳು.

ಅಮ್ಮನ ಕಡೆಗೆ ತಿರುಗಿ "ನೋಡು.. ಶಶಿ ಅಕ್ಕನಿಗೆ ಫೋನ್ ಮಾಡಿ
ವಿಚಾರ ತಿಳಿಸುವುದು ಬೇಡ .ಸುಳ್ಳನ್ನು ನಿಜವೆಂದು ಸಾಬೀತುಪಡಿಸಲು ಇನ್ನಷ್ಟು ಸಾಕ್ಷ್ಯಾಧಾರಗಳನ್ನು ಕಲೆಹಾಕಿ ಸುಳ್ಳಿನಿಂದ ಶಶಿ ಮೆರೆಯುವುದು ಬೇಡ ಗೊತ್ತಾಯ್ತಾ.."
ಎಂದಾಗ ಅಮ್ಮ ತಲೆ ಆಡಿಸಿದರು..


ರಾತ್ರಿ ಭಾವಿ ಅಳಿಯನಿಗೆ ಭಾಸ್ಕರ ಶಾಸ್ತ್ರಿಗಳು ಕರೆಮಾಡಿ ವಿಷಯವನ್ನು ಇನ್ನೊಮ್ಮೆ ಖಚಿತಪಡಿಸಿಕೊಂಡರು.ಈ ಪ್ರಕರಣವನ್ನು ನಾನು ಕೂಲಂಕುಶವಾಗಿ ವಿಚಾರಿಸಿಕೊಳ್ಳುತ್ತೇನೆ ಎಂಬ ಭರವಸೆಯನ್ನು ನೀಡಿದರು. ಕಿಶನ್ ಗೆ ಮಾವನ ಮಾತಿನಿಂದ ತುಸು ಸಮಾಧಾನವಾಯಿತು.


ಭಾಸ್ಕರ ಶಾಸ್ತ್ರಿಗಳು ತಾಯಿಗೆ ತಿಳಿಯದಂತೆ ಲ್ಯಾಂಡ್ಲೈನ್ ಫೋನ್ ನ ಸಂಪರ್ಕ ಕಳಚಿದರು. ಮಗನನ್ನು ಕರೆದು "ಅಜ್ಜಿ...ಫೋನ್ ಮಾಡಿದರೆ ನೋಡುವ ಜವಾಬ್ದಾರಿ ನಿನ್ನದು.. ಹೇಗೂ ಚಾವಡಿಯಲ್ಲಿ ಓದಿಕೊಂಡಿರುತ್ತೀಯ... ಸಂಪರ್ಕ ಕೊಡಲು ಹೇಳಿದರೆ ಮಾಡಬೇಡ.. ಮೊಬೈಲ್ ಕೊಡಬೇಡ .."ಎಂದು ಮಗನಿಗೆ ಒಂದು ಕೆಲಸವನ್ನು ನೀಡಿದರು.


ರಾತ್ರಿಯಿಡೀ ಶಾಸ್ತ್ರಿಗಳಿಗೆ ಸರಿಯಾಗಿ ನಿದ್ದೆ ಬರಲಿಲ್ಲ ..ಒಂದೇ ಪಾತ್ರೆಯ ಅನ್ನವನ್ನು ಉಂಡವರು.. ಒಂದೇ ರಕ್ತವನ್ನು ಹಂಚಿಕೊಂಡು ಬೆಳೆದವರು.. ಆದರೆ ಎಷ್ಟೊಂದು ವ್ಯತ್ಯಾಸ ..ಯೋಚಿಸುತ್ತಿದ್ದಾಗ ನೆನಪುಗಳೆಲ್ಲ ಕಣ್ಣಮುಂದೆ ಹಾದು ಹೋದವು.
ಮರುದಿನ ಬೆಳಗ್ಗೆ ಬೇಗ ಎದ್ದು ಶ್ಯಾಮ  ಶಾಸ್ತ್ರಿಗಳು ಪೂಜೆ ಮುಗಿಸಿ ತಿಂಡಿ ತಿಂದು ರೆಡಿಯಾದರು ..ಶಾಸ್ತ್ರಿಗಳು ಕೂಡ ಜೊತೆಯಾದರು ..ಇಬ್ಬರು ಬೆಳ್ಳಂಬೆಳಗ್ಗೆ ಶಶಿ ಮನೆಗೆ ತೆರಳಿದರು.


ಮಗ ಮತ್ತು ಪತಿ ಮಗಳ ಮನೆಗೆ ತೆರಳುತ್ತಿದ್ದಂತೆಯೇ ಮಹಾಲಕ್ಷ್ಮಿ ಅಮ್ಮ ಆಗಾಗ ಚಾವಡಿಗೆ ಇಣುಕತೊಡಗಿದರು ..ಯಾವಾಗ ಮಹೇಶ ಅಲ್ಲಿಂದ ಹೊರಡುತ್ತಾನೆ ಎಂದು..ಇದನ್ನರಿತ ಮಹೇಶ  ಅಜ್ಜಿಯನ್ನು ಪರೀಕ್ಷಿಸಲು ಒಮ್ಮೆ ಅಲ್ಲಿಂದ ಹೊರಗೆ   ತೆರಳಿದ. ಚಾವಡಿಗೆ ಬಂದ ಅಜ್ಜಿ  ಲ್ಯಾಂಡ್ ಫೋನ್ ರಿಸೀವರ್ ಕಿವಿಗೆ ಇಟ್ಟು ಡಯಲ್ ಮಾಡಲು ನೋಡಿದರು...ರಿಂಗ್ಟೋನ್ ಇಲ್ಲ ಎಂದು ಫೋನನ್ನು ಪುನಃ ಕುಕ್ಕಿದರು .ಇದನ್ನೆಲ್ಲಾ ಹೊರಗಿನ ಕಿಟಕಿಯಲ್ಲಿ ನಿಂತು ಮಹೇಶ ನೋಡುತ್ತಿದ್ದ ..ತನ್ನ ಮೊಬೈಲ್ನಲ್ಲಿ ಸೆರೆಹಿಡಿದಿದ್ದ.. ಅಜ್ಜಿ ಗೆ ಗೊತ್ತಿಲ್ಲ ..


       ಶಶಿ ಬೆಳಗಿನ ತಿಂಡಿಯಾಗಿ ಕೆಲಸದಾಳುಗಳ ಜೊತೆ ಮಾತನಾಡುತ್ತಾ ಕೆಲಸವನ್ನು ಹೇಳುತ್ತಿದ್ದಳು ..ಆಕೆಯ ಪತಿ ಶಂಕರ ಭಾವ ಪೇಪರ್ ಓದುತ್ತಾ ಇದ್ದರು. ಅಷ್ಟೊತ್ತಿಗೆ ಅಂಗಳದಲ್ಲಿ ತಮ್ಮನ ಕಾರು ಕಂಡು ಆಶ್ಚರ್ಯವೋ ಆಶ್ಚರ್ಯ. ಬಹುಶಃ ಇವನಿಗೆ ಮಗಳ ಮದುವೆ ಅಬ್ಬರದಲ್ಲಿ ಮಾಡಲು ದುಡ್ಡಿನ ಕೊರತೆಯಿರಬಹುದು ..ಹಾಗೇ ಬಂದಿದ್ದಾನೆ ಎಂಬ ಯೋಚನೆ ಅವಳಿಗೆ. ಆದರೆ ಕಾರಿನಿಂದಿಳಿದು ಬರುತ್ತಿದ್ದಂತೆಯೇ ತಮ್ಮ ಹಾಗೂ ಅಪ್ಪನ ಮುಖ ನೋಡಿ ಆಕೆಗೂ ಒಮ್ಮೆ ಒಮ್ಮೆ ದಂಗಾಯಿತು ..ಏನು ಇಷ್ಟು ಗಂಭೀರವಾಗಿ ಯೋಚಿಸುತ್ತಾರೆ ಎಂದುಕೊಂಡು ಕುಡಿಯಲು ಬೆಲ್ಲ ನೀರು ತಂದಿಟ್ಟಳು.

ಮುಂದುವರಿಯುವುದು..

✍️... ಅನಿತಾ ಜಿ.ಕೆ.ಭಟ್.
24-04-2020.

ಮುಂದಿನ ಭಾಗ... ಸೋಮವಾರ..



2 comments:

  1. Shashi maneli enaguttado....

    ReplyDelete
  2. ಕಾದು ನೋಡೋಣ.ಧನ್ಯವಾದಗಳು.💐🙏

    ReplyDelete