ಜೀವನ ಮೈತ್ರಿ ಭಾಗ ೬೯
ಒಮ್ಮೆ ಮನಸ್ಸೆಂಬ ಕಡಲು ಪ್ರಕ್ಷುಬ್ಧವಾಗಿ ಮತ್ತೆ ಈಗ ಶಾಂತವಾಯಿತು. ಮನುಷ್ಯನ ಬದುಕೇ ಹೀಗೆ.. ಏರಿಳಿತಗಳಿಂದ ,ಸುಖ-ದುಃಖಗಳಿಂದ ಆವೃತವಾಗಿರುತ್ತದೆ.ಬರಿಯ ಸುಖ ಮಾತ್ರವೇ ಇದ್ದರೆ ಆ ಸುಖದ ಸವಿಯನ್ನು ನಾವು ಗ್ರಹಿಸಲು ಅಸಮರ್ಥವಾಗುತ್ತೇವೆ..ಮಧ್ಯೆ ದುಃಖದ ಛಾಯೆ ಮಿಳಿತವಾದರೆ ಆಗ ಸುಖದ ಅಮೃತಸತ್ವ ನಮಗೆ ತಿಳಿಯುವುದು. ನಮ್ಮೊಂದಿಗೆ ನಗುನಗುತ್ತಾ ಬೆರೆಯುವ ಹಲವರ ನಗುವಿನ ಹಿಂದೆ ನೋವಿದೆಯೋ ನಲಿವಿದೆಯೋ ಪಿತೂರಿಯಿದೆಯೋ ನಮಗೆ ತಿಳಿಯದು. ಎದುರಿನಿಂದ ಹಾಡಿಹೊಗಳುವ ಜನಗಣ ನಮ್ಮ ಸುತ್ತುವರೆದಿರುತ್ತದೆ. ಆದರೆ ಅವರ ಇನ್ನೊಂದು ಮುಖ ಅರಿವಾಗುವುದು ಇಂತಹ ಸಂದರ್ಭ ಬಂದಾಗಲೇ.ಆದ್ದರಿಂದ ಜೀವನದಲ್ಲಿ ಪ್ರತಿಯೊಂದು ಹೆಜ್ಜೆಯಲ್ಲೂ ಎಚ್ಚರವಿರಬೇಕು ಎಂಬುದು ಎಲ್ಲರಿಗೂ ಅರಿವಾಯಿತು.
ಶಾಸ್ತ್ರಿಗಳ ಕುಟುಂಬಕ್ಕೆ ಈಗ ಶಶಿಯ ಇನ್ನೊಂದು ಮುಖ ಅರಿವಾಗಿ ಆಕೆಗೆ ಮೊದಲು ಕೊಡುತ್ತಿದ್ದ ಗೌರವ ಕಡಿಮೆಯಾಯಿತು. ಮನೆಯ ವಿಷಯಗಳು ಸೋರಿ ಹೋಗದಂತೆ ಗೌಪ್ಯತೆ ಕಾಪಾಡಲು ಕಾಪಾಡಲು ಎಲ್ಲರೂ ಒಗ್ಗಟ್ಟಾದರು.
ಮದುವೆಯ ಸಿದ್ಧತೆಗಳು ಭರದಿಂದ ಸಾಗುತ್ತಿದ್ದವು. ಮೈತ್ರಿ ತನ್ನ ಪರೀಕ್ಷೆ ಓದಿನತ್ತ ಗಮನಹರಿಸಿದಳು. ಮಹೇಶನಿಗೂ ಈಗ ಪರೀಕ್ಷೆ ನಡೆಯುತ್ತಿರುವುದರಿಂದ ಅವನು ಓದಿನಲ್ಲಿ ತಲ್ಲೀನನಾದ. ಭಾಸ್ಕರ ಶಾಸ್ತ್ರಿಗಳು ಉದ್ಯೋಗಕ್ಕೆ ರಜೆ ಹಾಕಿ ಮಗಳ ಮದುವೆ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಮೈತ್ರಿ ಕಿಶನ್ ಗೆ ಕರೆ ಮಾಡಿ ನಡೆದ ಸಂಗತಿಯನ್ನು ಹೇಳಿದಳು."ನಿಮ್ಮಪ್ಪನ ಈ ಶಿಸ್ತಿನ ಗುಣ ನನಗೆ ಇಷ್ಟವಾಯಿತು" ಎಂದನು ಕಿಶನ್.
"ಅಪ್ಪ ಎಲ್ಲ ವಿಷಯದಲ್ಲೂ ಶಿಸ್ತನ್ನು ತೋರಿಸುವುದು ..ನನ್ನ ವಿಷಯದಲ್ಲಿಯೂ ಹಾಗೆ"
"ಹೌದು ಮುದ್ಗೊಂಬೆ.. ನಮ್ಮ ಪ್ರೀತಿಗೋಸ್ಕರ ನಿನ್ನ ನನ್ನ ಸಂಭಾಷಣೆಯ ಕಳ್ಳಾಟ ನೆನಪಾದರೆ ಈಗ ನಗೆ ಬರುತ್ತಿದೆ..."
"ಎಷ್ಟು ಸಲ ಸಿಕ್ಕಿಬೀಳುವಂತಾದರೂ ಕೂದಲೆಳೆಯ ಅಂತರದಲ್ಲಿ ತಪ್ಪಿಸಿಕೊಂಡಿದ್ದೆ.."
"ಜಾಣೆ.. ಅಪ್ಪನ ಶಿಸ್ತಿನ ಹಿಂದೆ ಮಗಳ ಮೇಲೆ ಪ್ರೀತಿ ಇದೆ ಕಾಳಜಿ ಇದೆ.."
"ಹೌದು ..ಅದು ಈಗ ನನಗೆ ಅರಿವಾಗುತ್ತಿದೆ."
"ಇನ್ನು ಮದುವೆಗೆ ದಿನದ ಬೆರಳೆಣಿಕೆ ಶುರುವಾಗಿದೆ.. ನಾನಂತೂ ಕನಸಿನ ಮಹಲಿನಲ್ಲಿ ವಿಹರಿಸುತ್ತಿದ್ದೇನೆ."
"ಆ ಮಹಲಿನಲ್ಲಿ ನಾನು ಯುವ ರಾಣಿಯಾಗಿ ಕಂಗೊಳಿಸುವ ದಿನ ಯಾವಾಗ ಬರುತ್ತೆ ಅಂತ ಕಾಯುತ್ತಿದ್ದೇನೆ.."
"ಓಕೆ ಮುದ್ಗೊಂಬೆ.. ಸ್ವೀಟ್ ಡ್ರೀಮ್ಸ್.. ಬಾಯ್ ಬಾಯ್.."
"ಬಾಯ್"
********
ಸೌಜನ್ಯ ಕೇಶವನ ಸಂಸಾರ ಸುಖಮಯವಾಗಿ ನಡೆಯುತ್ತಿತ್ತು.. ಬೆಳಗ್ಗೆ ಬೇಗ ಎದ್ದು ಕೇಶವನನ್ನು ಹೊರಡಿಸುವುದು ಸೌಜನ್ಯಳಿಗೆ ಬೇಸರದ ಕೆಲಸವಾಗಿತ್ತು.. ಆದರೂ ಏನೂ ಬೇಸರವನ್ನು ತೋರಿಸಿಕೊಳ್ಳದೆ ಅಡುಗೆ ಮಾಡಿ ತಿಂಡಿ ಮಾಡಿ ಗಂಡನಿಗೆ ಉಣಬಡಿಸಿ ಕಳುಹಿಸಿಕೊಡುತ್ತಿದ್ದಳು.ಅಮ್ಮನೂ ಜೊತೆಯಾಗುತ್ತಿದ್ದರು. ಇತ್ತೀಚೆಗಂತೂ ಸುನಿತಾ ಬರುವುದನ್ನು ನಿಲ್ಲಿಸಿದ್ದಳು. ಅಮ್ಮ-ಅಪ್ಪ ಉದ್ಯೋಗಕ್ಕೆ ತೆರಳುತ್ತಿದ್ದರು. ಈಗ ಮೊದಲಿನಂತೆ ಸಂಗೀತ ,ಭರತನಾಟ್ಯ ,ಓದು ಎಂದು ಮಹಡಿಯ ರೂಮಿನಲ್ಲಿ ಕುಳಿತರೆ ಆಗುತ್ತಿರಲಿಲ್ಲ .ಮನೆಯ ಕೆಲಸಗಳನ್ನು ಮಾಡಲೇಬೇಕಿತ್ತು. ಕೆಲಸದಲ್ಲಿ ಸ್ವಲ್ಪ ಆಲಸ್ಯವಿದ್ದ ಸೌಜನ್ಯಳಿಗೆ ಮನೆಯ ಕೆಲಸ ಸಾಕು ಬೇಕಾಗುತ್ತಿತ್ತು..
ಎಲ್ಲರೂ ಮನೆಗೆ ಹಿಂತಿರುಗುವಾಗ ಮನೆ ಅಚ್ಚುಕಟ್ಟಾಗಿ ಇಡುವುದು ಅವಳಿಗೆ ಸವಾಲಾಗಿತ್ತು. ಅಮ್ಮ "ಇರಲಿ ಬಿಡು..ನಾನೇ ಮಾಡುತ್ತೇನೆ " ಅಂದರೂ ತಡರಾತ್ರಿಯವರೆಗೆ ಕೆಲಸ ಮಾಡುವ ಅಮ್ಮನನ್ನು ಕಂಡರೆ ಅವಳಿಗೆ ಕನಿಕರ ಉಂಟಾಗುತ್ತಿತ್ತು.. ಆದ್ದರಿಂದ ತನಗೆ ಸಾಧ್ಯವಾದಷ್ಟು ಕೆಲಸವನ್ನು ಮಾಡಿ ಮುಗಿಸುತ್ತಿದ್ದಳು....ಮದುವೆಯಾಗಿ ಕೆಲವು ದಿನದಲ್ಲಿ ಶರೀರದ ಕೊಬ್ಬು ಕರಗಲು ಆರಂಭವಾಗಿತ್ತು.. ಮನೆಗೆಲಸದಿಂದ ಸಾಕಷ್ಟು ವ್ಯಾಯಾಮ ದೊರಕುತ್ತಿತ್ತು.. ರುಚಿಕರವಾದ ತಿಂಡಿ ಮಾಡಿಕೊಡದಿದ್ದರೆ ಕೇಶವನಂತೂ ಒಪ್ಪುತ್ತಿರಲಿಲ್ಲ. ಅಚ್ಚುಕಟ್ಟಿನ ವಿಷಯದಲ್ಲೂ ಅಷ್ಟೇ. ಅವನು ಸಂಜೆ ಬಂದಾಗ ರೂಮ್ ಗಲೀಜಾಗಿದ್ದರೆ ಸೌಜನ್ಯಳಿಗೆ ಹೇಳಿ ಅಲ್ಲೇ ಸರಿ ಮಾಡಿಸುತ್ತಿದ್ದ.. ಇದಂತೂ ಸೌಜನ್ಯಳಿಗೆ ನುಂಗಲಾರದ ತುತ್ತಾಗಿತ್ತು. ಪ್ರೀತಿಯಿಂದ ಒಬ್ಬಳೇ ಮಗಳೆಂದು ಏನೂ ಕೆಲಸ ಮಾಡಿಸದೆ ಬೆಳೆದ ಮಗಳು ಈಗ ಗಂಡನ ಶಿಸ್ತಿಗೆ ಅಂಜಿ ಕೆಲಸ ಮಾಡಬೇಕಾಗಿತ್ತು..
ರೇಖಾಗೆ ಈ ವಿಷಯದಲ್ಲಿ ಅಳಿಯಂದಿರ ಮೇಲೆ ಸ್ವಲ್ಪ ಅಸಮಾಧಾನ ಉಂಟಾಯಿತು. ಆದರೂ ತುಟಿ ಕಚ್ಚಿಕೊಂಡು ಸಹಿಸಿದರು.ಅಳಿಯಂದಿರು ನಮ್ಮಂತೆ ಆಫೀಸಿನಿಂದ ಬಂದ ಮೇಲೆ ಸ್ವಲ್ಪ ಕೆಲಸವನ್ನು ಮಾಡಿಕೊಂಡರೆ ಒಳ್ಳೆಯದು ಎಂದು ಅವರ ಭಾವನೆ ಆಗಿತ್ತು. ಆದರೆ ಮನೆಗೆಲಸದಲ್ಲಿ ಸಹಕರಿಸುವ ಉಮೇದು ಕೇಶವನಿಗೆ ಇರಲಿಲ್ಲ. ಹೀಗಿರುವಾಗ ಒಂದು ದಿನ ಸೌಜನ್ಯಳ ಗೆಳತಿ "ಒಂದು ಭರತನಾಟ್ಯದ ಪ್ರೋಗ್ರಾಂ ಗೆ ಅರ್ಜೆಂಟಾಗಿ ಒಬ್ಬ ಕಲಾವಿದೆಯ ಅವಶ್ಯಕತೆ ಇದೆ ..ಒಪ್ಪಿದ ಕಲಾವಿದೆ ಕೊನೆಯ ಕ್ಷಣದಲ್ಲಿ ಬರಲಾಗುವುದಿಲ್ಲ ಎಂದರು ..ನೀನು ಬರುವೆಯಾ ..." ಎಂದು ಫೋನಾಯಿಸಿದಳು."ಆಲೋಚಿಸಿ ಹೇಳುತ್ತೇನೆ" ಎಂದಳು.. ಮನೆಯವರಲ್ಲಿ ಕೇಳದೆಯೇ ಒಪ್ಪಿಕೊಳ್ಳುವುದು ಉಚಿತವಲ್ಲ ಎಂದು ಕೇಶವ ನಲ್ಲಿ ಕೇಳಿದಳು. ಆಫೀಸಿನಲ್ಲಿದ್ದಾಗ ಕೇಶವ ಕೇಶವ "ಹೂಂ.." ಎಂದ. ಅಷ್ಟರಲ್ಲಾಗಲೇ ಗೆಳತಿ ಪುನಃ ಕರೆ ಮಾಡಿ " ಸ್ವಲ್ಪ ಜಾಸ್ತಿಯೇ ಸಂಭಾವನೆ ಕೊಡೋಣ.. ದಯವಿಟ್ಟು ಕಾರ್ಯಕ್ರಮವನ್ನು ಚಂದಗಾಣಿಸಿಕೊಡಲು ನಿನ್ನ ಅಗತ್ಯವಿದೆ" ಎಂದು ಪುನಃ ಕೋರಿದಳು.ಅದಕ್ಕೊಪ್ಪಿದ ಸೌಜನ್ಯ ಅವಳು ಹೇಳಿದ ಸ್ಥಳಕ್ಕೆ ಅಗತ್ಯ ಸಲಕರಣೆಗಳೊಂದಿಗೆ ತೆರಳಿದಳು.
ಕಾರ್ಯಕ್ರಮ 6:00 ಗಂಟೆಗೆ ಆರಂಭವಾಗುವುದು ಎಂದು ನಿಗದಿಯಾಗಿತ್ತು. ಆದರೆ ಆರಂಭವಾಗುವಾಗ 7.30 ಆಯ್ತು. ಮುಗಿಯುವಾಗ 10:30 ಆಗಬಹುದು ಎಂದು ಗಂಡನಿಗೆ ಕರೆ ಮಾಡಿದರು. ಕೇಶವ ಕರೆಯನ್ನು ಸ್ವೀಕರಿಸಲಿಲ್ಲ. ಆತ ಅಡುಗೆ ಕೋಣೆಗೆ ತೆರಳಿ ತನ್ನ ಹೊಟ್ಟೆಗೆ ಬೇಕಾದ್ದನ್ನು ಹಾಕಲು ತಯಾರಿ ನಡೆಸುತ್ತಿದ್ದ.ಹಸಿದು ಬಂದಾಗ ತಿನ್ನಲು ಏನೂ ರೆಡಿ ಇಲ್ಲದಿದ್ದರೆ ಕೇಶವನಿಗೆ ಸಿಟ್ಟು ನೆತ್ತಿಗೇರುತ್ತಿತ್ತು .ಇಂದು ಕೂಡ ಹಾಗೆ ಆಯಿತು. ಎರಡನೇ ಬಾರಿ ಸೌಜನ್ಯ ಕರೆಮಾಡಿದಾಗ ಫೋನೆತ್ತಿ ಸರಿಯಾಗಿ ಬೈದುಬಿಟ್ಟ. "ಏನಾದರೊಂದು ತಿಂಡಿ ಮಾಡಿ ಪ್ರೋಗ್ರಾಂ ಗೆ ಹೋಗಬಹುದಿತ್ತು" ಎಂಬುದು ಅವನ ಮಾತಿನಲ್ಲಿ ಆಶಯವಾಗಿತ್ತು. ಏಕಾಏಕಿ ಗಂಡನ ಬೈಗುಳವನ್ನು ಕೇಳಿದ ಸೌಜನ್ಯಳ ಮನಸ್ಸು ಕೆಟ್ಟಿತು.
ಅತ್ತೆ ಮಾವ ಆಫೀಸಿನಿಂದ ಹಿಂತಿರುಗಿದಾಗ ಕೇಶವನ ಮನಸ್ಸು ಅಲ್ಲೋಲಕಲ್ಲೋಲವಾಗಿದ್ದುದು ಅರ್ಥವಾಯಿತು ರೇಖಾಗೆ. ಕೇಶವ ಉಪ್ಪಿಟ್ಟು ಮಾಡಿ ತಿನ್ನುತ್ತಿದ್ದ. "ಅಳಿಯಂದಿರೇ ಫ್ರಿಜ್ಜಿನಲ್ಲಿ ಉದ್ದಿನ ದೋಸೆ ಹಿಟ್ಟು ಇತ್ತು.. ತಿಳಿಲಿಲ್ಲವೇ..".
ಅಂದಾಗ ತುಸು ಕೋಪದಿಂದಲೇ "ಹೇಳಿದರೆ ತಾನೆ ತಿಳಿಯುವುದು ..ಯಾವುದನ್ನೂ ಹೇಳದೆ ಸೀದಾ ನಾಟ್ಯಗೈಯ್ಯಲು ಹೋದರೆ ಇಲ್ಲಿ ಹಸಿದ ಹೊಟ್ಟೆ ಸುಮ್ಮನಿರುವುದೇ..?" ಎಂದು ಗರಂ ಆದ. ಅಳಿಯನ ಮಾತಿಗೆ ರೇಖಾಗೆ ದುಃಖವಾದರೂ ಸಹಿಸಿಕೊಂಡು ದೋಸೆ ಚಟ್ನಿ ಬಡಿಸಿದಳು. ಈಗ ಅವನ ಹೊಟ್ಟೆ ತುಂಬಿದಾಗ ಮನಸ್ಸು ಕೂಡ ಶಾಂತವಾಯಿತು.
9.30 ಹೊತ್ತಿಗೆ ಮಾವ ಅಳಿಯ ಇಬ್ಬರು ಸೌಜನ್ಯಳನ್ನು ಕರೆದುಕೊಂಡು ಬರಲು ಹೊರಟರು. ಸುಮಾರು ಅರ್ಧ ಗಂಟೆಯ ಪಯಣ .10 ಗಂಟೆಗೆ ಸಭಾಂಗಣದಲ್ಲಿ ಆಸೀನರಾದರು. ಸೌಜನ್ಯಳ ನೃತ್ಯ ಕಾರ್ಯಕ್ರಮ ನಡೆಯುತ್ತಿದ್ದು. ರೂಪಕವನ್ನು ಭರತನಾಟ್ಯದ ಮೂಲಕ ಪ್ರಸ್ತುತ ಪಡಿಸುತ್ತಿದ್ದರು.ಆಕೆಯ ರಾಣಿಯಾಗಿ ತನ್ನ ನಾಟ್ಯವನ್ನು ಪ್ರದರ್ಶಿಸುತ್ತಿದ್ದರೆ ಆಕೆಗೆ ರಾಜನ ಪಾತ್ರದಲ್ಲಿ ಪುರುಷ ಕಲಾವಿದನಿದ್ದುದು ಕೇಶವವಿಗೆ ಬಹಳ ಇರುಸುಮುರುಸಾಗಿತ್ತು.ಎಲ್ಲರೂ ಅವಳ ಅದ್ಭುತ ನಟನೆಗೆ ಕರತಾಡನ ಮಾಡುತ್ತಿದ್ದರೆ ಕೇಶವ ಮಾತ್ರ ಸುಮ್ಮನೆ ನೋಡುತ್ತಾ ಕುಳಿತಿದ್ದ.
ರಾಜನ ಕಣ್ಣಿನೊಂದಿಗೆ ಕಣ್ಣನ್ನು ಬೆರೆಸುತ್ತಾ ರಾಣಿ ಒಂದೇ ಲಯದಲ್ಲಿ ಹೆಜ್ಜೆಯೊಂದಿಗೆ ಹೆಜ್ಜೆ ಹಾಕುತ್ತಿದ್ದಂತೆ ಕೇಶವ ಇದೆಲ್ಲ ಇನ್ನೂ ಸೌಜನ್ಯಳಿಗೆ ಬೇಕಾ ಎಂದು ಯೋಚಿಸುತ್ತಿದ್ದ.
ಮಡದಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಕೇಶವ ಆಕೆಯನ್ನು ಇನ್ನೊಬ್ಬರೊಂದಿಗೆ ನೋಡಲು ಇಷ್ಟಪಡುತ್ತಿರಲಿಲ್ಲ. ಅದು ಸಹಜ ಕೂಡ. ಆದರೆ ಕಲೆಯಲ್ಲಿ ಆ ಭೇದವಿಲ್ಲ.ತೆರೆಯ ಮೇಲೆ ಗಂಡು-ಹೆಣ್ಣು ದಂಪತಿಯಾಗಿ ಅಭಿನಯಿಸಿದ್ದರೆ ಅವರು ಖಾಸಗಿ ಜೀವನದಲ್ಲಿ ದಂಪತಿ ಆಗಿರಬೇಕೆಂದಿಲ್ಲ. ಈ ಸತ್ಯ ಅರಿವಿದ್ದರೂ ಕೂಡ ತನ್ನ ವೈಯಕ್ತಿಕ ಜೀವನದ ವಿಷಯ ಬಂದಾಗ ಕೇಶವನಿಗೆ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ.ತಾನೊಮ್ಮೆ ಬಲವಾಗಿ ಬಂಧಿಸಿದರೆ ಕೊಸರಿಕೊಳ್ಳುವ ಸೌಜನ್ಯ ಸಹಕಲಾವಿದನೊಂದಿಗೆ ಅದೆಷ್ಟು ಹೊಂದಾಣಿಕೆಯಿಂದ ಶೃಂಗಾರ ಭಾವವನ್ನು ತೋರ್ಪಡಿಸುತ್ತಿದ್ದಾಳೆ ಎಂದು ಆಕೆಯ ಮೇಲೆ ಅಸಮಾಧಾನವುಂಟಾಯಿತು.
ಕಾರ್ಯಕ್ರಮ ಮುಗಿದು ಮನೆಗೆ ಹೊರಟಾಗ ಸೌಜನ್ಯ ದಣಿದಿದ್ದರೂ. .. ಪತಿಯನ್ನು ಕಂಡಾಗ ನಸುನಗುತ್ತ ಮಾತನಾಡಿಸಿದಳು .ಆದರೆ ಆತ ಮಾತ್ರ ಮೌನವಾಗಿದ್ದ. ಪತಿಗೆ ನಾನು ತಿಂಡಿ ತಯಾರಿಸದಿದ್ದುದು ಕೋಪ ಬಂದಿರಬೇಕು ಅಂದುಕೊಂಡು ಸುಮ್ಮನಾದಳು.ಮನೆಗೆ ಮುಟ್ಟುವ ಮೊದಲೇ ಕಾರಿನಲ್ಲಿ ಕುಳಿತುಕೊಂಡು ಅಮ್ಮನಿಗೆ ತನ್ನ ಭರತನಾಟ್ಯದ ವಿಡಿಯೋ ತುಣುಕುಗಳನ್ನು ಕಳುಹಿಸಿದಳು. ಸುಮಾರು ಎರಡು ವರ್ಷದ ನಂತರ ಮೊದಲ ಬಾರಿಗೆ ಆಕೆ ಸ್ಟೇಜ್ ಮೇಲೆ ಏರಿದ್ದಳು. ಅಮ್ಮ ಸಹಜವಾಗಿಯೇ ಖುಷಿಯಾದರು.ಇಬ್ಬರ ನಡುವಿನ ಸಂತೋಷದ ಸಂಭಾಷಣೆಯನ್ನು ಕೇಳುತ್ತಿದ್ದ ಕೇಶವನ ಮನಸ್ಸು ಅದನ್ನು ಸಹಿಸಲಿಲ್ಲ.
ಮನೆ ತಲುಪಿದಾಗ ಕಾದುಕುಳಿತಿದ್ದ ಅಮ್ಮನನ್ನು ತಬ್ಬಿ ಸಂಭ್ರಮ ಪಟ್ಟಳು ಸೌಜನ್ಯ. ಸೌಜನ್ಯ ತನ್ನ ಕಣ್ಣರಳಿಸಿ ನಸುನಗುತ್ತಾ "ಉತ್ತಮ ಅವಕಾಶ . ದೊರೆತಿರುವುದು ನನ್ನ ಪುಣ್ಯ "ಎಂದು ಹೇಳಿದಳು.ಅದನ್ನು ಕೇಳಿದ ಕೇಶವ " ಏನು ಪುಣ್ಯ...? ಪರಪುರುಷನೊಂದಿಗೆ ವೇದಿಕೆಯ ಮೇಲೆ ನರ್ತಿಸುವುದು ನನಗೆ ಸರಿಕಾಣಲಿಲ್ಲ" ಎಂದಾಗ ಸೌಜನ್ಯಳ ಆಶಾಗೋಪುರ ಒಮ್ಮೆಲೆ ಕುಸಿದು ಬಿದ್ದಿತು.
ಮುಂದುವರಿಯುವುದು..
✍️...ಅನಿತಾ ಜಿ.ಕೆ. ಭಟ್
29-04 -2020.
ಮುಂದಿನ ಭಾಗ ಶುಕ್ರವಾರ...
ಕೇಶವ ಕೆಟ್ಟ ಬುದ್ದಿ ಬಿಡಲೇ ಇಲ್ಲ ಇನ್ನುಸ...
ReplyDeleteಹೌದು...💐🙏
ReplyDelete