Saturday, 11 April 2020

ಗುಜ್ಜೆ/ಎಳೆಹಲಸಿನ ಕಾಯಿ ಮಂಚೂರಿ

ಗುಜ್ಜೆ/ಎಳೆಯ ಹಲಸಿನ ಕಾಯಿ ಮಂಚೂರಿ



    ಹೋಟೇಲಿನ ವೈವಿಧ್ಯಮಯ ತಿಂಡಿಗಳಿಗೆ ಬಾಯಲ್ಲಿ ನೀರೂರಿಸದವರಿಲ್ಲ.ಗರಂ ಗರಂ ಆಗಿರುವ ತಿನಿಸುಗಳು ಮತ್ತೆ ಮತ್ತೆ ತಿನ್ನಬೇಕೆಂಬ ಆಸೆಯನ್ನು ಹುಟ್ಟಿಸುತ್ತವೆ.ಅಂತಹದೇ ರುಚಿಯನ್ನು ಮನೆಯಲ್ಲಿ ಮಾಡಬಹುದಾ..? ಮನೆಯ ಸ್ವಚ್ಛ,ಶುದ್ಧವಾದ , ರಾಸಾಯನಿಕ ರಹಿತ ತರಕಾರಿಗಳಿಂದ ಮಾಡಿದರೆ ರುಚಿ ಮತ್ತು ಗುಣಮಟ್ಟದಲ್ಲಿ ಹೋಟೇಲ್ ಗಿಂತ ಒಂದು ಸ್ತರ ಮೇಲೆಯೇ ನಿಲ್ಲುತ್ತದೆ.


      ಖಾರಖಾರವಾದ ಗೋಬಿ ಮಂಚೂರಿ ನೆನಪಾದರೆ ಆಹಾ..!! ಅದರ ರುಚಿ.. ಇನ್ನೊಮ್ಮೆ ಸವಿಯೋಣ ಎನ್ನುತ್ತದೆ.ಗೋಬಿ ಇಲ್ಲವೆಂದು ತಲೆಕೆಡಿಸಿಕೊಳ್ಳಬೇಕಾಗಿಲ್ಲ.ಅಂಗಳದಂಚಿನ ಹಲಸಿನ ಮರದಲ್ಲಿ ನೇತಾಡುವ ಗುಜ್ಜೆ/ಎಳೆಯ ಹಲಸಿನ ಕಾಯಿಯಿಂದಲೇ ತಯಾರು ಮಾಡಿ ತಿನ್ನಬಹುದು.ಬನ್ನಿ..ಹಾಗಾದರೆ ಸರಳವಾಗಿ ಗುಜ್ಜೆ ಮಂಚೂರಿ ಹೇಗೆ ಮಾಡುವುದು ನೋಡೋಣ..


ಬೇಕಾಗುವ ಸಾಮಗ್ರಿಗಳು..

1.ಎಳೆಯ ಗುಜ್ಜೆಯ ತುಂಡುಗಳು ಎರಡು ಕಪ್
2.ಕಡಲೆ ಹಿಟ್ಟು 4 ಚಮಚ
3.ಕಾರ್ನ್ ಫ್ಲೋರ್-3 ಚಮಚ
4.ಮೈದಾ-3 ಚಮಚ
5.ಮೆಣಸಿನ ಪುಡಿ-1ಚಮಚ
6.ಉಪ್ಪು-1ಚಮಚ
7.ಶುಂಠಿಯ ಚಿಕ್ಕ ತುಂಡುಗಳು-1ಚಮಚ
8.ಬೆಳ್ಳುಳ್ಳಿ ಎಸಳು-5
9.ಟೊಮೆಟೊ -ಎರಡು
10.ನೀರುಳ್ಳಿ -ಎರಡು
11.ಕೊತ್ತಂಬರಿ ಸೊಪ್ಪು
12.ನಿಂಬೆರಸ -1 ಚಮಚ
13.ಬೆಲ್ಲದ ಪುಡಿ-1ಚಮಚ
14.ಜೀರಿಗೆ
15.ಎಣ್ಣೆ
16.ಹಸಿಮೆಣಸು 4


ಮಾಡುವ ವಿಧಾನ...


ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮಾಡಿಟ್ಟುಕೊಳ್ಳಿ.ಟೊಮೊಟೊ, ನೀರುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಿ.
ಹಲಸಿನ ಕಾಯಿಯ ತುಂಡುಗಳನ್ನು ಹದವಾಗಿ ಬೇಯಿಸಿಕೊಳ್ಳಿ(ಕುಕ್ಕರಿನಲ್ಲಿ ಹಬೆಯಲ್ಲಿ ನೀರು ಹಾಕದೆಯೂ ಬೇಯಿಸಿಕೊಳ್ಳಬೇಹುದು).ಅದಕ್ಕೆ ಕಡ್ಲೆ ಹಿಟ್ಟು, ಮೈದಾ, ಕಾರ್ನ್ ಫ್ಲೋರ್, ಉಪ್ಪು,ಮೆಣಸಿನ ಹುಡಿ ,ಶುಂಠಿ ಬೆಳ್ಳುಳ್ಳಿ ಪೇಸ್ಟ್ ( ಅರ್ಧಾಂಶ)ಹಾಕಿ ನೀರು ಸ್ವಲ್ಪ ಹಾಕಿ ಕಲಸಿಕೊಳ್ಳಿ.ಹಿಟ್ಟು ಗಟ್ಟಿಯಾಗಿರಲಿ.


      ಎಣ್ಣೆ ಕಾಯಲು ಇಟ್ಟು  ಕಾದಾಗ ಹಿಟ್ಟನ್ನು ಸ್ವಲ್ಪವೇ ಎಣ್ಣೆಗೆ ಬಿಡಿ.ಆದಾಗ ತೆಗೆದಿಡಿ.ನಂತರ ಇನ್ನೊಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ ನಂತರ ಜೀರಿಗೆ,ಕತ್ತರಿಸಿದ ಹಸಿಮೆಣಸು,ಉಳಿದ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೆಟೊ, ನೀರುಳ್ಳಿ,ಬೆಲ್ಲ  , ಉಪ್ಪು ಒಂದೊಂದಾಗಿ ಹುರಿಯುತ್ತಾ ಹಾಕಿಕೊಳ್ಳಿ.ನಂತರ ಎಣ್ಣೆಯಲ್ಲಿ ಬೇಯಿಸಿ ತೆಗೆದಿಟ್ಟ ಗುಜ್ಜೆಯನ್ನು ಹಾಕಿ ತಿರುವಿ.ಸ್ಟವ್ ಆರಿಸಿ ನಿಂಬೆರಸ ಸೇರಿಸಿ.ಮೇಲಿನಿಂದ ಕೊತ್ತಂಬರಿ ಸೊಪ್ಪು ಉದುರಿಸಿ ಬಿಸಿ ಬಿಸಿಯಾಗಿ ಸರ್ವ್ ಮಾಡಿ..


   ಬಹಳ ಸುಲಭ ಸರಳವಾಗಿ ಮಾಡಬಹುದಾದ ಗುಜ್ಜೆ ಮಂಚೂರಿ ನೀವೂ ಕೂಡ ಮಾಡಲು ಪ್ರಯತ್ನಿಸಿ..ಹೇಗೆ ಬಂತು ಎಂದು ತಪ್ಪದೆ ತಿಳಿಸಿ..


✍️... ಅನಿತಾ ಜಿ.ಕೆ.ಭಟ್.
12-04- 2020.



2 comments:

  1. ರುಚಿಕರವಾದ ಮಂಚೂರಿಯನ್ 👌👌

    ReplyDelete
  2. ಥ್ಯಾಂಕ್ಯೂ 💐🙏

    ReplyDelete