Thursday, 30 April 2020

ಮಾವಿನ ಹಣ್ಣಿನ ಜಾಮ್ 😋😋😋😋😋😋😋😋😋😋😋👌👌👌

ಮಾವಿನ ಹಣ್ಣಿನ ಜಾಮ್


        ಜಾಮ್ ಎಂಬ ಹೆಸರು ಕೇಳಿದ ತಕ್ಷಣ ಸಾಮಾನ್ಯವಾಗಿ ಎಲ್ಲರ ಬಾಯಲ್ಲಿಯೂ ನೀರೂರುತ್ತದೆ. ಮಾರುಕಟ್ಟೆಯಲ್ಲಿ ತರತರದ ಜಾಮ್ ಗಳು ಇಂದು ಲಭ್ಯವಿವೆ. ನಮ್ಮ ಮನೆಯಲ್ಲಿ ಸಿಗುವ ತಾಜಾ ಹಣ್ಣಿನಿಂದ ಜಾಮ್ ಮಾಡಿದಾಗ ಅದು ರುಚಿಕರ ಹಾಗೂ ಆರೋಗ್ಯಕರ. ನಮ್ಮ ಕರಾವಳಿಯಲ್ಲಿ ಬೇಸಿಗೆಯಲ್ಲಿ ಲಭ್ಯವಿರುವಂತಹ ಸಿಹಿ-ಹುಳಿ ಮಿಶ್ರರುಚಿಯ ಕಾಟು ಮಾವಿನ ಹಣ್ಣಿನಿಂದ ಜಾಮ್  ಮಾಡುವ ಎಂದು ಹೊರಟೆ..ಪಾಕ ಬಹಳ ಚೆನ್ನಾಗಿ ಬಂತು. ರುಚಿಯಾಗಿತ್ತು ..ಎಲ್ಲರೂ ಇಷ್ಟಪಟ್ಟರು.. ಹೇಗೆ ಮಾಡಿದೆ ಅಂತ ಹೇಳ್ತೀನಿ.. ಓದಿ..ನೀವೂ ಮಾಡಿ ನೋಡಿ..

ಬೇಕಾಗುವ ಸಾಮಗ್ರಿಗಳು:-


*ಮಾವಿನ ಹಣ್ಣು

*ಸಕ್ಕರೆ:  ಮಾವಿನ ಹಣ್ಣಿನ ರಸದ ಮುಕ್ಕಾಲು ಭಾಗ(1cup ರಸ-ಮುಕ್ಕಾಲು ಕಪ್ ಸಕ್ಕರೆ)

*ಒಂದು ನಿಂಬೆಹಣ್ಣಿನ ರಸ


ಮಾಡುವ ವಿಧಾನ:-

      ಮಾವಿನಹಣ್ಣಿನ ಸಿಪ್ಪೆ ತೆಗೆದು ರಸಹಿಂಡಿ ಅಥವಾ ತುಂಡು ಮಾಡಿ ಮಿಕ್ಸಿ ಜಾರಿನಲ್ಲಿ ಹಾಕಿ ರುಬ್ಬಿ. ಯಾವುದೇ ಕಾರಣಕ್ಕೂ ಜಾರಿನಲ್ಲಿ ತೇವಾಂಶವಿರಬಾರದು.. ನೀರು ಹಾಕಬಾರದು. ಅದನ್ನು ಕಡಾಯಿಗೆ ಹಾಕಿ.ಮಧ್ಯಮ ಉರಿಯಲ್ಲಿ ಕದಡುತ್ತಿರಿ...ಸುಮಾರು ಏಳೆಂಟು ನಿಮಿಷದ ನಂತರ ಮಾವಿನ ಹಣ್ಣಿನ ರಸದ ಮುಕ್ಕಾಲು ಭಾಗದಷ್ಟು ಸಕ್ಕರೆ ಸೇರಿಸಿ. ಅಂದರೆ ಒಂದು ಕಪ್ ಮಾವಿನ ಹಣ್ಣಿನ ರಸಕ್ಕೆ ಮುಕ್ಕಾಲು ಕಪ್ ಸಕ್ಕರೆ..
ನಂತರ ಏಳೆಂಟು ನಿಮಿಷಗಳ ಕಾಲ ಚೆನ್ನಾಗಿ ತಿರುವುತ್ತಿರಿ..
ಗಟ್ಟಿಯಾಗುತ್ತಾ ಬಂದಾಗ ನಿಂಬೆಹಣ್ಣಿನ ರಸ ಹಾಕಿ ಮತ್ತು ಸ್ವಲ್ಪ ಹೊತ್ತು ತಿರುವಿ. ಜಾಮ್ ಪಾಕದ ಹದ ಬಂದಾಗ ಗ್ಲಾಸ್ ಜಾರ್ ಅಥವಾ ಸ್ಟೀಲ್ ಪಾತ್ರೆಗೆ ಹಾಕಿಡಿ. ಬಿಸಿಬಿಸಿಯಾದ ಮಾವಿನ ಹಣ್ಣಿನ ಜಾಮ್ ಸವಿಯಲು ಸಿದ್ಧ. ತಣಿದ ನಂತರ ಬೇಕಾದರೆ ಪ್ಲಾಸ್ಟಿಕ್ ಕಂಟೇನರ್ ಗಳಲ್ಲಿ ಕೂಡ ಹಾಕಿಡಬಹುದು.ಹೊರಗಡೆ ಇಟ್ಟರೆ ಒಂದು ವಾರದ ತನಕವೂ ಉಳಿಯಬಹುದು.. ಫ್ರೀಜರಿನಲ್ಲಿಟ್ಟರೆ ತುಂಬಾ ಸಮಯದವರೆಗೆ ಬಳಸಬಹುದು.

      ನಾನು ಇಲ್ಲಿ ಯಾವುದೇ ಫುಡ್ ಕಲರ್ ಅಥವಾ ಪ್ರಿಸರ್ವೇಟಿವ್ ಬಳಸಿಲ್ಲ. ನೈಸರ್ಗಿಕವಾದ ಬಣ್ಣ. ನಾಲಿಗೆಗೂ ಬಹಳ ರುಚಿಕರವಾಗಿರುತ್ತದೆ.. . ಇದನ್ನು ತೆಳ್ಳವು, (ನೀರುದೋಸೆ) ಉದ್ದಿನ ದೋಸೆ, ಚಪಾತಿ, ರೋಟಿ , ಬ್ರೆಡ್ ಜೊತೆ ಸವಿಯಬಹುದು. ಅಥವಾ ಹಾಗೆಯೇ ಹಲ್ವ ತರಹ ತಿನ್ನಬಹುದು.. ತುಂಬಾ ಟೇಸ್ಟಿ ಟೇಸ್ಟಿ ಆಗಿರುತ್ತದೆ...ಟ್ರೈ ಮಾಡಿ ನೋಡಿ...


✍️...ಅನಿತಾ ಜಿ.ಕೆ. ಭಟ್ .
01-05 -2020.

2 comments: