ಚಳಿಗಾಲ ಆರಂಭವಾಗುತ್ತಿದ್ದಂತೆ ಶರೀರಕ್ಕೆ ಕಾಯಿಲೆಗಳು ಲಗ್ಗೆಯಿಡಲು ಆರಂಭಿಸುತ್ತವೆ.ಮಂಜುಮುಸುಕಿದ ವಾತಾವರಣ ,ತುಂತುರುಗೈಯುತ್ತಿರುವ ಇಬ್ಬನಿ ಕಣ್ಮನಗಳಿಗೆ ರಂಗನ್ನೀಯುತ್ತದೆ...ಆದರೆ ದೇಹಕ್ಕೆ ರೋಗವನ್ನು ಆಹ್ವಾನಿಸುತ್ತದೆ.ರೋಗಬರದಂತೆ ಮುಂಜಾಗ್ರತೆ ಅತ್ಯಗತ್ಯ.ಚಳಿಗಾಲದಲ್ಲಿ ರಾತ್ರಿ ಸಮಯ ದೀರ್ಘವಾಗಿದ್ದು ಹಗಲು ಕಡಿಮೆಯಿರುತ್ತದೆ.ಚಳಿಯಿಂದಾಗ ಏಳಲೂ ಕೂಡ ಔದಾಸೀನ್ಯ ಹೆಚ್ಚು.ಈ ಕಾರಣಗಳಿಗಾಗಿ ಶಾರೀರಿಕ ವ್ಯಾಯಾಮ ಕಡಿಮೆ.ಆಗ ಆರೋಗ್ಯ ಸಮಸ್ಯೆಗಳೂ ಹೆಚ್ಚು.
ಚಳಿಗಾಲದಲ್ಲಿ ದೇಹದ ಉಷ್ಣತೆ ಕಡಿಮೆಯಾಗುತ್ತದೆ.ವಾತಾವರಣದಲ್ಲಿ ಶುಷ್ಕತೆ ಹೆಚ್ಚಿ ಧೂಳು,ಮಾಲಿನ್ಯ ಅಧಿಕವಿರುತ್ತದೆ ಮತ್ತು ಕೆಲವು ಗಿಡಗಳು ಹೂವರಳುವ ಸಮಯ ದೇಹಕ್ಕೆ ಅಲರ್ಜಿಯನ್ನುಂಟುಮಾಡುತ್ತದೆ. ಇಂತಹ ಸಂದರ್ಭದಲ್ಲಿ ದೇಹಕ್ಕೆ ಸಮತೋಲನದ ಆಹಾರ ಅತೀ ಮುಖ್ಯವಾದುದು.ಆಹಾರವನ್ನು ಆಗಿಂದಾಗ್ಗೆ ತಯಾರಿಸಿ ಬಿಸಿಬಿಸಿಯಾಗಿ ಬಳಸಬೇಕು.ಫೈಬರ್, ವಿಟಮಿನ್,ಖನಿಜಾಂಶಗಳು ಹೆಚ್ಚಿರುವ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು.
ಹಸಿರು ಸೊಪ್ಪುಗಳು ,ನಾರಿನಂಶವಿರುವ ತರಕಾರಿಗಳು,ಈ ಸಮಯದಲ್ಲಿ ದೊರೆಯುವ ಹಣ್ಣುಗಳು ನಿತ್ಯದ ಆಹಾರದಲ್ಲಿರಲಿ.ಬೆಳ್ಳುಳ್ಳಿ, ಶುಂಠಿ,ಲವಂಗ,ಕಾಳುಮೆಣಸು , ನಿಂಬೆಹಣ್ಣು ಹೆಚ್ಚಾಗಿ ಬಳಸಬೇಕು..ಹಣ್ಣುಗಳಲ್ಲಿ ವಿಟಮಿನ್ ಸಿ ಇರುವಂತಹ ಹಣ್ಣುಗಳು ರೋಗನಿರೋಧಕ ಶಕ್ತಿ ಹೆಚ್ಚಿಸುವುದರಿಂದ ಕಿತ್ತಳೆ, ಪೇರಳೆ, ಪಪ್ಪಾಯಿ,ನೆಲ್ಲಿಕಾಯಿ...ಇತ್ಯಾದಿಗಳು ಸೂಕ್ತ.
ಮಕ್ಕಳ ಆರೋಗ್ಯ:-
ಪುಟ್ಟ ಮಕ್ಕಳಿಗೆ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆಯೆಂದರೆ ಜ್ವರ,ಶೀತ,ಕಫ,ಗಂಪಲು ಕೆರೆತ, ಕೆಮ್ಮು ಇತ್ಯಾದಿ.. ಇದಕ್ಕಾಗಿ ಕೆಲವೊಂದು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು.
*ಚಳಿಗಾಲ ಆರಂಭವಾಗುತ್ತಿದ್ದಂತೆ ಮಕ್ಕಳ ಸ್ವೆಟರ್,ತಲೆಯ ಸ್ಕಾರ್ಫ್ ಮುಂತಾದ ಚಳಿಯ ದಿರಿಸುಗಳನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿ ಇಡಬೇಕು.ತುಂಬಾ ಸಮಯದ ಹಿಂದೆ ಮಡಚಿಟ್ಟ ಬಟ್ಟೆಗಳನ್ನು ನೇರವಾಗಿ ಬಳಸಿದರೆ ಮಗುವಿಗೆ ಸೋಂಕುತಗಲುವ ಸಾಧ್ಯತೆಯಿದೆ.
*ನಾಯಿ, ಬೆಕ್ಕು... ಇತ್ಯಾದಿ ಸಾಕುಪ್ರಾಣಿಗಳು ಒಮ್ಮೆ ಮೈಕೊಡವಿದರೆ ಸಹಸ್ರಾರು ಅಲರ್ಜಿಕಾರಕ ಸೂಕ್ಷ್ಮಾಣು ಜೀವಿಗಳು ಗಾಳಿಯಲ್ಲಿ ಹರಡುತ್ತವೆ.ಆದ್ದರಿಂದ ಪುಟ್ಟ ಮಕ್ಕಳನ್ನು ಅವುಗಳಿಂದ ದೂರವಿಡುವುದು ಲೇಸು..ಶೀತ, ಗಂಟಲು ನೋವು, ಕೆಮ್ಮು, ಕಫ ಬಾಧಿಸುತ್ತಿರುವ ಮಕ್ಕಳನ್ನು ಅಗತ್ಯವಾಗಿ ಸಾಕುಪ್ರಾಣಿಗಳ ಸಂಪರ್ಕಕ್ಕೆ ತರದಿರಿ.
*ಆದಷ್ಟು ಬಿಸಿಯಾದ ಆಹಾರ, ಆಗಾಗ ಬಿಸಿನೀರು ಕುಡಿಸುತ್ತಿರಬೇಕು.ಫ್ರಿಡ್ಜ್ನಲ್ಲಿಟ್ಟ ಆಹಾರ ಪದಾರ್ಥಗಳನ್ನು ಬಳಸದಿರಿ.
*ಕುರುಕಲು ತಿಂಡಿಗಳು, ಜಂಕ್ ಫುಡ್, ಐಸ್ ಕ್ರೀಮ್ ಇತ್ಯಾದಿಗಳ ಬಳಕೆಯ ಮೇಲೆ ಹಿಡಿತವಿರಲಿ.
*ಸಂಜೆಯ ಹೊತ್ತು ಮತ್ತು ಬೆಳಗಿನ ಹೊತ್ತು ತಣ್ಣನೆಯ ಗಾಳಿಗೆ ಮಕ್ಕಳು ಮೈಯೊಡ್ಡದಿರುವುದು ಉತ್ತಮ.ಅನಿವಾರ್ಯ ಸಂದರ್ಭಗಳಲ್ಲಿ ಮಕ್ಕಳ ಕಿವಿಗಳನ್ನು ಸ್ಕಾರ್ಫ್ ಬಳಸಿ ಮುಚ್ಚಿ..ತಣ್ಣಗಿನ ಗಾಳಿ ಕಿವಿಗೆ ಸೋಕಿದಾಗ ಗಂಟಲಿನ ಕಿರಿಕಿರಿ,ಶೀತವಾಗುವ ಸಾಧ್ಯತೆ ಇದೆ.
*ರಾತ್ರಿ ಮಲಗುವ ಮುನ್ನ ಮರೆಯದೆ ಸ್ವೆಟರ್ ಹಾಕಿಸಿ.ಅಗತ್ಯವೆಂದಾದರೆ ಕಾಲಿಗೆ ಸಾಕ್ಸ್ ಕೂಡ ಹಾಕಿಸಿ.
*ಶೀತದ ನಿರಂತರ ಕಿರಿಕಿರಿ ಇದ್ದರೆ ನೀರಿಗೆ ಸಣ್ಣ ತುಂಡು ಶುಂಠಿ ಹಾಕಿ ಕುದಿಸಿ ಬಿಸಿ ಬಿಸಿಯಾಗಿ ದಿನಕ್ಕೆ ಮೂರು ಬಾರಿ ಕುಡಿಸಿ.
*ಕಫದ ಕೆಮ್ಮು ಇದ್ದರೆ ನಾಲ್ಕು ದೊಡ್ಡಪತ್ರೆ ಎಲೆಗಳನ್ನು ಸ್ಟವ್ ಮೇಲೆ ಬಾಡಿಸಿಕೊಂಡು ರಸಹಿಂಡಿ ಜೇನುತುಪ್ಪವನ್ನು ಬೆರೆಸಿ ಎರಡು ಚಮಚದಷ್ಟು ದಿನಕ್ಕೆರಡು ಬಾರಿ ಮೂರು ದಿನ ಕುಡಿಸಬಹುದು.(ಒಂದು ವರ್ಷದ ಒಳಗಿನ ಮಗುವಿಗೆ ಒಂದು ಚಮಚದಷ್ಟು ಸಾಕು)
*ತುಳಸಿ, ದೊಡ್ಡಪತ್ರೆ, ಶುಂಠಿಯನ್ನು ಜಜ್ಜಿ ರಸಹಿಂಡಿ ನಿಂಬೆರಸ ಜೇನುತುಪ್ಪ ಮಿಶ್ರಮಾಡಿ ಎರಡು ಚಮಚದಷ್ಟು ದಿನಕ್ಕೆರಡು ಬಾರಿ ಕುಡಿಸುವುದು.(ಒಂದು ವರ್ಷದ ಒಳಗಿನ ಮಗುವಿಗೆ ಒಂದು ಚಮಚದಷ್ಟು ಸಾಕು).
*ಹಾಲಿಗೆ ಅರಿಶಿನ ಹುಡಿ , ಕಲ್ಲುಸಕ್ಕರೆ ಬೆರೆಸಿ ಕುಡಿಸಿದರೆ ಒಣಕೆಮ್ಮು ಶಮನವಾಗುತ್ತದೆ.
*ಕಲ್ಲುಸಕ್ಕರೆಯನ್ನು ಶುಂಠಿ,,ಕಾಳುಮೆಣಸಿನ ಪುಡಿಯೊಂದಿಗೆ ಪಾಕ ಮಾಡಿ ತಣ್ಣಗಾದ ನಂತರ ನಿಂಬೆರಸ ಹಿಂಡಿ ಗಟ್ಟಿಯಾಗಲು ಬಿಡಿ.ಇದನ್ನು ಅರ್ಧ ಚಮಚದಷ್ಟು ತೆಗೆದುಕೊಂಡು ಬೆಳಿಗ್ಗೆ ರಾತ್ರಿ ನೆಕ್ಕಿದರೆ ಗಂಟಲು ನೋವು, ಕಿರಿಕಿರಿ ಶಾಂತವಾಗುತ್ತದೆ.
*ಒಂದೆರಡು ಲೋಟ ನೀರನ್ನು ಕುದಿಸಿ ಅದಕ್ಕೆ ತುಳಸಿ ದಳ ಅಥವಾ ವಿಕ್ಸ್ ಹಾಕಿ ಹಬೆಯನ್ನು ತೆಗೆದು ಕೊಳ್ಳಬೇಕು . ಕೆಳಗಿಟ್ಟ ಪಾತ್ರೆ ಮುಚ್ಚುವಂತೆ ತಲೆಯಮೇಲೆ ಟವೆಲ್ ಹಾಕಿಕೊಂಡರೆ ಹಬೆ ಹೊರಗೆ ಹೋಗುವುದು ತಪ್ಪುತ್ತದೆ.ದೀರ್ಘವಾದ ಉಸಿರು ತೆಗೆದುಕೊಳ್ಳಲು ಹೇಳಿರಿ.ಈ ರೀತಿ ಮಾಡುವುದರಿಂದ ಮಕ್ಕಳಿಗೆ ಶೀತ ಸೋರುವುದು,ತಲೆಭಾರವಾಗುವುದು ಗಂಟಲಿನ ಸಮಸ್ಯೆ ಗಳು ಶೀಘ್ರವಾಗಿ ಶಮನಗೊಳ್ಳುತ್ತವೆ.
*ಗಂಟಲಿನ ಕಿರಿಕಿರಿ ಆರಂಭವಾಗುತ್ತಿದ್ದಂತೆ ಬೆಚ್ಚಗಿನ ನೀರಿಗೆ ಉಪ್ಪು ಬೆರೆಸಿ ಗಾರ್ಗಲ್ ಮಾಡಬೇಕು.ಸೋಂಕು ಜಾಸ್ತಿಯಾಗದಂತೆ ತಡೆದು ಪರಿಣಾಮಕಾರಿಯಾಗಿ ಗುಣಮುಖವಾಗುವುದು..
*ಮಕ್ಕಳಿಗೆ ಶೀತವಾದಾಗ ಸೀನುಬಂದರೆ , ಕೆಮ್ಮು ಬಂದರೆ ಟವೆಲ್ ಅಡ್ಡಹಿಡಿಯಲು ಅಭ್ಯಾಸ ಮಾಡಿಸಬೇಕು.ಇಲ್ಲದಿದ್ದರೆ ರೋಗಾಣುಗಳು ಸುತ್ತಮುತ್ತಲಿನವರಿಗೂ ಪಸರಿಸುತ್ತದೆ .ಈ ಟವೆಲ್ ಗಳನ್ನು ಬಿಸಿನೀರಿನಲ್ಲಿ ತೊಳೆದು ಬಿಸಿಲಿಗೆ ಒಣಗಿಸಿ ಇಲ್ಲವೇ ಇಸ್ತ್ರಿ ಮಾಡಿ ಪುನಃ ಬಳಸಬೇಕು.ಇಲ್ಲವೆಂದಾದರೆ ಅದೇ ಟವೆಲ್ ನಲ್ಲಿ ಜೀವಂತವಾಗಿರುವ ಸೂಕ್ಷ್ಮಾಣುಜೀವಿಗಳು ಮತ್ತೆ ಸೋಂಕನ್ನುಂಟುಮಾಡುತ್ತವೆ.
ಹತ್ತಾರು ಮನೆಮದ್ದನ್ನು ಮಾಡಿ ಮಕ್ಕಳ ಆರೋಗ್ಯ ಹಿಡಿತಕ್ಕೆ ಬರದಿದ್ದರೆ ಖಂಡಿತ ತಜ್ಞರನ್ನು ಭೇಟಿ ಮಾಡುವುದು ಒಳ್ಳೆಯದು.
ಚರ್ಮದ ಸಮಸ್ಯೆಗಳು:-
ಚಳಿಗಾಲದಲ್ಲಿ ವಾತಾವರಣ ಶುಷ್ಕ ವಾಗಿರುವುದರಿಂದ ಚರ್ಮವು ಒಡೆಯುವುದು,ಬಿರಿದಂತಾಗುವುದು ಕಂಡುಬರುತ್ತದೆ.ಇದಕ್ಕೆ ಮನೆಯಲ್ಲೇ ಮಾಡಿಕೊಳ್ಳಬಹುದಾದ ಸರಳ ಉಪಾಯಗಳು ಇಲ್ಲಿವೆ.
*ಯಥೇಚ್ಛವಾಗಿ ನೀರು ಕುಡಿಯಬೇಕು, ಹಣ್ಣುಗಳು,ಹಸಿರು ತರಕಾರಿಗಳು ಆಹಾರದಲ್ಲಿ ಇರಲಿ.ಪ್ರತೀ ಊಟದ ಮೊದಲ ತುತ್ತಿಗೆ ಒಂದು ಅಥವಾ ಎರಡು ಚಮಚ ತುಪ್ಪವನ್ನು ಬೆರೆಸಿ ಸೇವಿಸಿ.ಇದು ಚರ್ಮದಲ್ಲಿ ತೇವಾಂಶ ಇರುವಂತೆ ನೋಡಿಕೊಳ್ಳುತ್ತದೆ..ಹಾಗೂ ಚಳಿಗಾಲದಲ್ಲಿ ಹೆಚ್ಚಾಗಿ ಬಾಧಿಸುವ ಮಂಡಿನೋವು,ಗಂಟುನೋವು, ಸೊಂಟನೋವಿಗೆ ಉಪಶಮನ ನೀಡುತ್ತದೆ.
*ತುಟಿಗಳು ಒಡೆಯುತ್ತಿದ್ದರೆ ರಾತ್ರಿ ಮಲಗುವ ಮುನ್ನ ಸ್ವಲ್ಪ ಬೆಣ್ಣೆ,ಹಾಲಿನ ಕೆನೆ,ಲೋಳೆಸರ (ಅಲೊವೆರಾ) ಸವರಿ ಬಿಡಿ.
*ಅತಿಯಾಗಿ ಸಾಬೂನು ಬಳಸುವುದನ್ನು ಕಡಿಮೆ ಮಾಡಿ ಕಡಲೆಹಿಟ್ಟಿನಿಂದ ಮುಖ, ಕೈಕಾಲು ತೊಳೆಯಲು ಆರಂಭಿಸಿ.ಇದರಿಂದ ತೇವಾಂಶ ಕಳೆದುಕೊಳ್ಳುವುದು ಕಡಿಮೆ.
*ಕಾಲಿನ ಹಿಮ್ಮಡಿ ಒಡೆದು ನೋಯುತ್ತಿದ್ದರೆ ರಾತ್ರಿ ಮಲಗುವ ಮುನ್ನ ಚೆನ್ನಾಗಿ ತೊಳೆದು ಸ್ವಚ್ಛ ಗೊಳಿಸಿ ಸ್ವಲ್ಪ ಬೆಣ್ಣೆ ,ತುಪ್ಪ,ಹಾಲಿನ ಕೆನೆ,ಲೋಳೆಸರ (ಅಲೋವೆರಾ) ಸವರಿ ಸ್ವಲ್ಪ ಹೊತ್ತು ಪೃಥ್ವಿ ಮುದ್ರೆ,ವರುಣ ಮುದ್ರೆ,ಪ್ರಾಣ ಮುದ್ರೆಗಳನ್ನು ಅಭ್ಯಾಸ ಮಾಡಿ.ಕೆಲವೇ ದಿನಗಳಲ್ಲಿ ಬಿರುಕುಗಳು ಕೂಡಿಕೊಳ್ಳುತ್ತವೆ..
ತಲೆಹೊಟ್ಟು ನಿವಾರಣೆ:-
ಚಳಿಗಾಲದಲ್ಲಿ ತಲೆಹೊಟ್ಟು ಏಳುವುದು ಹೆಚ್ಚಿನವರು ಎದುರಿಸುವ ಸಾಮಾನ್ಯವಾದ ತೊಂದರೆ.ಇದಕ್ಕಾಗಿ ಕೆಲವು ಪರಿಹಾರೋಪಾಯಗಳು ..
*ವಾರಕ್ಕೆರಡು ಬಾರಿ ತಲೆಗೆ ತೈಲವನ್ನು ಧಾರಾಳವಾಗಿ ಹಾಕಿ ಒಂದು ಗಂಟೆ ಬಿಟ್ಟು ಅಲೋವೆರಾ, ಕಡ್ಲೆ ಹುಡಿ ಬಳಸಿ ತಲೆಗೆ ಸ್ನಾನ ಮಾಡಿ.
*ವಾರಕ್ಕೊಮ್ಮೆ ತಲೆಗೆ ದಾಸವಾಳದ ಎಲೆ, ಹೂವು,ಅಲೋವೆರಾ,ಬಸಳೆ ಎಲೆ, ಭೃಂಗರಾಜ,ಮದುರಂಗಿ ಎಲೆಗಳ ಪೇಸ್ಟ್ ಮಾಡಿ ಕೂದಲಿನ ಬುಡಕ್ಕೆ ಹಚ್ಚಿಕೊಂಡು ಒಂದು ಗಂಟೆ ಬಿಟ್ಟು ಆದಷ್ಟು ಸಾಬೂನು ಕಡಿಮೆ ಬಳಸಿ ಕಡಲೆ ಹಿಟ್ಟು ಬಳಸಿ ತಲೆಗೆ ಸ್ನಾನ ಮಾಡಿ..ಇದರಿಂದ ತಲೆಹೊಟ್ಟು ನಿವಾರಣೆ,ಕಣ್ಣುರಿ ಶಮನ, ಕೂದಲುದುರುವಿಕೆ ನಿಯಂತ್ರಣಕ್ಕೆ ಬರುತ್ತದೆ.
*ಯಥೇಚ್ಛವಾಗಿ ನೀರು, ಪೌಷ್ಟಿಕಾಂಶ ಭರಿತ ಆಹಾರಗಳು ನಿಮ್ಮ ಊಟದಲ್ಲಿರಲಿ.
*ಪೃಥ್ವಿ ಮುದ್ರೆ, ವರುಣ ಮುದ್ರೆ ತಲೆಹೊಟ್ಟು ನಿವಾರಣೆಗೆ, ಕೂದಲುದುರುವಿಕೆ ನಿಯಂತ್ರಣಕ್ಕೆ ಸಹಕಾರಿ.
ಶೀತ, ಅಸ್ತಮಾ ಸಮಸ್ಯೆಗಳು:-
ಅಸ್ತಮಾ,ಅಲರ್ಜಿಯಂತಹ ಸಮಸ್ಯೆಗಳು ಬಂದಮೇಲೆ ಗುಣಪಡಿಸುವುದಕ್ಕಿಂತ ಬರುವ ಮೊದಲೇ ಎಚ್ಚೆತ್ತುಕೊಳ್ಳುವುದು ಉತ್ತಮ.ಸಾಮಾನ್ಯವಾಗಿ ಶೀತಪ್ರವೃತ್ತಿಯವರು ಆರೋಗ್ಯದ ದೃಷ್ಟಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.
*ಚಳಿಗಾಲ ಆರಂಭವಾಗುವ ಮುನ್ನವೇ ಸ್ವೆಟರ್,ಕಾಲುಚೀಲ, ಸ್ಕಾರ್ಫ್ , ಟವೆಲ್..
ಇತ್ಯಾದಿಗಳು ತೊಳೆದು ಬಿಸಿಲಿನಲ್ಲಿ ಒಣಗಿಸಿ ಇಡಬೇಕು.. ಹಳೆಯದನ್ನು ಸೀದಾ ತೆಗೆದು ಬಳಸಿದರೆ ಅದರಿಂದಲೇ ಅಲರ್ಜಿ ಉಂಟಾಗುವುದು.
*ಬೆಳಗಿನ ಮತ್ತು ಸಂಜೆಯ ತಂಪುಹವೆಯಲ್ಲಿ ಓಡಾಡುವುದನ್ನು ಕಡಿಮೆಮಾಡಿ.ಹಗಲು ಬಿಸಿಲಿಗೆ ಮೈಯೊಡ್ಡಬಹುದು.ಊಟದ ಕೊನೆಯಲ್ಲಿ ನಿಂಬೆಹುಳಿ, ನೆಲ್ಲಿಕಾಯಿ, ಶುಂಠಿ, ಬೆಳ್ಳುಳ್ಳಿ ಮಿಶ್ರಮಾಡಿ ತಯಾರಿಸಿದ ಉಪ್ಪಿನಕಾಯಿ ಬಳಸಬಹುದು..
*ಅಸ್ತಮಾಕ್ಕೆ ಬಳಸುವ ಇನ್ಹೇಲರ್, ಔಷಧಿಗಳನ್ನು ಮೊದಲೇ ತಂದಿರಿಸಿಕೊಳ್ಳಿ.ನಿಯಮಿತವಾಗಿ ಸೇವಿಸುವ ಔಷಧಿಗಳನ್ನು ಮರೆಯದೆ ತೆಗೆದುಕೊಳ್ಳಿ.
*ಬೆಳಗ್ಗೆ ಸಂಜೆ ಉಗುರುಬೆಚ್ಚಗಿನ ಉಪ್ಪು ನೀರಿನಿಂದ ಗಾರ್ಗಲ್ ಮಾಡುವುದು,ಕುದಿಸಿದ ನೀರಿಗೆ ವಿಕ್ಸ್/ನೀಲಗಿರಿ ತೈಲ ಬೆರೆಸಿ ಹಬೆ ತೆಗೆದುಕೊಳ್ಳುವುದು ಮಾಡುತ್ತಿರುವುದು.. ಕಡ್ಡಾಯವಾಗಿ ಬಿಸಿನೀರನ್ನೇ ಕುಡಿಯಿರಿ.ಸ್ನಾನಕ್ಕೂ ಬಿಸಿನೀರನ್ನೇ ಬಳಸಿ..
*ಊಟವಾದ ಬಳಿಕ ಕೂಡಲೇ ಮಲಗದೆ ಸ್ವಲ್ಪ ಹೊತ್ತು ಮನೆಯೊಳಗೆ ನಡೆದಾಡುವುದು.ಊಟಕ್ಕೂ ಮಲಗುವ ಸಮಯಕ್ಕೂ ಎರಡೂವರೆ ಗಂಟಗಳ ಅಂತರವಿರಲಿ.
*ಯೋಗಾಸನ, ಪ್ರಾಣಾಯಾಮ ನಿತ್ಯವೂ ರೂಢಿಸಿಕೊಳ್ಳಿ.ಸೂರ್ಯಮುದ್ರೆ,ಶಂಖಮುದ್ರೆ,ಲಿಂಗಮುದ್ರೆಗಳು ಶೀತ, ಅಸ್ತಮಾ ಸಮಸ್ಯೆಗಳ ಹತೋಟಿಗೆ ಸಹಕಾರಿ.
*ನೀರಿಗೆ ಒಂದು ಚಿಟಿಕೆ ಕಾಳುಮೆಣಸಿನ ಪುಡಿ ಹಾಕಿ ಕುದಿಸಿ..ಅದೇ ಬಿಸಿನೀರನ್ನೇ ಕುಡಿಯುತ್ತಿರುವುದು.. ಸೋಂಕು ತಗಲುವುದನ್ನು ಕಡಿಮೆಮಾಡುತ್ತದೆ.
*ನಾಲ್ಕು ಲೋಟ ನೀರಿಗೆ ಏಳೆಂಟು ಕಾಳುಮೆಣಸು,ಒಂದು ಚಮಚ ಅರಿಶಿಣ ಪುಡಿ, ಸ್ವಲ್ಪ ಬೆಲ್ಲ/ಕಲ್ಲುಸಕ್ಕರೆ, ಹಾಕಿ ಚೆನ್ನಾಗಿ ಕುದಿಸಿ .ಆರಿದ ನಂತರ ಅರ್ಧ ಲೋಟ ಈ ಕಷಾಯಕ್ಕೆ ಒಂದು ಚಮಚ ಜೇನು ತುಪ್ಪ,ಒಂದುಚಮಚ ನಿಂಬೆರಸ ಹಿಂಡಿ ದಿನಕ್ಕೆರಡು ಬಾರಿ ಸೇವಿಸಿ.
*ಗಂಟಲು ಕೆರೆತವಿದ್ದರೆ ಒಂದು ತುಂಡು ಶುಂಠಿ, ಎರಡು ಕಾಳುಮೆಣಸು, ಕಲ್ಲುಪ್ಪು, ಕಾಮಕಸ್ತೂರಿ ಎಲೆ,ತುಳಸಿ ಎಲೆ, ದೊಡ್ಡ ಪತ್ರೆ ಎಲೆಗಳನ್ನು ಜೊತೆಯಾಗಿ ಮಡಚಿ ಬಾಯೊಳಗಿಟ್ಟುಕೊಂಡು ನಿಧಾನವಾಗಿ ರಸಸೇವಿಸುತ್ತಿರಿ.. ಉಪಶಮನಕ್ಕೆ ಸಹಕಾರಿ.
*ಅಲರ್ಜಿಯಾಗುವಂತಹ ಧೂಳು, ಆಹಾರ ಪದಾರ್ಥಗಳು, ಹೂವಿನ ಪರಿಮಳ,ಘಾಟುಗಳು,ಸಾಕುಪ್ರಾಣಿಗಳ ಒಡನಾಟದಿಂದ ದೂರವಿರಿ.
*ಫ್ರಿಡ್ಜ್ ನಲ್ಲಿ ಇರಿಸಿದ ಆಹಾರ ಪದಾರ್ಥಗಳನ್ನು ಬಳಸದೆ ಬಿಸಿಯಾದುದನ್ನೇ ಬಳಸಿ.ರಾತ್ರಿ ಮಲಗುವ ಮುನ್ನ ಬೆಚ್ಚನೆ ಸ್ವೆಟರ್ ಅಗತ್ಯವಿದ್ದರೆ ಕಾಲುಚೀಲವನ್ನು ಹಾಕಿಕೊಳ್ಳಿ.
ಹಲವಾರು ಎಚ್ಚರಿಕೆಯ ಕ್ರಮಗಳನ್ನು ಅನುಸರಿಸಿಯೂ ಅನಾರೋಗ್ಯ ಕಾಡಿದರೆ ಕೂಡಲೇ ತಜ್ಞವೈದ್ಯರನ್ನು ಭೇಟಿಮಾಡಿ.
ಇನ್ನಿತರ ತೊಂದರೆಗಳು:-
ಚಳಿಗಾಲದಲ್ಲಿ ಹೃದಯ ಕಾಯಿಲೆ ಇರುವವರು ಕೂಡ ಜಾಗೃತರಾಗಿರಬೇಕು.ಚಳಿಗಾಲದಲ್ಲಿ ಹಾರ್ಟ್ ಅಟ್ಯಾಕ್ ಆಗುವ ಸಂಭವ ಹೆಚ್ಚು.ಮುಂಜಾನೆಯ ಚಳಿಗೆ ರಕ್ತನಾಳಗಳು ಸಂಕುಚಿತಗೊಂಡು ಹೃದಯ ಸ್ತಂಭನವಾಗುವ ಸಾಧ್ಯತೆಯಿರುವುದರಿಂದ ಜಾಗರೂಕರಾಗಿರಬೇಕು..ಸರಿಯಾದ ಸಮಯಕ್ಕೆ ಔಷಧ ಸೇವಿಸಿ ,ದೇಹದ ಉಷ್ಣತೆ ಕಾಪಾಡುವಂತಹ ಉಡುಪುಗಳನ್ನು ಧರಿಸಿ..
ಕೆಲವು ಹೆಣ್ಮಕ್ಕಳಲ್ಲಿ ಚಳಿಗಾಲದಲ್ಲಿ ಒಂದು ತೆರನಾದ ಡಿಪ್ರೆಶನ್,ಆತಂಕ ಕಾಡುವುದಿದೆ.ಕುಟುಂಬ ಅಂತಹ ಸಂಗತಿಯನ್ನು ಅರಿತು ನಿನ್ನೊಂದಿಗೆ ನಾವಿದ್ದೇವೆ ಎಂಬ ಧೈರ್ಯ ತುಂಬಿ ಸಾಂತ್ವನ ಹೇಳಬೇಕು.
ಚಳಿಗಾಲದಲ್ಲಿ ಹೊಟ್ಟೆನೋವು, ಬೇಧಿ ಇತ್ಯಾದಿಗಳು ಕಾಣಿಸಿಕೊಳ್ಳುವುದು ಹೆಚ್ಚು.ಆಹಾರಮೇಲೆ ನಿಗಾ ಇರಲಿ.ದೇಹದ ಉಷ್ಣತೆಗಿಂತ ಅಧಿಕ ಉಷ್ಣತೆಯಿರುವ ಆಹಾರವನ್ನು ಸೇವಿಸಿ.ಚಳಿಗಾಲದಲ್ಲಿ ಹಸಿವೆ ಹೆಚ್ಚು.ಹಾಗೆಂದು ಹೆಚ್ಚು ಆಹಾರ ಸೇವಿಸಿದರೆ ಅನಾರೋಗ್ಯಕ್ಕೆ ಆಹ್ವಾನವಿತ್ತಂತೆ.ನಿಯಮಿತ ಆಹಾರ ..ಜೊತೆಗೆ ನಿಯಮಿತ ನಡಿಗೆ, ವ್ಯಾಯಾಮ ಕೂಡಾ ಅವಶ್ಯಕ.
ಪ್ರಾದೇಶಿಕ ಆಹಾರ:-
ಆಯಾಯಾ ಋತುಗಳಿಗೆ ಅನುಗುಣವಾಗಿ ಒಂದೊಂದು ಪ್ರದೇಶದಲ್ಲಿ ಒಂದೊಂದು ಆಹಾರ ಪದ್ಧತಿಯು ನಮ್ಮ ಹಿರಿಯರಿಂದಲೇ ಬಂದಿರುತ್ತದೆ.ಇದರ ಹಿನ್ನೆಲೆಯನ್ನು ಅರಿತು ಅಳವಡಿಸಿಕೊಳ್ಳುವುದು ಸೂಕ್ತ.ನಾವು ಕರಾವಳಿಯವರು..ಇಲ್ಲಿ ನಮ್ಮ ಚಳಿಗಾಲದಲ್ಲಿ ಕೆಲವು ಗಿಡಗಳ ಎಳೆಯ ಕುಡಿಗಳನ್ನು ಕೊಯ್ದು ಚಟ್ನಿ,ತಂಬುಳಿ ಮಾಡುವುದು ರೂಢಿ ..
ಮಾವಿನ ಕುಡಿ,ಚೇರೆಕುಡಿ ಒಂದೇ ಒಂದು,ಪೇರಳೆಕುಡಿ,ನೆಕ್ಕರಿಕನ ಕುಡಿ,ಹೊನಗೊನ್ನೆ ಕುಡಿ,ಹುಳಿಗರಗನ ಕುಡಿ ನೆಲನೆಕ್ಕರಿಕನ ಕುಡಿ, ಕುಂಟಾಲ ಕುಡಿ,ಎಂಜಿರ ಕೊಡಿ....ಇನ್ನೂ ಹೀಗೇ ಔಷಧೀಯ ಗುಣವುಳ್ಳ ಹಲವಾರು ಕುಡಿಗಳನ್ನು ಕೊಯ್ದು ತಂದು ಚೆನ್ನಾಗಿ ತೊಳೆದು ಬೇಯಿಸಿ ತೆಂಗಿನ ತುರಿಯೊಂದಿಗೆ ರುಬ್ಬಿ ಮಜ್ಜಿಗೆ ಬೆರೆಸಿ ತಂಬುಳಿ ತಯಾರಿಸುತ್ತಾರೆ.ಹುರಿದ ಮೆಣಸು,ಹುಳಿಯೊಂದಿಗೆ ಗಟ್ಟಿಯಾಗಿ ರುಬ್ಬಿದರೆ ಚಟ್ನಿ ತಯಾರು..ಬಿಸಿ ಬಿಸಿ ಕುಚ್ಚಿಲಕ್ಕಿ ಅನ್ನ/ಗಂಜಿಯೊಂದಿಗೆ ಕುಡಿ ಚಟ್ನಿ/ತಂಬುಳಿ ಸವಿಯುವುದು ಕರಾವಳಿಯ ಚಳಿಗಾಲದ ವಿಶೇಷವಾದ ಆಹಾರ ಪದ್ಧತಿ.
ಚಳಿಗಾಲದಲ್ಲಿ ಬರಬಹುದಾದ ಸಮಸ್ಯೆಗಳಿಗೆ ಎಚ್ಚೆತ್ತುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳೋಣ .. ಕುಟುಂಬದ ಸದಸ್ಯರ ಆರೋಗ್ಯದ ಗುಟ್ಟು ಕಾಳಜಿವಹಿಸುವ ಗೃಹಿಣಿಯ ಕೈಯಲ್ಲಿದೆ ..ಚಳಿಗಾಲವನ್ನು ಕುಟುಂಬದ ಸದಸ್ಯರೊಂದಿಗೆ ಆನಂದಿಸಿ...
✍️... ಅನಿತಾ ಜಿ.ಕೆ.ಭಟ್.
25-12-2019.