Tuesday, 31 March 2020

ಕೊರೋನಾ ...ಇಷ್ಟೊಂದು ಬದಲಾವಣೆಯನ್ನು ತಂದಿದೇನಾ 🤔🤔

ಕೊರೋನಾ ಇಷ್ಟೊಂದು ಬದಲಾವಣೆಯನ್ನು ತಂದಿದೇನಾ..?🤔🤔




             ಕೊರೊನಾ ಕೋವಿಡ್ ಇಡೀ ಜಗತ್ತನ್ನೇ ನುಂಗುವಂತೆ ಅಟ್ಟಹಾಸಗೈಯುತ್ತಿದೆ. ಭಯದಿಂದ ನಡುಗುತ್ತಿರುವಾಗ ನಗುವುದು ಕಷ್ಟ.ಆದರೂ ದೈನಂದಿನ ಬದುಕಿನಲ್ಲಿ ಬರುವ ಚಿಕ್ಕಪುಟ್ಟ ಸನ್ನಿವೇಶಗಳನ್ನು ನೆನೆಸಿಕೊಂಡು ಹೊಟ್ಟೆಹುಣ್ಣಾಗುವಂತೆ ನಗುವುದಕ್ಕೆ ಯಾವುದೇ ಅಡೆತಡೆಯಿಲ್ಲ.ನಕ್ಕುನಕ್ಕು ರೋಗನಿರೋಧಕ ಶಕ್ತಿಯನ್ನು ವೃದ್ಧಿಸಿಕೊಳ್ಳುತ್ತಾ ಕೊರೊನಾ ಮಾರಿಯನ್ನು ಗೆಲ್ಲೋಣ.ಎಪ್ರಿಲ್ 1 ಹಾಸ್ಯಕ್ಕೆ ವಿಶೇಷ ತಾನೇ..?


        ಸಂಗೀತ ಚಂದನ್ ನಂದನ್ ನನ್ನು ಓದಿಸುತ್ತಿದ್ದಾಳೆ.. ನಾಳೆ ಪರೀಕ್ಷೆಗೆ ರೆಡಿ ಆಗಬೇಕೆಂಬ ತರಾತುರಿ.. ಅಷ್ಟರಲ್ಲೇ ಮೊಬೈಲ್ ಟಿಣ್ ಎಂದಿತ್ತು. ಪರೀಕ್ಷೆ ಕ್ಯಾನ್ಸಲ್ ಮಾಡಲಾಗಿದೆ ಎಂಬ ಸುದ್ದಿ ಹೊತ್ತು ತಂದಿತು..ಆಹಾ..!! ಸಿಹಿಸುದ್ದಿ ಎಂದು ಕುಣಿದಾಡಿದ ನಂದನ್. 🤺🤸🤹ಚಂದನ್ ಗೆ ಮಾತ್ರ ಪರೀಕ್ಷೆ..ಹಾಗಾಗಿ ಇನ್ನು ದಿನವಿಡಿ ಅಮ್ಮನ ಮೊಬೈಲ್ ನನಗೆ ಎಂದು ಕುಣಿದಾಡಿ ಪುಸ್ತಕವನ್ನೆಲ್ಲ ಬದಿಗಿರಿಸಿ...ಬೀಗಿದ ನಂದನ್.🕺 ಚಂದನ್ ಪೆಚ್ಚು ಮುಖ ಹಾಕಿಕೊಂಡು ಕುಳಿತ. ಸಂಗೀತಾಳ ಓದು ಓದು ಎಂಬ ರಾಗ ಈಗ ಚಂದನ್ ಕಡೆಗೆ. ಕೊನೆಗೆ ಅವನ ಪರೀಕ್ಷೆಯೂ ಮುಂದೆ ಹೋಯ್ತಾ... ಈಗ ಅಪ್ಪನನ್ನು ಕೇಳುವುದೇ ಕೆಲಸ ಇಬ್ಬರಿಗೂ "ನಿಮಗೂ ರಜ ಇಲ್ವಾ.. ..?"

"ಇಲ್ಲ ಪುಟ್ಟ ..ಕಾಲೇಜು ಮಕ್ಕಳಿಗೆ ಮಾತ್ರ  ರಜೆ."ಎಂದು ವಿವರಿಸಿದರು ಮಧುಕರ್..

"ಹಾಗಾದರೆ ನೀವು ಯಾರಿಗೆ ಪಾಠ ಮಾಡುವುದು ..? ಬೆಂಚ್ ಡೆಸ್ಕ್ ಗಾ..? ನಿಮಗೆಲ್ಲ ಕೊರೋನಾ ಏನೂ ಮಾಡಲ್ವಾ..?"😀😀

ನಗು ತಡೆಯಲಾಗಲಿಲ್ಲ ಅಪ್ಪ ಮಧುಕರ ನಿಗೆ.ಅಂತೂ ಕೆಲವು ದಿನದಲ್ಲಿ ಅಪ್ಪನಿಗೂ ರಜೆ ಸಿಕ್ಕಾಗ ಇಬ್ಬರು ಕುಣಿದಾಡಿದರು.. ಅಪ್ಪನ ಮೊಬೈಲ್ ನಂದನ್ ಗೆ. ಅಮ್ಮನ ಮೊಬೈಲ್ ಚಂದನ್ ಗೆ. ಇಬ್ಬರೂ ಆಡಿದ್ದೇ ಆಡಿದ್ದು. ಕೊನೆಗೆ ನೆಟ್ವರ್ಕ್ ಸಿಗದಿದ್ದಾಗ .. ಡಿಶುಂ ಡಿಶುಂ..🤜🤛🤼🤼 ಶುರುವಾಗಿತ್ತು...


        ಕೊರೋನಾ ಲಾಕ್ಡೌನ್ ನಿಂದಾಗಿ ಸಾಮಗ್ರಿಗಳು ಹಾಲು ಸಿಗುವುದು ಸ್ವಲ್ಪ ಕಷ್ಟ.ಮಧುಕರ್ ಬೆಳಗ್ಗೆ ಹಾಲಿಗೆ ಹೋಗಿ ಬರಿಗೈಯಿಂದ ಹಿಂದಿರುಗಿದರು.. "ಅಲ್ಲಿ ಹಾಲು ಸಿಗಲಿಲ್ಲ "ಎನ್ನುವ ಮಾತು ತುಂಟ ಮಕ್ಕಳಿಗೆ ಕಿವಿಗೂ ಬಿದ್ದಿತು.🧒👦ಮಕ್ಕಳಿಗೆ ದಿನಕ್ಕೆರಡು ಲೋಟ ಹಾಲು ಕುಡಿಸಲು ಹರಸಾಹಸ ಪಡುತ್ತಿದ್ದಳು ಸಂಗೀತಾ.ಬೆಳಗ್ಗೆ ಕಷಾಯ ಮಾಡಿಕೊಟ್ಟರೆ ಮುಖ ಸಿಂಡರಿಸಿ ಇದು ಮೆಚ್ಚುವುದಿಲ್ಲ.. ಕೊತ್ತಂಬರಿ ಜೀರಿಗೆ ವಾಸನೆ ಬರುತ್ತೆ... ಅನ್ನುತ್ತಿದ್ದ ನಂದನ್ ಮೂರು ಬಾರಿ ಇನ್ನೂ ಬೇಕು.. ಇನ್ನೂ ಬೇಕು.. ಎಷ್ಟು ರುಚಿ ಕಷಾಯ ಎನ್ನುತ್ತಾ ಹಾಕಿಸಿಕೊಂಡು ಕುಡಿದ.. ಚಂದನ್ ಕೂಡಾ ಅಷ್ಟೇ 10 ಗಂಟೆಗೆ ಹಾಲಿನೊಂದಿಗೆ ತನಗೆ ಸಪ್ಪೆ ಮಾರಿ ಬಿಸ್ಕಿಟ್ ಮೆಚ್ಚುವುದಿಲ್ಲ ಎನ್ನುತ್ತಿದ್ದವ ಅರ್ಧ ಮಾರಿ ಬಿಸ್ಕೆಟ್ ಪ್ಯಾಕೆಟ್ ಹೊಟ್ಟೆಗಿಳಿಸಿದ. ಸಂಗೀತ ಕೊರೋನಾ ಮಕ್ಕಳಿಗೆ ಹಾಲಿನ ರುಚಿ ಕಲಿಸಿಬಿಟ್ಟಿತು ಎಂದುಕೊಂಡಳು.😘😘

       ದೋಸೆಯ ಮೇಲೆ ಸಕ್ಕರೆ, ಇಡ್ಲಿಗೆ ಸಕ್ಕರೆ, ಕೊನೆಗೆ ಊಟಕ್ಕೂ ಸಕ್ಕರೆ ಬೇಕೆಂದು ಹಠ ಹಿಡಿದ ನಂದನನಿಗೆ "ನೋಡು ಇಷ್ಟೇ ಇರೋದು. ಸಕ್ಕರೆ 21ಕ್ಕೆ ಆಗಬೇಕು" ಎಂದು ಎಚ್ಚರಿಸಿದರು..ಸಂಗೀತಾ.ಆಗಾಗ ಬೀಳುವ ಮಾವಿನ ಹಣ್ಣನ್ನು ತಂದು ಜ್ಯೂಸ್ ಮಾಡುವ, ಹಣ್ಣಾದ ಚಿಕ್ಕು,ಪೆರಳೆ ಕಂಡರೆ ಮಿಲ್ಕ್ ಶೇಕ್ ಮಾಡುವ ಅನ್ನುತ್ತಿದ್ದ ಚಂದನ್ ಗೆ ಸಂಗೀತ "ಮಾವಿನ ಹಣ್ಣನ್ನು ಹಾಗೆ ಕಚ್ಚಿ ತಿನ್ನು ..ಇಲ್ಲದಿದ್ದರೆ ಸಾರು ಮಾಡೋಣ ..ಚಿಕ್ಕು,ಪೇರಳೆ ಹಾಗೆ ತಿಂದರೆ ಆರೋಗ್ಯಕ್ಕೆ ಒಳ್ಳೆಯದು "ಎಂದು ಪುಸಲಾಯಿಸಿ ಒಪ್ಪಿಸಿದಳು.. 😜ಮಕ್ಕಳಿಗೆ ಏನೋ ಗುಮಾನಿ.. ಅಪ್ಪ ತಂದ ಸಕ್ಕರೆಯನ್ನು ಅಮ್ಮ ಎಲ್ಲೋ ಅಡಗಿಸಿಟ್ಟಿದ್ದಾರೆ ಎಂದು.. ಸಂಜೆ ದೊಡ್ಡದಾಗಿ ಇರುವೆಯಸಾಲು ಹೋಗುತ್ತಿದ್ದರೆ ..ಇರುವೆಯ ಸಾಲನ್ನು ಪುಟಾಣಿ ಪಂಟರು ಹಿಂಬಾಲಿಸಿದರು.🕵️🕵️ ಅಕ್ಕಿಯ ಗೋಣಿಯ ಹಿಂದೆ ತುಂಬಿಸಿಟ್ಟಿದ್ದ ಸಕ್ಕರೆ ಡಬ್ಬ ಕಂಡದ್ದೇ ತಡ... ಕಳ್ಳನನ್ನು ಹಿಡಿದ ಪೋಲೀಸರಂತೆ ಸಂಭ್ರಮಿಸಿದರು." ಅಮ್ಮ ಸುಳ್ಳು ಹೇಳಿದ್ದು !!"ಎಂಬ ಪದ್ಯವೇ ಮಕ್ಕಳ ಬಾಯಲ್ಲಿ ಐದು ನಿಮಿಷ..😳😳ಸಾಮಾನು ತಂದು ತಂದು ಎಲ್ಲ ಡಬ್ಬಗಳಲ್ಲಿ ತುಂಬಿ ಕೊನೆಗೆ ಸಕ್ಕರೆಗೆಂದು ಉಳಿದ ಡಬ್ಬದ ಮುಚ್ಚಲ ಬಿಗಿಯಿರಲಿಲ್ಲ.. ರಜೆಯಲ್ಲಿದ್ದ ಮಧುಕರನಿಗೆ ಸಕ್ಕರೆಯಿಂದ ಇರುವೆ ಓಡಿಸುವ ಕೆಲಸ..ಪಾಪ..!!😠😡


      ಈಗ ಆಹಾರ ಸಿಗದಿರುವ ಪರಿಸ್ಥಿತಿ ದನಗಳಿಗೂ ಗೊತ್ತಾಗಿದೆ ನೋಡಿ..ಸಂಗೀತ ಒಣಗಲೆಂದು ಎತ್ತರವಾದ ಕಾಂಪೌಂಡ್ ಕಟ್ಟೆಯಲ್ಲಿ ಬೆಲ್ಲದ ತಟ್ಟೆಯನ್ನಿಟ್ಟರೆ ಆ ಬದಿಯಿಂದ ದನವೊಂದು ತನ್ನ ನಾಲಿಗೆಯನ್ನು ಒಂದಡಿ ಉದ್ದಮಾಡಿ ತಿನ್ನಲು ಹವಣಿಸುತ್ತಿತ್ತು.. ಇದಕ್ಕೂ ಮೊದಲು ಹಲವಾರು ಬಾರಿ ಬೆಲ್ಲವಿಟ್ಟಾಗ ತಿನ್ನದಿದ್ದ ದನದ ಮೂಗು ಇಂದು ಮಾತ್ರ ಪರಿಮಳದ ಜಾಡು ಹಿಡಿದಿತ್ತು..


    ಚವಿಹಣ್ಣು /ಕಾಕಮಾಚಿ ಹಣ್ಣು ಇತ್ತೀಚೆಗೆ ಹಕ್ಕಿಗಳ ಪಾಲಾಗುತ್ತಿದ್ದುದೇ ಹೆಚ್ಚು..ಈಗ ಮಾತ್ರ ದಿನಕ್ಕೆ ಮೂರು ಬಾರಿ ಅದರ ಗೆಲ್ಲುಗಳನ್ನು ಸರಿಸಿ ಹಣ್ಣು ಹುಡುಕಿ ಖಾಲಿಮಾಡುವ ನಂದನ್.."ಹಕ್ಕಿಗಳಿಗೆ ಚೂರು ಉಳಿಸೋ ಮಗಾ" ಎಂದು ಅಮ್ಮ ಗೋಗರೆದರೆ "ಹೋಗಮ್ಮಾ..ಹಕ್ಕಿಗಳಿಗೆ ರೆಕ್ಕೆ ಬಡಿದು ಹಾರಿ ಊರಿಡೀ ಸುತ್ತಿ ಹಣ್ಣು ತಿನ್ನಬಹುದು..ನಮಗೆ..ಹಾರಾಕಾಗಲ್ಲ.. ಪೇಟೆಯಿಂದ ಹಣ್ಣು ತಂದರೆ ಕೊರೋನಾ ಭಯ" ಎನ್ನುತ್ತಾ ಮನೆಯ ಹಿಂದೆ ಇರುವ ಗಿಡದಿಂದ ಹಣ್ಣುಕೊಯ್ಯಲು ಓಡಿದ.. ನಂದನ್.

       ಸಂಗೀತ ಮಕ್ಕಳಲ್ಲಿ ಒಮ್ಮೆ ಮೊಬೈಲ್ ಕೇಳಿ ತನ್ನ ಕಥೆಯನ್ನು ವಾಯ್ಸ್ ಟೈಪಿಂಗ್ ಮಾಡತೊಡಗಿದಳು."ಸೌಜನ್ಯ ಕೇಶವ ಬೆಂಗಳೂರಿಗೆ ತೆರಳಿದರು"ಎಂದು ಹೇಳುತ್ತಾ ಅಕ್ಷರಗಳಲ್ಲಿಯೇ ಗಮನವಿರಿಸಿದ್ದಳು..
."ಅಯ್ಯೋ ಅಮ್ಮಾ..ಬೆಂಗಳೂರಿಗೆ ಹೋಗ್ತಾರಂತಾ.ಬೇಡ ಅನ್ನು... ಅಲ್ಲಿ ಕೊರೋನ ಜಾಸ್ತಿ ಇದೆಯಂತ ನ್ಯೂಸಿನಲ್ಲಿ ಬಂದಿತ್ತು"😲😲
..ಅಂದ ನಂದನ್ ನ ಮಾತಿಗೆ ಸಂಗೀತ ಮಧು ಇಬ್ಬರೂ ನಕ್ಕು ಸುಸ್ತಾದರು..ಅವನಿಗೇನು ಗೊತ್ತು ಅದು ಕಥೆ ಕಾಲ್ಪನಿಕ ಎಂದು.. ಇನ್ನು ಗಂಡ ಮಕ್ಕಳು ಮಲಗಿದ ಮೇಲೆಯೇ ಟೈಪಿಂಗ್ ಎಂದು ಕೆಲಸದತ್ತ ಮುಖ ಮಾಡಿದಳು.


        ಹೊರಗಿನಿಂದ "ಅಮ್ಮಾ...ಪಪ್ಪಾಯ ಹಣ್ಣಾಗಿದೆಯಾ ನೋಡು..." ಎಂಬ ದನಿಕೇಳಿ ಕಿಟಕಿಯಿಂದ ನೋಡಿದಾಗ ‌...ಸಂಗೀತಾ ಹೌಹಾರಿ ...ಕಿಲಾಡಿ ಮಕ್ಕಳನ್ನು ಸುಮ್ಮನೆ ಬಿಟ್ಟರೆ ಹೀಗೆ ಎಂದು ಹೊರಗೋಡಿದಾಗ ಕಂಪೌಂಡ್ ಹತ್ತಿ ಪಪ್ಪಾಯಿ ಕೊಯಿದು ಕೈಯಲ್ಲಿ ಹಿಡಿದು ನಗುತ್ತಿದ್ದ ನಂದನ್.. ಮೊದಲು ಕಾಗಕ್ಕ ಹಣ್ಣಾಗಿದೆಯಾ ಎಂದು ಟೆಸ್ಟ್ ಮಾಡಿ ಟೇಸ್ಟ್ ನೋಡಿ ತನ್ನ ಬಳಗವನ್ನು ಕರೆಯುವಾಗಲೇ ಸಂಗೀತಾಗೆ ತಿಳಿಯುತ್ತಿದ್ದುದು ..!! 😆ಈಗ ಪೂರ್ತಿ ಹಣ್ಣಾಗುವ ಮೊದಲೇ ಕೊಯ್ದು ಒಳಗಿಟ್ಟು ಆಗಾಗ ಹಣ್ಣಾಗಿದೆಯಾ ಪರೀಕ್ಷಿಸಿ ಹಣ್ಣಾದಾಗ ಮೆಟ್ಟುಕತ್ತಿಯನ್ನಿಟ್ಟು" ಅಮ್ಮಾ.. ನೀವು ಕೊರೆಯುತ್ತೀರೋ ನಾನೇ ಕೊರೆಯಲೋ.." ಅನ್ನುವ ನಂದನ್..ಅರರೇ.. ಇವರಿಗೆ ಹಣ್ಣನ್ನು ತುಂಡುಮಾಡಿ ತಿನ್ನಿ ಎಂದು ಕೊಟ್ಟರೂ ಬೇಡ.. ಕೋಲ್ಡ್ ಬೇಕು.. ಕೋಲ್ಡ್ ಮಾಡಿ ತೆಗೆದುಕೊಂಡು ಹೋದರೆ  ಅದು ಆರೆಂಜ್ ಕಲರ್ ಇದೆ, ರೆಡ್ ಇಲ್ಲ,ಮೆತ್ತಗಾಗಿದೆ,ಕಹಿಯಾಗಿದೆ,ಎಂದೆಲ್ಲ ಹೇಳುತ್ತಿದ್ದವರು ಈಗ ಹೇಗೆ ಒಮ್ಮಿಂದೊಮ್ಮೆಲೇ ಬದಲಾದರು ಎಂದು ಸಂಗೀತಾಳ ಪ್ರಶ್ನೆ..😍

       "ಅಮ್ಮಾ ಈ ಅಲಸಂಡೆ ಕೊಯ್ಯಲಾ..?" ಎಂದು ಚಂದನ್ ಕೇಳಿದರೆ.."ಅದು ಮಾತ್ರವಲ್ಲ ಇದನ್ನೂ ಕೊಯ್ಯಬಹುದು.. ಕೊಯಿದು ತಿನ್ನಬಹುದು "ಎಂದು ತಿಂದು ತೋರಿಸಿದ ಮಧು.ಚಂದನ್   ನಂದನ್ ತಾವೂ ಎಳೆಯ ಮಿಡಿ ಅಲಸಂಡೆ ಜಗಿದರು.. ಆಹಾ ..
!!ಆಹಾ !!😋😋ಎಷ್ಟು ರುಚಿ ಎಂಬ ಉದ್ಗಾರ ಬೇರೆ.‌!! ಅಲಸಂಡೆ ಹೋಳು ಸಾಂಬಾರಿನಲ್ಲಿ ಸಿಕ್ಕರೆ ಪಕ್ಕಕ್ಕಿಟ್ಟು ಅದರೊಳಗಿನ ಬೀಜ ಮಾತ್ರ ತಿನ್ನುತ್ತಿದ್ದವರಲ್ಲಿ ಇಂದು ಈ ಬದಲಾವಣೆ..ಮೂಗಿನ ಮೇಲೆ ಬೆರಳಿಟ್ಟುಕೊಂಡಳು..

          "    .. ಅಮ್ಮಾ ಎಳೆಯ ಬದನೆಕಾಯಿ ವಾಂಗೀಬಾತ್ ಚೆನ್ನಾಗಿರುತ್ತೆ.. " ಎಂದು ಚಂದನ್ ಅಂದಾಗ " ಕೊಯ್ಯಿ."ಎಂದು ಹೇಳಿ ".ಏ... ಇವಳೇ.. ಅದರಿಂದ ಎಣ್ಣೇಗಾಯಿ ಮಾಡಿದರೆ ಸುಪರಾಗಿರುತ್ತೆ .. ನಾಳೆ ಅದನ್ನೇ ಮಾಡಾಯ್ತಾ "😄 ಎಂದು ತಾಕೀತು ಮಾಡಿದ ಮಧು.ಅಲ್ಲ ..ಬದನೆಕಾಯಿ ಕಹಿಯಾಗುತ್ತದೆ..ಒಗರಾಗುತ್ತೆ.. ಸಾಕಾಯ್ತು ಅನ್ನುತ್ತಿದ್ದವರು ಇವರೇನಾ..ಸಂಶಯ ಸಂಗೀತಳಿಗೆ..


       ಬೆಳ್ಳಂಬೆಳಗ್ಗೆ ಆಚೆ ಬೀದಿಯ ಕೊನೇ ಮನೆಯ ವಿಶಾಲತ್ತೆ ಫೋನ್ ಮಾಡಿದರು "ಸಂಗೀತ ಇವತ್ತು ಹಾಲು ಸಿಕ್ಕಿದಾ..ಮಾವ ಇನ್ನು ಎದ್ದೇಯಿಲ್ಲ ಕಣೇ..ನಾವಾದರೂ ಹಾಲಿಲ್ಲದೆ ಬದುಕಿಯೇವು.. ಈ ನಾಲ್ಕು ಬೆಕ್ಕು ,ಎರಡು ನಾಯಿ ಮಾತ್ರ ಹಾಲಿಲ್ಲದೆ ಬಾಯಿಯೇ ಮುಚ್ಚುವುದಿಲ್ಲ ."ಎಂದಾಗ ಸಂದರ್ಭಕ್ಕೆ ತಕ್ಕಂತೆ ಸಂಗೀತಾ"ವಿಶಾಲತ್ತೆ.. ಇವತ್ತು ಮೂರೇ ಪ್ಯಾಕೆಟ್ ಹಾಲು ಸಿಕ್ಕಿದ್ದು.. ಪೋಲೀಸರು ಬಂದಾಗ ನಮ್ಮವರು ವಾಪಾಸಾದರಂತೆ.. ಆದ್ದರಿಂದ ಹೆಚ್ಚಿಲ್ಲ.. ಒಂದು ಪ್ಯಾಕೆಟ್ ಬೇಕಾದರೆ ಕೊಡುವ.."ಎಂದಾಗ "ಇಲ್ಲ.. ಫ್ರಿಡ್ಜ್ ನಲ್ಲಿ ತುಂಬಾ ಹಾಲಿನ ಪ್ಯಾಕೆಟ್ ಇದೆ"ಎಂದು ನಂದನ್ ಹೇಳಿಯೇಬಿಟ್ಟ..🙉🤭 ಮೆಲ್ಲನೆ ಚಿವುಟಿದಳು ಸಂಗೀತಾ..🤫🤫ನಂದನ್ ಮಾತು ವಿಶಾಲತ್ತೆಯ ಕಿವಿಗೆ ಬಿತ್ತೋ ಇಲ್ಲವೋ ಗೊತ್ತಿಲ್ಲ..ಮಧು ಸಂಗೀತಾಗಂತೂ ಫಜೀತಿಯನ್ನು ತಂದಿತ್ತು..😇


     ಮದುವೆಯಾದಂದಿನಿಂದ ಹೇಳುತ್ತಲೇ ಇದ್ದಳು ಸಂಗೀತ "ರೀ..ಅತಿಯಾಗಿ ಟೀ, ಕಾಫಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ" ಎಂದು.ಮಧು ಕಿವಿಗೇ ಹಾಕಿಕೊಳ್ಳದೇ" ಏ.. ಇವಳೇ ..ಒಂದು ಗ್ಲಾಸ್ ಚಹಾ ತಾ.. ಸ್ಟ್ರಾಂಗ್ ಕಾಫಿ ಕುಡಿಯಬೇಕು ಬೇಗ ಮಾಡ್ಕೊಡು" ಎನ್ನುತ್ತಿದ್ದ ಮಧು ಈಗ "ಇವಳೇ ನಂಗೆ ಒಂದೇ ಗ್ಲಾಸ್ ಚಹಾ ಸಾಕು ಆಯ್ತಾ" ಎನ್ನುತ್ತಿದ್ದಾನೆ..😘😘


        ಡಾಕ್ಟರ್ ಡಯಟ್ ಮಾಡಿ ವೆಯ್ಟ್ ಕಡಿಮೆ ಮಾಡಿಕೊಳ್ಳಿ ಎಂದರೂ ಕಿವಿಗೊಡದ ಸಂಗೀತಾ 68 ಕೆಜಿ ಇದ್ದವಳು ಈಗ 65 ಕ್ಕೆ ಇಳಿದಿದ್ದಾಳೆ ಎಂದು ಮಧು "ಈಗಲಾದರೂ ಡಯಟ್ ಮಾಡೋದಕ್ಕೆ ಶುರುಮಾಡಿದೆಯಲ್ಲಾ ಮಾರಾಯ್ತಿ... ಪುಣ್ಯ" ಎಂದು ನಗುತ್ತಿದ್ದರೆ..."ರೀ...ಬೆಳಗಿನಿಂದ ರಾತ್ರಿಯವರೆಗೆ  ಮೂವರನ್ನು ಸಂಭಾಳಿಸಿ ವೇಯ್ಟ್ ಲಾಸ್ ಆದದ್ದು" ಅನ್ನಬೇಕೇ...🤣🤣😂😂




✍️...ಅನಿತಾ ಜಿ.ಕೆ.ಭಟ್.

01-04-2020.




ಜೀವನ ಮೈತ್ರಿ ಭಾಗ ೫೩(53)



ಜೀವನ ಮೈತ್ರಿ-ಭಾಗ ೫೩


          ಪುರೋಹಿತರು ವಧೂವರರ ತಂದೆಯನ್ನು ಕರೆದರು.ಈಗ ಎಲೆ ಅಡಿಕೆ ಪರಸ್ಪರ ಬದಲಾಯಿಸಿಕೊಳ್ಳಿ ಎಂದಾಗ ನರಸಿಂಹ ರಾಯರು ಮತ್ತು ಬಂಗಾರಣ್ಣ ಎಲೆ, ಅಡಿಕೆ ,ಹೂವು ಹಿಡಿದು ತಯಾರಾದರು.ನರಸಿಂಹ ರಾಯರು ಬಂಗಾರಣ್ಣನ ಕೈಗೆ ಎಲೆ ಅಡಿಕೆ ನೀಡಿದರು.ಹಿಂದಿನಿಂದ ಬಂದ ತುಂಟ ಪುಟ್ಟಮಾಣಿಯೊಬ್ಬ ನರಸಿಂಹ ರಾಯರನ್ನು ಬಲವಾಗಿ ತಳ್ಳಿಕೊಂಡು ಓಡಿದ.ಕೈಯಲ್ಲಿ ಹಿಡಿದದ್ದು ಬಂಗಾರಣ್ಣನ ಕೈಗೆ ಕೊಡುವ ಮೊದಲೇ ಕೆಳಗೆ ಬಿದ್ದಿತು.
ನರಸಿಂಹ ರಾಯರು ಹೆಕ್ಕುವ ಪ್ರಯತ್ನ ಮಾಡಿದರು.ಕೈಗಳು ಕಂಪಿಸತೊಡಗಿದವು.ರೇಖಾಳ ಮುಖ ವಿವರ್ಣವಾಯಿತು.ನಿರ್ವಿಘ್ನವಾಗಿ ಮಗಳ ಮದುವೆ ನೆರವೇರಿದರೆ ಸಾಕಪ್ಪಾ ಎಂದು ದೇವರಿಗೆ ಕೈಮುಗಿದರು.ಸೌಜನ್ಯ ತಲೆತಗ್ಗಿಸಿ ಹನಿಗಣ್ಣಾದಳು.
"ಛೇ..ಇದೇನಾಯಿತು" ಎಂದರು ಪುರೋಹಿತರು..

         ಬಿದ್ದಿರುವುದನ್ನು ಹೆಕ್ಕುತ್ತಿದ್ದ ನರಸಿಂಹ ರಾಯರಲ್ಲಿ ಪುರೋಹಿತರು.."ಇನ್ನು ಪುನಃ ಅದನ್ನು ನೀಡುವುದು ಬೇಡ.ಬೇರೆ ಎಲೆ ಅಡಿಕೆ ನೀಡಿ.."ಎಂದರು."ಸರಿ .."ಎಂದ ರಾಯರು ಹಾಗೆಯೇ ಮಾಡಿದರು.ಬಂಗಾರಣ್ಣ ಸ್ವೀಕರಿಸಿದರು.ಬಂಗಾರಣ್ಣನೂ ತಾವು ತಂದದ್ದನ್ನು ನರಸಿಂಹ ರಾಯರಿಗೆ ನೀಡಿದರು.ಎಲೆ ಅಡಿಕೆ ಬದಲಾಯಿಸಿಕೊಳ್ಳುವ ಶಾಸ್ತ್ರ ನೆರವೇರಿತು.ಪುರೋಹಿತರಲ್ಲಿ ಕೇಶವ್ "ಇನ್ನು ನಾವು ತಂದಿದ್ದ ಉಂಗುರವನ್ನು ತೊಡಿಸಬಹುದಾ .."ಎಂದು ಕೇಳಿದ.
"ಆ ಕೆಲಸವೂ ಈಗಲೇ ಆದರೆ ಮತ್ತೆ ಊಟಕ್ಕೆ ತಯಾರು ಮಾಡಬಹುದು "...ಎಂದರು.

          ಎದುರು ಬದುರು ಮಣೆಯಲ್ಲಿ ಕುಳಿತುಕೊಂಡು ಕೇಶವ್ ತಾನು ತಂದಿದ್ದ ವಜ್ರದ ಉಂಗುರವನ್ನು ಸೌಜನ್ಯಳಿಗೆ ತೊಡಿಸಿದನು.ಸೌಜನ್ಯ ತಾನು ಕೇಶವ್ ಗೆ ಚಿನ್ನದುಂಗುರವನ್ನು ತೊಡಿಸಿದಳು...
ಅಲ್ಲಿದ್ದವರೆಲ್ಲ ಕುತೂಹಲದಿಂದ ಇಣುಕುತ್ತಿದ್ದರೆ ಸೌಜನ್ಯ ನಗುನಗುತ್ತಾ ಕೇಶವನ ಕಣ್ಣುಗಳನ್ನು ದಿಟ್ಟಿಸಿದಳು.ಮಧುರವಾದ ಭಾವಪರವಶತೆ.ಮಾತಿಗಿಂತ ಬಲವಾದ ಸಂವಹನ ನೋಟದಲ್ಲೇ ಮೀಟಿದಳು.ಪರಿಣಾಮ ಕೇಶವನ ಕೈ ಸೌಜನ್ಯ ಳ ಕೈಯನ್ನು ಬಲವಾಗಿ ಬಂಧಿಸಿತು.ಇಬ್ಬರೂ ಕೈ ಹಿಡಿದುಕೊಂಡು ಅಲ್ಲಿಂದೆದ್ದರು . ಊಟಕ್ಕೆ ತೆರಳಿದರು.ಅಕ್ಕಪಕ್ಕ ಕುಳಿತು ಇಬ್ಬರೂ ಮಾತನಾಡಿಕೊಂಡು ಉಣ್ಣುತ್ತಿದ್ದಾಗ
 "ಹೆಚ್ಚು ಮಾತನಾಡಿದರೆ ಏನು ತಿನ್ನುತ್ತಿದ್ದೀರಿ ಎಂದೇ ಗೊತ್ತಾಗದು .." ಎಂದು ಕೆಲವರು ಛೇಡಿಸಿದರು.ಇನ್ನೊಬ್ಬರು ಸೇಮಿಗೆ ಪಾಯಸ ಬಡಿಸಿ ...
"ಹೆಸರು ಪಾಯಸ ಹೇಗಿದೆ ..?"ಅಂತ ಕೇಳಿದರೆ "ಚೆನ್ನಾಗಿದೆ " ಅಂತ ಹೇಳಲು ಬಾಯೊಡೆದ ಸೌಜನ್ಯ ಳನ್ನು ಮೆದುವಾಗಿ ಕೈಗಳನ್ನು ಅದುಮಿ ತಡೆದ ಕೇಶವ್.


         "ಊಟವಾಗುವ ತನಕ ದೇವರ ದೀಪ ಉರಿಯುತ್ತಿರಲಿ" ಎಂದಿದ್ದರು ರೇಖಾಳ ಅಮ್ಮ.ಎಲ್ಲರೂ ಉಣ್ಣುತ್ತಿದ್ದಾಗ ಒಳಬಂದಳು ರೇಖಾ.ದೀಪ ಆರಿದೆ.ಯಾರಾದರೂ ಆರಿಸಿದರಾ..ಈಗ ಚೆನ್ನಾಗಿ ಉರಿಯುತ್ತಿತ್ತು ಎಂದು ಆತಂಕಿತರಾದರು.ಮಗಳ ಕಳವಳವನ್ನು ಕಂಡ ತಾಯಿ "ಆಯ್ತಮ್ಮ ರೇಖಾ.. ಪೂಜೆ ಮುಗಿಯುವ ತನಕ ಉರಿಯುತಿತ್ತಲ್ವಾ.. ವಿಘ್ನವೆಂದು ಭಾವಿಸುವುದು ಬೇಡ.. ಎಲ್ಲವೂ ಸುಸೂತ್ರವಾಗಿ ನೆರವೇರಲಿ.."ಎಂದು ಸಮಾಧಾನಪಡಿಸಿದರು.

         ಅಮ್ಮ ಏನೇ ಹೇಳಿದರೂ ರೇಖಾಳ ಮನಸ್ಸಿನಲ್ಲಿ ಆಂದೋಲನ ಏರ್ಪಟ್ಟಿತ್ತು.ಮಗಳ ಮದುವೆ ನಿರ್ವಿಘ್ನವಾಗಿ ನೆರವೇರಿದರೆ ಆ ಊರಿನ ಗ್ರಾಮ ದೇವರಿಗೆ ಮಗಳು ಅಳಿಯನ ಹೆಸರಿನಲ್ಲಿ ಅರ್ಚನೆ ಮಾಡಿಸುತ್ತೇನೆ ಎಂದು ಹರಕೆ ಹೊತ್ತರು.


         ಊಟ ಮಾಡಿದ ಜೋಡಿ ಹಕ್ಕಿಯನ್ನು ಮತ್ತೆ ಯಾರೂ ಕಂಡೇಯಿಲ್ಲ.ಪರಸ್ಪರ ಕೈ ಕೈ ಹಿಡಿದು ಮಾಳಿಗೆಗೆ ತೆರಳಿದರು.ಕೇಶವ್ ನ ಸನಿಹದಲ್ಲಿ ಅವಳಿಗೆ ಅದೇನೋ ಪುಳಕ ..ಅವಳ ಮೃದುಕೈಗಳ ಸ್ಪರ್ಶ ಅವನಲ್ಲಿ ಸೃಷ್ಟಿಸಿದೆ ಸಂಚಲನ..ಮಾಳಿಗೆಯಲ್ಲಿದ್ದ ಪುಟ್ಟ ಕೈತೋಟದ ಸುತ್ತ ಸುತ್ತಿ ಹಸಿರಿನ ನಡುವಲ್ಲಿ ಉಸಿರಿಗುಸಿರು ತಾಕುವಂತೆ ವಿಹರಿಸಿದರು.ಅಲ್ಲಿಂದ ಕೆಳಗಿಳಿದು ಮೊದಲನೇ ಮಹಡಿಯಲ್ಲಿದ್ದ ಸೌಜನ್ಯ ಳ ರೂಮಿಗೆ ಹೊಕ್ಕರು.ಮಾತು ಸಾಗಿತ್ತು.

"ಇತ್ತೀಚೆಗೆ ಓದು ಮುಗಿಸಿದೆ ಅಂದೆ ಸೌಜನ್ಯ..ಒಂದೂ ಬುಕ್ ಕಾಣ್ತಾ ಇಲ್ಲ.."

"ಹೋ..ಅದಾ.. ಆಗಿಂದಾಗ್ಗೆ ಕ್ಲೀನ್ ಮಾಡುವುದು ನಮ್ಮನೆ ಅಭ್ಯಾಸ.ಹೇಗೂ ಸುನಿತಾ ಇದ್ದಾಳಲ್ಲ.."

"ಈ ಫೋಟೋ ದಲ್ಲಿ ನಿನ್ನನ್ನು ನೋಡಿದರೆ ಬಹಳ ವ್ಯತ್ಯಾಸ ಕಾಣಿಸುತ್ತದೆ.. ಘಟಿಕೋತ್ಸವದಲ್ಲಿ ಭಾಗವಹಿಸಿ ತುಂಬಾ ಸಮಯ.."

ಕೇಶವ್ ನ ಮಾತನ್ನು ಅರ್ಧದಲ್ಲೇ ತುಂಡರಿಸಿ..
"ಇಲ್ಲ ಕೇಶವ್.. ನಾನು ಇತ್ತೀಚೆಗೆ ಘಟಿಕೋತ್ಸವದಲ್ಲಿ ಭಾಗವಹಿಸಿದ್ದು.ಆದರೆ ಆಗ ಮೂರು ನಾಲ್ಕು ದಿನದಿಂದ ಜ್ವರದಿಂದ ಬಳಲುತ್ತಿದ್ದೆ.ಹಾಗಾಗಿ ಬಹಳ ಬಸವಳಿದು ‌ಸಣ್ಣಗೆ ಕಾಣಿಸುತ್ತಿದ್ದೇನೆ .."

"ಓಹೋ ಹಾಗಾ..?"

"ಕೇಶವ್.. ನೀವು ಬೆಂಗಳೂರಲ್ಲಿ ಜಾಬ್ ನಲ್ಲಿದ್ರಂತಲ್ಲ..ಯಾವ ಕಂಪೆನಿಲಿದ್ರಿ.."

"ಅದಾ... ಅದೊಂದು ಸಣ್ಣ ಕಂಪೆನಿ.. ಇಂಜಿನಿಯರಿಂಗ್ ಮುಗಿದು ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಕೆಲಸ ಸಿಕ್ಕಿತ್ತು.." ಎಂದ ಉಗುಳು ನುಂಗಿಕೊಂಡು..

"ನೀವೇನೂ ಅಂದುಕೊಳ್ಳಲ್ಲ ಅಂದ್ರೆ ಒಂದು ಪ್ರಶ್ನೆ.."

"ಮದುವೆ ಫಿಕ್ಸ್ ಆದ ಮೇಲೆ ಸಂಕೋಚ ಯಾಕೆ ಕೇಳು.."ಎಂದ ಕಣ್ಣಲ್ಲೇ ಕಾಡಿಸುತ್ತಾ..


"ಉದ್ಯೋಗ ಯಾಕೆ ಬಿಟ್ರೀ.. ಕೃಷಿಗಿಂತ ಉದ್ಯೋಗ ಒಳ್ಳೇದಲ್ವಾ..?"

ತಲೆಕೆರೆದುಕೊಂಡ ಕೇಶವ್ ತನ್ನ ಅಸಲಿ ಬಣ್ಣ ಈಗಂತೂ ಬಯಲಾಗಲೇಬಾರದು ಎಂದು

" ಒಬ್ಬನೇ ಮಗ.ರಾಜನಂತೆ ಸಾಕಿದ್ದಾರೆ.ಇಲ್ಲಿ ದಿನವಿಡೀ ದುಡಿಯೋದು,ಕೈ ಅಡುಗೆ ಮಾಡಿ ಉಣ್ಣುವುದು ಅಪ್ಪ ಅಮ್ಮನಿಗೆ ಸರಿ ಕಾಣಲಿಲ್ಲ..ಸೋ ಊರಿಗೆ ಕರೆಸಿಕೊಂಡರು.. ಕೃಷಿಯಲ್ಲಿ ಜೀವನಸಾಗುವಷ್ಟಿದೆ  ಸಾಲದೇ..?"

"ರಾಜಾ.. ಸಾಕು.. ನಾನು ಸಾಲಲ್ಲ ಅಂತ ಕೇಳಿದ್ದಲ್ಲ.. ಸುಮ್ನೆ ಕುತೂಹಲಕ್ಕಾಗಿ.."
ಅಂದವಳ ಮುಖದಲ್ಲಿ ಮಂದಹಾಸವಿತ್ತು.
ಅವನ ಕೈಗಳು ಅವಳ ಬೆನ್ನನ್ನು ಆವರಿಸಿದವು.ಅವಳು ನಿಧಾನವಾಗಿ ಅವನು ಎದೆಹರವಿನಲ್ಲಿ ತಲೆಯಿಟ್ಟಳು.ಹಣೆಯ ಸಿಂಧುರವೂ ಇನಿಯನ ಪ್ರೇಮಮುದ್ರೆಗೆ ನಾಚಿತ್ತು.ಅವಳ ತುಟಿಗಳು ಕಾಣಿಕೆಯ ಬಯಸಿದವು.ತೆಳುವಾದ ಕೆಂದುಟಿಗೆ ತನ್ನಧರವ ಬೆಸೆದು ಮೈಮರೆತ ಕೇಶವ್.

"ಛೀ..ತುಂಟ.". ಎನ್ನುತ್ತಾ ಅವನ ತೋಳುಗಳಿಂದ ಬಿಡಿಸಿಕೊಳ್ಳುವ ಪ್ರಯತ್ನ ಮಾಡಿದಳು...ಅವಳಿಚ್ಛೆಯಂತೆ ಬಂಧನದ ಬಿಗಿ ಸಡಿಲಿಸಿದ ಕೇಶವ..

       ಪರಸ್ಪರ ವಿಶ್ವಾಸ, ಗೆಳೆತನ ಬಲವಾಯಿತು.ನನಗೆ ನೀನು ನಿನಗೆ ನಾನು ಜೀವನವಿಡೀ ಜೊತೆಗೆ ಬಾಳೋಣ ಎಂಬ ಒಮ್ಮತ ಮೂಡಿತು.ತಮ್ಮ ವಿದ್ಯಾಭ್ಯಾಸ ಉದ್ಯೋಗದ ವಿಷಯಗಳನ್ನು ವಿನಿಮಯ ಮಾಡಿಕೊಂಡು ನಿನ್ನಪ್ರತಿ ಹೆಜ್ಜೆಗೂ ನಾನೇ ಕಾವಲುಗಾರ ಎಂಬ ಧೈರ್ಯವನ್ನು ನೀಡಿದ ಕೇಶವ್.


                   "ನಮಗೆ ಹೊರಡುವ ಸಮಯವಾಯಿತು.ಈಗ ನಾನು ನಿನಗೆ ಬಾಯ್ ಹೇಳಲೇಬೇಕು."..ಎನ್ನುತ್ತಾ ಮತ್ತೊಮ್ಮೆ ಅವಳೆಡೆಗೆ
ತುಂಟನಗೆ ಬೀರಿ ಹಗ್ ಮಾಡಿ ಬೀಳ್ಕೊಂಡ ಕೇಶವ್.. ರೂಮಿನಿಂದ ಕೇಶವ್ ಕೆಳಗಿಳಿದು ಬಂದ.ಸೌಜನ್ಯ ಸ್ವಲ್ಪ ಹೊತ್ತು ಅಲ್ಲೇ ಇದ್ದು ತನ್ನ ಇಂದಿನ ಖುಷಿ ಹಿಂದಿನ ನೋವು ಎಲ್ಲವನ್ನೂ ಸಮೀಕರಿಸಿ ಯೋಚನೆಯಲ್ಲಿ ಮುಳುಗಿದಳು.ಕೇಶವ ಗೆ ಏನಾದರೂ ಸಂಶಯ ಬಂದಿರಬಹುದಾ..?  ಎಂಬ ಸಣ್ಣ ಗುಮಾನಿಯೂ ಇತ್ತು ಅವನ ಮಾತಿನ ವರಸೆಯಿಂದಾಗಿ.ಸರಿ ದೆವರು ನಡೆಸಿದಂತೆ ಜೀವನ.. ಎಂದುಕೊಳ್ಳುತ್ತಾ ಕೆಳಗಿಳಿದು ಬಂದಳು..

     ಕೇಶವನ ಕಡೆಯವರು ಎಲ್ಲರೂ ಹೊರಟು ನಿಂತಿದ್ದರು.ಒಬ್ಬಾಕೆ "ಆಯ್ತಾ ಕೇಶವನಲ್ಲಿ ಸರಿಯಾಗಿ ಮಾತನಾಡಿ " ಎಂದು ಕಾಲೆಳೆದರೆ
ಕೇಶವನ ಮಾವ "ಶುಕ್ರವಾರ ಸರಿಯಾಗಿ ಮಾತನಾಡಬಹುದು.. " ಎಂದು ರೇಗಿಸಿದರು.ಕೇಶವನಿದ್ದ ಕಾರು ಮುಂದೆ ಚಲೀಸಿದಾಗ ಕೈ ಬೀಸಿದಳು ಸೌಜನ್ಯ..

ಮುಂದುವರಿಯುವುದು..

✍️ ಅನಿತಾ ಜಿ.ಕೆ.ಭಟ್.
31-03-2020.





Monday, 30 March 2020

ಜೀವನ ಮೈತ್ರಿ ಭಾಗ ೫೨(52)



ಜೀವನ ಮೈತ್ರಿ - ಭಾಗ ೫೨



            ಕಿಶನ್ ಮೈತ್ರಿಗೆ ನಿಶ್ಚಿತಾರ್ಥ ದ ದಿನ ತೊಡಿಸಲು ಉಂಗುರಕ್ಕೆ ಆರ್ಡರ್ ಮಾಡಿದ್ದ.ಅದು ಇಂದು ಅವನ ಕೈಸೇರಿತು.ರೂಮಿಗೆ ಬಂದವನೇ ಕಣ್ಣಲ್ಲಿ ದಿಟ್ಟಿಸಿ ನೋಡಿದ.ಮೈತ್ರಿಯ ಕೈಬೆರಳಿಗೆ ಹೇಗೆ ಕಾಣಬಹುದು ತಾನೇ ಕಲ್ಪಿಸಿಕೊಂಡ.ಆತನ ಮುದ್ದಿನ ರಾಣಿಗೆ ಅದ್ಹೇಗೆ ಗೊತ್ತಾಯ್ತೋ ಏನೋ..ಕರೆಮಾಡಿದಳು.

"ಹಾಯ್ ಕಿಶನ್.. ಏನು ಸಮಾಚಾರ...?"

"ಮುದ್ಗೊಂಬೆ... ನಿನ್ನನ್ನೇ ನೆನಪುಮಾಡಿಕೊಳ್ಳುತ್ತಿದ್ದೆ..ನಿನ್ನ ಮನಸ್ಸು ಅದನ್ನರಿತು ಕರೆಮಾಡಲು ಹೇಳಿರಬೇಕು."

"ತಮಾಷೆ ಮಾಡ್ತಿಲ್ಲ ತಾನೇ.. ನಂಗೆ ಈಗ ಫೋನ್ ಮಾಡ್ಲೇ ಬೇಕು ಅಂತನಿಸಿತು..ಏನೋ.ಏಕೋ..ನಾನರಿಯೆ..ಓದೋದಕ್ಕೆ ಅಂತ ಜಗಲಿಯ ಮೂಲೆಯಲ್ಲಿ ಕುಳಿತಿದ್ದೀನಿ . ಇಲ್ಲಿ ಸಿಗ್ನಲ್ ಕೂಡ ತಕ್ಕಮಟ್ಟಿಗೆ ಸರಿಯಾಗಿ ಸಿಗುತ್ತೆ..ಸೋ.."

"ಮುದ್ಗೊಂಬೆ... ನೋಡು ಏನಿದೆ ನನ್ನ ಕೈಲಿ ಅಂತ.. " ಎನ್ನುತ್ತಾ  ಫೊಟೋ ಕಳುಹಿಸಿದ..

"ವಾವ್... ಎಷ್ಟು ಚೆನ್ನಾಗಿದೆ.ನಂಗಂತೂ ತುಂಬಾನೇ ಹಿಡಿಸಿತು.ಇದನ್ನು ನೀವು ನಿಮ್ಮ ಕೈಯಾರೆ ನಂಗೆ ತೊಡಿಸೋ ದಿನ  ಯಾವಾಗ ಬರುತ್ತೆ ..ಹೇಗಿರಬಹುದು ಆ ಕ್ಷಣ ...ಎಂದು ಏನೇನೋ ಯೋಚನೆ ಬರ್ತಿದೆ.."

"ನಂಗೂ ಹಾಗೇನೇ.ಅದೇ ಯೋಚನೆಯಲ್ಲಿ ಮುಳುಗಿದ್ದಾಗಲೇ ಮುದ್ಗೊಂಬೆ ಕರೆಮಾಡಿದ್ದು..ಸೋ ಡಬಲ್ ಖುಷಿ.."

"ಓಹೋಹೋ..ಈ ಡಬಲ್ ಖುಷಿಗೊಂದು ಹಾಯ್ಕು, ಚುಟುಕು ..ಹೊರಬರ್ಲಿ ನೋಡೋಣ.."

"ಆ ಮೊನಚು ನೋಟಕೆ
ಸೋತು ಗೆದ್ದವ
ಈ  ಮಾನಸಿ ಕೂಟಕೆ
ಜೊತೆಯಾಗುವ

ಆಗಸದ ಚುಕ್ಕಿತಾರೆಯ
ಎಣಿಸುತಲಿ ನಲ್ಲೆ
ಭೋಗದ ಮುಸುಕೆಳೆದು
ಉಣಿಸುವೆ ಚೆಲ್ವೆ.."


"ಅಬ್ಬಾ.. ನಾನಂತೂ ಸೋತೆ ನಿನ್ನ ಪದವೈಭವಕೆ..
ಹೆಣ್ಣು ಮಾಟಗಾತಿ ಮರೆತರೆ ಜೋಕೆ.."

"ಇಲ್ಲ ..ಮರೆಯಲ್ಲ.. ಮಾಟಗಾತಿಯೇ ಆಗಿರ್ಲಿ ..
ಮಾಯಗಾತಿಯೇ ಆಗಿರ್ಲಿ...ನನ್ನ ಮನದನ್ನೆ ಎಂದೆನಿಸಿದ ಮೇಲೆ ನಾ ಕರೆದಾಗ ಬರ್ಲಿ...ಪ್ರೇಮದ ಹೊಳೆಯ ಹರಿಸುತಲಿರ್ಲಿ.."


"ಹೂಂ...ಜಾಣ ಮಾಣಿ.."

"ನಿಂದು ಪರೀಕ್ಷೆ ಎಲ್ಲಿವರೆಗೆ ಬಂತು..?"

"ಒಂದು ಪರೀಕ್ಷೆ ಪಾಸಾಯ್ತು.. ಇನ್ನೊಂದು ನಡೀತಾಯಿದೆ.."

"ಯಾವ್ದೇ ಮುದ್ಗೊಂಬೆ ನೀ ಪಾಸಾಗಿದ್ದು..?"

"ವಧು ಪರೀಕ್ಷೆ..."

"ಹ್ಹ ಹ್ಹ ಹ್ಹಾ...ಆ ಪರೀಕ್ಷೆಯ ಒಂದು ಹಂತ ಪಾಸಾಗಿ ನಾಲ್ಕು ವರ್ಷದ ಮೇಲಾಯಿತು..."

"ಎಲ್ಲ ನಿನ್ನೆ ಮೊನ್ನೆ ನಡೆದಂತೆ ಭಾಸವಾಗುತ್ತಿದೆ ನಂಗೆ..ಹಾಂ...ಅಪ್ಪನೋ ಅಜ್ಜನೋ ಈ ಕಡೆಗೆ ಬರುವಂತಿದೆ...ಇಡ್ತೀನಿ ಬಾಯ್.". ಎಂದಳು..

ಪಾಪ.. ಮೈತ್ರಿಗೆ ಮದುವೆ ನಿಶ್ಚಯವಾದರೂ ಮನೆಯವರಿಗೆ ಹೆದರೋದು ತಪ್ಪಿಲ್ಲ.. ಮದುವೆ ಆಗ್ಲಿ.. ಆಮೇಲೆ ರಾಣಿ... ರಾಣಿ ಹಾಗೆ ನೋಡ್ಕೋತೀನಿ.. ಎಂದು ತನ್ನಲ್ಲೇ ಆಡಿಕೊಂಡ ಕಿಶನ್...


               ********



       ಸರಿಯಾದ ಸಮಯಕ್ಕೆ ನರಸಿಂಹ ರಾಯರ ಮನೆ ಮುಂದೆ ಬಸ್, ಕಾರ್ ನಿಂತಿತು.ಐವತ್ತು ಜನ ಇಳಿದು ಮನೆಯತ್ತ ಸಾಗಿದರು.
ಎಲ್ಲರಿಗೂ ಸತ್ಕಾರ, ಉಪಚಾರ ಸಾಂಗವಾಗಿ ನೆರವೇರಿತು.ಕೇಶವನ ಕಣ್ಣುಗಳು ಸೌಜನ್ಯಳನ್ನು ಅರಸುತ್ತಿದ್ದವು.ಕೆಲವು ಹೆಣ್ಣುಮಕ್ಕಳಂತೂ ಕುತೂಹಲ ತಡೆಯಲಾರದೆ ಅವಳ ರೂಮಿಗೇ ನುಗ್ಗಿಬಿಟ್ಟಿದ್ದರು.ನಾಲ್ಕಾರು ಪ್ರಶ್ನೆ ಗಳನ್ನು ಕೇಳಿ ಅವಳ ತಲೆತಿಂದರು.


         ದೊಡ್ಡದಾದ ಮನೆಯ ಹಾಲ್ ನಲ್ಲಿ ಇದಿರು ಬದುರಾಗಿ ಎಲ್ಲರಿಗೂ ಕುಳಿತುಕೊಳ್ಳಲು ವ್ಯವಸ್ಥೆಯನ್ನು ಮಾಡಲಾಯಿತು.ಒಂದಿಬ್ಬರು ಹೆಣ್ಣುಮಕ್ಕಳ ಜೊತೆ ರೇಖಾ ಮಗಳನ್ನು ಕರೆದುಕೊಂಡು ಬಂದು ಸಭೆಯಲ್ಲಿ ಕುಳ್ಳಿರಿಸಿದರು.ಎಲ್ಲರ ಕಣ್ಣೂ ಅವಳ ಮೇಲೆ.ಕೇಶವ ಅವಳ ಕಡೆಗೆ ನೋಡಿ ನಸುನಕ್ಕ.ಅವಳೂ ಪ್ರತಿಕ್ರಿಯಿಸಿದಳು.ಮುಗುಳ್ನಗು ವಿನಿಮಯವಾದದ್ದನ್ನು ಕಂಡು ಹಲವರು ನಸುನಕ್ಕರು.ನೋಡಿದಷ್ಟೂ ನೋಡಬೇಕೆನ್ನುವ ಅವಳ ಚೆಲುವು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿತ್ತು.ಒಂದಿಬ್ಬರು ಹೆಣ್ಣುಮಕ್ಕಳು ಹಿಂದೆ ಗುಸುಗುಸು ಮಾತನಾಡಿಕೊಂಡರು.
"ಇಷ್ಟು ರೂಪವತಿ, ವಿದ್ಯಾವಂತೆ ಹಳ್ಳಿಯ ಮಾಣಿಯನ್ನು ಒಪ್ಪಿದ್ದಾಳೆ ಎಂದಾದರೆ ನಂಗೇನೋ ಸಂಶಯ.."

"ಹೌದು ಕಣೇ..ಹಳ್ಳಿಯೆಂದರೆ ಮೂಗುಮುರಿಯುವ ಆಧುನಿಕ ಕಾಲದ ಯುವತಿಯರು.. ಅಂತಹುದರಲ್ಲಿ ಜೀವನವಿಡೀ ಹಳ್ಳಿಯಲ್ಲಿ ಕಳೆಯಲು ಒಪ್ಪಿದ್ದಾದರೂ ಹೇಗೆ..?"
ಇದು ರೇಖಾಳ ಕಿವಿಗೆ ಬಿದ್ದರೂ ಸುಮ್ಮನಿದ್ದಳು ಕೇಳಿಸಿಲ್ಲ ಎಂಬಂತೆ.

   ನರಸಿಂಹ ರಾಯರು ಸಭೆಯನ್ನುದ್ದೇಶಿಸಿ ಮಾತನಾಡಿದರು."ಬಂದರೆಲ್ಲರೂ ಕ್ಷೇಮ ಎಂದು ಭಾವಿಸಿದ್ದೇನೆ."ಎಂದು ಹೇಳಿ ಕೈಮುಗಿದರು."ಇಂದು ನನ್ನ ಮಗಳ ನಿಶ್ಚಿತಾರ್ಥ ದ ಸಲುವಾಗಿ ಎಲ್ಲರೂ ಒಟ್ಟು ಸೇರಿದ್ದೇವೆ.ನಾನು ನರಸಿಂಹ ರಾಯ..ರೇಖಾಳತ್ತ ಕೈ ತೋರಿಸಿ ಆಕೆ ನನ್ನ ಶ್ರೀಮತಿ ರೇಖಾ.. ಇವಳು ನಮ್ಮ ಏಕೈಕ ಪುತ್ರಿ ಸೌಜನ್ಯ.ಇಂಜಿನಿಯರಿಂಗ್ ಪದವೀಧರೆ.. ಸಂಗೀತ ,ಭರತನಾಟ್ಯ ಎರಡರಲ್ಲೂ ಪಳಗಿದವಳು.. ಎನ್ನುತ್ತಾ ತನ್ನ ಕಡೆಯ ಸುಮಾರು ಹದಿನೈದು ಜನರನ್ನು ಪರಿಚಯ ಮಾಡಿಕೊಟ್ಟರು.ಒಬ್ಬರು ಸಭೆಯಿಂದ ಹೇಳಿದ್ದು ಕೇಳಿಸಿತು "ನಾವು ಹುಡುಗನ ಕಡೆಯವರೇ ಹೆಚ್ಚು ಮಂದಿ ಬಂದದ್ದು.ನಿಮ್ಮ ಕಡೆಯವರು ಬೆರಳೆಣಿಕೆಯಷ್ಟು ಮಂದಿ.. ಅದೇನು..?" ಎಂದು

"ನಾವು ಊರಲ್ಲೇ ಮಗಳ ವಿವಾಹ ಕಾರ್ಯಕ್ರಮ ಇಟ್ಟುಕೊಳ್ಳುವ ಯೋಜನೆ ಹಾಕಿಕೊಂಡಿದ್ದೇವೆ.ಆದ್ದರಿಂದ ನಮ್ಮ ನೇಂಟರಿಷ್ಟರನ್ನು ಅಲ್ಲಿಗೇ ಕರೆಸಿಕೊಳ್ಳೋಣ ಮರುವೆಗೆ.ಈಗ ಅತಿ ಹತ್ತಿರದ ಬಂಧುಗಳಿಗೆ ಮಾತ್ರ ಕರೆದಿದ್ದೇವೆ " ಎಂದು ಸಮಜಾಯಿಷಿ ನೀಡಿದರು.ಆ ಪ್ರಶ್ನೆ ಎಸೆದಿದ್ದ ದಿವಾಕರ ಭಾವವನ್ನು ಬಂಗಾರಣ್ಣ ಕಣ್ಣಲ್ಲೇ ಗದರಿದರು.ಸುಮ್ಮನಿರು ಭಾವ ಎಂಬಂತೆ.

       ಗಂಡಿನ ಕಡೆಯಿಂದ ಬಂಗಾರಣ್ಣ ಎದ್ದು ನಿಂತು ಎಲ್ಲರಿಗೂ ಕೈಮುಗಿದು ನರಸಿಂಹ ರಾಯರ ಆದರಾತಿಥ್ಯವನ್ನು ಕೊಂಡಾಡಿ ತನ್ನ ಪರಿಚಯ ಮಾಡಿಕೊಂಡರು."ನಾನು ಜನಾರ್ಧನ ರಾಯ ಅಂತ.ಆದರೆ ಬಂಗಾರಣ್ಣ ಎಂದೇ ಎಲ್ಲರೂ ಕರೆಯುವುದು ರೂಢಿ.ಇವಳು ನನ್ನ ಮಡದಿ ಸುಮಾ . ಪಕ್ಕದಲ್ಲಿದ್ದ ಸುಮಾ ಕೈಮುಗಿದರು.ಇವನು ನನ್ನ ಮಗ ಕೇಶವ್".ಎಂದಾಗ ಕೇಶವ್ ಎದ್ದು ನಿಂತು ಕೈಮುಗಿದು ಸಭೆಯನ್ನೊಮ್ಮೆ ದಿಟ್ಟಿಸಿದ.ಆ ನೋಟದಲ್ಲಿ ಗಾಂಭೀರ್ಯವಿತ್ತು. ಮದುವೆಗಂಡಿನ ಗತ್ತು ,ಠೀವಿ ಎದ್ದು ಕಾಣುತ್ತಿತ್ತು.ಮುಖದಲ್ಲಿ ಶ್ರೀಮಂತಿಕೆಯ ಕಳೆಯಿತ್ತು.ನಂತರ ಬಂಗಾರಣ್ಣ "ಇನ್ನು ಎಲ್ಲರನ್ನೂ ನನ್ನ ಮಗ ಕೇಶವ್ ಪರಿಚಯ ಮಾಡಿಕೊಡುತ್ತಾನೆ" ಎಂದು ತನ್ನ ಮಗನಿಗೆ ಜವಾಬ್ದಾರಿ ಹಸ್ತಾಂತರಿಸಿದರು.ಕೇಶವ್ ತಮ್ಮ ಜೊತೆ ಬಂದಿದ್ದ ಸುಮಾರು ಐವತ್ತರಷ್ಟು ಮಂದಿಯನ್ನು ಕೂಡ ಅವರ ಹೆಸರು ಊರು ಸಂಬಂಧವನ್ನು ಹೇಳಿ ಪರಿಚಯಿಸಿದ್ದು ನರಸಿಂಹ ರಾಯರಿಗೆ ಬಹಳ ಮೆಚ್ಚುಗೆಯಾಯಿತು.ಈಗಿನ ಕಾಲದಲ್ಲೂ ಇಷ್ಟು ಚೆನ್ನಾಗಿ ಸಂಬಂಧ ಹೇಳುವ ಸಾಮರ್ಥ್ಯ ಇರುವುದು ಬಹಳ ಅಪರೂಪ ಎಂದು ಭಾವೀ ಅಳಿಯನ ಬಗ್ಗೆ ಅಭಿಮಾನ ಉಂಟಾಯಿತು.ಹುಡುಗಿ ಕಡೆಯ ಹೆಂಗಸರು "ಒಳ್ಳೆ ರಾಜಕುಮಾರನಂತೆ ಇದ್ದಾನೆ.ಒಬ್ಬನೆ ಮಗನಂತೆ.ಸೌಜನ್ಯಳಿಗೆ ಧಾರಾಳ ಸಾಕು.ಹೊಂದಿಕೊಂಡು ಬದುಕುವ ಮನಸ್ಸು ಇವಳಿಗಿದ್ದರೆ."
"ಹುಡುಗನನ್ನು ಕಂಡಾಗ ಸೌಜನ್ಯ ಹೊಂದಾಣಿಕೆ ಮಾಡಿಕೊಳ್ಳದಿದ್ದರೂ ಬಲವಂತವಾಗಿ ಒಪ್ಪಿಸಿ ನಡೆಸಿಕೊಳ್ಳುವಂತೆ ಕಾಣುತ್ತಿದೆ..ಹಳ್ಳಿ ಹುಡುಗ ಸ್ವಲ್ಪ ಒರಟನಿರಬಹುದು.."
"ಹೌದು ಕಣೇ..ಪೇಟೆಯಂತೆ ಅಲ್ಲ ಹಳ್ಳಿಯಲ್ಲಿ..ಸಂಬಂಧಗಳಿಗೆ ಬೆಲೆ ಹೆಚ್ಚು..ಸರಿಯಾಗುತ್ತೋ ಇಲ್ವೋ ...ಗಂಡನಿಗಂಜಿ ನಡೆಯಲೇಬೇಕು...ಮದುವೆಯೆಂಬ ಪವಿತ್ರ ಬಂಧನ ಹಳ್ಳಿಯಲ್ಲಿ ಈಗಲೂ ಮಹತ್ವವನ್ನು ಉಳಿಸಿಕೊಂಡಿದೆ.ಸಿಟಿಯಂತೆ ಎಲ್ಲಿ ನೋಡಿದರೂ ವಿಚ್ಛೇದನ , ಸಾಂಸಾರಿಕ ರಾದ್ಧಾಂತ ಗಳು ಅಲ್ಲಿ ಕಾಣಸಿಗುವುದು ಅಪರೂಪ.."

"ಏನೇ ಹೇಳಿ..ಈ ಲಂಗುಲಗಾಮಿಲ್ಲದ ಬೆಡಗಿಗೆ ಕಡಿವಾಣ ಹಾಕಲು  ಈ ಯುವಕ ಹೇಳಿಮಾಡಿಸಿದ ಜೋಡಿ..
ನೋಡಿ.. ಈಗಲೇ ಸೌಜನ್ಯಳ ಮೇಲೆ ಕಣ್ಣಿಟ್ಟಿದ್ದಾನೆ.."
ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದರು.


ಬಂಗಾರಣ್ಣ ಮುಂದಿನ ಶುಕ್ರವಾರ ಒಳ್ಳೆಯ ಮುಹೂರ್ತ ಇದೆಯೆಂದು ಪುರುಷೋತ್ತಮ ಜೋಯಿಸರು ಬರೆದು ಕೊಟ್ಟಿದ್ದನ್ನು ತೋರಿಸುತ್ತಾ ಹೇಳಿದರು.ಹೆಣ್ಣಿನಕಡೆಯವರು "ಅದು ಬೇಗವಾಯಿತು" ಎಂದರು.ಕೆಲವರು "ಒಂದು ತಿಂಗಳಾದರು ಅಂತರವಿರಲಿ" ಎಂದರು.
ಬಂಗಾರಣ್ಣ "ಇನ್ನು ಸರಿಹೊಂದುವ ಮುಹೂರ್ತ ಮೂರು ತಿಂಗಳ ನಂತರ ಇರುವುದು" ಎಂದರು.ನರಸಿಂಹ ರಾಯರು ರೇಖಾಳನ್ನು ಒಳಗೆ ಕರೆದು ಮಾತನಾಡಿದರು."ಏನು ಮಾಡೋಣ.ಮುಂದಿನ ಶುಕ್ರವಾರಕ್ಕೆ ನಮಗೆ ತಯಾರಾಗಲು ಸಾಧ್ಯನಾ...?"

"ಕಷ್ಟವಿದೆ.ಆದರೆ ಯಾವತ್ತಿದ್ದರೂ ಮಗಳ ಮದುವೆ ಮಾಡಲೇಬೇಕು.ಆಫೀಸಿಗೆ ರಜೆ ಹಾಕಿ ತಯಾರಿ ಮಾಡೋಣ."

"ಹೂಂ.. ಮತ್ತೆ ಮೂರು ತಿಂಗಳು ಅಂತರವಿಟ್ಟರೆ ಯಾರಾದರೂ ಸೌಜನ್ಯಳ ವಿಷಯದಲ್ಲಿ ಗುಲ್ಲೆಬ್ಬಿಸಿದರೆ ಕಷ್ಟ."

"ಹೌದು ರೀ..ನಿಜ.ಪಾಲಿಗೆ ಬಂದದ್ದು ಪಂಚಾಮೃತ ಎಂದು ಒಪ್ಪಿಕೊಳ್ಳೋಣ.ಇದು ಒಂದು ಜವಾಬ್ದಾರಿ ಸರಿಯಾಗಿ ನಿಭಾಯಿಸಿ ಬಿಟ್ಟರೆ ಸಾಕಪ್ಪಾ ಎನ್ನುವಂತಾಗಿದೆ..ಆಮೇಲೆಯೇ ನಿದ್ರೆ ಬಂದೀತಷ್ಟೆ ನಂಗೆ.."

"ಹಾಗಾದರೆ ಒಪ್ಪಿಗೆ ಎಂದು ಹೇಳೋಣ ಅಲ್ವೇ..?"

"ಹಾಗೇ ಹೇಳಿ.."

ಇಬ್ಬರೂ ಹೊರಗೆ ಹಾಲ್ ಗೆ ಬಂದರು."ನಿಮ್ಮ  ಮಾತಿನಂತೆ ಮುಂದಿನ ಶುಕ್ರವಾರ ಮಗಳನ್ನು ಧಾರೆಯೆರೆದು ಕೊಡಲು ಸಿದ್ಧ" ಎಂದರು ನರಸಿಂಹ ರಾಯರು.ಸಣ್ಣಪುಟ್ಟ ಅಪಸ್ವರಗಳು ಬಂದವು.ಆದರೂ ಗಂಡುಹೆಣ್ಣಿನ ಮನೆಯವರು ಅದಕ್ಕೆಲ್ಲ ಸಮಜಾಯಿಷಿ ಕೊಟ್ಟು ಲಗ್ನ ಪತ್ರಿಕೆ ಬರೆಯಲು ಆರಂಭಿಸಿದರು.ನರಸಿಂಹ ರಾಯರು  ಪುತ್ತೂರಿನ ಸಮೀಪದ ತಮ್ಮ ಊರಿನ ದೇವಸ್ಥಾನದಲ್ಲಿ ಹಾಲ್ ಬುಕ್ ಮಾಡಿದರು.ಅಡುಗೆಗೆ ಕಾಂಟ್ರಾಕ್ಟ್ ವ್ಯವಸ್ಥೆಯನ್ನು ಮಾತನಾಡಿದರು.ಬಂಗಾರಣ್ಣ ತಮ್ಮ ಮನೆಯಲ್ಲೇ ವಧೂಗೃಹಪ್ರವೇಶಾಂಗ ಸಮಾರಂಭವನ್ನು ಇಟ್ಟುಕೊಂಡರು.ವಿಶಾಲವಾದ ಮನೆ ,ಅಂಗಳವಿದೆ ..ಹಾಲ್ ಬೇಡ ಎಂಬ ಅವರ ನಿರ್ಧಾರವನ್ನು ಕೇಳಿ ಹೆಣ್ಣಿನ ಕಡೆಯವರು "ಸೌಜನ್ಯ ಳ ಮನೆಯನ್ನು ನಮಗೂ ನೋಡಿದಂತೆ ಆಯ್ತು.. ಒಳ್ಳೆಯದಾಯಿತು" ಎಂದು ಮಾತನಾಡಿಕೊಂಡರು.

ಕೇಶವ್ ಲಗ್ನಪತ್ರಿಕೆ ಓದಿದ.ಗಂಭೀರವಾದ ಗಡಸು ಧ್ವನಿ.ಕನ್ನಡ ತಪ್ಪಿಲ್ಲದ ಉಚ್ಛಾರಣೆ.ಎಲ್ಲರಿಗೂ ಲಗ್ನ ಪತ್ರಿಕೆ ಓದಿದ್ದು ಕೇಳಿಸಿತು.ಭಾವೀಮದುಮಗ ಎಲ್ಲರ ಮನಸ್ಸನ್ನೂ ಗೆದ್ದನು.ಸೌಜನ್ಯಳ ಹೃದಯದ ತುಂಬಾ ಅವನದೇ ಮಾಧುರ್ಯ ತುಂಬಿಕೊಂಡು ಯಾವಾಗ ಅವನ ದನಿ ಸನಿಹದಿಂದ ಆಲಿಸುವೆನೋ ಎಂದು ಕಾತರಿಸುತ್ತಿತ್ತು.


ಎಲ್ಲರೂ ಸಭೆಯಿಂದ ಚದುರಿದರು.ಸುನೀತಾ ಎಲ್ಲಾ ಚಾಪೆಗಳನ್ನು ಮಡಚಿಟ್ಟು ಸ್ವಚ್ಛಗೊಳಿಸಿದಳು.ಪುರೋಹಿತರು ಮಂಗಳಾರತಿಗಾಯಿತು ಎಂದಾಗ ನರಸಿಂಹ ರಾಯರು ಬಂಗಾರಣ್ಣನನ್ನು ದೇವರ ಕೋಣೆಗೆ ಕರೆದೊಯ್ದು ಮಣೆಯಲ್ಲಿ ಕುಳ್ಳಿರಿಸಿದರು.ಪಕ್ಕದಲ್ಲಿ ಕೇಶವ್ ಗೂ ಮಣೆಯಿಟ್ಟರು."ನಂಗೆ ಬೇಡ" ಎಂದು ಹೇಳಿ ನಿಂತೇ ಇದ್ದ ಕೇಶವ್.ಪುರೋಹಿತರು ಆರತಿ ಬೆಳಗಿದರು.ಸೌಜನ್ಯ, ರೇಖಾ ಇಬ್ಬರೂ ದೇವರ ಮುಂದೆ ದೀನರಾಗಿ ಸೆರಗೊಡ್ಡಿ ಬೇಡಿದಂತೆ ಕಾಣುತ್ತಿತ್ತು ಕೇಶವ್ ಗೆ.ಎಲ್ಲರೂ ಆರತಿ ತೆಗೆದುಕೊಂಡರು.ಕೈಗೆನೀರುಕೊಟ್ಟು ಬೊಗಸೆಯಲ್ಲಿ ಹಿಡಿಯಲು ಹೂವು ಕೊಟ್ಟಾಗ ಗಂಡಸರೆಲ್ಲ ಶರ್ಟ್ ಬನಿಯನ್ ಕಳಚಿ,ಶಾಲು ಹೊದ್ದುಕೊಂಡು

ಓಂ. ಗಣಾನಾಂತ್ವಾ ಗಣಪತಿಗ್೦ ಹವಾಮಹೇ ಕವಿಂಕವೀನಾ ಮುಪಮಶ್ರವಸ್ತಮಮ್ ||
ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತಆನಃ ಶ್ರುಣ್ವನ್ನೂತಿ ಭಿಃ ಸೀದ ಸಾಧನಮ್ ||1||

ಎನ್ನುತ್ತಾ ಮಂತ್ರಪುಷ್ಪವನ್ನು ಪುರೋಹಿತರ ಜೊತೆಗೆ ಉಚ್ಛರಿಸಿದರು.ಸೌಜನ್ಯ ಕೇಶವನ ಕಡೆಗೆ ಆಗಾಗ ದೃಷ್ಟಿ ಹರಿಸುತ್ತಿದ್ದಳು.ಅಗಲವಾದ ಎದೆಹರವು , ಅಲ್ಲಲ್ಲಿ ಕುರುಚಲು ಹುಲ್ಲುಗಾವಲಿನಂತೆ ರೋಮಕೂಪಗಳು ಅವಳನ್ನು ರೋಮಾಂಚನಗೊಳಿಸಿದವು.ಕಲ್ಪನಾಲೋಕದಲ್ಲಿ ವಿಹರಿಸುತ್ತಿದ್ದವಳನ್ನು ಅಮ್ಮ.."ಮಗಳೇ ಹೋಗು ದೇವರಿಗೆ. ಶ್ಲೋಕ ಹೇಳಿ ಹೂವು ಸಮರ್ಪಿಸಿ ಮೂರು ಸುತ್ತು ಬಂದು  ನಮಸ್ಕರಿಸು."ಎಂದು ಹೇಳಿದರು.

         ಪುರೋಹಿತರು ವಧೂವರರ ತಂದೆಯನ್ನು ಕರೆದರು.ಈಗ ಎಲೆ ಅಡಿಕೆ ಪರಸ್ಪರ ಬದಲಾಯಿಸಿಕೊಳ್ಳಿ ಎಂದಾಗ ನರಸಿಂಹ ರಾಯರು ಮತ್ತು ಬಂಗಾರಣ್ಣ ಎಲೆ ಅಡಿಕೆ ಹೂವು ಹಿಡಿದು ತಯಾರಾದರು.ನರಸಿಂಹ ರಾಯರು ಬಂಗಾರಣ್ಣನ ಕೈಗೆ ಎಲೆ ಅಡಿಕೆ ನೀಡಿದರು.ಹಿಂದಿನಿಂದ ಬಂದ ತುಂಟ ಪುಟ್ಟಮಾಣಿಯೊಬ್ಬ ನರಸಿಂಹ ರಾಯರನ್ನು ಬಲವಾಗಿ ತಳ್ಳಿಕೊಂಡು ಓಡಿದ.ಕೈಯಲ್ಲಿ ಹಿಡಿದದ್ದು ಬಂಗಾರಣ್ಣನ ಕೈಗೆ ಕೊಡುವ ಮೊದಲೇ ಕೆಳಗೆ ಬಿದ್ದಿತು.
ನರಸಿಂಹ ರಾಯರು ಹೆಕ್ಕುವ ಪ್ರಯತ್ನ ಮಾಡಿದರು.ಕೈಗಳು ಕಂಪಿಸತೊಡಗಿದವು.ರೇಖಾಳ ಮುಖ ವಿವರ್ಣವಾಯಿತು.ನಿರ್ವಿಘ್ನವಾಗಿ ಮಗಳ ಮದುವೆ ನೆರವೇರಿದರೆ ಸಾಕಪ್ಪಾ ಎಂದು ದೇವರಿಗೆ ಕೈಮುಗಿದರು.ಸೌಜನ್ಯ ತಲೆತಗ್ಗಿಸಿ ಹನಿಗಣ್ಣಾದಳು.
"ಛೇ..ಇದೇನಾಯಿತು" ಎಂದರು ಪುರೋಹಿತರು..

             ಮುಂದುವರಿಯುವುದು..

✍️... ಅನಿತಾ ಜಿ.ಕೆ.ಭಟ್.
30-03-2020.

Saturday, 28 March 2020

ಜೀವನ ಮೈತ್ರಿ ಭಾಗ ೫೧(51)



ಜೀವನ ಮೈತ್ರಿ-ಭಾಗ 51


      ಬೆಳಿಗ್ಗೆ ಕೇಶವ್ ಹಾಸಿಗೆಯಿಂದ ಏಳುವ ಮುನ್ನವೇ ಸೌಜನ್ಯಳಿಗೊಂದು ಸಂದೇಶ ಕಳುಹಿಸಿಯೇ ದಿನದ ಶುಭಾರಂಭ.ಆಗಾಗ್ಗೆ ಚಾಟಿಂಗ್ , ಹರಟೆ,ನಗು.. ಇಬ್ಬರಿಗೂ ಆತುರ ಕಾತುರತೆ..ಅಮ್ಮ ಸುಮಾ ಡಯಟ್ ಆಹಾರ ಇನ್ನೂ ಮುಂದುವರಿಸಿದ್ದರು.."ಸಾಕಮ್ಮಾ ಇನ್ನು ಡಯಟ್" ಎಂದು ಗೋಗರೆದಿದ್ದ ಕೇಶವ್..

      "ಮದುವೆವರೆಗೆ ಡಯಟ್ ಆಮೇಲೆ ನಿನಗೆ ಬೇಕಾದ್ದನ್ನು ಸೌಜನ್ಯಳಲ್ಲಿ ಮಾಡಿಸಿ ತಿನ್ನು..  ನನ್ನದೂ ಸ್ಪೆಷಲ್ ಅಡುಗೆಗಳು ಆಗಾಗ ಇರುತ್ತೆ.."

"ಅಮ್ಮಾ...ಸೌಜನ್ಯಳಿಗೆ ಅಡುಗೆ ಮಾಡಲು ಬರಲ್ಲಂತೆ.."

"ಅದೇನು ಮಹಾವಿದ್ಯೇನಾ ... ಸ್ವಲ್ಪ ಸಮಯ ಅಡುಗೆ ಮಾಡಿದಾಗ ಅಭ್ಯಾಸವಾಗುತ್ತೆ .ನಂಗೂ ಮದುವೆಯಾದಾಗ ಅಡುಗೆ ಮಾಡೋಕೆ ಬರ್ತಿರ್ಲಿಲ್ಲ.."

"ಹೂಂ.. "ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತ.ಸೌಜನ್ಯಳ ಜೊತೆಗೆ ಚಾಟಿಂಗ್ ನಡೆಸಲು..
"ಇವತ್ತೇನು ತಿಂಡಿ.."ಕೇಳಿದಳು ಸೌಜನ್ಯ.
ಕೇಶವನಿಗೆ ಇರುಸು ಮುರುಸು.ಗಂಜಿಯೂಟ ಅಂತ ಹೇಳಲೋ ಬೇಡವೋ.ಹೇಳಿದರೆ ಏನಾದರೂ ಅಂದುಕೊಂಡರೂ ಕಷ್ಟ.ಎಂದುಕೊಂಡು ಮೊದಲು ಅವಳನ್ನೇ ಕೇಳಿದ..

"ನಂಗೆ ಇವತ್ತು ಉಪ್ಪಿಟ್ಟು..ಅಮ್ಮಂಗೆ ಇವತ್ತು ಮೀಟಿಂಗ್ ಅಂತ ಬೇಗ ಹೋಗ್ಬೇಕಿತ್ತು..ಅದಕ್ಕೆ ಮನೆ ಸಹಾಯಕಿ ಉಪ್ಪಿಟ್ಟು ಮಾಡಿದ್ರು..ನಂಗೆ ಸೇರೇ ಇಲ್ಲ ಅದು.. ಚೂರುತಿಂದ ಶಾಸ್ತ್ರ ಮಾಡಿ ಹಾಲು ಕುಡಿದೆ.ಫ್ರೂಟ್ಸ್ ತರಕಾರಿ ಮಧ್ಯೆ ಮಧ್ಯೆ ತಿಂತೀನಿ.ಆಗ ಮಧ್ಯಾಹ್ನ ಆಗುತ್ತೆ.. ಸುನೀತಾ ಮಧ್ಯಾಹ್ನದ ಅಡುಗೆ ಮಾಡ್ತಾ ಇದಾರೆ.. ಹ್ಮ್..ಕೆಳಗಿನಿಂದ ಪರಿಮಳ ಚೆನ್ನಾಗಿ ಬರುತ್ತಿದೆ.."

"ಹೌದು ನಿಂಗೆ ಏನೂ ಅಡುಗೆ ಮಾಡೋಕೆ ಬರಲ್ವಾ.."

"ಇಲ್ಲ.. ಇದುವರೆಗೆ ಓದು ಅಂತ ಆಯ್ತು.. ಇನ್ನು ಮದುವೆಗೆ ಕೆಲವೇ ದಿನ ಇರುವುದು ಈಗ ಹಾಯಾಗಿರು ಅಂತಾರೆ ಅಮ್ಮ.. ಮತ್ತೆ  ನಿಮ್ಮನೆಗೆ ಬಂದ ಮೇಲೆ ಕಲೀತೀನಿ..ಆಗದೇ ರಾಜಾ.."

"ಹೂಂ.. ಆಗಬಹುದು.. ನನ್ನದೇನೂ ಅಭ್ಯಂತರವಿಲ್ಲ... ನಾನು ಮಹಾ ತಿಂಡಿಪೋತ ಮಾತ್ರ.."

"ಹೌದು ತಿಂಡಿಪೋತನಿಗೆ ಇವತ್ತೇನು ಗಂಜಿ ಊಟ..?"

"ನಿಂಗೆ ಹೇಗೆ ಗೊತ್ತಾಯ್ತು..?"

"ಆಗಲೇ ನಿಮ್ಮಮ್ಮನ ಜೊತೆ ಒಂದು ರೌಂಡ್ ಚಾಟಿಂಗ್ ಆಯ್ತು.."

"ಹಾಂ..ಬಹಳ ಚಾಲಾಕಿ ನೀನು..ಆಗಲೇ ನಮ್ಮಮ್ಮನನ್ನು ಬುಟ್ಟಿಗೆ ಹಾಕೊಂಡಿದೀಯಾ.."

"ಅಷ್ಟೇ ಅಲ್ಲ..ಈ ಜಂಟಲ್ ಮ್ಯಾನ್ ನನ್ನೂ..💞💞"

"ಸೋ ಸ್ವೀಟ್.. ಉತ್ಪ್ರೇಕ್ಷೆ ಅಲ್ಲ ನಿನ್ನ ಮಾತು.. ನಾನು ಸೋತಿದೀನಿ..ನಿನ್ನ ತಾಳಕ್ಕೆ ತಕ್ಕಂತೆ ಕುಣಿಯಲು ಶುರುಮಾಡಿದೆ ಈ ಹೃದಯ.."

"ಹೌದು ...ಹೃದಯ ಕುಣಿಯುವುದು ಅಂದರೇನು..?"

"ಒಬ್ಬರ ಭಾವನೆಗೆ ತಕ್ಕಂತೆ ವರ್ತಿಸುವುದು ಎಂಬರ್ಥದಲ್ಲಿ ಬಳಸಿದೆ.ಮಾತಲ್ಲಿ ಹೇಳದೆಯೆ ಮನಸ್ಸನ್ನು ಓದಬೇಕಾದರೆ ಹೃದಯ ಅರಿಯಬೇಕು.ಹೃದಯ ಹೃದಯಗಳ ಸಂಗಮವೇ ಪ್ರೇಮ.ತಾಯಿಮಗುವಿನ ನಡುವಿನ ಪ್ರೇಮ ವಾತ್ಸಲ್ಯ ಭರಿತವಾಗಿದ್ದರೆ ಗಂಡು ಹೆಣ್ಣಿನ ನಡುವಿನ ಪ್ರೇಮ ಶೃಂಗಾರಮಯ ವಾಗಿರುತ್ತದೆ.."

"ಪ್ರೇಮದ ಬಗ್ಗೆ ಬಹಳ ಡೀಪ್ ಸ್ಟಡಿ ಮಾಡಿದ್ದೀರಿ ಅನಿಸುತ್ತದೆ..."

"ಹಾಗೇನಿಲ್ಲ..ಜೀವನದ ಅನುಭವಗಳು.."

"ಜೀವನದ ಅನುಭವಗಳು ಮಹತ್ವದ ಪಾಠವನ್ನು ಕಲಿಸುತ್ತವೆ.ತಪ್ಪಿನಡೆದಾಗ ಕಿವಿ ಹಿಂಡುವುದು ಜೀವನದ ಪಾಠಗಳಿಂದ ಕಲಿತ ಜಾಗೃತಪ್ರಜ್ಞೆ.."

"ಒಮ್ಮೆ ಎಡವಿದಾಗ ಆದ ನೋವು ಮತ್ತೊಮ್ಮೆ ಎಡವದಂತೆ ಎಚ್ಚರವಹಿಸುವಂತೆ ಪ್ರೇರೇಪಿಸುತ್ತದೆ.ಇದು ಇತರರು ಹೇಳಿ ಬರುವ ಬುದ್ಧಿಗಿಂತ ಪರಿಣಾಮಕಾರಿ.ಸ್ವಯಂಪ್ರಜ್ಞೆ ಜಾಗೃತವಾದರೆ ನಮಗದುವೇ ಬಾಳಿಗೆ ದಾರಿದೀಪ."

"ಹೌದು ರಾಜಾ.. ಎಷ್ಟು ಚೆನ್ನಾಗಿ ಹೇಳಿದಿರಿ.. ಒಂದು ತಪ್ಪು ಹೆಜ್ಜೆ ಇಡೀ ಬದುಕನ್ನೇ ಅಂಧಕಾರಕ್ಕೆ ತಳ್ಳಬಹುದು.ಒಂದು ಜಾಗೃತ ನಡೆ ಕಾರ್ಗತ್ತಲ ಬಾಳಿಗೆ ಬೆಳಕಿನ ಅಮೃತಸಿಂಚನಗೈಯಬಹುದು. ಬದುಕಿನ ಪುಟ್ಟ ಪುಟ್ಟ ಸಂತೋಷಗಳನ್ನು ಅನುಭವಿಸುತ್ತಾ ಮಹತ್ತರ ಸಂತೋಷಕ್ಕಾಗಿ ಕನಸು ಕಾಣುತ್ತಿರಬೇಕು.ಅದು ಬಿಟ್ಟು ದೂರದಲ್ಲಿರುವ ಸುಖಕ್ಕೆಂದೇ ಆಸೆ ಪಟ್ಟರೆ ಹತ್ತಿರದಲ್ಲಿರುವ ಅನುದಿನವೂ ಅನುಭವಿಸುತ್ತಿರುವ ನೆಮ್ಮದಿ ಸಂತೃಪ್ತಿ ಮರೀಚಿಕೆಯಾದೀತು .."


"ಗಹನವಾಗಿ ಬದುಕಿನ ಆಳ ಅಗಲದ ಅರಿವಾದಂತಿದೆ ನಿಮ್ಮ ಮಾತಿನ ಧಾಟಿ.."

ಒಂದು ಕ್ಷಣ ನಾನೇನು ಹೇಳಿದ್ದೇನೆ..ಹೇಳುತ್ತಿದ್ದೇನೆ ಎಂದು ಪ್ರಶ್ನಿಸಿಕೊಂಡ ಸೌಜನ್ಯ.. "ನಾನು ನಿನ್ನೆ ಮಹಾತ್ಮರ ಬದುಕಿನ ಬಗೆಗಿನ ಪುಸ್ತಕ ವೊಂದನ್ನು ಓದಿದ್ದೆ..ಅದೇ ತಲೆಯಲ್ಲಿತ್ತು..ಸಾರಿ ಡಿಯರ್.. " ಎನ್ನುತ್ತಾ ಬೆವರುತ್ತಿದ್ದ ತನ್ನ ಹಣೆಯನ್ನು ಒರೆಸಿಕೊಂಡು "ಬಾಯ್" ಎಂದಳು..



      ಕೇಶವನಿಗೆ ದಿಢೀರನೆ ನಿಶ್ಚಿತಾರ್ಥ ನಿಗದಿಯಾದದ್ದು ಎಲ್ಲರಿಗೂ ಆಶ್ಚರ್ಯ ದ ಸಂಗತಿಯಾಗಿತ್ತು.ನಿಶ್ಚಿತಾರ್ಥಕ್ಕೆ ಆಮಂತ್ರಿಸಲು ಕರೆ ಮಾಡಿದಾಗ ಎಲ್ಲರದೂ ಒಂದೇ ತೆರನಾದ ಪ್ರಶ್ನೆಗಳು.ಬಂಗಾರಣ್ಣನಿಗೆ ಉತ್ತರಿಸಿ ಸಾಕುಬೇಕಾಯ್ತು.. ಸುಮಾ ಮಾತ್ರ ತನ್ನ ಬಳಗದವರಲ್ಲಿ ಬಹಳ ಹೆಮ್ಮೆಯಿಂದಲೇ ಹೇಳಿಕೊಂಡರು.ಕೇಶವ್ ತನ್ನ ಮತ್ತು ಸೌಜನ್ಯಳ ಫೊಟೋ ವನ್ನು ಎಫ್ ಬಿ ಯಲ್ಲಿ ಅಪ್ಲೋಡ್ ಮಾಡಿದ್ದೇ ತಡ ಭಾಗವತ ವೆಂಕಟ್ ಹುಬ್ಬೇರಿಸಿ ನೋಡಿದ.

"ಅರೇ..ಇವನಿಗೆ ಒಲಿದೇಬಿಟ್ಟಳಾ ಸುರಸುಂದರಿ.. ಯಾವುದಕ್ಕೂ ಅದೃಷ್ಟವಿರಬೇಕು.."ಎಂದು ಕೊಂಡ.

ಅಮ್ಮನಿಗೂ ತೋರಿಸಿದ."ಅಮ್ಮಾ ಮೈತ್ರಿ ಯನ್ನು ನೋಡಲು ಬಂದಿದ್ದ ಬಾರಂತಡ್ಕದ ಕೇಶವನಿಗೆ ಅಂತಿಂಥ ಹೆಣ್ಣಲ್ಲ ಅಪ್ಸರೆಯೇ ದೊರೆತಿದ್ದಾಳೆ ."

"ಹೌದಲ್ವಾ...ಅಲ್ಲ ವೆಂಕಟ್..ನಿನ್ನಣ್ಣ ಮುರಲಿಗೆ ಇಷ್ಟು ಸಮಯ ಹುಡುಕಿದ್ರೂ ಇಂತಹ ಹುಡುಗಿ ಸಿಕ್ಕಿಲ್ಲ..ಈ ಹಳ್ಳಿಯ ಮನೆಯಲ್ಲಿರುವವನನ್ನು ಹೇಗೆ ಒಪ್ಪಿದಳೋ.."

"ಅದೇ ಅಮ್ಮಾ..ಲಕ್ ಅನ್ನೋದು.."

"ಇರಬಹುದು ಮಗ.."

ನಂತರ ಫೋನ್ ಮಾಡಿ ಮಂಗಳಾಗೆ ತಿಳಿಸಿದರು.ಅವರು
"ಯಾರಿಗೆ ಯಾವ ಮನೆಯ ಹೊಸ್ತಿಲು ದಾಟುವ ಯೋಗವಿದೆಯೋ ಅಲ್ಲಿಗೇ ಸಲ್ಲುವುದು..ಅವನಿಗೆ ಒಳ್ಳೆ ಸಂಬಂಧ ಸಿಗಲಿ.ಬದುಕು ಸುಖಮಯವಾಗಿರಲಿ.." ಎಂದು ಒಂದೇ ಭರದಲ್ಲಿ ಶುಭಕೋರಿದ್ದನ್ನು ಕಂಡು ಶಶಿಗೇ ಆಶ್ಚರ್ಯ.

ನಾನು ಮಂಗಳಾಳ ಹೊಟ್ಟೆಯುರಿಸಿಬೇಕೆಂದು ಕರೆಮಾಡಿದರೆ ಸ್ವಲ್ಪವೂ ಅಸೂಯೆಪಡದೆ  ಹೇಗೆ ಮಂಗಳಾ ಅವನಿಗೆ ಒಳ್ಳೆಯದು ಬಗೆಯುತ್ತಾಳೋ.. ಎಂದು ಹೊಟ್ಟೆಕಿಚ್ಚು ಪಟ್ಟುಕೊಂಡಳು.



             ******

ಕಿಶನ್ ಮೈತ್ರಿ ಗೆ ಕರೆಮಾಡಿ ದಿನಕ್ಕೆರಡು ಬಾರಿ ಮಾತನಾಡುತ್ತಿದ್ದ.ಮೈತ್ರಿ ಪರೀಕ್ಷಾ ತಯಾರಿಯಲ್ಲಿದ್ದಳು.ಮನೆಯಲ್ಲಿ ನಿಶ್ಚಿತಾರ್ಥ,ಮದುವೆಯ ತಯಾರಿಗಳು ಒಂದೊಂದಾಗಿ ಆರಂಭವಾಗಿದ್ದವು.


                 *****


           ಅಂದು ಶನಿವಾರ ಸಂಜೆ ಆರು ಗಂಟೆಯ ಸಮಯ.ಬಾರಂತಡ್ಕದ ಮನೆಯ ಅಂಗಳದಲ್ಲಿ ರಾಜಹಂಸ ಬಸ್, ಬಾಡಿಗೆ ಕಾರು ಬಂದು ನಿಂತಿತ್ತು.ಬೆಂಗಳೂರಿಗೆ ತೆರಳಲು ಬಂಧುಮಿತ್ರರು ಆಗಮಿಸಿದ್ದರು.ರಾತ್ರಿಯಾಗುತ್ತಿದ್ದಂತೆ ಬಸ್ ಕಾರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿತು.
ಕಣ್ಣ ತುಂಬಾ ಕನಸುಗಳನ್ನು ಹೊತ್ತು ಕೇಶವ್ ಕಾರಿನ ಮುಂಭಾಗದಲ್ಲಿ ಆಸೀನನಾದ..
ಬೆಳಗಿನ ಜಾವ ಬೆಂಗಳೂರು ತಲುಪಿ ಲಾಡ್ಜ್ ಒಂದರಲ್ಲಿ ತಂಗಿ ಫ್ರೆಶ್ ಆದರು.ತಿಂಡಿತಿಂದರು.ಆಗಲೇ ಸೌಜನ್ಯ ಫೋನ್ ಮಾಡಿ ಕೇಶವ್ ನನ್ನು ವಿಚಾರಿಸಿಕೊಂಡಳು.
ಇದನ್ನು ಅರಿತ ಬಂಧುಗಳು ಅಡ್ಡಿಯಿಲ್ಲ ಮದುಮಗಳು.ಈಗಲೇ ಕೇಶವ್ ನ ಬಗ್ಗೆ ಎಷ್ಟು ಕೇರ್..ಎಂದು ಕಾಲೆಳೆದರು..

"ಮತ್ತೇನು ಅಂತ ಅಂದುಕೊಂಡಿರಿ.ನಮ್ಮ ಬಂಗಾರಣ್ಣನ ಸೊಸೆಯಾಗುವವರನ್ನು.. ಬಂಗಾರದಂತಹ ಹುಡುಗಿ.". ಎಂದು ಶೇಷಣ್ಣ ತನ್ನ ಬಾಯಗಲಿಸಿ ನಕ್ಕು ಸೆಟ್ಟಿನ ಹಲ್ಲಿನ ಪ್ರದರ್ಶನ ಮಾಡಿದ.

ಸರಿಯಾದ ಸಮಯಕ್ಕೆ ನರಸಿಂಹ ರಾಯರ ಮನೆ ಮುಂದೆ ಬಸ್, ಕಾರ್ ನಿಂತಿತು.ಎಲ್ಲರಿಗೂ ಸತ್ಕಾರ, ಉಪಚಾರ ಸಾಂಗವಾಗಿ ನೆರವೇರಿತು.ಕೇಶವನ ಕಣ್ಣುಗಳು ಸೌಜನ್ಯಳನ್ನು ಅರಸುತ್ತಿದ್ದವು.

ಮುಂದುವರಿಯುವುದು..


✍️...ಅನಿತಾ ಜಿ.ಕೆ.ಭಟ್.
28-03-2020.



Friday, 27 March 2020

ಜೀವನ ಮೈತ್ರಿ- ಭಾಗ ೫೦(50)




ಜೀವನ ಮೈತ್ರಿ-ಭಾಗ ೫೦



     ಅಂದು ಶಾಸ್ತ್ರಿಗಳು ಮತ್ತು ಗಣೇಶ ಶರ್ಮ ಜೊತೆಯಾಗಿ ಬಾಳೆಮಲೆ ಜೋಯಿಸರಲ್ಲಿಗೆ ತೆರಳಿದರು.ಜೋಯಿಸರಲ್ಲಿ ಮದುವೆ ಮುಹೂರ್ತ ಕೇಳಿ ಬಂದರು.ನಿಶ್ಚಿತಾರ್ಥ ಇನ್ನೆರಡು ವಾರದ ನಂತರ ಭಾನುವಾರ ಮಾಡುವುದೆಂದೂ ಅದಾಗಿ ಇಪ್ಪತ್ತಾರನೇ ದಿನ ವಾಲಗ ಊದಿಯೇ ಬಿಡುವುದೆಂದು ನಿರ್ಧಾರ ಮಾಡಲಾಯಿತು.ಅಷ್ಟರಲ್ಲಿ ಮೈತ್ರಿಗೆ ಪರೀಕ್ಷೆಗಳು ಮುಗಿಯುವುದರಿಂದ ಬೇರೇನೂ ಅಡ್ಡಿಯಿಲ್ಲ.. ಎಂಬುದು ಎರಡೂ ಕುಟುಂಬಗಳ  ನಿರ್ಧಾರ.



     ಬರುವಾಗ ನಿಶ್ಚಿತಾರ್ಥ ಕ್ಕೆಂದು ಮಗಳಿಗೆ ಸೀರೆಯೊಂದನ್ನು ಶಾಸ್ತ್ರಿಗಳು ತಂದರು.ಮನೆಗೆ ಬಂದು ಮಂಗಳಾಳಲ್ಲಿ ಹೇಳಿದಾಗ "ಅಲ್ಲ..ರೀ.. ಸೀರೆ ಉಡೋದು ಅವಳು..ಈಗಿನ ಫ್ಯಾಷನ್ ಸೀರೆ ಬೇಕೂಂತ ಅನಿಸೋದಿಲ್ವಾ... ನೀವು ಈ ಹಳೇ ಸ್ಟೈಲ್ ಸೀರೆ ತಂದರೆ.."ಎಂದು ಅಸಮಾಧಾನ ವ್ಯಕ್ತಪಡಿಸಿದರು."ಸರಿಯಾಗಿಲ್ಲಾಂದ್ರೆ ಇದು ನಿಂಗಾಯ್ತು..ಅವಳಿಗೆ ಬೇರೆ ಕೊಡಿಸೋಣ" ಎಂದರು ಶಾಸ್ತ್ರಿಗಳು.


      ಕಾಲೇಜಿನಿಂದ ಮನೆಗೆ ಬಂದ ಮೈತ್ರಿ ಸೀರೆ ನೋಡಿ "ಪರವಾಗಿಲ್ಲ..ಅಪ್ಪನ ಸೆಲೆಕ್ಷನ್ ನನಗೆ ಒಪ್ಪುತ್ತೆ.."ಅಂದಳು.ಆದರೂ ಅವಳೇ ಸೀರೆ ತಂದಾಗ ಇದ್ದಷ್ಟು ಲವಲವಿಕೆ ಅವಳಲ್ಲಿ ಕಾಣಲಿಲ್ಲ ಮಂಗಳಮ್ಮನಿಗೆ .."ನಿಂಗಿಷ್ಟ ಆದ್ರೆ ಸರಿ.. ಇಲ್ಲಾಂದ್ರೆ ಬೇರೆ ತೆಗೆದುಕೋ.."

        ಆಗ ಮಹಾಲಕ್ಷ್ಮಿ ಅಮ್ಮ "ನೋಡು ಮಂಗಳಾ..ಮಗಳಿಗೆಂದು ಅಪ್ಪ ಸೀರೆ ತಂದಾಗಿದೆ.ಅವಳೂ ಒಪ್ಪಿದ್ದಾಳೆ.ಇನ್ನು ನೀನು ಮಗಳಿಗೆ ಒಪ್ಪದಿದ್ದರೆ.. ಎಂಬ ಮಾತು ಆಡಬಾರದು..ಹಿರಿಯರು ಕೊಟ್ಟ ಸೀರೆ ಫ್ಯಾಷನ್ ಗೆ ಸರಿಹೊಂದದಿದ್ದರೂ ಅದರಲ್ಲಿ ಅವರ ಪ್ರೀತಿ ಇದೆ; ಕಾಳಜಿಯಿದೆ..ಮಗಳಿಗೆ ಹೇಳಿ ಕೊಡುವ ಮುನ್ನ ಅದು ನೆನಪಿರಲಿ.." ಅಂದಾಗ ಸುಮ್ಮನಾದಳು ಮಂಗಳಮ್ಮ.. ಮೈತ್ರಿ ಯೂ ರೂಮ್ ಸೇರಿದಳು.ಅಮ್ಮ ಆಡಿದ್ದಕ್ಕೆಲ್ಲ ಏನಾದರೊಂದು ಹೇಳುವ ಅಜ್ಜಿ.. ಇನ್ನು ಮದುವೆಯಾದ ಮೇಲೆ ನನಗೂ ಹೀಗೆ ಕೊಂಕು ಹೇಳುವ ಅತ್ತೆ ಆದರೆ ಕಿಶನ್ ಅಮ್ಮ.. ಯೋಚಿಸಿ ಅವಳ ಮನಸ್ಸು ವ್ಯಾಕುಲಗೊಂಡಿತು.

ಅಷ್ಟರಲ್ಲಿ ಕಿಶನ್ ಫೋನ್ ಮಾಡಿದ..

"ಮುದ್ಗೊಂಬೆ.."

"..ಹಾಯ್"

"ಇನ್ನು ಎರಡೇ ವಾರ ಇರೋದು ಎಂಗೇಜ್ಮೆಂಟ್ ಗೆ.."

"ಹೌದು..ನಂಗೂ ಏನೋ ಭಯ,ಬೇಸರ ಒಟ್ಟೊಟ್ಟಿಗೇ ಆಗ್ತಿದೆ.."

"ಭಯ ,ಬೇಸರ ಎಲ್ಲ ಬಿಟ್ಬಿಡು..ನಾನಿದೇನಲ್ಲ .. ಹಿಂದೆ ಮುಂದೆ ಸುತ್ತೋಕೆ..."

"ಹಾಗಲ್ಲ.. ಕಿಶನ್.". ಎನ್ನುತ್ತಾ ಇಂದಿನ ಸನ್ನಿವೇಶವನ್ನು ವಿವರಿಸಿದಳು..

"ಮುದ್ಗೊಂಬೆ..ನನ್ನ ಅಮ್ಮ ಅಂತಹವರಲ್ಲ..ಕಂಡದ್ದಕ್ಕೆಲ್ಲ ಕೊಂಕು ಆಡುವವರಲ್ಲ..ಗದರುವವರಲ್ಲ..ಸಾಧು ಸ್ವಭಾವದವರು..ನನ್ನಂತೆ.." ಎನ್ನುತ್ತಾ ನಕ್ಕ..

"ಮಗನಿಗೊಂದು ಸೊಸೆಗೊಂದು ನೀತಿ ಮಾಡಿದರೆ ಅಂತ.."

"ಏನೂ ಆಗಲ್ಲ.. ನಾನು ಭರವಸೆ ಕೊಡ್ತೀನಿ.." ಅಂದಾಗ ಅವಳ ಮನಸು ಹಗುರವಾಯಿತು.

"ಆಫೀಸ್ ಮುಗಿಸಿ ಬೇಗ ಹೊರಟಿರೋ ಹಾಗಿದೆ."

"ಹೌದು ಅದೇ ಹೇಳೋದೇ ಮರೆತೆ.."

"ಏನಪ್ಪಾ ಅಂತಹ ವಿಶೇಷ.."

"ರಿಂಗ್ ಮಾಡಿಸೋಕೆ ಹೊರಟಿದೀನಿ.. ಶಾಪ್ ಗೆ ಹೋಗಿ ಡಿಸೈನ್ ಫೊಟೋ ಕಳಿಸ್ತೀನಿ.ಸೆಲೆಕ್ಟ್ ಮಾಡಿ ಹೇಳು ಆಯ್ತಾ.. ಅದ್ಕೇ ಕರೆ ಮಾಡಿದ್ದು.." ಎಂದ.

ಅಪ್ಪ ನನ್ನಲ್ಲಿ ಒಂದು ಮಾತೂ ಹೇಳದೆ ಸೀರೆ ತಂದರು.ಕಿಶನ್ ದೂರದಲ್ಲಿದ್ದರೂ ಕರೆಮಾಡಿ ಸೆಲೆಕ್ಟ್ ಮಾಡಲು ಹೇಳಿದ..ಇಲ್ಲೇ ಭಿನ್ನತೆಯನ್ನು ಕಂಡಳು ಅಪ್ಪನ ಮತ್ತು ಕಿಶನ್ ನ ವರ್ತನೆಯಲ್ಲಿ.. ಸ್ವಲ್ಪ ಹೊತ್ತಿನಲ್ಲಿ ಕಳುಹಿಸಿದ ಫೊಟೋ ಗಳಲ್ಲಿ ತನಗಿಷ್ಟವಾದದ್ದನ್ನು ಸೆಲೆಕ್ಟ್ ಮಾಡಿದಳು. ಕಿಶನ್ ಅದೇ ಪ್ಯಾಟರ್ನ್ ರೆಡಿ ಮಾಡಲು ಹೇಳಿದ..


        ಕಿಶನ್ ನ ಮನೆಯಲ್ಲಿ ಕಳೆದ ಬಾರಿ ಬಂದಾಗ ಮೈತ್ರಿಗೆಂದು ಕಿಶನ್ ತಂದಿದ್ದ ಸೀರೆ ಬ್ಲೌಸ್ ಹೊಲಿಯಲು ಕೊಟ್ಟು ಬಂದಿದ್ದರು ಮಮತಾ.ನಿನಗೆ ಯಾವ ಡಿಸೈನ್ ಬೇಕು ಎಂದು ಮೈತ್ರಿ ಯಲ್ಲೇ ಕೇಳಲು ಕರೆ ಮಾಡಿದರು.ಅದು ಆಕೆಗೆ ಇನ್ನಷ್ಟು ಸಂತಸಕ್ಕೆ ಕಾರಣವಾಯಿತು...ನನ್ನ ಆಸೆಗಳಿಗೂ ಬೆಲೆಯಿದೆಯಲ್ಲಾ..ಎಂದು.ಭಾವೀ ಅತ್ತೆ ಸೊಸೆ ಸ್ವಲ್ಪ ಹೊತ್ತು ಹರಟಿದರು..


               ****



           ಸೌಜನ್ಯಳ ಕಡೆಯವರು ಮನೆಗೆ ತೆರಳಿದರು.ಇಳಿಸಂಜೆ ಕೇಶವ್ ಸೌಜನ್ಯಳ ಮಧುರ ನೆನಪುಗಳನ್ನು ಮೆಲಕುಹಾಕಿ ನಸುನಗುತ್ತಿದ್ದ ..ಆಗ ಅನಾಮಧೇಯ ಕರೆಯೊಂದು ಬಂದಿತು..
"ಹಲೋ ಕೇಶವ್..."ಎಂದ ದನಿ ಗಡುಸಾಗಿ .

"ಹಲೋ.. " ಎಂದನು.

ಅತ್ತಲಿಂದ ಏನೋ  ಗಂಭೀರವಾದ ಮಾತುಗಳು.ಕಿವಿಗೆ ಸೀಸವೆರೆದಂತಿತ್ತು.ಆದರೂ ತೋರಗೊಡದೆ ಸಾವರಿಸಿಕೊಂಡ ಕೇಶವ್.
"ಏಯ್..ಯಾವನೋ ನೀನು..ಹಾಗೆಲ್ಲ ನನ್ನ ಹುಡುಗಿ ಬಗ್ಗೆ ಹೇಳೋನು.."

ಅತ್ತಲಿಂದ ಅಷ್ಟೇ ಎತ್ತರದ ದನಿಯಲ್ಲಿ ಬಂತು ಮಾತು..

ಸ್ವಲ್ಪ ವೇ ಹೊತ್ತಲ್ಲಿ ಕರೆ ನಿಲುಗಡೆಯಾಯಿತು.
ಕೇಶವ್ ಅದಕ್ಕೆ ಸೊಪ್ಪು ಹಾಕಲಿಲ್ಲ.ಆತನಿಗೆ ಅದರಲ್ಲಿ ಎಷ್ಟು ಸತ್ಯವಿದೆಯೋ ಅಥವಾ ಸುಳ್ಳೇ ಆಗಿರಲೂಬಹುದು ಎಂಬ ಸಂಶಯ.ಸೌಜನ್ಯಳ ಮೇಲೆ ನಂಬಿಕೆಯಿದೆ..ಅದಕ್ಕಿಂತ ಹೆಚ್ಚಾಗಿ ಅಪ್ರತಿಯ ಸುಂದರಿಯನ್ನು ತನ್ನವಳನ್ನಾಗಿಸಿಕೊಳ್ಳುವ ಅದಮ್ಯ ಬಯಕೆ.


ರಾತ್ರಿಯಾಗುತ್ತಿದ್ದಂತೆ ಸೌಜನ್ಯ ಕೇಶವ್ ನ ಚಾಟಿಂಗ್ ಎಗ್ಗಿಲ್ಲದೆ ಸಾಗಿತು.ಅನಾಮಧೇಯ ಕರೆಯನ್ನೂ ಮರೆಸುವಂತೆ ಮೋಡಿಗೊಳಗಾದ ಕೇಶವ್.


ಸೌಜನ್ಯ:"ನನ್ನನ್ನು ನಿಮ್ಮ ಮನೆಯವರು ಮೆಚ್ಚಿಕೊಂಡ್ರಾ..?"

"ನನ್ನಮ್ಮ ನಂತೂ ಭಾವೀ ಸೊಸೆಯನ್ನು ಹೊಗಳಿ ಅಟ್ಟಕ್ಕೇರಿಸಿದ್ರು ಗೊತ್ತಾ...?"

"ಹೂಂ.. ಹೌದಾ.." ಎಂದಳು ನಗುತ್ತಾ.

"ನನ್ನನೇನಂದ್ರು ಮಹಾರಾಣಿಯವರ ತಂದೆಯವರು.."

"ಅವರಿಗೆ ಹಳ್ಳಿ ಅಂದ್ರೆ ಪಂಚಪ್ರಾಣ.ಮಗಳೂ ಹಳ್ಳಿ ಮನೆಗೇ ಹೋಗ್ತಾ ಇದ್ದಾಳೇಂತ ಖುಷಿಪಟ್ಟರು."

ಕೇಶವ್:ಪೇಟೆ ಹುಡುಗಿಯಾದರೂ .. ತೀರಾ ಫ್ಯಾಷನ್ ಇಲ್ಲ.. ಸಿಂಪಲ್..ಬಳೆ ಬಿಂದಿ ಹಾಕ್ಕೊಂಡು ಜಡೆ ನೆಯ್ದು ಹೂವು ಮುಡಿದು ಸರಳವಾಗಿ ಸೀರೆಯುಟ್ಟು ಬಂದದ್ದು ಎಲ್ಲರಿಗೂ ಇಷ್ಟವಾಯ್ತು.. ನಾನಂತೂ..💞💞

"ಏನು..ನೀವಂತೂ.. ಹೇಳಿ.."

"ಹೇಳೋದೇನು ನಿಂಗೆ ಗೊತ್ತಲ್ಲಾ..?"

"ಇಲ್ಲಪ್ಪಾ ನಂಗೇನು ಗೊತ್ತು..?"

"ನಾನು ಜಾರೋದಷ್ಟೇ ಬಾಕಿ... ಅಷ್ಟರಲ್ಲಿ ಮನೆಯಿಂದ ಕರೆ ಬಂತು.."

"ಹ್ಹ ಹ್ಹ ಹ್ಹಾ.. ನಾನಂತೂ ಬಚಾವ್...ರಾಯರಿಂದ.."

"ನಾಡಿದ್ದು ಭಾನುವಾರ ಬರ್ತಿದೀವಿ.ನಿಮ್ಮ ಕಡೆ..."

"ಬನ್ನಿ ಬನ್ನಿ.."

"ಅಮ್ಮಾವ್ರಿಗೆ ಏನು ತರ್ಲೀ.."

"ನಂಗೇನೂ ಹೆಚ್ಚು ಬೇಡ.. ಎಂಗೇಜ್ಮೆಂಟ್ ಗೆ ರಿಂಗ್.. ಒಂದು ಕಾಂಜೀವರಂ ಸೀರೆ.."  ಎಂದು ಹೇಳಿದಾಗ ಆಕೆಗೆ ಅಮ್ಮ ಹೇಳಿದ ಬುದ್ಧಿವಾದ ನೆನಪಾಯಿತು..
ಫಕ್ಕನೆ ಸಾವರಿಸಿಕೊಂಡು .." ಇಲ್ಲಪ್ಪಾ .. ಸುಮ್ನೆ ತಮಾಷೆಗೆ ಹೇಳಿದೆ..ಬೇಕಂತಲ್ಲ.. ಅಷ್ಟಕ್ಕೂ ನಮ್ಮಲ್ಲಿ ನಿಶ್ಚಿತಾರ್ಥ ಕ್ಕೆ ರಿಂಗ್ ಹಾಕಿಸೋ ;ಸೀರೆ ಕೊಡಿಸೋ ಅಭ್ಯಾಸ ಇಲ್ಲ ತಾನೇ .."


"ಹೊಸ ಕ್ರಮ ಮಾಡ್ತಾ ಇದ್ದಾರೆ.ನಾವೂ ಭರ್ಜರಿಯಾಗಿಯೇ ಮಾಡೋಣ.." ಎಂದಾಗ ಸೌಜನ್ಯಳಿಗೆ ಅಪೂರ್ವ ಆನಂದವಾಯಿತು..
ರೋಗಿ ಬಯಸಿದ್ದೂ ಹಾಲು ವೈದ್ಯ ಕೊಟ್ಟದ್ದೂ ಹಾಲು ಎಂದಂತಾಯಿತು..

"ಹೂಂ..ನಿಮ್ಮಿಷ್ಟ.. " ಎಂದಾಗ ಸಹಜವಾಗಿಯೇ ನಾಚಿದಳು..

"ನಾಚಿದಾಗ ಕೆನ್ನೆಯ ರಂಗೇರಿದ್ದನ್ನು ನೋಡುವ ತವಕ.."ಎಂದಿದ್ದೇ ತಡ

ನಾಚಿಕೆ ಸುಂದರಿಯ ಹಾಟ್ ಫೊಟೋ ರವಾನೆಯಾಯಿತು.ಕೇಶವನ ಬಯಕೆ ಬಲವಾಯಿತು.ಇನ್ನು ಕೆಲವೇ ದಿನಗಳಲ್ಲಿ ನನ್ನರಸಿ ಆಗುವವಳ ನೆನೆಯುತ್ತಾ  ಅವಳ ಯೌವ್ವನದ ಸಿರಿಯನ್ನು ಸವಿಯುವ ಸೌಭಾಗ್ಯ ವನ್ನು ನೆನೆದು ದಿಂಬನ್ನು ತಬ್ಬಿಕೊಂಡು
 ಮಲಗಿದ ಕೇಶವ್..

      ಇತ್ತ ಸೌಜನ್ಯ ತನ್ನ ಹಳೆಯ ನೆನಪಿನ ಪುಟಗಳನ್ನು ತೆರೆದು ಕಣ್ಣೀರಿಡುತ್ತಿದ್ದಳು . ಕಣ್ಣೀರು ಹನಿಹನಿಯಾಗಿ ಜಿನುಗಿ ನೋವೆಲ್ಲಾ ಕರಗಿ ...ಹೊಸ ಬಾಳ ಕನಸು ಕಟ್ಟತೊಡಗಿದಳು..ಚುಚ್ಚುವ ಗಡ್ಡದ  ಹಳ್ಳಿಯ ಯುವಕನ ಬಿಸಿ ಬಿಸಿ ಆಲಿಂಗನವನ್ನು ನೆನೆದು  ಅವನಿಗಾಗಿ ಹಾತೊರೆದಳು..



ಮುಂದುವರಿಯುವುದು..

✍️... ಅನಿತಾ ಜಿ.ಕೆ.ಭಟ್.
27-03-2020.





Thursday, 26 March 2020

ಜೀವನ ಮೈತ್ರಿ-ಭಾಗ ೪೯(49)




      ಸೌಜನ್ಯ ಸರಳವಾಗಿ ಅಲಂಕರಿಸಿಕೊಂಡು ಕನ್ನಡಿಯ ಮುಂದೆ ನಿಂತಳು.ಏನೋ ಮಿಸ್ಸಿಂಗ್ ಅಂತ ಅನಿಸಿತು ಅವಳಿಗೆ.ತುಟಿಯ ಮೇಲೆ ಎಂದಿನಂತೆ ಗಾಢವಾದ ಲಿಪ್ ಸ್ಟಿಕ್ ಇಲ್ಲ.ಕಿವಿಯಲ್ಲಿ ನೇತಾಡುವ ಓಲೆಗಳಿಲ್ಲ.. ಅದೆಷ್ಟು ಬಾರಿ ಅಮ್ಮ ಅಂತಹವನ್ನೆಲ್ಲ ಹಾಕಬೇಡ ಎಂದರೂ ಹಾಕಿಕೊಳ್ಳುತ್ತಿದ್ದವಳು. ಇಂದು ಮೊದಲ ಬಾರಿಗೆ ಅಮ್ಮನ ಮಾತನ್ನು ಶಿರಸಾ ಪಾಲಿಸಿ ಚಿನ್ನದ ಸಣ್ಣ ಬೆಂಡೋಲೆಯನ್ನು ಹಾಕಿಕೊಂಡಿದ್ದಳು.ಬೆಂಡೋಲೆ ಚೆಂದವಿತ್ತು.ಆದರೆ ದಿನಕ್ಕೊಂದು ಫ್ಯಾಷನ್ ಓಲೆಗಳನ್ನು ಧರಿಸುತ್ತಿದ್ದ ಸೌಜನ್ಯಳಿಗೆ ಅದೆಲ್ಲ ಇಷ್ಟವಿಲ್ಲ.ಕುತ್ತಿಗೆಯನ್ನು ಬೋಳು ಬಿಡುತ್ತಿದ್ದವಳು ಅಥವಾ ಮಣ ಭಾರದ ಯಾಂಟಿಕ್ ಆಭರಣ ಧರಿಸುತ್ತಿದ್ದವಳ ಕುತ್ತಿಗೆಯಲ್ಲೊಂದು ಪುಟ್ಟ ಪೆಂಡೆಂಟ್ ಇರುವ ಚೈನ್ ವಿರಾಜಮಾನವಾಗಿತ್ತು.ಕೂದಲನ್ನು ಎಂದಿನಂತೆ ಸಣ್ಣದೊಂದು ಪ್ರೆಸ್ಸಿಂಗ್ ಕ್ಲಿಪ್ ನಲ್ಲಿ ಅರ್ಧಭಾಗ ಬಂಧಿಸಿದಳು.ಅಷ್ಟರಲ್ಲಿ ರೇಖಾ ಮಗಳ ಅಲಂಕಾರ ಎಲ್ಲಿವರೆಗೆ ಬಂತು ಎಂದು ನೋಡಲು ಬಂದರು.

"ಅಲ್ಲಾ ಮಗಳೇ ಎಷ್ಟು ಬಾರಿ ಹೇಳಿದರೂ ತಿಳಿಯಲ್ವಾ ನಿಂಗೆ .."

"ಏನಾಯ್ತು.. ಅಮ್ಮಾ.."

"ಹೀಗೆ ಕೂದಲು ಬಿಡ್ತಾರೇನೇ..ಈ ಹಳ್ಳಿಯಲ್ಲಿ..ಬಾ ಇಲ್ಲಿ.. ಎನ್ನುತ್ತಾ ಮಗಳನ್ನು ಹತ್ತಿರಕ್ಕೆಳೆದು ನೆತ್ತಿಗೆ ತೆಂಗಿನೆಣ್ಣೆ ಸುರಿದು ಬಾಚಿ ಜಡೆಹೆಣೆದರು.ಜಡೆ ಹೆಣೆಯೋಕೂ ಬರಲ್ಲ.. ಇಷ್ಟು ವಯಸ್ಸಾದರೂ.."

"ಜಡೆ ಹಾಕ್ಕೊಳ್ಳೋಕೆ ನಾನೇನು ಹೈಸ್ಕೂಲ್ ಹುಡುಗಿ ಅಲ್ಲಮ್ಮಾ..ಯಾಕೋ ಈ ಜಡೆ ನಂಗೆ ಎಳೆದು ಹಿಡಿದಂಗೆ ಅನಿಸುತ್ತಿದೆ..."

"ಅಲ್ಲಿಂದ ಬರುವತನಕ ಹೊಂದಾಣಿಕೆ ಮಾಡಿಕೋ..ಹಾಗೇ ನೋಡು ದೊಡ್ಡ ಬಿಂದಿ ತಂದಿದೀನಿ ‌.ಹಣೆಮೇಲೆ ಸರಿಯಾಗಿ ಕಾಣುವಂತೆ ಹಚ್ಚಿಕೋ.."

"ಈ ಅಲಂಕಾರ ನನಗೇಕೋ ಹಿಂಸೆ ಆಗ್ತಿದೆ.."

"ಇದೇನೇ ಸೆರಗು ಇಷ್ಟು ನೆರಿಗೆ ಮಾಡಿ ಸಪೂರ ಹಾಕಿದ್ದೀಯಾ.. ಎಷ್ಟಿದೆ ಇದರಲ್ಲಿ.. ಅಬ್ಬಾ..ಏಳು ನೆರಿಗೆ ಮಾಡಿ ಎಷ್ಟು ಸಪೂರಕ್ಕೆ ಪಿನ್ ಹಾಕ್ಕೊಂಡಿದೀಯಾ ..ಆ ಕಡೆ ಎಲ್ಲಾ ಕಾಣಿಸುತ್ತೆ.. ಸ್ವಲ್ಪ ಅಗಲವಾಗಿ ಹಾಕಿಕೋ.."

"ಅಯ್ಯೋ ಬೇಡಮ್ಮಾ..ಇದೇ ಚಂದ..ಅಗಲವಾಗಿ ಹಾಕಿದ್ರೆ ಹೆಗಲಿಗೆ ಭಾರವಾಗುತ್ತೆ .. ಪ್ಲೀಸ್ ಬೇಡ.."

"ಹಾಗೆಲ್ಲ ಹೇಳ್ಬಾರ್ದು.. "ಎಂದು ಹೇಳಿ ಸೆರಗಿಗೆ ಐದೇ ನೆರಿಗೆ ಮಾಡಿ ಪಿನ್ ಮಾಡಿದರು.

ಸೌಜನ್ಯ ಮುಖ ಊದಿಸಿಕೊಂಡಳು.

"ಮಗಳೇ...ನಾನು ನೋಡೇ ಇಲ್ಟಲ್ಲೇ..ಕೈ ಬೋಳು ಬಿಟ್ಟಿದೀಯ..ಬಳೆ ಹಾಕ್ಕೋಬೇಕು..ಬೆಂಗಳೂರಿಂದ ಬರೋವಾಗ ತರಲೂ ಮರೆತೆ..ಹಾಂ.. ಇರು ಅತ್ತೇನ ಕೇಳೋಣ.."

         ರೇಖಾ ತಮ್ಮನ ಪತ್ನಿಯಲ್ಲಿ ಕೇಳಿ ಅವಳ ಗಾಜಿನ ಬಳೆಗಳನ್ನು ತೊಡಿಸಿದಳು.. ಪುಟ್ಟ ಕೈಗಳಿಗೆ ದೊಡ್ಡದಾಗಿ ಜಾರುವಂತಿದ್ದವು..

ಸೌಜನ್ಯಳಿಗೆ ಅಳುವೇ ಬರುವಂತಾಯಿತು.. ತಾನು ಯಾವ ರೀತಿ ಇರಲು ಬಯಸುವುದಿಲ್ಲವೋ ಅದನ್ನೇ ಸಂಸ್ಕಾರ ಅನ್ನುವ ಮನೆಗೆ, ಹಳ್ಳಿಗೆ ಕಾಲಿಡಬೇಕಾಗಿ ಬರುತ್ತದಲ್ಲಾ... ಎಲ್ಲಾ ನನ್ನ ಕರ್ಮ..ನಾನೇ ಮಾಡಿಕೊಂಡಿದ್ದು.. ಯಾರನ್ನೂ ದೂಷಿಸುವಂತಿಲ್ಲ..ಛೇ.. ಎಂದು ಯೋಚಿಸುತ್ತಿದ್ದವಳ ಕಣ್ಣಂಚಿನಿಂದ ಹನಿಗಳು ಉದುರಲು ಅಪ್ಪಣೆ ಕೇಳುತ್ತಿದ್ದವು.

         ನರಸಿಂಹ ರಾಯರು "ರೇಖಾ ಮಗಳ ಅಲಂಕಾರ ಆಯ್ತಾ..ಹೊರಡೋಣವಾ" ಎಂದು ಕೇಳಿದರು..
"ಹೂಂ... ಆಯ್ತು ರೀ... ಒಂದೇ ಒಂದು ತುಂಡು ಮಲ್ಲಿಗೆ ಮುಡಿಸ್ತೀನಿ.." ಎನ್ನುತ್ತಾ ಬಾಯಲ್ಲಿ ಕಚ್ಚಿಕೊಂಡಿದ್ದ ಸುಜಾತಾ ಕ್ಲಿಪ್ ನ್ನು ಅಗಲಿಸಿ ಮಂಗಳೂರು ಮಲ್ಲಿಗೆಯನ್ನು ಮುಡಿಸಿದಳು.. ಸೌಜನ್ಯ ಮಲ್ಲಿಗೆ ವಾಸನೆ ಬರುತ್ತೆ ಅನ್ನುತ್ತಿದ್ದ ಹುಡುಗಿ.. ಈಗ ಅಮ್ಮನಿಗೆ ಎದುರು ಮಾತನಾಡುವಂತಿಲ್ಲ.


     ಕಾರಿನಲ್ಲಿ ಸೌಜನ್ಯ ಕುಳಿತಳು.ಪಕ್ಕದಲ್ಲಿ ಅಮ್ಮ ರೇಖಾ,ಆಚೆ ಬದಿಗೆ ಅತ್ತೆ ಶೈಲಾ ಕುಳಿತರು.ನರಸಿಂಹ ರಾಯರು ವಾಹನ ಚಲಾಯಿಸಿದರು.ಅವರ ಪಕ್ಕದಲ್ಲಿ ಸೌಜನ್ಯಳ ಸೋದರ ಮಾವ ಸುರೇಶರಾಯರು ಕುಳಿತಿದ್ದರು.


         ದಾರಿಯಲ್ಲಿ ಶೇಷಣ್ಣನೂ ಜೊತೆಯಾಗಿ ನಾಲ್ಕು ಗಂಟೆಗೆ ಹತ್ತು ನಿಮಿಷ ಇರುವಾಗಲೇ ಬಾರಂತಡ್ಕ ಮನೆಯ ಗೇಟಿನ ಮುಂದೆ ವಾಹನ ನಿಲ್ಲಿಸಿದರು.ಕೆಲಸದಾಳು ಗೇಟು ತೆರೆದ.ವಾಹನ ಒಳಗೆ ಬಂದಿತು.


        ಕಾರಿನಿಂದ ಒಬ್ಬೊಬ್ಬರಾಗಿ ಇಳಿದರು.ಬಂಗಾರಣ್ಣ ಅವಸರವಸರವಾಗಿ ಹೊರಗೆ ಬಂದರು.ಮಾತನಾಡಿಸಿ ಚಾವಡಿಗೆ ಕರೆದೊಯ್ದರು."ಸುಮಾ ನೀರು ತಾ.." ಕೂಗಿದರು.ಒಳಗಿಂದ ಉತ್ತರವಿಲ್ಲ.ಸುಮಾಗೆ ಇನ್ನೂ  ಸೀರೆಯುಟ್ಟಾಗಿರಲಿಲ್ಲ."ಕೇಶವ್ ನೀರು ತಾ.. " ಎಂದರು.."ಹಾಂ ತಂದೆ ಅಪ್ಪಾ.." ಎಂದವನು ಇನ್ನೂ ಬರ್ಮುಡಾ ಚಡ್ಡಿ ಯಲ್ಲಿದ್ದುದನ್ನು ಕಂಡು ಬಂಗಾರಣ್ಣನಿಗೆ ಪಿತ್ಥ ನೆತ್ತಿಗೇರಿತ್ತು..ಶೇಷಣ್ಣನಿಗೆ ಇರುಸುಮುರುಸು ಆಗಿತ್ತು..


         ಐದು ನಿಮಿಷ ಬಂದವರು ಚಾವಡಿಯಲ್ಲಿ ಬಂಗಾರಣ್ಣನಲ್ಲಿ ಮಾತನಾಡುತ್ತಾ ಕುಳಿತಿದ್ದರು.ಅಷ್ಟರಲ್ಲಿ ಸುಮಾ ನೀರು ಬೆಲ್ಲ ತಂದು ಆಸರಿಂಗೆ ಕೊಟ್ಟು ಉಪಚರಿಸಿ ಕ್ಷೇಮ ಸಮಾಚಾರ ವಿನಿಮಯಿಸಿಕೊಂಡರು.ಜೀನ್ಸ್ ಪ್ಯಾಂಟ್ ಟೀಶರ್ಟ್ ಧರಿಸಿ ಕೂದಲನ್ನು ಕೈಯಿಂದ ಕ್ರಾಪ್ ಮಾಡುತ್ತಾ ಬಂದ ಕೇಶವ್... ಒಮ್ಮೆ ಕೇಶವ್ ನನ್ನು ನೋಡಿ ಶಾಕ್ ಆದಳು ಸೌಜನ್ಯ.. ನಂಗೆ ಹಾಗಿರ್ಬೇಕು ಹೀಗಿರ್ಬೇಕು ಎಂದೆಲ್ಲ ಷರತ್ತು ವಿಧಿಸಿ ಅಲಂಕಾರ ಮಾಡಿಸಿ ಕರೆದುಕೊಂಡು ಬಂದವರು ಅಮ್ಮ..ಆದರೆ ಈ ಮನುಷ್ಯ ಮಾತ್ರ ಜೀನ್ಸ್ ಪ್ಯಾಂಟ್ ಟೀಶರ್ಟ್ ನಲ್ಲಿದ್ದಾನಲ್ಲ..ಹಳ್ಳಿಯ ಸಂಸ್ಕಾರದಂತೆ ಪಂಚೆ ಉಟ್ಟು ಶಾಲು ಹೆಗಲಿಗೇರಿಸಿಲ್ಲ.. ಹೂಂ.... ಇರಲಿ ಇರಲಿ...ನನಗೂ ಇಂತಹ ಮಾಡರ್ನ್ ಮೆಂಟಾಲಿಟಿಯೇ ಇಷ್ಟವಾಗುವುದು..ನಂಗೂ ನನ್ನಿಷ್ಟದಂತೇ ಡ್ರೆಸ್ ಮಾಡಿಕೊಳ್ಳಲು ಬಿಟ್ಟರೆ ಅಷ್ಟೇ ಸಾಕು..



         ಕೇಶವ್ ಬಂದು ತಂದೆಯ ಪಕ್ಕದಲ್ಲಿ ನಿಂತ.ಬಂದವರನ್ನು ಹೇಗೆ ಮಾತನಾಡಿಸಲಿ ಎಂಬ ಸಂಕೋಚ ಅವನಿಗೆ..ಶೇಷಣ್ಣ ಕೇಶವನ ಪರಿಚಯ ಮಾಡಿಸಿದರು.ನರಸಿಂಹ ರಾಯರು "ಏನಪ್ಪಾ ಕೇಶವ್.. ಬೆಂಗಳೂರಿನಲ್ಲಿ ಯಾವ ಕಂಪೆನಿಯಲ್ಲಿದ್ದೆ...?" ಎನ್ನುತ್ತಾ ಮಾತಿಗೆಳೆದರು.
ಮಾತುಕತೆ ಮುಂದುವರಿದು ತಿಂಡಿ ಕಾಫಿ ಎಲ್ಲಾ ಆಗಿ ಮನೆತೋರಿಸಿದರು.ಇಷ್ಟುದೊಡ್ಡ ಮನೆಯಲ್ಲಿ ಸುತ್ತು ಬರಲು ನನ್ನಿಂದ ಸಾಧ್ಯವೇ..? ಅಬ್ಬಾ ಎನಿಸಿತು ಸೌಜನ್ಯಾಳಿಗೆ..


        ಸುಮಾ ಸೌಜನ್ಯಳೊಡನೆ ಸ್ನೇಹದಿಂದಲೇ ಮಾತನಾಡಿಸಿದರು.. "ನಾವು ಹಳ್ಳಿಯಲ್ಲಿದ್ದರೂ ಪೇಟೆಯಲ್ಲಿದ್ದಂತೇ ಬದುಕುತ್ತಿದ್ದೇವೆ..ಬರುವ ಸೊಸೆಗೆ ಹಾಗೇ ಇರಬೇಕು ಹೀಗೇ ಇರಬೇಕು ಎಂದು ನಾವೇನೂ ಷರತ್ತು ವಿಧಿಸುವುದಿಲ್ಲ .ಮಗನ ಜೊತೆ ಅನ್ಯೋನ್ಯವಾಗಿ ಬದುಕಿ ಬಾಳಿದರೆ ಸಾಕು " ಎಂದದ್ದು ಸೌಜನ್ಯಳಿಗೆ ನಿಧಿ ಸಿಕ್ಕಿದಷ್ಟು ಸಂತೋಷವಾಯಿತು.. ಇನ್ಯಾಕೆ ತಡ ಅಂತ ಕೇಶವನೊಡನೆ ಹರಟಲು ಅವನನ್ನು ಅರಸಿದಳು.ಕೇಶವನೂ ಸೌಜನ್ಯಳಿಗಾಗಿ ಕಾಯುತ್ತಿದ್ದ.


      ಇಬ್ಬರೂ ಜೊತೆಯಾಗಿ ಅಂಗಳದ ಮೂಲೆಗೆ ತೆರಳಿದರು.ಮಾತನಾಡುತ್ತಾ ಹಾಗೇ ಮೆಲ್ಲನೆ ತೋಟದ ಕಡೆಗೆ ಹೊರಟರು.ಸಮಯ ಹೋದದ್ದೇ ಗೊತ್ತಾಗಲಿಲ್ಲ.. ಕೇಶವ್ ನ ಬಳಿ ಮಾತನಾಡುತ್ತಿದ್ದಾಗ ಅವಳ ಮನಸ್ಸು ಲಗಾಮು ಇಲ್ಲದೇ ಹಾರುತ್ತಿತ್ತು.ಅವನೂ ಅಷ್ಟೇ ರಸಿಕ.. ಅವಳು ಕಣ್ಣಲ್ಲೇ ಶೃಂಗಾರದ ಅಲೆಯನ್ನು ಎಬ್ಬಿಸಿದಳು.ಕೇಶವ್ ಅವಳ ರೂಪಸಿರಿಗೆ ಮಾರುಹೋದ..ಅವಳ ತುಟಿಯಂಚಲ್ಲಿ ಅಲಂಕರಿಸಿದ್ದ ನಗೆಯನ್ನು ತನ್ನದಾಗಿಸುವ ಆಸೆ.. ಆತನ ಹೃದಯದಲ್ಲಿ ಮಧುರ ಕವನ ಬರೆಯುವ ಆಸೆ ಅವಳಿಗೆ.. ಇದುವರೆಗೆ ಮಾಡರ್ನ್ ಡ್ರೆಸ್ ನಲ್ಲಿ ಫೊಟೋದಲ್ಲಿ ನೋಡಿದ್ದ ಅವಳನ್ನು ಮೆಚ್ಚಿ ಹುಚ್ಚನಾಗಿದ್ದ.ಈಗ ಕಣ್ಣೆದುರಿಗೆ...ಸನಿಹದಲ್ಲೇ...ಅದೂ ...ಹೆಣ್ಣಿನ ಸೌಂದರ್ಯವನ್ನು ಎತ್ತಿ ಹಿಡಿಯುವ ಸೀರೆಯಲ್ಲಿ... ಕೇಶವ್ ... ಮೆಲ್ಲನೆ ಅವಳ ಕೈಗಳನ್ನು ಸವರಿದ.. ಮೆದುವಾದ ಕೈಗಳು.. ಕೋಮಲತೆಗೆ ಇನ್ನೊಂದು ಹೆಸರು ಇವಳೇ... ಪುಟ್ಟ ಜಡೆಯಲ್ಲಿ ನೇತಾಡುತ್ತಿದ್ದ ಮಲ್ಲಿಗೆ ಹೂವುಗಳನ್ನು ಆಘ್ರಾಣಿಸಿದ.ಆಕೆಯ ಸನಿಹವೇ  ವಿಶೇಷ ಸುವಾಸನೆಯಿಂದ ಕೂಡಿದ್ದು ಕೇಶವನನ್ನು  ಮರುಳುಮಾಡಿತು.ಆಕೆಯ ಸಿಂಧೂರದ ಮೇಲೊಂದು ಪ್ರೇಮಮುದ್ರೆಯನೊತ್ತಿದ ಅವನಿಗೆ ಅವಳ ತಿದ್ದಿ ತೀಡಿದ ಹುಬ್ಬುಗಳು ಗದರುತ್ತಿದ್ದವು..ನಾವೇನು ಕಮ್ಮಿ ಬಿಂದಿಗಿಂತ.. ನಾವು ಸದಾ ಆಕೆಯ ಜೊತೆಯಲ್ಲಿರುವೆವು ಎಂದು...
.. ಅವನಿಗೆ ಅಸೂಯೆ ಮೂಡುವಂತಿದ್ದವು ಅವಳ ಹುಬ್ಬುಗಳು...ನಾಸಿಕವಂತೂ... ನೀಳ ನಾಸಿಕ..ಮನಸೋಲದೆ ಇರಲು ಸಾಧ್ಯವಿಲ್ಲ..



ನುಣುಪಾದ ಬೆಣ್ಣೆಯಂತಹ ಕೆನ್ನೆ..ತನ್ನ ಬೊಗಸೆಯಲ್ಲಿ ಹಿಡಿದು ಕೆನ್ನೆಗೆ ತುಟಿಯೊತ್ತಿ ತುಂಟತನದಿಂದ ನಗುತಿದ್ದ ಕೇಶವನನ್ನ  ಕಣ್ಣಲ್ಲೆ ಆಕ್ಷೇಪಿಸಿದಳು ಸೌಜನ್ಯ..ಆತನ ಕೈಗಳು ಸೆರಗು ಸರಿದು ತೋರುತ್ತಿದ್ದ ಎದೆ, ಸೊಂಟದ ಮೇಲೆ ಹರಿದಾಡಿದವು.. ಅಷ್ಟರಲ್ಲಿ ಮನೆಯಿಂದ ಕೇಶವನನ್ನು ಕರೆಯುವ ದನಿ ಕೇಳಿಸಿತು.. ಕೇಶವನಿಗೆ ನಿರಾಸೆ..ಸೌಜನ್ಯಳಿಗೆ ಕೇಶವ್ ನನ್ನು ಗೋಳಾಡಿಸಿದ ,ಸಂಬಂಧ ಭದ್ರಪಡಿಸಿದ ಸಂತೃಪ್ತಿ.. ಇನ್ನು ಕೇಶವ್ ನನ್ನ ಸೆರಗು ಹಿಡಿಯುವುದು ಗ್ಯಾರಂಟಿ... ನಾನು ಈ ಸಿರಿಸಾಮ್ರಾಜ್ಯದ ಒಡತಿಯಾಗಲು ಇನ್ನು ಯಾವುದೇ ಅಡ್ಡಿಯಿರಲಾರದು.ಎಂದು ನಸುನಗುತ್ತಾ  ಅವನ ತುಟಿಗೆ ತುಟಿ ಬೆಸೆಯಲು ಹೊರಟು "ಅಯ್ಯಾ...ಗಡ್ಡ ಚುಚ್ಚುತ್ತಿದೆ " .. ಎಂದು ನೆಪ ಹೇಳಿ ಹುಸಿಕೋಪ ತೋರಿಸಿ ಹೊರಡಲನುವಾದಳು... ಉಪಾಯವಿರದೆ ಕೇಶವ್ ಅವಳನ್ನು ಹಿಂಬಾಲಿಸಿದ.. ಮನೆಯಲ್ಲಿ ಈಗ ನಮ್ಮನ್ನು ಎಲ್ಲರೂ ಏನಾದರೂ ಅನ್ನಬಹುದು ಎಂಬ ಯೋಚನೆ ಸೌಜನ್ಯಳಿಗೆ...ಆದರೆ ಯಾರೂ ಏನೂ ಅನ್ನಲಿಲ್ಲ.. ಸಹಜವಾಗಿಯೇ ಇದ್ದರು.. ಇದು ಖುಷಿಯಾಯಿತು ಆಕೆಗೆ ..
ನನಗೆ ಅಡ್ಡಿಪಡಿಸುವವರಲ್ಲ ಮನೆಯವರು ಎಂಬ ವಿಶ್ವಾಸ ಬಂತು.. ಎರಡೂ ಕುಟುಂಬದವರಿಗೂ ಈ ಮದುವೆ ನಡೆದರೆ ಸಾಕು ಎಂಬ ಭಾವನೆ ಬಲವಾಗಿತ್ತು.. ಆದ್ದರಿಂದ ಅವರೂ ಸೌಜನ್ಯ ಕೇಶವ್ ಅನ್ಯೋನ್ಯತೆಯಿಂದ ಇದ್ದುದನ್ನು  ಕಂಡು ನಿಟ್ಟುಸಿರು ಬಿಟ್ಟರು..




ಬಂಗಾರಣ್ಣ "ನಮಗೆ ನಿಮ್ಮ ಹುಡುಗಿ ಒಪ್ಪಿಗೆಯಾಗಿದ್ದಾಳೆ ..ನಿಮ್ಮ ಅಭಿಪ್ರಾಯ ತಿಳಿಸಿ"ಎಂದಾಗ
ನರಸಿಂಹ ರಾಯರು   ತನ್ನ ಜೊತೆ ಬಂದ ಎಲ್ಲರನ್ನೂ ಅಂಗಳದ ಬದಿಗೆ ಕರೆದು ನಾವು ಸಂಬಂಧ ಒಪ್ಪಿಗೆ ಅನ್ನೋಣವೇ ಅಂದಾಗ ಎಲ್ಲರೂ ಒಪ್ಪಿದರು.



        ನರಸಿಂಹ ರಾಯರು ಶೇಷಣ್ಣ ಮತ್ತು ಬಂಗಾರಣ್ಣನಲ್ಲಿ ತಮ್ಮ ಒಪ್ಪಿಗೆಯನ್ನು ತಿಳಿಸಿದರು.ಮುಂದಿನ ಭಾನುವಾರವೇ ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಇಟ್ಟುಕೊಳ್ಳೋಣ ಎಂದು ನಿರ್ಧರಿಸಿದರು.ಎರಡೂ ಕುಟುಂಬಕ್ಕೂ ತರಾತುರಿಯಲ್ಲಿ ವಿವಾಹ ಮುಗಿಯಬೇಕಿತ್ತು..


       ಸೌಜನ್ಯಳ ಕಡೆಯವರು ಮನೆಗೆ ತೆರಳಿದರು.ಇಳಿಸಂಜೆ ಕೇಶವ್ ಸೌಜನ್ಯಳ ಮಧುರ ನೆನಪುಗಳನ್ನು ಮೆಲಕುಹಾಕಿ ನಸುನಗುತ್ತಿದ್ದ ..ಆಗ ಅನಾಮಧೇಯ ಕರೆಯೊಂದು ಬಂದಿತು..

ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
26-03-2020.

Wednesday, 25 March 2020

ಸಂಕಷ್ಟಕರ ಯುಗಾದಿ




ಜಗದ ಜೀವದುಲ್ಲಾಸಕೆ
ಮತ್ತೆ ಬಂತು ಯುಗಾದಿ
ಚೈತ್ರ ಚಿಗುರನವಪಲ್ಲವಿ
ಸೌಗಂಧದಿ ತುಂಬಿ ಬೇಗುದಿ||೧||


ಹೊಂಗೆ ಮಾವು ತೂಗಿ ತಳಿರು
ಕುಣಿಯಿತಿಂದು ಹರುಷದಿ
ಹಬ್ಬುತಿರುವ ಕೊರೋನ
ಕೋವಿಡಿಗಿಲ್ಲ ನೋಡಿ ಔಷಧಿ||೨||

ಹಬ್ಬಕೆಂದು ರಂಗವಲ್ಲಿ
ಒಬ್ಬಟ್ಟಿನ ಹೂರಣ
ಒಬ್ಬೊಬ್ಬರಾಗಿ ಸಿಲುಕಿಕೊಂಡು
ಸಾಗುತಿದೆ ಹೋಮ ಮಾರಣ||೩||

ವಿಕಾರಿಯ ವಿಷಸೋಂಕಿಗೆ
ಬಲಿಯಾಗಿ ದೇಶ ತತ್ತರ
ಶಾರ್ವರಿಯ ಹೊಸಹೆಜ್ಜೆಯಲಿ
ಮೂಡಲಿ ದೇಹದೆಚ್ಚರ||೪||

ಜೀವದುಸಿರ ಒಸಗೆಯಿಟ್ಟು
ಬೇಡುವ ನವಸಂವತ್ಸರ
ಜಾಣಜನರೆ ಕಾಯ್ದುಕೊಳ್ಳಿ
ಮನುಜಮನುಜಗಂತರ||೫||

ಬೇವಿನಂತೆ ಬಂದೆರಗಿದ
ಮಾರಿಯಿಂದ ರಕ್ಷಿಸಿ
ಕಠಿಣವಾದ ಸಂಕಲ್ಪದಿಂದ
ಬೆಲ್ಲಸವಿಯ ಸೇವಿಸಿ||೬||

ಬೆವರು ಸುರಿಸಿ ಬೆಳೆದ ಪೈರು
ಕಣಜ ತುಂಬ ಸುಂದರ
ಹೊಸವಿಜಯಗೀತೆ ಬರೆದು
ಬಾಳು ಬೆಳಗಲಿ ಬಿದಿಗೆಚಂದಿರ||೭||

✍️... ಅನಿತಾ ಜಿ.ಕೆ.ಭಟ್
25-03-2020.

Momspresso Kannada ದಲ್ಲಿ ಇಂದಿನ ಪರಿಸ್ಥಿತಿಯಲ್ಲಿ ಯುಗಾದಿ ಎಂಬ ವಿಷಯದ ಕುರಿತು ಬರೆದ ಕವನ..





ಜೀವನ ಮೈತ್ರಿ-ಭಾಗ ೪೮(48)



ಜೀವನ ಮೈತ್ರಿ-ಭಾಗ ೪೮



          ಗೋಡೆಯ ಮೇಲಿನ ಮೂವತ್ತು ವರ್ಷ ಹಿಂದಿನ ಗಡಿಯಾರ ಡೈಂ ಡೈಂ ಎಂದು ಒಂಭತ್ತು ಗಂಟೆ ಬಡಿಯಿತು.ಆ ಶಬ್ದ ಎಲ್ಲರ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು.ಮನೆಯಂಗಳದಲ್ಲಿ ಜೀಪು ಬಂದು ನಿಂತಿತು.ಚಾಂದಿನಿ ,ಮೇದಿನಿ ,ಗಣೇಶ ಶರ್ಮ ಅಂಗಳಕ್ಕಿಳಿದರು.ಬಂದವರನ್ನು ಕೈ ಕಾಲಿಗೆ ನೀರು ಕೊಟ್ಟು ಸಾವಕಾಶವಾಗಿ ಬಂದಿರಾ ಎಂದು ಉಪಚರಿಸಿ ಮನೆಯೊಳಗೆ ಕರೆದೊಯ್ದರು.


       ಮಮತಾ ಮತ್ತು ಮಗಳಂದಿರು ಬಿಸಿನೀರು ಬೆಲ್ಲ ಹಿಡಿದು ಬಂದರು.ಎಲ್ಲರಿಗೂ ಆಸರಿಂಗೆ ಕೊಟ್ಟು ಮಾತನಾಡಿಸಿದರು.ಒಳಗೆ ತಿಂಡಿಗೆ ಪಂಕ್ತಿ ತಯಾರುಮಾಡುತ್ತಿದ್ದ ಕಿಶನ್ ಮೆಲ್ಲನೆ ಹೊರಗೆ ಬಂದ..ಅವನ ಕಣ್ಣು ಮೊದಲು ಅರಸಿದ್ದು ತನ್ನ ಪ್ರೇಮದೇವತೆಯನ್ನು.ಅಪ್ಪಟ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಕಿಶನ್ ನನ್ನು ಕಂಡು ಎಲ್ಲರೂ ಬೆರಗಾದರು.ಪ್ಯಾಂಟ್ ಶರ್ಟ್ ತೊಟ್ಟಾಗ ಕಾಣುತ್ತಿದ್ದ ಮಾಣಿಯ ರೂಪವೇ ಬೇರೆ.. ಇಂದು ಬೆಳ್ಳಗಿನ ಶಲ್ಯ ಪಂಚೆ ಹಣೆಯಮೇಲಿನ ವಿಭೂತಿನಾಮ ಕುಂಕುಮ ತಿಲಕದಿಂದ ಲಕ್ಷಣವಾಗಿ ಕಾಣುತ್ತಿದ್ದ.. ಮಹಾಲಕ್ಷ್ಮಿ ಅಮ್ಮ ಖುಷಿಯಿಂದ ಸೊಸೆಯ ಬಳಿ
"ಮಾಣಿ ಅಡ್ಡಿಲ್ಲೆ..ಉದ್ಯೋಗದಲ್ಲಿದ್ದರೂ ನಮ್ಮ ಕ್ರಮ ಬಿಟ್ಟಿದಯಿಲ್ಲೆ.."ಎಂದುಸುರಿದರು.
ಮಂಗಳಮ್ಮನ ಬಳಿ ಬಂದು
" ಏನು..?" ಎಂದು ಕೇಳಿದಾಗ ಸರಳನಡೆನುಡಿಯ ಮಾಣಿ ಎಂದುಕೊಂಡು "ಒಳ್ಳೆಯದು.."ಎಂದರು ನಗುತ್ತಾ..(ಮನೆಗೆ ಬಂದವರಲ್ಲಿ ಏನು..ಎಂದು ಕೇಳುವುದು.. ಅವರು ಒಳ್ಳೆಯದು..ಎಂದುತ್ತರಿಸುವುದು ಕರಾವಳಿಯ  ಹವ್ಯಕರ ಪದ್ಧತಿ). ಮೈತ್ರಿಯ ಕಡೆಗೊಂದು ಪ್ರೇಮಭರಿತ ನಗೆಸೂಸಿ  ಶಾಸ್ತ್ರಿಗಳನ್ನು ಉಪಚರಿಸಿದ.. ಶ್ಯಾಮ ಶಾಸ್ತ್ರಿಗಳ ಹತ್ತಿರ ಬಾಗಿ ಸ್ವಲ್ಪ ಮಾತನಾಡಿ ಮಹೇಶನಿಗೆ ಶೇಕ್ ಹ್ಯಾಂಡ್ ಕೊಟ್ಟ..ಶಂಕರ ಶಾಸ್ತ್ರಿಗಳಲ್ಲಿ ಬೆಂಗಳೂರಿನಿಂದ "ಇವತ್ತು ಬಂದ್ರಾ.. ?"ಎನ್ನುತ್ತಾ ಕುಶಲ ವಿಚಾರಿಸಿ ಒಳಗೆ ತೆರಳಿದ..ಒಳ ತಲುಪಿ ಒಮ್ಮೆ ತಿರುಗಿ ನೋಡಿದ.. ಮೈತ್ರಿಯ ನಯನಗಳು ಅವನನ್ನೇ ಹಿಂಬಾಲಿಸುತ್ತಿದ್ದವು..ಇಬ್ಬರ ನಯನಗಳು ಸಂಧಿಸಿದವು..


   ತಿಂಡಿಗೆ ಒಳಗೆ ಕರೆದರು.ಮನೆಯವರೆಲ್ಲರೂ ಸೇರಿ ಬಡಿಸಿದರು .ಸಿಹಿತಿಂಡಿ ಸಾಟು ಬಡಿಸಲು ಕಿಶನ್ ನಿಂತ..ತಂಗಿಯರು ಕಣ್ಸನ್ನೆಯಲ್ಲಿ ತಮ್ಮನಿಗೇನೋ ಹೇಳಿದರು.ಪಂಚೆ ಮೇಲೆತ್ತಿ   ಕಟ್ಟಿಕೊಂಡು ಬಡಿಸುತ್ತಾ ಬಂದವನು ಮೈತ್ರಿಗೆ ಎರಡು ಸಾಟು ಬಡಿಸಿದ್ದ..ತಲೆತಗ್ಗಿಸಿ ಕೆಳಗೆ ನೋಡುತ್ತಿದ್ದ ಮೈತ್ರಿ ಒಮ್ಮೆಲೇ ತಲೆಯೆತ್ತಿದಳು.ಕಣ್ಣಲ್ಲೇ ಪ್ರೀತಿಯಿಂದ ಗದರಿದಳು.

"ತಿನ್ನಲೇ ಬೇಕು" ಎಂದರು ಕಿಶನ್ ತಂಗಿಯರು..
"ಬೇಗ ತಿನ್ನಿ..ಇನ್ನೊಮ್ಮೆ ವಿಚಾರಣೆ ಮಾಡುವಾಗ ಇನ್ನೆರಡು ಬಡಿಸುತ್ತಾರಂತೆ ಭಾವ.."ಎಂದರು ಕಿಶನ್ ನ ಭಾವಂದಿರು.
ಮೈತ್ರಿ ಗೆ ಸಿಹಿ ಇಷ್ಟವೇ.. ಆದರೆ ಇಂದೇಕೋ ಸೀರೆ ಜಾರದಂತೆ ಲಂಗ ಬಿಗಿಯಾಗಿ ಬಿಗಿದು ಆಕೆಗೆ ಆಹಾರ ಸೇವಿಸಲು ಕಷ್ಟವಾಗುತ್ತಿತ್ತು ಪಾಪ..!! ಮೆಲ್ಲನೆ ತಿನ್ನುತ್ತಿದ್ದುದನ್ನು ಕಂಡು ಕಿಶನ್ ಸೋದರತ್ತೆ ಮಮತಾಳಲ್ಲಿ ಉಸುರಿದಳು "ಮದಿಮ್ಮಾಳು(ಮದುಮಗಳು) ಭಾರೀ ನಿಧಾನ.. ಶಾಸ್ತ್ರಿ ಮೇಷ್ಟ್ರಷ್ಟು ಚುರುಕಿಲ್ಲ..ಜೋರಿಲ್ಲ.."
"ಹಾಗೇನಿಲ್ಲ..ಇವತ್ತೇನೋ ಲಜ್ಜೆಯಿಂದ ಹೀಗೆ ಮಾಡುತ್ತಿದ್ದಾಳೆ.."ಎಂದರು ಭಾವೀ ಸೊಸೆಯ ಪರವಾಗಿ..
ಎರಡನೇ ಸಲ ಸ್ವೀಟ್ ತಂದಾಗ ಎಲ್ಲರೂ ಮೈತ್ರಿ ಗೆ ಬಡಿಸು ಕಿಶನ್ ಅಂದರೂ ಆಕೆ ತಿನ್ನಲು ಕಷ್ಟ ಪಡುತ್ತಿದ್ದುದು ನೋಡಿ ಹಾಗೇ ಒಂದು ಸ್ಮೈಲ್ ಕೊಟ್ಟು ಮುಂದೆ ನಡೆದ.. ಇದು ಮೈತ್ರಿ ಗೆ ಬಹಳ ಇಷ್ಟವಾಯಿತು.. 'ನನ್ನನ್ನು ಅರ್ಥಮಾಡಿಕೊಂಡಿದ್ದಾರಲ್ಲ ಅಷ್ಟು ಸಾಕು ನನಗೆ ' ಎನ್ನುವಂತಿತ್ತು ಅವಳ ಮುಖದ ಭಾವ..

      ತಿಂಡಿಯ ಬಳಿಕ ಎಲ್ಲರಿಗೂ ಮನೆ ತೋರಿಸಿದರು ಗಣೇಶ್ ಶರ್ಮ ಮತ್ತು ಕಿಶನ್..ಬಹಳ ವೈಭವೋಪೇತ ವಿಶಾಲ ಮನೆಯಲ್ಲದಿದ್ದರೂ ಹಳ್ಳಿಯ ಮಟ್ಟಿಗೆ ಚೆನ್ನಾಗಿಯೇ ಇತ್ತು.ಕಾವಿ ಸಾರಣೆ ನೆಲದ ಪುಟ್ಟ ಚಾವಡಿ.ಅದಕ್ಕೆ ತಾಗಿಕೊಂಡು ಒಂದು ರೂಮು.ಚಾವಡಿಯಿಂದ ಒಳಗೆ ಒಂದು ದೇವರ ಕೋಣೆ.ನಿತ್ಯವೂ ಸರಳವಾಗಿ ಪೂಜೆ ನಡೆಯುತ್ತದೆ ಎಂದರು ಗಣೇಶ್ ಶರ್ಮ.ಅದರಿಂದ ಒಳಗೆ ಒಂದು ಊಟದ ಪಡಸಾಲೆ.ದೇವರಕೋಣೆಯ ಪಕ್ಕ ಸೌದೆ ಒಲೆಯಲ್ಲಿ ಅಡುಗೆ ಮಾಡುವ ಕೋಣೆ-ಅಟ್ಟುಂಬಒಳ .ಪಡಸಾಲೆಯ ಅಂಚಲ್ಲಿ  ಒಂದು ಪುಟ್ಟ ಕೋಣೆ..ಅದರ ಪಕ್ಕ ಅಟ್ಟಕ್ಕೆ ಹತ್ತಲು ಒಂದು ಮರದ ಏಣಿ.ಅಡಿಕೆ, ತೆಂಗಿನಕಾಯಿ,ಕಾಳುಮೆಣಸು, ತೆಂಗಿನೆಣ್ಣೆ, ಉಪ್ಪಿನಕಾಯಿ ,ದನಗಳಿಗೆ ಹಿಂಡಿ ,ಬೇಡದ ವಸ್ತುಗಳನ್ನು ಇಡುವ ಜಾಗ ಇದುವೇ.. ಎಲ್ಲರೂ ಮೇಲೇರಿದರು.ಮೈತ್ರಿ ಮಾತ್ರ ಸೀರೆಯುಟ್ಟು ಆ ಏಣಿ ಏರಲು ಭಯಪಟ್ಟಳು.ಒಬ್ಬಳೇ ನಿಂತಿರುವೆಯೇಕೆ ಮುದ್ಗೊಂಬೆ ... ಜೊತೆಗೆ ನಾನಿರುವೆ ಎಂಬಂತೆ ಬಂದ ಕಿಶನ್.. ಆಕೆಯನ್ನು   ಚಾವಡಿಯ ಕೋಣೆಗೆ ಕರೆದೊಯ್ದ.. ಮುದ್ದು ಮನಸು .. ನೂರು ಕನಸು...ಎದೆಯೊಳಗೆ ಧುಮ್ಮುಕ್ಕುವ ಭಾವನೆಗಳ ಝರಿ... ಕಿಶನ್ ನ ಅಪರಿಮಿತ ಪ್ರೀತಿಯ ಪರಿ.. ಸಂತೃಪ್ತಿಯ ಹೂನಗೆ ಬೀರಿದಳು ಮೈತ್ರಿ...

"ಮುದ್ಗೊಂಬೆ .. ಕಣ್ಮುಚ್ಚಿ ಬೊಗಸೆ ಮುಂದೆ ಮಾಡು.."

"ಸರಿ... ಆಯ್ತಪ್ಪಾ...ತಂಟೆಮಾಡುವ ತುಂಟನಲ್ಲ ತಾನೇ..?"

"ಇಲ್ಲ...ಅಷ್ಟು ನನ್ನ ಮೇಲೆ ನಂಬಿಕೆ ಇಲ್ವಾ."

"ಕಣ್ಮುಚ್ಚಿದೆ..ಬೊಗಸೆ ಮುಂದೆ ಮಾಡಿ ಆಯ್ತು.. ಪ್ಲೀಸ್ ..ನನ್ನಿಂದ ಹೆಚ್ಚು ಹೊತ್ತು ಕಣ್ಮುಚ್ಚೋಕೆ ಆಗಲ್ಲ..ನನ್ನನ್ನ ಸತಾಯಿಸ್ಬೇಡ..ಕಣೋ.."

ಕೈಯೊಳಗೆ ತಾನು ತಂದಿದ್ದನ್ನ ಇಟ್ಟು "ನಿನ್ನ ಪ್ರತಿ ಹೆಜ್ಜೆಯ ಸಪ್ಪಳದ  ಜೊತೆಗೆ ನಾನಿರುವಾಸೆ..ನನ್ನ ಬಯಕೆ ಈಡೇರಿಸುವೆಯಾ .." ಎಂದು ಕೇಳಿದಾಗ ಕಣ್ಣೊಡೆದಳು ಮೈತ್ರಿ..ಬೊಗಸೆಯೊಳಗೆ ಅವಳು ಬಹಳವೇ ಇಷ್ಟಪಡುತ್ತಿದ್ದ ಬೆಳ್ಳಿಯ ಕಾಲ್ಗೆಜ್ಜೆಯನು ಇಟ್ಟಿದ್ದ ಕಿಶನ್.. ಕಣ್ಣರಳಿಸಿ ನೋಡಿದಳು.. ಎಷ್ಟು ಚೆನ್ನಾಗಿದೆ.."ಅಲ್ಲ... ನಿಂಗೆ ಹೇಗೆ ಇದನ್ನೆಲ್ಲ ಕೊಡೋ ಐಡಿಯಾ ಬಂತು..?"

"ಅದೇ ಪ್ರೀತಿ ಅಂದ್ರೆ... ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳೋದು.. ಒಂದು ಜೀವದ ಮನಸು ಇನ್ನೊಂದು ಜೀವಕ್ಕೆ ಹೇಳದೆಯೇ ತಿಳಿಯೋದು.."

"ಅಬ್ಬಾ.. ಇಷ್ಟೆಲ್ಲಾ ನಂಗೊತ್ತಿಲ್ಲಪ್ಪಾ..ಆದ್ರೆ ನನ್ನ ಕಿಶನ್ ನಾನು ಒಂದಿನ ಮಾತಾಡದಿದ್ರೆ ಬೇಜಾರಾಗ್ತಾನೆ ಅನ್ನುವುದು ಮಾತ್ರ ಗೊತ್ತು.."ಎನ್ನುತ್ತಾ ಕೆನ್ನೆಯ ಮೇಲೊಂದು ಗುಳಿ ಬೀಳುವಂತೆ ನಕ್ಕಾಗ ಸೋತು ಹೋದ ಕಿಶನ್..
ಕಾಲ್ಗೆಜ್ಜೆ ಯನ್ನು ಜೋಪಾನವಾಗಿ ಇಟ್ಟುಕೊಂಡಳು ಮೈತ್ರಿ.. ಎಲ್ಲರೂ ಒಳಬರುವ ಅಂದಾಜು ಸಿಕ್ಕಾಗ ಕಿಶನ್ ಹೊರ ನಡೆದ.. ಮೈತ್ರಿ  ಅಮ್ಮನನ್ನು ಸೇರಿಕೊಂಡಳು..

   ಎಲ್ಲರೂ ಸ್ವಲ್ಪ ಹೊತ್ತು ಮಾತುಕತೆ ನಡೆಸಿ ಆದಷ್ಟು ಬೇಗ ನಿಶ್ಚಿತಾರ್ಥ ಇಟ್ಟುಕೊಳ್ಳೋಣ ಎಂದು ನಿರ್ಧರಿಸಿದರು.ಕಿಶನ್ ಭಾರವಾದ ಹೃದಯದಿಂದ ಮುದ್ಗೊಂಬೆಯನ್ನು ಬೀಳ್ಕೊಟ್ಟನು.. ಎಲ್ಲರೂ ಜೀಪನ್ನೇರಿದರು.. ಮೈತ್ರಿ ಮೊದಲು ಹತ್ತಿ ಹಿಂದೆ ಕುಳಿತಾಗ

"ಅಕ್ಕಾ.. ನೀನು ಕೊನೆಗೆ ಹತ್ತಿ ಬದಿಯ ಸೀಟಿನಲ್ಲಿ ಕುಳಿತುಕೋ..ಒಳಗೆ ಕುಳಿತರೆ ಭಾವನಿಗೆ ಬಾಯ್ ಮಾಡಲು ಕಷ್ಟ.. " ಎಂದಾಗ ನಗುವಿನ ಅಲೆ ಚಿಮ್ಮಿತು... ಕಿಶನ್ ,ಮೈತ್ರಿಯ ಮುಖ ಕೆಂಪೇರಿತು..
ಜೀಪು  ಶಾಸ್ತ್ರೀ ನಿವಾಸದತ್ತ ಸಾಗಿತು..


                 *******


         ಕೇಶವ್ ಇಂದು ಬೆಳಗ್ಗಿನಿಂದ ಸೌಜನ್ಯ ಳೊಡನೆ ಚಾಟ್ ಮಾಡದೆ ಡಲ್ ಆಗಿದ್ದ.ಹೇಗಿದ್ದರೂ ಸಂಜೆ ಮನೆಗೇ ಬರುತ್ತಾಳಲ್ಲ ...💞💞💞💞 ಎಂದು ಬುದ್ಧಿ ಹೇಳುತ್ತಿದ್ದರೂ ಮರ್ಕಟ ಮನಸ್ಸು ಕೇಳುತ್ತಿರಲಿಲ್ಲ.ಅಮ್ಮ "ಸ್ವಲ್ಪ ಸಹಕರಿಸು ಬಾ.." ಅಂದರೆ "ಆಗಲ್ಲ ನನ್ನಿಂದ " ಎಂದು ಸೌಜನ್ಯಳ ಫೊಟೋ ನೋಡುತ್ತಾ ಕುಳಿತ.. ರೊಮ್ಯಾಂಟಿಕ್ ಫೊಟೋಗಳನ್ನು ದೂರದಿಂದ ನೋಡಿದ ಅಮ್ಮಾ..."ಏನೋ ಇದು ನಿನ್ನ ಕೆಲಸ..ನಾವಿಷ್ಟು ನಿನಗಾಗಿ ಹುಡುಗಿ ಹುಡುಕಲು ಕಷ್ಟಪಡುತ್ತಿದ್ದರೆ ನೀನು.....ಹೀಗಾ ಮಾಡೋದು..."ಎಂದು ಕೋಪದಿಂದ ಕೆನ್ನೆಯ ಮೇಲೆ ರಪ್ಪೆಂದು ಬಾರಿಸಿದಳು.

"ಅಮ್ಮಾ.. ನನಗೇಕೆ ಹೊಡೆದೆ.."ದನಿಯೇರಿಸಿದ ಕೇಶವ್.
"ಮತ್ತಿನ್ನೇನು..ಮದುವೆಯಾಗುವ ಹುಡುಗ ಇಂತಹಾ ಕೆಲಸವಾ ಮಾಡೋದು.."

"ನಾನೇನು ಮಾಡಿದೆ ಮಾಡಬಾರದ್ದು.."

"ಇವತ್ತು ಹೆಣ್ಣು ತೋರಿಸೋಕೆ ಬರ್ತಾ ಇದ್ದಾರೆ..ಆದ್ರೂ ನಿಂಗೆ ಯಾಕೆ ಬೇಕು ಅಂತಹ ಅರೆಬರೆ ಬಟ್ಟೆ ತೊಟ್ಟ ಹೆಣ್ಣುಮಕ್ಕಳ ಫೊಟೋ ನೋಡಿ ಆನಂದಿಸುವ ಚಪಲ.."

"ಅಮ್ಮಾ.."ಕೂಗಾಡಿದ ಕೇಶವ್..

ದನಿ ಕೇಳಿ ಬಂಗಾರಣ್ಣ ಮೇಲಿನ ತೋಟದಲ್ಲಿದ್ದವರು ಮನೆಕಡೆಗೆ ಹೆಜ್ಜೆ ಹಾಕಿದರು.
"ಏನಾಯ್ತು... ಏನು ಕೇಶವ್ ನಿನ್ನ ಕೂಗಾಟ."

"ನೋಡೀಂದ್ರೆ.. ಇವತ್ತು ಬರೋರಿಗೆ ಇವನ ಚಪಲ ಎಲ್ಲ ಗೊತ್ತಾದ್ರೆ ನಮ್ಮ ಮರ್ಯಾದೆ ತಾನೇ ಹೋಗೋದು.."

"ಅಪ್ಪಾ.. ನಾನೇನು ಚಪಲಚೆನ್ನಿಗರಾಯ ಅಂತ ಅಂದ್ಕೋಬೇಡಿ.."

"ಮತ್ತೇನೋ ಅಮ್ಮ ಸುಳ್ಳು ಹೇಳ್ತಾಳೆ ಅಂತೀಯಾ..ಅಮ್ಮ ಯಾವತ್ತೂ ಮಗನ ವಿಷಯದಲ್ಲಿ ಇಂತಹಾ ಸುಳ್ಳು ಹೇಳಲ್ಲ ಅಂತ ನಂಗೂ ಗೊತ್ತು.."

ಕೇಶವ್ ಗೆ ಅಪ್ಪ ಅಮ್ಮನನ್ನು ಹೇಗೆ ಸಮಾಧಾನಪಡಿಸಿ ಅರ್ಥಮಾಡಿಸೋದು ಅಂತ ತಿಳಿಯುತ್ತಿಲ್ಲ..ನಿಜ ಹೇಳಿದರೆ ಸೌಜನ್ಯಳ ಬಗ್ಗೆ ತಪ್ಪು ಭಾವನೆ ಬಂದರೆ.. ಸುಳ್ಳು ಹೇಳಿದರೆ ನಾನೇ ತಪ್ಪಿತಸ್ಥ..ಏನು ಮಾಡಲಿ ಎಂದು ಯೋಚಿಸುತ್ತಿದ್ದ..

"ಅಪ್ಪಾ... ಅಮ್ಮಾ...ಅದು..ಅದು..."

"ನೋಡು ಕೇಶವ್..ಆದದ್ದು ಆಯಿತು.. ಸಂಜೆ ನಾಲ್ಕು ಗಂಟೆಗೆ ಅವರೆಲ್ಲ ಬರುತ್ತಾರೆ..ಆಗ ಇಂತಹಾ ಕೆಲಸಗಳೆಲ್ಲ ಬೇಡ.. ಮೊದಲು ಆ ಫೊಟೋಗಳನ್ನು ಡಿಲೀಟ್ ಮಾಡು..
ಲ್ಯಾಪ್ ಟಾಪ್ ಆಫ್ ಮಾಡಿಡು.."ಎಂದ ಅಪ್ಪನ ಗಂಭೀರವಾದ ಮಾತಿಗೆ "ಸರಿ "ಎಂದು ತಲೆಯಲ್ಲಾಡಿಸಿದ..ಫೊಟೋಗಳೆಲ್ಲ ತನಗೆ ಮಾತ್ರ ಸಿಗುವಂತೆ ಸೇವ್ ಮಾಡಿಟ್ಟು "ಎಲ್ಲಾ ಡಿಲೀಟ್ ಮಾಡಿ ಆಯ್ತು" ಎಂದ..

                 *******


           ಕಾರ್ಯಕ್ರಮ ಮುಗಿಸಿ ಅಜ್ಜನ ಮನೆಗೆ ಬಂದ ಸೌಜನ್ಯ ಮತ್ತೆ ಯಾವ ಡ್ರೆಸ್ ಹಾಕಿಕೊಳ್ಳಲಿ ಎಂದು ಯೋಚಿಸುತ್ತಿದ್ದಳು.ಅಮ್ಮ ರೇಖಾ ಮಗಳ ಬಳಿ ಬಂದು "ಮಗಳೇ.. ನಾವು ಹೋಗುತ್ತಿರುವುದು ಹಳ್ಳಿ ಮನೆಗೆ ನೆನಪಿರಲಿ..ಟಸ್ ಪುಸ್ ಇಂಗ್ಲಿಷ್ ಶಬ್ದಗಳನ್ನು ಕಡಿಮೆ ಮಾಡಿ ಆದಷ್ಟು ಹವ್ಯಕಭಾಷೆಯಲ್ಲೇ ಮಾತನಾಡು.ಹೆಸರಿನಲ್ಲಿರುವ ಸೌಜನ್ಯ ಗುಣನಡತೆಯಲ್ಲೂ ಇರಲಿ..ಅದಾಗಲ್ಲ.. ಇದು ಗೊತ್ತಿಲ್ಲ..ಆ ಕೆಲಸ ಮಾಡಲಾರೆ.. ಈ ಪರಿಸರ ಹಿಡಿಸಲ್ಲ..ಎಂದೆಲ್ಲ ಅಪ್ಪಿತಪ್ಪಿಯೂ ಎಂದಿನಂತಹ ನೇರನುಡಿಗಳು ಬೇಡವೇ ಬೇಡ..ಹಳ್ಳಿಯಲ್ಲಿರುವವರು ಎಲ್ಲದಕ್ಕೂ ಹೂಂ.. ಅನ್ನುವ ತಗ್ಗಿಬಗ್ಗಿ ನಡೆಯುವ ಹೆಣ್ಣುಮಗಳನ್ನು ಇಷ್ಟ ಪಡೋದು..ಹಾಂ ನಿಂಗೆ ನೆನಪಿದೆಯಾ .. ಅಮೃತವರ್ಷಿಣಿ ಸೀರಿಯಲ್ ನಲ್ಲಿ ಅಮೃತ ಇದ್ದಳಲ್ಲ ಹಾಗೆ..ಹಾಗಿದ್ರೆ ಒಪ್ತಾರೆ.. ಸ್ವಲ್ಪ ಅವಳಂತೆ ನಟನೆ ಮಾಡೋದು ಕಲಿ..ವರ್ಷಾಳಂತಹ ನಿನ್ನ ಬುದ್ಧಿ ತೋರಿಸಬೇಡ.."

"ಆಗಲಿ ಅಮ್ಮಾ.. ನಾನು ಯಾವ ಡ್ರೆಸ್ ಹಾಕಿಕೊಳ್ಳಲಿ.."

"ಡ್ರೆಸ್ ಬೇಡ..ನಿಂಗೆ ಅಂತ ಒಂದು ಸೀರೆ ತಂದಿದೀನಿ ನೋಡು...ನನ್ನ ಬ್ಯಾಗಲ್ಲಿದೆ....ಇದೇ ಇದೇ ನೋಡು..."

"ಅಯ್ಯೋ..ಇದೇನಮ್ಮಾ.. ಎಷ್ಟೊಂದು ಸಿಂಪಲ್ ನೋ..ನಂಗೆ ಬೇಡ.."
"ಹಾಗೆಲ್ಲ ಅನ್ಬಾರ್ದು ಅಂತ ಈಗ ತಾನೇ ಹೇಳಿದ್ದು ಮರೆತೆಯಾ..ಈಗ ಸಿಂಪಲ್ ಆಗಿ ಇರು.. ನಿನ್ನನ್ನು ಮೆಚ್ಚಿ ಸೊಸೆ ಮಾಡಿಕೊಳ್ತಾರೆ.. ಆಮೇಲೆ  ಕೇಶವ್ ನ ನಿನ್ನ ಬೊಗಸೆಯೊಳಗೆ ಇಟ್ಟುಕೋ.."

"ಸರಿ ಅಮ್ಮಾ.."ಎಂದು ಒಪ್ಪಿದ ಸೌಜನ್ಯ ಸಿಂಪಲ್ ಸೀರೆಯುಟ್ಟು ರೆಡಿಯಾದಳು..


ಮುಂದುವರಿಯುವುದು..

✍️... ಅನಿತಾ ಜಿ.ಕೆ.ಭಟ್.
25-03-2020.


ನಮಸ್ತೇ...

ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ home , > ,view web version ಬಳಸಿಕೊಳ್ಳಬಹುದು.. ಧನ್ಯವಾದಗಳು 💐🙏



Tuesday, 24 March 2020

ಚೈತ್ರದ ಸಂಭ್ರಮ



     


#ಚೈತ್ರದ_ಸಂಭ್ರಮ


ಹಳೆಯ ಭಾವದ ಕದವ
ಮೆಲ್ಲಮೆಲ್ಲನೆ ಸರಿಸಿ
ಚೈತ್ರ ತರುತಿದೆ ಶುಭವ
ಎಲ್ಲನೋವನು ಮರೆಸಿ....||೧||

ಇಬ್ಬನಿಯ ಚಳಿಯಲಿ
ಮುದುಡಿದ ತರುಲತೆಗೆ
ಹೆಬ್ಬಯಕೆ ತೋರುತಲಿ
ಆದರಿಸಿದೆ ವಸಂತನೊಸಗೆ...||೨||

ಆಗಸವು ಮೋಡಗಳು
ಮರೆಯಾಗಿ ಶುಭ್ರತಾನು
ರವಿಯ ಕೆಣಕುವ ಕಿರಣಕೆ
ಭೂರಮೆಯು ನಾಚಿತಾನು...||೩||

ಬೇಗನೆ ಹಸಿರು ಸೀರೆಯನುಟ್ಟು
ನಲಿದಿಹಳು ಧರಣಿದೇವಿ
ಹೂ ಹಣ್ಣು ತುಂಬಿ ಫಲಬಿಟ್ಟು
ಕೆಡುಕನು ಒಳಿತಲಿ ಸುಡುವರವಿ||೪||


ಮಾಮರದ ತುಂಬೆಲ್ಲ ಹಸಿರು
ಮರೆಮಾಚಿ ಸರಿದಿದೆ
ನಸುಗೆಂಪು ತಂಬೆಲರು
ಸೊಂಪಾಗಿ ಚಿಗುರಿದೆ...||೫||

ಕುಕಿಲವು ಹರುಷದಿ
ಮೈಮರೆತು  ಚಿಗುರ ಮೆದ್ದು
ಶಶಿಯು ತೆರಳಲನುವಾದ
ನಿಶೆಯ ಸರಸದಿ ಗೆದ್ದು...||೬||

ಉದಯರಾಗವ ಕುಕಿಲ
ಮನದಣಿಯೆ ಹಾಡಿದೆ
ಹೊಸರಾಗ ಹೊಸಭಾವ
ಭುವಿಬಾನನು ತಣಿಸಿದೆ...||೭||

ಪಂಚಮದ ಇಂಚರದಿ
ನವಗಾನ ಕೇಳಿಸಲಿ
ಪರಪಂಚದ ಜೀವಸಂಚಿಯಲಿ
ನವಚೈತನ್ಯ ಉಕ್ಕಲಿ...||೮||

ತಾಳಲಯವು ಶ್ರುತಿಸೇರಲಿ
ಹಳೆ ಅನುಭವದ ತಿರುಳಿನಲಿ
ಹೊಸಹೆಜ್ಜೆ ಹೊಸ ಕನಸು
ಹಳೆ ಸಿಹಿಕಹಿಯ ನೆರಳಿನಲಿ...||೯||


✍️... ಅನಿತಾ ಜಿ.ಕೆ.ಭಟ್.
25-03-2020.

ಎಲ್ಲರಿಗೂ ಯುಗಾದಿಯ ಹಾರ್ದಿಕ ಶುಭಾಶಯಗಳು 💐

ಸೌಹಾರ್ದ ಬಳಗದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕವನ..





ವಸಂತ-ನುಡಿಗಟ್ಟು



ವಸಂತ

ಚಿಗುರಹೊತ್ತು ಹಸಿರನುಟ್ಟ
ಬಾನಲಿ ಬೆಳ್ಳಿಚುಕ್ಕೆಯಿಟ್ಟು
ಇಂಪು ಕುಕಿಲಗಾನ ವೈಭವ
ಸ್ವಾಗತಕೆ ಸಿದ್ಧ ನವವಸಂತವ...

ದ್ವೇಷ ರೋಷ ಮರೆಯಲಿರಿಸಿ
ಪ್ರೀತಿ ಪ್ರೇಮ ಶೃಂಗಾರಬೆರೆಸಿ
ಹೊಸಗೆಲುವಿಗೆ ತುಂಬಿಚೇತನ
ವಸಂತ ಸಿಹಿಕಹಿಯ ಆಲಿಂಗನ...


✍️... ಅನಿತಾ ಜಿ.ಕೆ.ಭಟ್.
24-03-2020.




ಜೀವನ ಮೈತ್ರಿ-ಭಾಗ ೪೭(47)




ಜೀವನ ಮೈತ್ರಿ-ಭಾಗ ೪೭



    ಬುಧವಾರ ರಾತ್ರಿ ಬೆಂಗಳೂರಿಗೆ ಹೊರಟ ಕಿಶನ್ ಗುರುವಾರ ಮುಂಜಾನೆ ರೂಮಿಗೆ ತಲುಪಿದ ಕೂಡಲೇ ಮೈತ್ರಿ ಗೆ ಸಂದೇಶ ರವಾನಿಸಿದ..

"ಮುದ್ಗೊಂಬೆ....

ನೀ ಸಕ್ಕರೆಯಂತೆ ಸವಿಬೊಂಬೆ
ಕಣ್ಣ ನೋಟದಿ ನಾ ಪುಳಕಗೊಂಬೆ
ನಿನ್ನ ಆಲಾಪಕೆ ನಾ ಭಾವದುಂಬುವೆ
ನನ್ನ ರಾಗಕೆ ನೀ ಸಾಹಿತ್ಯವಾಗುವೆಯಾ..?

ಶಾಸ್ತ್ರಿಗಳ ಶಿಸ್ತಿನ ಗರಡಿಯ
ಪುಟ್ಟ ಪೋರಿ
ಶರ್ಮರ ಅಪ್ಪಟ ತಮಾಷೆಯ
ತುಂಟ ಪೋರ
ಸೇರಿದರೆ ನಕ್ಕು ನಲಿದು ಹಾಡಿದರೆ
ವಿರಹ ದೂರ
ಜೊತೆಯಾಗಿ ಸೇರೋಣ
ಪ್ರಣಯ ತೀರ.."

ಬೆಳ್ಳಂಬೆಳಗ್ಗೆ ಕಿಶನ್ ನ ಸಂದೇಶ ಓದಿದ ಮೈತ್ರಿ  ತಡೆಯಲಾರದೆ ...

"ಕದಿರೊಡೆದಿದೆ ಶಾಸ್ತ್ರಿಗಳ
ಅಂಗಳದ ಹೂವು
ಅಧರದಲಿ ತುಂಬಿ
ಸಿಹಿಜೇನ ಹನಿ..

ಮಧು ಹೀರುವ
ಶರ್ಮ ಸುಕುಮಾರ
ಇದಿರುಗೊಳುವೆಯಾ
ಸಹಿಹಾಕಿ ಈ ಪುಷ್ಪವಾ..."

ಕಿಶನ್ ರೊಮ್ಯಾಂಟಿಕ್ ಮೂಡ್ ಗೆ ಜಾರಿದ.ಇನ್ನು ಕೆಲವೇ ದಿನಗಳಲ್ಲಿ ಮೈತ್ರಿ ತನ್ನವಳಾಗುತ್ತಾಳೆ ಎಂಬ ಕನವರಿಕೆಯಲ್ಲಿ ಫ್ರೆಶ್ ಆಗಿ ಆಫೀಸಿಗೆ ಹೊರಡತೊಡಗಿದ..


                     ******

       ನೋಡ ನೋಡುತ್ತಿದ್ದಂತೆ ಭಾನುವಾರ ಬಂದೇಬಿಟ್ಟಿತು.ಭಾಸ್ಕರ ಶಾಸ್ತ್ರಿಗಳು ಬೆಳಿಗ್ಗೆ ಬೇಗನೇ ಎದ್ದು ಮನೆಯ ಕೆಲಸಗಳಲ್ಲಿ ನೆರವಾದರು.ದನದ ಹಾಲು ಹಿಂಡಿ ಒಳಗೆ ತಂದಿಟ್ಟರು.
ಮಹಾಲಕ್ಷ್ಮಿ ಅಮ್ಮ "ಇವತ್ತು ಶಶಿ ಬರುತ್ತಾಳೋ ಇಲ್ಲವೋ ಫೋನು ಮಾಡಬೇಕಿತ್ತು.."ಎಂದು ಅಲವತ್ತುಕೊಂಡರು.

"ಮೊನ್ನೆಯೇ ಹೇಳಿದ್ದೇನೆ.ಬರುವುದಿದ್ದರೆ ದಾರಿಮಧ್ಯೆ ಸಿಗಬೇಕಾದ ಸಮಯ ಸ್ಥಳ ಎಲ್ಲವನ್ನೂ ತಿಳಿಸಿ ಆಗಿದೆ."ಎಂದು ಗಂಭೀರವಾಗಿ ನುಡಿದರು.

ಅಷ್ಟರಲ್ಲಿ ಶಂಕರನ ಫೋನ್ ಬಂತು.."ನಾನು ಮತ್ತು ಗಾಯತ್ರಿ ಅರ್ಧ ಗಂಟೆ ಯಲ್ಲಿ ತಲುಪುತ್ತೇವೆ.." ಎಂದು.ಮಹಾಲಕ್ಷ್ಮಿ ಅಮ್ಮನಿಗೆ ಸ್ವಲ್ಪ ಸಮಾಧಾನ ಆಯ್ತು.ಸಾವಿತ್ರಿ ಹೋಗಿಬರಲೇ ಎಂದಾಗ..
." ದನ ಕರು ಹಾಕುವ ಸಾಧ್ಯತೆ ಇದೆ ...ಹೋಗಬೇಡ" ಎಂದಿದ್ದನಂತೆ ಗಂಡ..

"ನೀವು ಅನುಭವಸ್ಥರು ತಾನೇ..ಕರು ಹಾಕಿದರೆ ದನ ಕಸ ಹೊರಗೆ ಹಾಕಿದಾ ಇಲ್ವಾ ಗಮನಿಸಿ.ಆಮೇಲೆ ಸ್ವಲ್ಪ ಕಾಳುಮೆಣಸು ಪುಡಿ ಮಾಡಿ ಕೊಡಿ"ಎಂದು ಹೇಳಿ ಗಡಿಬಿಡಿಯಲ್ಲಿ ಹೊರಡಲು ಸನ್ನದ್ಧಳಾಗಿದ್ದಳು.


    ಮೈತ್ರಿ ಗುಲಾಬಿ ಬಣ್ಣದ ಸೀರೆಯುಟ್ಟು ಅದಕೊಪ್ಪುವ ಬಳೆಗಳನ್ನು ಹಾಕಿಕೊಂಡು ಹಣೆಗೆ ಎದ್ದು ಕಾಣುವಂತಹ ಬಿಂದಿ ತೊಟ್ಟು ..ಮುಂಗುರುಳಿನ ಎರಡು ಎಳೆಯನ್ನು ಹಾಗೆಯೇ ಬಿಟ್ಟು .. ಉದ್ದವಾದ ಜಡೆಹೆಣೆದು ಮಲ್ಲಿಗೆ ಮುಡಿದಿದ್ದಳು.

ಅಜ್ಜಿ ಬಂದವರೇ.."ಇದು ಎಂತ ಪುಳ್ಳೀ..ಕೂದಲೆಲ್ಲ ಎದುರು ಹಾಗೇ ಬಿಟ್ಟಿದೆ..ಅಯ್ಯೋ ತಲೆ ಬಾಚುಲೆ ಬತ್ತಿಲ್ಯಾ ಕೂಸೇ.." ಎಂದು ರಾಗ ಎಳೆದರು.ಮಹೇಶ ಬಂದವನೇ ಅಕ್ಕನನ್ನು ಒಮ್ಮೆ ದಿಟ್ಟಿಸಿ..

"ಹೋಗಜ್ಜಿ..ನಿಂಗಷ್ಟೂ ಗೊತ್ತಾಗಲ್ವಾ...ಭಾವೀ ಭಾವ ಮಾತನಾಡಿಸ್ಬೇಕಾದ್ರೆ ನಾಚ್ಕೊಂಡು ಕೂದಲು ತಿರುವೋಕೆ ಬೇಕಾಗುತ್ತಲ್ಲ...ಅದ್ಕೇ..ಬಿಟ್ಕೊಂಡಿದಾಳೆ...ನೀವೊಬ್ರು..ಓಬೀರಾಯನ ಕಾಲದ ಅಜ್ಜಿ..!!!!"

"ಹಾಗೂ ಉಂಟಾ..ಏನಪ್ಪಾ..ನಂಗೊಂದೂ ಗೊತ್ತಿಲ್ಲಪ್ಪಾ.."

"ನಿಂಗೆ ಗೊತ್ತಿರೋಕೆ ನೀನು ಹಾಗೆ ನಾಚ್ಕೊಳ್ಳೋ ಸಂದರ್ಭ ಬಂದಿದ್ರೆ ತಾನೇ..ನೀನು ನನ್ನನ್ನ; ನಾನು ನಿನ್ನನ್ನ ನೋಡಿದ್ದು ಮದುವೆ ಮಂಟಪದಲ್ಲೇ " ಎಂದು ಶ್ಯಾಮ ಶಾಸ್ತ್ರಿಗಳು ಹೇಳಿದಾಗ ಅಜ್ಜಿ...

"ಸಾಕು ಹೋಗ್ರೀ..ಈಗಿನ ಕಾಲದ ಮಕ್ಳ ಮುಂದೆ ಅದನ್ನೆಲ್ಲ ಹೇಳ್ಬೇಡಿ..ನಂಗೂ ನಾಚ್ಕೆ ಆಗುತ್ತೆ.."ಎಂದಾಗ

"ಅಯ್ಯಪ್ಪಾ..ನನ್ನಜ್ಜಿ ನಾಚ್ಕೊಂಡ್ರೆ ಎಷ್ಟು ಮುದ್ದಾಗಿ ಕಾಣ್ತಾರಪ್ಪಾ .". ಎಂದು ಮಹೇಶ್ ಅಜ್ಜಿಯ ಕೆನ್ನೆ ಬಲವಾಗಿ ಹಿಂಡಿದ..ಅಜ್ಜಿಯ ಹಲ್ಲಸೆಟ್ ಬೀಳುವುದರಲ್ಲಿತ್ತು..

  ಶಂಕರ ಗಾಯತ್ರಿಯೂ ಬಂದರು.ಎಲ್ಲರೂ ತಿಂಡಿ ತಿಂದು ಏಳೂವರೆಗೆ ಮನೆಯಿಂದ ಹೊರಟರು.ದಾರಿಮಧ್ಯೆ ಮಂಗಳಾಳ ಅಣ್ಣ ಬಾಲಕೃಷ್ಣ,ತಂಗಿ ಗಂಗಾ ಹಾಗೂ ಮೈತ್ರಿಯ ಸೋದರತ್ತೆ ಸಾವಿತ್ರಿ ಸಿಕ್ಕರು.ಶಶಿ ಸಿಗುವಳೋ ಏನೋ ಎಂದು ಮಹಾಲಕ್ಷ್ಮಿ ಅಮ್ಮ ಕೊರಳುದ್ದ ಮಾಡಿದರು.ಅವರು ಬರಲೇಯಿಲ್ಲ.

         ಸಾವಿತ್ರಿಗೆ ತಾನು ಬಂದರೂ ಅಮ್ಮ ಅಷ್ಟಾಗಿ ಪ್ರೀತಿಯಿಂದ ಮಾತನಾಡಿಸದೆ ಶಶಿಯನ್ನೇ ಕೇಳುವುದು ತುಸು ಬೇಸರತಂದಿತ್ತು. ಮಂಗಳಮ್ಮನಿಗೂ ಅತ್ತೆ ಅತಿಯಾಗಿ ಶಶಿಯತ್ತಿಗೆಯನ್ನೇ ಹಚ್ಚಿಕೊಳ್ಳುವುದು ಸರಿಕಾಣಲಿಲ್ಲ..ಅತ್ತೆಯೊಡನೆ..."ಬಾರದ ಮಗಳಿಗಾಗಿ ಅಲವತ್ತುಕೊಳ್ಳುವುದಕ್ಕಿಂತ ಬಂದವರನ್ನು ಪ್ರೀತಿಯಿಂದ ಆದರಿಸುವುದು ಒಳ್ಳೆಯದು "ಎಂದರು ಮಂಗಳಾ.ಮಹಾಲಕ್ಷ್ಮಿ ಅಮ್ಮನಿಗೆ ಶಶಿ ಬುದ್ಧಿವಂತೆ,ಈಗ ಸಾಕಷ್ಟು ಸಿರಿವಂತೆ ಕೂಡಾ ಎಂಬ ಹೆಮ್ಮೆ.ಅವಳ ದೌಲತ್ತಿನೆದುರು ಸಾವಿತ್ರಿಯನ್ನು ಕಡೆಗಣಿಸುವ ಅಭ್ಯಾಸ...ಶಶಿ ಅವರ ಬುದ್ಧಿ ಚಾತುರ್ಯವನ್ನು ಒಳ್ಳೆಯದಕ್ಕೆ ಬಳಸುತ್ತಾರೋ ಅಲ್ಲ ತವರಿನ ವಿರುದ್ಧ ಸೇಡುತೀರಿಸಲು ಬಳಸುತ್ತಾರೋ ಎಂಬ ಸೂಕ್ಷ್ಮ ಇಳಿಜೀವಕ್ಕಂತೂ ಅರ್ಥವಾಗುವುದಿಲ್ಲ. ಕಣ್ಣೆದುರಿರುವ ಸಾವಿತ್ರಿಯ ಪ್ರೀತಿಗೆ ಕುರುಡಾಗಿ ಕಾಣದಿರುವ ಶಶಿಯನ್ನು ಬಯಸಿ ಸೇಡಿಗೆ ಬಲಿಯಾಗುತ್ತಾರಾ...? ಕಾಲವೇ ನಿರ್ಧರಿಸಬೇಕು..



                  *******

        ಕುಂಪೆಯಲ್ಲಿರುವ ಶರ್ಮರ ಮನೆ
"ಶಂಕರ ನಿಲಯ" ಇಂದು ನೆಂಟರಿಂದ ತುಂಬಿತ್ತು.ಕಿಶನ್ ಬೆಳಿಗ್ಗೆ ಬೇಗನೆದ್ದು ಅಮ್ಮ ಅಪ್ಪನಿಗೆ ಎಲ್ಲದಕ್ಕೂ ಸಹಕರಿಸಿದ್ದ.ಮೇದಿನಿ ಹಾಗೂ ಅವಳ ಗಂಡ ಶನಿವಾರವೇ ಆಗಮಿಸಿದ್ದರು.ಚಾಂದಿನಿ ಬೆಳಿಗ್ಗೆ ಗಂಡ ಹಾಗೂ ಮಾವನೊಂದಿಗೆ ಬಂದಳು.ಮೇದಿನಿಯ ಮಾವ ಅತ್ತೆ ಕೂಡ ಆಗಮಿಸಿದರು.ಕಿಶನ್ ನ ಸೋದರ ಮಾವ ಸೋದರತ್ತೆಯರು ಆಗಮಿಸಿದ್ದರು. ಎಲ್ಲರೂ ಸಹಕರಿಸಿ ಕಾಫಿ ತಿಂಡಿಯ ವ್ಯವಸ್ಥೆ ಮಾಡಿದ್ದರು.ಎಂಟುಗಂಟೆಯಾದರೂ ಇನ್ನೂ ನಿತ್ಯದ ಉಡುಗೆ ಕಂಬಾಯಿಯಲ್ಲೇ ಇದ್ದು ಕೆಲಸ ಮಾಡುತ್ತಿದ್ದ ಅಣ್ಣನನ್ನು ತಂಗಿಯಂದಿರು ಆಕ್ಷೇಪಿಸಿದರು."ಮೊನ್ನೆ ಭಾವೀ ಅತ್ತಿಗೆ ಎಷ್ಟು ಚೆನ್ನಾಗಿ ಹೊರಟು ನಿಂತಿದ್ದರು.. ನೀನು ನೋಡಿದ್ರೆ ಹೀಗಿದ್ದೀಯಾ..!!!"

"ನಂಗೆ ಸಾಕು ಇಷ್ಟು.."

"ಹಾಗಂದ್ರೆ ಆಗಲ್ಲ.".... ಎಂದು ಹೇಳಿ ಅಣ್ಣನಿಗೆ ಚಂದ ಶೇವಿಂಗ್ ಮಾಡಲು ಹೇಳಿ ಸ್ನಾನದ ನಂತರ ಪಂಚೆ ಶಲ್ಯ ಉಡಲು ಕೊಟ್ಟು ಪೌಡರ್ ಹಾಕಿಸಿ ಅಣ್ಣನನ್ನು ಇಬ್ಬರು ತಂಗಿಯರೂ ಹೊರಡಿಸಿದ್ದರು .."ಅಲ್ಲಾ ಈ ಪ್ರೇಮಿಗೆ ಇಷ್ಟು ಉದಾಸೀನ ಯಾಕೋ ಇಂದು.."ಕಾಲೆಳೆದಿದ್ದ ಭಾವ..
"ನಮ್ಮನೇಲಿ ನಾವು ಹೀಗೇ ಇರೋದು ಅಂತ ತೋರಿಸ್ಕೊಳ್ಳೋಣ ಅಂತ.."

"ಅವರೂ ಅವರ್ಮನೇಲಿ ಸಿಂಪಲ್ಲಾಗೇ ಇರ್ತಾರೆ .. ಯಾರಾದ್ರೂ ಬರ್ತಾರೆ ಅಂದಾಗ ಸ್ವಲ್ಪ ಡ್ರೆಸ್ಸಿಂಗ್ ಸೆನ್ಸ್ ಇರಬೇಕು ಭಾವ"..ಎಂದ ಇನ್ನೊಬ್ಬ ಭಾವ..


"ಲವ್ ಮಾಡಿ ಸೆಟ್ ಆಗೋದು ಗ್ಯಾರಂಟಿ ಅಂತ ಗೊತ್ತಾದಾಗ ಒಂಥರಾ ಓವರ್ ಕಾನ್ಫಿಡೆನ್ಸ್ ನಮ್ಮ ಮಾಣಿಗೆ.." ಎಂದು ಸೋದರ ಮಾವ ಅಂದಾಗ ಎಲ್ಲರೂ ನಕ್ಕಿದ್ದರು..

'ಕಿಶನ್... ಹುಷಾರು.. ಅವರು ಇವತ್ತು ಮಾಣಿ ಮನೆ ನೋಡಿ ...ಎಲ್ಲಾ ಅಳೆದು ತೂಗಿ ಉತ್ತರ ಹೇಳೋದು..ಬಿ ಕೇರ್ ಫುಲ್..ಶಾಸ್ತ್ರಿ ಮೇಷ್ಟ್ರು ತುಂಬಾ ಸ್ಟ್ರಿಕ್ಟ್... ಫುಲ್ ಮಾರ್ಕ್ಸ್ ಕೊಡೋದು ಅಪರೂಪ.." ಎಂದರು ಸೋದರತ್ತೆ..ಅವರ ಮಗ ಶಾಸ್ತ್ರಿಗಳ ವಿದ್ಯಾರ್ಥಿಯಂತೆ..


      ಕಿಶನ್ ಹಣೆಯಲ್ಲಿ ಮೂರು ವಿಭೂತಿ ನಾಮವೆಳೆದ.ಆಜ್ಞಾಚಕ್ರದ ಮೇಲೊಂದು
ಪುಟ್ಟ ತಿಲಕವಿಟ್ಟ.ಕಿವಿಯ ಮೇಲೆ ಒಂದು ತುಂಡು ತುಳಸಿ ಪತ್ರೆ ಇಟ್ಟುಕೊಂಡ. ಸಂಧ್ಯಾವಂದನೆ , ಪೂಜೆ ಮಾಡಿ ಇಟ್ಟುಕೊಳ್ಳಬೇಕಾದ್ದಿದು.ಮೊದಲೆಲ್ಲ ನಿಯತ್ತಾಗಿ ಎರಡು ಹೊತ್ತು ಸಂಧ್ಯಾವಂದನೆ ಮಾಡುತ್ತಿದ್ದ..ಇಂದು ಇವನು ಗಾಯತ್ರಿ ಜಪ ಮಾಡಿದ್ದಾನೋ ಇಲ್ಲ ,ಮೈತ್ರಿ ಜಪವನ್ನೇ ಮಾಡಿದ್ದಾನೋ ಯಾರಿಗೂ ತಿಳಿಯದು.. ಆದರೆ ಇವೆಲ್ಲ ಇಂದು ವಿರಾಜಮಾನವಾಗಿದ್ದವು. ತೆಂಗಿನೆಣ್ಣೆಯನ್ನು ತಲೆಗೆ ಹಚ್ಚಿ ಚೆನ್ನಾಗಿ ಕೂದಲನ್ನು ಕ್ರಾಪ್ ಬಾಚಿದ್ದ.
ಕಿಶನ್ ಈಗ ಅಪ್ಪಟ ಹವ್ಯಕ ಮಾಣಿಯಾಗಿ ಎಲ್ಲರನ್ನೂ ಒಂದೇ ಲುಕ್ ನಲ್ಲಿ ಸೆಳೆಯುವಂತೆ ರೆಡಿಯಾದ..

 
       ಗೋಡೆಯ ಮೇಲಿನ ಮೂವತ್ತು ವರ್ಷ ಹಿಂದಿನ ಗಡಿಯಾರ ಡೈಂ ಡೈಂ ಎಂದು ಒಂಭತ್ತು ಗಂಟೆ ಬಡಿಯಿತು.ಆ ಶಬ್ದ ಎಲ್ಲರ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು.ಮನೆಯಂಗಳದಲ್ಲಿ ಜೀಪು ಬಂದು ನಿಂತಿತು.

                  *******

           ಶಶಿ ಇತ್ತೀಚೆಗೆ ಹೇಳಿಕೆ ಬಂದ ಕಾರ್ಯಕ್ರಮಗಳಿಗೆಲ್ಲ ಹೋಗುತ್ತಿದ್ದಳು.ತನ್ನ ಮಗ ಮುರಲಿಗಾಗಿ ಕೂಸು ಹುಡುಕುತ್ತಿದ್ದಳು.ಮಾಹಿತಿ ಕಲೆ ಹಾಕುತ್ತಿದ್ದಳು.ಈ ವಿಷಯದಲ್ಲಿ ಅವಳ ಗಂಡನಿಗಿಂತ ಅವಳದೇ ಒಂದು ಹೆಜ್ಜೆ ಮುಂದೆ.. ಒಟ್ಟಾರೆಯಾಗಿ ಮೈತ್ರಿಯನ್ನು ಮೀರಿಸುವ ಹುಡುಗಿಯ ಹುಡುಕಾಟದ ಜಿದ್ದಿಗೆ ಬಿದ್ದಿದಳು.ಈ ದಿನ ಎರಡು ಮದುವೆಯ ಕಾರ್ಯಕ್ರಮ ಇದ್ದಿತು.ಒಂದು ಕಾರ್ಯಕ್ರಮದಲ್ಲಿ ಕಾಫಿ ಕುಡಿದು ಇನ್ನೊಂದರಲ್ಲಿ ಊಟಮಾಡುವ ಪ್ಲಾನ್ ಹಾಕಿಕೊಂಡು ಹೊರಟಿದ್ದರು ಶಶಿ ದಂಪತಿ.


    ಮದುವೆ ಮನೆಯಲ್ಲಿ ಎಲ್ಲರೂ ಚೆನ್ನಾಗಿ ಮಾತನಾಡಿ ತಿಂಡಿ ತಿನ್ನಲು ಹೇಳಿದರು.ತಿನ್ನಲೆಂದು ಕುಳಿತರು.ಅಲ್ಲೇ ಅವರೆದುರು ಮದುಮಗಳ ಗೆಳತಿಯರು ಕುಳಿತಿದ್ದರು.ಶಶಿ ಚುರುಕಾದಳು.ಮಧ್ಯದವಳು ಚೆನ್ನಾಗಿದ್ದಾಳೆ.ಯಾರು ಏನು ಎಂದು ವಿಚಾರಿಸಿಕೊಳ್ಳಬೇಕು ಎಂದು ಗಂಡನಲ್ಲಿ ಪಿಸುಗುಟ್ಟಿದಳು.ತಿಂಡಿ ತಿಂದು ಕೈತೊಳೆಯಲು ತೆರಳಿದಾಗ ಆ ಯುವತಿಯರೂ ಬಂದಿದ್ದರು..ಕೈ ತೊಳೆದು ಒದ್ದೆ ಕೈಯನ್ನು ಟವೆಲ್ ನಲ್ಲಿ ಒರೆಸುತ್ತಾ ಆ ಯುವತಿಯಲ್ಲಿ ಕೇಳಿದಳು
"ನೀನು ಎಂತ ಮಾಡ್ತಾ ಇದ್ದೆ...??"
ಆಕೆ ಏನೂ ಹೇಳದೆ ಸುಮ್ಮನೆ ಗೆಳತಿಯರ ಮುಖ ನೋಡಿ ಮುಸಿ ಮುಸಿ ನಕ್ಕಳು..
ಹಠ ಬಿಡದ ಶಶಿ "ನಿನ್ನ ಅಪ್ಪನ ಹೆಸರೆಂತ..?"ಕೇಳಿದರು..

"ಸುಧಾಕರ ರೈ...ಕಂಬಾರಗುತ್ತು.."ಎಂದಾಗ ಶಶಿಯ ಮುಖ ಇಂಗು ತಿಂದ ಮಂಗನಂತಾಗಿತ್ತು..ಮದುಮಗಳು ತನ್ನ ಹಾಸ್ಟೆಲ್ ರೂಂಮೇಟ್ ಯುವತಿಯರನ್ನು ಪ್ರೀತಿಯಿಂದ ಆಮಂತ್ರಿಸಿದ್ದಳು...

"ತವರಿವರ ಜೊತೆ ಮಾಣಿಮನೆ ನೋಡಲು ಹೋಗು ಎಂದರೆ ಹೋಗಲಿಲ್ಲ.ನನ್ನ ಜೊತೆ ಮದುವೆಗೆ ಬರುತ್ತೇನೆ ಎಂದೆ..ಇಲ್ಲಿ ನನ್ನ ಮರ್ಯಾದೆ ತೆಗೆಯುವ ಕೆಲಸ ಮಾಡದೆ ತೆಪ್ಪಗೆ ಇರು..." ಎಂದು ಗಂಡ ಗರಂ ಆಗಿ ಶಶಿಗೆ ಹೇಳಿದರು..

ಪೆಚ್ಚುಮೋರೆ ಹಾಕಿದ ಶಶಿ 'ನನಗಿದೆಲ್ಲ ಬೇಕಿತ್ತಾ..? 'ಎಂದು ತನ್ನನ್ನೇ ಪ್ರಶ್ನಿಸಿಕೊಂಡಳು.

                  ******


       ಕೇಶವ್ ಇಂದು ಬೆಳಗ್ಗಿನಿಂದ ಸೌಜನ್ಯ ಳೊಡನೆ ಚಾಟ್ ಮಾಡದೆ ಡಲ್ ಆಗಿದ್ದ.ಹೇಗಿದ್ದರೂ ಸಂಜೆ ಮನೆಗೇ ಬರುತ್ತಾಳಲ್ಲ ...💞💞💞💞 ಎಂದು ಬುದ್ಧಿ ಹೇಳುತ್ತಿದ್ದರೂ ಮರ್ಕಟ ಮನಸ್ಸು ಕೇಳುತ್ತಿರಲಿಲ್ಲ.ಅಮ್ಮ ಸ್ವಲ್ಪ ಸಹಕರಿಸು ಬಾ.. ಅಂದರೆ ಆಗಲ್ಲ ನನ್ನಿಂದ ಎಂದು ಸೌಜನ್ಯಳ ಫೊಟೋ ನೋಡುತ್ತಾ ಕುಳಿತ.. ರೊಮ್ಯಾಂಟಿಕ್ ಫೊಟೋಗಳನ್ನು ದೂರದಿಂದ ನೋಡಿದ ಅಮ್ಮಾ..."ಏನೋ ಇದು ನಿನ್ನ ಕೆಲಸ..ನಾವಿಷ್ಟು ನಿನಗಾಗಿ ಹುಡುಗಿ ಹುಡುಕಲು ಕಷ್ಟಪಡುತ್ತಿದ್ದರೆ ನೀನು.....ಹೀಗಾ ಮಾಡೋದು..."ಎಂದು ಕೋಪದಿಂದ ಕೆನ್ನೆಯ ಮೇಲೆ ರಪ್ಪೆಂದು ಬಾರಿಸಿದಳು.

ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
24-03-2020.

Monday, 23 March 2020

ಜೀವನ ಮೈತ್ರಿ-ಭಾಗ ೪೬(46)




ಜೀವನ ಮೈತ್ರಿ-ಭಾಗ ೪೬


        ಜೋಯಿಸರ ಒಪ್ಪಿಗೆ ಸಿಕ್ಕಿದ್ದೇ ತಡ ಬಂಗಾರಣ್ಣ ಶೇಷಣ್ಣನಿಗೆ ಕರೆಮಾಡಿ ತಿಳಿಸಿದರು."ಈ ಆದಿತ್ಯವಾರವೇ ಹುಡುಗಿ ನೋಡಲು ಬರಲು ನಾವು ತಯಾರಿದ್ದೇವೆ" ಎಂದು ಹೇಳಿದ್ದರು.ಶೇಷಣ್ಣ ಬೆಂಗಳೂರಿಗೆ ಕರೆಮಾಡಿ ಸೌಜನ್ಯಳ ಹೆತ್ತವರೊಂದಿಗೆ ಮಾತನಾಡಿದ ನಂತರ ಬಂಗಾರಣ್ಣನಿಗೆ

"ಈ ಭಾನುವಾರ ನೀವು ಹುಡುಗಿ ನೋಡಲು ಹೋಗುವುದು ಬೇಡ....ಅವರೇ ಈ ಊರಿಗೆ ಪೂಜಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬರುತ್ತಿದ್ದಾರೆ."

"ಹಾಗಾದರೆ ಮುಂದಿನ ವಾರದವರೆಗೆ ಕಾಯಬೇಕಷ್ಟೇ.. ಅಲ್ವಾ"

"ಬಂಗಾರಣ್ಣ.... ನಿಮಗೇನೂ ಅಭ್ಯಂತರವಿಲ್ಲದಿದ್ದರೆ ಹುಡುಗಿಯ ಅಜ್ಜಿ ಮನೆ ಇಲ್ಲೇ ಸಮೀಪ..ಭಾನುವಾರ ನರಸಿಂಹ ರಾಯರ ಕುಟುಂಬ ಅಲ್ಲಿಗೆ ಭೇಟಿಕೊಡುತ್ತದೆ.ಆಗ ಕೂಸುನೋಡಲು ಬರಬಹುದು.. ಎಂದು ನರಸಿಂಹ ರಾಯರ ಕೇಳಿಕೊಂಡಿದ್ದಾರೆ"
"ಅದೂ...ಅದೂ..."

"ನಿಮಗೆ ಇಷ್ಟವಿಲ್ಲದಿದ್ದರೆ ಬೇಡ ಬಿಡಿ... ಬೇಕಾದರೆ ಅವರು ನಿಮ್ಮನೆಗೇ ಬಂದು ಕನ್ಯೆ ತೋರಿಸಲು ತಯಾರಿದ್ದಾರಂತೆ.. "

"ಅದು ಆಗಬಹುದು ಶೇಷಣ್ಣ... ಭಾನುವಾರ ನರಸಿಂಹ ರಾಯರ ಕುಟುಂಬ ನಮ್ಮನೆಗೇ ಬರಲಿ..."

"ಹಾಗೇ ಆಗಲಿ..ಬಂಗಾರಣ್ಣ.. ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಅವರನ್ನು ಕರೆದುಕೊಂಡು ಬರುತ್ತೇನೆ."

"ಆಗಬಹುದು..ಶೇಷಣ್ಣ..ನಿಮ್ಮ ಉಪಕಾರವನ್ನು ಎಂದೆಂದಿಗೂ ಮರೆಯಲಾರೆ.."

"ಅಷ್ಟೆಲ್ಲಾ ದೊಡ್ಡ ಮಾತು ಬೇಡ ಬಂಗಾರಣ್ಣ.. ಇದು ನೀವೇನೂ ಅಂದುಕೊಳ್ಳುವುದಿಲ್ಲ ಅಂದರೆ ಒಂದು ಮಾತು..."

"ಅದೇನು ಹೇಳಿ...ಶೇಷಣ್ಣ ಸಂಕೋಚವೇತಕೆ..?"

"ಸೌಜನ್ಯ ಓದಿದ ಹುಡುಗಿ ಪಟ್ಟಣದಲ್ಲಿ ಬೆಳೆದವಳು.ಬಹಳ ನಯನಾಜೂಕಿನ ರೂಪವತಿ.. ಹಾಗಾಗಿ ಕೇಶವ್ ಕೂಡಾ ಸ್ವಲ್ಪ ಅವಳಿಗೆ ತಕ್ಕಂತೆ ನಡತೆಯಲ್ಲಿ ನಯವಿನಯ ತೋರಿಸಿದರೆ ಒಳ್ಳೇದು"

"ಆಗ್ಲಿ..ಶೇಷಣ್ಣ..ನಿಮ್ಮ ಕಳಕಳಿ ನನಗೆ ಅರ್ಥವಾಗುತ್ತದೆ.ಮೊನ್ನೆ ನೀವು ಬಂದಾಗ ಎಲ್ಲೋ ಹೋಗಿ ಬಂದಿದ್ದ.. ಹಾಗಾಗಿ ಸ್ವಲ್ಪ ಒರಟಾಗಿ ಕಂಡದ್ದಷ್ಟೇ ... ನಿಜವಾಗಿಯೂ ಒರಟನಲ್ಲ..ಒಳ್ಳೆ ಹುಡುಗ..ಚೂರೂ ದುರ್ಬುದ್ಧಿ, ಕೆಟ್ಟ ಚಾಳಿ ಇಲ್ಲ..ಈ ಬಂಗಾರಣ್ಣನ ಮಗ ಬಂಗಾರದಂತಹ ಹುಡುಗ..."

"ಅದು ಗೊತ್ತಿಲ್ವೇ ನಂಗೂ... ಹಾಗಾಗಿಯೇ ನಿಮ್ಮ ಮಗನಿಗೆ ಒಂದೊಳ್ಳೆ ಸಂಬಂಧ ಮಾಡಲು ಹೊರಟಿದ್ದು..."

"ಹ್ಹ ಹ್ಹ ಹ್ಹ ಹ್ಹಾ... ಹಾಗಾದರೆ ಇನ್ನು ಭಾನುವಾರ ನಮ್ಮ ಮಾತುಕತೆ...."ದೇಶಾವರಿ ನಗೆಬೀರಿ ಫೋನಿಟ್ಟ ಬಂಗಾರಣ್ಣ..


                      *****

     ಶಾಸ್ತ್ರೀ ನಿವಾಸದಲ್ಲಿ ಶರ್ಮ ಕುಟುಂಬ ಬಂದು ಹೋದ ನಂತರ ಅವರ ಬಗ್ಗೆ ಚರ್ಚೆ ಮಾತುಕತೆಗಳು ನಡೆಯುತ್ತಿದ್ದವು.ಎಲ್ಲರಿಗೂ ಊಟಕ್ಕೆ ತಯಾರಿ ಮಾಡಿದ ಅಡಿಗೆ ಕಿಟ್ಟಣ್ಣ.. ಪದಾರ್ಥಗಳನ್ನು ಮುಚ್ಚಿಟ್ಟು ಸ್ನಾನ ಮಾಡಿ ಬಂದ ಕಿಟ್ಟಣ್ಣ ಭಾಸ್ಕರ ಶಾಸ್ತ್ರಿಗಳನ್ನು ಕರೆದು "ನೋಡಿ ಶಾಸ್ತ್ರಿಗಳೇ ...ಈ ಶರ್ಮರು ಭಾರೀ ಒಳ್ಳೆ ಮನುಷ್ಯ.. ನಾನು ಎರಡು ವರ್ಷಗಳ ಹಿಂದೆ ಇವರ ಮನೆಗೆ ಅಡುಗೆಗೆ ಹೋಗಿದ್ದೆ.. ಮತ್ತೆ ಇವರ ಹಿರಿಯಮೂಲ ಮನೆಗೆ ನಮ್ಮ ಅಡುಗೆಕೂಟದ ಶಂಭಣ್ಣನೇ ಅಡುಗೆಗೆ.ಅವನಜೊತೆಗೆ ನಾನೂ ಹೋಗಿ ಇವರನ್ನೆಲ್ಲ ಕಂಡು ಮಾತನಾಡಿ ನಂಗೆ ಮೊದಲಿಂದಲೇ ಪರಿಚಯ.ಮೊದಲಿಂದ ಅಂದರೆ ಶರ್ಮರಿಗೆ ಮದುವೆಯಾಗುವ ಮೊದಲಿಂದಲೂ ನನಗೆ ಗೊತ್ತು.."

"ಹೌದಾ "ಎಂದು ಹುಬ್ಬೇರಿಸಿದರು ಶಾಸ್ತ್ರಿಗಳು..

"ಹೌದು.. ಮೊದಲು ಭಾರೀ ಕಷ್ಟದ ಜೀವನ..ಈಗ ದುಡಿದು ತೋಟ ಚೆನ್ನಾಗಿ ವಿಸ್ತಾರ ಮಾಡಿದ್ದಾರೆ..ಸಾಕಿದ್ದಾರೆ..ತಾವೇ ಮೈಮುರಿದು ದುಡಿಯುವ ಕೃಷಿಕರು.ಸಾಧು ಸ್ವಭಾವದ ವ್ಯಕ್ತಿ.ಮಗನಿಗೆ ಉದ್ಯೋಗ ದೊರೆತ ಮೇಲೆ ಈಗ ಮನೆಯ ಆರ್ಥಿಕ ಸ್ಥಿತಿ ಇನ್ನೂ ಸುಧಾರಿಸಿದೆ.. ನಿಮ್ಮಷ್ಟಲ್ಲದಿದ್ದರೂ ಒಂದು ನಾಲ್ಕು ಎಕರೆ ಅಡಿಕೆ ತೋಟ,ತೆಂಗಿನ ಕಾಯಿ ಖರ್ಚಿಗೆ ಆಗಿ ಮಾರಲು ಸಿಗುತ್ತದೆ..ಬಾಳೆ ಹುಲುಸಾಗಿ ಬೆಳೆಯುತ್ತದೆ.. ಸ್ವಲ್ಪ ಕೊಕ್ಕೋ ಬೆಳೆದಿದ್ದಾರೆ."

"ಹೌದಾ.. ಅಡ್ಡಿಯಿಲ್ಲ ಅಂತೀರಿ ಹಾಗಾದರೆ"

"ಹೌದಣ್ಣಾ.. ಆದರೆ ಮಾಣಿಯನ್ನು ನನಗೆ ಗೊತ್ತಿಲ್ಲ.."

"ಮಾಣಿಯ ಬಗ್ಗೆ ಮೈತ್ರಿಗೇ ಚೆನ್ನಾಗಿ ಗೊತ್ತಲ್ಲ"..ಎಂದಳು ಸಾವಿತ್ರಿ..
. ಭಾಸ್ಕರ ಶಾಸ್ತ್ರಿಗಳಿಗೆ ಇದು ಸ್ವಲ್ಪವೂ ಇಷ್ಟವಾಗಲಿಲ್ಲ.ತಂಗಿಯನ್ನು ನೋಡಿ ಮುಖ ಸಿಂಡರಿಸಿದರು.
"ಅಯ್ಯೋ..ಅಣ್ಣಾ..ಅದು ನನಗೇನೂ ಗೊತ್ತಿಲ್ಲ..ಶಶಿಯಕ್ಕ ಹೇಳಿದ್ರು.."

ಭಾಸ್ಕರ ಶಾಸ್ತ್ರಿಗಳ ಸಿಟ್ಟು ನೆತ್ತಿಗೇರಿತು..
"ಸಾವಿತ್ರಿ ನಿಂಗೆ ಯಾರ ಮುಂದೆ ಹೇಗೆ ಮಾತನಾಡಬೇಕೆಂದು ಗೊತ್ತಿಲ್ವಾ..? ಬಾಯಿ ಮುಚ್ಚಿಕೊಂಡು ನಡಿ ಒಳಗೆ"ಎಂದು ದನಿಯೇರಿಸಿದರು.

      ನಾನು ಹೇಳಿದ್ದೇ ಸುಮ್ಮನೆ ಎಂದು ಮುಖ ಬಾಡಿಸಿಕೊಂಡು ಒಳನಡೆದಳು ಸಾವಿತ್ರಿ.. ಮನೆಯಲ್ಲಿ ಗಂಡನ ಬೈಗುಳ ಕೇಳಿ ಕೇಳಿ ತಲೆಚಿಟ್ಟು ಹಿಡಿದ ಸಾವಿತ್ರಿಗೆ ಈಗ ತನ್ನ ಬುದ್ಧಿಮತ್ತೆಯೇ ಕ್ಷೀಣಿಸಿದೆಯೇ ಎಂಬ ಸಣ್ಣ ಆತಂಕ ಕಾಡುತ್ತಿದ್ದುದು ಈಗ ನಿಜವೆಂದೆನಿಸಿತು.ಛೇ .. ಹಾಗೇ ಇತರರ ಮುಂದೆ ನಾನು ಮೈತ್ರಿಯನ್ನು ಆಡಬಾರದಿತ್ತು.. ಎಂದು ಪಶ್ಚಾತಾಪ ಪಟ್ಟುಕೊಂಡಳು.


     ಮಧ್ಯಾಹ್ನ ಎಲ್ಲರೂ ಪಂಕ್ತಿಯಲ್ಲಿ ಕುಳಿತು ಭೋಜನವ ಸವಿದರು.ಊಟದ ನಂತರ ಶಂಕರ ಶಾಸ್ತ್ರಿಗಳು ಅತ್ತಿಗೆಯಲ್ಲಿ ಕಿಶನ್ ಬಗ್ಗೆ ತಾನು ಸಂಗ್ರಹಿಸಿದ ಮಾಹಿತಿಯನ್ನು ಅರುಹಿದರು.ಇದರಿಂದ ಮಂಗಳಮ್ಮನ ಮನಸ್ಸು ಶಾಂತವಾಯಿತು.ಹೊರಡುವಾಗ ಗಾಯತ್ರಿ ಮತ್ತು ಮಕ್ಕಳಿಗೆಂದು ಕ್ಷೀರ ಜಾಸ್ತಿಯೇ ಪ್ಯಾಕ್ ಮಾಡಿದಳು.ಮಹಾಲಕ್ಷ್ಮಿ ಅಮ್ಮನೂ ಮಗನಿಗೆ ಅದು ಇದು ತುಂಬಿಸಿ ಕಟ್ಟಿದರು.ಸಾವಿತ್ರಿ ಉಂಡ ಕೂಡಲೇ ಹೊರಟಿದ್ದಳು ..ಗಂಡನಿಗೆ ಬೇಗ ಬರುತ್ತೇನೆಂದು ಹೇಳಿದ್ದೇನೆಂದು ಒಂದೂವರೆಯ ಶಂಕರ ವಿಠ್ಠಲ ಬಸ್ ಹಿಡಿದು ಮನೆಗೆ ತೆರಳಿದಳು.

                     ******


    ಸೌಜನ್ಯ ಕೇಶವನೊಂದಿಗೆ ಚಾಟ್ ಮಾಡಲು ಕುಳಿತಳು.ಭಾನುವಾರ ಕಾರ್ಯಕ್ರಮಕ್ಕೆ ತಾನು ಧರಿಸುವ ಉಡುಪನ್ನು ಕೇಶವ್ ಗೆ ತೋರಿಸಿದಳು

"ವಾವ್ ಲವ್ಲೀ.. ಆದರೆ ಅದನ್ನು ಧರಿಸಿದ ನಿಮ್ಮ ನ್ನು ನೋಡಬೇಕೆಂಬ ತವಕ"

"ಅಯ್ಯಾ..ಅದಕ್ಕೇನಂತೆ..ಇರಿ ಎರಡು ನಿಮಿಷ.."

ಎಂದವಳೇ ಅದೇ ಬಟ್ಟೆ ಧರಿಸಿ ಫೊಟೋ ಹೊಡೆದು ಕಳುಹಿಸಿದಳು.ಕೇಶವ್ ಆಕೆಯ ಸೌಂದರ್ಯ ರಾಶಿಗೆ ಕರಗಿಹೋದ..

"ಏನು ರಿಪ್ಲೈ ಬರ್ತಾ ಇಲ್ಲ.."

"ಹೂಂ.. ಸೂಪರ್..ಪ್ರಿಟೀ ಗರ್ಲ್.."

ಸೌಜನ್ಯ ಖುಷಿಯಿಂದ ಡ್ಯಾನ್ಸ್ ಮಾಡುವ ಇಮೋಜಿ ಕಳುಹಿಸಿದಳು.

"ಈ ಭಾನುವಾರ ನೀವು ನಮ್ಮನೆಗೆ ಬರ್ತಾ ಇದೀರಿ.."

"ವಾಟ್.. ವಾಟ್ ಅ ಸರ್ಪ್ರೈಸ್... ನೀವು ಜೋಕ್ ಮಾಡ್ತಿಲ್ಲ ತಾನೇ..

"ರಿಯಲೀ..ಈಗ ನಮ್ಮಪ್ಪ ಮತ್ತು ಬ್ರೋಕರ್ ಮಾತನಾಡಿದ್ದು."


"ಯಾಮ್ ಜಸ್ಟ್ ವೈಟಿಂಗ್ ಟು ಮೀಟ್ ಯು.."

"ನಾನೂ ಅಷ್ಟೇ ಕಾಯ್ತಾ ಇದೀನಿ.."

   ಕೇಶವನ ಮಾತುಗಳಿಂದ ಮತ್ತೇರಿಸಿಕೊಂಡ ಸೌಜನ್ಯ ತನ್ನ ರೊಮ್ಯಾಂಟಿಕ್ ಫೊಟೋಗಳನ್ನು ಕಳುಹಿಸಿದಳು.ಕೇಶವ್ ಕೂಡಾ ಒಂದನ್ನೂ ಬಿಡದೆ ನೋಡಿ ಹೊಗಳುತ್ತಲೇ ಇದ್ದ.. ಇಬ್ಬರಲ್ಲೂ ಭಾನುವಾರಕ್ಕೆ ಕ್ಷಣಗಣನೆ ಆರಂಭವಾಗಿತ್ತು..


                *****


          ಕಿಶನ್ ನ ಕಡೆಯವರೆಲ್ಲ ಅವನ ಆಯ್ಕೆಯನ್ನು ಮೆಚ್ಚಿಕೊಂಡಿದ್ದರು..ಭಾವಂದಿರು "ಭಾವ ನಿಮಗೆ ಒಳ್ಳೇ ಟೇಸ್ಟ್ ಇದೆ.."ಎಂದು ಕಾಲೆಳೆದರು.
"ಹಾಗೆಲ್ಲ ಅನ್ನಬೇಡಿ ನನ್ನನ್ನು.. ಪ್ರೀತಿ ಸೌಂದರ್ಯವನ್ನು ನೋಡಿಯೇ ಹುಟ್ಟುವುದಲ್ಲ.ಪ್ರೀತಿಯನ್ನು ಹೃದಯದ ಬಡಿತವೇ ಮೊದಲು ಸಾರುವುದು...ಅದು ಬರೀ ಬಾಹ್ಯ ಆಕರ್ಷಣೆಯಲ್ಲ..ಆಂತರಿಕವಾದ ಆರಾಧನೆ..ಇನ್ನೊಬ್ಬರಿಗಾಗಿ ತುಡಿತ.. ಅದನ್ನು ಟೇಸ್ಟ್ ಅಂದರೆ ತಪ್ಪಾಗುತ್ತದೆ..ಆ ಪ್ರೀತಿಗೆ ಬೆಲೆಯಿಲ್ಲದಂತಾಗುತ್ತದೆ"ಎಂದು ಗಂಭೀರವಾಗಿ ಹೇಳುತ್ತಿದ್ದರೆ ಎಲ್ಲರೂ ಮೌನವಾಗಿ ಕೇಳುತ್ತಿದ್ದರು.

        ಮಮತಾ ಮತ್ತು ಮಗಳಂದಿರು ಶಾಸ್ತ್ರಿಗಳ ಮಗಳ ಬಗ್ಗೆ ಚರ್ಚಿಸಿದರು."ಅಮ್ಮಾ... ಭಾನುವಾರ ನಮ್ಮನೆಗೆ ಬರುವಾಗ ಮನೆ ಅಚ್ಚುಕಟ್ಟಾಗಿ ಇಟ್ಟುಕೋ.. ಸಹಾಯಕ್ಕೆ ಬೇಕಾದರೆ ನಾನೂ ಬರುವೆ "ಎಂದಳು ಮೇದಿನಿ..

"ಹೌದಮ್ಮಾ..ಅವರ ಮನೆ ಎಷ್ಟು ವಿಶಾಲವಾಗಿ ಅಚ್ಚುಕಟ್ಟಾಗಿ ಇದೆ.ಅವರಷ್ಟಲ್ಲದಿದ್ದರೂ ಇದ್ದುದನ್ನು ಸುಂದರವಾಗಿ ಕಾಣುವಂತೆ ಮಾಡೋಣ.. ಬೇಕಾದರೆ ನಾನೂ ಇಲ್ಲೇ ನಿಲ್ಲುವೆ" ಎಂದಳು ಚಾಂದಿನಿ..

"ಚಾಂದೂ.. ನೀನು ನನ್ನ ಬಿಟ್ಟು ಇಲ್ಲೇ..ಉಳೀತೀಯಾ.." ಎಂದು ಮುಖ ಸಣ್ಣಗೆ ಮಾಡಿದ ಅವಳ ಪತಿರಾಯ..

ಅಳಿಯನ ಫಜೀತಿಯನ್ನು ಕಂಡ ಮಮತಾ..
"ಚಾಂದಿನಿ.. ಮನೆಯನ್ನು ಒಪ್ಪ ಓರಣವಾಗಿ ನಾನು ಇರಿಸುತ್ತೇನೆ.. ನೀನು ಗಂಡನ ಜೊತೆ ಮನೆಗೆ ಹೋಗಮ್ಮಾ "ಎಂದಾಗ ಅಳಿಯನ ಮುಖವೂ ಅರಳಿತ್ತು .. ಚಾಂದಿನಿಯ ಕೆನ್ನೆ ರಂಗೇರಿತ್ತು..

      ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
23-03-2020.




Saturday, 21 March 2020

ಸರದಿ




        ಶಿವಾನಿ ತನ್ನ ಮುಂದಿನ ಫೈಲ್ ನ ಮೇಲೆ ಕಣ್ಣಾಡಿಸುತ್ತಿದ್ದಳು.ಇನ್ನು ನಾಲ್ಕು ಮಂದಿ ಇದ್ದಾರೆ..  ಎಂದು ನಿಟ್ಟುಸಿರು ಬಿಟ್ಟಳು .ಅಷ್ಟರಲ್ಲಿ ಒಬ್ಬ ವಯಸ್ಸಾದ ಹೆಣ್ಣುಮಗಳು ಆಗಮಿಸಿದ್ದಳು.
 "ಮೇಡಂ.. ಡಾಕ್ಟರ್ ಶಿವಸ್ವಾಮಿ ಅವರು ಇದ್ದಾರಾ..?"

"ಇದ್ದಾರೆ.. ಇವತ್ತು ಪೇಷೆಂಟ್ ಭರ್ತಿ ಇದ್ದಾರೆ.. ಏನಾದರೂ ಅರ್ಜೆಂಟ್.."

" ಕೆಮ್ಮು ,ಜ್ವರ ಇದೆ.. ಇವತ್ತು ಚೆಕಪ್ ಆಗಬೇಕಿತ್ತು" ಎಂದಾಗ

 "ಸರಿ ..ನಿಮ್ಮ ಹೆಸರು ಹೇಳಿ "ಎಂದಳು. ಹಾಗೆಯೇ ಹೆಸರನ್ನು ಕೇಳಿ "ರಶೀದಾ " ಎಂದು ಬರೆದುಕೊಂಡಳು..ಅಷ್ಟರಲ್ಲಿ ಶಿವಾನಿಯ ಗಮನ ಎದುರು ಟಿವಿಯಲ್ಲಿ ಬಿತ್ತರಗೊಳ್ಳುತ್ತಿದ್ದ ನ್ಯೂಸ್  ಮೇಲೆ ಇತ್ತು ."ಜಯನಗರದ ನಾಲ್ಕನೇ ಕ್ರಾಸ್... ಎರಡನೇ ಬಡಾವಣೆಯಲ್ಲಿ ಒಂಟಿಯಾಗಿ ಮನೆಯಲ್ಲಿದ್ದ ಒಬ್ಬಳು ಕೆಂಪು ಬಣ್ಣದ ಸಲ್ವಾರ್ ಧರಿಸಿದ ಹೆಣ್ಣುಮಗಳ ಮೇಲೆ..... " ....ಇದನ್ನು ಕೇಳಿದ  ಶಿವಾನಿಯ ಬುದ್ಧಿ ಚುರುಕಾಯಿತು ..ಮುಂದೇನಾಯಿತು ಎಂದು ತಿಳಿದುಕೊಳ್ಳುವ ತವಕ ...ಆಗ ಟಿವಿ ಸಿಗ್ನಲ್ ನಿಂತಿತು ..
ಕೇಬಲ್ ನೆಟ್ವರ್ಕ್ ಹೀಗೆ ..ಯಾವಾಗ ಅಗತ್ಯವಾಗಿ ಬೇಕಾದಾಗಲೇ ಕೈ ಕೊಡುವುದು.. ಎಂದು ಗೊಣಗುತ್ತಾ  ಬೇಗ ತನ್ನ ಬ್ಯಾಗಿಗೆ ತನ್ನ ವಸ್ತುಗಳನ್ನು ತುಂಬಿಸಿಕೊಂಡು  ಹೆಗಲಿಗೇರಿಸಿ ..ಎಂದಿನಂತೆ ಕಾದು ಕುಳಿತಿದ್ದ ಪೇಷಂಟ್ ಗಳಲ್ಲಿ ಅವರವರ ಸರದಿಯನ್ನು ತಿಳಿಸಿದಳು ..ಕೊನೆಯ   ಪೇಷಂಟ್ ರಶೀದಾ " ತನ್ನ ಸರದಿ ..?" ಎಂದು ಪ್ರಶ್ನಿಸಿದಳು.. ಶಿವಾನಿ ತಲೆಯಲ್ಲಿ ಬೇರೇನೋ ಓಡುತ್ತಿತ್ತು. ದಿನನಿತ್ಯ ಏನೇನೋ ಸುದ್ದಿಗಳನ್ನು ಕೇಳುತ್ತೇವೆ ..ಅದೇ ನಮ್ಮ ಸರದಿ ಆದರೆ.. ಎಂದುಕೊಳ್ಳುತ್ತಾ ಬೆವರಿಳಿಯುತ್ತಿದ್ದ ಹಣೆಯನ್ನು ಟವೆಲ್ ನಿಂದ ಒರೆಸಿಕೊಂಡಳು.


     ಮೊನ್ನೆಯಷ್ಟೇ ಅಂಗಡಿಯಿಂದ   ಚಂದ ಕಂಡಿತೆಂದು ಮಗಳಿಗೆ ಕೆಂಪು ಬಣ್ಣದ ಸಲ್ವಾರ್ ಕೊಡಿಸಿದ್ದು ಅದನ್ನು ಬಹಳ ಇಷ್ಟಪಟ್ಟಿದ್ದಳು ಮಗಳು..  ಇಂದು ಬೆಳಗ್ಗೆ ನಾನು ಹೊರಡುತ್ತಿದ್ದಂತೆ  ಸ್ನಾನ ಮಾಡಿ  ಅದೇ ಚೂಡಿದಾರ್ ಧರಿಸಿದ್ದಳು .ಈಗ ಆಕೆಗೂ ಕೋರೋನಾ ಭಯದಿಂದ ಮುಂಜಾಗ್ರತಾ ರಜೆ. ನನಗೆ ಉದ್ಯೋಗಕ್ಕೆ ರಜೆ ಇಲ್ಲ .ವೈದ್ಯರ ಬಳಿ ದಿನವೂ ಸಾಲುಗಟ್ಟಿ ಬರುತ್ತಿರುವ ರೋಗಿಗಳು. ಅವರ ಚಿಕಿತ್ಸೆಗೆ ತೊಂದರೆಯಾಗಬಾರದು ಎಂದು ಕರ್ತವ್ಯಕ್ಕೆ ನಾನು ತಪ್ಪದೇ ಹಾಜರಾಗುತ್ತಿದ್ದೇನೆ ..ಮಗಳನ್ನು ಒಬ್ಬಳನ್ನೇ ಬಿಟ್ಟು ಬರುವಾಗ ನನಗೂ ಹಿಂಸೆಯಾಗುತ್ತಿದೆ.. ಹಿಂದಗಡೆ ಒಂದು ಬಾಲಕರ ಪಿಜಿ.ಪಕ್ಕದಲ್ಲಿ ಒಂದು ದೊಡ್ಡ ಮನೆಯಲ್ಲಿ ನಾಲ್ಕು ಜನ ಇಂಜಿನಿಯರಿಂಗ್ ಓದುವ ದೂರದೂರಿನ ಯುವಕರು.. ಪ್ರತೀ ಬೇಸಿಗೆ ರಜೆಯಲ್ಲಿ ಮಗಳನ್ನು  ತವರಿಗೆ ಕಳುಹಿಸುತ್ತಿದ್ದೆ.ಆದರೆ ಈ ಸಲ ಕೊರೋನಾ ಭಯದಿಂದ ಅದಕ್ಕೂ ಕಲ್ಲು ಬಿತ್ತು...ಎಂದು  ಮನಸಿನಲ್ಲೇ ಅಂದುಕೊಂಡಳು..
ಟಿವಿಯಲ್ಲಿ ಬಿತ್ತರವಾದ ವಾರ್ತೆ ಕೇಳಿ ಶಿವಾನಿಯ ಕಾಲುಗಳು ನಡುಗತೊಡಗಿದವು. ನಮ್ಮದೇ ಏರಿಯಾ.. ನಮ್ಮದೇ ಕ್ರಾಸ್.. ದೇವರೇ ಏನಾಗಿದೆಯೋ ..ಎಂಬ ಭೀತಿಯಿಂದ ಅವಳ ಕಾಲುಗಳು ಬೇಗನೆ ಮುನ್ನಡೆಯಲು ಅಸಹಕಾರ ತೋರುತ್ತಿದ್ದವು. ಯಾವತ್ತು ವೈದ್ಯರ ಕ್ಯಾಬಿನ್ ಗೆ ಒಮ್ಮೆ ಇಣುಕಿ ಹೇಳಿ ಹೊರಡುತ್ತಿದ್ದ ಶಿವಾನಿ ಇಂದು ಮಾತ್ರ  ಹೇಳದೇ ಬೇಗಬೇಗನೆ ಹೊರಟಿದ್ದಳು. ಮಾರ್ಗದ ಬದಿಯಲ್ಲಿ ನಿಂತಾಗ ಒಂದೇ ಸಮನೆ ಕೈಗಡಿಯಾರವನ್ನು ದಿಟ್ಟಿಸುತ್ತಿದ್ದಳು. ಮನೆಗೊಂದು ಕರೆ ಮಾಡಿ ವಿಚಾರಿಸೋಣ ಎಂದು ಮೊಬೈಲ್ ತೆಗೆದರೆ ಅದು ಯಾವತ್ತೋ ಹೊಟ್ಟೆ ಖಾಲಿಯಾಗಿ ಮಲಗಿದ್ದು ಅದಕ್ಕೆ ಕೂಳುಕೊಡುವುದು ಕೆಲಸದ ಒತ್ತಡದ ಮಧ್ಯದಲ್ಲಿ ಆಕೆಗೆ ಮರೆತೇ ಹೋಗಿತ್ತು. ಇಂತಹ ಸಂದಿಗ್ಧ ಸಮಯದಲ್ಲೇ ಹೀಗೆ ಆಗಬೇಕಿತ್ತೇ ಎಂದು ಯೋಚಿಸುತ್ತಿದ್ದವಳ ಕಣ್ಣು ತುಂಬಿ ಬಂತು.


         ದೂರದಲ್ಲಿ ಬರುತ್ತಿದ್ದ ಬಸ್ 42 ನಂಬರ್ ಎದ್ದುಕಾಣುತ್ತಿತ್ತು. ಕೈ ಮುಂದೆ ಚಾಚಿದಳು. ಮನದ ತುಂಬಾ ನೂರಾರು ಯೋಚನೆಗಳು. ಪಕ್ಕದ ಮನೆಯ ಗೆಳತಿ ಶೀಲಾಳಿಗೆ ಒಂದು ಮಾತು ಹೇಳಿ ಹೊರಡಬೇಕಿತ್ತು. ಅವಳು ಇವತ್ತು ಕಾಣಲು ಸಿಕ್ಕಿಲ್ಲ. ಮನೆಯಲ್ಲಿ ಮಕ್ಕಳಿದ್ದಾಗ   ಆಕೆಗೂ ಮಾತನಾಡಲು ಸಮಯ ಸಿಗುತ್ತಿಲ್ಲ.ಪಾಪ ..!! ಅವಳನ್ನು ಹೇಳಿ ಏನು ಪ್ರಯೋಜನ ..? ನಾನೇ ಜಾಗ್ರತೆ ವಹಿಸಬೇಕಿತ್ತು. ಹೋಗಲಿ .. ಬ್ರೇಕಿಂಗ್ ವಾರ್ತೆಯಾದರೂ ಪೂರ್ತಿ ಕೇಳಿಸಬೇಕಿತ್ತು .

      ಇಂದು ಬಸ್ ಬಹುತೇಕ ಖಾಲಿಯಾಗಿತ್ತು. ಎಲ್ಲರೂ ಸಂಚಾರವನ್ನು ಕಡಿಮೆ ಮಾಡಿದ್ದರು. ಟಿಕೆಟ್ ಟಿಕೆಟ್ ಎಂದ  ಕಂಡಕ್ಟರ್ ಗೆ ಹತ್ತು ರೂಪಾಯಿಯನ್ನು ನೀಡಿದಳು. ಕೊರೋನಾ ವೈರಸ್ ಗೆ , ಹೆಣ್ಣನ್ನು ತನ್ನ ಸುಖಕ್ಕಾಗಿ ಬಲಿಕೊಡುವ ಕೆಟ್ಟತನಕ್ಕೆ ಮೊದಲು ಟಿಕೆಟ್ ಕೊಟ್ಟು  ಕಳುಹಿಸಬೇಕು.ಅಲ್ಲಿ ನನ್ನ   ಜೀವ.. ನನ್ನ ಹೃದಯ.. ಏನಾಗಿದೆಯೋ ಏನೋ..? ಎಂಬ ಆತಂಕದಲ್ಲಿ ಮುಳುಗಿದಳು.
 ಬಸ್ ವೇಗವಾಗಿ  ಚಲಿಸುತ್ತಿದ್ದರೂ ಆಕೆಗೆ ಮಾತ್ರ ಬಸ್ ನಿಧಾನವಾಗಿ ಚಲಿಸುತ್ತಿದೆ ಎಂದೆನಿಸುತ್ತಿತ್ತು. ಬಸ್ಸಿಗಿಂತ ವೇಗವಾಗಿ ಆಕೆಯ ತಲೆಯೊಳಗಿನ ಯೋಚನಾಲಹರಿ ಓಡುತ್ತಿತ್ತು.


        ಬಸ್ ನಿಂದ ಇಳಿದವಳೇ ವೇಗವಾಗಿ ತನ್ನ ಮನೆ ಕಡೆಗೆ  ಹೆಜ್ಜೆ ಹಾಕಿದಳು . ಎದೆ ಬಡಿತ ಜೋರಾಗಿ ಕೇಳಿಸುತ್ತಿತ್ತು. ಹಾಲಿಗಾಗಿ ಹತ್ತಿರದ ಅಂಗಡಿಗೆ ನುಗ್ಗಿದಾಗ ಎಲ್ಲರ ಮಾತುಗಳು ಗೋಜಲು ಗೋಜಲಾಗಿ ಒಗಟಿನಂತಿದ್ದು ಅರ್ಥವಾಗದೆ ಭಯವಾಗತೊಡಗಿತು. ಹಾಲನ್ನು ಕೊಳ್ಳದೇ ಸೀದಾ ಅಲ್ಲಿಂದ ಬೆನ್ನುಹಾಕಿ ವೇಗವಾಗಿ ತನ್ನ ಮನೆಯತ್ತ ದಾಪುಗಾಲು ಹಾಕಿದಳು. ಮನೆಗೆ ಬಂದು ಜೋರಾಗಿ ಬೆಲ್ ಒತ್ತಿದಳು....ಮನೆಯೊಳಗಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ... ಆಕೆಯ ಕಣ್ಣೀರು ಕೋಡಿಯಾಗಿ ಹರಿಯುತ್ತಿತ್ತು. ಪಕ್ಕದ ಮನೆಯಿಂದ ಒಂದು ದನಿ ತೂರಿಬಂತು..
" ಅಮ್ಮ ನಾನಿಲ್ಲಿದ್ದೇನೆ.."
ತಾಯಿ ಹೃದಯ ಬೇಗನೆ ಓಡಿ ಹೋಗಿ ಮಗಳನ್ನು ತಬ್ಬಿ ಹಿಡಿದು ಮುತ್ತಿಕ್ಕಿದೆ.. ಅದೇ ಕೆಂಪು ಚೂಡಿದಾರ್ ನಲ್ಲಿ ಮಗಳು ನಗುನಗುತ್ತಾ ತನ್ನ ಕೈಗಳಿಂದ ತಾಯಿಯನ್ನು ಸುತ್ತುವರಿದಳು. "ನನ್ನ ಪುಟ್ಟ ಕಂದ" ಎನ್ನುತ್ತಾ ತಾಯಿಯ ಕೈಗಳು ಮಗಳ ಬೆನ್ನನ್ನು ಸವರಿದವು.
"ದೇವರು ದೊಡ್ಡವನು ಎಂದಿಗೂ ನನಗೆ ಮಗಳ ಬಗ್ಗೆ ಕೆಟ್ಟದ್ದನ್ನು ಕೇಳುವಂತಾಗಬಾರದು ...ನನ್ನ ಸರದಿ ಬರುವುದೇ ಬೇಡ.."ಎಂದು ಮಾತೃಹೃದಯ ಕೂಗಿ ಹೇಳಿತು.



✍️... ಅನಿತಾ ಜಿ.ಕೆ.ಭಟ್.
22-03-2020.


Momspresso Kannada and Pratilipi Kannada ದಲ್ಲಿ ಪ್ರಕಟವಾದ ಕಥೆ..

ಅಂಗಳದ ಅರಗಿಣಿ

ಅರಳಲು ರವಿಯ ಒಪ್ಪಿಗೆ ಕೇಳುತಿದೆ

ನೀರ ಹನಿಯ ಸಿಂಚನದಿ ಪುಳಕ

ಅರಳೀತೇ ನನ್ನಂಗಳದ ಮೊಗ್ಗು..?

ಈ ಸೃಷ್ಟಿಯ ವೈಚಿತ್ರ್ಯ..ಒಂದ ಎಸಳು ಬಣ್ಣ ಬದಲಾಯಿಸಿಕೊಂಡಿದೆ..

ಒಬ್ಬಳು ಸುಂದರಿ ಫೊಟೋಗೆ ಮುಖವೊಡ್ಡಿದರೆ ಇನ್ನೊಬ್ಬಳು ನಾಚಿ ಎಲೆಯ ಮರೆಯಲ್ಲಿ..

ಕಿಸ್ಕಾರದ ಗೊಂಚಲುಗಳು..

ಚಿತ್ರಗಳು :- ನನ್ನ ಅಂಗಳದ ಹೂಗಳು..

ಕಣ್ಣಿಗೆ ತಂಪೀವ ಹೂದೋಟದ ರಾಣಿಯರು

ಮುಗುಳು ಮುಗುಳಾಗಿ ನಗುವ ಗುಲಾಬಿ

ತುಸು ಅರಳಿ ನಿಂತ ಬೆಡಗಿ

ಗೊಂಚಲಾಗಿ ಸೊಗಸಾದ ನೋಟವೀವ ಹೂಗಳು

ಹೂವಿಗೆ ಮೊಗ್ಗುಗಳ ಕಾವಲು

ಪುಟ್ಟ ಪುಟ್ಟ ಶ್ವೇತ ಪುಷ್ಪಗಳು

ದಾಸವಾಳ ಹೂ ತಲೆಯೆತ್ತಿ ಬೀಗುತಿದೆ

ಪುಟಾಣಿ ಹೂಗಳು ರವಿಯ ಕಿರಣವ ತಾಳಲಾರದೆ ನೆರಳಿನಲ್ಲಿ ಅಡಗಿವೆ







ಬಿಳಿ ಸೇವಂತಿಗೆ 

ಹೈಡ್ರೇಂಜಿಯ

ಸುಗಂಧವ ಸೂಸುವ ಸುಗಂಧಿ/ಸುರುಳಿ..


ಚಿತ್ರಗಳು:- ನನ್ನ ಪುಟ್ಟ ಕೈತೋಟದ ದೃಶ್ಯ..