ಶಿವಾನಿ ತನ್ನ ಮುಂದಿನ ಫೈಲ್ ನ ಮೇಲೆ ಕಣ್ಣಾಡಿಸುತ್ತಿದ್ದಳು.ಇನ್ನು ನಾಲ್ಕು ಮಂದಿ ಇದ್ದಾರೆ.. ಎಂದು ನಿಟ್ಟುಸಿರು ಬಿಟ್ಟಳು .ಅಷ್ಟರಲ್ಲಿ ಒಬ್ಬ ವಯಸ್ಸಾದ ಹೆಣ್ಣುಮಗಳು ಆಗಮಿಸಿದ್ದಳು.
"ಮೇಡಂ.. ಡಾಕ್ಟರ್ ಶಿವಸ್ವಾಮಿ ಅವರು ಇದ್ದಾರಾ..?"
"ಇದ್ದಾರೆ.. ಇವತ್ತು ಪೇಷೆಂಟ್ ಭರ್ತಿ ಇದ್ದಾರೆ.. ಏನಾದರೂ ಅರ್ಜೆಂಟ್.."
" ಕೆಮ್ಮು ,ಜ್ವರ ಇದೆ.. ಇವತ್ತು ಚೆಕಪ್ ಆಗಬೇಕಿತ್ತು" ಎಂದಾಗ
"ಸರಿ ..ನಿಮ್ಮ ಹೆಸರು ಹೇಳಿ "ಎಂದಳು. ಹಾಗೆಯೇ ಹೆಸರನ್ನು ಕೇಳಿ "ರಶೀದಾ " ಎಂದು ಬರೆದುಕೊಂಡಳು..ಅಷ್ಟರಲ್ಲಿ ಶಿವಾನಿಯ ಗಮನ ಎದುರು ಟಿವಿಯಲ್ಲಿ ಬಿತ್ತರಗೊಳ್ಳುತ್ತಿದ್ದ ನ್ಯೂಸ್ ಮೇಲೆ ಇತ್ತು ."ಜಯನಗರದ ನಾಲ್ಕನೇ ಕ್ರಾಸ್... ಎರಡನೇ ಬಡಾವಣೆಯಲ್ಲಿ ಒಂಟಿಯಾಗಿ ಮನೆಯಲ್ಲಿದ್ದ ಒಬ್ಬಳು ಕೆಂಪು ಬಣ್ಣದ ಸಲ್ವಾರ್ ಧರಿಸಿದ ಹೆಣ್ಣುಮಗಳ ಮೇಲೆ..... " ....ಇದನ್ನು ಕೇಳಿದ ಶಿವಾನಿಯ ಬುದ್ಧಿ ಚುರುಕಾಯಿತು ..ಮುಂದೇನಾಯಿತು ಎಂದು ತಿಳಿದುಕೊಳ್ಳುವ ತವಕ ...ಆಗ ಟಿವಿ ಸಿಗ್ನಲ್ ನಿಂತಿತು ..
ಕೇಬಲ್ ನೆಟ್ವರ್ಕ್ ಹೀಗೆ ..ಯಾವಾಗ ಅಗತ್ಯವಾಗಿ ಬೇಕಾದಾಗಲೇ ಕೈ ಕೊಡುವುದು.. ಎಂದು ಗೊಣಗುತ್ತಾ ಬೇಗ ತನ್ನ ಬ್ಯಾಗಿಗೆ ತನ್ನ ವಸ್ತುಗಳನ್ನು ತುಂಬಿಸಿಕೊಂಡು ಹೆಗಲಿಗೇರಿಸಿ ..ಎಂದಿನಂತೆ ಕಾದು ಕುಳಿತಿದ್ದ ಪೇಷಂಟ್ ಗಳಲ್ಲಿ ಅವರವರ ಸರದಿಯನ್ನು ತಿಳಿಸಿದಳು ..ಕೊನೆಯ ಪೇಷಂಟ್ ರಶೀದಾ " ತನ್ನ ಸರದಿ ..?" ಎಂದು ಪ್ರಶ್ನಿಸಿದಳು.. ಶಿವಾನಿ ತಲೆಯಲ್ಲಿ ಬೇರೇನೋ ಓಡುತ್ತಿತ್ತು. ದಿನನಿತ್ಯ ಏನೇನೋ ಸುದ್ದಿಗಳನ್ನು ಕೇಳುತ್ತೇವೆ ..ಅದೇ ನಮ್ಮ ಸರದಿ ಆದರೆ.. ಎಂದುಕೊಳ್ಳುತ್ತಾ ಬೆವರಿಳಿಯುತ್ತಿದ್ದ ಹಣೆಯನ್ನು ಟವೆಲ್ ನಿಂದ ಒರೆಸಿಕೊಂಡಳು.
ಮೊನ್ನೆಯಷ್ಟೇ ಅಂಗಡಿಯಿಂದ ಚಂದ ಕಂಡಿತೆಂದು ಮಗಳಿಗೆ ಕೆಂಪು ಬಣ್ಣದ ಸಲ್ವಾರ್ ಕೊಡಿಸಿದ್ದು ಅದನ್ನು ಬಹಳ ಇಷ್ಟಪಟ್ಟಿದ್ದಳು ಮಗಳು.. ಇಂದು ಬೆಳಗ್ಗೆ ನಾನು ಹೊರಡುತ್ತಿದ್ದಂತೆ ಸ್ನಾನ ಮಾಡಿ ಅದೇ ಚೂಡಿದಾರ್ ಧರಿಸಿದ್ದಳು .ಈಗ ಆಕೆಗೂ ಕೋರೋನಾ ಭಯದಿಂದ ಮುಂಜಾಗ್ರತಾ ರಜೆ. ನನಗೆ ಉದ್ಯೋಗಕ್ಕೆ ರಜೆ ಇಲ್ಲ .ವೈದ್ಯರ ಬಳಿ ದಿನವೂ ಸಾಲುಗಟ್ಟಿ ಬರುತ್ತಿರುವ ರೋಗಿಗಳು. ಅವರ ಚಿಕಿತ್ಸೆಗೆ ತೊಂದರೆಯಾಗಬಾರದು ಎಂದು ಕರ್ತವ್ಯಕ್ಕೆ ನಾನು ತಪ್ಪದೇ ಹಾಜರಾಗುತ್ತಿದ್ದೇನೆ ..ಮಗಳನ್ನು ಒಬ್ಬಳನ್ನೇ ಬಿಟ್ಟು ಬರುವಾಗ ನನಗೂ ಹಿಂಸೆಯಾಗುತ್ತಿದೆ.. ಹಿಂದಗಡೆ ಒಂದು ಬಾಲಕರ ಪಿಜಿ.ಪಕ್ಕದಲ್ಲಿ ಒಂದು ದೊಡ್ಡ ಮನೆಯಲ್ಲಿ ನಾಲ್ಕು ಜನ ಇಂಜಿನಿಯರಿಂಗ್ ಓದುವ ದೂರದೂರಿನ ಯುವಕರು.. ಪ್ರತೀ ಬೇಸಿಗೆ ರಜೆಯಲ್ಲಿ ಮಗಳನ್ನು ತವರಿಗೆ ಕಳುಹಿಸುತ್ತಿದ್ದೆ.ಆದರೆ ಈ ಸಲ ಕೊರೋನಾ ಭಯದಿಂದ ಅದಕ್ಕೂ ಕಲ್ಲು ಬಿತ್ತು...ಎಂದು ಮನಸಿನಲ್ಲೇ ಅಂದುಕೊಂಡಳು..
ಟಿವಿಯಲ್ಲಿ ಬಿತ್ತರವಾದ ವಾರ್ತೆ ಕೇಳಿ ಶಿವಾನಿಯ ಕಾಲುಗಳು ನಡುಗತೊಡಗಿದವು. ನಮ್ಮದೇ ಏರಿಯಾ.. ನಮ್ಮದೇ ಕ್ರಾಸ್.. ದೇವರೇ ಏನಾಗಿದೆಯೋ ..ಎಂಬ ಭೀತಿಯಿಂದ ಅವಳ ಕಾಲುಗಳು ಬೇಗನೆ ಮುನ್ನಡೆಯಲು ಅಸಹಕಾರ ತೋರುತ್ತಿದ್ದವು. ಯಾವತ್ತು ವೈದ್ಯರ ಕ್ಯಾಬಿನ್ ಗೆ ಒಮ್ಮೆ ಇಣುಕಿ ಹೇಳಿ ಹೊರಡುತ್ತಿದ್ದ ಶಿವಾನಿ ಇಂದು ಮಾತ್ರ ಹೇಳದೇ ಬೇಗಬೇಗನೆ ಹೊರಟಿದ್ದಳು. ಮಾರ್ಗದ ಬದಿಯಲ್ಲಿ ನಿಂತಾಗ ಒಂದೇ ಸಮನೆ ಕೈಗಡಿಯಾರವನ್ನು ದಿಟ್ಟಿಸುತ್ತಿದ್ದಳು. ಮನೆಗೊಂದು ಕರೆ ಮಾಡಿ ವಿಚಾರಿಸೋಣ ಎಂದು ಮೊಬೈಲ್ ತೆಗೆದರೆ ಅದು ಯಾವತ್ತೋ ಹೊಟ್ಟೆ ಖಾಲಿಯಾಗಿ ಮಲಗಿದ್ದು ಅದಕ್ಕೆ ಕೂಳುಕೊಡುವುದು ಕೆಲಸದ ಒತ್ತಡದ ಮಧ್ಯದಲ್ಲಿ ಆಕೆಗೆ ಮರೆತೇ ಹೋಗಿತ್ತು. ಇಂತಹ ಸಂದಿಗ್ಧ ಸಮಯದಲ್ಲೇ ಹೀಗೆ ಆಗಬೇಕಿತ್ತೇ ಎಂದು ಯೋಚಿಸುತ್ತಿದ್ದವಳ ಕಣ್ಣು ತುಂಬಿ ಬಂತು.
ದೂರದಲ್ಲಿ ಬರುತ್ತಿದ್ದ ಬಸ್ 42 ನಂಬರ್ ಎದ್ದುಕಾಣುತ್ತಿತ್ತು. ಕೈ ಮುಂದೆ ಚಾಚಿದಳು. ಮನದ ತುಂಬಾ ನೂರಾರು ಯೋಚನೆಗಳು. ಪಕ್ಕದ ಮನೆಯ ಗೆಳತಿ ಶೀಲಾಳಿಗೆ ಒಂದು ಮಾತು ಹೇಳಿ ಹೊರಡಬೇಕಿತ್ತು. ಅವಳು ಇವತ್ತು ಕಾಣಲು ಸಿಕ್ಕಿಲ್ಲ. ಮನೆಯಲ್ಲಿ ಮಕ್ಕಳಿದ್ದಾಗ ಆಕೆಗೂ ಮಾತನಾಡಲು ಸಮಯ ಸಿಗುತ್ತಿಲ್ಲ.ಪಾಪ ..!! ಅವಳನ್ನು ಹೇಳಿ ಏನು ಪ್ರಯೋಜನ ..? ನಾನೇ ಜಾಗ್ರತೆ ವಹಿಸಬೇಕಿತ್ತು. ಹೋಗಲಿ .. ಬ್ರೇಕಿಂಗ್ ವಾರ್ತೆಯಾದರೂ ಪೂರ್ತಿ ಕೇಳಿಸಬೇಕಿತ್ತು .
ಇಂದು ಬಸ್ ಬಹುತೇಕ ಖಾಲಿಯಾಗಿತ್ತು. ಎಲ್ಲರೂ ಸಂಚಾರವನ್ನು ಕಡಿಮೆ ಮಾಡಿದ್ದರು. ಟಿಕೆಟ್ ಟಿಕೆಟ್ ಎಂದ ಕಂಡಕ್ಟರ್ ಗೆ ಹತ್ತು ರೂಪಾಯಿಯನ್ನು ನೀಡಿದಳು. ಕೊರೋನಾ ವೈರಸ್ ಗೆ , ಹೆಣ್ಣನ್ನು ತನ್ನ ಸುಖಕ್ಕಾಗಿ ಬಲಿಕೊಡುವ ಕೆಟ್ಟತನಕ್ಕೆ ಮೊದಲು ಟಿಕೆಟ್ ಕೊಟ್ಟು ಕಳುಹಿಸಬೇಕು.ಅಲ್ಲಿ ನನ್ನ ಜೀವ.. ನನ್ನ ಹೃದಯ.. ಏನಾಗಿದೆಯೋ ಏನೋ..? ಎಂಬ ಆತಂಕದಲ್ಲಿ ಮುಳುಗಿದಳು.
ಬಸ್ ವೇಗವಾಗಿ ಚಲಿಸುತ್ತಿದ್ದರೂ ಆಕೆಗೆ ಮಾತ್ರ ಬಸ್ ನಿಧಾನವಾಗಿ ಚಲಿಸುತ್ತಿದೆ ಎಂದೆನಿಸುತ್ತಿತ್ತು. ಬಸ್ಸಿಗಿಂತ ವೇಗವಾಗಿ ಆಕೆಯ ತಲೆಯೊಳಗಿನ ಯೋಚನಾಲಹರಿ ಓಡುತ್ತಿತ್ತು.
ಬಸ್ ನಿಂದ ಇಳಿದವಳೇ ವೇಗವಾಗಿ ತನ್ನ ಮನೆ ಕಡೆಗೆ ಹೆಜ್ಜೆ ಹಾಕಿದಳು . ಎದೆ ಬಡಿತ ಜೋರಾಗಿ ಕೇಳಿಸುತ್ತಿತ್ತು. ಹಾಲಿಗಾಗಿ ಹತ್ತಿರದ ಅಂಗಡಿಗೆ ನುಗ್ಗಿದಾಗ ಎಲ್ಲರ ಮಾತುಗಳು ಗೋಜಲು ಗೋಜಲಾಗಿ ಒಗಟಿನಂತಿದ್ದು ಅರ್ಥವಾಗದೆ ಭಯವಾಗತೊಡಗಿತು. ಹಾಲನ್ನು ಕೊಳ್ಳದೇ ಸೀದಾ ಅಲ್ಲಿಂದ ಬೆನ್ನುಹಾಕಿ ವೇಗವಾಗಿ ತನ್ನ ಮನೆಯತ್ತ ದಾಪುಗಾಲು ಹಾಕಿದಳು. ಮನೆಗೆ ಬಂದು ಜೋರಾಗಿ ಬೆಲ್ ಒತ್ತಿದಳು....ಮನೆಯೊಳಗಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ... ಆಕೆಯ ಕಣ್ಣೀರು ಕೋಡಿಯಾಗಿ ಹರಿಯುತ್ತಿತ್ತು. ಪಕ್ಕದ ಮನೆಯಿಂದ ಒಂದು ದನಿ ತೂರಿಬಂತು..
" ಅಮ್ಮ ನಾನಿಲ್ಲಿದ್ದೇನೆ.."
ತಾಯಿ ಹೃದಯ ಬೇಗನೆ ಓಡಿ ಹೋಗಿ ಮಗಳನ್ನು ತಬ್ಬಿ ಹಿಡಿದು ಮುತ್ತಿಕ್ಕಿದೆ.. ಅದೇ ಕೆಂಪು ಚೂಡಿದಾರ್ ನಲ್ಲಿ ಮಗಳು ನಗುನಗುತ್ತಾ ತನ್ನ ಕೈಗಳಿಂದ ತಾಯಿಯನ್ನು ಸುತ್ತುವರಿದಳು. "ನನ್ನ ಪುಟ್ಟ ಕಂದ" ಎನ್ನುತ್ತಾ ತಾಯಿಯ ಕೈಗಳು ಮಗಳ ಬೆನ್ನನ್ನು ಸವರಿದವು.
"ದೇವರು ದೊಡ್ಡವನು ಎಂದಿಗೂ ನನಗೆ ಮಗಳ ಬಗ್ಗೆ ಕೆಟ್ಟದ್ದನ್ನು ಕೇಳುವಂತಾಗಬಾರದು ...ನನ್ನ ಸರದಿ ಬರುವುದೇ ಬೇಡ.."ಎಂದು ಮಾತೃಹೃದಯ ಕೂಗಿ ಹೇಳಿತು.
✍️... ಅನಿತಾ ಜಿ.ಕೆ.ಭಟ್.
22-03-2020.
Momspresso Kannada and Pratilipi Kannada ದಲ್ಲಿ ಪ್ರಕಟವಾದ ಕಥೆ..
ನಿಜ..ಕೆಟ್ಟ ಘಟನೆಗಳ ನಡೆಯಲೇ ಬಾರದು
ReplyDeleteಹೌದು...ಆ ತಾಯಿಯ ಮನಸು ಒದ್ದಾಡುವ ಪರಿ ಯಾರಿಂದಲೂ ನೋಡಲಾಗದು..💐🙏
ReplyDelete