ಅರ್ಧದವರೆಗೆ ಜೊತೆಯಲ್ಲಿಯೇ ಹೋದರೂ ಕೇಶವ್ ಒಂದು ಮಾತೂ ಆಡಲಿಲ್ಲ..ಗುರ್ಮೆಯಲ್ಲಿ ಇಳಿದು ತನ್ನ ಜೀಪಿಗೆ ಸಲಕರಣೆಗಳನ್ನು ವರ್ಗಾಯಿಸಿದ..ಸೋತ ಮುಖದೊಂದಿಗೆ..
ಅವನನ್ನು ಇಳಿಸಿದ ಇಬ್ಬರೂ ಹೊರಟರು..ದಾರಿ ಮಧ್ಯದಲ್ಲಿ ಅಂತೂ ನಮ್ಮ ಜೇಬು ಭದ್ರವಾಯಿತು ಎಂದು ಇಬ್ಬರೂ ಕೈಕೈ ಹೊಡೆದುಕೊಂಡು ನಕ್ಕರು.. ಕೇಶವ್ ಹತಾಶೆಯಿಂದ ಮನೆ ಸೇರಿದ..
ಕೂದಲು ಕೆದರಿತ್ತು... ಮುಖದಲ್ಲಿ ಅಸಹನೆ ಎದ್ದುತೋರುತ್ತಿತ್ತು..ಬೆವರು ಮುಖವಿಡೀ ಹನಿಹನಿಯಾಗಿ ಜಾರುತ್ತಿತ್ತು..ಬೆವರಿನಿಂದ ತೇವವಾದ ಅಂಗಿ ಮೈಗೆ ಅಂಟಿತ್ತು... ಜೀಪನ್ನು ಅಂಗಳದಲ್ಲಿ ನಿಲ್ಲಿಸಿದ ಶೈಲಿಯಲ್ಲೇ ಅವನ ಒರಟುತನ ಸಾಬೀತಾಗಿತ್ತು..ಮನೆಯ ಚಾವಡಿಯನ್ನು ಪ್ರವೇಶಿಸಿದ ಕೇಶವ್ ನನ್ನು ಬಂಗಾರಣ್ಣ "ಕೇಶವ್......"ಎಂದು ಸಮಾಧಾನದಿಂದ ಕರೆದರು..
"ಏನು..."ಎಂದ ಅವನ ದನಿಯಲ್ಲಿ ನಯವಿನಯ, ಅಪ್ಪನೆದುರು ತೋರಬೇಕಾದ ಗೌರವ ಯಾವುದೂ ಇರಲಿಲ್ಲ..
"ಇವರು..ಶೇಷಣ್ಣ.. ಅಂತ... ನಾವಿಬ್ಬರೂ ಒಂದೇ ಶಾಲೆಯಲ್ಲಿ ಓದಿದವರು.. ಶಿಕ್ಷಕರಾಗಿ ನಿವೃತ್ತರಾದವರು.."
"ಹೂಂ... ಆಯ್ತು.. ನನ್ನನ್ನೇಕೆ ಕರೆದ್ರಿ..ನಂಗೆ ಬೇರೆ ಕೆಲ್ಸ ಇದೆ..."
"ಶೇಷಣ್ಣ..ಇವನೇ ಕೇಶವ್.. "ಎಂದು ಮಗನನ್ನು ಪರಿಚಯಿಸಿದರು..
"ಕೇಶವ್... ನಮಸ್ಕಾರ ಕಣೋ...ಏನ್ಮಾಡ್ತಾ ಇದೀಯಾ ಸಧ್ಯ.."
"ಏನ್ಮಾಡ್ತಾ ಇದೀನಿ..ನಿಮ್ಮಲ್ಲಿ ಮಾತಾಡ್ತಾ ಇದೀನಿ..ನಿಮ್ಗೇನು ಕಣ್ಣು ಕಾಣ್ಸಲ್ವಾ..?.ಕಿವಿ ಕೇಳ್ಸಲ್ವಾ...?.."
"ಕೇಶವ್...."ಎಂದರು ಗಂಭೀರವಾಗಿ ಬಂಗಾರಣ್ಣ..
"ಕೇಶವ್.. ಏನು ಉದ್ಯೋಗ ಮಾಡ್ತಾ ಇದೀಯಾ ಅಂತ ಕೇಳ್ದೆ ಕಣೋ..."ಎಂದ ಶೇಷಣ್ಣ...
"ಬಂಗಾರು..ಈಗಿನ ಮಕ್ಳೇ ಹೀಗೆ.. ಒಂದು ಮಾತ್ನಾಡಿ ಎರಡನೆಯದು ಮಾತ್ನಾಡ್ಬೇಕಾದ್ರೆ...ಮೂಗಿನ ತುದಿಯಲ್ಲಿ ಕೋಪ ವಕ್ಕರಿಸಿಬಿಡುತ್ತೆ.."ಎಂದು ಮಾತು ಮುಂದುವರಿಸಿದರು..
"ಇಂಜಿನಿಯರ್ ಆಗಿ ಬೆಂಗಳೂರಲ್ಲಿ ಉದ್ಯೋಗದಲ್ಲಿದ್ದೆ..ಈ ಅಪ್ಪ ಉದ್ಯೋಗ ಬಿಡಿಸಿ ಕರ್ಕೊಂಡು ಬಂದಿದ್ದಾರೆ...ಈಗ ಕೃಷಿ ಮಾಡೋದು..." ಎಂದ ಕೇಶವ್.
"ಸರಿ ಕಣೋ..ಹುಡುಗಾ..ಒಳ್ಳೇದಾಗ್ಲಪ್ಪಾ..."
"ಹೂಂ..ಮುಗೀತಾ ನಿಮ್ಮ ಇಂಟರ್ವ್ಯೂ.."
ಎಂದು ಸಿಡುಕುತ್ತಲೇ ತನ್ನ ಕೋಣೆಯತ್ತ ತೆರಳಿದ.. ಹೊಟ್ಟೆ ಚುರುಗುಟ್ಟುತ್ತಿತ್ತು..ಅಮ್ಮನ ಡಯಟ್ ಗಂಜಿಯೂಟ ಯಾವಾಗಲೋ ಕರಗಿತ್ತು..ತಲೆಗೇರಿದ ಮದ ಸಂಪೂರ್ಣ ಇಳಿದಿತ್ತು..ಮೂಲೆಯಲ್ಲಿರಿಸಿದ ಕ್ಯಾಮೆರಾ ತನ್ನತ್ತಲೇ ನೋಡಿ ಕುಹಕವಾಗಿ ನಗುತ್ತಿರುವಂತೆ ಭಾಸವಾಯಿತು...ನಿನ್ನೆ ಅದೇ ಕ್ಯಾಮೆರಾವನ್ನು ಕೈಯಲ್ಲಿ ಜೋಪಾನವಾಗಿ ಹಿಡಿದು 'ನಾಳೆ ನನ್ನನ್ನು ಮತ್ತು ಸೌಂದರ್ಯದ ಖನಿಯನ್ನು ಜೊತೆಯಾಗಿ ಸೆರೆಹಿಡಿಯುವ ಅದೃಷ್ಟವಂತೆ ನೀನು' ಎಂದು ಮುತ್ತಿಕ್ಕಿದ್ದ... ಇಂದು ಎಲ್ಲಾ ಮಣ್ಣುಮುಕ್ಕಿತು..ಛೇ...!! ಎಲಾ..ಆ ಚಿನಕುರುಳಿ..!! ನನ್ನ ಕೈಯಿಂದ ತಪ್ಪಿಸಿಕೊಂಡಳಲ್ಲಾ... ಎಂದು ಬಲವಾಗಿ ಮೇಜನ್ನು ಗುದ್ದಿದ..ಶಬ್ದ ಕೇಳಿ ಬೆಚ್ಚಿಬಿದ್ದ ಅಮ್ಮ ಸುಮಾ ಓಡೋಡಿ ಬಂದರು..
"ಕೇಶವ್..ಎಂತಾತೋ..ಮಗಾ..ಬಾ ತಿಂಡಿ ರೆಡಿ ಮಾಡಿದ್ದೀನಿ..."
"ನಂಗೆ ಹಸಿವಿಲ್ಲ ಅಮ್ಮಾ.."
"ನನ್ನ ಮಗನ ಹಸಿವು ನನಗೆ ಗೊತ್ತಿಲ್ವಾ...ಬಾ.."ಎಂದು ಕರೆದೊಯ್ದರು..
ಶೇಷಣ್ಣ "ನಾನಿನ್ನು ಬರ್ತೇನೆ ಆದಷ್ಟು ಬೇಗ ಸೂಕ್ತ ಜಾತಕದೊಂದಿಗೆ...ಮತ್ತೆ ಬರುವೆ.."ಎಂದು ಹೇಳಿ ಹೊರಟರು.. ಕೈಯಲ್ಲೊಂದು ಉದ್ದದ ಮರದ ಹಿಡಿಕೆಯ ಕೊಡೆ..ಕಾಲಲ್ಲಿ ಚರ್ಮದ ಪಾದರಕ್ಷೆ ಧರಿಸಿ "ಬರುವಾಗ ಭಯಂಕರ ಬಿಸಿಲು..ಕೊಡೆ ಬಿಡಿಸಿಕೊಂಡು ಬಂದೆ..ಈಗ ಊರುಗೋಲಿನಂತೆ ಊರಲು ಸಹಾಯಕವಾಗುತ್ತದೆ...ಹ್ಹ ಹ್ಹ ಹ್ಹಾ..ಬಂಗಾರಣ್ಣ ನೀನು ನನಗಿಂತ ಗಟ್ಟಿಮುಟ್ಟಾಗಿದ್ದೀಯ..."
ಬಂಗಾರಣ್ಣ ಮೀಸೆ ತಿರುವಿ ನಕ್ಕರು...ಮನಸಲ್ಲೇ.. ಮತ್ತೆ ನಾನೇನು ನಿನ್ನಂತೆ ಬಡಮೇಷ್ಟ್ರೇ...ದೊಡ್ಡ ಜಮೀನ್ದಾರ...ಅಂದುಕೊಂಡರು..
ಅವರು ಅಂಗಳವನ್ನು ದಾಟಿ ಹೋಗುತ್ತಲೇ ಒಳಬಂದ ಬಂಗಾರಣ್ಣ"ಕೇಶವ್.. ಕೇಶವ್.."ಎಂದು ಅಬ್ಬರಿಸಿದರು..
ಕೈಕಾಲು ಮುಖ ತೊಳೆದು ಬಂದ ಕೇಶವ್.."ಏನೋ.. ಕೇಶವ್..ನಿಂಗೆ ಹಿರಿಯರ ಎದುರು ಹೇಗೆ ವರ್ತಿಸಬೇಕು ಎಂಬ ಪರಿಜ್ಞಾನವೂ ಇಲ್ವಾ.."
"ನಾನೇನ್ಮಾಡ್ದೆ...ತಲೆತಿನ್ನುವ ಪ್ರಶ್ನೆಗಳನ್ನು ಕೇಳಿದ್ದು ಅವ್ರು.."
"ಕೇಳಿದ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸೋದು ಬಿಟ್ಟು ..ಏನದು ಉದ್ಧಟತನದ ಉತ್ತರ...?? ಅವರಿನ್ನೂ ಹೊರಟಿಲ್ಲ.. ಅದಕ್ಕಿಂತ ಮೊದಲೇ.ಮೇಜನ್ನು ಗುದ್ದುವ ಸದ್ದು..ಇದರಿಂದ ಮುರಿಯೋದು ಬೆಲೆಬಾಳುವ ಮೇಜು ಮಾತ್ರವಲ್ಲ...ನಿನ್ನ ಜೀವನ ಕೂಡಾ... ಅದನ್ನು ಅರ್ಥ ಮಾಡ್ಕೋ.."
ತಲೆತಗ್ಗಿಸಿ ನಿಂತಿದ್ದ ಕೇಶವ್..
"ನಾನು ಅವರನ್ನು ಕರೆದು ನಿನ್ನ ಗುಣಗಾನ ಮಾಡಿ ನಿನಗೊಳ್ಳೆ ಸಂಬಂಧ ಕುದುರಿಸಲು ಹೇಳಿದರೆ.. ನೀನು ಹೀಗೆ ವರ್ತಿಸಿದರೆ ಅವರಿಗೆ ನಿನ್ನ ಮೇಲೆ ಯಾವ ಭಾವನೆ ಮೂಡೀತು..? ನಿನ್ನ ಜೀವನ ಕೈಯಾರೆ ಹಾಳು ಮಾಡ್ಕೋತಾ ಇದೀಯಾ.."
ಕೇಶವನಿಂದ ಉತ್ತರವಿಲ್ಲ..
"ಹೌದು.. ಅಷ್ಟೆಲ್ಲಾ ..ಕೋಪದಿಂದ ಬುಸುಗುಡುತ್ತಾ ಬಂದೆಯಲ್ಲಾ.. ಏನು ಘನಾಂದಾರಿ ಕೆಲಸ ಮಾಡಿ ಬಂದೆ..?"
ಅಪ್ಪನ ಮಾತಿಗೆ ಅಮ್ಮನೂ ದನಿಗೂಡಿಸಿದರು.".ಮಗನೇ ನಾನೂ ಅಪ್ಪನೂ ನಿನಗೆ ಒಂದೊಳ್ಳೆ ಹುಡುಗಿ ಸಿಗಲಿ ಎಂದು ಇಷ್ಟೆಲ್ಲ ಶ್ರಮವಹಿಸಿದರೂ ನೀನಿನ್ನೂ ನಿನ್ನ ಹುಡುಗಾಟಿಕೆ ಬಿಟ್ಟಿಲ್ಲ.. ಸ್ವಲ್ಪ ಒಳ್ಳೇತನ ಮೈಗೂಡಿಸಿಕೋ.. ಕೊನೇಪಕ್ಷ ಯಾರಾದರೂ ಬಂದಾಗಲಾದರೂ ಸರಿಯಾಗಿ ಇರಬೇಕು.."
ಕೇಶವನ ಆವೇಶ ಸಂಪೂರ್ಣವಾಗಿ ಪಾತಾಳಕ್ಕಿಳಿಯಿತು..
"ಆ ಮೇಜು ನನ್ನಜ್ಜನ ಕಾಲದ್ದು..ಹಳೇ ಹಲಸಿನ ಮರದ ಹಲಗೆಯಿಂದ ಮಾಡಿದ್ದು.. ಎಲ್ಲರೂ ಪಾಲಲ್ಲಿ ಅದನ್ನೇ ನಿರೀಕ್ಷಿಸಿದ್ದರು..ಆದರೂ ಅದು ಯಾರ ಕೈಗೂ ಹೋಗದೆ ಇದೇ ಹಿರಿಮನೆಯಲ್ಲಿ ಉಳಿದಿದ್ದರೆ ಅದು ನಮ್ಮ ಸೌಭಾಗ್ಯ..ಅದನ್ನೂ ಗುದ್ದುತ್ತೀಯಲ್ಲಾ... ಏನು ನಿನ್ನ ಅಹಂಕಾರ.. ಗೆಳೆಯರೊಂದಿಗೆ ಬೆಟ್ಟಿಂಗ್ ಮಾಡಿ ಸೋತಿದ್ದೀಯಾ.?.."
ಅಪ್ಪನೆದುರು ತಲೆಯೆತ್ತುವ ಧೈರ್ಯವಿರಲಿಲ್ಲ ಕೇಶವನಿಗೆ..
"ನೋಡು..ಇವತ್ತೇ ಕೊನೆ..ಇದೆಲ್ಲಾ..ನಾಳೆಯಿಂದ ಫ್ರೆಂಡ್ಸ್, ಬೆಟ್ಟಿಂಗ್ ಏನೂ ಇಲ್ಲ.. ಬೆಳಗ್ಗೆ ನನ್ನ ಜೊತೆ ತೋಟಕ್ಕೆ..ತೊಟದಲ್ಲಿ ಕೆಲಸದಾಳುಗಳ ಉಸ್ತುವಾರಿ... ಪೇಟೆಗೆ ಹೋಗುವುದಿದ್ದರೆ ನನ್ನ ಜೊತೆಗೆ ಹೋಗುವುದು.. ಏನು ಖರ್ಚು ಮಾಡುವುದಿದ್ದರೂ ನನಗೆ ಹೇಳಿಯೇ ಮಾಡಬೇಕು.."
"ಹೂಂ .."ಎಂದ ಕ್ಷೀಣವಾದ ದನಿಯಲ್ಲಿ..
"ಇದೆಲ್ಲ ನಿನ್ನ ಒಳ್ಳೆಯದಕ್ಕೆ. . ಹೇಳ್ತಾಯಿರುವುದು..ಶೇಷಣ್ಣ ಸಂಬಂಧ ಮಾತನಾಡಿಸಬೇಕಾದರೆ ನೀನೂ ಸರಿಯಾಗಿ ಇರಬೇಕು..ತಿಳೀತಾ..ಇವತ್ತೇ ನಿನ್ನ ಗೆಳೆಯರಿಗೆ ಫೋನ್ ಮಾಡಿ ಗುಡ್ ಬೈ ಹೇಳಿಬಿಡು.."ಎಂದ ಅಪ್ಪನ ಗಡಸುಮಾತಿಗೆ ಕೇಶವ್ ನ ಕಣ್ಣುಗಳು ತೇವವಾದುವು...
ಶೇಷಣ್ಣ ಮನೆಯತ್ತ ಸಾಗುತ್ತ ಲೆಕ್ಕ ಹಾಕುತ್ತಿದ್ದ..'ಅಲ್ಲ ಈ ಬಂಗಾರಣ್ಣ ಮೊದಲೇ ಶ್ರೀಮಂತ ಕುಳ..ಇಂತಹವರ ಮಗನಿಗೆ ಹೆಣ್ಣು ಕೊಡಲು ಸಾಲುಗಟ್ಟಿ ಜನ ಬರಬೇಕಾಗಿತ್ತು.. ಆದರೂ ನನ್ನಲ್ಲಿ ಏಕೆ ಹೇಳಿದ? ನಾನು ಸ್ವಲ್ಪ ಜಾಸ್ತಿಯೇ ಹೇಳಿದೆ ಫೀಸು... ಅದನ್ನು ಮರುಮಾತನಾಡದೆ ತಂದುಕೊಟ್ಟ...!! ಆ ಕೇಶವನೋ..ಒಳಗೆ ಬರುವಾಗ ರೌಡಿ ರಂಗಣ್ಣನ ಗೆಟಪ್ ನಲ್ಲಿ ಬಂದಿದ್ದ...ಏನಾದ್ರೂ ಅಡ್ಡದಾರಿ ಹಿಡಿದ ಯುವಕ ಅನ್ನುವುದು ಮೊದಲ ಭೇಟಿಯಲ್ಲೇ ಮೂಡಿದ ಅನುಮಾನ..!!ಬಂಗಾರಣ್ಣ ಮಗನನ್ನು ಹೊಗಳಿ ಅಟ್ಟಕ್ಕೇರಿಸುವಾಗ ಸತ್ಯ ನಾರಾಯಣರ ಮಗಳನ್ನು ಮಾತನಾಡಿಸಬೇಕೆಂದಿದ್ದೆ.. ಆದರೆ ಈಗ ಆ ಒಳ್ಳೆಯ ಮನೆತನದ ಚೆಲುವೆಯನ್ನು ಇವನಿಗೆ ಮಾತನಾಡಿಸುವುದು ಬೇಡಪ್ಪಾ ಎನಿಸುತ್ತದೆ..ಹಾಗೆ ಮಾಡಿದರೆ ಮತ್ತೆ ಯಾರೂ ಈ ಬ್ರೋಕರ್ ಶೇಷಣ್ಣನಲ್ಲಿ ಸಂಬಂಧ ಮಾತನಾಡಿಸಲು ಹೇಳಲಾರರು.. ನೋಡೋಣ ಇವನಿಗೆ ತಕ್ಕ ಯುವತಿಯನ್ನು ಹುಡುಕಿ .. ಸಂಬಂಧ ಬೆಸೆದು .. ಐವತ್ತು ಸಾವಿರ ಜೇಬಿಗೆ ಹಾಕಿಕೊಳ್ಳದಿದ್ದರೆ ನಾನು ಬ್ರೋಕರ್ ಶೇಷಣ್ಣನೇ ಅಲ್ಲ..ಹ್ಹ ಹ್ಹ ಹ್ಹಾ...' ಅಂದುಕೊಳ್ಳುತ್ತಾ ಮನೆಯಂಗಳಕ್ಕೆ ಗುಡ್ಡದ ದಾರಿಯಿಂದ ಬಂದಿಳಿದ..
ನಗುನಗುತ್ತಾ ಬಂದ ಗಂಡನನ್ನು ಕಂಡ ಮಡದಿ .."ಬಂಗಾರಣ್ಣನ ಮಗನಿಗೆ ಸಂಬಂಧ ಕುದುರಿಸಿಯೇ ಬಂದಿರೋ ಹೇಗೇ..?"
"ಆಹಾ.. ಎಂತಹಾ ಸವಿಯಾದ ಮಾತು..!! ನನ್ನ ಸುಬ್ಬಮ್ಮನ ಬಾಯಿಗೆ ಸಕ್ರೆ ಹಾಕಾ..!! ನಿನ್ನ ಮಾತಿನಂತೆ ಆದ್ರೆ ಸುಬ್ಬೀ..ಈ ಸಾರಿ ನಿನಗೆರಡು ಚಿನ್ನದ ಬಳೆ ಮಾಡಿಸೋದಂತೂ ಗ್ಯಾರಂಟಿ.." ಎನ್ನುತ್ತಾ ಸುಬ್ಬಿಯತ್ತ ತುಂಟನಗೆ ಬೀರಿದ..
*****
ಮೈತ್ರಿ "ಹೋಯ್..ತಮ್ಮಣ್ಣಾ..ಇದು ಚೆನ್ನಾಗಿದೆಯಾ..."ಎಂದಾಗ ಹಿಂದಿರುಗಿ ನೋಡಿದ ಮಹೇಶ್ ತನ್ನ ಕಣ್ಣನ್ನೇ ನಂಬದಾದನು..ಅಕ್ಕ ತನ್ನಿಷ್ಟದ ಬಣ್ಣದ ಶೇರ್ವಾನಿ ತಂದಿದ್ದಳು.. " ವಾವ್..!!ಅಕ್ಕಾ ತುಂಬಾ ಚೆನ್ನಾಗಿದೆ..."
"ನಂಗೊತ್ತಿಲ್ವಾ ನನ್ನ ಮುದ್ದು ತಮ್ಮನ ಟೇಸ್ಟ್.."
"ಅಕ್ಕಾ ಚೆಂದ ಇದೆ..ಆದ್ರೆ ಅಪ್ಪಾ ನಿಂಗೆ ಕೊಟ್ಟಿದ್ದು..ಎರಡುಸಾವಿರ...ನಿನ್ನ ಸೀರೆಯೇ ಭರ್ಜರಿಯಾಗಿದೆ. ..ಅದ್ಕೇ ಎರಡುಸಾವಿರ ಇರಬಹುದೇನೋ.. ಮತ್ತೆ ಇದನ್ನೂ ಹೇಗೆ ಕೊಂಡುಕೊಂಡೆ...??"
"ಮೆತ್ತಗೆ ಹೇಳೋ ತಮ್ಮಾ..ಅಪ್ಪ ಕೇಳಿಸ್ಕೋತಾರೆ.."
"ಹೂಂ.."
"ಅಪ್ಪ ಕೊಡುವ ದುಡ್ಡಲ್ಲಿ ಉಳಿಕೆ ಮಾಡಿಟ್ಟಿದ್ದೆ..ಅದರಲ್ಲಿ ತಂದೆ ಕಣೋ.."
"ನನ್ನ ಪ್ರೀತಿಯ ಅಕ್ಕಾ ನೀನು..❤️❤️ ಇನ್ನು ಮದುವೆ ಆದ ಮೇಲೆ ಇನ್ನೂ ಜಾಸ್ತಿ ಗಿಫ್ಟ್ ಬರ್ಲಿ ನಂಗೆ...😍😍"
"ಶುದ್ಧ ತರ್ಲೆ ಕಣೋ..ಅಂತ ಪ್ರೀತಿಯಿಂದ ತಮ್ಮನ ತಲೆಗೊಂದು ಮೊಟಕಿದಳು.."
ಮುಂದುವರಿಯುವುದು..
✍️... ಅನಿತಾ ಜಿ.ಕೆ.ಭಟ್.
07-03-2020.
ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ'Home,> ಮತ್ತು view web version ಕ್ಲಿಕ್ ಮಾಡಿ.,. ಧನ್ಯವಾದಗಳು 💐🙏
No comments:
Post a Comment