ಜೀವನ ಮೈತ್ರಿ-ಭಾಗ ೪೮
ಗೋಡೆಯ ಮೇಲಿನ ಮೂವತ್ತು ವರ್ಷ ಹಿಂದಿನ ಗಡಿಯಾರ ಡೈಂ ಡೈಂ ಎಂದು ಒಂಭತ್ತು ಗಂಟೆ ಬಡಿಯಿತು.ಆ ಶಬ್ದ ಎಲ್ಲರ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು.ಮನೆಯಂಗಳದಲ್ಲಿ ಜೀಪು ಬಂದು ನಿಂತಿತು.ಚಾಂದಿನಿ ,ಮೇದಿನಿ ,ಗಣೇಶ ಶರ್ಮ ಅಂಗಳಕ್ಕಿಳಿದರು.ಬಂದವರನ್ನು ಕೈ ಕಾಲಿಗೆ ನೀರು ಕೊಟ್ಟು ಸಾವಕಾಶವಾಗಿ ಬಂದಿರಾ ಎಂದು ಉಪಚರಿಸಿ ಮನೆಯೊಳಗೆ ಕರೆದೊಯ್ದರು.
ಮಮತಾ ಮತ್ತು ಮಗಳಂದಿರು ಬಿಸಿನೀರು ಬೆಲ್ಲ ಹಿಡಿದು ಬಂದರು.ಎಲ್ಲರಿಗೂ ಆಸರಿಂಗೆ ಕೊಟ್ಟು ಮಾತನಾಡಿಸಿದರು.ಒಳಗೆ ತಿಂಡಿಗೆ ಪಂಕ್ತಿ ತಯಾರುಮಾಡುತ್ತಿದ್ದ ಕಿಶನ್ ಮೆಲ್ಲನೆ ಹೊರಗೆ ಬಂದ..ಅವನ ಕಣ್ಣು ಮೊದಲು ಅರಸಿದ್ದು ತನ್ನ ಪ್ರೇಮದೇವತೆಯನ್ನು.ಅಪ್ಪಟ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಕಿಶನ್ ನನ್ನು ಕಂಡು ಎಲ್ಲರೂ ಬೆರಗಾದರು.ಪ್ಯಾಂಟ್ ಶರ್ಟ್ ತೊಟ್ಟಾಗ ಕಾಣುತ್ತಿದ್ದ ಮಾಣಿಯ ರೂಪವೇ ಬೇರೆ.. ಇಂದು ಬೆಳ್ಳಗಿನ ಶಲ್ಯ ಪಂಚೆ ಹಣೆಯಮೇಲಿನ ವಿಭೂತಿನಾಮ ಕುಂಕುಮ ತಿಲಕದಿಂದ ಲಕ್ಷಣವಾಗಿ ಕಾಣುತ್ತಿದ್ದ.. ಮಹಾಲಕ್ಷ್ಮಿ ಅಮ್ಮ ಖುಷಿಯಿಂದ ಸೊಸೆಯ ಬಳಿ
"ಮಾಣಿ ಅಡ್ಡಿಲ್ಲೆ..ಉದ್ಯೋಗದಲ್ಲಿದ್ದರೂ ನಮ್ಮ ಕ್ರಮ ಬಿಟ್ಟಿದಯಿಲ್ಲೆ.."ಎಂದುಸುರಿದರು.
ಮಂಗಳಮ್ಮನ ಬಳಿ ಬಂದು
" ಏನು..?" ಎಂದು ಕೇಳಿದಾಗ ಸರಳನಡೆನುಡಿಯ ಮಾಣಿ ಎಂದುಕೊಂಡು "ಒಳ್ಳೆಯದು.."ಎಂದರು ನಗುತ್ತಾ..(ಮನೆಗೆ ಬಂದವರಲ್ಲಿ ಏನು..ಎಂದು ಕೇಳುವುದು.. ಅವರು ಒಳ್ಳೆಯದು..ಎಂದುತ್ತರಿಸುವುದು ಕರಾವಳಿಯ ಹವ್ಯಕರ ಪದ್ಧತಿ). ಮೈತ್ರಿಯ ಕಡೆಗೊಂದು ಪ್ರೇಮಭರಿತ ನಗೆಸೂಸಿ ಶಾಸ್ತ್ರಿಗಳನ್ನು ಉಪಚರಿಸಿದ.. ಶ್ಯಾಮ ಶಾಸ್ತ್ರಿಗಳ ಹತ್ತಿರ ಬಾಗಿ ಸ್ವಲ್ಪ ಮಾತನಾಡಿ ಮಹೇಶನಿಗೆ ಶೇಕ್ ಹ್ಯಾಂಡ್ ಕೊಟ್ಟ..ಶಂಕರ ಶಾಸ್ತ್ರಿಗಳಲ್ಲಿ ಬೆಂಗಳೂರಿನಿಂದ "ಇವತ್ತು ಬಂದ್ರಾ.. ?"ಎನ್ನುತ್ತಾ ಕುಶಲ ವಿಚಾರಿಸಿ ಒಳಗೆ ತೆರಳಿದ..ಒಳ ತಲುಪಿ ಒಮ್ಮೆ ತಿರುಗಿ ನೋಡಿದ.. ಮೈತ್ರಿಯ ನಯನಗಳು ಅವನನ್ನೇ ಹಿಂಬಾಲಿಸುತ್ತಿದ್ದವು..ಇಬ್ಬರ ನಯನಗಳು ಸಂಧಿಸಿದವು..
ತಿಂಡಿಗೆ ಒಳಗೆ ಕರೆದರು.ಮನೆಯವರೆಲ್ಲರೂ ಸೇರಿ ಬಡಿಸಿದರು .ಸಿಹಿತಿಂಡಿ ಸಾಟು ಬಡಿಸಲು ಕಿಶನ್ ನಿಂತ..ತಂಗಿಯರು ಕಣ್ಸನ್ನೆಯಲ್ಲಿ ತಮ್ಮನಿಗೇನೋ ಹೇಳಿದರು.ಪಂಚೆ ಮೇಲೆತ್ತಿ ಕಟ್ಟಿಕೊಂಡು ಬಡಿಸುತ್ತಾ ಬಂದವನು ಮೈತ್ರಿಗೆ ಎರಡು ಸಾಟು ಬಡಿಸಿದ್ದ..ತಲೆತಗ್ಗಿಸಿ ಕೆಳಗೆ ನೋಡುತ್ತಿದ್ದ ಮೈತ್ರಿ ಒಮ್ಮೆಲೇ ತಲೆಯೆತ್ತಿದಳು.ಕಣ್ಣಲ್ಲೇ ಪ್ರೀತಿಯಿಂದ ಗದರಿದಳು.
"ತಿನ್ನಲೇ ಬೇಕು" ಎಂದರು ಕಿಶನ್ ತಂಗಿಯರು..
"ಬೇಗ ತಿನ್ನಿ..ಇನ್ನೊಮ್ಮೆ ವಿಚಾರಣೆ ಮಾಡುವಾಗ ಇನ್ನೆರಡು ಬಡಿಸುತ್ತಾರಂತೆ ಭಾವ.."ಎಂದರು ಕಿಶನ್ ನ ಭಾವಂದಿರು.
ಮೈತ್ರಿ ಗೆ ಸಿಹಿ ಇಷ್ಟವೇ.. ಆದರೆ ಇಂದೇಕೋ ಸೀರೆ ಜಾರದಂತೆ ಲಂಗ ಬಿಗಿಯಾಗಿ ಬಿಗಿದು ಆಕೆಗೆ ಆಹಾರ ಸೇವಿಸಲು ಕಷ್ಟವಾಗುತ್ತಿತ್ತು ಪಾಪ..!! ಮೆಲ್ಲನೆ ತಿನ್ನುತ್ತಿದ್ದುದನ್ನು ಕಂಡು ಕಿಶನ್ ಸೋದರತ್ತೆ ಮಮತಾಳಲ್ಲಿ ಉಸುರಿದಳು "ಮದಿಮ್ಮಾಳು(ಮದುಮಗಳು) ಭಾರೀ ನಿಧಾನ.. ಶಾಸ್ತ್ರಿ ಮೇಷ್ಟ್ರಷ್ಟು ಚುರುಕಿಲ್ಲ..ಜೋರಿಲ್ಲ.."
"ಹಾಗೇನಿಲ್ಲ..ಇವತ್ತೇನೋ ಲಜ್ಜೆಯಿಂದ ಹೀಗೆ ಮಾಡುತ್ತಿದ್ದಾಳೆ.."ಎಂದರು ಭಾವೀ ಸೊಸೆಯ ಪರವಾಗಿ..
ಎರಡನೇ ಸಲ ಸ್ವೀಟ್ ತಂದಾಗ ಎಲ್ಲರೂ ಮೈತ್ರಿ ಗೆ ಬಡಿಸು ಕಿಶನ್ ಅಂದರೂ ಆಕೆ ತಿನ್ನಲು ಕಷ್ಟ ಪಡುತ್ತಿದ್ದುದು ನೋಡಿ ಹಾಗೇ ಒಂದು ಸ್ಮೈಲ್ ಕೊಟ್ಟು ಮುಂದೆ ನಡೆದ.. ಇದು ಮೈತ್ರಿ ಗೆ ಬಹಳ ಇಷ್ಟವಾಯಿತು.. 'ನನ್ನನ್ನು ಅರ್ಥಮಾಡಿಕೊಂಡಿದ್ದಾರಲ್ಲ ಅಷ್ಟು ಸಾಕು ನನಗೆ ' ಎನ್ನುವಂತಿತ್ತು ಅವಳ ಮುಖದ ಭಾವ..
ತಿಂಡಿಯ ಬಳಿಕ ಎಲ್ಲರಿಗೂ ಮನೆ ತೋರಿಸಿದರು ಗಣೇಶ್ ಶರ್ಮ ಮತ್ತು ಕಿಶನ್..ಬಹಳ ವೈಭವೋಪೇತ ವಿಶಾಲ ಮನೆಯಲ್ಲದಿದ್ದರೂ ಹಳ್ಳಿಯ ಮಟ್ಟಿಗೆ ಚೆನ್ನಾಗಿಯೇ ಇತ್ತು.ಕಾವಿ ಸಾರಣೆ ನೆಲದ ಪುಟ್ಟ ಚಾವಡಿ.ಅದಕ್ಕೆ ತಾಗಿಕೊಂಡು ಒಂದು ರೂಮು.ಚಾವಡಿಯಿಂದ ಒಳಗೆ ಒಂದು ದೇವರ ಕೋಣೆ.ನಿತ್ಯವೂ ಸರಳವಾಗಿ ಪೂಜೆ ನಡೆಯುತ್ತದೆ ಎಂದರು ಗಣೇಶ್ ಶರ್ಮ.ಅದರಿಂದ ಒಳಗೆ ಒಂದು ಊಟದ ಪಡಸಾಲೆ.ದೇವರಕೋಣೆಯ ಪಕ್ಕ ಸೌದೆ ಒಲೆಯಲ್ಲಿ ಅಡುಗೆ ಮಾಡುವ ಕೋಣೆ-ಅಟ್ಟುಂಬಒಳ .ಪಡಸಾಲೆಯ ಅಂಚಲ್ಲಿ ಒಂದು ಪುಟ್ಟ ಕೋಣೆ..ಅದರ ಪಕ್ಕ ಅಟ್ಟಕ್ಕೆ ಹತ್ತಲು ಒಂದು ಮರದ ಏಣಿ.ಅಡಿಕೆ, ತೆಂಗಿನಕಾಯಿ,ಕಾಳುಮೆಣಸು, ತೆಂಗಿನೆಣ್ಣೆ, ಉಪ್ಪಿನಕಾಯಿ ,ದನಗಳಿಗೆ ಹಿಂಡಿ ,ಬೇಡದ ವಸ್ತುಗಳನ್ನು ಇಡುವ ಜಾಗ ಇದುವೇ.. ಎಲ್ಲರೂ ಮೇಲೇರಿದರು.ಮೈತ್ರಿ ಮಾತ್ರ ಸೀರೆಯುಟ್ಟು ಆ ಏಣಿ ಏರಲು ಭಯಪಟ್ಟಳು.ಒಬ್ಬಳೇ ನಿಂತಿರುವೆಯೇಕೆ ಮುದ್ಗೊಂಬೆ ... ಜೊತೆಗೆ ನಾನಿರುವೆ ಎಂಬಂತೆ ಬಂದ ಕಿಶನ್.. ಆಕೆಯನ್ನು ಚಾವಡಿಯ ಕೋಣೆಗೆ ಕರೆದೊಯ್ದ.. ಮುದ್ದು ಮನಸು .. ನೂರು ಕನಸು...ಎದೆಯೊಳಗೆ ಧುಮ್ಮುಕ್ಕುವ ಭಾವನೆಗಳ ಝರಿ... ಕಿಶನ್ ನ ಅಪರಿಮಿತ ಪ್ರೀತಿಯ ಪರಿ.. ಸಂತೃಪ್ತಿಯ ಹೂನಗೆ ಬೀರಿದಳು ಮೈತ್ರಿ...
"ಮುದ್ಗೊಂಬೆ .. ಕಣ್ಮುಚ್ಚಿ ಬೊಗಸೆ ಮುಂದೆ ಮಾಡು.."
"ಸರಿ... ಆಯ್ತಪ್ಪಾ...ತಂಟೆಮಾಡುವ ತುಂಟನಲ್ಲ ತಾನೇ..?"
"ಇಲ್ಲ...ಅಷ್ಟು ನನ್ನ ಮೇಲೆ ನಂಬಿಕೆ ಇಲ್ವಾ."
"ಕಣ್ಮುಚ್ಚಿದೆ..ಬೊಗಸೆ ಮುಂದೆ ಮಾಡಿ ಆಯ್ತು.. ಪ್ಲೀಸ್ ..ನನ್ನಿಂದ ಹೆಚ್ಚು ಹೊತ್ತು ಕಣ್ಮುಚ್ಚೋಕೆ ಆಗಲ್ಲ..ನನ್ನನ್ನ ಸತಾಯಿಸ್ಬೇಡ..ಕಣೋ.."
ಕೈಯೊಳಗೆ ತಾನು ತಂದಿದ್ದನ್ನ ಇಟ್ಟು "ನಿನ್ನ ಪ್ರತಿ ಹೆಜ್ಜೆಯ ಸಪ್ಪಳದ ಜೊತೆಗೆ ನಾನಿರುವಾಸೆ..ನನ್ನ ಬಯಕೆ ಈಡೇರಿಸುವೆಯಾ .." ಎಂದು ಕೇಳಿದಾಗ ಕಣ್ಣೊಡೆದಳು ಮೈತ್ರಿ..ಬೊಗಸೆಯೊಳಗೆ ಅವಳು ಬಹಳವೇ ಇಷ್ಟಪಡುತ್ತಿದ್ದ ಬೆಳ್ಳಿಯ ಕಾಲ್ಗೆಜ್ಜೆಯನು ಇಟ್ಟಿದ್ದ ಕಿಶನ್.. ಕಣ್ಣರಳಿಸಿ ನೋಡಿದಳು.. ಎಷ್ಟು ಚೆನ್ನಾಗಿದೆ.."ಅಲ್ಲ... ನಿಂಗೆ ಹೇಗೆ ಇದನ್ನೆಲ್ಲ ಕೊಡೋ ಐಡಿಯಾ ಬಂತು..?"
"ಅದೇ ಪ್ರೀತಿ ಅಂದ್ರೆ... ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳೋದು.. ಒಂದು ಜೀವದ ಮನಸು ಇನ್ನೊಂದು ಜೀವಕ್ಕೆ ಹೇಳದೆಯೇ ತಿಳಿಯೋದು.."
"ಅಬ್ಬಾ.. ಇಷ್ಟೆಲ್ಲಾ ನಂಗೊತ್ತಿಲ್ಲಪ್ಪಾ..ಆದ್ರೆ ನನ್ನ ಕಿಶನ್ ನಾನು ಒಂದಿನ ಮಾತಾಡದಿದ್ರೆ ಬೇಜಾರಾಗ್ತಾನೆ ಅನ್ನುವುದು ಮಾತ್ರ ಗೊತ್ತು.."ಎನ್ನುತ್ತಾ ಕೆನ್ನೆಯ ಮೇಲೊಂದು ಗುಳಿ ಬೀಳುವಂತೆ ನಕ್ಕಾಗ ಸೋತು ಹೋದ ಕಿಶನ್..
ಕಾಲ್ಗೆಜ್ಜೆ ಯನ್ನು ಜೋಪಾನವಾಗಿ ಇಟ್ಟುಕೊಂಡಳು ಮೈತ್ರಿ.. ಎಲ್ಲರೂ ಒಳಬರುವ ಅಂದಾಜು ಸಿಕ್ಕಾಗ ಕಿಶನ್ ಹೊರ ನಡೆದ.. ಮೈತ್ರಿ ಅಮ್ಮನನ್ನು ಸೇರಿಕೊಂಡಳು..
ಎಲ್ಲರೂ ಸ್ವಲ್ಪ ಹೊತ್ತು ಮಾತುಕತೆ ನಡೆಸಿ ಆದಷ್ಟು ಬೇಗ ನಿಶ್ಚಿತಾರ್ಥ ಇಟ್ಟುಕೊಳ್ಳೋಣ ಎಂದು ನಿರ್ಧರಿಸಿದರು.ಕಿಶನ್ ಭಾರವಾದ ಹೃದಯದಿಂದ ಮುದ್ಗೊಂಬೆಯನ್ನು ಬೀಳ್ಕೊಟ್ಟನು.. ಎಲ್ಲರೂ ಜೀಪನ್ನೇರಿದರು.. ಮೈತ್ರಿ ಮೊದಲು ಹತ್ತಿ ಹಿಂದೆ ಕುಳಿತಾಗ
"ಅಕ್ಕಾ.. ನೀನು ಕೊನೆಗೆ ಹತ್ತಿ ಬದಿಯ ಸೀಟಿನಲ್ಲಿ ಕುಳಿತುಕೋ..ಒಳಗೆ ಕುಳಿತರೆ ಭಾವನಿಗೆ ಬಾಯ್ ಮಾಡಲು ಕಷ್ಟ.. " ಎಂದಾಗ ನಗುವಿನ ಅಲೆ ಚಿಮ್ಮಿತು... ಕಿಶನ್ ,ಮೈತ್ರಿಯ ಮುಖ ಕೆಂಪೇರಿತು..
ಜೀಪು ಶಾಸ್ತ್ರೀ ನಿವಾಸದತ್ತ ಸಾಗಿತು..
*******
ಕೇಶವ್ ಇಂದು ಬೆಳಗ್ಗಿನಿಂದ ಸೌಜನ್ಯ ಳೊಡನೆ ಚಾಟ್ ಮಾಡದೆ ಡಲ್ ಆಗಿದ್ದ.ಹೇಗಿದ್ದರೂ ಸಂಜೆ ಮನೆಗೇ ಬರುತ್ತಾಳಲ್ಲ ...💞💞💞💞 ಎಂದು ಬುದ್ಧಿ ಹೇಳುತ್ತಿದ್ದರೂ ಮರ್ಕಟ ಮನಸ್ಸು ಕೇಳುತ್ತಿರಲಿಲ್ಲ.ಅಮ್ಮ "ಸ್ವಲ್ಪ ಸಹಕರಿಸು ಬಾ.." ಅಂದರೆ "ಆಗಲ್ಲ ನನ್ನಿಂದ " ಎಂದು ಸೌಜನ್ಯಳ ಫೊಟೋ ನೋಡುತ್ತಾ ಕುಳಿತ.. ರೊಮ್ಯಾಂಟಿಕ್ ಫೊಟೋಗಳನ್ನು ದೂರದಿಂದ ನೋಡಿದ ಅಮ್ಮಾ..."ಏನೋ ಇದು ನಿನ್ನ ಕೆಲಸ..ನಾವಿಷ್ಟು ನಿನಗಾಗಿ ಹುಡುಗಿ ಹುಡುಕಲು ಕಷ್ಟಪಡುತ್ತಿದ್ದರೆ ನೀನು.....ಹೀಗಾ ಮಾಡೋದು..."ಎಂದು ಕೋಪದಿಂದ ಕೆನ್ನೆಯ ಮೇಲೆ ರಪ್ಪೆಂದು ಬಾರಿಸಿದಳು.
"ಅಮ್ಮಾ.. ನನಗೇಕೆ ಹೊಡೆದೆ.."ದನಿಯೇರಿಸಿದ ಕೇಶವ್.
"ಮತ್ತಿನ್ನೇನು..ಮದುವೆಯಾಗುವ ಹುಡುಗ ಇಂತಹಾ ಕೆಲಸವಾ ಮಾಡೋದು.."
"ನಾನೇನು ಮಾಡಿದೆ ಮಾಡಬಾರದ್ದು.."
"ಇವತ್ತು ಹೆಣ್ಣು ತೋರಿಸೋಕೆ ಬರ್ತಾ ಇದ್ದಾರೆ..ಆದ್ರೂ ನಿಂಗೆ ಯಾಕೆ ಬೇಕು ಅಂತಹ ಅರೆಬರೆ ಬಟ್ಟೆ ತೊಟ್ಟ ಹೆಣ್ಣುಮಕ್ಕಳ ಫೊಟೋ ನೋಡಿ ಆನಂದಿಸುವ ಚಪಲ.."
"ಅಮ್ಮಾ.."ಕೂಗಾಡಿದ ಕೇಶವ್..
ದನಿ ಕೇಳಿ ಬಂಗಾರಣ್ಣ ಮೇಲಿನ ತೋಟದಲ್ಲಿದ್ದವರು ಮನೆಕಡೆಗೆ ಹೆಜ್ಜೆ ಹಾಕಿದರು.
"ಏನಾಯ್ತು... ಏನು ಕೇಶವ್ ನಿನ್ನ ಕೂಗಾಟ."
"ನೋಡೀಂದ್ರೆ.. ಇವತ್ತು ಬರೋರಿಗೆ ಇವನ ಚಪಲ ಎಲ್ಲ ಗೊತ್ತಾದ್ರೆ ನಮ್ಮ ಮರ್ಯಾದೆ ತಾನೇ ಹೋಗೋದು.."
"ಅಪ್ಪಾ.. ನಾನೇನು ಚಪಲಚೆನ್ನಿಗರಾಯ ಅಂತ ಅಂದ್ಕೋಬೇಡಿ.."
"ಮತ್ತೇನೋ ಅಮ್ಮ ಸುಳ್ಳು ಹೇಳ್ತಾಳೆ ಅಂತೀಯಾ..ಅಮ್ಮ ಯಾವತ್ತೂ ಮಗನ ವಿಷಯದಲ್ಲಿ ಇಂತಹಾ ಸುಳ್ಳು ಹೇಳಲ್ಲ ಅಂತ ನಂಗೂ ಗೊತ್ತು.."
ಕೇಶವ್ ಗೆ ಅಪ್ಪ ಅಮ್ಮನನ್ನು ಹೇಗೆ ಸಮಾಧಾನಪಡಿಸಿ ಅರ್ಥಮಾಡಿಸೋದು ಅಂತ ತಿಳಿಯುತ್ತಿಲ್ಲ..ನಿಜ ಹೇಳಿದರೆ ಸೌಜನ್ಯಳ ಬಗ್ಗೆ ತಪ್ಪು ಭಾವನೆ ಬಂದರೆ.. ಸುಳ್ಳು ಹೇಳಿದರೆ ನಾನೇ ತಪ್ಪಿತಸ್ಥ..ಏನು ಮಾಡಲಿ ಎಂದು ಯೋಚಿಸುತ್ತಿದ್ದ..
"ಅಪ್ಪಾ... ಅಮ್ಮಾ...ಅದು..ಅದು..."
"ನೋಡು ಕೇಶವ್..ಆದದ್ದು ಆಯಿತು.. ಸಂಜೆ ನಾಲ್ಕು ಗಂಟೆಗೆ ಅವರೆಲ್ಲ ಬರುತ್ತಾರೆ..ಆಗ ಇಂತಹಾ ಕೆಲಸಗಳೆಲ್ಲ ಬೇಡ.. ಮೊದಲು ಆ ಫೊಟೋಗಳನ್ನು ಡಿಲೀಟ್ ಮಾಡು..
ಲ್ಯಾಪ್ ಟಾಪ್ ಆಫ್ ಮಾಡಿಡು.."ಎಂದ ಅಪ್ಪನ ಗಂಭೀರವಾದ ಮಾತಿಗೆ "ಸರಿ "ಎಂದು ತಲೆಯಲ್ಲಾಡಿಸಿದ..ಫೊಟೋಗಳೆಲ್ಲ ತನಗೆ ಮಾತ್ರ ಸಿಗುವಂತೆ ಸೇವ್ ಮಾಡಿಟ್ಟು "ಎಲ್ಲಾ ಡಿಲೀಟ್ ಮಾಡಿ ಆಯ್ತು" ಎಂದ..
*******
ಕಾರ್ಯಕ್ರಮ ಮುಗಿಸಿ ಅಜ್ಜನ ಮನೆಗೆ ಬಂದ ಸೌಜನ್ಯ ಮತ್ತೆ ಯಾವ ಡ್ರೆಸ್ ಹಾಕಿಕೊಳ್ಳಲಿ ಎಂದು ಯೋಚಿಸುತ್ತಿದ್ದಳು.ಅಮ್ಮ ರೇಖಾ ಮಗಳ ಬಳಿ ಬಂದು "ಮಗಳೇ.. ನಾವು ಹೋಗುತ್ತಿರುವುದು ಹಳ್ಳಿ ಮನೆಗೆ ನೆನಪಿರಲಿ..ಟಸ್ ಪುಸ್ ಇಂಗ್ಲಿಷ್ ಶಬ್ದಗಳನ್ನು ಕಡಿಮೆ ಮಾಡಿ ಆದಷ್ಟು ಹವ್ಯಕಭಾಷೆಯಲ್ಲೇ ಮಾತನಾಡು.ಹೆಸರಿನಲ್ಲಿರುವ ಸೌಜನ್ಯ ಗುಣನಡತೆಯಲ್ಲೂ ಇರಲಿ..ಅದಾಗಲ್ಲ.. ಇದು ಗೊತ್ತಿಲ್ಲ..ಆ ಕೆಲಸ ಮಾಡಲಾರೆ.. ಈ ಪರಿಸರ ಹಿಡಿಸಲ್ಲ..ಎಂದೆಲ್ಲ ಅಪ್ಪಿತಪ್ಪಿಯೂ ಎಂದಿನಂತಹ ನೇರನುಡಿಗಳು ಬೇಡವೇ ಬೇಡ..ಹಳ್ಳಿಯಲ್ಲಿರುವವರು ಎಲ್ಲದಕ್ಕೂ ಹೂಂ.. ಅನ್ನುವ ತಗ್ಗಿಬಗ್ಗಿ ನಡೆಯುವ ಹೆಣ್ಣುಮಗಳನ್ನು ಇಷ್ಟ ಪಡೋದು..ಹಾಂ ನಿಂಗೆ ನೆನಪಿದೆಯಾ .. ಅಮೃತವರ್ಷಿಣಿ ಸೀರಿಯಲ್ ನಲ್ಲಿ ಅಮೃತ ಇದ್ದಳಲ್ಲ ಹಾಗೆ..ಹಾಗಿದ್ರೆ ಒಪ್ತಾರೆ.. ಸ್ವಲ್ಪ ಅವಳಂತೆ ನಟನೆ ಮಾಡೋದು ಕಲಿ..ವರ್ಷಾಳಂತಹ ನಿನ್ನ ಬುದ್ಧಿ ತೋರಿಸಬೇಡ.."
"ಆಗಲಿ ಅಮ್ಮಾ.. ನಾನು ಯಾವ ಡ್ರೆಸ್ ಹಾಕಿಕೊಳ್ಳಲಿ.."
"ಡ್ರೆಸ್ ಬೇಡ..ನಿಂಗೆ ಅಂತ ಒಂದು ಸೀರೆ ತಂದಿದೀನಿ ನೋಡು...ನನ್ನ ಬ್ಯಾಗಲ್ಲಿದೆ....ಇದೇ ಇದೇ ನೋಡು..."
"ಅಯ್ಯೋ..ಇದೇನಮ್ಮಾ.. ಎಷ್ಟೊಂದು ಸಿಂಪಲ್ ನೋ..ನಂಗೆ ಬೇಡ.."
"ಹಾಗೆಲ್ಲ ಅನ್ಬಾರ್ದು ಅಂತ ಈಗ ತಾನೇ ಹೇಳಿದ್ದು ಮರೆತೆಯಾ..ಈಗ ಸಿಂಪಲ್ ಆಗಿ ಇರು.. ನಿನ್ನನ್ನು ಮೆಚ್ಚಿ ಸೊಸೆ ಮಾಡಿಕೊಳ್ತಾರೆ.. ಆಮೇಲೆ ಕೇಶವ್ ನ ನಿನ್ನ ಬೊಗಸೆಯೊಳಗೆ ಇಟ್ಟುಕೋ.."
"ಸರಿ ಅಮ್ಮಾ.."ಎಂದು ಒಪ್ಪಿದ ಸೌಜನ್ಯ ಸಿಂಪಲ್ ಸೀರೆಯುಟ್ಟು ರೆಡಿಯಾದಳು..
ಮುಂದುವರಿಯುವುದು..
✍️... ಅನಿತಾ ಜಿ.ಕೆ.ಭಟ್.
25-03-2020.
ನಮಸ್ತೇ...
ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ home , > ,view web version ಬಳಸಿಕೊಳ್ಳಬಹುದು.. ಧನ್ಯವಾದಗಳು 💐🙏
👌👌
ReplyDeleteಥ್ಯಾಂಕ್ಯೂ 💐🙏
ReplyDelete