Tuesday, 3 March 2020

ಜೀವನ ಮೈತ್ರಿ-ಭಾಗ ೩೩(33)




    ಮದುವೆ ಊಟ ಮುಗಿಸಿ ಮನೆಗೆ ಬಂದ ಭಾಸ್ಕರ ಶಾಸ್ತ್ರಿಗಳು ಲ್ಯಾಂಡ್ ಫೋನ್ ಸರಿಯಾಗಿದೆಯಾ ಪರೀಕ್ಷಿಸಿದರು.ಇನ್ನೂ ಸರಿಮಾಡಿಲ್ಲ.. ಪುನಃ ಹೇಳಿ ರಿಪೇರಿ ಮಾಡಿಸುವುದು ಸಧ್ಯಕ್ಕಂತೂ ಬೇಡ.ಮನೆಯ ಕೆಲವು ವಿಷಯಗಳು ಮಾತುಕತೆ ಗೌಪ್ಯವಾಗಿದ್ದರೇ ಒಳ್ಳೆಯದು.ಅಮ್ಮನ ಮೂಲಕ ಅಕ್ಕತಂಗಿಯರಿಗೆ ತಲುಪಿದರೆ ಅನಾಹುತ ಅವಮಾನ ತಪ್ಪಿದ್ದಲ್ಲ.. ಫೋನ್ ಕಿವಿಗಿಡುತ್ತಿದ್ದ ಮಗನನ್ನು ನೋಡಿ "ಅದಿನ್ನೂ ಸರಿಯಾಗಲಿಲ್ಲ ಮಗ.."ಎಂದರು ಮಹಾಲಕ್ಷ್ಮಿ ಅಮ್ಮ..

"ಆಯ್ತು.. ನೋಡೋಣ..ಸರಿ ಮಾಡಿಯಾರು.."ಎಂದರು.. ಭಾಸ್ಕರ ಶಾಸ್ತ್ರಿಗಳು.ಮಾತು ಮುಂದುವರಿಸಿ

"ಅಮ್ಮಾ ..ಈ ವಾರ ಶಶಿ ಅಕ್ಕ ಫೋನ್ ಮಾಡಿದ್ರಾ.."

"ಹೂಂ.. ಮೊನ್ನೆ ಮಾಡಿದ್ದಾಳೆ.."

"ಏನಂತೆ ಸಮಾಚಾರ..?"

"ಏನಿಲ್ಲ..ಎಲ್ಲ ಮಾಮೂಲಿ.."

"ನೀನು ಏನೆಲ್ಲ ಹೇಳಿದೆ..?"

"ಏನು ಹೇಳೋದು..ಮಗಳು ಒಮ್ಮೆ ಫೋನ್ ಮಾಡಿದರೆ ಒಮ್ಮೆಯ ವಿಚಾರಗಳನ್ನೆಲ್ಲ ಮಾತನಾಡಿಯೇ ಫೋನಿಡೋದು..ಆಗಲೇ ಸಮಾಧಾನ ನನಗೆ.."

"ಹೂಂ.." ಎಂದ ಭಾಸ್ಕರ ಶಾಸ್ತ್ರಿಗಳು ಅಮ್ಮನಿಗೆ ಎಲ್ಲವನ್ನೂ ಹೇಳಿದರೆ ಸಮಾಧಾನ.. ನಮಗೆ ಮಗಳ ಬಗ್ಗೆ ಇಲ್ಲಸಲ್ಲದ್ದು ಊರಿಡೀ ಪ್ರಚಾರವಾಗುತ್ತದೆ ಎಂಬ ಸಂಕಟ... ಯಾರಲ್ಲಿ ಹೇಳಿಕೊಳ್ಳಲಿ... ಬುದ್ಧಿ ಹೇಳಿದರೆ ಮಗ ಹಿರಿಯರನ್ನು ಗೌರವಿಸುವುದಿಲ್ಲ ಎಂದಾಗುತ್ತದೆ..ಸಮಯ ಸಂದರ್ಭಕ್ಕೆ ತಕ್ಕಂತೆ ನಡೆಯದಿದ್ದರೆ ಹೇಗೆ ಸಹಿಸಲಿ..?? ಎಂದು ತನ್ನೊಳಗೇ ಅಂದುಕೊಂಡರು..

"ಅಮ್ಮಾ.. ಇನ್ನೊಮ್ಮೆ ಫೋನ್ ಮಾಡಿದರೆ ಮನೆಯ ವಿಷಯ ಎಲ್ಲವನ್ನೂ ಹೇಳುವುದು ಬೇಡ.."

"ಏನೋ ಹಾಗೆಂದರೆ..?"

"ಮೈತ್ರಿಯ ನೋಡಲು ಬಂದಿರುವುದು... ಮದುವೆ ಕೆಲವು ಸೂಕ್ಷ್ಮವಿಚಾರಗಳು ಮನೆಯ ಸದಸ್ಯರಿಂದ ಆಚೆ ಹೋಗುವುದು ಬೇಡ..."

"ಆಯ್ತಪ್ಪಾ.. ನಾನಿನ್ನು ಹಾಗೇ ಮಾಡುವೆ.. ಆದರೆ ನನ್ನ ಮಗಳಂದಿರು ಹಾಗೆಲ್ಲ ಕೆಟ್ಟವರಲ್ಲ..ತವರಲ್ಲಿ ಮದುವೆ ಎಂದರೆ ಸಂಭ್ರಮ ಪಡುತ್ತಾರೆಯೇ ಹೊರತು ..."

ಅರ್ಧದಲ್ಲಿಯೇ ತಾಯಿಯ ಮಾತನ್ನು ತುಂಡರಿಸಿ.. "ಅಮ್ಮಾ..ಅವರು ಕೆಟ್ಟವರಲ್ಲ.. ಆದರೆ ನಮ್ಮ ಎಚ್ಚರಿಕೆ ನಮಗೆ ಬೇಕು.."

"ಸರಿ.. " ಎಂದು ಒಪ್ಪಿಕೊಂಡರು ಮಹಾಲಕ್ಷ್ಮಿ ಅಮ್ಮ.. ಅವರಿಗೆ ಮಂಗಳಾಳ ಮೇಲೆ ಅನುಮಾನ ಮೂಡಿತು.ಮೊನ್ನೆ ನಾನು ಶಶಿಯಲ್ಲಿ ಮಾತನಾಡಿದ್ದನ್ನು ಇವಳು ಕೇಳಿಸಿಕೊಂಡು ಮಗನಿಗೆ ಕಿವಿ ಊದಿರಬೇಕು ಎಂದು.. ಲೋಕದಲ್ಲಿ ಹೆಚ್ಚಾಗಿ ಹೀಗೇನೇ..ಏನೇ ಆದರೂ ತಮ್ಮ ಮಕ್ಕಳನ್ನು ಬಿಟ್ಟುಕೊಡದವರಿಗೆ ಮೊದಲು ಅನುಮಾನ ಮೂಡುವುದು ಸೊಸೆಯ ಮೇಲೆ...ಇಲ್ಲೂ ಹಾಗೆಯೇ..


    ಮನೆಗೆ ಬಂದ ಮೈತ್ರಿ ಬಹಳ ಖುಷಿಯಲ್ಲಿ ಇದ್ದುದನ್ನು ಕಂಡು "ಎಂತ ಮಗಳೇ ಭಾರೀ ಖುಷಿ..."ಎಂದು ಅಮ್ಮ ಕೇಳಿದರು.."ಏನಿಲ್ಲಮ್ಮಾ.." ಎಂದು ಸುಮ್ಮನಾದಳು ಮೈತ್ರಿ.. ಆದರೆ ತಾಯಿ ಮನಸ್ಸು ಎಲ್ಲವನ್ನೂ ಗ್ರಹಿಸಿತ್ತು.ಶುಭದ ಸೂಚನೆ ಆ ಹೃದಯ ಅರಿತಿತ್ತು.ತನ್ನ ರೂಮಿನಲ್ಲಿ ಯಾವುದೋ ಹಿಂದಿ ಹಾಡನ್ನು ಗುನುಗುತ್ತಾ ಇದ್ದು ಅಕ್ಕನನ್ನು ಕಂಡ ಮಹೇಶ್ "ಏನು..ಮಹಾರಾಣಿ ..ಭಾರೀ ಜೋಶ್ ನಲ್ಲಿ ಇರುವಂತಿದೆ.. ವಧು ಪರೀಕ್ಷೆ ಯ ರಿಸಲ್ಟ್ ಬಂತೋ ಹೇಗೆ.."ಎಂದು ಕಾಲೆಳೆದನು.." ಏಯ್.. ತಮ್ಮಾ.. ಸುಮ್ಮನೆ ಹೋಗು.."

"ಹೋಗ್ತೀನಿ ಅಕ್ಕಾ...

ಗೆಳತಿ ಇಶಾ ಏನು
ಸುದ್ದಿ ತಂದಳು...
ಮೈತ್ರಿ ಇನ್ನು
ನನ್ನ ಮದುಮಗಳು...
ಅಂದಿರಬೇಕು ಅದಕ್ಕೆ
ಮಂದಹಾಸ ಬೀರುವಳು..
ಮೈತ್ರಿ ನಗುನಗುತ್ತಾ ಇರುವಳು.."ಎಂದು ಛೇಡಿಸಿಯೇ ಮಹೇಶ್ ಅಲ್ಲಿಂದ ತೆರಳಿದ್ದು..


      ಮೈತ್ರಿ ...' ಇವರೆಲ್ಲ ಹೇಗೆ ಅಂದಾಜಿಸುತ್ತಿದ್ದಾರೆ.. ನಿಜವಾಗಿಯೂ ನಾನು ಎಂದಿಗಿಂತಲೂ ಹೆಚ್ಚಾಗಿ ಖುಷಿಯಿಂದ ಇರುವಂತೆ ಕಾಣುತ್ತಿದ್ದೇನೆಯೇ..'. ಎಂದು ತನ್ನನ್ನು ತಾನು ಕನ್ನಡಿಯಲ್ಲಿ ನೋಡಿಕೊಂಡಳು...


      ಮರುದಿನ ಬೆಳಿಗ್ಗೆ ಏಳು ಗಂಟೆಗೆ ಭಾಸ್ಕರ ಶಾಸ್ತ್ರಿಗಳ ಫೋನ್ ರಿಂಗಾಯಿತು.ಶಾಸ್ತ್ರಿಗಳು ದನದ ಹಾಲು ಹಿಂಡುತ್ತಿದ್ದರು.ಆ ಹೊತ್ತಿಗೆ ಹೆಚ್ಚಾಗಿ ಶಾಸ್ತ್ರಿಗಳಿಗೆ ಫೋನ್ ಮಾಡುವವರು ಸರಿತಾ ಟೀಚರ್... ಸಾರ್.. ಶಾಲೆಗೆ ಬರುವಾಗ ಅದು ತನ್ನಿ.. ಇದು ತನ್ನಿ.. ಇವತ್ತು ಪ್ರೋಗ್ರಾಂ ಇದೆ... ಎಂದೆಲ್ಲ ಆದೇಶಿಸುವವರು ಸರಿತಾ ಟೀಚರ್.. ಆದ್ದರಿಂದ ಬೇರೆ ಯಾರೂ ಫೋನೆತ್ತುವ ಗೋಜಿಗೆ ಹೋಗಲಿಲ್ಲ.. ಕರೆ ನಿಲುಗಡೆಯಾಯಿತು.ಹಾಲುಕರೆದು ಭಾಸ್ಕರ ಶಾಸ್ತ್ರಿಗಳು ಹತ್ತು ನಿಮಿಷದಲ್ಲಿ ಬಂದರು.. ಮತ್ತೆ ಪುನಃ ರಿಂಗಾಯಿತು..ಕರೆ ಸ್ವೀಕರಿಸಿದರು..

    "ಹಲೋ..."

"ನಮಸ್ತೇ ಶಾಸ್ತ್ರಿಗಳೇ.. ನಾನು ಗಣೇಶ್ ಶರ್ಮ.."

"ಹೇಳಿ ಶರ್ಮರೇ... ವಿಷಯ"

"ಅದೇ ನಮ್ಮ ಮಕ್ಕಳ ವಿಚಾರ.. ಜಾತಕ ತೋರಿಸಿದ್ದೇನೆ.. ಎಲ್ಲಾ ಹೊಂದಾಣಿಕೆ ಚೆನ್ನಾಗಿದೆ ಎಂದು ಹೇಳಿದ್ದಾರೆ.. ಮುಂದಿನದು ನೀವು ಹೇಗೆ ಹೇಳುವಿರೋ ಹಾಗೆ..."

"ಹುಡುಗನ ಜಾತಕದ ಒಂದು ಕಾಪಿ ನಮಗೆ ಕಳುಹಿಸಿ ಕೊಡಿ.. ನಾವು ವಿಚಾರ ಮಾಡಿ ಕೆಲವು ದಿನದಲ್ಲಿ ತಿಳಿಸುತ್ತೇವೆ.."

"ಹಾಗೇ ಆಗಲಿ... ಶಾಸ್ತ್ರಿಗಳೇ... ಜಾತಕ ಕಾಪಿಯನ್ನು ಈಗಲೇ ವಾಟ್ಸಪ್ ಮಾಡುತ್ತೇನೆ.." ಎಂದರು ಗಣೇಶ್ ಶರ್ಮ..

ಭಾಸ್ಕರ ಶಾಸ್ತ್ರಿಗಳು ಕಿಶನ್ ಬಗ್ಗೆ ಕೆಲವು ಮಾಹಿತಿ ಕೇಳಿದರು..ನಂತರ ಇಬ್ಬರೂ ಒಂದು ವಾರದಲ್ಲಿ ಒಂದು ನಿರ್ಧಾರಕ್ಕೆ ಬರೋಣ ಎಂದು ಮಾತನಾಡಿ ಫೋನಿಟ್ಟರು.


      ಬೆಳ್ಳಂಬೆಳಗ್ಗೆ ಶುಭಸುದ್ದಿ ಕೇಳಿದ ಮನೆಯಲ್ಲಿ ಹರುಷ ಮನೆಮಾಡಿತು.ಶ್ಯಾಮ ಶಾಸ್ತ್ರಿಗಳು ಬೆಳಗಿನ ಪೂಜೆಯಲ್ಲಿದ್ದವರು ಮೊಮ್ಮಗಳ ಬಾಳು ಬೆಳಗಲೆಂದು ಮಹಾಲಕ್ಷ್ಮಿ ಅಮ್ಮನಲ್ಲಿ "ಇಂದಿನ ನೈವೇದ್ಯವನ್ನು ಸಿಹಿ ಹಾಕಿ ತಾ .." ಎಂದರು..ನೈವೇದ್ಯಕ್ಕೆ ಇಟ್ಟಿದ್ದ ಮಹಾಲಕ್ಷ್ಮಿ ಅಮ್ಮ ಬೇಗನೆ ಹಸಿ ತೆಂಗಿನ ಕಾಯಿ ತುರಿದು ಹಾಲು ಹಿಂಡಿದರು..ನೈವೇದ್ಯಕ್ಕೆ ಬೆಲ್ಲ ಹಾಕಿದರು..ಬೆಲ್ಲ ಕರಗಿದಾಗ ತೆಂಗಿನ ಕಾಯಿ ಹಾಲು ಹಾಕಿ ಕುದಿ ಬರಲಾರಂಭಿಸಿದಾಗ ಇಳಿಸಿ ಏಲಕ್ಕಿ ಪುಡಿ ಹಾಕಿದರು..ಮನೆಯಿಡೀ ಏಲಕ್ಕಿಯ ಘಮ ಪಸರಿಸಿತು..ಮಂಗಳಮ್ಮ...'ಮಗಳೇ.ನಿನ್ನ ಬಾಳಲ್ಲೂ ಇದೇ ರೀತಿ ಪ್ರೀತಿಯ ಕಂಪು ಪಸರಿಸಲಿ' ಎಂದು ಮನದೊಳಗೆ ಆಶೀರ್ವದಿಸಿದರು..



  ಮನೆ ದೇವರಿಗೆ ನೈವೇದ್ಯವನ್ನು ಅರ್ಪಿಸಿದರು.ಮಂಗಳಾರತಿಯನ್ನು ಬೆಳಗಿದರು ಶ್ಯಾಮ ಶಾಸ್ತ್ರಿಗಳು.. ಮಹಾಲಕ್ಷ್ಮಿ ಅಮ್ಮ ಆರತಿಯ ಹಾಡನ್ನು ಹಾಡುತ್ತಾ ಕಣ್ಣುತುಂಬಿಕೊಂಡರು.ಇನ್ನು ಕೆಲವೇ ಸಮಯದಲ್ಲಿ ಮೊಮ್ಮಗಳು ಬೇರೆ ಮನೆಗೆ ಸೊಸೆಯಾಗಿ ಕಾಲಿಡಲಿದ್ದಾಳೆ ಎಂದು ನೆನೆದು ಹಾಡುವಾಗ ಗಂಟಲುಬ್ಬಿ ಬಂತು..ಆಗ ಅದನ್ನರಿತ ಮಂಗಳಮ್ಮ ಅತ್ತೆಯ ಹಾಡಿಗೆ ತಾನೂ ದನಿಗೂಡಿಸಿದರು.ಅತ್ತೆಸೊಸೆಯರ ಆರತಿಹಾಡಿಗೆ ಮನೆದೇವರು ತಲೆದೂಗಿರಬೇಕು.ದೇವರ ಮೇಲೆ ಅಲಂಕರಿಸಿದ್ದ ಅರಶಿನ ಕುಂಕುಮ ಮಿಶ್ರಿತ ಸೇವಂತಿಗೆಯ ಹೂವೊಂದು ನಿಧಾನವಾಗಿ ದೇವರಮಂಟಪದ ಬುಡದಲ್ಲಿ ಇರಿಸಿದ್ದ ತಟ್ಟೆಯಲ್ಲಿ ಬಿದ್ದಿತು.ಬಹಳ ಅಪರೂಪದ ಘಟನೆಯಿದು ಎಂದರು ಶ್ಯಾಮ ಶಾಸ್ತ್ರಿಗಳು.. ಮೈತ್ರಿಯನ್ನು ಕರೆದು ಆಕೆಯ ಕೈಗೆ ಆ ಹೂವನ್ನಿತ್ತು "ಪುಳ್ಳೀ...ಒಳ್ಳೇದಾಗಲಮ್ಮ..."ಎಂದು ಹರಸಿದರು..ತೀರ್ಥ ಪ್ರಸಾದ ಸ್ವೀಕರಿಸಿ ತಿಂಡಿ ತಿಂದು ಕಾಲೇಜಿಗೆ ಹೊರಟಳು ಮೈತ್ರಿ..

 
   ನಾವು ನಂಬಿದ ದೇವರು ಎಂದೂ ನಮ್ಮ ಕೈಬಿಡಲಾರ.. ದೇವರಿದ್ದಾನೆ ಎಂದು ದೃಢವಾಗಿ ನಂಬಿದರೆ ನಮ್ಮ ಕಷ್ಟವನ್ನು ದೂರಮಾಡಿ ಧನಾತ್ಮಕ ಚೈತನ್ಯವನ್ನು ನಮ್ಮತ್ತ ಹರಿಸುವ ಕರುಣಾಳು ...ದೇವರಿಲ್ಲ ಎಂದು ವಾದಿಸಿ ಎಲ್ಲಾ ನಮ್ಮಿಂದಲೇ ನಡೆಯುವುದು .. ಎಂದು ಅಹಂಕಾರ ಮೆರೆಯುತ್ತಾ ತಪ್ಪು ಹಾದಿಯನ್ನು ತುಳಿದವರಿಗೆ ತಕ್ಕ ಪ್ರತಿಫಲವನ್ನು ನೀಡುವವನೂ ಅವನೇ...



   ಶಾಲೆಗೆ ಹೊರಟ ಭಾಸ್ಕರ ಶಾಸ್ತ್ರಿಗಳು ಮಗಳು ಹಾಗೂ ಕಿಶನ್ ನ ಜಾತಕವನ್ನು ಕಿಸೆಯಲ್ಲಿ ಇರಿಸಿಕೊಂಡು ತೆರಳಿದರು."ಮಂಗಳಾ..ಸಂಜೆ ಬರುವಾಗ ತಡವಾಗಬಹುದು..ಜೋಯಿಸರಲ್ಲಿಗೆ ಹೋಗಿ ಬರುತ್ತೇನೆ.. "ಎಂದರು...

                   *****


       ಕೇಶವ್ ಮನೆಯಲ್ಲಿ ಕುಳಿತು ಮೈತ್ರಿಯ ಕುಟುಂಬದ ಮೇಲೆ ಸೇಡು ತೀರಿಸಲು ಯೋಜನೆ ಹೆಣೆಯುತ್ತಿದ್ದ.ವೆಂಕಟ್ ಇವನಿಗೆ ಬೇಕಾದ ಮಾಹಿತಿಯನ್ನು ಈ ಕಡೆಯಿಂದ ರವಾನಿಸುತ್ತಿದ್ದ . 'ಪಕ್ಕಾ ಪ್ಲಾನ್ ಮಾಡಬೇಕು... ಮಿಸ್ ಆಗಲೇ ಬಾರದು' ಎಂದು ಕೇಶವ್ ನಾನಾ ಆಂಗಲ್ ನಲ್ಲಿ  ಯೋಚಿಸಿ ಅದಕ್ಕೆ ಬೇಕಾದ ಸಿದ್ಧತೆ ನಡೆಸಿದ.ಸಂಜೆ ಮೈತ್ರಿ ಕಾಲೇಜು ಬಸ್ಸಿನಲ್ಲಿ ಬಂದಿಳಿಯುವ ಸಮಯ ... ಮುಖಕ್ಕೆ ಟವೆಲ್ ಕಟ್ಟಿ ತನ್ನೆರಡು ಗೆಳೆಯರೊಂದಿಗೆ ಕಾದು ಕುಳಿತ.. ಪರಿಕರಗಳನ್ನು ಮತ್ತೊಮ್ಮೆ ನೋಡಿಕೊಂಡು ಹೂಂ..ಎಲ್ಲಾ ಸರಿಯಿದೆ... ಫೈನಲ್  ಮಾತ್ರ ಬಾಕಿ..


ಮುಂದುವರಿಯುವುದು...


✍️... ಅನಿತಾ ಜಿ.ಕೆ.ಭಟ್.
04-03-2020.

2 comments:

  1. ಕೇಶವನ ಪ್ಲಾನ್ ಎಲ್ಲ ವಿಫಲ ಆಗಲಿ

    ReplyDelete
  2. ಆಗಲಿ..
    ಥ್ಯಾಂಕ್ಯೂ 💐🙏

    ReplyDelete