ಜೀವನ ಮೈತ್ರಿ-ಭಾಗ ೪೭
ಬುಧವಾರ ರಾತ್ರಿ ಬೆಂಗಳೂರಿಗೆ ಹೊರಟ ಕಿಶನ್ ಗುರುವಾರ ಮುಂಜಾನೆ ರೂಮಿಗೆ ತಲುಪಿದ ಕೂಡಲೇ ಮೈತ್ರಿ ಗೆ ಸಂದೇಶ ರವಾನಿಸಿದ..
"ಮುದ್ಗೊಂಬೆ....
ನೀ ಸಕ್ಕರೆಯಂತೆ ಸವಿಬೊಂಬೆ
ಕಣ್ಣ ನೋಟದಿ ನಾ ಪುಳಕಗೊಂಬೆ
ನಿನ್ನ ಆಲಾಪಕೆ ನಾ ಭಾವದುಂಬುವೆ
ನನ್ನ ರಾಗಕೆ ನೀ ಸಾಹಿತ್ಯವಾಗುವೆಯಾ..?
ಶಾಸ್ತ್ರಿಗಳ ಶಿಸ್ತಿನ ಗರಡಿಯ
ಪುಟ್ಟ ಪೋರಿ
ಶರ್ಮರ ಅಪ್ಪಟ ತಮಾಷೆಯ
ತುಂಟ ಪೋರ
ಸೇರಿದರೆ ನಕ್ಕು ನಲಿದು ಹಾಡಿದರೆ
ವಿರಹ ದೂರ
ಜೊತೆಯಾಗಿ ಸೇರೋಣ
ಪ್ರಣಯ ತೀರ.."
ಬೆಳ್ಳಂಬೆಳಗ್ಗೆ ಕಿಶನ್ ನ ಸಂದೇಶ ಓದಿದ ಮೈತ್ರಿ ತಡೆಯಲಾರದೆ ...
"ಕದಿರೊಡೆದಿದೆ ಶಾಸ್ತ್ರಿಗಳ
ಅಂಗಳದ ಹೂವು
ಅಧರದಲಿ ತುಂಬಿ
ಸಿಹಿಜೇನ ಹನಿ..
ಮಧು ಹೀರುವ
ಶರ್ಮ ಸುಕುಮಾರ
ಇದಿರುಗೊಳುವೆಯಾ
ಸಹಿಹಾಕಿ ಈ ಪುಷ್ಪವಾ..."
ಕಿಶನ್ ರೊಮ್ಯಾಂಟಿಕ್ ಮೂಡ್ ಗೆ ಜಾರಿದ.ಇನ್ನು ಕೆಲವೇ ದಿನಗಳಲ್ಲಿ ಮೈತ್ರಿ ತನ್ನವಳಾಗುತ್ತಾಳೆ ಎಂಬ ಕನವರಿಕೆಯಲ್ಲಿ ಫ್ರೆಶ್ ಆಗಿ ಆಫೀಸಿಗೆ ಹೊರಡತೊಡಗಿದ..
******
ನೋಡ ನೋಡುತ್ತಿದ್ದಂತೆ ಭಾನುವಾರ ಬಂದೇಬಿಟ್ಟಿತು.ಭಾಸ್ಕರ ಶಾಸ್ತ್ರಿಗಳು ಬೆಳಿಗ್ಗೆ ಬೇಗನೇ ಎದ್ದು ಮನೆಯ ಕೆಲಸಗಳಲ್ಲಿ ನೆರವಾದರು.ದನದ ಹಾಲು ಹಿಂಡಿ ಒಳಗೆ ತಂದಿಟ್ಟರು.
ಮಹಾಲಕ್ಷ್ಮಿ ಅಮ್ಮ "ಇವತ್ತು ಶಶಿ ಬರುತ್ತಾಳೋ ಇಲ್ಲವೋ ಫೋನು ಮಾಡಬೇಕಿತ್ತು.."ಎಂದು ಅಲವತ್ತುಕೊಂಡರು.
"ಮೊನ್ನೆಯೇ ಹೇಳಿದ್ದೇನೆ.ಬರುವುದಿದ್ದರೆ ದಾರಿಮಧ್ಯೆ ಸಿಗಬೇಕಾದ ಸಮಯ ಸ್ಥಳ ಎಲ್ಲವನ್ನೂ ತಿಳಿಸಿ ಆಗಿದೆ."ಎಂದು ಗಂಭೀರವಾಗಿ ನುಡಿದರು.
ಅಷ್ಟರಲ್ಲಿ ಶಂಕರನ ಫೋನ್ ಬಂತು.."ನಾನು ಮತ್ತು ಗಾಯತ್ರಿ ಅರ್ಧ ಗಂಟೆ ಯಲ್ಲಿ ತಲುಪುತ್ತೇವೆ.." ಎಂದು.ಮಹಾಲಕ್ಷ್ಮಿ ಅಮ್ಮನಿಗೆ ಸ್ವಲ್ಪ ಸಮಾಧಾನ ಆಯ್ತು.ಸಾವಿತ್ರಿ ಹೋಗಿಬರಲೇ ಎಂದಾಗ..
." ದನ ಕರು ಹಾಕುವ ಸಾಧ್ಯತೆ ಇದೆ ...ಹೋಗಬೇಡ" ಎಂದಿದ್ದನಂತೆ ಗಂಡ..
"ನೀವು ಅನುಭವಸ್ಥರು ತಾನೇ..ಕರು ಹಾಕಿದರೆ ದನ ಕಸ ಹೊರಗೆ ಹಾಕಿದಾ ಇಲ್ವಾ ಗಮನಿಸಿ.ಆಮೇಲೆ ಸ್ವಲ್ಪ ಕಾಳುಮೆಣಸು ಪುಡಿ ಮಾಡಿ ಕೊಡಿ"ಎಂದು ಹೇಳಿ ಗಡಿಬಿಡಿಯಲ್ಲಿ ಹೊರಡಲು ಸನ್ನದ್ಧಳಾಗಿದ್ದಳು.
ಮೈತ್ರಿ ಗುಲಾಬಿ ಬಣ್ಣದ ಸೀರೆಯುಟ್ಟು ಅದಕೊಪ್ಪುವ ಬಳೆಗಳನ್ನು ಹಾಕಿಕೊಂಡು ಹಣೆಗೆ ಎದ್ದು ಕಾಣುವಂತಹ ಬಿಂದಿ ತೊಟ್ಟು ..ಮುಂಗುರುಳಿನ ಎರಡು ಎಳೆಯನ್ನು ಹಾಗೆಯೇ ಬಿಟ್ಟು .. ಉದ್ದವಾದ ಜಡೆಹೆಣೆದು ಮಲ್ಲಿಗೆ ಮುಡಿದಿದ್ದಳು.
ಅಜ್ಜಿ ಬಂದವರೇ.."ಇದು ಎಂತ ಪುಳ್ಳೀ..ಕೂದಲೆಲ್ಲ ಎದುರು ಹಾಗೇ ಬಿಟ್ಟಿದೆ..ಅಯ್ಯೋ ತಲೆ ಬಾಚುಲೆ ಬತ್ತಿಲ್ಯಾ ಕೂಸೇ.." ಎಂದು ರಾಗ ಎಳೆದರು.ಮಹೇಶ ಬಂದವನೇ ಅಕ್ಕನನ್ನು ಒಮ್ಮೆ ದಿಟ್ಟಿಸಿ..
"ಹೋಗಜ್ಜಿ..ನಿಂಗಷ್ಟೂ ಗೊತ್ತಾಗಲ್ವಾ...ಭಾವೀ ಭಾವ ಮಾತನಾಡಿಸ್ಬೇಕಾದ್ರೆ ನಾಚ್ಕೊಂಡು ಕೂದಲು ತಿರುವೋಕೆ ಬೇಕಾಗುತ್ತಲ್ಲ...ಅದ್ಕೇ..ಬಿಟ್ಕೊಂಡಿದಾಳೆ...ನೀವೊಬ್ರು..ಓಬೀರಾಯನ ಕಾಲದ ಅಜ್ಜಿ..!!!!"
"ಹಾಗೂ ಉಂಟಾ..ಏನಪ್ಪಾ..ನಂಗೊಂದೂ ಗೊತ್ತಿಲ್ಲಪ್ಪಾ.."
"ನಿಂಗೆ ಗೊತ್ತಿರೋಕೆ ನೀನು ಹಾಗೆ ನಾಚ್ಕೊಳ್ಳೋ ಸಂದರ್ಭ ಬಂದಿದ್ರೆ ತಾನೇ..ನೀನು ನನ್ನನ್ನ; ನಾನು ನಿನ್ನನ್ನ ನೋಡಿದ್ದು ಮದುವೆ ಮಂಟಪದಲ್ಲೇ " ಎಂದು ಶ್ಯಾಮ ಶಾಸ್ತ್ರಿಗಳು ಹೇಳಿದಾಗ ಅಜ್ಜಿ...
"ಸಾಕು ಹೋಗ್ರೀ..ಈಗಿನ ಕಾಲದ ಮಕ್ಳ ಮುಂದೆ ಅದನ್ನೆಲ್ಲ ಹೇಳ್ಬೇಡಿ..ನಂಗೂ ನಾಚ್ಕೆ ಆಗುತ್ತೆ.."ಎಂದಾಗ
"ಅಯ್ಯಪ್ಪಾ..ನನ್ನಜ್ಜಿ ನಾಚ್ಕೊಂಡ್ರೆ ಎಷ್ಟು ಮುದ್ದಾಗಿ ಕಾಣ್ತಾರಪ್ಪಾ .". ಎಂದು ಮಹೇಶ್ ಅಜ್ಜಿಯ ಕೆನ್ನೆ ಬಲವಾಗಿ ಹಿಂಡಿದ..ಅಜ್ಜಿಯ ಹಲ್ಲಸೆಟ್ ಬೀಳುವುದರಲ್ಲಿತ್ತು..
ಶಂಕರ ಗಾಯತ್ರಿಯೂ ಬಂದರು.ಎಲ್ಲರೂ ತಿಂಡಿ ತಿಂದು ಏಳೂವರೆಗೆ ಮನೆಯಿಂದ ಹೊರಟರು.ದಾರಿಮಧ್ಯೆ ಮಂಗಳಾಳ ಅಣ್ಣ ಬಾಲಕೃಷ್ಣ,ತಂಗಿ ಗಂಗಾ ಹಾಗೂ ಮೈತ್ರಿಯ ಸೋದರತ್ತೆ ಸಾವಿತ್ರಿ ಸಿಕ್ಕರು.ಶಶಿ ಸಿಗುವಳೋ ಏನೋ ಎಂದು ಮಹಾಲಕ್ಷ್ಮಿ ಅಮ್ಮ ಕೊರಳುದ್ದ ಮಾಡಿದರು.ಅವರು ಬರಲೇಯಿಲ್ಲ.
ಸಾವಿತ್ರಿಗೆ ತಾನು ಬಂದರೂ ಅಮ್ಮ ಅಷ್ಟಾಗಿ ಪ್ರೀತಿಯಿಂದ ಮಾತನಾಡಿಸದೆ ಶಶಿಯನ್ನೇ ಕೇಳುವುದು ತುಸು ಬೇಸರತಂದಿತ್ತು. ಮಂಗಳಮ್ಮನಿಗೂ ಅತ್ತೆ ಅತಿಯಾಗಿ ಶಶಿಯತ್ತಿಗೆಯನ್ನೇ ಹಚ್ಚಿಕೊಳ್ಳುವುದು ಸರಿಕಾಣಲಿಲ್ಲ..ಅತ್ತೆಯೊಡನೆ..."ಬಾರದ ಮಗಳಿಗಾಗಿ ಅಲವತ್ತುಕೊಳ್ಳುವುದಕ್ಕಿಂತ ಬಂದವರನ್ನು ಪ್ರೀತಿಯಿಂದ ಆದರಿಸುವುದು ಒಳ್ಳೆಯದು "ಎಂದರು ಮಂಗಳಾ.ಮಹಾಲಕ್ಷ್ಮಿ ಅಮ್ಮನಿಗೆ ಶಶಿ ಬುದ್ಧಿವಂತೆ,ಈಗ ಸಾಕಷ್ಟು ಸಿರಿವಂತೆ ಕೂಡಾ ಎಂಬ ಹೆಮ್ಮೆ.ಅವಳ ದೌಲತ್ತಿನೆದುರು ಸಾವಿತ್ರಿಯನ್ನು ಕಡೆಗಣಿಸುವ ಅಭ್ಯಾಸ...ಶಶಿ ಅವರ ಬುದ್ಧಿ ಚಾತುರ್ಯವನ್ನು ಒಳ್ಳೆಯದಕ್ಕೆ ಬಳಸುತ್ತಾರೋ ಅಲ್ಲ ತವರಿನ ವಿರುದ್ಧ ಸೇಡುತೀರಿಸಲು ಬಳಸುತ್ತಾರೋ ಎಂಬ ಸೂಕ್ಷ್ಮ ಇಳಿಜೀವಕ್ಕಂತೂ ಅರ್ಥವಾಗುವುದಿಲ್ಲ. ಕಣ್ಣೆದುರಿರುವ ಸಾವಿತ್ರಿಯ ಪ್ರೀತಿಗೆ ಕುರುಡಾಗಿ ಕಾಣದಿರುವ ಶಶಿಯನ್ನು ಬಯಸಿ ಸೇಡಿಗೆ ಬಲಿಯಾಗುತ್ತಾರಾ...? ಕಾಲವೇ ನಿರ್ಧರಿಸಬೇಕು..
*******
ಕುಂಪೆಯಲ್ಲಿರುವ ಶರ್ಮರ ಮನೆ
"ಶಂಕರ ನಿಲಯ" ಇಂದು ನೆಂಟರಿಂದ ತುಂಬಿತ್ತು.ಕಿಶನ್ ಬೆಳಿಗ್ಗೆ ಬೇಗನೆದ್ದು ಅಮ್ಮ ಅಪ್ಪನಿಗೆ ಎಲ್ಲದಕ್ಕೂ ಸಹಕರಿಸಿದ್ದ.ಮೇದಿನಿ ಹಾಗೂ ಅವಳ ಗಂಡ ಶನಿವಾರವೇ ಆಗಮಿಸಿದ್ದರು.ಚಾಂದಿನಿ ಬೆಳಿಗ್ಗೆ ಗಂಡ ಹಾಗೂ ಮಾವನೊಂದಿಗೆ ಬಂದಳು.ಮೇದಿನಿಯ ಮಾವ ಅತ್ತೆ ಕೂಡ ಆಗಮಿಸಿದರು.ಕಿಶನ್ ನ ಸೋದರ ಮಾವ ಸೋದರತ್ತೆಯರು ಆಗಮಿಸಿದ್ದರು. ಎಲ್ಲರೂ ಸಹಕರಿಸಿ ಕಾಫಿ ತಿಂಡಿಯ ವ್ಯವಸ್ಥೆ ಮಾಡಿದ್ದರು.ಎಂಟುಗಂಟೆಯಾದರೂ ಇನ್ನೂ ನಿತ್ಯದ ಉಡುಗೆ ಕಂಬಾಯಿಯಲ್ಲೇ ಇದ್ದು ಕೆಲಸ ಮಾಡುತ್ತಿದ್ದ ಅಣ್ಣನನ್ನು ತಂಗಿಯಂದಿರು ಆಕ್ಷೇಪಿಸಿದರು."ಮೊನ್ನೆ ಭಾವೀ ಅತ್ತಿಗೆ ಎಷ್ಟು ಚೆನ್ನಾಗಿ ಹೊರಟು ನಿಂತಿದ್ದರು.. ನೀನು ನೋಡಿದ್ರೆ ಹೀಗಿದ್ದೀಯಾ..!!!"
"ನಂಗೆ ಸಾಕು ಇಷ್ಟು.."
"ಹಾಗಂದ್ರೆ ಆಗಲ್ಲ.".... ಎಂದು ಹೇಳಿ ಅಣ್ಣನಿಗೆ ಚಂದ ಶೇವಿಂಗ್ ಮಾಡಲು ಹೇಳಿ ಸ್ನಾನದ ನಂತರ ಪಂಚೆ ಶಲ್ಯ ಉಡಲು ಕೊಟ್ಟು ಪೌಡರ್ ಹಾಕಿಸಿ ಅಣ್ಣನನ್ನು ಇಬ್ಬರು ತಂಗಿಯರೂ ಹೊರಡಿಸಿದ್ದರು .."ಅಲ್ಲಾ ಈ ಪ್ರೇಮಿಗೆ ಇಷ್ಟು ಉದಾಸೀನ ಯಾಕೋ ಇಂದು.."ಕಾಲೆಳೆದಿದ್ದ ಭಾವ..
"ನಮ್ಮನೇಲಿ ನಾವು ಹೀಗೇ ಇರೋದು ಅಂತ ತೋರಿಸ್ಕೊಳ್ಳೋಣ ಅಂತ.."
"ಅವರೂ ಅವರ್ಮನೇಲಿ ಸಿಂಪಲ್ಲಾಗೇ ಇರ್ತಾರೆ .. ಯಾರಾದ್ರೂ ಬರ್ತಾರೆ ಅಂದಾಗ ಸ್ವಲ್ಪ ಡ್ರೆಸ್ಸಿಂಗ್ ಸೆನ್ಸ್ ಇರಬೇಕು ಭಾವ"..ಎಂದ ಇನ್ನೊಬ್ಬ ಭಾವ..
"ಲವ್ ಮಾಡಿ ಸೆಟ್ ಆಗೋದು ಗ್ಯಾರಂಟಿ ಅಂತ ಗೊತ್ತಾದಾಗ ಒಂಥರಾ ಓವರ್ ಕಾನ್ಫಿಡೆನ್ಸ್ ನಮ್ಮ ಮಾಣಿಗೆ.." ಎಂದು ಸೋದರ ಮಾವ ಅಂದಾಗ ಎಲ್ಲರೂ ನಕ್ಕಿದ್ದರು..
'ಕಿಶನ್... ಹುಷಾರು.. ಅವರು ಇವತ್ತು ಮಾಣಿ ಮನೆ ನೋಡಿ ...ಎಲ್ಲಾ ಅಳೆದು ತೂಗಿ ಉತ್ತರ ಹೇಳೋದು..ಬಿ ಕೇರ್ ಫುಲ್..ಶಾಸ್ತ್ರಿ ಮೇಷ್ಟ್ರು ತುಂಬಾ ಸ್ಟ್ರಿಕ್ಟ್... ಫುಲ್ ಮಾರ್ಕ್ಸ್ ಕೊಡೋದು ಅಪರೂಪ.." ಎಂದರು ಸೋದರತ್ತೆ..ಅವರ ಮಗ ಶಾಸ್ತ್ರಿಗಳ ವಿದ್ಯಾರ್ಥಿಯಂತೆ..
ಕಿಶನ್ ಹಣೆಯಲ್ಲಿ ಮೂರು ವಿಭೂತಿ ನಾಮವೆಳೆದ.ಆಜ್ಞಾಚಕ್ರದ ಮೇಲೊಂದು
ಪುಟ್ಟ ತಿಲಕವಿಟ್ಟ.ಕಿವಿಯ ಮೇಲೆ ಒಂದು ತುಂಡು ತುಳಸಿ ಪತ್ರೆ ಇಟ್ಟುಕೊಂಡ. ಸಂಧ್ಯಾವಂದನೆ , ಪೂಜೆ ಮಾಡಿ ಇಟ್ಟುಕೊಳ್ಳಬೇಕಾದ್ದಿದು.ಮೊದಲೆಲ್ಲ ನಿಯತ್ತಾಗಿ ಎರಡು ಹೊತ್ತು ಸಂಧ್ಯಾವಂದನೆ ಮಾಡುತ್ತಿದ್ದ..ಇಂದು ಇವನು ಗಾಯತ್ರಿ ಜಪ ಮಾಡಿದ್ದಾನೋ ಇಲ್ಲ ,ಮೈತ್ರಿ ಜಪವನ್ನೇ ಮಾಡಿದ್ದಾನೋ ಯಾರಿಗೂ ತಿಳಿಯದು.. ಆದರೆ ಇವೆಲ್ಲ ಇಂದು ವಿರಾಜಮಾನವಾಗಿದ್ದವು. ತೆಂಗಿನೆಣ್ಣೆಯನ್ನು ತಲೆಗೆ ಹಚ್ಚಿ ಚೆನ್ನಾಗಿ ಕೂದಲನ್ನು ಕ್ರಾಪ್ ಬಾಚಿದ್ದ.
ಕಿಶನ್ ಈಗ ಅಪ್ಪಟ ಹವ್ಯಕ ಮಾಣಿಯಾಗಿ ಎಲ್ಲರನ್ನೂ ಒಂದೇ ಲುಕ್ ನಲ್ಲಿ ಸೆಳೆಯುವಂತೆ ರೆಡಿಯಾದ..
ಗೋಡೆಯ ಮೇಲಿನ ಮೂವತ್ತು ವರ್ಷ ಹಿಂದಿನ ಗಡಿಯಾರ ಡೈಂ ಡೈಂ ಎಂದು ಒಂಭತ್ತು ಗಂಟೆ ಬಡಿಯಿತು.ಆ ಶಬ್ದ ಎಲ್ಲರ ಕಿವಿಯಲ್ಲಿ ಗುಂಯ್ ಗುಡುತ್ತಿತ್ತು.ಮನೆಯಂಗಳದಲ್ಲಿ ಜೀಪು ಬಂದು ನಿಂತಿತು.
*******
ಶಶಿ ಇತ್ತೀಚೆಗೆ ಹೇಳಿಕೆ ಬಂದ ಕಾರ್ಯಕ್ರಮಗಳಿಗೆಲ್ಲ ಹೋಗುತ್ತಿದ್ದಳು.ತನ್ನ ಮಗ ಮುರಲಿಗಾಗಿ ಕೂಸು ಹುಡುಕುತ್ತಿದ್ದಳು.ಮಾಹಿತಿ ಕಲೆ ಹಾಕುತ್ತಿದ್ದಳು.ಈ ವಿಷಯದಲ್ಲಿ ಅವಳ ಗಂಡನಿಗಿಂತ ಅವಳದೇ ಒಂದು ಹೆಜ್ಜೆ ಮುಂದೆ.. ಒಟ್ಟಾರೆಯಾಗಿ ಮೈತ್ರಿಯನ್ನು ಮೀರಿಸುವ ಹುಡುಗಿಯ ಹುಡುಕಾಟದ ಜಿದ್ದಿಗೆ ಬಿದ್ದಿದಳು.ಈ ದಿನ ಎರಡು ಮದುವೆಯ ಕಾರ್ಯಕ್ರಮ ಇದ್ದಿತು.ಒಂದು ಕಾರ್ಯಕ್ರಮದಲ್ಲಿ ಕಾಫಿ ಕುಡಿದು ಇನ್ನೊಂದರಲ್ಲಿ ಊಟಮಾಡುವ ಪ್ಲಾನ್ ಹಾಕಿಕೊಂಡು ಹೊರಟಿದ್ದರು ಶಶಿ ದಂಪತಿ.
ಮದುವೆ ಮನೆಯಲ್ಲಿ ಎಲ್ಲರೂ ಚೆನ್ನಾಗಿ ಮಾತನಾಡಿ ತಿಂಡಿ ತಿನ್ನಲು ಹೇಳಿದರು.ತಿನ್ನಲೆಂದು ಕುಳಿತರು.ಅಲ್ಲೇ ಅವರೆದುರು ಮದುಮಗಳ ಗೆಳತಿಯರು ಕುಳಿತಿದ್ದರು.ಶಶಿ ಚುರುಕಾದಳು.ಮಧ್ಯದವಳು ಚೆನ್ನಾಗಿದ್ದಾಳೆ.ಯಾರು ಏನು ಎಂದು ವಿಚಾರಿಸಿಕೊಳ್ಳಬೇಕು ಎಂದು ಗಂಡನಲ್ಲಿ ಪಿಸುಗುಟ್ಟಿದಳು.ತಿಂಡಿ ತಿಂದು ಕೈತೊಳೆಯಲು ತೆರಳಿದಾಗ ಆ ಯುವತಿಯರೂ ಬಂದಿದ್ದರು..ಕೈ ತೊಳೆದು ಒದ್ದೆ ಕೈಯನ್ನು ಟವೆಲ್ ನಲ್ಲಿ ಒರೆಸುತ್ತಾ ಆ ಯುವತಿಯಲ್ಲಿ ಕೇಳಿದಳು
"ನೀನು ಎಂತ ಮಾಡ್ತಾ ಇದ್ದೆ...??"
ಆಕೆ ಏನೂ ಹೇಳದೆ ಸುಮ್ಮನೆ ಗೆಳತಿಯರ ಮುಖ ನೋಡಿ ಮುಸಿ ಮುಸಿ ನಕ್ಕಳು..
ಹಠ ಬಿಡದ ಶಶಿ "ನಿನ್ನ ಅಪ್ಪನ ಹೆಸರೆಂತ..?"ಕೇಳಿದರು..
"ಸುಧಾಕರ ರೈ...ಕಂಬಾರಗುತ್ತು.."ಎಂದಾಗ ಶಶಿಯ ಮುಖ ಇಂಗು ತಿಂದ ಮಂಗನಂತಾಗಿತ್ತು..ಮದುಮಗಳು ತನ್ನ ಹಾಸ್ಟೆಲ್ ರೂಂಮೇಟ್ ಯುವತಿಯರನ್ನು ಪ್ರೀತಿಯಿಂದ ಆಮಂತ್ರಿಸಿದ್ದಳು...
"ತವರಿವರ ಜೊತೆ ಮಾಣಿಮನೆ ನೋಡಲು ಹೋಗು ಎಂದರೆ ಹೋಗಲಿಲ್ಲ.ನನ್ನ ಜೊತೆ ಮದುವೆಗೆ ಬರುತ್ತೇನೆ ಎಂದೆ..ಇಲ್ಲಿ ನನ್ನ ಮರ್ಯಾದೆ ತೆಗೆಯುವ ಕೆಲಸ ಮಾಡದೆ ತೆಪ್ಪಗೆ ಇರು..." ಎಂದು ಗಂಡ ಗರಂ ಆಗಿ ಶಶಿಗೆ ಹೇಳಿದರು..
ಪೆಚ್ಚುಮೋರೆ ಹಾಕಿದ ಶಶಿ 'ನನಗಿದೆಲ್ಲ ಬೇಕಿತ್ತಾ..? 'ಎಂದು ತನ್ನನ್ನೇ ಪ್ರಶ್ನಿಸಿಕೊಂಡಳು.
******
ಕೇಶವ್ ಇಂದು ಬೆಳಗ್ಗಿನಿಂದ ಸೌಜನ್ಯ ಳೊಡನೆ ಚಾಟ್ ಮಾಡದೆ ಡಲ್ ಆಗಿದ್ದ.ಹೇಗಿದ್ದರೂ ಸಂಜೆ ಮನೆಗೇ ಬರುತ್ತಾಳಲ್ಲ ...💞💞💞💞 ಎಂದು ಬುದ್ಧಿ ಹೇಳುತ್ತಿದ್ದರೂ ಮರ್ಕಟ ಮನಸ್ಸು ಕೇಳುತ್ತಿರಲಿಲ್ಲ.ಅಮ್ಮ ಸ್ವಲ್ಪ ಸಹಕರಿಸು ಬಾ.. ಅಂದರೆ ಆಗಲ್ಲ ನನ್ನಿಂದ ಎಂದು ಸೌಜನ್ಯಳ ಫೊಟೋ ನೋಡುತ್ತಾ ಕುಳಿತ.. ರೊಮ್ಯಾಂಟಿಕ್ ಫೊಟೋಗಳನ್ನು ದೂರದಿಂದ ನೋಡಿದ ಅಮ್ಮಾ..."ಏನೋ ಇದು ನಿನ್ನ ಕೆಲಸ..ನಾವಿಷ್ಟು ನಿನಗಾಗಿ ಹುಡುಗಿ ಹುಡುಕಲು ಕಷ್ಟಪಡುತ್ತಿದ್ದರೆ ನೀನು.....ಹೀಗಾ ಮಾಡೋದು..."ಎಂದು ಕೋಪದಿಂದ ಕೆನ್ನೆಯ ಮೇಲೆ ರಪ್ಪೆಂದು ಬಾರಿಸಿದಳು.
ಮುಂದುವರಿಯುವುದು...
✍️... ಅನಿತಾ ಜಿ.ಕೆ.ಭಟ್.
24-03-2020.
No comments:
Post a Comment