Saturday, 21 March 2020

ಜೀವನ ಮೈತ್ರಿ- ಭಾಗ ೪೫(45)



ಜೀವನ ಮೈತ್ರಿ-ಭಾಗ ೪೫


    ಶಾಸ್ತ್ರೀ ನಿವಾಸ ದಲ್ಲಿ ಮಾಣಿಕಡೆಯವರ ಆಗಮನಕ್ಕಾಗಿ ಎಲ್ಲವೂ ಸಜ್ಜಾಗಿತ್ತು.ಅಷ್ಟರಲ್ಲಿ ಆಟೋ ಒಂದು ಮನೆಯ ಗೇಟಿನೆದುರು ನಿಂತಿತು.ಅದರಿಂದ ಇಳಿದು ಮನೆಯಂಗಳಕ್ಕೆ ಬಂದರು ಶಂಕರ ಶಾಸ್ತ್ರಿಗಳು.
"ಹೋ..ಶಂಕರ..ಎಂತ ಲೇಟಾತು...ಏಕೆ ನೀನಿನ್ನೂ ಬರಲಿಲ್ಲ ಎಂದು ಯೋಚಿಸುತ್ತಿದ್ದೆ.".....ಎನ್ನುತ್ತಾ ಶ್ಯಾಮ ಶಾಸ್ತ್ರಿಗಳು ಮಗನನ್ನು ಬರಮಾಡಿಕೊಂಡರು.
"ಹೈವೇ ಬ್ಲಾಕ್ ಆಗಿ ತಡವಾಯಿತು ಅಪ್ಪಾ.." ಎಂದು ಉತ್ತರಿಸಿ ಒಳನಡೆದನು.

        ಮಂಗಳಮ್ಮ ಬಾಯಾರಿಕೆ ಕೊಟ್ಟು ಫ್ರೆಶ್ ಆಗಲು ಟವೆಲ್ ನೀಡಿದರು.ಬೇಗನೆ ಫ್ರೆಶ್ ಆಗಿ ಬಂದ ಚಿಕ್ಕಪ್ಪನಿಗೆ ಮಹೇಶ್ ಕಾಫಿತಿಂಡಿ ಕೊಟ್ಟನು.ಅತ್ತಿಗೆ ಕೊಟ್ಟ ಪಂಚೆ ಶಲ್ಯ ತೊಟ್ಟು ಅರ್ಧವೇ ಗಂಟೆಯಲ್ಲಿ ತಾನೂ ತಯಾರಾಗಿ ಎಲ್ಲರ ಜೊತೆ ಸೇರಿಕೊಂಡ.


          ಭಾಸ್ಕರ ಶಾಸ್ತ್ರಿಗಳು ಪಂಚೆಯನ್ನು ಮೇಲೆತ್ತಿಕಟ್ಟಿಕೊಂಡು ಅಡುಗೆ ಮನೆ ಕಡೆ ತೆರಳಿ "ಕಿಟ್ಟಣ್ಣ ಎಲ್ಲ ರೆಡಿ ಇದ್ದಾ ....?" ಕೇಳಿದರು.
ಕಿಟ್ಟಣ್ಣ ಜಾರುತ್ತಿರುವ ಜನಿವಾರವನ್ನು ಕೈಯಲ್ಲೊಮ್ಮೆ ಮೇಲೇರಿಸಿಕೊಂಡು
"ಶಾಸ್ತ್ರಿಗಳೇ ಎಲ್ಲಾ ರೆಡಿ..ವಾಹನ ಅಂಗಳಕ್ಕೆ ಬಂದ ಶಬ್ದ ಕೇಳಿದಾಗ ಚಹಾ ಕಾಫಿಗೆ ಹಾಲು ಹಾಕುತ್ತೇನೆ.. ಅವಲಕ್ಕಿ ಬೆರೆಸುತ್ತೇನೆ.."

"ಹಾಗೇ ಮಾಡು ಕಿಟ್ಟಣ್ಣ..".ಎನ್ನುತ್ತಾ ಹೊರಗೆ ಚಾವಡಿಗೆ ಬಂದರು.

          ಅಂಗಳದಲ್ಲಿ ಜೀಪು ಬಂದು ನಿಂತಿತು.ಒಬ್ಬೊಬ್ಬರೇ ಕೆಳಗಿಳಿದರು.ಚಾವಡಿಯ ಮೂಲೆಯಲ್ಲಿ ನಿಂತು ಮೈತ್ರಿ ಕೊರಳುದ್ದ ಮಾಡಿ ಕಿಶನ್ ನನ್ನು ನೋಡಲು ತವಕಿಸುತ್ತಿದ್ದಳು.ಚಾವಡಿಗೆ ಬಂದ ಮಹೇಶ್
"ಅಕ್ಕಾ...ಕಾಣಲ್ವಾ...? ಬೈನಾಕುಲರ್ ಬೇಕಾ.."
"ಥೂ..ಹೋಗೋ ತಮ್ಮಾ..ಇವತ್ತೂ ಹೀಗೆಲ್ಲ.."

          ಎನ್ನುತ್ತಿರುವಾಗಲೇ ಕಿಶನ್ ಜೀಪಿನಿಂದ ಕೆಳಗಿಳಿದ.ಮೈತ್ರಿ ಅಲ್ಲಿಂದಲೇ ಕಣ್ತುಂಬಿಸಿಕೊಂಡಳು.ಒಂದು ಸಣ್ಣ ರೋಮಾಂಚನ..ಮನದೊಳಗೆ ಸಂತಸ..ಅವಳ ಮುಖಭಾವ ಮಂದಹಾಸವ ಸೂಸಿತು.ಸಾವಿತ್ರಿ ಹೆಣ್ಣುಮಕ್ಕಳಿಗೆ ಕೈಕಾಲು ತೊಳೆಯಲು ನೀರು ಕೊಟ್ಟರೆ ಮಹೇಶ್ ಗಂಡಸರಿಗೆ ನೀರು ಕೊಟ್ಟ.
ಗಂಗಾ ಕಾಲೊರೆಸಲು ಬೈರಾಸು ನೀಡಿದಳು.ಚಾವಡಿಯಲ್ಲಿ ಬಂದವರಿಗೆ ಕುಳಿತುಕೊಳ್ಳಲು ಎದುರು ಬದುರಾಗಿ ಚಾಪೆ ಹಾಕಿ ಅದರ ಮೇಲೆ ಸುಂದರ ಜಮಾಖಾನವನ್ನು ಹಾಸಿದ್ದರು.ಭಾಸ್ಕರ ಶಾಸ್ತ್ರಿಗಳು "ಒಳಗೆ ಬನ್ನಿ" ಎಂದು ಕರೆದು ನೆಂಟರನ್ನು ಕುಳಿತುಕೊಳ್ಳುವಂತೆ ಕೇಳಿಕೊಂಡರು.

         ಮಂಗಳಮ್ಮ ,ಮಹಾಲಕ್ಷ್ಮಿ ಅಮ್ಮ ಆಸರಿಂಗೆ (ಬಾಯಾರಿಕೆಗೆ) ಬಿಸಿನೀರು ಬೆಲ್ಲ ನೀಡಿ ಕುಶಲ ವಿಚಾರಿಸಿದರು.ಶ್ಯಾಮ ಶಾಸ್ತ್ರಿಗಳು "ಪ್ರಯಾಣ ಸುಖಕರವಾಯಿತೇ..?" ಎಂದು ಮಾತಿಗೆಳೆದರು.ಶಂಕರ ಒಳಗೆ ತೆರಳಿ ಮೈತ್ರಿ ಯಲ್ಲಿ ಶರಬತ್ತು ತರಲು ಹೇಳಿದ.ಮಹೇಶ್ ಎಲ್ಲ ಲೋಟಗಳಿಗೆ ತುಂಬಿಸಿಟ್ಟಿದ್ದ.ಮೂರು ಟ್ರೇಗಳಿದ್ದವು.ಒಂದು ಟ್ರೇಯನ್ನು ಮೈತ್ರಿಯ ಕೈಗಿತ್ತು "ಮಗಳೇ.. ಕಿಶನ್ ಅವನ ಅಪ್ಪ ಮತ್ತೆ ಕೆಲವರಿಗೆ ನೀನು ಕೊಡು" ಎಂದರು.ಇನ್ನೊಂದನ್ನು ಸೋದರತ್ತೆ ಸಾವಿತ್ರಿ ಯಲ್ಲಿ ಕೊಟ್ಟರು.ಮತ್ತೊಂದನ್ನು ಮಹೇಶ್ ಹಿಡಿದು ಹೊರಬಂದನು.ಮಂಗಳಮ್ಮ ಮಗಳ ಜೊತೆಗೆ ಹಿಂಬಾಲಿಸಿದರು.


           ಶರಬತ್ತಿನ ತಟ್ಟೆಯನ್ನು ಹಿಡಿದು ಬಂದ ಮೈತ್ರಿಯ ಮೇಲೆ ಎಲ್ಲರ ಕಣ್ಣುಗಳೂ ಕೇಂದ್ರೀಕೃತವಾದವು.ಹೇಳದೇ ಕೇಳದೇ ಲಜ್ಜೆಯಾವರಿಸಿತು.ಕಿಶನ್  ತನ್ನ ರೂಪಸಿಯನ್ನು ನೋಡಿ ಒಂದು ತುಂಟನಗೆಬೀರಿದರೆ ...ಮೈತ್ರಿಯ ಕೈಗಳು ಕಂಪಿಸತೊಡಗಿದವು.ಟ್ರೇಗೆ ತಾವೂ ಕೈನೀಡಿದ ಮಂಗಳಮ್ಮ ಮಗಳಿಗೆ 'ಲೋಟವನ್ನೆತ್ತಿ ಎಲ್ಲರಿಗೂ ಕೊಡು 'ಎಂಬುದನ್ನು ಕಣ್ಣಲ್ಲೇ ಸೂಚಿಸಿದರು.ಮೊದಲು ಒಂದು ಬದಿಯಿಂದಲೇ ಆರಂಭಿಸಿದ ಮೈತ್ರಿ ಗಣೇಶ್ ಶರ್ಮ ರಿಗೆ ನೀಡಿ ನಂತರ ಇದ್ದ ಇಬ್ಬರಿಗೆ ಕೊಟ್ಟು ಕಿಶನ್ ನತ್ತ ಬಂದಳು.ಎಲ್ಲರಿಗೂ ಜ್ಯೂಸ್ ಕೊಡುತ್ತಿದ್ದ ಪ್ರೇಯಸಿಯನ್ನು ನೋಡಿ ಕಣ್ತುಂಬಿಸಿಕೊಂಡ ಕಿಶನ್ ಗೆ ಈಗ ತನ್ನ ಸರದಿ ಬಂದಾಗ ಕೈ ಮುಂದೆ ಮಾಡುವುದೇ ಮರೆತುಹೋಗಿತ್ತು..!! ಲೋಟವನ್ನು ಆಕೆಯೇ ಮುಂದೆ ಹಿಡಿದಾಗ ಮೆಲ್ಲನೆ ಕೈಯೊಡ್ಡಿದ.ನಯನಗಳು ಸಂಧಿಸಿದವು.ಮಧುರಕಾವ್ಯದ ಮುನ್ನುಡಿ ಬರೆಯಿತು.ಮತ್ತಿಬ್ಬರಿಗೆ ಕೊಟ್ಟಾಗ ಟ್ರೇ ಖಾಲಿಯಾಯಿತು.ನಂತರ ಉಳಿದವರಿಗೆ ಮಹೇಶ್ ಶರಬತ್ತು ನೀಡಿದ.

            ಹೆಣ್ಣು ಮಕ್ಕಳಿಗೆ ಸಾವಿತ್ರಿ ಶರಬತ್ತು ನೀಡಿದರೂ ಅವರ ಕಣ್ಣುಗಳು ಗಂಡಸರಿಗೆ ಶರಬತ್ತು ನೀಡಿದ ಮೈತ್ರಿಯ ಮೈಮಾಟವನ್ನು ಗಮನಿಸುವುದರಲ್ಲೇ ತಲ್ಲೀನವಾಗಿದ್ದುದು ಸಾವಿತ್ರಿಗೂ ತಿಳಿಯಿತು.ಮೈತ್ರಿ ಮೆಲ್ಲನೆ ಒಳನಡೆದಳು.ಕಿಶನ್ ನ ಕಣ್ಣುಗಳು ಮಂಗಳೂರು ಮಲ್ಲಿಗೆಯನ್ನು ಮುಡಿಗೇರಿಸಿದ್ದ ತನ್ನ ನಲ್ಲೆಯ ಸೊಬಗಿನಲ್ಲಿ ಮೈಮರೆತಿದ್ದವು.ಆಕೆ ಅದೃಶ್ಯವಾದಾಗ ವಾಸ್ತವಕ್ಕೆ ಬಂದ ಕನ್ಯಾರ್ಥಿ..!!


          ಎಲ್ಲರೂ ಸೇರಿ ಸ್ವಲ್ಪ ಹರಟಿದರು.ಶಂಕರ ಒಳಗೆ ತೆರಳಿ ಕಾಫಿ ಕುಡಿಯಲು ಬರಹೇಳಲು ಅಡಿಗೆ ಕಿಟ್ಟಣನನ್ನು ಒಂದು ಮಾತು ಕೇಳಿದ."ಯಸ್ ..ಎಲ್ಲಾ ರೆಡಿ.. ತಗೊಳ್ಳಿ ಸಜ್ಜಿಗೆ, ಅವಲಕ್ಕಿ,ಕಾಫಿ ,ಚಹಾ..ಸಪ್ಪೆ ಕಾಫಿ, ಚಹಾ ಬೇಕಾದರೆ ಹೇಳಿ ಕೂಡಲೇ ಮಾಡಿಕೊಡುವೆ..ಕ್ಷೀರ ಒಳಗೇ ಇದೆ.."

          "ಸರಿ "ಎಂದ ಶಂಕರ ಶಾಸ್ತ್ರಿಗಳು ಮಹೇಶ್ ನೊಂದಿಗೆ ಸೇರಿ ಪಂಕ್ತಿ ಹಾಕಿದರು.ಮಂಗಳಮ್ಮ ಲೋಟದ ಅಟ್ಟಿ ಹುಡುಕಿ ತಂದು ಕೊಟ್ಟರು.ಎಲ್ಲವೂ ತಯಾರಾದಾಗ ಶಂಕರ ಶಾಸ್ತ್ರಿಗಳು ಹೊರಗೆ ಚಾವಡಿಗೆ ತೆರಳಿ ಎಲ್ಲರನ್ನೂ ಬರಹೇಳಿದರು.. ಭಾಸ್ಕರ ಶಾಸ್ತ್ರಿಗಳು "ಹೋಗೋಣ "ಎಂದು ಎಲ್ಲರನ್ನೂ ಓಳಗೆ ಕರೆದುಕೊಂಡು ಹೋದರು..

           ಬಡಿಸುವ ಕಾರ್ಯಕ್ಕೆ ಎಲ್ಲರೂ ಕೈಜೋಡಿಸಿದರು.ಮೈತ್ರಿಗೆ ಕ್ಷೀರ ಬಡಿಸುವ ಜವಾಬ್ದಾರಿ ..ಅವಳ ಸರದಿ ಬಂದಾಗ ಮಹೇಶ್ ಕೀಟಲೆ ಕಣ್ಣುಗಳನ್ನು ಅಕ್ಕನ ಮೇಲೆ ನೆಟ್ಟಿದ್ದ.
ಒಬ್ಬೊಬ್ಬರಿಗೆ ಬಡಿಸುತ್ತಾ ಬಂದಳು ಮೈತ್ರಿ.ಕಾಲಿಗೆ ಸೀರೆಯ ನೆರಿಗೆ ಅಡ್ಡಡ್ಡ ಸಿಗುತ್ತಿತ್ತು.ಸೀರೆ ನೆರಿಗೆ ಸ್ವಲ್ಪ ಮೇಲೆತ್ತಲು ಊಹೂಂ ಮನಸಿಲ್ಲ.. ಅಂತೂ ಕಿಶನ್ ಗೆ ಬಡಿಸಲು ತಯಾರಾದಳು.. ಇದ್ದುದರಲ್ಲಿ ದೊಡ್ಡ ತುಂಡನ್ನು ಆಯ್ದು ಬಡಿಸಿದ್ದಳು.ಆತ  ನಸುನಕ್ಕು ಆಕೆಯ ನುಣುಪಾದ ಕೈಗಳನ್ನು ನೋಡುವುದರಲ್ಲಿ ತಲ್ಲೀನನಾಗಿದ್ದ.." ನನಗೆ ಬೇಡಮ್ಮ" ಎಂದ ಗಣೇಶ್ ಶರ್ಮ.".ಸಣ್ಣದು ಬಡಿಸುತ್ತೇನೆ " ಎಂದು ಬಡಿಸಿದ ಮೈತ್ರಿ.. ಎಲ್ಲರಿಗೂ ಬಡಿಸಿ ಆದಾಗ ಉಸ್ಸಪ್ಪ ಎನ್ನುವಂತಾಗಿತ್ತು ಮೈತ್ರಿ ಗೆ.

         "ಇನ್ನೊಂದು ಸಾರಿ ವಿಚಾರಿಸಬೇಕು "ಎಂದ ಮಹೇಶ್ ಕೆಣಕುತ್ತಾ..
ಮೈತ್ರಿ ಎರಡನೇ ಬಾರಿ ವಿಚಾರಿಸಿ ಬಡಿಸುತ್ತಾ ಕಿಶನ್ ನ ಹತ್ತಿರ ಬಂದು ಒಂದು ತುಂಡು ಬಡಿಸುತ್ತಿದ್ದಾಗ ಅವನು ಬೇಡವೆಂದು ಕೈ ಅಡ್ಡ ಹಿಡಿದಿದ್ದ.ಎಲ್ಲರೂ "ಅವನಿಗೊಂದು ದೊಡ್ಡ ಪೀಸ್ ಬಡಿಸು" ಎಂದು ಒತ್ತಾಯಿಸುತ್ತಿದ್ದರು.ಕಿಶನ್ ದೈನ್ಯತೆಯ ನೋಟದಿಂದ ಮೈತ್ರಿಯನ್ನು ನೋಡುತ್ತಾ "ಬೇಡ ಕಣೇ" ಎನ್ನುವಂತಿದ್ದ.ಇದು ಮಹೇಶನಿಗಂತು ಕ್ಷೀರ ಸವಿದಷ್ಟೇ ಖುಷಿತಂದಿತ್ತು.ಒಂದು ಮೂಲೆಯಲ್ಲಿ ನಿಂತು ಆ ಕ್ಷಣವನ್ನು ವಿಡಿಯೋ ಮಾಡಿದ್ದ..ಎಲ್ಲರ ಒತ್ತಾಯಕ್ಕಂತೂ ಒಂದು ತುಂಡು ಬಡಿಸಿದ ಮೈತ್ರಿ.ನಿರ್ವಾಹವಿಲ್ಲದೇ ಹೊಟ್ಟೆಗಿಳಿಸಿದ ಮದುಮಗ.

          ತಿಂಡಿ ತಿಂದ ಬಳಿಕ ಕಿಶನ್ ನ ಅಮ್ಮ ತಂಗಿಯರು ಮೈತ್ರಿಯನ್ನು ಮಾತಿಗೆಳೆದರು.ಎಲ್ಲರೊಂದಿಗೆ ಖುಷಿಯಿಂದ ಹರಟಿದಳು ಮೈತ್ರಿ.ತಂಗಿಯರಿಗಂತೂ ಭಾವೀ ಅತ್ತಿಗೆ ಬಹಳ ಹಿಡಿಸಿದಳು.ಮಮತಾಗೆ 'ಇಷ್ಟು  ಸಿರಿವಂತ ಕುಟುಂಬದ ಕುವರಿ ನಮ್ಮ ಮನೆಯಲ್ಲಿ ಹೇಗೋ ಏನೋ' ..ಎಂಬ ಅಳುಕು ಕಾಡಿತ್ತು."ಸಿರಿವಂತರಾದರೂ ಮನೆಯವರಿಗೆ ಹಮ್ಮು ಬಿಮ್ಮಿಲ್ಲ" ಎಂದು ಮೇದಿನಿ ಅಮ್ಮನ ಕಿವಿಯಲ್ಲುಸುರಿದಳು.


           ಎಲ್ಲರೂ ಮನೆ ನೋಡಲು ತೆರಳಿದರು.ಕಿಶನ್ ಒಮ್ಮೆ ಮನೆ ನೋಡಿದ್ದ.ಎಲ್ಲರೂ ಹೋದಾಗ ಅವನಿಗೆ ಮುದ್ಗೊಂಬೆಯೊಡನೆ ಮಾತನಾಡುವ ತವಕ.. ಮೆಲ್ಲನೆ ಅವಳಿದ್ದ ಪಡಸಾಲೆಗೆ ಇಣುಕಿದ.ಕಂಡದ್ದು ಮಹೇಶ್..." ಅಕ್ಕಾ.. ಎಮರ್ಜೆನ್ಸಿ ಕಾಲ್.".ಎಂದು ಅಕ್ಕನನ್ನು ಕರೆದ."ಏನಪ್ಪಾ .. "ಎಂದು ಬಾಗಿಲ ಬಳಿಗೆ ಬಂದಾಗ ಕಂಡದ್ದು ... ಕಿಶನ್...!!

       ಅವನ ಭಾವನೆಗಳನ್ನು ಕಣ್ಣಲ್ಲೇ ಓದಿದ ಮೈತ್ರಿ.ಅವನೊಡನೆ ಹೆಜ್ಜೆ ಹಾಕಿದಳು.ಇಬ್ಬರೂ ಸ್ವಲ್ಪ ಹೊತ್ತು ಅವಳ ರೂಮಿನಲ್ಲಿ ಹರಟುತ್ತಿದ್ದರು."ಕಣ್ಮುಚ್ಚಿಕೋ "ಎಂದ ಕಿಶನ್.. ಮೆಲ್ಲನೆ ತನ್ನ ಜೇಬಿನಿಂದ ಏನೋ ತೆಗೆದು ಅವಳ ಕೈಗೆ ಕಟ್ಟಿದ."ಈಗ ನೋಡು "ಎಂದಾಗ ಅವಳ ಕೈಯಲ್ಲೊಂದು ಗೋಲ್ಡನ್ ಚೈನ್ ನಲ್ಲಿ  ಬಂಧಿಸಿದ್ದ ಹೃದಯದಾಕಾರದ ಕೈಗಡಿಯಾರ ಹೊಳೆಯುತ್ತಿತ್ತು.ಅವಳ ಮುಖವೂ ಕೂಡಾ."ಪ್ರತೀ ಕ್ಷಣವೂ ನಾನು ನಿನ್ನೊಂದಿಗಿರಲು ಬಯಸುತ್ತೇನೆ ಮುದ್ಗೊಂಬೆ" ಅಂದಾಗ ಅವಳ ಹೃದಯ  ಪ್ರೇಮಗೀತೆಯನ್ನು ಹಾಡುತ್ತಿತ್ತು."ಅನಿರೀಕ್ಷಿತವಾದ ಗಿಫ್ಟ್ ಇಷ್ಟವಾಯಿತೇ ..?"ಎಂದು ಕೇಳಿದಾಗ "ನೀವೇ ನನಗೆ ದೊಡ್ಡ ಗಿಫ್ಟ್ "ಎಂದ ಮೈತ್ರಿ..

        ಆಗ ಚಾವಡಿಯಲ್ಲಿ ಮಹೇಶ್ ಒಳಗಿಂದ ಹೊರಗೆ ಬಂದ .ಅಕ್ಕ ಭಾವ ನನ್ನು ಕಂಡ.. "ನಾನ್ಯಾಕೆ ಡಿಸ್ಟರ್ಬ್ ಮಾಡಲಿ "ಎಂದು ಸುಮ್ಮನೆ ಹೊರಗೆ ಹೋದ.ಅಪರೂಪದಲ್ಲಿ ಒಳ್ಳೆಬುದ್ಧಿ ಬಂದಿತ್ತು .. !!! "ಮಹೇಶ್" ಎಂದು ಕೂಗಿದಂತಾಯಿತು.ಹಿಂದಿರುಗಿದರೆ ಭಾವೀಭಾವ.. "ನಮ್ಮದೊಂದು ಫೊಟೋ.." ಎಂದಾಗ "ಓಹೋ.. ಅದಕ್ಕೇನಂತೆ.."ಎಂದ ಮಹೇಶ್ ತನ್ನ ಜೇಬಿನಿಂದ ಮೊಬೈಲ್ ತೆಗೆದು ಅಕ್ಕ ಭಾವನ ಫೊಟೋ ತೆಗದ..ಭಾವೀ ಭಾವ ಅಕ್ಕನ ಕೈಗೆ ಕೈಗಡಿಯಾರ ಕಟ್ಟಿದಂತೆ ಫೋಸ್ ಕೊಟ್ಟರು ಫೊಟೋ ಕ್ಲಿಕ್ಕಿಸಿದ ಮಹೇಶ್..


        ಅಷ್ಟರಲ್ಲಿ ಎಲ್ಲರೂ ಚಾವಡಿಗೆ ಬರತೊಡಗಿದರು.ಮೈತ್ರಿ ಮೆಲ್ಲನೆ ಜಾಗ ಖಾಲಿ ಮಾಡಿದಳು.ಹಿರಿಯರು ಮಾತುಕತೆ ಮುಂದುವರಿಸಿದರು.ಈ ಭಾನುವಾರ ಮಾಣಿ ಮನೆಗೆ ಕೂಸಿನ ಕಡೆಯವರು ಹೋಗುವುದೆಂದು ನಿರ್ಧಾರಕ್ಕೆ ಬರಲಾಯಿತು.ಮಮತಾ ಮೈತ್ರಿಯನ್ನು ಕರೆದು ಮಾತನಾಡಿಸಿದರು.ಕಿಶನ್ ನ ಸೋದರ ಮಾವ "ಹುಡುಗಿಗೆ ಹಾಡುಹೇಳಲು ಬರುತ್ತದಾ..?" ಎಂದು ಕೇಳಿಯೇಬಿಟ್ಟರು.ಮೈತ್ರಿ "ಹೂಂ.."ಎಂದಾಗ ಅವಳ ಸೋದರಮಾವ  "ನನ್ನ ಸೊಸೆ ಸುಶ್ರಾವ್ಯವಾಗಿ ಹಾಡುತ್ತಾಳೆ" ಎಂದು ಶಿಫಾರಸ್ಸು ಮಾಡಿದರು.ಎಲ್ಲರೂ ಹಾಡೆಂದು ಒತ್ತಾಯ ಮಾಡಿದರು.ಮೈತ್ರಿ ಒಮ್ಮೆ ಕಿಶನ್ ಕಡೆಗೆ ಕುಡಿನೋಟ ಬೀರಿದಳು..ಯಾವುದಾದರೊಂದು ಹಾಡು ಎಂಬಂತೆ ಕಣ್ಸನ್ನೆಯಲ್ಲೇ ತಿಳಿಸಿದ..

"ಬಾರೋ..ಬೇಗ ಬಾರೋ..ನೀಲಮೇಘವರ್ಣ..
ಬಾರೋ ...ಬೇಗ
ಬಾರೋ...ವೇಲಾಪುರದ ಚೆನ್ನ..."
ಎಂದು ಹಾಡುತ್ತಿದ್ದರೆ ಎಲ್ಲರೂ ತಲೆದೂಗಿದರು..

ಕಿಶನ್ ನ ಭಾವಂದಿರು...."ಭಾವ.. ನೀವೇನು ಸುಮ್ನೆ ನೋಡ್ತಾ ಇದೀರಿ.. ನೀವು ಶುರು ಮಾಡಿ.." ಎಂದಾಗ

ಕಿಶನ್ ನಾನೇನು ಕಮ್ಮಿಯಿಲ್ಲ ಅಂತ
"ಕಮಲದಾ ಮೊಗದೋಳೆ
ಕಮಲದಾ ಕಣ್ಣೋಳೆ
ಕಮಲವಾ ಕೈಯಲ್ಲಿ ಹಿಡಿದೋಳೆ..
ಕಮಲನಾಭನ ಹೃದಯ
ಕಮಲದಲಿ ನಿಂತೋಳೆ ..
ಕಮಲಿನೀ ಕರಮುಗಿವೆ ಬಾಮ್ಮಾ..
ಪೂಜೆಯಾ ಸ್ವೀಕರಿಸೆ ದಯಮಾಡಿಸಮ್ಮಾ..."
ಎಂದು ಹಾಡಿಯೇಬಿಟ್ಟ..


ಕಿಶನ್ ನ ಕಂಠದ ಮಾಧುರ್ಯಕ್ಕೆ ಭಾಸ್ಕರ ಶಾಸ್ತ್ರಿಗಳು ತಲೆದೂಗಿದರು.ಮಹೇಶ ಆ ಕ್ಷಣವನ್ನು ಕ್ಯಾಮೆರಾ ದಲ್ಲಿ ಸೆರೆಹಿಡಿದ..

ಎಲ್ಲರೂ ಇನ್ನೊಂದು ಹಾಡನ್ನು ಹಾಡು ಎಂದು ಮೈತ್ರಿಗೆ ದುಂಬಾಲು ಬಿದ್ದರು.

"ಕರುಣಿಸೋ... ಕೃಷ್ಣಾ... ಕರುಣಿಸೋ..ಕರುಣಿಸಿದರೆ
ನಾ...ನಿನ್ನೆಂದಿಗೂ ಮರೆಯೆ..
ಕರುಣಿಸೋ ಕೃಷ್ಣಾ ಕರುಣಿಸೋ..."ಎಂದು ಸುಶ್ರಾವ್ಯವಾಗಿ ಭಾವತುಂಬಿ ಹಾಡಿದಾಗ ಗಣೇಶ ಶರ್ಮ ,ಮಮತಾ ಅಂತೂ 'ಇಂತಹಾ ಕೂಸು ಸೊಸೆಯಾಗುವುದು ನಮ್ಮ ಸೌಭಾಗ್ಯ' ಎಂದುಕೊಂಡರು.

"ನಿನ್ನ ನಾಮವೆ...
 ಎನಗೆ ಅಮೃತಾನ್ನವು...
 ಇನ್ನು... ಹಸಿದಿರಲೇಕೆ ...ನೀನೊಲಿದಿರಲು..."ಎಂದು ಕಿಶನ್ ಹಾಡಿದಾಗ ಎಲ್ಲರೂ ಭಾವಪರವಶರಾದರು...ಹಾಡು ಮುಗಿಸಿ ಮೈತ್ರಿಯ ಮುಖ ನೋಡಿದ ಕಿಶನ್.
. ಅಚ್ಚರಿಯಿಂದ ನೋಡುತ್ತಿದ್ದಳು.ಕಿಶನ್ ಅಷ್ಟು ಚೆನ್ನಾಗಿ ಹಾಡಬಲ್ಲ ಎಂದು ಅವಳಿಗೆ ತಿಳಿದೇಯಿರಲಿಲ್ಲ..

 
        ಮಂಗಳಮ್ಮ ಮಮತಾರ ಬಳಿ ಬಂದು "ನಿಮ್ಮ ಮಗ ಬಹಳ ಚೆನ್ನಾಗಿ ಹಾಡುತ್ತಾನೆ " ಅಂದಾಗ
"ಸಂಗೀತಾಭ್ಯಾಸ ಪಿಯುಸಿ ವರೆಗೆ ಮಾಡುತ್ತಿದ್ದ.ನಂತರ ಇಂಜಿನಿಯರಿಂಗ್ ಸೇರಿದ ಮೇಲೆ ಬಿಟ್ಟುಬಿಟ್ಟ.ಈಗಲೂ ಊರಿಗೆ ಬಂದರೆ ತಂಗಿಯರ ಜೊತೆ ಸೇರಿ ಹಾಡುವ ,ಅಂತ್ಯಾಕ್ಷರಿ ಆಡುವ ಅಭ್ಯಾಸ ಇದೆ "ಎಂದರು.ಅವರ ಮಾತುಕತೆಯನ್ನು ಮೈತ್ರಿ ಕೇಳಿಸಿಕೊಂಡಳು.


        ಎರಡೂ ಕಡೆಯವರಿಗೂ ಸಂಬಂಧ ಪರಸ್ಪರ ಮೆಚ್ಚುಗೆಯಾದಂತಿತ್ತು .. "ನಾವಿನ್ನು ಹೋಗಿ ಬರುತ್ತೇವೆ "ಎಂದು ಹೇಳಿ ಗಣೇಶ್ ಶರ್ಮ ಹೊರಡಲನುವಾದರು.ಮಮತಾ ಒಳಗೆ ಬಂದು ಮೈತ್ರಿಯ ಬಳಿ "ನಾಡಿದ್ದು ನಮ್ಮ ಮನೆಗೆ ಬಾ..ಸಂಕೋಚ ಬೇಡ.."ಎಂದು ಹೇಳಿ ಹೊರಟರು..ಅಮ್ಮ ಹೊರಹೋದ ನಂತರ ಕಿಶನ್ ಒಳಗೆ ಬಂದು "ಮುದ್ಗೊಂಬೆ ಬಾಯ್.."ಎಂದು ಹೇಳಿ ಕಣ್ಣಲ್ಲೇ  ಕಾಡಿಸಿ ಹೊರಟ..


         ಬಂದವರು ವಾಹನವೇರಿ ಹೊರಟರು.ಶಾಸ್ತ್ರೀನಿವಾಸ ಒಮ್ಮೆ ಆತ್ಮೀಯರನ್ನು ಕಳುಹಿಸಿ ಕೊಟ್ಟಂತೆ ಬೀಕೋ ಎಂದಿತು.ಒಳಗೆ ಬಂದ ಭಾಸ್ಕರ ಶಾಸ್ತ್ರಿಗಳು ಭಾವ ನನ್ನು ಹತ್ತಿರ ಕರೆದು "ಮಾಣಿ ಹೇಗನ್ನಿಸಿದ..?"ಎಂದು ಕೇಳಿದರು..

         ಮಂಗಳಾ ತನ್ನಣ್ಣನಿಗೆ ಮುಖ್ಯ ವಾದ ಕೆಲವು ವಿಷಯ ಮೊದಲೇ ಹೇಳಿದ್ದಳು.
"ಭಾವ.. ಮಾಣಿ ನನ್ನ ಸೊಸೆ ಮೈತ್ರಿ ಗೆ ಹೇಳಿ ಮಾಡಿಸಿದಂತಿದ್ದಾನೆ .. ಇಬ್ಬರದೂ ಒಂದೇ ರೀತಿಯ ವಿದ್ಯಾಭ್ಯಾಸ,ಸಂಗೀತದ ಒಲವು, ಕೆನೆ ಬಣ್ಣ,ಎತ್ತರ..."ಎಂದು ಕಿಶನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

          ಶ್ಯಾಮ ಶಾಸ್ತ್ರಿಗಳು ಕಿಶನ್ ನ ಹಾಡಿನ ಮೋಡಿಗೆ ಬೆರಗಾಗಿದ್ದರು.. "ಕಿಶನ್ ಪುಳ್ಳಿ ಗೆ ತಕ್ಕ ವರ ..ಈಗಿನ ಕಾಲದಲ್ಲಿ ಭಕ್ತಿಗೀತೆ ಯನ್ನು ಹಾಡುವ ಯುವಕರು ಅಪರೂಪ..ನಮ್ಮ ಮಹೇಶನಂತೆ ಯಾವುದಾದರೂ ಸಿನೆಮಾ ಹಾಡು ಹಾಡಿಯಾರು.. ಆದರೆ ಇವನು ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದಾನೆ..ಒಳ್ಳೆಮಾಣಿ.."

         ಮಹಾಲಕ್ಷ್ಮಿ ಅಮ್ಮ, ಶಂಕರ ಶಾಸ್ತ್ರಿಗಳಿಗೆ, ಸಾವಿತ್ರಿ ಗೆ.. ಎಲ್ಲರಿಗೂ ಶರ್ಮ ಕುಟುಂಬ ಮೆಚ್ಚುಗೆಯಾಯಿತು..

                     ****

         ಜೋಯಿಸರ ಒಪ್ಪಿಗೆ ಸಿಕ್ಕಿದ್ದೇ ತಡ ಬಂಗಾರಣ್ಣ ಶೇಷಣ್ಣನಿಗೆ ಕರೆಮಾಡಿ ತಿಳಿಸಿದರು."ಈ ಆದಿತ್ಯವಾರವೇ ಹುಡುಗಿ ನೋಡಲು ಬರಲು ನಾವು ತಯಾರಿದ್ದೇವೆ" ಎಂದು ಹೇಳಿದ್ದರು.ಶೇಷಣ್ಣ ಬೆಂಗಳೂರಿಗೆ ಕರೆಮಾಡಿ ಸೌಜನ್ಯಳ ಹೆತ್ತವರೊಂದಿಗೆ ಮಾತನಾಡಿದ ನಂತರ ಬಂಗಾರಣ್ಣನಿಗೆ

"ಈ ಭಾನುವಾರ ನೀವು ಹುಡುಗಿ ನೋಡಲು ಹೋಗುವುದು ಬೇಡ....

ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
21-03-2020.

No comments:

Post a Comment