Thursday, 26 March 2020

ಜೀವನ ಮೈತ್ರಿ-ಭಾಗ ೪೯(49)




      ಸೌಜನ್ಯ ಸರಳವಾಗಿ ಅಲಂಕರಿಸಿಕೊಂಡು ಕನ್ನಡಿಯ ಮುಂದೆ ನಿಂತಳು.ಏನೋ ಮಿಸ್ಸಿಂಗ್ ಅಂತ ಅನಿಸಿತು ಅವಳಿಗೆ.ತುಟಿಯ ಮೇಲೆ ಎಂದಿನಂತೆ ಗಾಢವಾದ ಲಿಪ್ ಸ್ಟಿಕ್ ಇಲ್ಲ.ಕಿವಿಯಲ್ಲಿ ನೇತಾಡುವ ಓಲೆಗಳಿಲ್ಲ.. ಅದೆಷ್ಟು ಬಾರಿ ಅಮ್ಮ ಅಂತಹವನ್ನೆಲ್ಲ ಹಾಕಬೇಡ ಎಂದರೂ ಹಾಕಿಕೊಳ್ಳುತ್ತಿದ್ದವಳು. ಇಂದು ಮೊದಲ ಬಾರಿಗೆ ಅಮ್ಮನ ಮಾತನ್ನು ಶಿರಸಾ ಪಾಲಿಸಿ ಚಿನ್ನದ ಸಣ್ಣ ಬೆಂಡೋಲೆಯನ್ನು ಹಾಕಿಕೊಂಡಿದ್ದಳು.ಬೆಂಡೋಲೆ ಚೆಂದವಿತ್ತು.ಆದರೆ ದಿನಕ್ಕೊಂದು ಫ್ಯಾಷನ್ ಓಲೆಗಳನ್ನು ಧರಿಸುತ್ತಿದ್ದ ಸೌಜನ್ಯಳಿಗೆ ಅದೆಲ್ಲ ಇಷ್ಟವಿಲ್ಲ.ಕುತ್ತಿಗೆಯನ್ನು ಬೋಳು ಬಿಡುತ್ತಿದ್ದವಳು ಅಥವಾ ಮಣ ಭಾರದ ಯಾಂಟಿಕ್ ಆಭರಣ ಧರಿಸುತ್ತಿದ್ದವಳ ಕುತ್ತಿಗೆಯಲ್ಲೊಂದು ಪುಟ್ಟ ಪೆಂಡೆಂಟ್ ಇರುವ ಚೈನ್ ವಿರಾಜಮಾನವಾಗಿತ್ತು.ಕೂದಲನ್ನು ಎಂದಿನಂತೆ ಸಣ್ಣದೊಂದು ಪ್ರೆಸ್ಸಿಂಗ್ ಕ್ಲಿಪ್ ನಲ್ಲಿ ಅರ್ಧಭಾಗ ಬಂಧಿಸಿದಳು.ಅಷ್ಟರಲ್ಲಿ ರೇಖಾ ಮಗಳ ಅಲಂಕಾರ ಎಲ್ಲಿವರೆಗೆ ಬಂತು ಎಂದು ನೋಡಲು ಬಂದರು.

"ಅಲ್ಲಾ ಮಗಳೇ ಎಷ್ಟು ಬಾರಿ ಹೇಳಿದರೂ ತಿಳಿಯಲ್ವಾ ನಿಂಗೆ .."

"ಏನಾಯ್ತು.. ಅಮ್ಮಾ.."

"ಹೀಗೆ ಕೂದಲು ಬಿಡ್ತಾರೇನೇ..ಈ ಹಳ್ಳಿಯಲ್ಲಿ..ಬಾ ಇಲ್ಲಿ.. ಎನ್ನುತ್ತಾ ಮಗಳನ್ನು ಹತ್ತಿರಕ್ಕೆಳೆದು ನೆತ್ತಿಗೆ ತೆಂಗಿನೆಣ್ಣೆ ಸುರಿದು ಬಾಚಿ ಜಡೆಹೆಣೆದರು.ಜಡೆ ಹೆಣೆಯೋಕೂ ಬರಲ್ಲ.. ಇಷ್ಟು ವಯಸ್ಸಾದರೂ.."

"ಜಡೆ ಹಾಕ್ಕೊಳ್ಳೋಕೆ ನಾನೇನು ಹೈಸ್ಕೂಲ್ ಹುಡುಗಿ ಅಲ್ಲಮ್ಮಾ..ಯಾಕೋ ಈ ಜಡೆ ನಂಗೆ ಎಳೆದು ಹಿಡಿದಂಗೆ ಅನಿಸುತ್ತಿದೆ..."

"ಅಲ್ಲಿಂದ ಬರುವತನಕ ಹೊಂದಾಣಿಕೆ ಮಾಡಿಕೋ..ಹಾಗೇ ನೋಡು ದೊಡ್ಡ ಬಿಂದಿ ತಂದಿದೀನಿ ‌.ಹಣೆಮೇಲೆ ಸರಿಯಾಗಿ ಕಾಣುವಂತೆ ಹಚ್ಚಿಕೋ.."

"ಈ ಅಲಂಕಾರ ನನಗೇಕೋ ಹಿಂಸೆ ಆಗ್ತಿದೆ.."

"ಇದೇನೇ ಸೆರಗು ಇಷ್ಟು ನೆರಿಗೆ ಮಾಡಿ ಸಪೂರ ಹಾಕಿದ್ದೀಯಾ.. ಎಷ್ಟಿದೆ ಇದರಲ್ಲಿ.. ಅಬ್ಬಾ..ಏಳು ನೆರಿಗೆ ಮಾಡಿ ಎಷ್ಟು ಸಪೂರಕ್ಕೆ ಪಿನ್ ಹಾಕ್ಕೊಂಡಿದೀಯಾ ..ಆ ಕಡೆ ಎಲ್ಲಾ ಕಾಣಿಸುತ್ತೆ.. ಸ್ವಲ್ಪ ಅಗಲವಾಗಿ ಹಾಕಿಕೋ.."

"ಅಯ್ಯೋ ಬೇಡಮ್ಮಾ..ಇದೇ ಚಂದ..ಅಗಲವಾಗಿ ಹಾಕಿದ್ರೆ ಹೆಗಲಿಗೆ ಭಾರವಾಗುತ್ತೆ .. ಪ್ಲೀಸ್ ಬೇಡ.."

"ಹಾಗೆಲ್ಲ ಹೇಳ್ಬಾರ್ದು.. "ಎಂದು ಹೇಳಿ ಸೆರಗಿಗೆ ಐದೇ ನೆರಿಗೆ ಮಾಡಿ ಪಿನ್ ಮಾಡಿದರು.

ಸೌಜನ್ಯ ಮುಖ ಊದಿಸಿಕೊಂಡಳು.

"ಮಗಳೇ...ನಾನು ನೋಡೇ ಇಲ್ಟಲ್ಲೇ..ಕೈ ಬೋಳು ಬಿಟ್ಟಿದೀಯ..ಬಳೆ ಹಾಕ್ಕೋಬೇಕು..ಬೆಂಗಳೂರಿಂದ ಬರೋವಾಗ ತರಲೂ ಮರೆತೆ..ಹಾಂ.. ಇರು ಅತ್ತೇನ ಕೇಳೋಣ.."

         ರೇಖಾ ತಮ್ಮನ ಪತ್ನಿಯಲ್ಲಿ ಕೇಳಿ ಅವಳ ಗಾಜಿನ ಬಳೆಗಳನ್ನು ತೊಡಿಸಿದಳು.. ಪುಟ್ಟ ಕೈಗಳಿಗೆ ದೊಡ್ಡದಾಗಿ ಜಾರುವಂತಿದ್ದವು..

ಸೌಜನ್ಯಳಿಗೆ ಅಳುವೇ ಬರುವಂತಾಯಿತು.. ತಾನು ಯಾವ ರೀತಿ ಇರಲು ಬಯಸುವುದಿಲ್ಲವೋ ಅದನ್ನೇ ಸಂಸ್ಕಾರ ಅನ್ನುವ ಮನೆಗೆ, ಹಳ್ಳಿಗೆ ಕಾಲಿಡಬೇಕಾಗಿ ಬರುತ್ತದಲ್ಲಾ... ಎಲ್ಲಾ ನನ್ನ ಕರ್ಮ..ನಾನೇ ಮಾಡಿಕೊಂಡಿದ್ದು.. ಯಾರನ್ನೂ ದೂಷಿಸುವಂತಿಲ್ಲ..ಛೇ.. ಎಂದು ಯೋಚಿಸುತ್ತಿದ್ದವಳ ಕಣ್ಣಂಚಿನಿಂದ ಹನಿಗಳು ಉದುರಲು ಅಪ್ಪಣೆ ಕೇಳುತ್ತಿದ್ದವು.

         ನರಸಿಂಹ ರಾಯರು "ರೇಖಾ ಮಗಳ ಅಲಂಕಾರ ಆಯ್ತಾ..ಹೊರಡೋಣವಾ" ಎಂದು ಕೇಳಿದರು..
"ಹೂಂ... ಆಯ್ತು ರೀ... ಒಂದೇ ಒಂದು ತುಂಡು ಮಲ್ಲಿಗೆ ಮುಡಿಸ್ತೀನಿ.." ಎನ್ನುತ್ತಾ ಬಾಯಲ್ಲಿ ಕಚ್ಚಿಕೊಂಡಿದ್ದ ಸುಜಾತಾ ಕ್ಲಿಪ್ ನ್ನು ಅಗಲಿಸಿ ಮಂಗಳೂರು ಮಲ್ಲಿಗೆಯನ್ನು ಮುಡಿಸಿದಳು.. ಸೌಜನ್ಯ ಮಲ್ಲಿಗೆ ವಾಸನೆ ಬರುತ್ತೆ ಅನ್ನುತ್ತಿದ್ದ ಹುಡುಗಿ.. ಈಗ ಅಮ್ಮನಿಗೆ ಎದುರು ಮಾತನಾಡುವಂತಿಲ್ಲ.


     ಕಾರಿನಲ್ಲಿ ಸೌಜನ್ಯ ಕುಳಿತಳು.ಪಕ್ಕದಲ್ಲಿ ಅಮ್ಮ ರೇಖಾ,ಆಚೆ ಬದಿಗೆ ಅತ್ತೆ ಶೈಲಾ ಕುಳಿತರು.ನರಸಿಂಹ ರಾಯರು ವಾಹನ ಚಲಾಯಿಸಿದರು.ಅವರ ಪಕ್ಕದಲ್ಲಿ ಸೌಜನ್ಯಳ ಸೋದರ ಮಾವ ಸುರೇಶರಾಯರು ಕುಳಿತಿದ್ದರು.


         ದಾರಿಯಲ್ಲಿ ಶೇಷಣ್ಣನೂ ಜೊತೆಯಾಗಿ ನಾಲ್ಕು ಗಂಟೆಗೆ ಹತ್ತು ನಿಮಿಷ ಇರುವಾಗಲೇ ಬಾರಂತಡ್ಕ ಮನೆಯ ಗೇಟಿನ ಮುಂದೆ ವಾಹನ ನಿಲ್ಲಿಸಿದರು.ಕೆಲಸದಾಳು ಗೇಟು ತೆರೆದ.ವಾಹನ ಒಳಗೆ ಬಂದಿತು.


        ಕಾರಿನಿಂದ ಒಬ್ಬೊಬ್ಬರಾಗಿ ಇಳಿದರು.ಬಂಗಾರಣ್ಣ ಅವಸರವಸರವಾಗಿ ಹೊರಗೆ ಬಂದರು.ಮಾತನಾಡಿಸಿ ಚಾವಡಿಗೆ ಕರೆದೊಯ್ದರು."ಸುಮಾ ನೀರು ತಾ.." ಕೂಗಿದರು.ಒಳಗಿಂದ ಉತ್ತರವಿಲ್ಲ.ಸುಮಾಗೆ ಇನ್ನೂ  ಸೀರೆಯುಟ್ಟಾಗಿರಲಿಲ್ಲ."ಕೇಶವ್ ನೀರು ತಾ.. " ಎಂದರು.."ಹಾಂ ತಂದೆ ಅಪ್ಪಾ.." ಎಂದವನು ಇನ್ನೂ ಬರ್ಮುಡಾ ಚಡ್ಡಿ ಯಲ್ಲಿದ್ದುದನ್ನು ಕಂಡು ಬಂಗಾರಣ್ಣನಿಗೆ ಪಿತ್ಥ ನೆತ್ತಿಗೇರಿತ್ತು..ಶೇಷಣ್ಣನಿಗೆ ಇರುಸುಮುರುಸು ಆಗಿತ್ತು..


         ಐದು ನಿಮಿಷ ಬಂದವರು ಚಾವಡಿಯಲ್ಲಿ ಬಂಗಾರಣ್ಣನಲ್ಲಿ ಮಾತನಾಡುತ್ತಾ ಕುಳಿತಿದ್ದರು.ಅಷ್ಟರಲ್ಲಿ ಸುಮಾ ನೀರು ಬೆಲ್ಲ ತಂದು ಆಸರಿಂಗೆ ಕೊಟ್ಟು ಉಪಚರಿಸಿ ಕ್ಷೇಮ ಸಮಾಚಾರ ವಿನಿಮಯಿಸಿಕೊಂಡರು.ಜೀನ್ಸ್ ಪ್ಯಾಂಟ್ ಟೀಶರ್ಟ್ ಧರಿಸಿ ಕೂದಲನ್ನು ಕೈಯಿಂದ ಕ್ರಾಪ್ ಮಾಡುತ್ತಾ ಬಂದ ಕೇಶವ್... ಒಮ್ಮೆ ಕೇಶವ್ ನನ್ನು ನೋಡಿ ಶಾಕ್ ಆದಳು ಸೌಜನ್ಯ.. ನಂಗೆ ಹಾಗಿರ್ಬೇಕು ಹೀಗಿರ್ಬೇಕು ಎಂದೆಲ್ಲ ಷರತ್ತು ವಿಧಿಸಿ ಅಲಂಕಾರ ಮಾಡಿಸಿ ಕರೆದುಕೊಂಡು ಬಂದವರು ಅಮ್ಮ..ಆದರೆ ಈ ಮನುಷ್ಯ ಮಾತ್ರ ಜೀನ್ಸ್ ಪ್ಯಾಂಟ್ ಟೀಶರ್ಟ್ ನಲ್ಲಿದ್ದಾನಲ್ಲ..ಹಳ್ಳಿಯ ಸಂಸ್ಕಾರದಂತೆ ಪಂಚೆ ಉಟ್ಟು ಶಾಲು ಹೆಗಲಿಗೇರಿಸಿಲ್ಲ.. ಹೂಂ.... ಇರಲಿ ಇರಲಿ...ನನಗೂ ಇಂತಹ ಮಾಡರ್ನ್ ಮೆಂಟಾಲಿಟಿಯೇ ಇಷ್ಟವಾಗುವುದು..ನಂಗೂ ನನ್ನಿಷ್ಟದಂತೇ ಡ್ರೆಸ್ ಮಾಡಿಕೊಳ್ಳಲು ಬಿಟ್ಟರೆ ಅಷ್ಟೇ ಸಾಕು..



         ಕೇಶವ್ ಬಂದು ತಂದೆಯ ಪಕ್ಕದಲ್ಲಿ ನಿಂತ.ಬಂದವರನ್ನು ಹೇಗೆ ಮಾತನಾಡಿಸಲಿ ಎಂಬ ಸಂಕೋಚ ಅವನಿಗೆ..ಶೇಷಣ್ಣ ಕೇಶವನ ಪರಿಚಯ ಮಾಡಿಸಿದರು.ನರಸಿಂಹ ರಾಯರು "ಏನಪ್ಪಾ ಕೇಶವ್.. ಬೆಂಗಳೂರಿನಲ್ಲಿ ಯಾವ ಕಂಪೆನಿಯಲ್ಲಿದ್ದೆ...?" ಎನ್ನುತ್ತಾ ಮಾತಿಗೆಳೆದರು.
ಮಾತುಕತೆ ಮುಂದುವರಿದು ತಿಂಡಿ ಕಾಫಿ ಎಲ್ಲಾ ಆಗಿ ಮನೆತೋರಿಸಿದರು.ಇಷ್ಟುದೊಡ್ಡ ಮನೆಯಲ್ಲಿ ಸುತ್ತು ಬರಲು ನನ್ನಿಂದ ಸಾಧ್ಯವೇ..? ಅಬ್ಬಾ ಎನಿಸಿತು ಸೌಜನ್ಯಾಳಿಗೆ..


        ಸುಮಾ ಸೌಜನ್ಯಳೊಡನೆ ಸ್ನೇಹದಿಂದಲೇ ಮಾತನಾಡಿಸಿದರು.. "ನಾವು ಹಳ್ಳಿಯಲ್ಲಿದ್ದರೂ ಪೇಟೆಯಲ್ಲಿದ್ದಂತೇ ಬದುಕುತ್ತಿದ್ದೇವೆ..ಬರುವ ಸೊಸೆಗೆ ಹಾಗೇ ಇರಬೇಕು ಹೀಗೇ ಇರಬೇಕು ಎಂದು ನಾವೇನೂ ಷರತ್ತು ವಿಧಿಸುವುದಿಲ್ಲ .ಮಗನ ಜೊತೆ ಅನ್ಯೋನ್ಯವಾಗಿ ಬದುಕಿ ಬಾಳಿದರೆ ಸಾಕು " ಎಂದದ್ದು ಸೌಜನ್ಯಳಿಗೆ ನಿಧಿ ಸಿಕ್ಕಿದಷ್ಟು ಸಂತೋಷವಾಯಿತು.. ಇನ್ಯಾಕೆ ತಡ ಅಂತ ಕೇಶವನೊಡನೆ ಹರಟಲು ಅವನನ್ನು ಅರಸಿದಳು.ಕೇಶವನೂ ಸೌಜನ್ಯಳಿಗಾಗಿ ಕಾಯುತ್ತಿದ್ದ.


      ಇಬ್ಬರೂ ಜೊತೆಯಾಗಿ ಅಂಗಳದ ಮೂಲೆಗೆ ತೆರಳಿದರು.ಮಾತನಾಡುತ್ತಾ ಹಾಗೇ ಮೆಲ್ಲನೆ ತೋಟದ ಕಡೆಗೆ ಹೊರಟರು.ಸಮಯ ಹೋದದ್ದೇ ಗೊತ್ತಾಗಲಿಲ್ಲ.. ಕೇಶವ್ ನ ಬಳಿ ಮಾತನಾಡುತ್ತಿದ್ದಾಗ ಅವಳ ಮನಸ್ಸು ಲಗಾಮು ಇಲ್ಲದೇ ಹಾರುತ್ತಿತ್ತು.ಅವನೂ ಅಷ್ಟೇ ರಸಿಕ.. ಅವಳು ಕಣ್ಣಲ್ಲೇ ಶೃಂಗಾರದ ಅಲೆಯನ್ನು ಎಬ್ಬಿಸಿದಳು.ಕೇಶವ್ ಅವಳ ರೂಪಸಿರಿಗೆ ಮಾರುಹೋದ..ಅವಳ ತುಟಿಯಂಚಲ್ಲಿ ಅಲಂಕರಿಸಿದ್ದ ನಗೆಯನ್ನು ತನ್ನದಾಗಿಸುವ ಆಸೆ.. ಆತನ ಹೃದಯದಲ್ಲಿ ಮಧುರ ಕವನ ಬರೆಯುವ ಆಸೆ ಅವಳಿಗೆ.. ಇದುವರೆಗೆ ಮಾಡರ್ನ್ ಡ್ರೆಸ್ ನಲ್ಲಿ ಫೊಟೋದಲ್ಲಿ ನೋಡಿದ್ದ ಅವಳನ್ನು ಮೆಚ್ಚಿ ಹುಚ್ಚನಾಗಿದ್ದ.ಈಗ ಕಣ್ಣೆದುರಿಗೆ...ಸನಿಹದಲ್ಲೇ...ಅದೂ ...ಹೆಣ್ಣಿನ ಸೌಂದರ್ಯವನ್ನು ಎತ್ತಿ ಹಿಡಿಯುವ ಸೀರೆಯಲ್ಲಿ... ಕೇಶವ್ ... ಮೆಲ್ಲನೆ ಅವಳ ಕೈಗಳನ್ನು ಸವರಿದ.. ಮೆದುವಾದ ಕೈಗಳು.. ಕೋಮಲತೆಗೆ ಇನ್ನೊಂದು ಹೆಸರು ಇವಳೇ... ಪುಟ್ಟ ಜಡೆಯಲ್ಲಿ ನೇತಾಡುತ್ತಿದ್ದ ಮಲ್ಲಿಗೆ ಹೂವುಗಳನ್ನು ಆಘ್ರಾಣಿಸಿದ.ಆಕೆಯ ಸನಿಹವೇ  ವಿಶೇಷ ಸುವಾಸನೆಯಿಂದ ಕೂಡಿದ್ದು ಕೇಶವನನ್ನು  ಮರುಳುಮಾಡಿತು.ಆಕೆಯ ಸಿಂಧೂರದ ಮೇಲೊಂದು ಪ್ರೇಮಮುದ್ರೆಯನೊತ್ತಿದ ಅವನಿಗೆ ಅವಳ ತಿದ್ದಿ ತೀಡಿದ ಹುಬ್ಬುಗಳು ಗದರುತ್ತಿದ್ದವು..ನಾವೇನು ಕಮ್ಮಿ ಬಿಂದಿಗಿಂತ.. ನಾವು ಸದಾ ಆಕೆಯ ಜೊತೆಯಲ್ಲಿರುವೆವು ಎಂದು...
.. ಅವನಿಗೆ ಅಸೂಯೆ ಮೂಡುವಂತಿದ್ದವು ಅವಳ ಹುಬ್ಬುಗಳು...ನಾಸಿಕವಂತೂ... ನೀಳ ನಾಸಿಕ..ಮನಸೋಲದೆ ಇರಲು ಸಾಧ್ಯವಿಲ್ಲ..



ನುಣುಪಾದ ಬೆಣ್ಣೆಯಂತಹ ಕೆನ್ನೆ..ತನ್ನ ಬೊಗಸೆಯಲ್ಲಿ ಹಿಡಿದು ಕೆನ್ನೆಗೆ ತುಟಿಯೊತ್ತಿ ತುಂಟತನದಿಂದ ನಗುತಿದ್ದ ಕೇಶವನನ್ನ  ಕಣ್ಣಲ್ಲೆ ಆಕ್ಷೇಪಿಸಿದಳು ಸೌಜನ್ಯ..ಆತನ ಕೈಗಳು ಸೆರಗು ಸರಿದು ತೋರುತ್ತಿದ್ದ ಎದೆ, ಸೊಂಟದ ಮೇಲೆ ಹರಿದಾಡಿದವು.. ಅಷ್ಟರಲ್ಲಿ ಮನೆಯಿಂದ ಕೇಶವನನ್ನು ಕರೆಯುವ ದನಿ ಕೇಳಿಸಿತು.. ಕೇಶವನಿಗೆ ನಿರಾಸೆ..ಸೌಜನ್ಯಳಿಗೆ ಕೇಶವ್ ನನ್ನು ಗೋಳಾಡಿಸಿದ ,ಸಂಬಂಧ ಭದ್ರಪಡಿಸಿದ ಸಂತೃಪ್ತಿ.. ಇನ್ನು ಕೇಶವ್ ನನ್ನ ಸೆರಗು ಹಿಡಿಯುವುದು ಗ್ಯಾರಂಟಿ... ನಾನು ಈ ಸಿರಿಸಾಮ್ರಾಜ್ಯದ ಒಡತಿಯಾಗಲು ಇನ್ನು ಯಾವುದೇ ಅಡ್ಡಿಯಿರಲಾರದು.ಎಂದು ನಸುನಗುತ್ತಾ  ಅವನ ತುಟಿಗೆ ತುಟಿ ಬೆಸೆಯಲು ಹೊರಟು "ಅಯ್ಯಾ...ಗಡ್ಡ ಚುಚ್ಚುತ್ತಿದೆ " .. ಎಂದು ನೆಪ ಹೇಳಿ ಹುಸಿಕೋಪ ತೋರಿಸಿ ಹೊರಡಲನುವಾದಳು... ಉಪಾಯವಿರದೆ ಕೇಶವ್ ಅವಳನ್ನು ಹಿಂಬಾಲಿಸಿದ.. ಮನೆಯಲ್ಲಿ ಈಗ ನಮ್ಮನ್ನು ಎಲ್ಲರೂ ಏನಾದರೂ ಅನ್ನಬಹುದು ಎಂಬ ಯೋಚನೆ ಸೌಜನ್ಯಳಿಗೆ...ಆದರೆ ಯಾರೂ ಏನೂ ಅನ್ನಲಿಲ್ಲ.. ಸಹಜವಾಗಿಯೇ ಇದ್ದರು.. ಇದು ಖುಷಿಯಾಯಿತು ಆಕೆಗೆ ..
ನನಗೆ ಅಡ್ಡಿಪಡಿಸುವವರಲ್ಲ ಮನೆಯವರು ಎಂಬ ವಿಶ್ವಾಸ ಬಂತು.. ಎರಡೂ ಕುಟುಂಬದವರಿಗೂ ಈ ಮದುವೆ ನಡೆದರೆ ಸಾಕು ಎಂಬ ಭಾವನೆ ಬಲವಾಗಿತ್ತು.. ಆದ್ದರಿಂದ ಅವರೂ ಸೌಜನ್ಯ ಕೇಶವ್ ಅನ್ಯೋನ್ಯತೆಯಿಂದ ಇದ್ದುದನ್ನು  ಕಂಡು ನಿಟ್ಟುಸಿರು ಬಿಟ್ಟರು..




ಬಂಗಾರಣ್ಣ "ನಮಗೆ ನಿಮ್ಮ ಹುಡುಗಿ ಒಪ್ಪಿಗೆಯಾಗಿದ್ದಾಳೆ ..ನಿಮ್ಮ ಅಭಿಪ್ರಾಯ ತಿಳಿಸಿ"ಎಂದಾಗ
ನರಸಿಂಹ ರಾಯರು   ತನ್ನ ಜೊತೆ ಬಂದ ಎಲ್ಲರನ್ನೂ ಅಂಗಳದ ಬದಿಗೆ ಕರೆದು ನಾವು ಸಂಬಂಧ ಒಪ್ಪಿಗೆ ಅನ್ನೋಣವೇ ಅಂದಾಗ ಎಲ್ಲರೂ ಒಪ್ಪಿದರು.



        ನರಸಿಂಹ ರಾಯರು ಶೇಷಣ್ಣ ಮತ್ತು ಬಂಗಾರಣ್ಣನಲ್ಲಿ ತಮ್ಮ ಒಪ್ಪಿಗೆಯನ್ನು ತಿಳಿಸಿದರು.ಮುಂದಿನ ಭಾನುವಾರವೇ ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಇಟ್ಟುಕೊಳ್ಳೋಣ ಎಂದು ನಿರ್ಧರಿಸಿದರು.ಎರಡೂ ಕುಟುಂಬಕ್ಕೂ ತರಾತುರಿಯಲ್ಲಿ ವಿವಾಹ ಮುಗಿಯಬೇಕಿತ್ತು..


       ಸೌಜನ್ಯಳ ಕಡೆಯವರು ಮನೆಗೆ ತೆರಳಿದರು.ಇಳಿಸಂಜೆ ಕೇಶವ್ ಸೌಜನ್ಯಳ ಮಧುರ ನೆನಪುಗಳನ್ನು ಮೆಲಕುಹಾಕಿ ನಸುನಗುತ್ತಿದ್ದ ..ಆಗ ಅನಾಮಧೇಯ ಕರೆಯೊಂದು ಬಂದಿತು..

ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
26-03-2020.

No comments:

Post a Comment