ತನ್ನೊಡಲಲ್ಲಿ ಕುಡಿಯೊಡೆದ ಅರಿವು
ಮೂಡಿದಾಗ ಮೈಮನವೆಲ್ಲ ಪುಳಕಗೊಂಡು
ಆಯಾಸ ವಾಕರಿಕೆಗಳ ಸಹಿಸಿ
ಕಂದನಿಗೆಂದು ಗಂಟಲಲ್ಲಿಳಿಯದಿದ್ದರೂ ತುರುಕಿ
ತಿಂದದ್ದನ್ನೆಲ್ಲ ಚೂರೂ ಬಿಡದೆ ವಾಕರಿಸಿ
ಮತ್ತದೇ ಮಮಕಾರದಲಿ ಹೊಟ್ಟೆಯಮೇಲೊಮ್ಮೆ ಮೆದುವಾಗಿ ಕೈಯಾಡಿಸಿ
ಕಂದ ಬೆಳ್ಳಗಾಗಲೆಂದು ಯಾರೋ ಹೇಳಿದ
ಕೇಸರಿ ಹಾಲು
ಒಂದು ಬಿಂದು ಸ್ರಾವ ಕಂಡಾಗ ಹೌಹಾರಿ ಮತ್ಯಾವುದೋ ಹಿತ್ತಲ ಮದ್ದಿನ ಕಷಾಯದ ಸಾಲು
ಕುಡಿದು ಸೊಂಟನೋಯುತ್ತಿದ್ದರೂ ಮಲಗಿದರೆ ನಿದಿರೆ ಸುಳಿಯದಿದ್ದರೂ ವಿಶ್ರಮಿಸಿ
ಗರ್ಭದಲಿಹ ಕಂದಗೆ ಕೇಳುವಂತೆ ಸ್ತೋತ್ರಗಳ ಪಠಿಸಿ..
ಇದಲ್ಲವೇ ಇನ್ನೂ ಮುಖ ಕಾಣದ ಕಂದನಿಗಾಗಿ ಅಮ್ಮನ ಕಳಕಳಿ!!
ಮನೆಯ ಕೆಲಸದಿ ಚಿತ್ತವಿಟ್ಟು ಮುಗಿಸಿ
ಮನದಿ ತನ್ನ ಕುಡಿಯ ಬಿಂಬವ ಕಲ್ಪಿಸಿ
ಕಂದನಾಗಮನಕೆ ಜೋಗುಳವ ಕಲಿತು ಗುನುಗಿ
ವೃದ್ಧಿಸುತಿರುವ ತನ್ನುದರವ ದಿಟ್ಟಿಸಿ ಬೀಗಿ
ಬಿಗಿಯುತಿರುವ ತನ್ನ ರವಕೆಗಳ ಬದಲಿಸಿ
ಸಡಿಲವಾಗಿ ಹೊಸತಾಗಿ ಹೊಲಿಸಿ
ಹಾಲುತುಪ್ಪ ಗಟ್ಟಿ ಮೊಸರನುಂಡು ತನ್ನ ದೇಹಕೆ ಕೊಬ್ಬೇರಿಸಿ
ಪೌಷ್ಟಿಕವೆಂದು ಹಸಿರು ಸೊಪ್ಪು ತರಕಾರಿಗಳ ಉದರಕಿಳಿಸಿ
ಇದಲ್ಲವೇ ಅಮ್ಮನ ಮಮತೆ ಆರೋಗ್ಯವಾಗಿರಬೇಕೆಂದು ತನ್ನ ವಂಶಾವಳಿ!!
ತವರನಗುಲಿದ ನೋವ ಮರೆಮಾಚಿ
ಅತ್ತೆಮಾವನ ಬಿಗಿನುಡಿಯ ಸಹಿಸಿ
ಇನಿಯನ ಬಿಸಿಯಪ್ಪುಗೆಗೆ ನಸುನಾಚಿ
ಸೀಮಂತ ಶಾಸ್ತ್ರದಿ ಉಡಿತುಂಬಿ ಹೊಸ ಸೀರೆಯುಟ್ಟು ಸಂಭ್ರಮಿಸಿ
ತವರಕಡೆಗೆ ಹೊರಟು ಪತಿಯರಮಿಸಿ
ಕ್ಷಣಕ್ಷಣಕೂ ಪತಿಯ ಸರಸವ ನೆನೆದು
ಬಿಸಿಲುಸೋಕದ ಬಿಳಿಮೈಯ ತುಂಬುಗರ್ಭಿಣಿ ಚೆಲುವೆ
ಇವಳಲ್ಲವೇ ತವರಿನ ಪ್ರೀತಿಯ ಚಿನಕುರುಳಿ!!
ಬಿಗಿಯಾದ ಉದರದೊಳು ಮೆಲ್ಲನೆ ಒದೆವ ಕಂದ
ಚಿಕ್ಕ ಗಾಯದ ನೋವಿಗೂ ಅಂಜುತಿದ್ದವಳೀಗ
ಕಂದನೊದೆತಕೆ ಅಂಜದೆ ಸಿಡಿಮಿಡಿಗೊಳದೆ
ಮೆಲ್ಲನೆ ನೀವಳಿಸಿ ಮಗ್ಗುಲು ಬದಲಿಸಿ
ನೋವ ಮರೆತು ಕಂದನಿಗೆಂದು ಆಲಾಪಗೈದು
ಈ ಸಮಯದಿ ನಿನ್ನ ಜೊತೆ ನಾನಿದ್ದೇನೆ ಎಂದು ಕಣ್ಣಲ್ಲಿ ಕಣ್ಣಿಟ್ಟು ಹೇಳಬೇಕಿತ್ತು
ನಡೆಯಲು ಕಷ್ಟವಾದಾಗ ಕೈಹಿಡಿದು ನಡೆಸಬೇಕಿತ್ತು
ಬೆವರಹನಿಗಳು ಹಣೆಯನಲಂಕರಿಸಿದಾಗ ಒರೆಸಿ ಸಾಂತ್ವನ ಹೇಳಬೇಕಿತ್ತು ನೀವು ಎಂದು ಅಪ್ಪನೊಡನೆ ಬೇಸರಗೊಂಡರೂ ತೋರಗೊಡದೆ ಕ್ಷೀಣವಾಗಿ ನಕ್ಕವಳು
ಇದಲ್ಲವೇ ಅಮ್ಮನೆಂಬ ದೈವದ ಪ್ರಭಾವಳಿ!!
ಸಂಕಟವ ನುಂಗಿ ಅತ್ತುಕರೆದು
ಮತ್ತೆ ಇನ್ನಿಲ್ಲದಂತೆ ಶಕುತಿಯ ಒಗ್ಗೂಡಿಸಿ
ಕಂದನನು ಭುವಿಗೆ ತಂದವಳೇ...
ಅವಳೇ..ಅವಳೇ..ಅಮ್ಮನೆಂಬ ಮಹಾಮಾತೆ
ಕಂದನ ಮೊದಲ ಸ್ಪರ್ಶದಲಿ ತಾಯ್ತನದ ಮಧುರತೆ
ಅಮ್ಮನ ಕುಚಗಳಲ್ಲಿ ಕಂದನಿಗೆ ಅಮೃತದ ಒರತೆ
ಆ ಮಾತೆಯ ನಯನಗಳಲ್ಲಿ ತುಂಬಿ ಧನ್ಯತೆ
ಪದಗಳಿಗೆ ನಿಲುಕದ ವಾತ್ಸಲ್ಯದ ಸಿರಿಮಾತೆ
ಇದಲ್ಲವೇ ಅಮ್ಮ ಕಂದನಿಗಾಗಿ ನವಮಾಸ ಶ್ರದ್ಧೆಯಿಂದ ಮಾಡಿದ ಚಳುವಳಿ!!
ನವ ಮಾಸ ಹೊತ್ತವಳು ಒಬ್ಬಳೇ
ಎತ್ತಿಮುದ್ದಾಡಿ ಆಡಿಸುವ ಕೈ ಹಲವಾರು
ಅಮ್ಮನದೇ ಮೆದುವಾದ ತ್ವಚೆ ಕೆನೆಬಣ್ಣ
ಶಿರದ ತುಂಬಾ ನಯವಾದ ರೇಶಿಮೆಯ ಕೇಶ
ನಯನಗಳು ಮತ್ಸ್ಯ ದಂತೆ ನೀಳ
ನಾಸಿಕವು ಚೆಲುವಾದ ಚಂಪಕದ ಪಕಳೆ
ಗಲ್ಲವು ತುಂಬಿದ ಸೇಬುಹಣ್ಣಂತೆ
ಕಿವಿಯ ಆಕಾರವು ಒಂದೇ ಶಿಲ್ಪಿ ಕೆತ್ತಿದಂತೆ
ಕೈಕಾಲು ಬೆರಳೆಲ್ಲ ಅಮ್ಮನಂತೆಯೇ ನೀಳ
ಆಡುವರು ನೂರಾರು ಮಾತು ಕಂಡದ್ದು ಕಂಡಂತೆ
ಇದಲ್ಲವೇ ಅಮ್ಮನಮಗಿತ್ತ ರೂಪದ ಬಳುವಳಿ!!
ಸಮೃದ್ಧ ಎದೆಹಾಲು ಕಂದನಿಗೆ ಉಣಿಸಿ
ಅದು ಸಾಲದೆಂದು ಶತಾವರಿ ಕಷಾಯವ ತಾಸೇವಿಸಿ
ಅವರಿವರ ಸಲಹೆಗಳ ಮರೆಯದೆ ಪಾಲಿಸಿ
ಕೊನೆಗೆ ರಾಗಿಗೋಧಿಯ ಕಡೆದುಸೋಸಿ
ನುಣ್ಣನೆಯ ಮಣ್ಣಿಯ ಹಾಲುಬೆಲ್ಲದಿ ಬೇಯಿಸಿ
ಪೀಂಪೀಂ ಗೊಂಬೆ ಚಮಚ ಗಿಣ್ಣಾಲಿನ ಶಬ್ದದಿ ಮಣಿಸಿ
ಹೊಟ್ಟೆತುಂಬಿಸಿ ಸಾಕಲು ಮಾಡಿಹಳು ನಾನಾ ಕರಾಮತ್ತು
ತೊಟ್ಟಿಲಲಿ ಜೋಗುಳದ ಲಾಲಿಯನು ಹಾಡಿ ತೂಗಿ
ನಿದಿರೆಗೈದಿಹ ಕಂದನ ನೋಡಲು ಬಾಗಿ
ದೃಷ್ಟಿಯಾಗದಂತೆ ಕೈಯ ಲಟಲಟನೆ ನೆಟಿಗೆ
ತೆಗೆದು
ಇದಲ್ಲವೇ ಕಂದನ ಬೆಳೆಸಲು ಅಮ್ಮನ ಕಸರತ್ತು ತರಾವಳಿ!!
ಬೆಳೆಯುತಿಹ ಕಂದಗೆ ಅಮ್ಮನೇ ಮಾದರಿ
ಓದು ಬರಹ ನೈತಿಕ ಮೌಲ್ಯವ ಅರುಹುವ ಶಿಕ್ಷಕಿ
ಅಮ್ಮನಂತೆಯೇ ಮಾತಿನ ಶೈಲಿ,ನಡವಳಿಕೆ
ಅಮ್ಮನ ರೂಪವು ಎರಕದಲಿ ಬಂದರೆ
ಶಿಸ್ತು ಅಚ್ಚುಕಟ್ಟುತನ ಸಮಯಪ್ರಜ್ಞೆ ಕಾರ್ಯದಕ್ಷತೆ ವಾತ್ಸಲ್ಯ ತಾಳ್ಮೆ
ಅನುದಿನದ ಅಮ್ಮನ ಒಡನಾಟದ ಪರಂಪರೆ
ತಪ್ಪಾದಾಗ ಎತ್ತಿ ತೋರಿಸಿ ಕಣ್ಣಲ್ಲೆ ಗದರಿ
ಸನ್ಮಾರ್ಗವ ತೋರಿ ಕಲಿಸಿ ಸದ್ಭುದ್ಧಿ
ಗೆದ್ದಾಗ ತಾನೇ ಗೆದ್ದಂತೆ ಸಂಭ್ರಮಿಸಿ
ಸೋತಾಗ ಬೆನ್ನು ತಟ್ಟಿ ಹುರಿದುಂಬಿಸಿ
ನೊಂದಾಗ ಕಣ್ಣೀರೊರೆಸಿ ಧೈರ್ಯ ತುಂಬಿ
ಮಕ್ಕಳ ತುಂಟಾಟದಿ ತಾನೂ ಮಗುವಾಗಿ
ಮಕ್ಕಳು ಹೆಗಲೆತ್ತರ ಬೆಳೆದು ನಿಂತಾಗ ಸಂತಸಪಡುವ
ಅವರ ಜವಾಬ್ದಾರಿ ಮುಗಿಸಿ ನಿಟ್ಟುಸಿರು ಬಿಡುವ
ತನಗಾಗಿ ಬಾಳದೆ ತನ್ನವರಿಗಾಗಿ ಮಿಡಿವ
ತವರ ಕುಲದ ಹೆಸರು ಕೀರ್ತಿ ಪಸರಿಸುವ
ಕಾಲಿಟ್ಟ ಮನೆಯಲಿ ದೀಪ ಬೆಳಗುವ
ಅಮ್ಮನೆಂಬ ದೈವ ನಮಗೆ ದೇವರಿತ್ತ ಬಳುವಳಿ!!
✍️... ಅನಿತಾ ಜಿ.ಕೆ.ಭಟ್.
02-03-2020.
Momspresso Kannada ದಲ್ಲಿ 'ಅಮ್ಮನ ಬಳುವಳಿ ' ಎಂಬ ವಿಷಯಕ್ಕೆ ಬರೆದಂತಹ ಬರಹ...
*******
ನಮಸ್ತೇ....
ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ'Home'ಮತ್ತು>ಸಂಕೇತಗಳನ್ನು ;view web version ಅನ್ನು ಬಳಸಿಕೊಳ್ಳಬಹುದು.. ಧನ್ಯವಾದಗಳು 💐🙏
No comments:
Post a Comment