Sunday, 8 March 2020

ಜೀವನ ಮೈತ್ರಿ-ಭಾಗ ೩೭(37)








        ಭಾಸ್ಕರ ಶಾಸ್ತ್ರಿಗಳು ಫ್ರೆಶ್ ಆಗಿ ಬಂದು ಕಾಫಿ ಕುಡಿದು ಹೊರಬಂದಾಗ ಶ್ಯಾಮ ಶಾಸ್ತ್ರಿಗಳು ಮಗನಲ್ಲಿ "ಜೋಯಿಸರು ಏನೆಂದರು..?"ಎಂದು ಪ್ರಶ್ನಿಸಿದರು..
"ಹೊಂದಾಣಿಕೆ ಇದೆ..ಹುಡುಗನ ಜಾತಕದ ಪ್ರಕಾರ ಸಾತ್ವಿಕ ಸ್ವಭಾವದವನಂತೆ ತೋರುತ್ತದೆ.ಮೈತ್ರಿಗೊಂದು ಸಂಧಿಶಾಂತಿ ಹೋಮ ಮದುವೆಗೆ ಮುನ್ನ ಮಾಡಿಸಿ ಎಂದು ಬರೆದುಕೊಟ್ಟಿದ್ದಾರೆ..

    ಯಾರಿಗೆ ಯಾರು ಎಂದು ಮೊದಲೇ ಬರೆದಿರುತ್ತದೆ..ನಾವು ತಿದ್ದಲು ಸಾಧ್ಯವಿಲ್ಲ.ನಮ್ಮ ಅನಿಸಿಕೆ , ಬುದ್ಧಿಮಾತು ಹೇಳಬಹುದಷ್ಟೇ..ವಿವಾಹ ಬಂಧನದ  ಭದ್ರಬುನಾದಿಯೇ ಪ್ರೀತಿ.. ಅದು ಮೊದಲೇ ಮೂಡಿದೆ.ಅದನ್ನು ಕೆಡಿಸಲು ಹೊರಟರೆ ನಮ್ಮ ಜೀವನಕ್ಕೂ ಅರ್ಥವಿಲ್ಲ..ಮೂಡಿದ ಪ್ರೇಮವನ್ನು ಕೆಡಿಸಬಾರದು..ಮೂಡದ ಪ್ರೇಮವನ್ನು ಒತ್ತಡದಿಂದ ಕೂಡಿಸುವ ಪ್ರಯತ್ನ ಮಾಡಬಾರದು.ಪ್ರೀತಿ ,ಅನುರಾಗ,ಸಾಂಗತ್ಯ ಎಂಬುದು ಜೀವರಾಶಿಗಳ ಸಹಜ ಪ್ರಕ್ರಿಯೆ.. ಕದಡುವ, ಅಳಿಸುವ ಕೆಲಸ ಮಹಾಪಾಪ...!!
ಈಗ ಏನಿದ್ದರೂ ನಮ್ಮ ಜವಾಬ್ದಾರಿಯನ್ನು ನಿರ್ವಹಿಸುವ ಆಲೋಚನೆ ಅಷ್ಟೇ.."ಎಂಬ ಮಗನ ಮಾತನ್ನು ಕೇಳಿ ಶ್ಯಾಮ ಶಾಸ್ತ್ರಿಗಳಿಗೆ ಸಮಾಧಾನವಾಯಿತು..

       "ಹೌದು ಭಾಸ್ಕರ...ಮೊದಲೆಲ್ಲ ನಡೆಯುತ್ತಿದ್ದ ವಿವಾಹಗಳಲ್ಲಿ ಹೆಣ್ಣು ಮಕ್ಕಳ ಅಭಿಪ್ರಾಯಕ್ಕೆ ಮನ್ನಣೆಯಿರಲಿಲ್ಲ. ಮದುವೆಯಾಗಿ ಸುಖದಿಂದ ಬದುಕಿ ಬಾಳಿದರೆ ಪುಣ್ಯ..ಇಲ್ಲವೆಂದಾದರೆ ಜೀವನವಿಡೀ ಆ ಹೆಣ್ಣಿನ ಪಾಡು,ಕಣ್ಣೀರು,ಸಂಕಟ ಅವಳಿಗಷ್ಟೇ ಗೊತ್ತು..ಅವಳ ಸಂಕಟ ನೋಡಿ ಚುಚ್ಚಿ ಆಡುವವರೆಷ್ಟೋ ಮಂದಿ.. ಆದರೆ ಕಾಲ ಬದಲಾಗಿದೆ.ಆಕೆಗೆ ಇಷ್ಟವಾದ್ದನ್ನು ಒಪ್ಪುವ ,,ಇಷ್ಟವಿಲ್ಲದ್ದನ್ನು ತಿರಸ್ಕರಿಸುವ ಹಕ್ಕು ಆಕೆಗಿದೆ..ಮೈತ್ರಿಯ ಮನದಿಷ್ಟದಂತೆ ಮದುವೆ ಮಾಡೋಣ..ಬಾರಂತಡ್ಕದ ಕೇಶವನ ಕಡೆಯವರು ಹೇಗಾದರೂ ಈ ಸಂಬಂಧ ಕೂಡಿಬರುವುದಿಲ್ಲ ಎಂದಿದ್ದಾರೆ.."

"ಹೌದಾ.. ಅಪ್ಪಾ..ಅವರ ಉತ್ತರ ಯಾವಾಗ ಬಂತು.."

"ಇವತ್ತು ಮಧ್ಯಾಹ್ನದ ನಂತರ.. ಲ್ಯಾಂಡ್ ಫೋನ್ ಸರಿಯಾಯ್ತು ನೋಡು.. ಸರಿಯಾಗಿ ಅರ್ಧಗಂಟೆಗೇ ಫೋನ್ ಬಂತು.. ಮಂಗಳಾ ದೇವಸ್ಥಾನದಿಂದ ಬಂದ ಕೂಡಲೇ ಹೇಳಿದ್ದೆ..
ಇಲ್ಲಾಂದ್ರೆ ನನಗೆ ಈಗೀಗ ಮರೆತೇ ಹೋಗುತ್ತದೆ..ಹಾಳಾದ ಮರೆವು.."

"ಹಾಗಾದ್ರೆ ಈ ಸಂಬಂಧ ಮುಂದುವರಿಯೋದಕ್ಕೆ ಅಡ್ಡಿ ಏನೂ ಉಳಿದಿಲ್ಲ ಅಂತಾಯ್ತು..."

"ಹೌದು ...ಮದುವೆ ಆಗ್ಲಿ..ಶುಭಸ್ಯ ಶೀಘ್ರಂ.."

      ಅಪ್ಪ ಅಜ್ಜ ಮಾತನಾಡುತ್ತಿದ್ದುದನ್ನು ಕೇಳಿದ ಮೈತ್ರಿಗೆ ಅಪ್ಪ ಅಜ್ಜನ ಬಗ್ಗೆ ಹೆಮ್ಮೆ ಅನಿಸಿತು.ಒಬ್ಬ ಹೆಣ್ಣುಮಗಳನ್ನು ಮದುವೆಮಾಡಿ ಕಳುಹಿಸಬೇಕಾದರೆ ಹಿರಿಯರು ಅದೆಷ್ಟು ಎಚ್ಚರವಹಿಸುತ್ತಾರೆ,ಅದೆಲ್ಲ ಮಗಳ ಸುಖಮಯ ಬದುಕಿಗಾಗಿಯೇ ಹೊರತು ಅವಳ ಆಸೆಗಳಿಗೆ ತಣ್ಣೀರೆರಚಬೇಕು ಎಂದಲ್ಲ..ಎಂಬ ಸತ್ಯವನ್ನು ಅವರಿಬ್ಬರ ಮಾತಿನಿಂದ ಅರಿತಳು ಮೈತ್ರಿ...


    ಮಂಗಳಮ್ಮ ಎಲ್ಲರನ್ನೂ ಊಟಕ್ಕೆ ಕರೆದರು..ಊಟ ಮಾಡಿ ಮಲಗುವ ಹೊತ್ತು.. ಭಾಸ್ಕರ ಶಾಸ್ತ್ರಿಗಳು ಮಂಗಳಮ್ಮ ಅಡುಗೆಮನೆ ಕೆಲಸಗಳನ್ನು ಮುಗಿಸಿಕೊಂಡು ಬರುವಾಗ ಗಾಢನಿದ್ರೆಗಿಳಿದು ಗೊರಕೆ ಹೊಡೆಯುವುದು ವಾಡಿಕೆ.. ಇಂದು ಮಾತ್ರ ಗಂಡ ಕಣ್ತೆರೆದು ಮಲಗಿ ಛಾವಣಿಯನ್ನೇ ದಿಟ್ಟಿಸುತ್ತಾ ಏನೋ ಆಲೋಚನೆಯಲ್ಲಿ ಮುಳುಗಿದ್ದರು..
ಮೆತ್ತಗೆ ಬಳಿ ಬಂದು ಬಳಸಿ.."ರೀ..."ಎಂದ ಮಂಗಳಮ್ಮ..
"ಏನಿವತ್ತು ನಿದ್ದೆಹತ್ತಲಿಲ್ಲ "ಎಂದರು ಗಂಡನ ಮುಖವನ್ನೇ ನೋಡುತ್ತಾ...

"ಮಂಗಳಾ..."ಎಂದು ಅವಳ ಕೈಗಳನ್ನು ಮೆದುವಾಗಿ ಸವರಿದರು..

"ಮಂಗಳಾ...ಜೋಯಿಸರು ಬಹಳಷ್ಟು ವಿಷಯಗಳನ್ನು ಹೇಳಿದರು.. ಯೋಚಿಸಿ ನೋಡಿದಾಗ ಅವರಂದದ್ದೆಲ್ಲ ನಿಜವೆನಿಸುತ್ತದೆ..."

"ಏನು ಹೇಳಿದ್ರು..ಅಂತಹ ಗಹನವಾದ ವಿಚಾರ..?"

"ಇದು ನಿನ್ನಲ್ಲೇ ಇರಲಿ..ಹೊರಗೆ ಹೋಗಕೂಡದು.."

"ಸರಿ..ರೀ..."

"ಮಗಳಿಗೆ ನಾಲ್ಕು ವರ್ಷದ ಹಿಂದೆಯೇ ಲವ್ ಮಾಡಿ ಓಡಿಹೋಗುವ ಯೋಗ ,ಗ್ರಹಗತಿ ಇತ್ತಂತೆ.."

"ಹೌದಾ..ಓಡಿಹೋಗಿಲ್ಲ..ಇಂದಿನವರೆಗೂ.. ಆಗಾಗ ಬಸ್ ಮಿಸ್ ಆಗುತ್ತೆ ಅಂತ ಓಡುತ್ತಿದ್ದ ನೆನಪು.."

"ಹ್ಹ ಹ್ಹ ಹ್ಹಾ..ಹಾಗಲ್ವೇ..
ಹುಡುಗನನ್ನು ಪ್ರೀತಿಸಿ ಓಡಿ ಹೋಗುವ ಸಾಧ್ಯತೆ ಇತ್ತಂತೆ..ಆದರೆ ಜಾತಕದಲ್ಲಿ ಆ ರೀತಿ ಇದ್ದರೂ ಮನೆಯಲ್ಲಿ ಸಂಸ್ಕಾರ, ರೀತಿ ರಿವಾಜುಗಳು, ಸಂಪ್ರದಾಯಗಳೂ ಪಾಲನೆಯಾಗುತ್ತಿದ್ದರೆ ಅದು ಮಕ್ಕಳ ಮನಸ್ಸು ಕೆಟ್ಟದ್ದನ್ನು ಮಾಡದಂತೆ ತಡೆಯುತ್ತದಂತೆ..ದೇವರ ದಯೆ..ಮಗಳು ಓಡಿ ಹೋಗಿದ್ದಾಳೆ ಎಂಬ ಕಳಂಕ ನಾವು ಹೊರುವಂತೆ ಆಗಲಿಲ್ಲ.."

"ಏನೋ ನಂಗೊತ್ತಿಲ್ಲ..ನನಗೆ ಮಗಳ ಮೇಲೆ ಹಿಂದೆಯೂ ನಂಬಿಕೆಯಿತ್ತು.ಈಗಲೂ ಇದೆ.. ಮುಂದೆಯೂ.."

"ನೀನಿಟ್ಟ ನಂಬಿಕೆಯನ್ನು ಇದುವರೆಗೆ ಹುಸಿಮಾಡಿಲ್ಲ ಅವಳು ‌.ಮುಂದೆಯೂ ಮಾಡದಿದ್ದರೆ ಸಾಕು..."

"ರೀ.. ಕಿಶನ್ ಜಾತಕ ಹೇಗಿದೆ ಅಂತೇನಾದ್ರೂ ಹೇಳಿದ್ರಾ..."

"ಹೂಂ.. ಒಳ್ಳೆಯ ಗ್ರಹಗತಿಗಳು ಇವೆಯಂತೆ..ಸಧ್ಯದಲ್ಲೇ ಪ್ರಮೋಷನ್ ಆಗುವ ಸಾಧ್ಯತೆ ಇವೆಯಂತೆ.ಹುಡುಗ ಸಾಧು ಸ್ವಭಾವದವನಂತೆ.."

"ಹೌದಾ.. ಅದು ನಾನೂ ಅಂದುಕೊಂಡಿದ್ದೆ.. ಮೊನ್ನೆ ಬಂದಾಗ.. ಅಬ್ಬಾ..ಸಾಧು ಸ್ವಭಾವದ ಅಳಿಯ ಆದ್ರೆ ಸಾಕಪ್ಪಾ.. ಈ ಉಗ್ರನರಸಿಂಹನಂತಹ ಪತಿಯನ್ನು ಕಟ್ಟಿಕೊಂಡು ನನಗೆ ಸಾಕುಬೇಕಾಯ್ತು.."

"ಅರೇ...ಅರೇ..ಈಗ್ಲೇ ಅಳಿಯನನ್ನು ಹೊಗಳಿ ಅಟ್ಟಕ್ಕೇರಿಸಿ ನನ್ನನ್ನು ಕಡೆಗಣಿಸ್ತೀಯಲ್ಲೇ.. ಇನ್ನು ಅಳಿಯ ಬಂದ ಮೇಲೆ ನನ್ನ ಗತಿ ಗೋವಿಂದ...!!"

"ಗೋವಿಂದ ಆಗೋದಕ್ಕೆ ನೀವು ಬಿಡ್ತೀರಾ..ಗದರಿ,ದನಿಯೇರಿಸಿ ನಿಮಗೆ ಬೇಕಾದಂತೆ ಎಲ್ಲರನ್ನೂ ನಡೆಸಿಕೊಳ್ತೀರಾ..ನಾವು ಬಲಿಪಶುಗಳು.."

"ಅದಕ್ಕೆ ಮನೆಯಲ್ಲಿ ಸ್ವಲ್ಪವಾದರೂ ಸಂಸ್ಕಾರ ಉಳಿದಿದೆ..ಸಂಸ್ಕಾರ ಉಳಿದಿರುವುದಕ್ಕೆ ಮಗಳು ಉಳಿದಳು.. ಇಲ್ಲಾಂದ್ರೆ ಇದಕ್ಕೆ ಮೊದಲೇ ಪರಾರಿ ಆಗ್ತಿದ್ದಳು..."

"ಆಹಾ..ಹೊಗಳಿಕೊಳ್ಳೋದು ಏನೂ ಬೇಡ..ತಾನೊಬ್ಬನೇ ಸಂಸ್ಕಾರವಂತ..ಸಂಸ್ಕಾರ ಉಳಿಸಿದವನು ಅಂತ.."

"ಇಲ್ಲಾ..ಕಣೇ.. ನೀನೇ ಸಂಪ್ರದಾಯ ಉಳಿಸಿದವಳು.. ಮಕ್ಕಳನ್ನು ತಿದ್ದಿ ,ಬುದ್ಧಿ ಹೇಳಿ ಸರಿ ದಾರಿಯಲ್ಲಿ ನಡೆಸಿದವಳು.. ಸರೀನಾ.." ಎಂದು ಕೇಳುತ್ತಾ ಅವಳನ್ನು  ತನ್ನ ಎದೆಗಾನಿಸಿದ..ಹುಣ್ಣಿಮೆಯ ಚಂದಿರನ ಬೆಳಕು ರೂಮಿನ ತುಂಬಾ ಹರಡಿತು..

                *****

ಕಿಶನ್ ರಾತ್ರಿ ಮೈತ್ರಿಗೆ ಸಂದೇಶ ರವಾನಿಸಿದ್ದ..

ನಿನ್ನ ನನ್ನ ಬಂಧನಕೆ
ಇನ್ನು ಕ್ಷಣಗಣನೆ
ನನಗೆ ನೀನು ಜೊತೆಯಾಗೆ
ನಾಚುವನು ಬೆಳ್ಳಿಚಂದಿರನೇ..

ನಯನಗಳ ನೋಟದಲ್ಲಿ
ಹೃದಯದ ತಂತಿ ಮೀಟಿ
ಪ್ರೇಮಭಾಷ್ಯವ ಬರೆದೆಯಿಲ್ಲಿ
ಸೇರಿಸಿ ಅಕ್ಷರ ಕೋಟಿ ಕೋಟಿ..

      ಅವನ ಸಂದೇಶಗಳೇ ಹಾಗೇ..ಅವಳಿಗೆ ಮತ್ತೆ ಮತ್ತೆ ಓದಬೇಕೆನಿಸುವಂತಹದ್ದು..ಮತ್ತೇರಿಸಿಬಿಡುತ್ತಿದ್ದವು.ತಡೆಯದ ಮೈತ್ರಿ ಕರೆಮಾಡಿದಳು..ಸರಿ ಸಿಗ್ನಲ್ ಸಿಗುತ್ತಿಲ್ಲ..ಮಾತನಾಡಲೇ ಬೇಕೆಂದು ಹಠ ಹಿಡಿದಿದೆ ಮನಸು.. ಎಲ್ಲರೂ ಮಲಗಿದ್ದಾರೆ.. ಸ್ವಲ್ಪ ಮೊಬೈಲ್ ಹೊರಗೆ ತೆಗೆದುಕೊಂಡು ಹೋಗಿ ಮಾತನಾಡಿ ಬರುವೆ ಎಂದು ಹೊರಟಳು..

"ಹಾಯ್.."

"ಏನೇ ಮುದ್ಗೊಂಬೆ ಇಷ್ಟೊತ್ತಲ್ಲಿ ಕರೆ..ಮನೇಲಿ ಯಾರೂ ಇಲ್ವಾ.."

"ಎಲ್ಲಾ ಮಲಗಿದ್ದಾರೆ..
ಹೋ..ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ...ಅಲ್ವಾ..ಬುದ್ಧನಿಗೂ ಹೀಗೇ ಜ್ಞಾನೋದಯ ಆದ್ದಂತೆ.."

"ಸಾಕು ತಮಾಷೆ... ನಾನು ಸನ್ಯಾಸಿ ಅಲ್ಲ..."

"ಹೇಳಮ್ಮಾ...ಜಾತಕ ತೋರಿಸಿ ಬಂದ್ರಾ.. ರಿಸಲ್ಟ್ ಏನಾಯ್ತು..ಈ ಮಾಣಿ ಪಾಸಾ...ಫೈಲಾ..."

"ನೀನು ಫೇಲಾಗುವ ಛಾನ್ಸೇ ಇಲ್ಲ ಬಿಡು.. ನಿಂಗೆ ಫುಲ್ ಮಾರ್ಕೇ ಸಿಗೋದು.."

"ಅದೆಲ್ಲ ಪುಸ್ತಕದ ಬದನೆಕಾಯಿ ಪರೀಕ್ಷೆಯಲ್ಲಿ..ಪ್ರೇಮಪರೀಕ್ಷೆಯಲ್ಲಿ...??"

"ಇಲ್ಲೂ ಫುಲ್.. ಔಟ್ ಆಫ್ ಔಟ್.."

"ಹೌದಾ.."

"ಹೂಂ..ನಮ್ಮಪ್ಪ ಒಪ್ಪಿಕೊಂಡ ಹಾಗಿದೆ..ಜೋಯಿಸರೂ ಅಪ್ಪನಿಗೆ ಚೆನ್ನಾಗಿ ಬುದ್ಧಿ ಹೇಳಿ ಕಳಿಸಿದ್ದಾರೆ..."

"ಹಾಗಿದ್ರೆ ಅದೇ ಖುಷಿಯಲ್ಲಿ ನಂಗೆ..."

"ನಿಂಗೇನು..."

"ಅದೂ ನಾನೇ ಕೇಳ್ಬೇಕಾ..."

"ತಗೋ...❤️❤️.. ಇನ್ನು ಆಗಾಗ ಕೇಳ್ತಿರಬೇಡ.."

"ಆಯ್ತು ಮೇಡಂ.. ಹೌದು ತಾವೇನು ಇಷ್ಟೊತ್ತು ನಿದ್ದೆ ಮಾಡಿಲ್ಲ.."

"ನಿದ್ದೆ ಬಂದಿಲ್ಲ ನಂಗೆ ನಿದ್ದೆಬಂದಿಲ್ಲ
ಮದುವೆ ಹತ್ರ ಬಂತು ಅಂತ ನಿದ್ದೆ ಬಂದಿಲ್ಲ"

"ನೀನೊಬ್ಳು ...ಅಲ್ಲಾ ಅಪ್ಪ ಮದುವೆಗೆ ಒಪ್ಪದಿದ್ರೂ ನಿದ್ದೆಬರಲ್ಲ ಅಂತೀ..ಅಪ್ಪ ಒಪ್ಪಿದ ಮೇಲೂ ನಿದ್ದೆಬಂದಿಲ್ಲ ಅಂತೀ..ಹೋಗು  ಗಡದ್ದಾಗಿ ನಿದ್ದೆ ಹೊಡಿ..ನಾಳೆ ಮಾತಡೋಣ .. ಬಾಯ್..💞"


ಮೈತ್ರಿ ಮೆಲ್ಲನೆ ಒಳಗೆ ಬಂದಳು..ಅಪ್ಪ ಎದ್ದು ನೀರು ಕುಡಿಯಲು ಒಳಗೆ ಹೋಗಿದ್ದವರು ಹೊರಗೆ ಬರುತ್ತಿದ್ದರು.ಈಗ ಅಪ್ಪನ ಕೈಗೆ ಸಿಕ್ಕಿ ಬೀಳುತ್ತೇನೆ ಎಂಬ ಭಯವಾಯಿತು. ಚಾವಡಿಯ ಬಾಗಿಲ ಸಂದಿನಲ್ಲಿ ಅಡಗಿನಿಂತಳು..ಅಪ್ಪ ರೂಮಿಗೆ ತೆರಳಿದ ನಂತರ ತಾನು ಮೆಲ್ಲನೆ ರೂಮು ಸೇರಿದಳು.. ಅಬ್ಬಾ ಬಚಾವ್ ಅಪ್ಪನಿಗೆ ಗೊತ್ತಾಗಲಿಲ್ಲ... ಎಂದು ನಿಟ್ಟುಸಿರು ಬಿಟ್ಟಳು..


ಮರುದಿನ ಬೆಳಿಗ್ಗೆ ಭಾಸ್ಕರ ಶಾಸ್ತ್ರಿಗಳು ತಂದೆಯಲ್ಲಿ .."ಅಪ್ಪ ನಾವು ನಾಳೆ ಬೆಳಿಗ್ಗೆ ಕಿಶನ್ ನ ತಂದೆಗೆ ವಿಷಯ ತಿಳಿಸಿ ಮುಂದಿನದನ್ನು ಚರ್ಚಿಸೋಣ ಆಗದೇ..?"
"ಆಗಬಹುದು.. ನೀನು ಒಂದು ಮಾತು ಇವತ್ತೇ ಶಂಕರನಿಗೂ ಹೇಳಿ ಬಿಡು..."

"ಆಯ್ತು..ಹಾಗೇ ಮಾಡುವೆ..."


                     *****

          ಕಿಶನ್ ನ ಮನೆಯಲ್ಲಿ ಮಗನಿಗೆ ಮದುವೆ ಏಳುವ ಸಾಧ್ಯತೆ ಇದೆ ಎಂದು ಒಂದೊಂದೇ ತಯಾರಿ ಆಗಲೇ ಆರಂಭಿಸಿದ್ದರು..ತುಕ್ರಪ್ಪನನ್ನು ಬರಲು ಹೇಳಿ ಅಂಗಳವನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೆತ್ತಿಕೊಂಡರು.ಮನೆಗೆ ಬರುವ ಮಣ್ಣ ಮಾರ್ಗದ ಹೊಂಡಗುಂಡಿಗಳನ್ನು ಮುಚ್ಚಿ ಸ್ವಲ್ಪ ಅಗಲಮಾಡಿ ಸುತ್ತಲಿನ ಮರದ ಗೆಲ್ಲುಗಳನ್ನು ಸವರುವ ಕೆಲಸ ಸಾಗುತ್ತಿತ್ತು..ಮಗಳಂದಿರಿಗೂ ತಮ್ಮನ ಮದುವೆಯಲ್ಲಿ ಓಡಾಡುವ ಕನಸು ಬಲವಾಗಿತ್ತು..

                     *****

     ಬ್ರೋಕರ್ ಶೇಷಣ್ಣ ಕೇಶವ್ ನಿಗೆ ಸರಿಹೊಂದುವ ಹುಡುಗಿಯನ್ನು ಹುಡುಕುತ್ತಿದ್ದ.. 'ಆಹಾ..!!ಹೊಳೆಯಿತೀಗ..ಅದೇ ಹುಡುಗಿಯನ್ನು ಮಾತನಾಡಿಸಬೇಕು...ನಾಳೆಯೇ ತೆರಳುವೆ ಬೆಂಗಳೂರಿಗೆ.. ' ಎಂದು ತನ್ನಲ್ಲೇ ಲೆಕ್ಕಾಚಾರ ಹಾಕಿ ಆನಂದಿಸುತ್ತಿದ್ದಾಗ ಸುಬ್ಬಮ್ಮ "ರೀ.. ಯಾಕೆ ಭಾರೀ ನಗ್ತಿದ್ದೀರಿ.. ಏನು ಅಂತಹಾ ಸಂತಸದ ಸುದ್ದಿ.."

"ಅದೂ..ಬಂಗಾರಣ್ಣನ ಮಗನಿಗೆ ನಿನ್ನ ಅಕ್ಕನ ಸಂಬಂಧದ ಹುಡುಗಿ ಬೆಂಗಳೂರಲ್ಲಿ ಇರುವ ಸೌಜನ್ಯಳನ್ನು ಮಾತನಾಡಿಸಿದರೆ ಹೇಗೆ ಅಂತ.."

"ರೀ..ಅವಳಾ..ಇಷ್ಟೊಳ್ಳೆ ಕೂಟಕ್ಕೆ.."

"ಒಳ್ಳೇದೇನು ಬಂತು ಸುಬ್ಬೀ.. ಹೊಗಳಿಕೆ ಬರೀ ಬಂಗಾರಣ್ಣನ ಬಾಯಲ್ಲಿ...ಅವನೋ ರೌಡಿ ರಂಗನ ತರಹ ಇದ್ದಾನೆ.."

"ಆಯ್ತು.. ನೀವು ಹುಡುಗನನ್ನು ನೋಡಿದವರು..ಸರಿಹೊಂದುವವಳನ್ನು ಮಾತಾಡಿಸಿ..ಸೌಜನ್ಯನೋ...ಸೌಮ್ಯನೋ..ಯಾರೋ ಒಬ್ಳು.. ಒಟ್ಟಿನಲ್ಲಿ ಎರಡು ಕಡೆಯಿಂದಲೂ ಕಮಿಷನ್ ಪಡೆಯುವಂತಿದ್ದರೆ ಸಾಕು...!!"

"ಹಾಗೇ ಮಾಡ್ತಿನಿ..ಸುಬ್ಬಿ..."


ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
09-03-2020.





No comments:

Post a Comment