ಜೀವನ ಮೈತ್ರಿ-ಭಾಗ ೪೬
ಜೋಯಿಸರ ಒಪ್ಪಿಗೆ ಸಿಕ್ಕಿದ್ದೇ ತಡ ಬಂಗಾರಣ್ಣ ಶೇಷಣ್ಣನಿಗೆ ಕರೆಮಾಡಿ ತಿಳಿಸಿದರು."ಈ ಆದಿತ್ಯವಾರವೇ ಹುಡುಗಿ ನೋಡಲು ಬರಲು ನಾವು ತಯಾರಿದ್ದೇವೆ" ಎಂದು ಹೇಳಿದ್ದರು.ಶೇಷಣ್ಣ ಬೆಂಗಳೂರಿಗೆ ಕರೆಮಾಡಿ ಸೌಜನ್ಯಳ ಹೆತ್ತವರೊಂದಿಗೆ ಮಾತನಾಡಿದ ನಂತರ ಬಂಗಾರಣ್ಣನಿಗೆ
"ಈ ಭಾನುವಾರ ನೀವು ಹುಡುಗಿ ನೋಡಲು ಹೋಗುವುದು ಬೇಡ....ಅವರೇ ಈ ಊರಿಗೆ ಪೂಜಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬರುತ್ತಿದ್ದಾರೆ."
"ಹಾಗಾದರೆ ಮುಂದಿನ ವಾರದವರೆಗೆ ಕಾಯಬೇಕಷ್ಟೇ.. ಅಲ್ವಾ"
"ಬಂಗಾರಣ್ಣ.... ನಿಮಗೇನೂ ಅಭ್ಯಂತರವಿಲ್ಲದಿದ್ದರೆ ಹುಡುಗಿಯ ಅಜ್ಜಿ ಮನೆ ಇಲ್ಲೇ ಸಮೀಪ..ಭಾನುವಾರ ನರಸಿಂಹ ರಾಯರ ಕುಟುಂಬ ಅಲ್ಲಿಗೆ ಭೇಟಿಕೊಡುತ್ತದೆ.ಆಗ ಕೂಸುನೋಡಲು ಬರಬಹುದು.. ಎಂದು ನರಸಿಂಹ ರಾಯರ ಕೇಳಿಕೊಂಡಿದ್ದಾರೆ"
"ಅದೂ...ಅದೂ..."
"ನಿಮಗೆ ಇಷ್ಟವಿಲ್ಲದಿದ್ದರೆ ಬೇಡ ಬಿಡಿ... ಬೇಕಾದರೆ ಅವರು ನಿಮ್ಮನೆಗೇ ಬಂದು ಕನ್ಯೆ ತೋರಿಸಲು ತಯಾರಿದ್ದಾರಂತೆ.. "
"ಅದು ಆಗಬಹುದು ಶೇಷಣ್ಣ... ಭಾನುವಾರ ನರಸಿಂಹ ರಾಯರ ಕುಟುಂಬ ನಮ್ಮನೆಗೇ ಬರಲಿ..."
"ಹಾಗೇ ಆಗಲಿ..ಬಂಗಾರಣ್ಣ.. ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಅವರನ್ನು ಕರೆದುಕೊಂಡು ಬರುತ್ತೇನೆ."
"ಆಗಬಹುದು..ಶೇಷಣ್ಣ..ನಿಮ್ಮ ಉಪಕಾರವನ್ನು ಎಂದೆಂದಿಗೂ ಮರೆಯಲಾರೆ.."
"ಅಷ್ಟೆಲ್ಲಾ ದೊಡ್ಡ ಮಾತು ಬೇಡ ಬಂಗಾರಣ್ಣ.. ಇದು ನೀವೇನೂ ಅಂದುಕೊಳ್ಳುವುದಿಲ್ಲ ಅಂದರೆ ಒಂದು ಮಾತು..."
"ಅದೇನು ಹೇಳಿ...ಶೇಷಣ್ಣ ಸಂಕೋಚವೇತಕೆ..?"
"ಸೌಜನ್ಯ ಓದಿದ ಹುಡುಗಿ ಪಟ್ಟಣದಲ್ಲಿ ಬೆಳೆದವಳು.ಬಹಳ ನಯನಾಜೂಕಿನ ರೂಪವತಿ.. ಹಾಗಾಗಿ ಕೇಶವ್ ಕೂಡಾ ಸ್ವಲ್ಪ ಅವಳಿಗೆ ತಕ್ಕಂತೆ ನಡತೆಯಲ್ಲಿ ನಯವಿನಯ ತೋರಿಸಿದರೆ ಒಳ್ಳೇದು"
"ಆಗ್ಲಿ..ಶೇಷಣ್ಣ..ನಿಮ್ಮ ಕಳಕಳಿ ನನಗೆ ಅರ್ಥವಾಗುತ್ತದೆ.ಮೊನ್ನೆ ನೀವು ಬಂದಾಗ ಎಲ್ಲೋ ಹೋಗಿ ಬಂದಿದ್ದ.. ಹಾಗಾಗಿ ಸ್ವಲ್ಪ ಒರಟಾಗಿ ಕಂಡದ್ದಷ್ಟೇ ... ನಿಜವಾಗಿಯೂ ಒರಟನಲ್ಲ..ಒಳ್ಳೆ ಹುಡುಗ..ಚೂರೂ ದುರ್ಬುದ್ಧಿ, ಕೆಟ್ಟ ಚಾಳಿ ಇಲ್ಲ..ಈ ಬಂಗಾರಣ್ಣನ ಮಗ ಬಂಗಾರದಂತಹ ಹುಡುಗ..."
"ಅದು ಗೊತ್ತಿಲ್ವೇ ನಂಗೂ... ಹಾಗಾಗಿಯೇ ನಿಮ್ಮ ಮಗನಿಗೆ ಒಂದೊಳ್ಳೆ ಸಂಬಂಧ ಮಾಡಲು ಹೊರಟಿದ್ದು..."
"ಹ್ಹ ಹ್ಹ ಹ್ಹ ಹ್ಹಾ... ಹಾಗಾದರೆ ಇನ್ನು ಭಾನುವಾರ ನಮ್ಮ ಮಾತುಕತೆ...."ದೇಶಾವರಿ ನಗೆಬೀರಿ ಫೋನಿಟ್ಟ ಬಂಗಾರಣ್ಣ..
*****
ಶಾಸ್ತ್ರೀ ನಿವಾಸದಲ್ಲಿ ಶರ್ಮ ಕುಟುಂಬ ಬಂದು ಹೋದ ನಂತರ ಅವರ ಬಗ್ಗೆ ಚರ್ಚೆ ಮಾತುಕತೆಗಳು ನಡೆಯುತ್ತಿದ್ದವು.ಎಲ್ಲರಿಗೂ ಊಟಕ್ಕೆ ತಯಾರಿ ಮಾಡಿದ ಅಡಿಗೆ ಕಿಟ್ಟಣ್ಣ.. ಪದಾರ್ಥಗಳನ್ನು ಮುಚ್ಚಿಟ್ಟು ಸ್ನಾನ ಮಾಡಿ ಬಂದ ಕಿಟ್ಟಣ್ಣ ಭಾಸ್ಕರ ಶಾಸ್ತ್ರಿಗಳನ್ನು ಕರೆದು "ನೋಡಿ ಶಾಸ್ತ್ರಿಗಳೇ ...ಈ ಶರ್ಮರು ಭಾರೀ ಒಳ್ಳೆ ಮನುಷ್ಯ.. ನಾನು ಎರಡು ವರ್ಷಗಳ ಹಿಂದೆ ಇವರ ಮನೆಗೆ ಅಡುಗೆಗೆ ಹೋಗಿದ್ದೆ.. ಮತ್ತೆ ಇವರ ಹಿರಿಯಮೂಲ ಮನೆಗೆ ನಮ್ಮ ಅಡುಗೆಕೂಟದ ಶಂಭಣ್ಣನೇ ಅಡುಗೆಗೆ.ಅವನಜೊತೆಗೆ ನಾನೂ ಹೋಗಿ ಇವರನ್ನೆಲ್ಲ ಕಂಡು ಮಾತನಾಡಿ ನಂಗೆ ಮೊದಲಿಂದಲೇ ಪರಿಚಯ.ಮೊದಲಿಂದ ಅಂದರೆ ಶರ್ಮರಿಗೆ ಮದುವೆಯಾಗುವ ಮೊದಲಿಂದಲೂ ನನಗೆ ಗೊತ್ತು.."
"ಹೌದಾ "ಎಂದು ಹುಬ್ಬೇರಿಸಿದರು ಶಾಸ್ತ್ರಿಗಳು..
"ಹೌದು.. ಮೊದಲು ಭಾರೀ ಕಷ್ಟದ ಜೀವನ..ಈಗ ದುಡಿದು ತೋಟ ಚೆನ್ನಾಗಿ ವಿಸ್ತಾರ ಮಾಡಿದ್ದಾರೆ..ಸಾಕಿದ್ದಾರೆ..ತಾವೇ ಮೈಮುರಿದು ದುಡಿಯುವ ಕೃಷಿಕರು.ಸಾಧು ಸ್ವಭಾವದ ವ್ಯಕ್ತಿ.ಮಗನಿಗೆ ಉದ್ಯೋಗ ದೊರೆತ ಮೇಲೆ ಈಗ ಮನೆಯ ಆರ್ಥಿಕ ಸ್ಥಿತಿ ಇನ್ನೂ ಸುಧಾರಿಸಿದೆ.. ನಿಮ್ಮಷ್ಟಲ್ಲದಿದ್ದರೂ ಒಂದು ನಾಲ್ಕು ಎಕರೆ ಅಡಿಕೆ ತೋಟ,ತೆಂಗಿನ ಕಾಯಿ ಖರ್ಚಿಗೆ ಆಗಿ ಮಾರಲು ಸಿಗುತ್ತದೆ..ಬಾಳೆ ಹುಲುಸಾಗಿ ಬೆಳೆಯುತ್ತದೆ.. ಸ್ವಲ್ಪ ಕೊಕ್ಕೋ ಬೆಳೆದಿದ್ದಾರೆ."
"ಹೌದಾ.. ಅಡ್ಡಿಯಿಲ್ಲ ಅಂತೀರಿ ಹಾಗಾದರೆ"
"ಹೌದಣ್ಣಾ.. ಆದರೆ ಮಾಣಿಯನ್ನು ನನಗೆ ಗೊತ್ತಿಲ್ಲ.."
"ಮಾಣಿಯ ಬಗ್ಗೆ ಮೈತ್ರಿಗೇ ಚೆನ್ನಾಗಿ ಗೊತ್ತಲ್ಲ"..ಎಂದಳು ಸಾವಿತ್ರಿ..
. ಭಾಸ್ಕರ ಶಾಸ್ತ್ರಿಗಳಿಗೆ ಇದು ಸ್ವಲ್ಪವೂ ಇಷ್ಟವಾಗಲಿಲ್ಲ.ತಂಗಿಯನ್ನು ನೋಡಿ ಮುಖ ಸಿಂಡರಿಸಿದರು.
"ಅಯ್ಯೋ..ಅಣ್ಣಾ..ಅದು ನನಗೇನೂ ಗೊತ್ತಿಲ್ಲ..ಶಶಿಯಕ್ಕ ಹೇಳಿದ್ರು.."
ಭಾಸ್ಕರ ಶಾಸ್ತ್ರಿಗಳ ಸಿಟ್ಟು ನೆತ್ತಿಗೇರಿತು..
"ಸಾವಿತ್ರಿ ನಿಂಗೆ ಯಾರ ಮುಂದೆ ಹೇಗೆ ಮಾತನಾಡಬೇಕೆಂದು ಗೊತ್ತಿಲ್ವಾ..? ಬಾಯಿ ಮುಚ್ಚಿಕೊಂಡು ನಡಿ ಒಳಗೆ"ಎಂದು ದನಿಯೇರಿಸಿದರು.
ನಾನು ಹೇಳಿದ್ದೇ ಸುಮ್ಮನೆ ಎಂದು ಮುಖ ಬಾಡಿಸಿಕೊಂಡು ಒಳನಡೆದಳು ಸಾವಿತ್ರಿ.. ಮನೆಯಲ್ಲಿ ಗಂಡನ ಬೈಗುಳ ಕೇಳಿ ಕೇಳಿ ತಲೆಚಿಟ್ಟು ಹಿಡಿದ ಸಾವಿತ್ರಿಗೆ ಈಗ ತನ್ನ ಬುದ್ಧಿಮತ್ತೆಯೇ ಕ್ಷೀಣಿಸಿದೆಯೇ ಎಂಬ ಸಣ್ಣ ಆತಂಕ ಕಾಡುತ್ತಿದ್ದುದು ಈಗ ನಿಜವೆಂದೆನಿಸಿತು.ಛೇ .. ಹಾಗೇ ಇತರರ ಮುಂದೆ ನಾನು ಮೈತ್ರಿಯನ್ನು ಆಡಬಾರದಿತ್ತು.. ಎಂದು ಪಶ್ಚಾತಾಪ ಪಟ್ಟುಕೊಂಡಳು.
ಮಧ್ಯಾಹ್ನ ಎಲ್ಲರೂ ಪಂಕ್ತಿಯಲ್ಲಿ ಕುಳಿತು ಭೋಜನವ ಸವಿದರು.ಊಟದ ನಂತರ ಶಂಕರ ಶಾಸ್ತ್ರಿಗಳು ಅತ್ತಿಗೆಯಲ್ಲಿ ಕಿಶನ್ ಬಗ್ಗೆ ತಾನು ಸಂಗ್ರಹಿಸಿದ ಮಾಹಿತಿಯನ್ನು ಅರುಹಿದರು.ಇದರಿಂದ ಮಂಗಳಮ್ಮನ ಮನಸ್ಸು ಶಾಂತವಾಯಿತು.ಹೊರಡುವಾಗ ಗಾಯತ್ರಿ ಮತ್ತು ಮಕ್ಕಳಿಗೆಂದು ಕ್ಷೀರ ಜಾಸ್ತಿಯೇ ಪ್ಯಾಕ್ ಮಾಡಿದಳು.ಮಹಾಲಕ್ಷ್ಮಿ ಅಮ್ಮನೂ ಮಗನಿಗೆ ಅದು ಇದು ತುಂಬಿಸಿ ಕಟ್ಟಿದರು.ಸಾವಿತ್ರಿ ಉಂಡ ಕೂಡಲೇ ಹೊರಟಿದ್ದಳು ..ಗಂಡನಿಗೆ ಬೇಗ ಬರುತ್ತೇನೆಂದು ಹೇಳಿದ್ದೇನೆಂದು ಒಂದೂವರೆಯ ಶಂಕರ ವಿಠ್ಠಲ ಬಸ್ ಹಿಡಿದು ಮನೆಗೆ ತೆರಳಿದಳು.
******
ಸೌಜನ್ಯ ಕೇಶವನೊಂದಿಗೆ ಚಾಟ್ ಮಾಡಲು ಕುಳಿತಳು.ಭಾನುವಾರ ಕಾರ್ಯಕ್ರಮಕ್ಕೆ ತಾನು ಧರಿಸುವ ಉಡುಪನ್ನು ಕೇಶವ್ ಗೆ ತೋರಿಸಿದಳು
"ವಾವ್ ಲವ್ಲೀ.. ಆದರೆ ಅದನ್ನು ಧರಿಸಿದ ನಿಮ್ಮ ನ್ನು ನೋಡಬೇಕೆಂಬ ತವಕ"
"ಅಯ್ಯಾ..ಅದಕ್ಕೇನಂತೆ..ಇರಿ ಎರಡು ನಿಮಿಷ.."
ಎಂದವಳೇ ಅದೇ ಬಟ್ಟೆ ಧರಿಸಿ ಫೊಟೋ ಹೊಡೆದು ಕಳುಹಿಸಿದಳು.ಕೇಶವ್ ಆಕೆಯ ಸೌಂದರ್ಯ ರಾಶಿಗೆ ಕರಗಿಹೋದ..
"ಏನು ರಿಪ್ಲೈ ಬರ್ತಾ ಇಲ್ಲ.."
"ಹೂಂ.. ಸೂಪರ್..ಪ್ರಿಟೀ ಗರ್ಲ್.."
ಸೌಜನ್ಯ ಖುಷಿಯಿಂದ ಡ್ಯಾನ್ಸ್ ಮಾಡುವ ಇಮೋಜಿ ಕಳುಹಿಸಿದಳು.
"ಈ ಭಾನುವಾರ ನೀವು ನಮ್ಮನೆಗೆ ಬರ್ತಾ ಇದೀರಿ.."
"ವಾಟ್.. ವಾಟ್ ಅ ಸರ್ಪ್ರೈಸ್... ನೀವು ಜೋಕ್ ಮಾಡ್ತಿಲ್ಲ ತಾನೇ..
"ರಿಯಲೀ..ಈಗ ನಮ್ಮಪ್ಪ ಮತ್ತು ಬ್ರೋಕರ್ ಮಾತನಾಡಿದ್ದು."
"ಯಾಮ್ ಜಸ್ಟ್ ವೈಟಿಂಗ್ ಟು ಮೀಟ್ ಯು.."
"ನಾನೂ ಅಷ್ಟೇ ಕಾಯ್ತಾ ಇದೀನಿ.."
ಕೇಶವನ ಮಾತುಗಳಿಂದ ಮತ್ತೇರಿಸಿಕೊಂಡ ಸೌಜನ್ಯ ತನ್ನ ರೊಮ್ಯಾಂಟಿಕ್ ಫೊಟೋಗಳನ್ನು ಕಳುಹಿಸಿದಳು.ಕೇಶವ್ ಕೂಡಾ ಒಂದನ್ನೂ ಬಿಡದೆ ನೋಡಿ ಹೊಗಳುತ್ತಲೇ ಇದ್ದ.. ಇಬ್ಬರಲ್ಲೂ ಭಾನುವಾರಕ್ಕೆ ಕ್ಷಣಗಣನೆ ಆರಂಭವಾಗಿತ್ತು..
*****
ಕಿಶನ್ ನ ಕಡೆಯವರೆಲ್ಲ ಅವನ ಆಯ್ಕೆಯನ್ನು ಮೆಚ್ಚಿಕೊಂಡಿದ್ದರು..ಭಾವಂದಿರು "ಭಾವ ನಿಮಗೆ ಒಳ್ಳೇ ಟೇಸ್ಟ್ ಇದೆ.."ಎಂದು ಕಾಲೆಳೆದರು.
"ಹಾಗೆಲ್ಲ ಅನ್ನಬೇಡಿ ನನ್ನನ್ನು.. ಪ್ರೀತಿ ಸೌಂದರ್ಯವನ್ನು ನೋಡಿಯೇ ಹುಟ್ಟುವುದಲ್ಲ.ಪ್ರೀತಿಯನ್ನು ಹೃದಯದ ಬಡಿತವೇ ಮೊದಲು ಸಾರುವುದು...ಅದು ಬರೀ ಬಾಹ್ಯ ಆಕರ್ಷಣೆಯಲ್ಲ..ಆಂತರಿಕವಾದ ಆರಾಧನೆ..ಇನ್ನೊಬ್ಬರಿಗಾಗಿ ತುಡಿತ.. ಅದನ್ನು ಟೇಸ್ಟ್ ಅಂದರೆ ತಪ್ಪಾಗುತ್ತದೆ..ಆ ಪ್ರೀತಿಗೆ ಬೆಲೆಯಿಲ್ಲದಂತಾಗುತ್ತದೆ"ಎಂದು ಗಂಭೀರವಾಗಿ ಹೇಳುತ್ತಿದ್ದರೆ ಎಲ್ಲರೂ ಮೌನವಾಗಿ ಕೇಳುತ್ತಿದ್ದರು.
ಮಮತಾ ಮತ್ತು ಮಗಳಂದಿರು ಶಾಸ್ತ್ರಿಗಳ ಮಗಳ ಬಗ್ಗೆ ಚರ್ಚಿಸಿದರು."ಅಮ್ಮಾ... ಭಾನುವಾರ ನಮ್ಮನೆಗೆ ಬರುವಾಗ ಮನೆ ಅಚ್ಚುಕಟ್ಟಾಗಿ ಇಟ್ಟುಕೋ.. ಸಹಾಯಕ್ಕೆ ಬೇಕಾದರೆ ನಾನೂ ಬರುವೆ "ಎಂದಳು ಮೇದಿನಿ..
"ಹೌದಮ್ಮಾ..ಅವರ ಮನೆ ಎಷ್ಟು ವಿಶಾಲವಾಗಿ ಅಚ್ಚುಕಟ್ಟಾಗಿ ಇದೆ.ಅವರಷ್ಟಲ್ಲದಿದ್ದರೂ ಇದ್ದುದನ್ನು ಸುಂದರವಾಗಿ ಕಾಣುವಂತೆ ಮಾಡೋಣ.. ಬೇಕಾದರೆ ನಾನೂ ಇಲ್ಲೇ ನಿಲ್ಲುವೆ" ಎಂದಳು ಚಾಂದಿನಿ..
"ಚಾಂದೂ.. ನೀನು ನನ್ನ ಬಿಟ್ಟು ಇಲ್ಲೇ..ಉಳೀತೀಯಾ.." ಎಂದು ಮುಖ ಸಣ್ಣಗೆ ಮಾಡಿದ ಅವಳ ಪತಿರಾಯ..
ಅಳಿಯನ ಫಜೀತಿಯನ್ನು ಕಂಡ ಮಮತಾ..
"ಚಾಂದಿನಿ.. ಮನೆಯನ್ನು ಒಪ್ಪ ಓರಣವಾಗಿ ನಾನು ಇರಿಸುತ್ತೇನೆ.. ನೀನು ಗಂಡನ ಜೊತೆ ಮನೆಗೆ ಹೋಗಮ್ಮಾ "ಎಂದಾಗ ಅಳಿಯನ ಮುಖವೂ ಅರಳಿತ್ತು .. ಚಾಂದಿನಿಯ ಕೆನ್ನೆ ರಂಗೇರಿತ್ತು..
ಮುಂದುವರಿಯುವುದು...
✍️... ಅನಿತಾ ಜಿ.ಕೆ.ಭಟ್.
23-03-2020.
No comments:
Post a Comment