ಶಾಸ್ತ್ರೀನಿವಾಸದಲ್ಲಿ ಇಂದು ಸಂಭ್ರಮದ ಕಳೆ ಎಲ್ಲರ ಮುಖದಲ್ಲೂ ಎದ್ದು ಕಾಣುತ್ತಿತ್ತು.ಮಂಗಳಮ್ಮ ಬೇಗಬೇಗನೆ ಕೆಲಸ ಮುಗಿಸಲು ಪ್ರಯತ್ನಿಸುತ್ತಿದ್ದಳು.ಅತ್ತೆಗೆ ಸೊಸೆ ಏಕೆ ಇಷ್ಟು ಅವಸರ ಪಡುತ್ತಿದ್ದಾಳೆ ಎಂಬ ಸಣ್ಣ ಸಂಶಯ.ಕೊನೆಗೆ ತಡೆಯದೆ ಕೇಳಿಯೇಬಿಟ್ಟರು..
"..ಅದೂ..ಅತ್ತೆ..ನನಗಿವತ್ತು ನಮ್ಮ ಗ್ರಾಮ ದೇವಸ್ಥಾನಕ್ಕೆ ಹೋಗಲಿಕ್ಕಿದೆ.."
"ಹೌದಾ.. ಏನು ವಿಶೇಷ..."
"ಶ್ಯಾಮಲಕ್ಕ ಮೊನ್ನೆಯೇ ಹೇಳಿದ್ದರು.. ಇವತ್ತು ಕುಂಕುಮಾರ್ಚನೆ ಇದೆ ..ಬಾ.. ಎಂದು.. ನಾನು ಮರೆತೇಬಿಟ್ಟಿದ್ದೆ..ನಿಮ್ಮಲ್ಲಿ ಹೇಳಲು"
"ಹೋಗಲೇಬೇಕೇ..."
"ಹೌದು ಅತ್ತೆ.. ಬರುತ್ತೇನೆ ಅಂದಿದ್ದೆ..."
"ಮನೆಯವರ ಬಳಿ ಒಂದು ಮಾತು ಕೇಳಿ ಒಪ್ಪಿಕೊಳ್ಳುವುದಲ್ವಾ...ನೋಡು ಇವತ್ತು ಅಡಿಕೆ ತೆಗೆಯಲು, ಹೆಕ್ಕಲು, ಹೊರಲು ಎಂದು ಇಪ್ಪತ್ತು ಕೆಲಸದವರಿದ್ದಾರೆ..ಅವರಿಗೆಲ್ಲ ನಾನು ಬಡಿಸಲು ಕಷ್ಟವಾಗಬಹುದು..ಬಗ್ಗಿದರೆ ಸೊಂಟ ನೋವು.."
ಈ ಅತ್ತೆ ಯಾವಾಗಲೂ ಹೀಗೇನೇ.. ನಾನೆಷ್ಟೇ ಸಮಾಧಾನದಿಂದ ಹೊಂದಿಕೊಂಡು ಹೋದರೂ ನನ್ನ ಆಸೆಗಳಿಗೆ ಬೆಲೆಯೇ ಇಲ್ಲ.. ಎಂದು ಕೊಂಡು"ಅತ್ತೇ..ನೀವದಕ್ಕೆ ತಲೆಬಿಸಿ ಮಾಡಬೇಡಿ.. ನಾನು ಅದೆಲ್ಲ ಸೇಸಪ್ಪನಲ್ಲಿ ಹೇಳಿದ್ದೇನೆ..ಅವನೇ ಬಡಿಸುತ್ತಾನೆ.. ನೀವು ತಪಲೆಯಲ್ಲಿ ಹಾಕಿ ಹೊರಗಿಟ್ಟರೆ ಸಾಕು.. ಅಡುಗೆ ನಾನು ಮಾಡಿ ಮುಚ್ಚಿಟ್ಟಿದ್ದೇನೆ.."
ಅತ್ತೆ ಮನಸ್ಸಿಲ್ಲದ ಮನಸ್ಸಿನಿಂದ ಹೂಂಗುಟ್ಟಿದರು ಸೊಸೆಯ ಮಾತಿಗೆ..
ಮಂಗಳಮ್ಮ ದೇವಸ್ಥಾನಕ್ಕೆ ತೆರಳಿದರು.ಅಸಲಿಯಾಗಿ ಹೇಳುವುದಾದರೆ ಕುಂಕುಮಾರ್ಚನೆ ಒಂದು ನೆಪ ಅಷ್ಟೇ ಮಂಗಳಮ್ಮನಿಗೆ ದೇವಸ್ಥಾನಕ್ಕೆ ಹೋಗಲು.. ನಿಜವಾಗಿ ಹೇಳಬೇಕೆಂದರೆ ಮಂಗಳಮ್ಮ ದೇವಿಗೆ ಹರಕೆ ಹೊತ್ತಿದ್ದರು.ಮಗಳನ್ನು ಕೇಶವ್ ನೋಡಲು ಬಂದಾಗ ಮೈತ್ರಿ ಬಿಕ್ಕಿ ಬಿಕ್ಕಿ ಅಳುತ್ತಿದ್ದಳು.ಗಂಡ, ಮಾವ ಇಬ್ಬರೂ ಸೀದಾ ಜಾತಕ ಕೊಟ್ಟು ಬಿಟ್ಟಿದ್ದರು.ಮಂಗಳಮ್ಮನಿಗೂ ಬಾರಂತಡ್ಕದ ಕುಟುಂಬವನ್ನು ಕಂಡಾಗ ಇದು ಮೈತ್ರಿಗೆ ಹೇಳಿದ ಸಂಬಂಧ ಅಲ್ಲ ಎಂದು ಅನಿಸಿತ್ತು.. ಆದರೆ ಹೇಳಿದರೆ ಕೇಳಲು ಮನೆಯವರ ಕಿವಿ ಕಿವುಡಾಗಿತ್ತು.. ನಾನೇನು ಮಾಡಲಿ..ನನ್ನ ಮಗಳ ಬಾಳು ಸುಖಮಯವಾಗಿರಲು... ಎಂದು ಯೋಚಿಸುತ್ತಾ ಕಣ್ಣೀರುಗರೆಯುತ್ತಿದ್ದವಳಿಗೆ ಮುಖದ ಮುಂದೆ ಕಾಣಿಸಿದ್ದು ಗ್ರಾಮದೇವಿ ರಾಜರಾಜೇಶ್ವರಿಯ ದಿವ್ಯಮಂಗಳ ರೂಪ..ಆ ತಾಯಿಗೆ ಹರಕೆ ಹೊತ್ತಳು..ಮಗಳ ಬಾಳು ಬೆಳಗುವ ಹೊಣೆ ನಿನ್ನದೇ ತಾಯಿ..ಈ ಮನೆಯಲ್ಲಿ ನನ್ನ ಮಾತೇನೂ ನಡೆಯದು..ಇನ್ನೇನಿದ್ದರೂ ನಿನ್ನ ಮಹಿಮೆ ತಾಯೇ ಎಂದು ಸೆರಗೊಡ್ಡಿ ಬೇಡಿದ್ದಳು..ದೀನಳಾಗಿ ಮೊರೆಯಿಟ್ಟ ಭಕ್ತೆಯ ಕಡೆಗೆ ತನ್ನ ಕರುಣೆಯ ಸಿಂಧುವನ್ನು ಹರಿಸಿದಳು ತಾಯಿ ರಾಜರಾಜೇಶ್ವರಿ..ಬಂದ ಅಡೆತಡೆಗಳನ್ನು ಬದಿಗೊತ್ತಿ ಹೂವೆತ್ತಿದಂತೆ ಶುಭಕಾರ್ಯಕ್ಕೆ ಮುನ್ನುಡಿ ಬರೆದಳು.. ಇಂತಹಾ ಜಗನ್ಮಾತೆಯನ್ನು ಮರೆತಾಳೇ ಮಂಗಳಮ್ಮ...??
ದೇವಸ್ಥಾನಕ್ಕೆ ತೆರಳಿ ಸುಮಂಗಲಿಯರೊಂದಿಗೆ ಕುಂಕುಮಾರ್ಚನೆ, ಲಕ್ಷ್ಮೀನೃಸಿಂಹ ಕರಾವಲಂಬನ ಸ್ತೋತ್ರ ಪಾರಾಯಣ ಮಾಡಿ ಪ್ರಸಾದ ಸ್ವೀಕರಿಸಿದಳು.ತನುಮನವೆಲ್ಲ ಮಗಳ ಒಳಿತನ್ನೇ ಬಯಸಿತ್ತು. ಪ್ರಸಾದಕ್ಕಾಗಿ ಸಾಲಿನಲ್ಲಿ ನಿಂತಿದ್ದರು ಮಂಗಳಮ್ಮ.ಅರ್ಚಕರು ಆಕೆಯನ್ನು ಕರೆದರು..ಅವರ ಪಕ್ಕದಲ್ಲಿ ನಿಂತಿದ್ದ ದಂಪತಿಯಲ್ಲಿ"ನೋಡಿ.. ಇವರಿಗೆ ನೀವದನ್ನು ಕೊಡಿ.." ಎಂದರು.
ಮಂಗಳಮ್ಮನಿಗೆ ಒಂದು ಮಣೆ ಕೊಟ್ಟು ಕುಳ್ಳಿರಿಸಿದರು..ದಂಪತಿ ತಾವು ತಂದಿದ್ದ ಹಸಿರು ಝರತಾರಿ ಸೀರೆಯನ್ನು ,ಅರಿಶಿನ, ಕುಂಕುಮ , ಹೂವನ್ನು ಕೊಟ್ಟು ನಮಸ್ಕರಿಸಿದರು..ಆಶೀರ್ವದಿಸಿದ ಮಂಗಳಮ್ಮನಿಗೆ ಏನು ನಡೆಯುತ್ತಿದೆ ಎಂದೇ ತಿಳಿಯಲಿಲ್ಲ.. ಪುರೋಹಿತರು "ಇವರು ನಮ್ಮೂರಿನವರೇ..ಸಧ್ಯ ಬೆಂಗಳೂರಿನಲ್ಲಿದ್ದಾರೆ.. ಪ್ರತೀ ವರ್ಷ ಊರಿಗೆ ಬಂದಾಗ ಇಲ್ಲಿಗೆ ಭೇಟಿ ನೀಡಿ ಒಬ್ಬ ಮುತ್ತೈದೆಗೆ ಅರಶಿನ, ಕುಂಕುಮ, ಸೀರೆ ಕೊಡುತ್ತಿದ್ದಾರೆ..ಈ ವರ್ಷ ಆ ಭಾಗ್ಯ ನಿಮ್ಮದಾಗಿದೆ.."ಎಂದಾಗ ಮಂಗಳಮ್ಮನ ಆನಂದ ಹೇಳತೀರದು..
" ಎಲ್ಲಾ ಆ ತಾಯಿ ರಾಜರಾಜೇಶ್ವರಿಯ ಮಂಗಲ ಪ್ರಸಾದ .."ಎನ್ನುತ್ತಾ ಮಂಗಳಮಹಿಮಳಿಗೆ ಶಿರಬಾಗಿ ನಮಿಸಿದಳು..
ಅನ್ನ ಪ್ರಸಾದ ಸ್ವೀಕರಿಸಿ ಮನೆಯತ್ತ ಸಾಗಿದಳು..
ಮನೆಯ ಚಾವಡಿಯಲ್ಲಿ ಮಾವ ಕುಳಿತಿದ್ದರು.
"ಮಂಗಳಾ .. ದೇವಸ್ಥಾನದಲ್ಲಿ ಕುಂಕುಮಾರ್ಚನೆಗೆ ಎಷ್ಟು ಜನ ಇದ್ರು..ಯಾರ್ಯಾರೆಲ್ಲ ಬಂದಿದ್ರು .. ಊಟಕ್ಕೇನು ಭಕ್ಷ್ಯ.. ಅಡಿಗೆಗೆ ಯಾರು..ಕಿಟ್ಟಣ್ಣನಾ ? "ಎಲ್ಲಾ ವಿಚಾರಿಸಿಕೊಂಡರು..
"ಆಗ ಫೋನ್ ಸರಿ ಮಾಡಿದ್ರು ಮಂಗಳಾ "ಎಂದು ಒಂದು ನಿಟ್ಟುಸಿರು ಬಿಟ್ಟರು..
ಸ್ವಲ್ಪ ತಡೆದು "ಸರಿಯಾದ್ದು ಒಳ್ಳೇದಾಯ್ತು ಬಿಡು.."ಎಂದರು.ಮಾವನ ಮಾತಿನ ಅರ್ಥ ತಿಳಿಯಲಿಲ್ಲ.. ಸೊಸೆಗೆ.. ಪ್ರಶ್ನಾರ್ಥಕವಾಗಿ ನೋಡಿದಾಗ
"ಮಂಗಳಾ.. ಮೊದಲು ಜಾತಕ ತೆಗೆದುಕೊಂಡು ಹೋದ ಬಾರಂತಡ್ಕದವರು ಫೋನ್ ಮಾಡಿದ್ರು..ಅವರ ಮಗನಿಗೆ ಮೈತ್ರಿಯ ಜಾತಕ
ಹೊಂದಾಣಿಕೆ ಆಗುವುದಿಲ್ಲವಂತೆ.."
"ಹೌದಾ..ಹಾಂ.."
"ಫೋನ್ ಸರಿಯಾದ ಕಾರಣ ಅವರಿಗೆ ಹೇಳಲೂ ಅನುಕೂಲ ಆಯ್ತು... ಇಲ್ಲದಿದ್ದರೆ ಶರ್ಮನ ಮಗನ ಸಂಬಂಧ ಮುಂದುವರಿಸಲೂ ಸ್ವಲ್ಪ ಅನುಮಾನಿಸಬೇಕಾಗಿತ್ತು..ಇನ್ನೇನೂ ಅಡ್ಡಿ ಉಳಿದಿಲ್ಲ..."
"ಹೌದು ಮಾವ.."ಎಂದ ಮಂಗಳಾ .. ಲ್ಯಾಂಡ್ ಫೋನ್ ಇದ್ದರೆ ಮಾತ್ರ ಹೇಳಲು ಸಾಧ್ಯವಾಗುವುದಾ.. ? ಮೊಬೈಲ್ ನಲ್ಲಿ ಆಗುವುದಿಲ್ಲವಾ..!! ಈ ವಯಸ್ಸಾದವರ ಯೋಚನೆ ಹೀಗೇನೇ... ಎಂದು ತನ್ನೊಳಗೇ ನಕ್ಕು ಮೈತ್ರಿಯ ಮದುವೆಗೆ ಇದ್ದ ತೊಡರುಗಳೆಲ್ಲ ಒಂದೊಂದೇ ಬದಿಗೆ ಸರಿಯುತ್ತಿವೆ ಎಂದು ಸಮಾಧಾನಪಟ್ಟುಕೊಂಡಳು..
*****
ಮೈತ್ರಿಗೆ ಒಂದು ಪೀರಿಯಡ್ ಫ್ರೀ ಇತ್ತು ಮಧ್ಯಾಹ್ನ.. ಕಿಶನ್ ನೊಡನೆ ಚಾಟ್ ಮಾಡುವ ಆಸೆಯವಳಿಗೆ..ಬಹಳ ದಿನದಿಂದ ಮನಬಿಚ್ಚಿ ಮಾತಾಡಲು ಸಾಧ್ಯವಾಗಿರಲಿಲ್ಲ.. ಮನೆಯಲ್ಲಿದ್ದರೆ ಮನೆಯವರೆಲ್ಲ ಕೇಳಿಸಿಕೊಂಡರೆ ಎಂಬ ಭಯ.. ಕಾಲೇಜಲ್ಲಿ ಇದ್ದರೆ ಕ್ಲಾಸ್ ... ಸ್ಟಡೀಸ್..ಎಂದಾಯ್ತು..
"ಹಾಯ್...ಲವ್ಲೀ ಬಾಯ್.."
" ಏನು ಮದುಮಗಳೇ.."
" ಅಷ್ಟೆಲ್ಲಾ ಮುಂದೆ ಹೋಗ್ಬೇಡಿ.. ಸ್ಟ್ರಿಕ್ಟ್ ಶಾಸ್ತ್ರಿಗಳು ಇನ್ನೂ ಉತ್ತರ ಕೊಟ್ಟಿಲ್ಲ.."
"ಶಾಸ್ತ್ರೀ ಬೇಬಿ ಒಲಿದ ಮೇಲೆ ..."
"ನಮ್ಮಪ್ಪ ಹೂಂ ಅಂದ್ರೆ ಮಾತ್ರ ತಾಳಿಗೆ ಕೊರಳೊಡ್ಡೋದು.."
"ಮುದ್ಗೊಂಬೆ...ನಿಂಗೊಂದು ಗಿಫ್ಟ್ ಕೊಡ್ಬೇಕು.. ಏನ್ ಕೊಡ್ಲೀ .."
"ನೀವೇನು ಕೊಡ್ತಿರೋ ಕೊಡೀ.."
"ನೀ..ಹೇಳು.. ಏನು ಬೇಕು.."
"ಇಷ್ಟೇನಾ.. ನೀವು ನನ್ನ ಅರ್ಥ ಮಾಡ್ಕೊಂಡಿದ್ದು.. ನಂಗೇನು ಬೇಕೂಂತ ನಿಮ್ಗೊತ್ತಿಲ್ವಾ.." ಕೊಂಚ ಹುಸಿಮುನಿಸಿನಿಂದ..
"ಸಿಟ್ಟ್ ಮಾಡ್ಕೊಂಡ್ರೆ ನಿನ್ ವಾಯ್ಸ್ ಸ್ವೀಟ್ ಆಗಿ ಕೇಳ್ಸುತ್ತೆ.."
"ಹೋಗಿ.. ನೀವು ..ಹಾಗೆಲ್ಲ ಕಾಲೆಳೆಯೋದು ಬೇಡ.. ನಾನೇನು ಕೊಡ್ಲಿ ನಿಮಗೆ ಅಂತಾದ್ರೂ ಹೇಳಿ.."
"ಹೇಳ್ಲಾ.."
"ಹೇಳಿ..."
"ನಂಗೆ ಮುದ್ಗೊಂಬೆಯಿಂದ ಒಂದು ಪ್ರೇಮಮುದ್ರೆ ಬೇಕು.. ಸಿಂಪಲ್ ಅಷ್ಟೇ ಸಾಕು ..ಕಾಸ್ಟ್ಲೀ ಗಿಫ್ಟ್ ಎಲ್ಲಾ ಕೇಳಲ್ಲ.. ಸಿಂಪಲ್ ಹುಡ್ಗ ನಾನು.."
"ಅಯ್ಯಪ್ಪ...ದೇವ್ರೇ..ಸಧ್ಯಕ್ಕೆ ಅದೇ ಕಾಸ್ಟ್ಲೀ..ನನ್ನಿಂದ ಕೊಡೋಕಾಗಲ್ಲಪ್ಪಾ..."
"ನಾನೇ ಬಂದು ಇಸ್ಕೊಳ್ಲಾ.."
"ಬೇಡ ಬೇಡ..ಇಲ್ಲಿಂದ್ಲೇ ಹಾರಿಸಿ ಬಿಡ್ತೀನಿ...❤️❤️❤️"
"ಅದೆಲ್ಲ ನಂಗೆ ಸಾಕಾಗಲ್ಲ.."
"ಕೇಳಿದಂತೆ ಕೊಡೋಕೂ ಆಗಲ್ಲ... ಹೌದು ನಂಗೇನು ಕೊಡ್ತೀರಿ ...ಜೀವಮಾನದಲ್ಲಿ ನೆನಪಿಟ್ಟುಕೊಳ್ಳುವಂಥಾದ್ದು..."
"ತರ್ಲೆ..ಮುದ್ಗೊಂಬೆ..ನಂಗೆ ಮರೆಯದ ಉಡುಗೊರೆ ಕೇಳಿದ್ರೆ ಕೊಡಲ್ಲ ಅನ್ನೋ ಕಂಜೂಸ್..ನನ್ನ ಕೈಯಿಂದ ಪಡೆಯೋ ಹಂಬಲ ಜಾಸ್ತಿ..."
"ಹೌದಪ್ಪಾ.. ನಾವು ಹಾಗೇನೇ.."
"ನಾವು ಹಾಗೇನೇ.. ಸರ್ಪ್ರೈಸ್ ಕೊಡೋದೇ ಹೆಚ್ಚು..."
"ನಿನ್ನ ಸರ್ಪ್ರೈಸ್ ಗೆ ನಾನು ಕಾಯ್ತಾ ಇರ್ತೀನಿ."
"ಸರಿ.. ಬಾಯ್.."
"ಬಾಯ್.."
******
ಸಂಜೆ ಕಾಲೇಜು ಬಸ್ ಬರುವಹೊತ್ತಾಯಿತು. ಮೈತ್ರಿ ಇಳಿಯುವ ಸ್ಟಾಪ್ ನಲ್ಲಿ ಹೊಂಚುಹಾಕಿ ಕುಳಿತಿತ್ತು ಆ ತಂಡ.. ಕೇಶವ್ ಅವಡುಗಚ್ಚಿ ಕುಳಿತಿದ್ದ.. 'ಮೈತ್ರಿ .. ನೋಡ್ತಾ ಇರು..ನನಗೆ ಸಿಗದ ನೀನು ಅದು ಹೇಗೆ ಕಿಶನ್ ನ ಮದುವೆಯಾಗ್ತೀ ...ಅವನೇ ನಿನ್ನ ತಿರಸ್ಕರಿಸುವಂತೆ ಮಾಡ್ತೀನಿ.. 'ಎನ್ನುತ್ತಾ ರೋಷಕಾರುತ್ತಿದ್ದ..
ಬಸ್ ಬಂತು.. ಎಲ್ಲರೂ ಅಲರ್ಟ್ ಆದರು.. ಬಸ್ ನಿಂತಿತು..ಇಬ್ಬರು ಹುಡುಗರು ಹಿಂಬಾಗಿಲಿನಿಂದ ಇಳಿದರು.. ಮೈತ್ರಿ ಇಳಿಯಲೇ ಇಲ್ಲ.. ಬಸ್ ಮುಂದೆ ಚಲಿಸಿತು.. ಕೇಶವ್ ತಲೆಮೇಲೆ ಕೈ ಹೊತ್ತು ಕುಳಿತ.. ತಲೆಸುತ್ತು ಬಂದಂತಾಯಿತು ಅವನಿಗೆ...
ಮುಂದುವರಿಯುವುದು...
✍️... ಅನಿತಾ ಜಿ.ಕೆ.ಭಟ್.
05-03-2020.
ಮೈತ್ರಿ ಇಳಿಯಲೇ ಇಲ್ಲ 😊 ಒಳ್ಳೇದಾಯ್ತು
ReplyDeleteಹೂಂ.. ಮುಂದಿನ ಸಂಚಿಕೆಯಲ್ಲಿ ಇನ್ನಷ್ಟು ರೋಚಕ ವಿಷಯಗಳು... ಥ್ಯಾಂಕ್ಯೂ 💐🙏
ReplyDelete