Saturday, 7 March 2020

ಮಹಿಳೆಯರ ಆರೋಗ್ಯ ರಕ್ಷಣೆಯಲ್ಲಿ ಕುಟುಂಬದ ಪಾತ್ರ







          ಕುಟುಂಬವನ್ನು ಪ್ರೀತಿಯಿಂದ ಮುನ್ನಡೆಸುತ್ತಾ, ಎಲ್ಲರನ್ನೂ ಕಾಳಜಿಯಿಂದ ನೋಡಿಕೊಳ್ಳುವವಳು ಹೆಣ್ಣು , ಗೃಹಿಣಿ.ಕುಟುಂಬದ ಸದಸ್ಯರ ಆರೋಗ್ಯದ ಏರುಪೇರನ್ನು ಆರಂಭದಲ್ಲೇ ಗುರುತಿಸಿ ಆರೈಕೆ ಮಾಡಿ ಗುಣವಾದಾಗ ನಿಟ್ಟುಸಿರು ಬಿಡುವ ಹೆಣ್ಣುಮಗಳಿಗೆ ತನ್ನ ಆರೋಗ್ಯದ ಕಡೆಗೆ ಗಮನಹರಿಸಲು ಬಿಡುವು ದೊರೆಯುತ್ತದೆಯೇ ..? ಕುಟುಂಬದ ಸದಸ್ಯರಿಂದ ಹೆಣ್ಣಿನ ಅನಾರೋಗ್ಯದ ಸಂದರ್ಭದಲ್ಲಿ  ವೈದ್ಯಕೀಯ ಪರಿಹಾರಗಳತ್ತ ಯೋಚನೆ , ಕೆಲಸಗಳಲ್ಲಿ ಸಹಕಾರ,ಕಾಳಜಿ ದೊರೆಯುತ್ತದೆಯೇ..?

     
      ಅಲಾರಾಂ ನ ಅಗತ್ಯವೇ ಇಲ್ಲದೆ ಐದುಗಂಟೆಗೇ ಎದ್ದು ಎಲ್ಲರಿಗೂ ಎಷ್ಟು ಹೊತ್ತಿಗೆ ಯಾವ ವಿಧದ ತಿಂಡಿ ಆಗಬೇಕು?, ಮಕ್ಕಳನ್ನು ಎಷ್ಟು ಹೊತ್ತಿಗೆ ಎಬ್ಬಿಸಬೇಕು? , ಗಂಡನಿಗೆ ಆಫೀಸಿಗೆ ಬುತ್ತಿಯ ಜೊತೆ ಏನೆಲ್ಲಾ ಕೊಡಬೇಕು? ಎಂದೆಲ್ಲ ಯೋಚಿಸುತ್ತಾ ಕರಾರುವಾಕ್ಕಾಗಿ ತನ್ನ ಕೆಲಸಗಳನ್ನು ಮಾಡುತ್ತಾಳೆ.ಹೊರಡುವ ಮುನ್ನ ಅನಾರೋಗ್ಯ ವಿದ್ದರೆ ಔಷಧಿಗಳನ್ನು ಮರೆಯದೆ ನೀಡುತ್ತಾಳೆ.ಎಲ್ಲರನ್ನೂ ಕಳುಹಿಸಿ ಉಸ್ಸಪ್ಪಾ.. ಎನ್ನುವ ಗೃಹಿಣಿಗೆ ಮತ್ತೆ ರಾಶಿ ಬಿದ್ದ ಮನೆಕೆಲಸಗಳು ಕೈ ಬೀಸಿಕರೆಯುತ್ತವೆ.ಸ್ವಲ್ಪವೂ ಬೇಸರಿಸದೆ ತನ್ನ ಕೆಲಸಗಳನ್ನು ಮುಂದುವರಿಸಿದರೆ ಮಾತ್ರ ಮನೆ ಸಂಜೆ ಮಕ್ಕಳು ಪತಿ ಮನೆಗೆ ವಾಪಾಸಾಗುವಾಗ ಒಪ್ಪ ಓರಣವಾಗಿದ್ದು ಮನಸಿಗೆ ಮುದನೀಡುತ್ತದೆ.ಆದರೂ ಹೆಣ್ಣಿಗೆ "ಮನೆಯಲ್ಲೇ ಇದ್ದು ಕುಳಿತು ತಿನ್ನುತ್ತೀಯಾ .." ಅನ್ನುವ ಮೂದಲಿಕೆ ತಪ್ಪಲಾರದು.

          ಪುಟ್ಟ ಮಕ್ಕಳ ತಾಯಂದಿರಿಗೆ ಹಠಹಿಡಿಯುವ ಮಕ್ಕಳನ್ನೂ ಸಂತೈಸುತ್ತಾ ಮನೆಗೆಲಸವನ್ನು ನಿಭಾಯಿಸುತ್ತ ತನ್ನ ವೈಯಕ್ತಿಕ ಕೆಲಸಗಳಿಗೆ ಬಿಡುವಿಲ್ಲದಷ್ಟು ಧಾವಂತ .ಅದರ ಮಧ್ಯೆಯೂ ಅವಳನ್ನು ಅರ್ಥಮಾಡಿಕೊಳ್ಳದೇ ಆಕೆಯ ಕೆಲಸಕಾರ್ಯಗಳಲ್ಲಿ ತಪ್ಪನ್ನೇ ಹುಡುಕಿ ಎತ್ತಿತೋರಿ ಹೀಗಳೆವ ,ಮಗನಿಗೆ ಚಾಡಿಹೇಳಿಕೊಡುವ,ಕಂಡಂಡವರಲ್ಲಿ ದೂರುವ ಅತ್ತೆಯಿದ್ದರಂತೂ ಆ ಹೆಣ್ಣಿನ ಬದುಕು ದಯನೀಯ.ಕೆಲವು ಕುಟುಂಬದಲ್ಲಿ ಇಂತಹದೇ ಪರಿಸ್ಥಿತಿಯನ್ನು ಅತ್ತೆಯಾದವಳು ಸೊಸೆಯಿಂದಲೂ ಅನುಭವಿಸಬಹುದು.ಮದುವೆಯಾಗದ ಸ್ತ್ರೀಯರೂ ಕೂಡ ತಮ್ಮ ಬಂಧುಗಳಿಂದ ನಿರ್ಲಕ್ಷ್ಯ ಕ್ಕೊಳಗಾಗುವ ಸನ್ನಿವೇಶ ಎದುರಾಗಬಹುದು.ಇಂತಹ ಸಂದರ್ಭಗಳಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರುವಾಗುವುದು ಖೇದಕರ.ಇಂತಹ ಪರಿಸ್ಥಿತಿಯಲ್ಲಿರುವ ಮಹಿಳೆ ತನ್ನ ಆರೋಗ್ಯದ ಕಡೆಗೆ ಹೇಗೆ ತಾನೇ ಗಮನಕೊಟ್ಟಾಳು...?ಆಕೆಯ ಆರೋಗ್ಯ ಕ್ಷೀಣಿಸಲು ಆರಂಭವಾಗುವುದೇ ಮಾನಸಿಕ ಒತ್ತಡ ಮತ್ತು ಅಪೌಷ್ಟಿಕತೆಯಿಂದ.ಗೆಳತಿ ಶೀಲಾ ಯಾವತ್ತೋ ಹೇಳಿದ ಮಾತು "ನನಗೆ ಆರೋಗ್ಯ ಸಮಸ್ಯೆಯಾಗಿ ವೈದ್ಯರನ್ನು ಭೇಟಿಮಾಡಿದರೆ ಮನೆಗೆ ಬಂದ ಕೂಡಲೇ ಅತ್ತೆ ಕೇಳುವ ಪ್ರಶ್ನೆ ನಿನ್ನ ಔಷಧಕ್ಕೆ ಎಷ್ಟು ಖರ್ಚಾಯಿತು ..? ಎಂದು.ಅತ್ತೆಯೂ ದಿನವೂ ಔಷಧ ಸೇವಿಸುತ್ತಿದ್ದರು ಅದರ ಖರ್ಚು ಮಾತ್ರ ಲೆಕ್ಕಕ್ಕಿಲ್ಲ" ಎಂಬುದು ಗೆಳತಿಯ ನೋವು.ಇಂತಹ ಕಾರಣಗಳಿಗಾಗಿ ಮಹಿಳೆ ತನ್ನ ದೈಹಿಕ ಸಮಸ್ಯೆಯನ್ನು ಹೇಳಿಕೊಳ್ಳಲೂ ಹಿಂಜರಿಯುತ್ತಾಳೆ.ಇತ್ತೀಚೆಗೆ ಬ್ರೆಸ್ಟ್ ಕ್ಯಾನ್ಸರ್ ಅನ್ನು ಆರಂಭದಲ್ಲಿ ಪತ್ತೆಹಚ್ಚಲು ಸಾಧ್ಯವಾಗದಿರುವುದು ಇದೇ ಹಿಂಜರಿಕೆಯ ಕಾರಣಕ್ಕಾಗಿ ಎಂದು ಲೇಖನವೊಂದರಲ್ಲಿ ಓದಿದ ನೆನಪು..

         ಹಲವು ಸಂದರ್ಭಗಳಲ್ಲಿ ಅನಗತ್ಯವಾಗಿ ಎಲ್ಲದಕ್ಕೂ ಮಹಿಳೆಯರೆ ಕಾರಣ ಎಂಬ ಮೂದಲಿಕೆ ಆಕೆಯನ್ನು ಖಿನ್ನತೆಗೆ ದೂಡಬಹುದು.ಆತ್ಮವಿಶ್ವಾಸವೂ ಕ್ಷೀಣಿಸಬಹುದು.ಕೆಲವು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಓದಿದ ಸನ್ನಿವೇಶ ನೆನಪಿಗೆ ಬರುತ್ತದೆ.ಒಬ್ಬ ರೋಗಿ ವೈದ್ಯರ ಬಳಿಗೆ ಬರುತ್ತಾನೆ . ವೈದ್ಯರು ಆತನ ಶುಗರ್, ಬಿಪಿ ಪರೀಕ್ಷಿಸಿ ಪಥ್ಯಾಹಾರವನ್ನು ಹೇಳುತ್ತಾರೆ.ಆಗ ರೋಗಿ:-ನನಗೆ ಪಥ್ಯ ಮಾಡಲು ಮನಸ್ಸು.ಆದರೆ ನನ್ನ ಮಡದಿ ಪಥ್ಯದಡುಗೆ ಮಾಡುವುದೇ ಇಲ್ಲ.
ವೈದ್ಯ :-ದಿನವೂ ವಾಕಿಂಗ್ ಅರ್ಧ ಗಂಟೆ ಮಾಡಬೇಕು.
ರೋಗಿ:-ಅಯ್ಯೋ.. ನಾನು ಐದು ಗಂಟೆಗೆದ್ದು ವಾಕಿಂಗ್ ಹೊರಟರೆ ನನ್ನ ಮಡದಿಯೂ ಬರುತ್ತೇನೆ ಎನ್ನತ್ತಾಳೆ.ಆಕೆ ಸೀರೆಯುಟ್ಟು ನಡೆಯುವುದು ನಿಧಾನವಾಗಿ.. ಮತ್ತೆ ಮನೆಗೆ ಬಂದು ಕಾಫಿ ತಿಂಡಿ ಎಲ್ಲವೂ ಲೇಟಾಗುತ್ತದೆ.
ವೈದ್ಯ:-ಚೂಡಿದಾರ್, ಪ್ಯಾಂಟ್ ಶರ್ಟ್ ಹಾಕಿಕೊಂಡು ವಾಕ್ ಮಾಡಿದರಾಯಿತು.
ರೋಗಿ:-ಅಯ್ಯೋ..ಶಿವನೇ..ನನ್ನ ಮನೆಯವಳು ಮಾಡರ್ನ್ ಡ್ರೆಸ್ ಹಾಕಿಕೊಂಡು ವಾಕ್ ಮಾಡುವುದಾ..ಅದೆಲ್ಲ ಬೇಡ..
ವೈದ್ಯ:-ಹೋಗ್ಲಿ ಬಿಡಿ.. ಮನೆಯಲ್ಲಿ ಯೋಗಾಸನ, ಪ್ರಾಣಾಯಾಮ, ಧ್ಯಾನ ಮಾಡಿ.
ರೋಗಿ:-ಧ್ಯಾನ ಮಾಡುವುದು ಹೇಗೆ...?
ಮಡದಿಯ ಕಿರಿಕಿರಿ..ಮಕ್ಕಳ ಫಿಲಂ ಸಾಂಗ್ ಎಲ್ಲ ಅಡ್ಡಿಯಾಗುತ್ತದೆ.ನಿಮಗೇನು..ಗೊತ್ತು ಡಾಕ್ಟ್ರೇ..ನನ್ನಂತಹ ಬಡವನ ಕಷ್ಟ..?ನಿಮಗೆ ಕೈತುಂಬಾ ದುಡ್ಡು,ಒಳ್ಳೆಯ ಕುಟುಂಬ ಇದೆ.. ನಗುನಗುತ್ತಾ ಬಂದ ರೋಗಿಗಳನ್ನು ಮಾತನಾಡಿಸಿದರೆ ಆಯ್ತು..

ವೈದ್ಯರು ರೋಗಿಯ ಮುಖವನ್ನು ದಿಟ್ಟಿಸಿ ಹೇಳಿದರು.."ನೋಡಯ್ಯ.ಇನ್ನೊಂದರ್ಧ ಗಂಟೆ ಕಾಯಲು ತಯಾರಿದ್ದರೆ ನನ್ನ ಕುಟುಂಬವನ್ನು ನಿನಗೆ ಪರಿಚಯಿಸುವೆ.."

"ಆಗಲಿ "ಎಂದ ರೋಗಿ .. ವೈದ್ಯರು ಕರ್ತವ್ಯವನ್ನು ಮುಗಿಸಿ ಮನೆಗೆ ರೋಗಿಯನ್ನು ಕರೆದೊಯ್ದರು .ತಾನು ಮನೆಯ ಹೊರಗಡೆ ಕೈಕಾಲು ಮುಖ ತೊಳೆದುಕೊಂಡು ರೋಗಿಗೂ ಹೇಳಿದರು.ಆತನಿಗೆ ಕೈಕಾಲು ತೋಳೆಯುವುದಕ್ಕೂ ಪುರುಸೊತ್ತಿಲ್ಲ. ಕುಟುಂಬದ ಸದಸ್ಯರನ್ನು ಕಾಣುವ ಆತುರ.ಒಳಗೆ ಬಂದವನನ್ನು "ಅಯ್ಯಾ..ಕುಡಿಯಲು ಕಾಫಿ,ಟೀ ಏನು ತಯಾರು ಮಾಡಲಿ"ಎಂದು ಕೇಳಿದರು.
ಅವಾಕ್ಕಾದ ರೋಗಿ "ನಿಮಗೆ ಪತ್ನಿ ಇಲ್ಲವೇ..?" ಎಂದು ಕೇಳಿದ."ಇದ್ದಾರೆ .."ಎಂದುತ್ತರಿಸಿದ ವೈದ್ಯರು ಸಪ್ಪೆ ಕಾಫಿ ಮಾಡಿ ತಂದರು.ಶುಗರ್ ಇದ್ದರೂ ಸಪ್ಪೆ ಕುಡಿಯಲು ಒಪ್ಪದ ರೋಗಿಯ ಮನಸ್ಸನ್ನು ಅವನ ಮುಖದ ಭಾವದಲ್ಲೇ ಓದಿದ ವೈದ್ಯರು.
"ಬನ್ನಿ ನನ್ನ ಮಡದಿಯನ್ನು ನಿಮಗೆ ಪರಿಚಯಿಸುತ್ತೇನೆ " ಎಂದು ರೂಮಿನೊಳಗೆ ಕರೆದೊಯ್ದರು. ರೋಗಿ ನೋಡಿ ಸ್ತಂಭೀಭೂತರಾದರು.ವೈದ್ಯರು ಮಾತು ಮುಂದುವರಿಸುತ್ತಾ.."ನಮಗೆ ಮದುವೆಯಾಗಿ ಐದು ತಿಂಗಳಾದಾಗ ಭೀಕರ ಅಪಘಾತವಾಗಿ ಪತ್ನಿಯ ಮೆದುಳು ನಿಷ್ಕ್ರಿಯವಾಯಿತು.ಅಂದಿನಿಂದ ಇಂದಿನ ತನಕ ಆಕೆಯ ಮಲಮೂತ್ರವನ್ನು ಬಾಚಿ ಸ್ವಚ್ಛಗೊಳಿಸಿ, ಒಳ ಉಡುಪನ್ನು ತೊಡಿಸುವುದರಿಂದ ಹಿಡಿದು ಎಲ್ಲಾ ಕೆಲಸವನ್ನು ನಾವು ನನ್ನ ಕರ್ತವ್ಯ ಎಂದು ಭಾವಿಸಿ ಮಾಡುತ್ತೇನೆ.ನಂತರವೇ ಕ್ಲಿನಿಕ್ ಗೆ ಬಂದು ರೋಗಿಗಳ ಸೇವೆ."
ರೋಗಿ ಕಣ್ಣೀರುಗರೆಯುತ್ತಾ "ನನ್ನ ತಪ್ಪಿನ ಅರಿವಾಯಿತು ಡಾಕ್ಟ್ರೇ...ನಿಮ್ಮ ನಗುಮುಖದ ಹಿಂದೆ ಇಷ್ಟು ನೋವಿದೆ ಎಂದು ನನಗೆ ತಿಳಿಯಲೇ ಇಲ್ಲ.ಪ್ರತಿಯೊಂದಕ್ಕೂ ಮಡದಿಯನ್ನೇ ದೂಷಿಸುತ್ತಿದ್ದ ನಾನು ಇಂದಿನಿಂದಲೇ ಬದಲಾಗುತ್ತೇನೆ.ನನ್ನ ಮಡದಿಯ ಬೇಕು ಬೇಡಗಳಿಗೆ ಸ್ಪಂದಿಸುತ್ತೇನೆ ಮನೆಕೆಲಸಗಳಿಗೆ ಸಹಕರಿಸುತ್ತೇನೆ ..ನನ್ನ ಕಣ್ಣು ತೆರೆಸಿದಿರಿ" ಎಂದು ವೈದ್ಯರ ಕಾಲಿಗೆ ಬಿದ್ದನು.ಹೀಗೆ ವೈದ್ಯರಂತೆ ಮಡದಿಯ ಆರೋಗ್ಯ ದ ಕಾಳಜಿ ನನ್ನಹೊಣೆ ಎಂದು ಭಾವಿಸುವ ಮಹಾನುಭಾವರೂ ಇದ್ದಾರೆ.ರೋಗಿಯಂತೆ  ಮಡದಿಯನ್ನು ಶೋಷಿಸಿ ದೂಷಿಸುವವರೂ ಇದ್ದಾರೆ.ಇದರಿಂದ ಹೆಣ್ಣಿನ ಮಾನಸಿಕ ಆರೋಗ್ಯ ಕ್ಷೀಣಿಸುತ್ತದೆ.ತಪ್ಪು ತಮ್ಮಲ್ಲೇ ಇದ್ದರೂ ಅದನ್ನು ಅರಿತುಕೊಳ್ಳದೆ ಅಥವಾ ಮುಚ್ಚಿಡುವ ಸಲುವಾಗಿ ಹೆಣ್ಣಿನ ಮೇಲೆ ಹೊರಿಸುವುದರಿಂದ ಆಕೆಯ ಮನಸ್ಸು ಜರ್ಝರಿತವಾಗುತ್ತದೆ.


          ಉದ್ಯೋಗದಲ್ಲಿರುವ ಮಹಿಳೆಯರೂ ಕೂಡ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರೀಸಬೇಕಾಗುತ್ತದೆ.ಪುರುಷರೊಂದಿಗೆ ಸರಿಸಮಾನ ಹುದ್ದೆಗಳನ್ನು ಅಲಂಕರಿಸಿದರೂ ಆಕೆಗೆ ವಿವಾಹದ ನಂತರ ಗರ್ಭಧಾರಣೆ, ಹೆರಿಗೆ, ಬಾಣಂತನ ,ಗಂಡ ,ಮಕ್ಕಳ ಆರೈಕೆ ಎಂಬ ಕೌಟುಂಬಿಕ ಜವಾಬ್ದಾರಿಯು ಹೆಗಲಮೇಲಿರುತ್ತದೆ.ಮನೆ, ಮಕ್ಕಳು,ಅಡುಗೆ ಕೆಲಸಗಳೆಲ್ಲ ಹೆಣ್ಣಿನ ಜವಾಬ್ದಾರಿ ಎಂಬ ಸಮಾಜದ ಚಿಂತನೆಯಿಂದ ಆಕೆ ವಿಶ್ರಾಂತಿ ಸಾಲದೆ ಒತ್ತಡಗಳಿಂದ ಬಳಲುತ್ತಾ ಅನಾರೋಗ್ಯ ಕ್ಕೆ ತುತ್ತಾಗುವ ಸಂಭವ ಹೆಚ್ಚು.ಆಕೆಯನ್ನು ಪತಿ,ಅತ್ತೆ,ಮಾವ ಅರ್ಥಮಾಡಿಕೊಂಡು ತಾವೂ ನೆರವಾದರೆ ಆ ಕುಟುಂಬ ಸುಖೀ ಕುಟುಂಬವೆಂದರೆ ತಪ್ಪಾಗಲಾರದು. ಉದ್ಯೋಗದಲ್ಲೂ ಕೆಲವೊಂದು ಸಡಿಲಿಕೆಗಳು ಆಕೆಗಿವೆ.ಇನ್ನೂ ಅವಳು ಬಯಸುವುದಿದೆ. ಶಿಕ್ಷಕಿಯಾಗಿರುವ ನನ್ನ ಚಿಕ್ಕಮ್ಮ ಚುನಾವಣಾ ಕರ್ತವ್ಯದ ಕರೆ ಬಂದಾಗ ತಮ್ಮ ಏಳು ತಿಂಗಳ ಹಸುಳೆಯನ್ನು ಬಿಟ್ಟುಹೋಗಲೂ ಆಗದೆ ಕರೆದೊಯ್ಯಲೂ ಸಾಧ್ಯವಾಗದೆ ಚುನಾವಣಾ ಮೇಲಧಿಕಾರಿಯಲ್ಲಿ "ನನ್ನನ್ನು ದಯವಿಟ್ಟು ಕರ್ತವ್ಯದಿಂದ ತೆರವುಗೊಳಿಸಿ " ಎಂದು ಕೇಳಿಕೊಂಡಾಗ ಅದೆಷ್ಟು ಕಾಠಿಣ್ಯದಿಂದ ವರ್ತಿಸಿದ್ದರು ಎಂದು ಹೇಳಿಕೊಂಡಾಗ ಸಣ್ಣವಳಾದ ನನಗೂ ಕಣ್ಣಂಚಿನಿಂದ ಹನಿ ಜಾರಿತ್ತು.ಇತ್ತೀಚೆಗೆ ಆಕೆ ಮಗಳ ಬಾಣಂತನ ಪೂರ್ಣಗೊಳ್ಳುವ ಮೊದಲೇ ಕರ್ತವ್ಯಕ್ಕೆ ಹಾಜರಾಗಲು ಕರೆಬಂದಿತ್ತು.ಇಂತಹ ಸಂದರ್ಭದಲ್ಲಿ ಹೆಣ್ಣು ಸಹಜವಾಗಿ ಒತ್ತಡಕ್ಕೊಳಗಾಗಿ ಹೈರಾಣವಾಗುತ್ತಾಳೆ.

       ಹೆಣ್ಣುಮಕ್ಕಳು ತಮ್ಮ ಆರೋಗ್ಯಕ್ಕಾಗಿ,ಸ್ವಾಸ್ಥ್ಯಪೂರ್ಣ ಬದುಕಿಗಾಗಿ ಕುಟುಂಬದಿಂದ, ಸಮಾಜದಿಂದ ಬಯಸುವುದೇನು..?

* ಆಕೆಗೆ ಅನಾರೋಗ್ಯ ಕಾಡಿದಾಗ ವಿಶ್ರಾಂತಿ ನೀಡುವುದು.ಮನೆಯ ಜವಾಬ್ದಾರಿಗಳಿಗೆ ಹೆಗಲು ಕೊಡುವುದು.ಸೂಕ್ತಸಮಯಕ್ಕೆ ವೈದ್ಯಕೀಯ ಚಿಕಿತ್ಸೆ ಕೊಡಿಸುವುದು.

*ಅವರವರ ವಸ್ತುಗಳನ್ನು ಅವರವರೇ ಜೋಪಾನ ಮಾಡುವುದು.ಎಲ್ಲದಕ್ಕೂ ಆಕೆಯನ್ನೇ ಬೊಟ್ಟು ಮಾಡಿ ಆರೋಪಿಸದಿರುವುದು.

*ಕೌಟುಂಬಿಕ ಗುಪ್ತ ವಿಷಯಗಳಲ್ಲಿ ಗೌಪ್ಯತೆಯನ್ನು ಕಾಪಾಡುವುದು.ಆಕೆಯ ಬಗ್ಗೆ ಯಾರಾದರೂ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೆ ಸರಿಯಾಗಿ ವಿಮರ್ಶಿಸಿ ಮುಂದುವರಿಯುವುದು.

* ಉದ್ಯೋಗದ ಸ್ಥಳದಲ್ಲಿ ಆಕೆಯ ತಾಯ್ತನದ ಕರ್ತವ್ಯಗಳಿಗಾಗಿ ಅಗತ್ಯವಾದ ಸಡಿಲಿಕೆಗಳನ್ನು ನೀಡುವುದು.

*ದಿನದ ಕೆಲಸವೆಲ್ಲ ಮಾಡಿದ ಗೃಹಿಣಿ ಸ್ವಲ್ಪ ಹೊತ್ತು ಮನರಂಜನೆಗಾಗಿ ಟಿವಿ ಮೊಬೈಲ್, ಲ್ಯಾಪ್ ಟಾಪ್ ಬಳಸಿದರೆ ಮೂದಲಿಕೆ ಬೇಡ.

*ಹೆತ್ತ ತಾಯಿ ಜನುಮಕೊಟ್ಟ ದೇವತೆಯಾದರೆ ಪತ್ನಿ  ಜೀವನಪರ್ಯಂತ ಬಾಳುಬೆಳಗುವ ದೇವತೆ ಎಂದು ಗೌರವಿಸುವುದು.

*ಗಂಡುಮಗುವನ್ನು ಎಷ್ಟು ಪ್ರೀತಿಸುತ್ತೀರೋ ಅಷ್ಟೇ ಹೆಣ್ಣುಮಗುವಿನ ಮೇಲೆಯೂ ಪ್ರೀತಿತೋರಿಸಿ.ಮನೆಕೆಲಸಗಳನ್ನು ಹೆಣ್ಣುಮಕ್ಕಳಂತೆ ಗಂಡು ಮಕ್ಕಳಿಗೂ ಕಲಿಸಿ.

* ತಂದೆತಾಯಿ ತಮ್ಮ ಮಗನನ್ನು ಪ್ರೀತಿಸುವಷ್ಟಲ್ಲದಿದ್ದರೂ ಅದರ ಅರ್ಧದಷ್ಟಾದರೂ ಪ್ರೀತಿ ಸ್ನೇಹವನ್ನು ಸೊಸೆಗೆ ಕೊಡಿ.

*ಮುಟ್ಟು ನಿಲ್ಲುವ ಹಂತದಲ್ಲಿ ಮಹಿಳೆಗೆ ಕುಟುಂಬದ ಕಾಳಜಿ ಅತ್ಯಗತ್ಯ.ತಾಯಿಯ ಆರೋಗ್ಯದ ಕಡೆಗೆ ಮಕ್ಕಳ ಗಮನವಿರಬೇಕು.ಪತಿಯೂ ಆ ಸಮಯದ ಹಾರ್ಮೋನ್ ವ್ಯತ್ಯಯವನ್ನು ಅರಿತುಕೊಂಡು ಪತ್ನಿಗಾಗಿ ತನ್ನ ಸಮಯವನ್ನು ಮೀಸಲಿಡಬೇಕು.
ಅತ್ತೆಯನ್ನು ಗೌರವಿಸುವ ಗುಣವನ್ನು  ಸೊಸೆಯಾಗಿ ಬಂದವರು ಬೆಳೆಸಿಕೊಳ್ಳಬೇಕು.


*ಗರ್ಭಧಾರಣೆ, ಹೆರಿಗೆ ,ಬಾಣಂತನದ ಸಂದರ್ಭದಲ್ಲಿ ಆಕೆಯ ಆರೋಗ್ಯದ ವಿಚಾರದಲ್ಲಿ ಪೂರ್ಣ ನಿಗಾ ವಹಿಸುವುದು.ಉತ್ತಮ ವೈದ್ಯರಲ್ಲಿ ತಪಾಸಣೆ ನಡೆಸುವುದು.ಹೆರಿಗೆಗೆ ಮುಂಚಿತವಾಗಿ ವೈದ್ಯರ ಸಲಹೆಯಂತೆ ಆಸ್ಪತ್ರೆಗೆ ದಾಖಲಿಸುವುದು.ದುಡ್ಡು ಉಳಿಸುವ ಸಲುವಾಗಿ ಹೆರಿಗೆ ನೋವು ಬಂದ ನಂತರ ಆಸ್ಪತ್ರೆಗೆ ಕರೆದೊಯ್ಯುವ ಯೋಜನೆ ದಯವಿಟ್ಟು ಬೇಡ.ಈ ಕಾರಣದಿಂದ ಹಲವಾರು ಸಹೋದರಿಯರು ಅಸುನೀಗಿದ್ದಾರೆ..

*ಆಕೆಯ ಆರೋಗ್ಯ ಏರುಪೇರಾದಾಗ ನಿಮ್ಮ ಪ್ರೀತಿ ಕಾಳಜಿ ಆಕೆಗೆ ಬೇಕು.ಪ್ರೀತಿಯೆಂಬ ಟಾನಿಕ್ ಸೇವಿಸಿ ಸಂತಸವೆಂಬ ಪೌಷ್ಟಿಕಾಂಶ ದೇಹಕ್ಕೆ ದೊರೆತು ನೆಮ್ಮದಿಯೆಂಬ ಕಳೆ ಆಕೆಯ ಮುಖದಲ್ಲಿ ಮೂಡಬೇಕು.


        ಹೆಣ್ಣೊಬ್ಬಳು ಮನೆಯಲ್ಲಿ ನಗುನಗುತ್ತಿದ್ದರೆ ಆ ಮನೆಯೇ ನಂದನವನ.ಮನೆಗೆ ಕಾಲಿಡುವ ಸೊಸೆಯನ್ನು ಮಗಳೆಂದು ಭಾವಿಸಿ ಅವಳ ಆರೋಗ್ಯ ನಮ್ಮ ಹೊಣೆ ಎಂದು ಭಾವಿಸಿರಿ.ಮಗ ಸೊಸೆ ಮೊಮ್ಮಕ್ಕಳು ಸಂತಸದಿಂದಿದ್ದರೆ ಅದನ್ನು ನೋಡಿ ಆನಂದಪಟ್ಟುಕೊಳ್ಳಿ.ತಾವೂ ಆ ಆನಂದವನ್ನು ಅನುಭವಿಸಿ.ಹೆಣ್ಣುಹೆಣ್ಣಿನ ಮಧ್ಯೆ ವಿರುದ್ಧವಾದ ಅನಾರೋಗ್ಯಕರ  ಪೈಪೋಟಿ ಬೇಡ.ಸಮಾನಾಂತರವಾಗಿ ಕುಟುಂಬವೆಂಬ ರಥದ ಗಾಲಿಗಳಂತೆ ಮುಂದುವರಿದರೆ ಆ  ಹೆಣ್ಣುಮಕ್ಕಳು ಮನಶ್ಶಾಂತಿಯಿಂದಿದ್ದು ಆರೋಗ್ಯವಂತರಾಗಿರುತ್ತಾರೆ. ಹೆಣ್ಣುಮಕ್ಕಳು ಮನೆಯ ಸೌಭಾಗ್ಯ..ಕಾಪಾಡೋಣ ಅವರ ಆರೋಗ್ಯ...


✍️.... ಅನಿತಾ ಜಿ.ಕೆ.ಭಟ್.
07-03-2020.



  Momspresso Kannada ದ #ಸಮಾನತೆಗಾಗಿ ನಾವೆಲ್ಲರೂ#ಸರಣಿಯ ಎರಡನೇ ಬರಹ...

No comments:

Post a Comment