Wednesday, 4 March 2020

ಸ್ವರಗಾನ ಸುಮ ಕಾವ್ಯ ಶ್ರೀ ನಾಯಕ್ ಆಜೇರು

ಗಂಡುಕಲೆಯಲ್ಲಿ ಮಿಂಚುತ್ತಿರುವ ಪ್ರತಿಭೆ ಸ್ವರ ಗಾನಸುಮ ಕಾವ್ಯಶ್ರೀ ನಾಯಕ್ ಆಜೇರು



         ಪ್ರತಿಭೆ ಎಂಬುದು ಕೇವಲ ಪುರುಷರ ಸ್ವತ್ತಲ್ಲ.ಸ್ತ್ರೀಯರೂ ಪ್ರತಿಭಾವಂತರು.ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಗುಣ ಹೆತ್ತವರಿಗೆ ಇದ್ದರೆ ಅದಕ್ಕೆ ತಕ್ಕಂತೆ ಶ್ರಮವಹಿಸಿ ಮುನ್ನುಗ್ಗುವ ಛಲ ತಾವೇ ಮೈಗೂಡಿಸಿಕೊಳ್ಳುತ್ತಾರೆ . ಮಹಿಳೆಯರು ಅಪರೂಪೆನೆಸಿದ, ಮಹಿಳೆಯರಿಗೆ ಕಠಿಣವೆನಿಸಿದ ಕ್ಷೇತ್ರಗಳಲ್ಲಿ ಇಂದು ಸ್ತ್ರೀಯರು ತಮ್ಮದೇ ಛಾಪನ್ನು ಮೂಡಿಸುತ್ತಾ ಮುಂದುವರಿಯುತ್ತಿರುವುದು ಅಭಿನಂದಿಸಬೇಕಾದ ಸಂಗತಿ.


      ಯಕ್ಷಗಾನವು ಗಂಡುಕಲೆಯೆಂದೇ ಪ್ರಸಿದ್ಧ.ಯಕ್ಷಗಾನದ ಸೊಗಡು ನಿಂತಿರುವು ಕಂಚಿನ ಕಂಠದಲ್ಲಿ , ಮಾತಿನ ಹಿಡಿತದಲ್ಲಿ,ಗಾಂಭೀರ್ಯದಲ್ಲಿ.. ಯಕ್ಷಗಾನದ ಸ್ತ್ರೀ ಪಾತ್ರವನ್ನೂ ಕೂಡ ಗಂಡಸರೇ ನಿಭಾಯಿಸುವುದು ಸರ್ವೇಸಾಮಾನ್ಯ.ಇಂತಹ ಗಂಡಸರ ಅಭೇದ್ಯಕೋಟೆಯಂತಿರುವ ಯಕ್ಷಗಾನದಲ್ಲಿ ಇಂದು ಮಹಿಳೆಯರು ಮಿಂಚುತ್ತಿದ್ದಾರೆ.ಅಂತಹವರಲ್ಲಿ ಒಬ್ಬರು ತೆಂಕುತಿಟ್ಟಿನ ಯಕ್ಷಗಾನ ಭಾಗವತಿಕೆಯಲ್ಲಿ ಪ್ರಸಿದ್ಧರಾದ ಸ್ವರ ಗಾನ ಸುಮ ಕಾವ್ಯ ಶ್ರೀ ನಾಯಕ್ ಆಜೇರು.ಈಕೆ ನನ್ನ ತವರೂರ ಪ್ರತಿಭೆ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ.


     ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಣಚಾ ಎಂಬ ಗ್ರಾಮದಲ್ಲಿ ಆಜೇರು ಎಂಬ ಪುಟ್ಟ ಹಳ್ಳಿಯ ಶ್ರೀಯುತ ಶ್ರೀಪತಿ ನಾಯಕ್ ಮತ್ತು ಉಮಾ ನಾಯಕ್ ಅವರ ಪುತ್ರಿ.ತಂದೆ ಶ್ರೀಪತಿ ನಾಯಕ್ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು.ನನ್ನ ಪ್ರಾಥಮಿಕ ಶಾಲಾ ಗುರುಗಳು ಇವರು.ನಾವು ವಿದ್ಯಾರ್ಥಿಗಳಾಗಿದ್ದಾಗ ಗುರುಗಳ ಕಂಠದಿಂದ ಯಕ್ಷಗಾನದ ಪದಗಳನ್ನು , ಹಾಡುಗಳನ್ನು ಕೇಳಿ ತಲೆದೂಗಿದ್ದೆವು. ವಿದ್ಯಾರ್ಥಿಗಳಿಗೂ ಹಾಡಲು ಮಾರ್ಗದರ್ಶನ ಮಾಡುತ್ತಿದ್ದರು.ಇವರು ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರಲ್ಲಿ ಯಕ್ಷಗಾನದ ಹಾಡುಗಾರಿಕೆಯನ್ನು ಅಭ್ಯಾಸ ಮಾಡಲು ತೆರಳುತ್ತಿದ್ದಾಗ ಮಗಳೂ ಜೊತೆಯಾಗುತ್ತಿದ್ದಳು.ಆಕೆ ತನ್ನ ಪಾಡಿಗೆ ತಾನೇ ಯಕ್ಷಪದಗಳನ್ನು ಹಾಡುತ್ತಿದ್ದಾಗ ಕೇಳಿಸಿಕೊಂಡ ಮಾಂಬಾಡಿಯವರು ಆಕೆಯನ್ನು ಹಾಡಲು ಪ್ರೋತ್ಸಾಹಿಸಿದರಂತೆ..ನಂತರ ತಂದೆಯ ಹಾಗೂ ಗುರುಗಳ ಪ್ರೋತ್ಸಾಹ ಮಾರ್ಗದರ್ಶನ ಆಕೆಯನ್ನು ವೇದಿಕೆಯೇರುವಂತೆ ಮಾಡಿತು.ಅಲ್ಲಿಂದ ನಂತರ ಆಕೆ ಹಿಂತಿರುಗಿ ನೋಡಿದ್ದಿಲ್ಲ.




       ಜನ ಆಕೆಯ ಕಂಠವನ್ನು ಮೆಚ್ಚಿ ಕೊಂಡಾಡಿದರು.ಮಗಳು ಯಕ್ಷಗಾನ ಭಾಗವತಿಕೆಯಲ್ಲಿ ಮುಂದೆ ಮುಂದೆ ಸಾಗುತ್ತಿದ್ದರೆ ತಂದೆಯವರು ನೆರಳಿನಂತೆ ಹಿಂಬಾಲಿಸಿ ಮಗಳ ಪ್ರತಿಭೆಗೆ ಬೆನ್ನೆಲುಬಾಗಿ ನಿಂತರು.ಗಂಭೀರವಾದ ಭಂಗಿ..ಕಂಚಿನ ಕಂಠ..ಮುಖದಲ್ಲಿ ಹಾಡಿಗೆ ತಕ್ಕಂತಹ ಭಾವ..ಇವುಗಳಿಂದ ಜನರಿಗೆ ಮತ್ತಷ್ಟು ಆಪ್ತರಾದರು.ಇಂದು ಅವರ ಯಕ್ಷಗಾನದ ಪದಗಳು ಕೋಟ್ಯಾಂತರ ಕನ್ನಡಿಗರ ಮನಗೆದ್ದಿವೆ.ಫೇಸ್ಬುಕ್ನಲ್ಲಿ  ಸಾಕಷ್ಟು ಹರಿದಾಡುತ್ತಿವೆ..ಯಕ್ಷಪದಗನ್ನಷ್ಟೇ ಅಲ್ಲದೇ ಭಾವಗೀತೆಗಳು,ಜನಪದಗೀತೆಗಳನ್ನು ಯಕ್ಷಗಾನದ ಶೈಲಿಯಲ್ಲಿ ಹಾಡಿ ನಮ್ಮನ್ನು ಮಂತ್ರಮುಗ್ಧರನ್ನಾಗಿಸಿದ್ದಾರೆ.ರಂಗ ಬಂದನೇ...ಪಾಂಡುರಂಗ ಬಂದನೇ... ಎಂದು ಹಾಡಿದ್ದನ್ನು ಕೇಳಿದರೆ ಕಣ್ಣ ಮುಂದೆ ರಂಗ ಕುಣಿಯುತ್ತಿದ್ದಾನೋ ಎಂಬಂತೆ ಭಾಸವಾಗುತ್ತಿದೆ.


     ಕಾವ್ಯ ಶ್ರೀ ನಾಯಕ್ ಸೌಮ್ಯ ಸ್ವಭಾವದವರು ಆದರೂ ಭಾಗವತಿಕೆಯಲ್ಲಿ ತಮ್ಮ ವ್ಯಕ್ತಿತ್ವವನ್ನು ತೋರಗೊಡುವುದಿಲ್ಲ.ಪಾತ್ರಗಳ ಸಂಭಾಷಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಅದಕ್ಕೆ ತಕ್ಕಂತೆ ತಮ್ಮ ಹಾಡುಗಾರಿಕೆಯನ್ನು ನಿಭಾಯಿಸುವಲ್ಲಿ ನಿಪುಣರು.ನವರಸಗಳನ್ನೂ ಬಹಳ ಸುಲಲಿತವಾಗಿ ಹೊರಹೊಮ್ಮಿಸುವ ಇವರಿಗೆ ಸ್ವರಗಾನ ಸುಮ ಎಂಬ ಬಿರುದು ತಕ್ಕುದಾದದ್ದು.ಸಹಸ್ರಾರು ಕಾರ್ಯಕ್ರಮಗಳನ್ನು ನೀಡಿದ ಇವರು ಇಂದು ಬಹು ಬೇಡಿಕೆಯ ಯಕ್ಷಕಲಾವಿದೆ.ಹಲವಾರು ಸಂಘ-ಸಂಸ್ಥೆಗಳು ಇವರನ್ನು ಗೌರವಿಸಿವೆ.


        ಹಗಲು ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾ ರಾತ್ರಿ ಯಕ್ಷಗಾನ ಕಲಾಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.ಉಪನ್ಯಾಸಕ ವೃತ್ತಿಯತ್ತ ವಾಲದೆ ಯಕ್ಷಕಲಾಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಎಳವೆಯಲ್ಲಿಯೇ ಮೂಲ್ಕಿಯ ಭವ್ಯಶ್ರೀ ಮಕ್ಕಳ ಮೇಳ,ಸುಳ್ಯದ ಮಕ್ಕಳ ಮೇಳ,ವಿಟ್ಲದ ಮಾಣಿಲ ಮಕ್ಕಳ ಮೇಳದಲ್ಲಿ ಕಲಾಸೇವೆಗೈದವರು. ಕಟೀಲುಮೇಳ, ಸುಂಕದಕಟ್ಟೆ ಮೇಳ, ಪೆರ್ಡೂರು ಮೇಳಗಳಲ್ಲೂ ಭಾಗವತಿಕೆಯಲ್ಲಿ ಪಾಲ್ಗೊಂಡಿದ್ದಾರೆ.ಸ್ವರಗಾನಸುಮ ಕಾವ್ಯ ಶ್ರೀ ನಾಯಕ್ ಆಜೇರು ಎಂಬ ಫೇಸ್ಬುಕ್ ಪೇಜ್ ನಲ್ಲಿ ಇವರ ಕಾರ್ಯಕ್ರಮದ ವಿವರಗಳನ್ನು ಪ್ರಕಟಿಸುತ್ತಿರುತ್ತಾರೆ.ಯೂಟ್ಯೂಬ್ ನಲ್ಲೂ ಅವರ ಯಕ್ಷವೈಭವವನ್ನು ನೋಡಿ ಕೇಳಿ ಆನಂದಿಸಬಹುದು..


        ನಮ್ಮ ಕರಾವಳಿಯ ಅಪ್ಪಟ ಗ್ರಾಮೀಣ ಪ್ರತಿಭೆ ಕಾವ್ಯ ಶ್ರೀ ನಾಯಕ್ ಆಜೇರು ಯಕ್ಷಗಾನ ಭಾಗವತಿಕೆಯಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಆಕೆಯ ಹೆಸರು ಜಗತ್ತಿನಾದ್ಯಂತ ಪಸರಿಸಲಿ..ಆಕೆಯ ಕಲಾಸೇವೆಗೆ ಶುಭಹಾರೈಸೋಣ..



✍️... ಅನಿತಾ ಜಿ.ಕೆ.ಭಟ್.
05-03-2020.


Momspresso Kannada ಕ್ಕಾಗಿ ಬರೆದ ಲೇಖನ..

   

No comments:

Post a Comment