Wednesday, 25 March 2020

ಸಂಕಷ್ಟಕರ ಯುಗಾದಿ




ಜಗದ ಜೀವದುಲ್ಲಾಸಕೆ
ಮತ್ತೆ ಬಂತು ಯುಗಾದಿ
ಚೈತ್ರ ಚಿಗುರನವಪಲ್ಲವಿ
ಸೌಗಂಧದಿ ತುಂಬಿ ಬೇಗುದಿ||೧||


ಹೊಂಗೆ ಮಾವು ತೂಗಿ ತಳಿರು
ಕುಣಿಯಿತಿಂದು ಹರುಷದಿ
ಹಬ್ಬುತಿರುವ ಕೊರೋನ
ಕೋವಿಡಿಗಿಲ್ಲ ನೋಡಿ ಔಷಧಿ||೨||

ಹಬ್ಬಕೆಂದು ರಂಗವಲ್ಲಿ
ಒಬ್ಬಟ್ಟಿನ ಹೂರಣ
ಒಬ್ಬೊಬ್ಬರಾಗಿ ಸಿಲುಕಿಕೊಂಡು
ಸಾಗುತಿದೆ ಹೋಮ ಮಾರಣ||೩||

ವಿಕಾರಿಯ ವಿಷಸೋಂಕಿಗೆ
ಬಲಿಯಾಗಿ ದೇಶ ತತ್ತರ
ಶಾರ್ವರಿಯ ಹೊಸಹೆಜ್ಜೆಯಲಿ
ಮೂಡಲಿ ದೇಹದೆಚ್ಚರ||೪||

ಜೀವದುಸಿರ ಒಸಗೆಯಿಟ್ಟು
ಬೇಡುವ ನವಸಂವತ್ಸರ
ಜಾಣಜನರೆ ಕಾಯ್ದುಕೊಳ್ಳಿ
ಮನುಜಮನುಜಗಂತರ||೫||

ಬೇವಿನಂತೆ ಬಂದೆರಗಿದ
ಮಾರಿಯಿಂದ ರಕ್ಷಿಸಿ
ಕಠಿಣವಾದ ಸಂಕಲ್ಪದಿಂದ
ಬೆಲ್ಲಸವಿಯ ಸೇವಿಸಿ||೬||

ಬೆವರು ಸುರಿಸಿ ಬೆಳೆದ ಪೈರು
ಕಣಜ ತುಂಬ ಸುಂದರ
ಹೊಸವಿಜಯಗೀತೆ ಬರೆದು
ಬಾಳು ಬೆಳಗಲಿ ಬಿದಿಗೆಚಂದಿರ||೭||

✍️... ಅನಿತಾ ಜಿ.ಕೆ.ಭಟ್
25-03-2020.

Momspresso Kannada ದಲ್ಲಿ ಇಂದಿನ ಪರಿಸ್ಥಿತಿಯಲ್ಲಿ ಯುಗಾದಿ ಎಂಬ ವಿಷಯದ ಕುರಿತು ಬರೆದ ಕವನ..





2 comments:

  1. ಚೆನ್ನಾಗಿದೆ... Corona da ವಿರುದ್ಧ ಎಚ್ಚೆತ್ತುಕೊಳ್ಳುವ ಸಂದೇಶವು ಇಷ್ಟ ಆಯ್ತು

    ReplyDelete
  2. ಧನ್ಯವಾದಗಳು 💐🙏

    ReplyDelete