Friday, 28 February 2020

ಜೀವನ ಮೈತ್ರಿ-ಭಾಗ ೩೦(30)





      ಸಂಜೆ ಕಿಶನ್ ಗೆ ಕರೆ ಮಾಡಿದ ಗಣೇಶ ಶರ್ಮ.ಕಿಶನ್ ಎಷ್ಟು ಬಾರಿ ಕರೆ ಮಾಡಿದರೂ ಫೋನ್ ಎತ್ತಲೇಯಿಲ್ಲ..ತಂದೆ ತಾಯಿ ಇಬ್ಬರೂ ಗಾಬರಿಯಾದರು."ನೋಡೋಣ ರಾತ್ರಿಯ ತನಕ ಕಾಯೋಣ ..."ಎಂದು ಸುಮ್ಮನಾದರು.

                        ****

          ಮೈತ್ರಿಯ ಕಾಲೇಜು ಮುಗಿಯಲು ಕೆಲವೇ ದಿನಗಳಿದ್ದವು.ಫ್ರೀ ಇದ್ದಾಗ ಗೆಳತಿಯರೆಲ್ಲ ಸೇರಿ ಬಾಯ್ತುಂಬಾ ಹರಟುತ್ತಿದ್ದರು..ಯಾರ್ಯಾರು ಮುಂದೆ ಓದುತ್ತಾರೆ..ಅಪ್ಪ ಅಮ್ಮ ಪರ್ಮಿಷನ್ ಕೊಡ್ತಾರೆ..ಇನ್ಯಾರಿಗೆಲ್ಲ ಮದುವೆ ಆಲೋಚನೆ ಇದೆ..ಮತ್ತ್ಯಾರಿಗೋ ಸೀರಿಯಲ್ ನಟನ ಪ್ರಪೋಸಲ್ ಬಂದಿರುವುದು..ಇನ್ಯಾರೋ ಲವ್ ಮಾಡಿ ಮುಂದೆ ಉದ್ಯೋಗ ದೊರೆತ ನಂತರ ಮದುವೆಯಾಗುವ ನಿರ್ಧಾರ ಮಾಡಿರುವುದು..ಇಂತಹುದೇ ವಿಷಯಗಳು ಮುನ್ನೆಲೆಯಲ್ಲಿ ಚರ್ಚೆಯಾಗುತ್ತಿದ್ದವು..ಯಾವಾಗಲೂ ಎಲ್ಲರೂ ಚರ್ಚಿಸುತ್ತಿದ್ದಾಗ ಕಿಶನ್ ನ ನೆನಪು ಬಂದು ಮೌನಿಯಾಗುತ್ತಿದ್ದಳು... ಆದರೆ ಇಂದು ಮಾತ್ರ ಅವಳಲ್ಲಿ ಅವಳದೇ ಆದ ಜೋಶ್ ಇತ್ತು.. ನಗುನಗುತ್ತಾ ಅಮೂಲ್ಯ ಸಮಯವನ್ನು ಕಳೆದಳು..

          ಕಾಲೇಜಿನಿಂದ ಬಂದ ಮೈತ್ರಿ ಎಂದಿನಿಂದ ಹೆಚ್ಚು ಲವಲವಿಕೆಯಿಂದ ಇದ್ದಳು.ಅವಳ ಮುಖಭಾವವನ್ನು ಗಮನಿಸಿದ ಮಹೇಶ್ ರೂಮಿನೊಳಗೆ ಬಂದು "ಬಂದಳೋ ಬಂದಳು ಗೆಳತಿ ಇಶಾ ಬಂದಳು.."ಎಂದು ರೇಗಿಸಿ ಹೊರ ನಡೆದ.. ಮೈತ್ರಿಗೆ ತಮ್ಮನ ಕೀಟಲೆಗೆ ನಗಬೇಕೋ ಕೋಪಿಸಿಕೊಳ್ಳಬೇಕೋ ತಿಳಿಯಲಿಲ್ಲ..ಆದರೂ ತಾನೂ ನಕ್ಕು ಮನಸು ಹಗುರಮಾಡಿಕೊಂಡಳು. ಕಿಶನ್ ತಂದೆಯ ಜೊತೆಗೆ ಮನೆಗೆ ಬಂದದ್ದೇ ಅವಳ ಪಾಲಿಗೆ ದೊಡ್ಡ ಉಡುಗೊರೆಯಾಗಿತ್ತು..



    ಅಜ್ಜ ಮೊಮ್ಮಗಳನ್ನು ಕರೆದು

"ಪುಳ್ಳಿ.. ಪರೀಕ್ಷೆ ಯಾವಾಗ ಆರಂಭವಾಗುವುದು " ಎಂದು ಕೇಳಿದರು..

      ಈ ಅಜ್ಜನಿಗೆ ಎಷ್ಟು ಸಲ ಹೇಳುವುದಪ್ಪಾ..ಮರೆತೇಬಿಡ್ತಾರೆ ಎಂದು ತನ್ನಲ್ಲೇ ಗೊಣಗಿಕೊಂಡ ಮೈತ್ರಿ.."ಇನ್ನು ಒಂದೇ ತಿಂಗಳು ಇರುವುದು ಅಜ್ಜಾ.."ಎಂದು ಹೇಳಿ ಬೇಗನೆ ಜಾಗ ಖಾಲಿ ಮಾಡಿದಳು.. ಇಲ್ಲದಿದ್ದರೆ ಅಜ್ಜ ಇನ್ನಷ್ಟು ಪ್ರಶ್ನೆಗಳನ್ನು ಕೇಳಲು ಆರಂಭಿಸುತ್ತಾರೆ ಎಂದು ಅರಿವಿತ್ತು ಅವಳಿಗೆ...


       ಮಂಗಳಮ್ಮ ಅಡುಗೆ ಮನೆಯಲ್ಲಿ ಕೆಲಸದಲ್ಲಿದ್ದರು.ಇದ್ದಕ್ಕಿದ್ದಂತೆ ಬಂದ ಭಾಸ್ಕರ ಶಾಸ್ತ್ರಿಗಳು ಫೋನ್ ಯಾವಾಗ ಹಾಳಾದ್ದು ಎಂದು ಕೇಳಿದರು..

"ಆಗ ಅತ್ತೆ ಹೇಳಿ ನನಗೆ ಗೊತ್ತಾದ್ದು.. ಅವರನ್ನೇ ಕೇಳಿ ಹೇಳುತ್ತಾರೆ.." ಎಂದುತ್ತರಿಸಿದರು..

ಹೆಂಡತಿಗೆ ನನ್ನ ಮೇಲಿನ ಕೋಪ ತಣಿಯಲಿಲ್ಲ ಎಂದು ಭಾಸ್ಕರ ಶಾಸ್ತ್ರಿಗಳು ಅರಿತರು..

"ಈ ಸಾರಿ ಮಾತ್ರ ರಿಪೇರಿ ಮಾಡಿಸುವುದು.. ಇನ್ನು ಹಾಳಾದರೆ ಮತ್ತೆ ಮೊಬೈಲ್ ಫೋನೇ ಬಳಸೋಣ..ಆಗದೇ.." ಎಂದಾಗ

ಮಂಗಳಮ್ಮ .."ಹೂಂ.."ಎಂದಷ್ಟೇ ಹೇಳಿ ನಿಲ್ಲಿಸಿದರು..

"ನಾಳೆ ಶಾಲೆಗೆ ಅರ್ಧ ದಿನ ರಜೆ ಹಾಕಿದ್ದೇನೆ.. ಪೇಟೆ ಕೆಲಸವಿದೆ.. ಮನೆಗೆ ಏನಾದರೂ ಸಾಮಾನು ಬೇಕಾದರೆ ಬರೆದಿಡು.." ಎಂದಾಗ

"ಹೇಳ್ತೇನೆ ಈಗಲೇ ಬರೆದುಕೊಳ್ಳಿ.". ಎಂದರು..

    ಮಂಗಳಮ್ಮ ಹೇಳುತ್ತಾ ಹೋದರು.. ಶಾಸ್ತ್ರಿಗಳು ಬರೆಯುತ್ತಾ ಹೋದರು.ಪಟ್ಟಿ ಉದ್ದವಾಯಿತು..
.."ನೀನೂ ಬರ್ತೀಯಾ ಪೇಟೆಗೆ.."

"ಯಾಕೆ.. ಇಷ್ಟನ್ನು ತರೋದಿಕ್ಕೆ ನಿಮ್ಮ ಕೈಲಿ ಆಗಲ್ವಾ.."

"ಹಾಗಲ್ಲ..ಮೈತ್ರಿಗೊಂದೋ ಎರಡೋ ಸೀರೆ ಕೊಂಡುಕೊಳ್ಳೋಣ ಅಂತ.."

"ಅದಕ್ಕೆ ಅವಳೇ ಆಗಬೇಕು...ಈಗಿನ ಫ್ಯಾಷನ್ ಗೆ ತಕ್ಕಂತೆ ಸೀರೆ ಆಯ್ಕೆ ಮಾಡಲು ನನಗೆ ಬರುವುದಿಲ್ಲ.."

"ಅವಳಿಗೆ ಕಾಲೇಜು ಇದೆಯಲ್ಲಾ.."

"ಅವಳ ಕೈಲೇ ದುಡ್ಡು ಕೊಡಿ.. ಕಾಲೇಜಿನಿಂದ ಬರುವಾಗ ಗೆಳತಿಯರ ಜೊತೆ ಹೋಗಿ ಕೊಂಡುಕೊಂಡು ಬರುತ್ತಾಳೆ..ಅವಳಿಗೂ ಸ್ವಲ್ಪ ವ್ಯವಹಾರ ಜ್ಞಾನ ಬರಲಿ..ನನ್ನ ಹಾಗೇ ಬರೀ ಮನೆ,ಊಟ ,ತೋಟ  ಇಷ್ಟೇ ಗೊತ್ತಿರುವುದು ಅಂತ ಆಗುವುದು ಬೇಡ..."

"ಬೇಡ.. ಅವಳನ್ನು ಒಬ್ಬಳನ್ನೇ ಕಳುಹಿಸಲು ನನಗೆ ಮನಸ್ಸು ಬರುವುದಿಲ್ಲ..ಇನ್ನೊಮ್ಮೆ ನೋಡೋಣ.."

"ನೀವು ಯಾವಾಗಲೂ ಹೀಗೇನೇ..ಒಂದು ಚೂರೂ ಸ್ವಾತಂತ್ರ್ಯ ಕೊಡುವವರಲ್ಲ.."

"ಅಲ್ವೇ... ಸ್ವಾತಂತ್ರ್ಯಕ್ಕೆ ನಾನೇನು ಕಡಿಮೆ ಮಾಡಿದ್ದೇನೆ.. ಸ್ವಾತಂತ್ರ್ಯ ಸಿಕ್ಕಿರುವುದಕ್ಕೇ ಲವ್ ಮಾಡಿ ಹೆಸರು ಕೆಡಿಸಲು ನೋಡಿರುವುದು.."

"ಅಲ್ಲಾ..ಅವಳನ್ನೇ ಏಕೆ ದೂಷಿಸ್ತೀರಿ ಅಂತ ನನಗರ್ಥ ಆಗ್ತಿಲ್ಲಪ್ಪಾ.. ಬಂದವರು ...ಇಬ್ಬರೂ ಲವ್ ಮಾಡಿದ್ದಾರೆ ಅಂತೇನಾದ್ರೂ ಹೇಳಿದ್ರಾ...ಇಲ್ವಲ್ಲಾ.."

"ಹೇಳದೇ ತಿಳಿದುಕೊಳ್ಳಬಹುದು ಅಂತಹದ್ದೆಲ್ಲ..."

"ಏನೇ ಹೇಳಿ.. ನನಗಂತೂ ಹುಡುಗ ಹಿಡಿಸಿದ್ದಾನೆ.."

"ಏನೋ... ನೋಡೋಣ..ಯಾರ ಕಡೆಯಿಂದ ಉತ್ತರ ಬರುತ್ತೆ ಅಂತ.. ನಾನಂತೂ ಈಗ ಯಾರ ಬಳಿಯೂ ಅವರ ಬಗ್ಗೆ ವಿಚಾರಿಸಲು ಹೋಗೋಲ್ಲ.."

"ವಿಚಾರಿಸಿಕೊಳ್ಳಬೇಕಾದವರು ನೀವು..ಕೈಕಟ್ಟಿ ಕುಳಿತುಕೊಳ್ಳಬೇಕಾದವರಲ್ಲ .."

"ಅವರೇ ಎಲ್ಲ ನಿರ್ಧರಿಸಿದ್ದಾರೆ ಎಂದ ಮೇಲೆ ಭಾರವು ಅವರ ಹೆಗಲ ಮೇಲೆಯೇ ಇರಲಿ.."

"ಈ ರೀತಿಯ ಹಠವೇ ನನಗಿಷ್ಟವಾಗದ್ದು...ಮಕ್ಕಳ ಮನಸ್ಸನ್ನು ಅರಿತು ಹಿರಿಯರು ನಡೆದರೆ ಬೆಲೆ.."

"ಏನಂತ ಕೇಳಲಿ... ಯಾರಲ್ಲಿ ಕೇಳಲಿ..ಕೇಳ ಹೊರಟರೆ ನಿಮಗೆ ಹುಡುಗನ ಪರಿಚಯ ಹೇಗೆ ಎಂದು ಕೇಳಿದರೆ ಹೇಳೋದೇನು.. ನನಗೆ ಬೇಗ ಸುಳ್ಳು ಹೇಳಲು ಬರುವುದಿಲ್ಲ.. ಪ್ರಾಮಾಣಿಕ... ನಾನು..."

"ನೀವೊಂದು ಜನವೇ ಮಾರಾಯ್ರೆ...ಅಲ್ಲ ಮಗಳನ್ನು ಮದುವೆ ಮಾಡಿ ಕೊಡುವಾಗ ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದರೆ...!!
ಅದು ಹೆತ್ತವರ ಜವಾಬ್ದಾರಿ... ಮಕ್ಕಳು ಒಂದು ಹೆಜ್ಜೆ ಮುಂದಿಟ್ಟರೂ ನಾವು ಬೇಸರಪಟ್ಟುಕೊಳ್ಳದೆ ನಮ್ಮ ಕರ್ತವ್ಯವನ್ನು ಮಾಡಿದರೆ ಚೆನ್ನ.."

"ಆದರೂ ನಾನಿಷ್ಟು ಮಗಳ ಬಗ್ಗೆ ಕೇರ್ ತೆಗೆದುಕೊಂಡರೂ ಈ ಒಂದು ಮಾತೂ ನನಗೆ ತಿಳಿಸದೆ..."

"ನೋಡಿ..ಅಂತಹ ಮಾತೆಲ್ಲ ಹಿಂದಿನದಾಯ್ತು...ಈಗ ಏನಿದ್ದರೂ ಕಾಲಕ್ಕೆ ತಕ್ಕ ಕೋಲ... ನೋಡಿ ಎರಡು ವರ್ಷಗಳ ಹಿಂದೆ ಚೇಲಡ್ಕ ರಾಮಣ್ಣ ಅದ್ದೂರಿಯಾಗಿ ಮಗಳ ಮದುವೆ ಮಾಡಿದ.. ನಾವೆಲ್ಲ ಹೋಗಿದ್ದೆವು.. ಅಲ್ವಾ... ಅರೇಂಜ್ಡ್ ಮ್ಯಾರೇಜ್..ಈಗ ಏನಾಗಿದೆಯಂತೆ ಗೊತ್ತಾ..."

"ಇಲ್ಲ..ಏನಾಗಿದೆಯಂತೆ.. ಡೈವೋರ್ಸಾ..."

"ಡೈವೋರ್ಸ್ ಆದ್ರೂ ಆಗ್ತಿತ್ತೇ...ಅದಕ್ಕೂ ಕಡೆಯಾಗಿದೆ..."

"ಏನಾಗಿದೆ ಅಂತಾದ್ರೂ ಹೇಳೇ.."

"ಅದೇ ರೀ..ಅವ ಮೆಡಿಕಲ್ ಓದುತ್ತಿದ್ದ ತಾನೇ ..ಎಂಡಿ .. ಅವನಿಗೆ ಏನೋ ಕೆಟ್ಟ ಚಾಳಿ  ಕೋರ್ಸ್  ಆರಂಭದಿಂದಲೂ ಇತ್ತಂತೆ..ಇವ್ರಿಗೆ ಗೊತ್ತಿಲ್ಲ...ನೆಂಟರಿಷ್ಟರಿಗೇನು ಗೊತ್ತು ಪಾಪ..ಕಲಿಯೋ ಹುಡುಗನ ಸಹಪಠ್ಯಚಟುವಟಿಕೆ ...!!..."



"ಹೂಂ.. ಹೌದು.."


"ಈಗ ಅದೆನೋ ಗುಣವಾಗದ ಖಾಯಿಲೆ ಅಂಟಿಕೊಂಡಿದೆಯಂತೆ ...ರಾಮಣ್ಣ ಮಗಳನ್ನು ತವರಿಗೆ ಕರ್ಕೊಂಡು ಬಂದಿದ್ದಾನಂತೆ..ಇವಳಿಗೂ ಅಂಟಿಕೊಂಡಿದೆಯಾ ಅಂತ ಆಗಾಗ ವೈದ್ಯಕೀಯ ಪರೀಕ್ಷೆ ಮಾಡಿಸಬೇಕಂತೆ..."

"ಹೌದಾ..."

"ಪಾಪ ರಾಮಣ್ಣನ ಮಗಳು..ನಂಗೆ ಕೇಳಿ ಬೇಸರ ಆಯ್ತು..ಏನೂ ತಪ್ಪು ಮಾಡದ ಹುಡುಗಿಗೆ ಹೀಗಾಯ್ತಲ್ಲಾ..ರಾಮಣ್ಣ ತಾನೇ ಮುಂದೆ ನಿಂತು ಹುಡುಗನನ್ನು ಹುಡುಕಿ ಮದುವೆ ಮಾಡಿದ್ರೂ ಹೀಗಾಯ್ತಲ್ಲಾ ಅಂತಾ ನೊಂದ್ಕೊಂಡಿದಾನಂತೆ..."

"ಯಾರೇ..ಇದೆಲ್ಲ ನಿನಗೆ ಹೇಳಿದ್ದು.."

"ಮೊನ್ನೆ ನನ್ನ ತಂಗಿ ಹೇಳಿದ್ಲು ರೀ..."

      ಹೆಂಡತಿಯ ಮಾತನ್ನು ಕೇಳಿದ ಭಾಸ್ಕರ ಶಾಸ್ತ್ರಿಗಳು ಸ್ವಲ್ಪ ಚುರುಕಾದರು.. ಕಿಶನ್ ಹಾಗೂ ಕೇಶವ್ ಇಬ್ಬರ ಬಗ್ಗೆಯೂ ನಾನು ಇನ್ನೂ ಸ್ವಲ್ಪ ತಿಳಿದುಕೊಳ್ಳಬೇಕು..
ನನ್ನ ಮಗಳ ಬಾಳು ಹಾಳಾಗಬಾರದು ... ಎಂದು ನಿರ್ಧರಿಸಿದರು...

   ಮಂಗಳಮ್ಮ ತನ್ನ ಮೆದುವಾದ ಬೆಣ್ಣೆಯಂತಹ ಮಾತಿನಿಂದ ಗಂಡನನ್ನು ನಯವಾಗಿ ತಿದ್ದಿ ಸರಿದಾರಿಗೆ ತಂದರು..

                  *****


        ಕಿಶನ್ ಆಫೀಸಿನಿಂದ ಮನೆಗೆ ಬರುತ್ತಿರುವಾಗ ಅವನಿಗೇಕೋ ಮನೆಯವರ ನೆನಪು ಆಗುತ್ತಿದ್ದಿತು .. ಹೋಂ ಸಿಕ್ ಇರಬಹುದು.. ಎರಡು ದಿನ ಮನೆಯಲ್ಲಿ ಕಳೆದು ಬಂದ ಕಾರಣ ಇರಬಹುದು ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡ.. ರೂಮಿಗೆ ಬಂದು ಫ್ರೆಶ್ ಆಗಿ ನಂತರ ಅಡುಗೆ ಮಾಡಿ ಸುಂದರ್ ಜೊತೆಗೆ ಉಣ್ಣಲು ಕುಳಿತ..ಬಟ್ಟಲಿನ ಬದಿಗೆ ಅಮ್ಮ ಕೊಟ್ಟಿದ್ದ ಒಣಕೊಬ್ಬರಿ ಚಟ್ನಿಯನ್ನು ಬಡಿಸಿದ..ಆಗ ಸುಂದರ್ ನ ಫೋನ್ ರಿಂಗಾಯಿತು.ಎದ್ದು ಹೋಗಿ ಫೋನ್ ಎತ್ತಿದವನು..."ಇಲ್ಲಿಯೇ ಇದ್ದಾನೆ.. ಕೊಡ್ತೀನಿ ಒಂದು ನಿಮಿಷ.."ಎಂದಾಗ ಯಾರಾಗಿರಬಹುದು ಎಂದು ಕುತೂಹಲ ಕಿಶನ್ ಗೆ ಇತ್ತು..

"ಓಹ್.. ಅಪ್ಪಾ..."

"ಏನೋ...ಪೋನೇ ತೆಗೀತಿಲ್ಲ.."

"ಹೌದಾ.. ನೀವು ಯಾವಾಗ ಫೋನ್ ಮಾಡಿದ್ರಿ ಅಪ್ಪಾ..."

"ಆಗಿನಿಂದಲೇ ಮಾಡ್ತಾ ಇದೀವಿ ಕಣೋ.. ಹೋಗ್ತಾ ಇಲ್ಲ..."

"ಏನಾದ್ರೂ ಅರ್ಜೆಂಟ್ ಹೇಳೋದಿತ್ತಾ.."

ಎಂದು ಕೇಳಿದವನಿಗೆ ...ಅಪ್ಪ ಇವತ್ತು ನನ್ನ ಮತ್ತು ಮೈತ್ರಿಯ ಜಾತಕ ತೋರಿಸಲು ಹೋಗುತ್ತಾರೆ ಎಂದು ತಿಳಿದಿರಲಿಲ್ಲ...

"ನೀನು ನಿನ್ನ ಮೊಬೈಲ್ ಸರಿಯಾದ ಮೇಲೆ ಮಾಡು..ಹುಷಾರಾಗಿದ್ದೀಯಾ... ತಾನೇ"

"ಹೂಂ..ಚೆನ್ನಾಗಿದ್ದೀನಿ.. ಬಾಯ್.. "ಎಂದನು..

ಫೋನ್ ಏನಾಗಿದೆ ಎಂದು ನೋಡಿದ..ಹೋ..ಹೌದಲ್ಲ ಡೆಡ್ ಆಗಿದೆ.. ಯಾಕೆ ಹೀಗಾಗಿದೆ..ಆದರೂ ಅಮ್ಮ ಅಪ್ಪ ನನ್ನನ್ನು ನೆನೆಸಿಕೊಂಡದ್ದು ತನಗೆ ಆರನೇ ಇಂದ್ರಿಯ ತಿಳಿಸಿದೆ..ಅದೇಕೋ..ಆಗಲೇ ಮನೆಯವರ ನೆನಪಾಗಿದ್ದು ಅದಕ್ಕೇ ಇರಬೇಕು ಎಂದುಕೊಂಡು ಊಟಮಾಡಿದ..


                   *****

ಬಾರಂತಡ್ಕದ ಕೇಶವ್... ಶಾಸ್ತ್ರಿಗಳ ಕುಟುಂಬದ ಹಿಂದೆ ಬಿದ್ದ..ತನ್ನ ಗೆಳೆಯರ ಮೂಲಕ ಭಾಗವತ ವೆಂಕಟ್ ನ ಪರಿಚಯ ಮಾಡಿಕೊಂಡನು..ತನ್ನ ಉದ್ದೇಶ ಈಡೇರಿಸಿಕೊಳ್ಳಲು ಇವನೇ ಸರಿಯಾದ ವ್ಯಕ್ತಿ ಎಂದು ನಿರ್ಧರಿಸಿದನು.


     ಮುಂದುವರಿಯುವುದು...

✍️.... ಅನಿತಾ ಜಿ.ಕೆ.ಭಟ್.
29-02-2020.













ನೀ ಕೊಟ್ಟ ಮಾತ ಮರೆತಿಲ್ಲ ನಾನು



        "ಸಾವಿತ್ರೀ.....ಇದೇ...ಇದೇ ನಿನ್ನ ಮುಗ್ಧ ನಗೆಗೆ ನಾನಂದು ಸೋತಿದ್ದು.ನಿನ್ನ ಕಣ್ಣಲ್ಲಿ ಅದೆಂತಹ ಸೆಳೆಯುವ ಶಕ್ತಿಯಿದೆ..!!"

"ಹ್ಹ ಹ್ಹ ಹ್ಹಾ...ರೀ..."

          "ಇತ್ತ ಬಾರೇ...ನನ್ನ ಅದೃಷ್ಟದೇವತೆ ಜೊತೆ ಎಷ್ಟು ಮಾತಾಡಿದ್ರೂ ಕಮ್ಮೀನೇ ಅಂತನಿಸುತ್ತೆ..."

         "ರೀ...ನಂಗೂ ನಿಮ್ಮ ಈ ತುಂಟತನ  ಅದೆಷ್ಟು ಹಿಡಿಸಿ ಹೋಗಿತ್ತು.. ಗೊತ್ತಾ...ಇದ್ದರೆ ಇಂತಹ ವ್ಯಕ್ತಿಯಂತಹ ಗೆಳೆಯನಿರಬೇಕು ಎಂದು ಬಯಸಿದ್ದೆ."

         "ಸಾವಿತ್ರೀ...ನಾನಂದು ಚೇತನಾ ಆಶ್ರಮಕ್ಕೆ ಬೇಕಾದ ವಸ್ತುಗಳನ್ನು ಕೊಂಡೊಯ್ಯಲು ಮುಂದಾಗಿ ಬರುತ್ತಿದ್ದುದೇ ನಿನ್ನನ್ನು ನೋಡಿ ಕಣ್ತುಂಬಿಸಿಕೊಳ್ಳುವ ಸಲುವಾಗಿಯೇ .. ಉದ್ದ ಲಂಗದಾವಣಿ, ಉದ್ದನೆಯ ಕಪ್ಪಾದಜಡೆ, ಹೊಳಪಿನ ಬಟ್ಟಲು ಕಣ್ಣುಗಳು,ಎಳಸಾದ  ಬೆಣ್ಣೆನುಣುಪಿನ ಗಲ್ಲ ,ಮುಖದ ಮೇಲೆ  ಆರದ ಮಂದಹಾಸ ಇವೆಲ್ಲ ನನ್ನ ಹೃದಯವನ್ನು ಕಸಿದಿದ್ದವು..ನಿನ್ನ ತಾಯಿಯ ಅಕ್ಕರೆಯ ನುಡಿಯನ್ನು ಆಲಿಸಲು ನನಗೆ ಬಹಳ  ತವಕ .ಅವರನ್ನು ನನ್ನ ತಾಯಿಯ ಸ್ಥಾನದಲ್ಲಿ ಕಲ್ಪಿಸಿಕೊಂಡಿದ್ದೆ."


           "ಚೇತನಾ ಆಶ್ರಮದಿಂದ ಸಾಮಾನಿಗಾಗಿ ಬರುತ್ತಿದ್ದ ಹುಡುಗರಲ್ಲಿ ನಿಮ್ಮನ್ನು ಕಂಡರೆ ನನಗೊಂದು ಸಮಾಧಾನ,ಏನೋ ಹೇಳಲಾಗದ ಮನದ ಕುಣಿತ..ನಿಮ್ಮ ಕುಡಿನೋಟಕ್ಕೆ ನಾ ಸೋತಿದ್ದೆ.. ನೀವು ಮಾತನಾಡಲೆಂದು ಬಳಿ ಬಂದರೆ ನಾ ಲಜ್ಜೆಯಿಂದ ಕಣ್ತಪ್ಪಿಸಿಕೊಳ್ಳುತ್ತಿದ್ದೆ."


        "ಬೇಸಿಗೆ ರಜೆಯಲ್ಲಿ ನಮ್ಮೂರ ಜಾತ್ರೆಯಲ್ಲಿ ನಿನಗೊಂದು ಸುಂದರವಾದ ಜುಮುಕಿ ಕೊಡಿಸಿ ..ಏನೋ ಮಹಾನ್ ಸಾಧನೆ ಮಾಡಿದವನಂತೆ ಬೀಗಿದ್ದೆ.."

       " ಅದನ್ನು ನಾನು ತೊಟ್ಟು ನಮ್ಮ ಬೀದಿಯ ತುಂಬಾ ಓಡಾಡಿದ್ದೆ.ಜುಮುಕಿ ಕೆನ್ನೆಗೆ ಒರೆಸಿ ಕಚಗುಳಿಯಿಟ್ಟಾಗ ನೀವೇ ಮನಸಿನಲ್ಲಿ ತುಂಬಿರುತ್ತಿದ್ದಿರಿ."

       "ಆ ಮುತ್ತಿನ ಜುಮುಕಿ ತೊಟ್ಟು ನೀನು ಸುಂದರವಾಗಿ ಕಾಣುತ್ತಿದ್ದೆ.ನಿನ್ನಂದಕ್ಕೆ ಮೆರುಗು ಕೊಟ್ಟಿದ್ದ ಜುಮುಕಿಗೆ ಅಂದು ನಾಲ್ಕಾಣೆ ತೆತ್ತಿದ್ದೆ.ಅಂದಿಗೆ ಅದೇ ದೊಡ್ಡ ಮೊತ್ತ.ಜುಮುಕಿ ಚೆಲ್ವಿಯ ಬಗ್ಗೆ ರಂಗುರಂಗಿನ ಕನಸು ಕಂಡಿದ್ದೆ."


        "ಜುಮುಕಿ ಎಲ್ಲಿಂದ ಬಂತು..? ಎಂಬ ಅಮ್ಮನ ಪ್ರಶ್ನೆಗೆ ನಿನಗೆ ಹೇಳದೆ ನಾಲ್ಕಾಣೆ ಎಗರಿಸಿ ಜಾತ್ರೆಯಲ್ಲಿ ಕೊಂಡೆ ಎಂದು ಸುಳ್ಳು ಹೇಳಿ ಅಮ್ಮನನ್ನು ಓಲೈಸಿದ್ದೆ."

        "ಕೆಂಪು ಲಂಗ ದಾವಣಿಯಲ್ಲಿ ನೀನು ನಮ್ಮ ಶಾಲೆಯ ವಾರ್ಷಿಕೋತ್ಸವ ದಲ್ಲಿ ನೃತ್ಯ ಮಾಡಿದಾಗ ನನ್ನ ಕಣ್ಣಿಗಂತೂ ದೇವತೆಯಂತೆ ಕಂಡಿದ್ದೆ.."

        "ಹಾಂ.. ವಾರ್ಷಿಕೋತ್ಸವದ ಪಾತ್ರವನ್ನು ನೆನಪಿಸಿಕೊಂಡು ಈಗ ಹೀಗೆ ನೋಡ್ತೀರೇನ್ರೀ..!!!! .ಹ್ಮೂಂ... ನಾನು ಪುಣ್ಯ ಮಾಡಿದ್ದೆ ಈ ಭಾಗ್ಯವನ್ನು ಅನುಭವಿಸೋಕೆ.. ಬೇಡರ ಕಣ್ಣಪ್ಪ ನಾಟಕದಲ್ಲಿ ನೀವು ಮಾಡಿದ ಕಣ್ಣಪ್ಪನ ಪಾತ್ರ ನನಗೀಗಲೂ ಕಣ್ಣಿಗೆ ಕಟ್ಟಿದಂತಿದೆ.. ಅದೇನು ವಾಗ್ಝರಿ, ಕಣ್ಣಿನಲ್ಲಿ ಪ್ರಖರತೆ... ಈಗಲೂ ಬದಲಾಗಿಲ್ಲ ಆ ನೋಟ..."



     "ಒಂದು ದಿನ... ನಾನು ನಿನ್ನ ನೋಡುವ ಕಾತರದಿಂದ ಆಶ್ರಮಕ್ಕೆ ಸಕ್ಕರೆ ಕೊಂಡೊಯ್ಯುವ ನೆಪದಲ್ಲಿ ಬಂದಿದ್ದೆ.ನಿನ್ನನ್ನು ಕಾಣದೆ ನಿಮ್ಮ ತಾಯಿಯವರಲ್ಲಿ ಕೇಳಲು ಧೈರ್ಯ ಸಾಲದೆ ಪೆಚ್ಚುಮೋರೆಯಿಂದ ಹಿಂದಿರುಗಿದ್ದೆ.ಎಲ್ಲರೂ ಏನಾಯ್ತೋ ವೆಂಕಟೇಶ ...? ಎಂದು ಕೇಳಿದರೂ ಹೇಳಲಾರದೆ ಒಳಗೊಳಗೇ ಅತ್ತಿದ್ದೆ.."


     "ಅಂದು ಅಮ್ಮ ಪರಿಸ್ಥಿತಿಯ ಕೈಗೊಂಬೆಯಾಗಿದ್ದಳು.ಎಳವೆಯಲ್ಲೇ ತೀರಿಹೋದ ಪತಿ, ಮಡಿಲಲ್ಲಿ ನಾನೂ ಸೇರಿದಂತೆ ಮೂವರು ಮಕ್ಕಳು.ನಾನು ಹಿರಿಯವಳಾದ್ದರಿಂದ ನನ್ನ ಜವಾಬ್ದಾರಿ ಬೇಗ ಮುಗಿಯಲಿ ಎಂಬ ಆತುರ..ಹಿರಿಯರ ಒತ್ತಡಕ್ಕೆ ಅಮ್ಮ ಮಣಿಯಲೇಬೇಕಾದ ಪರಿಸ್ಥಿತಿ."


    "ನಿನ್ನ ನೆನಪನ್ನೇ ಕೆದಕಿ ಕುಳಿತ ನನ್ನ ಮನಸ್ಸಂತೂ ವಿರಹದ ವೇದನೆಯನ್ನು ತಾಳಲಾರದೆ ಸೋತುಸುಣ್ಣವಾಯಿತು.ನಾನು ಮನಸಾರೆ ಆರಾಧಿಸಿದ ಪುಟ್ಟ ದೇವಿ ಎಲ್ಲಿ ಹೋದಳೆಂದು ಮೂರುದಿನಗಳ ಬಳಿಕ ನನಗೆ ತಿಳಿದಾಗ ಎದೆ ಬಿರಿಯುವಂತೆ ಅತ್ತಿದ್ದೆ."

    "ಯಾವುದೂ ನಮ್ಮ ಕೈಯಲ್ಲಿರಲಿಲ್ಲ.ಅಜ್ಜ ಅಜ್ಜಿ  ಹೇಳಿದಂತೆ ಜೀವನ.. ಒಪ್ಪದಿದ್ದರೆ ಪುಟ್ಟ ಆಂಗಡಿಯೂ ಅವರ ಪಾಲಾದರೆ ಕೂಳಿಗೇನು ಮಾಡಲಿ... ? ಎಂಬ ಭಯ ಅಮ್ಮನಿಗೆ. ಅದಕ್ಕೇ..ಅಜ್ಜ ಅಜ್ಜಿಯ ಆಸೆಯಂತೆ..ಅವರ ಕುರುಡ ಮಗನ ಬಾಳು ಬೆಳಗುವ ವಧುವಾಗಬೇಕಾಯಿತು.. ಅಮ್ಮ ನನಗೆ ಈ ವಿಷಯ ಮೊದಲು ತಿಳಿಸಿದಾಗ ನಾ ಒಲ್ಲೆ ಅಂದಿದ್ದೆ.. ನಾನು ಹೇಳಿದಷ್ಟು ಕೇಳು.ಎಂದಷ್ಟೇ ಹೇಳಿ ಕಣ್ಣಲ್ಲೇ ನನ್ನನ್ನು ಗದರಿದ ಅಮ್ಮ..ಹಿತ್ತಲ ಕಡೆಗೆ ನಡೆದು ಮರದ ಗಂಟಿಯ ಮೇಲೆ ಕುಳಿತು ಕಣ್ಣೀರುಸುರಿಸುತ್ತಾ  ಬಣ್ಣ ಕಳೆದು ಮಸುಕಾದ ತನ್ನ ಸೀರೆಯಂಚಲ್ಲಿ ಕಣ್ಣೀರೊರೆಸಿಕೊಂಡಿದ್ದಳು. ಅವಳ ಕಾಳಜಿ,ಮಮತೆಯ ಭಾವ ನನ್ನ ಕಂದನಿಗೆ ಇಂತಹಾ ಬಾಳು ಬೇಡವೆಂದರೂ ಆಕೆ ಸಂದರ್ಭದ ಕೈಗೊಂಬೆಯಾಗಿದ್ದಳು.ರೀ..."

        "ಸಾವಿತ್ರೀ...ನಿನ್ನಮ್ಮನ ಕಷ್ಟ...ಅದು ನನಗೂ ಅರ್ಥವಾಗಿತ್ತು...
ನನ್ನ ದುಃಖ ನನ್ನನ್ನು ಆ ಊರಿನಲ್ಲಿ ನಿನ್ನನ್ನಗಲಿ ಇರಲು ಬಿಡಲೇಯಿಲ್ಲ.ದೂರದ ಮೈಸೂರಿಗೆ ಬಂದು ಓದನ್ನು ಮುಂದುವರಿಸಿದೆ.. ನಿನ್ನ ಬಾಳು ಚೆನ್ನಾಗಿರಲಿ ಎಂದು ನನ್ನ ಮನಸ್ಸು ಬೇಡುತ್ತಿತ್ತು."


         "ಎಳವೆಯಲ್ಲೇ ನನ್ನ ವಿವಾಹವೇನೋ ಆಯಿತು.ಆದರೆ  ಐದು ವರ್ಷಗಳಿಗೊಮ್ಮೆ ನಡೆಯುವ ಊರದೇವಿಯ ಜಾತ್ರೆಯಲ್ಲಿ ನವದಂಪತಿಯು ದೇವಿಗೆ ಪೂಜೆ ಸಲ್ಲಿಸಿದ ಮೇಲೆಯೇ ದಾಂಪತ್ಯ ಜೀವನಕ್ಕೆ ಕಾಲಿಡುವ ಸಂಪ್ರದಾಯ ಆ ಊರಿನದು.ಅಲ್ಲಿವರೆಗೆ ಮನೆಕೆಲಸ, ಮುಸುರೆ ತಿಕ್ಕುವುದು, ಶಾಲೆಗೆ ತೆರಳುತ್ತಿದ್ದ ನನ್ನಜ್ಜಿಯ ಪುಟ್ಟ ಮಕ್ಕಳ ಬಟ್ಟೆ ಒಗೆಯುವ ಕೆಲಸ..ಮಾಡುವ ಜವಾಬ್ದಾರಿ..ನನ್ನಜ್ಜಿ ನನ್ನಮ್ಮನ ಮದುವೆಯಾದ ಮೇಲೂ ಹಡೆದಿದ್ದರು.. ಮನೆತುಂಬ ಮಕ್ಕಳಿದ್ದ ಕಾಲವದು.. ಕೆಲಸ ಮಾಡಿ ಕೈಕಾಲು ನೋಯುತ್ತಿತ್ತು..ಆಗಲ್ಲವೆಂದರೆ ಅಜ್ಜ ನಾಲ್ಕು ಬಾರಿಸಲೂ ಹಿಂದೆಮುಂದೆ ನೋಡುತ್ತಿರಲಿಲ್ಲ."

       "ನಿನ್ನ ತಾಯಿ ಒಂದು ದಿನ ನಿನ್ನ ಬಗ್ಗೆ ಹೀಗೆ ಯಾರಲ್ಲೋ ನೋವಿನಿಂದ ಹೇಳಿದ್ದು ನನ್ನ ಕಿವಿಗೂ ಬಿದ್ದಿತ್ತು ಕಣೇ...ನಿನ್ನನ್ನು ಕಾಣದ ನನ್ನ ಹೃದಯ ಒಂಟಿತನದಿಂದ ಭಾರವಾಗಿ .. ಓದಿ ನೌಕರಿ ಗಳಿಸಬೇಕೆಂಬ ಹಠಕ್ಕೆ ಬಿದ್ದಿತು.ನಿಮಗೆ ಹೆಣ್ಣುಮಕ್ಕಳಿಗೆ ನಿರಾಸೆಯನ್ನು ಮರೆತು,ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಗಟ್ಟಿ ಮನಸ್ಸಿನಿಂದ ಜೀವಿಸುವ ಗುಣ ಹುಟ್ಟಿನಿಂದಲೇ ಬರುತ್ತದೆ.ಆದರೆ ನಾವು ಗಂಡಸರು ಹತಾಶೆಯಿಂದ ಹೊರಬರಲು ಪರದಾಡುತ್ತೇವೆ.ಹತಾಶೆಯು ನಮ್ಮಲ್ಲಿ ದ್ವೇಷವನ್ನೋ, ಸೇಡು ತೀರಿಸುವ ಗುಣವನ್ನೋ,ಕೆಟ್ಟ ಕೆಲಸಕ್ಕೆ ಕೈಹಾಕುವ ಮನಸ್ಥಿತಿಯನ್ನೋ, ದುಶ್ಚಟಗಳಿಗೆ ಬಲಿಯಾಗುವ ದುರ್ಬಲ ವ್ಯಕ್ತಿತ್ವವನ್ನು,ಹಠವನ್ನೋ ಬೆಳೆಸುತ್ತದೆ.
ಸಾವಿತ್ರೀ... ನನ್ನೊಳಗೆ ಮೂಡಿದ ಹಠದಿಂದಲೇ ಶಿಕ್ಷಕರ ತರಬೇತಿಯನ್ನು ಪಡೆದೆ.ನಮ್ಮೂರಿನ ಸಮೀಪದ ಪುಟ್ಟ ಹಳ್ಳಿಯಲ್ಲಿ ಉದ್ಯೋಗ ದೊರೆಯಿತು..ಮೊದಲ ಸಂಬಳ ಸಿಕ್ಕಾಗಲಂತೂ ನೀನು ಬಹಳ ನೆನಪಾಗಿದ್ದೆ."


   "ನಂಗೂ ಭಾಳ ನಿಮ್ಮ ನೆನಪಾಗುತ್ತಿತ್ತು.. ಕೆಲವು ಬಾರಿ ತವರಿಗೆ ಹೋಗಿ ಬರಲೇ..?  ಎಂದು ಕಣ್ತುಂಬಿಕೊಂಡು ಒಪ್ಪಿಗೆ ಕೇಳಿದ್ದೆ. ಆದರೆ ತವರಿಗೆಂದು ಬರಲೂ ಬಿಡದ ಅತ್ತೆ ಮಾವ....
ಒಂದು ದಿನ ಕುರುಡರಾಗಿದ್ದ ಪತಿ ತೋಟದ ಕೆಲಸಕ್ಕೆ ಎಲ್ಲರೊಂದಿಗೆ ತೆರಳಿದ್ದರು.ಜೊತೆಯಲ್ಲಿರುವವರು ಹೇಳಿದಂತೆ ಸಣ್ಣಪುಟ್ಟ ಸಹಾಯ ಮಾಡುತ್ತಿದ್ದರು. ವಾಪಸಾಗುತ್ತಿದ್ದಾಗ ಕಣ್ಣುಕಾಣದ ಪತಿ ನಿಧಾನವಾಗಿ ಹಿಂದೆ ಬರುತ್ತಿದ್ದರು.ಇತರರೆಲ್ಲ ಮುಂದೆ ಸಾಗಿದ್ದರು.ಪತಿ ಕಾಲು ಮುಗ್ಗರಿಸಿ ಕೆರೆಗೆ  ಬಿದ್ದುಬಿಟ್ಟರು. ಕೆರೆಗೆ ಬಿದ್ದಿರುವುದು ಯಾರ ಅರಿವಿಗೆ ಬರಲಿಲ್ಲ.ಏಕೆ ಮನೆಗೆ ಬರಲಿಲ್ಲ...?  ಎಂದು ಅರಸುತ್ತಿದ್ದಾಗ ಸಂಶಯ ಬಂದು ನೋಡಿದಾಗ ತಿಳಿಯಿತು.. ಆದರೆ...ಆಗಲೇ.. ಪ್ರಾಣಪಕ್ಷಿ ಹಾರಿ ಹೋಗಿತ್ತು."


       "ಹೂಂ..ಆ ಸಮಯಕ್ಕೇ ನನಗೆ  ಆ ಊರಿಗೆ ವರ್ಗವಾಗಿತ್ತು. ಶಾಲಾ ಶಿಕ್ಷಕನಾದ ನನಗೆ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡುವ ಅಭ್ಯಾಸ ಜೋರಾಗಿತ್ತು.ನನ್ನ ಕಿವಿಗೆ ಕುರುಡನೊಬ್ಬ ಕೆರೆಗೆ ಬಿದ್ದು ಅಸುನೀಗಿದ ಸುದ್ದಿ ತಲುಪಿತ್ತು.ನನ್ನ ಬುದ್ಧಿ ಜಾಗೃತವಾಯಿತು."

          "ಪತಿಯೊಂದಿಗೆ ಪ್ರಸ್ತದ ಶಾಸ್ತ್ರವೂ ನಡೆದಿಲ್ಲ.ಅದಕ್ಕೂ ಮುನ್ನವೇ ನನಗೆ ವಿಧವೆಯ ಪಟ್ಟ ದೊರಕಿತ್ತು.ಎಲ್ಲರ ಮಾತುಗಳೂ ಇರಿಯುತ್ತಿದ್ದವು.ಮೂಕವಾಗಿದ್ದೆ.ನನ್ನೊಂದಿಗೆ ನನ್ನ ತಾಯಿಗೂ ಕೆಟ್ಟ ಪದಗಳು ಕೇಳಬೇಕಾಗಿ ಬಂದಿತ್ತು.ತಾಯಿಯಂತೆ ಮಗಳೂ ವಿಧವೆ..
ತಾಯಿಮಗಳಿಬ್ಬರ ಕಾಲ್ಗುಣವೂ ಹಾಳು ಎಂದು ಜರೆದಾಗ ಹಿಂಡಿಹಿಪ್ಪೆಯಾಗಿದ್ದೆ.. ನೀನು ನನ್ನ ಮುದ್ದಿನ ಮಗನನ್ನು ಕೊಂದೇ ಬಿಟ್ಯಲ್ಲೇ..ಪಾಪಿ.. ಎಂದು ಅತ್ತೆ ನನ್ನನ್ನೇ ತಿಂದು ಹಾಕುವಂತೆ ನೋಡಿದಾಗ..ಇವರೇ..ನನ್ನಜ್ಜೀನಾ ...? ಎಂಬ ಭಾವ ನನ್ನ ಕರುಳು ಹಿಂಡಿತು.
ನಾವು ನಿಮಿತ್ತ ಮಾತ್ರ..ಎಲ್ಲ ಆ ದೇವನ ಆಟ ಮಗಳೇ..ಎಂದಷ್ಟೇ ಹೇಳಿ ಮೌನಕ್ಕೆ ಜಾರಿದ್ದರು ತಾಯಿ.."

           "ಎಳವೆಯಲ್ಲೇ ಎಷ್ಟು  ನೋವನುಭವಿಸಿದ್ದೆ ಸಾವಿತ್ರೀ... "ಎನ್ನುತ್ತಾ  ಮಡದಿಯನ್ನು ಕಕ್ಕುಲತೆಯಿಂದ ನೋಡಿ ಹೆಗಲ ಮೇಲೆ ಕೈಯಿಟ್ಟು..
"ಊರಮೇಲಿನ ದುರ್ಘಟನೆಯ ಸಂಪೂರ್ಣ ಮಾಹಿತಿ ನಾನು ಉಳಿದುಕೊಂಡಿದ್ದ ಮನೆಯ ಅಕ್ಕಪಕ್ಕದವರಿಂದ ತಿಳಿದುಕೊಂಡಿದ್ದೆ.ಆ ಎಳೆಯ ಹೆಣ್ಣುಮಗಳಿಗೆ ನ್ಯಾಯಯುತವಾಗಿ ಗೌರವದಿಂದ ಸಮಾಜದಲ್ಲಿ ಬಾಳಲು ಅವಕಾಶ ಕಲ್ಪಿಸಿಕೊಡೋಣ ಎಂದು ಕೆಲವರಲ್ಲಿ ಕೇಳಿಕೊಂಡಿದ್ದೆ.. ಒಂದೆರಡು ಜನ ನಾವಿದ್ದೇವೆ ನಿಮ್ಮ ಜೊತೆಗೆ ಎಂದರೆ ಉಳಿದವರೆಲ್ಲ ಈ ಊರಿನ ಪದ್ಧತಿಯೇ ಹಾಗೆ ಎಂದು ಜಾರಿಕೊಂಡರು.ಮನೆಯವರಲ್ಲಿ ಆಕೆಗೆ ವೈಧವ್ಯದ ಸಂಪ್ರದಾಯ ಎಂದು ತಲೆಬೋಳು ಮಾಡುವುದು,ಕೈಬಳೆ ಒಡೆಯುವುದು ಮಾಡಬೇಡಿ.ಬದಲಾಗಿ ನಮ್ಮದೊಂದು ಭಾರತೀ ಆಶ್ರಮವಿದೆ.ಅಲ್ಲಿ ಆಕೆಗೆ ಗೌರವದಿಂದ ಬದುಕಲು, ಶಿಕ್ಷಣ ಮುಂದುವರಿಸಲು ಅವಕಾಶ ನೀಡಿ ಎಂದು ಕೋರಿದ್ದೆವು.ನಮ್ಮ ಮಾತಿಗೆ ಕುಟುಂಬದ ಹಿರಿಯರಾರೂ ಸೊಪ್ಪು ಹಾಕಲಿಲ್ಲ."


          "ಹೂಂ.. ಊರವರು ಹೇಳಿದ್ದು ಸರೀನೇ..ಆ ಊರಿನ ಪದ್ಧತಿಯೇ ಹಾಗಿತ್ತು. ಆ ದಿನ  ಕೈ ಬಳೆ ಒಡೆಯುವ, ಕೂದಲು ಬೋಳಿಸುವ ಶಾಸ್ತ್ರವಂತೆ.. ನಿರ್ಲಿಪ್ತತೆಯಿಂದ  ನನ್ನದೇನೂ ಉಳಿದಿಲ್ಲ ಇನ್ನು ಎಂಬ ಶೂನ್ಯಭಾವದಿಂದ ಎಲ್ಲೋ ದೂರದಲ್ಲಿ ದೃಷ್ಟಿ ನೆಟ್ಟು ಕುಳಿತಿದ್ದೆ.ಗುಂಪಿನಲ್ಲಿ ಏನೇನೋ ಮಾತುಕತೆಗಳು.ಅವುಗಳಿಗೆಲ್ಲ ಅಕ್ಷರಶಃ ಕಿವುಡಿಯಾಗಿದ್ದೆ.ಇನ್ನೇನು ಕೈಬಳೆ ಒಡೆಯುವ ಶಾಸ್ತ್ರ ಆರಂಭವಾಗುತ್ತದೆ ಎಂದಾಗ ನಿಲ್ಲಿಸಿ.... ಎಂಬ ಗಟ್ಟಿದನಿಯೊಂದು ತೂರಿಬಂದಾಗ ಒಮ್ಮೆ ಕಂಪಿಸಿದ್ದೆ.ಎಲ್ಲೋ ಕೇಳಿದ ಪರಿಚಿತ ಧ್ವನಿ ಎಂದು ಮನಸ್ಸು ಹೇಳಿತು."


       "ಅಷ್ಟು ನೋವಿನಲ್ಲೂ ಆ ಧ್ವನಿಯನ್ನು ಪರಿಚಿತ ಧ್ವನಿ ಎಂದು ಗುರುತಿಸಿದೆಯಲ್ಲಾ!. ಅದೇ ನನ್ನ ನಿನ್ನ ಪ್ರೇಮದ ದ್ಯೋತಕ..ಆ ದಿನ ಬೆಳಿಗ್ಗೆ ಒಬ್ಬ ಗೆಳೆಯ ಕೈಕೊಟ್ಟಿದ್ದ.ಇನ್ನೊಬ್ಬ ಗೆಳೆಯನೊಂದಿಗೆ  ಆ ಮನೆಗೆ ಬಂದೆ.ನಿಲ್ಲಿಸಿ .
ಎಂದು ಕೂಗಿಕೊಂಡೆ.ಗುಂಪನ್ನು  ಚದುರಿಸಿ ಆ ಎಳೆಯ ಬಾಲೆಯ ಮುಖ ನೋಡಿದಾಗ ದುಃಖ ಆಶ್ಚರ್ಯ ಎರಡೂ ಒಟ್ಟೊಟ್ಟಿಗೇ ಆಗಿತ್ತು.ನನ್ನ ಹೃದಯದರಸಿ...ಪ್ರೇಮಕನ್ನಿಕೆ...ನನ್ನ ಪುಟ್ಟ ದೇವಿ ...ಅನಿಷ್ಟ ಪದ್ಧತಿಗೆ ಬಲಿಯಾಗುವವಳಿದ್ದಳು.ಹಿಂದೆ ಮುಂದೆ ನೋಡದೆ ಬಲಗೈಯಲ್ಲಿ ನಿನ್ನನ್ನೂ, ಎಡಗೈಯಲ್ಲಿ ನಿನ್ನ ತಾಯಿಯ ಕೈ ಹಿಡಿದು ಎಳೆದುಕೊಂಡೇ ಬಂದಿದ್ದೆ.ನಮ್ಮ ಮೇಲೆ ಕಲ್ಲು ತೂರಾಟ ನಡೆಯಿತು.ಹೇಗೋ ಪಾರಾಗಿ ಬಂದೆವು.."


       " ಹೌದು... ಅಂದು ನೀವು ದೇವರಂತೆ ಬಂದಿರಿ..ಬಹಳ ದೂರದವರೆಗೆ ನಮ್ಮನ್ನು ಕರೆದೊಯ್ಯದಂತೆ ಕುಟುಂಬಿಕರು ಆಕ್ಷೇಪಿಸುತ್ತಾ
  ಹಿಂಬಾಲಿಸಿದ್ದರು.ನೀವು ದಿಟ್ಟಹೆಜ್ಜೆ ಇಟ್ಟಿದ್ದಿರಿ.ಇದು ಕನಸೋ ನನಸೋ ಎಂದರಿಯದೆ  ದಿಙ್ಮೂಢಳಾದ ನನಗೆ ..ನನ್ನ ಕೈಯ ಮೇಲೆ ನಿಮ್ಮ ಕೈಯನಿಟ್ಟು ಮಾತು ಕೊಟ್ಟಿದ್ರಿ... ನಿನ್ನನ್ನು, ತಾಯಿಯನ್ನು ದಡಸೇರಿಸುವ ಭಾರ ನನ್ನದು ಎಂದು.
ಬಹಳ ದೂರ ನಡೆದು ಬಸ್ ಏರಿ ರಾತ್ರಿ ಭಾರತೀ ಆಶ್ರಮಕ್ಕೆ ತಂದು ಬಿಟ್ಟಿರಿ.ಹೊಸ ಪರಿಸರ ಬಾಳಲ್ಲಿ ಹೊಂಗಸನ್ನು ಮೂಡಿಸಿತು.ಅಮ್ಮ ಮೂರು ದಿನ ನನ್ನ ಜೊತೆಗಿದ್ದು ಊರಿಗೆ ಮರಳಿದರು.ಊರಲ್ಲಿ ಯಾರು ಕೇಳಿದರೂ ಅಮ್ಮ ನಾನಿರುವ ಜಾಗದ ಸುಳಿವನ್ನು ಮಾತ್ರ ಬಿಟ್ಟುಕೊಟ್ಟಿರಲಿಲ್ಲ.ಆ ಘಟನೆಯ ನಂತರ ಅಮ್ಮನಿಗೆ ತವರಿನ ಸಂಬಂಧ ಸಂಪೂರ್ಣವಾಗಿ ಕಳಚಿಹೋಯಿತು."



        "ನಿಮ್ಮನ್ನು ನಮ್ಮ ಚೇತನಾ ಆಶ್ರಮದ ಅಂಗಸಂಸ್ಥೆಯಾದ ಹೆಣ್ಣು ಮಕ್ಕಳಿಗಾಗಿ ಇದ್ದಂತಹ ,ಭಾರತೀ ಆಶ್ರಮಕ್ಕೆ ಬಿಟ್ಟು ತೆರಳಿದ ಮೇಲೆ ಒಂದು ವಾರ ನನ್ನ ಶಾಲಾ ಅಧ್ಯಾಪಕರು ಕೂಡ ನನ್ನಲ್ಲಿ ಮಾತನಾಡುತ್ತಿರಲಿಲ್ಲ.ಕ್ರಮೇಣ ಎಲ್ಲವೂ ಸರಿಹೋಯಿತು.ಆಗಾಗ ನಾನು ಆಶ್ರಮಕ್ಕೆ ಭೇಟಿ ನೀಡಿ ನಿನ್ನನ್ನು ವಿಚಾರಿಸಿಕೊಂಡು ಬಂದಾಗ ನನಗೆ ಆತ್ಮತೃಪ್ತಿ."


        "ರೀ.. ನೀವು ಸರಿಯಾದ ಜಾಗಕ್ಕೇ ನನ್ನನ್ನು ಸೇರಿಸಿದ್ದಿರಿ.ಆಶ್ರಮ ನನ್ನ ಪಾಲಿಗೆ ಜ್ಞಾನದೇಗುಲವಾಯಿತು.ಓದಿನಲ್ಲಿ ಮಗ್ನಳಾದೆ.ಆಶ್ರಮದ ಮಕ್ಕಳಿಗೆ ಶಿಕ್ಷಕಿಯಾದೆ.ಅಕ್ಕನಾದೆ..ನಿಮ್ಮನ್ನು ನಾನು ನೋಡುವ ದೃಷ್ಟಿಕೋನ ಬದಲಾಗಿತ್ತು .ಪ್ರೇಮದ ಭಾವವು ಸೋದರತ್ವಕ್ಕೆ ತಿರುಗಿತ್ತು. ಅಲ್ಲಿನ  ರೇಣುಕಾ ಮಾತಾಜಿ ನನ್ನನ್ನು ಶಿಕ್ಷಕರ ತರಬೇತಿಗೆ ಕಳುಹಿಸಿದರು.ನಾನು ನನಸಾಗಬಹುದೆಂದು ಊಹಿಸದ ನನ್ನ ಕನಸಿನಂತೆ ನಡೆದ ಬಾಳ ತಿರುವದು.. ರಾತ್ರಿ ನಿದ್ದೆಗೆಟ್ಟು ಅಧ್ಯಯನ ನಡೆಸಿ ತರಬೇತಿಯಲ್ಲಿ ಉತ್ತೀರ್ಣಳಾಗಿ ಭೇಷ್ ಎನಿಸಿಕೊಂಡೆ.."

         "ಸಾವಿತ್ರೀ.. ನೀನು ಶಿಕ್ಷಕರ ತರಬೇತಿಯಲ್ಲಿ ಉತ್ತೀರ್ಣಳಾದಾಗ ನಾನೆಷ್ಟು ಹರುಷಗೊಂಡಿದ್ದೆ ಗೊತ್ತಾ..?"

         "ರೀ....ಇದೇ ನಿಮ್ಮ ಕಣ್ಣ ಹೊಳಪು ಅಂದು ಕಂಡು ನಾನು ನಿಜಕ್ಕೂ ಪುಳಕಿತಳಾಗಿದ್ದೆ..ಶಾಲಾ ಶಿಕ್ಷಕಿಯಾದ ಸಂಭ್ರಮ.ಸರಕಾರಿ ನೌಕರಿ ಬಹಳ ಬೇಗ ದೊರೆತಿತು..ನನ್ನ ಸಂಬಳವನ್ನು ನನ್ನ ತಮ್ಮ, ತಂಗಿಗೆ ವಿದ್ಯಾಭ್ಯಾಸ ಕೊಡಿಸಲು, ಅಮ್ಮನಿಗೆ ಮನೆ ನಿರ್ವಹಣೆಗೆ ಮತ್ತು ಆಶ್ರಮಕ್ಕೆಂದು ಬಳಸುತ್ತಿದ್ದೆ ವಿನಃ ದುಂದುವೆಚ್ಚ ಮಾಡುತ್ತಿರಲಿಲ್ಲ."


          "ನೀನು ಮನೆಗೆ ಮಗಳಾಗದೆ ಮಗನಂತೆ ಆಸರೆಯಾದ್ದು ನನಗೂ ಹೆಮ್ಮೆ ತಂದಿತ್ತು. ಆದರೆ..ಸಾವಿತ್ರೀ... ನನ್ನ ಮನದಾಸೆಯನ್ನು ನಿನ್ನಲ್ಲಿ ಹೇಗೆ ಹೇಳಲಿ..?  ಎಂಬ ಚಡಪಡಿಕೆ ನನ್ನಲ್ಲಿತ್ತು..ನನಗೂ ನನ್ನವರು ಎಂದು ಯಾರೂ ಇರಲಿಲ್ಲ.ಚೇತನಾ ಆಶ್ರಮವೇ ನನ್ನ ಪಾಲಿಗೆ ಕುಟುಂಬವಾಗಿತ್ತು. ನೌಕರಿ ದೊರೆತ ಮೇಲೂ ಆಗಾಗ ತೆರಳುತ್ತಿದ್ದೆ.ಹಬ್ಬ ಹರಿದಿನಗಳಲ್ಲಿ ಭಾಗಿಯಾಗುತ್ತಿದ್ದೆ. ಅದೊಂದು ದಿನ ಭಾರತೀ ಆಶ್ರಮದ ಮಾತಾಜಿ ರೇಣುಕಮ್ಮ ನನ್ನನ್ನು ಬರಹೇಳಿದಾಗ ಎಂದಿನಂತೆ ಬಂದಿದ್ದೆ.ಅವರ ಮಾತು ಕೇಳಿ ನನ್ನ ಕಿವಿ ತಂಪಾಯಿತು.ದೇಹದಲ್ಲಿ ನವಚೈತನ್ಯ ಹರಿದಾಡಿತು."

   
    "ನಿಮ್ಮಂತೆಯೇ ನನಗೂ ಕೂಡ...ಬಹಳ ತರಾತುರಿಯಲ್ಲಿ ಇದ್ದಾಗ ಬರಲು ಹೇಳಿ ಕಳುಹಿಸಿದ್ದರು.ಅವರ ಕೋಣೆಗೆ ತೆರಳಿದಾಗ ನೀವು ಕುಳಿತುಕೊಂಡಿದ್ದಿರಿ.ಏನಾದರೂ ಕೆಲಸವಿರಬಹುದು ಅಂದುಕೊಂಡಿದ್ದೆ..ಆದರೆ... ಆದರೆ.."

       "ಏನು... ಆದರೆ...?? ನಿನ್ನ ಬಾಯಲ್ಲೇ ಕೇಳುವಾಸೆ ನನಗೆ..ನನ್ನ ಸಾವಿತ್ರಿಯ ಮನದೊಳಗಿನ ಪ್ರೇಮಪಲ್ಲವಿಯನ್ನು ಇಂದು ಆನಂದಿಸುವಾಸೆ.."

   "ರೇಣುಕಮಾತಾಜಿ ಸಾವಿತ್ರೀ..ನಿನಗೆ ನಿನ್ನದೇ ಜೀವನ ಇದ್ದರೆ ಚೆನ್ನ..ನಿನ್ನದಿನ್ನೂ ಹಸಿವಯಸ್ಸು. ತಾಯಿಯೂ ಕಷ್ಟದಲ್ಲಿದ್ದಾರೆ.ಗಂಡುದಿಕ್ಕು ಅಂತ ಇದ್ದರೆ ಚಂದ.ವೆಂಕಟೇಶ್  ಗೂ ಕುಟುಂಬ ಅಂತ ಯಾರೂ ಇಲ್ಲ. ಇಬ್ಬರೂ ಜೊತೆಯಾಗಿ ಬಾಳುವ ಯೋಚನೆ ಮಾಡಿ... ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಬದುಕಿದರೆ ನಿಮ್ಮಿಬ್ಬರಿಗೂ ಅನುಕೂಲ..ಆಲೋಚಿಸಿ.. ಎಂದಾಗ ನಾನು ಖುಷಿಯಿಂದಲೇ ತಬ್ಬಿಬ್ಬಾಗಿದ್ದೆ..ನಿಮ್ಮ ಕಣ್ಣ ಸಂಚಿನಲ್ಲೇ ಭಾವನೆಗಳನ್ನು ಓದಿದ್ದೆ.. ಇನ್ನೇಕೆ ತಡ ಮಾಡುತಿ..? ನಾನೀಗಲೇ ಒಪ್ಪಿದೆ..ನೀನೂ ಒಪ್ಪಿದರೆ.....ಎನ್ನುವಂತಿತ್ತು ನಿಮ್ಮ ಆತುರತೆ.."

    "ಅದೇ ಕಣೇ.. ನಾನು ಯಾವುದು ಬಯಸಿದ್ದೆನೋ ಅದೇ ಆ ದೇವನಿಗೂ ಪ್ರಿಯವಾಗಿತ್ತು ಅನಿಸುತ್ತದೆ.. ಅಂತೂ ಇಬ್ಬರ ಹೃದಯ ಕಲೆತು ಪ್ರೇಮಗೀತೆ ಹಾಡಿತು..ನಿಮ್ಮ ತಾಯಿ ನನಗೂ ತಾಯಿಯಾದರು.ಇಬ್ಬರನ್ನೂ ಹರಸಿ ಆಶ್ರಮದಲ್ಲೇ  ಮದುವೆಯೂ ಮಾಡಿ ಕಳುಹಿಸಿಕೊಟ್ಟರು.ಆಗ ನನಗೆ ಬೇರೆ ಊರಿಗೆ ವರ್ಗಾವಣೆ ಆಗಿತ್ತು.ಹೊಸ ಊರಿನಲ್ಲಿ ಹೊಸ ಕನಸಿನೊಂದಿಗೆ ಬಾಳಲಾರಂಭಿಸಿದೆವು.."


 "  ನನ್ನಮ್ಮನನ್ನು ತಾಯಿಯಂತೇ ಗೌರವಿಸಿದಿರಿ.ತಂಗಿ ತಮ್ಮನ ಓದು ಉದ್ಯೋಗ ಮದುವೆಯ ಜವಾಬ್ದಾರಿಗಳಿಗೆಲ್ಲಾ ಹೆಗಲು ನೀಡಿದಿರಿ..ಅಮ್ಮ ಕೊನೆಯ ದಿನಗಳಲ್ಲಿ ಹೇಳಿದ ನೆನಪು ...ಅಪ್ಪ   ಇದ್ದಿದ್ದರೆ ನಮ್ಮನ್ನು ಎಷ್ಟು ಜವಾಬ್ದಾರಿಯಿಂದ ನೋಡಿಕೊಳ್ಳಬೇಕಿತ್ತೋ ಅದೇ ಸ್ಥಾನದಲ್ಲಿ ವೆಂಕಟೇಶ್ ನೋಡಿಕೊಂಡಿದ್ದಾನೆ.ಇದಕ್ಕಿಂತ ನನಗೆ ಇನ್ನೇನು ಬೇಕು.. ಎಂದು.. ನೀವು ಅಂದು ಕೊಟ್ಟ ಮಾತಿನಂತೆ ನಡೆದುಕೊಂಡಿದ್ರಿ.. ನೀವು ಕೊಟ್ಟ ಮಾತನ್ನು ಮರೆತಿಲ್ಲ ನಾನು..." ಎನ್ನುತ್ತಾ ಪತಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಿದರು..


"ಸಾವಿತ್ರೀ..ಯಾವ ಜನ್ಮದ ಪುಣ್ಯವೋ ಏನೋ ಅತ್ತೆಯಾದರೂ ತಾಯಿಯಂತೆಯೇ ಇದ್ದರು..ಮಗನಂತೆ ನನಗೆ ಅವರ ಸೇವೆಮಾಡುವ ಭಾಗ್ಯ ದೊರಕಿತು.ನಿನ್ನ ತಂಗಿ ತಮ್ಮ ನನಗೆ ಹಿರಿಯ ಸಹೋದರನ ಸ್ಥಾನವನ್ನು ನೀಡಿದರು..ನಿನ್ನಂತಹ ಅಮೂಲ್ಯ ರತ್ನವನ್ನು  ನನಗೆ ನೀಡಿ ಮಾತೃವಾತ್ಸಲ್ಯದಿಂದ  ಒಡನಾಡಿದ ಆ ಹಿರಿ ಜೀವಕ್ಕೆ ಬದುಕಿನ ಕೊನೆಯ ದಿನಗಳನ್ನು ನೆಮ್ಮದಿಯಿಂದ ಕಳೆಯುವಂತೆ  ನಾವು ನೋಡಿಕೊಂಡೆವಲ್ಲಾ ಎನ್ನುವ ಆತ್ಮತೃಪ್ತಿ ಇದೆ."

  "ರೀ..  ನಾವು ನಮ್ಮ ಹಿರಿಯರನ್ನು ಪ್ರೀತಿಯಿಂದ ನೋಡಿಕೊಂಡಂತೆ ಇವತ್ತು ನಮ್ಮ ಮಕ್ಕಳು ನಮ್ಮನ್ನು ನೋಡಿಕೊಳ್ಳುತ್ತಿದ್ದಾರೆ..ಇದುವೇ ಅಲ್ಲವೇ ಮುಂದಿನ ಪೀಳಿಗೆಗೆ ನಾವು ಕಲಿಸಿದ ಪ್ರೀತಿಯ ಪಾಠ.. " ಎಂದಾಗ ಪತಿಯ ತೋಳುಗಳು ಸಾವಿತ್ರಿಯ ಹೆಗಲನ್ನು ಸುತ್ತುವರಿಯಿತು ..ಆ ಅನುರಾಗದಲ್ಲಿ ಪ್ರಬುದ್ಧತೆಯಿತ್ತು . ಬಾಳಪಯಣದ ಸಾರ್ಥಕತೆಯಿತ್ತು.ಗೋಡೆಯಲ್ಲಿ ನಲುವತ್ತು ವಸಂತಗಳ ಸುಖೀ ದಾಂಪತ್ಯ ಜೀವನಕ್ಕೆ ಮಕ್ಕಳು ಮೊಮ್ಮಕ್ಕಳು ಶುಭಹಾರೈಸಿದ  ಫಲಕ ನೇತಾಡುತ್ತಿತ್ತು..


✍️...ಅನಿತಾ ಜಿ.ಕೆ.ಭಟ್.
22-02-2020.
 
ಪ್ರತಿಲಿಪಿ ಕನ್ನಡದ ಫೆಬ್ರವರಿ 2020 ರ 'ಈ ಸಂಭಾಷಣೆ ' ಕಥಾ ಸ್ಪರ್ಧೆಗೆ ಸಲ್ಲಿಸಿದ ಬರಹ.

'ಈ ಸಂಭಾಷಣೆ' ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದಿದೆ.





ಚಿಂತೆ ..... ಮರೆತು ನಗುತಿರು ಕಾಂತೆ....




       ಮಂದಹಾಸವು ಮುಖವನ್ನಲಂಕರಿಸಿದರೆ ಅದುವೇ ಮನುಜನಿಗೆ ಆಭರಣ.ಚಿನ್ನದ ಆಭರಣಗಳು ದುಬಾರಿಯಾದ ಈ ಕಾಲದಲ್ಲಿ ನಯಾಪೈಸೆ ಖರ್ಚಿಲ್ಲದೆ ಒದುಗುವ ಮುಗುಳುನಗೆಯೆಂಬ ಆಭರಣವೂ ದುಬಾರಿಯೆನಿಸಿಬಿಟ್ಟಿದೆ.ಕಾರಣ ಮನುಜನ ಮಿದುಳನ್ನು ಕೊರೆಯುವ ಚಿಂತೆ.ಮನದೊಳಗೆ ಮನೆಮಾಡಿದ ಚಿಂತೆಯು ಮನುಷ್ಯನ ವರ್ತನೆಯ ಮೇಲೆ, ಜೀವನ ಶೈಲಿಯ ಮೇಲೆ ತನ್ನದೇ ಆದ ಹಿಡಿತವನ್ನು ಸಾಧಿಸುತ್ತದೆ.ನಮ್ಮ ಹಿಡಿತದಲ್ಲಿ ಮನಸ್ಸು ಇದ್ದರೆ ಇದರಿಂದ ಪಾರಾಗುವುದು ಕಷ್ಟವಲ್ಲ.ಚಿಂತೆಯ ಪಾಶದೊಳಗೆ ನಾವು ಸಿಲುಕಿದರೆ ಹೊರಬರಲು ಒದ್ದಾಡಬೇಕಾಗುತ್ತದೆ.


       ಚಿಂತೆ ಎಂಬುದು ಎಳೆಯ ಮಕ್ಕಳಿಂದ ವಯೋವೃದ್ಧರವರೆಗೆ ಯಾರನ್ನು ಬಿಟ್ಟಿಲ್ಲ.ಅದರಲ್ಲೂ ಹೆಣ್ಣುಮಕ್ಕಳು ಇಲ್ಲಸಲ್ಲದ ವಿಷಯಗಳಿಗೆಲ್ಲ ಚಿಂತಿಸುವುದು ತುಸು ಹೆಚ್ಚೇ.ಚಿಂತೆಯ ಬಗ್ಗೆ ಏನು ಬರೆಯೋಣ ಎಂದು ಯೋಚಿಸುತ್ತಿದ್ದಾಗಲೇ ಸಂಧ್ಯಾತ್ತೆ ಫೋನು ಮಾಡಿದ್ರು...
" ನಂಗಂತೂ ತಲೆಚಿಟ್ಟು ಹಿಡಿದು ಹೋಯ್ತು..ಈ ಕೆಲಸದವರ ಆಟದಲ್ಲಿ.. ಅಡಿಕೆ ಕೊಯ್ಯಲು ಇವತ್ತು ಬರುತ್ತೇನೆ ನಾಳೆ ಬರುತ್ತೇನೆ ಎಂದು ಹೇಳಿ ಮುಂದೂಡುತ್ತಿದ್ದಾರೆ.ಅವರು ನಿಘಂಟು ಬರುತ್ತೇನೆ ಅಂದಾಗ ನಂಬಿ ನಾನು ತೆಳ್ಳವು ಬೆಳಗ್ಗೇನೇ ಕಡೆದು ದೋಸೆ ಹೊಯ್ದಿಡುವುದು.. ಅವರು ಬರುವುದೂ ಇಲ್ಲ..ಆ ದೋಸೆಯೆಲ್ಲ ನಂಗೂ ಮಾವನಿಗೂ ತಿಂದು ಮುಗಿಯುವುದೂ ಇಲ್ಲ..ಎಲ್ಲ ಅಕ್ಕಚ್ಚಿಗೆ ಸುರಿಯುವುದು.. ಅಬ್ಬಾ.. ಹೇಳಿ ಪ್ರಯೋಜನವಿಲ್ಲ..

       ಈ ವರ್ಷ ರೋಗ ಬಂದು ಅಡಿಕೆಯೇ ಕಡಿಮೆ.ಹೌದು ಮಳೆ ಬರುವ ಮುನ್ನ ಮದ್ದು ಬಿಡಲು ಸೇಸಪ್ಪ ಬಂದರೆ ತಾನೇ..? ಅವನೀಗ ಅಪಾಯಿಂಟ್ಮೆಂಟ್ ತೆಗೆದುಕೊಂಡರೂ ಸಿಗದಷ್ಟು ಬಿಜಿ ಮನುಷ್ಯ..ಸಂಬಳವೋ ಸರಕಾರಿ ನೌಕರನಿಗಿಂತ ಕಡಿಮೆಯಿಲ್ಲ... ಇನ್ನು ಈ ಹಳ್ಳಿಯಲ್ಲಿ ಕೃಷಿ ಮಾಡಿದಂತೆಯೇ...ಮಗ ನವೀನ ಬೆಂಗಳೂರಲ್ಲಿ ಸೆಟ್ಲ್ ಆದ್ದು ಒಳ್ಳೇದೇ ಆಯ್ತು.. ಅದೊಂದು ನೆಮ್ಮದಿ ನಂಗೆ.."ಎಂದು ತನ್ನ ಬೇಗುದಿಯನ್ನು ಹೊರಹಾಕಿದರು ಸಂಧ್ಯಾತ್ತೆ... ವರ್ಷಂಪ್ರತಿ ಕೃಷಿಯ ಕಾರ್ಯಗಳನ್ನು ಶಿಸ್ತಿನಿಂದ ಕಾಲಕಾಲಕ್ಕೆ ಮಾಡಿಕೊಂಡು ಬಂದ ಸಂಧ್ಯಾತ್ತೆಯ ಚಿಂತೆ ಸಕಾರಣವಾದದ್ದೇ. ಹಾಗೆಂದು ಏನು ಮಾಡಲು ಸಾಧ್ಯ..? ವಾಸ್ತವವನ್ನು ಒಪ್ಪಿಕೊಂಡು ಹೊಂದಾಣಿಕೆ ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕಷ್ಟೆ.


    ಚಿನಕುರುಳಿಯಂತೆ ಓಡಾಡುತ್ತಾ ಪಟಪಟನೆ ಮಾತನಾಡುತ್ತಿದ್ದ ಶಿಫಾಲಿಗೆ ಮದುವೆಯಾಗಿ ಒಂದು ವರ್ಷವಾಯಿತು.ಈಗ ತಲೆಯ ಮೇಲೆ ಮಣಭಾರ ಹೊತ್ತವರಂತೆ ಆಡುತ್ತಿದ್ದಾಳೆ.."ಏನಾಯ್ತೇ ಮದುಮಗಳೇ..?"
ಅಂದರೆ."ಅದೆಲ್ಲ ಹೇಗೆ ಹೇಳೋದು..?"ಅಂತ ಸಪ್ಪಗಾಗುತ್ತಾಳೆ.. ಕರುಳು ಚುರುಕ್ ಅನ್ನುತ್ತೆ ಅವಳನ್ನು ನೋಡಿದರೆ.. ಅಂತೂ ಯಾರೂ ಇಲ್ಲದಾಗ ತನ್ನ ನೋವ ಬಿಚ್ಚಿಟ್ಟಳು.." ತಾನು ಮಾಡಿದ ಕೆಲಸದಲ್ಲೆಲ್ಲ ತಪ್ಪು ಹುಡುಕುವ ಅತ್ತೆ..ಅಷ್ಟೇ ಏಕೆ ಮಗನಿಗೆ ಚಾಡಿ ಹೇಳಿಕೊಟ್ಟು ಸೊಸೆಯನ್ನು ಗದರುವಂತೆ ಕುಮ್ಮಕ್ಕು ನೀಡುವ ಕೀಳುಬುದ್ಧಿ..ಸೊಸೆ ತನಗಿಷ್ಟದ ಪಾನೀಯ ಕುಡಿಯಲು ಹೊರಟರೆ.. ಊಹೂಂ.. ಮನೆಯಲ್ಲಿ ಎಲ್ಲರೂ ಕುಡಿಯುತ್ತಿರುವ ಕಾಫಿಯನ್ನೇ ನೀನೂ ಕುಡಿಯಬೇಕೆಂಬ ತಾಕೀತು.. ನೀನು ಕುಡಿಯುವ ಪಾನೀಯಕ್ಕೆ ಇಷ್ಟು ಖರ್ಚಾಯಿತೆಂದು ಲೆಕ್ಕಾಚಾರ..!! ಸೊಸೆ ಯಾವುದಕ್ಕೂ ಮಾತಾಡುವಂತಿಲ್ಲ. ಮಾತನಾಡಿದರೆ ತಿರುಗಿ ಚುಚ್ಚುಮಾತು..ಮೊಂಡುವಾದ... ಗಂಡನಿಗೆ ಹೇಳಿದರೆ ಒಪ್ಪಲಾರದ ಮನಸ್ಥಿತಿ. ತಂದೆತಾಯಿಯೇ ಸರಿ.
ಅವರೇ ಹೆಚ್ಚು..ಎಂಬ ಭಾವ.." ತನ್ನ ಚಿಂತೆಗಳಿಗೆ ಮೂಲಕಾರಣವನ್ನು  ಬಾಯ್ಬಿಟ್ಟು ಮನಸು ಹಗುರಮಾಡಿಕೊಂಡ ಶಿಫಾಲಿ.
ಇಂತಹ ಚಿಂತೆಗಳಿಂದ ಮುಕ್ತಿ ಇದೆಯಾ..? ಖಂಡಿತಾ ಇದರಿಂದ ಹೊರಬರುವ ದಾರಿ ಅವರವರೇ ಯೋಚಿಸಬೇಕು. ಕುಟುಂಬದೊಳಗಿನ ಸಣ್ಣಪುಟ್ಟ ಮತ್ಸರಗಳಿಗೆಲ್ಲ ಅಲಕ್ಷ್ಯವೇ ದಿವ್ಯೌಷಧಿ.ಚುಚ್ಚುಮಾತಿಗೆ ಪ್ರತಿಯಾಗಿ ನಾವೂ ಚುಚ್ಚಿ ಮಾತನಾಡಿದರೆ ನಮ್ಮ ಮನಸ್ಸಿಗೆ ನಾವೇ ಘಾಸಿ ಮಾಡಿದಂತೆ.ಮಾತಿಗೆ ಮಾತು ಅಶಾಂತಿಗೆ ಹೇತು.ನಕ್ಕು ಸುಮ್ಮನಾಗಿ..ಇದುವೇ ನನ್ನ ಜೀವನ ಶೈಲಿ ಎಂದು ಆತ್ಮವಿಶ್ವಾಸದಿಂದ ಬದುಕಲು ಕಲಿಯುವುದು ನಮ್ಮ ಪ್ರಯತ್ನವಾಗಬೇಕು.


       ಒಂದನೇ ತರಗತಿಯ ಪುಟಾಣಿ ರಂಜನ್ ನನ್ನು ಮಾತಿಗೆಳೆದರೆ ಅವನಿಗೂ ಭಾರೀ ಚಿಂತೆ ಇದಾವಂತೆ.. "ಏನು ಪುಟ್ಟಾ ನಿನ್ನ ಚಿಂತೆ..?" ಅಂದರೆ.." ನನ್ನ ಕ್ಲಾಸ್ ಮೇಟ್ ಗಳನ್ನೆಲ್ಲ ಅವರ ಅಪ್ಪ ದಿನಾ ಶಾಲೆಗೆ ಬಿಡ್ತಾರೆ.. ಆದ್ರೆ ನನ್ನಪ್ಪ ಮಾತ್ರ ನಂಗಾಗಲ್ಲ ಅಂತಾರೆ.. ಸ್ಕೂಲ್ ಬಸ್ಸಲ್ಲೇ ಹೋಗು ಅಂತಾರೆ.. ಇನ್ನು ಡಿಕ್ಟೇಷನ್ ನಲ್ಲಿ ಫುಲ್ ಮಾರ್ಕೇ ಬರಬೇಕು ಅಂತಾರೆ ಅಮ್ಮ..ಪೋಯಂ ಬೈಹಾರ್ಟ್ ಬರ್ಲಿಲ್ಲಾಂದ್ರೆ ನೆಲದಲ್ಲಿ ಕೂತ್ಕೊಂಡು ಕಲಿ ಅಂತಾರೆ.. ಮಿಸ್ಸು...ಲಂಚ್ ಪೂರ್ತಿ ಖಾಲಿ ಮಾಡಿಲ್ಲಾಂದ್ರೆ ಗೇಮ್ಸ್ ಗೆ ಬಿಡಲ್ಲಾಂತಾರೆ... ಆಯಾ...ಸಂಜೆ ಸ್ವಲ್ಪ ಹೊತ್ತು ಆಡ್ತೀನಿ ಅಂದ್ರೆ.. ಹೋಂವರ್ಕ್ ಮಾಡಲು ಬಾ ಅಂತಾರೆ ಅಮ್ಮ... ಹೇಳಿ ಆಂಟಿ ಇದೆಲ್ಲಾ ಸರೀನಾ.?." ಹೀಗೆ ಅಂದ ಅವನನ್ನು ಸಮಾಧಾನಪಡಿಸೋಕೆ ನನ್ನ ಬುದ್ಧಿಯನೆಲ್ಲ ಉಪಯೋಗಿಸಬೇಕಾಯಿತು. ಪೋಷಕರ ದೃಷ್ಟಿ ಮಗು ಮುಂದೆ ಏನಾದರೂ ಸಾಧಿಸಬೇಕೆಂಬುದು . ಆದರೆ ಅದುವೇ ಅತಿಯಾದ ಹೇರಿಕೆಯೆಂದು ಮಗುವಿಗನಿಸುತ್ತದೆ.ಮಗು ಖುಷಿಯಿಂದ ಅದರಿಷ್ಟದಂತೆ ಇರಲು ದಿನದಲ್ಲಿ ಸ್ವಲ್ಪ ಹೊತ್ತಾದರೂ ಬಿಟ್ಟರೆ ಮಗುವಿನ ಮುಗ್ಧಮನಸ್ಸು ನರಳದೆ ಅರಳೀತು..


    ವಯಸ್ಸಾದ ಶಿವರಾಯರಿಗಂತೂ "ಎದ್ದರೆ ಕೂರೋಕಾಗಲ್ಲ ಕೂತರೆ ಏಳೋಕಾಗಲ್ಲ..ಟಿವಿ ನೋಡೋಣ ಎಂದರೆ ಸರಿಕಾಣಿಸಲ್ಲ..ರೇಡಿಯೋ ಕೇಳೋಣವೆಂದರೆ ಕೇಳಿಸಲ್ಲ...ಮಲಗಿದರೆ ನಿದ್ದೆಯೂ ಬರುವುದಿಲ್ಲ.. ವಾಕ್ ಮಾಡುವುದಕ್ಕೆ ಜೊತೆಗೆ ಯಾರಾದರೂ ಬೇಕು.ಎಲ್ಲರೂ ಅವರವರ ಕಾರ್ಯದಲ್ಲಿ ಒತ್ತಡದಲ್ಲಿ ಮುಳುಗಿರುತ್ತಾರೆ. ಯಾರೂ ಸಿಗುವುದಿಲ್ಲ.ಹೋಗಲಿ ಫಾರಿನ್ ನಲ್ಲಿರುವ ಮಗಳಲ್ಲಿ ಬಾಯ್ತುಂಬಾ ಹರಟಿ ಸಮಾಧಾನಪಟ್ಟುಕೊಳ್ಳುತ್ತೇನೆಂದರೆ ಅವಳು ಮಾತನಾಡುವುದೇ ವಾರಕ್ಕೋ ಹದಿನೈದು ದಿನಕ್ಕೊಮ್ಮೆ.ಐದಾರು ನಿಮಿಷ ಮಾತನಾಡಿ ನಂಗೆ ಕೆಲಸ ಇದೆ ಎಂದು ಫೋನಿಡುವ ಧಾವಂತ.ಮಕ್ಕಳು ,ಮನೆ ,ಉದ್ಯೋಗ ಎಂದೆಲ್ಲ ನಿಭಾಯಿಸುವ ಅವಳಿಗೆ ಬಿಡುವೆಲ್ಲಿದೆ..?ಮಗಳು ಕಲೀಬೇಕು ,ಉದ್ಯೋಗದಲ್ಲಿರಬೇಕು, ವಿದೇಶದಲ್ಲಿ ನೆಲೆಸಬೇಕು ಎಂದು ಕನಸು ಕಂಡದ್ದು ನನ್ನದೇ ತಪ್ಪು ಎಂಬ ಚಿಂತೆಯೂ ಆವರಿಸಿದೆ.."ಎಂದು ಕಣ್ಣು ತೇವ ಮಾಡಿಕೊಳ್ಳುತ್ತಾರೆ..


      ಹೀಗೆ ಎಲ್ಲ ವಯೋಮಾನದವರಿಗೂ ಅವರದೇ ಆದ ಖುಷಿಯ,ಹೊಂದಾಣಿಕೆಯ ಚೌಕಟ್ಟು ಇರುತ್ತದೆ.ಅದನ್ನು ಮೀರಿದಾಗ ಉಂಟಾಗುವುದೇ ಚಿಂತೆ. ಈ ಚಿಂತೆಯನ್ನು ಹತೋಟಿಯಲ್ಲಿಡುವುದು ಹೇಗೆ..


* ಪ್ರತಿದಿನ ನಮ್ಮ ಸುತ್ತಮುತ್ತಲಿನ ಜನರೊಂದಿಗೆ ಬೆರೆಯುವಾಗ ಮಾತಿನಲ್ಲಿ ನಿಗಾವಿರಲಿ.ನಮ್ಮ ಮಾತು ಇತರರನ್ನು ನೋಯಿಸದಂತಿರಲಿ. ಬೇರೆಯವರ ಮಾತು ಘಾಸಿಮಾಡಿದರೆ ಅದನ್ನು ಆಗಿಂದಾಗ್ಗೆ ಮನಸಿನಿಂದ ಹೊರದೂಡಿ.

* ಸಂಬಂಧಗಳಿಂದ ಕಿರಿಕಿರಿ ಅನುಭವಿಸುತ್ತಿದ್ದರೆ ಕೌಟುಂಬಿಕ ಸಂಬಂಧಗಳಿಂದ ಪೂರ್ಣವಾಗಿ ಹೊರಬರಲು ಸಾಧ್ಯವಿಲ್ಲ ಎಂದು ಅರಿವಿರಲಿ.ಕೆಟ್ಟವರನ್ನು ಮಣಿಸಲು ನಾವು ಕೆಟ್ಟವರಾಗುವುದಕ್ಕಿಂತ ನಾವು ನಮ್ಮದೇ ಆದ ಸತ್ಯದ ಪಥವನ್ನು ಆಯ್ದು ನಡೆದು ಇತರರಿಗೆ,ನಮ್ಮ ಮಕ್ಕಳಿಗೆ ಆದರ್ಶವಾಗಿರುವುದು ಲೇಸು.

*ನಮ್ಮ ಕರ್ತವ್ಯ ಜವಾಬ್ದಾರಿಗಳನ್ನು ಸಮಯಕ್ಕೆ ಸರಿಯಾಗಿ ನಿಭಾಯಿಸುವುದನ್ನು ರೂಢಿಸಿಕೊಳ್ಳಬೇಕು.ನಾಳೆಯ ಯೋಜನೆಯನ್ನು ಇಂದೇ ಹಾಕಿಕೊಂಡರೆ , ಹಣಕಾಸಿನ ವಿಷಯದಲ್ಲಿ ಕೆಲವೊಂದು ನಿಬಂಧನೆಗಳನ್ನು ವಿಧಿಸಿಕೊಂಡರೆ ಚಿಂತೆರಹಿತ ಜೀವನವನ್ನು ರೂಪಿಸಿಕೊಳ್ಳಬಹುದು.


*ನಮ್ಮನ್ನು ಕಾಡುತ್ತಿರುವ ವ್ಯಾಕುಲತೆಗಳೆಲ್ಲವೂ ಇನ್ನೊಬ್ಬರಲ್ಲಿ ಹೇಳಿದ ಮಾತ್ರಕ್ಕೆ ಕಡಿಮೆಯಾಗುವಂತಹವಲ್ಲ.ಬದಲಾಗಿ ಇನ್ನೊಬ್ಬರ ದೃಷ್ಟಿಯಲ್ಲಿ ನಾವು ಕೀಳಾಗಬಹುದು ಅಥವಾ ನಮ್ಮ ಆಂತರಿಕ ವಿಷಯಗಳು ಬಾಯಿಯಿಂದ ಬಾಯಿಗೆ ಸುದ್ದಿ ಹಬ್ಬಿಸುವವರಿಗೆ ಆಹಾರವಾಗಬಹುದು.ಆದಷ್ಟು ನಮ್ಮ ಚಿಂತಗಳಿಗೆ ನಾವೇ ಪರಿಹಾರವನ್ನು ಕಂಡುಕೊಳ್ಳಬೇಕು.ಸ್ವಲ್ಪ ಸಮಯ ಆ ಸಂಗತಿಯನ್ನು ಯೋಚಿಸದೆ ಯಾರಲ್ಲೂ ಹಂಚಿಕೊಳ್ಳದೇ ಇದ್ದಲ್ಲಿ ತನ್ನಿಂತಾನೇ ಮರೆತುಹೋಗಬಹುದು.ಹೇಳಿದಾಗಲೇ ಹಗುರವಾಗುವುದೆಂದಾರೆ ವಿಶ್ವಾಸಾರ್ಹ ವ್ಯಕ್ತಿಗಳಲ್ಲಿ ಮಾತ್ರ ಹಂಚಿಕೊಳ್ಳಿ.


*ನೋಯಿಸಿದವರನ್ನು ಕ್ಷಮಿಸುವ ಉದಾರ ಗುಣ ನಮ್ಮಲ್ಲಿ ಬೆಳೆಸಿಕೊಳ್ಳಬೇಕು.ನಮ್ಮ ಕರ್ತವ್ಯದಲ್ಲಿ ಏಕಾಗ್ರತೆಯಿರಬೇಕು.ಇತರರಿಗೆ ಎಲ್ಲಾ ವಿಷಯದಲ್ಲೂ ಮೂಗುತೂರಿಸಲು ಅವಕಾಶ ಕೊಡಬಾರದು.ನಾವೂ ಇತರರ ಜೀವನವದತ್ತ ಕುತೂಹಲದಿಂದ ಇಣುಕುವ ಅಭ್ಯಾಸ ಇಟ್ಟುಕೊಳ್ಳಬಾರದು.

*ಚಿಂತೆ ತಾನಾಗಿಯೇ ಬಂದಿರುವುದಿಲ್ಲ.ನಮ್ಮ ಅತಿಯಾದ ಬಯಕೆ ,ನಿರೀಕ್ಷೆಗಳಿಂದ ನಾವೇ ಮೈಮೇಲೆಳೆದುಕೊಂಡಿರುತ್ತೇವೆ.ನಮ್ಮಿಂದ ಉನ್ನತ ಸ್ತರದಲ್ಲಿರುವವರನ್ನು ನೋಡಿ ಕೊರಗುವುದಕ್ಕಿಂತ ; ನಮಗಿಂತ ಕಷ್ಟದಲ್ಲಿರುವವರನ್ನು ನೋಡಿ ನಮ್ಮ ಸ್ಥಿತಿಗತಿಗೆ ನಾವೇ ತೃಪ್ತಿ ಪಟ್ಟುಕೊಳ್ಳುವ ಸ್ವಭಾವವನ್ನು ರೂಢಿಸಿಕೊಳ್ಳಬೇಕು.

*ಇಂದಿನಿಂದ ನಾಳೆಗೆ ಎಲ್ಲವೂ ಬದಲಾಗಲು ಸಾಧ್ಯವಿಲ್ಲ.ಅದರಂತೆಯೇ ನಮ್ಮ ಚಿಂತನಾಶೈಲಿಯೂ ಕೂಡ.ಅದಕ್ಕಾಗಿ ನಿತ್ಯ ನಿರಂತರವಾದ ಧನಾತ್ಮಕ ಚಿಂತನೆಗೆ ನಮ್ಮ ಸನಾತನ ಸಂಸ್ಕೃತಿಯಲ್ಲಿ ಬಂದಂತಹ ಯೋಗಾಸನ ,ಪ್ರಾಣಾಯಾಮ ,ಧ್ಯಾನ , ಆಧ್ಯಾತ್ಮಿಕ ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.

*ದಿನಕ್ಕೆ ಎರಡು ಲೀಟರ್ ನೀರು ಕುಡಿಯಿರಿ.ಆರೋಗ್ಯಕರ ಪಾನೀಯಗಳನ್ನು ಸೇವಿಸಿರಿ.ದಿನಕ್ಕೆ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರಿಸಿ.ನಿದ್ರಿಸುವ ಮುನ್ನ ಮನಸ್ಸು ಪ್ರಶಾಂತವಾಗಿರಲಿ.ಬೇಡದ ಆಲೋಚನೆಗಳಿಗೆ ಆ ಹೊತ್ತಿನಲ್ಲಿ ಮನಸ್ಸಿನಲ್ಲಿ ಜಾಗ ಕೊಡಬೇಡಿ.ಸುಖನಿದ್ರೆ ಚಿಂತೆಯನ್ನು ಕಡಿಮೆಮಾಡುತ್ತದೆ.

*ಸಂಗಾತಿಯ ಮನಸ್ಸನ್ನು ಅರ್ಥ ಮಾಡಿಕೊಂಡು  ವಿಶ್ವಾಸವನ್ನು ಗಳಿಸಿ.ಎಲ್ಲಾ ನೋವನ್ನು ಮರೆಸುವ ಶಕ್ತಿ ಸಂಗಾತಿಯ ಒಡನಾಟದಲ್ಲಿದೆ. ಮನಸ್ಸನ್ನು ಉಲ್ಲಾಸಗೊಳಿಸಬಲ್ಲಂತಹ ಕೀಟಲೆ,ಲಘುಹಾಸ್ಯ, ಪ್ರಶಂಸೆ ವ್ಯಕ್ತಪಡಿಸುವ ಗುಣವನ್ನು ವೃದ್ಧಿಸಿಕೊಂಡು ಒಬ್ಬರಿಗೊಬ್ಬರು ಸ್ಫೂರ್ತಿಯಾಗಿ.

* ಮಕ್ಕಳಿಗೆ ಅತಿಯಾಗಿ ಒತ್ತಡವನ್ನು ಹೇರಿದರೆ ಅವರ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಬಹುದು.  ಅವರ ವಯಸ್ಸಿನಲ್ಲಿ ನಾವು ಹೇಗಿದ್ದೆವು ಎಂದು ಕಲ್ಪಿಸಿಕೊಂಡು ಅವರೊಂದಿಗೆ ವ್ಯವಹರಿಸಿ.ಒಳ್ಳೆಯ ಶಿಸ್ತು,ಓದು, ನೌಕರಿ ..ಇಷ್ಟೇ ಬೇಕಾಗಿರುವುದು ಅಲ್ಲ.. ಮಾನಸಿಕವಾಗಿ ದೈಹಿಕವಾಗಿ ಸಧೃಡವಾಗಿರುವುದು ಎಲ್ಲಕ್ಕಿಂತ ಮುಖ್ಯ.. ಅದಕ್ಕಾಗಿ ಎಳವೆಯಿಂದಲೇ ಹೆತ್ತವರ ಶ್ರಮ ಅಗತ್ಯ.ಬೇಡದ ಹುಳುಕುಗಳನ್ನು ಮಕ್ಕಳಲ್ಲಿ ತುಂಬುವುದಾಗಲಿ,ಅವರೆದುರು ಮಾತನಾಡುವುದಾಗಲಿ ಮಾಡಬಾರದು. ಯಾರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸದಿರಿ.ತಪ್ಪಿದಲ್ಲಿ ಎಳವೆಯಿಂದಲೇ ದ್ವೇಷ ಭಾವನೆ ಮೂಡಿ ವಯಸ್ಸಾದಂತೆ ಬಲು ಬೇಗನೆ ಚಿಂತೆಗೀಡಾಗುವ ಪ್ರವೃತ್ತಿ ಬೆಳೆಯಬಹುದು..


* ದಿನದಿನದ ಚಿಕ್ಕ ಚಿಕ್ಕ ಸಂತಸವನ್ನೂ ಅನುಭವಿಸಿ.ಕುಟುಂಬದೊಂದಿಗೆ ಆನಂದಿಸಿ.ಕೈಗೆಟುಕದ ಬಯಕೆಗೆ ಚಿಂತಿಸುವ ಬದಲು ಅಂಗೈಯಲ್ಲಿರುವ ಸುಖವನ್ನು ಒಪ್ಪಿಕೊಂಡು ಅಪ್ಪಿಕೊಳ್ಳಿ.


* ವಿಪರೀತ ಚಿಂತೆ ಕಾಡುತ್ತಿದೆ,ಯಾರಲ್ಲಾದರೂ ಕ್ರೋಧ , ಅಳು ಉಕ್ಕಿಬರುತ್ತಿದೆಯೆಂದಾದರೆ ... ಕೂಡಲೇ ಶೈತ್ಯೀಕರಿಸಿದ ನೀರು ಲಭ್ಯವಿದ್ದರೆ ಕುಡಿಯಿರಿ.ಇಲ್ಲವೆಂದಾದರೆ ನಿಮಗೆ ಸುಖಕರವೆನಿಸಿದಲ್ಲಿ ಕುಳಿತುಕೊಳ್ಳಿ.ಬೆನ್ನು ,ತಲೆ, ದೃಷ್ಟಿ ನೇರವಾಗಿ ಇರಲಿ.ತೊಡೆಯ ಮೇಲೆ ಎರಡೂ ಅಂಗೈಗಳನ್ನು ನೇರವಾಗಿ ಇರಿಸಿ .ಅಂದರೆ ಅಂಗೈಗಳು ಮೇಲ್ಮುಖವಾಗಿರಲಿ.ದೀರ್ಘವಾಗಿ ಉಸಿರು ತೆಗೆದುಕೊಂಡು ನಿಧಾನವಾಗಿ ಬಿಡಿ.ಹೀಗೆ ಐದು ನಿಮಿಷಗಳ ಕಾಲ ಮಾಡಿ.ಮನಸಿನ ಚಿಂತೆ,ಕ್ರೋಧ,ನಿಸ್ಸಹಾಯಕತೆ ಮಾಯವಾಗಿ ಮನಸು ಶಾಂತವಾಗುತ್ತದೆ.ದೇಹ ಹಗುರವಾಗುತ್ತದೆ.

*ನಮ್ಮ ಹಿರಿಯರಿರಲಿ ಕಿರಿಯರಿರಲಿ ..ಅವರನ್ನು ಗೌರವಿಸುವ ಮನೋಭಾವ ನಮ್ಮಲ್ಲಿರಲಿ.ಯಾರೂ ಮೇಲಲ್ಲ..ಕೀಳಲ್ಲ..ಎಲ್ಲರಿಗೂ ಅವರದೇ ಆದ ವ್ಯಕ್ತಿತ್ವ ಇರುತ್ತದೆ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧವಿರಬೇಕು.

*ನಾನು ನನ್ನದು ಎಂಬ ಚಿಂತನೆಯ ಬದಲು ನಾವು ನಮ್ಮದು ಎಂಬ ಸದ್ಭಾವನೆ ಮೈಗೂಡಿಸಿಕೊಳ್ಳಬೇಕು..




    ಎಲ್ಲ ಚಿಂತೆಗಳಿಗೂ ಮನಸ್ಸೇ ಮೂಲ.ಮನಸ್ಸನ್ನು ನಮ್ಮ ಬುದ್ಧಿಯ ಅಂಕೆಯಲ್ಲಿಟ್ಟು  ಆಗಾಗ ಎಚ್ಚರಿಸುವ ಕಾರ್ಯ ನಮ್ಮಿಂದಲೇ ಆಗಬೇಕು.ಸದೃಢವಾದ ಮನಸ್ಸು ಸ್ವಾಸ್ಥ್ಯ ಪೂರ್ಣ ಜೀವನಕ್ಕೆ ರಹದಾರಿ.

ಚಿಂತೆ ಮರೆತು ನಗುತಿರು ಕಾಂತೆ
ಸಂತೆ ಒಳಗೂ ಸುಖನಿದಿರೆ ಬರುವಂತೆ|
ನಾ ಕಾಯ್ವೆ ಮೊಗದಲಿ ನಗು ಅರಳುವಂತೆ
ಜೋಪಾನಮಾಡುವೆ ಬಾಂಧವ್ಯ ನರಳದಂತೆ||




✍️... ಅನಿತಾ ಜಿ.ಕೆ.ಭಟ್.
29-02-2020.
Momspresso Kannada ದಲ್ಲಿ ಪ್ರಕಟಿತ ಲೇಖನ.

Thursday, 27 February 2020

ಜೀವನ ಮೈತ್ರಿ-ಭಾಗ ೨೯(29)




    ಶಾಸ್ತ್ರಿ ನಿವಾಸದಲ್ಲಿ "ಲ್ಯಾಂಡ್ ಲೈನ್ ಫೋನ್ ಹಾಳಾಗಿದೆ...ಡಯಲ್ ಟೋನ್ ಬರ್ತಾ ಇಲ್ಲ" ಎಂದು ಮಗ ಭಾಸ್ಕರ ಬಂದ ಕೂಡಲೇ ಮಹಾಲಕ್ಷ್ಮಿ ಅಮ್ಮ ತಿಳಿಸಿದರು..ಮಂಗಳಮ್ಮ ತನಗೇನೂ ಅರಿಯದಂತೆ ಸುಮ್ಮನಿದ್ದರು...
ಭಾಸ್ಕರ ಶಾಸ್ತ್ರಿಗಳು "ನಾಳೆ ಬಿಎಸ್ ಎನ್ ಎನ್ ಕಛೇರಿಯಲ್ಲಿ ದೂರು ದಾಖಲಿಸುವೆ..ಅವರೇ ಸರಿ ಮಾಡಿಯಾರು..ನಿಮಗೆ ಬಳಸಲು ನನ್ನ ಹಳೆಯ ಫೋನ್ ಕೊಡುವೆ"ಎಂದು ತಾಯಿಯನ್ನು ಸಮಾಧಾನಿಸಿದ ಮಗ.


      ಶಾಸ್ತ್ರಿಗಳು ಮಗನಲ್ಲಿ ತೋಟದ,ಕೃಷಿಯ ವಿಚಾರವಾಗಿ ಮಾತನಾಡಿದರು.ಇನ್ನು ಅಡಿಕೆ ಸುಲಿದು ಕೊಡಲು ಬಾಕಿಯಿರುವುದನ್ನು ಮೊದಲು ಮಾಡಬೇಕು.. ಆಳುಗಳು ಈಗ ಜಾತ್ರೆ, ಮದುವೆ ಎಂದು ರಜೆ ಹಾಕುತ್ತಿರುತ್ತಾರೆ..ಬಾಕಿಯಿರುವ ಕಟ್ಟಿಗೆ ಒಡೆಯುವ ಕೆಲಸ ಐತಪ್ಪನಿಗೆ ವಹಿಸು... ಮಳೆ ಬರುವ ಮೊದಲೇ ಒಮ್ಮೆ ತೆಂಗಿನ ಕಾಯಿ ಕೊಯ್ಲು ಮಾಡಿದರೆ ಒಳ್ಳೆಯದು..ತೆಂಗಿನ ಕಾಯಿ ಕೊಯ್ಯುವ ತುಕ್ರಪ್ಪನಿಗೆ ಈಗಲೇ ಹೇಳಿಟ್ಟರೆ ಒಂದು ತಿಂಗಳ ನಂತರವಾದರೂ ಬಂದಾನು..ಅವನೂ ಈಗೀಗ ಕಂಡಾಬಟ್ಟೆ ಬ್ಯುಸಿ... ವಾರಕ್ಕೆ ಎರಡು ದಿನ ಎಣ್ಣೆ ಹಾಕಲು ರಜೆ.. ಹೀಗೆ ಅಪ್ಪ ಮಗನ ಸಂಭಾಷಣೆ ಸಾಗುತ್ತಿತ್ತು.. ಭಾಸ್ಕರ ಶಾಸ್ತ್ರಿಗಳು ಅಪ್ಪನ ಮನದ ಇಂಗಿತವನ್ನು ಅರಿತರು.ಮಗಳ ಮದುವೆ ಏಳುವ ಸೂಚನೆಯಿದೆ..ಈಗಲೇ ತಯಾರಾಗು ಎನ್ನುವುದು ಅವರ ಎಚ್ಚರಿಕೆಯ ಸಲಹೆಯ ಹಿಂದಿನ ಮರ್ಮವಾಗಿತ್ತು.


       ಅತ್ತೆ ಸೊಸೆ ಒಳಗೆ ಅಡುಗೆ ಮಾಡುತ್ತಾ ಮಾತನಾಡಿಕೊಳ್ಳುತ್ತಿದ್ದರು.. ಮಾತು ಮೊನ್ನೆ ಸಂಜೆ ಬಂದಿದ್ದ ಮಾಣಿಯ ಕಡೆಗೆ ಸಾಗಿತು..ಅತ್ತೆ ಸೊಸೆಯಲ್ಲಿ ..."ಮಾಣಿ ..ಎಂತ ಓದಿದ್ದ.."ಎಂದು ಕೇಳಿದರು.

ಮಂಗಳಮ್ಮ: ಇಂಜಿನಿಯರಿಂಗ್ ಕಲಿತು ಕೆಲಸದಲ್ಲಿದ್ದಾನೆ..

ಅತ್ತೆ: ಹೂಂ..ಯಾವುದಂತೇ ಕೆಲಸ.ಕಂಪೆನಿ ಕೆಲಸವೋ.. ಎಂತಾ..

ಮಂಗಳಮ್ಮ: ಹೂಂ... ಹೌದು.. ಇನ್ಫೋಸಿಸ್ ಕಂಪನಿಯ ಕೆಲಸ..

ಅತ್ತೆ:ಓಹೋ..ಅದಾ..

ಮಂಗಳಮ್ಮ: ನಿಮಗೆ ಗೊತ್ತಾ.. ಇನ್ಫೋಸಿಸ್..

ಅತ್ತೆ: ಅದೇ ಅಲ್ವಾ ಮಂಗಳಾ...ನಮ್ಮ ಶಾಂತನ ಅತ್ತಿಗೆ ಮಗಳು ಇರುವ ಕಂಪೆನಿ..

ಮಂಗಳಮ್ಮ :ಅವರೂ ಇದರಲ್ಲಿರುವುದಾ ಎಂದು ನನಗೆ ತಿಳಿದಿಲ್ಲ..

ಅತ್ತೆ: ಹೌದಂತೆ..ಹೇಳಿದ ನೆನಪು... ಕೈತುಂಬಾ ಸಂಬಳ ಬರುತ್ತದಂತೆ...ಕಾರು ಬಂಗಲೆ ಎಲ್ಲವೂ ಸಣ್ಣ ಪ್ರಾಯದಲ್ಲೇ ಕೊಂಡುಕೊಳ್ಳುವಷ್ಟು ಸಂಪಾದನೆ ಇರುತ್ತದಂತೆ..

ಮಂಗಳಮ್ಮ : ಸಂಪಾದನೆ ಇರಬಹುದು.. ಜೊತೆಗೆ ಮುಖ್ಯವಾಗಿ ಹುಡುಗನು ಒಳ್ಳೆಯ ಸಂಸ್ಕಾರವಂತನಂತೆ ಕಾಣುತ್ತಿದ್ದಾನೆ..

ಅತ್ತೆ : ಹೌದು ಮಂಗಳಾ... ನನಗೂ ಒಳಮನಸ್ಸಿನಲ್ಲಿ ಬಾರಂತಡ್ಕದ ಕೇಶವನಿಗಿಂತ ಇವನೇ ಹೆಚ್ಚು ಮೆಚ್ಚುಗೆಯಾದ..

ಮಂಗಳಮ್ಮ: ಮತ್ತೆ ಯಾಕೆ ಅತ್ತೆ ಮಗನಲ್ಲಿ ಹೇಳಲಿಲ್ಲ..

ಅತ್ತೆ: ಅವನು ಮೊದಲೇ ಕೋಪದಲ್ಲಿದ್ದ..ಮತ್ತೆ ನಾನು ಹೇಳಿ ನನ್ನ ಮೇಲೂ ರೇಗುವುದು ಬೇಡಾಂತ ಸುಮ್ಮನಾದೆ...

      ಮಂಗಳಮ್ಮ ನಿಟ್ಟುಸಿರು ಬಿಟ್ಟರು.. ಇವರಿಗೆ ಮಗ ರೇಗುವುದೇ ದೊಡ್ಡ ವಿಷಯ ಮೊಮ್ಮಗಳ ಭವಿಷ್ಯಕ್ಕಿಂತ.. ಮೈತ್ರಿಯ ಮೇಲಿನ ಪ್ರೀತಿಯಿಂದಾದರೂ ಮಗನಿಗೆ ಒಂದು ಬುದ್ಧಿಮಾತು ಹೇಳಿದರೆ ಎಷ್ಟು ಬೆಲೆಯಿತ್ತು...ಎಂದು ತನ್ನೊಳಗೇ ಅಂದುಕೊಂಡರು..



                      *****

    ಗಂಡ ನಗುಮುಖವನ್ನು ಹೊತ್ತು ಬಂದಾಗಲೇ ಮಮತಾ ಶುಭಸುದ್ದಿಯ ನಿರೀಕ್ಷೆಯಲ್ಲಿದ್ದರು. ಬಾಯ್ಬಿಟ್ಟು ಹೇಳಿದಾಗಲಂತೂ ಬಹಳ ಸಂತಸಪಟ್ಟುಕೊಂಡರು.ಎಲ್ಲ ದೇವರ ಮೇಲೆ ಭಾರ ಎಂದು ಹೇಳಿದಾಗ...

ಗಣೇಶ ಶರ್ಮ:"ಏನೇ..ಹಾಗಂತೀ.."

ಮಮತಾ: ಅಷ್ಟು ದೊಡ್ಡ ಶ್ರೀಮಂತರ ಮನೆ ಮಗಳು..ನಮ್ಮ ಮನೆಗೆ ಹೆಣ್ಣು ಕೊಡುತ್ತಾರೋ ಇಲ್ಲವೋ..ಎಂಬ ಆತಂಕ...

ಗಣೇಶ ಶರ್ಮ: ಯಾವುದಕ್ಕೂ ಮನಸ್ಸಿಗೆ ಹಚ್ಚಿಕೊಳ್ಳಲು ಹೋಗುವುದು ಬೇಡ..ಸಂಜೆ ಕಿಶನ್ ಗೆ ಸಿಹಿಸುದ್ದಿ ತಿಳಿಸಿ..ಅಳಿಯ ಮಗಳಂದಿರನ್ನೆಲ್ಲಾ ಕೇಳಿ ಒಂದು ನಿರ್ಧಾರಕ್ಕೆ ಬರೋಣ...

ಮಮತಾ : ಹಾಗೇ ಆಗ್ಲೀ..

ಗಣೇಶ ಶರ್ಮ : ನಾಳೆ ಮಂಗಳವಾರ..ನಾಳೆ ಬೇಡ..ನಾಡಿದ್ದು ಶಾಸ್ತ್ರಿಗಳ ಕುಟುಂಬಕ್ಕೆ ವಿಷಯ ತಿಳಿಸಬಹುದು..ಒಳ್ಳೆಯ ದಿನ ಬುಧವಾರ...

ಮಮತಾ : ನಾವು ಸೀದಾ ಅವರನ್ನು ಸಂಪರ್ಕಿಸುವುದು ಕ್ಕಿಂತ ಯಾರಾದರೂ ನೆಂಟರ ಮೂಲಕ ವಿಷಯ ತಿಳಿಸೋಣ.. ಇಲ್ಲಾಂದ್ರೆ ಲವ್ ಮ್ಯಾರೇಜ್ ಅಂತ ಎಲ್ಲರೂ ಸುದ್ದಿ ಹಬ್ಬಿಸ್ತಾರೆ ...

ಗಣೇಶ ಶರ್ಮ : ನಮ್ಮ ನೆಂಟರಲ್ಲಿ ಅವರ ಸಂಬಂಧಿಕರು ಯಾರಾದರೂ ಇದ್ರೆ ಆದೀತು.. ಇಲ್ಲಾಂದ್ರೆ ಅದೂ ಕಷ್ಟ.. ಸುಮ್ಮನೆ ಇನ್ಯಾರನ್ನೋ ಕೇಳಿ ಮತ್ತೇನೋ ಎಡವಟ್ಟು ಆದರೆ..ಈಗಿನ ಕಾಲ ಕಷ್ಟ..

ಗಂಡ ಹೆಂಡತಿ ಇಬ್ಬರೂ ಕುಳಿತು ತಮ್ಮ ಮಗನ ಮದುವೆಯ ವಿಚಾರವನ್ನು ಚರ್ಚಿಸಿದರು...


                        ****
       ಬಂಗಾರಣ್ಣ ಮತ್ತು ಕೇಶವ್ ಇಬ್ಬರೂ ಮನೆಗೆ ಹಿಂದಿರುಗಿದರು..ನಜ್ಜುಗುಜ್ಜಾದ ಜೀಪಿನ ಮುಂಭಾಗವನ್ನು ಕಂಡು ಅಮ್ಮ ಸುಮಾ ಪ್ರಶ್ನಿಸುತ್ತಲೇ ಅಂಗಳಕ್ಕಿಳಿದರು..

ಸುಮಾ:"ಅಲ್ಲಾ ನಾನು ಹೋಗುವಾಗಲೇ ಹೇಳಿದ್ದೆ.. ರಾಹುಕಾಲ ಗುಳಿಗಕಾಲ ಬಿಟ್ಟು ಹೋಗಬೇಕು ಅಂತ..ಕೇಳಿದ್ರಾ..ನನ್ನ ಮಾತು..

ಬಂಗಾರಣ್ಣ : ನಾನೆಲ್ಲಿ ಬೇಡ ಅಂದೇ..ನಿನ್ನ ಮುದ್ದಿನ ಮಗರಾಯನಿಗೆ ಅವಸರವಾದ್ದು...

ಮಗ ಕೇಶವ್ ನ ಮುಖ ಕೋಪದಿಂದ ಕಪ್ಪೇರಿತ್ತು..ಅದನ್ನರಿತ ಅಮ್ಮ..

ಸುಮಾ : ಇನ್ನು ಚಿಂತಿಸಿ ಫಲವಿಲ್ಲ..ಇಷ್ಟರಲ್ಲೇ ಹೋಯ್ತಲ್ಲಾ..ಹೆಚ್ಚೇನೂ ಅಪಾಯವಾಗದ್ದು ಪುಣ್ಯ..

ಕೇಶವ್ : ಇವತ್ತು ಹೋಗದಿದ್ರೇ ಚೆನ್ನಾಗಿತ್ತು..ನನ್ನ ಕ್ರಿಕೆಟ್ ಮ್ಯಾಚ್ ಕೂಡಾ ಸ್ವಲ್ಪ ಮಿಸ್ಸಾಯ್ತು..ಈಗ ನೋಡುವ ಮೂಡ್ ಕೂಡ ಕೆಟ್ಟೋಯ್ತು...


ಬಂಗಾರಣ್ಣ : ಅಷ್ಟಕ್ಕೆಲ್ಲಾ ಸಿಟ್ಟು ಮಾಡಿಕೊಂಡರೆ
ಆಗುತ್ತಾ.. ಜೀವನದಲ್ಲಿ ಇಂತಹದ್ದೆಲ್ಲ ಮಾಮೂಲಿ.. ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕಪ್ಪಾ...

ಕೇಶವ್ : ಹೋಗಿದ್ದೇ ವೇಸ್ಟ್..

ಸುಮಾ : ಏನಾಯ್ತು..ಹಾಗಾದ್ರೆ ಜಾತಕ..

ಬಂಗಾರಣ್ಣ :‌ಏನಾಗೋದು ..ಆ ಶಾಸ್ತ್ರಿಗಳದು ಬರೀ ಮೋಸ..

ಸುಮಾ :ಮೋಸನಾ..ಏನದು..?

ಬಂಗಾರಣ್ಣ : ಹೌದು ಸುಮಾ.. ಅವರು ಮಗಳ ಜಾತಕ ನಮಗೆ ಮಾತ್ರ ಕೊಟ್ಟಿದ್ದಲ್ಲ..ನಮಗೆ ಕೊಟ್ಟು ನಾವು ಉತ್ತರಿಸುವ ಮೊದಲೇ ಬೇರೆಯವರಿಗೂ ಕೊಟ್ಟಿದ್ದಾರೆ.. ಹೆಣ್ಣು ಅಂದ್ರೆ ಏನು ಅಂದುಕೊಂಡಿದ್ದಾರೆ ..ಮದುವೆಯ ಸರಕು ಅಂತಾನಾ... ಹಲವು ಜನಕ್ಕೆ ಒಮ್ಮೆಲೇ ಜಾತಕ ಕೊಡಲು.. ಒಬ್ಬರಿಗೆ ಕೊಟ್ಟ ನಂತರ ಉತ್ತರ ಹೇಳುವವರೆಗೆ ಕಾಯಲು ತಯಾರಿರಬೇಕು ..

ಸುಮಾ :  ಸಂಗತಿ ಏನೋ ಯಾರಿಗೆ ಗೊತ್ತು..

ಕೇಶವ್ : ಆ ಜೋಯಿಸರೆದುರು ನಮಗೆ ಅವಮಾನ... ಸುಖಾಸುಮ್ಮನೆ ಅವಮಾನವಾಗುವಂತೆ ಮಾಡಿದ ಶಾಸ್ತ್ರಿಗಳು ಕೂಡ ಅವಮಾನ ಅನುಭವಿಸಲೇ ಬೇಕು... ಇಲ್ಲದಿದ್ದರೆ...

ಬಂಗಾರಣ್ಣ : ಕೇಶವ್... ಸ್ವಲ್ಪ ಸಮಾಧಾನ ಮಾಡ್ಕೋ..ಇಲ್ಲಿ ನಾವು ಅವರಿಗೆ ಅವಮಾನ ಮಾಡಲು ಹೋದರೆ ನಮಗೇನೂ ಲಾಭವಿಲ್ಲ..

ಕೇಶವ್ : ಲಾಭದಾಸೆಯೂ ಇಲ್ಲ... ಮುಯ್ಯಿಗೆ ಮುಯ್ಯಿ ತೀರಿಸಿಯೇ ತೀರೀಸುತ್ತೇನೆ..ನನ್ನ ಪಂಜರದಲ್ಲಿರಬೇಕಾದ ಮುದ್ದಿನ ಗಿಣಿ ಯಾರದೋ ಪಾಲಾದರೆ ನಾನು ಸುಮ್ಮನಿರಲಾರೆ...

ಬಂಗಾರಣ್ಣ : ನೋಡು ಕೇಶವ್..ಮೊನ್ನೆಯೇ ಪುರುಷೋತ್ತಮ ಜೋಯಿಸರು ಹೇಳಿದ್ದಾರೆ ಜಾತಕ ಹೊಂದಾಣಿಕೆ ಆಗುವುದಿಲ್ಲ ಅಂತ..ಇವತ್ತೂ ನಡೆದದ್ದು ಅದೇ ತಾನೇ..ಅದಕ್ಕೆ ಹೇಳುವುದು ಜ್ಯೋತಿಷ್ಯವನ್ನು ನಂಬು ಅಂತ.. ಅವರು ಹೇಳಿದ್ದೇ ನಡೆದಿದೆ.. ನಮ್ಮ ಹಠ ನಡೆದಿಲ್ಲ..ಠುಸ್ಸಾಗಿದೆ..

ಕೇಶವ್ : ಅದೆಲ್ಲ ನಂಗೊತ್ತಿಲ್ಲ ಅಪ್ಪಾ..ನನಗೆ ಆ ಸಕ್ಕರೆ ಗೊಂಬೆಯನ್ನು ಸವಿಯಲೇ ಬೇಕು...

ಬಂಗಾರಣ್ಣ : ನೀನು ತಾಳ್ಮೆಯಿಂದಿದ್ದರೆ ಅವಳೇನು ... ಅವಳನ್ನು ಮೀರಿಸುವ ಅಪ್ಸರಕನ್ಯೆಯೇ ನಮ್ಮ ಶ್ರೀಮಂತಿಕೆಯನ್ನು,ನಿನ್ನ ಬುದ್ಧಿವಂತಿಕೆಯನ್ನು ನೋಡಿ ಒಲಿಯಬಹುದು...

ಕೇಶವ್ : ನಂಗೆ ಅವಳನ್ನು ಪಡೆಯಲೇ ಬೇಕು..

ಎಂದು ರೊಚ್ಚಿಗೆದ್ದ ಮಗನನ್ನು ಸಂತೈಸಲು ಸೋತು ಅಪ್ಪ ಅಮ್ಮ ಇಬ್ಬರೂ ಮೌನವಾದರು.ಸುಮಾ ಮಗನಿಗೆ ಕೋಲ್ಡ್ ಜ್ಯೂಸ್ ಕೊಟ್ಟು ಸಮಾಧಾನಪಡಿಸಿದರು.. ಮಗನ ಹಠವನ್ನು ಎಳವೆಯಿಂದಲೇ ಕಂಡ ತಾಯಿ ಸುಮಾ ಭಯಪಟ್ಟರು..ಮಗ ಏನಾದರೂ ಕೆಟ್ಟ ಕೆಲಸಕ್ಕೆ ಪುನಃ ಕೈ ಹಾಕದಿರಲಿ ಅಂತ ದೇವರಿಗೆ ಮೊರೆಯಿಟ್ಟರು..ಒಮ್ಮೆ ನಡತೆ ತಪ್ಪಿ ಏನೆಲ್ಲ ಕೇಳಬೇಕಾಯಿತು ಬಂಧು ಬಾಂಧವರಿಂದ.. ಇನ್ನು ನಮ್ಮೂರಿನಲ್ಲೇ ಇದ್ದು ಅಡ್ಡ ದಾರಿ ಹಿಡಿದರೆ..ಜೀವನ ಪರ್ಯಂತ ಕೆಟ್ಟ ಹೆಸರು ಅಂಟಿಸಿಕೊಳ್ಳಬೇಕಾದೀತು ... ಆದಷ್ಟು ಬೇಗ ಮಗನಿಗೆ ಬೇರೆ ಹೆಣ್ಣು ಹುಡುಕಿ ಮದುವೆ ಮಾಡಿ ಬೀಡಬೇಕು ಎಂದು ತನ್ನ ಮನದಲ್ಲೇ ನಿರ್ಧರಿಸಿದರು...


                    ****

    ಸಂಜೆ ಕಿಶನ್ ಗೆ ಕರೆ ಮಾಡಿದ ಗಣೇಶ ಶರ್ಮ.
ಕಿಶನ್ ಎಷ್ಟು ಬಾರಿ ಕರೆ ಮಾಡಿದರೂ ಫೋನ್ ಎತ್ತಲೇಯಿಲ್ಲ..


          ಮುಂದುವರಿಯುವುದು...


✍️... ಅನಿತಾ ಜಿ.ಕೆ.ಭಟ್.
28-02-2020.

Wednesday, 26 February 2020

ಮೌನ

#ಮೌನ

ಶರಧಿಯಲೆಗಳು ಮೇಲೆದ್ದು
ತೀರಕೆ ಬಡಿಯುತಿವೆ ಕ್ರೋಧದಿ
ಮರಳಿ ಶಾಂತವಾಗುತಿವೆ; ಬಿಡದೆ
ಉರಿಯುತಿದೆ ತನ್ನೊಡಲ ಬೇಗುದಿ||೧||

ಪ್ರಶಾಂತ ಮನದ ಭಿತ್ತಿಯಲ್ಲಿ
ನಿಶೆಯ ಛಾಯೆ ಕವಿದಿದೆ
ನಾಶಮಾಡುತ ಕೊಚ್ಚೆಯ ಅಲೆ
ಆಶಾಭಾವ ಮೈದಾಳಬೇಕಿದೆ||೨||

ಕಡಲಾಳದಲಿಹ ಮುತ್ತುರತ್ನವ
ಕಡಕೇಳಿ ಪಡೆದರೆ ;ತೀರೀತೇ
ಒಡಲಾಳದಲಿ ಮುತ್ತಿನಂತೆ ಕಾಯ್ವೆನೆಂದ
ಗಂಡನ ಚಟದ ಪೊರೆ ||೩||

ನಿಲ್ಲಲೊಂದು ಆಸರೆಯನಿಟ್ಟಿದೆ
ಜಲಧಿಯ ಮಳಲು
ಸೊಲ್ಲಕೇಳುವವರ ಕಿವಿ ಮುಚ್ಚಿದೆ
ಬಲಹೀನಳ ಅಳಲು||೪||

ದೂರದಾ ನೋಟದಲಿ ಹುಡುಕುತ
ಇರಬಹುದೇ ಸಂತೃಪ್ತಿ
ಕೊರಗುವ ಗುರುತರ ನೋವ
ಕರಗಿಸಬಲ್ಲುದೇ  ಸನ್ಮತಿ||೫||

ನೋವುನಲಿವುಗಳ  ಯಾನದಲಿ
ಕಾವುಪಡೆದಿಹ ಮೌನ
ಸಾವು ಬದುಕಿನ ಸತ್ಯಪಥದಲಿ
ಬೇವುಬೆಲ್ಲದ ಸವಿಗಾನ||೬||


✍️... ಅನಿತಾ ಜಿ.ಕೆ.ಭಟ್.
27-02-2020.


ಚಿತ್ರ ಕೃಪೆ-ಕನ್ನಡ ಕಥಾಗುಚ್ಛ.

ಜೀವನ ಮೈತ್ರಿ-ಭಾಗ ೨೮(28)





        ಕೇಶವ್ ಯಾವತ್ತೂ ವೇಗವಾಗಿಯೇ ವಾಹನ ಚಾಲನೆ ಮಾಡುವವನು.. ಇಂದು ಮಾತ್ರ ನಿಧಾನವಾಗಿ ಚಲಾಯಿಸುತ್ತಿದ್ದ..ಆಗ ಗೆಳೆಯನ ಕರೆ ಬಂದಿತು.." ಕೇಶವ್.. ಬೆಟ್ಟಿಂಗ್ ನೆನಪಿದೆ ತಾನೇ...
ನಾನು ಸೋತರೆ ... ಇಪ್ಪತ್ತು ಸಾವಿರ ನಿನಗೆ

ನೀನು ಸೋತರೆ ಇಪ್ಪತ್ತು ಸಾವಿರ ನನಗೆ.."

"ಹೂಂ..ಸರಿ ಗೆಳೆಯ.. ಅದಕ್ಕೇ ಪೇಟೆಯ ಕೆಲಸವನ್ನೆಲ್ಲ ಮುಗಿಸಿ ಬೇಗ ಮನೆ ಕಡೆ ಹೋಗಬೇಕೆಂದಿದ್ದೇನೆ"
"..ಸರಿ ಸರಿ ..ಬೇಗ ಮ್ಯಾಚ್ ಆರಂಭವಾಗುವ ಮುನ್ನವೇ ಮನೆ ತಲುಪಿ.." ಎಂದು ಹೇಳಿದನು..ಒಪ್ಪಿದ ಕೇಶವ್ ನ ಮನಸ್ಸು ಬೆಟ್ಟಿಂಗ್ ನಲ್ಲಿ ಮುಳುಗಿತು.. ಬೆಟ್ಟಿಂಗ್ ನಲ್ಲಿ ಹಣ ಗೆದ್ದು... ಬಾಳಿನಲ್ಲಿ ಮೈತ್ರಿಯೆಂಬ ಸುಂದರಿಯನ್ನು ಗೆದ್ದರೆ ಮತ್ತೆ ನನ್ನಂತಹ ಅದೃಷ್ಟವಂತ ಪುರುಷರು ಇರಲಾರರು..
ಮನದೊಳಗೆ ಲೆಕ್ಕಾಚಾರ ಹಾಕುತ್ತಾ ಕೇಶವ್ ಒಳ್ಳೆಯ ಮೂಡಿನಲ್ಲಿದ್ದ...


      ಒಮ್ಮಿಂದೊಮ್ಮೆಲೇ ಬಂದ ಸದ್ದಿನಿಂದ ಬೆಚ್ಚಿಬಿದ್ದರು ಬಂಗಾರಣ್ಣ... ಏನಾಯಿತೆಂದು ಕಣ್ಣುತೆರೆದು ನೋಡಿದರೆ.... ಜೀಪ್ ಮಾರ್ಗದ ಬದಿಯ ಚರಂಡಿಗಿಳಿದಿತ್ತು.. ತಿರುವಿನಲ್ಲಿ ಎದುರಿನಿಂದ ವೇಗವಾಗಿ ಬರುತ್ತಿದ್ದ ಕಾರಿಗೆ ಗುದ್ದುವುದನ್ನು ತಪ್ಪಿಸಲು ಜೀಪಿನ ಸ್ಟೇರಿಂಗ್ ಒಮ್ಮೆಲೇ ತಿರುಗಿಸಿದ್ದ ಕೇಶವ್...


   ಅಪಾಯವೇನೂ ಹೆಚ್ಚು ಆಗದಿದ್ದುದು ದೊಡ್ಡದು ಎಂದುಕೊಂಡು ಮೆಲ್ಲನೆ ಜೀಪಿನಿಂದ ಇಳಿದರು ಬಂಗಾರಣ್ಣ.. ಕೇಶವ್ ಕಾರಿನವನಿಗೆ ಗದರಿಸತೊಡಗಿದ..ವಾದವಿವಾದ ಬಲವಾಯಿತು...ಜನಸೇರತೊಡಗಿದರು... ಜೀಪಿನ ಎದುರು ಭಾಗ ಸ್ವಲ್ಪ ನಜ್ಜುಗುಜ್ಜಾಗಿತ್ತು.ಖರ್ಚು ಕೊಡಬೇಕೆಂದು ಹಠ ಹಿಡಿದರು ಕೇಶವ್ ಮತ್ತು ಬಂಗಾರಣ್ಣ.. ಒಂದು ಗಂಟೆ ಶ್ರಮಪಟ್ಟು ಜೀಪನ್ನು ಚರಂಡಿಯಿಂದ ಮೇಲಕೆತ್ತಲು ಸಾಧ್ಯವಾಯಿತು.. ಪರಿಹಾರ ಸ್ವಲ್ಪ ಕೈಗಿತ್ತ ಕಾರಿನ ಚಾಲಕ..


     ಈಗಲೇ ತಡವಾಯಿತು ಎಂದ ಕೇಶವ್ ಗೆ ಜಾತಕ ತೋರಿಸುವ ಮೂಡೇ ಇರಲಿಲ್ಲ.ಆದರೂ ಅಪ್ಪನ ಮಾತಿಗೆ ಒಪ್ಪಿ ಬಾಳೆಮಲೆಗೆ ತೆರಳಿದರು.


    ಗಣೇಶ ಶರ್ಮ ಮೈತ್ರಿ ಮತ್ತು ಕಿಶನ್ ನ ಜಾತಕ ಹಿಡಿದು ತನ್ನ ಸರದಿ ಈಗ ಬರುವುದೆಂದು ಕಾದು ಕುಳಿತಿದ್ದರು.ಇತರರಲ್ಲಿ ಜೋಯಿಸರು ಮಾತನಾಡುವುದನ್ನು ಕೇಳುತ್ತಿದ್ದ ಗಣೇಶ ಶರ್ಮ ಇನ್ನು ಕಿಶನ್ ಮೈತ್ರಿ ಜಾತಕ ನೋಡಿ ಏನು ಹೇಳುತ್ತಾರೋ ಎಂಬ ಆತಂಕ ಕಾಡುತ್ತಿತ್ತು.
ಅವರ ಸರದಿ ಬಂತು.ಒಳಗೆ ನಡೆದರು.


       ಇಬ್ಬರ ಕುಂಡಲಿಗಳನ್ನು ತದೇಕಚಿತ್ತದಿಂದ ಜೋಯಿಸರು ನೋಡುತ್ತಿದ್ದಾರೆ.ತಮ್ಮಲ್ಲೇ ಅಷ್ಟಮದಲ್ಲಿ ಗುರು,ಪಂಚಮದಲ್ಲಿ ಶನಿ, ಶುಕ್ರದೆಸೆ.. ಎಂದು ಲೆಕ್ಕಾಚಾರದಲ್ಲಿ ಮಗ್ನರಾಗಿದ್ದರು...."ನೋಡಿ ಜಾತಕ ಹೊಂದಾಣಿಕೆಯ ಮಟ್ಟಿಗೆ ಅಡ್ಡಿಯಿಲ್ಲ.. ಅರುವತ್ತು ಪರ್ಸೆಂಟ್ ಕೂಡಿ ಬರುತ್ತದೆ..ವಿವಾಹ ಮಾಡಲು ಅಡ್ಡಿಯಿಲ್ಲ.. ಆದರೆ ಸ್ವಲ್ಪ ಗ್ರಹಗತಿಗಳಲ್ಲಿ ದೋಷಗಳಿವೆ.. ಅಗತ್ಯವಾಗಿ ಶಾಂತಿ ಹೋಮ ಮಾಡಿಸಬೇಕಾಗುತ್ತದೆ..ಮದುವೆಗೆ ಮುನ್ನವೇ ಮದುಮಗಳಿಗೆ ಒಂದು ಶಾಂತಿ ಹೋಮ ಕಡ್ಡಾಯವಾಗಿ ಆಗಬೇಕು.. ಇಲ್ಲದಿದ್ದರೆ ವೈವಾಹಿಕ ಜೀವನದ ಮೇಲೆ ಕೆಟ್ಟ ಪ್ರಭಾವ ಬೀರಬಹುದು.. ಅದೊಂದು ಮಾಡಿದರೆ ಮಿಕ್ಕಿದಂತೆ ಹುಡುಗಿಯ ಜಾತಕ ಒಳ್ಳೆಯ ಗ್ರಹಗತಿ ಹೊಂದಿದೆ.. ಇವಳು ಕಾಲಿಟ್ಟ ಮನೆಗೆ ಯಶಸ್ಸನ್ನು ತಂದುಕೊಡಬಲ್ಲ  ಯೋಗಗಳಿವೆ.ಗಂಡನಿಗೆ ಉನ್ನತ ಉದ್ಯೋಗ ಭಾಗ್ಯ ತರಬಲ್ಲ ಜಾತಕ..ಸತ್ಕುಲ ಸಂಜಾತೆಯೆಂದು ಜಾತಕ ಪ್ರಕಾರ ಹೇಳಬಹುದು..."

ಜೋಯಿಸರ ಮಾತುಗಳನ್ನು ಕೇಳಿ ಗಣೇಶ ಶರ್ಮ ಬಹಳ ಸಂತೋಷಪಟ್ಟರು.


    ಜೋಯಿಸರಲ್ಲಿ ಮನೆಯಲ್ಲಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದ್ದ ನಾಗನ ಕಟ್ಟೆ, ದೈವಸ್ಥಾನದ ಆರಾಧನೆಗಳ ಬಗ್ಗೆ ಪ್ರಶ್ನೆ ಕೇಳಿ ದರು..ಬಾಯಲ್ಲಿ ಮಂತ್ರೋಚ್ಛಾರಣೆ ಮಾಡುತ್ತಾ ಕವಡೆಯನ್ನು ಸುತ್ತು ಸುತ್ತು ತಿರುಗಿಸಿದ ಜೋಯಿಸರು ಅದರಿಂದ ಎಂಟು ಕವಡೆಗಳನ್ನು ತೆಗೆದಿರಿಸಿದರು..ಮೇಜಿನಬದಿಯಲ್ಲಿ ಅವುಗಳನ್ನು ಸಮಾನ ಅಂತರದಲ್ಲಿ ಎರಡು ಸಾಲುಗಳಲ್ಲಿರಿಸಿ.." ಪಂಚಮದಲ್ಲಿ ನೀಚ ಗ್ರಹ ... ಸಪ್ತಮದಲ್ಲಿ ಬಲವಿದೆ.. ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ ಎಂದು ಇಲ್ಲಿ ಬಂದು ರಾಶಿಯ ಆಧಾರದಲ್ಲಿ ಹೇಳಬಲ್ಲೆ..ಅಲ್ಲಿ ಹೇಗಿದೆಯೋ ನನಗೆ ಗೊತ್ತಿಲ್ಲ.. ಆದರೆ ಮುಂದಿನ ದಿನಗಳಲ್ಲಿ
ಏನಾದರೊಂದು ಪರಿಹಾರ ದೊರೆಯುವ ನಿರೀಕ್ಷೆಯಿದೆ.."

"ಅಂದರೆ ... ಮುಂದೆ ಪೂಜಾವಿಧಾನದಲ್ಲಿ ಏನಾದರೂ ಬದಲಾವಣೆ ಬೇಕೆಂದು ಹೇಳುತ್ತಿರುವಿರಾ.."

"ನೋಡಿ... ನಿರ್ವಹಣೆ ಅಂದರೆ ಬರೀ ಪೂಜಾವಿಧಾನ ಅಲ್ಲ...ಗುಡಿ ,ಕಟ್ಟೆ ಶಿಥಿಲವಾಗಿರಲೂಬಹುದು...ಅಶೌಚಾದಿ ಕ್ರಿಯೆಗಳು ಮೇಲಿಂದ ಮೇಲೆ ಬಂದಿರಬಹುದು.. ಏನೆಂದು ಒಮ್ಮೆಲೇ ಹೇಳಲು ಸಾಧ್ಯವಿಲ್ಲ.. ಪುನಃ ಅದಕ್ಕೆಂದೇ ವಿವರವಾದ ಪ್ರಶ್ನೆಯಿಟ್ಟಾಗ ಮಾತ್ರ ಹೇಳಲು ಸಾಧ್ಯ..ನೀವೀಗ ಅದನ್ನು ಮಾಡುವ ಸ್ಥಿತಿಯಲ್ಲಿ /ಮನಸ್ಥಿತಿಯಲ್ಲಿ ಇದ್ದೀರಾ.."

"ಮನಸ್ಸು ಇದೆ ಆದರೆ ಶಕ್ತಿ ಇಲ್ಲ..."

"ಹಾಗಿದ್ದರೆ ಈ ವಿಷಯದಲ್ಲಿ ಹೆಚ್ಚಿನ ಪ್ರಶ್ನಾವಿಮರ್ಶೆ ಬೇಡ...."

"ತಿಳಿದುಕೊಂಡರೆ ಮುಂದೆ ಅದಕ್ಕೆ ತಕ್ಕಂತೆ ನಡೆಯಬಹುದು ಎಂದು...."

"ನೋಡಿ... ಮಾಡುವುದಿದ್ದರೆ ಮಾತ್ರ ಪ್ರಶ್ನೆಯಿಡುವುದು ಜ್ಯೋತಿಷ್ಯದ ಪದ್ಧತಿ.ಸುಮ್ಮನೆ ನೀವು ಕೇಳುವುದು.. ನಾವು ಏನೇನೋ ಹೇಳುವುದು..ನಿಮ್ಮ ಮನಸ್ಸಲ್ಲಿ ಅದೇ ಬೇರೂರಿ ಅನಾಹುತಕ್ಕೆ ಕಾರಣವಾಗುವುದು ಬೇಡ..ಈಗ ಯಥಾಶಕ್ತಿ ದೈವಕ್ಕೆ, ನಾಗನಿಗೆ ಸೇವೆಕೊಡಿ ..ನಂತರ ಅವನೇ ಮುಂದೆ ಶಕ್ತಿ ಕೊಟ್ಟಾನು.."

"ಸರಿ ಹಾಗಿದ್ರೆ... "ಎಂದು ಗಣೇಶ ಶರ್ಮ ನಿಟ್ಟುಸಿರು ಬಿಟ್ಟರು..

ಜೋಯಿಸರು ಮೈತ್ರಿ ಕಿಶನ್ ಜಾತಕದ ಕೂಟ ಹೊಂದಾಣಿಕೆಯನ್ನು ಚೀಟಿನಲ್ಲಿ ಬರೆಯುತ್ತಿದ್ದರು..ಗಣೇಶ ಶರ್ಮ ಜೋಯಿಸರ ಕೈಬರಹವನ್ನು ನೋಡುತ್ತಾ ಕುಳಿತಿದ್ದರು..ಜೋಯಿಸರಿಗೆ ವಯಸ್ಸಾದರೂ ಕೈಬರಹ ಮಾತ್ರ ಪ್ರಿಂಟ್ ಮಾಡಿದ ಅಕ್ಷರವನ್ನು ನಾಚಿಸುವಂತಿತ್ತು..ಸ್ಫುಟವಾದ ಚೂಪಾದ ಬರಹ.. ಚೀಟಿಯನ್ನು ಗಣೇಶ ಶರ್ಮರ ಕೈಗಿತ್ತರು ಜೋಯಿಸರು.. ಗಣೇಶ ಶರ್ಮ ಅಂಗಿ ಕಿಸೆಯಿಂದ ನೋಟು ತೆಗೆದು ಜೋಯಿಸರಿಗೆ ಕೊಟ್ಟು ತಲೆಬಾಗಿಸಿದರು.."ಶುಭಸ್ಯ ಶೀಘ್ರಂ..." ಎಂದು ಜೋಯಿಸರ ಉವಾಚ..

ಖುಷಿಯಿಂದ ಮುಖ ಅರಳಿಸಿಕೊಂಡು ಹೊರನಡೆದರು ಶರ್ಮರು.. ಕಾರು ಏರಿ ಮನೆಗೆ ತೆರಳಿದರು..

           ಕೇಶವ್ ಮತ್ತು ಬಂಗಾರಣ್ಣ ಕಾದು ಕಾದು ಸುಸ್ತಾದರು..ಸರತಿ ಉದ್ದವಿತ್ತು..ಕೇಶವನ ಮುಖದಲ್ಲಿ ಅಸಹನೆ ತಾಂಡವವಾಡುತ್ತಿತ್ತು.. ಅವನಿಗೆ ಕ್ರಿಕೆಟ್ ಮ್ಯಾಚ್ ವೀಕ್ಷಿಸುವ ಸಮಯವಾಗುತ್ತಾ ಬಂತು... ಜೋಯಿಸರು ಹೊತ್ತು ಮೀರುತ್ತಿದ್ದರೂ ತಾನು ಊಟಕ್ಕೆ ತೆರಳದೆ ಬಂದವರನ್ನು ಮಾತನಾಡಿಸುವುದರಲ್ಲೇ ಮಗ್ನರಾಗಿದ್ದರು...ಬಂಗಾರಣ್ಣನ ಸರದಿ ಬಂತು.
ಇಬ್ಬರೂ ಒಳಗೆ ನಡೆದರು.. ಜಾತಕವನ್ನು ಜೋಯಿಸರ ಮುಂದಿಟ್ಟ ಬಂಗಾರಣ್ಣ.. ಒಮ್ಮೆ ಮೇಲಿಂದ ಮೇಲೆ ನೋಡಿದ ಜೋಯಿಸರು ಏನನ್ನೂ ಮಾತನಾಡದೆ ತಲೆಯಲ್ಲಾಡಿಸಿದರು...  "...ಜೋಯಿಸರೆ ಇಬ್ಬರ ಜಾತಕ ಹೊಂದಾಣಿಕೆ ನೋಡಬೇಕಿತ್ತು.. ಇವನು ಕೇಶವ..ನನ್ನ ಏಕೈಕ ಪುತ್ರ.. ಇಂಜಿನಿಯರಿಂಗ್ ಓದಿದವ.."


ಜೋಯಿಸರ ಮುಖದಲ್ಲಿ ಅದೇ ಭಾವ..ಬದಲಾಗಲೇಯಿಲ್ಲ.. ಏನೊಂದೂ ಕೇಶವ್, ಬಂಗಾರಣ್ಣನಿಗೆ ಅರ್ಥವಾಗಲಿಲ್ಲ ..

"ಹೊಂದಾಣಿಕೆಯಿದೆಯಾ..".ಬಂಗಾರಣ್ಣನ  ದನಿಯಲ್ಲಿ ಸ್ವಲ್ಪ ದರ್ಪವೂ ಇತ್ತು..

"ನೋಡಿ ಯಾರಿಗೆ ಎಲ್ಲಿನ ನೀರು ಕುಡಿಯುವ ಭಾಗ್ಯ ಬರೆದಿರುತ್ತದೆಯೋ ಅಲ್ಲಿಗೇ ಸಲ್ಲುತ್ತಾರೆ..ಈ ವಿಷಯದಲ್ಲಿ ಹೆಚ್ಚೇನೂ ಹೇಳಲಾಗದು.."

"ಒಗಟಾಗಿ ಹೇಳಿದರೆ ಅರ್ಥೈಸಿಕೊಳ್ಳುವುದು ಹೇಗೆ..??"

"ನೋಡಿ..ಆ ಯುವತಿಗೆ ಈಗಾಗಲೇ ವಿವಾಹ ಸಂಬಂಧ ಹೊಂದಾಣಿಕೆಯಾಗಿದೆ  ..ಬೆಳಗ್ಗೆಯಷ್ಟೇ ನಾನೇ ಮೇಳಾಮೇಳಿ ನೋಡಿದ್ದೆ.."

"ಹೌದೇ..ಛೇ...ಹೀಗೂ ಹೆಣ್ಣಿನ ಕಡೆಯವರು ಮೋಸ ಮಾಡುತ್ತಾರಾ..ಅಲ್ಲ ಒಂದು ಕಡೆಗೆ ಜಾತಕ ಕೊಟ್ಟ ಮೇಲೆ ಉತ್ತರ ಬರುವಷ್ಟು ಸಮಯ ಕಾಯುವ ತಾಳ್ಮೆ ಅವರಿಗಿಲ್ಲದೆಹೋಯಿತೇ...??"


"ಮೊದಲು ಯಾರಿಗೆ ಜಾತಕ ಕೊಟ್ಟರೋ ನಾನರಿಯೆ...ಇಲ್ಲಿಗೆ ಮೊದಲು ಬಂದವರ ಜಾತಕ ವಿಮರ್ಶೆ ಮಾಡಿ ಕಳುಹಿಸಿದ್ದೇನೆ.."

"ಏನಾದರೂ ...ಇಲ್ಲಿವರೆಗೆ ಬಂದಿದ್ದೇವಲ್ಲ ..ಅದಕ್ಕಾದರೂ ಒಮ್ಮೆ ನೋಡಿಬಿಡಿ.."

"ಇಲ್ಲ ..ಹಾಗೆ ಮಾಡಲು ಸಾಧ್ಯವಿಲ್ಲ..."

"ಏನು ಸಾಧ್ಯವಿಲ್ಲದೇ.. ಏಯ್..ಬೇಗ ನೋಡಿ ಹೇಳ್ತೀಯೋ ಇಲ್ವೋ... " ಕೇಶವ್ ಸಿಟ್ಟಿನಿಂದ ಏಕವಚನದಲ್ಲಿ ಸಂಬೋಧಿಸಿದ..

"ಇಲ್ಲ..ನಮಗೂ ನಮ್ಮ ಜ್ಯೋತಿಷ್ಯ ವೃತ್ತಿ ಧರ್ಮದ ವಿರುದ್ಧವಾಗಿ ನಡೆದುಕೊಳ್ಳಲು ಸಾಧ್ಯವೇ ಇಲ್ಲ.."

ಶಾಂತವಾದ ದನಿಯಲ್ಲಿ ನುಡಿದ ಜೋಯಿಸರ ಮಾತಿನಲ್ಲಿ ಅರ್ಥವಿತ್ತು...ನಿಖರತೆಯಿತ್ತು...


'ಬಂದ ದಾರಿಗೆ ಸುಂಕವಿಲ್ಲ ' ಎಂಬ ಮಾತಿನಂತೆ ಅನ್ಯಮಸ್ಕತೆಯಿಂದ ಹಿಂದಿರುಗಬೇಕಾಯಿತು ಬಂಗಾರಣ್ಣ ಮತ್ತು ಕೇಶವ್...


                 *****

ಶಾಸ್ತ್ರಿ ನಿವಾಸದಲ್ಲಿ "ಲ್ಯಾಂಡ್ ಲೈನ್ ಫೋನ್ ಹಾಳಾಗಿದೆ...ಡಯಲ್ ಟೋನ್ ಬರ್ತಾ ಇಲ್ಲ" ಎಂದು ಮಗ ಭಾಸ್ಕರ ಬಂದ ಕೂಡಲೇ ಮಹಾಲಕ್ಷ್ಮಿ ಅಮ್ಮ ತಿಳಿಸಿದರು..ಮಂಗಳಮ್ಮ ತನಗೇನೂ ಅರಿಯದಂತೆ ಸುಮ್ಮನಿದ್ದರು...


  ಮುಂದುವರಿಯುವುದು...


✍️... ಅನಿತಾ ಜಿ.ಕೆ.ಭಟ್.
27-02-2020.












ಶುದ್ಧ ಸ್ನೇಹ ಬಂಧ



ನಿಶೆಯು ತಬ್ಬಿದಾಗ
ಮನೆಯ ಕಾದ ಶುನಕ
ವಿಷಯ ಕೇಳಿದಾಗ
ಬೊಗಳಿ ಕಾವ ಕಾಯಕ||೧||

ಉಷೆಯ ಕಿರಣ ಸೋಕಲು
ಮುದುರಿಕೊಂಡು ಬೆಚ್ಚನೆ
ಒಡೆಯನೊಲುಮೆ ವಿಶ್ವಾಸವ
ತಾನು ಗೆದ್ದು ಬಿಮ್ಮನೇ||೨||

ಹಸಿದ ಗೆಳತಿ ಮಹಿಷಿ
ನಿಂತು ಹುಲ್ಲು ಮೇಯುತಿದ್ದಿತು
ಮೈಯನೇರಿ ಕುಳಿತ ನಾಯಿ
ಕ್ಷಣದಿ ನಿದಿರೆಗಿಳಿಯಿತು||೩||

ಕೊರಳಬಳ್ಳಿ ಬಿಗಿದುಕೊಂಡು
ಕೆಸರಿನಲ್ಲಿ ನಿಂತರೂ
ಮಿತ್ರನೆಂದು ಇವನು ತನಗೆ
ಕೊಡುತ ಮೈಯ ಆಸರೆ||೪||

ಹಗಲಿರುಳು ಊರ ಕಾದವಗೆ
ಕನಸಿನಲ್ಲು ಕೇಡುಬಗೆಯದು
ಎಮ್ಮೆಗೆ ನಾಯಿ ಭಾರವೇ
ನಿಷ್ಕಲ್ಮಶ ಮನಸಿರೆ||೫||

ಮಾದರಿಯು ಮನುಜಗೆ
ಎಮ್ಮೆ-ಶುನಕ ಶುದ್ಧಸ್ನೇಹವು
ಮತ್ಸರ-ಚಿಂತೆ ಬಿಟ್ಟವಗೆ
ಒಲಿಯುವಂತಹ ಬಂಧವು||೬||

✍️... ಅನಿತಾ ಜಿ.ಕೆ.ಭಟ್.
26-02-2020.

ಚಿತ್ರ ಕೃಪೆ : ಹವಿಸವಿ ಬಳಗ

Tuesday, 25 February 2020

ಜೀವನ ಮೈತ್ರಿ-ಭಾಗ ೨೭(27)




   ಶಾಸ್ತ್ರೀ ನಿವಾಸ ದಲ್ಲಿ  ವಾತಾವರಣ ಗಂಭೀರವಾಗಿತ್ತು.ಕೆಲಸದಾಳು ಸೇಸಪ್ಪ "ಅಕ್ಕಾ.. ನೀರು ಬೋಡು"(ಅಕ್ಕಾ ನೀರು ಬೇಕು) ಎಂದು ಎರಡು ಬಾರಿ ಕೂಗಿದರೂ ಮಂಗಳಮ್ಮ ಹೊರಗೆ ಬಾರದಿದ್ದಾಗ ಅವನಿಗೂ ಸಂಶಯ ಬಂದಿತ್ತು.ಅಂಗಳದಲ್ಲಿದ್ದ ಮಹಾಲಕ್ಷ್ಮಿ ಅಮ್ಮ ನೀರು ತಂದು ಕೊಟ್ಟರು...ನಿನ್ನೆ ಭಾಸ್ಕರ ದನಿ ಏರುದನಿಯಲ್ಲಿ ಮಾತನಾಡುತ್ತಿದ್ದಾಗ ಅವನು ದನದ ಕೊಟ್ಟಿಗೆಯಲ್ಲಿ ಸೊಪ್ಪು ಕೊಚ್ಚುತ್ತಿದ್ದ..ಯಾವತ್ತಿನಂತಿಲ್ಲ ದನಿಗಳ ಸ್ವರ ಎಂಬುದು ಅವನಿಗೆ ಅರಿವಾಗಿತ್ತು..ಯಾಕಾಗಿರಬಹುದು ಭಾಸ್ಕರ ಶಾಸ್ತ್ರಿಗಳು ಗದರಿದ್ದು.. ಏನಾದರೂ ಶಂಕರ ಭಾಸ್ಕರ ಶಾಸ್ತ್ರಿಗಳ ಮಧ್ಯೆ ಆಸ್ತಿ ಪಾಲಿನ ವಿಷಯ ಗಲಾಟೆ ನಡೆದಿರಬಹುದೇ.. ಅಥವಾ ಕೃಷಿ ಆದಾಯದ ಹಣದಲ್ಲಿ ಶಂಕರನಿಗೆ ಕೊಟ್ಟದ್ದು ಸಾಕಾಗಲಿಲ್ಲವೆಂದೇ ... ಏನಿರಬಹುದು ಎಂದು ಯೋಚಿಸುತ್ತಾ ತೋಟದಿಂದ ತಂದಿದ್ದ ಅಡಿಕೆಯನ್ನು ಅಂಗಳದಲ್ಲಿ ಬಿಸಿಲಿಗೆ ಹರವಲು ತೆರಳಿದ.


     ಶಶಿ ಅಮ್ಮನಲ್ಲಿ  ಮಾತನಾಡಲು ಕರೆ ಮಾಡಿದ್ದಳು.ಶಂಕರನು ಬೆಂಗಳೂರಿಗೆ ತೆರಳಿದ ವಿಷಯ,ಹೋಗುವಾಗ ಅದು ಕೊಟ್ಟೆ ಇದನ್ನು ಕೊಟ್ಟೆ..ಅಯ್ಯೋ..ಕೊಡಲೆಂದು  ಇಟ್ಟದ್ದನ್ನ ಮರೆತೇಬಿಟ್ಟೆ ಎಂದು ತಾಯಿ ಮಗಳ ಸಂಭಾಷಣೆ ಅಂಗಳದ ವರೆಗೆ ಕೇಳಿಸುತ್ತಿತ್ತು..ತನ್ನ ಮಗನಿಗೆ ಎರಡು ಒಳ್ಳೆಯ ಸಂಬಂಧ ಬಂದಿದೆಯೆಂದು ಹೇಳಲು ಶಶಿ ಮರೆಯಲಿಲ್ಲ.. ವಿದ್ಯಾವಂತ ಹುಡುಗಿಯರು ಉದ್ಯೋಗದಲ್ಲಿದ್ದಾರೆ..ಜಾತಕ ತೋರಿಸಿ ನೋಡಬೇಕು.. ಎಂದು ಹೇಳುತ್ತಿದ್ದ ಶಶಿಯ ಮಾತಿನ ಮೋಡಿಗೆ ಮರುಳಾಗಿ ...ನಾಲಿಗೆಯ ಮೇಲಿನ ಕಡಿವಾಣ ತಪ್ಪಿತು.. ಮಹಾಲಕ್ಷ್ಮಿ ಅಮ್ಮ ಮೈತ್ರಿಯ ಪ್ರೇಮಪ್ರಕರಣವನ್ನು ಮಗಳಲ್ಲಿ ಬಿಚ್ಚಿಟ್ಟರು..ಒಳಗಿದ್ದ ಮಂಗಳಮ್ಮನಿಗೆ ಅಸಹಾಯಕತೆ..ಅತ್ತೆ..ಯಾಕಾದರೋ ಹೀಗೇ ಮಗಳಲ್ಲಿ ವರದಿಮಾಡುತ್ತಾರೋ ಅಂತ..ವಿರೋಧಿಸಿದರೆ.. ಸೊಸೆ ಕೆಟ್ಟವಳು..ತಗ್ಗಿಬಗ್ಗಿ ನಡೆಯಲ್ಲ ಎಂಬ ಹಣೆಪಟ್ಟಿ.. ಹೇಗೆ ಸಹಿಸಿಕೊಳ್ಳಲಿ.. ಎಂದು ಯೋಚಿಸುತ್ತಿದ್ದವಳಿಗೆ ಒಂದು ಉಪಾಯ ಹೊಳೆಯಿತು.. ಸೀದಾ ಹೊರಗೆ ಓಡಿದಳು..ಜಗಲಿಯ ತುದಿಯಲ್ಲಿ ಮರದ ರೀಪಿನಲ್ಲಿ ನೇತುಹಾಕಿದ್ದ ಕತ್ತಿಯನ್ನು ಎಳೆದಳು.. ಹಿಂಬದಿಯಲ್ಲಿ ಹೋಗಿ ತನ್ನ ಕೆಲಸ ಮುಗಿಸಿ ಬಂದು ಏನೂ ಅರಿಯದ ಮುಗ್ಧೆಯಂತೆ ನಟಿಸಿದಳು..

      ಮಹಾಲಕ್ಷ್ಮಿ ಅಮ್ಮ ಶತಪಥ ತಿರುಗುತ್ತಾ ಚಾವಡಿಯಲ್ಲಿ ಆಚೀಚೆ ಹೋದರು..ನಂತರ ಒಳಗೆ ತೆರಳಿ ಅಡುಗೆ ಸಹಕಾರಕ್ಕೆ ನಿಂತರು..


               ‌.    ****


      ಮಮತಾ ತಾನು ಬೇಗ ಮನೆಕೆಲಸ ಮುಗಿಸಿ ಮಿಂದು ದೇವರ ಮುಂದೆ ಕುಳಿತಳು.ಮಗನ ಮದುವೆಯ ಮಂಗಲಕಾರ್ಯ ಸುಸೂತ್ರವಾಗಿ ನೆರವೇರುವಂತೆ ಬೇಡಿಕೊಂಡು ಮನೆದೇವರು ದುರ್ಗೆಗೆ ಕುಂಕುಮಾರ್ಚನೆ ಮಾಡಿದರು..ದೈವಭಕ್ತೆಯಾದ ಮಮತಾ ಕಷ್ಟವೆಂದು ಬಂದರೆ ಮೊದಲು ಮೊರೆ ಹೋಗುತ್ತಿದ್ದುದು ದುರ್ಗೆಯನ್ನು... ಕುಂಕುಮಾರ್ಚನೆ ಸೇವೆ ಮುಗಿಯುತ್ತಿದ್ದಂತೆ ಹೊರಗಡೆಯಿಂದ ಅಮ್ಮಾ.. ಎಂದು ಕರೆಯುವ ದನಿ ಕೇಳಿಸಿತು..ಹೊರಗೆ ಇಣುಕಿದಳು..ಒಬ್ಬ ಮಹಿಳೆ ಕುಂಕುಳಲ್ಲಿ ಪುಟ್ಟ ಬಾಲಕನನ್ನು ಎತ್ತಿಕೊಂಡು ನಿಂತಿದ್ದಳು.. ಅವರಿಗೆ ಕುಂಕುಮಾರ್ಚನೆ ಪ್ರಸಾದ ಕೊಟ್ಟು  ಊಟನೀಡಿದಳು..ಹಸಿದವರಿಗೆ ಊಟ ಕೊಡುವುದಕ್ಕಿಂತ ಹೆಚ್ಚಿನ ಪುಣ್ಯ ಏನಿದೆ... "ತಾಯೇ.. ಶುಭವಾಗಲಿ.. " ಎಂದು ಹೇಳಿ ಮಗುವನ್ನೆತ್ತಿಕೊಂಡು ಸಾಗಿದಳು..


      ಮಮತಾ ಶುಭಶಕುನದಿಂದ ಹರುಷಗೊಂಡಳು.ತಾನು ಊಟ ಮಾಡಲು
ಕುಳಿತಳು..ಊಟ ಮಾಡಿ ಮುಗಿಸುತ್ತಿದ್ದಾಗ ಏನೋ ಬೇಕೆಂದು ಬಂದ ಪಕ್ಕದ ಮನೆಯವರಲ್ಲಿ ಬೇಡುತ್ತಾ ಬಂದಿದ್ದ ಹೆಣ್ಣುಮಗಳ ಬಗ್ಗೆ ಕೇಳಿದಾಗ.."ಹೌದಾ... ನಿಮ್ಮಲ್ಲಿಗೆ ಬರುವುದಾದರೆ ನಮ್ಮ ಮನೆಗೆ ಬಂದಿರಬೇಕಲ್ಲವೇ.. ಹಾಗಾದರೆ ನಮಗೆ ಬಂದದ್ದೇ ತಿಳಿಯಲಿಲ್ಲ "....ಎಂದಾಗ ತನಗೇನು ಭ್ರಮೆಯೇ ಇರಬೇಕೆಂದು ಸುಮ್ಮನಾದಳು..

                        ******

ಕಿಶನ್ ಗೆ ಮೈತ್ರಿ ಯಲ್ಲೇನೋ ಮಾತನಾಡುವ ತವಕ.ಸಂಜೆಮನೆಗೆ ತೆರಳಿದ ಮೇಲಂತೂ ಅವಳೊಡನೆ ಮಾತನಾಡಲು ಕಷ್ಟ.ಈಗ ಕಾಲೇಜಲ್ಲಿರುವಾಗಲೇ ಸಂದೇಶ ರವಾನಿಸಿ ಚಾಟ್ ಮಾಡಿದ್ದು ಬಂತು.. ಎಂದುಕೊಂಡು ಮತ್ತೆ ಆರಂಭಿಸಿದ.

"ಹಾಯ್.."

ಅವಳು ತರಗತಿಯಲ್ಲಿರಬೇಕು..ಉತ್ತರಿಸಲಿಲ್ಲ.

"ಹೌದು..ಅದೇಕೆ ನಾನು ನಿಮ್ಮನೆಗೆ ಬಂದ ಕೂಡಲೇ ನನ್ನನ್ನು ಮುಜುಗರಕ್ಕೀಡು ಮಾಡಿದೆ"ಎಂದು ಮತ್ತೊಂದು ಸಂದೇಶ ಕಳುಹಿಸಿದ.

ಊಟದ ಬ್ರೇಕ್ ನಲ್ಲಿ ಸಂದೇಶವನ್ನೋದಿದ ಮೈತ್ರಿ..

"ನಾನೇನು ಮಾಡಿದೆ.. ಅಂಥಾದ್ದು..?"

"ಆಹಾ..ಮಳ್ಳಿ..ಮಾಡೋದು ಮಾಡಿ ಏನುಮಾಡಿದೆ ಅಂತೀಯಾ..?"

ಇವರು ಮನೆಗೆ ಬಂದ ಕೂಡಲೇ ನಾನೆಂತ ಮಾಡಿದ್ದೆನಪ್ಪಾ..ಹಾಂ..ನಾನೊಳ್ಳೆ ಗಡದ್ದಾಗಿ ನಿದ್ದೆ ಮಾಡಿದ್ದೆ.ಅದರಲ್ಲಿ ಅವರಿಗೆ ಮುಜುಗರವಾಗುವಂತಹದ್ದು ಏನಿದೆ..ತಿಳೀತಿಲ್ವಲ್ಲ..

"ನಂಗರ್ಥ ಆಗಿಲ್ಲ.. ಸ್ವಲ್ಪ ಬಿಡಿಸಿ ಹೇಳಿ.."

"ಅದೇ...ಮುದ್ಗೊಂಬೆ... ಯಾಕೆ ಕರೆ ಮಾಡಿದೆ..??"

"ನಾನು ಕರೆಮಾಡಿದ್ದೆನಾ..ಇಲ್ವಲ್ಲಾ..."

"ಮುದ್ಗೊಂಬೆ.. ಹೀಗೆ ಸುಳ್ಳು ಹೇಳಬಾರದು.."

"ಇಲ್ಲ.ನಾನಂತೂ ಕರೆಮಾಡಿಲ್ಲ.. ನನ್ನನ್ನು ನಂಬಿ"


"ನಾನು ನಂಗಿಷ್ಟವಾದ ರೊಮ್ಯಾಂಟಿಕ್ ಸಾಲೊಂದನ್ನು ರಿಂಗ್ ಟೋನ್ ಆಗಿ ಸೆಟ್ ಮಾಡಿದ್ದೆ.ಸೈಲೆಂಟ್ ಮಾಡಲು ಮರೆತಿದ್ದೆ.. ನೀನು ಕರೆ ಮಾಡಿದಾಗ 'ಹೆಚ್ಚು ಹೆಚ್ಚು ಬರಬೇಕು ಹುಚ್ಚು ಸಂದೇಶ .....ಕದ್ದುಮುಚ್ಚಿ ಓದೋಕೆ ಹೆಚ್ಚೇ ಸಂತೋಷ'ಅಂತ ಕೇಳಿದಾಗ ನನಗಂತೂ ಭಾವೀ ಮಾವನ ಮುಂದೆ ಸಂಕೋಚ ಆಯ್ತು.."

"ಹೌದಾ.." ಎಂದ ಮೈತ್ರಿ ಮೊದಲು ತನ್ನ ಮೊಬೈಲ್ ನಿಂದ ಕಿಶನ್ ಗೆ ಹೋದ ಕರೆಗಳ ವೇಳೆಯನ್ನು ಪರಿಶೀಲಿಸಿದಳು.ಹೌದು ಆ ಹೊತ್ತಿಗೆ ಕರೆಹೋದದ್ದು ಹೌದು... ಆದರೆ ..ನಾನು ಮಾಡಿಲ್ಲ.....ಅಂದರೆ... ಇದು ತುಂಟ ತಮ್ಮಣ್ಣನ ಕೆಲಸ...ಹಾಂ..ಹೀಗೆ ಮಾಡಿ ಇಶಾ ಅಂದರೆ ಕಿಶನ್ ಎಂದು ಗಟ್ಟಿಮಾಡಿದ್ದ...ತರಲೆ ತಮ್ಮ..!!!!


ಕಿಶನ್ ಗೆ ತನ್ನ ತಮ್ಮನ ತರಲೆಯನ್ನು ಹೇಳಿದ ಮೈತ್ರಿ ಆಗ ನಡೆದದ್ದನ್ನೆಲ್ಲ ಅವನ ಜೊತೆ ಹಂಚಿಕೊಂಡಳು.ಇಬ್ಬರೂ ನಕ್ಕು ಸುಸ್ತಾದರು.

ತನಗೆ ಈಗಾಗಲೇ ಇಬ್ಬರು ತರಲೆ ಭಾವಂದಿರಿದ್ದಾರೆ.ಅವರ ಸಾಲಿಗೆ ಇನ್ನೊಬ್ಬ ಮಹಾನ್ ತರಲೆ ಮಹೇಶ್ ಸೇರಿಕೊಳ್ಳುತ್ತಿದ್ದಾನೆ.. ಎಂದು ಮುಂದೆ ಅದೇನೆಲ್ಲ ಕಾದಿದೆಯೋ ಇವನ ಬತ್ತಳಿಕೆಯಿಂದ...!! ಎಂದು ನಗುತ್ತಾ ಮುದ್ಗೊಂಬೆಗೆ ಬಾಯ್ ಹೇಳಿದನು... ಕಿಶನ್..

                      *****


ಕೇಶವ್ ಯಾವತ್ತೂ ವೇಗವಾಗಿಯೇ ವಾಹನ ಚಾಲನೆ ಮಾಡುವವನು.. ಇಂದು ಮಾತ್ರ ನಿಧಾನವಾಗಿ ಚಲಾಯಿಸುತ್ತಿದ್ದ..ಆಗ ಗೆಳೆಯನ ಕರೆ ಬಂದಿತು.." ಕೇಶವ್.. ಬೆಟ್ಟಿಂಗ್ ನೆನಪಿದೆ ತಾನೇ...
ನಾನು ಸೋತರೆ ... ಇಪ್ಪತ್ತು ಸಾವಿರ ನಿನಗೆ

ನೀನು ಸೋತರೆ ಇಪ್ಪತ್ತು ಸಾವಿರ ನನಗೆ.."

"ಹೂಂ..ಸರಿ ಗೆಳೆಯ.. ಅದಕ್ಕೇ ಪೇಟೆಯ ಕೆಲಸವನ್ನೆಲ್ಲ ಮುಗಿಸಿ ಬೇಗ ಮನೆ ಕಡೆ ಹೋಗಬೇಕೆಂದಿದ್ದೇನೆ"
"..ಸರಿ ಸರಿ ..ಬೇಗ ಮ್ಯಾಚ್ ಆರಂಭವಾಗುವ ಮುನ್ನವೇ ಮನೆ ತಲುಪಿ.." ಎಂದು ಹೇಳಿದನು..ಒಪ್ಪಿದ ಕೇಶವ್ ನ ಮನಸ್ಸು ಬೆಟ್ಟಿಂಗ್ ನಲ್ಲಿ ಮುಳುಗಿತು.. ಬೆಟ್ಟಿಂಗ್ ನಲ್ಲಿ ಹಣ ಗೆದ್ದು... ಬಾಳಿನಲ್ಲಿ ಮೈತ್ರಿಯೆಂಬ ಸುಂದರಿಯನ್ನು ಗೆದ್ದರೆ ಮತ್ತೆ ನನ್ನಂತಹ ಅದೃಷ್ಟವಂತ ಪುರುಷರು ಇರಲಾರರು..
ಮನದೊಳಗೆ ಲೆಕ್ಕಾಚಾರ ಹಾಕುತ್ತಾ ಕೇಶವ್ ಒಳ್ಳೆಯ ಮೂಡಿನಲ್ಲಿದ್ದ...

     ಒಮ್ಮಿಂದೊಮ್ಮೆಲೇ ಬಂದ ಸದ್ದಿನಿಂದ ಬೆಚ್ಚಿಬಿದ್ದರು ಬಂಗಾರಣ್ಣ... ಏನಾಯಿತೆಂದು ಕಣ್ಣುತೆರೆದು ನೋಡಿದರೆ....


ಮುಂದುವರಿಯುವುದು...


✍️... ಅನಿತಾ ಜಿ.ಕೆ.ಭಟ್.
26-02-2020.
               

     


   

Monday, 24 February 2020

ಜೀವನ ಮೈತ್ರಿ-ಭಾಗ ೨೬(26)




   ಕಿಶನ್ ನ ಕಣ್ಣುಗಳಲ್ಲಿ ಮೈತ್ರಿಯ ಕನವರಿಕೆಯೇ ತುಂಬಿತ್ತು.ಬೆಂಗಳೂರಿಗೆ ತೆರಳಲು ಬೇಗಬೇಗ ತಯಾರಾಗುತ್ತಿದ್ದವನ ಮನದೊಳಗೆ ಅವಳದೇ ಭಾವನೆಗಳ ತೊಯ್ದಾಟ.ಅಮ್ಮ ಕುಚ್ಚಿಲಕ್ಕಿ ಅನ್ನ, ಚಟ್ನಿ, ಸಾಂಬಾರ್ ಎಲ್ಲ ಬಡಿಸಿದರೂ ಇನ್ನೂ ಊಟ ಆರಂಭಿಸದ ಮಗನನ್ನು ಕಂಡು "ಮಗನೇ ಬೇಗ ಉಣ್ಣು..ತಡವಾಗುತ್ತೆ ಅಂದೆ.. ಮತ್ತೆ ಬಸ್ಸು ತಪ್ಪಿದರೆ ಕಷ್ಟ..ಬಸ್ಸಲ್ಲಿ ಕುಳಿತು ಬೇಕಾದರೆ ಮೈತ್ರಿಯನ್ನು ಧ್ಯಾನಿಸು.."ಎಂದಾಗ ಹಾಂ.. ಎನ್ನುತ್ತಾ ವಾಸ್ತವಕ್ಕೆ ಬಂದ ಕಿಶನ್.. ಬೇಗನೆ ಊಟ ಮಾಡಿ ಹೊರಟು ನಿಂತಾಗ ಅಮ್ಮ "ಹೋಗಿ ಬಾ ಮಗನೇ.." ಎಂದು ಮನದುಂಬಿ ಹರಸಿದರು..ತಂಗಿಯಂದಿರೂ ಅಣ್ಣನನ್ನು ಬೀಳ್ಕೊಟ್ಟರು..ಭಾವಂದಿರಿಬ್ಬರು ಅಪ್ಪ ಕಿಶನ್ ಎಲ್ಲರೂ ಜೊತೆಯಾಗಿ ಕಾರಿನಲ್ಲಿ ತೆರಳಿದರು..ಬಸ್ ಹತ್ತುವ ಜಾಗದಲ್ಲಿ ಕಾರು ನಿಲ್ಲಿಸಿ ಮಾತನಾಡುತ್ತಾ ..ಮದುವೆಯ ವಿಚಾರವನ್ನು ಚರ್ಚಿಸಿದರು.



   ಸ್ವಲ್ಪ ಹೊತ್ತಿನಲ್ಲಿ ಬಸ್ ಬಂತು.. ಕಿಶನ್ ಬಸ್ ಏರಿ ಬಾಯ್ ಮಾಡಿದ.ಮೂವರೂ ಮನೆಕಡೆ ಬಂದರು.ಮನೆಗೆ ಬಂದಾಗ ಮಡದಿಯ ಮುಖ ನೋಡಿದ ಗಣೇಶ ಶರ್ಮ ಮಗನನ್ನು ಬೀಳ್ಕೊಟ್ಟ ನೋವಿನ ಎಳೆಯನ್ನು ಆಕೆಯ ಮೊಗದಲ್ಲಿ ಕಂಡರು.ಎಷ್ಟಾದರೂ ತಾಯಿ ಹೃದಯ ಅಲ್ಲವೇ.. ಮಕ್ಕಳನ್ನು ಕಳುಹಿಸಿಕೊಟ್ಟಾಗ ಭಾರವಾಗುವುದು ಸಹಜ ಎಂದು ತಾವೇ ಮಾತಿಗೆಳೆದರು.. ಇಬ್ಬರೂ ಜೊತೆಯಾಗಿ ಹರಟುತ್ತಾ ಕುಳಿತರೆ ಹೊತ್ತು ಹೋದದ್ದೇ ತಿಳಿಯಲಿಲ್ಲ..ಅಳಿಯ ಮಗಳಂದಿರು ಆಗಲೇ ರೂಮು ಸೇರಿ ನಿದ್ರೆಗೆ ಜಾರಿದ್ದರು .


    ಬೆಳಿಗ್ಗೆ ಮಗಳಂದಿರು ತಮ್ಮ ಗಂಡಂದಿರ ಜೊತೆಗೆ ಹೊರಟು ನಿಂತಿದ್ದರು..ಹತ್ತಿರದ ಊರಿನಲ್ಲೇ ವಾಸವಿದ್ದ ಇಬ್ಬರೂ ಕೂಡ ಆಗಾಗ ಬಂದು ಹೋಗುತ್ತೇವೆ ಎಂದು ಅಮ್ಮನನ್ನು ಸಮಾಧಾನಿಸಿ ಅಪ್ಪನ ಮನೆಯಿಂದ ಗಂಡನ ಮನೆಗೆ ತೆರಳಿದರು..

    ಮಮತಾ ಗಣೇಶ ಶರ್ಮ ಇಬ್ಬರೇ ಇರುವ ಮನೆ ಈಗ ಬೀಕೋ ಎನ್ನುತ್ತಿತ್ತು."ರೀ..ಮಗಳಂದಿರ ಮದುವೆಯಾಗಿ ಜೀವನ ಸುಗಮವಾಗಿ ಸಾಗುತ್ತಿದೆ.ಈಗ ನನಗೆ ಕಿಶನ್ ದೇ ಚಿಂತೆ.. ಏನಾಗುತ್ತೋ ಏನೋ.. ಜಾತಕ ಹೊಂದಾಣಿಕೆ ಆಗಬಹುದೇ.. ಅವರು ಕೂಸುಕೊಡಲು ಒಪ್ಪಿಯಾರೇ..ಅವರ ಅಂತಸ್ತಿಗೆ ನಾವು ತಕ್ಕವರಂತೂ ಅಲ್ಲ..ಮಗ ಅವಳನ್ನು ಬಹಳವೇ ಹಚ್ಚಿಕೊಂಡು ಬಿಟ್ಟಿದ್ದಾನೆ.."


"ಮಮತಾ .. ನೀನೇನು ಯೋಚನೆ ಮಾಡದಿರು.ಆದಷ್ಟು ಬೇಗ ಜೋಯಿಸರಲ್ಲಿ ವಿಚಾರಿಸಿ ಬರುತ್ತೇನೆ..ನಮ್ಮ ಯಾವಾಗಿನ ಜೋಯಿಸರು ಇದ್ದಾರಲ್ಲ..ಬಾಳೆಮಲೆ ಜೋಯಿಸರು...ಅವರಲ್ಲೇ ತೋರಿಸೋಣ..."


"ರೀ.. ನೀವು ತಡಮಾಡುವುದು ಒಳ್ಳೆಯದಲ್ಲ..  ಮೈತ್ರಿಯನ್ನು ನೋಡಲು ಬೇರೆ ಯಾರೋ ಬಂದಿದ್ದಾರಂತೆ ಎಂದು ನನ್ನಲ್ಲಿ ಕಿಶನ್ ಹೇಳಿದ್ದ.. ಆದ್ದರಿಂದ ನಾವು ಬೇಗನೆ ಜೋಯಿಸರನ್ನು ಕಾಣುವುದು ಒಳಿತು.."

"ಆಗಲಿ ಮಮತಾ.. ಬುಧವಾರ ಹೋಗಿಬರುವೆ.."

"ಬುಧವಾರ ಏಕೆ..ಇವತ್ತೇ ಹೋಗಿ ಬನ್ನಿ..ಆಗದೇ.."

"ಹಾಗಂತೀಯಾ....?"

"ಹೌದು ರೀ..ನಂಗ್ಯಾಕೋ ಮನಸ್ಸು ಇವತ್ತೇ ಜಾತಕ ತೋರಿಸಿ ಬರಬೇಕು ಎನ್ನುತ್ತಿದೆ.."

"ಸರಿ .."ಎಂದು ಒಪ್ಪಿದರು ಗಣೇಶ ಶರ್ಮ..


ಬೇಗ ಮನೆಯ ನಿತ್ಯದ ಅವರ ಕೆಲಸಗಳನ್ನು ಮುಗಿಸಿಕೊಂಡು ಹೊರಡುವಾಗ ಗಂಟೆ ಒಂಭತ್ತು ಭರ್ತಿಯಾಗಿತ್ತು. ಗಣೇಶ್ ಶರ್ಮರ ಕಾರು ಬಾಳೆಮಲೆ ಜೋಯಿಸರ ಮನೆ ಕಡೆಗೆ ಚಲಿಸಿತು.


                       *****

ಬಾರಂತಡ್ಕದ ಕೇಶವ್ ಮತ್ತು ಬಂಗಾರಣ್ಣ ಸೋಮವಾರ ಬಾಳೆಮಲೆ ಜೋಯಿಸರಲ್ಲಿಗೆ ಮೈತ್ರಿಯ ಮತ್ತು ಕೇಶವ್ ನ ಜಾತಕ ತೆಗೆದುಕೊಂಡು ಹೊರಡುವವರಿದ್ದರು..ಬಂಗಾರಣ್ಣನಿಗೆ ಮೈತ್ರಿಯನ್ನು ಸೊಸೆಯಾಗಿ ಮಾಡಿಕೊಳ್ಳಬೇಕೆಂಬ ಆಸಕ್ತಿ ಬಲವಾಗಿತ್ತು.ಹಾಗಾಗಿ ಎರಡನೇ ಬಾರಿ ಜಾತಕ ತೋರಿಸಲು ಮುಂದಾಗಿದ್ದರು.

ಹೊರಡುವಾಗಲೇ ಮಡದಿ ಸುಮಾ "ರೀ.. ಒಳ್ಳೆಯ ಸಮಯ ನೋಡಿ ಹೊರಡಿ.. "ಎಂದರು..

"ಏನೇ ಇದೆಲ್ಲ ನಿನ್ನ ಹೊಸ ವರಸೆಗಳು..."
ಎಂದ ಬಂಗಾರಣ್ಣ..

"ಹೌದು ರೀ..ಟಿವಿ ಜ್ಯೋತಿಷಿಗಳು ಹೇಳಿದ್ದಾರೆ ಒಳ್ಳೆಯ ಕೆಲಸಕ್ಕೆ ಹೋಗುವಾಗ ರಾಹುಕಾಲ ಗುಳಿಗಕಾಲದಲ್ಲಿ ಹೋಗಬಾರದಂತೆ.."

"ಓಹೋ.. ಹಾಗೇ..ಈಗ ಯಾವ ಕಾಲವೋ ಏನೋ..."ಎಂದ ಬಂಗಾರಣ್ಣ.

"ನಾನು ನೋಡಿ ಹೇಳ್ತೀನಿ ರೀ..ಇರಿ ಸ್ವಲ್ಪ..."

"ಅಯ್ಯೋ..ಈಗ ಅದೇ ರಾಹುಕಾಲ.. ಸ್ವಲ್ಪ ಒಂದೇ ಒಂದು ಗಂಟೆ ನಂತರ ತೆರಳಿ.."

"ಅಮ್ಮಾ.. ನೀನಿನ್ನೂ ಯಾವ ಕಾಲದಲ್ಲಿ ಇದ್ದೀ.."ಅಂದ ಕೇಶವ್..

"ಈಗಿನ ಕಾಲಕ್ಕೂ ಆಗುತ್ತಂತೆ ಮಗಾ.."

"ಅದೆಲ್ಲ ಪುರಾಣ ನನಗೆ ಗೊತ್ತಿಲ್ಲ.. ಮಧ್ಯಾಹ್ನ ಆಗುವುದರೊಳಗೆ ಜೋಯಿಸರಲ್ಲಿ ಹೋಗಿ ಬರಬೇಕು.ಆಮೇಲೆ ನನಗೆ ಕ್ರಿಕೆಟ್ ಮ್ಯಾಚ್ ನೋಡಲು ಇದೆ.. ಫ್ರೆಂಡ್ ಜೊತೆ ಬೆಟ್ಟಿಂಗ್ ಬೇರೆ ಕಟ್ಟಿದೀನಿ.."ಎಂದ ಕೇಶವ್.

"ಅಮ್ಮ ಹೇಳಿದ್ದು ಸ್ವಲ್ಪ ಕೇಳೋ ಮಗಾ.."

"ಅದೆಲ್ಲ ಆಗಲ್ಲ.. ಈಗ ಹೊರಡುವುದಾದರೆ ನಾನು ಬರ್ತೀನಿ ...ಇಲ್ಲಾಂದ್ರೆ ಇಲ್ಲ.."

"ನೀನೋ ನಿನ್ನ ಹಠವೋ..ಆಯ್ತಪ್ಪಾ.. ಕೇಶವ್..ನಿನ್ನ ಹಠದಂತೆಯೇ ಆಗಲಿ..ನಡಿ.." ಎಂದು ಮನೆಯಿಂದ ಹೊರಟರು...


                   ****

ಶಾಸ್ತ್ರಿ ನಿವಾಸದಲ್ಲಿ ಸ್ವಲ್ಪ ಬಿಗುವಿನ ವಾತಾವರಣವೇ ಬೆಳಿಗ್ಗೆ ಮುಂದುವರಿದಿತ್ತು.. ಮೈತ್ರಿ, ಮಹೇಶ್ ಇಬ್ಬರೂ ಕಾಲೇಜಿಗೆ ಎಂದಿನಂತೆ ಹೊರಟರು.ಮೈತ್ರಿ ಬಸ್ ಸ್ಟ್ಯಾಂಡ್ ತಲುಪುತ್ತಿದ್ದಂತೆ ಕಿಶನ್ ಗೆ ಕರೆ ಮಾಡಿ ಮಾತನಾಡತೊಡಗಿದಳು.. ಕಿಶನ್ ಬೆಳಿಗ್ಗೆ ತಲುಪಿ ಫ್ರೆಶ್ ಆಗಿ ಆಫೀಸಿಗೆ ಹೊರಡಲು ಸಿದ್ಧತೆ ಮಾಡುತ್ತಿದ್ದ.ಕರೆ ಬಂದದ್ದು ಬಹಳ ಸಂತೋಷವಾಯಿತು ಕಿಶನ್ ಗೆ..

"ಹಾಯ್..ಮುದ್ಗೊಂಬೆ..."

"ಏನು.. ರಾಯರು ಎಷ್ಟು ಹೊತ್ತಿಗೆ ತಲುಪಿದ್ರಿ.."

"ಈಗ ತಲುಪಿ ಫ್ರೆಶ್ ಆಗಿ ಮೈತ್ರಿ ಮಹಿಮೆ ಸ್ತೋತ್ರ ಪಠಣ ಮಾಡ್ತಿದ್ದೆ.."

"ಅದ್ಯಾವುದು ಹೊಸ ಸ್ತೋತ್ರ.."

"ಹೂಂ..ಅದೇ.."

"ಅಂದ್ರೆ..ಹೊಸ ಹಾಯ್ಕು, ಚುಟುಕು.. ಏನಾದ್ರೂ ಗುನುಗುತ್ತಿದ್ದೀರಾ.."

"ನಿನ್ನದೇ ನೆನಪಿನ ಅಲೆಯಲ್ಲಿ ತೇಲ್ತಾ ಮೈತ್ರಿ... ಮೈತ್ರಿ..ಅಂತಿದ್ದೆ..."

"ಫುಲ್ ರೋಮ್ಯಾಂಟಿಕ್ ಮೂಡ್..ಹಾಗಿದ್ರೆ.."

"ಹೌದು..ನೀನು ಕರೆ ಮಾಡಿದ್ರೆ ಹಾಗೇ ತಾನೇ...ಏನಂದ್ರು ಈ ಪ್ರೇಮಭಿಕ್ಷುವನ್ನು.."

"ಏನಾದ್ರೂ ಅಂದುಕೊಳ್ಳಿ ನಂಗೇನು.."

"ಏನಾದ್ರೂ ಗದರಿದ್ರಾ..ಭಾವೀ ಮಾವ ..."

"ಅದೆಲ್ಲ ಇದ್ದಿದ್ದೇ ಮಾಮೂಲಿ..ನಿಮ್ಮಲ್ಲೇನಂದ್ರು.."

"ಹೇಳ್ತೀನಿ..ಅದ್ಕೂ ಮೊದ್ಲು ನೀನು ಹೇಳು.. ಮಾಷ್ಟ್ರು ಏನಂದ್ರು..."

"ಪುರಾಣ ,ಪ್ರವಚನ ,ಸಹಸ್ರನಾಮಾರ್ಚನೆ ಎಲ್ಲ ಆಗಿದೆ..."

"ಮದುವೆ ಮಾಡಿಕೊಟ್ಟಾರು ತಾನೇ.."

"ಯಾರಿಗೊತ್ತು..ಯಾವಾಗ ಏನು ನಿರ್ಧಾರ ತಗೋತಾರೆ ಅಂತ.."

"ಹಾಗೆಲ್ಲ..ಹೇಳ್ಬೇಡ್ವೆ..ಮುದ್ಗೊಂಬೆ...  "

"ನಿಮ್ಮಪ್ಪ ಏನಂದ್ರು.."

"ನಮ್ಮಪ್ಪ ಫುಲ್ ಖುಷಿಯಾಗಿ ಒಪ್ಪಿದರು..ಜಾತಕ ಆದಷ್ಟು ಬೇಗ ತೋರಿಸಿ ಬರ್ತೇನೆ ಅಂದಿದ್ದಾರೆ..ನೋಡೋಣ.."


"ನಮ್ಮಪ್ಪ ಕೆಲವು ವಿಷಯಗಳಲ್ಲಿ ಹೀಗೇನೇ.ಅವರದ್ದೇ ಹಠ ಅವರಿಗೆ..ಈ ವಿಷಯದಲ್ಲಿ ನಾನೂ ಸ್ವಲ್ಪ ಹಠ ಮಾಡಿದ್ರೆ ಹೇಗೆ ಅಂತ ಯೋಚಿಸ್ತಿದೀನಿ.."

"ಅತ್ತೆ ಒಪ್ಪಿದ್ದಾರಾ..ಈ ಅಳಿಯನನ್ನ.."

"ಓಹೋ..ಅಮ್ಮ .."

"ಏನು ಹೇಳು... ಬೇಗ.."

"ಹೇಳಲ್ಲ ಬೇಡ.."

"ಪ್ಲೀಸ್..ಹೇಳೇ ಮುದ್ಗೊಂಬೆ...ಎಲ್ಲರೆದುರು ಅಂತೂ ಮಾತಾಡಿಲ್ಲ..ಈಗ್ಲಾದ್ರೂ ಮನಸು ಬಿಚ್ಚಿ ಮಾತಾಡೇ..."

"ಅಮ್ಮ....ನಿಮ್ಮನ್ನ...ಓಹೋ ನನ್ನ ಬಸ್ ಬಂತು.. ಬಾಯ್..."

ಕರೆ ಕಟ್ ಮಾಡಿದಳು ಮೈತ್ರಿ.. ಕಿಶನ್ ಗೆ ನಿರಾಸೆಯಾಯಿತು..ಅತ್ತೆ ತನ್ನ ಬಗ್ಗೆ ಏನು ಹೇಳಿದ್ದಾರೆ ಅಂತ ಬೇಗ ಹೇಳದೆ ಕಾಡಿಸ್ತಾಳೆ ಹುಡ್ಗೀ....ಈ ಹುಡುಗೀರೆಲ್ಲ ಹೀಗೇನಾ..ಕಾಡಿಸಿ ಪೀಡಿಸಿ ಖುಷಿಪಡೋದಾ...

     ಕಿಶನ್ ಸ್ವಲ್ಪ ಬೇಸರಗೊಂಡು ಹೊರಟ.. ಆಗಲೇ ನಗರದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು..ಹೇಗೋ  ಬೈಕ್ ತೆಗೆದುಕೊಂಡು ಹೋದ... ಆಫೀಸಿಗೆ ತಲುಪಿದಾಗ ಸುಸ್ತಾಗಿ ಬಿಟ್ಟಿದ್ದ.ಸೀದಾ ತನ್ನ ಚೇಂಬರ್ ನಲ್ಲಿ ಹೋಗಿ ಕುಳಿತು ಮೊಬೈಲ್ ಮೇಲೆ ಕಣ್ಣಾಡಿಸಿದ.. ಮೈತ್ರಿ ಸಂದೇಶ ಕಳುಹಿಸಿದ್ದಳು..

"ನನ್ನಮ್ಮನಿಗೆ ನನ್ನ ಆಯ್ಕೆ ಇಷ್ಟವಾಗಿದೆ.."

ಕಿಶನ್ ಗೆ ಎದ್ದು ಕುಣಿಯುವಷ್ಟು ಸಂತಸವಾಗಿತ್ತು..

                      ****

ಬಾರಂತಡ್ಕ ಕೇಶವ್ ಮತ್ತು ಬಂಗಾರಣ್ಣ ಜೋಯಿಸರಲ್ಲಿಗೆ ತಲುಪಲು ಸ್ವಲ್ಪವೇ ಹೊತ್ತು ಇತ್ತು..


    ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
25-02-2020.








     

Sunday, 23 February 2020

ಜೀವನ ಮೈತ್ರಿ-ಭಾಗ ೨೫(25)





     ಶ್ಯಾಮ ಶಾಸ್ತ್ರಿಗಳು ಕೂಡ ಗಹನವಾದ ಚರ್ಚೆ ನಡೆಯುವುದನ್ನು ಕಂಡು ತಾವೂ ಆಗಮಿಸಿದರು.ಮಗನ ಮಾತಿನಿಂದ ಮೈತ್ರಿಯ ಪ್ರೇಮದ ವಿಷಯ ಅವರ ಅರಿವಿಗೆ ಬಂದಿತ್ತು.

ಅಜ್ಜ : ಅಲ್ಲ ಪುಳ್ಳಿ..ಓದ್ಬೇಕು ಅಂತಿದ್ದೆ.. ಮತ್ತೇನು ಮಾಡಿದೆ..
ಮೈತ್ರಿ ಮಾತನಾಡಲಿಲ್ಲ..

ಮಹೇಶ್ : ಅಜ್ಜಾ.. ಅವಳೇನು ಮಾಡಬಾರದ್ದು ಮಾಡಿಲ್ಲ.ದಿನವೂ ಸರಿಯಾದ ಸಮಯಕ್ಕೆ ಕಾಲೇಜಿಗೆ ಹೋಗಿ ಅಷ್ಟೇ ಕರಾರುವಕ್ಕಾಗಿ ಕಾಲೇಜು ಬಸ್ಸಿನಲ್ಲೇ ಮನೆಗೆ ಮರಳುತ್ತಿದ್ದಳು.ನೀವು ಏನೇನೋ ಕಲ್ಪಿಸಿಕೊಂಡು ಮಾತನಾಡುವುದು ಬೇಡ..

ಅಜ್ಜ : ನೋಡಿ ನಮ್ಮ ಮನೆಯಲ್ಲಿ ಹಿಂದಿನಿಂದಲೂ ಒಂದು ಅಭ್ಯಾಸ.ಹೆಣ್ಣುಮಕ್ಕಳಿಗೆ ಸಣ್ಣವಯಸ್ಸಲ್ಲೇ ಮದುವೆ ಮಾಡುವುದು..ಆದರೆ ಈಗ ಹೆಣ್ಣುಮಕ್ಕಳು ವಿದ್ಯಾವಂತರಾಗಬೇಕು ಎಂಬ ಕಾರಣಕ್ಕೆ ಓದಲು ಕಳುಹಿಸಿದರೆ ಪ್ರೀತಿ ಪ್ರೇಮದಲ್ಲಿ ಜಾರುವ ಆಗತ್ಯವಿರಲಿಲ್ಲ.. ಆಯ್ತು ಈಗ ಮುಂದೇನು ಎಂಬ ಯೋಚನೆ ಮಾಡಬೇಕು... ಕೇಶವ್ ನ ಕಡೆಯವರು ಜಾತಕ ಹೊಂದಾಣಿಕೆ ಆಗುತ್ತದೆ ಎಂದರೆ ನಾವೇನು ಉತ್ತರ ಕೊಡಬೇಕು ಎಂಬ ಆಲೋಚನೆ ಮಾಡಬೇಕಾಗಿದೆ..

ಭಾಸ್ಕರ ಶಾಸ್ತ್ರಿಗಳು: ನನಗೆ ಮೊದಲೇ ಸಂಶಯ ಬಂದಿತ್ತು.ಇತ್ತೀಚೆಗೆ ಮೊಬೈಲ್ ಬಳಕೆ ಜಾಸ್ತಿಯಾದಾಗಲೇ.. ಎಲ್ಲರೂ ಪಾಪದ ಪುಳ್ಳಿ ಎಂದು ಅವಳ ಕಡೆಗೆ ನಿಂತು ಮಾತನಾಡಿದಿರಿ..ಈಗ ಎಲ್ಲರೂ ತಲೆತಗ್ಗಿಸಬೇಕಾಗಿದೆ..ಇವಳ ಘನಾಂದಾರಿ ಕೆಲಸಕ್ಕೆ...

ಒಳಗೆ ರೂಮಿನಲ್ಲಿ ನಿಂತಿದ್ದ  ಸಂಜನಾ ಬಲವಾಗಿ ವಂದನಾಳ ಕೈ ಹಿಡಿದಿದ್ದಳು.."ತಂಗೀ ನಮಗಂತೂ ಯಾರನ್ನು ಲವ್ ಮಾಡುವ ಕೆಲಸ ಬೇಡ ಕಣೇ.. ಅಬ್ಬಾ..ಅಕ್ಕನನ್ನು ಎಷ್ಟು ಬೈತಿದಾರೆ ಪಾಪ..ದೊಡ್ಡಮ್ಮನೂ ಜೊತೆಗೆ ಬೈಗುಳ ಕೇಳಬೇಕಾಗಿದೆ.."
ವಂದನಾ: "ಆದರೆ ಅಕ್ಕ ಹೆದರಲಿಲ್ಲ ನೋಡು..ದೊಡ್ಡಪ್ಪನ ಮಾತು ಕೇಳಿ ನನಗೇ ಕಾಲು ನಡುಗುತ್ತಿದೆ..."
ಸಂಜನಾ:"ಹೌದು ವಂದನಾ..ನಮ್ಮಪ್ಪ ಇಷ್ಟು ಜೋರಿಲ್ಲದ್ದು ನಮ್ಮ ಪುಣ್ಯ..ಇವತ್ತೇ ಬೆಂಗಳೂರಿಗೆ ಹೋಗಿಬಿಡುತ್ತೇವಲ್ಲ.. ಸಾಕಪ್ಪಾ ಸಾಕು ಈ ಹಳ್ಳಿಯ ಸಹವಾಸ..ಅಕ್ಕ ಕಿಶನ್ ಜೊತೆ ಬರೀ ಮಾತಾಡುತ್ತಿದ್ದುದಕ್ಕೇ ಹೀಗೆ..ಇನ್ನು ಜೊತೆಗೆ ಸುತ್ತಿದ್ದರೆ... ಏನು ಮಾಡಿಬಿಡುತ್ತಿದ್ದರೋ.... ವಂದನಾ: ನಂಗೆ ಅಕ್ಕನನ್ನು ಕಂಡು ಅಳುವೇ ಬರುತ್ತಿದೆ ಕಣೇ... ಇಷ್ಟು ಜೋರು ಮಾಡುತ್ತಾರೆ ಆಂತ ತಿಳಿದಿದ್ದರೆ ಲವ್ ಮಾಡುತ್ತಿರಲಿಲ್ಲವೇನೋ..

ಎಂದು ಅಕ್ಕ ತಂಗಿಯರು ಮಾತನಾಡುತ್ತಿದ್ದರು.ಗಾಯತ್ರಿ ಭಾವನ ಬೈಗುಳದ ಮಾತೆಲ್ಲ ಹಿಡಿಸದಿದ್ದರೂ ಕೇಳಬೇಕಾದ ಅನಿವಾರ್ಯತೆ ನಮಗೆ ಎಂದು ಭಾವನನ್ನು ಶಪಿಸುತ್ತಾ ಬ್ಯಾಗ್ ಗೆ ಬಟ್ಟೆಬರೆ ತುಂಬುತ್ತಿದ್ದಳು..ಶಂಕರ ಬೆಂಗಳೂರಿಗೆ ಕೊಂಡೊಯ್ಯಲಿರುವ ಹಪ್ಪಳ,ಸೆಂಡಿಗೆ,ಮಾಂಬಳ, ತರಕಾರಿಗಳನ್ನು ತುಂಬಿಸುವುದರಲ್ಲಿ ನಿರತನಾಗಿದ್ದ..ಆಣ್ಣನ ಮೂಗಿನ ಮೇಲಿನ ಕೋಪದ ಸ್ವಭಾವದ ಅರಿವು ಅವನಿಗಿತ್ತು..

ಅಜ್ಜ : ಸರಿ..ಇನ್ನು ಹೇಳಿ ಪ್ರಯೋಜನವಿಲ್ಲ..ಮುಂದಿನ ಯೋಚನೆ ಮಾಡಬೇಕು.. ಇಂದು ಮಾಡಿದ ಕಾರ್ಯ ಮುಂದೆ ಕಾಡದೆ ಇರದು..

ಮಹೇಶ್ : ಯಾಕೆ ಹಾಗೆ ಹೇಳ್ತೀರಾ ಅಜ್ಜ ಅಕ್ಕನಿಗೆ..ಅವಳೇನಾದರೂ ಅನ್ಯಧರ್ಮೀಯನನ್ನು ಪರಿಚಯ ಮಾಡಿಕೊಂಡಿದ್ದಾಳಾ..ಅಥವಾ ಬೇರೆ ಸಂಪ್ರದಾಯ ಇರುವಂತಹ ಬೇರೆ ಜಾತಿಗೆ ಸೇರಿದವನನ್ನು ಪ್ರೀತಿಸಿದಳಾ..ನಮ್ಮದೇ ಕರಾವಳಿಯ ನಮ್ಮದೇ ಸಂಪ್ರದಾಯವನ್ನು ಅನುಸರಿಸಿಕೊಂಡು ಬರುತ್ತಿರುವ ಶರ್ಮ ಕುಟುಂಬದ ಯುವಕನೊಂದಿಗೆ ಸಲುಗೆಯಿಂದಿದ್ದಳು ...ಅಷ್ಟೇ ತಾನೆ..

ಭಾಸ್ಕರ ಶಾಸ್ತ್ರಿಗಳು: ಅದು ಬೇಕಿಗಿತ್ತಾ...? ಅನ್ನುವುದೇ ಪ್ರಶ್ನೆ..


ಅಣ್ಣ ತನ್ನ ಹಠಮಾರಿತನವನ್ನು ಕಡಿಮೆ ಮಾಡುವ ಆಲೋಚನೆ ಕಾಣದ ಶಂಕರ ಮನಸ್ಸು ತಡೆಯದೆ ಮಧ್ಯೆ ಪ್ರವೇಶಿಸಿದ..

ಶಂಕರ : ಅಣ್ಣಾ .. ನೀನು ಹೇಳುವುದೂ ಒಂದು ಅರ್ಥದಲ್ಲಿ ಸರಿ..ಆದರೆ ನಾವು ನಮ್ಮ ಮಕ್ಕಳ ಸ್ಥಾನದಲ್ಲಿ ನಿಂತು ಆಲೋಚನೆ ಮಾಡಬೇಕು..ಯುವಕ ಒಳ್ಳೆಯ ವಿದ್ಯಾವಂತ ಸಂಸ್ಕಾರವಂತನಂತೆ ಕಂಡ ನನಗೆ.. ಇನ್ಫೋಸಿಸ್ ನಲ್ಲಿ ಉದ್ಯೋಗವೂ ಇದೆ..ನನ್ನ ಭಾವಮೈದುನ ಅಲ್ಲಿಯೇ  ಉದ್ಯೋಗದಲ್ಲಿ ಇರುವುದು.. ಅವನಲ್ಲಿ ಕಿಶನ್ ಬಗ್ಗೆ ವಿಚಾರಿಸಿಕೊಳ್ಳುತ್ತೇನೆ.ನೀವು ಇಲ್ಲಿ ನೆಂಟರಿಷ್ಟರಲ್ಲಿ ತಿಳಿದುಕೊಳ್ಳಿ..ಜಾತಕವೂ ಸರಿಹೊಂದಿದರೆ ಮತ್ತೆ ಯಾಕೆ ಈ ಯೋಚನೆಗಳೆಲ್ಲ..?

ಭಾಸ್ಕರ ಶಾಸ್ತ್ರಿಗಳು: ಹೂಂ...ನೀನೂ ಇವಳನ್ನೇ ಬೆಂಬಲಿಸಿಕೊಂಡು ಬಂದೆಯಾ..?

ಶಂಕರ : ಅಣ್ಣಾ..ನನ್ನ ವಿದ್ಯಾರ್ಥಿನಿಯರನ್ನು ಎಷ್ಟೋ ಜನರನ್ನು ನೋಡಿದ್ದೇನೆ..ಬಾಲಿಶವಾದ ಪ್ರೇಮ..ವಿದ್ಯಾಭ್ಯಾಸ ಪೂರ್ಣವಾಗದೆ ಓಡಿಹೋಗುವುದು,ಬದುಕುತ್ತೇವೆ ಎಂದುಕೊಂಡು ಹೆತ್ತವರನ್ನು ಎದುರು ಹಾಕಿಕೊಂಡು  ಮದುವೆಯಾಗಿ ಕೆಲವೇ ಸಮಯದಲ್ಲಿ ಬೇರೆಯಾಗುವುದು ಇತ್ಯಾದಿ..ಅಷ್ಟೇ ಪ್ರಮಾಣದಲ್ಲಿ ಪ್ರೀತಿಸಿ ಚೆನ್ನಾಗಿ ಜೀವನ ಮಾಡುವವರೂ ಇದ್ದಾರೆ.. ಜಾತಿ, ಧರ್ಮವನ್ನು ಮೀರಿ ಬದುಕುವವರೂ ಇದ್ದಾರೆ.. ಇಲ್ಲಿ ನಮಗೆ ಅಂತಹ ಯಾವ ಸಮಸ್ಯೆಗಳೂ ಇಲ್ಲದಿದ್ದರೂ ಯಾಕಣ್ಣ ಈ ಮೊಂಡುತನ..?
(ಮೈತ್ರಿಯ ಕಡೆ ತಿರುಗಿ)
 ಮೈತ್ರಿ ನೀನು ಒಳಗೆ ಹೋಗು ಮಗಳೇ.. ಸಾಕಿನ್ನು... ಕಿಶನ್ ಬಗ್ಗೆ ನಾನು ತಿಳೀತೀನಮ್ಮ.. ನೀನು ಧೈರ್ಯದಿಂದ ಇರು..ನನಗೆ ಕಿಶನ್ ಹಿಡಿಸಿದ್ದಾನೆ..ಒಳ್ಳೆಮಾಣಿ ..ಮಗಳಿಗೆ ತಕ್ಕ ಅಳಿಯ ಎನಿಸಿದೆ.. ಯಾವುದಕ್ಕೂ ಎರಡು ಮೂರು ದಿನದಲ್ಲಿ ತಿಳಿದು ಹೇಳುವೆ...

ಮೈತ್ರಿ ಒಳಗೆ ತೆರಳಿದಳು.ಮಂಗಳಮ್ಮನೂ ಮಗಳನ್ನು ಹಿಂಬಾಲಿಸಿದರು..ಶಂಕರ ಅಪ್ಪ ಮತ್ತು ಅಣ್ಣನೊಡನೆ ಚರ್ಚಿಸುತ್ತಿದ್ದ..ಈಗಿನ ಕಾಲಕ್ಕೆ ತಕ್ಕಂತೆ ನಾವು ಹಿರಿಯರೂ ಬದಲಾಗಬೇಕು ಎಂದು ಬಲವಾಗಿ ಪ್ರತಿಪಾದಿಸಿದ...

         ‌

ಸಂಜನಾ ,ವಂದನಾ, ಗಾಯತ್ರಿ ಸ್ನಾನ ಮಾಡಿ ಹೊರಟು ನಿಂತರು.. ಶಂಕರನೂ ಸ್ನಾನ ಜಪಾದಿಗಳನ್ನು ಮುಗಿಸಿ ಅಮ್ಮ ಊಟಕ್ಕೆ ಕರೆದಾಗ ಬಂದು ಕುಳಿತನು.. ಇಷ್ಟು ದಿನ ಖುಷಿಯಿಂದ ಅಡುಗೆ ಬಡಿಸುತ್ತಿದ್ದ ಅತ್ತಿಗೆಯ ಮುಖವು ಇಂದು ಬಾಡಿದ್ದು ಕಂಡು ಅವನಿಗೆ ಬೇಸರವಾಯಿತು.. "ಅತ್ತಿಗೆ ನೀವೇನೂ ಯೋಚಿಸಬೇಡಿ.. ಕಿಶನ್ ಬಗ್ಗೆ ನಾನು ನಿಮಗೆ ತಿಳಿದು ಹೇಳುವೆ..ಒಳ್ಳೆಯ ಯುವಕನೆಂದಾದರೆ ಮುಂದಿನ ಕಾರ್ಯಕ್ರಮಕ್ಕೆ ನಾನೇ ಮುಂದಾಗಿ ಬರುತ್ತೇನೆ..ಅಣ್ಣನ ವರ್ತನೆಗೆ ಬೇಸರಿಸಿಕೊಳ್ಳಬೇಡಿ" ಎಂದು ಮೈದುನ ಹೇಳಿ ಸಮಾಧಾನ ಪಡಿಸಿದರೆ ಮಂಗಳಮ್ಮನ ಕಣ್ಣಂಚಿನಿಂದ ಹನಿ ಜಿನುಗುತ್ತಿತ್ತು..


ಶಂಕರನ ಕುಟುಂಬ ಬೆಂಗಳೂರಿಗೆ ಹೊರಟು ನಿಂತಿತು.. ಸಂಜನಾ, ವಂದನಾ ...ಅಕ್ಕ, ತಮ್ಮನಿಗೆ ಬೇಸರದಿಂದಲೇ ಬಾಯ್ ಹೇಳಿದರು..ದೊಡ್ಡಪ್ಪನಲ್ಲಿ ಹೋಗಿಬರುತ್ತೇವೆ ಅಂದಾಗ ಇವರ ಸ್ವರವೂ ಗಂಭೀರವಾಗಿ ಇತ್ತು.. ದೊಡ್ಡಮ್ಮನಿಗೊಂದು ಅಪ್ಪುಗೆ ಕೊಟ್ಟು ಅಜ್ಜ ಅಜ್ಜಿಗೆ ನಮಸ್ಕರಿಸಿ ಕಾರು ಏರಿದರು..ಗಾಯತ್ರಿ "ಅಕ್ಕಾ ಹೆದರಬೇಡ..ನಾವು ನಿಮ್ಮ ಜತೆಗಿದ್ದೇವೆ.." ಎನ್ನಲು ಮರೆಯಲಿಲ್ಲ..ಅತ್ತೆ ಮಾವನ ಕಾಲಿಗೆರಗಿದರು..


    ಕಾರು ಬೆಂಗಳೂರಿನತ್ತ ಪಯಣ ಬೆಳೆಸಿತು..ಮನೆಯು ಒಮ್ಮೆ ಸ್ತಬ್ಧವಾದಂತಾಯಿತು..ಸಾಗುತ್ತಿರುವಾಗ ಮನೆಯ ವಾತಾವರಣದ ಬಗ್ಗೆ ಚರ್ಚಿಸುತ್ತಿದ್ದರು.. ಸಂಜನಾ ವಂದನಾಗೆ ದೊಡ್ಡಪ್ಪ ಅಕ್ಕನನ್ನು ಗದರಿದ್ದು ಸ್ವಲ್ಪವೂ ಇಷ್ಟವಾಗಿರಲಿಲ್ಲ .. ಗಾಯತ್ರಿ..". ರೀ..ನೀಮಗೂ ಹೀಗೆಲ್ಲ ಗದರುತ್ತಿದ್ದರಾ.".ಅಂತ ಕೇಳಲೂ ಮರೆಯಲಿಲ್ಲ.. "ನಾನು ಲವ್ ಮಾಡಿದ್ದರೆ ತಿಳಿಯುತ್ತಿತ್ತು .."ಎಂದು ನಸುನಕ್ಕ ಶಂಕರ..


       ‌.         ****

   ಹುಡುಗಿ ನೋಡಿ ಬಂದ ಕಿಶನ್ ಮತ್ತು ಅಪ್ಪನನ್ನು ತಂಗಿಯರು ಅಮ್ಮ ಕಾರಿನಿಂದಿಳಿಯುತ್ತಲೇ ಪ್ರಶ್ನಿಸತೊಡಗಿದ್ದರು..".. ಅಯ್ಯಾ..ಒಳ್ಳೇ ನ್ಯೂಸ್ ಚಾನಲ್ ನವರು ಪ್ರಶ್ನಿಸಿದಂತೆ ಪ್ರಶ್ನಿಸುತ್ತೀರಲ್ಲ ..ಸ್ವಲ್ಪ ನಮಗೆ ಮನೆಯೊಳಗೆ ಬರುವುದಕ್ಕೆ ಬಿಡುವಿರೋ.." ಎಂದು ಗಣೇಶ ಶರ್ಮ ಕೇಳಿದರೆ..ಅಳಿಯಂದಿರೂ ತಮ್ಮ ಪತ್ನಿಯರ ಕುತೂಹಲಕ್ಕೆ ನಕ್ಕುಬಿಟ್ಟರು.. ಮಮತಾ ಬಿಸಿ ನೀರು ತಂದು ಕುಡಿಯಲು ಕೊಟ್ಟಾಗ ಒಂದು ಲೋಟ ನೀರು ಕುಡಿದ ಗಣೇಶ ಶರ್ಮ ಸುದ್ದಿಯೆಲ್ಲ ಮಡದಿ ಮಕ್ಕಳು ಅಳಿಯಂದಿರಿಗೆ ತಿಳಿಸಿದರು.. ಎಲ್ಲರೂ ಮೈತ್ರಿಯ ಹಾಗೂ ಮನೆಯವರ ಬಗ್ಗೆ ಒಳ್ಳೆಯ ಅಭಿಪ್ರಾಯ ತಾಳುವಂತೆ ಇತ್ತು ಗಣೇಶ ಶರ್ಮರ ಮಾತುಗಳು..


"ನಾನು ಇನ್ನೊಂದು ಎರಡು ಮೂರು ದಿನದಲ್ಲಿ ಜೋಯಿಸರಲ್ಲಿ ಜಾತಕ ತೋರಿಸಿ ಬರುತ್ತೇನೆ" ಎಂದರು ಗಣೇಶ ಶರ್ಮ.. ಮಗನಲ್ಲಿ.."ಸರಿ" ಎಂದು ಕಿಶನ್ ತಲೆಯಲ್ಲಾಡಿಸಿದರೂ ಇನ್ನು ಜೋಯಿಸರು ಏನು ಹೇಳುತ್ತಾರೋ ಎಂಬ ಆತಂಕ ಮನಸಿನ ಮೂಲೆಯಲ್ಲಿ ಇತ್ತು..

ಕಿಶನ್ ಕೂಡ ಅಮ್ಮ ಮಾಡಿದ್ದ ತಿಂಡಿತಿನಿಸುಗಳನ್ನು ಪಾಕ್ ಮಾಡಿಕೊಂಡು ಬೆಂಗಳೂರಿಗೆ ಹೊರಡುವ ತಯಾರಿ ಮಾಡುತ್ತಿದ್ದನು.

ಮುಂದುವರಿಯುವುದು..

✍️... ಅನಿತಾ ಜಿ.ಕೆ.ಭಟ್.
24-02-2020.

ನಮಸ್ತೇ....

      ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ view web version ಕ್ಲಿಕ್ ಮಾಡಿ...💐🙏

Saturday, 22 February 2020

ಅವ'ನಲ್ಲ'




ಅವಳಧರ ಕಂಪನವು
ಮುಂಗುರುಳ ಲಾಸ್ಯವು
ಕಚಗುಳಿಯಿಡುವ ಝುಮುಕಿಯು
ಉಸುರಿತು ಅವ'ನಲ್ಲ'....||೧||

ಕೆಂಪೇರಿದ ಆ ಗಲ್ಲ
ಬಯಸಿಹುದು ಸವಿಬೆಲ್ಲ
ಅವಳ ಮಿಡಿತವ ಬಲ್ಲ
ಪಸರಿಸಿಹ ಸವಿ'ಸೊಲ್ಲ'...||೨||

ಹೃದಯಗಳ ಒಲವ ಬೆಸುಗೆ
ಪ್ರಕೃತಿ ಪುರುಷ ಮಿಲನದೊಳಗೆ
ಪಲ್ಲವಿಸಿ ಮೌನದೊಸಗೆ
ಬಂಧಿಸಿಹ ಅವಳ'ಮೆಲ್ಲ'....||೩||

ನಾನು ಎಂಬ ಅಹಂ ಕಳೆದು
ನಾವು ಎಂಬ ಮೋಹ ತಳೆದು
ಸರಸಸುಖದಲಿ ಮೈಮರೆದು
ಕಣ್ಮುಚ್ಚಿದರೂ ಕಾಡುವ'ನಲ್ಲ'...||೪||


✍️... ಅನಿತಾ ಜಿ.ಕೆ.ಭಟ್.
22-02-2020.

ಕಥಾ ಅರಮನೆಯ ' ಚಿತ್ರ ಸ್ಪರ್ಶಿ' ಗೆ ಬರೆದ ಕವನ..

ನಮಸ್ತೇ...

        ಹೆಚ್ಚಿನ ಓದಿಗಾಗಿ view web version ಮೇಲೆ ಕ್ಲಿಕ್ ಮಾಡಿ..follow ಮಾಡಬಹುದು..💐🙏


Friday, 21 February 2020

ಜೀವನ ಮೈತ್ರಿ-ಭಾಗ ೨೪(24)





      'ಶಾಸ್ತ್ರೀನಿವಾಸ'ದಲ್ಲಿ ಭಾಸ್ಕರ ಶಾಸ್ತ್ರಿಗಳು ಮೈತ್ರಿಯ ವಿಚಾರಣೆ ಗಂಭೀರವಾಗಿ ಆರಂಭಿಸಿದ್ದರು.ಮೈತ್ರಿಯನ್ನು ಚಾವಡಿಗೆ ಬರಹೇಳಿದ ಅಪ್ಪ "ಮಗಳೇ.. ನಿನ್ನನ್ನು ಇಂಜಿನಿಯರಿಂಗ್ ಕಾಲೇಜಿಗೆ ಸೇರಿಸಿದ್ದು ಏತಕ್ಕೆ..?"
"ಓದಿ ನನ್ನ ಸ್ವಂತ ಕಾಲಮೇಲೆ ನಿಲ್ಲುವಷ್ಟು ವಿದ್ಯಾಭ್ಯಾಸ ಬೇಕು" ಎಂದು..
"ನೀನು ಮಾಡಿದ್ದೇನು.."
"ಅದನ್ನೇ ಮಾಡುತ್ತಿದ್ದೇನೆ ಅಪ್ಪಾ..ಪ್ರತಿ ಸೆಮಿಸ್ಟರ್ ನಲ್ಲಿಯೂ ಡಿಸ್ಟಿಂಕ್ಷನ್ ಗಳಿಸಿ ತರಗತಿಗೆ ಮೂರನೇ ಅಥವಾ ನಾಲ್ಕನೇ ಸ್ಥಾನ ಗಳಿಸುತ್ತಿದ್ದೇನೆ.."
"ಅಷ್ಟನ್ನೇ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುತ್ತಿದ್ದರೆ ಈಗ ನಾನು ಕರೆದು ಕೇಳುತ್ತಿದ್ದೆನಾ..?"

"ಮತ್ತೇನು ಅಪ್ಪಾ..?" ಮೈತ್ರಿಗೆ ಗೊತ್ತು.. ಅಪ್ಪಾ ಕಿಶನ್ ಜೊತೆ ಪರಿಚಯ ಆದ ಬಗ್ಗೆ ಕೇಳುತ್ತಿದ್ದಾರೆ ಎಂದು.ಆದರೂ ಮೊದಲಿನ ಅಳುಕುತನ ಅವಳಲ್ಲಿರಲಿಲ್ಲ..ಅವಳೂ ದಿನದಿಂದ ದಿನಕ್ಕೆ ಹೃದಯ ಗಟ್ಟಿಮಾಡಿಕೊಳ್ಳುತ್ತಿದ್ದಾಳೆ.ಇದುವರೆಗೆ ಕಿಶನ್ ಮಾತ್ರ ಪರಿಚಯವಿದ್ದ ಮೈತ್ರಿಗೆ ಇವತ್ತು ಅವನ ತಂದೆಯನ್ನು ಕಂಡು ನಮ್ಮಿಬ್ಬರ ಪ್ರೇಮಸಂಬಂಧವನ್ನು ದಡಸೇರಿಸುವಂತಹ ವ್ಯಕ್ತಿ ಇವರು ಎಂಬ ವಿಶ್ವಾಸ ಗಣೇಶ ಶರ್ಮರ ಮೇಲೆ ಮೂಡಿತ್ತು.ವಿಶ್ವಾಸ ಧೈರ್ಯವನ್ನು ತಂದುಕೊಡುತ್ತದೆ.ಅದೇ ಧೈರ್ಯದಿಂದ ಇವತ್ತು ತಂದೆಯ ದನಿಗೆ ಹೆದರದೆ ಉತ್ತರಿಸುತ್ತಿದ್ದಾಳೆ . ಇದು ಅವಳ ಬದುಕಿನ ಪ್ರಶ್ನೆ ಎಂಬುದನ್ನು ಅರ್ಥಮಾಡಿಕೊಂಡಿದ್ದಾಳೆ.

"ಓದಲು ಕಾಲೇಜಿಗೆ ಹೋದವಳಿಗೆ ಸೀನಿಯರ್ ಹುಡುಗನನ್ನು ಪರಿಚಯ ಮಾಡಿಕೊಳ್ಳುವ ಅಗತ್ಯವೇನಿತ್ತು.."
"ಅಪ್ಪಾ..ನಾನಾಗಿ ಅವರನ್ನು ಪರಿಚಯ ಮಾಡಿಕೊಂಡಿಲ್ಲ..ಯಾವುದೋ ಸಂದರ್ಭದಲ್ಲಿ ಕಾಲೇಜಿನಲ್ಲಿ ಮುಖಾಮುಖಿಯಾದೆವು..ನಂತರ ನಮ್ಮ ಸಂಬಂಧಿಕರ ಮದುವೆಯಲ್ಲಿ ಕಂಡಿದ್ದೆ..ಅಷ್ಟೇ ಅಪ್ಪಾ.."

"ಅಷ್ಟೇನಾ..."
"ಹೌದು..ಅಷ್ಟೇನೇ.."
"ಅಷ್ಟೇ ಆಗಿದ್ರೆ ಅವರು ಯಾಕೆ ಮನೆವರೆಗೆ ಬಂದು ಹೆಣ್ಣು ಕೇಳುತ್ತಿದ್ದರು.. ಯಾರಾದರೂ ಪರಿಚಯದವರಲ್ಲಿ ಕೇಳಲು ಹೇಳುತ್ತಿದ್ದರು...ಇಬ್ಬರ ನಡುವೆ ಪ್ರೇಮವಿರುವುದು ನಿಮ್ಮ ನಡತೆಯಿಂದ ಆರಿವಾಗದಷ್ಟು ದಡ್ಡನಾ ನಿನ್ನಪ್ಪಾ.."ಎನ್ನುತ್ತಾ ದನಿಯೇರಿಸಿದರು..

ಮೈತ್ರಿ ಸ್ವಲ್ಪವೂ ಕದಲದೆ ನಿಂತಿದ್ದಳು.. ಉತ್ತರಿಸಲು ಹೋಗಲಿಲ್ಲ..ಎಂದಿನಂತೆ ಕಣ್ಣೀರು ಸುರಿಸಲಿಲ್ಲ.. ಕೈಕಾಲು ನಡುಗಲಿಲ್ಲ..

ಗಂಡನ ಏರುಸ್ವರವನ್ನು ಕೇಳಿ ಗಾಬರಿಗೊಂಡ ಮಂಗಳಮ್ಮ ಚಾವಡಿಗೆ ಧಾವಿಸಿದರು..

"ಹೇಳು.. ಮೈತ್ರಿ ..ಯಾವನನ್ನೋ ಪ್ರೀತಿಸುವ ಅಗತ್ಯವೇನಿತ್ತು ನಿನಗೆ..ಪ್ರೀತಿಸುವುದೇ ಜೀವನದ ಗುರಿಯಾಗಿದ್ದರೆ ಹದಿನೆಂಟು ವರ್ಷಕ್ಕೇ ಮದುವೆ ಮಾಡುತ್ತಿದ್ದೆ.."

"ಪ್ರೀತಿ ಪ್ರೇಮ ನನ್ನ ಗುರಿಯೆಂದು ನಾನೆಂದೂ ಅಂದುಕೊಂಡಿಲ್ಲ ಅಪ್ಪಾ.."
"ಮತ್ತೇಕೆ ಹೀಗೆ ಮಾಡಿದೆ...ನನ್ನ ಮಕ್ಕಳು ಅಡ್ಡದಾರಿ ಹಿಡೀಬಾರ್ದು,ಲವ್ ಮಾಡಿ ಕೆಟ್ಟ ಹೆಸರು ತರಬಾರದು,ಪರೀಕ್ಷೆಗಳಲ್ಲಿ ಫೇಲ್ ಆಗಬಾರದು ಎಂದು ನಾನು ಇಷ್ಟೆಲ್ಲಾ ಶಿಸ್ತನ್ನು ನಿಮ್ಮಲ್ಲಿ ಅಳವಡಿಸಲು ಪ್ರಯತ್ನಿಸಿದರೆ.. ನೀನು ಹೀಗೆ ಮಾಡುತ್ತೀಯಾ ಎಂದು ತಿಳಿದಿರಲಿಲ್ಲ.."
"ನಿಮ್ಮ ಹೆಸರು ಹಾಳಾಗುವಂತಹ ಕೆಲಸ ನಾನೇನೂ ಮಾಡಿಲ್ಲ"
"ನನ್ನ ಮಗಳೇ ಹೀಗೆ ಲವ್ ಮಾಡಿದರೆ ನಾನು ಹದಿಹರೆಯದಲ್ಲೇ ಪ್ರೇಮಪಾಶಕ್ಕೆ ಸಿಲುಕುವ ನನ್ನ ವಿದ್ಯಾರ್ಥಿಗಳಿಗೆ ಹೇಗೆ ಬುದ್ಧಿವಾದ ಹೇಳಲೀ.. ಅವರು ನಿಮ್ಮ ಮಗಳು ಏನು ಮಾಡಿದ್ದಾಳೆ ಅನ್ನಲಾರರೇ....??"
"ನಾನೇನೂ  ಲವ್ ಮಾಡಿಲ್ಲ.. ಪರಸ್ಪರ ಪರಿಚಯ ಸ್ನೇಹ ಸಲುಗೆ ಇತ್ತು.."

"ಮತ್ತೆ ಮತ್ತೆ ಅದನ್ನೇ ಹೇಳಿ ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ ... ಸಮಾಜದಲ್ಲಿ ಆದರ್ಶವಾಗಿ ಬಾಳಬೇಕು ನನ್ನ ಕುಟುಂಬ ಎಂಬ ನನ್ನ ಆಸೆಗೆ ನೀರೆರೆದು ಬಿಟ್ಟಿಯಲ್ಲೇ..ನಿನ್ನನ್ನಾ.."ಎನ್ನುತ್ತಾ ಮಗಳ ಮೇಲೆ ಕೈಮಾಡ ಹೊರಟರು.

ಇಬ್ಬರ ಮಧ್ಯೆ ಆಗಮಿಸಿದ ಮಂಗಳಮ್ಮ..ಗಂಡನ ಕೈಯನ್ನು ಪಕ್ಕಕ್ಕೆ ತಳ್ಳಿ"ಮಗಳ ಮೇಲೆ ಕೈಮಾಡಬೇಡಿ... ಅವಳೇನು ತಪ್ಪು ಮಾಡಿದಳು.. ಹೊಡೆಯುವಂತಹದ್ದು.."
"ನೀನು ತಾಯಿಯಾದವಳು ಹೀಗೆ ಮಗಳಿಗೆ ಸಪೋರ್ಟ್ ಮಾಡುವುದಕ್ಕೇ ಅವಳು ಇವತ್ತು ನಮ್ಮ ಕುಟುಂಬದ ಇತಿಹಾಸದಲ್ಲೇ ಯಾರೂ ಮಾಡದ ಕೆಲಸ ಮಾಡಿರುವುದು.."ಎನ್ನುತ್ತಾ ಅಬ್ಬರಿಸಿದರು.

"ಇಲ್ಲ..ಅವಳು ಏನು ಮಾಡುತ್ತಿದ್ದಾಳೆ ಎಂಬ ಅರಿವು ಅವಳಿಗಿದೆ.ಹುಡುಗಾಟಿಕೆಯ ಬುದ್ಧಿ ಆವಳದಲ್ಲ.."
"ಏನಂದೆ..ಮಾಡೋದೆಲ್ಲ ಮಾಡಿ..ಹುಡುಗಾಟಿಕೆ ಯು ಬುದ್ಧಿ ಅಲ್ವಾ.."ಎನ್ನುತ್ತಾ ತಾಯಿ ಮಗಳಿಬ್ಬರಿಗೂ ಕೈಯೈತ್ತಿ ಹೊಡೆಯಹೊರಟರು..

ಪರಿಸ್ಥಿತಿಯನ್ನರಿತ ಮಹೇಶ್ ಅಲ್ಲೇ ಪಕ್ಕದಲ್ಲಿ ನಿಂತಿದ್ದವನು ಆಪ್ಪನೆದುರಿಗೆ ಬಂದು ನಿಂತ.."ಅಪ್ಪಾ.. ನೀವು ಅಮ್ಮ, ಅಕ್ಕ ಇಬ್ಬರ ಮೇಲೆ ಕೈಮಾಡಿದರೂ ನನ್ನ ಮೇಲಾಣೆ..
ಅಲ್ಲಾ..ಒಬ್ಬ ಯುವತಿ ಯುವಕನೊಂದಿಗೆ ಸಲುಗೆಯಿಂದಿದ್ದರೆ ಅದರಿಂದ ಕುಟುಂಬದ ಮಾನ ಹೋಗುತ್ತದೆ ಅಂತೀರಲ್ಲಾ.. ಸ್ವಲ್ಪ ನೀವೂ ವಿಶಾಲವಾಗಿ ಯೋಚಿಸುವುದನ್ನು ಕಲಿಯಿರಿ.."
"ಹಾಂ..ನೀನೊಬ್ಬ ಬಾಕಿ ಅಕ್ಕನ ಪರ ಉಪದೇಶ ಮಾಡುವುದಕ್ಕೆ..."

"ಹೌದು ಅಪ್ಪಾ..ನಾನೂ ಉಪದೇಶ ಮಾಡಬಲ್ಲೆ..ಅವಳು ಮಾಡಿದ ಕೆಲಸವನ್ನೇ ನೀವೂ ಮಾಡುತ್ತಿದ್ದೀರಿ ಎಂದೂ ನಿಮ್ಮ ತಪ್ಪನ್ನು ಎತ್ತಿತೋರಿಸಬಲ್ಲೆ"

"ಥೂ..ನಾನು ಅಂತಹಾ ಕೆಲಸ ಮಾಡಿದವನಲ್ಲ..ಮಾಡಿದವರನ್ನು ಸಹಿಸುವುದೂ ಇಲ್ಲ..ಅದು ನನ್ನ ಮಕ್ಕಳೇ ಆಗಲಿ, ವಿದ್ಯಾರ್ಥಿಗಳೆ ಆಗಲಿ.."ಎನ್ನುತ್ತಾ ಆಟ್ಟಹಾಸಗೈದರು..
"ಸ್ವಲ್ಪ ತಾಳ್ಮೆಯಿರಲಿ..ನಾನು ಹೇಳುವುದನ್ನು ಕೇಳಿ.. ನಿಮಗೆ ಕೆಲವೊಮ್ಮೆ ಬೆಳಿಗ್ಗೆ ಏಳು ಗಂಟೆ ಗೆ ಸರಿತಾ ಟೀಚರ್ ಫೋನ್ ಮಾಡ್ತಾರೆ..ಸರ್.. ಇವತ್ತು ಫಂಕ್ಷನ್ ಇದೆ ಗೆಸ್ಟ್ ಗೆ ಬೊಕ್ಕೆ ತರಲು ಹೆಡ್ ಮಾಸ್ಟರ್ ನನಗೆ ಹೇಳಿದ್ದಾರೆ.. ನೀವು ಬರ್ತಾ ತಂದ್ರೆ ಉಪಕಾರ .. ಎಂದರೆ ಸಾಕು ನಗುನಗುತ್ತಾ ಆಯ್ತು ಅಂತೀರಿ..ನಾವ್ಯಾರಾದರೂ ನಿಮ್ಮಿಬ್ಬರ ಮಧ್ಯೆ ಸಂಬಂಧ ಕಲ್ಪಿಸಿ ಆಡಿದ್ದೀವಾ..ಹೋಗಲಿ ಬಿಡಿ..ಮೊನ್ನೆ ಶಾಲೆಯ ಟೂರ್ ಇತ್ತಲ್ಲಾ..ಎರಡು ದಿನಕ್ಕೆ ಹೋದ್ರಿ.. ಮುಂಜಾನೆ ನಾಲ್ಕು ಗಂಟೆಗೇ ಸರಿತಾ ಟೀಚರ್ ಕಾಲ್ ಮಾಡಿದ್ರು ಸರ್.. ನೀವು ಶಾಲೆಕಡೆಗೆ ಹೋಗುವಾಗ ನಮ್ಮನೆ ಪಕ್ಕದಲ್ಲೇ ಸ್ವಲ್ಪ ಬರಬಹುದಾ..ನನಗೂ ಮಕ್ಕಳೊಂದಿಗೆ ಬರಲು ಸುಲಭ ಅಂತ.. ಯಾಕಪ್ಪಾ ಅವಳಿಗೆ ಗಂಡ ಕರ್ಕೊಂಡು ಬರಲ್ವಾ..?? ನೀವೇ ಯಾಕೆ ಹೋಗ್ಬೇಕು.. ?? ನಾವ್ಯಾರಾದರೂ ನಿಮ್ಮನ್ನು ಕೇಳಿದ್ದೇವಾ...?? ಅವರಿಗೂ ಅವರ ಸೇವೆಗೆ ಸಂಬಳ ಸಿಗುತ್ತದೆ ತಾನೇ..?? ತನ್ನ ಕೆಲಸ ಇನ್ನೊಬ್ಬ ಪುರುಷ ಶಿಕ್ಷಕನ ಕೈಯಲ್ಲಿ ಮಾಡಿಸಿದರೆ ಅಥವಾ ನೀವು ಅವರ ಬಲಗೈ ಬಂಟನಂತೆ ನಡೆದುಕೊಂಡರೆ ಜನ ಆಡಿಕೊಳ್ಳಲ್ವಾ.. ?? ಯಾವತ್ತಾದರೂ ಅಮ್ಮ ನಿಮ್ಮಿಬ್ಬರ ಮಧ್ಯೆ ಇಲ್ಲಸಲ್ಲದ್ದನ್ನು ಕಲ್ಪಿಸಿ ಆಡಿದ್ದಿದೆಯಾ..???"

"ನೋಡು ಮಹೇಶ್..ಆ ವಿಷಯವೇ ಬೇರೆ..ಇದೇ ಬೇರೆ..ಆಕೆ ಮದುವೆಯಾದ ಹೆಣ್ಣುಮಗಳು.. ಸಹೋದರಿಯಂತೆ.. ಇವರಿಬ್ಬರೂ ಪರಸ್ಪರ ಪ್ರೀತಿಸಿದ್ದು..ಅದೆಲ್ಲ ಅರ್ಥವಾಗುವ ವಯಸ್ಸು ನಿನ್ನದಲ್ಲ..."

"ನನಗರ್ಥ ಆಗುತ್ತದೆ.. ನಿಮಗೆ ನಿಮ್ಮಿಷ್ಟದಂತೆಯೇ ಎಲ್ಲವೂ ನಡೆಯಬೇಕು..ನಿಮ್ಮನ್ನು ಯಾರೂ ಪ್ರಶ್ನಿಸುವಂತಿಲ್ಲ.. ಹಾಗಾದರೆ ಮಾತ್ರ ಸಮಾಧಾನ.. ಮಡದಿ ಮಕ್ಕಳ ಆಸೆಗಳಿಗೆ ಗೌರವವಿಲ್ಲ.."

"ಮಗಳಿಗೆ ಮದುವೆ ಮಾಡುವ ಜವಾಬ್ದಾರಿ ತಂದೆತಾಯಿಗಿದೆ.ವಿದ್ಯಾಭ್ಯಾಸ ಮುಗಿಯುವವರೆಗೆ ಕಾಯುವ ತಾಳ್ಮೆಇಲ್ಲದಿದ್ದರೆ.. ಮೊದಲೇ ಹೇಳುತ್ತಿದ್ದರೆ ನಾವೇ ಮುಂದೇ ನಿಂತು ಸೂಕ್ತ ವರನಿಗೆ ಧಾರೆಯೆರೆಯುತ್ತಿದ್ದೆವು..ಈಗ ನಮ್ಮನ್ನು ನಾಲ್ವರು ಆಡಿಕೊಳ್ಳುವಂತಾಯಿತು.. ಮಾಷ್ಟ್ರ ಮಗಳದು ಲವ್ ಮ್ಯಾರೇಜ್ ಅಂತ.."

"ಅಪ್ಪಾ..ಲವ್ ಮ್ಯಾರೇಜ್ ಆದರೂ ಅರೇಂಜ್ಡ್ ಮ್ಯಾರೇಜ್ ಆದರೂ ಹೊಂದಿಕೊಂಡು ಬದುಕುವುದು ಮುಖ್ಯವೇ ಹೊರತು ಮದುವೆ ಯಾವ ರೀತಿಯದ್ದು ಎಂಬುದು ಮುಖ್ಯವಲ್ಲ."ಎಂದ ಮಹೇಶ್.

"ನಾವು ಹಿರಿಯರು ಆಶೀರ್ವದಿಸಿ ಮಾಡಿದ ಮದುವೆಗೆ ಬಾಳ್ವಿಕೆ ಹೆಚ್ಚು..ಚಂದ ಹೆಚ್ಚು.. ಲವ್ ಮಾಡಿ ಎರಡೇ ವರ್ಷದಲ್ಲಿ ಡೈವೋರ್ಸ್ ಕೊಟ್ಟರೆ ಗೋವಿಂದ...ಅರಳುವ ಹೂವಿಗೆ ಮಕರಂದ ಹೀರುವ ದುಂಬಿ ಮುತ್ತಿಕೊಳ್ಳುತ್ತದೆ..ಮಕರಂದ ಸವಿದು ಹೂವು ಬಾಡಿದಾಗ ತಾನು ಇನ್ನೊಂದು ಹೂವನ್ನು ಆಶ್ರಯಿಸುತ್ತದೆ.."

"ಅಪ್ಪಾ.. ಕಿಶನ್ ಅಂತಹವರಲ್ಲ.. ಕಿಶನ್ ದುಂಬಿಯಂತೆ ಸಿಕ್ಕಸಿಕ್ಕ ಹೂವುಗಳಿಂದ ಮಕರಂದ ಹೀರಲು ಕಾದುಕುಳಿತವರಲ್ಲ..ಏನೇನೋ ಹೇಳಬೇಡಿ.."ಎಂದಳು ಏರು ಧ್ವನಿಯಲ್ಲಿ ಮೈತ್ರಿ.. ಅವಳಿಗೆ ಕಿಶನ್ ಬಗ್ಗೆ ಅಪ್ಪ ಹೇಳಿದ ಮಾತು ಬೇಸರ, ಸಿಟ್ಟು ತರಿಸಿತ್ತು.

"ಅದೆಲ್ಲ ಈಗ ನಿನಗೆ ಅರ್ಥವಾಗದು.. ಅರ್ಥವಾಗಲು ಎರಡು ಮೂರು ವರ್ಷಗಳು ಬೇಕು..ಆಗ ಮತ್ತೆ ಅಪ್ಪಾ ಎಂದು ನನ್ನೆದುರು ಅಂಗಲಾಚಬೇಡ.."

"ಏನೇ ಕಷ್ಟ ಬಂದರೂ ಅಂಗಲಾಚಲಾರೆ ಅಪ್ಪಾ..ನನಗೆ ನನ್ನ ಕಾಲ ಮೇಲೆ ಬದುಕುವ ಸಾಮರ್ಥ್ಯವಿದೆ.."

ಮಹೇಶ್ ಈಗ ಸುಮ್ಮನಿರಲು ಸಾಧ್ಯವಿಲ್ಲ ಎಂದುಕೊಂಡು ಒಂದು ಸತ್ಯವನ್ನು ಬಯಲು ಮಾಡಹೊರಟ.. " ಹಿರಿಯರು ಆಯ್ಕೆ ಮಾಡಿದ ಯುವಕ ಸನ್ನಡತೆಯಲ್ಲಿರುತ್ತಾನೆ ಎಂಬ ಖಾತ್ರಿಯೂ ಇಲ್ಲ.. ಲವ್ ಮ್ಯಾರೇಜ್ ಗೆ ಆಯಸ್ಸು ಕಡಿಮೆ ಎಂದೂ ಹೇಳಲಾಗದು.."

"ಇನ್ನೂ ವರುಷ ಇಪ್ಪತ್ತು ದಾಟದ ನೀನು ನನಗೆ ಹೇಳಬೇಡ..ಬಾಯ್ಮಚ್ಚಿ ನಡೆ.."

"ಇಲ್ಲ ಅಪ್ಪಾ... ನೀವು ಮಾಡುತ್ತಿರುವುದು ಸರಿಯಿಲ್ಲ.."
"ಹೌದು ಮತ್ತೇನು..ಲವ್ ಮಾಡಿ ಮನೆತನಕ್ಕೆ ಕೆಟ್ಟ ಹೆಸರು ತರಲು ಬಯಸಿದವಳನ್ನು ನಿಮ್ಮಂತೆ ಹಾಡಿಹೊಗಳಬೇಕೇನು..??"

"ನಿಧಾನವಾಗಿ ಕಿಶನ್ ಬಗ್ಗೆ ಅವನ ಕುಟುಂಬದವರ ಬಗ್ಗೆ ತಿಳಿದುಕೊಳ್ಳಿ.. ಆಮೇಲೆ ಮಾತನಾಡಿ..ಬೇಕಾದರೆ ಕಿರುಚಿಕೊಳ್ಳಿ.."
"ಏನಂದೆ..ನನಗೇ ಎದುತ್ತರ ಕೊಡುತ್ತೀಯಾ.."ಧ್ವನಿ ಏರಿತು..

"ಹೌದು.. ನೀವು ಅಕ್ಕನ ಜಾತಕ ಕೊಟ್ಟ ಬಾರಂತಡ್ಕದ ಕೇಶವ್ ಭಾರೀ ಸನ್ನಡತೆಯ ವ್ಯಕ್ತಿ ಅಂದುಕೊಂಡರೆ ಅದು ಶುದ್ಧ ಸುಳ್ಳು.. ಅವನು ನಿಜವಾಗಿಯೂ ಅರಳುವ ಹೂವನರಸುವ ದುಂಬಿ..ದುಡ್ಡಿನ ಮದದಿಂದ ಅದನ್ನೆಲ್ಲ ಮರೆಸುವ ಶಕ್ತಿಯುಳ್ಳವನು.. ನೀವು ಯಾರಲ್ಲಿ ಅವನ ಬಗ್ಗೆ ಒಳ್ಳೆಯ ಮಾತು ಕೇಳಿದಿರೋ...!!!!!! ಶ್ರೀಮಂತರ ಹಾದಿತಪ್ಪಿದ ನಡತೆ ಬಗ್ಗೆ ಗೊತ್ತಿದ್ದರೂ ಮೌನವಾಗಿದ್ದು ಒಳ್ಳೆಯವರು ಎಂದು ಹೊಗಳುವ ಹೊಗಳುಭಟ್ಟರೇ ಹೆಚ್ಚು..ಮಧ್ಯಮವರ್ಗದವರು ಮಾನವೀಯತೆ, ಪ್ರೀತಿ ,ಪ್ರೇಮ ಇತ್ಯಾದಿ ಮೌಲ್ಯಗಳಿಗೆ ಬೆಲೆಕೊಟ್ಟು ಬದುಕಿದರೂ ಆಂತಹವರ ಮೇಲೆ ಸಂಶಯ ತಪ್ಪಿದ್ದಲ್ಲ.."

"ಕೇಶವ್ ನ ಬಗ್ಗೆ ಹೀಗೆಲ್ಲ ನಿನಗೆ ಹೇಗೆ ಗೊತ್ತಾಯ್ತು.."

"ಅಪ್ಪಾ.ನಿಮಗೆ ಮಗಳ ಮದುವೆಯ ಕಾಳಜಿ ಎಷ್ಟಿದೆಯೋ ನನ್ನಕ್ಕ ನಗುನಗುತ್ತಾ ಸುಖವಾಗಿ ಬಾಳಬೇಕು ಅನ್ನುವ ಆಸ್ಥೆ ನನಗೂ ಅಷ್ಟೇ ಇದೆ.. ಆದ್ದರಿಂದಲೇ ನಾನೂ ಅವನ ಬಗ್ಗೆ ತಿಳಿದುಕೊಳ್ಳಲೇಬೇಕಾಯಿತು.."

"ಮತ್ತೆ ಯಾಕೆ ಇಷ್ಟು ದಿನ ಮುಚ್ಚಿಟ್ಟೆ..ಈಗ ಈ ಸಂಬಂಧವನ್ನು ಮುಂದುವರಿಸಲು ಸುಳ್ಳು ಹೆಣೆಯುತ್ತಿಲ್ಲ ತಾನೇ..."

"ಹೇಳುವ ಸಂದರ್ಭ ಬಂದಾಗ ಹೇಳಿದರೆ ಅದಕ್ಕೊಂದು ಅರ್ಥ... ಕೇಶವ್ ನೊಂದಿಗೆ ಮದುವೆ ಇಷ್ಟವಿಲ್ಲದಿದ್ದರೂ ಒತ್ತಾಯಪೂರ್ವಕವಾಗಿ ಮಾಡುವ ಹುನ್ನಾರಕ್ಕಿಂತ ಪರಿಚಯವಿರುವ ಕಿಶನ್ ಬಗ್ಗೆ ಇನ್ನಷ್ಟು ತಿಳಿದುಕೊಂಡು ಮುಂದುವರಿಯುವುದು ಸೂಕ್ತ..."

       ಈಗ ಭಾಸ್ಕರ ಶಾಸ್ತ್ರಿಗಳು ಸ್ವಲ್ಪ ಮೆದುವಾದರು.ಮಗ, ಮಡದಿ, ಮಗಳು ಮೂವರೂ ಒಗ್ಗಟ್ಟಿನಿಂದ ನಿಂತಿದ್ದರೆ ತಾನೇ ಒಬ್ಬಂಟಿಯಾದೆ ಅನಿಸತೊಡಗಿತು..


ಮುಂದುವರಿಯುವುದು...

✍️ ಅನಿತಾ ಜಿ.ಕೆ.ಭಟ್.
22-02-2020.


ನಮಸ್ತೇ...

      ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ'Home'ಮತ್ತು> ಸಂಕೇತಗಳನ್ನು ಬಳಸಿಕೊಳ್ಳಬಹುದು.view web version ಕ್ಲಿಕ್ ಮಾಡಿ ಫಾಲೋ ಮಾಡಬಹುದು.




Thursday, 20 February 2020

ಜೀವನ ಮೈತ್ರಿ-ಭಾಗ ೨೩(23)




  ಬರ್ತ್ ಡೇ ದಿನದ ಚೂಡಿದಾರ್ ಧರಿಸಿ ಕೈಯಲ್ಲಿ ಜ್ಯೂಸ್ ಹಿಡಿದು ಮೆಲ್ಲನೆ ಚಾವಡಿಗೆ ಕಾಲಿಟ್ಟಳು ಮೈತ್ರಿ.ಅಮ್ಮ ಹಿಂದಿನಿಂದ ಜೊತೆಯಾದರು.ಮಹೇಶ್ ಮೊದಲೇ ಚಾವಡಿಯ ಒಂದು ಮೂಲೆಯಲ್ಲಿ ಏನೂ ಅರಿಯದವನಂತೆ ನಿಂತಿದ್ದ..ಅವನದು ಚೇಷ್ಟೆ..ಅಕ್ಕನ ಮುಖಭಾವವನ್ನು ಗಮನಿಸಿ ಮತ್ತೆ ಗೋಳು ಹೊಯ್ದುಕೊಳ್ಳುವ ಪ್ಲಾನ್..ಮೈತ್ರಿಗೆ ಒಮ್ಮೆಲೇ ಎದೆಬಡಿತ ಜೋರಾಗಿತ್ತು.ಕಣ್ಣುಗಳು ಆ ನೋಟವನ್ನು ಎದುರಿಸಲು ಸೋತವು.ಆ ನೋಟದ ಭಾವವು ಮೈಯೊಳಗೆ ಕಂಪನದ ಅಲೆಯೆಬ್ಬಿಸಿದವು.ಮುಂಗುರುಳು ತಾನು ಹಣೆಯ ಮೇಲೆ ನಾಟ್ಯವಾಡುತ್ತಿತ್ತು.. ಕೆನ್ನೆ ಕೆಂಪೇರಿ ನಸುನಗೆಯು ಅಲಂಕರಿಸಿತು. ಎದುರೇ ಕುಳಿತಿರುವ ನಾಲ್ಕು ವರ್ಷಗಳ ಪ್ರೇಮಪೂಜಾರಿ.. ಆದರೆ ಗಂಟಲೊಣಗಿತ್ತು ಪಸೆ ಆರಿ..ಮುದ್ಗೊಂಬೆ ಮುದ್ಗೊಂಬೆ ಎಂದು ಬಾಯ್ತುಂಬಾ ಕರೆಯಬೇಕೆಂದು ಸಂದೇಶದಲ್ಲಿ ಬರೆಯುತ್ತಿದ್ದವನು ಕಂಠದಿಂದ ಸ್ವರ ಹೊರಡದೆ ಸ್ತಂಭೀಭೂತನಾಗಿದ್ದ.. ಇದೇ ಡ್ರೆಸ್ ನಲ್ಲಿನ ಅವಳ ಫೊಟೋ ನೋಡುತ್ತಾ ಅದೆಷ್ಟು ತಾಸುಗಳನ್ನು ಅವಳನ್ನು ಆರಾಧಿಸುತ್ತಾ ಕಳೆದಿದ್ದನೋ ಏನೋ.. ಅದೆಷ್ಟು ಹಾಯ್ಕುಗಳು .. ಚುಟುಕುಗಳು ...ಹುಟ್ಟಿಕೊಂಡು ಪ್ರೇಮಬಂಧವನ್ನು ಬಿಗಿಗೊಳಿಸಿದ್ದುವೋ ಏನೋ.. ಆದರೆ ಈಗ ಅದೇ ಚೆಲುವಿನ ಅರಗಿಣಿ ಕಣ್ಣ ಮುಂದೆ ಇದ್ದರೂ ಮೌನವೇ ಆವರಿಸಿದೆ.ಮೌನದ ಭಾವವನ್ನು ಓದುವ ಸೌಭಾಗ್ಯ ಇಬ್ಬರದಾಗಿದೆ.. ಮೌನವೇ ಈಗ ಹೃದಯಕ್ಕೆ ಆಪ್ತವಾಗಿದೆ..ಅವಳ ಒಂದೊಂದು ಹೆಜ್ಜೆಯ ಸದ್ದಿಗೂ ಅವನ ಹೃದಯ ತಾಳಹಾಕುತ್ತಿತ್ತು.


      ಶರಬತ್ತು ನೀಡಲು ಬಂದ ಮೈತ್ರಿ ಒಂದು ಕ್ಷಣ ನಿಧಾನಿಸಿದಳು.ಯಾರಿಗೆ ಕೊಡಲಿ..ಹಿರಿಯರಿಗೋ ಅಲ್ಲ ಪ್ರೇಮಗೀತೆಯ ಗೀಚಿದ ಕವಿಪುಂಗವನಿಗೋ...ಅಪ್ಪ ಕಣ್ಣಲ್ಲೇ ಹುಡುಗನ ಕಡೆಗೆ ತೋರಿಸಿದರು. ಮೈತ್ರಿ ನಡುಗುತ್ತಿದ್ದ ಕೈಗಳಿಂದ ಮೆಲ್ಲನೆ ಗ್ಲಾಸ್ ಎತ್ತಿ ಅವನೆಡೆಗೆ ಚಾಚಿದಳು.ಅವನೂ ತುಸು ನಿಧಾನಿಸಿ ಅವಳ ಮುಖಭಾವವ ಓದುತ್ತಾ ಕೈ ಮುಂದೆ ಮಾಡಿದನು.ಅವಳ ಕೈಬೆರಳುಗಳ ತುತ್ತ ತುದಿಗೆ ಅವನ ಬೆರಳುಗಳ ಸ್ಪರ್ಶ ರೋಮಾಂಚನ ತಂದಿತು.ಕೂಡಲೇ ಸಾವರಿಸಿಕೊಂಡ ಅವನ ನಾಲಿಗೆ ಅಭ್ಯಾಸ ಬಲದಿಂದ ಸಾರಿ ಕೇಳಲು ಹೊರಟರೂ ಊಹೂಂ.. ಅದು ಸಾಧ್ಯವಾಗಲಿಲ್ಲ.ಲೋಟದಲ್ಲಿದ್ದ ಶರಬತ್ತು ಕುಡಿಯಲೂ ನಿಧಾನಿಸುತ್ತಿದ್ದವನಿಗೆ ಇನ್ನಷ್ಟು ಹೊತ್ತು ಮುದ್ದಿನ ಅರಗಿಣಿಯನ್ನು ಕಾಯಿಸಿ ಕಣ್ತುಂಬಿಸಿಕೊಳ್ಳುವ ತವಕ.ಭಾಸ್ಕರ ರಾಯರು ಗಣೇಶ ಶರ್ಮ ಇಬ್ಬರೂ ಶರಬತ್ತಿನ ಲೋಟವನ್ನು ಮೈತ್ರಿಯ ಕೈಗಿತ್ತರು.ಕಿಶನ್ ನೆಡೆಗೆ ಗಣೇಶ ಶರ್ಮರ ನೋಟ  ...ಆಗಲಿಲ್ಲವೇನೋ ಇನ್ನು ನೋಡುತ್ತಾ ಮೈಮರೆಯದಿರು... ಎಂಬಂತಿತ್ತು.. ಬೇಗನೆ ಖಾಲಿ ಮಾಡಿ ತಾನೂ ಲೋಟವ ಕೊಟ್ಟ..ಛೇ..!! ಇಷ್ಟು ಬೇಗ ಕೊಟ್ಟೆನೇ..ಇನ್ನೂ ನಿಧಾನಿಸಿದ್ದರೆ  ..
..ಎಂಬ ಭಾವ ಅವನನು ಕಾಡಿತ್ತು..


   ನಂತರ ಭಾಸ್ಕರ ಶಾಸ್ತ್ರಿಗಳು ಒಮ್ಮೆ ಒಳಗೆ ತೆರಳಿದರು.. ಮಡದಿಯಲ್ಲಿ ತಿಂಡಿ ಏನು ತಯಾರು ಮಾಡುವೆ ಎಂದು ವಿಚಾರಿಸಿ ಬಂದರು..ಅರ್ಧ ಗಂಟೆಯಲ್ಲಿ ತಯಾರಿಗಲಿ ಎಂದು ಹೇಳಿ ಹೊರಗೆ ತೆರಳಿದರು.ಮಹೇಶ್ ಕಿಶನ್ ನಲ್ಲಿ ಸಂಭಾಷಣೆಯಲ್ಲಿ ನಿರತನಾಗಿದ್ದ.ಭಾಸ್ಕರ ಶಾಸ್ತ್ರಿಗಳು ಇಬ್ಬರನ್ನೂ ಕರೆದುಕೊಂಡು ಹೋಗಿ ಮನೆತೋರಿಸಿದರು.ವಿಶಾಲವಾದ ಅಡುಗೆ ಕೋಣೆಯನ್ನು ತೋರಿಸುತ್ತಿದ್ದಾಗ ಕಿಶನ್ ನ ಗಮನ ಮೈತ್ರಿಯ ಮೇಲೆಯೇ ಇತ್ತು.ಇದನ್ನರಿತ ಅವಳು ನಾಚಿ ತಲೆತಗ್ಗಿಸಿ  ನಿಂತಿದ್ದಳು.ಹತ್ತಿರವೇ ನಿಂತಿದ್ದರೂ ಹೃದಯದ ತುಂಬ ಮಧುರ ಭಾವನೆಗಳು ಭೋರ್ಗರೆಯುತಿದ್ದರೂ ಎಲ್ಲವೂ ಮೌನದಲ್ಲೇ ಹುದುಗಿಕುಳಿತಿತ್ತು..ಆ ಮೌನವನ್ನು ಆಸ್ವಾದಿಸಿದ ಕಿಶನ್..


       ಹಳೆಯ ಕಾಲದ ದನದ ಕೊಟ್ಟಿಗೆ,ಇತರ ಪರಿಕರಗಳಾದ ಒನಕೆ,ಬೀಸುವ ಕಲ್ಲು, ದೊಡ್ಡ ಸಣ್ಣ ಮಡಕೆಗಳು... ಹೀಗೆ ಹಲವಾರು ಸಲಕರಣೆಗಳನ್ನು ಅಚ್ಚುಕಟ್ಟಾಗಿ ಇರಿಸಿದ್ದನ್ನು ಕಂಡು ಗಣೇಶ ಶರ್ಮ ಆಶ್ಚರ್ಯ ಚಕಿತರಾದರು.ಅಂಗಳದಲ್ಲಿದ್ದ ಅಡಿಕೆ ...ಶಾಸ್ತ್ರಿಗಳು ಅನುಕೂಲಸ್ಥರು ಎಂದು ಸಾರಿಹೇಳುತ್ತಿತ್ತು.ಎಲ್ಲವನ್ನೂ ನೋಡಿ ಚಾವಡಿಯಲ್ಲಿ ಬಂದು ಆಸೀನರಾದರು.. ಮಹೇಶ್ ನನ್ನು ಒಳಗೆ ಕಳುಹಿಸಿದರು ಭಾಸ್ಕರ ಶಾಸ್ತ್ರಿಗಳು.. ಮಹೇಶ್ ತಿಂಡಿಗೆ ಪಂಕ್ತಿ ಹಾಕಿ "ಅಕ್ಕಾ.. ಸ್ವೀಟ್ ಮೈಸೂರು ಪಾಕ್ ನಿನ್ನೆ ಮಾಡಿದ್ದು ಉಂಟಲ್ಲ.. ಅದನ್ನು ಇವತ್ತು ನೀನೇ ಬಡಿಸಬೇಕು ನಿನ್ನ ಗರ್ಲ್ ಫ್ರೆಂಡ್ ಇಶಾಗೆ.."ಎಂದು ಅಕ್ಕನ ಕಿವಿಯಲ್ಲುಸುರಿದ ..ಅವಳ ಮುಖ ಕೆಂಪೇರಿತು..ಅಮ್ಮ.. "ಏನು ಮಹೇಶ್ ಈಗಲೂ ತರಲೆ ನಿನ್ನದು.. ಹೊರಗೆ ಯಾರಿದ್ದಾರೆ ನೆನಪಿದೆ ತಾನೇ.."ಎಂದು ಮಗನನ್ನು ಗದರಿಸಿದರು..
ಎಲ್ಲರಿಗೂ ಗ್ಲಾಸ್ ಇಟ್ಟ.."ಇದೆಲ್ಲ ನಾನಲ್ಲ ನೀನು ಮಾಡಬೇಕು ಅಕ್ಕಾ..." ಎಂದಾಗ ಅಮ್ಮ .."ಅವಳು ಇನ್ನು ಮದುವೆಯಾದ ಮೇಲೆ ಎಲ್ಲಾ ಮಾಡುತ್ತಾಳೆ..ಇವತ್ತೊಂದಿನ ನೀನು ಮಾಡು..ನಿನಗೂ ಅಭ್ಯಾಸ ಆಗಲಿ..ನಿನ್ನಪ್ಪನಂತೆ ಅಗತ್ಯಬಿದ್ದಾಗಲೂ ಅಡುಗೆಮನೆ ಕಡೆ ತಲೆಹಾಕದಿದ್ದರೆ ಎಷ್ಟ ಕಷ್ಟವಾಗುತ್ತದೆ ಗೊತ್ತಾ.."ಎಂದಾಗ ಸುಮ್ಮನಾದ...
"ಅಕ್ಕಾ.. ನೀನು ಮೈಸೂರು ಪಾಕ್ ಹಿಡಿದು ರೆಡಿಯಾಗು..ನಿನ್ನ ಇಶಾಳನ್ನು ಈಗ ಕರ್ಕೊಂಡು ಬರ್ತೀನಿ..."ಎಂದು ಅಕ್ಕನ ಕಿವಿಯಲ್ಲಿ ಅಮ್ಮನಿಗೆ ಕೇಳಿಸದಂತೆ ಉಸುರಿ ಹೊರನಡೆದ...

    ಮಗ ಎಲ್ಲ ತಯಾರಾಗಿದೆ ಎಂದಾಗ ಭಾಸ್ಕರ ಶಾಸ್ತ್ರಿಗಳು ನೆಂಟರನ್ನು ಒಳಗೆ ಕರೆದೊಯ್ದರು.ಉಪ್ಪಿಟ್ಟು ಅವಲಕ್ಕಿ ಕಾಫಿ ಎಲ್ಲವನ್ನೂ ಮಂಗಳಮ್ಮ ಮಹೇಶ್ ಬಡಿಸಿದರು.. ಮೈಸೂರು ಪಾಕ್ ಹಿಡಿದು ನಿಧಾನವಾಗಿ ಪಂಕ್ತಿಗೆ ಅಡಿಯಿಟ್ಟಳು ಮೈತ್ರಿ.ನಯನಾಜೂಕಿನ ಮುದ್ದು ಕುವರಿ ಎಂದು ಸಾರುತ್ತಿತ್ತು ಅವಳ ಹಂಸನಡಿಗೆ.ಗಣೇಶ ಶರ್ಮಾ ಪಂಕ್ತಿಯಲ್ಲಿ ಮೊದಲಿಗೆ ಇದ್ದವರು.ಅವರಿಗೆ ಒಂದು ಪುಟ್ಟ ತುಂಡು ಮೈಸೂರು ಪಾಕ್ ಬಡಿಸಹೊರಟಳು.."ಇನ್ನೂ ಸಣ್ಣದು ಸಾಕಮ್ಮಾ ನನಗೆ "ಎಂದರು..ಮತ್ತೆ ಹುಡುಕಿ ಮತ್ತೂ ಸಣ್ಣ ತುಂಡನ್ನು ಬಡಿಸಿ ಕಿಶನ್ ನ ಮುಂದೆ ನಿಂತಿದ್ದಳು.ಆಚೆ ಕಡೆಯಿಂದ ತಮ್ಮನ ನೋಟವು ನನ್ನತ್ತವೇ ಇದೆ ಎಂದೂ ಗೊತ್ತಿತ್ತು..ಎದುರಿರುವ ಕಿಶನ್ ನ ನೋಟವನ್ನೂ ಕಣ್ತುಂಬಿಕೊಳ್ಳಬೇಕಾಗಿತ್ತು... ದೊಡ್ಡ ತುಂಡನ್ನು ತೆಗೆದುಕೊಂಡು ಬಡಿಸಿದಳು.. ಕಿಶನ್ ನಸುನಕ್ಕ... ಅವಳ ಕೆನ್ನೆ ರಂಗೇರಿತು..ಇನ್ನೊಂದು ಬದಿಗೆ ಕುಳಿತಿದ್ದ ಅಪ್ಪನ ಸರದಿ ಈಗ . ಎಂದಿನಂತೆ ಗಂಭೀರವಾದ ಮುಖಚರ್ಯೆ.. ಬಡಿಸಲು ಬಾಗುತ್ತಿದ್ದಂತೆ ನನಗೆ ಬೇಡ ಎಂದು ಬಿಟ್ಟರು..ಆದರೂ ಕೇಳದ ಮಗಳು ಚಿಕ್ಕ ತುಂಡನ್ನು ಅಪ್ಪನಿಗೆ ಬಡಿಸಿಯೇ ಬಂದಳು.. ಗಣೇಶ ಶರ್ಮ ಮನದಲ್ಲೇ ಆಡ್ಡಿಯಿಲ್ಲ ಭಾವೀ ಸೊಸೆ ಎಂದುಕೊಂಡರು.. ಇನ್ನೊಮ್ಮೆ ಎಲ್ಲವನ್ನೂ ವಿಚಾರಣೆ ಮಾಡಿ ಬಡಿಸುವ ಸಂಪ್ರದಾಯ.ಮೈಸೂರು ಪಾಕ್ ವಿಚಾರಿಸುವ ಸರದಿ ಬಂತು.. ಗಣೇಶ ಶರ್ಮ ಮೈತ್ರಿ ಬರುತ್ತಿದ್ದಂತೆ ಕೈಗಳನ್ನು ಬಾಳೆಲೆಗೆ ಅಡ್ಡ ಹಿಡಿದು "ಬೇಡಮ್ಮಾ.. " ಎಂದರು.. ಕಿಶನ್ ಗೆ ಒಂದು ತುಂಡು ಬಡಿಸಹೊರಟಳು.."ಬೇಡ" ಎಂದ..ಪಕ್ಕದಲ್ಲಿ ನಿಂತಿದ್ದ ತಮ್ಮ "ಒಂದು ತುಂಡು ತಿನ್ನಬಹುದು" ಎಂದು ಶಿಫಾರಸ್ಸು ಮಾಡಿದ.. ಮೈತ್ರಿ ಬಿಡುವಳೇ.. ಪುನಃ ದೊಡ್ಡ ತುಂಡನ್ನು ಹುಡುಕಿ ಬಡಿಸಿಯೇಬಿಟ್ಟಳು..ನನ್ನಿಂದ ತಿನ್ನಲು ಸಾಧ್ಯವಿಲ್ಲ ಎನ್ನವಂತಿತ್ತು ಅವನ ಮುಖಭಾವ.. ಪಕ್ಕದಲ್ಲಿ ಕುಳಿತಿದ್ದ ಅವನಪ್ಪ .."ಮೊದಲ ಬಾರಿ ಬಂದಾಗ ಬಡಿಸಿದ ಸಿಹಿ ಬಾಳೆಲೆಯಲ್ಲಿ ಬಿಡುವಂತಿಲ್ಲ.."ಎಂದು ಕಿಶನ್ ನ ಕಿವಿಯಲ್ಲಿ ಉಸುರಿದರು..ಸರಿ ಕಷ್ಟವಾದರೂ ಮುದ್ಗೊಂಬೆ ಬಡಿಸಿದ್ದೆಂದು ಇಷ್ಟಪಟ್ಟೇ ತಿಂದು ಮುಗಿಸಿದ..!!! ಅಮ್ಮ ತಮ್ಮ ತಾವು ಬಡಿಸಿದ್ದೆಲ್ಲವನ್ನೂ ಪುನಃ ಬೇಕಾ ಎಂದು ವಿಚಾರಿಸಿದರು..


  ಕಾಫಿ ಕುಡಿದು ಹೊರಗಡೆ ಹೋದರು ನೆಂಟರು.ಗಣೇಶಶರ್ಮ ಭಾಸ್ಕರ ಶಾಸ್ತ್ರಿಗಳಲ್ಲಿ "ಮಗಳ ಜಾತಕ ಕೊಡುತ್ತೀರಾ ??"ಎಂದು ತಾವಾಗಿಯೇ ಮುಂದೆ ಬಂದು ಕೇಳಿದರು.. "ಕೆಲವು ದಿನಗಳ ಹಿಂದೆಯಷ್ಟೇ ಒಂದು ಕಡೆ ಜಾತಕ ಕೊಟ್ಟಿದ್ದೇವೆ..ಅವರ ಉತ್ತರ ಇನ್ನೂ ಬಂದಿಲ್ಲ..ಒಂದು ಕಡೆ ಜಾತಕ ಕೊಟ್ಟು ಉತ್ತರ ಬಾರದೇ ಇನ್ನೊಂದು ಕಡೆ ಜಾತಕ ನಮ್ಮ ಮನೆತನದ ಸಂಪ್ರದಾಯದಲ್ಲಿ ಕೊಡುವುದಿಲ್ಲ....ಯಾವುದಕ್ಕೂ ಅವರ ಉತ್ತರ ಬರುವ ತನಕ ಕಾಯೋಣ.. "ಎಂದರು ಭಾಸ್ಕರ ಶಾಸ್ತ್ರಿಗಳು..

ಮಹೇಶ್ "..ಅಪ್ಪಾ ..."ಎಂದು ಕರೆದ..


ಈಗ ಬಂದೆ ಎನ್ನುತ್ತಾ ಒಳಬಂದರು ಭಾಸ್ಕರ ಶಾಸ್ತ್ರಿಗಳು.
    ಮಂಗಳಮ್ಮ ಪತಿಯ ಮಾತಿನಿಂದ ಸಿಟ್ಟಿಗೆದ್ದಿದ್ದರು.ಎಂಥಾ ತಂದೆ ?? ಎಂಥಾ ಪತಿ?? ಇವರು..ಮೊನ್ನೆ ಕೇಶವ್ ಬಂದಿದ್ದಾಗ ಮಗಳಿಗೆ ಎಳ್ಳಷ್ಟೂ ಮನಸ್ಸಿಲ್ಲದಿದ್ದರೂ ಅಪ್ಪ ಮಗ ಇಬ್ಬರೂ ಮಾತನಾಡಿ ಜಾತಕ ಕೊಟ್ಟೇ ಬಿಟ್ಟಿದ್ದರು..ಅದೂ ಹಳ್ಳಿಮೂಲೆಯಲ್ಲಿದ್ದ ಕೃಷಿಕ ಯುವಕನಿಗೆ..ಈಗ ಮೈತ್ರಿಯೂ ಹುಡುಗನನ್ನು ಇಷ್ಟಪಟ್ಟಿದ್ದಾಳೆ  ಎಂದು ಅವಳ ಮುಖಭಾವವೇ ಹೇಳುತ್ತಿದೆ..ಅವರ ಮಾತೂ ಅದೇ ಧಾಟಿಯಲ್ಲಿ ಇತ್ತು..ಆದರೂ ಇಲ್ಲಸಲ್ಲದ ಸಾಬೂಬು..ಥೂ..!! ಯಾಕೀತರ ಹೆಣ್ಣುಮಕ್ಕಳ ಹೊಟ್ಟೆಯುರಿಸ್ತಾರೆ...ಮದುವೆಯಾಗುವ ಹೆಣ್ಣಿಗೂ ನನಗೆ ಈ ತರಹದ ಹುಡುಗ ಬೇಕು,ಹಾಗಿರಬೇಕು , ಹೀಗಿರಬೇಕು....ಅನ್ನುವ ಆಸೆ ಆಕಾಂಕ್ಷೆಗಳು ಇರೋದಿಲ್ವೇ...???ಯಾಕೆ  ಹೆಣ್ಣಿನ ಭಾವನೆಗಳನ್ನು ಅರ್ಥಮಾಡಿಕೊಳ್ಳಲ್ಲ ..??? ಅವುಗಳಿಗೆ ಬೆಲೆಕೊಡಲ್ಲ...

ಭಾಸ್ಕರ ಶಾಸ್ತ್ರಿಗಳು ಮಡದಿಯ ಮುಖ ನೋಡಿದರು.ಸಿಟ್ಟಿನಿಂದ ಕುದಿಯುತ್ತಿತ್ತು...ಅದನ್ನರಿತ ರಾಯರು ಶಾಂತವಾಗಿ "ಏನಾಯ್ತೀಗ...?"ಎಂದು ಕೇಳಿದರು..

"ಹುಡುಗ ಒಳ್ಳೆಯವನಂತೆ ಕಾಣುತ್ತಿದ್ದಾನೆ .ಮೈತ್ರಿಗೂ ಹಿಡಿಸಿದ್ದಾನೆ..ಜಾತಕ ಕೊಡ್ತೀರೋ ಇಲ್ವೋ..?"

"ಹಾಗಲ್ಲ..ಮಂಗಳಾ.."
"ರೀ.. ನಾನು ನಿಮ್ಮಲ್ಲಿ ಎಂದೂ ಎದುರಾಡಿದವಳು ಅಲ್ಲ..ಆದರೂ ಹೀಗೆ ನೋಯಿಸಿದರೆ ಸುಮ್ಮನಿರಲು ನನ್ನಿಂದ ಸಾಧ್ಯವಿಲ್ಲ.. ಜಾತಕ ಕೊಡ್ತೀರೋ ಇಲ್ವೋ..ಹುಡುಗನ ಬಗ್ಗೆ ನಂತರ ಸಾವಕಾಶವಾಗಿ ನೆಂಟರಿಷ್ಟರಲ್ಲಿ ವಿಚಾರಿಸಿಕೊಳ್ಳೋಣ.."

ಮಡದಿಯ ಹಠದ ಮುಂದೆ ಭಾಸ್ಕರ ಶಾಸ್ತ್ರಿಗಳು ಸೋಲಬೇಕಾಯಿತು.. "ಸಂಪ್ರದಾಯ ಒಪ್ಪುವುದಿಲ್ಲ ಕಣೇ.."
"ಸಂಪ್ರದಾಯಗಳೆಲ್ಲ ಬರೀ ಹೆಣ್ಣಿಗೆ ಮಾತ್ರ ಸೀಮಿತವಾ..ಅದು ಗಂಡುಮಕ್ಕಳಿಗಿಲ್ವಾ ... ಒಂದೇ ದಿನ ನಾಲ್ಕು ಹೆಣ್ಣುಮಕ್ಕಳ ಮನೆಗೆ ಹೆಣ್ಣುನೋಡುವ ಶಾಸ್ತ್ರಕ್ಕೆ ತೆರಳಿ ಉಪ್ಪಿಟ್ಟು, ಅವಲಕ್ಕಿ ಕ್ಷೀರ ಹೊಡೆದವರು ನೀವಲ್ಲವಾ.???.ಆಗ ಒಬ್ಬ ಹುಡುಗಿಯನ್ನು ನೋಡಿ ಸಂಬಂಧ ಬೇಡವೆಂದಾದರೆ ಮಾತ್ರ ಇನ್ನೊಂದು ಹುಡುಗಿಯನ್ನು ನೋಡಬೇಕು ಎಂಬ ಶಾಸ್ತ್ರ ಇತ್ತಾ.???. ಅನುಸರಿಸಿದ್ದೀರಾ ..???." ಎಂದ ಮಂಗಳಮ್ಮನ ಕಟುಮಾತಿಗೆ ನಿರುತ್ತರರಾದರು ಭಾಸ್ಕರ ಶಾಸ್ತ್ರಿಗಳು.ಮಂಗಳಮ್ಮ ವರುಷಗಳಿಂದ ತನ್ನೊಳಗೆ ಕುದಿಯುತ್ತಿದ್ದ ಬೇಗುದಿಯನ್ನು ಮಗಳಿಗೋಸ್ಕರ ಹೊರಹಾಕಿದ್ದರು..ತನ್ನೊಳಗೇ ನೋವು ಇಟ್ಟುಕೊಂಡು ಕೊರಗಿದರೆ ಇಂತಹ ಅವಕಾಶ ಮತ್ತೆ ಮಗಳ ಬಾಳಿನಲ್ಲಿ ಬರಬಹುದೋ ಇಲ್ಲವೋ ಯಾರಿಗೆ ಗೊತ್ತು.. ಎಂಬುದು ಮಂಗಳಮ್ಮನ ಕರುಳಿನ ಕೂಗಾಗಿತ್ತು..


   ಮರುಮಾತನಾಡದ ಭಾಸ್ಕರ ಶಾಸ್ತ್ರಿಗಳು ಮರದ ಕಪಾಟಿನಲ್ಲಿದ್ದ ಮಗಳ ಜಾತಕದ ಕಾಪಿ ತೆಗೆದು ಗಣೇಶ ಶರ್ಮರ ಕೈಗಿತ್ತರು.ಕಿಶನ್ ಗೆ ಮೈತ್ರಿ ಒಳಗೆ ತಂದೆಯನ್ನು ಕರೆದು ಏನಾದರೂ ಹೇಳಿರಬಹುದೇ ಎಂಬ ಸಂಶಯ ಮೂಡಿತು.ಒಮ್ಮೆ ಜಾತಕ ಈಗ ಕೊಡಲಾರೆ ಅಂದವರು ಸೀದಾ ಕೈಯೆತ್ತಿ ಕೊಟ್ಟಿದ್ದರು.. ಸ್ವಲ್ಪ ಹೊತ್ತು ಮಾತನಾಡಿ "ನಾವಿನ್ನು ಹೊರಡುತ್ತೇವೆ.." ಎಂದರು ಗಣೇಶ್ ಶರ್ಮ.. ಕಿಶನ್ ಗೆ ಮೈತ್ರಿಯಲ್ಲಿ ಮಾತನಾಡುವ ತವಕ.ಚಾವಡಿಯ ಪಕ್ಕದಲ್ಲಿ ನಿಂತಿದ್ದ ಮಹೇಶ್ ನ ಸಮೀಪ ಬಂದು .."ಅಕ್ಕ ಒಳಗಿದ್ದಾಳಾ.." ಎಂದು ಕೇಳಿದನು ಕಿಶನ್.
"ಹೌದು ಒಳಗಿದ್ದಾಳೆ..
ಬನ್ನಿ .."ಎಂದು ಒಳಗೆ ಕರೆದೊಯ್ದನು.

ಕಿಶನ್ ನನ್ನು ಕಾಣುತ್ತಲೇ ಅವಳ ಹೃದಯ ಗರಿಬಿಚ್ಚಿದ ನವಿಲಿನಂತೆ ಕುಣಿಯಲಾರಂಭಿಸಿತು.ಮನಸು ಒಲವಿನ ರಾಗವನ್ನು ಗುನುಗಿತು..ಮೈಯ ರೋಮಕೂಪಗಳೆಲ್ಲ ನಿಮಿರಿನಿಂತವು.. ಕಿಶನ್ ನಲ್ಲಿ ಮಾತನಾಡಬೇಕೆಂದು ಮುಂದಾದರೆ ಗಂಟಲಿನಿಂದ ಶಬ್ದಗಳು ಹೊರಗಡಿಯಿಡಲೇಯಿಲ್ಲ.. ಕಿಶನ್ ತನ್ನ ಕಣ್ಣಲ್ಲೇ ಮಾತನಾಡಿಸಿದ..ಅವನ ಕಣ್ಣ ಭಾಷೆಯನ್ನು ಓದಿದ ಮೈತ್ರಿ ಸಾವಿರ ಪ್ರೇಮಪತ್ರದ ಸಾರವನ್ನು ಕಂಡಳು..ಆ ಪ್ರೇಮವನ್ನು ಒಳಗೆಳೆದುಕೊಳ್ಳಲು ಅವಳ ಕಣ್ಣಂಚಿನ ಕಾಡಿಗೆಗೂ ಕಾತರವಿತ್ತು..ಅವನ ಮೀಸೆಯಡಿಯ ನಗುವು ಅವಳ ಗುಳಿಕೆನ್ನೆಯ ಮೇಲೆ ರಂಗುಮೂಡಿಸಿತು.
"..ಮೈತ್ರಿ... ನಾವಿನ್ನು ಹೋಗಿಬರಲೇ." ಎಂದ.
"ಹೂಂ .."ಎಂದಳು ನಾಚುತ್ತಾ ಮೈತ್ರಿ..
"ಬಾಯ್ ..."ಎಂದು ನಸುನಕ್ಕ... ಅವನ ನಗೆಯನ್ನು ಅವಳ ಕಣ್ಣಕ್ಯಾಮೆರಾ ಸೇವ್ ಮಾಡಿತ್ತು..

ಹೊರಗೆ ಬಂದು  ನಿಂತ ಕಿಶನ್ ನನ್ನು ಕಂಡಾಗ. .".ಸರಿ ನಾವಿನ್ನು ಹೋಗಿಬರಲೇ .."ಎಂದು ಗಣೇಶ ಶರ್ಮ ಭಾಸ್ಕರ ಶಾಸ್ತ್ರಿಗಳಲ್ಲಿ ಹೇಳಿ ಚಾವಡಿಯಿಂದ ಅಂಗಳಕ್ಕೆ ಇಳಿಯುತ್ತಿದ್ದಂತೆ ಕಾರು ಮನೆಯ ಮುಂದೆ ಬಂದು ನಿಂತಿತು.ಶ್ಯಾಮಶಾಸ್ತ್ರಿಗಳು,ಮಹಾಲಕ್ಷ್ಮಿ ಅಮ್ಮ, ಶಂಕರನ ಕುಟುಂಬ ಕಾರಿನಿಂದಿಳಿದರು.. ಶ್ಯಾಮ ಶಾಸ್ತ್ರಿಗಳು ಬಂದವರ ಪರಿಚಯವನ್ನು ಮಗನಲ್ಲಿ ಕೇಳಿತಿಳಿದರು.. ಉಭಯಕುಶಲೋಪರಿಯ ನಂತರ ಕಾರು ಏರಿದರು ಅಪ್ಪ ಮಗ..ಕಾರು ಸ್ಟಾರ್ಟ್ ಮಾಡಿದ ಕಿಶನ್..


    ಮೈತ್ರಿ ಗೆ ಕಿಶನ್ ಗೆ ಬಾಯ್ ಹೇಳುವ ಆಸೆ.ಆದರೆ ಅಷ್ಟರಲ್ಲಿ ಎಲ್ಲರೂ ಬಂದೇಬಿಟ್ಟಿದ್ದರು.ಎಲ್ಲರ ಮುಂದೆ ಅವಳು ನಾಚುವ ಕನ್ನಿಕೆ.ಏನು ಮಾಡುವುದೆಂದು ಯೋಚಿಸಿ ಸೀದಾ ದನದ ಕೊಟ್ಟಿಗೆಯ ಹಿಂಭಾಗದಲ್ಲಿ ಬಂದುನಿಂತಳು.ಕಿಶನ್ ಗೇಟು ಹಾಕಲು ಕಾರು ನಿಲ್ಲಿಸುತ್ತಿದ್ದಂತೆ ಮೆಲ್ಲನೆ ಕೈಬೀಸಿ "....ಬಾಯ್..." ಎಂದಳು... ಇದನ್ನು ನಿರೀಕ್ಷಿಸಿದ್ದ ಕಿಶನ್ ಗೆ ಅವಳ ಕೈ ಕಂಡಿತು..ತಾನೂ ಬಾಯ್ ಮಾಡಿ ಫ್ಲೈಯಿಂಗ್ ಕಿಸ್ ಕೊಟ್ಟ..

    ಕಾರು ಚಲಾಯಿಸುತ್ತಿದ್ದಂತೆ ಅಪ್ಪ.."ಅಲ್ಲ ಕಿಶನ್ ಅವರೆಲ್ಲರ ಎದುರು ಬಹಳ ಸಭ್ಯನಂತಿದ್ದೆ..ಈಗ ಹೀಗೆಲ್ಲ ತುಂಟತನ"ಎಂದು ಛೇಡಿಸಿದರು.."ಅಪ್ಪಾ.. ಅವರೆದುರು ಹೀಗೆಲ್ಲ ನಡೆದುಕೊಂಡರೆ ಹೆಣ್ಣು ಕೋಡಬೇಕಲ್ಲ..ಸಂಪ್ರದಾಯಸ್ಥ ಮನೆತನ.."

"ಅಂತೂ ನಿನಗೆ ಚೆನ್ನಾಗಿ ನಾಟಕ ಮಾಡಲು ಬರುತ್ತೆ. ಎಂದು ತಿಳಿಯಿತು... ಒಟ್ಟಿನಲ್ಲಿ ನಿನ್ನ ಆಯ್ಕೆ ನಾನು ಮೆಚ್ಚಿಕೊಂಡಿದ್ದೇನೆ.. ಅವರು ಮದುವೆ ಮಾಡಿ ಕೊಡುವ ಮನಸ್ಸು ಮಾಡಿದರೆ ಸಾಕು.."

"ಅಪ್ಪಾ..ನನ್ನ ಪ್ರೀತಿಯನ್ನು ನಾನು ಕೈಬಿಡುವ ಪ್ರಶ್ನೆಯೇ ಇಲ್ಲ ..ಹೇಗಾದರೂ ಮಾಡಿ ಅವರನ್ನು ಒಪ್ಪಿಸಿ ಮದುವೆಯಾಗುತ್ತೇನೆ.."

"ಮಗ ಇದುವೇ ನಿಜವಾದ ಪ್ರೀತಿ..ಪ್ರೀತಿಸಿ ಕೈಕೊಡುವುದು  ಹೊಣೆಗೇಡಿತನ.."

"ಅಪ್ಪಾ ನನಗೆ ನಿಮ್ಮ ಬದುಕು ಆದರ್ಶ.. ಅಮ್ಮನನ್ನು ಇಷ್ಟಪಟ್ಟು ಮದುವೆಯಾಗಿ ಕಷ್ಟವಿದ್ದರೂ ನೋಯಿಸದೆ ಬದುಕು ಕೊಟ್ಟಿದ್ದೀರಲ್ಲ ..ನಿಮ್ಮಿಂದ ಬಹಳ ಕಲಿತಿದ್ದೇನೆ..ಇನ್ನೂ ಕಲಿಯುವುದಿದೆ.."

"ಹೌದು ಮಗ.ಹೆಣ್ಣುಮಕ್ಕಳ ಮನಸರಿತು ಬದುಕಿದರೆ ಬಾಳು ಬಂಗಾರ.."

"ಹಾಗೆಯೇ ನಾನು ಮೈತ್ರಿಯನ್ನು ನೋಡಿಕೊಳ್ಳುವೆ ಅಪ್ಪಾ.."

ಹೀಗೆ ಮಾತನಾಡುತ್ತಾ ಮನೆಯತ್ತ ಸಾಗಿದರು ಗಣೇಶ ಶರ್ಮ ಮತ್ತು ಕಿಶನ್..

       ಶಾಸ್ತ್ರೀನಿವಾಸದಲ್ಲಿ ಮೈತ್ರಿಯ ವಿಚಾರಣೆ ಆರಂಭಿಸಿದ್ದರು ಭಾಸ್ಕರ ರಾಯರು..

              ಮುಂದುವರಿಯುವುದು...

✍️ ಅನಿತಾ ಜಿ.ಕೆ.ಭಟ್.
21-02-2020.



     

ಶಿವಾರಾಧನೆ


ಮಹಾಶಿವರಾತ್ರಿಯ ಶುಭಾಶಯಗಳು...

           ಶಿವ ಮಂಗಳಕರನು.ನಿಷ್ಕಲ್ಮಶ ಭಾವದಿಂದ ಪೂಜಿಸಿದವರಿಗೆ ಬಹಳ ಬೇಗನೆ ಒಲಿಯುವವನು.ಶಿವನು ಲಯಕಾರಕ.ಬಿಲ್ವಪತ್ರೆ ಶಿವನಿಗೆ ಬಲು ಪ್ರಿಯ.ಬಿಲ್ವ ಪತ್ರೆಯ ಮೂರು ದಳಗಳಲ್ಲಿ ಎಡಗಡೆಯದು ಬ್ರಹ್ಮ ,ಬಲಗಡೆ ವಿಷ್ಣು ಮಧ್ಯದಲ್ಲಿರುವುದು ಶಿವ ಎಂಬ ಪ್ರತೀತಿ.ಶಿವನನ್ನು ಸ್ತುತಿಸಿ ಶಿವನಿಗೆ ಬಿಲ್ವಪತ್ರೆ ಅರ್ಪಿಸಿದರೆ ಸಕಲ ಪಾಪಗಳು, ದೋಷಗಳು ಪರಿಹಾರವಾಗುವುದು ಎಂಬುದು ಜನರ ನಂಬಿಕೆ.ಮಹಾಶಿವರಾತ್ರಿಯ ದಿನ ಮಂಗಳಕರನಾದ ಶಿವನನ್ನು ಭಜಿಸಿ,ನಮ್ಮ ಪಾಪಕಳೆಯೋಣ..ಅವನ ಕೃಪೆಗೆ ಪಾತ್ರರಾಗೋಣ.ಶಿವ ಪಂಚಾಕ್ಷರಿ ಸ್ತೋತ್ರ,ಲಿಂಗಾಷ್ಟಕ ಹಾಗೂ ಬಿಲ್ವಾಷ್ಟಕ ಇಂದು ಪಠಿಸಿ ಶಿವನಿಗೆ ನಮಿಸೋಣ...

     ಸ್ವಲ್ಪ ಸಮಯದ ಹಿಂದೆ ನಮ್ಮ ಮನೆಯಲ್ಲಿ ನಡೆದ ಶಿವ ಪೂಜಾ ಕಾರ್ಯಕ್ರಮದ ಚಿತ್ರಗಳನ್ನು ಅಲ್ಲಲ್ಲಿ ನೀಡಿದ್ದೇನೆ.ಶಿವ ಸರ್ವರಿಗೂ ಸನ್ಮಂಗಲವನ್ನು ಉಂಟು ಮಾಡಲಿ...🙏
            
                         🌹🌹🌹🌹🌹

ಶಿವ ಪಂಚಾಕ್ಷರಿ ಸ್ತೋತ್ರಮ್

ಓಂ ನಮಃ ಶಿವಾಯ ಶಿವಾಯ ನಮಃ ಓಂ
ಓಂ ನಮಃ ಶಿವಾಯ ಶಿವಾಯ ನಮಃ ಓಂ

ನಾಗೇಂದ್ರಹಾರಾಯ ತ್ರಿಲೋಚನಾಯ
ಭಸ್ಮಾಂಗರಾಗಾಯ ಮಹೇಶ್ವರಾಯ |
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈ "ನ" ಕಾರಾಯ ನಮಃ ಶಿವಾಯ || 1 ||




ಮಂದಾಕಿನೀ ಸಲಿಲ ಚಂದನ ಚರ್ಚಿತಾಯ
ನಂದೀಶ್ವರ ಪ್ರಮಥನಾಥ ಮಹೇಶ್ವರಾಯ |
ಮಂದಾರ ಮುಖ್ಯ ಬಹುಪುಷ್ಪ ಸುಪೂಜಿತಾಯ
ತಸ್ಮೈ "ಮ" ಕಾರಾಯ ನಮಃ ಶಿವಾಯ || 2 ||



ಶಿವಾಯ ಗೌರೀ ವದನಾಬ್ಜ ಬೃಂದ
ಸೂರ್ಯಾಯ ದಕ್ಷಾಧ್ವರ ನಾಶಕಾಯ |
ಶ್ರೀ ನೀಲಕಂಠಾಯ ವೃಷಧ್ವಜಾಯ
ತಸ್ಮೈ "ಶಿ" ಕಾರಾಯ ನಮಃ ಶಿವಾಯ || 3 ||


ವಶಿಷ್ಠ ಕುಂಭೋದ್ಭವ ಗೌತಮಾರ್ಯ
ಮುನೀಂದ್ರ ದೇವಾರ್ಚಿತ ಶೇಖರಾಯ |
ಚಂದ್ರಾರ್ಕ ವೈಶ್ವಾನರ ಲೋಚನಾಯ
ತಸ್ಮೈ "ವ" ಕಾರಾಯ ನಮಃ ಶಿವಾಯ || 4 ||


ಯಜ್ಞ ಸ್ವರೂಪಾಯ ಜಟಾಧರಾಯ
ಪಿನಾಕ ಹಸ್ತಾಯ ಸನಾತನಾಯ |
ದಿವ್ಯಾಯ ದೇವಾಯ ದಿಗಂಬರಾಯ
ತಸ್ಮೈ "ಯ" ಕಾರಾಯ ನಮಃ ಶಿವಾಯ || 5 ||


ಪಂಚಾಕ್ಷರಮಿದಂ ಪುಣ್ಯಂ ಯಃ ಪಠೇಚ್ಛಿವ ಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ||

(ಸಂಗ್ರಹ)
        🌹🌹🌹🌹🌹🌹🌹🌹🌹🌹


ಲಿಂಗಾಷ್ಟಕ

ಬ್ರಹ್ಮ ಮುರಾರಿ ಸುರಾರ್ಚಿತ ಲಿಂಗಂ, ನಿರ್ಮಲಭಾಸಿತ ಶೊಭಿತ ಲಿಂಗಂ |
ಜನ್ಮಜದುಃಖ ವಿನಾಶಕ ಲಿಂಗಂ, ತತ್ಪ್ರಣಮಾಮಿ ಸದಾ ಶಿವಲಿಂಗಂ || ೧ ||

ದೇವಮುನಿ ಪ್ರವರಾರ್ಚಿತ ಲಿಂಗಂ, ಕಾಮದಹನ ಕರುಣಾಕರ ಲಿಂಗಂ |
ರಾವಣದರ್ಪ ವಿನಾಶಕ ಲಿಂಗಂ, ತತ್ಪ್ರಣಮಾಮಿ ಸದಾ ಶಿವಲಿಂಗಂ || ೨ ||



ಸರ್ವಸುಗಂಧ ಸುಲೇಪಿತ ಲಿಂಗಂ ಬುದ್ಧಿವಿವರ್ಧನ ಕಾರಣ ಲಿಂಗಂ |
ಸಿದ್ಧಸುರಾಸುರ ವಂದಿತ ಲಿಂಗಂ ತತ್ಪ್ರಣಮಾಮಿ ಸದಾ ಶಿವಲಿಂಗಂ || ೩ ||

ಕನಕಮಹಾಮಣಿ ಭೂಷಿತ ಲಿಂಗಂ ಫಣಿಪತಿವೇಷ್ಟಿತ ಶೋಭಿತ ಲಿಂಗಂ |
ದಕ್ಷಸುಯಜ್ಞ ವಿನಾಶಕ ಲಿಂಗಂ ತತ್ಪ್ರಣಮಾಮಿ ಸದಾ ಶಿವಲಿಂಗಂ || ೪ ||
ಕುಂಕುಮ ಚಂದನಲೇಪಿತ ಲಿಂಗಂ, ಪಂಕಜಹಾರ ಸುಶೋಭಿತ ಲಿಂಗಂ |
ಸಂಚಿತಪಾಪ ವಿನಾಶನ ಲಿಂಗಂ ತತ್ಪ್ರಣಮಾಮಿ ಸದಾ ಶಿವಲಿಂಗಂ || ೫ ||



ದೇವಗಣಾರ್ಚಿತ ಸೇವಿತ ಲಿಂಗಂ, ಭಾವೈಭಕ್ತಿ ಭಿರೇವ ಚ ಲಿಂಗಂ |
ದಿನಕರಕೋಟಿ ಪ್ರಭಾಕರ ಲಿಂಗಂ, ತತ್ಪ್ರಣಮಾಮಿ ಸದಾ ಶಿವಲಿಂಗಂ || ೬ ||

ಅಷ್ಟದಳೋ ಪರಿವೇಷ್ಟಿತ ಲಿಂಗಂ ಸರ್ವಸಮುದ್ಭವ ಕಾರಣ ಲಿಂಗಂ |
ಅಷ್ಟದರಿದ್ರ ವಿನಾಶಕ ಲಿಂಗಂ ತತ್ಪ್ರಣಮಾಮಿ ಸದಾ ಶಿವಲಿಂಗಂ || ೭ ||

ಸುರವರ ಸುರಗುರು ಪೂಜಿತ ಲಿಂಗಂ ಸುರವನಪುಷ್ಪ ಸದಾರ್ಚಿತ ಲಿಂಗಂ |
ಪರಾತ್ಪರಂ ಪರಮಾತ್ಮಕ ಲಿಂಗಂ ತತ್ಪ್ರಣಮಾಮಿ ಸದಾ ಶಿವಲಿಂಗಂ || ೮ ||

ಲಿಂಗಾಷ್ಟಕಮಿದಂ ಪುಣ್ಯಂ ಯಃ ಪಠೆಚ್ಚಿವಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹಮೊದತೆ || ಫಲಶೃತಿ ||
(ಸಂಗ್ರಹ)
                 🌹🌹🌹🌹🌹


ಬಿಲ್ವಾಷ್ಟಕಂ

ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚತ್ರಿಯಾಯುಧಂ ತ್ರಿಜನ್ಮಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ ||
ತ್ರಿಶಾಖೈಃ ಬಿಲ್ವಪತ್ರೈಶ್ಚ ಅಚ್ಚಿದ್ರೈಃ ಕೋಮಲೈಃ ಶುಭೈಃ ತವ ಪೂಜಾಂ ಕರಿಷ್ಯಾಮಿ ಏಕಬಿಲ್ವಂ ಶಿವಾರ್ಪಣಂ ||
ಕೋಟಿಕನ್ಯಾ ಮಹಾದಾನಂ ತಿಲಪರ್ವತಕೋಟಯಃ ಕಾಂಚನಂ ಶೈಲದಾನೇನ ಏಕಬಿಲ್ವಂ ಶಿವಾರ್ಪಣಂ ||



ಕಾಶೀಕ್ಷೇತ್ರ ನಿವಾಸಂಚ ಕಾಲಭೈರವ ದರಶನಂ ಪ್ರಯಾಗೇ ಮಾಧವಂ ದೃಷ್ಟ್ವಾ ಏಕಬಿಲ್ವಂ ಶಿವಾರ್ಪಣಂ ||
ಇಂದುವಾರೆ ವ್ರತಂ ನಿರಾಹಾರೋ ಮಹೇಶ್ವರಃ ನಕ್ತಂ ಹೌಶ್ಯಾಮಿ ದೇವೇಶ ಏಕಬಿಲ್ವಂ ಶಿವಾರ್ಪಣಂ ||
ರಾಮಲಿಂಗ ಪ್ರತಿಷ್ಟಾಚ ವಿವಾಹಿತ ಕೃತಂ ತಥಾ‌ತಟಾಕಾನಿ ಚ ಸಂದಾನಂ ಏಕಬಿಲ್ವಂ‌ ಶಿವಾರ್ಪಣಂ ||
ಅಖಂಡ ಬಿಲ್ವಪತ್ರಂ ಚ ಆಯುತಂ ಶಿವ ಪೂಜನಂ ಕೃತಂ ನಾಮ ಸಹಸ್ರೇಣ ಏಕಬಿಲ್ವಂ ಶಿವಾರ್ಪಣಂ ||





ಉಮಾಯ ಸಹ ದೇವೇಶ ನಂದಿವಾಹನ ಮೇವಚ ಭಸ್ಮಲೇಪನ‌ ಸರ್ವಾಂಗಂ ಏಕಬಿಲ್ವಂ ಶಿವಾರ್ಪಣಂ ||
ಸಾಲಗ್ರಾಮೇಶು ವಿಪ್ರಾನಾಂ ತಟಾಕಂ ದಶಕೂಪಯೋಃ ಯಜ್ಞಕೋಟಿ ಸಹಸ್ರಶ್ಚ ಏಕಬಿಲ್ವಂ ಶಿವಾರ್ಪಣಂ ||
ದಂತಿಕೋಟಿ ಸಹಸ್ರೇಶು ಅಶ್ವಮೇಧ ಶತಕ್ರತೌ ಕೋಟಿಕನ್ಯಾ ಮಹಾದಾನಂ ಏಕಬಿಲ್ವಂ ಶಿವಾರ್ಪಣಂ ||
ಬಿಲ್ವಾನಾಂ ದರ್ಶನಂ ಪುಣ್ಯ ಸ್ಪರ್ಶನಂ ಪಾಪನಾಶನಂ ಅಘೋರ ಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ ||




ಸಹಸ್ರವೇದಪಾಠೇಶು ಬ್ರಹ್ಮ ಸ್ಥಾಪನಮುಚ್ಯತೆ ಅನೇಕವ್ರತಕೋಟೀನಾಂ ಏಕಬಿಲ್ವಂ ಶಿವಾರ್ಪಣಂ ||
ಅನ್ನದಾನ ಸಹಸ್ರೇಶು ಸಹಸ್ರೋಪನಯನಂ ತಥಾ ಅನೇಕ ಜನ್ಮ ಪಾಪಾನಿ ಏಕಬಿಲ್ವಂ ಶಿವಾರ್ಪಣಂ ||
ಬಿಲ್ವಾಷ್ಟಕಮಿದಂ ಪುಣ್ಯಂ ಯಃ ಪಠೇತ್ ಶಿವ ಸನ್ನಿದೌ ಶಿವಲೋಕಂ ಅವಾಪ್ನೋತಿ ಏಕಬಿಲ್ವಂ ಶಿವಾರ್ಪಣಂ||

                       🌹🌹🌹🌹🌹
(ಸಂಗ್ರಹ)

ಚಿತ್ರಗಳು:ನಮ್ಮ ಮನೆಯಲ್ಲಿ ನಡೆದ ಶಿವ ಪೂಜಾ ಕಾರ್ಯಕ್ರಮದ ಫೊಟೋ ಗಳು..