"ಸಾವಿತ್ರೀ.....ಇದೇ...ಇದೇ ನಿನ್ನ ಮುಗ್ಧ ನಗೆಗೆ ನಾನಂದು ಸೋತಿದ್ದು.ನಿನ್ನ ಕಣ್ಣಲ್ಲಿ ಅದೆಂತಹ ಸೆಳೆಯುವ ಶಕ್ತಿಯಿದೆ..!!"
"ಹ್ಹ ಹ್ಹ ಹ್ಹಾ...ರೀ..."
"ಇತ್ತ ಬಾರೇ...ನನ್ನ ಅದೃಷ್ಟದೇವತೆ ಜೊತೆ ಎಷ್ಟು ಮಾತಾಡಿದ್ರೂ ಕಮ್ಮೀನೇ ಅಂತನಿಸುತ್ತೆ..."
"ರೀ...ನಂಗೂ ನಿಮ್ಮ ಈ ತುಂಟತನ ಅದೆಷ್ಟು ಹಿಡಿಸಿ ಹೋಗಿತ್ತು.. ಗೊತ್ತಾ...ಇದ್ದರೆ ಇಂತಹ ವ್ಯಕ್ತಿಯಂತಹ ಗೆಳೆಯನಿರಬೇಕು ಎಂದು ಬಯಸಿದ್ದೆ."
"ಸಾವಿತ್ರೀ...ನಾನಂದು ಚೇತನಾ ಆಶ್ರಮಕ್ಕೆ ಬೇಕಾದ ವಸ್ತುಗಳನ್ನು ಕೊಂಡೊಯ್ಯಲು ಮುಂದಾಗಿ ಬರುತ್ತಿದ್ದುದೇ ನಿನ್ನನ್ನು ನೋಡಿ ಕಣ್ತುಂಬಿಸಿಕೊಳ್ಳುವ ಸಲುವಾಗಿಯೇ .. ಉದ್ದ ಲಂಗದಾವಣಿ, ಉದ್ದನೆಯ ಕಪ್ಪಾದಜಡೆ, ಹೊಳಪಿನ ಬಟ್ಟಲು ಕಣ್ಣುಗಳು,ಎಳಸಾದ ಬೆಣ್ಣೆನುಣುಪಿನ ಗಲ್ಲ ,ಮುಖದ ಮೇಲೆ ಆರದ ಮಂದಹಾಸ ಇವೆಲ್ಲ ನನ್ನ ಹೃದಯವನ್ನು ಕಸಿದಿದ್ದವು..ನಿನ್ನ ತಾಯಿಯ ಅಕ್ಕರೆಯ ನುಡಿಯನ್ನು ಆಲಿಸಲು ನನಗೆ ಬಹಳ ತವಕ .ಅವರನ್ನು ನನ್ನ ತಾಯಿಯ ಸ್ಥಾನದಲ್ಲಿ ಕಲ್ಪಿಸಿಕೊಂಡಿದ್ದೆ."
"ಚೇತನಾ ಆಶ್ರಮದಿಂದ ಸಾಮಾನಿಗಾಗಿ ಬರುತ್ತಿದ್ದ ಹುಡುಗರಲ್ಲಿ ನಿಮ್ಮನ್ನು ಕಂಡರೆ ನನಗೊಂದು ಸಮಾಧಾನ,ಏನೋ ಹೇಳಲಾಗದ ಮನದ ಕುಣಿತ..ನಿಮ್ಮ ಕುಡಿನೋಟಕ್ಕೆ ನಾ ಸೋತಿದ್ದೆ.. ನೀವು ಮಾತನಾಡಲೆಂದು ಬಳಿ ಬಂದರೆ ನಾ ಲಜ್ಜೆಯಿಂದ ಕಣ್ತಪ್ಪಿಸಿಕೊಳ್ಳುತ್ತಿದ್ದೆ."
"ಬೇಸಿಗೆ ರಜೆಯಲ್ಲಿ ನಮ್ಮೂರ ಜಾತ್ರೆಯಲ್ಲಿ ನಿನಗೊಂದು ಸುಂದರವಾದ ಜುಮುಕಿ ಕೊಡಿಸಿ ..ಏನೋ ಮಹಾನ್ ಸಾಧನೆ ಮಾಡಿದವನಂತೆ ಬೀಗಿದ್ದೆ.."
" ಅದನ್ನು ನಾನು ತೊಟ್ಟು ನಮ್ಮ ಬೀದಿಯ ತುಂಬಾ ಓಡಾಡಿದ್ದೆ.ಜುಮುಕಿ ಕೆನ್ನೆಗೆ ಒರೆಸಿ ಕಚಗುಳಿಯಿಟ್ಟಾಗ ನೀವೇ ಮನಸಿನಲ್ಲಿ ತುಂಬಿರುತ್ತಿದ್ದಿರಿ."
"ಆ ಮುತ್ತಿನ ಜುಮುಕಿ ತೊಟ್ಟು ನೀನು ಸುಂದರವಾಗಿ ಕಾಣುತ್ತಿದ್ದೆ.ನಿನ್ನಂದಕ್ಕೆ ಮೆರುಗು ಕೊಟ್ಟಿದ್ದ ಜುಮುಕಿಗೆ ಅಂದು ನಾಲ್ಕಾಣೆ ತೆತ್ತಿದ್ದೆ.ಅಂದಿಗೆ ಅದೇ ದೊಡ್ಡ ಮೊತ್ತ.ಜುಮುಕಿ ಚೆಲ್ವಿಯ ಬಗ್ಗೆ ರಂಗುರಂಗಿನ ಕನಸು ಕಂಡಿದ್ದೆ."
"ಜುಮುಕಿ ಎಲ್ಲಿಂದ ಬಂತು..? ಎಂಬ ಅಮ್ಮನ ಪ್ರಶ್ನೆಗೆ ನಿನಗೆ ಹೇಳದೆ ನಾಲ್ಕಾಣೆ ಎಗರಿಸಿ ಜಾತ್ರೆಯಲ್ಲಿ ಕೊಂಡೆ ಎಂದು ಸುಳ್ಳು ಹೇಳಿ ಅಮ್ಮನನ್ನು ಓಲೈಸಿದ್ದೆ."
"ಕೆಂಪು ಲಂಗ ದಾವಣಿಯಲ್ಲಿ ನೀನು ನಮ್ಮ ಶಾಲೆಯ ವಾರ್ಷಿಕೋತ್ಸವ ದಲ್ಲಿ ನೃತ್ಯ ಮಾಡಿದಾಗ ನನ್ನ ಕಣ್ಣಿಗಂತೂ ದೇವತೆಯಂತೆ ಕಂಡಿದ್ದೆ.."
"ಹಾಂ.. ವಾರ್ಷಿಕೋತ್ಸವದ ಪಾತ್ರವನ್ನು ನೆನಪಿಸಿಕೊಂಡು ಈಗ ಹೀಗೆ ನೋಡ್ತೀರೇನ್ರೀ..!!!! .ಹ್ಮೂಂ... ನಾನು ಪುಣ್ಯ ಮಾಡಿದ್ದೆ ಈ ಭಾಗ್ಯವನ್ನು ಅನುಭವಿಸೋಕೆ.. ಬೇಡರ ಕಣ್ಣಪ್ಪ ನಾಟಕದಲ್ಲಿ ನೀವು ಮಾಡಿದ ಕಣ್ಣಪ್ಪನ ಪಾತ್ರ ನನಗೀಗಲೂ ಕಣ್ಣಿಗೆ ಕಟ್ಟಿದಂತಿದೆ.. ಅದೇನು ವಾಗ್ಝರಿ, ಕಣ್ಣಿನಲ್ಲಿ ಪ್ರಖರತೆ... ಈಗಲೂ ಬದಲಾಗಿಲ್ಲ ಆ ನೋಟ..."
"ಒಂದು ದಿನ... ನಾನು ನಿನ್ನ ನೋಡುವ ಕಾತರದಿಂದ ಆಶ್ರಮಕ್ಕೆ ಸಕ್ಕರೆ ಕೊಂಡೊಯ್ಯುವ ನೆಪದಲ್ಲಿ ಬಂದಿದ್ದೆ.ನಿನ್ನನ್ನು ಕಾಣದೆ ನಿಮ್ಮ ತಾಯಿಯವರಲ್ಲಿ ಕೇಳಲು ಧೈರ್ಯ ಸಾಲದೆ ಪೆಚ್ಚುಮೋರೆಯಿಂದ ಹಿಂದಿರುಗಿದ್ದೆ.ಎಲ್ಲರೂ ಏನಾಯ್ತೋ ವೆಂಕಟೇಶ ...? ಎಂದು ಕೇಳಿದರೂ ಹೇಳಲಾರದೆ ಒಳಗೊಳಗೇ ಅತ್ತಿದ್ದೆ.."
"ಅಂದು ಅಮ್ಮ ಪರಿಸ್ಥಿತಿಯ ಕೈಗೊಂಬೆಯಾಗಿದ್ದಳು.ಎಳವೆಯಲ್ಲೇ ತೀರಿಹೋದ ಪತಿ, ಮಡಿಲಲ್ಲಿ ನಾನೂ ಸೇರಿದಂತೆ ಮೂವರು ಮಕ್ಕಳು.ನಾನು ಹಿರಿಯವಳಾದ್ದರಿಂದ ನನ್ನ ಜವಾಬ್ದಾರಿ ಬೇಗ ಮುಗಿಯಲಿ ಎಂಬ ಆತುರ..ಹಿರಿಯರ ಒತ್ತಡಕ್ಕೆ ಅಮ್ಮ ಮಣಿಯಲೇಬೇಕಾದ ಪರಿಸ್ಥಿತಿ."
"ನಿನ್ನ ನೆನಪನ್ನೇ ಕೆದಕಿ ಕುಳಿತ ನನ್ನ ಮನಸ್ಸಂತೂ ವಿರಹದ ವೇದನೆಯನ್ನು ತಾಳಲಾರದೆ ಸೋತುಸುಣ್ಣವಾಯಿತು.ನಾನು ಮನಸಾರೆ ಆರಾಧಿಸಿದ ಪುಟ್ಟ ದೇವಿ ಎಲ್ಲಿ ಹೋದಳೆಂದು ಮೂರುದಿನಗಳ ಬಳಿಕ ನನಗೆ ತಿಳಿದಾಗ ಎದೆ ಬಿರಿಯುವಂತೆ ಅತ್ತಿದ್ದೆ."
"ಯಾವುದೂ ನಮ್ಮ ಕೈಯಲ್ಲಿರಲಿಲ್ಲ.ಅಜ್ಜ ಅಜ್ಜಿ ಹೇಳಿದಂತೆ ಜೀವನ.. ಒಪ್ಪದಿದ್ದರೆ ಪುಟ್ಟ ಆಂಗಡಿಯೂ ಅವರ ಪಾಲಾದರೆ ಕೂಳಿಗೇನು ಮಾಡಲಿ... ? ಎಂಬ ಭಯ ಅಮ್ಮನಿಗೆ. ಅದಕ್ಕೇ..ಅಜ್ಜ ಅಜ್ಜಿಯ ಆಸೆಯಂತೆ..ಅವರ ಕುರುಡ ಮಗನ ಬಾಳು ಬೆಳಗುವ ವಧುವಾಗಬೇಕಾಯಿತು.. ಅಮ್ಮ ನನಗೆ ಈ ವಿಷಯ ಮೊದಲು ತಿಳಿಸಿದಾಗ ನಾ ಒಲ್ಲೆ ಅಂದಿದ್ದೆ.. ನಾನು ಹೇಳಿದಷ್ಟು ಕೇಳು.ಎಂದಷ್ಟೇ ಹೇಳಿ ಕಣ್ಣಲ್ಲೇ ನನ್ನನ್ನು ಗದರಿದ ಅಮ್ಮ..ಹಿತ್ತಲ ಕಡೆಗೆ ನಡೆದು ಮರದ ಗಂಟಿಯ ಮೇಲೆ ಕುಳಿತು ಕಣ್ಣೀರುಸುರಿಸುತ್ತಾ ಬಣ್ಣ ಕಳೆದು ಮಸುಕಾದ ತನ್ನ ಸೀರೆಯಂಚಲ್ಲಿ ಕಣ್ಣೀರೊರೆಸಿಕೊಂಡಿದ್ದಳು. ಅವಳ ಕಾಳಜಿ,ಮಮತೆಯ ಭಾವ ನನ್ನ ಕಂದನಿಗೆ ಇಂತಹಾ ಬಾಳು ಬೇಡವೆಂದರೂ ಆಕೆ ಸಂದರ್ಭದ ಕೈಗೊಂಬೆಯಾಗಿದ್ದಳು.ರೀ..."
"ಸಾವಿತ್ರೀ...ನಿನ್ನಮ್ಮನ ಕಷ್ಟ...ಅದು ನನಗೂ ಅರ್ಥವಾಗಿತ್ತು...
ನನ್ನ ದುಃಖ ನನ್ನನ್ನು ಆ ಊರಿನಲ್ಲಿ ನಿನ್ನನ್ನಗಲಿ ಇರಲು ಬಿಡಲೇಯಿಲ್ಲ.ದೂರದ ಮೈಸೂರಿಗೆ ಬಂದು ಓದನ್ನು ಮುಂದುವರಿಸಿದೆ.. ನಿನ್ನ ಬಾಳು ಚೆನ್ನಾಗಿರಲಿ ಎಂದು ನನ್ನ ಮನಸ್ಸು ಬೇಡುತ್ತಿತ್ತು."
"ಎಳವೆಯಲ್ಲೇ ನನ್ನ ವಿವಾಹವೇನೋ ಆಯಿತು.ಆದರೆ ಐದು ವರ್ಷಗಳಿಗೊಮ್ಮೆ ನಡೆಯುವ ಊರದೇವಿಯ ಜಾತ್ರೆಯಲ್ಲಿ ನವದಂಪತಿಯು ದೇವಿಗೆ ಪೂಜೆ ಸಲ್ಲಿಸಿದ ಮೇಲೆಯೇ ದಾಂಪತ್ಯ ಜೀವನಕ್ಕೆ ಕಾಲಿಡುವ ಸಂಪ್ರದಾಯ ಆ ಊರಿನದು.ಅಲ್ಲಿವರೆಗೆ ಮನೆಕೆಲಸ, ಮುಸುರೆ ತಿಕ್ಕುವುದು, ಶಾಲೆಗೆ ತೆರಳುತ್ತಿದ್ದ ನನ್ನಜ್ಜಿಯ ಪುಟ್ಟ ಮಕ್ಕಳ ಬಟ್ಟೆ ಒಗೆಯುವ ಕೆಲಸ..ಮಾಡುವ ಜವಾಬ್ದಾರಿ..ನನ್ನಜ್ಜಿ ನನ್ನಮ್ಮನ ಮದುವೆಯಾದ ಮೇಲೂ ಹಡೆದಿದ್ದರು.. ಮನೆತುಂಬ ಮಕ್ಕಳಿದ್ದ ಕಾಲವದು.. ಕೆಲಸ ಮಾಡಿ ಕೈಕಾಲು ನೋಯುತ್ತಿತ್ತು..ಆಗಲ್ಲವೆಂದರೆ ಅಜ್ಜ ನಾಲ್ಕು ಬಾರಿಸಲೂ ಹಿಂದೆಮುಂದೆ ನೋಡುತ್ತಿರಲಿಲ್ಲ."
"ನಿನ್ನ ತಾಯಿ ಒಂದು ದಿನ ನಿನ್ನ ಬಗ್ಗೆ ಹೀಗೆ ಯಾರಲ್ಲೋ ನೋವಿನಿಂದ ಹೇಳಿದ್ದು ನನ್ನ ಕಿವಿಗೂ ಬಿದ್ದಿತ್ತು ಕಣೇ...ನಿನ್ನನ್ನು ಕಾಣದ ನನ್ನ ಹೃದಯ ಒಂಟಿತನದಿಂದ ಭಾರವಾಗಿ .. ಓದಿ ನೌಕರಿ ಗಳಿಸಬೇಕೆಂಬ ಹಠಕ್ಕೆ ಬಿದ್ದಿತು.ನಿಮಗೆ ಹೆಣ್ಣುಮಕ್ಕಳಿಗೆ ನಿರಾಸೆಯನ್ನು ಮರೆತು,ಕಷ್ಟ ಕಾರ್ಪಣ್ಯಗಳನ್ನು ಮೆಟ್ಟಿ ನಿಂತು ಗಟ್ಟಿ ಮನಸ್ಸಿನಿಂದ ಜೀವಿಸುವ ಗುಣ ಹುಟ್ಟಿನಿಂದಲೇ ಬರುತ್ತದೆ.ಆದರೆ ನಾವು ಗಂಡಸರು ಹತಾಶೆಯಿಂದ ಹೊರಬರಲು ಪರದಾಡುತ್ತೇವೆ.ಹತಾಶೆಯು ನಮ್ಮಲ್ಲಿ ದ್ವೇಷವನ್ನೋ, ಸೇಡು ತೀರಿಸುವ ಗುಣವನ್ನೋ,ಕೆಟ್ಟ ಕೆಲಸಕ್ಕೆ ಕೈಹಾಕುವ ಮನಸ್ಥಿತಿಯನ್ನೋ, ದುಶ್ಚಟಗಳಿಗೆ ಬಲಿಯಾಗುವ ದುರ್ಬಲ ವ್ಯಕ್ತಿತ್ವವನ್ನು,ಹಠವನ್ನೋ ಬೆಳೆಸುತ್ತದೆ.
ಸಾವಿತ್ರೀ... ನನ್ನೊಳಗೆ ಮೂಡಿದ ಹಠದಿಂದಲೇ ಶಿಕ್ಷಕರ ತರಬೇತಿಯನ್ನು ಪಡೆದೆ.ನಮ್ಮೂರಿನ ಸಮೀಪದ ಪುಟ್ಟ ಹಳ್ಳಿಯಲ್ಲಿ ಉದ್ಯೋಗ ದೊರೆಯಿತು..ಮೊದಲ ಸಂಬಳ ಸಿಕ್ಕಾಗಲಂತೂ ನೀನು ಬಹಳ ನೆನಪಾಗಿದ್ದೆ."
"ನಂಗೂ ಭಾಳ ನಿಮ್ಮ ನೆನಪಾಗುತ್ತಿತ್ತು.. ಕೆಲವು ಬಾರಿ ತವರಿಗೆ ಹೋಗಿ ಬರಲೇ..? ಎಂದು ಕಣ್ತುಂಬಿಕೊಂಡು ಒಪ್ಪಿಗೆ ಕೇಳಿದ್ದೆ. ಆದರೆ ತವರಿಗೆಂದು ಬರಲೂ ಬಿಡದ ಅತ್ತೆ ಮಾವ....
ಒಂದು ದಿನ ಕುರುಡರಾಗಿದ್ದ ಪತಿ ತೋಟದ ಕೆಲಸಕ್ಕೆ ಎಲ್ಲರೊಂದಿಗೆ ತೆರಳಿದ್ದರು.ಜೊತೆಯಲ್ಲಿರುವವರು ಹೇಳಿದಂತೆ ಸಣ್ಣಪುಟ್ಟ ಸಹಾಯ ಮಾಡುತ್ತಿದ್ದರು. ವಾಪಸಾಗುತ್ತಿದ್ದಾಗ ಕಣ್ಣುಕಾಣದ ಪತಿ ನಿಧಾನವಾಗಿ ಹಿಂದೆ ಬರುತ್ತಿದ್ದರು.ಇತರರೆಲ್ಲ ಮುಂದೆ ಸಾಗಿದ್ದರು.ಪತಿ ಕಾಲು ಮುಗ್ಗರಿಸಿ ಕೆರೆಗೆ ಬಿದ್ದುಬಿಟ್ಟರು. ಕೆರೆಗೆ ಬಿದ್ದಿರುವುದು ಯಾರ ಅರಿವಿಗೆ ಬರಲಿಲ್ಲ.ಏಕೆ ಮನೆಗೆ ಬರಲಿಲ್ಲ...? ಎಂದು ಅರಸುತ್ತಿದ್ದಾಗ ಸಂಶಯ ಬಂದು ನೋಡಿದಾಗ ತಿಳಿಯಿತು.. ಆದರೆ...ಆಗಲೇ.. ಪ್ರಾಣಪಕ್ಷಿ ಹಾರಿ ಹೋಗಿತ್ತು."
"ಹೂಂ..ಆ ಸಮಯಕ್ಕೇ ನನಗೆ ಆ ಊರಿಗೆ ವರ್ಗವಾಗಿತ್ತು. ಶಾಲಾ ಶಿಕ್ಷಕನಾದ ನನಗೆ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡುವ ಅಭ್ಯಾಸ ಜೋರಾಗಿತ್ತು.ನನ್ನ ಕಿವಿಗೆ ಕುರುಡನೊಬ್ಬ ಕೆರೆಗೆ ಬಿದ್ದು ಅಸುನೀಗಿದ ಸುದ್ದಿ ತಲುಪಿತ್ತು.ನನ್ನ ಬುದ್ಧಿ ಜಾಗೃತವಾಯಿತು."
"ಪತಿಯೊಂದಿಗೆ ಪ್ರಸ್ತದ ಶಾಸ್ತ್ರವೂ ನಡೆದಿಲ್ಲ.ಅದಕ್ಕೂ ಮುನ್ನವೇ ನನಗೆ ವಿಧವೆಯ ಪಟ್ಟ ದೊರಕಿತ್ತು.ಎಲ್ಲರ ಮಾತುಗಳೂ ಇರಿಯುತ್ತಿದ್ದವು.ಮೂಕವಾಗಿದ್ದೆ.ನನ್ನೊಂದಿಗೆ ನನ್ನ ತಾಯಿಗೂ ಕೆಟ್ಟ ಪದಗಳು ಕೇಳಬೇಕಾಗಿ ಬಂದಿತ್ತು.ತಾಯಿಯಂತೆ ಮಗಳೂ ವಿಧವೆ..
ತಾಯಿಮಗಳಿಬ್ಬರ ಕಾಲ್ಗುಣವೂ ಹಾಳು ಎಂದು ಜರೆದಾಗ ಹಿಂಡಿಹಿಪ್ಪೆಯಾಗಿದ್ದೆ.. ನೀನು ನನ್ನ ಮುದ್ದಿನ ಮಗನನ್ನು ಕೊಂದೇ ಬಿಟ್ಯಲ್ಲೇ..ಪಾಪಿ.. ಎಂದು ಅತ್ತೆ ನನ್ನನ್ನೇ ತಿಂದು ಹಾಕುವಂತೆ ನೋಡಿದಾಗ..ಇವರೇ..ನನ್ನಜ್ಜೀನಾ ...? ಎಂಬ ಭಾವ ನನ್ನ ಕರುಳು ಹಿಂಡಿತು.
ನಾವು ನಿಮಿತ್ತ ಮಾತ್ರ..ಎಲ್ಲ ಆ ದೇವನ ಆಟ ಮಗಳೇ..ಎಂದಷ್ಟೇ ಹೇಳಿ ಮೌನಕ್ಕೆ ಜಾರಿದ್ದರು ತಾಯಿ.."
"ಎಳವೆಯಲ್ಲೇ ಎಷ್ಟು ನೋವನುಭವಿಸಿದ್ದೆ ಸಾವಿತ್ರೀ... "ಎನ್ನುತ್ತಾ ಮಡದಿಯನ್ನು ಕಕ್ಕುಲತೆಯಿಂದ ನೋಡಿ ಹೆಗಲ ಮೇಲೆ ಕೈಯಿಟ್ಟು..
"ಊರಮೇಲಿನ ದುರ್ಘಟನೆಯ ಸಂಪೂರ್ಣ ಮಾಹಿತಿ ನಾನು ಉಳಿದುಕೊಂಡಿದ್ದ ಮನೆಯ ಅಕ್ಕಪಕ್ಕದವರಿಂದ ತಿಳಿದುಕೊಂಡಿದ್ದೆ.ಆ ಎಳೆಯ ಹೆಣ್ಣುಮಗಳಿಗೆ ನ್ಯಾಯಯುತವಾಗಿ ಗೌರವದಿಂದ ಸಮಾಜದಲ್ಲಿ ಬಾಳಲು ಅವಕಾಶ ಕಲ್ಪಿಸಿಕೊಡೋಣ ಎಂದು ಕೆಲವರಲ್ಲಿ ಕೇಳಿಕೊಂಡಿದ್ದೆ.. ಒಂದೆರಡು ಜನ ನಾವಿದ್ದೇವೆ ನಿಮ್ಮ ಜೊತೆಗೆ ಎಂದರೆ ಉಳಿದವರೆಲ್ಲ ಈ ಊರಿನ ಪದ್ಧತಿಯೇ ಹಾಗೆ ಎಂದು ಜಾರಿಕೊಂಡರು.ಮನೆಯವರಲ್ಲಿ ಆಕೆಗೆ ವೈಧವ್ಯದ ಸಂಪ್ರದಾಯ ಎಂದು ತಲೆಬೋಳು ಮಾಡುವುದು,ಕೈಬಳೆ ಒಡೆಯುವುದು ಮಾಡಬೇಡಿ.ಬದಲಾಗಿ ನಮ್ಮದೊಂದು ಭಾರತೀ ಆಶ್ರಮವಿದೆ.ಅಲ್ಲಿ ಆಕೆಗೆ ಗೌರವದಿಂದ ಬದುಕಲು, ಶಿಕ್ಷಣ ಮುಂದುವರಿಸಲು ಅವಕಾಶ ನೀಡಿ ಎಂದು ಕೋರಿದ್ದೆವು.ನಮ್ಮ ಮಾತಿಗೆ ಕುಟುಂಬದ ಹಿರಿಯರಾರೂ ಸೊಪ್ಪು ಹಾಕಲಿಲ್ಲ."
"ಹೂಂ.. ಊರವರು ಹೇಳಿದ್ದು ಸರೀನೇ..ಆ ಊರಿನ ಪದ್ಧತಿಯೇ ಹಾಗಿತ್ತು. ಆ ದಿನ ಕೈ ಬಳೆ ಒಡೆಯುವ, ಕೂದಲು ಬೋಳಿಸುವ ಶಾಸ್ತ್ರವಂತೆ.. ನಿರ್ಲಿಪ್ತತೆಯಿಂದ ನನ್ನದೇನೂ ಉಳಿದಿಲ್ಲ ಇನ್ನು ಎಂಬ ಶೂನ್ಯಭಾವದಿಂದ ಎಲ್ಲೋ ದೂರದಲ್ಲಿ ದೃಷ್ಟಿ ನೆಟ್ಟು ಕುಳಿತಿದ್ದೆ.ಗುಂಪಿನಲ್ಲಿ ಏನೇನೋ ಮಾತುಕತೆಗಳು.ಅವುಗಳಿಗೆಲ್ಲ ಅಕ್ಷರಶಃ ಕಿವುಡಿಯಾಗಿದ್ದೆ.ಇನ್ನೇನು ಕೈಬಳೆ ಒಡೆಯುವ ಶಾಸ್ತ್ರ ಆರಂಭವಾಗುತ್ತದೆ ಎಂದಾಗ ನಿಲ್ಲಿಸಿ.... ಎಂಬ ಗಟ್ಟಿದನಿಯೊಂದು ತೂರಿಬಂದಾಗ ಒಮ್ಮೆ ಕಂಪಿಸಿದ್ದೆ.ಎಲ್ಲೋ ಕೇಳಿದ ಪರಿಚಿತ ಧ್ವನಿ ಎಂದು ಮನಸ್ಸು ಹೇಳಿತು."
"ಅಷ್ಟು ನೋವಿನಲ್ಲೂ ಆ ಧ್ವನಿಯನ್ನು ಪರಿಚಿತ ಧ್ವನಿ ಎಂದು ಗುರುತಿಸಿದೆಯಲ್ಲಾ!. ಅದೇ ನನ್ನ ನಿನ್ನ ಪ್ರೇಮದ ದ್ಯೋತಕ..ಆ ದಿನ ಬೆಳಿಗ್ಗೆ ಒಬ್ಬ ಗೆಳೆಯ ಕೈಕೊಟ್ಟಿದ್ದ.ಇನ್ನೊಬ್ಬ ಗೆಳೆಯನೊಂದಿಗೆ ಆ ಮನೆಗೆ ಬಂದೆ.ನಿಲ್ಲಿಸಿ .
ಎಂದು ಕೂಗಿಕೊಂಡೆ.ಗುಂಪನ್ನು ಚದುರಿಸಿ ಆ ಎಳೆಯ ಬಾಲೆಯ ಮುಖ ನೋಡಿದಾಗ ದುಃಖ ಆಶ್ಚರ್ಯ ಎರಡೂ ಒಟ್ಟೊಟ್ಟಿಗೇ ಆಗಿತ್ತು.ನನ್ನ ಹೃದಯದರಸಿ...ಪ್ರೇಮಕನ್ನಿಕೆ...ನನ್ನ ಪುಟ್ಟ ದೇವಿ ...ಅನಿಷ್ಟ ಪದ್ಧತಿಗೆ ಬಲಿಯಾಗುವವಳಿದ್ದಳು.ಹಿಂದೆ ಮುಂದೆ ನೋಡದೆ ಬಲಗೈಯಲ್ಲಿ ನಿನ್ನನ್ನೂ, ಎಡಗೈಯಲ್ಲಿ ನಿನ್ನ ತಾಯಿಯ ಕೈ ಹಿಡಿದು ಎಳೆದುಕೊಂಡೇ ಬಂದಿದ್ದೆ.ನಮ್ಮ ಮೇಲೆ ಕಲ್ಲು ತೂರಾಟ ನಡೆಯಿತು.ಹೇಗೋ ಪಾರಾಗಿ ಬಂದೆವು.."
" ಹೌದು... ಅಂದು ನೀವು ದೇವರಂತೆ ಬಂದಿರಿ..ಬಹಳ ದೂರದವರೆಗೆ ನಮ್ಮನ್ನು ಕರೆದೊಯ್ಯದಂತೆ ಕುಟುಂಬಿಕರು ಆಕ್ಷೇಪಿಸುತ್ತಾ
ಹಿಂಬಾಲಿಸಿದ್ದರು.ನೀವು ದಿಟ್ಟಹೆಜ್ಜೆ ಇಟ್ಟಿದ್ದಿರಿ.ಇದು ಕನಸೋ ನನಸೋ ಎಂದರಿಯದೆ ದಿಙ್ಮೂಢಳಾದ ನನಗೆ ..ನನ್ನ ಕೈಯ ಮೇಲೆ ನಿಮ್ಮ ಕೈಯನಿಟ್ಟು ಮಾತು ಕೊಟ್ಟಿದ್ರಿ... ನಿನ್ನನ್ನು, ತಾಯಿಯನ್ನು ದಡಸೇರಿಸುವ ಭಾರ ನನ್ನದು ಎಂದು.
ಬಹಳ ದೂರ ನಡೆದು ಬಸ್ ಏರಿ ರಾತ್ರಿ ಭಾರತೀ ಆಶ್ರಮಕ್ಕೆ ತಂದು ಬಿಟ್ಟಿರಿ.ಹೊಸ ಪರಿಸರ ಬಾಳಲ್ಲಿ ಹೊಂಗಸನ್ನು ಮೂಡಿಸಿತು.ಅಮ್ಮ ಮೂರು ದಿನ ನನ್ನ ಜೊತೆಗಿದ್ದು ಊರಿಗೆ ಮರಳಿದರು.ಊರಲ್ಲಿ ಯಾರು ಕೇಳಿದರೂ ಅಮ್ಮ ನಾನಿರುವ ಜಾಗದ ಸುಳಿವನ್ನು ಮಾತ್ರ ಬಿಟ್ಟುಕೊಟ್ಟಿರಲಿಲ್ಲ.ಆ ಘಟನೆಯ ನಂತರ ಅಮ್ಮನಿಗೆ ತವರಿನ ಸಂಬಂಧ ಸಂಪೂರ್ಣವಾಗಿ ಕಳಚಿಹೋಯಿತು."
"ನಿಮ್ಮನ್ನು ನಮ್ಮ ಚೇತನಾ ಆಶ್ರಮದ ಅಂಗಸಂಸ್ಥೆಯಾದ ಹೆಣ್ಣು ಮಕ್ಕಳಿಗಾಗಿ ಇದ್ದಂತಹ ,ಭಾರತೀ ಆಶ್ರಮಕ್ಕೆ ಬಿಟ್ಟು ತೆರಳಿದ ಮೇಲೆ ಒಂದು ವಾರ ನನ್ನ ಶಾಲಾ ಅಧ್ಯಾಪಕರು ಕೂಡ ನನ್ನಲ್ಲಿ ಮಾತನಾಡುತ್ತಿರಲಿಲ್ಲ.ಕ್ರಮೇಣ ಎಲ್ಲವೂ ಸರಿಹೋಯಿತು.ಆಗಾಗ ನಾನು ಆಶ್ರಮಕ್ಕೆ ಭೇಟಿ ನೀಡಿ ನಿನ್ನನ್ನು ವಿಚಾರಿಸಿಕೊಂಡು ಬಂದಾಗ ನನಗೆ ಆತ್ಮತೃಪ್ತಿ."
"ರೀ.. ನೀವು ಸರಿಯಾದ ಜಾಗಕ್ಕೇ ನನ್ನನ್ನು ಸೇರಿಸಿದ್ದಿರಿ.ಆಶ್ರಮ ನನ್ನ ಪಾಲಿಗೆ ಜ್ಞಾನದೇಗುಲವಾಯಿತು.ಓದಿನಲ್ಲಿ ಮಗ್ನಳಾದೆ.ಆಶ್ರಮದ ಮಕ್ಕಳಿಗೆ ಶಿಕ್ಷಕಿಯಾದೆ.ಅಕ್ಕನಾದೆ..ನಿಮ್ಮನ್ನು ನಾನು ನೋಡುವ ದೃಷ್ಟಿಕೋನ ಬದಲಾಗಿತ್ತು .ಪ್ರೇಮದ ಭಾವವು ಸೋದರತ್ವಕ್ಕೆ ತಿರುಗಿತ್ತು. ಅಲ್ಲಿನ ರೇಣುಕಾ ಮಾತಾಜಿ ನನ್ನನ್ನು ಶಿಕ್ಷಕರ ತರಬೇತಿಗೆ ಕಳುಹಿಸಿದರು.ನಾನು ನನಸಾಗಬಹುದೆಂದು ಊಹಿಸದ ನನ್ನ ಕನಸಿನಂತೆ ನಡೆದ ಬಾಳ ತಿರುವದು.. ರಾತ್ರಿ ನಿದ್ದೆಗೆಟ್ಟು ಅಧ್ಯಯನ ನಡೆಸಿ ತರಬೇತಿಯಲ್ಲಿ ಉತ್ತೀರ್ಣಳಾಗಿ ಭೇಷ್ ಎನಿಸಿಕೊಂಡೆ.."
"ಸಾವಿತ್ರೀ.. ನೀನು ಶಿಕ್ಷಕರ ತರಬೇತಿಯಲ್ಲಿ ಉತ್ತೀರ್ಣಳಾದಾಗ ನಾನೆಷ್ಟು ಹರುಷಗೊಂಡಿದ್ದೆ ಗೊತ್ತಾ..?"
"ರೀ....ಇದೇ ನಿಮ್ಮ ಕಣ್ಣ ಹೊಳಪು ಅಂದು ಕಂಡು ನಾನು ನಿಜಕ್ಕೂ ಪುಳಕಿತಳಾಗಿದ್ದೆ..ಶಾಲಾ ಶಿಕ್ಷಕಿಯಾದ ಸಂಭ್ರಮ.ಸರಕಾರಿ ನೌಕರಿ ಬಹಳ ಬೇಗ ದೊರೆತಿತು..ನನ್ನ ಸಂಬಳವನ್ನು ನನ್ನ ತಮ್ಮ, ತಂಗಿಗೆ ವಿದ್ಯಾಭ್ಯಾಸ ಕೊಡಿಸಲು, ಅಮ್ಮನಿಗೆ ಮನೆ ನಿರ್ವಹಣೆಗೆ ಮತ್ತು ಆಶ್ರಮಕ್ಕೆಂದು ಬಳಸುತ್ತಿದ್ದೆ ವಿನಃ ದುಂದುವೆಚ್ಚ ಮಾಡುತ್ತಿರಲಿಲ್ಲ."
"ನೀನು ಮನೆಗೆ ಮಗಳಾಗದೆ ಮಗನಂತೆ ಆಸರೆಯಾದ್ದು ನನಗೂ ಹೆಮ್ಮೆ ತಂದಿತ್ತು. ಆದರೆ..ಸಾವಿತ್ರೀ... ನನ್ನ ಮನದಾಸೆಯನ್ನು ನಿನ್ನಲ್ಲಿ ಹೇಗೆ ಹೇಳಲಿ..? ಎಂಬ ಚಡಪಡಿಕೆ ನನ್ನಲ್ಲಿತ್ತು..ನನಗೂ ನನ್ನವರು ಎಂದು ಯಾರೂ ಇರಲಿಲ್ಲ.ಚೇತನಾ ಆಶ್ರಮವೇ ನನ್ನ ಪಾಲಿಗೆ ಕುಟುಂಬವಾಗಿತ್ತು. ನೌಕರಿ ದೊರೆತ ಮೇಲೂ ಆಗಾಗ ತೆರಳುತ್ತಿದ್ದೆ.ಹಬ್ಬ ಹರಿದಿನಗಳಲ್ಲಿ ಭಾಗಿಯಾಗುತ್ತಿದ್ದೆ. ಅದೊಂದು ದಿನ ಭಾರತೀ ಆಶ್ರಮದ ಮಾತಾಜಿ ರೇಣುಕಮ್ಮ ನನ್ನನ್ನು ಬರಹೇಳಿದಾಗ ಎಂದಿನಂತೆ ಬಂದಿದ್ದೆ.ಅವರ ಮಾತು ಕೇಳಿ ನನ್ನ ಕಿವಿ ತಂಪಾಯಿತು.ದೇಹದಲ್ಲಿ ನವಚೈತನ್ಯ ಹರಿದಾಡಿತು."
"ನಿಮ್ಮಂತೆಯೇ ನನಗೂ ಕೂಡ...ಬಹಳ ತರಾತುರಿಯಲ್ಲಿ ಇದ್ದಾಗ ಬರಲು ಹೇಳಿ ಕಳುಹಿಸಿದ್ದರು.ಅವರ ಕೋಣೆಗೆ ತೆರಳಿದಾಗ ನೀವು ಕುಳಿತುಕೊಂಡಿದ್ದಿರಿ.ಏನಾದರೂ ಕೆಲಸವಿರಬಹುದು ಅಂದುಕೊಂಡಿದ್ದೆ..ಆದರೆ... ಆದರೆ.."
"ಏನು... ಆದರೆ...?? ನಿನ್ನ ಬಾಯಲ್ಲೇ ಕೇಳುವಾಸೆ ನನಗೆ..ನನ್ನ ಸಾವಿತ್ರಿಯ ಮನದೊಳಗಿನ ಪ್ರೇಮಪಲ್ಲವಿಯನ್ನು ಇಂದು ಆನಂದಿಸುವಾಸೆ.."
"ರೇಣುಕಮಾತಾಜಿ ಸಾವಿತ್ರೀ..ನಿನಗೆ ನಿನ್ನದೇ ಜೀವನ ಇದ್ದರೆ ಚೆನ್ನ..ನಿನ್ನದಿನ್ನೂ ಹಸಿವಯಸ್ಸು. ತಾಯಿಯೂ ಕಷ್ಟದಲ್ಲಿದ್ದಾರೆ.ಗಂಡುದಿಕ್ಕು ಅಂತ ಇದ್ದರೆ ಚಂದ.ವೆಂಕಟೇಶ್ ಗೂ ಕುಟುಂಬ ಅಂತ ಯಾರೂ ಇಲ್ಲ. ಇಬ್ಬರೂ ಜೊತೆಯಾಗಿ ಬಾಳುವ ಯೋಚನೆ ಮಾಡಿ... ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಬದುಕಿದರೆ ನಿಮ್ಮಿಬ್ಬರಿಗೂ ಅನುಕೂಲ..ಆಲೋಚಿಸಿ.. ಎಂದಾಗ ನಾನು ಖುಷಿಯಿಂದಲೇ ತಬ್ಬಿಬ್ಬಾಗಿದ್ದೆ..ನಿಮ್ಮ ಕಣ್ಣ ಸಂಚಿನಲ್ಲೇ ಭಾವನೆಗಳನ್ನು ಓದಿದ್ದೆ.. ಇನ್ನೇಕೆ ತಡ ಮಾಡುತಿ..? ನಾನೀಗಲೇ ಒಪ್ಪಿದೆ..ನೀನೂ ಒಪ್ಪಿದರೆ.....ಎನ್ನುವಂತಿತ್ತು ನಿಮ್ಮ ಆತುರತೆ.."
"ಅದೇ ಕಣೇ.. ನಾನು ಯಾವುದು ಬಯಸಿದ್ದೆನೋ ಅದೇ ಆ ದೇವನಿಗೂ ಪ್ರಿಯವಾಗಿತ್ತು ಅನಿಸುತ್ತದೆ.. ಅಂತೂ ಇಬ್ಬರ ಹೃದಯ ಕಲೆತು ಪ್ರೇಮಗೀತೆ ಹಾಡಿತು..ನಿಮ್ಮ ತಾಯಿ ನನಗೂ ತಾಯಿಯಾದರು.ಇಬ್ಬರನ್ನೂ ಹರಸಿ ಆಶ್ರಮದಲ್ಲೇ ಮದುವೆಯೂ ಮಾಡಿ ಕಳುಹಿಸಿಕೊಟ್ಟರು.ಆಗ ನನಗೆ ಬೇರೆ ಊರಿಗೆ ವರ್ಗಾವಣೆ ಆಗಿತ್ತು.ಹೊಸ ಊರಿನಲ್ಲಿ ಹೊಸ ಕನಸಿನೊಂದಿಗೆ ಬಾಳಲಾರಂಭಿಸಿದೆವು.."
" ನನ್ನಮ್ಮನನ್ನು ತಾಯಿಯಂತೇ ಗೌರವಿಸಿದಿರಿ.ತಂಗಿ ತಮ್ಮನ ಓದು ಉದ್ಯೋಗ ಮದುವೆಯ ಜವಾಬ್ದಾರಿಗಳಿಗೆಲ್ಲಾ ಹೆಗಲು ನೀಡಿದಿರಿ..ಅಮ್ಮ ಕೊನೆಯ ದಿನಗಳಲ್ಲಿ ಹೇಳಿದ ನೆನಪು ...ಅಪ್ಪ ಇದ್ದಿದ್ದರೆ ನಮ್ಮನ್ನು ಎಷ್ಟು ಜವಾಬ್ದಾರಿಯಿಂದ ನೋಡಿಕೊಳ್ಳಬೇಕಿತ್ತೋ ಅದೇ ಸ್ಥಾನದಲ್ಲಿ ವೆಂಕಟೇಶ್ ನೋಡಿಕೊಂಡಿದ್ದಾನೆ.ಇದಕ್ಕಿಂತ ನನಗೆ ಇನ್ನೇನು ಬೇಕು.. ಎಂದು.. ನೀವು ಅಂದು ಕೊಟ್ಟ ಮಾತಿನಂತೆ ನಡೆದುಕೊಂಡಿದ್ರಿ.. ನೀವು ಕೊಟ್ಟ ಮಾತನ್ನು ಮರೆತಿಲ್ಲ ನಾನು..." ಎನ್ನುತ್ತಾ ಪತಿಯ ಕಣ್ಣಲ್ಲಿ ಕಣ್ಣಿಟ್ಟು ನೋಡಿದರು..
"ಸಾವಿತ್ರೀ..ಯಾವ ಜನ್ಮದ ಪುಣ್ಯವೋ ಏನೋ ಅತ್ತೆಯಾದರೂ ತಾಯಿಯಂತೆಯೇ ಇದ್ದರು..ಮಗನಂತೆ ನನಗೆ ಅವರ ಸೇವೆಮಾಡುವ ಭಾಗ್ಯ ದೊರಕಿತು.ನಿನ್ನ ತಂಗಿ ತಮ್ಮ ನನಗೆ ಹಿರಿಯ ಸಹೋದರನ ಸ್ಥಾನವನ್ನು ನೀಡಿದರು..ನಿನ್ನಂತಹ ಅಮೂಲ್ಯ ರತ್ನವನ್ನು ನನಗೆ ನೀಡಿ ಮಾತೃವಾತ್ಸಲ್ಯದಿಂದ ಒಡನಾಡಿದ ಆ ಹಿರಿ ಜೀವಕ್ಕೆ ಬದುಕಿನ ಕೊನೆಯ ದಿನಗಳನ್ನು ನೆಮ್ಮದಿಯಿಂದ ಕಳೆಯುವಂತೆ ನಾವು ನೋಡಿಕೊಂಡೆವಲ್ಲಾ ಎನ್ನುವ ಆತ್ಮತೃಪ್ತಿ ಇದೆ."
"ರೀ.. ನಾವು ನಮ್ಮ ಹಿರಿಯರನ್ನು ಪ್ರೀತಿಯಿಂದ ನೋಡಿಕೊಂಡಂತೆ ಇವತ್ತು ನಮ್ಮ ಮಕ್ಕಳು ನಮ್ಮನ್ನು ನೋಡಿಕೊಳ್ಳುತ್ತಿದ್ದಾರೆ..ಇದುವೇ ಅಲ್ಲವೇ ಮುಂದಿನ ಪೀಳಿಗೆಗೆ ನಾವು ಕಲಿಸಿದ ಪ್ರೀತಿಯ ಪಾಠ.. " ಎಂದಾಗ ಪತಿಯ ತೋಳುಗಳು ಸಾವಿತ್ರಿಯ ಹೆಗಲನ್ನು ಸುತ್ತುವರಿಯಿತು ..ಆ ಅನುರಾಗದಲ್ಲಿ ಪ್ರಬುದ್ಧತೆಯಿತ್ತು . ಬಾಳಪಯಣದ ಸಾರ್ಥಕತೆಯಿತ್ತು.ಗೋಡೆಯಲ್ಲಿ ನಲುವತ್ತು ವಸಂತಗಳ ಸುಖೀ ದಾಂಪತ್ಯ ಜೀವನಕ್ಕೆ ಮಕ್ಕಳು ಮೊಮ್ಮಕ್ಕಳು ಶುಭಹಾರೈಸಿದ ಫಲಕ ನೇತಾಡುತ್ತಿತ್ತು..
✍️...ಅನಿತಾ ಜಿ.ಕೆ.ಭಟ್.
22-02-2020.
ಪ್ರತಿಲಿಪಿ ಕನ್ನಡದ ಫೆಬ್ರವರಿ 2020 ರ 'ಈ ಸಂಭಾಷಣೆ ' ಕಥಾ ಸ್ಪರ್ಧೆಗೆ ಸಲ್ಲಿಸಿದ ಬರಹ.
'ಈ ಸಂಭಾಷಣೆ' ಕಥಾ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದಿದೆ.
No comments:
Post a Comment