ಮೈತ್ರಿ ಕಾಲೇಜಿನಿಂದ ಬಂದು ಬಸ್ ಇಳಿಯುವಲ್ಲಿ ಇವತ್ತು ಸಂಜನಾ ವಂದನಾ ಕಾದು ಕುಳಿತಿದ್ದರು.. ಅವರನ್ನು ಬಸ್ ಇಳಿಯುವಾಗಲೇ ಕಂಡ ಮೈತ್ರಿಗೆ ಆದ ಖುಷಿ ಅಷ್ಟಿಷ್ಟಲ್ಲ.. ಮೂವರು ಹರಟಿಕೊಂಡು ನಡೆಯುತ್ತಾ ಬರುತ್ತಿದ್ದರು..ಆಗ ಹಿಂದಿನಿಂದ ಬಂದ ಕಾರು ಒಂದೇ ಸಮನೆ ಹಾರ್ನ್ ಹೊಡೆಯುತ್ತಿತ್ತು.ಇವರು ರಸ್ತೆಯ ಪಕ್ಕದಲ್ಲಿ ನಡೆಯುತ್ತಿದ್ದರೂ ಪದೇಪದೇ ಹಾರನ್ ಮಾಡಿದಾಗ "ಏನಾಗಿದೆ ಈತನಿಗೆ" ಎಂದು ಜೋರಾಗಿಯೇ ಗದರಿಸುತ್ತಾ ಮೈತ್ರಿ ಚಾಲಕನತ್ತ ನೋಟ ಹರಿಸಿದಳು.."ಓಹೋ..ನೀನಾ..."
ಎಂದಳು..ಕಾರು ನಿಲ್ಲಿಸಿದ ವೆಂಕಟ್ "ಬನ್ನಿ.. ಕಾರು ಹತ್ತಿ.."ಎಂದ..
ಶಶಿ ಅತ್ತೆಯೂ "ಸರಿಯಾದ ಸಮಯಕ್ಕೇ ನಾವು ಬಂದಿದೀವಿ...ಕಾರಲ್ಲೇ ಹೋಗೋಣ ಬನ್ನಿ.."ಎಂದರು.. ಆದರೆ ಮೂವರಿಗೂ ಕಾರಲ್ಲಿ ಹೋಗುವುದು ಬೇಡವಾಗಿತ್ತು..ಹರಟಿಕೊಂಡು ನಡೆಯುವುದರಲ್ಲಿ ಮಜವಿತ್ತು..
"ನಾವು ನಡೆದು ಕೊಂಡೇ ಬರ್ತೀವಿ.."ಎಂದಳು ಮೈತ್ರಿ..
"ಹೌದು...ನಮಗೆ ನಡೆಯಲು ಸಿಗುವುದೇ ಅಪರೂಪ.." ಎಂದಳು ಸಂಜನಾ..
"ಇಷ್ಟು ಪ್ರಶಾಂತ ವಾತಾವರಣ ವಾಕಿಂಗ್ ಮಾಡಲು ಬೆಂಗಳೂರಿನಲ್ಲಿ ನಮಗೆ ಸಿಗುವುದೇ ಇಲ್ಲ.."ಎಂದ ವಂದನಾ..
ಮೂವರೂ ನಿರಾಕರಿಸಿದಾಗ ಶಶಿ ಅತ್ತೆಯ ಮುಖ ಸಣ್ಣದಾಯಿತು.ನಿರ್ವಾಹವಿಲ್ಲದೆ ವೆಂಕಟ್ ಕಾರು ಮುಂದಕ್ಕೆ ಚಲಾಯಿಸಿದ..
ಶಶಿಯ ಬಾಯಿಂದ "..ಈಗಿನ ಹೆಣ್ಣುಮಕ್ಕಳಿಗೆ ಪೊಗರು ಜಾಸ್ತಿ..."ಎಂದು ಅಸಮಾಧಾನ ಹೊರ ಹಾಕಿದರು.
ಮನೆಯ ಮುಂದೆ ಕಾರು ಬಂದು ನಿಂತಾಗ ಮಹಾಲಕ್ಷ್ಮಿ ಅಮ್ಮ ಹೊರಗೆ ಬಂದರು.. ಅಂಗಳಕ್ಕೆ ಬಂದು ಮಗಳು ಮೊಮ್ಮಗನನ್ನು ಆದರದಿಂದ ಬರಮಾಡಿಕೊಂಡರು..ಶಂಕರನೂ "ಅಕ್ಕಾ.. "ಎನ್ನುತ್ತಲೇ ಚಾವಡಿಗೆ ಬಂದರು.. ಗಾಯತ್ರಿ ಬಾಯಾರಿಕೆ ತಂದಾಗ ಮಂಗಳಮ್ಮ ಮಾತ್ರ ಒಳಗೆ ಪೋಡಿ ಬೇಯಿಸುತ್ತಾ ತಾನೂ ಸೆಕೆಯಲ್ಲಿ ಬೆವರುತ್ತಿದ್ದಳು..
ಮಂಗಳಾ ಹೊರಗೆ ಬಾರದ್ದನ್ನು ಆಕ್ಷೇಪಿಸುವಂತೆ ಶಶಿ... "ಅತ್ತಿಗೆ ಭಾರೀ ಕೆಲಸದಲ್ಲಿದ್ದಾರಾ.. ಇಷ್ಟು ಹೊತ್ತಾದರೂ ಕಾಣುವುದೇ ಇಲ್ಲ..."ಎಂದು ರಾಗ ಎಳೆದಳು..
ಅದನ್ನರಿತ ಗಾಯತ್ರಿ..."ಅಕ್ಕ ಕೆಲಸದಲ್ಲಿದ್ದಾರೆ..ನೀವೇ ಬನ್ನಿ ಒಳಗೆ ಅಲ್ಲೇ ಮಾತಾಡೋಣ.."ಎಂದಳು..ಅಂಗಳದ ಬದಿಯಲ್ಲಿ ಹತ್ತು ಹೆಜ್ಜೆ ಸಂಜೆ ನಡೆಯುತ್ತಿದ್ದ ಶ್ಯಾಮ ಶಾಸ್ತ್ರಿಗಳು ಬಂದರು.. ಮಗಳು ಮೊಮ್ಮಗನನ್ನು ಮಾತನಾಡಿಸಿದರು..
ಬಹಳ ದಿನಗಳ ನಂತರ ಸಿಕ್ಕಿದ ಕಾರಣ ಶಂಕರ ಅಕ್ಕನ ಜೊತೆ ಬಹಳ ಹೊತ್ತು ಮಾತನಾಡಿದ... ಎಲ್ಲರಿಗೂ ಮಾತನಾಡುತ್ತಿದ್ದಲ್ಲಿಗೇ ಕಾಫಿ ಪೋಡಿ ತಂದುಕೊಟ್ಟರು ಮಂಗಳಾ, ಗಾಯತ್ರಿ..
ಮೈತ್ರಿ ಸಂಜನಾ ವಂದನಾ ಮನೆಗೆ ಬಂದಾಗ ..ಶಶಿ ಅತ್ತೆ.."ಇಷ್ಟು ಹೊತ್ತಾಯಿತು ನೋಡಿ ನಡೆದು ಬರಲು..ನಮ್ಮ ಜೊತೆ ಬಂದಿದ್ದರೆ ಆರಾಮವಿತ್ತು.."ಎಂದರು..
ಅಕ್ಕತಂಗಿಯರು ಮುಖಮುಖ ನೋಡಿಕೊಂಡು ಮುಸುಮುಸಿ ನಕ್ಕರು.ನಾವು ಇಷ್ಟು ಹೊತ್ತು ನಡೆದದ್ದೇ ಅಲ್ಲ..ಬಂಡೆಯ ಮೇಲೆ ಕುಳಿತು ಪಟ್ಟಾಂಗ ಹೊಡೆದದ್ದು ಇವರಿಗೇನು ಗೊತ್ತು..ಎಂಬಂತಿತ್ತು ಅವರ ನಗು..
*****
ಕಿಶನ್ ಶುಕ್ರವಾರ ರಾತ್ರಿ ಕರಾವಳಿಯ ಕಡೆಗೆ ಬಸ್ ಏರಿ ಪ್ರಯಾಣ ಮಾಡತೊಡಗಿದ್ದ..ಮಗ ಬಸ್ ಇಳಿಯುವ ಹೊತ್ತಿಗೆ ಬೆಳಿಗ್ಗೆ ಅಲ್ಲಿ ತಾನಿರಬೇಕೆಂದು ಗಣೇಶ ಶರ್ಮ ಲೆಕ್ಕ ಹಾಕಿಕೊಂಡು ಬೇಗನೇ ಮಲಗಿದ್ದರು.ಮಮತಾ ಕೂಡಾ ನಾಳೆ ಮಗ ಬಂದಾಗ ಬೆಳಿಗ್ಗೆ ಬೇಗನೆದ್ದು ಅವನ ಇಷ್ಟದ ತಿಂಡಿ ಮಾಡಿಕೊಡಬೇಕು..ಬೆಂಗಳೂರಿಗೆ ವಾಪಸ್ ಹೋಗುವಾಗ ತೆಗೆದುಕೊಂಡು ಹೋಗಲು ಒಂದಷ್ಟು ಚಕ್ಕುಲಿ,ಖಾರಕಡ್ಡಿ, ಕೋಡುಬಳೆ ಎಲ್ಲ ಹೊಸ ತೆಂಗಿನೆಣ್ಣೆಯಲ್ಲಿ ಕರಿದು ಮಾಡಿಕೊಡಬೇಕು ಎಂದು ಎಂದೆಲ್ಲ ಯೋಚಿಸುತ್ತಾ ಮಲಗಿದ್ದರು..ಮಗ ಇಷ್ಟಪಟ್ಟ ಹುಡುಗಿ ಹೇಗಿರುತ್ತಾಳೋ, ಮದುವೆ ಮಾಡಿಕೊಡಲು ಒಪ್ಪುತ್ತಾರೋ ಇಲ್ಲವೋ... ಒಟ್ಟಿನಲ್ಲಿ ಜೀವನ ಸುಸೂತ್ರವಾಗಿ ನಡೆದರೆ ಸಾಕು...ಈಗ ಲವ್ ಮಾಡಿ ಮದುವೆಯಾಗಿ ಬಾಳಿನಲ್ಲಿ ಏನೆಲ್ಲ ಎಡವಟ್ಟು ಮಾಡಿಕೊಂಡವರನ್ನು ಕಾಣುತ್ತಿದ್ದೇವೆ..ನಮ್ಮ ಮಗನ ಜೀವನ ಹಾಗಾಗದಿರಲಿ.. ಚೆನ್ನಾಗಿ ಬಾಳುವಂತಾಗಬೇಕು .. ಎಂದು ಮಗನ ಒಳಿತನ್ನೇ ತಾಯಿ ಹೃದಯ ಬಯಸುತ್ತಿತ್ತು...
ಕಿಶನ್ ಬಸ್ ಹತ್ತಿದ್ದೇನೆ ಎಂದು ತಂದೆಗೆ ಕರೆಮಾಡಿ ತಿಳಿಸಿದ ನಂತರ ಮೈತ್ರಿಗೆ ಸಂದೇಶ ರವಾನಿಸಿದ..
ಪ್ರಿಯೇ...
ನಿನ್ನ ಸನಿಹದಿ
ಅಧರದ ಮಧು...
ಹೀರುವ ತವಕ
ಕ್ಷಣಕ್ಷಣವೂ ನನ್ನದು...
ಆಗುವೆಯಾ ನನ್ನೊಡನೆ
ಸಪ್ತಪದಿ ತುಳಿವ ವಧು....
ಮೈತ್ರಿ ಓದಿ ರೋಮಾಂಚನಗೊಂಡಳು.."ಅಕ್ಕಾ..ಏನೇ ಭಾರೀ ಖುಷಿಯಲ್ಲಿದ್ದೀಯಾ..."ಎನ್ನುತ್ತಾ ಬಂದಳು ಸಂಜನಾ..."ಏನಿಲ್ಲ..ಏನಿಲ್ಲ ಕಣೇ.."ಎಂದು ಮೆಲ್ಲನೆ ಮೊಬೈಲ್ ಪಕ್ಕಕ್ಕಿರಿಸಿದಳು..
ತಂಗಿಯರಿರುವಾಗ ಬಹಳ ಜಾಗರೂಕತೆಯಿಂದ ಇರಬೇಕು ಎಂದು ತನಗೆ ತಾನೇ ಕಡಿವಾಣ ಹಾಕಿಕೊಂಡಳು ಮೈತ್ರಿ.ಅಂತೂ ಕಿಶನ್ ಊರಿಗೆ ಹೊರಟಿದ್ದಾನೆ..ನಮ್ಮ ಮನೆಗೆ ಯಾವಾಗ ಬರುತ್ತಾನೋ.. ಮನೆಯಲ್ಲಿ ಏನಾಗುತ್ತೋ..ಚಿಕ್ಕಪ್ಪನ ಕುಟುಂಬವೂ ಇದೆ...ಇವರಿಗೆಲ್ಲ ನನ್ನ ಕಿಶನ್ ಲವ್ ಅಫೇರ್ ಗೊತ್ತಾದರೆ ನಾಚಿ ತಲೆತಗ್ಗಿಸಬೇಕಾಗುತ್ತೆ....ಎಂದೆಲ್ಲ ಏನೇನೋ ತಲೆಯೊಳಗೆ ಕೊರೆತಗಳು ಮೈತ್ರಿಗೆ..
******
ಶಶಿ ಮೈತ್ರಿಯನ್ನು ಬಹಳ ವಿನಯದಿಂದ ಮಾತನಾಡಿಸುತ್ತಿದ್ದಳು.ಭಾಸ್ಕರನನ್ನೂ ಅಷ್ಟೇ ಮೆದುಮಾತಿನಿಂದಲೇ ಓಲೈಸುತ್ತಿದ್ದಳು..ಮಂಗಳತ್ತಿಗೆಯನ್ನೂ ಗಾಯತ್ರಿಯೆದುರು ಅತಿಯಾಗಿಯೇ ಹೊಗಳುತ್ತಿದ್ದರು.ಭಾಸ್ಕರನಿಗೆ ತನ್ನ ಮಡದಿಯನ್ನು ಹೊಗಳಿದಾಗ ಹೆಮ್ಮೆಯೆನಿಸಿತು ..ಅಪ್ಪ ಅಮ್ಮ ಒಂದು ದಿನವೂ ಮಂಗಳಾಳನ್ನು ಹೊಗಳಿದ್ದಿಲ್ಲ..ಅಕ್ಕ ಹೊಗಳಿದಾಗ ಅಭಿಮಾನ ಮೂಡದಿದ್ದೀತೇ..ಮಂಗಳಾಳಿಗೆ ಮಾತ್ರ ಸ್ವಲ್ಪ ಅತಿಯೆನಿಸಿತು..ಗಾಯತ್ರಿಯೆದುರು ನನ್ನನ್ನು ಪ್ರತ್ಯೇಕವಾಗಿ ನೋಡಿ ಹೊಗಳಿ ಇವರಿಗೇನು ಲಾಭ..ಅವಳ ಮನಸ್ಸಿನಲ್ಲಿ ಮತ್ಸರ ಮೂಡಿಸುವ ಕೆಲಸ.. ಎಂದೆನಿಸಿತು..
ಬೆಳಗ್ಗೆ ಮೈತ್ರಿ ಎಂದಿನಿಂದ ಲವಲವಿಕೆಯಿಂದ ಕಾಲೇಜಿಗೆ ತೆರಳಿದಳು.ಅವಳ ಮನಸ್ಸು ಕಿಶನ್ ನ ಆಗಮನದ ಸುತ್ತಲೂ ಗಿರಕಿ ಹೊಡೆಯುತ್ತಿತ್ತು.. ಜೊತೆಗೆ ಕಿಶನ್ ನ ಹಾಯ್ಕು,ಚುಟುಕುಗಳು ಅವಳನ್ನು ಕೆಣಕುತ್ತಿದ್ದವು..
ಬೆಳಿಗ್ಗೆ ಭಾಸ್ಕರ ಶಾಸ್ತ್ರಿಗಳು .."ಒಂದು ವಾರ ಆಗುತ್ತಾ ಬಂತು..ಬಾರಂತಡ್ಕದ ಹುಡುಗನ ಮನೆ ಕಡೆಯಿಂದ ಉತ್ತರ ಸಧ್ಯದಲ್ಲೇ ಬರಬಹುದು..ಒಳ್ಳೆಯ ಮನೆತನಕ್ಕೆ ಮಗಳನ್ನು ಮದುವೆಮಾಡಿ ಕೊಟ್ಟರೆ ಹೆಗಲಿನಿಂದ ಭಾರ ಇಳಿದಂತೆ..ಮಂಗಳಾಳಂತೆ ಮೈತ್ರಿಯೂ ಒಳ್ಳೆ ಹೆಸರು ತಂದರೆ ಅದುವೇ ನನಗೆ ಹೆಮ್ಮೆ.."ಎಂದು ಮನಸಿನಲ್ಲೇ ಅಂದುಕೊಂಡು ಅಕ್ಕನ ಮಾತನ್ನು ನೆನೆದುಕೊಂಡು ಆನಂದದಿಂದ ಶಾಲೆಗೆ ಹೊರಟರು..
ಭಾಸ್ಕರ ಶಾಲೆಗೆ ಹೋದಕೂಡಲೇ ತನಗೆ ತಂದೆ ,ತಾಯಿ ,ತಮ್ಮ ಶಂಕರನನ್ನು, ಅತ್ತಿಗೆಯನ್ನೂ ಬುಟ್ಟಿಗೆ ಹಾಕಿಕೊಳ್ಳಲೂ ಇದೇ ಸುಸಂದರ್ಭ ಎಂದು ತಿಳಿದು ಶಶಿ ಮೆಲ್ಲನೆ ಪೀಠಿಕೆ ಹಾಕಿದಳು..
ಚಾವಡಿಯಲ್ಲಿ ಕುಳಿತು ಶ್ಯಾಮ ಶಾಸ್ತ್ರಿಗಳು ಕವಳ ಬಾಯಿಗೆ ಜಡಿಯುತ್ತಿದ್ದರು.. ಮಹಾಲಕ್ಷ್ಮಿ ಅಮ್ಮ ಸುಣ್ಣದ ಕರಡಿಗೆಯನ್ನು ಗಂಡನತ್ತ ಒಡ್ಡುತ್ತಿದ್ದರು.."ಆಹಾ...!! ಎಂತಹಾ ಅನುರೂಪ ದಾಂಪತ್ಯ...ಅಪ್ಪ ಅಬ್ಬೆಯದು..ಮಗ.. ವೆಂಕಟ್... ಒಂದು ಫೊಟೋ ಹೊಡಿಯೋ... ಕೈಯಲ್ಲಿ ಮೊಬೈಲ್ ಇದ್ದರೂ ನನಗೆ ಫೊಟೋ ತೆಗೆಯಲೂ ಬರುವುದಿಲ್ಲ...ಮಗನೇ ಬೇಕು ಇದಕ್ಕೆಲ್ಲ..."
"ಹಾಗೇ ಆಗ್ಲೀ.. ಸ್ಮೈಲ್ ಪ್ಲೀಸ್..ಅಜ್ಜ ಅಜ್ಜಿ..."ಎನ್ನುತ್ತಿದ್ದರೆ ಯಾಕಪ್ಪಾ ಈಗ ಫೋಟೋ ಎಲ್ಲ ಎಂದು ಹದಿನೆಂಟರ ಯುವತಿಯಂತೆ ನಾಚಿದರು ಮಹಾಲಕ್ಷ್ಮಿ ಅಮ್ಮ...ಅಮ್ಮ ನೀನೂ ಜೊತೆಗೆ ನಿಲ್ಲು... ಎಂದು ಅಮ್ಮನನ್ನು ನಿಲ್ಲಿಸಿ ಇನ್ನೊಂದು ಫೊಟೋ ಹೊಡೆದ..
ಆಗ ಶಂಕರ ಮಾವ ಬಂದರು.."ಮಾವ ನೀವೂ ನಿಲ್ಲಿ".. ಎಂದಾಗ " ಹೂಂ...ನಂದೂ ಬರ್ಲಿ.." ಎನ್ನುತ್ತಾ ಕಂಬಾಯಿ ಕೆಳಗೆ ಇಳಿಬಿಟ್ಟು ನಿಂತರು... ಶಂಕರ ತೋಟದತ್ತ ಹೆಜ್ಜೆ ಹಾಕಿದ..
ಒಂದೊಳ್ಳೆ ಮೂಡ್ ಕ್ರಿಯೇಟ್ ಮಾಡುವಲ್ಲಿ ಶಶಿ ಯಶಸ್ವಿಯಾದಳು.. "ಅಪ್ಪಾ.. ಅಬ್ಬೆ..ನಿಮ್ಮ ಈ ಅನುರೂಪ ದಾಂಪತ್ಯದ ಗುಣ ನಿಮ್ಮ ಕುಟುಂಬದ ಕುಡಿಗಳಿಗೆ ರಕ್ತಗತವಾಗಿಯೇ ಬಂದಿರುತ್ತದೆ..."
"ಮತ್ತೆ...ಹಿರಿಯರ ರಕ್ತದಲ್ಲೇ ಸಂಸ್ಕಾರ, ಆಚಾರ ವಿಚಾರ ,ಸಂಸ್ಕೃತಿ ಎಲ್ಲವೂ ಹರಿದುಬರುತ್ತದೆ..ಮತ್ತೆ ಸ್ವಲ್ಪ ಹುಟ್ಟಿದ ಮೇಲೆ ಸುತ್ತಲಿನ ಸಮಾಜ ಕಲಿಸುತ್ತದೆ.." ಎಂದರು ಮಹಾಲಕ್ಷ್ಮಿ ಅಮ್ಮ..
"ಇಂತಹ ಪರಂಪರೆಯನ್ನು ಉಳಿಸಿ ಗೌರವವನ್ನು ಕಾಪಾಡಿಕೊಂಡು ಬಂದ ನಿಮ್ಮ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ..."
"ಅದಲ್ಲೇನಿದೆ..ಶಶಿ..ನಮ್ಮ ಹಿರಿಯರು ಹಾಕಿ ಕೊಟ್ಟ ದಾರಿಯಲ್ಲಿ ನಡೆದಿದ್ದೇವೆ..ಮುಂದಿನವರು ಅದನ್ನು ನೋಡಿ ಅನುಸರಿಸಿದ್ದಾರೆ..."ಎಂದ ಶ್ಯಾಮ ಶಾಸ್ತ್ರಿಗಳು..
"ಅಲ್ಲ ಅಪ್ಪ... ಹಿರಿಯರು ಸಂಸ್ಕಾರವಂತರಾಗಿದ್ದರೂ ಕಿರಿಯರು ಅನುಸರಿಸದೆ ಹಾಳು ಅಭ್ಯಾಸಗಳನ್ನು ರೂಢಿಸಿಕೊಳ್ಳುವುದನ್ನು ಕಂಡಿದ್ದೇನೆ..ಈ ಕುಟುಂಬ ಮಾತ್ರ ಈ ವಿಷಯದಲ್ಲಿ ಭಿನ್ನವಾಗಿದೆ.."ಎಂದಾಗ ಶಾಸ್ತ್ರಿಗಳು ಮಗಳ ಮಾತಿಗೆ ಹರುಷದಿಂದ ತಲೆದೂಗಿದರು.
"ಅಪ್ಪಾ...ಇಂತಹ ಪರಂಪರೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.."ಎಂದ ಶಶಿಯ ಮಾತಿಗೆ "ಹೌದಮ್ಮಾ..ನಿಮ್ಮಿಂದಲೇ ಆಗಬೇಕು.." ಎಂದು ಹೂಂ ಗುಟ್ಟಿದರು ಶಾಸ್ತ್ರಿಗಳು..
"... ನನಗೂ ತವರೆಂದರೆ ಬಹಳ ಗೌರವ...ಹೆಮ್ಮೆ..ತವರಿನ ಬಾಂಧವ್ಯವನ್ನು ಮುಂದುವರಿಸಿ ಮನೆತನದ ಸಂಸ್ಕಾರಗಳು ನಶಿಸದಂತೆ ಕಾಪಾಡಿಕೊಳ್ಳುವ ಬಯಕೆ.."
"ಹಾಗೇ ಆಗಲಮ್ಮ.. ಆಗಾಗ ಬರುತ್ತಿರು..ತವರಿನ ಬಾಂಧವ್ಯ ಗಟ್ಟಿಗೊಳ್ಳುತ್ತದೆ" ಎಂದ ಮಹಾಲಕ್ಷ್ಮಿ ಅಮ್ಮ..
"ನಮ್ಮ ದೊಡ್ಡ ಮಗ ಮುರಲಿಗೆ ಇಲ್ಲಿನ ಅಭ್ಯಾಸವೇ ಬಂದಿದೆ..ಅಪ್ಪ, ಭಾಸ್ಕರ,ಶಂಕರನಂತೆ ಅವನಿಗೂ ವಿದ್ಯೆ ಬಹಳ ಚೆನ್ನಾಗಿ ಒಲಿದಿದೆ..ಈಗ ಲಕ್ಷ್ಮಿಯೂ ಒಲಿದಿದ್ದಾಳೆ..
"ಆಗಲಿ..ಅಜ್ಜನ ಮನೆಯ ಅಭ್ಯಾಸ ಬಂದಿರುವುದು ನಮಗೂ ಹೆಮ್ಮೆ.."ಎಂದರು ಶಾಸ್ತ್ರಿಗಳು.
"ಅವನಿಗೆ ಈಗ ಮದುವೆ ಮಾಡುವ ಆಲೋಚನೆಯಲ್ಲಿದ್ದೇವೆ..ಊರೆಲ್ಲ ಸುದ್ದಿ ಹಬ್ಬಿಸುವ ಮೊದಲು ತವರಿನಲ್ಲಿ ಸೆರಗೊಡ್ಡಿ ಹೆಣ್ಣುಕೇಳುವ ಸಂಪ್ರದಾಯ ನಮ್ಮ ಮನೆತನದ್ದು ತಾನೇ.."
"ಹೂಂ..ಹೌದೆನ್ನು...."
"ಹಾಗೇ ನಮ್ಮ ಭಾಸ್ಕರನ ಮಗಳು ಮೈತ್ರಿಗೂ ಇನ್ನು ಸ್ವಲ್ಪ ದಿನಕ್ಕೆ ಓದು ಮುಗಿಯುತ್ತೆ.. ಮೊದಲೇ ಕೇಳಬೇಕೆಂದಿದ್ದೆ ..ಓದು ಮುಗಿಯದೆ ಮದುವೆ ಮಾತುಕತೆ ಬೇಡವೆಂದು ಸುಮ್ಮನಿದ್ವಿ..ಈಗ ಪ್ರಸಕ್ತ ಸಮಯ.."
ಆಲೋಚನೆಯಲ್ಲಿ ಮುಳುಗಿದ ಶಾಸ್ತ್ರಿಗಳು, ಮಹಾಲಕ್ಷ್ಮಿ ಅಮ್ಮ
"ಮುದ್ದಾಗಿ ಬೆಳೆದು ನಿಂತ ತಮ್ಮನ ಮಗಳನ್ನು ಕೇಳದಿದ್ದರೆ ನಮ್ಮದೂ ತಪ್ಪಾಗುತ್ತದೆ..ನಮ್ಮ ಮನೆ ಸಂಪ್ರದಾಯ ಇಲ್ಲಿಯ ಸಂಪ್ರದಾಯ ಬೇರೆಯಲ್ಲ..ಚಿಕ್ಕಂದಿನಿಂದಲೇ ನೋಡಿ ಜೊತೆಗೆ ಆಡಿ ಬೆಳೆದ ಮಕ್ಕಳಾದ್ದರಿಂದ ಹೊಂದಾಣಿಕೆಗೆ ಸಮಸ್ಯೆಯಾಗಲಾರದು .."
ಮೌನವಾದರು ಇಬ್ಬರೂ...
ಮೌನಮುರಿಯುತ್ತಾ ಮುಂದುವರಿಸಿದ ಶಶಿ
"ನಮ್ಮ ಮುರಲಿಯಂತೂ ಕೈತೊಳೆದು ಮುಟ್ಟಬೇಕು .ಅಂತಹ ಬಂಗಾರದಂತಿರುವ ಹುಡುಗಿ..ಯಾವುದರಲ್ಲೂ ಕೊರತೆಯಿಲ್ಲ.. ಅವಳಿಗೆ ತಕ್ಕಂತೆ ಅವನೂ ಓದಿದಾನೆ..ಒಳ್ಳೆಯ ವರಮಾನವಿದೆ.. ನೋಡೋಕೆ ಇಬ್ಬರೂ ಒಂದೇ ರೀತಿ ಬೆಳ್ಳಗಿದ್ದಾರೆ ...ಎತ್ತರವೂ ಹೊಂದಾಣಿಕೆ ಆಗುತ್ತದೆ.."
"ಯಾವುದಕ್ಕೂ ಭಾಸ್ಕರನನ್ನೇ ಕೇಳಬೇಕಮ್ಮ.." ಎಂದರು ಶಾಸ್ತ್ರಿಗಳು..
"ಅವನನ್ನೂ ಕೇಳೋಣ.. ಮೊದಲು ಹಿರಿಯರಲ್ಲಿ ಕೇಳೋದು ಗೌರವ.. ವಯಸ್ಸು ಕೂಡ ಐದು ವರ್ಷಗಳ ಅಂತವಿರುವುದು..ನಮ್ಮ ಮಾವನವರು ಬದುಕಿದ್ದಾಗಲೇ ನಮ್ಮ ಮನೆಯಲ್ಲಿ ಹೇಳುತ್ತಿದ್ದ ಮಾತಿದು ಶಾಸ್ತ್ರಿ ಮನೆತನದಲ್ಲಿ ಬೆಳೆದ ನಿನ್ನ ಗುಣ ಎಷ್ಟು ಒಳ್ಳೇದು ತಾಯೇ..ನಮ್ಮ ಮುರಲಿ ವೆಂಕಟ್ ಒಬ್ಬರಿಗಾದರೂ ಅಲ್ಲಿಂದ ಸಂಬಂಧ ಮಾಡಲೇಬೇಕು..."
"ಏನೋ ಶಶಿ ನಾವೇನೂ ಈ ವಿಷಯದಲ್ಲಿ...
ಹೇಳಲಾರೆವು.."
"ಮಾವ ತೀರಿಹೋಗೋಕೆ ಎರಡು ವಾರ ಮೊದಲು ನನ್ನನ್ನು ಕರೆದು ಹೇಳಿದ್ದರು ...ಮೊನ್ನೆ ರಜೆಯಲ್ಲಿ ಎರಡು ದಿನಕ್ಕೆಂದು ಬಂದಿದ್ದಳಲ್ಲ ನಿನ್ನ ತಮ್ಮನ ಮಗಳು ಅವಳ ಕಾಲ್ಗುಣ ಚೆನ್ನಾಗಿದೆ.. ಅವಳು ಬಂದ ದಿನಾನೇ ಕೊಟ್ಟಿಗೆಯಲ್ಲಿ ದನ ಹೆಣ್ಣು ಕರು ಹಾಕಿದೆ..ಅವಳನ್ನೇ ಮುರಲಿಗೆ ತಂದುಕೊಳ್ಳಿ..ಮನೆಬೆಳಗ್ತಾಳೆ ಆ ಹುಡುಗಿ "ಎಂದು..
"ನೀನು ಭಾಸ್ಕರ ,ಮಂಗಳಮ್ಮನಲ್ಲೇ ಕೇಳುವುದು ಒಳ್ಳೆಯದು.."
"ಅವರಲ್ಲೂ ಕೇಳುತ್ತೇನೆ..ಈಗ ನಿಮ್ಮಲ್ಲಿ ಪ್ರಸ್ತಾಪಿಸಿದೆ... ಅದನ್ನು ಕೇಳಿದ ಮುರಲಿ ಅವಳೇ ನನ್ನ ಹೆಂಡತಿಯಾಗುವವಳು ಎಂದು ನಿರ್ಧಾರ ಮಾಡಿದ್ದಾನೆ..ಮದುವೆ ವಿಷಯ ಬಂದಾಗ ಮಾವನ ಮಗಳು ಮೈತ್ರಿಯೇ ನನ್ನ ಪತ್ನಿ..ಬೇರೆ ಹುಡುಗಿಯನ್ನು ಹುಡುಕುವುದು ಬೇಡಮ್ಮ ಅಂತಾನೆ..."
ಎಂದು ಶಶಿ ತಂದೆತಾಯಿಗೆ ಬೆಣ್ಣೆಮಾತಿನಿಂದ ಮೋಡಿಮಾಡುತ್ತಾಳೆ.
ಒಳಗಿದ್ದ ಮಂಗಳಮ್ಮನಿಗೆ ವಿಷಯ ತಿಳಿಯಲಿಲ್ಲ..ಯಾವುದೋ ಕಾರಣಕ್ಕೆ ರೂಮಿಗೆ ಬಂದ ಗಾಯತ್ರಿ ಕೊನೆಯ ಸಾಲುಗಳನ್ನು ಕೇಳಿಸಿಕೊಂಡು ಅಕ್ಕನಲ್ಲಿ ವರದಿ ಮಾಡುತ್ತಾಳೆ.. ಅದನ್ನು ಕೇಳಿಸಿಕೊಂಡ ಮಂಗಳಮ್ಮನಿಗೆ ಕಿವಿಗೆ ಸೀಸವೆರೆದಂತಾಗುತ್ತದೆ..
"ಏನಂತೆ..ಮರಲಿಗೆ ನನ್ನ ಮಗಳು ಮೈತ್ರಿ ಬೇಕಂತೆಯಾ.. ನಾನು ಇದನ್ನು ಒಪ್ಪಲಾರೆ.. ನಾನೊಬ್ಬಳು ಕಣ್ಣೀರು ಹಾಕಿದ್ದು ಸಾಕು..ನನ್ನ ಮಗಳಿಗೂ ಈ ಕಷ್ಟ ಬೇಡ.. ಅವಳು ಸ್ವಾತಂತ್ರ್ಯ ಇರುವ ಮನೆಯಲ್ಲಿ ಬಾಳಬೇಕು.. ಇವರಿಗೆ ಸಂಸ್ಕಾರವೆಂದರೆ ಸೊಸೆಯಾದವಳು ಬಾಯಿಗೆ ಬೀಗ ಹಾಕಿ ಹೇಳಿದಂತೆ ದುಡಿಯಬೇಕು..ಅದೇ ಸಂಸ್ಕಾರ..ಸೊಸೆಯ ಆಸೆ ಆಕಾಂಕ್ಷೆ ಭಾವನೆಗಳಿಗೆ ಬೆಲೆಯೇ ಇಲ್ಲ.."
"ಹೌದಕ್ಕಾ.. ನೀವು ಇಷ್ಟು ಉಸಿರುಗಟ್ಟಿಸುವ ವಾತಾವರಣದಲ್ಲಿ ಹೇಗೆ ಬದುಕುತ್ತೀರೆಂದು ನನಗೂ ಆಶ್ಚರ್ಯವಾಗುತ್ತದೆ.."
"ಮಡದಿಯ ಮಾತನ್ನು ಕಿವಿಗೆ ಹಾಕಿಕೊಳ್ಳದ ಗಂಡ..ತಂದೆತಾಯಿಯ ಮಾತು ವೇದವಾಕ್ಕ..ಕೆಲಸ ಕಾರ್ಯಗಳು ಅವರ ಮೂಗಿನ ನೇರಕ್ಕೆ ತಕ್ಕಂತೆ ಇರದಿದ್ದರೆ ಕೊಂಕು ಗದರುವಿಕೆ ತಪ್ಪಿದ್ದಲ್ಲ..ಇದನ್ನೆಲ್ಲ ನಾನಿಷ್ಟು ವರ್ಷ ಸಹಿಸಿಕೊಂಡು ಅತ್ತೆ ಮಾವ ಗಂಡನೊಂದಿಗೆ ಬದುಕಿದ್ದೇನೆ ..ಶಶಿಯತ್ತಿಗೆಯೂ ಅದೇ ಅಭ್ಯಾಸದವರು.. ಅವರು ಹೇಳಿದಂತೆ ಆಗದಿದ್ದರೆ ಎಲ್ಲರೆದುರು ಅವಮಾನಿಸಲೂ ಹೇಸುವವರಲ್ಲ.. ಅವರಿಗೆ ನನ್ನಂತೆ ತಗ್ಗಿಬಗ್ಗಿ ನಡೆಯುವ ಸೊಸೆ ಬೇಕೆಂದು ನನ್ನ ಮಗಳ ಮೇಲೆ ಕಣ್ಣು...ನನ್ನ ಮಗಳಿಗೆ ಈ ಕಷ್ಟ ಬೇಡ..."
"ಹೌದಕ್ಕಾ..ಹಳ್ಳಿಯಾದರೂ ಪೇಟೆಯಾದರೂ ನಮ್ಮನ್ನು ಅರ್ಥಮಾಡಿಕೊಳ್ಳದೆ ತಮ್ಮ ಮೂಗಿನ ನೇರಕ್ಕೆ ಸೊಸೆಯಾದವಳು ನಡೆಯಬೇಕೆಂದು ತಾಕೀತು ಮಾಡುವವರ ಮಧ್ಯೆ ಕಷ್ಟವೇ ಬದುಕು.. ನನಗೆ ಅಪರೂಪಕ್ಕೊಮ್ಮೆ ಇಲ್ಲಿಗೆ ಬಂದಾಗಲೇ ಅರಿವಾಗುತ್ತದೆ..ಇನ್ನು ನೀವು ಜೀವನದುದ್ದಕ್ಕೂ ಹೇಗೆ ಸಹಿಸಿದಿರೋ..."
"ನನ್ನದೇನೋ ಆಗುತ್ತೆ ತಂಗೀ..ನಮ್ಮ ಮಕ್ಕಳು ಈ ಕಷ್ಟ ಅನುಭವಿಸಬಾರದು" ಎಂದು ಹೇಳುತ್ತಿರುವಾಗ ಯಾರೋ ಬಂದ ಶಬ್ದವಾಗಿ ಇಬ್ಬರೂ ಮಾತು ಅಡುಗೆಯತ್ತ ಹೊರಳಿಸಿದರು...
ಮಹಾಲಕ್ಷ್ಮಿ ಅಮ್ಮ ಸೊಸೆಯಂದಿರ ಅಡುಗೆ ಎಲ್ಲಿಯತನಕ ಬಂತು ಎಂದು ಪರೀಕ್ಷಿಸಲು ಬಂದರು..
ಶಶಿ ಮನದೊಳಗೆ ಬೀಗುತ್ತಿದ್ದರು..ಅಪ್ಪ ಅಮ್ಮ ಒಪ್ಪಿಯಾರೆಂದು ಅವರ ಮುಖಭಾವ ಹೇಳುತ್ತಿದೆ..ಇನ್ನು ಭಾಸ್ಕರ ನನ್ನು ಒಲಿಸಿಕೊಳ್ಳುವುದೇ ಸ್ವಲ್ಪ ಕಷ್ಟ..ಅದೂ ಸಾಧ್ಯವಾದರೆ ನನ್ನಷ್ಟು ಸುಖಿ ನನ್ನ ಒಡಹುಟ್ಟಿದವರಲ್ಲಿ ಮತ್ತೊಬ್ಬರಿಲ್ಲ..
ತವರಿಂದ ನನ್ನ ಪಾಲಿನ ಆಸ್ತಿ, ಮೈತ್ರಿಯ ಪಾಲಿನ ಆಸ್ತಿ ಸೇರಿ ದೊಡ್ಡ ಪ್ರಮಾಣದಲ್ಲಿ ಸಂಪತ್ತು ನಮ್ಮದಾಗುತ್ತದೆ.. ಇನ್ನು ಭಾಸ್ಕರ ಚಿನ್ನ ಮಗಳಿಗೆ ಧಾರಾಳವಾಗಿಯೇ ಹಾಕುತ್ತಾನೆ.. ಎಷ್ಟಾದರೂ ತಮ್ಮನ ಮಗಳಲ್ಲವೇ..ನನಗೂ ಕಾರ್ಯಕ್ರಮಗಳಿಗೆ ಹೋಗುವಾಗೆಲ್ಲ ಕೊರಳು ತುಂಬಾ ಧರಿಸಬಹುದು.. ಇನ್ನು ಮೈತ್ರಿ ಅವಳಮ್ಮನಂತೆ ಹೇಳಿದಂತೆ ಕೇಳುವವಳು..ಎದುರಾಡುವವಳಲ್ಲ... ನಾನು ಅತ್ತೆಯೆಂದು ಮರ್ಜಿಯಿಂದ ಮೆರೆಯುವುದಕ್ಕೆ ಅಡ್ಡಿಯಿಲ್ಲ...
ಭಾಸ್ಕರ ಮಗಳನ್ನು ನನ್ನ ಮಗನಿಗೆ ಧಾರೆಯೆರೆದು ಕೊಡುವುದಕ್ಕೆ ಒಪ್ಪಿದರೆ .. ಆಹಾ..!! ಕಲ್ಪನಾಲೋಕದಲ್ಲಿ ಕಳೆದುಹೋದಳು ಶಶಿ..
****
ಬಾರಂತಡ್ಕದ ಬಂಗಾರಣ್ಣ ಮಗನನ್ನು ಕರೆದು ಹೇಳಿದ "ಮಗನೇ..ಬಾಳೆಮಲೆ ಜೋಯಿಸರಿಗೆ ಫೋನ್ ಮಾಡಿದ್ದೇನೆ..ಸೋಮವಾರ ಬರುವುದಕ್ಕೆ ಹೇಳಿದ್ದಾರೆ..."
"ಅಪ್ಪಾ..ನನಗೆ ಸೋಮವಾರ ಹೋಗೋದಕ್ಕೆ ಮನಸ್ಸಿಲ್ಲ ಅಪ್ಪಾ..ಒಳ್ಳೆ ಕ್ರಿಕೆಟ್ ಮ್ಯಾಚ್ ಇದೆ ಆ ದಿನ.."
"ಮದುವೆ ಆದ ಮೇಲೆ ಬಹಳಷ್ಟು ಮ್ಯಾಚ್ ಆಡೋದಿದೆ..ಈಗ ಮೊದಲು ಮದುವೆ ಸೆಟ್ಟಾಗ್ಲಿ..."ಎಂದು ಕುಹಕ ನಗೆ ನಕ್ಕರು..
ಅಪ್ಪನ ಮಾತಿಗೆ ತಾನೂ ನಕ್ಕು ಹೂಂಗುಟ್ಟಿದ ಕೇಶವ್..
ಮುಂದುವರಿಯುವುದು....
✍️... ಅನಿತಾ ಜಿ.ಕೆ.ಭಟ್.
17-02-2020.
👏👏
ReplyDeleteಧನ್ಯವಾದಗಳು 💐🙏
ReplyDelete