ಮಂದಹಾಸವು ಮುಖವನ್ನಲಂಕರಿಸಿದರೆ ಅದುವೇ ಮನುಜನಿಗೆ ಆಭರಣ.ಚಿನ್ನದ ಆಭರಣಗಳು ದುಬಾರಿಯಾದ ಈ ಕಾಲದಲ್ಲಿ ನಯಾಪೈಸೆ ಖರ್ಚಿಲ್ಲದೆ ಒದುಗುವ ಮುಗುಳುನಗೆಯೆಂಬ ಆಭರಣವೂ ದುಬಾರಿಯೆನಿಸಿಬಿಟ್ಟಿದೆ.ಕಾರಣ ಮನುಜನ ಮಿದುಳನ್ನು ಕೊರೆಯುವ ಚಿಂತೆ.ಮನದೊಳಗೆ ಮನೆಮಾಡಿದ ಚಿಂತೆಯು ಮನುಷ್ಯನ ವರ್ತನೆಯ ಮೇಲೆ, ಜೀವನ ಶೈಲಿಯ ಮೇಲೆ ತನ್ನದೇ ಆದ ಹಿಡಿತವನ್ನು ಸಾಧಿಸುತ್ತದೆ.ನಮ್ಮ ಹಿಡಿತದಲ್ಲಿ ಮನಸ್ಸು ಇದ್ದರೆ ಇದರಿಂದ ಪಾರಾಗುವುದು ಕಷ್ಟವಲ್ಲ.ಚಿಂತೆಯ ಪಾಶದೊಳಗೆ ನಾವು ಸಿಲುಕಿದರೆ ಹೊರಬರಲು ಒದ್ದಾಡಬೇಕಾಗುತ್ತದೆ.
ಚಿಂತೆ ಎಂಬುದು ಎಳೆಯ ಮಕ್ಕಳಿಂದ ವಯೋವೃದ್ಧರವರೆಗೆ ಯಾರನ್ನು ಬಿಟ್ಟಿಲ್ಲ.ಅದರಲ್ಲೂ ಹೆಣ್ಣುಮಕ್ಕಳು ಇಲ್ಲಸಲ್ಲದ ವಿಷಯಗಳಿಗೆಲ್ಲ ಚಿಂತಿಸುವುದು ತುಸು ಹೆಚ್ಚೇ.ಚಿಂತೆಯ ಬಗ್ಗೆ ಏನು ಬರೆಯೋಣ ಎಂದು ಯೋಚಿಸುತ್ತಿದ್ದಾಗಲೇ ಸಂಧ್ಯಾತ್ತೆ ಫೋನು ಮಾಡಿದ್ರು...
" ನಂಗಂತೂ ತಲೆಚಿಟ್ಟು ಹಿಡಿದು ಹೋಯ್ತು..ಈ ಕೆಲಸದವರ ಆಟದಲ್ಲಿ.. ಅಡಿಕೆ ಕೊಯ್ಯಲು ಇವತ್ತು ಬರುತ್ತೇನೆ ನಾಳೆ ಬರುತ್ತೇನೆ ಎಂದು ಹೇಳಿ ಮುಂದೂಡುತ್ತಿದ್ದಾರೆ.ಅವರು ನಿಘಂಟು ಬರುತ್ತೇನೆ ಅಂದಾಗ ನಂಬಿ ನಾನು ತೆಳ್ಳವು ಬೆಳಗ್ಗೇನೇ ಕಡೆದು ದೋಸೆ ಹೊಯ್ದಿಡುವುದು.. ಅವರು ಬರುವುದೂ ಇಲ್ಲ..ಆ ದೋಸೆಯೆಲ್ಲ ನಂಗೂ ಮಾವನಿಗೂ ತಿಂದು ಮುಗಿಯುವುದೂ ಇಲ್ಲ..ಎಲ್ಲ ಅಕ್ಕಚ್ಚಿಗೆ ಸುರಿಯುವುದು.. ಅಬ್ಬಾ.. ಹೇಳಿ ಪ್ರಯೋಜನವಿಲ್ಲ..
ಈ ವರ್ಷ ರೋಗ ಬಂದು ಅಡಿಕೆಯೇ ಕಡಿಮೆ.ಹೌದು ಮಳೆ ಬರುವ ಮುನ್ನ ಮದ್ದು ಬಿಡಲು ಸೇಸಪ್ಪ ಬಂದರೆ ತಾನೇ..? ಅವನೀಗ ಅಪಾಯಿಂಟ್ಮೆಂಟ್ ತೆಗೆದುಕೊಂಡರೂ ಸಿಗದಷ್ಟು ಬಿಜಿ ಮನುಷ್ಯ..ಸಂಬಳವೋ ಸರಕಾರಿ ನೌಕರನಿಗಿಂತ ಕಡಿಮೆಯಿಲ್ಲ... ಇನ್ನು ಈ ಹಳ್ಳಿಯಲ್ಲಿ ಕೃಷಿ ಮಾಡಿದಂತೆಯೇ...ಮಗ ನವೀನ ಬೆಂಗಳೂರಲ್ಲಿ ಸೆಟ್ಲ್ ಆದ್ದು ಒಳ್ಳೇದೇ ಆಯ್ತು.. ಅದೊಂದು ನೆಮ್ಮದಿ ನಂಗೆ.."ಎಂದು ತನ್ನ ಬೇಗುದಿಯನ್ನು ಹೊರಹಾಕಿದರು ಸಂಧ್ಯಾತ್ತೆ... ವರ್ಷಂಪ್ರತಿ ಕೃಷಿಯ ಕಾರ್ಯಗಳನ್ನು ಶಿಸ್ತಿನಿಂದ ಕಾಲಕಾಲಕ್ಕೆ ಮಾಡಿಕೊಂಡು ಬಂದ ಸಂಧ್ಯಾತ್ತೆಯ ಚಿಂತೆ ಸಕಾರಣವಾದದ್ದೇ. ಹಾಗೆಂದು ಏನು ಮಾಡಲು ಸಾಧ್ಯ..? ವಾಸ್ತವವನ್ನು ಒಪ್ಪಿಕೊಂಡು ಹೊಂದಾಣಿಕೆ ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕಷ್ಟೆ.
ಚಿನಕುರುಳಿಯಂತೆ ಓಡಾಡುತ್ತಾ ಪಟಪಟನೆ ಮಾತನಾಡುತ್ತಿದ್ದ ಶಿಫಾಲಿಗೆ ಮದುವೆಯಾಗಿ ಒಂದು ವರ್ಷವಾಯಿತು.ಈಗ ತಲೆಯ ಮೇಲೆ ಮಣಭಾರ ಹೊತ್ತವರಂತೆ ಆಡುತ್ತಿದ್ದಾಳೆ.."ಏನಾಯ್ತೇ ಮದುಮಗಳೇ..?"
ಅಂದರೆ."ಅದೆಲ್ಲ ಹೇಗೆ ಹೇಳೋದು..?"ಅಂತ ಸಪ್ಪಗಾಗುತ್ತಾಳೆ.. ಕರುಳು ಚುರುಕ್ ಅನ್ನುತ್ತೆ ಅವಳನ್ನು ನೋಡಿದರೆ.. ಅಂತೂ ಯಾರೂ ಇಲ್ಲದಾಗ ತನ್ನ ನೋವ ಬಿಚ್ಚಿಟ್ಟಳು.." ತಾನು ಮಾಡಿದ ಕೆಲಸದಲ್ಲೆಲ್ಲ ತಪ್ಪು ಹುಡುಕುವ ಅತ್ತೆ..ಅಷ್ಟೇ ಏಕೆ ಮಗನಿಗೆ ಚಾಡಿ ಹೇಳಿಕೊಟ್ಟು ಸೊಸೆಯನ್ನು ಗದರುವಂತೆ ಕುಮ್ಮಕ್ಕು ನೀಡುವ ಕೀಳುಬುದ್ಧಿ..ಸೊಸೆ ತನಗಿಷ್ಟದ ಪಾನೀಯ ಕುಡಿಯಲು ಹೊರಟರೆ.. ಊಹೂಂ.. ಮನೆಯಲ್ಲಿ ಎಲ್ಲರೂ ಕುಡಿಯುತ್ತಿರುವ ಕಾಫಿಯನ್ನೇ ನೀನೂ ಕುಡಿಯಬೇಕೆಂಬ ತಾಕೀತು.. ನೀನು ಕುಡಿಯುವ ಪಾನೀಯಕ್ಕೆ ಇಷ್ಟು ಖರ್ಚಾಯಿತೆಂದು ಲೆಕ್ಕಾಚಾರ..!! ಸೊಸೆ ಯಾವುದಕ್ಕೂ ಮಾತಾಡುವಂತಿಲ್ಲ. ಮಾತನಾಡಿದರೆ ತಿರುಗಿ ಚುಚ್ಚುಮಾತು..ಮೊಂಡುವಾದ... ಗಂಡನಿಗೆ ಹೇಳಿದರೆ ಒಪ್ಪಲಾರದ ಮನಸ್ಥಿತಿ. ತಂದೆತಾಯಿಯೇ ಸರಿ.
ಅವರೇ ಹೆಚ್ಚು..ಎಂಬ ಭಾವ.." ತನ್ನ ಚಿಂತೆಗಳಿಗೆ ಮೂಲಕಾರಣವನ್ನು ಬಾಯ್ಬಿಟ್ಟು ಮನಸು ಹಗುರಮಾಡಿಕೊಂಡ ಶಿಫಾಲಿ.
ಇಂತಹ ಚಿಂತೆಗಳಿಂದ ಮುಕ್ತಿ ಇದೆಯಾ..? ಖಂಡಿತಾ ಇದರಿಂದ ಹೊರಬರುವ ದಾರಿ ಅವರವರೇ ಯೋಚಿಸಬೇಕು. ಕುಟುಂಬದೊಳಗಿನ ಸಣ್ಣಪುಟ್ಟ ಮತ್ಸರಗಳಿಗೆಲ್ಲ ಅಲಕ್ಷ್ಯವೇ ದಿವ್ಯೌಷಧಿ.ಚುಚ್ಚುಮಾತಿಗೆ ಪ್ರತಿಯಾಗಿ ನಾವೂ ಚುಚ್ಚಿ ಮಾತನಾಡಿದರೆ ನಮ್ಮ ಮನಸ್ಸಿಗೆ ನಾವೇ ಘಾಸಿ ಮಾಡಿದಂತೆ.ಮಾತಿಗೆ ಮಾತು ಅಶಾಂತಿಗೆ ಹೇತು.ನಕ್ಕು ಸುಮ್ಮನಾಗಿ..ಇದುವೇ ನನ್ನ ಜೀವನ ಶೈಲಿ ಎಂದು ಆತ್ಮವಿಶ್ವಾಸದಿಂದ ಬದುಕಲು ಕಲಿಯುವುದು ನಮ್ಮ ಪ್ರಯತ್ನವಾಗಬೇಕು.
ಒಂದನೇ ತರಗತಿಯ ಪುಟಾಣಿ ರಂಜನ್ ನನ್ನು ಮಾತಿಗೆಳೆದರೆ ಅವನಿಗೂ ಭಾರೀ ಚಿಂತೆ ಇದಾವಂತೆ.. "ಏನು ಪುಟ್ಟಾ ನಿನ್ನ ಚಿಂತೆ..?" ಅಂದರೆ.." ನನ್ನ ಕ್ಲಾಸ್ ಮೇಟ್ ಗಳನ್ನೆಲ್ಲ ಅವರ ಅಪ್ಪ ದಿನಾ ಶಾಲೆಗೆ ಬಿಡ್ತಾರೆ.. ಆದ್ರೆ ನನ್ನಪ್ಪ ಮಾತ್ರ ನಂಗಾಗಲ್ಲ ಅಂತಾರೆ.. ಸ್ಕೂಲ್ ಬಸ್ಸಲ್ಲೇ ಹೋಗು ಅಂತಾರೆ.. ಇನ್ನು ಡಿಕ್ಟೇಷನ್ ನಲ್ಲಿ ಫುಲ್ ಮಾರ್ಕೇ ಬರಬೇಕು ಅಂತಾರೆ ಅಮ್ಮ..ಪೋಯಂ ಬೈಹಾರ್ಟ್ ಬರ್ಲಿಲ್ಲಾಂದ್ರೆ ನೆಲದಲ್ಲಿ ಕೂತ್ಕೊಂಡು ಕಲಿ ಅಂತಾರೆ.. ಮಿಸ್ಸು...ಲಂಚ್ ಪೂರ್ತಿ ಖಾಲಿ ಮಾಡಿಲ್ಲಾಂದ್ರೆ ಗೇಮ್ಸ್ ಗೆ ಬಿಡಲ್ಲಾಂತಾರೆ... ಆಯಾ...ಸಂಜೆ ಸ್ವಲ್ಪ ಹೊತ್ತು ಆಡ್ತೀನಿ ಅಂದ್ರೆ.. ಹೋಂವರ್ಕ್ ಮಾಡಲು ಬಾ ಅಂತಾರೆ ಅಮ್ಮ... ಹೇಳಿ ಆಂಟಿ ಇದೆಲ್ಲಾ ಸರೀನಾ.?." ಹೀಗೆ ಅಂದ ಅವನನ್ನು ಸಮಾಧಾನಪಡಿಸೋಕೆ ನನ್ನ ಬುದ್ಧಿಯನೆಲ್ಲ ಉಪಯೋಗಿಸಬೇಕಾಯಿತು. ಪೋಷಕರ ದೃಷ್ಟಿ ಮಗು ಮುಂದೆ ಏನಾದರೂ ಸಾಧಿಸಬೇಕೆಂಬುದು . ಆದರೆ ಅದುವೇ ಅತಿಯಾದ ಹೇರಿಕೆಯೆಂದು ಮಗುವಿಗನಿಸುತ್ತದೆ.ಮಗು ಖುಷಿಯಿಂದ ಅದರಿಷ್ಟದಂತೆ ಇರಲು ದಿನದಲ್ಲಿ ಸ್ವಲ್ಪ ಹೊತ್ತಾದರೂ ಬಿಟ್ಟರೆ ಮಗುವಿನ ಮುಗ್ಧಮನಸ್ಸು ನರಳದೆ ಅರಳೀತು..
ವಯಸ್ಸಾದ ಶಿವರಾಯರಿಗಂತೂ "ಎದ್ದರೆ ಕೂರೋಕಾಗಲ್ಲ ಕೂತರೆ ಏಳೋಕಾಗಲ್ಲ..ಟಿವಿ ನೋಡೋಣ ಎಂದರೆ ಸರಿಕಾಣಿಸಲ್ಲ..ರೇಡಿಯೋ ಕೇಳೋಣವೆಂದರೆ ಕೇಳಿಸಲ್ಲ...ಮಲಗಿದರೆ ನಿದ್ದೆಯೂ ಬರುವುದಿಲ್ಲ.. ವಾಕ್ ಮಾಡುವುದಕ್ಕೆ ಜೊತೆಗೆ ಯಾರಾದರೂ ಬೇಕು.ಎಲ್ಲರೂ ಅವರವರ ಕಾರ್ಯದಲ್ಲಿ ಒತ್ತಡದಲ್ಲಿ ಮುಳುಗಿರುತ್ತಾರೆ. ಯಾರೂ ಸಿಗುವುದಿಲ್ಲ.ಹೋಗಲಿ ಫಾರಿನ್ ನಲ್ಲಿರುವ ಮಗಳಲ್ಲಿ ಬಾಯ್ತುಂಬಾ ಹರಟಿ ಸಮಾಧಾನಪಟ್ಟುಕೊಳ್ಳುತ್ತೇನೆಂದರೆ ಅವಳು ಮಾತನಾಡುವುದೇ ವಾರಕ್ಕೋ ಹದಿನೈದು ದಿನಕ್ಕೊಮ್ಮೆ.ಐದಾರು ನಿಮಿಷ ಮಾತನಾಡಿ ನಂಗೆ ಕೆಲಸ ಇದೆ ಎಂದು ಫೋನಿಡುವ ಧಾವಂತ.ಮಕ್ಕಳು ,ಮನೆ ,ಉದ್ಯೋಗ ಎಂದೆಲ್ಲ ನಿಭಾಯಿಸುವ ಅವಳಿಗೆ ಬಿಡುವೆಲ್ಲಿದೆ..?ಮಗಳು ಕಲೀಬೇಕು ,ಉದ್ಯೋಗದಲ್ಲಿರಬೇಕು, ವಿದೇಶದಲ್ಲಿ ನೆಲೆಸಬೇಕು ಎಂದು ಕನಸು ಕಂಡದ್ದು ನನ್ನದೇ ತಪ್ಪು ಎಂಬ ಚಿಂತೆಯೂ ಆವರಿಸಿದೆ.."ಎಂದು ಕಣ್ಣು ತೇವ ಮಾಡಿಕೊಳ್ಳುತ್ತಾರೆ..
ಹೀಗೆ ಎಲ್ಲ ವಯೋಮಾನದವರಿಗೂ ಅವರದೇ ಆದ ಖುಷಿಯ,ಹೊಂದಾಣಿಕೆಯ ಚೌಕಟ್ಟು ಇರುತ್ತದೆ.ಅದನ್ನು ಮೀರಿದಾಗ ಉಂಟಾಗುವುದೇ ಚಿಂತೆ. ಈ ಚಿಂತೆಯನ್ನು ಹತೋಟಿಯಲ್ಲಿಡುವುದು ಹೇಗೆ..
* ಪ್ರತಿದಿನ ನಮ್ಮ ಸುತ್ತಮುತ್ತಲಿನ ಜನರೊಂದಿಗೆ ಬೆರೆಯುವಾಗ ಮಾತಿನಲ್ಲಿ ನಿಗಾವಿರಲಿ.ನಮ್ಮ ಮಾತು ಇತರರನ್ನು ನೋಯಿಸದಂತಿರಲಿ. ಬೇರೆಯವರ ಮಾತು ಘಾಸಿಮಾಡಿದರೆ ಅದನ್ನು ಆಗಿಂದಾಗ್ಗೆ ಮನಸಿನಿಂದ ಹೊರದೂಡಿ.
* ಸಂಬಂಧಗಳಿಂದ ಕಿರಿಕಿರಿ ಅನುಭವಿಸುತ್ತಿದ್ದರೆ ಕೌಟುಂಬಿಕ ಸಂಬಂಧಗಳಿಂದ ಪೂರ್ಣವಾಗಿ ಹೊರಬರಲು ಸಾಧ್ಯವಿಲ್ಲ ಎಂದು ಅರಿವಿರಲಿ.ಕೆಟ್ಟವರನ್ನು ಮಣಿಸಲು ನಾವು ಕೆಟ್ಟವರಾಗುವುದಕ್ಕಿಂತ ನಾವು ನಮ್ಮದೇ ಆದ ಸತ್ಯದ ಪಥವನ್ನು ಆಯ್ದು ನಡೆದು ಇತರರಿಗೆ,ನಮ್ಮ ಮಕ್ಕಳಿಗೆ ಆದರ್ಶವಾಗಿರುವುದು ಲೇಸು.
*ನಮ್ಮ ಕರ್ತವ್ಯ ಜವಾಬ್ದಾರಿಗಳನ್ನು ಸಮಯಕ್ಕೆ ಸರಿಯಾಗಿ ನಿಭಾಯಿಸುವುದನ್ನು ರೂಢಿಸಿಕೊಳ್ಳಬೇಕು.ನಾಳೆಯ ಯೋಜನೆಯನ್ನು ಇಂದೇ ಹಾಕಿಕೊಂಡರೆ , ಹಣಕಾಸಿನ ವಿಷಯದಲ್ಲಿ ಕೆಲವೊಂದು ನಿಬಂಧನೆಗಳನ್ನು ವಿಧಿಸಿಕೊಂಡರೆ ಚಿಂತೆರಹಿತ ಜೀವನವನ್ನು ರೂಪಿಸಿಕೊಳ್ಳಬಹುದು.
*ನಮ್ಮನ್ನು ಕಾಡುತ್ತಿರುವ ವ್ಯಾಕುಲತೆಗಳೆಲ್ಲವೂ ಇನ್ನೊಬ್ಬರಲ್ಲಿ ಹೇಳಿದ ಮಾತ್ರಕ್ಕೆ ಕಡಿಮೆಯಾಗುವಂತಹವಲ್ಲ.ಬದಲಾಗಿ ಇನ್ನೊಬ್ಬರ ದೃಷ್ಟಿಯಲ್ಲಿ ನಾವು ಕೀಳಾಗಬಹುದು ಅಥವಾ ನಮ್ಮ ಆಂತರಿಕ ವಿಷಯಗಳು ಬಾಯಿಯಿಂದ ಬಾಯಿಗೆ ಸುದ್ದಿ ಹಬ್ಬಿಸುವವರಿಗೆ ಆಹಾರವಾಗಬಹುದು.ಆದಷ್ಟು ನಮ್ಮ ಚಿಂತಗಳಿಗೆ ನಾವೇ ಪರಿಹಾರವನ್ನು ಕಂಡುಕೊಳ್ಳಬೇಕು.ಸ್ವಲ್ಪ ಸಮಯ ಆ ಸಂಗತಿಯನ್ನು ಯೋಚಿಸದೆ ಯಾರಲ್ಲೂ ಹಂಚಿಕೊಳ್ಳದೇ ಇದ್ದಲ್ಲಿ ತನ್ನಿಂತಾನೇ ಮರೆತುಹೋಗಬಹುದು.ಹೇಳಿದಾಗಲೇ ಹಗುರವಾಗುವುದೆಂದಾರೆ ವಿಶ್ವಾಸಾರ್ಹ ವ್ಯಕ್ತಿಗಳಲ್ಲಿ ಮಾತ್ರ ಹಂಚಿಕೊಳ್ಳಿ.
*ನೋಯಿಸಿದವರನ್ನು ಕ್ಷಮಿಸುವ ಉದಾರ ಗುಣ ನಮ್ಮಲ್ಲಿ ಬೆಳೆಸಿಕೊಳ್ಳಬೇಕು.ನಮ್ಮ ಕರ್ತವ್ಯದಲ್ಲಿ ಏಕಾಗ್ರತೆಯಿರಬೇಕು.ಇತರರಿಗೆ ಎಲ್ಲಾ ವಿಷಯದಲ್ಲೂ ಮೂಗುತೂರಿಸಲು ಅವಕಾಶ ಕೊಡಬಾರದು.ನಾವೂ ಇತರರ ಜೀವನವದತ್ತ ಕುತೂಹಲದಿಂದ ಇಣುಕುವ ಅಭ್ಯಾಸ ಇಟ್ಟುಕೊಳ್ಳಬಾರದು.
*ಚಿಂತೆ ತಾನಾಗಿಯೇ ಬಂದಿರುವುದಿಲ್ಲ.ನಮ್ಮ ಅತಿಯಾದ ಬಯಕೆ ,ನಿರೀಕ್ಷೆಗಳಿಂದ ನಾವೇ ಮೈಮೇಲೆಳೆದುಕೊಂಡಿರುತ್ತೇವೆ.ನಮ್ಮಿಂದ ಉನ್ನತ ಸ್ತರದಲ್ಲಿರುವವರನ್ನು ನೋಡಿ ಕೊರಗುವುದಕ್ಕಿಂತ ; ನಮಗಿಂತ ಕಷ್ಟದಲ್ಲಿರುವವರನ್ನು ನೋಡಿ ನಮ್ಮ ಸ್ಥಿತಿಗತಿಗೆ ನಾವೇ ತೃಪ್ತಿ ಪಟ್ಟುಕೊಳ್ಳುವ ಸ್ವಭಾವವನ್ನು ರೂಢಿಸಿಕೊಳ್ಳಬೇಕು.
*ಇಂದಿನಿಂದ ನಾಳೆಗೆ ಎಲ್ಲವೂ ಬದಲಾಗಲು ಸಾಧ್ಯವಿಲ್ಲ.ಅದರಂತೆಯೇ ನಮ್ಮ ಚಿಂತನಾಶೈಲಿಯೂ ಕೂಡ.ಅದಕ್ಕಾಗಿ ನಿತ್ಯ ನಿರಂತರವಾದ ಧನಾತ್ಮಕ ಚಿಂತನೆಗೆ ನಮ್ಮ ಸನಾತನ ಸಂಸ್ಕೃತಿಯಲ್ಲಿ ಬಂದಂತಹ ಯೋಗಾಸನ ,ಪ್ರಾಣಾಯಾಮ ,ಧ್ಯಾನ , ಆಧ್ಯಾತ್ಮಿಕ ಚಿಂತನೆಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು.
*ದಿನಕ್ಕೆ ಎರಡು ಲೀಟರ್ ನೀರು ಕುಡಿಯಿರಿ.ಆರೋಗ್ಯಕರ ಪಾನೀಯಗಳನ್ನು ಸೇವಿಸಿರಿ.ದಿನಕ್ಕೆ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರಿಸಿ.ನಿದ್ರಿಸುವ ಮುನ್ನ ಮನಸ್ಸು ಪ್ರಶಾಂತವಾಗಿರಲಿ.ಬೇಡದ ಆಲೋಚನೆಗಳಿಗೆ ಆ ಹೊತ್ತಿನಲ್ಲಿ ಮನಸ್ಸಿನಲ್ಲಿ ಜಾಗ ಕೊಡಬೇಡಿ.ಸುಖನಿದ್ರೆ ಚಿಂತೆಯನ್ನು ಕಡಿಮೆಮಾಡುತ್ತದೆ.
*ಸಂಗಾತಿಯ ಮನಸ್ಸನ್ನು ಅರ್ಥ ಮಾಡಿಕೊಂಡು ವಿಶ್ವಾಸವನ್ನು ಗಳಿಸಿ.ಎಲ್ಲಾ ನೋವನ್ನು ಮರೆಸುವ ಶಕ್ತಿ ಸಂಗಾತಿಯ ಒಡನಾಟದಲ್ಲಿದೆ. ಮನಸ್ಸನ್ನು ಉಲ್ಲಾಸಗೊಳಿಸಬಲ್ಲಂತಹ ಕೀಟಲೆ,ಲಘುಹಾಸ್ಯ, ಪ್ರಶಂಸೆ ವ್ಯಕ್ತಪಡಿಸುವ ಗುಣವನ್ನು ವೃದ್ಧಿಸಿಕೊಂಡು ಒಬ್ಬರಿಗೊಬ್ಬರು ಸ್ಫೂರ್ತಿಯಾಗಿ.
* ಮಕ್ಕಳಿಗೆ ಅತಿಯಾಗಿ ಒತ್ತಡವನ್ನು ಹೇರಿದರೆ ಅವರ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಅವರ ವಯಸ್ಸಿನಲ್ಲಿ ನಾವು ಹೇಗಿದ್ದೆವು ಎಂದು ಕಲ್ಪಿಸಿಕೊಂಡು ಅವರೊಂದಿಗೆ ವ್ಯವಹರಿಸಿ.ಒಳ್ಳೆಯ ಶಿಸ್ತು,ಓದು, ನೌಕರಿ ..ಇಷ್ಟೇ ಬೇಕಾಗಿರುವುದು ಅಲ್ಲ.. ಮಾನಸಿಕವಾಗಿ ದೈಹಿಕವಾಗಿ ಸಧೃಡವಾಗಿರುವುದು ಎಲ್ಲಕ್ಕಿಂತ ಮುಖ್ಯ.. ಅದಕ್ಕಾಗಿ ಎಳವೆಯಿಂದಲೇ ಹೆತ್ತವರ ಶ್ರಮ ಅಗತ್ಯ.ಬೇಡದ ಹುಳುಕುಗಳನ್ನು ಮಕ್ಕಳಲ್ಲಿ ತುಂಬುವುದಾಗಲಿ,ಅವರೆದುರು ಮಾತನಾಡುವುದಾಗಲಿ ಮಾಡಬಾರದು. ಯಾರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸದಿರಿ.ತಪ್ಪಿದಲ್ಲಿ ಎಳವೆಯಿಂದಲೇ ದ್ವೇಷ ಭಾವನೆ ಮೂಡಿ ವಯಸ್ಸಾದಂತೆ ಬಲು ಬೇಗನೆ ಚಿಂತೆಗೀಡಾಗುವ ಪ್ರವೃತ್ತಿ ಬೆಳೆಯಬಹುದು..
* ದಿನದಿನದ ಚಿಕ್ಕ ಚಿಕ್ಕ ಸಂತಸವನ್ನೂ ಅನುಭವಿಸಿ.ಕುಟುಂಬದೊಂದಿಗೆ ಆನಂದಿಸಿ.ಕೈಗೆಟುಕದ ಬಯಕೆಗೆ ಚಿಂತಿಸುವ ಬದಲು ಅಂಗೈಯಲ್ಲಿರುವ ಸುಖವನ್ನು ಒಪ್ಪಿಕೊಂಡು ಅಪ್ಪಿಕೊಳ್ಳಿ.
* ವಿಪರೀತ ಚಿಂತೆ ಕಾಡುತ್ತಿದೆ,ಯಾರಲ್ಲಾದರೂ ಕ್ರೋಧ , ಅಳು ಉಕ್ಕಿಬರುತ್ತಿದೆಯೆಂದಾದರೆ ... ಕೂಡಲೇ ಶೈತ್ಯೀಕರಿಸಿದ ನೀರು ಲಭ್ಯವಿದ್ದರೆ ಕುಡಿಯಿರಿ.ಇಲ್ಲವೆಂದಾದರೆ ನಿಮಗೆ ಸುಖಕರವೆನಿಸಿದಲ್ಲಿ ಕುಳಿತುಕೊಳ್ಳಿ.ಬೆನ್ನು ,ತಲೆ, ದೃಷ್ಟಿ ನೇರವಾಗಿ ಇರಲಿ.ತೊಡೆಯ ಮೇಲೆ ಎರಡೂ ಅಂಗೈಗಳನ್ನು ನೇರವಾಗಿ ಇರಿಸಿ .ಅಂದರೆ ಅಂಗೈಗಳು ಮೇಲ್ಮುಖವಾಗಿರಲಿ.ದೀರ್ಘವಾಗಿ ಉಸಿರು ತೆಗೆದುಕೊಂಡು ನಿಧಾನವಾಗಿ ಬಿಡಿ.ಹೀಗೆ ಐದು ನಿಮಿಷಗಳ ಕಾಲ ಮಾಡಿ.ಮನಸಿನ ಚಿಂತೆ,ಕ್ರೋಧ,ನಿಸ್ಸಹಾಯಕತೆ ಮಾಯವಾಗಿ ಮನಸು ಶಾಂತವಾಗುತ್ತದೆ.ದೇಹ ಹಗುರವಾಗುತ್ತದೆ.
*ನಮ್ಮ ಹಿರಿಯರಿರಲಿ ಕಿರಿಯರಿರಲಿ ..ಅವರನ್ನು ಗೌರವಿಸುವ ಮನೋಭಾವ ನಮ್ಮಲ್ಲಿರಲಿ.ಯಾರೂ ಮೇಲಲ್ಲ..ಕೀಳಲ್ಲ..ಎಲ್ಲರಿಗೂ ಅವರದೇ ಆದ ವ್ಯಕ್ತಿತ್ವ ಇರುತ್ತದೆ ಎಂಬುದನ್ನು ಒಪ್ಪಿಕೊಳ್ಳಲು ಸಿದ್ಧವಿರಬೇಕು.
*ನಾನು ನನ್ನದು ಎಂಬ ಚಿಂತನೆಯ ಬದಲು ನಾವು ನಮ್ಮದು ಎಂಬ ಸದ್ಭಾವನೆ ಮೈಗೂಡಿಸಿಕೊಳ್ಳಬೇಕು..
ಎಲ್ಲ ಚಿಂತೆಗಳಿಗೂ ಮನಸ್ಸೇ ಮೂಲ.ಮನಸ್ಸನ್ನು ನಮ್ಮ ಬುದ್ಧಿಯ ಅಂಕೆಯಲ್ಲಿಟ್ಟು ಆಗಾಗ ಎಚ್ಚರಿಸುವ ಕಾರ್ಯ ನಮ್ಮಿಂದಲೇ ಆಗಬೇಕು.ಸದೃಢವಾದ ಮನಸ್ಸು ಸ್ವಾಸ್ಥ್ಯ ಪೂರ್ಣ ಜೀವನಕ್ಕೆ ರಹದಾರಿ.
ಚಿಂತೆ ಮರೆತು ನಗುತಿರು ಕಾಂತೆ
ಸಂತೆ ಒಳಗೂ ಸುಖನಿದಿರೆ ಬರುವಂತೆ|
ನಾ ಕಾಯ್ವೆ ಮೊಗದಲಿ ನಗು ಅರಳುವಂತೆ
ಜೋಪಾನಮಾಡುವೆ ಬಾಂಧವ್ಯ ನರಳದಂತೆ||
✍️... ಅನಿತಾ ಜಿ.ಕೆ.ಭಟ್.
29-02-2020.
Momspresso Kannada ದಲ್ಲಿ ಪ್ರಕಟಿತ ಲೇಖನ.
No comments:
Post a Comment