Friday, 14 February 2020

ಜೀವನ ಮೈತ್ರಿ-ಭಾಗ ೧೮(18)





     "  ಮಹೇಶ್... ಇಶಾ ಅಂದ್ರೆ ನನ್ನ ಕ್ಲೋಸ್ ಫ್ರೆಂಡ್ ಕಣೋ... ಅವಳು ಲವ್ ಮಾಡ್ತಿದ್ಳು.. ಮನೆಯವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಭಯವಿತ್ತು ಅವಳಿಗೆ..ಈಗ ಒಪ್ಪಿಕೊಂಡಿದ್ದಾರಂತೆ...ಸೋ.. ಖುಷಿಯನ್ನು ನನ್ನ ಜೊತೆ ಹಂಚಿಕೊಳ್ಳದೆ ಇರುತ್ತಾಳೆಯೇ..."

"ಸರಿ.. ಅಕ್ಕಾ... ನಾನಿನ್ನು ಬರ್ತೀನಿ... ಬಾಯ್.."

ಎಂದು ಹೇಳಿ ಹೊರಟ ಮಹೇಶ್.. ಮೈತ್ರಿ ತಾನು ತಮ್ಮನಲ್ಲಿ ಸತ್ಯ ಹೇಳಲು ಆಗದೆ ಸುಳ್ಳು ಹೇಳಿ ಚಡಪಡಿಸುತ್ತಿದ್ದಳು.ಅವಳ ಮನಸ್ಸು.. "ಮೈತ್ರಿ ಇಷ್ಟು ಸುಳ್ಳು ಹೇಳ್ಬಾರ್ದು ಕಣೇ.." ಅಂತ ಎಚ್ಚರಿಸುತ್ತಿತ್ತು.

ಕಾಲೇಜು ಬಸ್ಸನ್ನೇರಿದ ಮೈತ್ರಿ ಕಿಶನ್ ಗೆ ಸಂದೇಶ ಕಳುಹಿಸಿದಳು..
"ಹಾಯ್... ನೀವು ನಮ್ಮನೆ ಕಡೆ ಯಾವಾಗ ಬರ್ತೀರಾ ಅಂತ ಕಾಯ್ತಾ ಇದೀನಿ..."
"ಆಗ್ಲೇ.. ನೀವು ಅನ್ನೋದೆಲ್ಲ ಶುರುಮಾಡ್ದ್ಯಾ..ಮುದ್ಗೊಂಬೆ...."
"ಅದು... ಅದು..."
"ಗೊತ್ತು..ಪತಿಪರಮೇಶ್ವರ ಅನ್ನಿಸಿಕೊಳ್ಳುವವನನ್ನು ಏಕವಚನದಲ್ಲಿ ಹೇಳ್ಬಾರ್ದು ಅಂತ ಅಜ್ಜಿ ಹೇಳ್ಕೊಟ್ಟಿದಾರೆ...."

"ಅಯ್ಯೋ..ಹಾಗಲ್ಲ ಕಿಶನ್... ನೀವು ಅಂದ್ರೆ ನೀನು,ನಿನ್ನಪ್ಪ ಮತ್ತೆ ಯಾರನ್ನೆಲ್ಲಾ ಕರ್ಕೊಂಡು ಬರ್ತೀಯೋ...ಅವರೆಲ್ಲ.."

".. ಅಡ್ಡಿಯಿಲ್ಲ.. ಈಗ್ಲೇ ಯಾರೆಲ್ಲ ಬರಬಹುದು ಅಂತ ಯೋಚಿಸ್ತಿದೀಯಾ ..."

"ಹೌದು... ಆಮೇಲೆ ನಮ್ಮನೆಯವರ ಜತೆ ನಾನು ಲವ್ ಮಾಡಿದ್ದು ಅನ್ಬಾರ್ದು...."

"ಇದು ಮಾತ್ರ.. ಬರೀ ಮೋಸ..."

"ಪ್ಲೀಸ್.. ಕಿಶನ್... ಮದುವೆ ಆದ್ಮೇಲೆ ನೀ ಹೇಳ್ದಂಗೆ ಕೇಳ್ತೀನಿ... ಪ್ಲೀಸ್ ನಾನು ಲವ್ ಮಾಡಿದ್ದು ಅನ್ಬಾರ್ದು..."

"ಲವ್ ಮಾಡೋದೆಲ್ಲ ಮಾಡ್ಬಿಟ್ಟು ..ಈಗ ಹೇಳ್ಬಾರ್ದಂತೆ...ಹ್ಹ ಹ್ಹಾ ಹ್ಹಾ... ಅಡ್ಡಿಯಿಲ್ಲ ನೀನು..ನಾನೊಬ್ನೇ ಲವ್ ಮಾಡಿದ್ದು ಅಂದ್ರೆ..ನಮ್ಮ ಹುಡುಗಿಯನ್ನು ಬೇರೆಯವರಿಗೆ ಕೋಡ್ತೀವಿ ... ನಿಂಗೆ ಕೊಡಲ್ಲ ಅಂದ್ರೆ ಏನ್ಮಾಡ್ತೀಯಾ..."

"........."ಸುಮ್ಮನಾದಳು ಮೈತ್ರಿ...ಏನೇ ಆದರೂ ನಾನು ಮನೆಯವರ ಕೈಲಿ ಸಿಕ್ಕಿಹಾಕಿಕೊಳ್ಳಬೇಕಾಗುತ್ತೆ ಎಂದು ಆತಂಕ ಮೂಡಿ ಬಾಯ್ ಎಂದು ಹೇಳಿ ಮೊಬೈಲ್ ಆಫ್ ಮಾಡಿ ಯೋಚನೆಯಲ್ಲಿ ಮುಳುಗಿದಳು.


                      *****

ಮನೆಯಲ್ಲಿ ಶಂಕರನ ಕುಟುಂಬ ಬಂದ ಸಂಭ್ರಮ.ಮಂಗಳಮ್ಮ ಗಾಯತ್ರಿ ಇಬ್ಬರೂ ಜೊತೆಯಾಗಿ ಹರಟುತ್ತಾ ಕೆಲಸ ಮಾಡುತ್ತಿದ್ದರು.ಮಹಾಲಕ್ಷ್ಮಿ ಅಮ್ಮ  ಮಗ ಬರುತ್ತಾನೆಂದು ಮಾಡಿಟ್ಟಿದ್ದ ಹಪ್ಪಳ,ಮಾಂಬಳ ಎಲ್ಲ ಸೊಸೆಗೆ ತೋರಿಸುತ್ತಿದ್ದರು..
"ಅತ್ತೆ.. ನೀವು ಈ ವಯಸ್ಸಲ್ಲೂ  ಎಷ್ಟು ಕಷ್ಟಪಡ್ತಿದೀರಿ ನಾವು ಬರುತ್ತೇವೆಂದು... ಇಷ್ಟೆಲ್ಲಾ ಮಾಡಬೇಕೆಂದಿರಲಿಲ್ಲ .."

"ಕಷ್ಟ ಏನಿಲ್ಲ ಗಾಯತ್ರಿ..ಎಲ್ಲ ನಿನ್ನಕ್ಕ ಸಹಕರಿಸೋದ್ರಿಂದ ಆಗುತ್ತದೆ.."

"ಹೌದು ಅತ್ತೆ...ಅಕ್ಕನೂ ನೀವು ಇವತ್ತು ಸ್ವಲ್ಪ ಆರಾಮಾಗಿರಿ.. ನಾನು ಕೆಲಸ ಮಾಡ್ತೀನಿ.."

"ಎಲ್ಲಾ ಸೇರಿ ಮಾಡೋಣ.. ಆಗಲೇ ಮಜಾ ಇರೋದು..."

   ಅಡುಗೆ ಮನೆ ಕಳೆಗಟ್ಟಿತು..ಮೂವರೂ ಸೇರಿ ಪಾಕ ವೈವಿಧ್ಯ ಗಳನ್ನು ತಯಾರಿಸಿದರು.. ಗಾಯತ್ರಿ ತಾನು ಪೇಟೆ ಮನೆಯಲ್ಲಿ ಯಾವತ್ತೂ ಮಾಡುತ್ತಿದ್ದ ಚಪಾತಿ ,ವೆಜಿಟೇಬಲ್ ಕೂರ್ಮ ತಯಾರಿಸಿದರು..ಮಸಾಲೆಯೂ ಬರುವಾಗ ಸ್ವಲ್ಪ ತಂದಿದ್ದರು.ಊರ ಮನೆಯಲ್ಲಿ ಇಂತಹ ಪದಾರ್ಥಗಳನ್ನು ತಯಾರಿಸುವುದು ಕಡಿಮೆ ಎಂದು ಗೊತ್ತಿದೆ.. ಮಹೇಶ್ ಮೈತ್ರಿಗೆ ಬಹಳ ಇಷ್ಟವಾಗಬಹುದು ಎಂದು ಅವಳ ಆಲೋಚನೆ.
ಮಾವ ಅತ್ತೆ ಈ ಮಸಾಲೆ ಘಾಟು ಅಂತ ತಿನ್ನುತ್ತಾರೋ ಇಲ್ಲವೋ ಎಂಬ ಆತಂಕವೂ ಇತ್ತು..

   ಮಂಗಳಾ ಕೆಲಸದಾಳು ಸೇಸಪ್ಪ ತಂದು ಕೊಟ್ಟಿದ್ದ  ಹಲಸಿನ ಹಣ್ಣನ್ನು ಸೊಳೆ ಬಿಡಿಸಿ ಚೆನ್ನಾಗಿ ಆಯ್ದು ಪಾಯಸ ಮಾಡಲು ತಯಾರಿ ಮಾಡಿದರು..ಶಂಕರ ತೋಟ ಸುತ್ತಿ ಬರುತ್ತೇನೆಂದು ಹೊರಟವನು ಬರುವಾಗ ಕಾಟು ಮಾವಿನ ಮರದ ಬುಡದಲ್ಲಿ ಕಂಡ ಮಾವಿನ ಹಣ್ಣನ್ನು ಅಲ್ಲೇ ಬಿಡಲು ಮನಸ್ಸಾಗದೆ ಅಲ್ಲೇ ತೋಟದಲ್ಲಿ ಅಡಿಕೆ ಮರದಿಂದ ಉದುರಿದ ಹೂಬಾಳೆಯಲ್ಲಿ ಹಾಕಿ ತಂದಿದ್ದರು..ಗಾಯತ್ರಿಯ ಕೈಗೆ ಕೊಟ್ಟಾಗ ..."ರೀ.. ಎಷ್ಟೊಂದು ಘಮ ಬರುತ್ತಿದೆ..ಈ ತರದ್ದು ನಮ್ಮ ಬೆಂಗಳೂರು ಮಾರುಕಟ್ಟೆಯಲ್ಲಿ ಸಿಗುವುದೇ ಇಲ್ಲ ...ಅಲ್ಲಾರೀ.."ಎಂದು ರಾಗ ಎಳೆದಾಗ..
"ಇದು ನಮ್ಮ ಕರಾವಳಿ ಸ್ಪೆಷಲ್ ಕಣೇ..."ಎನ್ನುತ್ತಾ ಜಗಲಿಯ ಮೂಲೆಯಲ್ಲಿ ಕತ್ತಿಯ ರೀಪಿನಲ್ಲಿ ಸಿಕ್ಕಿಸಿದ್ದ ಕತ್ತಿಯನ್ನು ತೆಗೆದು ಮಾವಿನ ಹಣ್ಣು ತುಂಡು ಮಾಡಿ ಅವಳ ಕೈಗಿತ್ತರು... ಒಂದು ತುಂಡು ತಾನು ಬಾಯಿಗಿಟ್ಟುಕೊಂಡ..
"ಭಾರೀ ರುಚಿಯಿದೆ ರೀ.."

"ಸಂಜನಾ ವಂದನಾ.. ಇಲ್ಲಿ ಬನ್ನಿ.."ಎಂದು ಮಗಳಂದಿರನ್ನು ಕರೆದರು ಶಂಕರ..

ಸಂಜನಾ ಬಂದವಳು.."ನಂಗೆ ಬೇಡ..
"ಎಂದು ರಾಗ ಎಳೆದರೆ.‌ವಂದನಾ "ಅಪ್ಪಾ.. ನನಗೆ ಇಡೀ ಮಾವಿನ ಹಣ್ಣು ಕೈಯಲ್ಲಿ ಹಿಡಿದು ಕಚ್ಚಿ ತಿನ್ನಬೇಕು...ತೆಗೆದುಕೊಳ್ಳಲಾ.."ಎಂದು ಕೇಳಿದಳು..
"ಸರಿ..ತೆಗೆದುಕೋ..."ಎಂದು ಅಪ್ಪನೆಂದಾಗ ಖುಷಿಯಿಂದ ಒಂದು.. ಎರಡು ..ಮೂರು ಮಾವಿನ ಹಣ್ಣನ್ನು ಸವಿದಳು..
ತಂಗಿ ಸವಿಯುವುದನ್ನು ಕಂಡ ಸಂಜನಾ "ಅದೇನೇ..ನಿನ್ನ ಅವತಾರ..ಒಳ್ಳೆ ಕೋತಿ ಮಾವಿನ ಸಿಪ್ಪೆ ಹಲ್ಲಲ್ಲಿ ಬಿಡಿಸಿ ಎಳೆದಂತೆ ಎಳೀತೀಯಲ್ಲ..ಥೂ..."
"ನೋಡೇ ಅಕ್ಕಾ..ನೀನೂ ರುಚಿ ನೋಡು ಆಮೇಲೆ ಬಿಡಲ್ಲ..ಕಟ್ ಮಾಡಿ ತಿನ್ನೋದಕ್ಕಿಂತ ಹೀಗೇ ತಿಂದ್ರೇನೇ ರುಚಿ..."

"ಛೀ..ನೋಡು ನಿನ್ನ ಕೈಲೆಲ್ಲ ಹಣ್ಣಿನರಸ  ಸುರೀತಿದೆ...ಗಲೀಜು.."
"ಗಲೀಜೆಲ್ಲ ಏನಿಲ್ಲ...ನಂದು ತಿಂದಾದ ಮೇಲೆ ತೊಳೀತೀನಿ.."

ತಂಗಿ ತಿನ್ನುವುದು ಕಂಡು ಸಂಜನಾ ಒಂದು ಹಣ್ಣನ್ನು ಚೂರಿಯಿಂದ ಸಣ್ಣ ತುಂಡು ಮಾಡಿ ಬಾಯಿಗಿಟ್ಟು .."ಚೆನ್ನಾಗಿದೆ.."ಎಂದು ಇಡೀ ಹಣ್ಣು ತುಂಡು ಮಾಡಿ ತಿಂದು ತೆರಳಿದಳು.


     ಆಗಾಗ ಕೆಲಸಕ್ಕೆ ಬರುತ್ತಿದ್ದ ನೆರೆಹೊರೆಯ ಕುಟುಂಬದವರೆಲ್ಲ ಶಂಕರ ದನಿಗಳು ಬಂದಿದ್ದಾರಂತೆ ಎಂದು ಒಮ್ಮೆ ಬಂದು ಮಾತಾಡಿಸಿ ಹೋಗೋಣ ಎಂದು ಬರುತ್ತಿದ್ದರು.. ಬಂದವರನ್ನು ಬಾಯ್ತುಂಬಾ ಮಾತನಾಡಿಸಿ ಕುಡಿಯಲು ತಿನ್ನಲು ಕೊಟ್ಟು ಕಳುಹಿಸುತ್ತಿದ್ದರು ಮನೆಯವರು..

       ಸಂಜನಾ ಹಣೆಯಲ್ಲಿ ಪುಟ್ಟ ಸ್ಟಿಕ್ಕರ್ ಬಿಂದಿ ಅಂಟಿಸಿಕೊಂಡಿದ್ದಳು..ಅಜ್ಜ ಮೊಮ್ಮಗಳ ಹತ್ತಿರ ಬಂದು "ಹಣೆಲಿ ಎಂತ ಇಲ್ಲೆಯಾ ಕೂಸೇ..ಬೋಳು ಹಣೆ ಬಿಡ್ಲಾಗ...ಕುಂಕುಮ ಹಾಕಿಕೋ.."ಎಂದಾಗ ಸಂಜನಾ ಮೊದಲು ಅಜ್ಜನ ಕನ್ನಡಕ ಹುಡುಕಿ ತಂದು ಅಜ್ಜನಿಗೆ ತೊಡಿಸಿ "ಈಗ ನೋಡಿ ಅಜ್ಜಾ..." ಎಂದಳು..
"ಓಹೋ...ಇದೆ.. ನುಸಿ ಪಿಟ್ಟೆಯಂತೆ... ದೊಡ್ಡದಾಗಿ ಕುಂಕುಮದ ಬಿಂದಿ ಹಣೆಯ ಮೇಲಿದ್ದರೆ ಚೆಂದ ಪುಳ್ಳಿ..."ಎಂದು ಸಲಹೆಯಿತ್ತು ದೇವರ ಕೋಣೆಗೆ ತೆರಳಿ ಮಡದಿ ದಿನವೂ ಕುಂಕುಮಾರ್ಚನೆ ಮಾಡಿ ಶೇಖರಿಸಿಡುತ್ತಿದ್ದ ಕುಂಕುಮದ ಕರಡಿಗೆಯನ್ನು ತಂದರು...ಸಂಜನಾಳಲ್ಲಿ.."ತಗೋಮ್ಮ..ಹಾಕಿಕೋ..."ಎಂದು ಕೊಟ್ಟರೆ ಅವಳು ತೆಗೆದುಕೊಳ್ಳಲು ಹಿಂದೆ ಮುಂದೆ ನೋಡಿದಳು.. ಅಷ್ಟರಲ್ಲಿ ಬಂದ ಗಾಯತ್ರಿ..."ಅಜ್ಜ..ಹೇಳಿದ್ರೆ ಕೇಳಬೇಕು.. ಮತ್ತೆ ಆಗೋದಿಲ್ಲ ಅನ್ನಬಾರದು ಮಗಳೇ...ಹಾಕಿಕೋ..."ಎಂದು ಅಮ್ಮ ಆಜ್ಞಾಪಿಸಿದಾಗ ನಿರ್ವಾಹವಿಲ್ಲದೆ ತೆಗೆದುಕೊಂಡು ಕೋಪದಿಂದಲೇ ಅಜ್ಜನಿಗೆ ಸರಿಯಾಗಿ ಕಾಣಲೆಂದು ದೊಡ್ಡದೊಂದು ದೋಸೆಬಿಂದಿ ಇಟ್ಟುಕೊಂಡು ನಡೆದಳು..


        ಅಮ್ಮ ಬೆಂಗಳೂರಿನಿಂದ ಹೊರಡುವ ಮೊದಲೇ ಎಚ್ಚರಿಸಿದ್ದು ನೆನಪಾಯಿತು ಅವಳಿಗೆ..ಇಲ್ಲಿ ಬೇಕಾಬಿಟ್ಟಿ ಇದ್ದರೂ ನಡೆಯುತ್ತೆ ಎಂದು ಅಲ್ಲಿ ಹಾಗೆಲ್ಲಾ ಮಾಡೋಕೆ ಹೋಗಬೇಡ.ಮೈತ್ರಿ ಅಕ್ಕನನ್ನು ನೋಡಿ ಕಲಿತುಕೋ.. ಇಲ್ಲದಿದ್ದರೆ ಅಜ್ಜ ಅಜ್ಜಿ ಆಡದೆ ಸುಮ್ಮನೆ ಬಿಡರು.. ಥತ್..ಈ ಅಜ್ಜ.. ನಾನು ಹೇಗೆ ಬಿಂದಿ ಇಟ್ಟುಕೊಂಡರೆ ಅವರಿಗೆ ಏನು..ಇಟ್ಟಕೊಂಡಿದ್ದೇನೆ ತಾನೇ... ಎಲ್ಲದಕ್ಕೂ ರೂಲ್ಸ್..ಅದೇ ಕಷ್ಟ ಈ ಹಳ್ಳೀಲಿ..


    ಅಮ್ಮ "ಸಂಜನಾ ವಂದನಾ  ಒಬ್ಬೊಬ್ಬರಾಗಿ ಸ್ನಾನ ಮಾಡಿ ಬನ್ನಿ.. ಮತ್ತೆ ಊಟಕ್ಕೆ ಪಂಕ್ತಿ ಹಾಕುವ ಕೆಲಸಕ್ಕೆ ನೆರವಾಗಿ "ಎಂದರು.."ಸರಿ" ಎಂದು ಸ್ನಾನಕ್ಕೆ ಹೊರಟಳು ವಂದನಾ..ಮನೆಯ ಹೊರಗಡೆ ವಿಶಾಲವಾದ ಬಚ್ಚಲು ಮನೆ..ದೊಡ್ಡದಾದ ತಾಮ್ರದ ಹಂಡೆಯಲ್ಲಿ ಹಬೆಯೇಳುತ್ತಿರುವ ನೀರು . ಅದನ್ನು ಎತ್ತಿಕೊಳ್ಳಲು ಭಾರವಾದ ಚೆಂಬು...ಒಮ್ಮೆ ತನ್ನ ಮನೆಯ ಅಂದದ ಟೈಲ್ಸ್ ನ ಬಾತ್ ರೂಮ್ ನೆನಪಾಗಿ ಥೂ.. ಗಲೀಜು ಅನಿಸಿತು.. ಅವಳಿಗೆ..ಮರುಕ್ಷಣ ಹೀಗೇನಾದರೂ ಅಪ್ಪ ಅಮ್ಮನ ಮುಂದೆ ಆಡಿದರೆ ಬೈಗುಳ ತಪ್ಪಿದ್ದಲ್ಲ ಎಂದು ತನ್ನಲ್ಲೇ ಆಲೋಚನೆಗಳನ್ನು ಹುದುಗಿಸಿಕೊಂಡಳು..ಸ್ನಾನ ಮುಗಿಸಿ ನೈಟ್ ಪ್ಯಾಂಟ್ ಶರ್ಟ್ ಹಾಕಿ ಹೊರಗೆ ಬಂದಳು..ಅಲ್ಲೇ ಬಚ್ಚಲಿನ ಒಲೆಗೆ ಕಸ ತುರುಕಿಸುತ್ತಿದ್ದ ಅಜ್ಜಿ.."ಇದೆಂತ ವಂದನಾ... ಪ್ಯಾಂಟ್ ಶರ್ಟ್ ಹಾಕಿದ್ದು.. ನೀನು ಮಾಣಿಯಾ.."ಅನಬೇಕೇ..ಎಲ್ಲಿಂದ ಬಂತೋ ಕೋಪ.. ಅಳು..
ಎರಡೂ ಒಟ್ಟೊಟ್ಟಿಗೇ... ರೂಮಿಗೆ ತೆರಳಿ ಅಳುತ್ತಾ ಕೂತಳು.. "ಅಜ್ಜಿ ಹೀಗೆ ಹೇಳೋದಾ ನನ್ನನ್ನು.."
ಸಂಜನಾ.."ನನ್ನನ್ನೂ ಆಗ ಅಜ್ಜ ಬಿಂದಿ ಇಟ್ಟುಕೊಳ್ಳಬೇಕು ಸರಿಯಾಗಿ ಅಂದರು...ಇಲ್ಲಿರೋ ಒಂದು ವಾರ ಅವರಿಗೆ ತಕ್ಕಂತೆ ಇರುವ ವಂದನಾ..ರಗಳೆ ಬೇಡ... ಆಮೇಲೆ.."
"ನಾನು ಇಂತಹ ಡ್ರೆಸ್ ತಂದಿರೋದು..ಅದನ್ನೇ ಹಾಕಬೇಕಷ್ಟೇ.."

      ಅಮ್ಮ ಗಾಯತ್ರಿಯೂ ಬಂದು ಸಂತೈಸಿದಳು.ದೊಡ್ಡಮ್ಮ ಬಂದು "ನೋಡಮ್ಮ.. ವಂದನಾ.. ಹಿರಿಯರು ಒಂದಲ್ಲ ಸಾವಿರ ಶಾಸ್ತ್ರ ತಾವು ಅನುಸರಿಸಿ ಮಕ್ಕಳು ಮೊಮ್ಮಕ್ಕಳು ಮುಂದುವರಿಸಬೇಕು ಎಂದು ಬಯಸುತ್ತಾರೆ.ಸಾಧ್ಯವಾದಷ್ಟು ಅನುಸರಿಸು.. ಇಲ್ಲವೆಂದಾದರೆ ನಿನ್ನಿಷ್ಟದಂತೆ ಇರು.. ನಾಲ್ಕು ಸಲ ಹೇಳಿ ಸುಮ್ಮನಾಗುತ್ತಾರೆ...ಒಂದು ಕಿವಿಯಲ್ಲಿ ಕೇಳಿ ಇನ್ನೊಂದರಲ್ಲಿ ಬಿಟ್ಟುಬಿಡು..."

       ಸಮಾಧಾನಗೊಂಡ ವಂದನಾ ಮುಖತೊಳೆದು ಬಂದಳು. ಈ ಊಟಕ್ಕೆ ಪಂಕ್ತಿ ಹಾಕಲು ಅಮ್ಮ ಕರೆದಾಗ ಸಂಜನಾ ವಂದನಾ ಇಬ್ಬರೂ ಬರಲು ಒಪ್ಪಲಿಲ್ಲ.." ಸ್ವಲ್ಪ ಅವರ ನಿತ್ಯದ ರೂಢಿಯಿಂದ ಹೆಚ್ಚು ಕಮ್ಮಿಯಾದರೂ ಆಡುತ್ತಾರೆ.. ನಾವು ಬರಲ್ಲಮ್ಮಾ.. ನೀನೇ ಇಟ್ಟಬಿಡು "ಎಂದರು..


       ಗಾಯತ್ರಿ ಪಂಕ್ತಿಹಾಕಿದರು.. ಮಹಾಲಕ್ಷ್ಮಿ ಅಮ್ಮ ಒಂದೊಂದೇ ಪದಾರ್ಥಗಳನ್ನು ತಂದು ಇಟ್ಟರು.ಮಂಗಳಮ್ಮ ತುಪ್ಪ, ಉಪ್ಪಿನಕಾಯಿ ಹೊಸತನ್ನು ತಂದಿರಿಸಿದರು.. ಉಪ್ಪಿನಕಾಯಿ ಘಮ ಬಂದಾಗ "ಅಕ್ಕಾ..ಹೊಸ ಉಪ್ಪಿನಕಾಯಿ ಯಾ"ಎಂದರು ಗಾಯತ್ರಿ..
"ಹೌದು .. ಮೊನ್ನೆ ತಾನೇ ಹಾಕಿದ್ದು.. ನೀವು ಬರೋದು ಗೊತ್ತಾಗಿ ಸ್ವಲ್ಪ ಜಾಸ್ತಿ ಹಾಕಿದೀವಿ.."ಎಂದ ಮಂಗಳಮ್ಮ..


        ಗಾಯತ್ರಿ ರೂಮಿಗೆ ತೆರಳಿ ತನ್ನ ಮಕ್ಕಳಲ್ಲಿ "ಅಜ್ಜನೆದುರು ಊಟಕ್ಕೆ ಕುಳಿತುಕೊಳ್ಳುವಾಗ ಒಂದು ಶಾಲು ಹಾಕಿಕೊಳ್ಳಿ ಎದೆ ಮೇಲೆ.. ಇಲ್ಲಾಂದ್ರೆ ಪುನಃ ಅವರ ಮಾತು ಕೇಳಬೇಕಾದೀತು ..."ಎಂದು ಎಚ್ಚರಿಸಿದರು.ಅವರದೆಲ್ಲ ಊಟ ಆಗಲಿ.ಆಮೇಲೆ ಬರುತ್ತೇವೆ.ಎಂದ ಸಂಜನಾ ವಂದನಾ.."ಎಲ್ಲರೂ ಒಟ್ಟಿಗೆ ಕುಳಿತು ಊಟಮಾಡುವುದರಲ್ಲಿಯೂ ಖುಷಿಯಿದೆ.ಬನ್ನಿ.." ಎಂದರು ಅಮ್ಮ..


       ಮೆಲ್ಲನೆದ್ದು ಮೈತ್ರಿಯ ದುಪ್ಪಟ್ಟಾ ಇದೆಯಾ ಎಂದು ಹುಡುಕಿ ಇಬ್ಬರೂ ಚೆನ್ನಾಗಿ ದುಪ್ಪಟ್ಟಾ ಹೊದ್ದುಕೊಂಡು ಊಟಕ್ಕೆ ಕುಳಿತರು.ಬಾಳೆ ಎಲೆ ಮೇಲೆ ನಾನಾ ಬಗೆಯ ಅಡುಗೆಗಳು... ಇಷ್ಟಪಟ್ಟು ಸವಿದರು..ಮಾವಿನ ಹಣ್ಣಿನ ಸಾಸಿವೆ ಇಬ್ಬರಿಗೂ ಬಹಳ ಹಿಡಿಸಿತು..ಹಲಸಿನ ಕಾಯಿ ಹಪ್ಪಳ.. "ವಾವ್.. ಸೂಪರ್.."ಅಂದರು..ನಿತ್ಯದ ಊಟಕ್ಕಿಂತ ಎರಡು ಸೌಟು ಅನ್ನ ಹೆಚ್ಚೇ ಬಡಿಸಿಕೊಂಡರು..ಹಲಸಿನ ಹಣ್ಣಿನ ಪಾಯಸ ಒಂದು ಸೌಟು ತಿಂದು .."ಇನ್ನು ಹೊಟ್ಟೆಯಲ್ಲಿ ಜಾಗವಿಲ್ಲ.. ಫ್ರಿಡ್ಜ್ ನಲ್ಲಿ ಇಟ್ಟರೆ ಸಂಜೆ ಟೇಸ್ಟಿಯಾಗಿರಬಹುದು.. ಸಂಜೆ ತಿಂತೀವಿ.."ಅಂದರು.. ಕೊನೆಗೆ ಶುಂಠಿ ಹಸಿಮೆಣಸು ನಿಂಬೆರಸ, ಒಗ್ಗರಣೆ ಹಾಕಿದ ಮಜ್ಜಿಗೆಯೊಂದಿಗೆ ಕರುಂಕುರುಂ ಮಾವಿನ ಮಿಡಿ ಕಚ್ಚಾಕೊಂಡು ಬಾಯಲ್ಲಿ ನೀರೂರಿಸಿಕೊಂಡರು.."ದೊಡ್ಡಮ್ಮಾ..ಈ ಉಪ್ಪಿನಕಾಯಿ ನಮಗೂ ಬೆಂಗಳೂರಿಗೆ ಸ್ವಲ್ಪ ಕೊಟ್ಬಿಡಿ.".ಎಂದಾಗ .."ಹೌದು ಮಕ್ಕಳೇ ನಿಮಗೂ ಕೊಡ್ತೀವಿ... ಬಾಟಲಿಯಲ್ಲಿ ಹಾಕಿಟ್ಟಿದ್ದೇವೆ.."ಎಂದಾಗ ಸಂಜನಾಳ ಮುಖವರಳಿತು..

      ಗಾಯತ್ರಿ ಚಪಾತಿ ವೆಜ್ ಕೂರ್ಮ ಬಡಿಸಿದಾಗ ತಿಂದ ಮಾವ ಪುನಃ "ಚಪಾತಿ ಚೆನ್ನಾಗಿದೆ.. ಇನ್ನೊಂದು ಬಡಿಸು "ಎಂದರು.. ಗಾಯತ್ರಿ ಚಪಾತಿ ಬಡಿಸಿ...ಕೂರ್ಮ ಬಡಿಸಲು ಮುಂದಾದಾಗ "ಪದಾರ್ಥ ಮಾತ್ರ ಅದು ಬೇಡ..ಏನೋ ಘಾಟು ಬಡೀತಿದೆ.. ನಂಗೆ ಸ್ವಲ್ಪ ಸಾಸಿವೆ ಬಡಿಸು..ನೋಡೋಣ ಹೊಂದಾಣಿಕೆ ಆಗುವುದಾ ಅಂತ.. "ಎಂದು ಹೇಳುತ್ತಾ ಮೂರು ಚಪಾತಿ ತಿಂದರು..

     ಶಂಕರ ಶಾಸ್ತ್ರಿಗಳಂತೂ ತನ್ನ ಡಯಟ್ ಎಲ್ಲ ಮರೆತು ಹಳ್ಳಿಯ ಭೋಜನ ಸವಿದರು..ಬಾಲ್ಯದ ರುಚಿ ..ಈಗ ಅಪರೂಪಕ್ಕೊಮ್ಮೆ ಉಣ್ಣುವಾಗ ಮತ್ತಷ್ಟು ರುಚಿಯೆನಿಸಿತು..ಊಟ ಮಾಡಿ ಕೈತೊಳೆದು ಬಂದ ವಂದನಾ ತನ್ನ ಕೈಗಳನ್ನು ಮೂಸಿಕೊಂಡು ".ಅಕ್ಕಾ..ನೋಡೇ ಉಪ್ಪಿನಕಾಯಿ ಹೇಗೆ ಸ್ಮೆಲ್ ಬರ್ತಿದೆ ಅಂತಾ.."ಅಂದಾಗ ಮಂಗಳಮ್ಮನ ಮುಖದಲ್ಲಿ ಸಾರ್ಥಕಭಾವ ಮೂಡಿತು..

     ಮೊದಲನೇ ಪಂಕ್ತಿ ಮುಗಿದು ಎಲೆ ತೆಗೆದು ಗೊಬ್ಬರದ ಗುಂಡಿಗೆ ಹಾಕಿ ಬಂದರು ಮಂಗಳಮ್ಮ..ಅತ್ತೆ ಸೆಗಣಿ ನೀರು ಹಾಯಿಸಿದಾಗ ಗಾಯತ್ರಿ ಬಟ್ಟೆ ತೆಗೆದುಕೊಂಡು ನೆಲವನ್ನು ಒರೆಸಿದಳು.ನಂತರ ಮೂವರೂ ಹರಟುತ್ತಾ ನಿಧಾನವಾಗಿ ಉಂಡರು.. ಸಂಜನಾ ವಂದನಾ ಬಡಿಸಲು ಬಂದರು..ಶಂಕರ ಶಾಸ್ತ್ರಿಗಳು ಶ್ಯಾಮ ಶಾಸ್ತ್ರಿಗಳು ಒಂದು ಸಣ್ಣ ನಿದಿರೆ ಮಾಡಿದರು..

     ಸಂಜೆ ಕಾಫಿಗೆ ದೀಗುಜ್ಜೆ, ಬದನೆಕಾಯಿ ಪೋಡಿ ಮಾಡಬೇಕೆಂದು ಶ್ಯಾಮ ಶಾಸ್ತ್ರಿಗಳು ಬೆಳಗ್ಗೆಯೇ ಸೇಸಪ್ಪನಲ್ಲಿ ಹೇಳಿ ದೀಗುಜ್ಜೆ ಕೊಯಿಸಿದ್ದರು.ಬದನೆಕಾಯಿ ಅಂಗಳದ ಬದಿಯಲ್ಲಿ ನೆಟ್ಟು ಬೆಳೆಸಿದ್ದಾರೆ.. ಅಂತೂ ಸಂಜೆ ಗಮ್ಮತ್ತು ... ಅಷ್ಟರಲ್ಲಿ ಮಹಾಲಕ್ಷ್ಮಿ ಅಮ್ಮ ನ ದೊಡ್ಡ ಮಗಳು ಶಶಿಯ ಫೋನ್ ಬಂದಿತ್ತು.."ನಾನೂ ತವರಲ್ಲಿ ಬಂದು ಉಳಿದುಕೊಳ್ಳದೆ ತುಂಬ ದಿನವಾಗಿತ್ತು..ಹೇಗೂ ತಮ್ಮನೂ ಇದ್ದಾನೆ.. ಈಗಲೇ ಬರಲೇ..ಮಗ ವೆಂಕಟ್ ಇವತ್ತು ಮನೆಯಲ್ಲಿ ಇದ್ದಾನೆ.. ಇವತ್ತು ಎಲ್ಲೂ ಭಾಗವತಿಕೆ ಇಲ್ಲ ಎಂದು ಕಾಣ್ತಿದೆ..." ಎಂದಾಗ ಮಹಾಲಕ್ಷ್ಮಿ ಅಮ್ಮ "ಹಾಗೆಯೇ ಆಗಲಿ.. ಮಗಳು ಬಂದರೆ ಖುಷಿಯೇ.." ಎಂದರು..

      ಶಶಿ ಒಂದೇ ಏಟಿಗೆ ಎರಡು ಹಕ್ಕಿ ಉರುಳಬೇಕು ಎಂದು ಮನದಲ್ಲೇ ಏನೋ ಲಾಭದ ಲೆಕ್ಕಾಚಾರ ಹಾಕಿಕೊಂಡು ಮಗನೊಂದಿಗೆ ಬಂದರು..


ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
18-02-2020.

ನಮಸ್ತೇ...
      ಹೆಚ್ಚಿನ ಓದಿಗಾಗಿ Home,< >,share ಬಳಸಿಕೊಳ್ಳಬಹುದು..💐🙏

2 comments: