Monday, 17 February 2020

ಜೀವನ ಮೈತ್ರಿ-ಭಾಗ ೨೦(20)




    ಪತಿ ಮನೆಗೆ ಬಂದಾಗಲೇ ಪತಿಗೆ ಶಶಿಯತ್ತಿಗೆಯ ಯೋಜನೆ ತಿಳಿಸಿ ಇದಕ್ಕೆ ಮಾತ್ರ ಒಪ್ಪಬೇಡಿ ಎಂದು ಹೇಳಬೇಕು ಎಂದುಕೊಂಡಳು ಮಂಗಳಾ.. ಕೈಯಲ್ಲಿ ಕೆಲಸ ಸಾಗುತ್ತಿದ್ದರೂ ಕಣ್ಣು ಗಡಿಯಾರವನ್ನೇ ನೋಡುತ್ತಿತ್ತು.ಯಾವಾಗ ಒಂದು ಗಂಟೆಯಾಗುತ್ತದೋ ಎಂದು.. ಮನಸ್ಸು ಭಾರವಾಗಿತ್ತು.ಗಾಯತ್ರಿಗೆ ಅಕ್ಕನ ತಳಮಳ ಅರ್ಥವಾಗಿತ್ತು.. ನೀನು ಚಿಂತಿಸಬೇಡ ಅಕ್ಕಾ ಎಂದು ಸಮಾಧಾನ ಹೇಳಬೇಕು ಎಂಬ ಮನಸ್ಸು ಅವಳದು.ಆದರೆ ಅತ್ತೆ ಅತ್ತಿಗೆ ಇಬ್ಬರೂ ಅಡುಗೆಮನೆಯಲ್ಲೇ ಝಂಡಾಹೂಡಿದ್ದಾರೆ.ಅವರೆದುರು ಏನೂ ಮಾತನಾಡುವಂತಿಲ್ಲ.


    ಸಂಜನಾ, ವಂದನಾ... ವೆಂಕಟ್ ಭಾವನೊಂದಿಗೆ ಹರಟುತ್ತಿದ್ದರು.ಏಕೋ ಅವನ ಹಾವಭಾವ,ಬೆರೆಯುವಿಕೆ ಸಂಜನಾಗೆ ಇಷ್ಟವಾಗಲಿಲ್ಲ.."ನನಗೆ ಬೇರೆ ಕೆಲಸವಿದೆ "ಎಂದು ಒಳಗೆ ಹೊರಟವಳು "ನೀನೂ ಬಾ ತಂಗಿ "ಎಂದು ಕರೆಯಲು ಮರೆಯಲಿಲ್ಲ.ಹುಡುಗಿಯರು ಸೂಕ್ಷ್ಮವಾಗಿ ಗಮನಿಸುವ ಅಭ್ಯಾಸ ಬೆಳೆಸಿಕೊಳ್ಳಬೇಕು.ತಮ್ಮ ಜೊತೆ ಮಾತನಾಡುವ ಎಲ್ಲರನ್ನೂ ಒಳ್ಳೆಯವರೆಂದು ನಂಬಬಾರದು.ಅದರಲ್ಲೂ ಪುರುಷರ ಜೊತೆಗೆ ಎಚ್ಚರಿಕೆಯಿಂದ ವ್ಯವಹರಿಸಬೇಕು ಎಂದು ಆಗಾಗ ಅಪ್ಪ ಶಂಕರ ಶಾಸ್ತ್ರಿಗಳು ಸಂಜನಾ ,ವಂದನಾಗೆ ಉದಾಹರಣೆ ಸಹಿತ ವಿವರಿಸುತ್ತಿದ್ದರು.ಅಮ್ಮನೂ ಆ ವಿಷಯದಲ್ಲಿ ಮುನ್ನೆಚ್ಚರಿಕೆ ಆಗಾಗ ನೀಡುತ್ತಿದ್ದರು..
ಒಳ್ಳೆಯ ಸ್ಪರ್ಶ,ಕೆಟ್ಟ ಸ್ಪರ್ಶ,ಹಿತವಾದ ನಗೆಬುಗ್ಗೆ,ಕೀಟಲೆಯ ಚೇಷ್ಟೆಯ ನಗೆ ಇವುಗಳ ಭೇದವನ್ನು ಇಬ್ಬರೂ ಚೆನ್ನಾಗಿ ಬಲ್ಲರು.. ಆದ್ದರಿಂದಲೇ ವೆಂಕಟ್ ಭಾವ ಸಭ್ಯನಲ್ಲ ಎಂಬುದು ಬಹಳ ಬೇಗನೆ ಅರಿತರು ಮತ್ತು ಅಂತಹವರ ಜೊತೆ ಸಲುಗೆಯಿಂದ ವರ್ತಿಸಬಾರದು ಎಂಬ ಅಪ್ಪ ಅಮ್ಮನ ನುಡಿಯಂತೆ ನಡೆದುಕೊಂಡರು.


          ವೆಂಕಟ್ "ಅಬ್ಬಾ..!! ಪೇಟೆ ಹುಡುಗಿಯರ ಕೊಬ್ಬು .."ಎಂದುಕೊಂಡನು.ಕೈಲಾಗದವರು ಹೀಗೆಯೇ ಅಂದುಕೊಂಡು ಸುಮ್ಮನಾಗಬೇಕಷ್ಟೆ ಎಂಬುದು ಗೊತ್ತಿತ್ತು ಅವನಿಗೆ.ಆದರೂ ಆ ಕ್ಷಣ ಸಮಾಧಾನ ತಂದಿತ್ತು ಹುಡುಗಿಯರಿಗೆ ಕೊಬ್ಬು ಎನ್ನುವ ಭಾವ.ವೆಂಕಟ್ ತಾನು ಹಾಡಿರುವ ಯಕ್ಷಗಾನ ಭಾಗವತಿಕೆಯ ಹಾಡುಗಳನ್ನು ಎಡಿಟ್ ಮಾಡಿ ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡತೊಡಗಿದ...ಮತ್ತೆ ನಾಳೆರಾತ್ರಿ ಭಾಗವತಿಕೆಯಿರುವ ಸ್ಥಳಕ್ಕೆ ಹೊಗುವ ದಾರಿಯನ್ನು ಖಾತ್ರಿಪಡಿಸಿಕೊಂಡನು.ಇತ್ತೀಚೆಗೆ ಅವನಿಗೆ ಹಲವು ಜನ ಪ್ರತಿಸ್ಪರ್ಧಿಗಳಂತೆ ಭಾಗವತರು ಬೆಳಕಿಗೆ ಬರುವುದೇ ತಲೆನೋವಾಗಿ ಪರಿಣಮಿಸಿತ್ತು.ಮೊದಲೇ ಸಂಪಾದನೆ ಸಾಲದೆಂಬ ಕೀಳರಿಮೆ ಅವನಿಗೆ ಇತ್ತು..ಈಗ ಬಲವಾಯಿತು.. ಇನ್ನೇನಾದರೂ ಬೇರೆ ಸಂಪಾದನೆಯ ದಾರಿ ಹುಡುಕಬೇಕು ಎಂದುಕೊಂಡವನಿಗೆ ಹೊಳೆದದ್ದು ಯೂಟ್ಯೂಬ್ ಚಾನೆಲ್ ಮಾಡುವ ಆಲೋಚನೆ.. ಭಾಗವತಿಕೆ ಇಲ್ಲದಿದ್ದಾಗ ಇದನ್ನು ಮಾಡುತ್ತಿದ್ದ..


    ಮಹೇಶ್ ಆ ದಿನ ಎರಡು ಪೀರಿಯಡ್ ಫ್ರೀ ಇತ್ತು ಎಂದು ಬೇಗ ತಲುಪಿದ.."ಮಗನೇ..ಈ ಬಿಸಿಲಿನಲ್ಲಿ ಅಕ್ಕಾ ಒಬ್ಬಳೇ ಬಸ್ಸಿಳಿದು ನಡೆದುಕೊಂಡು ಬರುವುದಕ್ಕೆ ನೀನು ಬೈಕಿನಲ್ಲಿ ಕರೆದುಕೊಂಡು ಬಾ..."ಎಂದಳು.. ಅಮ್ಮಾ..

"ಅತ್ತೆ.. ಬೈಕಿನಲ್ಲಿ ಬರುವಾಗಲೂ ಬಿಸಿಲು ಮೈಗೆ ಬಡಿದು ಮೈ ಕಪ್ಪಾಗುತ್ತದೆ..ನನ್ನ ಕಾರಿದೆ ಅಲ್ವಾ...ನಡಿ.ಮಹೇಶಭಾವ ... ಮೈತ್ರಿಯನ್ನು ಕರೆದುಕೊಂಡು ಬರೋಣ.."ಎಂದಾಗ ನಯವಾಗಿಯೇ ನಿರಾಕರಿಸಿದರು ಮಂಗಳಮ್ಮ..
ವೆಂಕಟ್ ನಿಗೆ ಮಂಗಳತ್ತೆಯ ಮಾತು ಬಿಗುವೆನಿಸಿತು..

ಮಹೇಶ್ ಅಕ್ಕನನ್ನು ಕರೆದುಕೊಂಡು ಬಂದ.
ಮೈತ್ರಿ ಮಹೇಶ್ ಮನೆಗೆ ಬಂದದ್ದೂ ಭಾಸ್ಕರ ಶಾಸ್ತ್ರಿಗಳು ಬಂದದ್ದೂ ಒಂದೇ ಸಮಯಕ್ಕಾಯಿತು..ಊಟದ ಪಂಕ್ತಿ ಹಾಕುವ ತಯಾರಿಯೂ ಆಗಬೇಕು.". ಸ್ವಲ್ಪ ನೋಡ್ಕೋ ಗಾಯತ್ರಿ..ಈಗ ಬಂದೆ "ಎಂದು ಹೇಳಿ ಬಿರಬಿರನೆ ರೂಮಿಗೆ ನಡೆದಳು ಮಂಗಳಾ..ಬಹಳ ಆಸೆಯಿತ್ತು ಗಂಡನಲ್ಲಿ ಮನದ ಭಾವವನ್ನು ತಿಳಿಸಲು..ಗಂಡ ಮನೆಗೆ ಬಂದಕೂಡಲೇ ಶರ್ಟ್ ಪ್ಯಾಂಟ್ ಬಿಚ್ಚುವುದು ರೂಮಿನಲ್ಲೇ.. ಈಗಲಾದರೂ ಗಂಡನೊಡನೆ ಸ್ವಲ್ಪ ಏಕಾಂತದಲ್ಲಿ ಮಾತನಾಡಲು ಸಿಕ್ಕರೆ ...ಮಗಳ ಬಾಳು ನನ್ನಂತೆ ಆಗುವುದನ್ನು ತಪ್ಪಿಸಬಹುದು ಎಂಬ ಒಂದೇ ಬಯಕೆ..ಮಗಳ ಮೇಲಿನ ಮಮಕಾರ.. ರೂಮಿನೊಳಗೆ ಬಂದವಳೇ" ರೀ.." ಎಂದು ಮೆಲ್ಲನೆ ಕರೆದಳು.. ಗಡಿಬಿಡಿಯಲ್ಲಿ ಬಂದ ಮಡದಿಯನ್ನು ಕಂಡ ಭಾಸ್ಕರ ಶಾಸ್ತ್ರಿಗಳು.. ಹೂಂ..ಈ ಹೆಂಗಸರ ಹಣೆಬರಹ ಇಷ್ಟೇನೇ.. ಇವತ್ತು ಗಾಯತ್ರಿ ,ಶಂಕರ ಮನೆಯಲ್ಲಿದ್ರು.. ಅವರು ಹೀಗೆ ಮಾಡಿದ್ದು ಸರಿಯಿಲ್ಲ..ಹಾಗೆ ಮಾಡಿದ್ದು ಸರಿಯಿಲ್ಲ ಎಂದು ವರದಿ ಇದ್ದದ್ದೇ ಇವಳದ್ದು... ಎಂದು ಮನದಲ್ಲಿ ಅಂದುಕೊಂಡು ಮಡದಿಯ ಮಾತಿಗೆ ಸೊಪ್ಪು ಹಾಕದೆ ಹೊರಗೆ ನಡೆದು ಬಚ್ಚಲು ಮನೆಗೆ ತೆರಳಿದರು..


       ಮಂಗಳಮ್ಮನಿಗೆ ಅಳು ಒತ್ತರಿಸಿ ಬಂತು..ಅಲ್ಲ ಪತಿಯೆನ್ನಿಸಿಕೊಂಡವರಿಗೆ  ಪತ್ನಿ ಹೇಳುವುದನ್ನು ಕೇಳಿಸಿಕೊಳ್ಳುವ ವ್ಯವಧಾನವೂ ಇಲ್ಲದಿದ್ದರೆ ಹೇಗೆ..ನಾನೇನು ಚಾಡಿಹೆಣ್ಣಲ್ಲ...ಮನದ ಸಂಕಟವನ್ನು ಪತಿಯ ಬಳಿಯಲ್ಲದೆ ಇನ್ನಾರಬಳಿ ವಿಶ್ವಾಸವಿಟ್ಟು ಹೇಳಿಕೊಳ್ಳಲಿ..ಛೇ..!! ನಾನೆಂತಹ ಪತಿಯನ್ನು ನನ್ನವರು ನನ್ನವರು ಎಂದು ಪೂಜಿಸುತ್ತಿದ್ದೇನೆ ..ನನ್ನ ನೋವುಗಳಿಗೆ ಇವರು ಕಿವುಡರಾದರಲ್ಲ.. ಎಂದು ಉಕ್ಕಿ ಹರಿಯುತ್ತಿದ್ದ ಕಣ್ಣೀರನ್ನು ತನ್ನ ಸೆರಗಿನಂಚಿನಲ್ಲಿ ಒರೆಸಿಕೊಂಡಳು.. ಮಹೇಶ್ ಬೈಕ್ ನ ಕೀ ಇಡಲು ಬಂದವನು ಅಮ್ಮನನ್ನು ಕಂಡು ಒಂದು ಕ್ಷಣ ವಿಚಲಿತನಾದ..ಅಮ್ಮ  ಕಣ್ಣೀರು ಸುರಿಸುತ್ತಿದ್ದಾರೆ..ಅಮ್ಮನ ಪಕ್ಕಕ್ಕೆ ಬಂದು .. "ಏನಾಯ್ತು ಅಮ್ಮಾ...ಯಾಕಳ್ತಾ ಇದೀಯಾ.." ಎಂದು ಕೇಳಿ ಕಣ್ಣೀರೊರೆಸಿ ಮೆಲ್ಲನೆ ರೂಮಿನ ಬಾಗಿಲು  ಮುಚ್ಚಿದ.."ಅಮ್ಮ ಈಗ ಹೇಳು..ಅಜ್ಜ ಅಜ್ಜಿ ಏನಾದ್ರೂ ಅಂದ್ರಾ."..
"ಇಲ್ಲ ಮಗ...."

"ಮತ್ತೇನಾಯ್ತು...."

"ಏನಿಲ್ಲ..ಹೇಳಿದರೆ ಕೇಳಿಸಿಕೊಳ್ಳಬೇಕಾದವರೇ ಕಿವಿಗೊಡದಿದ್ದರೆನಾನೇನು ಮಾಡಲಿ.."

"ಹೋಗಲಿ ಬಿಡಮ್ಮಾ... ವಿಷಯ ನಂಗೆ ತಿಳಿಸಿದರೆ ನನ್ನಿಂದಾದ್ದು ಮಾಡಬಲ್ಲೆ.."

ಎಂದಾಗ ಮಗನಲ್ಲಿ ಎಲ್ಲಾ ಹೇಳಿಬಿಡುವುದೇ ವಾಸಿ ಎಂದು ಕೊಂಡರು. ನಾನು ಮೈತ್ರಿ ಮಹೇಶ್ ಮೂವರಾದರೂ ಒಗ್ಗಟ್ಟಾಗಿದ್ದರೆ ಮಾತ್ರ ಇಂತಹ ಸಂದರ್ಭದಲ್ಲಿ ಎಲ್ಲರನ್ನೂ ಎದುರುಹಾಕಿಕೊಳ್ಳಬೇಕಾಗಿ ಬಂದರೆ  ಪರಿಸ್ಥಿತಿ ನಿಭಾಯಿಸಬಹುದು.. ಎಂದು ನಿರ್ಧರಿಸಿ ಮಗನಲ್ಲಿ ಒಂದೇ ಉಸಿರಿನಲ್ಲಿ ಎಲ್ಲವನ್ನೂ ಉಸುರಿದಳು.."ಈಗ ನೀನಾದರೂ ನನ್ನ ಜೊತೆ ಬಲವಾಗಿ ನಿಲ್ಲಬೇಕು ಮಗನೇ" ಎಂದು ಮಗನ ಕೈ ಹಿಡಿದುಕೊಂಡಾಗ "ಆಗಲಮ್ಮ.. ನಾನು ಯಾವತ್ತೂ ಅಮ್ಮ ಅಕ್ಕನ ಪರ..ನೀನೇನೂ ಯೋಚನೆ ಮಾಡಬೇಡ.. ಮಾತುಕತೆ ಆಗುವಾಗ ನನಗೆ ತಿಳಿದರೆ ನಾನೂ ನಿನ್ನ ನಿರ್ಧಾರದ ಪರವಾಗಿ ಮಾತನಾಡುತ್ತೇನೆ.". ಎಂದು ಅಮ್ಮನನ್ನು ಎದೆಗಾನಿಸಿ ಸಮಾಧಾನಿಸಿದನು..ಪತಿ ನನ್ನ ಮಾತಿಗೆ ಕಿವುಡನಾದರೂ ಮಗ ಕಿವುಡನಲ್ಲವಲ್ಲಾ... ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡು ಊಟದ ಪಂಕ್ತಿ ಹಾಕಲು ತೆರಳಿದರು..


   ಎಲ್ಲರಿಗೂ ಎಂದಿನಂತೆ ಸವಿಯಾದ ಭೋಜನವನ್ನು ಉಣಬಡಿಸಿದರು ಮಂಗಳಮ್ಮ, ಗಾಯತ್ರಿ ಮಹಾಲಕ್ಷ್ಮಿ ಅಮ್ಮ.. ಶಶಿ ಅತ್ತಿಗೆಯ ಕೈರುಚಿಯನ್ನು ಹೆಚ್ಚೇ ಹೊಗಳಿದರು..ಮೈತ್ರಿಯನ್ನೂ ಹೊಗಳಿ ಅಮ್ಮನಂತೆಯೇ ಮಗಳು ಎಂದು ಅಟ್ಟಕ್ಕೇರಿಸಿದರು.. ಭಾಸ್ಕರ ಶಾಸ್ತ್ರಿಗಳು ಬಹಳ ಖುಷಿಪಟ್ಟರು..ಶಶಿಯಕ್ಕನ ಮಾತಿನ ಒಳಗಿನ ಮರ್ಮ ಅವರಿಗೇನು ಗೊತ್ತು...?
ಮಂಗಳಮ್ಮ ಮತ್ತು ಗಾಯತ್ರಿ ಮುಖಮುಖ ನೋಡಿಕೊಂಡರು.ಮಹೇಶ ಮಾತ್ರ "ಅತ್ತೇ...ಅಕ್ಕ ಮಾತ್ರ ಅಲ್ಲ ಸಂಜನಕ್ಕ ವಂದನಕ್ಕ ಕೂಡಾ ಏನೂ ಕಮ್ಮಿಯಿಲ್ಲ.. ಗಾಯತ್ರಿ ಚಿಕ್ಕಮ್ಮ ಚಪಾತಿ ಕೂರ್ಮ ಮಾಡಿದರಂತೂ ಸೂಪರ್ಬ್ ಆಗಿರುತ್ತೆ.."ಎಂದು ಬೇಕೆಂದೇ ಅತ್ತೆಗೆ ಎದುರಾಡಿದನು.. "ಹೌದು ಮಹೇಶ .. ಎಲ್ಲರೂ ಇರುವಾಗ ಒಬ್ಬರ ಹೆಸರನ್ನು ಹಿಡಿದು ಹೊಗಳಬಾರದು ಎಂದು ಸಣ್ಣ ಪ್ರಾಯದಲ್ಲೇ ಕಲಿತುಕೊಂಡಿದ್ದೀಯಾ..."ಎಂದು ತಾಯಿ ಮಂಗಳಾ ಮಗನಿಗೆ ಸಾಥ್ ಕೊಟ್ಟರು.. ಗಾಯತ್ರಿ ಸಂಜನಾ ವಂದನಾ ಮೈತ್ರಿ ಎಲ್ಲರೂ ತಾಯಿಮಗನ ಪರವಾಗಿಯೇ ಜೈ ಎಂದಾಗ ಶಶಿಯತ್ತೆ, ಅಜ್ಜಿಯ ಮುಖ ಸಣ್ಣದಾಯಿತು..


   ಊಟ ಮಾಡಿ ಗಂಡಸರು ಸಣ್ಣ ನಿದ್ದೆ ತೆಗೆಯೋಕೆ ಹೋದರೆ ಮಂಗಳಮ್ಮ ಗಾಯತ್ರಿ ಇಬ್ಬರೂ ಊಟಕ್ಕೆ ಕುಳಿತರು.ಇಬ್ಬರಲ್ಲೂ ಎಂದಿನಂತೆ ಲವಲವಿಕೆ ಇಲ್ಲ...ಮೈತ್ರಿಯ ಜೀವನದಲ್ಲಿ ಏನೆಲ್ಲಿ ಬಿರುಗಾಳಿ ಏಳಲಿದೆಯೋ ಎಂಬ ಆತಂಕ ಇಬ್ಬರಲ್ಲೂ ಎದ್ದುಕಾಣುತ್ತಿತ್ತು.. ಎಲ್ಲರೂ ಬಾಯಿ ಚಪ್ಪರಿಸಿ ಉಂಡ ಊಟ ಇವರಿಗೆ ಗಂಟಲಿನಲ್ಲಿ ಬೇಕೋ ಬೇಡವೋ ಎನ್ನುವಂತೆ ಇಳಿಯುತ್ತಿದೆ.


     ಮೈತ್ರಿ, ಸಂಜನಾ ,ವಂದನಾ ,ಮಹೇಶ್ ಸೇರಿಕೊಂಡು ನಾವು ಪಡುಗುಡ್ಡೆಯ ಕಡೆಗೆ ಹೋಗಿಬರುತ್ತೇವೆ ಎಂದು ಹೊರಟಾಗ ಭಾಸ್ಕರ ಶಾಸ್ತ್ರಿಗಳು "ಒಂದು ಚೀಲ, ಕೊಕ್ಕೆ (ದೋಂಟಿ) ಕೊಂಡೊಯ್ಯಿರಿ .ಗೇರುಬೀಜ ಹಣ್ಣಾಗಿರಬಹುದು.. ಕೊಯ್ದು ತನ್ನಿ" ಎಂದರು.. ವಾಕಿಂಗ್ ಹೊರಟು ಹರಟೆ ಹೊಡೆಯಬೇಕು ಎಂದುಕೊಂಡವರಲ್ಲಿ ಕೆಲಸ ಹೇಳಿದ್ದು ಸ್ವಲ್ಪ ಕಿರಿಕಿರಿಯೆನಿಸಿದರೂ ಎದುರಾಡದೆ ಕೊಕ್ಕೆ, ಚೀಲದೊಂದಿಗೆ ಹೊರಟರು..ಎಲ್ಲರ ಕೈಯಲ್ಲೂ ಮೊಬೈಲ್ ಕಂಡಾಗ ಅಜ್ಜ.."ಪುಳ್ಳೀ..ಗೇರುಬೀಜ ಕೊಯ್ಯಲು ಮೊಬೈಲ್ ಬೇಕಾಗುವುದಾ..."ಎಂದಾಗ ಎಲ್ಲರೂ ಗೊಳ್ಳೆಂದು ನಕ್ಕರು..

      ಪಡುಗುಡ್ಡ ತಲುಪಿದ್ದೇ ತಡ ಎಲ್ಲರೂ ಬಂಡೆಯ ಮೇಲೆ ನಿಂತು ಸೆಲ್ಫೀ ಹೊಡೆಯುವುದರಲ್ಲಿ ತಲ್ಲೀನರಾದರು.. ಸಂಜನಾ ವಂದನಾಗೆ ಅಪರೂಪದ ಗುಡ್ಡಗಾಡಿನ ದೃಶ್ಯಗಳನ್ನು ಸಾಧ್ಯವಾದಷ್ಟು ಸೆರೆಹಿಡಿಯುವಾಸೆ .. ಸತ್ತು ಒಣಗಿದ ಮರವೂ ಸೆರೆಯಾಯಿತು.ಬಂಡೆಗಲ್ಲಿನಲ್ಲಿ ಬೆಳೆಯುವ ಪುಟ್ಟ ಅಶ್ವತ್ಥವೂ ತಾನೇನೂ ಕಮ್ಮಿಯಿಲ್ಲ ಎಂಬಂತೆ ಫೊಟೋ ಹೊಡೆಸಿಕೊಂಡಿತು...
ಇವರನ್ನು ಕಾಣುತ್ತಿದ್ದಂತೆ ಮುಂಗುಸಿಗಳು ಓಡತೊಡಗಿದವು.ಗುಡ್ಡದಲ್ಲಿ ಪೊದೆಗಳ ಎಡೆಯಲ್ಲಿ ನವಿಲಿನ ಮರಿಗಳು ಕಂಡುಬಂದವು ತಾಯಿ ನವಿಲು ಮರಿಗಳ ಪಹರೆ ಕೆಲಸಕೆ ನಿಂತಿತು...ತಾನು ಕೂಗಿ ಗಂಡು ನವಿಲನ್ನು ಕರೆಯಿತು.. ಗಂಡು ಹೆಣ್ಣು ಎರಡೂ ಸೇರಿ ಮರಿಗಳ ರಕ್ಷಣೆಗೆ ನಿಂತವು.. ಅವುಗಳಿಗೆ ತೊಂದರೆ ಕೊಡಬಾರದೆಂದು ನಿರ್ಧರಿಸಿ ದೂರಸರಿದರು.. ಮುಂದೆ ನಡೆಯುತ್ತಿದ್ದಂತೆ ಗೇರು ಮರವೊಂದು ಹಣ್ಣು ತುಂಬಿ ತೂಗುತ್ತಿತ್ತು.ಕೈಗೆಟುಕುವಂತಿದ್ದ ಹಣ್ಣುಗಳನ್ನು ಸಂಜನಾ ವಂದನಾ ಖುಷಿಯಿಂದ ಕೊಯ್ದರು..
ಎಲ್ಲರೂ ಗೇರುಬೀಜ ಕೊಯ್ಯಲು ಹೆಕ್ಕಲು ಆರಂಭಿಸುತ್ತಿದ್ದಂತೆ ಮೈತ್ರಿಯ ಫೋನ್ ರಿಂಗಾಯಿತು.. ಕಿಶನ್ ಕರೆಮಾಡಿದ್ದ..ಕರೆ ಕಟ್ ಮಾಡಿ "ಈಗ ಬೇಡ.. ರಾತ್ರಿ ಸಂದೇಶ ಕಳುಹಿಸು...ಇಲ್ಲಿ ಎಲ್ಲರೂ ಇದ್ದಾರೆ" ಎಂದು ಸಂದೇಶವನ್ನು ರವಾನಿಸಿದಳು..


                ****

    ಕಿಶನ್ ಎರಡು ತಿಂಗಳ ನಂತರ ಮನೆಗೆ ಬಂದ ಸಂಭ್ರಮ ಅವನ ಅಪ್ಪ ಅಮ್ಮನಿಗೆ.. ಮನೆಯಲ್ಲಿ ಅಡುಗೆಗಳು ತರಾವರಿ ನಡೆಯುತ್ತಿದ್ದವು..ಗಣೇಶ ಶರ್ಮ ಮಗನನ್ನು ಕರೆದು.." ಅದೇನೋ ನಿನ್ನ ಲವ್ ಮ್ಯಾಟರ್..ನಂಗೂ ಸ್ವಲ್ಪ ಬಿಡಿಸಿ ಹೇಳೋ.." ಅಂದರೆ ಕಿಶನ್ ಅಪ್ಪನಲ್ಲಿ ಹೇಳಲು ಸಂಕೋಚದಿಂದ ನಾಚಿದ್ದ... "ಕಿಶನ್ ಮತ್ತೆ ಹೇಳು ನಾನೂ ಕೇಳ್ಬೇಕು..ಈಗ ನಂಗೆ ಅಡುಗೆ ಕೆಲಸ ಇದೆ" ಎಂದು ಅಮ್ಮ ಹೇಳಿದಳು.. ಲವ್ ಮಾಡಲು ನಾಚದ ಕಿಶನ್ ಲವ್ ಸ್ಟೋರಿ ಹೇಳು ಎಂದಾಗ ಮುಖ ಕೆಂಪೇರಿಸಿದ್ದ...ತಂಗಿಯರೂ ಕರೆ ಮಾಡಿ ಅಣ್ಣನ ಕಾಲೆಳೆದರು... "ಹುಡುಗಿ ನೋಡೋಕೆ ನಾವೆಲ್ಲ ಬರೋದು ಬೇಡ್ವಾ ಭಾವ.." ಎಂದು ಮೊನ್ನೆ ಮೊನ್ನೆ ಮದುವೆಯಾದ ತಂಗಿ ಗಂಡನೂ ಕೇಳಿದರೆ.. ಕಿಶನ್ ಏನು ಹೇಳಬೇಕು.. ಪಾಪ..!!


     ಅಂತೂ ಕಿಶನ್  ಮೈತ್ರಿಯ ಕನಸಲ್ಲೇ ಮುಳುಗಿದ.ಸಂಜೆ ಅಪ್ಪ ಮಗ ಇಬ್ಬರೂ ಗ್ರಾಮ ದೇವಸ್ಥಾನಕ್ಕೆ ತೆರಳಿ ಮಂಗಲ ಕಾರ್ಯ ನಿರ್ವಿಘ್ನವಾಗಿ ನೆರವೇರುವಂತಾಗಲಿ ಎಂದು ಬೇಡಿಕೊಂಡು ಸೇವೆಯನ್ನು ಒಪ್ಪಿಸಿ ಮನೆಗೆ ಬಂದಾಗ ಕಿಶನ್ ಗೆ ಹೇಳತೀರದ ಸಮಾಧಾನದ ನಿಟ್ಟುಸಿರು..


       .             ****
 
   ನಿದ್ದೆಯಿಂದೆದ್ದ ಭಾಸ್ಕರನ ಮುಖಭಾವ ಪ್ರಶಾಂತವಾಗಿದ್ದನ್ನು ಕಂಡ ಶಶಿ  ತಮ್ಮನ ಹತ್ತಿರ ಸ್ವಲ್ಪ ಮಾತನಾಡುವುದಿದೆ ಎಂದು ಭಾಸ್ಕರನನ್ನು
ಚಾವಡಿಯ ಸೋಫಾಗೆ ಕರೆದಳು.ವಿಷಯ ಅರಿತಿದ್ದ ಮಂಗಳಾ ಇವತ್ತೊಂದು ದಿನ ತಾನೇ .. ಮಾವನಿಗೆ ಕಾಫಿ ತಡವಾದರೂ ಅಡ್ಡಿಯಿಲ್ಲ..ಮಗಳ ಬಾಳು ಹಾಳಾಗಬಾರದು ಎಂದು ತಾನೂ ಚಾವಡಿಗೆ ಬಂದು ಕುಳಿತಳು.ಗಾಯತ್ರಿ ತಾನೂ ಅಕ್ಕನ ಪಕ್ಕದಲ್ಲಿ ನಿಂತಳು..

ಶಶಿ ಅಣ್ಣ "..ಮುರಲಿಗೆ ಹುಡುಗಿ ಹುಡುಕುತ್ತಿದ್ದೇವೆ..ಮೊದಲು ತವರಿನ ಕೂಸನ್ನು ಕೇಳುವ ಸಂಪ್ರದಾಯ..ಅದರಂತೆ ನಿನ್ನ ಮಗಳನ್ನು ಕೇಳುತ್ತಿದ್ದೇವೆ.."ಎಂದಾಗ ಭಾಸ್ಕರ ರಾಯರು ಅವಾಕ್ಕಾದರು..

"ಸೋದರ ಸಂಬಂಧದಲ್ಲಾದರೆ ನಮ್ಮ ಮನೆತನದ ಸಂಪ್ರದಾಯ ಸಂಸ್ಕಾರಗಳು ಉಳಿಯುತ್ತವೆ..ಬೆಳೆಯುತ್ತವೆ..ಆ  ಮನೆಯಲ್ಲೂ ಶಶಿ  ನಮ್ಮ ಕ್ರಮವನ್ನು ಬಿಟ್ಟಿಲ್ಲ .ಮೈತ್ರಿಗೂ ಸೋದರತ್ತೆಯ ಜೊತೆ ಹೊಂದಾಣಿಕೆ ಸುಲಭ.."ಎಂದು ಮಗಳ ಪರವಾಗಿ ಮಾತನಾಡಿದರು ಮಹಾಲಕ್ಷ್ಮಿ ಅಮ್ಮ..

"ತಮ್ಮಾ.. ಇನ್ನೊಂದು ವರ್ಷಕ್ಕೆ ಶಂಕರನ ಮಗಳು ಸಂಜನಾಗೆ ಕೂಡಾ ವಯಸ್ಸು ಇಪ್ಪತ್ತು ದಾಟುತ್ತೆ.. ಮೈತ್ರಿಗೆ ಈಗಲೇ ಮದುವೆ ಮಾಡಿದರೆ ಮತ್ತೆ ಸಂಜನಾಗೆ ಮದುವೆ ಮಾಡಲು ಅಡ್ಡಿಯೇನಿಲ್ಲ..."ಎಂದು ಶಶಿ ಹೇಳಿದಾಗ..
ಗಾಯತ್ರಿ ಮಂಗಳಾ ಪರಸ್ಪರ ಮುಖ ನೋಡಿಕೊಂಡರು.. ಭಾಸ್ಕರ ಶಾಸ್ತ್ರಿಗಳು ಮೌನವಾಗಿ ಆಲೋಚಿಸಿದರು.

ಶ್ಯಾಮ ಶಾಸ್ತ್ರಿಗಳು .."ಕೇಶವ್ ನ ಕಡೆಯವರ ಉತ್ತರ ಬಂತೋ.. ಭಾಸ್ಕರ.."

"ಇಲ್ಲ..ಅಪ್ಪ.. ಇನ್ನೂ ಬಂದಿಲ್ಲ..."

ಶ್ಯಾಮ ಶಾಸ್ತ್ರಿಗಳು:ಅವರ ಉತ್ತರ ಬಂದ ಮೇಲೆ ಮುರಲಿಯ ಬಗ್ಗೆ ಯೋಚಿಸಿದರೆ ಸಾಕು...

ಭಾಸ್ಕರ ಶಾಸ್ತ್ರಿಗಳು: ಹೂಂ..

ಶಶಿ:ನಮ್ಮ ಮುರಲಿ ಹೊರಗಿನವನಲ್ಲ.. ನಿಮಗೆಲ್ಲರಿಗೂ ಗೊತ್ತು.. ವಿದ್ಯಾಭ್ಯಾಸ ಇದೆ, ಉದ್ಯೋಗ ಇದೆ, ಸಂಪಾದನೆ ಕೈತುಂಬಾ ಇದೆ.. ಯಾವುದಕ್ಕೂ ಕೊರತೆಯಿಲ್ಲ.. ಮೈತ್ರಿಯನ್ನು ಸುಖದಲ್ಲಿ ಮೆರೆಸುವ ಎಲ್ಲ ಯೋಗ್ಯತೆಯೂ ಅವನಿಗಿದೆ...

ಶಂಕರ: ಮುರಲಿ ಇದಕ್ಕೆ ಒಪ್ಪಿದ್ದಾನಾ ಅಕ್ಕಾ..
ಶಶಿ:ನಿಜ ಹೇಳಬೇಕೆಂದರೆ ಅವನು ಎರಡು ವರ್ಷಗಳ ಹಿಂದೆಯೇ ಮೈತ್ರಿಯನ್ನು ನಾನು ಮದುವೆಯಾಗುತ್ತೇನೆ ಅಂತಿದ್ದ..ನಾವೇ ಅವಳ ಓದು ಮುಗಿದು ಒಂದು ಇಂಜಿನಿಯರಿಂಗ್ ಸರ್ಟಿಫಿಕೇಟ್ ಕೈಲಿರಲಿ ಅಂತ ಕಾದೆವು.. ಈಗ ಕೋರ್ಸ್ ಮುಗಿಯುತ್ತಾ ಬಂತು..

ಶಂಕರ:ಹೌದೋ..

ಶ್ಯಾಮ ಶಾಸ್ತ್ರಿಗಳು:ಅವನಿಗಿಷ್ಟವಾಗಿದ್ದಾಳೆ ಮೈತ್ರಿ ಎಂದರೆ ಆಲೋಚನೆ ಮಾಡಿದರೆ ತಪ್ಪಲ್ಲ ಭಾಸ್ಕರ..

ಮಂಗಳಮ್ಮ ಮಾತನಾಡಬೇಕೆಂದು ನಾಲಿಗೆ ಮುಂದೆ ತಂದರೂ ಮಾತೇ ಹೊರಡುತ್ತಿಲ್ಲ..ಈ ಮದುವೆ ನನಗೆ ಇಷ್ಟವಿಲ್ಲ..ನನ್ನ ಮಗಳನ್ನು ಮುರಲಿಗೆ ಕೊಡಲಾರೆ ಎಂದು ಹೇಗೆ ಹೇಳಲಿ..ಗಂಡನಾದರೂ ಮೂಕವಾಗಿ ಕುಳಿತಿದ್ದಾರೆ..

ಶಶಿ: ಪೇಟೆಯಲ್ಲಿ ಮನೆ ಕೊಂಡುಕೊಳ್ಳುವ ಆಲೋಚನೆ ಮಾಡಿದ್ದಾನೆ ಮುರಲಿ.ಯಾವುದಕ್ಕೂ ಮದುವೆಯಾದ ಮೇಲೆ ಹೆಂಡತಿಗೆ ಬೇಕಾದಂತೆ ಫ್ಲಾಟ್ ಅಥವಾ ಸೈಟ್ ಕೊಳ್ಳುವ ಪ್ಲಾನ್ ಅವನದು.ಸ್ವಿಫ್ಟ್ ಕಾರು ಈಗಾಗಲೇ ಬುಕ್ ಮಾಡಿದ್ದಾನೆ..

ಭಾಸ್ಕರ: ಶಶಿ ಅಕ್ಕಾ ನೀನು ಹೇಳಿದ್ದೆಲ್ಲ ಸರಿ.. ಒಂದನ್ನು ಬಿಟ್ಟು..

ಶಶಿ:ಯಾವುದದು ಒಂದು...??????


ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
18-02-2020.


ನಮಸ್ತೇ..
    ಹೆಚ್ಚಿನ ಓದಿಗಾಗಿ ಬರಹದ ಕೆಳಗೆ ಇರುವ Home ಮತ್ತು  > ಈ ಸಂಕೇತಗಳನ್ನು ಬಳಸಿಕೊಳ್ಳಬಹುದು.. ಧನ್ಯವಾದಗಳು 💐🙏.

2 comments: