ಮೈತ್ರಿ ಗೆ ಊಟವೂ ಬೇಡವಾಗಿತ್ತು.ಲೈಟ್ ಆಫ್ ಮಾಡಿ ಮಲಗಿಕೊಂಡಳು.ಕಣ್ಮುಚ್ಚಿ ನಿದ್ರಿಸುವ ಪ್ರಯತ್ನ ಮಾಡಿದರೂ ಸಾಧ್ಯವಾಗದೆ ಒಂದೇ ಸಮನೆ ಹರಿಯುತ್ತಿರುವ ಕಣ್ಣೀರು ದಿಂಬನ್ನು ತೋಯಿಸಿತ್ತು.ಆಲೋಚಿಸುತ್ತಾ ಮಲಗಿದ್ದವಳಿಗೆ ಯಾವಾಗ ಕಣ್ಣಿಗೆ ನಿದ್ರೆ ಹತ್ತಿತೋ ತಿಳಿಯದು.. ಮೊಬೈಲ್ ಸಣ್ಣದಾಗಿ ಅಲಾರಾಂ ಹೊಡೆದಾಗ ಎಚ್ಚರವಾಯಿತು.. ಮೊದಲು ಸಿಗ್ನಲ್ ಇದೆಯೇ ಪರೀಕ್ಷಿಸಿದಳು.
ರಾತ್ರಿ ಹನ್ನೆರಡು ಗಂಟೆಯ ನಂತರ ಸಿಗ್ನಲ್ ಚೆನ್ನಾಗಿ ಸಿಗುತ್ತದೆ ಎಂದು ಗೊತ್ತಿದ್ದ ಮೈತ್ರಿ ಆ ಹೊತ್ತಿಗೆ ಏಳಲು ಅಲಾರಾಂ ಸಣ್ಣದಾಗಿ ಇಟ್ಟು ಮಲಗಿದ್ದಳು.ಕಿಶನ್ ಗೆ ಕಾಲ್ ಮಾಡಿದಳು.ನಾಲ್ಕಾರು ಬಾರಿ ಕರೆ ಮಾಡಿದರೂ ರಿಸೀವ್ ಮಾಡಲಿಲ್ಲ ಕಿಶನ್.
ಕಿಶನ್ ಕೆಲವು ದಿನಗಳಿಂದ ಬದಲಾದ ಮೈತ್ರಿ ಯ ನಡತೆಯಿಂದ ಬೇಸತ್ತಿದ್ದ.ಮಾತನಾಡಿದರೆ ಸರಿಯಾಗಿ ಉತ್ತರವಿಲ್ಲ... ಹೂಂ ಹಾಂ ಎಂದು ಚುಟುಕಾಗಿ ಉತ್ತರಿಸುವ ಮೈತ್ರಿ.. ಚುಟುಕು ಹಾಯ್ಕು ಗಳಿಗೆ ಮನಸಾದರೆ ಇಮೋಜಿ.. ಇಲ್ಲವಾದರೆ ಅದೂ ಇಲ್ಲ... ಹೀಗಿತ್ತು ಮೈತ್ರಿ ಯ ನಡೆ.. ಅವನಿಗೆ ಕಾರಣ ತಿಳಿದಿಲ್ಲ.ಅವಳು ಹೇಳುವ ಸ್ವಭಾವದವಳಂತೂ ಅಲ್ಲ.ಕಿಶನ್ ಗೆ ಮೈತ್ರಿ ನನ್ನನ್ನು ಬೇಕೆಂದೇ ಕಡೆಗಣಿಸುತ್ತಾ ಇದ್ದಾಳೆ ಎಂಬ ಭಾವನೆ ಮೂಡಿತ್ತು. ಬಹಳ ಬೇಸತ್ತು ನಿದ್ದೆಯ ಸಮಯವನ್ನು ಚಿಂತೆಯು ನುಂಗಿಹಾಕಿತ್ತು.ಆದ್ದರಿಂದ ಶನಿವಾರ ಮೈತ್ರಿ ಗೆ ಸಂದೇಶ ಕಳುಹಿಸುವ ಗೋಜಿಗೆ ಹೋಗದೆ ಮೊಬೈಲ್ ಬದಿಗಿರಿಸಿ ತನ್ನ ಕೆಲಸಗಳತ್ತ ಗಮನ ಹರಿಸಿ ಬೇಗನೆ ನಿದ್ದೆ ಮಾಡಿದ್ದ. ಎರಡು ಮೂರು ದಿನದ ನಿದ್ದೆಯ ಅಭಾವದ ಕಾರಣ ಬೇಗನೆ ಗಾಢನಿದ್ರೆಗೆ ಜಾರಿದ್ದ.
ಕಿಶನ್ ಕರೆ ಸ್ವೀಕರಿಸದೆ ನಿರಾಶಳಾದ ಮೈತ್ರಿ ತನ್ನ ಸಂಕಟವನ್ನೆಲ್ಲಾ ಬರಹ ರೂಪಕ್ಕಿಳಿಸಿ ಸಂದೇಶ ರವಾನಿಸಿದಳು.ಅಪ್ಪನ ಶಿಸ್ತು, ಬರ್ತ್ ಡೇ ದಿನದ ಚೂಯಿಂಗ್ ಗಮ್ ಪ್ರಸಂಗ,ವಧುಪರೀಕ್ಷೆ ವರೆಗಿನ ಸಂಗತಿಗಳು ,ತನ್ನ ಮನದಾಳದ ಉತ್ಕಟ ಪ್ರೇಮವು ಸುಂದರವಾಗಿ ಅಕ್ಷರದಲ್ಲಿ ಕುಳಿತಿತ್ತು..ಸಂದೇಶ ಕಳುಹಿಸಿದ ಮೈತ್ರಿ ಒಮ್ಮೆಗೆ ಸಮಾಧಾನಪಟ್ಟುಕೊಂಡಳು. ಭಾರವನ್ನೆಲ್ಲ ಕಿಶನ್ ನ ಹೆಗಲಿಗೆ ವರ್ಗಾಯಿಸಿದ್ದೇನೆ ಎಂಬ ನಿರಾಳ ಭಾವ ಅವಳದಾಗಿತ್ತು.
ಅಷ್ಟರಲ್ಲಿ ಚಾವಡಿಯಲ್ಲಿ ಮಲಗಿದ್ದ ಅಜ್ಜ ಎಚ್ಚರಗೊಂಡು "ಪುಳ್ಳೀ.
.ಗಂಟೆ ಒಂದಾಯಿತು..ಇನ್ನೂ ಮಲಗಿಲ್ಲವಾ... ಅಷ್ಟೊಂದು ನಿದ್ದೆಗೆಟ್ಟು ಓದುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ..." ಎಂದು ಅಜ್ಜ ಹೇಳುವುದು ಕೇಳಿಸಿ ಅಜ್ಜನಿಗೆ ತಿಳಿದೇ ಹೋಯಿತು ಎಂದು ಪಕ್ಕನೆ ಲೈಟ್ ಆಫ್ ಮಾಡಿ ಮಲಗಿಬಿಟ್ಟಳು..ಸಮಾಧಾನಗೊಂಡ ಮನಸ್ಸು ಸುಲಭವಾಗಿ ಸುಖ ನಿದ್ದೆಗೆ ಶರಣಾಯಿತು.
ಬೆಳಗ್ಗೆ ಶಾಂತವಾಗಿದ್ದ ಮಗಳ ಮುಖವನ್ನು ಕಂಡು ಮಂಗಳಮ್ಮ ಮತ್ತು ಮಹಾಲಕ್ಷ್ಮಿ ಅಮ್ಮ ನ ದುಗುಡವೂ ದೂರವಾಯಿತು.ವರನ ಕಡೆಯವರು ಬರುವರೆಂದು ಬಹಳ ವೇಗವಾಗಿ ತಯಾರಿ, ಮನೆಯನ್ನು ಚೊಕ್ಕಟವಾಗಿಡುವ ಕೆಲಸದಲ್ಲಿ ಎಲ್ಲರೂ ನಿರತರಾಗಿದ್ದರು.ಮೈತ್ರಿ ಆಗಾಗ ಮೊಬೈಲ್ ಪರದೆಯನ್ನು ದಿಟ್ಟಿಸಿ ನೋಡುತ್ತಾ ಇದ್ದಳು.ಮಧ್ಯಾಹ್ನವಾದರೂ ಕಿಶನ್ ಸಂದೇಶವನ್ನು ಓದಿದ ಕುರುಹು ಲಭ್ಯವಾಗಲಿಲ್ಲ.ಪುನಃ ಮನವು ಭಾರವಾಗತೊಡಗಿತು.ಕಣ್ಣಂಚಿನಿಂದ ಅರಿವಿಲ್ಲದೇ ನೀರು ಜಿನುಗಲು ಆರಂಭವಾಯಿತು.
ಮಗಳು ರೂಮಿನಲ್ಲಿ ಅಳುತ್ತಿದ್ದುದನ್ನು ಕಂಡು ತಾಯಿ ಮಂಗಳಮ್ಮನ ಕರುಳು ಚುರುಕ್ ಎಂದಿತು.ಕೆಲಸಗಳನ್ನು ಬದಿಗಿರಿಸಿ ಮಗಳ ರೂಮಿಗೆ ಬಂದು ಮಗಳ ಪಕ್ಕದಲ್ಲಿ ಕುಳಿತು ಸಮಾಧಾನಪಡಿಸುವ ಪ್ರಯತ್ನ ಮಾಡಿದರು.ಎಷ್ಟು ಹೇಳಿದರೂ ಅಳುನಿಲ್ಲಿಸದ ಮಗಳಲ್ಲಿ "ನಿನಗೆ ಇಷ್ಟವಿಲ್ಲದಿದ್ದರೆ ಬೇಡ.. ಆದರೆ ಇಂದು ಬರುತ್ತೇನೆ ಎಂದು ಹೇಳಿದವರನ್ನು ಬರಬೇಡಿ ಎಂದು ಹೇಳುವುದು ನಮ್ಮ ಮನೆತನದ ಸಂಸ್ಕಾರಕ್ಕೆ ಉಚಿತವಲ್ಲ..ಹಾಗಾಗಿ ಬಂದು ಹೋಗಲಿ.. ಮತ್ತೆ ನಮ್ಮ ಉತ್ತರ ನಿನ್ನ ಇಚ್ಛೆಯಂತೆ ತಿಳಿಸೋಣ..ಜಾತಕ ಕೊಟ್ಟಾಗಲಿಲ್ಲವಲ್ಲಾ..ಈ ಕಡೆ ಬಂದ ಕಾರಣ ಒಮ್ಮೆ ಮನೆವರೆಗೆ ಬರುತ್ತಿದ್ದಾರೆ ಅಷ್ಟೆ.."ಎಂದು ಹೇಳಿ..
"ದಯವಿಟ್ಟು ಅವರೆಲ್ಲ ಬರುವಾಗ ಹೀಗೆ ಅಳುತ್ತಾ ಕುಳಿತು ಕುಟುಂಬದ ಘನತೆಯನ್ನು ಕಳೆಯದಿರು ಮಗಳೇ.."ಎಂದು ದೈನ್ಯವಾಗಿ ಗೋಗರೆದರು.ಅಮ್ಮನ ಮಾತನ್ನು ನಂಬಿದ ಮೈತ್ರಿ ಒಪ್ಪಿದಳು.
ಊಟವಾದ ಬಳಿಕ ಭಾಸ್ಕರ ಶಾಸ್ತ್ರಿಗಳು ಒಂದೇ ಸಮನೆ ಮೈತ್ರಿಗೆ ಸೀರೆಯುಟ್ಟು ತಯಾರಾಗಬೇಕು ಎಂದು ಹೇಳುತ್ತಿದ್ದರು.. ಮೈತ್ರಿಯ ಬಳಿ ಇದ್ದುದು ಸರಿಯಾದ್ದು ಒಂದೇ ಸೀರೆ..ಆ ಸೀರೆ ಮೊದಲ ಬಾರಿ ಅವಳು ಉಟ್ಟಿದ್ದು..ಅದೇ ದಿನ ಕಿಶನ್ ದೇವಸ್ಥಾನದಲ್ಲಿ ಅವಳೆದುರು ಕೆಂಪು ಗುಲಾಬಿಯನ್ನು ಹಿಡಿದು ನಿಂತದ್ದು...ಈ ಸುಮಧುರ ನೆನಪುಗಳ ಬಾಂಧವ್ಯ ಹೊಂದಿರುವ ಸೀರೆಯನ್ನು ಇನ್ನೊಬ್ಬ ಹುಡುಗನೆದುರು ಉಟ್ಟು ನಿಲ್ಲುವ ಮನಸ್ಸು ಅವಳಿಗಿಲ್ಲ... ಮೊದಲ ಪ್ರೇಮದ ನೋಟ,ಮೊದಲ ಸೀರೆ,ಮೊದಲು ಮನಗೆದ್ದ ಹುಡುಗ ...ಇದೆಲ್ಲ ಅವಳ ಮತ್ತು ಕಿಶನ್ ನ ಶೃಂಗಾರಮಯ ಬಾಂಧವ್ಯದ ಅಡಿಗಲ್ಲು.ಆದ್ದರಿಂದಲೇ ಆ ಸೀರೆಯನ್ನು ಉಡಲಾರೆ ಎಂದು ಅವಳೂ ಹಠಕ್ಕೆ ನಿಂತಳು...
ಅಜ್ಜಿ "ಪುಳ್ಳೀ..ಹಾಗೆಲ್ಲ ಮಾಡಬಾರದು.."ಎನ್ನುತ್ತಾ ತನ್ನದೂ ಒಂದಿಷ್ಟು ಉಪದೇಶ ಮಾಡಿದಳು.ಆದರೂ ಬಗ್ಗದ ಮೈತ್ರಿ ಗೆ ಅಪ್ಪನ " ಸೀರೆಯುಡುತ್ತೀಯೋ ಇಲ್ಲವೋ..ನಿನಗೆ ಬೇಕಾದಂತೆ ಎಲ್ಲವನ್ನೂ ಮಾಡಿಕೊಡುತ್ತಿದ್ದ ತಪ್ಪಿಗೆ ಈ ಉದ್ಧಟತನ..ಅವರು ಬರುವ ವೇಳೆಯಾಯಿತು..ಬೇಗ ತಯಾರಾಗಿ ಹೊರಬಂದರೆ ಸರಿ..ಇಲ್ಲವೆಂದರೆ ಪರಿಣಾಮ ನೆಟ್ಟಗಿರದು.."ಎಂದು ಗುಡುಗಿದರು.. ಮೈತ್ರಿ ಹೆದರಿ ನಡುಗಿದಳು..ಮನಸ್ಸಿಲ್ಲದ ಮನಸ್ಸಿನಿಂದ ಅಮ್ಮನ ಹಳೆಯ ಬಣ್ಣ ಮಾಸಿದ ಸೀರೆಯೊಂದನ್ನು ಉಟ್ಟು ನಿಂತಿದ್ದಳು..
ಮಹೇಶ್ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ.ಆದರೆ ವಯಸ್ಸಿನಲ್ಲಿ ಎಲ್ಲರಿಗಿಂತ ಚಿಕ್ಕವನಾದ್ದರಿಂದ ಏನೂ ಮಾತನಾಡುವಂತಿರಲಿಲ್ಲ .ಅಕ್ಕನ ಕಣ್ಣೀರು ಅವನಿಗೆ ಬೇಸರವುಂಟುಮಾಡಿತ್ತು.
ತೋಟದಾಚೆ ವಾಹನ ಬಂದ ಶಬ್ದ ಕೇಳಿಸಿತು.ಎಲ್ಲವೂ ಸರಿಯಾಗಿ ತಯಾರಿದೆ ತಾನೇ ಎನ್ನುತ್ತಾ ಪಂಚೆಯನ್ನೊಮ್ಮೆ ಮೇಲೆತ್ತಿ ಕಟ್ಟಿಕೊಂಡು ಭಾಸ್ಕರ ಶಾಸ್ತ್ರಿಗಳು ಒಳಬಂದು ಕಣ್ಣುಹಾಯಿಸಿ ಹೋದರು.ಮಹಾಲಕ್ಷ್ಮಿ ಅಮ್ಮ" ಎಲ್ಲವೂ ತಯಾರಿದೆ" ಅಂದಾಗ ಹೊರನಡೆದರು.
ಆದರಾತಿಥ್ಯಕ್ಕೆ ಬೇಕಾದ್ದೆಲ್ಲವೂ ತಯಾರಾಗಿತ್ತು.ಪಾನೀಯ ,ತಿಂಡಿ ವ್ಯವಸ್ಥೆ, ಹೇಗೆ ಉಪಚರಿಸಬೇಕೆಂದು ಮನೆಯವರಿಗೆ ಭಾಸ್ಕರ ಶಾಸ್ತ್ರಿಗಳು ಮೊದಲೇ ಸೂಚನೆ ನೀಡಿದ್ದರು.ಎಲ್ಲವೂ ಸರಿಯಾಗಿತ್ತು.. ಆದರೆ ವಧು ಮೈತ್ರಿಯ ಮೊಗದ ನಗು ಮಾಯವಾಗಿತ್ತು.ಮಂಗಳಮ್ಮನಲ್ಲೂ ವೇದನೆಯ ಎಳೆಯೊಂದು ಕಾಣಿಸುತ್ತಿತ್ತು.
ಮನೆಯ ಅಂಗಳದಲ್ಲಿ " ಬಾರಂತಡ್ಕ"ಎನ್ನುವ ಹೆಸರನ್ನು ಹೊತ್ತಿದ್ದ ಜೀಪು ಬಂದು ನಿಂತಿತು. ಜೀಪಿನಿಂದ ಕೆಳಗಿಳಿದವರನ್ನು ಭಾಸ್ಕರ ಶಾಸ್ತ್ರಿಗಳು ಕೈಕಾಲು ತೊಳೆಯಲು ನೀರು ಕೊಟ್ಟು ..ಮಂಗಳಮ್ಮ ಒರೆಸಲು ಶುಭ್ರ ಬಿಳಿ ಟವೆಲ್ ಕೊಟ್ಟು ಸ್ವಾಗತಿಸಿದರು.ಮೂರು ಜನ ಗಂಡಸರು ಎರಡು ಜನ ಹೆಂಗಸರು ಆಗಮಿಸಿದ್ದರು.ಮುಖ ನೋಡಿದಾಗಲೇ ಸಿರಿವಂತರು ಎಂದು ಎದ್ದು ತೋರುತ್ತಿತ್ತು.ಹುಡುಗನನ್ನು ಕಣ್ಣಲ್ಲೇ ಅಳೆಯುತ್ತಿದ್ದರು ಭಾಸ್ಕರ ಶಾಸ್ತ್ರಿಗಳು.
ಮಂಗಳಮ್ಮ , ಮಹಾಲಕ್ಷ್ಮಿ ಅಮ್ಮ ಬೆಲ್ಲ ನೀರು ಕೊಟ್ಟು ಬಾಯಾರಿಕೆ ತಣಿಸಿದರು.ಮಾತುಕತೆ, ಎರಡೂ ಕಡೆಯವರ ಪರಿಚಯ ನಡೆಯಿತು.ಮೈತ್ರಿಯಲ್ಲಿ ಶರಬತ್ತು ತರಲು ಹೇಳಿದರು ಭಾಸ್ಕರ ಶಾಸ್ತ್ರಿಗಳು.ಮಹೇಶ ಶರಬತ್ತು ಲೋಪಗಳಿಗೆ ಹಾಕಿ ತಯಾರು ಮಾಡಿಟ್ಟಿದ್ದ.. ಕೊಂಡೊಯ್ಯುವ ಕೆಲಸವಷ್ಟೆ ಬಾಕಿಯಿತ್ತು ಮೈತ್ರಿಗೆ.ಅವಳ ಕೈ ಕಾಲುಗಳು ನಡುಗುತ್ತಿದ್ದವು.ತುಟಿಗಳು ಒಣಗಿ ಬಿರಿಯುತ್ತಿದ್ದವು.ಕಾಲೇಜಿನಲ್ಲಿ ಎಷ್ಟೋ ಹುಡುಗರನ್ನು ಹತ್ತಿರದಿಂದ ನೋಡಿದರೂ,ಮಾತನಾಡಿದರೂ...ಇಲ್ಲಿ ಎಲ್ಲರ ಮುಂದೆ ಮನಸಿಗೊಪ್ಪದ ವರನ ಮುಂದೆ ಶರಬತ್ತು ಹಿಡಿದು ನಿಲ್ಲುವುದು ಅವಳಿಗೇಕೋ ಹಿಂಸೆಯೆನಿಸಿತ್ತು..ಆದರೂ ಅಪ್ಪನ ಬೆದರಿಕೆಗೆ ಮಣಿದು ಮಾಡಲೇಬೇಕಿತ್ತು..
ಮೆಲ್ಲನೆ ಶರಬತ್ತಿನ ಟ್ರೇ ಹಿಡಿದು ಚಾವಡಿಗೆ ಬಂದಳು ಮೈತ್ರಿ.ಎಲ್ಲರ ಕಣ್ಣು ಅವಳ ಮೇಲೆ ನೆಟ್ಟಿತ್ತು.ಇಬ್ಬರು ಹೆಂಗಸರು "ಕೂಸು ಚೆಂದಯಿದ್ದು..."ಎಂದು ಪಿಸುಗುಟ್ಟುವುದು ಮೈತ್ರಿಯ ಕಿವಿಗೂ ಬಿತ್ತು.. ಮೈತ್ರಿಯ ಜೊತೆ ಮಂಗಳಮ್ಮನೂ ಇದ್ದರು.ಮೈತ್ರಿ ಶರಬತ್ತಿನ ತಟ್ಟೆಯನ್ನು ವರನ ಮುಂದೆ ಹಿಡಿದಾಗ ಮಂಗಳಮ್ಮನೇ ಲೋಟವನ್ನು ವರನ ಕೈಗಿತ್ತರು.ಎಲ್ಲರಿಗೂ ಹೀಗೇ ಕೊಡುತ್ತಾ ಸಾಗಿದರು.ಶರಬತ್ತು ಹಂಚಿದ ಮೇಲೆ ಚಾವಡಿಯಲ್ಲಿ ನಿಲ್ಲದೆ ಮೈತ್ರಿ ಸೀದಾ ಒಳಗೆ ಹೋದಳು.ವರನ ಮುಖವನ್ನು ಅವಳು ನೋಡಲೇ ಇಲ್ಲ.ಅವಳಿಗದು ಇಷ್ಟವೂ ಇರಲಿಲ್ಲ.
ವರ ಮಹಾಶಯನಂತೂ ಇಂಜಿನಿಯರಿಂಗ್ ಓದಿದ ಕೂಸಾದರೂ ಬಲು ನಾಚಿಕೆ ಸ್ವಭಾವದ ಕೂಸು ಎಂದು ನಿರ್ಧರಿಸಿ ಬಿಟ್ಟಿದ್ದ.ವರನ ಕಡೆಯವರು ಮಾತನಾಡಲು ಹುಡುಗಿಯನ್ನು ಕರೆಯಲು ಹೇಳಿದರು.ಮಗಳ ಮನಸ್ಥಿತಿ ಅರಿವಿದ್ದ ಮಂಗಳಮ್ಮ "ಜಾತಕ ಹೊಂದಾಣಿಕೆ ಇನ್ನೂ ನೋಡಿಲ್ಲ..ಅದಕ್ಕೂ ಮೊದಲೇ ಹುಡುಗಿಯನ್ನು ಹುಡುಗ ಮಾತನಾಡಿಸುವುದು ನನಗೇಕೋ ಸರಿಕಾಣುತ್ತಿಲ್ಲ.. ಬೇಕಾದರೆ ನೀವು ಹೆಣ್ಮಕ್ಕಳು ಒಳಗೆ ಹೋಗಿ ಅವಳನ್ನು ಮಾತನಾಡಿಸಿ ..."ಎಂದು ಹೇಳಿದಾಗ ಮಾವ ಶ್ಯಾಮ ಶಾಸ್ತ್ರಿಗಳು ಸೊಸೆಯ ಮಾತನ್ನು ಪುರಸ್ಕರಿಸಿದರು.ಇದು ಹುಡುಗನ ಕಡೆಯವರಿಗೆ ತುಸು ನಿರಾಸೆಯುಂಟುಮಾಡಿತು..ಹೆಣ್ಮಕ್ಕಳು ಒಳಗೆ ಹೋಗಿ ಮೈತ್ರಿಯನ್ನು ಮಾತನಾಡಿಸಿ ಬಂದರು.ಅವರು ಹುಡುಗನ ತಾಯಿ ಮತ್ತು ಸೋದರತ್ತೆ ಆಗಿದ್ದರು..ಹುಡುಗನ ತಾಯಿ "ಹಳ್ಳಿ ಇಷ್ಟವಿದೆಯಾ,ಮನೆಕೆಲಸ ಬರುತ್ತಾ, ಉದ್ಯೋಗಕ್ಕೆ ಹೋಗದೆ ಮನೆಯಲ್ಲೇ ಇರುವುದು ಇಷ್ಟವಿದೆಯಾ, ಹಾಡಲು,ರಂಗೋಲಿ ಹಾಕಲು ಬರುತ್ತಿದೆಯಾ ...."ಎಂದೆಲ್ಲ ಇಂಟರ್ವ್ಯೂ ಮಾಡಿ ಮುಗಿಸಿದರು..
ಮುಂದುವರಿಯುವುದು...
✍️... ಅನಿತಾ ಜಿ.ಕೆ.ಭಟ್.
08-02-2020.
ನಮಸ್ತೇ...
ಹೆಚ್ಚಿನ ಓದಿಗಾಗಿ Home ಮತ್ತು > ಸಂಕೇತಗಳನ್ನು ಬಳಸಿ.. ಬರಹದ ಮೇಲ್ಭಾಗದಲ್ಲಿ ಲಿಂಕ್ ನ ಪಕ್ಕದಲ್ಲಿ ಮೂರು ಡಾಟ್ ಮತ್ತು ಗೆರೆಗಳಿವೆ.ಅಲ್ಲಿ ಕ್ಲಿಕ್ ಮಾಡಿ.ಶೇರ್ ಆಪ್ಷನ್ ಬಳಸಿ ವಾಟ್ಸಪ್ ಫೇಸ್ಬುಕ್ ಮೆಸೇಂಜರ್....ಇತ್ಯಾದಿ ಗಳಲ್ಲಿ ಶೇರ್ ಕೂಡಾ ಮಾಡಬಹುದು..
ಧನ್ಯವಾದಗಳು.. 💐🙏.
Chennagide
ReplyDeleteಥ್ಯಾಂಕ್ಯೂ 🌹💐
ReplyDeleteSuper story..
ReplyDeleteಥ್ಯಾಂಕ್ಯೂ...💐🙏
ReplyDelete