ಮಹೇಶ್ ಬಾರಂತಡ್ಕ ದವರು ಜಾತಕ ತೋರಿಸುವ ಜೋಯಿಸರಲ್ಲಿಗೆ ಮಧ್ಯಾಹ್ನ ತೆರಳಿದ್ದ . ಬಹಳಷ್ಟು ಜನ ಸಾಲುಗಟ್ಟಿ ನಿಂತಿದ್ದರು..ತಾನು ಹೀಗೆ ಕಾದು ಕುಳಿತರೆ ರಾತ್ರಿ ವರೆಗೆ ಕಾಯಬೇಕಾದೀತು ಎಂದು ಲೆಕ್ಕ ಹಾಕಿದನು..
ಆ ಮನೆಯ ಅಂಗಳದಲ್ಲಿ ಅಜ್ಜಿಯೊಬ್ಬರು ಬಟ್ಟೆ ಒಣಹಾಕುವುದನ್ನು ಕಂಡನು.ಮೆಲ್ಲನೆ ಅಜ್ಜಿಯ ಬಳಿಗೆ ತೆರಳಿ ತನ್ನ ಪರಿಚಯ, ತಾನು ಈ ಹಿಂದೆ ಮಾವನೊಂದಿಗೆ ಬಂದಿದ್ದೇನೆ ಎಂದು ತಿಳಿಸಿದನು..ವಯಸ್ಸಾದ ಜೀವ.. ಪ್ರೀತಿಯಿಂದ ಒಳಗೆ ಬಾ ಎಂದು ಕರೆದೇಬಿಟ್ಟರು.. ಸ್ವಲ್ಪ ಅರ್ಜೆಂಟ್ ಇತ್ತು ನನಗೆ ಎಂದು ಅವರಲ್ಲಿ ತಿಳಿಸಿದನು..
"ಇರು.. ಹಾಗಾದರೆ..ಈಗ ಮೂರು ಗಂಟೆಗೆ ಕಾಫಿ ಕುಡಿಯಲು ಮಗ (ಜೋಯಿಸರು)ಒಳಗೆ ಬರುತ್ತಾನೆ..ಆಗ ಇಲ್ಲಿಯೇ ಮಾತಾಡುವಿಯಂತೆ.."ಎಂದು ಹೇಳಿ ಒಂದು ಗ್ಲಾಸ್ ಕಾಫಿ ಕೊಟ್ಟರು..ಹಸಿದಿದ್ದ ಮಹೇಶ್ ಗಟಗಟನೆ ಕುಡಿದುಬಿಟ್ಟ..
"ಅಯ್ಯ.. ಮಾಣಿ..ಇನ್ನೂ ಊಟ ಆಯಿದಿಲ್ಯ..ಬಾ..ಬಡಿಸುವೆ.."ಎಂದು ಹೇಳಿ ಒಳಗೆ ಕರೆದೊಯ್ದು ಬಾಳೆಲೆ ಹಾಕಿ ಕುಳಿತುಕೊಳ್ಳಲು ಮಣೆ ಕೊಟ್ಟು ಊಟ ಬಡಿಸಿದರು.. ಪ್ರೀತಿಯಿಂದ ಬಾಯ್ತುಂಬಾ ಪಟಪಟ ಮಾತನಾಡುತ್ತಾ ಅಜ್ಜಿ ಬಡಿಸಿದರು..ಸೊಸೆ ತವರಿಗೆ ಹೋಗಿದ್ದಾಳೆ ಎಂದು ಹೇಳಿ ಮನೆಯ ಸುದ್ದಿ ಕೇಳಿಕೊಂಡರು..ನಿನ್ನ ಅಜ್ಜಿ ನನಗೆ ದೂರದ ಸಂಬಂಧಿ ಎಂದು ಮಾತಾಡುತ್ತಾ ಸಂಬಂಧವನ್ನೂ ಹೊಸೆದರು...
ಜೋಯಿಸರು ಕಾಫಿ ಕುಡಿಯಲು ಬರುತ್ತಿದ್ದಂತೆ ತಾನು ಹೇಳಿದ ಪರಿಚಯವನ್ನೆಲ್ಲ ಚಾಚೂ ತಪ್ಪದೆ ಪಟಪಟನೆ ಮಗನಿಗೊಪ್ಪಿಸಿ "ಶಾಸ್ತ್ರಿಗಳ ಮನೆ ಮಾಣಿ..ಇಲ್ಲೇ ಮಾತಾಡ್ಸಿ ಕಳಿಸಿಕೊಡು" ಎಂದು ಕೇಳಿಕೊಂಡರು..
ಜೋಯಿಸರಲ್ಲಿ ಏನೆಂದು ಹೇಳುವುದೆಂದು ಆತಂಕವಾಯಿತು ಮಹೇಶನಿಗೆ..ಆದರೂ ಹೇಳದೆ ವಿಧಿಯಿಲ್ಲ.. ತಡವರಿಸುತ್ತಾ ಹೇಳಿದ... ಜೋಯಿಸರು ಏನು ಹೇಳುತ್ತಾರೋ ಎಂಬ ಭಯವೂ ಒಳಗೊಳಗೇ ಇತ್ತು..
ಸಮಾಧಾನದಿಂದ ಆಲಿಸಿದ ಜೋಯಿಸರು "ಆ ವಿಚಾರ ನನಗೆ ಬಿಟ್ಟು ಬಿಡು.. ಶಾಸ್ತ್ರಿಗಳ ಕುಟುಂಬಕ್ಕೆ ಸರಿಯಾದ ಕುಟುಂಬ ಅಲ್ಲ ಬಾರಂತಡ್ಕ... ಕೇಶವ್ ನ ನಡವಳಿಕೆಯ ಬಗ್ಗೆಯೂ ಟೀಕೆಗಳಿವೆ...ನೀನೇನೂ ಯೋಚನೆ ಮಾಡಬೇಡ..ನನಗೂ ಒಬ್ಬಳು ಮಗಳಿದ್ದಾಳೆ..ಒಬ್ಬ ತಂದೆಯಾಗಿ ಮಗಳು ಒಳ್ಳೆಯ ಮನೆಸೇರಲಿ ಎಂದು ಬಯಸುವವನು..ನಿನ್ನ ಅಕ್ಕನನ್ನೂ ಅಂತೆಯೇ ಕಂಡು ಒಳ್ಳೆಯದಲ್ಲದ ಆ ಸಂಬಂಧ ಕುದುರದಂತೆ ನೋಡಿಕೊಳ್ಳುತ್ತೇನೆ.."ಎಂದು ಭರವಸೆಯಿತ್ತರು...
ಮಹೇಶ್ ನಿಶ್ಚಿಂತೆಯಿಂದ ಮನೆಕಡೆಗೆ ಬೈಕ್ ಸ್ಟಾರ್ಟ್ ಮಾಡಿ ಸಾಗಿದ..
*****
ಕಿಶನ್ ಸಂಜೆ ಆಫೀಸಿನಿಂದ ರೂಮಿಗೆ ತಲುಪಿದ ಕೂಡಲೇ ಮನೆಗೆ ಕರೆ ಮಾಡುತ್ತಾನೆ..ಅಪ್ಪ ಈ ಹೊತ್ತಿನಲ್ಲಿ ಮನೆಯಲ್ಲಿರುತ್ತಾರೆ ಎಂದು ಗೊತ್ತಿತ್ತು..ಅಪ್ಪನೊಡನೆ ತನ್ನ ಮನಸಿನ ಅನಿಸಿಕೆಗಳನ್ನು ಹಂಚಿಕೊಳ್ಳಲು ತುಂಬಾ ಹೆದರಬೇಕಾದ ಪರಿಸ್ಥಿತಿ ಅವರ ಮನೆಯಲ್ಲಿ ಇರಲಿಲ್ಲ..ಅಪ್ಪನೆಂದರೆ ಹೆಚ್ಚು ಕಡಿಮೆ ಒಬ್ಬ ಗೆಳೆಯನಂತೆ ಇದ್ದರು.. ಫೋನ್ ಕರೆ ಸ್ವೀಕರಿಸಿದವರು ಅಪ್ಪ ಗಣೇಶ ಶರ್ಮ.
"ಹಲೋ.. ನಾನು ಕಿಶನ್.."
"ಹೇಳು..ಮಗ...ಏನೋ .... ತುಂಟಾಟ ಭಾರೀ ಜೋರಂತೆ.."
"ಅಪ್ಪಾ...ಅದೂ..."
"ಅದೂ ಇಲ್ಲ ಇದೂ ಇಲ್ಲ..ಎಲ್ಲಾ ಹೇಳಿದಾಳೆ ನಿಮ್ಮಮ್ಮ...."
"ಆದಷ್ಟು ಬೇಗ ಮುಂದುವರಿಯಬೇಕಾಗುತ್ತೆ ಅಪ್ಪಾ..."
"ಆಹಾ...!! ತುಂಟ ಮಾಣಿ...ಈಗಲೇ ಅವಸರ ನೋಡು..."
"ಹಾಗಲ್ಲ ಅಪ್ಪ.... ಅವಳು ಶಾಸ್ತ್ರಿಗಳ ಮಗಳು..ಬಹಳ ಸಂಪ್ರದಾಯಸ್ಥ ಕುಟುಂಬದ ಹುಡುಗಿ.. ಈಗಾಗಲೇ ಗಂಡು ಹುಡುಕಲು ಆರಂಭಿಸಿದ್ದಾರೆ..."
"ಹ್ಹ ಹ್ಹ ಹ್ಹಾ.. (ಜೋರಾಗಿ ನಗುತ್ತಾ) ...ನಿನಗೀಗ ಅದೇ ಆತಂಕ.. ಅಲ್ವಾ.. ಏನಾದ್ರೂ ಗಿಣಿ
ತಪ್ಪಿಸ್ಕೊಂಡು ಹೋದ್ರೆ ಅಂತ.."
"ಅಲ್ಲಪ್ಪಾ.. ನೀವು ಹಾಸ್ಯ ಮಾಡ್ತಿದೀರಾ..ನಾನು ಗಂಭೀರವಾಗಿ ...."
"ನಾನೇನೂ ಹಾಸ್ಯ ಮಾಡ್ತಿಲ್ಲ ಕಣೋ... ಶ್ರೀಮಂತ ಸಂಪ್ರದಾಯಸ್ಥರ ಮನೆ ಹುಡುಗಿ ನಮ್ಮನೆ ಹುಡುಗನ್ನ ಇಷ್ಟಪಡೋದು ದೊಡ್ಡ ವಿಷಯ ... ಅವರು ಒಪ್ಪಿದ್ರೆ ನನ್ನ ಅಭ್ಯಂತರವಿಲ್ಲ..ಈ ವರ್ಷವೇ ವಾಲಗ ಊದಿಸಿಯೇ ಬಿಡೋಣ... ಯಾವುದಕ್ಕೂ ಮುಖತಃ ಕೂತು ಮಾತಾಡೋಣ.. ನೀನು ಶುಕ್ರವಾರ ರಾತ್ರಿ ಬಸ್ಸಿಗೆ ಬೆಂಗಳೂರಿಂದ ಹೊರಡು.. ಬೆಳಿಗ್ಗೆ ಬಸ್ಸಿಳಿವ ಹೊತ್ತಿಗೆ ನಾನು ರೆಡಿ ಇರ್ತೇನೆ... ಹೂಂ..ಮತ್ತೇನೂ ತೊಂದ್ರೆ ಇಲ್ಲ ತಾನೇ.."
"ಏನೂ ತೊಂದ್ರೆ ಇಲ್ಲ ಅಪ್ಪ... ಅಮ್ಮನನ್ನು ಕೇಳ್ದೆ ಅಂತ ಹೇಳಿ..ಹಾಂ..ತಂಗಿಯರಿಗೂ ಸುದ್ದಿ ಹೇಳ್ಬಿಡಿ ಅಪ್ಪಾ..."
"ಅದು ನೀನು ಹೇಳೋದೇನೋ... ಆಗ್ಲೇ ಅಮ್ಮ ತಂಗಿಯರಿಗೆ ಉಸುರಿದ್ದಾಳೆ..."
"ಸರಿ ಅಪ್ಪಾ.."
ಎನ್ನುತ್ತಾ ಫೋನಿಟ್ಟ ಕಿಶನ್ ನ ಮುಖದಲ್ಲಿ ನಗು ಮೂಡಿತ್ತು..ಐ ಲವ್ ಯು ಅಪ್ಪಾ ಅಮ್ಮಾ..ಎಂಬ ಉದ್ಗಾರ ಅವನ ಕಂಠದಿಂದ ಹೊರಹೊಮ್ಮಿತು...
ಕೂಡಲೇ ಮೈತ್ರಿ ಗೆ ಸಂದೇಶ ರವಾನಿಸಿದ.. ಮೈತ್ರಿ ಕಾಲೇಜಿಂದ ಬಂದು ಮೊಬೈಲ್
ರೂಮಿನಲ್ಲಿ ಚಾರ್ಜ್ ಗೆ ಇಟ್ಟು ತಿಂಡಿತಿನ್ನಲು ತೆರಳಿದ್ದಳು..ಸಂದೇಶ ಬಂದದ್ದು ಚಾವಡಿಯಲ್ಲಿ ಕುಳಿತಿದ್ದ ಮಹೇಶ್ ನ ಕಿವಿಗೆ ಬಿದ್ದಿತು.. ಮೆಲ್ಲನೆ ಒಳಗಡೆ ಹೋಗಿ ನೋಡಿದ.. ಇಶಾ ಎಂಬ ಹೆಸರಿನಿಂದ ಬಂದ ಸಂದೇಶವನ್ನು ಓದಿದ ಮಹೇಶನಿಗೆ ತನ್ನ ಸಂದೇಹ ನಿಜವೆಂದು ತಿಳಿಯಿತು..
****
ಬೆಂಗಳೂರಿನಿಂದ ಶಂಕರನ ಕುಟುಂಬ ರಾತ್ರಿ ಹತ್ತು ಗಂಟೆಗೆ ಬಂದು ತಲುಪಬಹುದೆಂದು ಬೆಳಗ್ಗೆಯೇ ಭಾಸ್ಕರ ಶಾಸ್ತ್ರಿಗಳು ಮನೆಯವರಿಗೆ ತಿಳಿಸಿದ್ದರು..ಮಂಗಳಮ್ಮ, ಮಹಾಲಕ್ಷ್ಮಿ ಅಮ್ಮ ಬಹಳ ಗಡಿಬಿಡಿಯಲ್ಲಿ ತಯಾರಿ ಮಾಡುತ್ತಿದ್ದರು..
ಶ್ಯಾಮ ಶಾಸ್ತ್ರಿಗಳು ತುಂಬಾ ದಿನಗಳ ನಂತರ ಮಗನ ಕುಟುಂಬ ಬರುವ ಕಾರಣ ಲವಲವಿಕೆಯಿಂದ ಬೇಗನೆ ಪೂಜಾ ಕೈಂಕರ್ಯಗಳನ್ನು ಮುಗಿಸಿ ಒಮ್ಮೆ ಚಾವಡಿಯ ಆ ಮೂಲೆಗೆ ಮತ್ತೊಮ್ಮೆ ಈ ಮೂಲೆಗೆ ಮಗದೊಮ್ಮೆ ಅಡುಗೆ ಮನೆಗೆ ತೆರಳಿ ಅಡುಗೆಯಾಯಿತಾ ಎನ್ನುವುದು ಇನ್ನೊಮ್ಮೆ ಅಂಗಳದ ತುದಿಯಲ್ಲಿ ನಿಂತು ಕಾರು ಬಂತಾ ನೋಡುವುದು ಹೀಗೆ ಮಾಡುತ್ತಿದ್ದರು...
ಮೈತ್ರಿಗೆ ತಂಗಿಯರೆಂದರೆ ಪಂಚಪ್ರಾಣ.. ಸಂಜನಾ ವಂದನಾ ಅವಳಿಗಿಂತ ಒಂದೆರಡು ವರ್ಷ ಚಿಕ್ಕವರು..ಮೂವರೂ ಫ್ರೆಂಡ್ಸ್ ತರಹ ಇರುವವರು.. ಯಾವಾಗಲೂ ಪರಸ್ಪರ ಕಾಲೇಜು ವಿಷಯ, ಡ್ರೆಸ್, ಮೇಕಪ್, ಸಿನೆಮಾ.. ಹೀಗೆ ಪರಸ್ಪರ ಆಸಕ್ತಿಯ ವಿಷಯಗಳನ್ನು ಹಂಚಿಕೊಳ್ಳುತ್ತಾ ಪುನಃ ಬೆಂಗಳೂರಿಗೆ ಹೊರಡುವಾಗ ಮೂವರಿಗೂ ಹೃದಯ ಭಾರವಾಗುತ್ತಿತ್ತು...
ಮುಂದುವರಿಯುವುದು....
✍️... ಅನಿತಾ ಜಿ.ಕೆ.ಭಟ್.
13-02-2020.
No comments:
Post a Comment