ಮನೆಯವರು ನನ್ನಿಂದ ಮುಚ್ಚಿಡುತ್ತಿದ್ದಾರೆ ಎಂದು ಮೈತ್ರಿಗೆ ತಿಳಿದು ಹೋಯಿತು.ಮುಂದಿನ ದಾರಿ ಏನೆಂದು ಯೋಚಿಸುವುದರಲ್ಲೇ ಮಗ್ನಳಾಗಿದ್ದಳು.. ಕಿಶನ್ ನಲ್ಲಿ ಒಂದು ಮಾತು ಹೇಳಲೇ....ಬೇಡ... ಅವನು ನಿನ್ನ ಓದು ಮುಗಿಯಲಿ.. ಆಮೇಲೆ ನಾನೇ ಮಾತಾಡುತ್ತೇನೆ ಎಂದಿರುವನಲ್ಲ... ಈಗ ಹೇಳಿ ಮನಸ್ಸು ಕೆಡಿಸುವುದು ಬೇಡ..ಮನೆಯವರು ಹುಡುಗನ ಮನೆಯವರು ನೋಡಲು ಬರುತ್ತಾರೆ ಎಂದಾಗ ಏನಾದರೂ ಮಾಡಿ ಸಂಬಂಧ ತಪ್ಪುವಂತೆ ಮಾಡಬೇಕು..ಏನಾಗುತ್ತೋ ನೋಡೋಣ.. ಎನ್ನುತ್ತಾ ತನ್ನ ಯೋಚನೆಗೆ ಬ್ರೇಕ್ ಹಾಕಿದಳು.
ಭಾಸ್ಕರ ಶಾಸ್ತ್ರಿಗಳು ಬೆಂಗಳೂರಿನಲ್ಲಿರುವ ಶಂಕರ ಶಾಸ್ತ್ರಿ ಕುಟುಂಬ ಸಮೇತ ಮುಂದಿನ ವಾರ ಬರುವುದಾಗಿ ಹೇಳಿರುವುದನ್ನು ಮನೆಯವರಿಗೆ ತಿಳಿಸಿದಾಗ ಅಜ್ಜ ಅಜ್ಜಿ ಇಬ್ಬರೂ ಸಂತಸಪಟ್ಟದ್ದನ್ನು ಮೈತ್ರಿ ಗಮನಿಸಿದಳು.ಮೈತ್ರಿಗೂ ಚಿಕ್ಕಪ್ಪ ಊರಿಗೆ ಬರುವುದೆಂದರೆ ಭಾರೀ ಖುಷಿ.ತಂಗಿಯರಾದ ಸಂಜನಾ ವಂದನಾ ರೊಂದಿಗೆ ಹರಟುವುದೆಂದರೆ ಎಲ್ಲಿಲ್ಲದ ಖುಷಿ..
ಅಜ್ಜಿ ಮಗ ಬಂದಾಗ ಹಪ್ಪಳ ಬೇಕೆಂದು ಕೆಲಸದಾಳುಗಳಲ್ಲಿ ಹೇಳಿ ಹಲಸಿನಕಾಯಿ ಕೊಯಿಸಿದರು.ಅಮ್ಮ ಅಜ್ಜಿ ಇಬ್ಬರೂ ಹಲಸಿನ ಹಪ್ಪಳ ಮಾಡಿದರು..ತೋಟದ ಬದಿಯಲ್ಲಿದ್ದ ಕಾಟುಮಾವಿನ ಹಣ್ಣು ಬಿದ್ದು ಕೊಳೆತು ಹೋಗುತ್ತಿತ್ತು.. ಈಗ ದಿನವೂ ಸೇಸಪ್ಪನಲ್ಲಿ ಹೆಕ್ಕಿ ತರಲು ಹೇಳಿ ..ಎಸರು ಹಿಂಡಿ...ಅಂಗಳಕ್ಕೆ ಸೆಗಣಿ ಸಾರಿಸಿ... ಹಳೆಯ ಸೀರೆ ಅಂಗಳದಲ್ಲಿ ಹಾಸಿ ಮಾಂಬಳ ಎರೆದರು..
ಶಂಕರ ಬಂದಾಗ ಬಳಸುತ್ತಿದ್ದ ಉಪ್ಪರಿಗೆಯ ರೂಮುಗಳನ್ನು ಕೆಲಸದಾಕೆ ಸರಸು ಬಲೆ ತೆಗೆದು ಗುಡಿಸಿ ಒರೆಸಿ ಒಪ್ಪ ಓರಣ ಮಾಡಿಟ್ಟಳು.ಅವರು ಉಪಯೋಗಿಸುತ್ತಿದ್ದ ಹತ್ತಿಯ ಹಾಸಿಗೆಗಳೆಲ್ಲ ಇಲಿಯ ತಾಣಗಳಾಗಿದ್ದವು..ಅವನ್ನೆಲ್ಲ ಬಿಸಿಲಿಗೆ ಹಾಕಿ... ಹೊಲಿಗೆ ಗೊತ್ತಿದ್ದ ಮಂಗಳಮ್ಮ ಬೇರೆ ಬಟ್ಟೆ ತಂದು ಕವರ್ ಹೊಲಿದು ಸರಿಮಾಡಿಟ್ಟರು..ಅಂತೂ ಮೈದುನನ ಸಂಸಾರ ಒಂದು ವಾರಕ್ಕೆ ಬರುವುದೆಂದು ತಯಾರಿ ಭರ್ಜರಿಯಾಗಿ ಮಾಡಿ ಮಂಗಳಮ್ಮ ಹೈರಾಣವಾದರು.
ಶನಿವಾರ ಕಾಲೇಜು ಮುಗಿಸಿ ಮನೆಗೆ ಹೊರಟ ಮೈತ್ರಿಯನ್ನು ಗೆಳತಿಯರೆಲ್ಲ ಬ್ರೇಕಪ್ ಪಾರ್ಟಿ ಗೆ ಬಾ ಎಂದು ಒತ್ತಾಯಿಸಿದರು.ಆಕೆಗೆ ಸುತಾರಾಂ ಇಷ್ಟವಿರಲಿಲ್ಲ..ಆದರೂ ಗೆಳತಿಯರ ಒತ್ತಾಯಕ್ಕೆ ಕಟ್ಟುಬಿದ್ದು ಹೋದಳು.ಸುನಿಧಿ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಹುಡುಗಿ.ಸಚಿನ್ ಕೂಡ ಹಾಗೇನೇ..ಆದರೂ ಅವರ ಮಟ್ಟಿಗೆ ಅದ್ದೂರಿಯಾಗಿಯೇ ಪಾರ್ಟಿ ಆಯೋಜಿಸಲಾಗಿತ್ತು..ಗೆಳೆಯರು ಗೆಳತಿಯರು ಸೇರಿ ಐವತ್ತು ಜನ ನೆರೆದಿರಬಹುದು.ಎಲ್ಲರಿಗೂ ಅನುಕೂಲವಾಗುವಂತೆ ಎರಡು ಗಂಟೆಯಿಂದ ಮೂರು ಗಂಟೆಯ ವರೆಗೆ ಆಯೋಜಿಸಿದ್ದರು..
ಮೈತ್ರಿ ಅಳುಕುತ್ತಾ ಒಂದು ಬದಿಯಲ್ಲಿ ಶಮಾಳೊಂದಿಗೆ ಕುಳಿತಿದ್ದಳು...ಸುನಿಧಿ ಸುಂದರವಾಗಿ ಅಲಂಕರಿಸಿಕೊಂಡು ವೇದಿಕೆಗೆ ಆಗಮಿಸಿದಳು.ಮೈಕ್ ಹಿಡಿದು ಹಾಯ್ ಫ್ರೆಂಡ್ಸ್...ಎನ್ನುತ್ತಾ ಮಾತನಾಡತೊಡಗಿದಳು...ಪ್ರೇಮಪಯಣವನ್ನು ಮೆಲುಕು ಹಾಕಿ...ಈಗ ಬ್ರೇಕಪ್ ಏಕೆ ಅನಿವಾರ್ಯ ಎಂದು ವಿವರಿಸಿದಳು..ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದ ಸಚಿನ್ ಗೆ ಒಂದು ಫ್ಲೆಯಿಂಗ್ ಕಿಸ್ ರವಾನಿಸಿದಳು... ಸಚಿನ್ ವೇದಿಕೆಗೆ ಆಗಮಿಸಿದ.. ಮೈಕ್ ಹಿಡಿದು ಎಲ್ಲರನ್ನುದ್ದೇಶಿಸಿ ಚುಟುಕಾಗಿ ಮಾತುಗಳನ್ನಾಡಿ ....ಸುನಿಧಿಯ ಜೀವನದ ಆಯ್ಕೆಗೆ ಬೆಂಬಲವನ್ನು ಸೂಚಿಸಿ ಆಕೆಗೆ ಶೇಕ್ ಹ್ಯಾಂಡ್ ಮಾಡಿದ... ಎಲ್ಲರೂ ಒಕ್ಕೊರಲಿನಿಂದ ಹ್ಯಾಪಿ ಬ್ರೇಕಪ್... ಗಾಡ್ ಬ್ಲೆಸ್ ಫ್ರೆಂಡ್ ಶಿಪ್... ಎಂದರೆ ಮೈತ್ರಿ ಮಾತ್ರ ಏನೂ ಹೇಳದೆ ಈ ಸಂಗತಿಯನ್ನು ಅರಗಿಸಿಕೊಳ್ಳಲು ಕಷ್ಟಪಡುತ್ತಿದ್ದಳು . ಉಪಾಹಾರ ಸೇವಿಸಿ ಒಬ್ಬೊಬ್ಬರಾಗಿ ಇಬ್ಬರ ಫ್ರೆಂಡ್ಶಿಪ್ ಗೂ ವಿಶ್ ಮಾಡಿ ತೆರಳಿದರು..
ಮೈತ್ರಿ ಮನೆಗೆ ತಲುಪಿದಳು..ಮನೆಯ ಪರಿಸರದಲ್ಲಾದ ಬದಲಾವಣೆ ಯನ್ನು ಗಮನಿಸಿದಳು..ಶಂಕರ ಚಿಕ್ಕಪ್ಪನ ಆಗಮನಕ್ಕೆ ತಯಾರಿ ಜೋರಾಗಿಯೇ ಇದೆ ಎಂದುಕೊಳ್ಳುತ್ತಾ ಬರುತ್ತಿದ್ದಂತೆ ... ಅಜ್ಜಿ..ಮಾಂಬಳವನ್ನು ಅಂಗಳದಿಂದ ತರುತ್ತಿದ್ದರು..ಹಸಿಯಾಗಿದ್ದ ಮಾಂಬಳವನ್ನು ತರಲು ಅವರು ಪಡುತ್ತಿದ್ದ ಕಷ್ಟವನ್ನು ಕಂಡು ಮೈತ್ರಿ ತಾನು ಒಂದು ಬದಿಯಲ್ಲಿ ಹಿಡಿದುಕೊಂಡು ನೆರವಾದಳು.
ಒಳಬಂದಾಗ ಅಮ್ಮ.. ಆಗತಾನೇ ಸೇಸಪ್ಪ ಕೊಯ್ದು ತಂದ ಎಳೆಯ ಮಾವಿನ ಮಿಡಿಗಳನ್ನು ಸೊನೆಯ ಕೂಡ ಉಪ್ಪಿನಲ್ಲಿ ಹಾಕಿಡುತ್ತಿದ್ದರು.ಎಳೆಯ ಮಿಡಿಮಾವನ್ನು ಕಂಡು ಮೈತ್ರಿ ಯ ಬಾಯಲ್ಲಿ ನೀರೂರಿ... "ಅಮ್ಮಾ..
ನನಗೊಂದು ಮಿಡಿ".. ಎನ್ನುತ್ತಾ ಮಿಡಿಯನ್ನು ತೆಗೆದು ಕೊಂಡು ಉಪ್ಪಿಗೆ ಅದ್ದಿ ತಿಂದಳು... ಆಹಾ..!! ಎಂತಹಾ ರುಚಿ...!! ತಾಜಾ ತಾಜಾ ಕರುಂ ಕುರುಂ ಮಾವಿನ ಮಿಡಿ...!!
ಮೈತ್ರಿ ತಿಂಡಿ ಸ್ನಾನ ಎಲ್ಲ ಮುಗಿಸಿ ಬಂದು ದೇವರ ಮುಂದೆ ಕುಳಿತು ಒಂದೈದು ನಿಮಿಷ ಮನಸಾರೆ ದೇವರ ನಾಮಗಳನ್ನು ಹಾಡಿದಳು.. ಅಜ್ಜಿ ಸ್ತೋತ್ರ ಪಠಣ,ಅಜ್ಜ ಜಪ,ಪೂಜೆ ಮುಗಿಸಿದರು..ನಂತರ ಅಪ್ಪ ಮಗಳನ್ನು" ಮೈತ್ರಿ ಬಾ ಮಗಳೇ ಇಲ್ಲಿ" ಎಂದು ಕರೆದರು..ಅಪ್ಪ ಕರೆದರೆಂದರೆ ಗಂಭೀರವಾದ ವಿಷಯವೊಂದು ಇರಲೇಬೇಕು ಎಂದು ಅವಳಿಗೆ ಬೇರೆ ಹೇಳಬೇಕಾಗಿಲ್ಲ.. ದೇವರ ಮನೆಯಿಂದ ಸೀದಾ ಚಾವಡಿಗೆ ಬಂದು ನಿಂತಳು.ಅಜ್ಜ, ಅಜ್ಜಿ,ಮಂಗಳಮ್ಮನೂ ಬಂದರು.. ಎಲ್ಲರೂ ಬಂದಾಗ ಮೈತ್ರಿ ಗೆ ಸಣ್ಣದಾಗಿ ನಡುಕ ಉಂಟಾಯಿತು..ನಿನ್ನೆ ನೆರೆಮನೆಯ ಶಶಿಯತ್ತೆ ಹೇಳಿದ್ದು ನೆನಪಿಗೆ ಬಂತು..
"ಮಗಳೇ... ಇಂಜಿನಿಯರಿಂಗ್ ಇನ್ನು ಸ್ವಲ್ಪ ಸಮಯಕ್ಕೆ ಮುಗಿಯುತ್ತದೆ.. ಇನ್ನು ವಿವಾಹದ ಯೋಚನೆ ಮಾಡಬೇಕು.. ಒಂದು ಒಳ್ಳೆಯ ಸಂಬಂಧ ಬಂದಿದೆ..ಈಗ ಯೋಚನೆ ಮಾಡಿ ಉತ್ತರ ಹೇಳಬೇಕು.."ಎಂದರು..ಅಪ್ಪ..
ಮೈತ್ರಿ ಸುಮ್ಮನೆ ತಲೆಕೆಳಗೆ ಹಾಕಿ ನಿಂತಳು.. ಮನದಲ್ಲಿ ಈ ಸಂಬಂಧ ಬೇಡ ಎಂದು ಹೇಳಬೇಕು ಎಂದಿದೆ..ಆದರೆ ಅಪ್ಪನ ಮುಂದೆ ನಾಲಿಗೆ ಹೊರಳುತ್ತಿಲ್ಲ...
ಅಪ್ಪ ಮಾತು ಮುಂದುವರಿಸಿ..
"...ಹುಡುಗ ನಿನ್ನಂತೆ ಇಂಜಿನಿಯರಿಂಗ್ ಓದಿದ್ದಾನೆ.. ಸ್ವಲ್ಪ ಸಮಯ ಕಂಪೆನಿಯಲ್ಲಿ ಬೆಂಗಳೂರಿನಲ್ಲಿ ಕೆಲಸಮಾಡಿದ ಅನುಭವವಿದೆ....ಹಿರಿಯರಿಂದ ಬಳುವಳಿಯಾಗಿ ಬಂದ ಹತ್ತಾರು ಎಕರೆ ಫಲವತ್ತಾದ ಭೂಮಿಯಿದೆ... ಅಡಿಕೆ ,ತೆಂಗು, ಬಾಳೆಯ ಜೊತೆಗೆ ಹಲಫಲಗಳೂ ಇವೆ...ಕೃಷಿಮಾಡಲು ತಂದೆಗೆ ಹೆಗಲು ಕೊಡುವ ಸಲುವಾಗಿ ಉದ್ಯೋಗ ಬಿಟ್ಟು ಬಂದು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾನೆ...ರೂಪವಂತ ,,, ಗುಣವಂತ ,,ಬುದ್ಧಿವಂತನೆನಿಸಿಕೊಂಡ ಹುಡುಗ..ಕೇಳಿದವರೆಲ್ಲ ಒಳ್ಳೆಯ ಅಭಿಪ್ರಾಯ ವನ್ನೇ ವ್ಯಕ್ತಪಡಿಸಿದ್ದಾರೆ..ತಂದೆತಾಯಿಗೆ ಒಬ್ಬನೇ ಮಗ..ಇಬ್ಬರು ತಂಗಿಯರಿಗೆ ಮದುವೆಯಾಗಿದೆ..."
ಅಪ್ಪನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಮೈತ್ರಿ ಯ ಕಣ್ಣೀರ ಕಟ್ಟೆಯೊಡೆಯಿತು...ಗಂಗಾ ತುಂಗಾ ಪ್ರವಾಹ ಉಕ್ಕಿ ಹರಿದವು..
"ನಾಳೆ ಅವರು ನಮ್ಮ ಈ ಬದಿಗೆ ಒಂದು ಮದುವೆಯ ಸಮಾರಂಭಕ್ಕೆ ಬರುತ್ತಿದ್ದಾರೆ..ಹೇಗೂ ಬಂದವರು ಒಮ್ಮೆ ಹುಡುಗಿ ನೋಡುವ ಶಾಸ್ತ್ರವನ್ನು ಮುಗಿಸಿಕೊಂಡು ಹೋಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ..ನಾಳೆ ಸಂಜೆ ನಾಲ್ಕು ಗಂಟೆಗೆ ಸೀರೆಯುಟ್ಟು ತಯಾರಾಗಬೇಕು ಮಗಳೇ.." ಎನ್ನುತ್ತಾ ಕಣ್ಣೀರಿಡುತ್ತಿದ್ದ ಮಗಳ ಉತ್ತರಕ್ಕೆ ಕಾಯದೆ ತನ್ನ ಕೆಲಸದತ್ತ ತೆರಳಿದರು..
ಮೈತ್ರಿ ಅಳುತ್ತಾ ರೂಮು ಸೇರಿದಳು...ಈಗ ಅವಳ ಪರವಾಗಿ ಒಬ್ಬರೂ ಇರಲಿಲ್ಲ.. ಕಿಶನ್ ಗೆ ಇದನ್ನೆಲ್ಲ ಹೇಳಬೇಕೆನ್ನುವ ಮನಸ್ಸು..ಹೇಳಿದರೆ ಏನಂದುಕೊಳ್ಳುತ್ತಾನೋ ಎಂಬ ಸಂಕೋಚ..
ಇವಳಿಗೆ ಮದುವೆಗೆ ಅವಸರ ಎಂದು ಕೊಂಡರೆ... ಅಥವಾ ಬೇಗ ಮದುವೆಯಾಗಲೆಂದೇ ಕಥೆ ಹೆಣೆಯುತ್ತಿದ್ದಾಳೆ ಎಂದುಕೊಂಡರೆ....ಇಲ್ಲ ಅವನಿಗೆ ಹೇಳಲೇ ಬೇಕು ..ಹೇಳುತ್ತೇನೆ...ಈಗ ನನ್ನನ್ನು ಅವನೇ ಕಾಪಾಡಬೇಕು... ಎನ್ನುತ್ತಾ ಮೊಬೈಲ್ ತೆಗೆದುಕೊಂಡರೆ ಸಿಗ್ನಲ್ ಸರಿಯಾಗಿ ಸಿಗಲೇಯಿಲ್ಲ... ಸಿಗ್ನಲ್ ಗಾಗಿ ಹೊರಗಡೆ ಹೋಗಿ ಪ್ರಯತ್ನಿಸುವಂತೆಯೂ ಇಲ್ಲ..ಸುಮ್ಮನಿದ್ದುಬಿಡಲು ಮನಸ್ಸೂ ಒಪ್ಪುತ್ತಿಲ್ಲ... ಮೈತ್ರಿ ಈಗ ಅಸಹಾಯಕಳು...ಕೈ ಚೆಲ್ಲಿ ಕುಳಿತಳು...ಹಲ್ಲಿಯೊಂದು ಲೊಚಗುಟ್ಟುತ್ತಿತ್ತು...ಹಳೆಯ ಗಡಿಯಾರದ ಮೇಲೆ ಓಡುತ್ತಾ...ತಕ್ಷಣವೇ ಅವಳಿಗೊಂದು ಉಪಾಯ ಹೊಳೆಯಿತು...
ಮುಂದುವರಿಯುವುದು....
✍️... ಅನಿತಾ ಜಿ.ಕೆ.ಭಟ್.
07-02-2020.
ನಮಸ್ತೇ...
ನಿಮಗೆ ಹಿಂದಿನ ಎಪಿಸೋಡ್ ಗಳನ್ನು/ಇತ್ತೀಚಿನ ಬರಹಗಳನ್ನು ಓದಬೇಕೆಂದನಿಸಿದರೆ ಬರಹದ ಕೆಳಗಡೆ ಇರುವ 'Home' ಎನ್ನುವ ಪದವನ್ನು ಕ್ಲಿಕ್ ಮಾಡಿ ಸಿಗುತ್ತವೆ..
ಹಾಗೇನೇ ... > ಈ ಬಟನ್ ಕ್ಲಿಕ್ ಮಾಡಿ ನಿಮಗೆ ಬೇಕಾದ ಬರಹಗಳನ್ನು ಸರ್ಚ್ ಮಾಡಿ ಓದಬಹುದು...ಹಿಂದಿನ ಎಲ್ಲಾ ಬರಹಗಳೂ ಕಾಣಸಿಗುತ್ತವೆ...< ಬಟನ್ ಬಳಸಿ ಬ್ಯಾಕ್ ಬರಬಹುದು...
share ಅನ್ನುವ ಆಪ್ಷನ್ ಬಳಸಿemail, Facebook, twitter ಗಳಲ್ಲಿ ಬಂಧುಮಿತ್ರರ ಜೊತೆ ಹಂಚಿಕೊಳ್ಳಬಹುದು..
ಬರಹದ ಮೇಲ್ಗಡೆ ಬ್ಲಾಗ್ ಲಿಂಕ್ ಕಾಣುವಲ್ಲಿ ಪಕ್ಕದಲ್ಲಿ ಮೂರು ಡಾಟ್ ಮತ್ತು ಲೈನ್ಸ್ ಕಾಣಿಸುತ್ತದೆ.. ಅದನ್ನು ಕ್ಲಿಕ್ ಮಾಡಿ.. ಶೇರ್ ಆಪ್ಷನ್ ಸೆಲೆಕ್ಟ್ ಮಾಡಿ...ನಂತರ ನೀವು ಫೇಸ್ಬುಕ್, ವಾಟ್ಸಪ್,ಮೆಸೇಂಜರ್, ಮೈಲ್..ಹೀಗೇ ಹಲವಾರು ಸೋಶಿಯಲ್ ಆಪ್..ಗಳನ್ನು ಬಳಸಿ ನಿಮಗಿಷ್ಟವಾದ ಬರಹವನ್ನು ಶೇರ್ ಮಾಡಬಹುದು..
ನಿಮ್ಮ ಪ್ರೀತಿ ,ಪ್ರೋತ್ಸಾಹಕ್ಕೆ ಚಿರ ಋಣಿ.. ಧನ್ಯವಾದಗಳು 💐🙏.
Maitri enu madtale annode kuthuhala ega....
ReplyDeleteಮುಂದಿನ ಭಾಗದಲ್ಲಿ ..ನಿರೀಕ್ಷಿಸಿ...💐🙏
ReplyDelete