Tuesday, 4 February 2020

ಗುಡ್ ಟಚ್ ಬ್ಯಾಡ್ ಟಚ್





     ಆಂಗ್ಲ ಭಾಷೆಯಲ್ಲಿ ಟಚ್ ಅಂದರೆ  ಕನ್ನಡದಲ್ಲಿ ಸ್ಪರ್ಶ.ಸ್ಪರ್ಶವು ನಮ್ಮಲ್ಲಿ ಭಾವನೆಗಳನ್ನು ಅರಳಿಸುತ್ತದೆ.ಕೆಲವು ರೀತಿಯ ಸ್ಪರ್ಶಗಳನ್ನು ಮನಸ್ಸು ಮತ್ತೆ ಮತ್ತೆ ಬಯಸುತ್ತದೆ. ಅದರಿಂದ ಪಸರಿಸುವ ಭಾವಗಳ ಗೂಡಿನಲ್ಲಿ ಬೆಚ್ಚನೆಯ ಸುಖವನ್ನು ಅನುಭವಿಸುತ್ತದೆ.ಆಗ ತಾನೇ ಹುಟ್ಟಿದ ಮಗುವಿಗೆ ಮೊದಲ ಬಾರಿಗೆ ತಾಯಿಯ ಸ್ಪರ್ಶ ... ಮಗು ತಾಯಿಯನ್ನು ಗುರುತಿಸುತ್ತದೆ..ತಾಯಿಯೂ ಕಂದನ ಸ್ಪರ್ಶದಿಂದ ರೋಮಾಂಚನಗೊಂಡು ಅಮೃತವನ್ನು ತನ್ನ ಕಂದನಿಗಾಗಿ ಸ್ರವಿಸುತ್ತಾಳೆ.
ತಾಯಿ ಮಗವಿನ ಬಾಂಧವ್ಯ ಬೆಳೆಯುವುದು ಈ ವಾತ್ಸಲ್ಯಮಯ ಸ್ಪರ್ಶದಿಂದಲೇ..


    ಇನಿಯನ ಸ್ಪರ್ಶವು  ನಲ್ಲೆಯನ್ನು ಶೃಂಗಾರಭರಿತ ಗುಂಗಿನಲ್ಲಿ ಬೀಳಿಸುತ್ತದೆ.ನೋವಿನಲ್ಲೂ ಚೈತನ್ಯವನ್ನು ಉಕ್ಕಿಸುವಂತಹುದು ಸತಿಪತಿಯ ಸ್ಪರ್ಶ.ಪುಟ್ಟ ಮಗುವಿಗೆ ಅಪ್ಪನ ಸ್ಪರ್ಶವು ವಿಶ್ವಾಸವನ್ನು ತುಂಬುತ್ತದೆ.ಅಪ್ಪನ ಎದೆಹರವಿನಲ್ಲಿ ಮೈಮರೆವ ಕಂದ ಆ ಸ್ಪರ್ಶದಿಂದ ತನ್ನ ರಕ್ಷಣೆಗೆ ಅಪ್ಪ ಇದ್ದಾರೆ ಎಂಬ ಧೈರ್ಯವನ್ನು ತಾಳುತ್ತದೆ. ಗೆಳತಿಯೊಬ್ಬಳು ಕಣ್ಣೀರು ಸುರಿಸುತ್ತಿದ್ದರೆ.. 'ಅಳಬೇಡ ನಾನಿದ್ದೇನೆ 'ಎಂದು ಸಮಾಧಾನ ಮಾಡುತ್ತದೆ ಆತ್ಮೀಯ ಗೆಳತಿಯ ಸ್ಪರ್ಶ.ಮಗಳು ಮದುವೆಯಾಗಿ ಗಂಡನ ಮನೆಗೆ ಹೊರಟು ನಿಂತಾಗ ಕಳುಹಿಸಿ ಕೊಡುವ ತಾಯಿಯ ಸ್ಪರ್ಶ ಎಂತಹಾ ಗಟ್ಟಿಮನಸ್ಸಿನ ತಾಯಿಮಗಳಲ್ಲೂ ಕಣ್ಣಾಲಿಗಳನ್ನು ತುಂಬಿಸುತ್ತದೆ.ಹೀಗೆ ನಮ್ಮ ಜೀವನದ ಪ್ರತಿ ಹಂತದಲ್ಲೂ ಸ್ಪರ್ಶಕ್ಕೆ ಅದರದ್ದೇ ಆದ ಮಹತ್ವವಿದೆ.ಅದು ಸ್ಪರ್ಶಿಸುತ್ತಿರುವ ವ್ಯಕ್ತಿ, ಸಂದರ್ಭವನ್ನು ಅನುಸರಿಸಿದೆ.


   ಹಾಗಾದರೆ ಒಳ್ಳೆಯ ಸ್ಪರ್ಶ, ಕೆಟ್ಟ ಸ್ಪರ್ಶ ಅಥವಾ ಗುಡ್ ಟಚ್, ಬ್ಯಾಡ್ ಟಚ್ ಎಂದರೇನು? .. ಮೇಲೆ ತಿಳಿಸಿದ ಎಲ್ಲವೂ ಗುಡ್ ಟಚ್ ಎಂದು ಕರೆಸಿಕೊಳ್ಳುವಂತಹವು.ನಾವು ಇವೆರಡರ ನಡುವಿನ ವ್ಯತ್ಯಾಸವನ್ನು ನಮ್ಮ ಮಕ್ಕಳಿಗೆ ಕಲಿಸಿಕೊಡುವ ಅನಿವಾರ್ಯತೆ ಇದೆ.ಪುಟ್ಟ ಮಕ್ಕಳಿಗೆ ಇದು ತಿಳಿಯುವುದು ಹೇಗೆ ಎಂದು ಭಯಪಡಬೇಕಾಗಿಲ್ಲ.ಅವರಿಗೆ ಅರ್ಥವಾಗುವಂತೆ ಸರಳವಾಗಿ ತಿಳಿಹೇಳಬಹುದು.ಮೂರು ನಾಲ್ಕು ವರ್ಷದ ಮಗುವನ್ನು ಶಾಲೆಗೆ ಸೇರಿಸಬೇಕಾದಾಗ ತಾಯಂದಿರು ಆತಂಕ ಪಡುತ್ತಾರೆ.ವಾಹನ ಚಾಲಕರು, ವಾಚ್ ಮ್ಯಾನ್, ಶಿಕ್ಷಕರು .. ಹೀಗೆ ಎಲ್ಲರನ್ನೂ ಅನುಮಾನದಿಂದಲೇ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.ಯಾರೋ ಒಬ್ಬರು ಕೆಟ್ಟವರಾದರೂ ಎಲ್ಲರನ್ನೂ ಕಣ್ಣಿಟ್ಟು ಗಮನಿಸಬೇಕಾದ ಜವಾಬ್ದಾರಿ ಹೆತ್ತವರಿಗಿದೆ .


    ನಮ್ಮ ಮಗುವನ್ನು ಹತ್ತಿರ ಕರೆದು ಹಣೆಗೊಂದು ಮುತ್ತಿಟ್ಟು, ಕೆನ್ನೆಯನ್ನು ಮೃದುವಾಗಿ ಸವರಿ, ಬೆನ್ನು ಸವರಿ, ಕೈಕುಲುಕಿ... ಹೇಳಿ ಇದೆಲ್ಲ ಗುಡ್ ಟಚ್.ಆ ವ್ಯಕ್ತಿಗೆ ನಿನ್ನ ಮೇಲಿರುವ ಪ್ರೀತಿಯನ್ನು ತೋರ್ಪಡಿಸುತ್ತಾರೆ .ಎದೆ,ಗುಪ್ತಾಂಗಗಳು,ತೊಡೆಯ ಭಾಗ,ಪೃಷ್ಠದ ಭಾಗವನ್ನು ಯಾರಾದರೂ ಸ್ಪರ್ಶಿಸಿದರೆ ಅದು ಬ್ಯಾಡ್ ಟಚ್.ತಕ್ಷಣ ನಿರಾಕರಿಸಬೇಕು.ಇತರರ ಗಮನ  ಸೆಳೆಯಬೇಕು.. ಕೂಗಿಕೊಳ್ಳಬೇಕು..
ಅಂದರೆ ಭಾಗವನ್ನು ಅಮ್ಮ,ಅಪ್ಪ,ಅಜ್ಜ, ಅಜ್ಜಿಯ ಹೊರತಾಗಿ ಯಾರಾದರೂ ಮುಟ್ಟಿದರೆ ನನ್ನ ಗಮನಕ್ಕೆ ತರಬೇಕು ಎಂಬುದನ್ನು ಆಗಾಗ ಮಗುವಿಗೆ ಹೇಳುತ್ತಿರಿ.ಮಗು ಅರ್ಥೈಸಿಕೊಳ್ಳುತ್ತದೆ.ತನ್ನ ರಕ್ಷಣೆಗೆ ಮೊದಲು ತಾನೇ ಮುಂದಾಗುತ್ತದೆ.ತಾಯಿತಂದೆ ಜೊತೆಯಲ್ಲಿಲ್ಲದ ಸಂದರ್ಭ ಯಾರೇ ಈ ರೀತಿ ವರ್ತಿಸಿದರೂ ತಾಯಿಯ ಬಳಿ ಹೇಳಿಕೊಳ್ಳುವ ಮುಕ್ತ ವಾತಾವರಣ ಕಂದನಿಗೆ ಸಿಗುತ್ತದೆ.ಇಂತಹ ಬ್ಯಾಡ್ ಟಚ್ ಮನೆಯಿಂದ ಹೊರಗೆ ಮಾತ್ರವಲ್ಲ ಮನೆಯ ಒಳಗೂ ಮಗು ಅನುಭವಿಸಬಹುದು.ತನ್ನ ಹತ್ತಿರದ ಬಂಧುಗಳಿಂದ ,ನೆರೆಹೊರೆಯವರಿಂದ ಇಂತಹ ದೌರ್ಜನ್ಯವಾದಾಗ ಮಗುವಿಗೆ ರಕ್ಷಣೆನೀಡುವ ಹೊಣೆ ಪೋಷಕರದು.


    ಮಕ್ಕಳು ಹದಿಹರೆಯಕ್ಕೆ ಕಾಲಿಟ್ಟಾಗ ಗುಡ್ ಟಚ್ ಬ್ಯಾಡ್ ಟಚ್ ಬಗ್ಗೆ ಸ್ವಲ್ಪ ಭಿನ್ನವಾಗಿ ತಿಳಿಸಿಕೊಡಬೇಕಾಗುತ್ತದೆ.ಹೆಣ್ಣುಮಕ್ಕಳಿಗೆ  ಅವರ ನಡವಳಿಕೆಗಳು ಇತರರನ್ನು ಉತ್ತೇಜಿಸುವಂತೆ ಇರಬಾರದು ,ಅನಗತ್ಯ ಚೆಲ್ಲುಚೆಲ್ಲಾಗಿ ವರ್ತಿಸದಂತೆ ತಿಳಿಸಿಕೊಡುತ್ತಾ ತನ್ನ ದೇಹದ ಖಾಸಗಿ ಭಾಗಗಳನ್ನು ಯಾರಾದರೂ ಸ್ಪರ್ಶಿಸಿದರೆ ತಕ್ಷಣ ಕೂಗಿಕೊಳ್ಳಲು ,ಅಂತಹವರ ಕೈಗೆ ಮತ್ತೆ ಒಬ್ಬಂಟಿಯಾಗಿ ಸಿಗದಂತೆ ತಿಳಿಹೇಳಬೇಕು.ಗಂಡು ಮಕ್ಕಳಿಗೆ ತಮ್ಮ ದೇಹದ  ಬದಲಾವಣೆಗಳ ಅರಿವು ಮೂಡಿಸಿ ... ಹೆಣ್ಣುಮಕ್ಕಳೂ ನಿಮ್ಮಂತೆಯೇ.. ಅವರನ್ನು ಸಹೋದರಿಯರಂತೆ ಕಂಡು ಗೌರವಿಸಬೇಕು ಎಂಬ ಮನೋಭಾವನೆಯನ್ನು ಪ್ರತೀ ತಂದೆ ತಾಯಿ ಮೂಡಿಸಬೇಕಾದುದು ಆದ್ಯ ಕರ್ತವ್ಯವಾಗಿದೆ.


   ತಂದೆತಾಯಿ ಅರಿವು ಮೂಡಿಸದಿದ್ದರೆ ಏನಾಗುತ್ತದೆ? ಮೊದಲೆಲ್ಲ ಯಾರೂ ಈ ವಿಷಯ ಮಕ್ಕಳಿಗೆ ತಿಳಿಸುತ್ತಲೇ ಇರಲಿಲ್ಲ.ಆಯಾಯ ವಯಸ್ಸಿನಲ್ಲಿ ತಿಳಿಯಬೇಕಾದ್ದು ಅವರಿಗೆ ತಾನಾಗಿಯೇ ತಿಳಿಯುತ್ತದೆ ಎಂದು ಹಲವರು ವಾದಿಸುತ್ತಾರೆ.ಅಂತಹವರಿಗೆ ಸಮಾಜದಲ್ಲಿ , ಕೌಟುಂಬಿಕ ವಾತಾವರಣದಲ್ಲಿ ನಡೆಯುತ್ತಿರುವ ಒಂದೆರಡು ಘಟನೆಗಳನ್ನು ಮೆಲುಕು ಹಾಕುತ್ತೇನೆ.

    ಶಮಾ ಬಹಳ ಚೂಟಿ ಹುಡುಗಿ.ಎಲ್ಲರೊಂದಿಗೂ ನಗುನಗುತ್ತಾ ಬೆರೆಯುವವಳು.ಮಕ್ಕಳಿಂದ ಮುದುಕರವರೆಗೂ ಎಲ್ಲರಿಗೂ ಅವಳೆಂದರೆ ಬಲು ಇಷ್ಟ.ನೋಡಲು ಹಾಲಿನ ಕೆನೆಯಂತಹ ಬಣ್ಣ.ಬಹಳ ಸುಂದರ ಹದಿನಾಲ್ಕು ವರ್ಷದ ಹುಡುಗಿ.ತನ್ನ ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆ ತೆರಳಿದ್ದಾಳೆ.ಅಲ್ಲಿ ಆಕೆಗೆ ಭಾರತಿ ಅನ್ನುವ ಇನ್ನೊಬ್ಬಳು ಹುಡುಗಿಯ ಪರಿಚಯವಾಗಿ ಇಬ್ಬರೂ ಜೊತೆಯಾಗಿ ಓಡಾಡುತ್ತಿದ್ದರು.ಭಾರತಿ ಗಂಭೀರ ಸ್ವಭಾವದ ಹುಡುಗಿ.ಆಕೆಯ ತಾಯಿ ಆಕೆಗೆ ಹೆಣ್ಣುಮಕ್ಕಳು ಹೇಗಿರಬೇಕು ,ಹೇಗಿರಬಾರದು ಎಂದು ಸೂಕ್ಷ್ಮವಾಗಿ ತಿಳಿಸಿದ್ದರು.ಮತ್ತು ಆಕೆಯ ಮನೆಯ ವಾತಾವರಣ ಕೂಡ ಸುಸುಂಸ್ಕೃತವಾಗಿ ಇತ್ತು.ಶಮಾ ಯಾರೊಡನೆಯೋ ಮಾತನಾಡುತ್ತಾ ಕೇಕೆಹಾಕಿ ನಗುತ್ತಾ ಭಾರತಿಯ ಜೊತೆ ಬಿಟ್ಟು ಎಲ್ಲೋ ತೆರಳಿದಳು.ಅವಳಂತೆ ಇರಲು ಮನಸ್ಸಾಗದ ಭಾರತಿ ತಾನು ತಾಯಿಯ ಜೊತೆಗಿದ್ದಳು.ತಾಯಿ ಏನೋ ತರಲು ಭಾರತಿಯನ್ನು ಮನೆಯ ಒಳಗಡೆ ಕಳುಹಿಸಿದರು.ಅಲ್ಲಿನ ದೃಶ್ಯವನ್ನು ಕಂಡ ಭಾರತಿ ಒಮ್ಮೆ ದಂಗಾದಳು..ತಕ್ಷಣ ಅವಳ ಮನಸ್ಸು ,ಬುದ್ಧಿ ಕೆಲಸ ಮಾಡಿತು.ತೀಕ್ಷ್ಣವಾಗಿ ಕೇಳಿಯೇ ಬಿಟ್ಟಳು .."ಅಂಕಲ್..ಎಲ್ಲಾ ಗಂಡಸರೂ ಹೊರಗಿದ್ದಾರೆ.. ನೀವು ಏನು ಇಲ್ಲಿ ಹೀಗೆ ಕುಳಿತದ್ದು..?" ಅನಿರೀಕ್ಷಿತವಾಗಿ ಬಂದ ಪ್ರಶ್ನೆಯಿಂದ ಶಾಕ್ ಆದ ಆತ "ಇಲ್ಲಪ್ಪ..ಏನಿಲ್ಲ..ಇಲ್ಲಿ ಅಜ್ಜಿ ಇದ್ರಲ್ವಾ...ಅವರ ಜೊತೆ ಮಾತನಾಡುತ್ತಿದ್ದೆ.."
ಪಕ್ಕದಲ್ಲಿದ್ದ ಅರುವತ್ತೈದು ವರ್ಷ ವಯಸ್ಸಿನ ಅಜ್ಜಿಗೂ ಆ ಬಂಧುವಿಗೆ ಬೇಸರವಾಗಬಾರದೆಂದು ಅವರನ್ನೇ ಬೆಂಬಲಿಸಿ "ಏನಿಲ್ಲ... ಒಳಗೆ ಕುಳಿತು ಗಂಡಸರು ಮಾತನಾಡಬಾರದೆಂದಿಲ್ಲ.."ಎಂದು ಭಾರತಿಯನ್ನು ಕೆಂಗಣ್ಣಿನಿಂದ ನೋಡಿ ದಡಬಡಾಯಿಸಿದರು..
ಸ್ವಲ್ಪ ಹೊತ್ತಿನ ಬಳಿಕ ಆ ಅಂಕಲ್ ಅಲ್ಲಿಂದ ಕಾಲ್ಕಿತ್ತರು.

    ಅಸಲಿಯಾಗಿ ಭಾರತಿ ಹೇಳಿದ್ದು ಅವರು ಮಾತನಾಡುತ್ತಿದ್ದುದಕ್ಕಲ್ಲ.ಸುಮಾರು ನಲುವತ್ತೈದು ವರ್ಷದ ಅಂಕಲ್  ತನ್ನ ಪಕ್ಕದಲ್ಲಿ ಶಮಾಳನ್ನು ಕೂರಿಸಿಕೊಂಡಿದ್ದಾನೆ.ಆತನ ಎಡಕೈ ಆಕೆಯನ್ನು ಸುತ್ತುವರಿದು ಆಕೆಯ ತೊಡೆಯಮೇಲೆ ಇತ್ತು.ಬಲದ ಕೈಯನ್ನು ಶಮಾಳ ಬೆನ್ನಿನ ಮೇಲಿರಿಸಿ  ಅದರ ಮೇಲೆ ತನ್ನ ಗಲ್ಲವೂರಿದ್ದ...!! ತನ್ನ ಶರೀರದ ಭಾರವನ್ನೆಲ್ಲ ಅವಳ ಮೈಮೇಲೆ ಹಾಕಿ ಆಕೆಯ ಬೆನ್ನ ಮೇಲೆ ಬಿದ್ದುಕೊಂಡಿದ್ದ..ಶಮಾಗೆ ಇದನ್ನು ನಿರಾಕರಿಸಬೇಕೆಂದು ತೋರಿಲ್ಲ, ಅಂಕಲ್ ಗೆ ತಾನು ಈ ರೀತಿ ಮಾಡಬಾರದೆಂದು ಕಾಣಲಿಲ್ಲ.. ಹಿರಿಯರಿಗೆ ಧರ್ಮಸಂಕಟ.. ಹೇಳಿ ಕೆಟ್ಟವರಾಗುವುದು ಬೇಡ..ಎಂಬ ಧೋರಣೆ..


      ಶಮಾಳ ತಾಯಿಯೂ ಅಂಕಲ್ ನನ್ನೇ ಬೆಂಬಲಿಸಿದರು.ಅವರು ಹಿರಿಯರು.ಬೇರೆ ಅರ್ಥದಲ್ಲಿ ಬಳಸಿದ್ದಲ್ಲ ಎಂದು ವಾದಿಸಿದರು..
ಭಾರತಿಯ ಮನಸ್ಸು ಮಾತ್ರ ಅಂಕಲ್ ಮಾಡಿದ್ದು ತಪ್ಪೆಂದು ಹೇಳುತ್ತಿತ್ತು.ವಿವಾಹಿತ ವ್ಯಕ್ತಿ ಅನಗತ್ಯವಾಗಿ ಹದಿಹರೆಯದ ಬಾಲಕಿಯನ್ನು ತೋಳಲ್ಲಿ ಬಳಸಿಕೊಂಡು ಮಾತನಾಡಬೇಕಾದ ಅಗತ್ಯವಿದೆಯೇ...? ಇದಕ್ಕೆ ಬಾಲಕಿಯ ಹೆತ್ತವರೂ ಸಮ್ಮತಿಸಿದರೆ ಮುಂದೊಂದು ದಿನ ಇಂತಹ ಅಭ್ಯಾಸಗಳೇ ಮಕ್ಕಳನ್ನು ತಪ್ಪುದಾರಿಗೆ ತಳ್ಳಬಲ್ಲವು..



    ಇನ್ನೊಂದು ಘಟನೆ..ಸರಳಾ ತನ್ನ ಸಂಬಂಧಿಕ ಮಹಿಳೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ನೋಡಲು ಹೋದಳು.ಅಲ್ಲಿ ಸ್ವಲ್ಪ ಹೊತ್ತು ಇದ್ದು  ಮಾತನಾಡಿದಳು.ಮಹಿಳೆಯ ಕಡೆಯ ಇಬ್ಬರು ಪುರುಷರು ಅಲ್ಲಿದ್ದರು.ಸಂಜೆಯ ಹೊತ್ತು.ಸೊಳ್ಳೆಕಾಯಿಲ್ ಹಾಕಲು ಆಯಾ ಬಂದಿದ್ದರು.ಗಂಡಸರು ಔಷಧ ತರಲೆಂದು ಹೊರಗೆ ಹೊರಡುವವರಿದ್ದರು.ಒಬ್ಬರ ಪಾದರಕ್ಷೆ ಆಕೆಯ ಕಾಲಡಿಯಲ್ಲಿತ್ತು. ಅದನ್ನು ತೆಗೆದುಕೊಳ್ಳುವ  ನೆಪದಲ್ಲಿ ಆಕೆಯ ಎದೆಯ ಮೇಲೆ ಬಿದ್ದಿದ್ದ.ತಕ್ಷಣ ಸೊಳ್ಳೆ ಕಾಯಿಲ್ ಹಾಕುತ್ತಿದ್ದ ಅವಳು ಹಿಂದೆ ಸರಿದಳು.ಮುಖದಲ್ಲಿ ಅಸಹನೆ ತೋರಿಸಿ ಸರಳಾಳತ್ತ ನೋಡಿದಳು.ಇದು ಬ್ಯಾಡ್ ಟಚ್ ಎಂದು ಆಕೆ ಗುರುತಿಸಿದ್ದಳು.ತಾನು ದೂರಸರಿದಿದ್ದಳು.ಆತ ತೆರಳಿದ ನಂತರ ಸಾವಕಾಶವಾಗಿ ಸೊಳ್ಳೆ ಕಾಯಿಲ್ ಹಾಕಿ "..ಹೇಗಿರುವ ಜನ ಇರ್ತಾರಪ್ಪಾ.." ಎಂದು ಗೊಣಗಿಕೊಂಡು ತೆರಳಿದಳು..


    ಸಮಾಜದಲ್ಲಿ ಗುಡ್ ಟಚ್, ಬ್ಯಾಡ್ ಟಚ್ ಅರಿವು ಮಕ್ಕಳಿಂದ ಹಿಡಿದು ಮುದುಕರವರೆಗೆ ಪ್ರತಿಯೊಬ್ಬರಿಗೂ ಇರಬೇಕು.ಆದರೆ ಎಳೆಯ ಮಕ್ಕಳಿಗೆ ಪ್ರಪಂಚದ ಒಳಿತು ಕೆಡುಕುಗಳ ಅರಿವೇ ಇರುವುದಿಲ್ಲ .ಆದ್ದರಿಂದ ಅವರಿಗೆ ಇದರ ಬಗ್ಗೆ ಪ್ರತಿ ಪೋಷಕರೂ ತಿಳಿಸಿ ಹೇಳಿ.ಮಕ್ಕಳು ಧೈರ್ಯದಿಂದ ಸಮಾಜವನ್ನು ಎದುರಿಸಲು , ತನಗೆ ಇಷ್ಟವಾಗದ ಸ್ಪರ್ಶದಿಂದ ಕೊರಗದೆ ಅದನ್ನು ತನ್ನ ಪೋಷಕರಿಗೆ ತಿಳಿಸಲು ಮುಕ್ತವಾದ ವಾತಾವರಣವನ್ನು ಪ್ರತೀ ಪೋಷಕರೂ ಕಲ್ಪಸಿಕೊಡಬೇಕು.


✍️... ಅನಿತಾ ಜಿ.ಕೆ.ಭಟ್.
04-02-2020.

Momspresso Kannada ಮತ್ತು ಪ್ರತಿಲಿಪಿ ಕನ್ನಡ ದಲ್ಲಿ ಪ್ರಕಟವಾದ ಲೇಖನ..


ನಮಸ್ತೇ...

       ನಿಮಗೆ ಹಿಂದಿನ ಎಪಿಸೋಡ್ ಗಳನ್ನು/ಇತ್ತೀಚಿನ ಬರಹಗಳನ್ನು ಓದಬೇಕೆಂದನಿಸಿದರೆ ಬರಹದ ಕೆಳಗಡೆ ಇರುವ 'Home' ಎನ್ನುವ  ಪದವನ್ನು ಕ್ಲಿಕ್ ಮಾಡಿ ಸಿಗುತ್ತವೆ..


 ಹಾಗೇನೇ ... > ಈ  ಬಟನ್ ಕ್ಲಿಕ್ ಮಾಡಿ ನಿಮಗೆ ಬೇಕಾದ ಬರಹಗಳನ್ನು ಸರ್ಚ್ ಮಾಡಿ ಓದಬಹುದು...ಹಿಂದಿನ ಎಲ್ಲಾ ಬರಹಗಳೂ ಕಾಣಸಿಗುತ್ತವೆ...< ಬಟನ್ ಬಳಸಿ ಬ್ಯಾಕ್ ಬರಬಹುದು...

     share ಅನ್ನುವ ಆಪ್ಷನ್ ಬಳಸಿemail, Facebook, twitter ಗಳಲ್ಲಿ ಬಂಧುಮಿತ್ರರ ಜೊತೆ ಹಂಚಿಕೊಳ್ಳಬಹುದು..

      ಬರಹದ ಮೇಲ್ಗಡೆ ಬ್ಲಾಗ್ ಲಿಂಕ್ ಕಾಣುವಲ್ಲಿ ಪಕ್ಕದಲ್ಲಿ ಮೂರು ಡಾಟ್ ಮತ್ತು ಲೈನ್ಸ್ ಕಾಣಿಸುತ್ತದೆ.. ಅದನ್ನು ಕ್ಲಿಕ್ ಮಾಡಿ.. ಶೇರ್ ಆಪ್ಷನ್ ಸೆಲೆಕ್ಟ್ ಮಾಡಿ...ನಂತರ ನೀವು ಫೇಸ್ಬುಕ್, ವಾಟ್ಸಪ್,ಮೆಸೇಂಜರ್, ಮೈಲ್..ಹೀಗೇ ಹಲವಾರು ಸೋಶಿಯಲ್ ಆಪ್..ಗಳನ್ನು ಬಳಸಿ ನಿಮಗಿಷ್ಟವಾದ ಬರಹವನ್ನು ಶೇರ್ ಮಾಡಬಹುದು..

ನಿಮ್ಮ ಪ್ರೀತಿ ,ಪ್ರೋತ್ಸಾಹಕ್ಕೆ ಚಿರ ಋಣಿ.. ಧನ್ಯವಾದಗಳು 💐🙏.


2 comments: