Tuesday, 4 February 2020

ಜೀವನ ಮೈತ್ರಿ- ಭಾಗ ೮




         ಮೈತ್ರಿ ತನ್ನ ರೂಮಿನತ್ತ ಮೊಬೈಲ್ ತರಲು ತೆರಳುವಾಗ ಕಾಲು ನಡುಗುತ್ತಿತ್ತು.ತಾನು ಹತ್ತನೇ ತರಗತಿಯಲ್ಲಿ ಇದ್ದಾಗ ಗೆಳತಿ ಸುಧಾಳ ಮನೆಗೆಂದು ಮನೆಯಲ್ಲಿ ಹೇಳಿ ಹೋಗಿ ಅಲ್ಲಿಂದ ಇನ್ನೊಬ್ಬಳು ಗೆಳತಿ ಕರೆದಳೆಂದು ಅವಳ ಮನಗೆ ಹೋಗಿ ಆಟವಾಡಿದ್ದು ತಿಳಿದು....ಅಪ್ಪ ನಾಗರಬೆತ್ತದಲ್ಲಿ ಚೆನ್ನಾಗಿ ಬಾರಿಸಿದ್ದರು..ಆ ಹೆದರಿಕೆಯಲ್ಲಿ ಮತ್ತೆಂದೂ ಗೆಳತಿಯರ ಮನೆಗೆ ಹೋಗುವ ಕೆಲಸ ಮಾಡಲಿಲ್ಲ.ಆ ನಾಗರ ಬೆತ್ತ ಬಹಳ ಹಳೆಯದಂತೆ.ಅಜ್ಜ ಮಕ್ಕಳಿಗೆ ಹೊಡೆಯುತ್ತಿದ್ದುದಂತೆ .ಈಗ ಅಪ್ಪನ ಸುಪರ್ದಿಗೆ ಬಂದಿದೆ.ಮರದ ಕಪಾಟಿನಲ್ಲಿ ಭದ್ರವಾಗಿ ಇರಿಸಿದ್ದಾರೆ.ಇವತ್ತು ನನಗೆ ಅದರ ಪ್ರಯೋಗವಾಗುವುದೇ ಸರಿ..ನಾನೇನು ಮಾಡಲಿ ಈಗ..ದೇವರೇ...ಎಂದು ಮನದಲ್ಲೇ ದೇವರಿಗೆ ಮೊರೆಯಿಟ್ಟಳು.

      ಭಾಸ್ಕರ ಶಾಸ್ತ್ರಿಗಳು ಮಕ್ಕಳನ್ನು ಪ್ರೀತಿಯಿಂದ ಆದರಿಸಿ ಎಲ್ಲಾ ಸೌಕರ್ಯಗಳನ್ನು ಮಾಡಿಕೊಡುತ್ತಿದ್ದರೂ..ಶಿಸ್ತಿನ ವಿಚಾರ ಬಂದಾಗ ಮಾತ್ರ ಬಹಳ ಕಟ್ಟುನಿಟ್ಟು.ಈ ಶಿಸ್ತು ಮಕ್ಕಳ ಮೇಲಿನ ಪ್ರೀತಿಯ ಒಂದು ಭಾಗವಷ್ಟೇ..ಶಾಲಾಶಿಕ್ಷಕರಾದ ಭಾಸ್ಕರ ಶಾಸ್ತ್ರಿಗಳು ವಿದ್ಯಾರ್ಥಿಗಳು ದಾರಿತಪ್ಪುವುದನ್ನು ನೋಡುತ್ತಿರುತ್ತಾರೆ...ತಿದ್ದುತ್ತಿರುತ್ತಾರೆ...ಅಂತಹದರಲ್ಲಿ ತನ್ನ ಮಕ್ಕಳು ದಾರಿತಪ್ಪಬಾರದು ಎಂಬ ಅವರ ಕಳಕಳಿಯ ಸಹಜವಾದದ್ದು.. ಆದರೆ ಮಡದಿ ಮಂಗಳಮ್ಮ ಮಾತ್ರ ನಿಮ್ಮ ಶಿಸ್ತು ಅತಿಯಾಯಿತು.. ಮಕ್ಕಳಿಗೆ ಸ್ವಲ್ಪವೂ ಸ್ವಾತಂತ್ರ್ಯ ಕೊಡದಿದ್ದರೆ ಹೇಗೆ..?? ಎಂದು ಪತಿಯನ್ನು ತರಾಟೆಗೆ ತೆಗೆದುಕೊಳ್ಳುವುದಿದೆ...


       ಶ್ಯಾಮ ಶಾಸ್ತ್ರಿಗಳು ಸ್ನಾನ ಮುಗಿಸಿ ಸಂಧ್ಯಾವಂದನೆ, ಸ್ತೋತ್ರ ಪಾರಾಯಣ ಪೂಜೆಗೆಂದು ಕುಳಿತಿದ್ದರು.ಮಗ ಮೊಮ್ಮಗಳನ್ನು ತೀವ್ರವಾಗಿ ವಿಚಾರಿಸುವುದು ಕಂಡು ..."ಎಂತ ಇವಂದು ಅತಿಯಾತು... ಮೈತ್ರಿ ಪಾಪದ ಕೂಸು..."ಎಂದು ಮೊಮ್ಮಗಳ ಪರವಾಗಿ ಚಿಂತಿಸುತ್ತಾ ದೇವರ ಕೋಣೆಯ ಒಳಗಿನಿಂದಲೇ ನಾಟಕೀಯವಾಗಿ ಕೆಮ್ಮಿದರು.ಅಜ್ಜ ಕೆಮ್ಮಿದ್ದನ್ನು ಕೇಳಿ ಮೈತ್ರಿಯ ನಡುಕ ಇನ್ನೂ ಹೆಚ್ಚಾಯಿತು.ಅಜ್ಜನೂ ಅಪ್ಪನ ಕಡೆಗೇ ನಿಂತುಬಿಟ್ಟರಾ....ನನ್ನ ಇಂದಿನ ಗತಿ ಗೋವಿಂದ... ಎಂದುಕೊಳ್ಳುತ್ತಾ ಮೊಬೈಲ್ ತಂದು ಅಪ್ಪನ ಕೈಗಿತ್ತಳು.

 
  ಮೊಬೈಲ್ ಪರದೆಯನ್ನು ಒಮ್ಮೆ ದಿಟ್ಟಿಸಿ .."ಹೂಂ.. ಇಲ್ಲೇ ರಿಸೀವ್ ಮಾಡಿ ಮಾತಾಡು.."ಎಂದರು..

ಮೈತ್ರಿ ರಿಸೀವ್ ಮಾಡಿದಳು..ಅತ್ತ ಕಡೆಯಿಂದ
".........................  ....................."
ಕೇಳುತ್ತಿದ್ದಂತೆ ಮೈತ್ರಿ ಗಟ್ಟಿಯಾಗಿ...
"ಇಶಾ...ನನಗೆ ಆ ಲೆಸನ್ ಓದಿಯಾಗಿಲ್ಲ... ಇವತ್ತು ರಾತ್ರಿ ಓದಿ ಮುಗಿಸಿ ನಂತರ ನಿನ್ನ ಡೌಟ್ ಕ್ಲಿಯರ್ ಮಾಡುವೆ ..."
"...............  .............."
"ಇಲ್ಲಾ...ಅದು ನಂಗೆ ಸಿಕ್ಕಿದ್ದಲ್ಲ...ನಂಗೆ ಇವತ್ತು ಈಸೀ ಇರುವ ಪ್ರಾಕ್ಟಿಕಲ್ ಸಿಕ್ಕಿದ್ದು ನನ್ನ ಚಾನ್ಸ್..ಇಶಾ...ಈಗ ಬಿಸಿ ಇದೀನಿ.. ಬಾಯ್..."

ಎನ್ನುತ್ತಾ ಮೈತ್ರಿ ಮಾತುಕತೆ ಮುಗಿಸಿದಳು..
"ಯಾರಮ್ಮ ಅವಳು ಇಶಾ ಅಂದರೆ.. ಇದುವರೆಗೆ ನೀನು ಅವಳ ಹೆಸರು ಹೇಳಿರಲಿಲ್ಲ..."

"ಹೌದಪ್ಪಾ... ಇಷ್ಟು ದಿನ ಅವಳು ನಂಗೆ ಅಷ್ಟು ಕ್ಲೋಸ್ ಇರಲಿಲ್ಲ...ಈಗ ಒಂದು ವಾರದಿಂದ ಕ್ಲೋಸ್ ಆಗಿದಾಳೆ..."

"ಸರಿ..ಮಗಳೇ..ನೀನಿನ್ನು ಓದಿಕೋ...ಹಾಂ...ನೆನಪಿರಲಿ.. ಮೊಬೈಲ್ ಹೆಚ್ಚು ಬಳಕೆ ಮಾಡಬಾರದು.. ಆರೋಗ್ಯಕ್ಕೂ ಹಾಳು...ಸಮಯವೂ ದಂಡ..."

"ಸರಿ ಅಪ್ಪಾ..ನೀವು ಹೇಳಿದಂತೆಯೇ ಆಗಲಿ..."ಎನ್ನುತ್ತಾ ತನ್ನ ರೂಮಿನತ್ತ ಹೆಜ್ಜೆ ಹಾಕಿದಳು.. ಅಬ್ಬಾ... ಬಚಾವ್..!! ಎನ್ನುತ್ತಾ ನಿಟ್ಟುಸಿರು ಬಿಟ್ಟಳು...

        ದೇವರ ಕೋಣೆಯಲ್ಲಿದ್ದ ಅಜ್ಜ.. "ಅಬ್ಬಾ..ನನ್ನ ಪುಳ್ಳಿಯನ್ನು ಜೋರುಮಾಡದೆ ಬಿಟ್ಟುಬಿಟ್ಟ ಮಗ.. ಇಲ್ಲಾಂದ್ರೆ ಈಗ ಗೋಳೋ ಅಂತ ಅತ್ತರೆ  ನನ್ನ ಕೈಲಿ ಈಗ ತಡೆಯಲಾಗಲ್ಲಪ್ಪ...ಮುದ್ದಿನ ಪುಳ್ಳಿ ಕೂಸಿದು..."ಎಂದುಕೊಳ್ಳುತ್ತಾ ಮಂತ್ರೋಚ್ಛಾರಣೆಯನ್ನು ಮುಂದುವರಿಸಿದರು..


         ಫೋನಿಟ್ಟ ಕಿಶನ್ ಮನಸಾರೆ ನಗುತ್ತಿದ್ದ.ರೂಂಮೇಟ್ ಇನ್ನೂ ಬಂದಿರಲಿಲ್ಲ.ಏಕಾಂತವಿದ್ದಾಗ ಬೇಕಾದಂತೆ ನಗಲು ಅವನಿಗೇನೂ ಅಡ್ಡಿಯಿರಲಿಲ್ಲ..ಎರಡು ದಿನದಿಂದ ಮುದ್ದುಗೊಂಬೆಯ ಮಾತು ಕೇಳದೆ ಬರಡಾಗಿದ್ದ ಅವನೆದೆಯಲ್ಲಿ ಮಿಂಚಿನ ಸಂಚಾರವಾಯಿತು..ಅಲ್ಲ ಈ ಹುಡ್ಗೀ...ಬರೀ ಹುಚ್ಚು ಹುಡ್ಗಿ... ನನ್ನನ್ನು ಹುಡುಗಿ ಇಶಾ ಅಂತ ಮಾಡ್ಬಿಟ್ಲು...ಮತ್ತೆ ನಗು ತಡೆಯಲಾಗಲಿಲ್ಲ ಕಿಶನ್ ಗೆ..ನನ್ನ ಡೌಟ್ ಕ್ಲೀಯರ್ ಮಾಡ್ತಾಳಂತೆ ರಾತ್ರಿ...ಹೇಳಿದ್ದಕ್ಕಾದ್ರು ರಾತ್ರಿ ಒಮ್ಮೆ ಕಾಲ್ ಮಾಡಿ ಕೀಟಲೆ ಮಾಡಲೇಬೇಕು ಇವಳಿಗೆ...ಆಗ್ಲೇ ಎರಡು ದಿನದ ಮುನಿಸಿನಾಟಕ್ಕೆ ತೆರೆಬಿದ್ದೀತು .. ಎನ್ನುತ್ತಾ ಅವಳನ್ನು ಮನಸ್ಸಿನಲ್ಲೇ ಆರಾಧಿಸಿದ..


   ಇಲ್ಲ.. ನಾನು ಹಾಗೆಲ್ಲ ಮಾಡಬಾರದು..ಪಾಪ ಅವಳ ಕಷ್ಟವೇನು ಎಂದು ನನಗೇನು ಗೊತ್ತು...ನನ್ನಂತೆ ಅವಳಿಗೆ ಬೇಕಾದಾಗಲೆಲ್ಲ ಮಾತನಾಡಲು ಸಾಧ್ಯವಿಲ್ಲ.ಮನೆಯವರು ಜೊತೆಗಿರುತ್ತಾರೆ.ಅಲ್ಲದೇ ಸಂಪ್ರದಾಯವನ್ನು ಪಾಲಿಸುವ ತುಂಬು ಕುಟುಂಬ.. ಲವ್ ಮಾಡೋದು ಏನಾದ್ರೂ ಮನೆಯವರಿಗೆ ಗೊತ್ತಾದ್ರೆ ನನ್ನ ಕಥೆ ಅಷ್ಟೇ.... ಮುಗೀತು..ಅಂತ ಯಾವತ್ತೋ ಒಂದು ದಿನ ಹೇಳಿದ್ದಳು...ಬೆಣ್ಣೆಯಿಂದ ಕೂದಲು ಬಿಡಿಸಿದಂತೆ ನಯವಾಗಿ ಮನೆಯವರನ್ನು ಒಪ್ಪಿಸಿ ಮದುವೆಯಾಗಬೇಕು... ಏನಾಗುತ್ತೋ ನೋಡೋಣ.. ಯಾವುದಕ್ಕೂ ಅವಸರ ಪಡುವುದು ಸರಿಯಲ್ಲ..ಎಂದುಕೊಂಡನು..

ಅಷ್ಟೊತ್ತಿಗೆ ರೂಂಮೇಟ್ ಆಗಮಿಸಿದ.".ಏನೋ ಕಿಶನ್..ಭಾರೀ ಖುಷಿಯಲ್ಲಿದೀಯಾ..."
"ಏನಿಲ್ಲಪ್ಪ.....ಅದೇ ಮಾಮೂಲಿ.."
ಎಂದು ಮಾತು ಬದಲಿಸಿದನು.

      ಮೈತ್ರಿ ಓದುತ್ತಾ ಕುಳಿತಿದ್ದಳು.. ಇವತ್ತು ಅಪ್ಪನಿಂದ ಬಚಾವ್ ಆದದ್ದೇ ಅವಳಿಗೆ ಬಹಳ ಸೋಜಿಗದ ವಿಷಯವಾಗಿತ್ತು . ಕಾಂಟಾಕ್ಟ್ ನಲ್ಲಿ Kishan ಎಂದು ಬರೆಯುವ ಬದಲು ಶಾರ್ಟ್ ಅಂಡ್ ಸ್ವೀಟ್ ಆಗಿ ಇರಲಿ ಅಂತ Isha ಅಂತ ಬರೆದು ಸೇವ್ ಮಾಡಿದ್ದು ಇವತ್ತಿನ ಗೆಲುವಿಗೆ ಕಾರಣವಾಯಿತು..ಆದರೂ ಈ ಪ್ರೀತಿಯನ್ನು ಉಳಿಸಿಕೊಳ್ಳಲು ನನ್ನಿಂದ ಸಾಧ್ಯವಾಗುತ್ತಾ...ಎಂಬ ಆತಂಕ ಅವಳ ಮನದ ಮೂಲೆಯಲ್ಲಿ ಮನೆಮಾಡಿತ್ತು..


      ಮರುದಿನದ ಪರೀಕ್ಷೆಗೆ ಏಕಾಗ್ರತೆಯಿಂದ ಓದಲು ಆರಂಭಿಸಿದಳು.ಮೊಬೈಲ್ ಡೇಟಾ ಆಫ್ ಮಾಡಿ ಇಟ್ಟಳು.ಓದಿನಲ್ಲಿ ತಲ್ಲೀನಳಾದವಳಿಗೆ ಅಮ್ಮ ಬಂದು ಕರೆದಾಗಲೇ ಎಚ್ಚರವಾದದ್ದು.ಊಟದ ಪಡಸಾಲೆಯಲ್ಲಿ ಎಲ್ಲರಿಗೂ ಎದುರು ಬದುರು ಬಾಳೆ ಎಲೆಯ ಪಂಕ್ತಿ ಹಾಕಿದ್ದರು ಅಜ್ಜಿ.ಗಂಡುಮಕ್ಕಳಿಗೆ ಒಂದು ಲೋಟ ನೀರನ್ನು ಇಟ್ಟಿದ್ದರು.ಮಂಗಳಮ್ಮ ಬಾಳೆಲೆಯ ಬದಿಗೆ ತೋಟದಲ್ಲಿ ಬೆಳೆದ ಬಾಳೆಯ ದಂಡಿನ ಪಲ್ಯವನ್ನು ಬಡಿಸಿದರು.ಮಹಾಲಕ್ಷ್ಮಿ ಅಮ್ಮ ಬಾಳೆಲೆಯ ತುದಿಗೆ ಮಿಡಿ ಉಪ್ಪಿನಕಾಯಿ ತುಂಡನ್ನು ಬಡಿಸಿದರು.ಆಗಲೇ ಮಂಗಳಮ್ಮ ಬಿಸಿಬಿಸಿಯಾದ ಕುಚ್ಚಿಲಕ್ಕಿ ಅನ್ನವನ್ನು ಬಡಿಸಲು ತಯಾರಾಗಿದ್ದರು.

         ಊಟ ಆರಂಭವಾದರೂ ಮೈತ್ರಿ ಬಾರದಿದ್ದುದನ್ನು ಕಂಡ ಭಾಸ್ಕರ ಶಾಸ್ತ್ರಿಗಳು..."ಮಗಳೇ.. ಮೈತ್ರಿ..ಬಾರಮ್ಮ...."ಎಂದರೂ ಅವಳ ಉತ್ತರವಿಲ್ಲ..
ಮತ್ತೊಮ್ಮೆ ಕರೆದರು..
ಆಗ ಮಂಗಳಮ್ಮ..."ಮತ್ತೆಂತ ನಿಮ್ಮದು ಹೆಚ್ಚಾತು...ಈಗೆಲ್ಲ ಮಕ್ಕಳ ಜೋರು ಮಾಡಬಾರದು..."ಎನ್ನುತ್ತಾ ಮಗಳ ಪರ ಬ್ಯಾಟಿಂಗ್ ಮಾಡಿದರು.
ಮಹಾಲಕ್ಷ್ಮಿ ಅಮ್ಮನೂ ಸೊಸೆಯೊಂದಿಗೆ ದನಿಗೂಡಿಸಿದರು..
"ಮೈತ್ರಿ..ಬರೀ ಪಾಪದ ಕೂಸು...ಎಲ್ಲ ಕೂಸುಗಳ ಹಾಗಲ್ಲ...ಬೈಬಾರದು.."

   ನಾನೇನೂ ಕಮ್ಮಿಯಿಲ್ಲ ಎಂಬಂತೆ ಅಜ್ಜನೂ ಮೊಮ್ಮಗಳ ಪರವೇ... ಎರಡು ಬುದ್ಧಿಮಾತು ಮಗನಿಗೆ ಹೇಳಿದರು.

   ಬೇಗನೆ ಊಟಮಾಡಿ ತೆರಳಿದ ಮಹೇಶ್ ..."ಅಕ್ಕಾ..ಅದು ನಿನ್ನ ಗೆಳತಿ ಇಶಾ..ಯಾರಕ್ಕಾ..ನಂಗೂ ಪಟ ತೋರಿಸು.."ಎಂದು ಕಾಲೆಳೆಯತೊಡಗಿದ..
"ಹುಡುಗಿಯರ ಫೊಟೋ ನಿಂಗ್ಯಾಕೆ..ತೋರ್ಸಲ್ಲ..ಹೋಗು.."
"ಅಲ್ಲ..ನಂಗೊಂದು ಡೌಟು..ಅದು ಹುಡುಗಿಯಾ..ಅಲ್ಲ ಹುಡುಗನಾ ಅಂತ.."

"ಅಂತ.. ಡೌಟ್ ಬೇಡ..ನಿಂಗೆ.. ಸುಮ್ಮನೆ ನಡೀ.. ಡಿಸ್ಟರ್ಬ್ ಮಾಡದೇ.."
"ಅಲ್ಲ..ಇಶಾ ಹುಡುಗಿಯೇ ಆಗಿದ್ರೆ... ನೀನ್ಯಾಕೆ ಅಷ್ಟೊಂದು ನರ್ವಸ್ ಆದೆ ಅಂತ..."
"ಅಯ್ಯೋ ದೇವ್ರೆ.... ಒಮ್ಮೆ ಹೋಗಪ್ಪಾ.. ಪುಣ್ಯಾತ್ಮ..ಕೈ ಮುಗೀತೀನಿ..."

ಎಂದ ಅಕ್ಕನ ಮಾತಿಗೆ ಸುಮ್ಮನೆ ಹೋದ ಮಹೇಶ್.. ಮೈತ್ರಿ ಎಲ್ಲರಿಗೂ ಊಟ ಆದಮೇಲೆ ಮೌನವಾಗಿ ಕುಳಿತು ಉಂಡು ಬಂದಳು.ಹತ್ತಿದ ಬಂದ ಅಮ್ಮ.." ಅಪ್ಪನ ಅಭ್ಯಾಸ ಹಾಗೇನೇ..ಬೇಸರ ಮಾಡಬೇಡ ಮಗಳೇ .."ಎಂದು ಸಮಾಧಾನ ಮಾಡಿದರು..


   ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.
 04-02-2020.



ನಮಸ್ತೇ...

       ನಿಮಗೆ ಹಿಂದಿನ ಎಪಿಸೋಡ್ ಗಳನ್ನು/ಇತ್ತೀಚಿನ ಬರಹಗಳನ್ನು ಓದಬೇಕೆಂದನಿಸಿದರೆ ಬರಹದ ಕೆಳಗಡೆ ಇರುವ 'Home' ಎನ್ನುವ  ಪದವನ್ನು ಕ್ಲಿಕ್ ಮಾಡಿ ಸಿಗುತ್ತವೆ..


 ಹಾಗೇನೇ ... > ಈ  ಬಟನ್ ಕ್ಲಿಕ್ ಮಾಡಿ ನಿಮಗೆ ಬೇಕಾದ ಬರಹಗಳನ್ನು ಸರ್ಚ್ ಮಾಡಿ ಓದಬಹುದು...ಹಿಂದಿನ ಎಲ್ಲಾ ಬರಹಗಳೂ ಕಾಣಸಿಗುತ್ತವೆ...< ಬಟನ್ ಬಳಸಿ ಬ್ಯಾಕ್ ಬರಬಹುದು...

share ಅನ್ನುವ ಆಪ್ಷನ್ ಬಳಸಿemail, Facebook, twitter ಗಳಲ್ಲಿ ಬಂಧುಮಿತ್ರರ ಜೊತೆ ಹಂಚಿಕೊಳ್ಳಬಹುದು..

ನಿಮ್ಮ ಪ್ರೀತಿ ,ಪ್ರೋತ್ಸಾಹಕ್ಕೆ ಚಿರ ಋಣಿ.. ಧನ್ಯವಾದಗಳು 💐🙏.


2 comments:

  1. 👏👏

    ಮುಂದೇನು???

    ReplyDelete
  2. ಕುತೂಹಲಕಾರಿ...ಕಥೆ.. ಮುಂದೆ..
    ಧನ್ಯವಾದಗಳು 💐🙏

    ReplyDelete