ಮೈತ್ರಿ ಪ್ರಾಕ್ಟಿಕಲ್ ಪರೀಕ್ಷೆ ಮುಗಿಸಿ ಮಧ್ಯಾಹ್ನವೇ ಮನೆಗೆ ಬಂದಿದ್ದಳು..ಬಂದವಳು ಕಿಶನ್ ನ ಸಂದೇಶ ಬಾರದಿದ್ದುದನ್ನು ಕಂಡು ಕರೆಮಾಡಿದಳು.ಅವನು ಕರೆ ಸ್ವೀಕರಿಸಲಿಲ್ಲ. ಅವಳಿಗೆ ಬೇಸರವಾಯಿತು.ನನ್ನ ಸಣ್ಣ ಅಸಡ್ಡೆ ಇಷ್ಟಕ್ಕೆಲ್ಲ ಕಾರಣ ಎಂದು ನೊಂದುಕೊಂಡಳು. ಮಗಳ ಅನ್ಯಮಸ್ಕತೆಯನ್ನು ಕಂಡ ಮಂಗಳಮ್ಮ.."ಯಾವಾಗಲೂ ಮೊಬೈಲ್, ಲ್ಯಾಪ್ ಟಾಪ್, ಟಿವಿ ನೋಡುವುದು, ಓದುವುದು... ಮಾಡುತ್ತಾ ನಿನ್ನ ಕಣ್ಣಿಗೆ ತುಂಬಾ ಆಯಾಸವಾದಂತಿದೆ.ಅದಕ್ಕೆ ಸ್ವಲ್ಪ ತಂಪು ಹಾಕೋಣ...ಇರು ಬಂದೆ.."ಎನ್ನುತ್ತಾ ಸೀದಾ ಹವಾಯಿ ಚಪ್ಪಲಿ ಧರಿಸಿ ಅಂಗಳದ ಬದಿಗೆ ನಡೆದರು.ಅಲ್ಲಿಂದ ನಾಲ್ಕು ದಾಸವಾಳದ ಎಲೆ,ಬಸಳೆ ಎಲೆ,ಭೃಂಗರಾಜ ತುದಿ.. ಕೊಯ್ದು ಮುಂದೆ ಸಾಗಿದರು.ಮುಂದಿನ ತಟ್ಟಿನಲ್ಲಿ ಕಂಡ ಎರ್ಪೆ ಗೊಂಪಿನ ಗಿಡದ ಹತ್ತು ಎಲೆಗಳನ್ನು ಕೊಯ್ದು ತಂದರು.ಎರ್ಪೆ ಸೊಪ್ಪನ್ನು ಸಣ್ಣ ಬಾಲ್ದಿ ನೀರಿನಲ್ಲಿ ಕಿವುಚಿ ಬಚ್ಚಲು ಮನೆಯಲ್ಲಿಟ್ಟರು. ಒಳಗೆ ಬಂದು ದಾಸವಾಳ ಮತ್ತು ಇತರ ಸೊಪ್ಪನ್ನು ಮಿಕ್ಸಿಯಲ್ಲಿ ರುಬ್ಬಿ ಮೈತ್ರಿ ಯತ್ತ ಬಂದರು.
ಅಮ್ಮನ ಕೈಯಲ್ಲಿ ಸೊಪ್ಪಿನ ಮಿಶ್ರಣವನ್ನು ಕಂಡ ಮೈತ್ರಿ.."ಅಮ್ಮಾ..ಇದು ನಂಗೆ ಬೇಡ.. ಹೇಸಿಗೆಯಾಗುತ್ತೆ... ಛೀ...ತಲೆಯೆಲ್ಲ ಕಸವಾಗುತ್ತದೆ.."ಎನ್ನುತ್ತಾ ನಿರಾಕರಿಸಿ ಓಡಲು ಯತ್ನಿಸಿದಳು..ಓಡುತ್ತಿದ್ದ ಮಗಳನ್ನು ಹಿಡಿದು ನಿಲ್ಲಿಸಿದ ಮಂಗಳಮ್ಮ ಪುಟ್ಟ ಮಗಳಿಗೆ ಹಾಕುವಂತೆ ಹತ್ತಿರ ಕುಳ್ಳಿರಿಸಿ ತಲೆಗೆ ಮಿಶ್ರಣದ ಪ್ಯಾಕ್ ಹಾಕಿದರು.ಇನ್ನು ಸ್ವಲ್ಪ ಹೊತ್ತು ಬಿಟ್ಟು ತಲೆಗೆ ಬಚ್ಚಲಿನಲ್ಲಿ ಇಟ್ಟಿರುವ ಎರ್ಪೆ
ಗೊಂಪು ಹಾಕಿ ಸ್ನಾನ ಮಾಡಿ ಬಾ... ಎಂದು ಹೇಳಿ ತನ್ನ ಕೆಲಸಕ್ಕೆ ತೆರಳಿದರು.
ಮೈತ್ರಿಗೆ ಅಮ್ಮನ ಮಾತು ನಿಜವೆಂದು ತೋರಿತು.ಸ್ವಲ್ಪ ಹೊತ್ತಿನಲ್ಲಿ ತಲೆ, ಕಣ್ಣು ತಂಪಾಯಿತು.ನಿದ್ದೆ ತೂಗುವಂತಾಯಿತು. ಸ್ನಾನಮಾಡಿ ಬಂದು ಅಜ್ಜನ ಜೊತೆಗೆ ಕುಳಿತು ಊಟ ಮಾಡಿದವಳಿಗೆ ನಿದ್ದೆ ತೂಕಡಿಸುತ್ತಿತ್ತು .. "ಅಮ್ಮಾ..ನಾನು ಮಲಗುತ್ತೇನೆ.. ನಾಲ್ಕು ಗಂಟೆಗೆ ಎಬ್ಬಿಸು..ಓದುವುದಿದೆ "ಎಂದು ಹೇಳಿ ಮಲಗಿದಳು..
ಮಂಗಳಮ್ಮ , ಮಹಾಲಕ್ಷ್ಮಿ ಅಮ್ಮ ಇಬ್ಬರೂ ಊಟಮಾಡಿದರು.ಸ್ವಲ್ಪ ಹೊತ್ತು ಧಾರಾವಾಹಿ ನೋಡುತ್ತಾ ಕುಳಿತರು.ಅಜ್ಜಿ ಧಾರಾವಾಹಿಯ ಜಾಹೀರಾತು ಬಂದಾಗ ಮೆಲ್ಲನೆದ್ದು ಪುಳ್ಳಿಯ ಕೋಣೆಗೆ ಇಣುಕಿದರು.ಪುಳ್ಳಿಗೆ ಗಾಢ ನಿದ್ರೆ.."ಮಂಗಳಾ..ಗೊಂಪು ಹಾಕಿ ಸ್ನಾನ ಮಾಡಿದ ಮೈತ್ರಿ ಗೆ ಸೊಂಪಾದ ನಿದ್ದೆ ಬಂದಿದೆ ಎಂದಾಗ
"ಹೌದು...ಅತ್ತೆ..ಸುಮ್ಮನೇನಾ ಹಿಂದಿನವರು ಈ ಪದ್ಧತಿಗಳನ್ನು ರೂಢಿಸಿಕೊಂಡದ್ದು.. ಈಗಿನವರಿಗೆ ಅದು ಕೊಳಕು,ಕಸ, ಹಾಗೆ ,ಹೀಗೆ... ನೂರಾರು ಕೊರತೆಗಳು.. ಶ್ಯಾಂಪೂ ಎಂದು ಯಾವುದೋ ರಾಸಾಯನಿಕ ಮಿಶ್ರಿತ ನೊರೆಯನ್ನು ಉಜ್ಜಿಕೊಳ್ಳುತ್ತಾರೆ.. ತಂಪೂ ಆಗುವುದಿಲ್ಲ..ನಿದ್ದೆಯೂ ಕಡಿಮೆ.." ಎಂದು ತಮ್ಮ ಹಿಂದಿನ ಆಚಾರವಿಚಾರಗಳನ್ನು ಸಮರ್ಥಿಸಿಕೊಂಡರು.
ಮಹೇಶ್ ಎರಡು ಪೀರಿಯಡ್ ಫ್ರೀ ಇದ್ದ ಕಾರಣ ನಾಲ್ಕು ಗಂಟೆಗೆ ಮನೆಗೆ ತಲುಪಿದ್ದ.ಬಂದವನೇ ಅಕ್ಕನ ರೂಮಿಗೆ ತೆರಳಿ.."ಏನೇ.. ಕುಂಭಕರ್ಣನ ವಂಶಸ್ಥೆ...ಹಗಲೇ ಭರ್ಜರಿ ನಿದ್ದೆ.."ಎಂದು ಹಾಸ್ಯ ಚಟಾಕಿ ಹಾರಿಸುತ್ತಿದ್ದಾಗ ಅವಳಿಗೆ ಎಚ್ಚರವಾಯಿತು..ಮೈಮುರಿದುಕೊಂಡು ಎದ್ದು.. ಅಬ್ಬಾ..ಇಷ್ಟೊತ್ತು ಗಾಢ ನಿದ್ರೆಯಲ್ಲಿ ಆಯಾಸವೆಲ್ಲ ಪರಿಹಾರವಾಯಿತು.ಎನ್ನುತ್ತಾ ಮೇಲೆದ್ದಳು.ನಾಳೆಯ ಪರೀಕ್ಷೆಗೆ ಓದಿಕೊಳ್ಳಬೇಕು ಎನ್ನುತ್ತಾ ಮುಖತೊಳೆದು ಬಂದಳು..
ಕೆಲಸದಾಳು ಸೋಮಪ್ಪ ಎರಡು ದೀಗುಜ್ಜೆ ಕೊಯಿದು ತಂದು ಜಗಲಿಯಲ್ಲಿರಿಸಿದ್ದ.ಅದನ್ನು ಕಂಡ ಶ್ಯಾಮ ಶಾಸ್ತ್ರಿಗಳು "ಪೋಡಿ ಮಾಡದೆ ತುಂಬಾ ದಿನವಾಯ್ತು" ಎಂದು ಮಡದಿಗೆ ನೆನಪಿಸಿದರು."ಮಾಡೋಣ ಅದಕ್ಕೇನಂತೆ" ಎಂದವರೇ ಮೆಟ್ಟುಕತ್ತಿ ಇಟ್ಟು ಕೊರೆಯಲು ಶುರುಮಾಡಿದರು.ಮೈತ್ರಿಯಲ್ಲಿ ..."ಪುಳ್ಳಿ..ಕಡ್ಲೆ ಹುಡಿ ಬಾಕ್ಸ್ ನಲ್ಲಿ ಇರಬೇಕು..ಹುಡುಕಿ ಕೊಡಮ್ಮ.."ಎಂದು ಸಹಾಯ ಕೋರಿದರು.. "ಅಜ್ಜಿ.. ನಾನು ಹುಡುಕಬೇಕಾ.."ಎಂದಳು ಉದಾಸಿನದಿಂದ ಮೈತ್ರಿ..
ಆಗ ಹಾಜರಾದ ಮಹೇಶ.."ಹೂಂ.. ಮತ್ತೆ..ಕಡ್ಲೆ ಹುಡಿ ಹುಡುಕೋದು ಮಾತ್ರವಲ್ಲ..ಪೋಡಿ ಮಾಡೋದೂ ಕಲ್ತುಕೋ.. ಆಮೇಲೆ ನಿನ್ನ ರಾಜಕುಮಾರನಿಗೆ ನೀನೇ ಮಾಡಿಕೊಡಬೇಕು..ಅಮ್ಮ, ಅಜ್ಜಿ ಬರಲ್ಲ..."ಎನ್ನುತ್ತಾ ಅಕ್ಕನನ್ನು ರೇಗಿಸಿದ..
"ಹೋಗು..ಹೋಗು...ನಿಂಗೂ ಮದುವೆಯಾದಾಗ ತಿಳಿಯುತ್ತದೆ..ನಿನ್ಹೆಂಡ್ತಿ ನಿನ್ಕೈಲೇ ಪೋಡಿ ಮಾಡಿಸಿ ತಿಂತಾಳೆ ನೋಡು.."ಎಂದು ತಾನೂ ಬಿಡದೆ ಕೌಂಟರ್ ಕೊಟ್ಟಳು.
"ನಂಗೇನೂ ತೊಂದರೆಯಿಲ್ಲ ಮಾರಾಯ್ತಿ..ಇಲ್ಲಿ ಅಮ್ಮ, ಅಜ್ಜಿ..ಇದ್ದಾರೆ..ನಿಂಗೇ ಕಷ್ಟ.. ಗಂಡನನ್ನು ಒಬ್ಬಳೇ ನಿಭಾಯಿಸಬೇಕು..."
"ನಾನೇನೂ ನಾಳೇನೇ ಮದುವೆಯಾಗಿ ಗಂಡನ ಮನೆಗೆ ಹೋಗಲ್ಲ...ಇನ್ನೂ ಎರಡು ವರ್ಷ ಮದುವೆಯಾಗಲ್ಲ...ನಾನು ಜಾಬ್ ಮಾಡಿ ಅಪ್ಪಮ್ಮಂಗೆ ಸ್ವಲ್ಪ ದುಡ್ಡು ಸಂಗ್ರಹಮಾಡಿ ಕೊಟ್ಟು ನಂತರ ಮದುವೆಯಾಗ್ತೀನಿ..."
"ಅಲಲಲೇ...ಪೆದ್ದೀ.. ನಿನ್ನನ್ನು ಜಾಬ್ ಗೆ ಕಳಿಸುವುದಲ್ಲಮ್ಮ ... ಡೈರೆಕ್ಟ್ ಗಂಡನ ಮನೆಗೆ ಕಳಿಸೋದು..."ಎಂದಾಗ
ಮೈತ್ರಿ ಅಜ್ಜಿಯಲ್ಲಿ "ಅಜ್ಜಿ...ಇವನು ಹೀಗೆಲ್ಲ ಕಾಲೆಳೆದರೆ ನಾನು ನಿಮಗೆ ಸಹಾಯ ಮಾಡಲ್ಲ.ಮೊದಲು ಅವನ ಬಾಯಿ ಮುಚ್ಚಿಸಿ..."ಎಂದು ಅಲವತ್ತುಕೊಂಡಳು..
"ಹಾಗೆಲ್ಲ ಅಕ್ಕನನ್ನು ಗೋಳುಹೊಯ್ದುಕೊಳ್ಳಬಾರದು ಮಹೇಶ.."ಎಂದ ಅಜ್ಜಿಯ ಮಾತಿಗೆ ನಕ್ಕು ಸುಮ್ಮನಾದ.
ಮೈತ್ರಿ ಅಜ್ಜಿ ಇಬ್ಬರೂ ಸೇರಿ ರುಚಿಕರವಾದ ದೀಗುಜ್ಜೆ ಪೋಡಿ ಮಾಡಿದರು.ಅಜ್ಜನನ್ನು ಬರಲು ಹೇಳಿದ ಮೈತ್ರಿ ಅಜ್ಜನಿಗೆ ಪೋಡಿ, ಕಾಫಿ ಕೊಟ್ಟಳು.ಮೈತ್ರಿ ಪೋಡಿಮಾಡಲು ಸಹಕರಿಸಿದ್ದನ್ನು ಕಂಡು ಅಜ್ಜ..ಪೋಡಿ ತಿನ್ನುವಾಗ ಮೊಮ್ಮಗಳ ಸಲುವಾಗಿ ತುಸು ಜಾಸ್ತಿಯೇ ಹೊಗಳಿದರು.ಮೈತ್ರಿಗೆ ಖುಷಿಯಾಯಿತು.ಮಹೇಶ್ ಅಜ್ಜ ತೆರಳಿದ ನಂತರ ಅಕ್ಕನಲ್ಲಿ .."ಅಜ್ಜ ಹೊಗಳಿದ್ದು ನೀನು ಮಾಡಿದ್ದು ರುಚಿಯಾಗಿದೆ ಅಂತಲ್ಲ ಅಕ್ಕಾ..ಮೊಮ್ಮಗಳು ಇನ್ನೂ ಚೆನ್ನಾಗಿ ಪಾಕವೈವಿಧ್ಯಗಳನ್ನು ಕಲಿತುಕೊಳ್ಳಲಿ ಎಂದು.."
"ನಿಂಗೆ ಹೀಗೇನೇ ಯಾವಾಗಲೂ.. ನನ್ನನ್ನು ಹೊಗಳಿದರೆ ಹೊಟ್ಟೆಯುರಿ..."ಎನ್ನುತ್ತಾ ತಮ್ಮನನ್ನು ತರಾಟೆಗೆ ತೆಗೆದುಕೊಂಡಳು.
ಭಾಸ್ಕರ ಶಾಸ್ತ್ರಿಗಳು ಶಾಲೆಯಿಂದ ಮನೆಗೆ ಬಂದಾಗ ಉಳಿದ ಎಲ್ಲರೂ ಅವರೊಂದಿಗೆ ಪೋಡಿ ತಿಂದು ಕಾಫಿಕುಡಿದರು.ಅಪ್ಪ ಮಗಳ ಕೈರುಚಿಯನ್ನು ಹೊಗಳಿದರು.
ನಂತರ ಚಾವಡಿಯಲ್ಲಿ ಕುರ್ಚಿಯಲ್ಲಿ ಕುಳಿತು ಭಾಸ್ಕರ ಶಾಸ್ತ್ರಿಗಳು ದಿನದ ಖರ್ಚಿನ ಲೆಕ್ಕ ಬರೆಯಲಾರಂಭಿಸಿದರು.ಪಕ್ಕನೆ ಏನೋ ನೆನಪಾಗಿ "ಮೈತ್ರಿ.. ಬಾ ಮಗಳೇ... ಇಲ್ಲಿ.." ಅಂತ ಕರೆದರು.ಲೆಕ್ಕ ಬರೆಯುತ್ತಿರುವ ಅಪ್ಪ ಕರೆದಾಗ ಮೈತ್ರಿಗೆ ಸ್ವಲ್ಪ ಚಡಪಡಿಕೆ ಉಂಟಾಯಿತು.ಆದರೂ ಹೋದಳು.
"ಮಗಳೇ..ನಿನ್ನ ಖರ್ಚುವೆಚ್ಚದ ಪುಸ್ತಕ ತೆಗೆದುಕೊಂಡು ಬಾ "ಎಂದರು..
ತಮ್ಮ ನೂರು ರೂಪಾಯಿ ಕಸಿದಿದ್ದ..ಈಗ ಅಪ್ಪನಿಗೆ ತಿಳಿದರೆ ಎಂದೂ ಹೆದರಿಕೆ ಅವಳಿಗೆ.ಲೆಕ್ಕಪುಸ್ತಕ ತೋರಿಸದೆ ವಿಧಿಯಿಲ್ಲ.ತೆಗೆದುಕೊಂಡು ಹೋದಳು.ನೋಡಿದ ಅಪ್ಪ ನೂರು ರೂಪಾಯಿ ವ್ಯತ್ಯಾಸವನ್ನು ಗಮನಿಸಿದರು.ಮೈತ್ರಿಯನ್ನು ಪ್ರಶ್ನಿಸಿದಾಗ ಸುಳ್ಳು ಹೇಳಲು ಬಾರದ ಮುಗ್ಧೆ ಮೈತ್ರಿ ತಲೆಕೆಳಗೆ ಹಾಕಿ ನಿಂತಳು.ಅಲ್ಲಿಯೇ ಇನ್ನೊಂದು ಮೂಲೆಯಲ್ಲಿ ಟೇಬಲ್ ಬಳಿ ಕುಳಿತು ಓದುತ್ತಿದ್ದ ಮಹೇಶ್..."ಅಪ್ಪಾ...ಅದು ಹೇಳಲು ಮರೆತಿದ್ದೆ..ಮೊನ್ನೆ ನಮ್ಮ ಕಾಲೇಜಿನಲ್ಲಿ ನೆರೆಹಾವಳಿಗೆ ಅಂತ ಫಂಡ್ ಕಲೆಕ್ಟ್ ಮಾಡುತಿದ್ದರು.ನಿಮ್ಮಲ್ಲಿ ಕೇಳಲು ಮರೆತಿದ್ದೆ .ಬಸ್ ಗೆ ಕಾಯುತ್ತಿದ್ದ ಅಕ್ಕನಲ್ಲಿ ಕೇಳಿ ಪಡೆದಿದ್ದೆ.."ಎಂದನು.
"ಸರಿ..ಆಗಲಿ..ತೊಂದರೆಯಲ್ಲಿರುವವರಿಗೆ ದಾನಮಾಡುವುದು ಒಳ್ಳೆಯ ಗುಣ.."ಎನ್ನುತ್ತಾ ಮಗನ ಕಾರ್ಯವನ್ನು ಶ್ಲಾಘಿಸಿದರು.
ಮಹೇಶ್ ಅಪ್ಪನನ್ನು ಯಾಮಾರಿಸಿ ಒಳಗೊಳಗೇ ನಗುತ್ತಿದ್ದ.
ಅಷ್ಟರಲ್ಲಿ ಮೈತ್ರಿಯ ಮೊಬೈಲ್ ಒಂದೇ ಸಮನೆ ರಿಂಗಾಯಿತು..
"ಮೈತ್ರಿ...ಯಾರಮ್ಮಾ..ಅದು..ಒಂದೇ ಸಮನೆ ಕರೆ ಮಾಡುತ್ತಿದ್ದಾರೆ... ಸ್ವಲ್ಪ ಇಲ್ಲಿ ತಾ..ನೋಡೋಣ..."
ಎಂದಾಗ ಕಿಶನ್ ಆಗಿದ್ದರೆ ಏನು ಮಾಡುವುದು.. ಎಂದು ಯೋಚಿಸುತ್ತಿದ್ದ ಮೈತ್ರಿಯ ಜಂಘಾಬಲವೇ ಉಡುಗಿಹೋಗಿತ್ತು...
ಮುಂದುವರಿಯುವುದು...
✍️... ಅನಿತಾ ಜಿ.ಕೆ.ಭಟ್.
03-02-2020.
No comments:
Post a Comment