Thursday, 13 February 2020

ಪ್ರೇಮದೋಲೆಯು ನಿನಗೆ....

ಪ್ರೇಮದೋಲೆಯು ನಿನಗೆ ನನ್ನ
ಹೃದಯದ ಒಲವಿನರಸನೇ
ಪ್ರೀತಿಯನು ಪದದೊಳಗೆ
ಪೋಣಿಸಿಹೆ ಒಡೆಯನೇ||೧||

ಭೋರ್ಗರೆವ ಒಲವಿನ
ಝರಿಯ ಸೆಳೆತಕೆ ಸಿಲುಕಿ
ಬಾಳಲ್ಲಿ ಜೊತೆನಡೆದು
ಸಿಹಿಕಹಿ ಸವಿಯು ತುಳುಕಿ||೨||

ಪ್ರೇಮಶರಧಿಯಲಿ ಮಿಂದೆದ್ದು
ತಾರೆಗಳ ತೋಟದಲಿ ವಿಹರಿಸುತ
ಬಾನಿನಂಗಳ ತುಂಬಾ ಮಂದ
ಬೆಳಕಿನ ಶಶಿಯ ದಿಟ್ಟಿಸುತ||೩||

ನಿನ್ನುಸಿರ ಮಿಡಿತದಲಿ ನನ ಹೆಸರ
ಕೂಗಿ ನೀ ಬರೆದೆ ಮೊದಲ ಕವಿತೆ
ನನ್ನಧರ ಧಮನಿಯಲಿ ಕಂಪನದ
ನವಿರಿನಲಿ ನಾ ನಿನಗೆ ಸೋತೆ||೪||

ಉದಯಿಸಿದ ಭಾವಗಳಿಗೆ ಚಿತ್ತಾರ
ಮೂಡಿಸಿ ನುಡಿಸಿ ಹೃದಯವೀಣೆ
ರಾಗದೊಳಗೊಂದಾಗಿ ಅನುರಣಿಸಿ
ಅಮರ ಮಧುರ ಪ್ರೇಮವಾಣಿ||೫||

ನಿನ್ನ ಕಂಗಳ ಬೆಳಕು ನನಗೆ
ದಾರಿಯ ತೋರಿ ಮುನ್ನಡೆಸಿದೆ
ನಾ ನಡೆವ ಹಾದಿಯಲಿ ಕಲ್ಲುಮುಳ್ಳನು
ಸರಿಸಿ ನೀ ಹೂಹಾಸಿದೆ||೬||

ಇನಿಯ ನಿನ್ನಯ ಸಂಗದಿ ಮೈಮರೆತೆ
ಕಳೆದು ವರುಷ ನಿಮಿಷ
ದೇವನಲಿ ಬೇಡುವೆನು ಮಾಸದಿರಲಿ
ಅನುದಿನವೀ ಬಾಂಧವ್ಯ ಹರುಷ||೭||


✍️... ಅನಿತಾ ಜಿ.ಕೆ.ಭಟ್.
14-02-2020.

                            💞💞💞💞💞
Momspresso Kannada ದ 'ಪ್ರೀತಿಯೆಂಬ ಮಾಯೆ 'ಎಂಬ ವಿಷಯದ ಮೇಲಿನ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕವನ.




                          💓💓💓💓💓

ನಮಸ್ತೇ....

          ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಕಾಣಿಸುವ Home ಮತ್ತು > ಸಂಕೇತಗಳನ್ನು ಬಳಸಿಕೊಳ್ಳಬಹುದು...💐🙏

No comments:

Post a Comment