ಕಾಲೇಜಿಗೆ ತೆರಳಿದ ಮೈತ್ರಿ ಅನ್ಯಮಸ್ಕಳಾಗಿದ್ದಳು.ಗೆಳತಿಯರೆಲ್ಲ ಆಕೆಯನ್ನು ಮಾತನಾಡಿಸುತ್ತಾ ಖುಷಿಪಡಲು ಪ್ರಯತ್ನಿಸುತ್ತಿದ್ದರು.ಪರೀಕ್ಷೆ ಮುಗಿದಾಗ ಗೆಳತಿಯರೆಲ್ಲ ಸೇರಿ ಕ್ಯಾಂಟೀನ್ ಕಡೆಗೆ ಹೆಜ್ಜೆ ಹಾಕಿದರು.ಗೆಳತಿ ಸುನಿಧಿ ಎಲ್ಲರಿಗೂ ಜ್ಯೂಸ್ ಆರ್ಡರ್ ಮಾಡಿದಳು.ಕೋಲ್ಡ್ ಜ್ಯೂಸ್ ಕುಡಿದು ಎಲ್ಲರೊಂದಿಗೆ ನಗುನಗುತ್ತಾ ಹರಟಿದಾಗ ಮೈತ್ರಿಯ ಮನಸ್ಸು ಉಲ್ಲಾಸವಾಯಿತು.
ಸುನಿಧಿ ಎಲ್ಲರಿಗೂ ನಾಡಿದ್ದು ಶನಿವಾರ ಪಾರ್ಟಿ ಇದೆ.. ಎಲ್ಲರೂ ಬನ್ನಿ.. ಎನ್ನುತ್ತಾ ಆಹ್ವಾನಿಸಿದಳು.
"ಏನೇ ಅದು ಪಾರ್ಟಿ.. ಬರ್ತ್ ಡೇ ಪಾರ್ಟಿ ಅಂತೂ ಅಲ್ಲ..ಮತ್ತೇನು ಸಚಿನ್ ಜೊತೆ ಏನಾದರೂ...."
"ಹ್ಹ ಹ್ಹ ಹ್ಹಾ...ಅಲ್ಲೇ ಇರುವುದು ಗುಟ್ಟು...ಬನ್ನಿ ಗೊತ್ತಾಗುತ್ತೆ..."
"ಏನಪ್ಪಾ... ಅಷ್ಟು ಗೌಪ್ಯವಾದ ವಿಷಯ..."ಎಂದು ಎಲ್ಲರೂ ಒಕ್ಕೊರಲಿನಿಂದ ಕೇಳಿದರು.ಎಲ್ಲರಿಗೂ ತಿಳಿಯುವ ಕುತೂಹಲ.
"ಸಿಂಪಲ್ ಫ್ರೆಂಡ್ಸ್....ಸುನಿಧಿ ಸಚಿನ್ ಬ್ರೇಕಪ್ ಪಾರ್ಟಿ...."ಎಂದಳು ಬಿಂದಾಸ್ ಸುನಿಧಿ.
ಇದನ್ನು ಕೇಳಿದ ಎಲ್ಲರೂ ಹೌಹಾರಿದರು..
"ಏನೇ...ಸುನಿಧಿ...ಪ್ರೀತಿ ಅಂದ್ರೆ ಆಟಾನಾ ನಿಂಗೆ... ಅದೆಷ್ಟು ಸುಲಭವಾಗಿ ಹೇಳ್ತೀಯಲ್ಲ ...ಹೊಸ ಡ್ರೆಸ್ ಬಂದಾಗ ಹಳೆಯದನ್ನ ಬದಿಗೆಸೆವಂತೆ..."ಎನ್ನುತ್ತಾ ಮೈತ್ರಿ ತರಾಟೆಗೆ ತೆಗೆದುಕೊಂಡಳು.
"ಹೌದು...ಕಣೇ.. ತುಂಬಾ ಆಲೋಚನೆ ಮಾಡಿ ನಿರ್ಧಾರಕ್ಕೆ ಬಂದಿದೀನಿ..."ಎಂದಳು ಸುನಿಧಿ.
"ಅವ್ನೂ ಇದಕ್ಕೆ ಒಪ್ಪಿಕೊಂಡಿದ್ದಾನಾ...."ಎಂಬ ರೀನಾಳ ಪ್ರಶ್ನೆಗೆ
"ಹೂಂ...ಒಪ್ಪಿಕೊಂಡಿದಾನೆ...ಒಪ್ಪಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ..."ಎಂದಳು ಸುನಿಧಿ..
"ಹಿಂಗೆಲ್ಲ ಕೈ ಕೊಡಬಾರದು ಕಣೇ..."ಎಂದಳಾಗ ಶಮಾ..
"ನಿನ್ನ ಈ ನಡತೆಯಿಂದ ಪ್ರೀತಿಸುವವರನ್ನು ಸಂಶಯದಿಂದ ನೋಡುವಂತೆ ಆಗಿದೆ..."ಎಂದಳು ಸಾಜಿದಾ..
"ಮತ್ತೆ ಯಾಕೆ ಪ್ರೀತಿಸುವ ನಾಟಕ ಮಾಡಿದೆ.." ಎಂದಳು ಸೀಮಾ..
"ಅವನೆಷ್ಟು ನೊಂದುಕೊಂಡಿದ್ದಾನೋ ಏನೋ..."ಎಂದಳು ಮೈತ್ರಿ..
ಎಲ್ಲರ ಮಾತನ್ನೂ ಕೇಳಿಸಿಕೊಂಡ ಸುನಿಧಿ ಮಾತನಾಡಲು ಆರಂಭಿಸಿದಳು.
"ನಾನು ಸಚಿನ್ ನನ್ನು ತುಂಬಾ ಪ್ರೀತಿಸ್ತಿದೀನಿ .. ಆದರೆ ಅದು ಮುಂದುವರಿಯುವುದು ಕಷ್ಟವಿದೆ..ಸೋ...ಬ್ರೇಕಪ್ ಮಾಡಿಕೊಂಡು ಬರಿಯ ಸ್ನೇಹಿತರಾಗಿ ಉಳಿದು ಬಿಡ್ತೀವಿ.."
"ಅಂತಹ ಕಷ್ಟ ಏನಾಯ್ತು ನಿಮ್ಮಿಬ್ಬರ ಮಧ್ಯೆ.."ಕೇಳಿದಳು ಸೀಮಾ..
"ನಾನು ಏನು ನಿರ್ಧಾರ ಮಾಡಿದರೂ ಆಲೋಚಿಸಿ ಮಾಡುತ್ತೇನೆ..ನನಗೆ ಮನೆಯಲ್ಲಿ ವರಾನ್ವೇಷಣೆ ಆರಂಭಿಸಿದ್ದರು.ಸ್ವಲ್ಪ ದಿನ ಬೇಡ ಹಾಗೆ ಹೀಗೆ ಎಂದು ಕಾರಣ ಹೇಳಿ ಮುಂದೂಡಿದೆ.ಈಗ ಒಂದು ಸಂಬಂಧ ಬಂದಿದೆ..ಮನೆಯವರಿಗೆಲ್ಲ ಒಪ್ಪಿಗೆಯಾಗಿದೆ..."
"ಅದ್ಕೇ..ಈಗ ಬ್ರೇಕಪ್... ಅಲ್ವಾ.." ಅರ್ಧದಲ್ಲೇ ಬಾಯಿಹಾಕಿದಳು ಸೀಮಾ.
"ಹಾಗಲ್ಲ... ನಾನು ನನ್ನ ಮನಸ್ಸು ಏನೆಂದು ಮನೆಯವರಲ್ಲಿ ಹೇಳಬೇಕಾಗಿ ಬಂತು.. ಸಚಿನ್ ನನ್ನು ಒಂದು ಮಾತು ಕೇಳಿದೆ.. ಅವನು ಇನ್ನು ಜಾಬ್ ಹಿಡಿದು ಸೆಟ್ಲ್ ಆಗಲು ಕನಿಷ್ಟ ನಾಲ್ಕು ವರ್ಷ ಬೇಕು.ತಂಗಿಯ ವಿದ್ಯಾಭ್ಯಾಸದ ಜವಾಬ್ದಾರಿ ಇದೆ.ನಂತರ ಅವಳ ಮದುವೆ ಮಾಡಿ ಅವನ ಜೀವನದ ಯೋಚನೆಯಂತೆ..ಅದಕ್ಕೆಲ್ಲ ಏನಿದ್ದರೂ ಆರೇಳು ವರ್ಷಗಳು ಉರುಳಲೇ ಬೇಕು.ಅಷ್ಟು ಸಮಯ ನಾನೂ ಕಾಯಬೇಕಾಗುತ್ತದೆ..ಬಂದ ಬಂದ ವರಗಳನ್ನೆಲ್ಲಾ ಏನೋ ಕಾರಣ ಹೇಳಿ ತಿರಸ್ಕರಿಸಿ ದರೆ ಜನ ನನ್ನ ಏನೆಂದುಕೊಳ್ಳಲ್ಲ...ನನ್ನ ಕುಟುಂಬದವರಿಗೂ ಬೇಸರ..
ಹಾಗಾಗಿ ಸಚಿನ್ ನನ್ನು ಒಂದು ಮಾತು ಕೇಳಿದೆ.. ನಾಲ್ಕು ವರ್ಷದೊಳಗೆ ಮದುವೆಯಾಗುವುದಿದ್ದರೆ ಕಾಯುವೆ.. ಇಲ್ಲಾಂದ್ರೆ ದೂರವಾಗ್ತೀನಿ..ಮನೆಯವರು ತೋರಿಸಿದ ಹುಡುಗನನ್ನೇ ವರಿಸ್ತೀನಿ ಅಂತ...ಅವನೂ ಟೈಂ ತಗೊಂಡು ಯೋಚಿಸಿ ಒಪ್ಪಿಗೆ ಕೊಟ್ಟ..ಸೋ ಬ್ರೇಕಪ್ ಪಾರ್ಟಿ ಮಾಡ್ತಿದೀವಿ.. ಬನ್ನಿ..."
ಇದನ್ನೆಲ್ಲಾ ಕೇಳಿದ ಗೆಳತಿಯರೆಲ್ಲ ಬೆರಗಾದರು.ಹೀಗೂ ಕೈಕೊಡೋದು ಉಂಟಾ...ಅಷ್ಟಿದ್ದರೆ ಸುಮ್ಮನೆ ಪ್ರೀತಿ, ಪ್ರೇಮ ಬೇಕಿತ್ತಾ.. ನಾಲ್ಕು ದಿನ ಬೈಕ್ ನಲ್ಲಿ ಸುತ್ತಿ ಕಿಸೆ ಬೋಳಿಸಿ ಬಾಯ್ ಬಾಯ್ ಹೇಳುವುದು ನ್ಯಾಯವೇ...? ಎನ್ನುವುದು ಎಲ್ಲರ ಮನದಲ್ಲಿ ಕೊರೆಯುತ್ತಿದ್ದ ಪ್ರಶ್ನೆ..
ಗೆಳತಿಯರೆಲ್ಲ ಮನೆಗೆ ತೆರಳಲು ತಯಾರಾದರು.ಮೈತ್ರಿ ಬಸ್ ಸ್ಟ್ಯಾಂಡ್ ಗೆ ಹೋಗಿ ಬಸ್ ಗೆ ಅರ್ಧ ಗಂಟೆ ಕಾದು ಬಸ್ ಹತ್ತಿದಳು.ಮೈತ್ರಿಗೆ ಬಸ್ ನಲ್ಲಿ ತಲೆಯೊಳಗೆ ಬ್ರೇಕಪ್ ಹುಳ ಕೊರೆಯತೊಡಗಿತ್ತು.. ಕಿಶನ್ ಕೂಡ ಹೀಗೇ ನನಗೆ ಕೈಕೊಟ್ಟರೆ ಏನು ಗತಿ..?? ನಾನು ಅವನ ಪ್ರೀತಿಯನ್ನು ಸತ್ಯವೆಂದೇ ನಂಬಿರುವೆ..ಆದರೆ ಅವನ ಚಿಂತನೆ ಬೇರೆಯದೇ ಆಗಿದ್ದರೆ....!!! ಮನೆಯವರಲ್ಲಿ ಹೇಳುವುದು ಕೂಡ ಕಷ್ಟ...ಹೇಳದಿರುವುದೂ ಇಂತಹ ಅನರ್ಥಗಳಿಗೆ ಕಾರಣ.. ಮುಂದೆ ನಾನೇನು ಮಾಡಲಿ..?? ಸುನಿಧಿಯಂತೆ ಬ್ರೇಕಪ್ ಮಾಡಿಕೊಳ್ಳಲು ನನ್ನ ಹೃದಯ ಒಪ್ಪಲಾರದು... ಮೇಕಪ್ ಮಾಡಿಕೊಳ್ಳುವುದು ಹೇಗೆ ಎಂದೇ ಚಿಂತೆ..
ಒಮ್ಮೆ ಗಟ್ಟಿಮಾಡಿದ್ದ ಮನಸ್ಸು ಬದಲಾಯಿಸಿ ಕಿಶನ್ ನ ಸಂದೇಶಗಳನ್ನು ಓದಿದಳು...ಇಲ್ಲ ನನ್ನ ಪ್ರಿಯತಮ ಅಂತಹವನಲ್ಲ.. ಎಂದು ತನಗೆ ತಾನೇ ಬುದ್ಧಿಹೇಳಿಕೊಂಡು ಸಮಾಧಾನ ಮಾಡಿಕೊಂಡಳು.. ಮನಸ್ಸು ಬಿಚ್ಚಿ ಕಿಶನ್ ನಲ್ಲಿ ಮಾತನಾಡುವ ತವಕ.. ಆದರೆ ಮನೆಯವರ ಭಯ...
ಕಾಲೇಜಿನಿಂದ ಮನೆಗೆ ತೆರಳಿದ ಮೈತ್ರಿ ಗಂಭೀರವಾಗಿ ಇದ್ದಳು..ಮನೆಯವರಿಗೆ ಮೈತ್ರಿ ಯ ವರ್ತನೆಯಲ್ಲಿನ ಬದಲಾವಣೆ ಅರಿವಾಗಿತ್ತು.ಅಮ್ಮ ಮಾಡಿದ ತಿಂಡಿ ತಿಂದು ಮೈತ್ರಿ ರೂಮು ಸೇರಿದಳು.ಚಡಪಡಿಕೆ ನಿಲ್ಲಲಿಲ್ಲ.. ಕುರ್ಚಿ ಯಿಂದೆದ್ದು ಕೆಳಗೆ ಕುಳಿತು ಶ್ರುತಿಪೆಟ್ಟಿಗೆ ಆನ್ ಮಾಡಿದಳು..ತಾನು ಕಲಿತ ಶಾಸ್ತ್ರೀಯ ಸಂಗೀತದ ಕೆಲವು ತನಗಿಷ್ಟವಾದ ರಾಗಗಳನ್ನು ಹಾಡುಗಳನ್ನು ಹಾಡಿದಳು.ಸ್ವಲ್ಪ ಹೊತ್ತು ಹಾಡಬೇಕೆಂದು ಕುಳಿತವಳು ತಲ್ಲೀನತೆಯಿಂದ ಹಾಡುತ್ತಾ ಕುಳಿತು ಗಂಟೆ ನೋಡಿದಾಗ ಆಗಲೇ ಒಂದುಗಂಟೆಯಷ್ಟು ಹೊತ್ತಾಗಿತ್ತು ಆರಂಭಿಸಿ... ಇನ್ನು ಸಾಕೆಂದು ನಿಲ್ಲಿಸಿದಾಗ ಚಾವಡಿಯಿಂದ ಅಜ್ಜನ ದನಿ ಕೇಳಿತು... "ಮೈತ್ರಿ... ಹಾಡು ಇಷ್ಟು ಬೇಗ ಮುಗಿಸಿದೆಯಾ... ಇನ್ನೊಂದು ಕೃತಿ ಹಾಡಮ್ಮಾ.."
ಓಹೋ..ಅಜ್ಜ ಕೇಳ್ತಾ ಇದ್ದರು ಎಂದಾಯಿತು..ಎಂದುಕೊಂಡಳು ಮೈತ್ರಿ..
"ಪವಡಿಸೋ ಪರಮಾತ್ಮ...ಶ್ರೀ ವೆಂಕಟೇಶ..."ಹಾಡನ್ನು ನಿನ್ನ ಕಂಠದಿಂದ ಕೇಳದೆ ತುಂಬಾ ದಿನವಾಯ್ತು ಪುಳ್ಳಿ..."
"ಆಗಲಿ ಅಜ್ಜ..ಹಾಡುವೆ..."ಎನ್ನುತ್ತಾ ಅಜ್ಜನ ಇಷ್ಟದ ಗೀತೆಯನ್ನು ಮನದುಂಬಿ ಹಾಡುತ್ತಿದ್ದಂತೆ ಒಳಗೆ ನಾಳೆಗೆ ದೋಸೆಹಿಟ್ಟು ರುಬ್ಬಿ ಕಲ್ಲಿನಿಂದ ತೆಗೆಯುತ್ತಿದ್ದ ಅಮ್ಮನೂ ಬಂದರು... ಅಜ್ಜಿ ಮಲ್ಲಿಗೆಯ ಹೂವನ್ನು ಮಾಲೆಹೆಣೆಯುತ್ತಾ ಮೊಮ್ಮಗಳ ಹಾಡನ್ನು ತಾವೂ ಗುನುಗುತ್ತಾ ಸಂತಸಪಟ್ಟರು.
ಆ ಹಾಡನ್ನು ಹಾಡಿ ನಿಲ್ಲಿಸುತ್ತಿದ್ದಂತೆ ಮೈತ್ರಿ ಗೆ ಅರಿವಿಲ್ಲದೆಯೇ ಕಣ್ಣಂಚು ಒದ್ದೆಯಾಗಿತ್ತು.. ಅದನ್ನು ಕಂಡ ಅಮ್ಮ
"ಎಷ್ಟು ಇಂಪಾಗಿ ಹಾಡ್ತೆ ಮಗಳೇ...."ಎಂದು ಮಗಳ ಕಂಠವನ್ನು ಮೆಚ್ಚಿಕೊಂಡರು..
ಸಂಗೀತದಿಂದ ಮೈತ್ರಿಯ ಮನಸ್ಸು ಈಗ ಅರಳಿತು.ದುಗುಡಗಳು ದೂರಾದವು.. ಓದಿನಲ್ಲಿ ಏಕಾಗ್ರತೆಯಿಂದ ತೊಡಗಿಕೊಂಡಳು.
ಮದುವೆಗೆ ತೆರಳಿದ್ದ ಮಂಗಳಮ್ಮನಲ್ಲಿ ಸಂಬಂಧಿಕರೊಬ್ಬರು ಮಗಳಿಗೆ ಮದುವೆಯ ಆಲೋಚನೆ ಇದೆಯಾ ಎಂದು ಕೇಳಿದ್ದರು.. ನಕ್ಕು ಸುಮ್ಮನಾದ ಅವರಲ್ಲಿ ತಾವೇ ಖುದ್ದಾಗಿ ತಮ್ಮ ಪರಿಚಯದ ಹುಡುಗನ ವಿವರವನ್ನ ತಿಳಿಸಿದ್ದರು.. ಈಗಲೇ ನಾನೇನೂ ಹೇಳಲು ಸಾಧ್ಯವಿಲ್ಲ...ಎಂದ ಮಂಗಳಮ್ಮ ಮನೆಗೆ ಬಂದು ಗಂಡನಲ್ಲಿ ವಿಷಯ ತಿಳಿಸಿದರು.
ಭಾಸ್ಕರ ಶಾಸ್ತ್ರಿಗಳು ಹುಡುಗನ ಬಗ್ಗೆ ಸಂಬಂಧಿಕರಲ್ಲಿ ಸರಿಯಾಗಿ ವಿಚಾರಿಸಿ ಮತ್ತೆ ಮುಂದುವರಿಯೋಣ ಎಂದು ಪತ್ನಿಯಲ್ಲಿ ಹೇಳಿದರು..
ಮೈತ್ರಿ ಗೆ ಇದ್ಯಾವುದೂ ತಿಳಿದಿರಲಿಲ್ಲ.. ಅವಳು ಕಿಶನ್ ನ ಗುಂಗಲ್ಲಿ..ಅವನ ಹಾಯ್ಕುಗಳನ್ನು ಓದುತ್ತಾ ...ಆಗಾಗ ಇಮೋಜಿಗಳನ್ನು ಕಳಿಸುತ್ತಾ ಕಲ್ಪನಾಲೋಕದಲ್ಲಿ ವಿಹರಿಸುತ್ತಿದ್ದಳು..
ಒಂದು ದಿನ ಸಂಜೆ ಕಾಲೇಜಿನಿಂದ ಮನೆಗೆ ಮರಳುತ್ತಿದ್ದ ಮೈತ್ರಿಗೆ ನೆರೆಮನೆಯ ಶಾರತ್ತೆ ಸಿಕ್ಕಿದರು..ಏನೇ ಮೈತ್ರಿ.. ಎನ್ನುತ್ತಾ ಮಾತನಾಡುತ್ತಾ ಜೊತೆಯಾಗಿ ಹೆಜ್ಜೆಹಾಕಿದರು.. ಪಟ್ಟಾಂಗದ ಮಧ್ಯದಲ್ಲಿ "ನಿನ್ನನ್ನು ನೋಡಲು ಬರುವ ಹುಡುಗ ನನ್ನ ಸಂಬಂಧಿಕರ ಮಗ.." ಎಂದಾಗ ತನ್ನ ಕಿವಿಯನ್ನು ನಂಬದಾದಳು...
ಮುಂದುವರಿಯುವುದು...
✍️ ...ಅನಿತಾ ಜಿ.ಕೆ.ಭಟ್.
06-02-2020.
👍👍
ReplyDelete💐🙏
ReplyDelete