ಸಾಮಾನ್ಯವಾಗಿ ನಾವು ಎಲ್ಲಿಗಾದರೂ ಹೋದಾಗ ಅಲ್ಲಿ ಕಂಡ ವಿಶೇಷ ಅನಿಸಿದ ವಸ್ತುಗಳ ಬಗ್ಗೆ ಕುತೂಹಲ ಮೂಡುವುದು ಸಹಜ.ನೆಂಟರ ಮನೆಗೆ ಹೋದಾಗಲಂತೂ ನಮ್ಮಂತಹ ಹೆಣ್ಣುಮಕ್ಕಳಿಗೆ ಹೂವಿನ ಗಿಡಗಳು ಮೊದಲು ಕಣ್ಣಿಗೆ ಬೀಳುತ್ತವೆ.ನನಗೆ ಹೀಗೇನೇ.. ನಿಮಗೆ...? ನನಗಂತೂ ಹೂ ಹಣ್ಣಿನ ಗಿಡಗಳಲ್ಲಿ ಆಸಕ್ತಿ ಜಾಸ್ತಿ.ಹೀಗೆ ಒಂದು ದಿನ ನೆಂಟರ ಮನೆಗೆ ಹೋಗಿದ್ದೆವು.ಏನಾಯ್ತು ಗೊತ್ತಾ..?
ಅಂಗಳದ ಬದಿಯಲ್ಲಿ ತುಂಬಾ ಕಾಯಿಗಳನ್ನು ಹೊತ್ತು ಒಂದು ಪಪ್ಪಾಯ ಗಿಡ ಸೊಂಪಾಗಿ ಬೆಳೆದಿತ್ತು.ಸುಮಾರು ಹದಿನೈದು ಇಪ್ಪತ್ತು ಕಾಯಿಗಳು ನೇತಾಡುತ್ತಿದ್ದವು.ಆ ಮನೆಯ ಅಕ್ಕನಲ್ಲಿ ಮಾತನಾಡುತ್ತಾ ಪಪ್ಪಾಯಿ ಗಿಡದ ಮಾಹಿತಿಯೂ ಕಲೆ ಹಾಕಿದೆ.ಅದರ ರುಚಿ ಬಣ್ಣವನ್ನು ಗುಣಗಾನ ಮಾಡಿದ ಅವರು ಅಷ್ಟಕ್ಕೇ ಸುಮ್ಮನಾಗಲಿಲ್ಲ.ತಗೋ.. ನಿಮಗಾಯಿತು.. ಎಂದು ಅಡುಗೆಮನೆಯ ಸ್ಟೋರ್ ರೂಂ ನಲ್ಲಿ ಕೊಯ್ದಿರಿಸಿದ ಕೇಸರಿ ಬಣ್ಣದ ಪಪ್ಪಾಯ ಹಣ್ಣನ್ನು ನನಗೆ ಕೊಟ್ಟರು."ಇದರಲ್ಲಿ ಸ್ವಲ್ಪವೇ ಬೀಜ ಇರುವುದು..ಜೋಪಾನ... ಅದನ್ನು ತೆಗೆದಿರಿಸಿ ಗಿಡ ಮಾಡಿ..ನೆಡಿ.. ಧಾರಾಳವಾಗಿ ಫಲ ಕೊಯ್ಯುವಂತಾಗಲಿ..." ಅವರೇ ಕೈಯೆತ್ತಿ ಕೊಟ್ಟಾಗ ಬೇಡವೆನ್ನಲಾದೀತೇ ನನ್ನಿಂದ..? ರೋಗಿ ಬಯಸಿದ್ದೂ ಹಾಲು ವೈದ್ಯ ಕೊಟ್ಟದ್ದೂ ಹಾಲು ಎಂಬಂತೆ ಖುಷಿಯಿಂದ ಸ್ವೀಕರಿಸಿದೆ..
ಹಣ್ಣನ್ನು ಸವಿದು ನಂತರ ಬೀಜಗಳಿಂದ ಸಸಿ ಮಾಡಿ ನೆಟ್ಟೆವು.. ಸಾವಯವ ಗೊಬ್ಬರವನ್ನೂ ಉಣಿಸಿದೆವು.. ಆರೇಳು ತಿಂಗಳಲ್ಲೇ ತನ್ನ ಮೈತುಂಬಾ ಕಾಯಿಗಳನ್ನು ಹೊತ್ತು ನಿಂತಿತು ಪಪ್ಪಾಯಿ ಗಿಡ..ಅವರ ಪ್ರೀತಿಯ ಹಾರೈಕೆ..ನನ್ನ ಅಕ್ಕರೆಯ ಕಾಳಜಿ ಎರಡೂ ಜೊತೆಯಾಗಿ ಫಲದುಂಬಿತು.
ಬಲಿತ ಕಾಯಿಗಳನ್ನು ಅಡುಗೆಗೆ ಬಳಸಿದೆವು.ಸಿಹಿಯಾದ ಹಣ್ಣನ್ನು ಸವಿದೆವು..ನಾವು ಬಳಸಿದ್ದು ಮಾತ್ರವಲ್ಲ ನಮ್ಮ ಸುತ್ತಮುತ್ತಲಿನ ನಾಲ್ಕಾರು ಕುಟುಂಬಗಳಿಗೂ ಹಣ್ಣುಗಳನ್ನು ಸವಿಯಲು ನೀಡಿದೆವು.ರುಚಿಕರವಾದ ಪಪ್ಪಾಯಿ ಹಣ್ಣಿಗೂ ಅದರದೇ ಆದ ವಿಶೇಷತೆಗಳಿವೆ.
ಪಪ್ಪಾಯ ಹಣ್ಣಿನಲ್ಲಿ ಯಥೇಚ್ಛವಾಗಿ ಆಂಟಿ ಆಕ್ಸಿಡೆಂಟ್ ಗಳಿವೆ.ದೇಹಕ್ಕೆ ರೋಗರುಜಿನಗಳು ಮುತ್ತಿಕೊಳ್ಳುವುದನ್ನು ಇವು ತಡೆಯುತ್ತವೆ.ಆಗಾಗ ಪಪ್ಪಾಯ ಹಣ್ಣನ್ನು ಸೇವಿಸುತ್ತಿದ್ದರೆ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.ವಿಟಮಿನ್ ಎ ಮತ್ತು ವಿಟಮಿನ್ ಸಿ ಅಂಶಗಳು ಹೇರಳವಾಗಿವೆ.ಹಣ್ಣನ್ನು ಪೇಸ್ಟ್ ಮಾಡಿ ಫೇಸ್ ಪ್ಯಾಕ್ ಆಗಿ ಕೂಡಾ ಬಳಸುತ್ತಾರೆ.ಇದಕ್ಕಿರುವ ವಿಶೇಷ ಗುಣವೆಂದರೆ ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಿ ಚರ್ಮಕ್ಕೆ ಹೊಳಪನ್ನು ತಂದುಕೊಡುತ್ತದೆ.
ಮಲಬದ್ಧತೆಯ ಸಮಸ್ಯೆಯಿರುವವರು ಹೆಚ್ಚಾಗಿ ಇಷ್ಟಪಡುವ ಹಣ್ಣು ಪಪ್ಪಾಯ.ಮಕ್ಕಳಲ್ಲಿ ಜಂತು ಹುಳುವಿನ ಸಮಸ್ಯೆಯಿದ್ದಾಗ ಇದನ್ನು ತಿನ್ನಲು ಕೊಡುವುದು ಹಳ್ಳಿಯಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದ ಪಾರಂಪರಿಕ ಪದ್ಧತಿ.ಪಪ್ಪಾಯಿ ಗಿಡದ ಎಲೆಗಳು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.ಡೆಂಗ್ಯೂ ಜ್ವರ ಬಾಧಿಸಿದಾಗ ಪಪ್ಪಾಯ ಎಲೆಯ ರಸವನ್ನು ಒಂದೆರಡು ಚಮಚದಷ್ಟು ಸೇವಿಸುವುದು ಒಳ್ಳೆಯದು. (ಸ್ವಯಂ ವೈದ್ಯಕೀಯ ಪ್ರಯೋಗ ಬೇಡ.ಆಯುರ್ವೇದ ತಜ್ಞರ ಸಲಹೆ ಪಡೆದುಕೊಳ್ಳಿ)
ಪಪ್ಪಾಯ ಹಣ್ಣಿನಲ್ಲಿ ಇರುವ ಲ್ಯಾಟೆಕ್ಸ್ ಎಂಬ ರಾಸಾಯನಿಕವು ದೇಹದಲ್ಲಿ ರಕ್ತಸ್ರಾವ ವನ್ನು ಉಂಟುಮಾಡಬಹುದು.ಆದ್ದರಿಂದ ಗರ್ಭಿಣಿಯರು ಪಪ್ಪಾಯ ಸೇವಿಸುವುದು ಒಳ್ಳೆಯದಲ್ಲ.ತಿನ್ನಲೇ ಬೇಕೆಂದಿದ್ದರೆ ತಮ್ಮ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಒಳ್ಳೆಯದು.ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತಸ್ರಾವವಿದ್ದಾಗ ಪಪ್ಪಾಯ ಸೇವನೆ ಹಿತವಲ್ಲ.ಪಪ್ಪಾಯವು ಪುರುಷರ ಫಲವತ್ತತೆಯ ಮೇಲೂ ಅಡ್ಡಪರಿಣಾಮ ಬೀರುತ್ತದೆ.ಜಠರ ಮತ್ತು ಕರುಳಿನ ಸಮಸ್ಯೆಯಿರುವವರಿಗೆ ತಿನ್ನದಿರುವುದು ಒಳ್ಳೆಯದು.ಮಧುಮೇಹಿಗಳಿಗೆ ಹಿತವಾಗಿ ಪಪ್ಪಾಯ ಒಳ್ಳೆಯದು.. ಆದರೆ ಅತಿಯಾಗಿ ಸೇವಿಸಿದರೆ ರಕ್ತದಲ್ಲಿ ಸಕ್ಕರೆಯ ಅಂಶ ಕಡಿಮೆಯಾಗಬಹುದು.ಒಟ್ಟಾರೆಯಾಗಿ ಹೇಳುವುದಾದರೆ ಹಿತಮಿತವಾಗಿ ಬಳಸಿದರೆ ಆರೋಗ್ಯಕರ .
ಇಷ್ಟೆಲ್ಲಾ ಗುಣಾವಗುಣಗಳನ್ನು ಹೊಂದಿರುವ ಪಪ್ಪಾಯ ಹಣ್ಣಿನ ಗಿಡ ನಮ್ಮ ಕೈತೋಟಕ್ಕೆ ವಿಶೇಷ ಸೊಬಗನ್ನು ತಂದುಕೊಟ್ಟಿತ್ತು. ಮಳೆಗಾಲದಲ್ಲೂ ಕಾಯಿಗಳನ್ನು ತುಂಬಿಕೊಂಡು ನಿಂತಿತ್ತು..ಅಂದೊಂದು ದಿನ ವರುಣನ ಆರ್ಭಟ ಜೋರಾಗಿತ್ತು..ವಾಯುದೇವ ಅತಿವೇಗದಲ್ಲಿ ಬೀಸುತ್ತಿದ್ದ.. ಬಾನಂಗಳದಲ್ಲಿ ಗುಡುಗು ಮಿಂಚಿನ ತೋರಣಕಟ್ಟಿತ್ತು ... ಕಾರ್ಮೋಡ ಕರಗಿ ಧೋ...!!! ಎಂದು ಸುರಿಯಲಾರಂಭಿಸಿತು. ಇದನ್ನೆಲ್ಲ ತಡೆದುಕೊಳ್ಳುವ ಶಕ್ತಿಯಿಲ್ಲದೆ ಕಾಯಿಗಳಿಂದ ತುಂಬಿದ್ದ ಗಿಡ ನೆಲಕ್ಕುರುಳಿತು.ಕಾಯಿಗಳು ಅಂಗಳದ ತುಂಬಾ ಚಲ್ಲಾಪಿಲ್ಲಿಯಾಗಿ ಹರಡಿದವು.ಇದನ್ನು ನೋಡಿದ ನನ್ನ ಕಣ್ಣುಗಳು ತೇವವಾಗಿದ್ದವು.ಅಕ್ಕರೆಯಿಂದ ನಾನು ದಿನವೂ ಪೋಷಿಸಿದ ಗಿಡ..ಸಕ್ಕರೆಯಂತಹ ಸವಿಯಾದ ಸತ್ವಯುತ ಹಣ್ಣುಗಳನ್ನು ನೀಡಿದ ಗಿಡ ...ತನ್ನ ನೆನಪನ್ನು ಉಳಿಸಿ ಹೋಯಿತು.
ಗಿಡಗಳು ಮಾತನಾಡದೆ ಇರಬಹುದು.ಆದರೆ ಅವುಗಳ ಒಡನಾಟ ನಮ್ಮೊಳಗೆ ಒಂದು ಬಾಂಧವ್ಯವನ್ನು ಚಿಗುರಿಸುತ್ತವೆ.ಒಂದೆರಡು ದಿನ ಪರವೂರಿಗೆ ತೆರಳಿದಾಗ ಗಿಡಗಳಿಗೆ ನೀರುಣಿಸದಿದ್ದರೆ ಅವುಗಳಿಗೇನಾಗಬಹುದೋ ಎಂಬ ಯೋಚನೆ.. ಬಂದು ಮೊದಲು ಅವುಗಳಿಗೆ ನೀರುಣಿಸಿ ಹಸಿಹಸಿಯಾಗಿ ಕಂಡಾಗ ಮನಸ್ಸಿಗೆ ಆಗುವ ಸಮಾಧಾನ ಅಷ್ಟಿಷ್ಟಲ್ಲ.. ಹಸಿರು ಸಸ್ಯಗಳೂ ನಮ್ಮ ಒಡನಾಡಿಗಳು.ಶುದ್ಧ
ಉಸಿರು ನಮಗೆ ನೀಡುವ ಗಿಡಮರ ತರುಲತೆಗಳಿಗೆ ನಮ್ಮ ಮನೆಯಂಗಳದಲ್ಲಿ ಸ್ವಲ್ಪ ಜಾಗವಿಡೋಣ.. ಹಸಿರು ನಮ್ಮ ಉಸಿರು..
✍️... ಅನಿತಾ ಜಿ.ಕೆ.ಭಟ್.
01-02-2020.
ನಮಸ್ತೇ...
ನಿಮಗೆ ಹಿಂದಿನ ಎಪಿಸೋಡ್ ಗಳನ್ನು/ಇತ್ತೀಚಿನ ಬರಹಗಳನ್ನು ಓದಬೇಕೆಂದನಿಸಿದರೆ ಬರಹದ ಕೆಳಗಡೆ ಇರುವ 'Home' ಎನ್ನುವ ಪದವನ್ನು ಕ್ಲಿಕ್ ಮಾಡಿ ಸಿಗುತ್ತವೆ..
ಹಾಗೇನೇ ... > ಈ ಬಟನ್ ಕ್ಲಿಕ್ ಮಾಡಿ ನಿಮಗೆ ಬೇಕಾದ ಬರಹಗಳನ್ನು ಸರ್ಚ್ ಮಾಡಿ ಓದಬಹುದು...ಹಿಂದಿನ ಎಲ್ಲಾ ಬರಹಗಳೂ ಕಾಣಸಿಗುತ್ತವೆ...< ಬಟನ್ ಬಳಸಿ ಬ್ಯಾಕ್ ಬರಬಹುದು...
share ಅನ್ನುವ ಆಪ್ಷನ್ ಬಳಸಿemail, Facebook, twitter ಗಳಲ್ಲಿ ಬಂಧುಮಿತ್ರರ ಜೊತೆ ಹಂಚಿಕೊಳ್ಳಬಹುದು..
ಬರಹದ ಮೇಲ್ಗಡೆ ಬ್ಲಾಗ್ ಲಿಂಕ್ ಕಾಣುವಲ್ಲಿ ಪಕ್ಕದಲ್ಲಿ ಮೂರು ಡಾಟ್ ಮತ್ತು ಲೈನ್ಸ್ ಕಾಣಿಸುತ್ತದೆ.. ಅದನ್ನು ಕ್ಲಿಕ್ ಮಾಡಿ.. ಶೇರ್ ಆಪ್ಷನ್ ಸೆಲೆಕ್ಟ್ ಮಾಡಿ...ನಂತರ ನೀವು ಫೇಸ್ಬುಕ್, ವಾಟ್ಸಪ್,ಮೆಸೇಂಜರ್, ಮೈಲ್..ಹೀಗೇ ಹಲವಾರು ಸೋಶಿಯಲ್ ಆಪ್..ಗಳನ್ನು ಬಳಸಿ ನಿಮಗಿಷ್ಟವಾದ ಬರಹವನ್ನು ಶೇರ್ ಮಾಡಬಹುದು..
ನಿಮ್ಮ ಪ್ರೀತಿ ,ಪ್ರೋತ್ಸಾಹಕ್ಕೆ ಚಿರ ಋಣಿ.. ಧನ್ಯವಾದಗಳು 💐🙏.
No comments:
Post a Comment