Tuesday, 4 February 2020

ಜೀವನ ಮೈತ್ರಿ ಭಾಗ-೯




  ರಾತ್ರಿ ತುಂಬಾ ಹೊತ್ತು ಓದಿ ತಡವಾಗಿ ಮಲಗಿದಳು ಮೈತ್ರಿ.ಬೆಳಗ್ಗೆ ಮಗಳು ಆರು ಗಂಟೆಯಾದರೂ ಏಳದಿದ್ದುದನ್ನು ಕಂಡು ಅಮ್ಮ ಬಂದು ಎಬ್ಬಿಸಿದರು..."ಇಷ್ಟು ತಡಮಾಡಿದರೆ ಹೇಗೆ ಮಗಳೇ..ನನಗೂ ಇವತ್ತು ಒಂದು ಮದುವೆಗೆ ಹೋಗುವುದಿದೆ...ನಿನ್ನ ಕೆಲಸಗಳನ್ನು ನೀನೇ ಮಾಡಿಕೊಂಡು ಹೊರಡಬೇಕು ಇವತ್ತು.."ಎಂದ ಅಮ್ಮನ ಮಾತಿಗೆ ಉದಾಸೀನದಿಂದ ಜಡವಾಗಿ ಬಾಯಿ ಆಕಳಿಸುತ್ತಾ ಹೂಂ ಗುಟ್ಟಿದಳು ಮೈತ್ರಿ..


  " ಅಮ್ಮಾ..ಅವಳ ಕೆಲಸ ಮಾಡ್ಬೇಡಮ್ಮಾ..ಆದ್ರೆ ನನ್ನ ಬುತ್ತಿಗೆ ಬಾಟಲಿಗೆ ನೀರು ತುಂಬಿಸುವ ನೀನೇ ಮಾಡಬೇಕು ಆಯ್ತಾ" ಗೋಗರೆದ ಮಹೇಶ್..
"ಆಯ್ತಣ್ಣೋ...ಮಾಡಿಕೊಡುವೆ.."
"ಹೌದು.. ಮದುವೆಗೆ ಎಷ್ಟೊತ್ತಿಗೆ ಹೋಗೋದು "ಎಂದು ಕೇಳಿದರು ಭಾಸ್ಕರ ಶಾಸ್ತ್ರಿಗಳು.
"ಹತ್ತು ಗಂಟೆಗೆ ಹೊರಡೋದು... ಎರಡು ಬಸ್ ಹಿಡಿದರೆ ಆಯಿತು.. ಮದುವೆ ಹಾಲ್ ಗೆ.."
"ಹೌದಾ.. ಹತ್ತು ಗಂಟೆಗೆ ಹೊರಡಲು ಆರುಗಂಟೆಯಿಂದಲೇ ತಯಾರಿ...ನೀನೇ ಮದುಮಗಳ ತರ ಸಿಂಗರಿಸಿಕೊಂಡು ‌ಹೋಗೋದಿದೆಯಾ..."
"ಅದೆಲ್ಲ ಗಂಡಸರಿಗೆ ಅರ್ಥವಾಗಲ್ಲ.. ನೀವು ಹೋಗಿ ಸುಮ್ಮನೆ...ನನಗೆ ಸೀರೆ ಅಟ್ಟಿಲ್ಲಿ ಚೆಂದದ್ದನ್ನು ನೋಡಿ ಆಯ್ಕೆಮಾಡಬೇಕು..ಅಲ್ಲಿಗೆ ಬರುವವರೆಲ್ಲ ಮೊದಲು ಆ ಸೀರೆಯ ನೋಡಿರಬಾರದು..ಮತ್ತೆ ಶ್ರೀಮಂತರ ಮದುವೆ.. ಒಂದೂವರೆ ಸಾವಿರ ಜನ ಆಗಬಹುದು..ಅದಕ್ಕೆ ತಕ್ಕಂತೆ ಅಲಂಕಾರ ಮಾಡಬೇಕು...ನನಗೀಗ ಪುರುಸೊತ್ತಿಲ್ಲ ಮಾತಾಡಲು..ಹೋಗಿ ಬೇಗ ಹಾಲು ಕರೆದು ಬನ್ನಿ ..ಮಾವ ಪೂಜೆ ಮಾಡಿ ಬರುವಾಗ ಕಾಫಿ ಕೊಡಬೇಕು.."

"ಹಾಗಾ ಸಂಗತಿ...ಅಲಂಕಾರ ಮಾಡಿಕೊಂಡು ನನ್ನ ಮೆಚ್ಚಿಸುವ ಪ್ರಯತ್ನ ಮಾಡದಿದ್ದರೂ ಊರವರ ಮೆಚ್ಚಿಸಿದರೆ ಸಾಕಪ್ಪಾ.. ಇನ್ನು ನನಗೆ  ಸೀರೆ ಸುತ್ತಿ ಹೇಂಗೆ ಕಾಣ್ತು??? ಹೇಳುವ ಪ್ರಶ್ನೆ ಇಲ್ಲ.
ಹೇಗೇ ಕಂಡರೂ ಚೆಂದ ಕಾಣ್ತು...👌👌 ಹೇಳಿ ಹೊಗಳಿ ಅಟ್ಟಕ್ಕೇರಿಸುವ ಕೆಲಸ ಇಲ್ಲ... ಬಚಾವ್.."

"ಬಾಯಲ್ಲಿ ಹೇಳದಿದ್ದರೂ ಕಣ್ಣಲ್ಲಿ ಅಳೆಯುವುದು ಗೊತ್ತಾಗದ ದಡ್ಡಿ ನಾನಲ್ಲ ಮೇಷ್ಟ್ರೇ..."ಎಂದು ಪ್ರತಿಯಾಗಿ ಛೇಡಿಸಿದ ಪತ್ನಿಗೆ.... ನಗುತ್ತಾ "ಹಾಡು ಹಳೆಯದಾದರೇನು ಭಾವ ನವನವೀನ...."ಎಂದು ಗುನುಗಿದರು ಭಾಸ್ಕರ ಶಾಸ್ತ್ರಿಗಳು...
"ಹೋಗಿ ಹೋಗಿ..ಈ ವಯಸ್ಸಲ್ಲಿ ಏನು ನಿಮ್ಮದು ಹಾಡು ಹಗಲೇ..."ಎನ್ನುತ್ತಾ ಗಂಡನಿಗೆ ಪ್ರೀತಿಯಿಂದ ಬೈದು ದನದ ಹಾಲು ಕರೆಯಲು ಕಳುಹಿಸಿದರು..

       ಶ್ಯಾಮ ಶಾಸ್ತ್ರಿಗಳು ಜಪ ಪೂಜೆ ಮುಗಿಸಿ ಹೊರಬಂದಾಗ ಮಹಾಲಕ್ಷ್ಮಿ ಅಮ್ಮನವರು ಕುಂಕುಮಾರ್ಚನೆ ಇನ್ನೂ ಮುಗಿಸಿರಲಿಲ್ಲ.. ಯಾವತ್ತೂ ನನಗಿಂತ ಮೊದಲು ಸ್ತೋತ್ರ,ಅರ್ಚನೆಗಳನ್ನು ಮುಗಿಸುವಾಕೆ ಇಂದು ಮಾತ್ರ ನನಗಿಂತ ತಡ ಎಂದು ಮನಸಿನಲ್ಲೇ ಅಂದುಕೊಳ್ಳುತ್ತಾ ಚಾವಡಿಯಲ್ಲಿದ್ದ ಹಲಸಿನ ಮರದ ಕುರ್ಚಿಯ ಮೇಲೆ ಕುಳಿತರು.ಆ ಹೊತ್ತಿಗೆ ಯಾವಾಗಲೂ ಮಡದಿ ಕಾಫಿ ಕೊಡುವ ಹೊತ್ತು..ಮಗ ಹಾಲು ಕರೆದು...ಸೊಸೆ ಮಾಡಿದ ಕಾಫಿಯನ್ನು.. ಅತ್ತೆ ತಂದು ಕೊಟ್ಟಾಗ.. ಅದನ್ನು ಕುಡಿಯುವ ಮಾವ ಅದೆಷ್ಟು ಖುಷಿ ಅನುಭವಿಸುತ್ತಾರೆ..ತನ್ನ ಕುಟುಂಬ ಯಾವತ್ತೂ ಹೀಗೆ ಹೊಂದಾಣಿಕೆಯಿಂದ ಸಂತಸದಿಂದಿರಲಿ ಎಂದು ಬಯಸುತ್ತಾ ಕಾಫಿ ಹೀರುತ್ತಿದ್ದರು..
ವಯಸ್ಸಾದರೂ..ಈಗಲೂ ಮಡದಿ ಕಾಫಿ ಲೋಟ ಹಿಡಿದು ಹತ್ತಿರ ಬಂದರೆ ಅವರಿಗೆ ಸಾಕ್ಷಾತ್ ನವವಧುವಂತೆ ತೋರುತ್ತಾರೆ.ಸಣ್ಣದಾಗಿ ಹಿತವಾದ ನಗುವಿನ ವಿನಿಮಯ..ಆಗಾಗ ಕಾಲೆಳೆತ ಇದ್ದೇ ಇರುತ್ತದೆ...

ಯೋಚಿಸುತ್ತಿದ್ದಂತೆ ಮಡದಿ ಕುಂಕುಮವನ್ನು ಮುಂದೆ ಹಿಡಿದಿದ್ದರು.ಹಾಕಿಕೊಂಡ ಶಾಸ್ತ್ರಿಗಳು "ಏನಾದರೂ ವಿಶೇಷ ಇದೆಯಾ..ಯಾವಾಗಲೂ ಶುಕ್ರವಾರ ಕುಂಕುಮಾರ್ಚನೆ ಮಾಡುವುದು.. ಇವತ್ತು ಬುಧವಾರ..."
 ಎಂದು ಕೇಳಿದರು..

"ಏನಿಲ್ಲ.. ಮೈತ್ರಿ ಇತ್ತೀಚೆಗೆ ಏಕೋ ಬದಲಾಗಿದ್ದಾಳೆ.. ಸರಿಯಾಗಿ ಮಾತನಾಡುತ್ತಿಲ್ಲ..ಏನೋ ಯೋಚನೆ ಮಾಡಿಕೊಂಡು ಇರುವಂತೆ ತೋರುತ್ತಾಳೆ.. ವಯಸ್ಸಿಗೆ ಬಂದ ಕೂಸು.. ಕಾಲೇಜ್, ಫ್ರೆಂಡ್ಸ್ ಅಂತ ಏನಾದರೂ ಎಡವಟ್ಟು ಮಾಡಿಕೊಳ್ಳದಿರಲಿ ಅಂತ ಅವಳ ಸಲುವಾಗಿ ದೇವಿಗೆ ಅರ್ಚನೆ ಮಾಡಿದೆ.."

ಎಂದು ಹೇಳಿ ಕಾಫಿ ತರಲು ಒಳಗೆ ಹೋಗುತ್ತಿದ್ದ ಮಡದಿಯ ಕೈಹಿಡಿದು ಎಳೆದರು ಶಾಸ್ತ್ರಿಗಳು.. "ನಿಲ್ಲು ಸ್ವಲ್ಪ..ಮಾತನಾಡುವುದಿದೆ.."

"ಏನ್ರೀ ನೀವು...ಹೀಗೆಲ್ಲ.."
"ನಿಂಗೆ ಮದುವೆಯಾದಾಗ ಎಷ್ಟು ವಯಸ್ಸು.."
ಗಂಡನ ಪ್ರಶ್ನೆ ಕೇಳಿದ ಮಹಾಲಕ್ಷ್ಮಿ ಅಮ್ಮ ನಾಚಿದರು..
"ಹದಿನಾಲ್ಕು ವರ್ಷ ಆಗಿತ್ತು ಅಲ್ವಾ..."
"ಹೂಂ..."
"ನಮ್ಮ ಮಗಳಂದಿರಿಗೆ ಮದುವೆ ಮಾಡಿದ್ದು..."
"ಹದಿನೆಂಟು ತುಂಬಿದಾಗ..."
"ಈಗ ಮೈತ್ರಿ ಗೆ ಎಷ್ಟಾಯ್ತು ವಯಸ್ಸು..."
"ಮೊನ್ನೆ ಯುಗಾದಿಗೆ ಇಪ್ಪತ್ತೊಂದು ಹಿಡಿಯಿತು..."

"ಅಲ್ವಾ.. ಮತ್ತೆ.. ಈಗಲಾದರೂ ಮದುವೆ ಯೋಚನೆ ಮಾಡಬೇಕಲ್ವಾ...ಈಗಿನ ಕಾಲದಲ್ಲಿ ಏನು ಅನಾಹುತ ಮಾಡ್ಕೊಂಡು ಬಿಡ್ತಾರೋ ಏನೋ... ಸುಮ್ಮನೆ ಇದ್ದರೆ ಆಗದು..."

"ಅದನ್ನೆಲ್ಲ ಮಗ ಸೊಸೆ ಯೋಚಿಸಿ ನಿರ್ಧಾರ ಮಾಡ್ತಾರೆ.. ನಾವ್ಯಾಕೆ ಬಾಯಿ ಹಾಕೋದು..."

"ನೋಡು..ಹಾಗಲ್ಲ..ಮನೆಯ ಸದಸ್ಯರೆಲ್ಲರ ಅಭಿಪ್ರಾಯ ಮುಖ್ಯ..ನಿನ್ನ ಅಭಿಪ್ರಾಯ ಕೇಳಿದೆ ಅಷ್ಟೇ.."

"ಹೌದು.. ನೀವು ಹೇಳಿದ್ದೂ ಸರಿಯಾಗಿದೆ.ಯಾವ್ಯಾವ ವಯಸ್ಸಿಗೆ ಏನೇನು ಆಗಬೇಕೋ ಅದು ಆದರೇ ಚಂದ..."
"ಹೂಂ..ಅದಕ್ಕೇ ನಾನೊಂದು ಆಲೋಚನೆ ಮಾಡಿದೀನಿ... ಇನ್ನು ವರಾನ್ವೇಷಣೆ ಆರಂಭ ಮಾಡೋಣ ಅಂತ"
"ಯಾವುದಕ್ಕೂ ಮಗನಲ್ಲಿ ಒಮ್ಮೆ ಮಾತನಾಡಿ ತೀರ್ಮಾನಕ್ಕೆ ಬರುವುದು ಒಳ್ಳೆಯದು..ಈಗಿನ ಕಾಲದವರು ನಮ್ಮಂತೆ ಅಲ್ಲ..ಏನೇನೋ ಆಸೆಗಳು..."

"ಸರಿ..ಸರಿ..ನೀನೀಗ ಕಾಫಿ ತಾ.. ಗಂಟಲು ಒಣಗುತ್ತಿದೆ.. ಮಗನಲ್ಲಿ ನಾನು ಮಾತನಾಡುತ್ತೇನೆ..."

ಒಳಹೋದ ಮಹಾಲಕ್ಷ್ಮಿ ಅಮ್ಮ ಕಾಫಿ ತಂದು ಗಂಡನ ಕೈಗಿತ್ತರು.. ಕಾಫಿ ಹೀರುತ್ತಾ ಈ ವರ್ಷವೇ ಅಂಗಳದಲ್ಲಿ ಚಪ್ಪರ ಹಾಕಿಸಬೇಕು ಎಂದು ಮನದಲ್ಲೇ ನಿರ್ಧರಿಸಿದರು..

ಮೈತ್ರಿ ಎದ್ದು ಫ್ರೆಶ್ ಆಗಿ ತನಗೆ ಬೇಕಾದ್ದೆಲ್ಲ ಜೋಡಿಸಿಕೊಂಡಳು.ಜೊತೆಗೆ ಅಮ್ಮನಿಗೆ ಮದುವೆಗೆ ಹೊರಡಲು ."ಅಮ್ಮ.. ಸೀರೆ ಗೆ ಮ್ಯಾಚಿಂಗ್ ಕೈಬಳೆ ಬೇಕಾದರೆ ನನ್ನ ಬಾಕ್ಸ್ ನಲ್ಲಿ ದೆ.. ಸಾರಿ ಪಿನ್ ನನ್ನ ಹೊಸದು ಹಾಕಿಕೋ.. ಆಮೇಲೆ ಸೆಂಟ್ ಹೊಸದು ನನ್ನ ಡ್ರಾಯರ್ ನಲ್ಲಿದೆ"ಎನ್ನುತ್ತಾ ಅಮ್ಮನಿಗೆ ಅಲಂಕಾರದ ಟಿಪ್ಸ್ ನೀಡುತ್ತಿದ್ದಳು..

ಎಲ್ಲರಿಗೂ ಕಾಫಿ ತಿಂಡಿ ಮಾಡಲು ಬಾಳೆಲೆ ಯಿಟ್ಟು ಪಂಕ್ತಿ ಹಾಕಿ ತಾನೂ ಕುಳಿತು ಬೇಗನೇ ತಿಂಡಿ ತಿಂದು ಕಾಲೇಜಿಗೆ ಹೊರಟ ಮೈತ್ರಿ ಯನ್ನು ಕಂಡು ಅಜ್ಜ ಅಜ್ಜಿ ಇಬ್ಬರೂ... ಕೂಸಿಂಗೆ ಈ ವರ್ಷ ಇಂಜಿನಿಯರಿಂಗ್ ಮುಗಿವಗಲೇ ಮದುವೆ ಮಾಡೆಕ್ಕು... ಎಂದು ತಮ್ಮಲ್ಲೇ ಲೆಕ್ಕಹಾಕಿಕೊಂಡರು.


      ಮನೆಯಿಂದ ಹೊರಟ ಮೈತ್ರಿ ಬಸ್ ಸ್ಟ್ಯಾಂಡ್ ತಲುಪಿದಳು.ಮೊಬೈಲ್ ಡಾಟಾ ಆನ್ ಮಾಡಬಾರದು ಎಂದು ಇಷ್ಟು ಹೊತ್ತು ಮನಸ್ಸು ಬಿಗಿ ಹಿಡಿದಿದ್ದಳು..ಈಗ ತಡೆಯಲಾಗಲಿಲ್ಲ.. ಮೆಲ್ಲನೆ ಕೈ ಮೊಬೈಲ್ ಪರದೆಯ ಮೇಲೆ ಹರಿಯಿತು.. ಡಾಟಾ ಆನ್ ಮಾಡಿದಳು.
ನೋಡಿದವಳಿಗೆ ಏನು ಮಾಡಬೇಕೋ ತೋಚಲಿಲ್ಲ ಪಾಪ...!! ಕಿಶನ್ ಹತ್ತಾರು ಹೈಕು ಗಳನ್ನು ಮೈತ್ರಿ ಗಾಗಿಯೇ ಬರೆದು ಕಳುಹಿಸಿದ್ದ..ಒಂದಕ್ಕಿಂತ ಒಂದು ಆಪ್ತವಾಗಿದ್ದವು... ಫೊಟೋ ದ ಮೇಲೆ ಬರೆದ ಚುಟುಕು ಅಂತೂ ಕಿಶನ್ ಮೈತ್ರಿ ಮದುವೆಯಾಗಿ ಒಂದಾಗುವ...ಸುಮಧುರ ರಸಭರಿತ ಕ್ಷಣಗಳಿಗೆ ಕಾತರಿಸುವಂತೆ ಮಾಡಿತ್ತು...

ಮನೆಯಲ್ಲಿ ನಿನ್ನೆ ನಡೆದ ಅಪ್ಪನ ಶಿಸ್ತಿನ ವಿಚಾರಣೆ ನೆನಪಿಗೆ ಬಂತು.. ಕೂಡಲೇ ಡಾಟಾ ಆಫ್ ಮಾಡಿದಳು...ಉತ್ತರಿಸುವ ಗೋಜಿಗೆ ಹೋಗಲಿಲ್ಲ...

   ಮುಂದುವರಿಯುವುದು...

✍️... ಅನಿತಾ ಜಿ.ಕೆ.ಭಟ್.



ನಮಸ್ತೇ...

       ನಿಮಗೆ ಹಿಂದಿನ ಎಪಿಸೋಡ್ ಗಳನ್ನು/ಇತ್ತೀಚಿನ ಬರಹಗಳನ್ನು ಓದಬೇಕೆಂದನಿಸಿದರೆ ಬರಹದ ಕೆಳಗಡೆ ಇರುವ 'Home' ಎನ್ನುವ  ಪದವನ್ನು ಕ್ಲಿಕ್ ಮಾಡಿ ಸಿಗುತ್ತವೆ..


 ಹಾಗೇನೇ ... > ಈ  ಬಟನ್ ಕ್ಲಿಕ್ ಮಾಡಿ ನಿಮಗೆ ಬೇಕಾದ ಬರಹಗಳನ್ನು ಸರ್ಚ್ ಮಾಡಿ ಓದಬಹುದು...ಹಿಂದಿನ ಎಲ್ಲಾ ಬರಹಗಳೂ ಕಾಣಸಿಗುತ್ತವೆ...< ಬಟನ್ ಬಳಸಿ ಬ್ಯಾಕ್ ಬರಬಹುದು...

share ಅನ್ನುವ ಆಪ್ಷನ್ ಬಳಸಿemail, Facebook, twitter ಗಳಲ್ಲಿ ಬಂಧುಮಿತ್ರರ ಜೊತೆ ಹಂಚಿಕೊಳ್ಳಬಹುದು..

ನಿಮ್ಮ ಪ್ರೀತಿ ,ಪ್ರೋತ್ಸಾಹಕ್ಕೆ ಚಿರ ಋಣಿ.. ಧನ್ಯವಾದಗಳು 💐🙏.







2 comments: