ಬೆಳಗ್ಗೆ ಮಗ ಕರೆ ಮಾಡಿದಾಗ ಗಣೇಶ ಶರ್ಮ ತೋಟದ ಕಡೆಗೆ ಹೊರಟಿದ್ದರು.ಅಮ್ಮ ಅಡುಗೆ ಕೋಣೆಯಲ್ಲಿ ಇದ್ದವರಿಗೆ ಚಾವಡಿಯಲ್ಲಿ ಫೋನ್ ರಿಂಗಾದ್ದು ತಿಳಿಯಲೇಯಿಲ್ಲ.ಕಿಶನ್ಗೆ ಬೇಸರವಾಯಿತು..ಫೋನಿಟ್ಟು ಕೆಲಸದಲ್ಲಿ ಮುಳುಗಿದ..
ಒಮ್ಮೆ ಮೊಬೈಲ್ ಗೆ ಇಣುಕಿದಾಗ ಕೇಶವ್ ಅನ್ನುವ ವ್ಯಕ್ತಿಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು.. ಪ್ರೊಫೈಲ್ ವೀಕ್ಷಿಸಿದ ..ಯಕ್ಷಗಾನ ಕಲೆಯಲ್ಲಿ ಆಸಕ್ತಿಯಿರುವ ವ್ಯಕ್ತಿ ಎಂದು ಅರಿತ.ನಮ್ಮ ಕಡೆಯ ಯುವಕನೇ.ಮೈತ್ರಿಯ ಭಾವ ವೆಂಕಟ್ ನ ಫೇಸ್ಬುಕ್ ಫ್ರೆಂಡ್...ಏನೂ ತೊಂದರೆಯಾಗದು ಎಂದು ಭಾವಿಸಿ ಅಸ್ಸೆಪ್ಟ್ ಮಾಡಿದ.ಅತ್ತ ಕೇಶವ್ "ನೋಡ್ತಾ ಇರು..ನಿನ್ನ ಹೇಗೆ ಆಟ ಆಡಿಸ್ತೀನಿ ಅಂತಾ..."ಎಂದು ಬೀಗಿದ..
ಮಧ್ಯಾಹ್ನ ಊಟದ ಬಿಡುವಿನಲ್ಲಿ ಮನೆಗೆ ಕರೆಮಾಡಿ ಮಾತನಾಡಿದ ಕಿಶನ್..ಅಪ್ಪ....." ನಿನ್ನ ಹಾಗೂ ಮೈತ್ರಿಯ ಜಾತಕ ಹೊಂದಾಣಿಕೆ ಆಗುತ್ತದೆ ಮಗ.." ಅಂದಾಗ ನಿಂತಲ್ಲೇ ಕುಣಿದಿದ್ದ ಕಿಶನ್..ಮನಸು ರೆಕ್ಕೆ ಬಿಚ್ಚಿ ಆಗಸದಲ್ಲಿ ಹಾರಾಡಿತು..ತನ್ನ ಮತ್ತು ಮೈತ್ರಿಯ ವಿವಾಹಕ್ಕೆ ಏನೂ ಅಡೆತಡೆ ಇರಲಾರದು ಎಂಬುದು ಅವನ ದೃಢವಾದ ನಂಬಿಕೆಯಾಗಿತ್ತು.ಸುಮಾರು ಅರ್ಧ ಗಂಟೆ ಅಪ್ಪ ಮಗನ ಸಂಭಾಷಣೆ ಮುಂದುವರಿಯಿತು..."ಎರಡು ದಿನದಲ್ಲಿ ಉತ್ತರ ಹೇಳೋಣ.. ಅಲ್ಲಿವರೆಗೆ ಶಾಸ್ತ್ರಿಗಳ ಬಗ್ಗೆ ಸ್ವಲ್ಪ ಯಾರಲ್ಲಾದರೂ ವಿಚಾರಿಸಿಕೊಳ್ಳೋಣ...". ಎಂದು ಅಪ್ಪ ಹೇಳಿದಾಗ ಸಮ್ಮತಿಸಿದ ಕಿಶನ್.ಅಮ್ಮನೊಡನೆಯೂ ಮಾತನಾಡಿ ಫೋನಿಟ್ಟ ಕಿಶನ್.
ಇನ್ನೇಕೆ ಮುದ್ಗೊಂಬೆಯನ್ನು ಕಾಯಿಸಲಿ... ಈಗಲೇ ಪ್ರೇಮಸಂದೇಶ ರವಾನಿಸುತ್ತೇನೆ ಎಂದು ಸಂದೇಶ ರವಾನಿಸಿದ.. ಜೊತೆಗೆ ಪ್ರೇಮಚುಟುಕುಗಳು ತಾನಾಗಿಯೇ ಮನಃಪಟಲದಲ್ಲಿ ಮೂಡಿದವು.ಎಲ್ಲವೂ ಮೈತ್ರಿಗೆ ಕಿಶನ್ ನ ಪ್ರೇಮಮುದ್ರೆಯ ಕಾಣಿಕೆಯಾಯಿತು.ನೂರಾರು ಜನುಮದಲ್ಲೂ ಅವಳೇ ನನ್ನ ಪ್ರೇಯಸಿಯಾಗಲಿ ಎಂದು ಬಯಸಿದನು.
*****
ಮದುವೆಯಿಂದ ಹೊರಡುವಾಗ ಮಂಗಳಾ "..ಶಶಿ ಅತ್ತಿಗೆ ಮನೆಗೆ ಬರುತ್ತೀರಾ.." ಎಂದು ಕರೆಯಲು ಮರೆಯಲಿಲ್ಲ.ಇದನ್ನು ಕೇಳಿದ ಭಾಸ್ಕರ ಶಾಸ್ತ್ರಿಗಳ ಮುಖದಲ್ಲಿ ಅಸಹನೆ ಎದ್ದು ಕಂಡಿತು.'ಗಂಡ ಯಾಕಪ್ಪಾ ಹೀಗೆ ಮುಖ ಸಿಂಡರಿಸಿದರು 'ಎಂದು ಅರ್ಥವಾಗಲಿಲ್ಲ ಆಕೆಗೆ..ತಮ್ಮನ ಮುಖಚರ್ಯೆಯನ್ನು ಗಮನಿಸಿದ ಶಶಿ .."ಇವತ್ತು ಬರುವುದಿಲ್ಲ.. ಅಮ್ಮನನ್ನು ಅಪ್ಪನನ್ನು ಕೇಳಿದ್ದೇನೆ ಎಂದು ಹೇಳಿ... "ಎನ್ನುತ್ತಾ ಬಿರಬಿರನೆ ಹೆಜ್ಜೆ ಹಾಕಿದಳು.
ಮಂಗಳಮ್ಮ ಭಾಸ್ಕರ ಶಾಸ್ತ್ರಿಗಳು ಹೊರಟರು..."ಹೌದು ಮಂಗಳಾ.. ಶಶಿ ಅಕ್ಕನಿಗೆ ಮೈತ್ರಿಯನ್ನು ನೋಡಲು ಬಂದ ವಿಚಾರ ಹೇಗೆ ತಿಳಿಯಿತು..? ಯಾರು ಹೇಳಿರಬಹುದು..?.."
.."ನಂಗೊತ್ತಿಲ್ಲ..ರೀ.. ನನಗಂತೂ ಇನ್ನೊಬ್ಬರ ಸುದ್ದಿ ಬೇಗ ತಿಳಿಯುವುದಿಲ್ಲ.. ಅವರಿಗೆ ಕ್ಷಣ ಮಾತ್ರದಲ್ಲಿ ತಿಳಿಯುತ್ತದೆ."
"ಹೂಂ..ಅಮ್ಮ ಹೇಳಿರಬಹುದಾ..."
"ಹೇಳಿದ್ದಾರೋ ಏನೋ..ಆಗಾಗ ಮಗಳಂದಿರಲ್ಲಿ ಮಾತನಾಡುತ್ತಾ ಇರುತ್ತಾರೆ.. ನಾನು ಅದಕ್ಕೆಲ್ಲ ಕಿವಿಗೊಡುತ್ತಾ ಕೂರುವುದಿಲ್ಲ.. ಹಾಗಾಗಿ ನನಗೆ ಗೊತ್ತಿಲ್ಲ.." ಎಂದರು ಮಂಗಳಮ್ಮ.. ಒಳಮನಸ್ಸು ಅತ್ತೆ ಹೇಳಿದ್ದು.. ತಡೆಯದೆ ತಾನು ಫೋನ್ ವಯರ್ ತುಂಡರಿಸಿದ್ದು ಎಲ್ಲವನ್ನೂ ನೆನಪಿಸುತ್ತಿದೆ.ಹೇಳಿದರೆ ಗಂಡನ ಕೈಯಿಂದ ಬೈಗುಳ ಗ್ಯಾರಂಟಿ.. ಎಂದು ಗೊತ್ತಿತ್ತು.. ಅದಕ್ಕೆ ಗೊತ್ತಿಲ್ಲ ಎಂಬ ನಾಟಕದ ಉತ್ತರ ನೀಡಿ ಮಾತು ತೇಲಿಸಿದರು..
"ಮಂಗಳಾ.. ಅದೆಲ್ಲ ಅಮ್ಮನದೇ ಕೆಲಸ ಇರಬೇಕು.ಅದಕ್ಕೇ ಫೋನ್ ಸರಿಯಿಲ್ಲವೆಂದು ನನ್ನನ್ನು ಬೆಂಬಿಡದೆ ಕಾಡಿದ್ದು..ಶಶಿಯಕ್ಕನ ಬಾಯಿಗೆ ಸುದ್ದಿ ಸಿಕ್ಕರೆ ಊರೆಲ್ಲಾ ಗಂಟೆ ಬಾರಿಸಿ ಹೇಳುವಂತಹವಳು.." ಎಂದು ಹೇಳಿ ಉಫ್ ಎಂದು ನಿಟ್ಟುಸಿರು ಬಿಟ್ಟರು.
*****
ಬಾರಂತಡ್ಕದಲ್ಲಿ ಕೇಶವ್ ನ ಅಮ್ಮ ಅಡುಗೆಯಲ್ಲಿ ಹೊಸ ಪ್ರಯೋಗಕ್ಕೆ ಸಿದ್ಧರಾದರು.ಬೆಳಗಿನ ತಿಂಡಿಗೆ ಗಂಜಿ ಊಟ , ತೆಂಗಿನಕಾಯಿ ಚಟ್ನಿ ಮಾಡಿದರು.ನಿತ್ಯವೂ ಮನೆಯ ದನದ ಹಾಲಿನ ಕೆನೆಮೊಸರು ಉಣ್ಣುತ್ತಿದ್ದ ಕೇಶವ್ ಗೆ ಈಗ ಕೆನೆರಹಿತ ತಪಲೆಯ ಅಡಿಯಲ್ಲಿ ಉಳಿದಿರುವ ಹಾಲಿನ ಮೊಸರು.
"ಏನಮ್ಮಾ ಇದು..??"
"ಹೊಸ ರುಚಿ ಕಣೋ.."
"ಅಯ್ಯೋ ಈ ಗಂಜಿ ಊಟ ಬೆಳ್ಳಂಬೆಳಗ್ಗೆ ಯಾರಿಗೆ ಬೇಕಮ್ಮಾ..."
"ಮಗನೇ.ನಿನ್ನ ಆರೋಗ್ಯಕ್ಕೇ ಒಳ್ಳೆಯದು.. ಡಯಟ್ ಮಾಡಿ ಸ್ಲಿಮ್ ಆದರೆ ಯುವತಿಯರು ನಿನ್ನನ್ನು ಮದುವೆಯಾಗಲು ಮುಂದೆ ಬರಬಹುದು.."
"ಹುಡುಗಿ ಸಿಗಲು ನಾನು ಕಷ್ಟಪಡಬೇಕೇ...ನನ್ನ ಪರ್ಸನಾಲಿಟಿ ನೋಡಿ ಒಪ್ಪಿದ್ರೆ ಸಾಕಮ್ಮ.."
ಅಮ್ಮನಿಗೆ ಮಗನ ಮಾತು ಹಿಡಿಸಿದಂತೆ ಕಾಣಲಿಲ್ಲ..
ಕೇಶವ್"ನನಗೆ ಈ ಗಂಜಿ ಊಟ ಬೇಡ.. ನಾನು ಹೋಟೇಲಲ್ಲಿ ತಿಂದು ಬರುತ್ತೇನೆ " ಎಂದು ಹೇಳಿ ಹೊರಟ..
ಅಮ್ಮ ಸುಮಾಳ ಮನಸ್ಸು ಕರಗಿತು..
.."ಇರು ಚಪಾತಿ.".ಅಂತ ಹೇಳುವಾಗಲೇ ಬಂಗಾರಣ್ಣ ಏರುದನಿಯಲ್ಲಿ ಮಡದಿಗೆ ಹೇಳಿದ.. "ಸಾಕು ಅಡುಗೆ ತಿನಿಸಿ ಮಗನನ್ನು ಕೊಬ್ಬಿಸಿದ್ದು.. ಸ್ವಲ್ಪ ದಿನ ಕುಚ್ಚಿಲಕ್ಕಿ ಗಂಜಿ ಊಟ ಮಾಡಲಿ..."
ಸುಮಾಗೆ ಕರುಳು ಚುರುಕ್ ಎಂದಿತು.. ಕೇಶವ್ ತನ್ನ ಹಠ ಸಾಧಿಸಿಯೇ ಸಿದ್ಧ ಎಂದು ಜೀಪು ಸ್ಟಾರ್ಟ್ ಮಾಡಿ ಪೇಟೆಗೆ ಹೊರಟ..
ಸುಮಾಗೆ ಬೇಸರದಲ್ಲಿ ಕುಚ್ಚಿಲಕ್ಕಿ ಗಂಜಿಯೂ ಬೇಡವೆನಿಸಿತು.'ಮಗನನ್ನು ಉಪವಾಸ ಕಳುಹಿಸಿದೆನಲ್ಲಾ.. ಇಷ್ಟೆಲ್ಲಾ ಶ್ರೀಮಂತಿಕೆಯಿದ್ದೂ ಮಗನಿಗೆ ಉಣಬಡಿಸದಿದ್ದರೆ ಹೇಗೆ'..ಎಂದು ಕೊರಗಿದರು..ಬಂಗಾರಣ್ಣ ಒಂದು ಬಟ್ಟಲು ಗಂಜಿ ಚಟ್ನಿಯೊಂದಿಗೆ ಸವಿದು.." ಆಹಾ...!! ಎಷ್ಟು ರುಚಿ..ಹೊಟ್ಟೆಗೂ ಹಿತ.. ಬೆಳಗ್ಗೆ ಈ ತರಹ ಗಂಜಿ ಉಣ್ಣದೆ ವರುಷಗಳೇ ಆದವು.." ಎಂದು ಹೇಳಿ ಡರ್ರನೆ ತೇಗಿದರು..
ಕೇಶವ್ ಸಿಟ್ಟಿನಿಂದ ಹತ್ತಿರದಲ್ಲಿದ್ದ ಪೇಟೆಗೆ ಹೋದನು..ಅಲ್ಲಿದ್ದುದು ಒಂದೇ ಒಂದು ಮುರ್ಕಟೆ ಹೋಟೇಲ್..ಅದೇ ಅಜ್ಜಿ ಹೋಟೇಲ್ ಎಂದು ಪ್ರಸಿದ್ಧಿಯಾದ ಪಾರು ಅಜ್ಜಿಯ ಹೋಟೇಲ್... ಅಜ್ಜಿಗೆ ವಯಸ್ಸಾಗಿ ಬೆನ್ನು ಬಾಗಿತ್ತು.ಈ ಇಳಿವಯಸ್ಸಿನಲ್ಲೂ ಹೋಟೇಲ್ ಕಾಯಕ ತಪ್ಪಿಸುತ್ತಿರಲಿಲ್ಲ. ಯೌವ್ವನದ ಕಷ್ಟದ ದಿನಗಳಲ್ಲಿ ಹೋಟೇಲ್ ಇಟ್ಟು ಮಕ್ಕಳಿಗೆ ಊಟ ಬಟ್ಟೆ ವಿದ್ಯೆ ಕೊಡಿಸಿ ಬದುಕಿನ ಬಂಡಿ ಎಳೆದವರು ಪಾರು ಅಜ್ಜಿ.ಈಗಲೂ ಜೀವನ ಅದೇ ಹೊಟೇಲ್ ನ ಆದಾಯದಿಂದ .ಶರೀರ ಬಾಗಿದೆ.ಬುದ್ಧಿ ಮಾಗಿದೆ.ಮಾಡು ಸೋರುತ್ತಿದೆ.ಮಕ್ಕಳೆಲ್ಲ ಉದ್ಯೋಗ ಗಳಿಸಿ ಅವರವರ ಕುಟುಂಬ ಮುನ್ನಡೆಸುತ್ತಿದ್ದಾರೆ.
ಕೇಶವ್ ಅಜ್ಜಿ ಹೋಟೇಲ್ ನ ಮುಂದೆ ನಿಂತಿದ್ದಾನೆ.ಅಲ್ಲಿ ಮೂಗಿಗೆ ಬಡಿಯುತ್ತಿದ್ದ ವಾಸನೆ,ನೊಣಗಳ ಸರಮಾಲೆಯನ್ನು ಕಂಡವನಿಗೆ ಹೊಟ್ಟೆ ತೊಳಸಿದಂತಾಯಿತು.ಆದರೂ ಹಸಿದ ಹೊಟ್ಟೆ ಚುರುಗುಟ್ಟುತ್ತಿದೆ.ಮೆಲ್ಲನೆ ಒಳಗೆ ಕಾಲಿಟ್ಟ.ಎದುರುಬದುರು ಎರಡೇ ಮೇಜು ಇದ್ದುದು.ಒಂದರಲ್ಲಿ ತುದಿಯಲ್ಲಿ ಭೈರಪ್ಪ ಹೆಸರು ಉಪ್ಪು ಕರಿ ತಿನ್ನುತ್ತಿದ್ದ.ಇನ್ನೊಂದರಲ್ಲಿ ದೇವಸ್ಥಾನದ ಕೊಂಬುವಾಲಗದ ವಾಸುದೇವ ಜೋಗಿ ಬನ್ಸ್ ತಿನ್ನುತ್ತಿದ್ದ.
ಕೇಶವ್ ನನ್ನು ಕಂಡ ಕೂಡಲೇ ಭೈರಪ್ಪ ...."ಏನು..ದನಿ.. ಅಪರೂಪಕ್ಕೆ ಹೋಟೇಲಿಗೆ..."ಎಂದು ಕೇಳಿ ಉತ್ತರ ಬರುವ ಮುನ್ನ "ನೀವಿಲ್ಲಿ ಕೂತ್ಕೊಳ್ಳಿ.."ಎನ್ನುತ್ತಾ ತನ್ನ ಪ್ಲೇಟನ್ನು ಹಿಡಿದು ವಾಸುದೇವ ಜೋಗಿಯ ಮೇಜಿಗೆ ಸ್ಥಳಾಂತರ ಮಾಡಿದ.. ಅಜ್ಜಿ..ಕರಿಯ ಹಳೆಯ ಸೀರೆಯ ತುಂಡನ್ನು ತಂದು ಆತ ಪ್ಲೇಟ್ ಇಟ್ಟಿದ್ದ ಜಾಗವನ್ನು ಒರೆಸಿದಳು.. "ಏನು ಕೊಡಲಿ ಎಂದು ಕೇಳಿದಳು.."
"ಏನಿದೆ..??"
"ಹೆಸರು ಉಪ್ಪುಕರಿ, ಬನ್ಸ್, ಸೆಟ್ ದೋಸೆ,ತುಪ್ಪ ದೋಸೆ,ನೀರ್ದೋಸೆ...." ಎಂದು ಒಂದೇ ಉಸಿರಿನಲ್ಲಿ ಒದರಿದಳು.ತುಪ್ಪ ದೋಸೆ ಎಂಬ ಹೆಸರು ಕೇಳಿ ಅವನ ನಾಲಿಗೆಯಿಂದ ನೀರು ಸುರಿಯಿತು...."ಒಂದು ಪ್ಲೇಟ್ ತುಪ್ಪ ದೋಸೆ ಕೊಡಿ.."...ಎಂದ..
ಅಜ್ಜಿ ಒಳನಡೆದಳು.ಎದುರುಕುಳಿತಿದ್ದ ಇಬ್ಬರೂ ಬೇಗ ತಿಂಡಿ ತಿಂದು ತೆರಳಿದರು.ನಿತ್ಯವೂ ತಿಂಡಿ ತಿಂದ ಬಳಿಕ ಪಾರು ಅಜ್ಜಿಯ ಜೊತೆ ಅರ್ಧ ಗಂಟೆ ಪಟ್ಟಾಂಗ ಹಾಕುತ್ತಿದ್ದ ಇಬ್ಬರೂ ಇಂದು ಕೇಶವ್ ದನಿ ಇರುವುದನ್ನು ಕಂಡು ಬೇಗನೆ ಜಾಗ ಖಾಲಿ ಮಾಡಿದರು.ಹತ್ತು ನಿಮಿಷ ಕಾದು ಕುಳಿತ ಕೇಶವ್.. ಎಷ್ಟು ಹೊತ್ತು..? ಎಂದು ಕೋಪವು ಬರುತ್ತಿತ್ತು.ಮನೆಯಲ್ಲಾದರೆ ಇಷ್ಟೊತ್ತಿಗೆ ಅಮ್ಮನಿಗೆ ಗದರಿ ಆಗುತ್ತಿತ್ತು.
ಅಜ್ಜಿ ತುಪ್ಪ ಸವರಿದ ದೋಸೆ ತಂದರು.ಜೊತೆಗೆ ಪುಟ್ಟ ಗಿಣ್ಣಾಲಿನಲ್ಲಿ ಚಟ್ನಿ..ದೋಸೆ ತಂದಿಟ್ಟಾಗ ಅಜ್ಜಿಯ ಕೈಗಳನ್ನು ನೋಡಿದ ಅವನಿಗೆ ಛೀ.. ಗಲೀಜು ಅನಿಸಿತ್ತು...
ಕೈಗಳನ್ನು ತೊಳೆದುಕೊಳ್ಳುವುದಕ್ಕೇನು ಕೇಡು..?ಎಂಬ ಭಾವ ಅವನದು..ಕೈ ಕೆಸರಾದರೆ ಬಾಯಿ ಮೊಸರು ಅನ್ನುವ ಗಾದೆಯ ಗೂಢಾರ್ಥ ಇವನಿಗೇನು ಗೊತ್ತು..? ಹುಟ್ಟುವಾಗಲೇ ಚಿನ್ನದ ಚಮಚ ಬಾಯಲ್ಲಿ ಇಟ್ಟುಕೊಂಡು ಹುಟ್ಟಿದವನು..
ದೋಸೆಯ ಬದಿಯಿಂದ ಒಂದು ತುಂಡು ಮಾಡಿ ಚಟ್ನಿಗದ್ದಿ ಬಾಯಿಗಿಟ್ಟನು.ತುಪ್ಪ ಕಸಂಟು ವಾಸನೆ ..!! ಈ ಜಿಡ್ಡಿನ ವಾಸನೆಗೆ ಅದು ಗಂಟಲಲ್ಲಿ ಇಳಿಯುವುದೇ ಕಷ್ಟ ಎನಿಸಿತು ಅವನಿಗೆ.ಎದುರು ಪಾರು ಅಜ್ಜಿ ನಿಂತಿದ್ದಾಳೆ.ಉಗುಳಲು ಗೊತ್ತಿಲ್ಲ..ಹೇಗೋ ಕಷ್ಟಪಟ್ಟು ನುಂಗಿದ.. ನೀರು ಕೇಳಿ ಗಟಗಟನೆ ಕುಡಿದುಬಿಟ್ಟ..".ಖಾರ ಆಯ್ತಾ ದನಿಗಳೇ..".. ಎಂದು ಅಜ್ಜಿಯ ಮಾತಿನ ಉಪಚಾರ.. ಚಹಾ ತಂದಿಟ್ಟರು..ಹೇಗೋ ಕಷ್ಟಪಟ್ಟು ಪ್ಲೇಟ್ ಖಾಲಿ ಮಾಡಿ ದುಡ್ಡು ಕೊಟ್ಟು ಬಂದ..ಹತ್ತು ರೂಪಾಯಿ ಅಜ್ಜಿಗೆ ಹೆಚ್ಚೇ ಕೊಟ್ಟು .. ತಾನು ಮಹಾದಾನಿ ಎಂಬಂತೆ ತೋರಿಸಿಕೊಂಡ.. ಮನೆಗೆ ಮರಳಿದ.
ಜೀಪು ಗುಂಪೆಗೆ ತಲುಪುವಾಗ ಒಮ್ಮೆ ಮಾರ್ಗದ
ಹೊಂಡಕ್ಕೆ ಬಿದ್ದು ಎದ್ದಿತು..ಇವನ ಹೊಟ್ಟೆಯೊಳಗಿಂದ ಕಸಂಟು ತುಪ್ಪದ ಘಾಟನ್ನು ಹೊತ್ತ ತೇಗೊಂದು ಹೊರಬಿದ್ದಿತು.. ಇನ್ನು ನಾನೇ ಯೂಟ್ಯೂಬ್ ನೋಡಿ ಅಡುಗೆ ಮಾಡಲು ಕಲಿಯುತ್ತೇನೆ..ಈ ಅಮ್ಮ ಅಪ್ಪನ ಡಯಟ್ ಯಾರಿಗಾದೀತು ಎಂದು ಲೆಕ್ಕಾಚಾರ ಹಾಕಿದ.
ಮನೆಗೆ ಮರಳಿದಾಗ ಅಮ್ಮ ಮನೆಯ ಮುಂಬಾಗಿಲಿಗೆ ಬಂದು "ಮಗನೇ... ಹಸಿದುಕೊಂಡು ಎಲ್ಲಿಗೆ ಹೋದದ್ದು..ಬಾ..ಅಪ್ಪ ತೋಟಕ್ಕೆ ಹೋಗಿದ್ದಾರೆ..ನಿನಗೆ ಬಿಸಿಬಿಸಿ ಚಪಾತಿ ಮಾಡಿಕೊಡುತ್ತೇನೆ .."..ಎಂದು ಮಗನನ್ನು ಓಲೈಸಿದಳು.ಅಮ್ಮನ ಮೆದು ಮಾತಿಗೆ "ಬೇಡಮ್ಮಾ..ನಾನೀಗ ಹೊಟ್ಟೆ ತುಂಬಾ ಹೋಟೇಲಿನಲ್ಲಿ ರುಚಿರುಚಿಯಾದ ತುಪ್ಪ ದೋಸೆ ತಿಂದು ಬಂದೆ.."ಎಂದ..
"ಈ ಊರಿನಲ್ಲಿ ಎಲ್ಲಿದೆ ಮಗ ಒಳ್ಳೆಯ ಹೋಟೆಲ್..??"
"ಅದೇ ಅಮ್ಮಾ.. ಪಾರು ಅಜ್ಜಿಯ ಹೋಟೇಲ್.."
"ಅಯ್ಯೋ.. ಅಲ್ಲಿ ಯಾವಾಗಿಂದೋ ಹಿಟ್ಟಲ್ಲಿ ದೋಸೆ ಹುಯ್ಯುವುದು ಆ ಪಾರು...ಮತ್ತೆ ವೆಂಕಪ್ಪ ಭಟ್ಟರಿಗೆ ಹೋಮ ಮಾಡಿಸಲು ಹೋದಲ್ಲಿ ದಾನಸಿಗುವ ಕಸಂಟು ತುಪ್ಪವನ್ನು ಅಜ್ಜಿಗೆ ಧರ್ಮಕ್ಕೆ ಕೊಡುತ್ತಾರೆ.. ಇದನ್ನು ಹಾಕಿ ತುಪ್ಪ ದೋಸೆ ಮಾಡುವುದು .. ಅಯ್ಯೋ.. ಹೋಗಿ ಹೋಗಿ ಅದನ್ನು ತಿಂದೆಯಾ..."
"ಇಲ್ಲ.. ಅಮ್ಮಾ.. ಕಸಂಟು ವಾಸನೆ ಬಂದಿಲ್ಲಾ.. ರುಚಿಯಾಗಿತ್ತು.."ಎಂದು ಸುಳ್ಳು ಹೇಳಿದವನಿಗೆ ಹೊಟ್ಟೆಯೊಳಗಿಂದ ಸತ್ಯದ ರಶೀದಿ ಬಂದು ವಾಕರಿಕೆ ಬಂದಂತಾಯಿತು..
ಏನಾದರೂ ಆಗಲಿ ಇನ್ನು ಪಾರು ಅಜ್ಜಿಯ ಹೋಟೇಲಿನಲ್ಲಿ ತುಪ್ಪ ದೋಸೆ ತಿನ್ನುವ ಉಸಾಬರಿ ಬೇಡ ಎಂದು ನಿರ್ಧರಿಸಿದನು.
*****
ಮೈತ್ರಿ ಕಾಲೇಜಿನಲ್ಲಿ ಇತ್ತೀಚೆಗೆ ಪರೀಕ್ಷೆಯ ಒತ್ತಡದಿಂದ ಮೊಬೈಲ್ ನೋಡುವುದನ್ನೇ ಕಡಿಮೆ ಮಾಡಿದ್ದಳು.ಕಾಲೇಜು ಬಸ್ಸಿನಲ್ಲಿ ಕುಳಿತವಳು ಇನ್ನು ಗೆಳತಿಯರೆಲ್ಲ ಕೆಲವೇ ದಿನ ಸಿಗುವುದು ಎಂದು ಹರಟೆಯಲ್ಲಿ ಮುಳುಗಿದ್ದಳು.ಬಸ್ಸಿಳಿದು ನಡೆದುಕೊಂಡು ಬರುತ್ತಿದ್ದಾಗ ಒಮ್ಮೆ ಮೊಬೈಲ್ ತೆರೆದಾಗ ಕಿಶನ್ ನ ಸಂದೇಶ ಕಂಡು
ನಾನಿನ್ನು ಮುಗಿಲ ಮಲ್ಲಿಗೆ..
ನಾ ಸೋತೆ ನಿನ್ನೊಲವಿಗೆ..
ಈ ಪ್ರೇಮಕಿಲ್ಲ ಪರಿಧಿ..
ನೀ ನನಗೆ ದೇವನಿತ್ತ ನಿಧಿ..
ಎಂದು ನಾಲ್ಕು ಸಾಲು ಹರುಷವುಕ್ಕಿ ಬರೆದು ಕಳುಹಿಸಿದಳು...
*****
ಕೇಶವ್ ಮನೆಯಲ್ಲಿ ಕುಳಿತು ಜೋಡಿ ಹಕ್ಕಿಯನ್ನು ಹೊಡೆದುರುಳಿಸುವ ಯೋಜನೆ ತಯಾರಿಸುತ್ತಿದ್ದ..
ಮುಂದುವರಿಯುವುದು....
✍️.... ಅನಿತಾ ಜಿ.ಕೆ.ಭಟ್.
03-03-2020.
ನಮಸ್ತೇ....
ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ'Home',> ಸಂಕೇತ ಮತ್ತು view web version ಅನ್ನು ಬಳಸಿಕೊಳ್ಳಬಹುದು.. ಧನ್ಯವಾದಗಳು 💐🙏.
ಈ ಕೇಶವ್ ನ ಪ್ಲಾನ್ ಇನ್ನೂ ಏನೇನೋ....
ReplyDeleteವಿಲನ್ ಆಗ್ತಾನೋ ಏನೋ... ಕಾದು ನೋಡೋಣ... ಥ್ಯಾಂಕ್ಯೂ 💐🙏
ReplyDeleteThis comment has been removed by the author.
ReplyDeleteHappy Ending ಮಾಡಿ ಆಯ್ತಾ.
ReplyDeleteಪ್ರಯತ್ನ ಮಾಡೋಣ.. ಪ್ರತಿಕ್ರಿಯೆಗಾಗಿ ಧನ್ಯವಾದಗಳು 💐🙏
Delete