Thursday, 5 March 2020

ಜೀವನ ಮೈತ್ರಿ-ಭಾಗ ೩೫(35)






      ಬಸ್ ಬಂತು.. ಎಲ್ಲರೂ ಅಲರ್ಟ್ ಆದರು.. ಬಸ್ ನಿಂತಿತು..ಇಬ್ಬರು ಹುಡುಗರು ಹಿಂಬಾಗಿಲಿನಿಂದ ಇಳಿದರು.. ಮೈತ್ರಿ ಇಳಿಯಲೇ ಇಲ್ಲ.. ಬಸ್ ಮುಂದೆ ಚಲಿಸಿತು.. ಕೇಶವ್ ತಲೆಮೇಲೆ ಕೈ ಹೊತ್ತು ಕುಳಿತ.. ತಲೆಸುತ್ತು ಬಂದಂತಾಯಿತು ಅವನಿಗೆ...ಮುಖಕ್ಕೆ ಬಿಗಿದಿದ್ದ ಟವೆಲ್ ಅನ್ನು ಕೋಪದಿಂದ ಎಳೆದು ಬಿಸಾಕಿದ.ಮಿಕ ತಪ್ಪಿಸಿಕೊಂಡಿದೆ.. "ಇರಿ..ಎಳೆ ಮಾವಿನಕಾಯಿ ನನ್ನಿಂದ ತಪ್ಲೇಬಾರದು.ಸ್ವಲ್ಪ ಕಾಯೋಣ.. ಇನ್ನು ಅರ್ಧ ಗಂಟೆಯಲ್ಲಿ ಇನ್ನೊಂದು ಪ್ರೈವೇಟ್ ಬಸ್  ಇದೇ ರೂಟಲ್ಲಿ ಬರಲಿರುವುದು..."
ಜತೆಗಿದ್ದ ವೆಂಕಟ್ ಅಸಹನೆ ಹೊರಹಾಕಿದ.."ನೋಡು ಕೇಶವ್ ನಾನು ಅಪಾಯ ಮೈಮೇಲೆ ಎಳೆದುಕೊಂಡು ನಿನಗೆ ಸಹಕರಿಸಿದ್ದೇನೆ ..ಇನ್ನು ಕಾಯಲು ನನ್ನಿಂದ ಸಾಧ್ಯವಿಲ್ಲ.."

ಇನ್ನೊಬ್ಬನೂ ಹೂಂಗುಟ್ಟಿದ.."ನನ್ನ ಕಾರಿನ ನಂಬರ್ ಯಾರಾದರೂ ಗಮನಿಸಿ ಕಂಪ್ಲೇಂಟ್ ಕೊಟ್ಟರೆ ನಾನು ಕಂಬಿ ಎಣಿಸಬೇಕಾದೀತು.. ವೆಂಕಟ್ ನಾವು ಹೊರಡೋಣ..."

ಕೇಶವ್.."ಏನ್ರೋ..ನೀವೆಲ್ಲ... ಗೆಳೆಯರು ಅಂದ್ರೆ ಹೀಗೇನಾ...ಅದು ಅಲ್ದೇ ಈ ಕೆಲಸಕ್ಕೆ ಸಹಕರಿಸಲು ಅಂತ ದುಡ್ಡು ಕೂಡಾ ಕೊಟ್ಟಿದೀನಿ...ಕೆಲಸ ಮುಗಿಯೋವರೆಗೂ ಕಾಯಬೇಕು..ಅನ್ನುವ ನಿಯತ್ತೂ ಇಲ್ವೇ...."

"ಕೇಶವ್... ಅವಳು ಇವತ್ತು ಇನ್ನು ಬರಲ್ಲ ಕಣೋ..ಇದೇ ಬಸ್ಸಿಗೇ ದಿನಾ ಬರೋಳು ನನ್ನ ಮಾವನ ಮಗಳು..ನಂಗೊತ್ತಿಲ್ವಾ..."

"ಥೋ..ನೀನೊಬ್ಬ..ಅವ್ಳ ಮನೆಯ ಡಿಟೇಲ್ಸ್ ಕಲೆಕ್ಟ್ ಮಾಡಿ ಹೇಳು ಅಂದ್ರೆ..ಏನೋ ಸಾಬೂಬು ಹೇಳಿದೆ.."

"ನೋಡು.. ಕೇಶವ್..ಗೊತ್ತಿದ್ದಷ್ಟು ಹೇಳಿದ್ದೇನೆ.. ಅದಕ್ಕಿಂತ ಹೆಚ್ಚು ಇನ್ನೇನು..

"ಯಾವತ್ತಿಂದೋ ಬೇಡ...ಶಾಸ್ತ್ರಿ ವಂಶದ ಇತಿಹಾಸ ನಂಗೆ ಬೇಡ..ಇವತ್ತಿಂದು.. ಜಸ್ಟ್ ಇವತ್ತಿನ ತಾಜಾ ತಾಜಾ ಸುದ್ದಿ..ಮುಗುಳು ಗುಲಾಬಿ ಆಹಾ..!! ನನ್ನ ಕೈ ತಪ್ಪಲೇ ಬಾರದು.."

"ಇವತ್ತಿನ ಡಿಟೇಲ್ಸ್ ಹೇಳಲು ಅಲ್ಲಿನ ಲ್ಯಾಂಡ್ ಫೋನ್ ಸರಿಯಿಲ್ಲ.. ಮೊಬೈಲ್ ಅಜ್ಜ ಅಜ್ಜಿ ಬಳಸಲ್ಲ.ಮಾವ ಅತ್ತೆಯನ್ನು ಕೇಳಿದರೆ ಅವರಿಗೆ ಅನುಮಾನ ಬರಬಹುದು.."

"ಆ ಗುಳಿಕೆನ್ನೆಯ ಅದುಮಿ ಅಧರದ ಮಧುಹೀರಿ .... ಆಹಾ...!! .." ಎಂದುಸುರಿದ ತನ್ನ ಕೆನ್ನೆಯನ್ನೇ ಸವರುತ್ತಾ ಕೇಶವ್.


    " ಕೇಶವ್.. ಇಲ್ಲಿ ಹೆಚ್ಚು ಹೊತ್ತು ನಿಂತರೆ ಅನುಮಾನ ಬರಬಹುದು.. ಈಗಾಗಲೇ ಈ ದಾರಿಯಲ್ಲಿ ಹೋಗುವ ‌ಹೆಣ್ಣುಮಕ್ಕಳು ನಮ್ಮನ್ನು ಗಮನಿಸುತ್ತಾ ತೆರಳಿದ್ದಾರೆ..ಎರಡು ಫರ್ಲಾಂಗ್ ದೂರವಿರುವ ಮೊಯಿದು ಬ್ಯಾರಿಯ ಬೀಡಿ ಬ್ರ್ಯಾಂಚ್ ನಲ್ಲಿ ಬೀಡಿ ಕೊಟ್ಟು ವಾಪಾಸಾಗುವಾಗಲೂ ನಾವಿಲ್ಲೇ ಇದ್ರೆ ಶಶಿ ಅಕ್ಕನ ಮಗ ಮಾರ್ಗದ ಬದಿಯಲ್ಲಿ ಯಾರೊಂದಿಗೋ ನಿಂತಿದ್ದ.. ಎಂದು ನನ್ನ ಅಜ್ಜನ ಮನೆಗೆ ವರದಿಯಾಗುವುದು ಖಂಡಿತಾ..ನನಗೆ ಇವರ ಪರಿಚಯವಿಲ್ಲದಿದ್ದರೂ ಅವರಿಗೆಲ್ಲ ನನ್ನ ಪರಿಚಯವಿದೆ.ಚಿಕ್ಕಂದಿನಲ್ಲಿ ನನ್ನನ್ನು ನೋಡಿರುತ್ತಾರೆ.. ಇನ್ನು ಸ್ವಲ್ಪ ಹೊತ್ತಾದರೆ ಕೂಲಿಕೆಲಸ ಬಿಟ್ಟು ಪಕ್ಕದ ರುಕ್ಮಯ ಪೂಜಾರಿಯ ಶೇಂದಿ ಅಂಗಡಿಗೆ ಸಾಲಾಗಿ ಹೋಗುವವರು ಕಾಣಸಿಗುತ್ತಾರೆ...ಅಪವಾದ ಹೊರಬೇಕಾದೀತು..ಜೋಕೆ..!!"ಎಂದ ವೆಂಕಟ್.


"ಮುಖದ ಟವೆಲ್ ಯಾಕೆ ತೆಗೆದೆ ವೆಂಕಟ್ ..ಕಟ್ಟಿಕೋ..ಯಾರಿಗೂ ತಿಳಿಯದು.."

"ನಮ್ಮನ್ನು ಹೇಳುವ ನಿನ್ನ ಮುಖದಲ್ಲಿನ ಸ್ಕಾರ್ಫ್ ಎಲ್ಲಿ ಬಿಸಾಕಿದೆ..?? ಮೊದಲು ಬೊಗಳು..." ಸಿಟ್ಟು ನೆತ್ತಿಗೇರಿತ್ತು ವೆಂಕಟನಿಗೆ..

"ಏಯ್..ಏನೋ..ಸಲಿಗೆ ಕೊಟ್ಟರೆ ನನಗೇ ಬೊಗಳು ಅಂತೀಯಲ್ಲ.. ನಾಯಿ...ಥೂ ನಿನ್ನ..."

"ನಂಗೇ ನಾಯಿ ಅಂತೀಯಾ...ನೋಡು ನಿನ್ನ ಏನ್ಮಾಡ್ತೀನಿ ಅಂತ.. "ಎಂದು ಕೈ ಮೇಲೆತ್ತಿದನು.. ವೆಂಕಟ್.

ಇವರಿಬ್ಬರ ಜಗಳ ತಾರಕಕ್ಕೇರುವ ಲಕ್ಷಣ ಕಂಡುಬಂದಾಗ ಇನ್ನೊಬ್ಬ.."ನಾನಂತೂ ನನ್ನ ವಾಹನ ಕೊಂಡೊಯ್ಯುತ್ತೇನೆ.. ಬರುವವರು ಹತ್ತಿ.. ನೀವು ಈ ಲೆವೆಲ್ ಗೆ ಕೆಟ್ಟ ಕೆಲಸಕ್ಕೆ ಸಜ್ಜಾಗಿ ಬಂದಿರುವುದೆಂದು ಗೊತ್ತಿದ್ದರೆ ನಾನು ಬರುತ್ತಲೂ ಇರಲಿಲ್ಲ..ನನ್ನ ವಾಹನವನ್ನು ಬಳಸಲು ನಿಮಗೆ ಅವಕಾಶವೂ ಕೊಡುತ್ತಿರಲಿಲ್ಲ.".ಎಂದವನೇ ಗಾಡಿ ಸ್ಟಾರ್ಟ್ ಮಾಡಿದ..

ಕೇಶವ್ ನಿಗೆ ಈಗ ವೆಂಕಟ್ ನ ಇನ್ನೊಂದು ಮೋಸದ ಮುಖದ ಪರಿಚಯವಾಯಿತು.. ದುಡ್ಡು ತೆಗೆದುಕೊಳ್ಳುವಾಗ ಇಂತಹದರಲ್ಲಿ ಪಳಗಿದ ಗೆಳೆಯನನ್ನು ಕರೆತರುತ್ತೇನೆ . ಸ್ವಲ್ಪ ಜಾಸ್ತಿ ದುಡ್ಡು ಕೊಡಬೇಕಾಗುತ್ತದೆ ಅವನಿಗೆ ಎಂದಿದ್ದ..ದುಡ್ಡು ಪೀಕಿಸಿದ್ದ..ಈಗ ನೋಡಿದರೆ ಈ ಆಸಾಮಿಗೆ ಸಂಗತಿಯೇ ಗೊತ್ತಿಲ್ಲ... ಮೋಸಗಾರ ವೆಂಕಟ್...!!
ಹಣವೂ ಕೈತಪ್ಪಿತು.ಹೆಣ್ಣೂ ಕೈತಪ್ಪಿತು..
ಈಗ ಎಷ್ಟು ತಲೆಚಚ್ಚಿಕೊಂಡರೂ ಪ್ರಯೋಜನವಿಲ್ಲ ಎಂದು ಅರಿತು ವಾಹನವೇರಿದನು ಕೇಶವ್..

      ಅರ್ಧದವರೆಗೆ ಜೊತೆಯಲ್ಲಿಯೇ ಹೋದರೂ ಕೇಶವ್ ಒಂದು ಮಾತೂ ಆಡಲಿಲ್ಲ..ಗುರ್ಮೆಯಲ್ಲಿ ಇಳಿದು ತನ್ನ ಜೀಪಿಗೆ ಸಲಕರಣೆಗಳನ್ನು ವರ್ಗಾಯಿಸಿದ..ಸೋತ ಮುಖದೊಂದಿಗೆ..

      ಅವನನ್ನು ಇಳಿಸಿದ ಇಬ್ಬರೂ ಹೊರಟರು..ದಾರಿ ಮಧ್ಯದಲ್ಲಿ ಅಂತೂ ನಮ್ಮ ಜೇಬು ಭದ್ರವಾಯಿತು ಎಂದು ಇಬ್ಬರೂ ಕೈಕೈ ಹೊಡೆದುಕೊಂಡು ನಕ್ಕರು.. ಕೇಶವ್ ಪೆಚ್ಚಾಗಿ ಮನೆ ಸೇರಿದ..


        .       *****


ಮೈತ್ರಿ ಅಮ್ಮನಿಗೆ ಕರೆಮಾಡಿದಳು "ಅಮ್ಮಾ ನಾನೀಗ ಬಸ್ ಗೆ ಹತ್ತಿದೆ.. ಏಳು ಗಂಟೆಗೆ ಮನೆಯ ಹತ್ತಿರ ಇಳಿಯುವೆ.
ತಮ್ಮನಿಗೆ ಬೈಕ್ ನಲ್ಲಿ ಬಂದು ಕರೆದೊಯ್ಯಲು ಹೇಳು.."

"ಸರಿ..ಮಗಳೇ..ತಮ್ಮ ಅಥವಾ ಅಪ್ಪ ಒಬ್ಬರು ಇರುತ್ತಾರೆ.. ನೀನು ಬಾ.."

ಮಂಗಳಮ್ಮ ಗಂಡನಿಗೆ ಕರೆಮಾಡಿದಳು..

"ರೀ..ಮಗಳು ಬರುವಾಗ ಏಳು ಗಂಟೆ ಆಗುತ್ತದೆ.ನೀವು ಜೋಯಿಸರಲ್ಲಿಂದ ಹೊರಟು ಆ ಹೊತ್ತಿಗೆ ತಲುಪುತ್ತೀರಾ ಅಲ್ಲ ಮಗನಲ್ಲಿ ಹೇಳಲೋ ಕರೆದುಕೊಂಡು ಬರಲು.."

"ನಾನೇ ಆ ಹೊತ್ತಿಗೆ ತಲಪುವೆ..ಜೋಯಿಸರಲ್ಲಿಂದ ಹೊರಟೆ... ಮಗಳನ್ನು ನಾನೇ ಕರೆದುಕೊಂಡು ಬರುವೆ.."


ಏಳು ಗಂಟೆಗೆ ಮೈತ್ರಿ "ಹನುಮಾನ್ ಟ್ರಾವೆಲ್ಸ್"ಬಸ್ಸಿನಿಂದ ಇಳಿದಳು..ಅಪ್ಪ ಮಗಳಿಗೆ ಕಾದು ನಿಂತಿದ್ದರು.. ಅಪ್ಪನೊಂದಿಗೆ ಕಾರಿನಲ್ಲಿ ಮನೆಗೆ ಸುರಕ್ಷಿತವಾಗಿ ತಲುಪಿದಳು ಮೈತ್ರಿ..

ಬಂದವಳೇ ಕಾರಿನಿಂದಿಳಿದು "ಅಮ್ಮಾ.." ಎನ್ನುತ್ತಾ ಒಳಗೋಡಿದ್ದಳು...

"ಅಮ್ಮಾ..ನೋಡಮ್ಮ.. ನಾನು ತೆಗೆದುಕೊಂಡು ಬಂದ ಎಳೆಹಸಿರು ಬಣ್ಣದ ಕೆಂಪು ಝರಿಯಂಚಿನ ಸೀರೆ..ಚೆನ್ನಾಗಿದೆಯಾ..ನನಗೆ ಒಪ್ಪುತ್ತಾ..."

ಎನ್ನುತ್ತಾ ಸಂಭ್ರಮದಿಂದ ಕವರ್ ನಿಂದ ಹೊರತೆಗೆದು ಮೈಗೆ ಹಿಡಿದಳು..ಅಮ್ಮ ಬಂದವರೇ ಬಿಡಿಸಿ ನೋಡಿದರು.. ಡ್ಯಾಮೇಜ್ ಇದೆಯಾ..ಬಣ್ಣ ಎಲ್ಲಾದರೂ ಡಿಮ್ ಆಗಿದೆಯಾ.. ಎಲ್ಲಾ ನೋಡಿ "ಭಾರೀ ಚೆನ್ನಾಗಿ ಒಪ್ಪುತ್ತೆ ಮಗಳೇ.. ನಿನ್ನ ಮೈಬಣ್ಣಕ್ಕೆ "ಎಂದರು...

"ಏಯ್..ಈ ಸೀರೆಯುಟ್ಟು ತುಟಿಗೆ ಕೆಂಪು ಬಣ್ಣ ಬಳಿದು ಗಿಡದಲ್ಲಿ ಹೋಗಿ ಕೂತ್ಕೋ ಅಕ್ಕಾ..ಆ ಗಿಳಿಗೂ ಕನ್ಫ್ಯೂಷನ್ ಆಗಬಹುದು..ನನ್ನದೇ ರಂಗಿಂದು ಯಾವ ಪ್ರಾಣಿಯಿದು ಅಂತ .."

"ಹೋಗೋ..ತಮ್ಮಣ್ಣಾ.‌ ಯಾವಾಗ್ಲೂ ಬರೀ ಕಾಲೆಳೆಯೋದೇ ಆಯ್ತು ನಿಂದು.."

ಅಷ್ಟರಲ್ಲಿ ಕಾರು ಶೆಡ್ ನಲ್ಲಿ ಇಟ್ಟು ಭಾಸ್ಕರ ಶಾಸ್ತ್ರಿಗಳು ಒಳಗೆ ಬಂದರು..ಮಗಳ ಹೊಸ ಸೀರೆಯ ಮೇಲೆ ಕಣ್ಣಾಡಿಸಿದರು.."ಸಾರಿ ಸೆಲೆಕ್ಷನ್ ಮಾಡಲು ಬರುತ್ತೆ ನಿನಗೆ..ಅಮ್ಮನಿಂದ ಒಂದು ಹೆಜ್ಜೆ ಮುಂದೆ ಇದೀಯಾ.."ಎಂದರು.

"ಏನು ಅಪ್ಪಾ.. ನೀವು ..ಅಮ್ಮಂಗೆ ಸೀರೆ ತೆಗೆಯೋಕೆ ನೀವು ಕೊಡೋದು ಬರೀ ಐನೂರು .. ಆರುನೂರು ಹೀಗೆ..ಇವ್ಳಿಗೆ ಎರಡು ಸಾವಿರ ಕೊಟ್ರಿ ಹಿಂದೆ ಮುಂದೆ ನೋಡದೆ... ಇನ್ನು ಒಂದು ಸಾವಿರ ಕೊಟ್ಟಿದ್ರೆ ಇನ್ನೂ ಚಂದದ್ದೇ ತರ್ತಿದ್ಳು.".ಎಂದ ಮಹೇಶ್ ಅಪ್ಪ ಅಕ್ಕನಿಗೆ ದುಡ್ಡು ಧಾರಾಳವಾಗಿ ಕೊಡ್ತಾರೆ ತನಗೆ ಕೊಡುವಾಗ ಭಾರೀ ಕೈ ಗಿಡ್ಡ..ಎಂಬ ಹೊಟ್ಟೆಯೊಳಗಿನ ಉರಿಯಿಂದ..

"ಮಹೇಶ..ನಿನ್ನ ಮದುವೆಯಾಗುವ ಕಾಲಕ್ಕೆ ನಿನ್ನ ಮಡದಿಗೂ ಸಾವಿರಗಟ್ಟಲೆ ಬೆಲೆಬಾಳುವ ಸೀರೆ ತರೋಣ ಬಿಡು..ಆಗ ಸರಿಹೋಗುತ್ತದೆ..."
 ಎಂದರು ನಗುತ್ತಾ ಅಜ್ಜಿ...

"ಹೌದು ಮಹೇಶ... ನೀನು ಚೆನ್ನಾಗಿ ಓದಿ ಒಳ್ಳೆಯ ಹುದ್ದೆ ಪಡೆದರೆ ಇಪ್ಪತ್ತೈದು ವರ್ಷಕ್ಕೇ ಮದುವೆ ಮಾಡಿ ಬಿಡೋಣ.. ಅಕ್ಕನಿಗೆ ಖರ್ಚು ಮಾಡಿದ್ದಕ್ಕಿಂತ ದುಪ್ಪಟ್ಟು ನಿನ್ನ ಮದುವೆಗೆ ಖರ್ಚು ಮಾಡೋಣ..ಈಗ ಮಾತ್ರ ತರ್ಲೆ ಬುದ್ಧಿ ಬಿಟ್ಟು ಸ್ವಲ್ಪ ಓದಿನ ಕಡೆಗೆ ಗಮನ ಕೊಡು.." ಎಂದರು ಪುಳ್ಳಿಯನ್ನು ಛೇಡಿಸುತ್ತಾ ಅಜ್ಜ..

'ನನ್ನನ್ನು ಬೆಂಬಲಿಸುವವರು ಯಾರೂ ಇಲ್ಲ' ಎಂದು ಪೆಚ್ಚಾಗಿ ಒಳನಡೆಯ ಹೊರಟವನನ್ನು ಕರೆದ ಮೈತ್ರಿ "ಹೋಯ್..ತಮ್ಮಣ್ಣಾ..ಇದು ಚೆನ್ನಾಗಿದೆಯಾ..."ಎಂದಾಗ ಹಿಂದಿರುಗಿ ನೋಡಿದ ಮಹೇಶ್ ತನ್ನ ಕಣ್ಣನ್ನೇ ನಂಬದಾದನು..


ಮುಂದುವರಿಯುವುದು...

✍️.... ಅನಿತಾ ಜಿ.ಕೆ.ಭಟ್.
06-03-2020.


ನಮಸ್ತೇ...

          ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ'Home' ,> ಮತ್ತು view web version ಅನ್ನು ಕ್ಲಿಕ್ ಮಾಡಬಹುದು... ಧನ್ಯವಾದಗಳು 💐🙏

2 comments: