Monday, 9 March 2020

ಜೀವನ ಮೈತ್ರಿ-ಭಾಗ ೩೮(38)





     ಮೈತ್ರಿ ಬೆಳಿಗ್ಗೆ ಬೇಗನೆದ್ದು ಕಾಲೇಜಿಗೆ ಹೊರಟಳು.ಅಮ್ಮ ಮಾಡಿದ ತಿಂಡಿಯನ್ನು ಬಾಯಿಗೆ ತುರುಕಿಕೊಂಡು ಬುತ್ತಿಯನ್ನು ಕಟ್ಟಿಕೊಂಡು ಮನೆಯವರಿಗೆ ಬಾಯ್ ಹೇಳಿ ಅಂಗಳಕ್ಕಿಳಿದಳು.ತಿಳಿಗುಲಾಬಿ ಬಣ್ಣದ ಚೂಡಿದಾರ್ ಧರಿಸಿದ ಮೈತ್ರಿಯ ಚೆಲುವು ಇಮ್ಮಡಿಯಾಗಿತ್ತು.ಉದ್ದದ ಜಡೆಯ ಮೇಲೆ ಅಜ್ಜಿ ಸುಂದರವಾಗಿ ಹೆಣೆದ ಮಂಗಳೂರು ಮಲ್ಲಿಗೆಯ ಮಾಲೆ ನಾಟ್ಯವಾಡುತ್ತಿತ್ತು.ಮಗಳು ಕಣ್ಣಂಚಿನಿಂದ ಮರೆಯಾಗುವವರೆಗೂ ನೋಡಿ ಕಣ್ತುಂಬಿಕೊಂಡರು ಮಂಗಳಮ್ಮ.


      ಬಸ್ ಸ್ಟ್ಯಾಂಡ್ ತಲುಪಿದ ಮೈತ್ರಿ ಕಿಶನ್ ಗೆ ಕರೆ ಮಾಡಿದಳು.ಅವನ ಮೊಬೈಲ್ ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಎಂದು ತಿಳಿಸುತ್ತಿತ್ತು.ಅವನದೇ ಗುಂಗಿನಲ್ಲಿ ಮುಳುಗಿದಳು ಮೈತ್ರಿ.. ಕಾಲೇಜು ತಲುಪಲು ಇನ್ನು ಐದು ನಿಮಿಷ ಇದೆ ಎಂದಾಗ ಕರೆಯೊಂದು ಬಂತು.ನೋಡಿದಾಗ ಕಿಶನ್..

"ಹಾಯ್.."

"ಆವಾಗ್ಲಿಂದ ವ್ಯಾಪ್ತಿ ಪ್ರದೇಶದ ಹೊರಗಿದ್ದಾರೆ ಎಂದು ಬರ್ತಿತ್ತು.."

"ಈಗ ಬಂದೆ ನಿನ್ನ ವ್ಯಾಪ್ತಿ ಪ್ರದೇಶದೊಳಗೆ.."

"ಏನು ಹಾಗಂದ್ರೆ..?"

"ಕಾಲೇಜು ಬಸ್ ನಿಂದ ಇಳಿದು ಗೇಟಿನಿಂದ ಹೊರಗೆ ಬಂದು ನೋಡು.."

ಮೈತ್ರಿ ಗೆ ನವಿಲಿನಂತೆ ನಾಟ್ಯವಾಡಬೇಕೆನಿಸಿತು... ಕೋಗಿಲೆಯಂತೆ ಪಂಚಮದಿ ಇಂಚರಗೈಯಬೇಕೆನಿಸಿತು.. ಬಸ್ ಕ್ಯಾಂಪಸ್ ನಲ್ಲಿ ನಿಲ್ಲುವುದೇ ತಡ ಗೆಳತಿಯರ ಕಡೆ ತಿರುಗಿಯೂ ನೋಡದೆ ಗೇಟಿನಿಂದ ಹೊರಗೆ ಹೋದಳು..ಆಚೆ ಈಚೆ ಕತ್ತುತಿರುಗಿಸಿ ನೋಡಿದಳು.ಹತ್ತು ಹೆಜ್ಜೆ ದೂರದಲ್ಲಿ ಕಾರೊಂದು ನಿಂತಿದೆ.ಮೆಲ್ಲನೆ ಅತ್ತ ಸಾಗುತ್ತಿದ್ದಾಳೆ ಮೈತ್ರಿ.ಅವಳನ್ನು ಕಂಡು ಕಾರಿನಿಂದಿಳಿದ ಹೀರೋ ಸ್ಟೈಲಲ್ಲಿ ಕಿಶನ್..ಮೈತ್ರಿಯ ಎದೆ ಕಂಪಿಸುತ್ತಿತ್ತು.. ಕಿಶನ್ ಗುಲಾಬಿ ಕನ್ಯೆಯನ್ನು ಮನತುಂಬಿಕೊಂಡು ಬರಮಾಡಿಕೊಂಡ..

      ಹತ್ತಿರ ಬಂದಾಗ  ತೋಳನ್ನು ಮುಂದೆ ಚಾಚಿದ್ದ ಕಿಶನ್.ನಾಚಿ ನೀರಾಗಿ ಡ್ರೆಸ್ ನ ಬಣ್ಣಕ್ಕೆ ಅವಳ ಕೆನ್ನೆಗಳೂ ಮ್ಯಾಚ್ ಆಗಿದ್ದವು.
"ಕಿಶನ್...ಇಲ್ಲಿ ಹೀಗೆಲ್ಲ... ಕಾಲೇಜು ಸ್ಟೂಡೆಂಟ್ಸ್, ಪ್ರೊಫೆಸರ್ಸ್ ಎಲ್ಲರೂ ನೋಡ್ತಾರೆ.. ಊಹೂಂ.."

"ಸರಿ..ಕಾರು ಹತ್ತು.. ಇವತ್ತು ಕಾಲೇಜಿಗೆ ಬಂಕ್ ಮಾಡು.."

"ಹೂಂ... ನಾನು ಬಂದ ಬಸ್ಸಲ್ಲಿ ಲೆಕ್ಚರ್ಸ್ ಇದ್ರು..ಬಂಕ್ ಮಾಡಿದ್ದು ಗೊತ್ತಾದ್ರೆ ಏನ್ಮಾಡೋದು.."

"ಹೋಗ್ಲಿ ಬಿಡೇ..ಏನಾಗಲ್ಲ.."

ಮೈತ್ರಿ ಕಾರಿನೊಳಗೆ ಕುಳಿತಳು.ಕಿಶನ್ ಕಾರು ಸ್ಟಾರ್ಟ್ ಮಾಡಿದ..

"ಮುದ್ಗೊಂಬೆ..."

"ಹೂಂ.. ಏನು ಸಮಾಚಾರ..?"

"ಎತ್ತ ಕಡೆ ಹೋಗೋಣ.."ಎಂದ ಅವಳ ಮೊಗದ ಸೌಂದರ್ಯವನ್ನು ಆಸ್ವಾದಿಸುತ್ತಾ...

"ತುಂಟ ಕಿಶನ್.."ಎಂದಳು ಹುಸಿಮುನಿಸಿನಿಂದ..

ಪ್ರಯಾಣದುದ್ದಕ್ಕೂ ಕಿಶನ್ ತುಂಟತನ ಮುಂದುವರಿದಿತ್ತು...ಕಾರು ರೆಸ್ಟೋರೆಂಟ್ ಬಳಿ ನಿಲ್ಲಿಸಿದ..ನಗರದ ಹೊರವಲಯದ ಪ್ರಾಕೃತಿಕ ಸೌಂದರ್ಯ ದ ನಡುವೆ ಇರುವ ರೆಸ್ಟೋರೆಂಟ್ ಪ್ರೇಮಿಗಳಿಗೆ ಹೇಳಿ ಮಾಡಿಸಿದಂತಿತ್ತು. ವಿಶಾಲವಾದ ಸಸ್ಯರಾಶಿಯ ನಡುವೆ ಅಲ್ಲಲ್ಲಿ ಪುಟ್ಟದಾದ  ತಿಂಡಿಮನೆಗಳು ನೋಡಲು ಬಲು ಆಕರ್ಷಣೀಯವಾಗಿತ್ತು.ಮೈತ್ರಿ ಕಿಶನ್ ಇಬ್ಬರೂ ಗಾರ್ಡನ್ ನಲ್ಲಿ ವಿಹರಿಸಿದರು.ಸಂಪಿಗೆಯ ಮರದ ತುಂಬಾ ಅರಳಿಕಂಪು ಸೂಸುತ್ತಿರುವ ಹೂಗಳನ್ನು ನೋಡಿ ಮೈಮರೆತ ಮೈತ್ರಿ ಯನ್ನು ಹಿಂದಿನಿಂದ ಬಂದು ಕಿಶನ್ ಬರಸೆಳೆದು ಬಳಸಿ ತನ್ನ ಪ್ರೇಮದ ಕಾಣಿಕೆಯನಿತ್ತ..ಅವಳ ಅಧರದ ಮಧುಹೀರಿ   ಅವಳ ಉಸಿರೊಳಗೆ ತನ್ನ ಉಸಿರ ಬೆರೆಸಿದ.ಅನಿರೀಕ್ಷಿತ ಕಾಣಿಕೆಗೆ ಸೋತು ಅವನ ಎದೆಗೆ ಮುಖವಿಟ್ಟು ಹೂಮುತ್ತನ್ನು ಅನುಗ್ರಹಿಸಿದಳು ಮೈತ್ರಿ...ನಿನ್ನ ಉಡುಗೊರೆಗೆ ನನ್ನ ಪ್ರತಿ ಉಡುಗೊರೆ ಎಂಬಂತಿತ್ತು ಅವಳ ಮುಖದ ಮಂದಹಾಸ.ಎದೆಗಾನಿಸಿ ನಿಂತಿದ್ದ ಪ್ರಿಯತಮೆಯೊಂದಿಗೆ ಸೆಲ್ಫಿ ತೆಗೆದುಕೊಂಡ ಕಿಶನ್.


    ಮುಂದೆ ಪುಟ್ಟದಾದ ಕೊಳ..ಅದರ ತುಂಬಾ ಕಮಲದ ಹೂಗಳು.. "ಆಹಾ.. ಎಷ್ಟು ಸುಂದರವಾಗಿದೆ " ಎಂದವಳ ದಿಟ್ಟಿಸಿ .."ನಿನ್ನ ಅಧರಗಳು ಕಮಲದ ದಳಗಳಿಗಿಂತ ಕೋಮಲ.." ಎಂಬ ಅವನ ಮಾತಿಗೆ ಮೆಲ್ಲನೆ ಅವನ ಕೈಯೊಳಗೆ ಬೆರಳಿರಿಸಿ ನಕ್ಕಳು..

  ದೊಡ್ಡದಾದ ಕರಿಯ ಬಂಡೆ ಮುಂದೆ ಇತ್ತು.ಅದರ ಮೈಮೇಲೆ ಬೆಳೆದ ಕೆಲವು ಕಲ್ಲಶ್ವತ್ಥ ಗಿಡಗಳು ಅದರಾಚೆಗಿನ ದೃಶ್ಯವನ್ನು ಮರೆಮಾಚುವಂತಿದ್ದವು.ಕಿಶನ್ ಅವಳ ಕೈಹಿಡಿದು ಬಂಡೆಯಾಚೆಗೆ ಸರಿದ.. ನಾಲ್ಕು ವರುಷದ ಪ್ರೇಮವ ಕೆಂಗುಲಾಬಿ ಹೂವಿತ್ತು ಇಂದು ಮತ್ತೆ ಸಂಭ್ರಮಿಸಿದ..ಗೆಳತಿ ನೀನೇ ನನ್ನ ಬಾಳ ಸಖಿ ಎಂದವನ ಬಾಹುಗಳೊಳಗೆ ಕರಗಿದಳು ಅವಳು..


    ಪ್ರೇಮ ಹೇಳಿಕೇಳಿ ಹುಟ್ಟುವುದಿಲ್ಲ ..ಅದು ತಾನಾಗಿಯೇ ಉದಿಸುವ ಭಾವ..ಗಂಡು ಹೆಣ್ಣಿನ ನಡುವೆ ಪವಿತ್ರವಾದ ಬಂಧನವ ಬೆಸೆಯುವುದು ಪ್ರೇಮ.ಅದಕ್ಕೆ ಕಾರಣವಿಲ್ಲ..ಸ್ವಾರ್ಥದ ಲೇಪನವಿಲ್ಲ.ನೀ ನನಗಿದ್ದರೆ ನಾನಿನಗೆ ಎಂಬ ಮನೋಸಾಂಗತ್ಯವೇ ಮಧುರ ಪ್ರೇಮದ ಪರಿಭಾಷೆ.ಅವನ ಸನಿಹದಲ್ಲಿ ಅವಳಿಗೆ ಏನೋ ಭರವಸೆ ..ಅವಳ ಮಡಿಲಿನಲಿ ಅವನಿಗೆ ಶೃಂಗಾರ ಕಾವ್ಯ ಕನ್ನಿಕೆಯ ರಸರಾಗ..


   ಆಡದೇ ಉಳಿದ ಮಾತುಗಳೆಲ್ಲ  ಒಲವ ಭಾಷೆಯಲ್ಲಿ ಮತ್ತೆ ನುಡಿದವು.ಅವನ ಹೃದಯದರಮನೆಯಲ್ಲಿ ಅವಳೇ ಅರಸಿಯೆಂದು ಬೀಗಿದಳು.ತನ್ನ ಸಖಿಯ ಸನಿಹದಲ್ಲಿ ಅವಳ ಕೊರಳ ಮೇಲೆ ತುಟಿಯೊತ್ತಿ ,ಕೆನ್ನೆಮೇಲೆ ತನ್ನ ಕುರುಹು ಉಳಿಸಿದ ,ಮೆದುವಾದ ಕರಗಳನು ತನ್ನ ಬೆರಳುಗಳಲಿ ಬಂಧಿಸಿದ ಅವನಿಗೆ ಪ್ರೇಮವೆಂದರೆ ಒಂದು ದಿವ್ಯ ಅನುಭೂತಿ..ಮಾತಿನಲ್ಲಿ ಹೇಳಲಾಗದ ಭಾವಗಳ ಸುರಿಮಳೆ.ಮನಸಿನ ಕೊಳೆತೊಳೆವ ಒಂದು ಧ್ಯಾನ.


   ಒಬ್ಬರನ್ನೊಬ್ಬರು ಬಿಡದೆ ಹೆಜ್ಜೆಯೊಂದಿಗೆ ಹೆಜ್ಜೆಯಿಟ್ಟು ತಿಂಡಿ ಮನೆಗೆ ಆಗಮಿಸಿದರು.ಅವಳಿಗಾಗಿ ಅವಳಿಷ್ಟದ ತಿನಿಸನ್ನು ಆರ್ಡರ್ ಮಾಡಿದ ಕಿಶನ್."ಅಯ್ಯೋ..ಕಿಶನ್ಗೆ ಏನಿಷ್ಟ ಅಂತ ನಾನಿದುವರೆಗೂ ತಿಳ್ಕೊಂಡೇಯಿಲ್ಲವಲ್ಲಾ.. ಎಂದು ಚಡಪಡಿಸಿದಳು ಮೈತ್ರಿ.".ಹೊಟ್ಟೆ ಬಿರಿಯುವಂತೆ ತಿಂದ ಪ್ರೇಮಹಕ್ಕಿಗಳು ಮತ್ತೆ ಮಾವಿನ ಮರದ ತಣ್ಣೆಳಲಿನಲ್ಲಿ ವಿಹರಿಸಿದವು.ಮಾತನಾಡುತ್ತಾ ಕಳೆದ ಇಬ್ಬರಿಗೂ ಸಮಯ ಹೋದದ್ದೇ ಗೊತ್ತಾಗಲಿಲ್ಲ.. ಒಬ್ಬರನ್ನೊಬ್ಬರು ಸರಿಯಾಗಿ ಅರಿತುಕೊಂಡರು.ಮನಬಿಚ್ಚಿ ಮಾತನಾಡಿದರು.ಮೈತ್ರಿಯ ಮನೆಪರಿಸ್ಥಿತಿಯ ಬಗ್ಗೆ ತಿಳಿದುಕೊಂಡ ಕಿಶನ್ ಗೆ ತಾನಾಡಿದ ಹುಸಿಮುನಿಸಿನ ನಾಟಕ ತಪ್ಪೆಂದು ಕ್ಷಮೆಯಾಚಿಸಿದ..ನಿನ್ನ ನಾನು ಗದರಿದ್ದು ತಪ್ಪೆಂದು "ಸಾರಿ ಕಿಶನ್ "ಎಂದ ಅವಳ ಕಂಗಳು ತುಂಬಿದ್ದನ್ನು ಕಂಡು ಕಿಶನ್ ಗೂ ಕಣ್ಣುತುಂಬಿ ಬಂತು .ಅವಳ ಕಂಬನಿ ಒರೆಸಿದ..ಅವಳ ಕೈಗಳು ಅವನ ನಯನದ ಸುತ್ತ ಮೆದುವಾಗಿ ಟವೆಲ್ ನಿಂದ ಒತ್ತಿದವು.


      ಕಾಲೇಜು ಸಮಯಕ್ಕೆ ಮತ್ತೆ ಮೈತ್ರಿಯನ್ನು
ಕ್ಯಾಂಪಸ್ ಗೆ ಬಿಡಲು ಮನಸ್ಸಾಗದೆ ತಾನೇ ಮನೆಗೆ ಕರೆದುಕೊಂಡು ಹೋಗುವ ಮನಸ್ಸು ತೋರಿದ.." ಕಿಶನ್ ಬೇಡ
.ಮನೆಯವರು ಏನಾದರೂ ಅಂದುಕೊಳ್ಳುತ್ತಾರೆ.. ಪ್ಲೀಸ್.".ಎಂದವಳನ್ನು ಇಕ್ಕಟ್ಟಿಗೆ ಸಿಲುಕಿಸುವ ಮನಸ್ಸಾಗದೆ "ಯೆಸ್.." ಎಂದ ಪ್ರಿಯತಮ..


    ಕಾರು ಕ್ಯಾಂಪಸ್ ಮುಂದೆ ನಿಲ್ಲುತ್ತಿದ್ದಂತೆ  ಕಿಶನ್  ಕೈಗಳನ್ನು ಮೆದುವಾಗಿ ಸವರಿದ ಮೈತ್ರಿ.ಆಕೆಯ ಕೈಗಳನ್ನು ತನ್ನ ಕೈಗಳಿಂದ ಬಂಧಿಸಿ  ಪ್ರೇಮ ಮುದ್ರೆಯನ್ನೊತ್ತಿ ಬೀಳ್ಕೊಟ್ಟ ಕಿಶನ್... ಒಂದೆಡೆ ಖುಷಿಯಿಂದ ತೇಲುವ ಮನಸ್ಸು ... ಇನ್ನೊಂದೆಡೆ ಗೆಳೆಯ ಕಿಶನ್ ನ ಬಿಟ್ಟು ಬರುವ ವೇದನೆ ಎರಡು ಗೊಂದಲದ ಮನಸಿನೊಂದಿಗೆ ಗೇಟಿನೊಳಗಡೆ ಸಾಗಿದಳು ಮೈತ್ರಿ..
ಕಿಶನ್ ಅವಳು ಹೋಗುತ್ತಿದ್ದಂತೆ ತಾನು ಪಯಣ ಮುಂದುವರಿಸಿದ..


      ಮುಂದುವರಿಯುವುದು..

(ವಿ.ಸೂ.:-ಈ ಭಾಗವು ಮೊದಲು ಧಾರಾವಾಹಿ ಪ್ರಕಟಿಸುತ್ತಿದ್ದ ವೇದಿಕೆಯಲ್ಲಿ ಫೆಬ್ರವರಿ ಹದಿನಾಲ್ಕರಂದು ಪ್ರೇಮಿಗಳ ದಿನದ ವಿಶೇಷ ಕಂತು ಆಗಿತ್ತು.)

✍️... ಅನಿತಾ ಜಿ.ಕೆ.ಭಟ್.
10-03-2020.


3 comments: