ಭಾಸ್ಕರ ಶಾಸ್ತ್ರಿಗಳು ತಮ್ಮ ಶಂಕರನಿಗೆ ಕರೆಮಾಡಿ ಕ್ಷೇಮ ಸಮಾಚಾರ ಮಾತನಾಡಿದರು.ಮೈತ್ರಿಯ ಮದುವೆ ವಿಚಾರವನ್ನು ಚರ್ಚಿಸಿದರು."ಹುಡುಗನ ಬಗ್ಗೆ ಏನಾದರೂ ಮಾಹಿತಿ ದೊರೆಯಿತೇ..?" ಎಂದು ಪ್ರಶ್ನಿಸಿದರು.
"ಅಣ್ಣಾ... ನಿನ್ನೆಯಷ್ಟೇ ನನ್ನ ಭಾವಮೈದುನ ಎಲ್ಲಾ ವಿಚಾರಿಸಿ ತಿಳಿಸಿದ.. ನಾನೇ ಕರೆ ಮಾಡಬೇಕೆಂದಿದ್ದೆ.. ಅಷ್ಟರಲ್ಲಿ ನೀನೇ ಮಾಡಿದೆ.."
"ಏನಂದ ಭಾವ ಮೈದುನ.."
"ಇಂಜಿನಿಯರಿಂಗ್ ಮುಗಿಸಿ ,ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಇನ್ಫೋಸಿಸ್ ನಲ್ಲಿ ಉದ್ಯೋಗ ದೊರೆತಿದ್ದಂತೆ..ಹುಡುಗ ಒಳ್ಳೆಯವನಂತೆ..ದುರಾಭ್ಯಾಸ ಏನೂ ಇರಲಾರದು ಎಂಬುದಾಗಿ ತಿಳಿಸಿದ.. ವಯಸ್ಸೂ ನಮ್ಮ ಮೈತ್ರಿಗೆ ಸರಿಹೊಂದೀತು.. ಇಪ್ಪತ್ತಾರು ಇಪ್ಪತ್ತೇಳು ವರ್ಷಗಳಿರಬಹುದು.."
"ಹೂಂ..ತಮ್ಮ..ನಾನೂ ಇಲ್ಲಿ ಕೆಲವರಲ್ಲಿ ಕೇಳಿ ತಿಳಿದೆ..ಇದೇ ರೀತಿ ಹೇಳಿದ್ರು..ಬಾರಂತಡ್ಕದ ಸಂಬಂಧ ಆಗಿಬರುವುದಿಲ್ಲ ಎಂದು ತಿಳಿಸಿದ್ದಾರೆ..ಮೈತ್ರಿಕಿಶನ್ ಇಬ್ಬರ ಜಾತಕವೂ ಹೊಂದಾಣಿಕೆಯಾಗುತ್ತಿದೆ.."
"ಆಗಲಿ ಅಣ್ಣಾ... ಎಲ್ಲವೂ ನಮ್ಮ ಮಟ್ಟಿಗೆ ಅನುಕೂಲಕರವಾಗಿದ್ದರೆ ಮುಂದುವರಿಸೋಕೆ ಹಿಂದೆ ಮುಂದೆ ನೋಡುವುದು ಬೇಡ.."
"ಹಾಗೇ ಆಗಲಿ..ನಾಳೆ ನಮ್ಮ ಉತ್ತರ ಅವರಿಗೆ ಹೇಳೋಣಾಂತ ಇದ್ದೇವೆ.."
"ಸರಿ...ಮುಂದಿನ ಎಲ್ಲಾ ಶುಭಕಾರ್ಯಗಳಿಗೆ ನಮ್ಮ ಬೆಂಬಲ ಇದೆ..ಅಪ್ಪ ,ಅಮ್ಮ ಕ್ಷೇಮ ತಾನೇ.."
"ಮೊನ್ನೆ ಅಪ್ಪ ಜ್ವರ ಬಂದು ಸ್ವಲ್ಪ ಕಂಗಾಲಾದ್ರು..ಈಗ ಆರಾಮಾಗ್ತಾ ಇದ್ದಾರೆ..ಅಮ್ಮ ಹುಷಾರಾಗಿದ್ದಾರೆ.. ಗಾಯತ್ರಿ ಸಂಜನಾ ವಂದನಾ ಹೇಗಿದ್ದಾರೆ.."
"ಎಲ್ಲಾ ಆರಾಮವಾಗಿದ್ದಾರೆ...
ಊರಿಂದ ತಂದ ಹಪ್ಪಳ ಸೆಂಡಿಗೆ ಎಲ್ಲ ಚೆನ್ನಾಗಿತ್ತು.. ಮಿಡಿ ಉಪ್ಪಿನಕಾಯಿ ಅಂತೂ ಬಾಯಲ್ಲಿ ನೀರೂರಿಸುವಂತಿತ್ತು.."
"ಮುಂದಿನ ಸಲ ಬಂದಾಗ ಬೇಕಾದ್ರೆ ಇನ್ನೂ ಕೊಂಡೊಯ್ಯಬಹುದು..ಅಮ್ಮ,ಮಂಗಳಾ ದೊಡ್ಡ ಭರಣಿಯಲ್ಲಿ ಹಾಕಿಟ್ಟಿದ್ದಾರೆ.."
"ಹೂಂ.. ಸರಿಯಣ್ಣಾ.."
"ಆಗಲಿ..ತಮ್ಮ ಇನ್ನೊಮ್ಮೆ ಮಾತನಾಡೋಣ.."
*****
ಮೈತ್ರಿ ಕಾಲೇಜು ಬಸ್ಸಿಳಿದು ಮನೆಗೆ ಸಾಗುವಾಗ ಕಿಶನ್ ಜೊತೆಗೆ ಕಳೆದ ಮಧುರ ಕ್ಷಣಗಳನ್ನು ಮೆಲುಕು ಹಾಕುತ್ತಾ ಮಂದಹಾಸ ಬೀರುತ್ತಾ ನಡೆಯುತ್ತಿದ್ದಳು.ಎದುರಿನಿಂದ ಮಹೇಶ್ ಬೈಕಿನಲ್ಲಿ ಬರುತ್ತಿದ್ದ.ಅಕ್ಕನ ಹತ್ತಿರ ಬೈಕ್ ತಂದು ಗಕ್ಕನೆ ನಿಲ್ಲಿಸಿದ.. "..ಅಕ್ಕಾ.."ಎಂದಾಗ ಒಮ್ಮೆ ಹೌಹಾರಿದಳು ಮೈತ್ರಿ..
"ಅಬ್ಬಾ...ನೀನಾ... ನಾನು ಯಾರಪ್ಪಾ ಅಂತ ಅಂದುಕೊಂಡೆ.."
"ನಾನೇ ಅಕ್ಕಾ..ಮತ್ತೆ ವ್ಯಾಲೆಂಟೈನ್ಸ್ ಡೇ ದಿನ ಯಾರಪ್ಪಾ ಇದು ಅಂದುಕೊಂಡ್ಯಾ..?"
"ಹೂಂ..ಕಣೋ.."
"ಅಂತೂ ನಿನ್ನ ಸವಿಗನಸಿಗೆ ನಾನು ಅಡ್ಡಿಮಾಡಿದೆ ಅಲ್ವಾ ಅಕ್ಕಾ.. ಏನು ವಿಶೇಷ..ಭಾರೀ ಖುಷಿಯಿಂದ ಬರ್ತಾ ಇದ್ದೆ... ಇಶಾ ಏನಾದ್ರೂ ಇವತ್ತು ಈ ಕಡೆ..."
"ಹಾಂ...ಹಾಗೇನೂ ಇಲ್ಲಪ್ಪಾ..."ಎಂದಳು ಸಾವರಿಸಿಕೊಂಡು...
"ಹೌದು.. ಅಕ್ಕಾ.. ಭಾವೀ ಭಾವ ಯಾವಾಗ ಬೆಂಗಳೂರಿನ ಕಡೆ ಹೋಗೋದಂತೆ.."
"ಏನು...ಏನಂದೆ...?ನಂಗೇನೂ ಗೊತ್ತಿಲ್ಲ ಕಣೋ..."ದಡಬಡಾಯಿಸಿದಳು ಮೈತ್ರಿ..
ಮಹೇಶ್ ನಕ್ಕು" ಅಕ್ಕಾ..ನಾನೀಗ ಅಂಗಡಿಯಲ್ಲಿ ಸಾಮಾನು ತೆಗೆದುಕೊಂಡು ಬರುವೆ..ಬಾ ಬೈಕ್ ಹತ್ತು..ಒಟ್ಟಿಗೇ ಮನೆಗೆ ಹೋಗೋಣ.."
ಮೈತ್ರಿಗೆ ...ಇವನಿಗೆ ನಾನು ಕಿಶನ್ ಜೊತೆ ಸುತ್ತಿದ್ದು ಗೊತ್ತಾಗಿದೆಯೋ ಏನೋ ಎಂದು ಸ್ವಲ್ಪ ಅನುಮಾನ ಶುರುವಾಯಿತು..
ಅಂಗಡಿಗೆ ಹೋಗಿ ಮನೆಗೆ ವಾಪಸಾಗುತ್ತಿದ್ದಾಗ "ಅಕ್ಕಾ.. ಇಶಾ ಏನೆಲ್ಲ ಕೊಡಿಸಿದಳು...ನಿನ್ನ ಮುಖ ನೋಡಿದ್ರೇ ಎಲ್ಲಾ ಗೊತ್ತಾಗುತ್ತೆ.."
"ಅದೆಲ್ಲ ನಿಂಗೆ ಹೇಗೋ ಗೊತ್ತಾಯ್ತು..?"
"ನಾನು ಮಹೇಶ್ ಅಂದ್ರೆ... ಸುಮ್ನೇನಾ.."
"ತಮ್ಮಾ ಪ್ಲೀಸ್ ಮನೆಯಲ್ಲಿ ಯಾರಿಗೂ ಹೇಳಬೇಡ ಕಣೋ ದಮ್ಮಯ್ಯ ಅಂತೀನಿ.."
"ಆಯ್ತಮ್ಮ..ಯಾರಿಗೂ ಹೇಳಲ್ಲ...ಅಪ್ಪ ಬೆಳಿಗ್ಗೆ ಕೊಟ್ಟಿದ್ರಲ್ಲ ಐನೂರು ರೂಪಾಯಿ ನೂರು ರೂಪಾಯಿ ಇತ್ಲಾಗಿ ಕೊಟ್ಬಿಡು..ಹಾಗಾದ್ರೆ ಮಾತ್ರ ಬಾಯ್ಬಿಡಲ್ಲ.."
"ಇಲ್ಲ ಕಣೋ..ನನ್ನ ಕೈಲಿ ಹೆಚ್ಚು ದುಡ್ಡಿಲ್ಲ..ಅದು ಇದು ಅಂತ ಈಗ ಖರ್ಚು ಜಾಸ್ತಿ.. " ಎಂದಾಗ ಬೈಕ್ ನಿಲ್ಲಿಸಿದ ಮಹೇಶ್..
ಮೊಬೈಲ್ ಜೇಬಿನಿಂದ ತೆಗೆದು "ಅಕ್ಕಾ ..ಇಲ್ನೋಡು...ನನ್ನ ಮುದ್ದಿನ ಅಕ್ಕಭಾವ ..ಸೋ ಕ್ಯೂಟ್ ಪೇರ್..."
ಎಂದವನ ಮೊಬೈಲ್ ಪರದೆಯ ಮೇಲೆ ಮೈತ್ರಿ ಕಿಶನ್ ನ ಎದೆಗಾನಿಸಿ ನಿಂತ ಫೊಟೋ...
ಇದು ತಮ್ಮನಿಗೆ ಹೇಗೆ ಸಿಕ್ಕಿತು ಎಂಬುದು ಅವಳಿಗೆ ಆಶ್ಚರ್ಯವಾಯಿತು.
"ಇದನ್ನೆಲ್ಲ ಮನೆಯಲ್ಲಿ ತೋರಿಸಬೇಡ ಕಣೋ.."
"ತೋರಿಸಲ್ಲ.. ಅಕ್ಕಾ..ನೂರೇ ನೂರು ರೂಪಾಯಿ ನನ್ನ ಖರ್ಚಿಗೆ ಕೊಟ್ಟುಬಿಡು" ಎಂದಾಗ ಬೇಗನೆ ಪರ್ಸ್ ತೆಗೆದು ಕಿಶನ್ ಕೊಟ್ಟಿದ್ದ ಗರಿಗರಿ ನೋಟು ಕೊಟ್ಟು ಆ ಫೊಟೋ ಡಿಲೀಟ್ ಮಾಡಿಸಿದಳು..
"ದಮ್ಮಯ್ಯ ಅಂತೀನಿ ಅಪ್ಪನಿಗಂತೂ ಹೇಳಬೇಡ ತಮ್ಮಣ್ಣ.."
"ಆಗಲಕ್ಕಾ..ನನ್ನ ಮುದ್ದು ಅಕ್ಕಾ..ಅಪ್ಪನ ಕೈಯಲ್ಲಿ ಬೈಸಲ್ಲ..ನನ್ನ ಕಿಸೆ ತುಂಬಿತಲ್ಲ..."
" ನಿಂಗೆ ಹೇಗೆ ಸಿಕ್ಕಿತು ತಮ್ಮ ಹೇಳೋ ಪ್ಲೀಸ್..ನನ್ನ ಮುದ್ದಿನ ತಮ್ಮಾ.."
ಅಂದಾಗ ಬೈಕ್ ಸ್ಟಾರ್ಟ್ ಮಾಡ್ತಾ.." ಅಕ್ಕಾ ನೀನು ಹೋಗಿದ್ದ ರೆಸ್ಟೋರೆಂಟ್ ನಲ್ಲಿ ನನ್ನ ಹೈಸ್ಕೂಲುಮೇಟ್ ಸಪ್ಲಾಯರ್ ಆಗಿ ಕೆಲಸ ಮಾಡ್ತಿದ್ದಾನೆ.ನಿಂಗೆ ಅವನ ಪರಿಚಯವಿಲ್ಲ.ಅವನಿಗೆ ಮಾಷ್ಟ್ರ ಮಗಳ ಪರಿಚಯ ಚೆನ್ನಾಗಿಯೇ ಇದೆ.ಸೋ..ಫೊಟೋ ದೂರದಿಂದ ಕ್ಲಿಕ್ ಮಾಡಿ ನಂಗೆ ರವಾನಿಸಿದ.."
"ಅಯ್ಯೋ..ದೇವ.. ಇನ್ನು ಯಾರಿಗೆಲ್ಲ ಕಳುಹಿಸಿ ದ್ದಾನೋ.. ಯಾರಿಗೆ ಗೊತ್ತು..ಅಪ್ಪನ ಕೈಗೆ ಸಿಕ್ಕರಂತೂ ... ಅಬ್ಬಾ..."ಕಣ್ಣು ತುಂಬಿ ಬಂತು ಮೈತ್ರಿಗೆ..
"ಅಕ್ಕಾ.. ಅವನು ಹಾಗೆಲ್ಲ ಕಳಿಸಲ್ಲ.. ಅಕ್ಕಾ ನಂಗೆ ಮಾತ್ರ ಕಳಿಸಿದ್ದಾನೆ .."
ತಮ್ಮ ಏನು ಹೇಳಿದರೂ ಮೈತ್ರಿ ಗೆ ಮೂಡ್ ಔಟ್ ಆದ್ದಂತೂ ಸತ್ಯ...
*****
ಬ್ರೋಕರ್ ಶೇಷಣ್ಣ ಬೆಂಗಳೂರು ಕಡೆಗೆ ಹೊರಡುವ ತಯಾರಿಯಲ್ಲಿದ್ದ.ಸೌಜನ್ಯಳ ತಂದೆಯ ಜೊತೆ ಮಾತನಾಡಿ ಮಗಳ ಮದುವೆಗೆ ಸಂಬಂಧ ಹೊಂದಿಸುವ ಪ್ರಯತ್ನ ಯಶಸ್ವಿಯಾದರೆ ತನಗೊಂದು ಹೆಸರು ಬಂದಂತೆ ಎಂಬುದು ಅವನ ಲೆಕ್ಕಾಚಾರ..ಗಂಡ ಹೊರಡುವಾಗ ಸುಬ್ಬಿ ಸ್ವಲ್ಪ ದೇವರ ಪ್ರಸಾದವನ್ನು ಕೈಗಿಟ್ಟಿದ್ದಳು."ಶುಭವಾಗಲಿ ನೀವು ಎತ್ತಿದ ಕಾರ್ಯ..ಈ ಬಾರಿಯಾದರೂ ನನಗೆರಡು ಬಂಗಾರದ ಕೈಬಳೆ ಮಾಡಿಸಿಕೊಳ್ಳುವ ಭಾಗ್ಯ ಬರಲಿ " ಎಂಬುದು ಈ ಹಾರೈಕೆಯ ಹಿಂದಿನ ಉದ್ದೇಶ.
ಸೌಜನ್ಯ ನೋಡಲು ಚೆಲುವೆ..ಸೌಂದರ್ಯವತಿ.ಅವಳ ರೂಪಕ್ಕೆ ಮನಸೋಲದ ತರುಣರೇ ಇಲ್ಲ.ಕಾಲೇಜಿಗೆ ಹೋಗುತ್ತಿದ್ದಾಗ ಅವಳ ಹಿಂದೆ ಯುವಕರ ದಂಡೇ ಇರುತ್ತಿತ್ತು.ಅಪ್ಪ ಅಮ್ಮ ಇಬ್ಬರೂ ಬಿಎಸ್ ಎನ್ ಎಲ್ ನೌಕರರು.ಒಬ್ಬಳೇ ಮಗಳು.
ಗೀತ, ಭರತನಾಟ್ಯ ಎರಡರಲ್ಲೂ ಸೈ ಎನಿಸಿಕೊಂಡ ಕಲಾವಿದೆ.ಹಳ್ಳಿಯಲ್ಲಿರುವ ಕೇಶವನಿಗೆ ಮದುವೆ ಮಾಡಿ ಕೊಡಲು ಒಪ್ಪಿಯಾರೋ ಇಲ್ಲವೋ ಎಂಬುದು ಅವರ ಸಣ್ಣ ಸಂಶಯ..ಕೇಶವನನ್ನು, ಬಂಗಾರಣ್ಣನ ಕುಟುಂಬವನ್ನು ಹೇಗೆಲ್ಲ ಹೊಗಳಿ ಅಟ್ಟಕ್ಕೇರಿಸಬೇಕೆಂದು ಮನಸ್ಸಲ್ಲೇ ಕಂಠಪಾಠಮಾಡುತ್ತಿದ್ದರು. ಸಂಬಂಧ ಕುದುರಿಸಿವುದೂ ಒಂದು ಕಲೆ.ಇರುವ ವಿಚಾರಗಳಿಗೆ ಇನ್ನು ಹತ್ತಾರು ಇಲ್ಲದ ವಿಶೇಷ ಗುಣಗಳನ್ನು ಸೇರಿಸಿ ಕಥಾಹಂದರದಂತೆ ಹೆಣೆದರೆ ಕೇಳುವವರ ಕಿವಿಗೂ ಇಂಪು ...ಹೆತ್ತವರ ಒಡಲೂ ತಂಪಾಗಿ ಹೆಣ್ಣುಕೊಡಲು ಒಪ್ಪಿಕೊಳ್ಳುವ ಸಾಧ್ಯತೆ ಇದೆ.ಬ್ರೋಕರ್ ಶೇಷಣ್ಣ ಇಂತಹದ್ದರಲ್ಲಿ ಕರತಲಾಮಲಕ . ಇತ್ತೀಚೆಗೆ ಬ್ರಾಹ್ಮಣರ ಹುಡುಗಿಯನ್ನೇ ಮದುವೆಯಾಗುವುದು ಎಂದು ಹಠ ಹಿಡಿದು ಕುಳಿತ ಚಕ್ಲಿಮನೆ ಸುಬ್ರಾಯ ಭಟ್ಟನ ಮಗನಿಗೆ ಶುದ್ಧ ಲಿಂಗಾಯತರ ಮಗಳನ್ನು ಮದುವೆಮಾಡಿಸಿದ ಕೀರ್ತಿ ಶೇಷಣ್ಣನಿಗೆ ಸಲ್ಲುತ್ತದೆ.. ನಿಧಾನವಾಗಿ ಶುದ್ಧ ಲಿಂಗಾಯತರೆಂದು ಕರೆಸಿಕೊಂಡವರ ನಿಜ ವಿಷಯ ಬಯಲಾದಾಗ ಸುಬ್ರಾಯ ಭಟ್ಟರ ಸೊಸೆ ಮೂರು ತಿಂಗಳ ಗರ್ಭಿಣಿ.. ಅಲ್ಲಿಗೆ ಸುಬ್ರಾಯ ಭಟ್ಟರು ತಮ್ಮ ಮಾತಿನ ಹೆಡ್ಡಿಂಗ್ ಚೇಂಜ್ ಮಾಡಿದ್ದರು.ಸೊಸೆ ಯಾವ ಮೂಲದವಳಾದರೇನು ..? ಮಗನಿಗೆ ತಕ್ಕಂತೆ ಬದುಕಬೇಕು.ಮನೆಯ ಸಂಪ್ರದಾಯ ಪಾಲಿಸಿದರೆ ಸಾಕು.. ಎಂಬುದಾಗಿ ಹೊಸ ಸ್ಟೇಟ್ ಮೆಂಟ್ ಹೊರಡಿಸಿದ್ದರು.
*****
ಮನೆಯವರಲ್ಲಿ ಹೇಳದೆ ಗುಟ್ಟಾಗಿ ಮಂಗಳೂರಿಗೆ ಬಂದಿದ್ದ ಕಿಶನ್ ಬೆಳಗಿನ ಜಾವ ಬೆಂಗಳೂರು ತಲುಪಿದ.ಮನಸಿನ ತುಂಬಾ ಸಂತೃಪ್ತಿ ನೆಲೆಸಿತ್ತು.ಯಾವಾಗ ಶಾಸ್ತ್ರಿ ಮೇಷ್ಟ್ರು ಮಗಳನ್ನು ಮದುವೆ ಮಾಡಿಕೊಡಲು ಸಮ್ಮತಿಸುತ್ತಾರೋ ಏನೋ ಎಂಬ ಕಾತರವಿತ್ತು..ಬೆಂಗಳೂರಿಗೆ ತಲುಪಿದ ಕೂಡಲೇ ಮೈತ್ರಿ ಗೆ ಮುದ್ದಾದ ಪ್ರೇಮ ಬರಹವೊಂದನ್ನು ರವಾನಿಸಿದ..
ಆದರೆ ಮೈತ್ರಿ ಮಾತ್ರ ಅದನ್ನು ಓದಿ ಖುಷಿಪಡುವ ಮೂಡಲ್ಲಿ ಇರಲಿಲ್ಲ.ಅಪ್ಪನಿಗೆ ಗೊತ್ತಾದರೆ ಕಿಶನ್ ನ ಒಟ್ಟಿಗೆ ಸುತ್ತಿದ್ದು ಎಂಬ ಭಯ..
ಬೆಳಗ್ಗೆ ಎದ್ದಾಗ ಅಪ್ಪನ ಗಂಭೀರವಾದ ದನಿ ಅವಳನ್ನು ನಡುಗಿಸಿತ್ತು..
"ಮೈತ್ರಿ..ಬಾ ಮಗಳೇ ಇಲ್ಲಿ..."
ಮುಂದುವರಿಯುವುದು...
✍️... ಅನಿತಾ ಜಿ.ಕೆ.ಭಟ್.
15-03-2020.
ಮುಂದಿನ ಭಾಗಕ್ಕೆ ಕಾಯುತ್ತಿದ್ದೇನೆ ...
ReplyDeleteಇಂದು ಬರಲಿದೆ..💐🙏
ReplyDelete