Monday, 16 March 2020

ಜೀವನ ಮೈತ್ರಿ-ಭಾಗ ೪೦(40)





             ಮನೆಯವರಲ್ಲಿ ಹೇಳದೆ ಗುಟ್ಟಾಗಿ ಮಂಗಳೂರಿಗೆ ಬಂದಿದ್ದ ಕಿಶನ್ ಬೆಳಗಿನ ಜಾವ ಬೆಂಗಳೂರು ತಲುಪಿದ.ಮನಸಿನ ತುಂಬಾ ಸಂತೃಪ್ತಿ ನೆಲೆಸಿತ್ತು.ಯಾವಾಗ ಶಾಸ್ತ್ರಿ ಮೇಷ್ಟ್ರು ಮಗಳನ್ನು ಮದುವೆ ಮಾಡಿಕೊಡಲು ಸಮ್ಮತಿಸುತ್ತಾರೋ ಏನೋ ಎಂಬ ಕಾತರವಿತ್ತು..ಬೆಂಗಳೂರಿಗೆ ತಲುಪಿದ ಕೂಡಲೇ ಮೈತ್ರಿ ಗೆ ಮುದ್ದಾದ ಪ್ರೇಮ ಬರಹವೊಂದನ್ನು ರವಾನಿಸಿದ..

ಆದರೆ ಮೈತ್ರಿ ಮಾತ್ರ ಅದನ್ನು ಓದಿ ಖುಷಿಪಡುವ ಮೂಡಲ್ಲಿ ಇರಲಿಲ್ಲ.ಅಪ್ಪನಿಗೆ ಗೊತ್ತಾದರೆ ಕಿಶನ್ ನ ಒಟ್ಟಿಗೆ ಸುತ್ತಿದ್ದು ಎಂಬ ಭಯ..

ಬೆಳಗ್ಗೆ ಎದ್ದಾಗ ಅಪ್ಪನ ಗಂಭೀರವಾದ ದನಿ ಅವಳನ್ನು ನಡುಗಿಸಿತ್ತು..

"ಮೈತ್ರಿ..ಬಾ ಮಗಳೇ ಇಲ್ಲಿ..."

ಅಪ್ಪನ ಬಳಿಗೆ ಹೋಗಿ ತಲೆತಗ್ಗಿಸಿ ನಿಂತಳು ಮೈತ್ರಿ..
"ನೋಡು ಮಗಳೇ....ಈಗ ನಿಮ್ಮಿಬ್ಬರ ಜಾತಕವೂ ಹೊಂದಾಣಿಕೆ ಆಗುವುದು ನಿನಗೂ ಗೊತ್ತಿದೆ ಅಲ್ವಾ... ಮುಂದಿನ ಯೋಚನೆ ಮಾಡಬೇಕು...ಉತ್ತರ ಇವತ್ತೇ ಹೇಳಬೇಕೆಂದಿದ್ದೇನೆ..ನಿನಗೂ ಸಂಪೂರ್ಣ ಒಪ್ಪಿಗೆ ತಾನೇ.."

"ಹೂಂ ಅಪ್ಪ.."

      "...ಮದುವೆ ಅಂದ್ರೆ ಬರೀ ಎರಡು ದೇಹಗಳ ಶುಭಮಿಲನ, ಮನಸುಗಳ ಸಮ್ಮಿಲನ ಅಲ್ಲ ಮಗಳೇ.. ಆದ್ದರಿಂದ ಹಲವಾರು ಬಾರಿ ಆಲೋಚನೆ ಮಾಡಬೇಕಾಗುತ್ತದೆ.ಒಮ್ಮೆ ಮೂರು ಗಂಟಿನ ಬಂಧ ಏರ್ಪಟ್ಟರೆ ಕೊನೆಯವರೆಗೂ ಆ ನಂಟನ್ನು ಕಾಪಾಡಿಕೊಳ್ಳುವುದು ಮುಖ್ಯ.ಮದುವೆಯ ನಂಟಿನಲ್ಲಿ ಎರಡು ಕುಟುಂಬಗಳ ಬಾಂಧವ್ಯವಿದೆ.ಎರಡು ಸಂಪ್ರದಾಯಗಳ ಸಾಮರಸ್ಯವಿದೆ.ಸ್ವಾರ್ಥವನ್ನು ಬದಿಗೊತ್ತಿ ಕುಟುಂಬವೆಂಬ ವೃಕ್ಷವನ್ನು ಮುನ್ನಡೆಸುವ ಜವಾಬ್ದಾರಿ ಇದೆ.ಹಿರಿಯರೆದುರು ತಲೆಬಾಗಿ, ಇನಿಯನೊಡನೆ ಸರಸವಾಡಿ,ಬಂಧುಗಳೊಡನೆ ಒಡನಾಡುವ ಪರಿಪಾಠ ಬೆಳೆಸಿಕೊಂಡು, ಇರುವ ಸಂಪತ್ತು ಸವಲತ್ತುಗಳಲ್ಲಿ ತೃಪ್ತಳಾಗಿ , ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ತಲೆಯೆತ್ತಿ ಬಾಳುವ ಪಕ್ವತೆ, ಧೈರ್ಯ ನಿನ್ನಲ್ಲಿರಬೇಕು ಮಗಳೇ...

        ಸಣ್ಣಪುಟ್ಟ ವಿಚಾರಭೇದಗಳನ್ನು ವೈಭವೀಕರಿಸದೆ ,ವೈಮನಸ್ಸನ್ನು ಬೆಳೆಯಗೊಡದೆ ನಿನ್ನ ಕುಟುಂಬವೆಂಬ ಸುಂದರ ಹೂಬನವನ್ನು ನೀನೇ ಮುಂದೆ ನಿಂತು ನೀರೆರೆದು ಪೋಷಿಸುವಂತವಳಾಗಬೇಕು. ನಿನ್ನಕಾಳಜಿ ಕೇವಲ ಗಂಡನಿಗೆ ಮೀಸಲಾಗದೆ ಅವನ ತಂದೆ ತಾಯಿ ತಂಗಿಯರ ಕಡೆಗೂ ಇರಬೇಕು.ಪ್ರತಿಯೊಂದು ವಿಚಾರಕ್ಕೂ ತವರನ್ನು ಕೇಳದೆ, ಸಿಲುಕಿಸದೆ ನಿನ್ನ ಹಾದಿಯನ್ನು ನೀನೇ ನಿರ್ಧರಿಸುವ , ಗಂಡನ ಆಲೋಚನೆಗಳಿಗೆ ಬೆಂಬಲ ನೀಡುವ ಹೆಮ್ಮೆಯ ಶಾಸ್ತ್ರಿ ವಂಶದ ಕುಡಿ ನೀನಾಗಬೇಕು ಮಗಳೇ.ಹೆತ್ತವರ ಹೆಮ್ಮೆಯ ಪುತ್ರಿಯಾಗಿ,ಕಾಲಿಟ್ಟ ಮನೆಯ ಬೆಳಗುವ ಜ್ಯೋತಿಯಾಗಬೇಕು."


    ಅಪ್ಪನ ಮಾತುಗಳನ್ನು ಕೇಳುತ್ತಿದ್ದ ಮಗಳ ಕಣ್ಣುಗಳಲ್ಲಿ ಧಾರಾಕಾರವಾಗಿ ನೀರಿಳಿಯಲಾರಂಭಿಸಿತು.ಇದುವರೆಗೆ ತಾನು ಕಿಶನ್ ಜೊತೆಗೆ ಹೇಗಿರಬೇಕೆಂದು ಕಲ್ಪಿಸಿದ್ದಳೋ ಅದಕ್ಕಿಂತ ತೀರಾ ಭಿನ್ನವಾದ ಅಪ್ಪನ ನುಡಿಗಳು,ತಾನು ಕಿಶನ್ ಇಬ್ಬರದೇ ಪುಟ್ಟ ಪ್ರೀತಿಯ ಗೂಡು ಎಂದು ಲೆಕ್ಕಿಸಿದ್ದರೆ ಅಪ್ಪನದು ಇಡೀ ಸಂಸಾರವೇ ನಿನ್ನ  ಕಾಳಜಿ ಎನುವ ಮಾತು..ಇಷ್ಟೆಲ್ಲ ಜವಾಬ್ದಾರಿ ನನ್ನ ಮೇಲಿದೆಯಾ..?? ಎಂದು ಮೊದಲ ಬಾರಿಗೆ ಅನಿಸಿ ಹೆಗಲ ಮೇಲೆ ಹೊರೆಬಿದ್ದಂತಾಯಿತು ಮೈತ್ರಿಗೆ...


    "  ಸರಿ ಮಗಳೇ..ನನ್ನ ಮಾತುಗಳು ನಿನಗೆ ಅರ್ಥವಾಗಿವೆ ಅಂದುಕೊಳ್ಳುತ್ತೇನೆ.. ನಾನಿನ್ನು ಗಣೇಶ ಶರ್ಮರಿಗೆ ಕರೆಮಾಡಿ ಮುಂದಿನ ಮಾತುಕತೆ ನಡೆಸುತ್ತೇನೆ.."

ಹೂಂ.. ಅಪ್ಪಾ..ಎನ್ನಲೂ ಸ್ವರ ಹೊರಡಲಿಲ್ಲ ಮೈತ್ರಿಗೆ..

         ಗಣೇಶ ಶರ್ಮರಿಗೆ ಕರೆ ಮಾಡಿ ಮಾತನಾಡಿದರು ಭಾಸ್ಕರ ಶಾಸ್ತ್ರಿಗಳು.ಇಬ್ಬರೂ ಸಂಭಾಷಣೆ ನಡೆಸಿ ಮುಂದಿನ ಬುಧವಾರ ಅಧಿಕೃತವಾದ 'ಕೂಸು ನೋಡುವ ಶಾಸ್ತ್ರ' ಎಂದು ನಿರ್ಧರಿಸಿದರು.ನಾವು ಏಳೆಂಟು ಜನ ಬರುವುದಾಗಿ ಹೇಳಿದರು ಗಣೇಶ್ ಶರ್ಮ.
ಆಗಲಿ ಎಂದರು ಶಾಸ್ತ್ರಿಗಳು..


    ಈಗ ಮೈತ್ರಿಯ ಮನಸ್ಸು ಖುಷಿಯಿಂದ ಹಾರಾಡಲಿಲ್ಲ..ಇನ್ನೇನು ತನ್ನ ಕಿಶನ್ ಮದುವೆಗೆ ಅಪ್ಪನ ಒಪ್ಪಿಗೆ ಸಿಕ್ಕಿತಲ್ಲಾ ಎಂದು ಕಿಶನ್ ಗೆ ಸಂದೇಶ ರವಾನಿಸುವ ಮನಸ್ಸಾಗಲಿಲ್ಲ.ಬದಲಾಗಿ ಆರ್ದ್ರವಾಯಿತು. ವೈವಾಹಿಕ ಜೀವನ ಅಂದರೆ  ಹೆಣ್ಣಿಗೆ ಇಷ್ಟು ಕಠಿಣವಾದ ಸತ್ವ ಪರೀಕ್ಷೆಯೇ..? ಎಂದು ಮನಸ್ಸು ಎಡೆಬಿಡದೆ ರೋದಿಸುತ್ತಿತ್ತು. ರೂಮುಸೇರಿದ ಮೈತ್ರಿಗೆ ಇವತ್ತು ಕಾಲೇಜಿದೆ... ನಾನು ಹೊರಡಬೇಕು ...ಎನ್ನುವುದೂ ಮನಸ್ಸಿನಲ್ಲಿ ಸುಳಿಯಲಿಲ್ಲ.. ಏನು ಏಳು ಗಂಟೆಯಾದರೂ ಮಗಳು ತಿಂಡಿ ತಿನ್ನಲು ಬರಲೇಯಿಲ್ಲ ಎಂದು ನೋಡುತ್ತ ಬಂದ ಮಂಗಳಮ್ಮನಿಗೆ ಅತ್ತು ಅತ್ತು ಕಣ್ಣು ಮೂಗು ಕೆಂಪಗಾಗಿದ್ದ ಮುದ್ದುಮಗಳನ್ನು ಕಂಡು ಮನಸು ಕರಗಿತು.."ಮಗಳೇ...ಅಪ್ಪ ಮದುವೆಗೆ ಒಪ್ಪಿಗೆ ಕೊಟ್ಟರೂ ಹೀಗೆ ಅಳುತ್ತಾ ಕುಳಿತಿದ್ದೀಯಲ್ಲಾ ..ಬಾ ತಿಂಡಿ ತಿಂದು ಕಾಲೇಜಿಗೆ ಹೊರಡು.."

ಮೈತ್ರಿ ಇನ್ನಷ್ಟು ಬಿಕ್ಕಲಾರಂಭಿಸಿದಳು.."ಮಗಳೇ.. ನೀನು ಇಷ್ಟಪಟ್ಟ ಕಿಶನ್ ನೊಂದಿಗೆ ವಿವಾಹ ನೆರವೇರುತ್ತದೆ ಎಂದು ಖುಷಿಪಡಬೇಕಾದ ಹೊತ್ತಿನಲ್ಲಿ ಇದೆಲ್ಲಾ ಯಾಕೆ...? ಹೋದ ಮನೆಯಲ್ಲಿ ನಿನ್ನ ಜೊತೆ ಕಿಶನ್ ಕೂಡ ಇರುತ್ತಾನೆ.ನೀನೊಬ್ಬಳೇ ಅಲ್ಲ.. ನೀನು ಅವನನ್ನು ಮನಸಾರೆ ಇಷ್ಟಪಟ್ಟಿದ್ದಿ ಅಂದಮೇಲೆ ಅವನ ಕುಟುಂಬದ ಜೊತೆಗೆ ಬೆರೆಯುವುದು ನಿನಗೆ ಕಷ್ಟವಾಗಲಾರದು..ಅಪ್ಪ ಹಾಗೇನೇ..ಸಣ್ಣ ವಿಚಾರವನ್ನೂ ಬಹಳ ಗಂಭೀರವಾಗಿ ಹೇಳುವುದು..ಅದಕ್ಕೆ ನೀನೇನೂ ತಲೆಕೆಡಿಸಿಕೊಳ್ಳದೇ ಮುಖಕ್ಕೆ ನೀರು ಹಾಕಿ ತಿಂಡಿ ತಿನ್ನಲು ಬಾ.. "ಎಂದರು ಮಗಳನ್ನು ತನ್ನೆದೆಗೆ ಆನಿಸಿ ತಲೆ ಸವರುತ್ತಾ...

ಅಮ್ಮನ ಮಡಿಲಿನಲ್ಲಿ ತಲೆಯಿಟ್ಟಳು ಮೈತ್ರಿ..ಅಮ್ಮನ ಕೈಗಳು ಮಗಳ ಕಣ್ಣೀರನ್ನು ಒರೆಸಿ ಸಾಂತ್ವನ ಹೇಳಿದವು..ಅಮ್ಮನ ಸ್ಪರ್ಶದಿಂದ ಸಮಾಧಾನಗೊಂಡ ಮೈತ್ರಿ ತಿಂಡಿತಿಂದು ಕಾಲೇಜಿಗೆ ಹೊರಟಳು..ಅಕ್ಕನ ಅಳುವನ್ನು ಕಂಡ ಮಹೇಶನಿಗೆ ಕರುಣೆಯುಕ್ಕಿತ್ತು.ಅಕ್ಕ ಹೊರಡುತ್ತಿದ್ದಂತೆ ಬೈಕ್ ಸ್ಟಾರ್ಟ್ ಮಾಡಿ "ಅಕ್ಕಾ ಹತ್ತು" ಎಂದ..
ಅಕ್ಕನನ್ನು ಬಸ್ ಸ್ಟ್ಯಾಂಡ್ ಗೆ ಬಿಟ್ಟ..

" ಅಕ್ಕಾ ನಂಗೆ ನಿನ್ನನ್ನು ಅರ್ಥ ಮಾಡಿಕೊಳ್ಳೋಕೇ ಆಗಲ್ಲ ನೋಡು.."

"ನೀನೂ ತಲೆ ತಿನ್ನೋಕೆ ಶುರುಮಾಡಿದ್ಯಾ..
"

"ಅಲ್ಲಕ್ಕಾ..ನಾನೇನೋ ಅಪ್ಪ ಮದುವೆಗೆ ಒಪ್ಪಿದ್ರೆ ನಿಂಗೆ ಸಂತೋಷ ಆಗುತ್ತೆ ಅಂದುಕೊಂಡಿದ್ರೆ...
ನೀನೂ ಸರಿ ಉಲ್ಟಾ ಆಡ್ತಿದೀಯಲ್ಲಾ.."

"ಇದೆಲ್ಲಾ ನಿಂಗೆ ಬೇಕಾ...?"

"ಅಲ್ಲಕ್ಕಾ...ಸಂತೋಷ ಜಾಸ್ತಿ ಆದಾಗಲೂ ಕಣ್ಣೀರು ಬರುತ್ತಂತಲ್ಲಾ...ಅದಾ ನಿನ್ನ ಕಥೆ..."

"ಅದು ಆನಂದಭಾಷ್ಪ..ನನ್ನದು ಅಳುಭಾಷ್ಪ..."

"ನಾನು ನಿನ್ನ ಜಾಗದಲ್ಲಿ ಇರುತ್ತಿದ್ದರೆ ಮಾತ್ರ ಇವತ್ತು ಅಳ್ತಿರಲಿಲ್ಲ...ನಗ್ತಿದ್ದೆ..."

"ನಿಂಗೇನು ಗೊತ್ತು ಹೆಣ್ಣುಮಕ್ಕಳ ನೋವು...ಹುಟ್ಟಿದ ಮನೆಯವರನ್ನು ಬಿಟ್ಟು ಮೆಟ್ಟಿದ ಮನೆಯವರನ್ನು ಬಾಳಿನುದ್ದಕ್ಕೂ ತನ್ನವರೆಂದು ಬಗೆದು ಜೀವನ ನಡೆಸಬೇಕಿನ್ನು ಎನ್ನುವ ನೋವು, ಜವಾಬ್ದಾರಿ, ಅನಿವಾರ್ಯತೆ.."

"ಓಹೋ..ಅದಕ್ಕೆ ಭವಿಷ್ಯವನ್ನು ನೆನೆದು ... ಕಣ್ಣೀರಧಾರೆ.."

"ನೀನು ತರಲೆ ಮಾಡಬೇಡ.. ನಿಂಗೆ ಮದುವೆ ಆದಾಗ ನಿಂಗೂ ಅರ್ಥ ಆಗುತ್ತೆ ..."

"ಹ್ಹ ಹ್ಹ ಹ್ಹಾ.. ಹೌದು ಅಕ್ಕಾ.. ಇಶಾಗೆ ಫೋನ್ ಮಾಡಿ ಅಪ್ಪ ಒಪ್ಪಿದ್ದಾರೆ ಅಂತ ಅನೌನ್ಸ್ ಮಾಡಿ ಒಂದು ಚುಟುಕು ಪ್ರೇಮಸಂದೇಶ ರವಾನಿಸೋದು ಬೇಡ್ವಾ..."

"ಅದೆಲ್ಲ.. ನಿಂಗೆ ಹೇಗೆ ಗೊತ್ತು..? ನೀನು ನನಗೆ ಬಂದ ಸಂದೇಶ ಕದ್ದು ಓದುತ್ತೀಯಾ.."

"ಇಲ್ಲಪ್ಪಾ..ನಾನಂಥವನಲ್ಲ..."

"...ನಂಗ್ಯಾಕೋ ಅನುಮಾನ ಬರ್ತಾ ಇದೆ...ಆದ್ರೂ ನಿನ್ನಲ್ಲೇ ಕೇಳ್ತೀನಿ..ನೀನೇ ನಂಗೊಂದು ಚುಟುಕು ಹೇಳ್ಕೊಡು.."

"ನಾನಾ...."ತಲೆಕೆರೆದುಕೊಂಡ ಮಹೇಶ್..

ಕೈಗೆಟುಕದ ಬಾನ ತಾರೆ
ನೀನೆಂದೆಣಿಸಿದ್ದ ಈ ನೀರೆ...
ನಾವೊಂದಾಗುವುದು ಖರೆ
ಎಂದರಿತಾಗ ಸುರಿಸಿದ್ದು ಕಣ್ಣೀರೇ...

"ಹೇಗಿದೆ ಅಕ್ಕಾ...?"

"ಸೂಪರ್ ತಮ್ಮಾ..ಇದನ್ನೇ ಕಳುಹಿಸುವೆ ಇಂದು..."

"ಹೂಂ..ಆಲ್ ದ ಬೆಸ್ಟ್ ಅಕ್ಕಾ.." ಎಂದಾಗ ಬಸ್ ಹಾರ್ನ್ ಮಾಡುತ್ತಾ ಬಂದಿತ್ತು.ತಮ್ಮನಿಗೆ ಬಾಯ್ ಮಾಡಿ ಬಸ್ ಹತ್ತಿ ಕುಳಿತು ಸಂದೇಶ ರವಾನಿಸಿದಳು ಮೈತ್ರಿ.

ಕೂಡಲೇ ಓದಿದ ಕಿಶನ್..

"ಮುದ್ಗೊಂಬೆ..

ಕಣ್ಣೀರೇಕೆ...
ಅಪ್ಪನೊಪ್ಪಿದ ಮ್ಯಾಕೆ...
ಕಂಬನಿ ಪನ್ನೀರಾಗಬೇಕು
ಹುಸಿಮುನಿಸು ಹೂಮುತ್ತಾಗಬೇಕು.."


ಎಂದುತ್ತರಿಸಿದ ಕಿಶನ್ ..ಅವನ ಸಂದೇಶವನ್ನೋದಿದ ಮೈತ್ರಿಗೆ ಅಪ್ಪನ ಜವಾಬ್ದಾರಿಯ ಮಾತಿನಿಂದ ಅಮ್ಮನ ಹೆಂಗರುಳಿನ ನುಡಿಯೇ ಆಪ್ತವಾಯಿತು.ಕಿಶನ್ ನನ್ನನ್ನು ಅರ್ಥಮಾಡಿಕೊಂಡಿದ್ದಾನೆ ಅಂದಮೇಲೆ ಅವನ ಕುಟುಂಬದವರೊಡನೆ ಹೊಂದಾಣಿಕೆ ಕಷ್ಟವೆನಿಸದು..

"ಏನು ಏಕೆ ಚಾಟ್ ಮಾಡಲ್ಲ...?.. ಮುದ್ಗೊಂಬೆ"

"ನಿನ್ನ ಚುಟುಕು ಓದುತ್ತಾ ಕಳೆದು ಹೋದೆ.."

"ಅದೆಲ್ಲ ನಾನು ನಂಬಲ್ಲ..ಓದಿ ಕಳೆದು ಹೋದೆಯಾ ಅಲ್ಲಾ..ನಿನ್ನೆಯ ನೆನಪಿನಲಿ ಮುಳುಗಿದೆಯಾ..."

"ಹೂಂ..ಸೊಗಸಾದ ನೆನಪುಗಳು..ಮತ್ತೆ ಮತ್ತೆ ಮೆಲುಕು ಹಾಕೋಣ ಅಂತ ಅನಿಸುತ್ತಲೇ ಇರುತ್ತೆ.."

"ನಿನ್ನೆಯ ಸರ್ಪ್ರೈಸ್ ಹೇಗಿತ್ತು..?"

"ನಾನಂತೂ ನನ್ನ ಲೈಫಲ್ಲೇ ಮರೆಯೋಕಾಗದಂತಹ ಸರ್ಪ್ರೈಸ್ ಕೊಟ್ಟಿದ್ದೀರಾ.."

"ಇವತ್ತು ನೀನು ನಂಗೆ ನನ್ನ ಲೈಫ್ ಸೆಟ್ಲಾಗುತ್ತಿದೆ ಅನ್ನುವ ಸಿಹಿಸುದ್ದಿ ಹೊತ್ತು ತಂದಿದ್ದೀಯಾ.. ವಾವ್..ನಂಗಿನ್ನೇನು ಬೇಕು.."

"ಹಾಂ.. ನಾನು ನಿನ್ನನ್ನು ಮಾತ್ರವಲ್ಲ ಇಡೀ ಕುಟುಂಬವನ್ನು ಜೋಪಾನವಾಗಿ ನೋಡ್ಕೋಬೇಕು..ಎಲ್ಲರ ಬೇಕು ಬೇಡಗಳನ್ನು ಅರಿತು ನಡೀಬೇಕು.."

"ಪರವಾಗಿಲ್ವೇ.. ಮೇಷ್ಟ್ರು ಮಗಳಿಗೆ ಚೆನ್ನಾಗಿ ಪಾಠಮಾಡಿದ್ದಾರೆ...ಹಾಂ... ನೋಟ್ಸ್ ಬರಿಯೋದನ್ನು ಮರೀಬೇಡ .."

"ಸಾಕು ತಮಾಷೆ... ನಾನು ನಿಮ್ಗೆ ಹೇಳಿದ್ದು...ಮುದ್ಗೊಂಬೆ ಮುದ್ಗೊಂಬೆ ಅಂತ ನನ್ನ ಬೆನ್ನ ಹಿಂದೇನೇ ಸುತ್ತೋದು ಬೇಡ.. ನಾನು ಅಡಿಗೆಯಿಂದ ಆರೋಗ್ಯದವರೆಗೆ ಒಡವೆಯಿಂದ ವ್ಯವಹಾರದವರೆಗೆ ಎಲ್ಲವನ್ನೂ ನಿಭಾಯಿಸುವುದನ್ನು ಕಲಿಯಬೇಕಿದೆ.."


"ಸ್ವೀಟಿ..ಭಾರೀ ಸೀರಿಯಸ್ಸಾಗಿ ನೋಟ್ ಮಾಡ್ಕೊಳ್ಳುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.. ಅದರ ಜೊತೆಗೆ ಸ್ವೀಟ್ ಡ್ರೀಮ್ಸ್ ಕೂಡ ಇರ್ಲಿ ಆಯ್ತಾ..ಬಾಯ್...
ಬಾಯ್.."


                   *****


              ಗಣೇಶ್ ಶರ್ಮ ಮಮತಾ ಇಬ್ಬರೂ ಖುಷಿಯಿಂದ ಮಗ ಮಗಳಂದಿರಿಗೆ ಕರೆ ಮಾಡಿ ತಿಳಿಸಿದರು.ತಂಗಿಯರು ತಾವು ಕೂಸುನೋಡುವ ಶಾಸ್ತ್ರಕ್ಕೆ ಬರುವುದಾಗಿ ತಿಳಿಸಿದರು.ಕಿಶನ್ ಗೆ ಅಪ್ಪ ಒಂದೆರಡು ದಿನ ರಜೆ ಹಾಕಿ ಬರಲು ಹೇಳಿದರು...ಸರಿ ಎಂದು ಒಪ್ಪಿಕೊಂಡ ಕಿಶನ್..

                     *****

    ಬ್ರೋಕರ್ ಶೇಷಣ್ಣ ಬೆಂಗಳೂರು ತಲುಪಿ ಸೌಜನ್ಯಳ ಮನೆಯ ವಿಳಾಸದ ಚೀಟಿಯನ್ನು ಆಟೋ ಚಾಲಕನಿಗೆ ತೋರಿಸಿ "ಅಲ್ಲಿಗೆ ಎಷ್ಟು ದುಡ್ಡಾಗುತ್ತೆ.?". ಎಂದು ಕೇಳಿದನು..

"ಸುಮಾರು ಇನ್ನೂರೈವತ್ತು ರೂಪಾಯಿ.."ಎಂದಾಗ

" ಹೂಂ..ಸರಿ ನಡಿ.. "ಎಂದು ಆಟೋ ಏರಿದ..ಈ ದುಡ್ಡನ್ನು ಸೌಜನ್ಯಳ ಅಪ್ಪ ನರಸಿಂಹ ರಾಯರಿಂದ ಪಡೆದುಕೊಳ್ಳಬೇಕು ಎಂದು ಲೆಕ್ಕಾಚಾರ ಹಾಕಿದ..

ಮುಂದುವರಿಯುವುದು..


✍️... ಅನಿತಾ ಜಿ.ಕೆ.ಭಟ್.
16-02-2020.






2 comments: