ಬ್ರೋಕರ್ ಶೇಷಣ್ಣ ಬೆಂಗಳೂರು ತಲುಪಿ ಸೌಜನ್ಯಳ ಮನೆಯ ವಿಳಾಸದ ಚೀಟಿಯನ್ನು ಆಟೋ ಚಾಲಕನಿಗೆ ತೋರಿಸಿ "ಅಲ್ಲಿಗೆ ಎಷ್ಟು ದುಡ್ಡಾಗುತ್ತೆ.?". ಎಂದು ಕೇಳಿದನು..
"ಸುಮಾರು ಇನ್ನೂರೈವತ್ತು ರೂಪಾಯಿ.."ಎಂದಾಗ
" ಹೂಂ..ಸರಿ ನಡಿ.. "ಎಂದು ಆಟೋ ಏರಿದ..ಈ ದುಡ್ಡನ್ನು ಸೌಜನ್ಯಳ ಅಪ್ಪ ನರಸಿಂಹ ರಾಯರಿಂದ ಪಡೆದುಕೊಳ್ಳಬೇಕು ಎಂದು ಲೆಕ್ಕಾಚಾರ ಹಾಕಿದ..
"ಇದೇ ರೋಡ್.. ನೀವು ತೋರಿಸಿದ ವಿಳಾಸದಲ್ಲಿರುವುದು... ಇಲ್ಲಿ ಇಳಿದು ಹುಡುಕಿ"ಎಂದ ಆಟೋ ಚಾಲಕನಿಗೆ ಶೇಷಣ್ಣ"ಹಾಗೊಂದು ಮಾತು ಮಾತ್ರ ಹೇಳಬೇಡ ಕಣೋ..ನಿನ್ನ ದಮ್ಮಯ್ಯ ಅಂತೀನಿ..ಆ ಮನೆಯ ಮುಂದೆ ನಿಲ್ಲಿಸು"
"ಯಾರ್ರೀ.. ಹುಡುಕೋದು..ನೀವೇ ಹುಡುಕ್ಕೊಳ್ಳಿ.."
"ಪ್ಲೀಸ್...ಈ ಮುದುಕನನ್ನು ನಡುರಸ್ತೆಯಲ್ಲಿ ಬಿಟ್ಟು ಹೋಗಬೇಡ ಕಣೋ.."ಎಂದು ಗೋಗರೆದರು..
ರಿಕ್ಷಾ ಚಾಲಕ ಅವರ ಕೈಯಲ್ಲಿದ್ದ ವಿಳಾಸದ ಚೀಟಿಯನ್ನು ಪಡೆದು ಅಲ್ಲಿ ಪಕ್ಕದಲ್ಲಿ ನಿಲ್ಲಿಸಿದ್ದ ರಿಕ್ಷಾದ ಚಾಲಕನಲ್ಲಿ ವಿಚಾರಿಸಿದ.
"ಇದೇ ರಸ್ತೆಯಲ್ಲಿ ಮುಂದೆ ಎಡಕ್ಕೆ ತಿರುಗಿ ಸ್ವಲ್ಪ ದೂರ ಪ್ರಯಾಣಿಸಿ ಮತ್ತೆ ಬಲಕ್ಕೆ ತಿರುಗಿದರೆ ಆ ರಸ್ತೆಯ ಕೊನೆಯಲ್ಲಿರುವ ಮನೆ..."ಎಂಬ ಉತ್ತರ ದೊರಕಿತು..
ಬ್ರೋಕರ್ ಶೇಷಣ್ಣನನ್ನು ಅಲ್ಲಿ ಇಳಿಸಿ "ಮುನ್ನೂರು ರೂಪಾಯಿ ಕೊಡಿ"ಅಂದ..
"ಆಗ ಇನ್ನೂರೈವತ್ತು ರೂಪಾಯಿ ಅಂದೆ"
"ಮೈನ್ ರೋಡ್ ಗೆ ಅಷ್ಟು..ಇಲ್ಲಿ ಒಳಗಿನ ರೋಡ್ ವರೆಗೆ ಬಂದಿದ್ದಕ್ಕೆ ಐವತ್ತು ರೂಪಾಯಿ ಹೆಚ್ಚು ಆಗುತ್ತದೆ"
ಮನೆಬಾಗಿಲಿನವರೆಗೆ ಕರೆದುಕೊಂಡು ಬಂದದ್ದೇ ಹೆಚ್ಚು ಎಂದು ಮರುಮಾತನಾಡದೆ ಮುನ್ನೂರು ರೂಪಾಯಿ ಕೊಟ್ಟು ಗೇಟು ತೆರೆದರು..
ಗೂಡಿನೊಳಗಿದ್ದ ನಾಯಿ ಬೌ ಬೌ ಎಂದು ಬೊಗಳಲಾರಂಭಿಸಿತು.ಒಳಗಿಂದಲೇ ಒಬ್ಬಾಕೆ"ಯಾರು..??"ಎಂದು ಕೇಳಿದರು..
"ನಾನು ಬ್ರೋಕರ್ ಶೇಷಣ್ಣ.. ನರಸಿಂಹ ರಾಯರ ದೂರದ ಸಂಬಂಧಿ.."ಎಂದಾಗ
"ಅವರು ವಾಕಿಂಗ್ ಹೋಗಿದ್ದಾರೆ.ಬರುವಾಗ ಎಂಟು ಗಂಟೆ ಆಗಬಹುದು."ಎಂದು ಉತ್ತರಿಸಿ ಒಳನಡೆದಳು.ಅರೆ..ಮನೆ ಯಜಮಾನ ಇಲ್ಲದಿದ್ದರೇನಂತೆ ಒಳಗೆ ಬರಲು ಹೇಳಿ ಬಾಯಾರಿಕೆಕೊಟ್ಟು ಯೋಗಕ್ಷೇಮ ವಿಚಾರಿಸಿ ತಿಂಡಿ ಕಾಫಿ ಕೊಡುವ ಸಂಪ್ರದಾಯವಿಲ್ಲವೇ...?ಎಂದುಕೊಂಡು ವರಾಂಡದಲ್ಲಿದ್ದ ಕುರ್ಚಿಯಲ್ಲಿ ಕುಳಿತ ಶೇಷಣ್ಣನಿಗೆ ಹೊಟ್ಟೆ ತಾಳ ಹಾಕುತ್ತಿತ್ತು.ಆಗಾಗ ಗಂಟೆ ನೋಡುತ್ತಿದ್ದ ಶೇಷಣ್ಣನಿಗೆ ವಾಶ್ ರೂಂ ಗೆ ಹೋಗಬೇಕಾದ ಅನಿವಾರ್ಯತೆ.ಮನೆಯಾಕೆ ಬಾಗಿಲು ತೆರೆಯುವ ಲಕ್ಷಣವೂ ಕಾಣುತ್ತಿಲ್ಲ.. ತಡೆಯಲಾರದೆ ಕರೆಗಂಟೆ ಒತ್ತಿಯೇಬಿಟ್ಟ.ಒಳಗಿನಿಂದ ಬಂದಾಕೆ "ಏನು..?"
"ಅರ್ಜೆಂಟ್ ವಾಶ್ ರೂಂ ಗೆ ಹೋಗಬೇಕಿತ್ತು" ಎಂದು ತನ್ನ ಮೂವತ್ತೆರಡು ಅಲ್ಲಲ್ಲ ಈಗ ಉಳಿದಿದ್ದ ಇಪ್ಪತ್ತೆರಡು ಹಲ್ಲುಗಳನ್ನು ಕಿಸಿದನು.
"ಅಲ್ಲೇ ಇದೆ ನೋಡಿ.."ಎಂದು ಮನೆಯ ಹಿಂದೆ ಕೈತೋರಿದಳು.. ಅಂತೂ ಒಂದು ಸಮಸ್ಯೆ ಪರಿಹಾರವಾಗಿ ಸಮಾಧಾನವಾಯಿತು ಶೇಷಣ್ಣನಿಗೆ.
ಎಂಟು ಗಂಟೆ ಕಳೆದು ಐದು ನಿಮಿಷ ಆಯಿತು.ನಾಯಿ ಕುಂಯ್ ಕುಂಯ್ ಎಂದು ಕೂಗತೊಡಗಿತು.ಗೇಟುತೆರೆದು ನರಸಿಂಹ ರಾಯರು ಮಡದಿಯೊಂದಿಗೆ ಒಳಬಂದವರು.."ಹೋ..ಶೇಷಣ್ಣ.. ಬಂದು ಬಹಳ ಹೊತ್ತಾಯಿತೋ ಹೇಗೇ...? "
ಉಗುಳು ನುಂಗಿಕೊಂಡು.."ಹಾಂ.. ಸ್ವಲ್ಪ ಹೊತ್ತಾಯಿತು.. ಅಷ್ಟೇ.."ಎಂದು ನಸುನಕ್ಕ.
ಮನೆಯೊಳಗೆ ಕರೆದುಕೊಂಡು ಹೋದರು.ಮನೆಯನ್ನೊಮ್ಮೆ ದಿಟ್ಟಿಸಿ ನರಸಿಂಹ ಭಾರೀ ಗಟ್ಟಿ ಕುಳ ಆಗಿದ್ದಾನೆ ಪೇಟೆಗೆ ಬಂದು.. ಎಂದು ಅಂದಾಜು ಮಾಡಿದರು."ಫ್ರೆಶ್ ಆಗಿ ಬನ್ನಿ ಶೇಷಣ್ಣ "ಎಂದು ನರಸಿಂಹ ರಾಯರು ಮನೆಗೆಲಸದ ಸಹಾಯಕಿ ಸುನಿತಾಳನ್ನು ಕರೆದು ಟವೆಲ್ ,ಸೋಪ್ ,ಪೇಸ್ಟ್ ಎಲ್ಲಾ ಕೊಡಲು ಹೇಳಿದರು.ಎಲ್ಲದಕ್ಕೂ ಸಹಾಯಕರನ್ನು ಇಟ್ಟುಕೊಂಡಿದ್ದಾನೆ ಎಂದರೆ ಮದುವೆ ಸಂಬಂಧ ಗಟ್ಟಿಮಾಡಲೇಬೇಕು , ಐವತ್ತು ಸಾವಿರ ಪೀಕಿಸಲೇಬೇಕು ಎಂಬ ಯೋಚನೆ ತಲೆಯೊಳಗೆ ಬಲವಾಯಿತು.
ತಿಂಡಿಗೆ ನರಸಿಂಹ ರಾಯರ ಜೊತೆಯಲ್ಲಿ ಟೇಬಲ್ ಮುಂದೆ ಕುಳಿತ.ಹತ್ತಿಪ್ಪತ್ತು ಸಣ್ಣ ಗಾತ್ರದ ಇಡ್ಲಿಗಳಿದ್ದವು.ಸ್ವಲ್ಪ ಚಟ್ನಿ, ಸಾಂಬಾರ್, ಮೊಸರು , ಉಪ್ಪಿನಕಾಯಿ ಇಟ್ಟಿದ್ದರು.ಸುನಿತಾ ಮೂವರಿಗೆ ಚಟ್ನಿ ಎರಡು ಇಡ್ಲಿ ಬಡಿಸಿದಳು.ನರಸಿಂಹ,ಅವನ ಮಡದಿ ರೇಖಾ ಶೇಷಣ್ಣ ನೊಂದಿಗೆ ಹರಟುತ್ತಾ .. ಮತ್ತೆರಡು ಇಡ್ಲಿ
ಬಡಿಸಿಕೊಂಡು ತಿಂದು ಎದ್ದರು..ಶೇಷಣ್ಣನಿಗೆ ನಾಲ್ಕು ಪುಟ್ಟ ಪುಟ್ಟ ಇಡ್ಲಿಗಳು ಎಲ್ಲಿಗೆ ಸಾಕು??
ಕಡಿಮೆ ಅಂದರೂ ಅಂತಹ ಹತ್ತಿಡ್ಲಿ ತಿಂದರೆ ಬೆಳಗಿನ ಉಪಹಾರ ಸಮಾಪ್ತಿಯಾದೀತು.. ಆದರೆ ಇವರೆಲ್ಲ ಎದ್ದ ಮೇಲೆ ತಾನೊಬ್ಬನೇ ತಿನ್ನುವುದು ಸರಿಕಾಣದೇ ತಾನೂ ನಾಲ್ಕು ಇಡ್ಲಿಗೆ ಉಪಾಹಾರ ಮುಗಿಸಿ ಎದ್ದನು.
"ಶೇಷಣ್ಣ..ಈಗ ಹದಿನೈದು ನಿಮಿಷದಲ್ಲಿ ಹೇಳು.. ನೀನು ಬಂದ ವಿಷಯ.. ಆಮೇಲೆ ನಮಗೆ ಆಫೀಸಿಗೆ ಹೊರಡಬೇಕು."ಎಂದರು ನರಸಿಂಹ ರಾಯರು.
ಶೇಷಣ್ಣ ತಾನು ಮೊದಲೇ ತಯಾರುಮಾಡಿದ್ದ ಸುಂದರ ಶೈಲಿಯಲ್ಲಿ ಬಾರಂತಡ್ಕದ ಬಂಗಾರಣ್ಣ,ಅವನ ಮಗನನ್ನು ಹೊಗಳಿ ಅಟ್ಟಕ್ಕೇರಿಸಿದನು.ಹೇಳುವುದನ್ನು ಕೇಳಿದ ರೇಖಾ "ನನಗೆ ಅವರನ್ನು ಚಿಕ್ಕಂದಿನಲ್ಲಿ ನೋಡಿ ಗೊತ್ತು..ದೂರದ ಸಂಬಂಧಿ.."ಎಂದರು..
"ಹಾಗಾದರೆ ಸಂಬಂಧ ಮುಂದುವರಿಸಲು ಇನ್ನೂ ಸುಲಭ"ಎಂದು ನಕ್ಕವನ ಮನದೊಳಗೆ ಸ್ವಲ್ಪ ಸಂಶಯ ಮೂಡಿತು.
"ಸರಿ..ಶೇಷಣ್ಣ.. ನೀನು ಹೇಳಿದ್ದೆಲ್ಲ ನೆನಪಿದೆ..ಸೌಜನ್ಯಳನ್ನೂ ಕೇಳಿ ವಿಚಾರ ಮಾಡುತ್ತೇವೆ.. ನಮಗೆ ಆಫೀಸಿಗೆ ಹೊರಡಬೇಕು.. ನೀವು.." ಎಂದು ನರಸಿಂಹ ರಾಯರು ಹೇಳಿದಾಗ..
"ನಂಗೆ ಸ್ವಲ್ಪ..."
"ಏನು ಶೇಷಣ್ಣ.."
"ಅಲ್ಲ..ಆಟೋದವ ತುಂಬಾ ದುಡ್ಡು ತೆಗೆದುಕೊಂಡ.. ಮತ್ತೆ ನಮ್ಮೂರಿಂದ ಇಲ್ಲಿವರೆಗೆ ಬರುವುದೆಂದರೆ ಸುಮ್ಮನೇನಾ..."
ಕಿಸೆಯಿಂದ ಒಂದುಸಾವಿರ ರೂಪಾಯಿ ತೆಗೆದು ಕೈಗಿತ್ತರು.
ಶೇಷಣ್ಣ : ಸೌಜನ್ಯ ಎಲ್ಲಿ ಕಾಣಿಸ್ತಾಯಿಲ್ಲ..?
ನರಸಿಂಹ: ಕಾಲೇಜಿಗೆ ಹೋಗಿದ್ದಾಳೆ..
ಅಂತೂ ತಾನಿಲ್ಲಿಂದ ಈಗಲೇ ಜಾಗ ಖಾಲಿ ಮಾಡಬೇಕಾಗುತ್ತದೆ ಎಂದರಿತು ತುಸು ಬೇಸರದಿಂದಲೇ ಹೊರಡಲನುವಾದ ಶೇಷಣ್ಣ.
ರೇಖಾ "ರೀ..ಸ್ವಲ್ಪ ಬನ್ನಿ ಇಲ್ಲಿ "ಎಂದು ಪತಿಯನ್ನು ಕರೆದಳು.ಇಬ್ಬರೂ ರೂಮಿನೊಳಗೆ ಮಾತನಾಡಿಕೊಂಡರು.
ಹೊರಗೆ ಬಂದು"ಶೇಷಣ್ಣ ಮುಂದಿನ ಭಾನುವಾರದೊಳಗೆ ನಮ್ಮ ಅಭಿಪ್ರಾಯ ತಿಳಿಸುತ್ತೇವೆ"ಎಂದ ನರಸಿಂಹ ರಾಯರು ಮತ್ತೊಂದು ಸಾವಿರ ರೂಪಾಯಿ ಕೊಟ್ಟರು.
ಶೇಷಣ್ಣ ಹೊರಟರು.
ಅವರು ಗೇಟಿನಿಂದ ಹೊರಗೆ ಹೋಗುತ್ತಿದ್ದಂತೆ ಸೌಜನ್ಯ ಮಾಳಿಗೆಯಿಂದ ದಡದಡನೆ ಇಳಿದು ಬಂದಳು."ಅಪ್ಪಾ.. ಅಮ್ಮಾ... ನಿಮ್ಮ ಮಾತುಗಳನ್ನು ಅಲ್ಲಿಂದಲೇ ಕೇಳಿಸಿಕೊಂಡೆ..ನನಗೆ ಆ ಹಳ್ಳಿ ಹುಡುಗ ಬೇಡವೇ ಬೇಡ.ನಾನು ಓದಿದೀನಿ.. ಉದ್ಯೋಗ ಮಾಡಿ ನನ್ನ ಕಾಲ ಮೇಲೆ ನಿಂತುಕೊಳ್ತೀನಿ..ಅದು ಬಿಟ್ಟು..ಆ ಹಳ್ಳೀಲಿ...ಅಜ್ಜನ ಮನೆ ಇರುವ ಹಳ್ಳೀಲಿ..ಥೂ..ನಂಗಂತೂ ಈ ಸಂಬಂಧ ಬೇಡವೇ ಬೇಡ.. ನಾನು ನಿಮ್ಗೆ ಭಾರವಾಗಿದೀನಾ ಹೇಳಿ...?"
"ನೋಡಮ್ಮ..ಬಾರಂತಡ್ಕ ನನಗೆ ಮುಂಚಿನಿಂದಲೂ ಗೊತ್ತು..ಶ್ರೀಮಂತರ ಮನೆ..ಕೈಕಾಲಿಗೆ ಆಳುಕಾಳುಗಳು..ಪೇಟೆಯಂತೆ ಪ್ಯಾಕೆಟ್ ಹಾಲು ಮೆಚ್ಚದಿದ್ದರೂ ಕುಡಿಯಬೇಕಿಲ್ಲ ..ಆಳು ದನದ ಹಾಲು ಕರೆದು ತಂದು ಒಳಗೆ ಕೊಡುತ್ತಾನೆ.., ಅಂಗಳದ ಅಂಚಿನಲ್ಲಿ ಬೆಳೆಸುವ ಸಾವಯವ ತರಕಾರಿ ಕೊಯ್ಯಲೂ ಸಾಕಲೂ ಆಳು..ಬೇಯಿಸುವುದಷ್ಟೇ ಕೆಲಸ...ಹಳ್ಳಿಯಲ್ಲಿದ್ದರೂ ಹೈ ಫೈ ಲೈಫು ಮಗಳೇ..ನನ್ನಂತೆ ನೀನು ಹೊರಗೆ ದುಡಿಯಬೇಕಾಗಿಲ್ಲ.. ಯಾವುದಕ್ಕೂ ಸಂಜೆ ಮಾತನಾಡೋಣ.."ಎಂದು ಹೇಳುತ್ತಾ ರೇಖಾ ಆಫೀಸಿಗೆ ಹೊರಟರು.
ಸೌಜನ್ಯ ಮರುಮಾತನಾಡದೆ ರೂಮ್ ಸೇರಿದಳು.
ಫೇಸ್ಬುಕ್ ಓಪನ್ ಮಾಡಿ ಕೇಶವ್ ಬಾರಂತಡ್ಕ ಎಂದು ಸರ್ಚ್ ಕೊಟ್ಟಾಗ ಕಂಡ ಯುವಕನ ಫೋಟೋ ನೋಡಿ .ಇವನೇ ಇರಬೇಕು..ಹಳ್ಳಿಯಲ್ಲಿದ್ದರೂ..ಸ್ಟೈಲಿಶ್ ಯಂಗ್ ಮ್ಯಾನ್..ಅವನ ಫೊಟೋ ಗಳನ್ನು ನೋಡುತ್ತಾ ಸಾಗಿದವಳು ಅವನಿಗೆ ಮನಸೋತು ಬಿಟ್ಟಳು.
*****
ಶೇಷಣ್ಣ ಸ್ವಲ್ಪ ದೂರ ನಡೆದು ಬಸ್ ಹಿಡಿದು ಮೆಜೆಸ್ಟಿಕ್ ಗೆ ಬಂದ.ಮೊದಲು ಉಡುಪಿ ಹೋಟೆಲ್ ಬೋರ್ಡ್ ಎಲ್ಲಿ ಕಾಣಿಸುತ್ತದೆ ಎಂದು ಹುಡುಕಿ .. ಗಡದ್ದಾಗಿ ಟಿಫಿನ್ ಮಾಡಿ ಅಬ್ಬಾ.. ಈಗ ಹೊಟ್ಟೆ ತುಂಬಿತು..ಈ ಪೇಟೆಯಲ್ಲಿದ್ದವರು ಡಯಟ್ ಎಂದು ನಾಲ್ಕು ಪುಟ್ಟ ಇಡ್ಲಿ ತಿನ್ನುವುದು.. ನನಗೆ ಅದು ಎಲ್ಲಿಗೆ ಸಾಕು..ಪೇಟೆಯ ಲೈಫೇ ಹೀಗೆ.. ಉಫ್...!! ಎಂದುಕೊಂಡು ಬಸ್ ಸ್ಟ್ಯಾಂಡ್ ಗೆ ತೆರಳಿದ.
ಶೇಷಣ್ಣ ಊರಿಗೆ ತೆರಳಲು ಮೆಜೆಸ್ಟಿಕ್ ನಿಂದ ಬಸ್ ಹತ್ತಿದ.. ಮಡದಿಗೆ ಕರೆ ಮಾಡಿ..."ಸುಬ್ಬೀ.. ರಾತ್ರಿಯೇ ತಲುಪುವೆ "ಎಂದ..
"ಹೌದಾ.. ಹಾಗಾದರೆ ಹೋದ ಕೆಲಸ ಏನಾಯ್ತು..?"
"ಕೆಲವು ದಿನಗಳ ಸಮಯ ತೆಗೆದುಕೊಂಡಿದ್ದಾರೆ."
"ಸರಿ ಸರಿ..ನಿಮಗೂ ಕೂಡ ಸೇರಿಸಿ ಅನ್ನಕ್ಕೆ ಅಕ್ಕಿ ಹಾಕುವೆ.."ಎಂದು ಫೋನಿಟ್ಟಳು ಸುಬ್ಬಿ.
******
ಮೈತ್ರಿ ಒಳ್ಳೆಯ ಟೈಲರ್ ನಲ್ಲಿ ಸೀರೆಯ ರವಿಕೆ ಹೊಲಿಯಲು ಕೊಡಬೇಕು ಎಂದು ಪರಿಚಯದವರಲ್ಲಿ ವಿಚಾರಿಸಿಕೊಂಡಳು.ನಗರದಲ್ಲಿರುವ "ಲೇಡೀಸ್ ಫ್ಯಾಷನ್ ಸ್ಟಿಚ್" ಎಂಬಲ್ಲಿ ಒಳ್ಳೆ ಡಿಸೈನ್ ಮಾಡಿ ಹೊಲಿಯುತ್ತಾರೆ ಎಂದು ತಿಳಿದು ಗೆಳತಿಯೊಂದಿಗೆ ಕಾಲೇಜಿನಿಂದಲೇ ತೆರಳಿ ಕೊಟ್ಟು ಬಂದಳು.
ಬ್ಲೌಸ್ ಡಿಸೈನ್ ನ ಫೊಟೋ ಕಿಶನ್ ಗೆ ಕಳುಹಿಸಿದ್ದಳು. ಅದನ್ನು ನೋಡಿದ ಕಿಶನ್ "ಅದೇನೇ ಮುದ್ಗೊಂಬೆ...ಡಿಸೈನ್..ಬರೀ ಬೆನ್ನೇ ಕಾಣುವಂತಿದೆ .ರವಕೆಯ ಬದಿಯಲ್ಲಿ ಬಟ್ಟೆ ಅಲ್ಪ ಸ್ವಲ್ಪ ಹರಿದಂತಿದೆ.."
"ಅದು ಈಗಿನ ಸ್ಟೈಲ್.."
"ನೋಡಿದವರು ಕೊಡಲೆಂದು ಒಂದು ಸ್ಮೈಲ್.."
"ಅಲ್ಲಪ್ಪಾ...ಬೀಸಲೆಂದು ಸ್ವಲ್ಪ ಗಾಳಿ.."
"ಎಳೆದು ಬಿಡಸಲೆಂದೇ..? ನೇತಾಡುವ ಎರಡು ಬಳ್ಳಿ..."
"ತುಂಟತನ ಜಾಸ್ತಿ ಆಯ್ತು... ಅದು ಚೆಂದಕ್ಕೆ.."
"ಚೆಂದ ಕಾಣುವ ಮುಖವಿದೆ.. ಬಳುಕುವ ಸೊಂಟವಿದೆ..ಇನ್ನು ಬಟ್ಟೆಗೆ ಬರವಿರುವ ರವಕೆಯ ಬೆನ್ನು ಯಾವ ಲೆಕ್ಕಕ್ಕೆ..?"
"ಇಲ್ಲ ಕಿಶನ್.. ನೀವು ಹೀಗೆಲ್ಲ ಅಂದ್ರೆ ಬೇಜಾರು..ನಾ ಮಾತಾಡಲ್ಲ.."
"ಮುದ್ಗೊಂಬೆ.. ಸುಮ್ನೆ ತಮಾಷೆಗಂದೆ... ಸಾರಿ...ಸಾರಿ..ಇನ್ನು ಮುಂದೆ ಹೀಗೆ ಹೇಳಲ್ಲ"
"ಹಾಗೇ ಬನ್ನಿ .. ಸರಿದಾರಿಗೆ.."
ನೆಟ್ವರ್ಕ್ ಸಿಗದೆ ಸಂಪರ್ಕ ತುಂಡಾಯಿತು.. ಕಿಶನ್ ಚಡಪಡಿಸಿದ.ಒಳ್ಳೆಯ ಮೂಡ್ ನಲ್ಲಿದ್ದಾಗಲೇ ಹೀಗಾಗಬೇಕೇ..?
*****
ರಾತ್ರಿ ಮನೆಗೆ ಬಂದ ಶೇಷಣ್ಣನಿಗೆ ಬಂಗಾರಣ್ಣನ ಕರೆ ಬಂದಿತು..
✍️.. ಅನಿತಾ.ಜಿ.ಕೆ.ಭಟ್.
17-03-2020.
👌👌👌
ReplyDeleteThank you so much 💐🙏
ReplyDelete