Wednesday, 18 March 2020

ಜೀವನ ಮೈತ್ರಿ ಭಾಗ-೪೨(42)





              ರಾತ್ರಿ ಮನೆಗೆ ಬಂದ ಶೇಷಣ್ಣನಿಗೆ ಬಂಗಾರಣ್ಣನ ಕರೆ ಬಂದಿತು.. "ಯಾವುದಾದರೂ ಹುಡುಗಿ ಮಗನಿಗೆ ಸರಿಹೊಂದುವಂತಹವಳು ಸಿಕ್ಕಳೇ..??" ಎಂದು ವಿಚಾರಿಸಿದರು.
"ಹೂಂ..ಬಂಗಾರಣ್ಣ..ನಮ್ಮ ಕೇಶವ್ ನಿಗೆ ಹೇಳಿ ಮಾಡಿಸಿದಂತಹ ಹುಡುಗಿ ..ನಮ್ಮ ದೂರದ ಸಂಬಂಧಿ ನರಸಿಂಹ ರಾಯರ ಮಗಳು..ನಿಮ್ಮ ಮಗನ ಪ್ರಸ್ತಾಪ ಕಳುಹಿಸಿದ್ದೇನೆ.. ಸ್ವಲ್ಪ ದಿನ ಕಾಯೋಣ.."

"ಆಗಲಿ..ಶೇಷಣ್ಣ..ನಿನ್ನ ಪ್ರಯತ್ನದಿಂದ ನಮ್ಮ ಮನೆಗೆ ಭಾಗ್ಯಲಕ್ಷ್ಮಿ ಬಂದರೆ ಸಾಕು.."

"ಹೂಂ.. ಆಕೆ ಭಾಗ್ಯಲಕ್ಷ್ಮಿಯಂತೆಯೇ ನಿಮ್ಮ ಮಗನ ಬಾಳು ಬೆಳಗುವಂತಾಗಲಿ ಎಂಬುದು ನನ್ನ ಆಶಯ ಕೂಡ..ದಂತದ ಬೊಂಬೆಯಂತಹ ಹುಡುಗಿ..ಒಳ್ಳೆಯ ಕುಲದವರು.."

"ಆದಷ್ಟು ಬೇಗ ಮುಂದುವರಿಯುವಂತೆ ಮಾಡು ಶೇಷಣ್ಣ ಹೇಗಾದರೂ..."

ಎಂದು ಶೇಷಣ್ಣನಲ್ಲಿ ದೈನ್ಯತೆಯಿಂದ ಕೋರಿದರು ಬಂಗಾರಣ್ಣ.ಅಷ್ಟು ದೊಡ್ಡ ಮನುಷ್ಯ ತನ್ನಲ್ಲಿ ವಿನಮ್ರವಾಗಿ ಕೇಳಿಕೊಂಡಾಗ ಶೇಷಣ್ಣನಿಗೆ ಒಂದು ಕೋಡು ಬಂದಂತಾಯಿತು..

     ಅಮ್ಮನ ಸಾತ್ವಿಕ ಆಹಾರ,ಅಪ್ಪನೊಡನೆ ತೋಟದ ಕೆಲಸ ಕಾರ್ಯಗಳಿಗೆ ಉಸ್ತುವಾರಿ ವಹಿಸುವ ದಿನಚರಿಯಿಂದಾಗಿ ಕೇಶವ್ ನಲ್ಲಿ  ಸ್ವಲ್ಪ ಮಟ್ಟಿಗೆ ಬದಲಾವಣೆ ಕಂಡುಬಂದಿತು.ಒಳಮನಸ್ಸು ಮಾತ್ರ ಕಿಶನ್ ಗೆ ಮೈತ್ರಿ ಜೋಡಿಯಾಗುವುದನ್ನು ತಪ್ಪಿಸಬೇಕು ಎಂದು ದ್ವೇಷಕಾರುತ್ತಿತ್ತು.


                   *****

          ಭಾಸ್ಕರ ಶಾಸ್ತ್ರಿಗಳು ಮಗಳ ಕೂಸುನೋಡುವ ಶಾಸ್ತ್ರಕ್ಕೆ ಅತೀ ಹತ್ತಿರದ ಬಂಧುಗಳನ್ನು ಆಹ್ವಾನಿಸಿದರು.ಮಂಗಳಮ್ಮನ ತವರಿಗೆ ತಾವೇ ಖುದ್ದಾಗಿ ಭೇಟಿ ನೀಡಿ ಕರೆದರು.ಮಂಗಳಮ್ಮನ ತಂಗಿಯ ಮನೆಗೆ ಕರೆಮಾಡಿ ತಿಳಿಸಿದರು.ಬೆಂಗಳೂರಿನಲ್ಲಿರುವ ಶಂಕರನಿಗೆ ಕರೆಮಾಡಿದಾಗ "ನಾನು ಎರಡು ದಿನ ರಜೆ ಹಾಕಿ ಬರುವೆ ಅಣ್ಣಾ" ಎಂದ ಶಂಕರ.ಶಶಿ ಅಕ್ಕನಿಗೆ ಕರೆಮಾಡಿದಾಗ ಎಲ್ಲಾ ವಿಷಯವನ್ನು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿ ತಿಳಿದುಕೊಂಡಳು.. ಮುರಲಿಯ ಮದುವೆಯ ಬಗ್ಗೆ ಕೇಳಿದಾಗ ಪಕ್ಕನೆ ವಿಷಯಾಂತರ ಮಾಡಿ ಫೋನಿಟ್ಟಳು ಶಶಿ."ಅಬ್ಬಾ...!! ಇವಳೇ..!!"ಅಂದುಕೊಂಡರು ಭಾಸ್ಕರ ಶಾಸ್ತ್ರಿಗಳು.. ಮಹಾಲಕ್ಷ್ಮಿ ಅಮ್ಮನಲ್ಲಿ ಶಶಿಯ ಈ ವರ್ತನೆಯನ್ನು ತಿಳಿಸಿ ಆಕ್ಷೇಪಿಸಿದರು ಭಾಸ್ಕರ ಶಾಸ್ತ್ರಿಗಳು.."ಇಲ್ಲಪ್ಪಾ..ನಮ್ಮ ಶಶಿ ಕೆಟ್ಟವಳಲ್ಲ...ತವರಿನ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಣ್ಣುಮಕ್ಕಳಿಗಿರುವುದು ಸಾಮಾನ್ಯ"ಎಂದು ಮಗಳನ್ನು ಸಮರ್ಥಿಸಿಕೊಂಡರು ಮಹಾಲಕ್ಷ್ಮಿ ಅಮ್ಮ.

"ಅವರಿಗೆ ಕುತೂಹಲವಿದ್ದಂತೇ ನಮಗೂ ಇರುವುದಿಲ್ಲವೇ...? ನಾನು ಕೇಳಿದರೆ ವಿಷಯ ಮರೆಮಾಚುವ ನಯವಂಚಕತನವೇಕೆ ?? "ಎಂದ ಮಗನಲ್ಲಿ

"ಅದೆಲ್ಲ ಅವರವರ ಗುಣನಡತೆ.. ನಾನೇನು ಹೇಳಲು ಸಾಧ್ಯ..?? "

"ಅವರ ನಡೆಯ ಬಗ್ಗೆ ಆಕ್ಷೇಪಿಸಲು ಸಾಧ್ಯವಿಲ್ಲದವರು.. ನಮ್ಮ ಮನೆಯ ವಿಚಾರಗಳನ್ನು ಎಲ್ಲವನ್ನೂ ಅವರಿಗೆ ವರದಿ ಮಾಡಬೇಕಾದ ಅಗತ್ಯ, ಅನಿವಾರ್ಯತೆ ಏನಿದೆ..??"

"ಇಲ್ಲ ಮಗ.. ನಾನೀಗ ಶಶಿಗೆ ಏನೂ ಹೇಳುತ್ತಿಲ್ಲ.."

"ಹೇಳುವ ಅಗತ್ಯವೂ ಇಲ್ಲ... ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು..ತಮ್ಮದು ಮಾತ್ರ ಗುಟ್ಟು..ಇನ್ನೊಬ್ಬರದು ಎಲ್ಲವೂ ಬೇಕು ಎನ್ನುವವರಿಗೆ ತಿರುಮಂತ್ರದಿಂದಲೇ ನೀತಿಪಾಠ ಕಲಿಸಬೇಕು."

"ರೀ.. ನಾವೀಗ ಮಗಳ ಮದುವೆಯ ಬಗ್ಗೆ ಆಲೋಚನೆ ಮಾಡಬೇಕೇ ಹೊರತು ಶಶಿಗೆ ಪಾಠ ಕಲಿಸಲು ತಂತ್ರ ಹೆಣೆಯಬೇಕಾದ್ದಲ್ಲ..ಅನಗತ್ಯ ಅಸಮಾಧಾನ,ಪರಸ್ಪರ ಒಳಜಗಳ ನನಗಂತೂ ಇಷ್ಟವಿಲ್ಲ..ನಮ್ಮ ಒಳ್ಳೆಯತನ ನಮ್ಮನ್ನು ಭವಿಷ್ಯದಲ್ಲಿ ಕಾಪಾಡೀತು..ಅವರ ಕೆಟ್ಟಗುಣ ಅವರಿಗೇ ಭವಿಷ್ಯದಲ್ಲಿ ಮುಳುವಾದೀತು..ಆ ಜಗನ್ನಿಯಾಮಕನೇ ಯಾರ್ಯರಿಗೆ ಏನೇನು ಕೊಡಬೇಕೋ ಕೊಡುತ್ತಾನೆ.. ನೀವು ಆ ವಿಷಯ ತಲೆಯಿಂದ ಬಿಟ್ಟುಬಿಡಿ."ಎಂದರು ಮಂಗಳಮ್ಮ.. ಸುಮ್ಮನೆ ಅತ್ತಿಗೆಯಲ್ಲಿ ಜಗಳವಾಡುವುದೇಕೆ ಎನ್ನುವುದು ಮಂಗಳಮ್ಮನ ಒಳ್ಳೆಯತನ.ಈ ಅತಿಯಾದ ಒಳ್ಳೆಯತನದಿಂದಲೇ ಹಲವು ಬಾರಿ ಅವರು ಇಕ್ಕಟ್ಟಿಗೆ ಸಿಲುಕಿರುವುದು.ಆದರೂ ಸನ್ನಡತೆ ,ಸದ್ಭಾವನೆಯೇ ಗೃಹಿಣಿಯ ಶಕ್ತಿ ಎಂದು ನಂಬಿರುವವರು ಮಂಗಳಮ್ಮ.


      ಇನ್ನು ಮೂವರು ತಂಗಿಯಂದಿರಿಗೂ ಕರೆ ಮಾಡಿ ತಿಳಿಸಿದರು ಭಾಸ್ಕರ ಶಾಸ್ತ್ರಿಗಳು.ಇಬ್ಬರು ಅಣ್ಣನೊಂದಿಗೆ ಉಭಯಕುಶಲೋಪರಿ ನಡೆಸಿ ನಗುನಗುತ್ತಾ ಮಾತನಾಡಿದರು. ಕೊನೆಯವಳಾದ ಸಾವಿತ್ರಿಗೆ ಕರೆಮಾಡಿ ಹೇಳತೊಡಗಿದರು.ಆಕೆ ಸಾಧು ಸ್ವಭಾವದವಳು.ಸ್ವಲ್ಪ ಬಡವರ ಮನೆಗೆ ಕಾಲಿಟ್ಟವಳು.ಅಣ್ಣನ ಮಗಳ ಮದುವೆ ವಿಚಾರ ಅವಳಿಗೆ ಬಹಳ ಸಂತಸ ತಂದಿತ್ತು.ಆ ನೆಪದಲ್ಲಾದರೂ ತಾಯಿ ಮನೆಗೆ ಹೋಗಿ ಎರಡು ದಿನ ಉಳಿಯಬಹುದು.ತನಗೆ ಎರಡು ದಿನವಾದರೂ ಈ ಮನೆಕೆಲಸದಿಂದ ಮುಕ್ತಿ ಸಿಗಬಹುದು ಎಂಬ ಆಲೋಚನೆ ಅವಳದು. ಅಣ್ಣನೊಂದಿಗೆ ಮಾತನಾಡಿದ ಸಾವಿತ್ರಿ ಗಂಡನಲ್ಲಿ ಈಗಲೇ ಅನುಮತಿ ಕೋರಿದಳು.ಮಡದಿ ತವರಿಗೆ ಹೊರಡುವುದೆಂದರೆ ಆಕೆಯ ಗಂಡನಿಗಂತೂ ಉರಿಯುವಂತಹ ಕೋಪ..

      ಸ್ವಲ್ಪ ಹೊತ್ತಿನಲ್ಲಿ ಸಾವಿತ್ರಿಗೆ ಶಶಿ ಕರೆಮಾಡಿ "ಅಣ್ಣನ ಮಗಳದ್ದು ಲವ್... ಹಾಗೇ ಹೀಗೇ.." ಎಂದು ಕಿವಿಕೊರೆದಳು.ಇದೆಲ್ಲ ಫೋನಿನ ಪಕ್ಕದಲ್ಲೇ ಕುಳಿತಿದ್ದ ಆಕೆಯ ಪತಿಯ ಕಿವಿಗೂ ಬಿದ್ದಿತು.ಅವನಿಗೋ ಹಾಲು ಪಾಯಸ ಉಂಡಂತಾಯಿತು.ಮಡದಿ ಫೋನಿಟ್ಟ ಬಳಿಕ ಒಂದೇ ಸಮನೆ ಮಡದಿಯ ತವರನ್ನು ಬೈಯ್ಯತೊಡಗಿದ..ಹೋಗಕೂಡದೆಂಬ ಷರತ್ತೂ ವಿಧಿಸಿದ.ಸಾವಿತ್ರಿಗೆ ಅಕ್ಕನ ಮೇಲೆ "ಛೇ..!! ಎಂತಹಾ ಕೆಲಸ ಮಾಡಿದಳು ಅಕ್ಕಾ..!! "ಎಂದು ಸಿಟ್ಟುಬಂದಿತು..


        ಶ್ಯಾಮ ಶಾಸ್ತ್ರಿಗಳು ಮಗನಲ್ಲಿ  "ಕೂಸು ನೋಡಲು ಎಷ್ಟು ಹೊತ್ತಿಗೆ ಬರುವುದಂತೆ..?? ಎಷ್ಟು ಜನ ಬರುವರಂತೆ ??"ಎಂದು ಕೇಳಿ ತಿಳಿದುಕೊಂಡರು.
"ಬುಧವಾರ ಬೆಳಗಿನ ಹೊತ್ತಿನಲ್ಲಿ " ಎಂದು ಹೇಳಿದರು ಭಾಸ್ಕರ ಶಾಸ್ತ್ರಿಗಳು.
"ಹಾಗಾದರೆ ನಾವು ತಿಂಡಿ ಕಾಫಿ ತಯಾರಿಸಲು ಅಡಿಗೆ ಕಿಟ್ಟಣ್ಣನನ್ನು ಬರಲು ಹೇಳೋಣ" ಎಂದರು.ಭಾಸ್ಕರ ಶಾಸ್ತ್ರಿಗಳು
"ಹತ್ತಿಪ್ಪತ್ತು ಜನಕ್ಕೆ ಮಂಗಳಾ ತಿಂಡಿ ಕಾಫಿ ಮಾಡಿಯಾಳು "ಎಂದಾಗ
"ಸೊಸೆ ಮಾಡಿಯಾಳು..ಆದರೂ ಅವಳಿಗೂ ಮಗಳನ್ನು ಅಲಂಕರಿಸಲು, ಮಗಳನ್ನು ನೋಡಲು ಬಂದವರಲ್ಲಿ ಮಾತನಾಡಲು .. ಹೀಗೆ ಹಲವಾರು ಜವಾಬ್ದಾರಿ ಇರುತ್ತದೆ..ಕಿಟ್ಟಣ್ಣ ಇಲ್ಲೇ ಹತ್ತಿರದಲ್ಲಿ ಇದ್ದಾನೆ ಅವನನ್ನೇ ಹೇಳೋಣ.." ಎಂದಾಗ ಭಾಸ್ಕರ ಶಾಸ್ತ್ರಿಗಳು ಒಪ್ಪಿದರು..ಮಂಗಳಮ್ಮ "ಕಿಟ್ಟಣ್ಣ ಬಂದರೆ ನನಗೂ ಸ್ವಲ್ಪ ಭಾರ ಕಡಿಮೆಯಾದಂತೆ."
ಎಂದು ಸಮಾಧಾನಪಟ್ಟರು..


                *****

          ಕಿಶನ್,ತಂದೆ ತಾಯಿ, ತಂಗಿಯರು , ಭಾವಂದಿರು,ಸೋದರಮಾವ, ಅತ್ತೆ ಬರುವುದೆಂದು ನಿರ್ಧರಿಸಿದ್ದರು.. ಕಿಶನ್ ಎರಡು ದಿನ ರಜೆ ಹಾಕಿ ಬರುವವನಿದ್ದ.ಮೈತ್ರಿಗೆ ನಿಶ್ಚಿತಾರ್ಥ ಕ್ಕೆಂದು ಉಂಗುರ, ಸೀರೆ ಕೈಗೊಳ್ಳಬೇಕಿತ್ತು.. ಇದು ಪರಂಪರೆಯಿಂದ ಬಂದ ಸಂಪ್ರದಾಯದಲ್ಲಿ ಇಲ್ಲದಿದ್ದರೂ ಈಗಿನ ಕಾಲದಲ್ಲಿ ಎಲ್ಲರೂ ಕೊಡುತ್ತಾರೆ.ನಾವು ಕೊಡದಿದ್ದರೆ ಏನೋ ಲೋಪವಾದಂತೆ ಕಂಡೀತು ಎಂದು
ಅಮ್ಮ .."ಕಿಶನ್ ನೀನೇ ಆಯ್ದು ತಾ..ಈ ಸಲವೇ ತಂದರೆ ಬ್ಲೌಸ್ ಹೊಲಿಸಿ ಇಟ್ಟುಕೊಳ್ಳಲು ಸುಲಭ..." ಎಂದಿದ್ದರು.'ಹೇಗಪ್ಪಾ ಸೀರೆ ಸೆಲೆಕ್ಷನ್ ಮಾಡುವುದು'..ಎಂಬ ತಲೆಬಿಸಿ ಕಿಶನ್ ಗೆ.. ಆಫೀಸಿನಲ್ಲಿ ಸಹೋದ್ಯೋಗಿಗಳಲ್ಲಿ ತಿಳಿಸಿದಾಗ "ಸೀರೆ ಸೆಲೆಕ್ಷನ್ ಗೆ ನಾವು ಬರುತ್ತೇವೆ.ನಮಗೆ ನಿನ್ನ ಸುಂದರಿಯ ಫೊಟೋ ತೋರಿಸು "ಎಂದು ಹಲವು ಮಹಿಳಾ ಮಣಿಗಳು ಮುಂದೆ ಬಂದರು..
ಇಕ್ಕಟ್ಟಿಗೆ ಸಿಲುಕಿದ ಕಿಶನ್... "ಬೇಡಪ್ಪಾ..ನಾನೇ ಆರಿಸುತ್ತೇನೆ" ಎಂದು ಹೇಳಿ ಅವರಿಂದ ಪಾರಾದ..

    ರೂಮಿಗೆ ಬಂದು ಮುದ್ಗೊಂಬೆಗೆ ಯಾವ ಬಣ್ಣ ಒಪ್ಪಬಹುದು ???? ಎಂದು ಆಲೋಚಿಸಿ ಮರುದಿನ ಶನಿವಾರ  ಕೊಂಡುಕೊಳ್ಳುವ ಯೋಜನೆ ಹಾಕಿದ.ಅವಳ  ನುಣುಪಾದ ಬೆರಳಿಗೊಪ್ಪುವ ಉಂಗುರವನ್ನು ಆರಿಸಬೇಕು . ಅದನ್ನು ನಾನು ಅವಳ ಬೆರಳುಗಳಿಗೆ ತೊಡಗಿಸಬೇಕು ..ಆ ಕ್ಷಣದ ಕನವರಿಕೆಯಲ್ಲಿ ಮುಳುಗಿದ..

       ಮರುದಿನ ಬಟ್ಟೆಯಂಗಡಿಗೆ ತೆರಳಿ ಅಂದವಾದ ಕಾಂಜೀವರಂ ಸೀರೆ ತೋರಿಸಲು ಸೇಲ್ಸ್ ಗರ್ಲ್ ನ ಬಳಿ ಹೇಳಿದ.ಸೀರೆಗಳ ರಾಶಿಯನ್ನೇ ಟೇಬಲ್ ಮೇಲೆ ಹರಡಿದಳು.ಸೇಲ್ಸ್ ಗರ್ಲ್..ಈಗ ನಿಜಕ್ಕೂ ನಮ್ಮ ಮದುಮಗ ಫುಲ್ ಕನ್ಫ್ಯೂಸ್ಡ್... ಸೀರೆಗಳು ಒಂದಕ್ಕಿಂತ ಒಂದು ಚಂದ...ಬೆಲೆಗಳಲ್ಲೂ ವೈವಿಧ್ಯತೆ....ಮೊತ್ತ ಮೊದಲ ಬಾರಿಗೆ ಸೀರೆ ಸೆಲೆಕ್ಷನ್ ಮಾಡುವುದು ಭಾರೀ ಕಷ್ಟದ ಕೆಲಸವಪ್ಪಾ ಅನಿಸಿತು ಅವನಿಗೆ... ಅದು ಕೊಳ್ಳಲಾ ಇದು ತೆಗೆದುಕೊಂಡು ಬಿಡಲಾ...ಈ ಸೀರೆಯಲ್ಲಿ ಮುದ್ದು ಕಂಡಾಳೋ..ಅಲ್ಲ ಆ ಸೀರೆಯಲ್ಲಿ ಅವಳ ಗಲ್ಲಕ್ಕೆ ಮೆರುಗು ಬರಬಹುದೋ..ತಲೆಕೆರೆದುಕೊಂಡ...

ಅವನನ್ನು ನೋಡಿದ ಸೇಲ್ಸ್ ಗರ್ಲ್ "ಯಾಕೆ ಸಾರ್.. ನಿಮಗೆ ಒಂದೂ ಹಿಡಿಸಲಿಲ್ವಾ..??"

ನಸುನಕ್ಕ..

"ಸೀರೆ ಯಾರಿಗೆ ಸರ್..ನಿಮ್ಮ ಅಮ್ಮನಿಗಾ, ತಂಗಿಗಾ..?"

ಯಪ್ಪಾ.. ಇವ್ಳು ಪ್ರಶ್ನೆ ಬೇರೆ ಕೇಳ್ತಾ ಇದ್ದಾಳೆ..ನಿಮ್ಮನ್ನು ಮದುವೆಯಾಗಲಿರುವವರಿಗಾ ಎಂಬುದೊಂದನ್ನು ಬಿಟ್ಟು...ಎಲ್ಲರ ಹೆಸರೂ ಹೇಳಿದಳಲ್ಲಾ...ಬೇಗ ಇಲ್ಲಿಂದ ಜಾಗ ಖಾಲಿ ಮಾಡ್ಬೇಕು..

"ಸಾರ್.. ಎಲ್ಲಾ ಒಳ್ಳೇ ಕ್ವಾಲಿಟಿ ಸೀರೆಗಳು.ನಾವು ಗ್ಯಾರೆಂಟಿ ಕೊಡ್ತೀವಿ.. ಬೇಕಾದ್ರೆ ನೀವು ಎರಡು ಸೀರೆ ಕೊಂಡೊಯ್ದು ಮನೆಯವರಿಗೆ ಇಷ್ಟವಾದ್ದನ್ನು ಇಟ್ಕೊಂಡು ಬೇಡದ್ದನ್ನು ವಾಪಸ್ ಮಾಡಬಹುದು.."

       ಸೀರೆಯ ಅಟ್ಟಿಯ ಮಧ್ಯದಿಂದ ಒಂದು ಸೀರೆ ಆಯ್ದ ಕಿಶನ್..ಹಳದಿ ಕೆಂಪು ಮಿಶ್ರಿತ ಸೀರೆಯಲ್ಲಿ ಅಲ್ಲಲ್ಲಿ ಡಿಸೈನ್ ಗಳು. ಬಾರ್ಡರ್ ಗಾಢವಾದ ನೇರಳೆ ಬಣ್ಣ...ಮುದ್ಗೊಂಬೆಗೆ ಇದು ಒಪ್ಪೀತು ಎಂದೆನಿಸಿತವನಿಗೆ ... ರೇಟ್ ಕೇಳಿದ.. ಪ್ಯಾಕ್ ಮಾಡಲು ಹೇಳಿದ..

ಕೈಗಡಿಯಾರ ನೋಡಿಕೊಂಡ...ಅಂತೂ ಸೀರೆಯಂಗಡಿಯಿಂದ ಹೊರಬೀಳಲು ಒಂದೂವರೆ ಗಂಟೆ ಬೇಕಾಯಿತು.. ಉಫ್..!!ಬೆವರೊರೆಸಿಕೊಂಡ..

ಇನ್ನು ಜ್ಯುವೆಲ್ಲರಿ ಶಾಪ್ ಗೆ ಹೋಗಬೇಕು ಎಂದು ನಡೆಯುತ್ತಿದ್ದವನಿಗೆ ಮುದ್ಗೊಂಬೆ ಕರೆಮಾಡಿದ್ದಳು..

"ಏಕೋ ಸುಮ್ನೆ..ನೆನಪಾಗ್ತಿದೆ...ಸೋ ಕರೆ ಮಾಡ್ದೆ.."

"ಹಾಂ.. ನಾನು ನಿನ್ನನ್ನೇ ಧ್ಯಾನಿಸ್ತಿದ್ದೆ..ನಿನ್ನ ಆರನೇ ಇಂದ್ರಿಯಕ್ಕೆ ಅದು ಅರಿವಾಗಿರಬೇಕು.."

"ಹೌದು.. ನೀವ್ಯಾಕೆ ನನ್ನ ನೆನಪಿಸಿಕೊಂಡ್ರಿ.."

"ಅದು... ಅದು.. ನಿಂಗೆ ಸೀರೆ ಕೊಳ್ಳೋಣಾಂತ ಬಂದಿದ್ದೆ.."

"ಹೂಂ.. ಅದು ಪಕ್ಕಕ್ಕಿರಲಿ.. ನಾನೊಂದು ವಿಷಯವನ್ನು ಹೇಳ್ಬೇಕು.."

"ಹೇಳು.."

"ಅದ್ಯಾರೋ...ಹಠ ಸಾಧಕ ಅಂತ ಹೆಸರಿಂದ ಏನೇನೋ ಮೆಸೇಜ್ ಕಳಿಸ್ತಿದಾರೆ.. ನಾನಂತೂ ಹೆದರಿದ್ದೀನಿ.."

"ನಂಗೂ ಅದೇ ಹೆಸರಿಂದ ಮೆಸೇಜ್ ಬಂದಿತ್ತು ನಿನ್ನೆ..ನಾನೇನೂ ಸೀರಿಯಸ್ಸಾಗಿ ತಗೊಂಡಿಲ್ಲ.."

"ಇವತ್ತು ಬಂದ ಫೊಟೋ ನೋಡಿ ನಾನು ಬೆಚ್ಚಿಬಿದ್ದೆ.. ಕಿಶನ್..ನನ್ನ ಕೈಯಲ್ಲಿ ಇನ್ನು ತಡೆದುಕೊಳ್ಳಲು ಸಾಧ್ಯವಿಲ್ಲ.."

"ಏನಿತ್ತು ಅಂತಹದ್ದು ಆ ಫೊಟೋದಲ್ಲಿ...??"


ಮುಂದುವರಿಯುವುದು..

✍️... ಅನಿತಾ ಜಿ.ಕೆ.ಭಟ್.
18-03-2020.



     

2 comments:

  1. ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.. ಮುಂದೇನು ಎಂದು ಕಾಯಬೇಕಾದ ಪರಿಸ್ಥಿತಿ !!

    ReplyDelete
  2. Episode bari interest agide next episode ge kayitha idene

    ReplyDelete