ಬಂಗಾರಣ್ಣ ಪುರುಷೋತ್ತಮ ಜೋಯಿಸರಲ್ಲಿಗೆ ....ಮಡದಿ ಸುಮಾ ಹೇಳಿದಂತೆ ಒಳ್ಳೆಯ ಕಾಲ ನೋಡಿ ರಾಹುಕಾಲ, ಗುಳಿಗ ಕಾಲ ,ಭರಣಿ ,ಕೃತ್ತಿಕಾ ಎಲ್ಲಾ ತಪ್ಪಿಸಿ ತೆರಳುತ್ತಾರೆ.ಹೊರಡುವಾಗ ತೋಟದ ಉಸ್ತುವಾರಿ ಮಗನ ಹೆಗಲಿಗೊಪ್ಪಿಸಿದ್ದರು ಬಂಗಾರಣ್ಣ.ಅಪ್ಪ ಹೇಳಿದ್ದನ್ನು ಕೇಳಿಸಿಕೊಂಡ ಕೇಶವ್ ಹೂಂಗುಟ್ಟಿದ್ದ.ಅಪ್ಪ ಹೊರಡುತ್ತಿದ್ದಂತೆ ಕೃಷಿಯನ್ನು ಗಮನಿಸಬೇಕಾಗಿದ್ದವನ ಗಮನ ಸೌಜನ್ಯಳೆಂಬ ಮೋಹಕ ನಾರಿಯೆಡೆಗೆ ಹೊರಳಿತ್ತು.
ಸೌಜನ್ಯಳೊಂದಿಗೆ ಚಾಟ್ ಆರಂಭಿಸಿದವನಿಗೆ ಹೊತ್ತು ಹೋದದ್ದೇ ತಿಳಿಯಲಿಲ್ಲ.ಅಮ್ಮ ಕರೆದು ಎಚ್ಚರಿಸಿದ್ದು ಕಿವಿಯೊಳಗೆ ಇಳಿಯಲಿಲ್ಲ. ಒಬ್ಬರಿಗೊಬ್ಬರು ಕ್ಷಣದಿಂದ ಕ್ಷಣಕ್ಕೆ ಹತ್ತಿರವಾಗುತ್ತಿದ್ದರು.ಚಾಟ್ ಮಾಡುವುದು ಮಾತ್ರವಲ್ಲ ಡೇಟ್ ಗೂ ರೆಡಿ ಎನ್ನುವಂತಿದ್ದ ಅತಿ ಕಾಮಾತುರದ ಬಾಂಧವ್ಯವದು.ಕೇಶವ್ ಇವಳು ತನಗೆ ತಕ್ಕ ಜೋಡಿ.ಅಪ್ಪ ಜಾತಕ ತೋರಿಸುವುದೂ ಬೇಕಿರಲಿಲ್ಲ . ನೇರವಾಗಿ ಕೂಸು ನೋಡುವುದಕ್ಕೇ ಹೋಗಬಹುದಿತ್ತು.. ಇನ್ನು ಜೋಯಿಸರದ್ದು ಏನೆಲ್ಲ ವರಸೆಗಳಿರುತ್ತವೆಯೋ ಏನೋ... ಎಂಬುದು ಅವನ ಯೋಚನೆಯಾಗಿತ್ತು.
ಪುರುಷೋತ್ತಮ ಜೋಯಿಸರು ಬಂಗಾರಣ್ಣ ಬಂದದ್ದನ್ನು ಕಂಡು
"ಹೋ..ಬಂಗಾರಣ್ಣ.. ಏನು ಮತ್ತೆ ವಿಶೇಷ....? ಬಹಳ ದಿನಗಳಾದವು ಇತ್ತ ಬಾರದೆ.."
"ಸುಮ್ಮನೆ ಬಂದು ಹೋಗುವುದಿಲ್ಲ ಪುರುಷಣ್ಣ..ಈಗ ಒಂದು ಜಾತಕ ಬಂತು ನೋಡು.. ಹೀಗೆ ಏನಾದರೂ ನೆಪವಿದ್ದರೆ ನಿಮ್ಮ ನೆನಪಾಗುವುದು.."
"ಸರಿ.ಸರಿ..ಜಾತಕ ಇತ್ತ ತನ್ನಿ.."
"ಜಾತಕ ಹಸ್ತ ಪ್ರತಿ ತರುವಷ್ಟು ಸಮಯ ಸಿಕ್ಕಿಲ್ಲ.ನಿನ್ನೆಯಷ್ಟೇ ಬಂದ ಸಂಬಂಧ.ಮೊಬೈಲಲ್ಲೇ ಜಾತಕ ಫೊಟೋ ಕಳುಹಿಸಿದ್ದಾರೆ ನೋಡಿ.."
ಪುರುಷೋತ್ತಮ ಜೋಯಿಸರು ಮೊಬೈಲ್ ನಲ್ಲಿ ನೋಡುವಾಗ ಫೊಟೋ ಮೊದಲು ಕಂಡಿತು.ಜಾತಕ ನಂತರ ಇದ್ದಿತು.ಫೊಟೋ ನೋಡಿ ಮೈಮರೆತ ಜೋಯಿಸರು ಇಷ್ಟು ಸುಂದರ ಹೆಣ್ಣುಮಗಳ ಜಾತಕವನ್ನು ಹೊಂದಾಣಿಕೆ ಇಲ್ಲವೆಂದು ಕಳುಹಿಸಿದರೆ ಈ ಬಂಗಾರಣ್ಣ ನನ್ನ ವಿರುದ್ಧ ತಿರುಗಿ ಬಿದ್ದಾನು.ಹೊಂದಾಣಿಕೆ ಇದ್ದರೂ ಇಲ್ಲದಿದ್ದರೂ ಇದೆಯೆಂದೇ ಹೇಳಬೇಕಾದೀತು.. ಎಂದು ಕೊಂಡು ಜಾತಕ ಪರಿಶೀಲಿಸಿದರು..
"ಬಂಗಾರಣ್ಣ...ಜಾತಕ ಅಂದರೆ ಜಾತಕ ಇದು.. ನೋಡಿ ಬಹಳ ಒಳ್ಳೆಯ ಗ್ರಹಗತಿಯಿರುವ ಕೂಸು. ಮದುವೆಯಾಗಲು ಈಗ ಕಂಕಣಬಲ ಇರುವ ಸಮಯ.ಎರಡು ವರ್ಷದ ಹಿಂದೆಯೂ ಬಲವಾಗಿ ಕಂಕಣ ಬಲವಿತ್ತು. ಆಗ ಓದುತ್ತಿದ್ದಿರಬಹುದು . ಈಕೆ ಮತ್ತು ನಿಮ್ಮ ಮಗನಿಗೆ ವಶ್ಯಕೂಟ, ಗೃಹಮೈತ್ರಕೂಟ, ಯೋನಿಕೂಟ,ರಜ್ಜುಕೂಟ,ಸ್ತ್ರೀ ದೀರ್ಘ ಕೂಟ... ಬಹಳ ಚೆನ್ನಾಗಿ ಕೂಡಿಬರುತ್ತಿದೆ.ವಿವಾಹ ಮಾಡಲು ಪ್ರಶಸ್ತವಾದ ಜೋಡಿ.. ಆದರೆ..."
"ಆದರೆ... ಎಂದು ನಿಲ್ಲಿಸಿದಿರಲ್ಲ..ಜೋಯಿಸರೇ.."
ಜೋಯಿಸರು ಏನನ್ನೋ ಆಲೋಚಿಸುತ್ತಾ ಗುನುಗುತ್ತಾ ಲೆಕ್ಕ ಹಾಕುತ್ತಿದ್ದರು.ಮುಖವು ಗಂಭೀರವಾಗಿತ್ತು.
"ಬಂಗಾರಣ್ಣ... ಸಂಬಂಧದಲ್ಲಿ ಅಲ್ಪಸ್ವಲ್ಪ ಕಿರಿಕಿರಿ ಇದ್ದೀತು.. ಒಂದೆರಡು ವರುಷ ಏನಾದರೂ ಸಂಶಯದ ಅಪಸ್ವರ ಬರಲೂಬಹುದು.ಹೆದರಬೇಕಿಲ್ಲ . ನಾಲ್ಕು ವರುಷಗಳ ನಂತರ ಎಲ್ಲವೂ ಒಂದು ಹದಕ್ಕೆ ಬಂದೀತು.."
"ಅದಕ್ಕೇನಾದರೂ ಪರಿಹಾರ..?"
"ಪರಿಹಾರವೆಂದರೆ ಅವರವರ ದಾರಿಯಲ್ಲಿ ಸರಿಯಾಗಿ ನಡೆಯುವುದು..ಸತ್ಯವಾದ ನಡೆ ನುಡಿಗೆ ಪ್ರಾಶಸ್ತ್ಯ ನೀಡುವುದು.."
"ಸರಿ ಜೋಯಿಸರೇ.. ಹಾಗಾದರೆ ಮುಂದುವರಿಸಬಹುದೆಂದು ನಿಮ್ಮ ಮಾತಿನ ಅರ್ಥ.. ಮದುವೆಗೆ ಪ್ರಶಸ್ತವಾದ ಒಂದೆರಡು ದಿನಗಳನ್ನು ನೋಡಿ ಹೇಳಿದರೆ ಉತ್ತಮ.."
"ಬಹಳ ಹೊಂದಾಣಿಕೆ ಆಗುವ ಮುಹೂರ್ತ ಇನ್ನು ಹದಿನೈದು ದಿನಗಳಲ್ಲೇ ಇದೆ.ಅದು ಬಿಟ್ಟರೆ ಮತ್ತೆ ಮೂರು ತಿಂಗಳು ಕಾಯಬೇಕು.."
"ಸರಿ.ಜೋಯಿಸರೇ ..ಅದನ್ನೇ ಬರೆದು ಕೊಡಿ.."
ಜೋಯಿಸರು ಹೊಂದಾಣಿಕೆ,ಮದುವೆಯ ಮುಹೂರ್ತ ... ಇತ್ಯಾದಿ ನಾಲ್ಕು ಸಾಲು ಬರೆದು ಬಂಗಾರಣ್ಣನ ಕೈಗಿತ್ತರು.ಬಂಗಾರಣ್ಣ ಕಾಣಿಕೆ ಕೊಟ್ಟು ಚೀಟಿ ಪಡೆದು ಮನೆಗೆ ಹೊರಟ..
*****
ಕಿಶನ್ ಕೂಸು ನೋಡುವ ಶಾಸ್ತ್ರಕ್ಕೆಂದು ರಜೆ ಪಡೆದು ಬೆಂಗಳೂರಿನಿಂದ ಮಂಗಳವಾರ ರಾತ್ರಿ ಹೊರಟು ಬುಧವಾರ ಬೆಳ್ಳಂಬೆಳಗ್ಗೆ ಮನೆಗೆ ತಲುಪಿದ್ದ.ಮನೆಯಲ್ಲಿ ತಂಗಿಯಂದಿರು, ಭಾವಂದಿರು ,ಮಾವ ,ಸೋದರತ್ತೆ ನೆರೆದಿದ್ದರು.ಬಂದವನೇ ಫ್ರೆಶ್ ಆಗಿ ಅಮ್ಮ ಮಾಡಿಕೊಟ್ಟ ಬಿಸಿ ಬಿಸಿ ಕಾಫಿ ಕುಡಿದು ಸ್ವಲ್ಪ ಹೊತ್ತು ನಿದ್ರೆಗೆ ಜಾರಿದ.
ಎಂಟು ಗಂಟೆಗೆ ಹೊರಟು ತಯಾರಾಗಬೇಕೆಂದು ಅಪ್ಪ ಆಗಲೇ ಹೇಳಿದ್ದನ್ನು ನೆನಪಿಸಿಕೊಂಡ ಕಿಶನ್ ಗಂಟೆ ನೋಡಿದ.ಏಳೂವರೆ...!!ಬೇಗನೆದ್ದು ಅಮ್ಮ ಮಾಡಿದ ಮುಳ್ಳುಸೌತೆ ಕೊಟ್ಟಿಗೆ,ಕಾಯಿ ಚಟ್ನಿ ತಿಂದು ಹೊರಟ.
ಬಿಳಿಯ ಬಣ್ಣದಲ್ಲಿ ಅಲ್ಲಲ್ಲಿ ಸಣ್ಣ ಚೌಕುಳಿಯಿರುವ ಫುಲ್ ಕೈ ಶರ್ಟ್..ಅದಕ್ಕೊಪ್ಪುವ ಕ್ರೀಂ ಕಲರ್ ಪ್ಯಾಂಟ್ ಧರಿಸಿ ಡೀಸೆಂಟ್ ಲುಕ್ ನಲ್ಲಿ ಮಾಣಿ ಕಿಶನ್ ಸಭ್ಯನಂತೆ ತೋರುತ್ತಿದ್ದ.
"ಭಾವ..ಇದೆಂತ.ಪ್ಯಾಂಟ್ ಶರ್ಟ್..ಇಂದು ಪಂಚೆ ಶಲ್ಯ ತೊಡಬೇಕು .."ಎಂದು ಕಾಲೆಳೆದ ಮೇದಿನಿಯ ಗಂಡ..
ಕಿಶನ್ ನ ನಸುನಗು ಉತ್ತರವಾಗಿತ್ತು.
"ಪಂಚೆ ಉಡಲು ಈಗಿಂದಲೇ ಅಭ್ಯಾಸ ಮಾಡು.ಇಲ್ಲಾಂದ್ರೆ ಮತ್ತೆ ಸೊಂಟದಲ್ಲಿ ಗಟ್ಟಿ ನಿಲ್ಲಲ್ಲ..ಬೇಗ ಜಾರಿ ಬಿಡುತ್ತೆ.. " ಎಂದು ಕಿಚಾಯಿಸಿದ ಇನ್ನೊಬ್ಬ ಭಾವ..
"ಈಗಲಾದರೂ ಅವನಿಗೆ ಬೇಕಾದಂತೆ ಇರಲು ಬಿಡಿ..ಮದುವೆಯಾದ ಮೇಲಂತೂ ಅಮ್ಮಾವ್ರ ಆದೇಶ ವೇ ನಡೆಯೋದು.. "ಎಂದು ಮಗನ ಪರವಾಗಿ ನಿಂತರು ಗಣೇಶ ಶರ್ಮ..
"ಇವನು ಪಕ್ಕಾ ಅಮ್ಮಾವ್ರ ಗಂಡ.ಆಗ್ತಾನೇ...".. ಎಂದು ತಂಗಿ ಮೇದಿನಿ ಅಂದಾಗ ಎಲ್ಲರೂ ಗೊಳ್ಳೆಂದು ನಕ್ಕರು.
ಮೇದಿನಿ,ಚಾಂದಿನಿ ಇಬ್ಬರೂ ಒಂದೇ ಕಲರ್ ನ ಫ್ಯಾನ್ಸಿ ಕಾಟನ್ ಸಾರಿಯುಟ್ಟರು.ಇಬ್ಬರೂ ಸುಂದರವಾಗಿ ಕಾಣಿಸುತ್ತಿದ್ದರು.ಭಾವಂದಿರ ಕಣ್ಣು ತಂಗಿಯಂದಿರನ್ನೇ ಹಿಂಬಾಲಿಸುವುದನ್ನು ಕಿಶನ್ ಅರಿತ.ಆದರೂ ಛೇಡಿಸಲಿಲ್ಲ.. ಏಕೆಂದರೆ ಮುಂದೆ ಅದರ ಎರಡುಪಟ್ಟು ತನ್ನನ್ನೂ ಮೈತ್ರಿಯನ್ನೂ ಗೋಳುಹೊಯ್ದುಕೊಂಡಾರು ಎಂದು ಗೊತ್ತಿದೆ ಅವನಿಗೆ..ತಾನೂ ಹೀಗೇ ಮೈತ್ರಿ ಯ ಸೌಂದರ್ಯವನ್ನು ಆಸ್ವಾದಿಸುತ್ತಾ ಮೈಮರೆಯುವ ಕ್ಷಣವಿರಬಹುದು ಎಂದು ಕನಸುಕಾಣುತ್ತಿದ್ದ..
ಎಂಟು ಹತ್ತು ಜನ ಕೂಸು ನೋಡುವ ಸಲುವಾಗಿ ಶಾಸ್ತ್ರೀನಿವಾಸಕ್ಕೆ ಪ್ರಯಾಣ ಬೆಳೆಸಿದರು.
*****
ಶಾಸ್ತ್ರೀ ನಿವಾಸ ಮಂಗಳವಾರ ಸಂಜೆಯಿಂದಲೇ ಕಳೆಗಟ್ಟಿತ್ತು . ಅಡಿಗೆ ಕಿಟ್ಟಣ್ಣ ಸಂಜೆ ಬಂದು ಕ್ಷೀರ ಕಾಯಿಸಿದ್ದ.ಮನೆಯ ದನ ಗೋಪಮ್ಮನ ಹಾಲಿನಿಂದ ..ಮೊಸರು ಮಾಡಿ ..ಕಡೆದು ತೆಗೆದ ಬೆಣ್ಣೆಯಿಂದ.. ಮಂಗಳಮ್ಮ ತಾನೇ ಕೈಯಾರೆ ಬೆಣ್ಣೆ ಚೆನ್ನಾಗಿ ತೊಳೆದು ..ತುಪ್ಪ ಕಾಯಿಸಿದ್ದರು.. ಆಹಾ..ಘಮಘಮ ಪರಿಮಳ ಬರುತ್ತಿತ್ತು ತುಪ್ಪ..ಸುವಾಸನೆಭರಿತ ತುಪ್ಪದಿಂದ ಸಜ್ಜಿಗೆಯನ್ನು ಕಾಯಿಸಿ ಹದವಾಗಿ ಪಾಕ ಮಾಡಿದ ಕ್ಷೀರ .. ಅವರದೇ ತೋಟದಲ್ಲಿ ಬೆಳೆದ ಏಲಕ್ಕಿಯಪುಡಿ ಮೇಲುದುರಿಸಿದ್ದರು.. ಶಾಸ್ತ್ರೀ ನಿವಾಸದ ಪರಿಸರದಲ್ಲಿ ಕ್ಷೀರದ ಪರಿಮಳ ಹರಡಿತ್ತು.ಪಾಕವನ್ನು ಇಳಿಸಿ ಅಗಲವಾದ ಟ್ರೇಯಲ್ಲಿ ಹರವಿ ಮನೆಗೆ ತೆರಳಿದ್ದ ಅಡಿಗೆ ಕಿಟ್ಟಣ್ಣ.
ಸಂಜೆ ಕಾಲೇಜಿನಿಂದ ಮೈತ್ರಿ ಬರುತ್ತಿದ್ದಾಗಲೇ ಅಂಗಳದಂಚಿನಿಂದಲೇ ಘಮ ಬಂದು ಮೈತ್ರಿಯ ಬಾಯಲ್ಲಿ ನೀರೂರಿತ್ತು.ಒಳಬಂದವಳೇ.....
"ಅಮ್ಮಾ ನಾನೊಂದು ತುಂಡು ತಿನ್ನಲಾ "...ಎಂದು ಕೇಳಿದಾಗ
"ಏಯ್.. ಮೊದಲು ನಿನ್ನ ನೋಡಲು ಬಂದವನಿಗೆ ಎರಡು ಸೌಟು ಕ್ಷೀರ ಬಡಿಸಿ ಅವನು ತಿಂದ ಮೇಲೆ ನೀನು ತಿನ್ನಬೇಕು..ಅದು ಈ ಮನೆಯ ಶಾಸ್ತ್ರ.." ಎಂದು ಮಹೇಶ್ ಅಂದಾಗ ಅಜ್ಜ ,ಅಜ್ಜಿ ,ಮಂಗಳಮ್ಮ ಎಲ್ಲರೂ ಜೊತೆಯಾಗಿ ನಕ್ಕರು..
"ಮಹೇಶ ನಾಳೆ ಬಡಿಸುವ ಕೆಲಸಕ್ಕೆ ನೀನೂ ಸೇರಬೇಕು "..ಎಂದು ಮಾಡಬೇಕಾದ ಕೆಲಸಗಳನ್ನು ಮೊದಲೇ ತಿಳಿಸಿದರು ಅಜ್ಜಿ.
ರಾತ್ರಿ ಹತ್ತುಗಂಟೆಗೆ ಮೈತ್ರಿಯ ರೂಮಿಗೆ ಬಂದ ಅಜ್ಜಿ "...ಪುಳ್ಳಿ.. ಇನ್ನು ಓದಿದ್ದು ಸಾಕು..ಮಲಗಿಕೋ..ನಾಳೆ ಅವರೆಲ್ಲ ಬರುವಾಗ ಮುಖ ಸುಸ್ತಾದಂತೆ ಕಾಣಬಾರದು "...ಎಂದು ಹೇಳಿದರು.
"ಸರಿ ಅಜ್ಜಿ".... ಎನ್ನುತ್ತಾ ಪುಸ್ತಕ ಮಡಚಿಟ್ಟು ಮಲಗಿದಳು ಮೈತ್ರಿ.
ಮನದ ತುಂಬಾ ಕಿಶನ್ ಬಗ್ಗೆ ಬಣ್ಣಬಣ್ಣದ ಕನಸುಗಳು.ನಿದ್ರೆಗೆ ಜಾರಿದ್ದೇ ತಿಳಿಯಲಿಲ್ಲ.ಬೆಳಗ್ಗೆ ಆರು ಗಂಟೆಗೆ ಅಮ್ಮ "ಮಗಳೇ ಏಳು " ...ಎಂದು ಎಬ್ಬಿಸಿ
"ಮತ್ತೆ ಉಡಲು ಸೀರೆ ರವಿಕೆ ಹಾಕಿಕೊಳ್ಳಲು ಬಳೆ ಎಲ್ಲ ಫ್ರೆಶ್ ಆಗಿ ಬಂದು ತೆಗೆದಿಡು ಆಮೇಲೆ ಗಡಿಬಿಡೀಯಾದೀತು."ಎಂದರು.
ಒಪ್ಪಿದ ಮೈತ್ರಿ ಬೇಗನೇ ಅಮ್ಮ ಹೇಳಿದಂತೆ ಎಲ್ಲಾ ತಯಾರಿ ಮಾಡಿಟ್ಟಳು.ಏಳುಗಂಟೆಗೇ ಅಡಿಗೆ ಕಿಟ್ಟಣ್ಣ ಹಾಜರಾಗಿದ್ದ.. ಮೈತ್ರಿಯನ್ನು ಕಂಡು .." ಎಂತ ಕೂಸೇ..?" ಎಂದು ಯಾವತ್ತಿನಂತೆ ರಾಗ ಎಳೆಯಲು ಮರೆಯಲಿಲ್ಲ..
ತಿಂಡಿತಿಂದು ಸ್ನಾನ ಮಾಡಿ ಸೀರೆ ಉಡಲು ರೂಮಿಗೆ ತೆರಳಿದಳು ಮೈತ್ರಿ.ಆಗಾಗ ಡಿಸ್ಟರ್ಬ್ ಮಾಡುತ್ತಿದ್ದ ಕಿಶನ್ ನ ಸಂದೇಶಗಳು. ಒಂದೊಂದು ಪ್ರೇಮಭರಿತ ಸಂದೇಶಗಳೂ ಅವಳನ್ನು ಅವನದೇ ಗುಂಗಿನಲ್ಲಿ ಬೀಳಿಸುತ್ತಿದ್ದವು.
ತಿಳಿಹಸಿರು ಸೀರೆಗೆ ಕೆಂಪಿನ ಝರಿಯಂಚು. ಕೆಂಪು ಬಣ್ಣದ ಡಿಸೈನ್ ಮಾಡಿದ ಬ್ಲೌಸ್ ತೊಟ್ಟು ಮದುಮಗಳಂತೆ ತೋರುತ್ತಿದ್ದಳು ಮೈತ್ರಿ...
"ಪುಳ್ಳೀ ..ಇದಾ.ಮಲ್ಲಿಗೆ "....ಎಂದು ಎರಡು ಮೂರು ದಿನದಿಂದ ಕೊಯ್ದು ಮಾಲೆ ನೇಯ್ದು ಫ್ರಿಡ್ಜ್ ನಲ್ಲಿ ಶೇಖರಿಸಿಡುತ್ತಿದ್ದ ಅಜ್ಜಿ ಮೊಮ್ಮಗಳಿಗೆ ಕೊಟ್ಟರು.ಮಂಗಳಮ್ಮ ಮಗಳ ಉದ್ದ ಜಡೆಗೆ ಮುಡಿಸಿದರು.ಎರಡೂ ಕೈಗಳಿಗೆ ಹಸಿರು ಕೆಂಪು ಬಳೆಗಳನ್ನು ಮಿಶ್ರಮಾಡಿ ಹಾಕಿದ್ದಳು.ಮೈತ್ರಿ ಕಿಶನ್ ನ ಆಗಮನಕ್ಕೆ ಕಾದು ಕುಳಿತಿದ್ದಳು.
ಮೈತ್ರಿಯ ಸೋದರ ಮಾವ ಬಾಲಕೃಷ್ಣ ರಾಯರು ಮಡದಿ ಸುಜಾತಾಳೊಂದಿಗೆ ಆಗಮಿಸಿದರು.ಮಂಗಳಮ್ಮನ ತಂಗಿ ಗಂಗಾ ಕೂಡ ಬಂದರು.ಭಾಸ್ಕರ ಶಾಸ್ತ್ರಿಗಳ ಕೊನೆಯ ತಂಗಿ ಸಾವಿತ್ರಿ ಕೂಡ ಗಂಡನ ಪಿರಿ ಪಿರಿಯ ನಡುವೆಯೂ "ಅಣ್ಣನ ಮಗಳನ್ನು ನೋಡಲು ಬರುತ್ತಿದ್ದಾಗ ನಾನು ಒಂದು ಗಳಿಗೆ ಹೋಗಿ ಬರುತ್ತೇನೆ "ಎಂದು ಬಂದೇ ಬಿಟ್ಟಿದ್ದರು.
ಅಜ್ಜ "ಪುಳ್ಳೀ.. ಬಂದವರಿಗೆ ಕೈಕಾಲು ತೊಳೆಯಲು ಆ ಡ್ರಮ್ ನಲ್ಲಿ ನೀರಿದೆಯಾ ನೋಡು " ಎಂದು ಮಹೇಶನಲ್ಲಿ ಹೇಳಿದರು.
ಮಹಾಲಕ್ಷ್ಮಿ ಅಮ್ಮ ಬಂದವರಿಗೆ ಕುಡಿಯಲು ಬೆಲ್ಲ ನೀರು ಜೋಡಿಸಿಟ್ಟರು. ಮನೆಯಿಡೀ ಒಮ್ಮೆ ದೃಷ್ಟಿ ಹಾಯಿಸಿ ಎಲ್ಲವೂ ಸರಿಯಾಗಿದೆಯಲ್ಲಾ ಎಂದು ಪರಿಶೀಲಿಸಿದರು.
ಶಾಸ್ತ್ರಿಗಳ ಕುಟುಂಬ ಮಾಣಿ ಕಡೆಯವರ ಆಗಮನಕ್ಕೆ ಕಾತರದಿಂದ ಕಾಯುತ್ತಿತ್ತು..
ಮುಂದುವರಿಯುವುದು...
✍️... ಅನಿತಾ ಜಿ.ಕೆ.ಭಟ್.
20-03-2020.
ನಮಸ್ತೇ...
ಹೆಚ್ಚಿನ ಓದಿಗಾಗಿ ಬರಹದ ಕೆಳಗಡೆ ಇರುವ'Home'>ಮತ್ತು view web version ಸಂಕೇತಗಳನ್ನು ಬಳಸಿಕೊಳ್ಳಬಹುದು..💐🙏.
ದಿನದಿಂದ ದಿನಕ್ಕೆ ಕುತೂಹಲ... ಮುಂದೆ?
ReplyDelete👌👌👌🙏🙏🙏
ReplyDelete