ಜೀವನ ಮೈತ್ರಿ-ಭಾಗ ೫೦
ಅಂದು ಶಾಸ್ತ್ರಿಗಳು ಮತ್ತು ಗಣೇಶ ಶರ್ಮ ಜೊತೆಯಾಗಿ ಬಾಳೆಮಲೆ ಜೋಯಿಸರಲ್ಲಿಗೆ ತೆರಳಿದರು.ಜೋಯಿಸರಲ್ಲಿ ಮದುವೆ ಮುಹೂರ್ತ ಕೇಳಿ ಬಂದರು.ನಿಶ್ಚಿತಾರ್ಥ ಇನ್ನೆರಡು ವಾರದ ನಂತರ ಭಾನುವಾರ ಮಾಡುವುದೆಂದೂ ಅದಾಗಿ ಇಪ್ಪತ್ತಾರನೇ ದಿನ ವಾಲಗ ಊದಿಯೇ ಬಿಡುವುದೆಂದು ನಿರ್ಧಾರ ಮಾಡಲಾಯಿತು.ಅಷ್ಟರಲ್ಲಿ ಮೈತ್ರಿಗೆ ಪರೀಕ್ಷೆಗಳು ಮುಗಿಯುವುದರಿಂದ ಬೇರೇನೂ ಅಡ್ಡಿಯಿಲ್ಲ.. ಎಂಬುದು ಎರಡೂ ಕುಟುಂಬಗಳ ನಿರ್ಧಾರ.
ಬರುವಾಗ ನಿಶ್ಚಿತಾರ್ಥ ಕ್ಕೆಂದು ಮಗಳಿಗೆ ಸೀರೆಯೊಂದನ್ನು ಶಾಸ್ತ್ರಿಗಳು ತಂದರು.ಮನೆಗೆ ಬಂದು ಮಂಗಳಾಳಲ್ಲಿ ಹೇಳಿದಾಗ "ಅಲ್ಲ..ರೀ.. ಸೀರೆ ಉಡೋದು ಅವಳು..ಈಗಿನ ಫ್ಯಾಷನ್ ಸೀರೆ ಬೇಕೂಂತ ಅನಿಸೋದಿಲ್ವಾ... ನೀವು ಈ ಹಳೇ ಸ್ಟೈಲ್ ಸೀರೆ ತಂದರೆ.."ಎಂದು ಅಸಮಾಧಾನ ವ್ಯಕ್ತಪಡಿಸಿದರು."ಸರಿಯಾಗಿಲ್ಲಾಂದ್ರೆ ಇದು ನಿಂಗಾಯ್ತು..ಅವಳಿಗೆ ಬೇರೆ ಕೊಡಿಸೋಣ" ಎಂದರು ಶಾಸ್ತ್ರಿಗಳು.
ಕಾಲೇಜಿನಿಂದ ಮನೆಗೆ ಬಂದ ಮೈತ್ರಿ ಸೀರೆ ನೋಡಿ "ಪರವಾಗಿಲ್ಲ..ಅಪ್ಪನ ಸೆಲೆಕ್ಷನ್ ನನಗೆ ಒಪ್ಪುತ್ತೆ.."ಅಂದಳು.ಆದರೂ ಅವಳೇ ಸೀರೆ ತಂದಾಗ ಇದ್ದಷ್ಟು ಲವಲವಿಕೆ ಅವಳಲ್ಲಿ ಕಾಣಲಿಲ್ಲ ಮಂಗಳಮ್ಮನಿಗೆ .."ನಿಂಗಿಷ್ಟ ಆದ್ರೆ ಸರಿ.. ಇಲ್ಲಾಂದ್ರೆ ಬೇರೆ ತೆಗೆದುಕೋ.."
ಆಗ ಮಹಾಲಕ್ಷ್ಮಿ ಅಮ್ಮ "ನೋಡು ಮಂಗಳಾ..ಮಗಳಿಗೆಂದು ಅಪ್ಪ ಸೀರೆ ತಂದಾಗಿದೆ.ಅವಳೂ ಒಪ್ಪಿದ್ದಾಳೆ.ಇನ್ನು ನೀನು ಮಗಳಿಗೆ ಒಪ್ಪದಿದ್ದರೆ.. ಎಂಬ ಮಾತು ಆಡಬಾರದು..ಹಿರಿಯರು ಕೊಟ್ಟ ಸೀರೆ ಫ್ಯಾಷನ್ ಗೆ ಸರಿಹೊಂದದಿದ್ದರೂ ಅದರಲ್ಲಿ ಅವರ ಪ್ರೀತಿ ಇದೆ; ಕಾಳಜಿಯಿದೆ..ಮಗಳಿಗೆ ಹೇಳಿ ಕೊಡುವ ಮುನ್ನ ಅದು ನೆನಪಿರಲಿ.." ಅಂದಾಗ ಸುಮ್ಮನಾದಳು ಮಂಗಳಮ್ಮ.. ಮೈತ್ರಿ ಯೂ ರೂಮ್ ಸೇರಿದಳು.ಅಮ್ಮ ಆಡಿದ್ದಕ್ಕೆಲ್ಲ ಏನಾದರೊಂದು ಹೇಳುವ ಅಜ್ಜಿ.. ಇನ್ನು ಮದುವೆಯಾದ ಮೇಲೆ ನನಗೂ ಹೀಗೆ ಕೊಂಕು ಹೇಳುವ ಅತ್ತೆ ಆದರೆ ಕಿಶನ್ ಅಮ್ಮ.. ಯೋಚಿಸಿ ಅವಳ ಮನಸ್ಸು ವ್ಯಾಕುಲಗೊಂಡಿತು.
ಅಷ್ಟರಲ್ಲಿ ಕಿಶನ್ ಫೋನ್ ಮಾಡಿದ..
"ಮುದ್ಗೊಂಬೆ.."
"..ಹಾಯ್"
"ಇನ್ನು ಎರಡೇ ವಾರ ಇರೋದು ಎಂಗೇಜ್ಮೆಂಟ್ ಗೆ.."
"ಹೌದು..ನಂಗೂ ಏನೋ ಭಯ,ಬೇಸರ ಒಟ್ಟೊಟ್ಟಿಗೇ ಆಗ್ತಿದೆ.."
"ಭಯ ,ಬೇಸರ ಎಲ್ಲ ಬಿಟ್ಬಿಡು..ನಾನಿದೇನಲ್ಲ .. ಹಿಂದೆ ಮುಂದೆ ಸುತ್ತೋಕೆ..."
"ಹಾಗಲ್ಲ.. ಕಿಶನ್.". ಎನ್ನುತ್ತಾ ಇಂದಿನ ಸನ್ನಿವೇಶವನ್ನು ವಿವರಿಸಿದಳು..
"ಮುದ್ಗೊಂಬೆ..ನನ್ನ ಅಮ್ಮ ಅಂತಹವರಲ್ಲ..ಕಂಡದ್ದಕ್ಕೆಲ್ಲ ಕೊಂಕು ಆಡುವವರಲ್ಲ..ಗದರುವವರಲ್ಲ..ಸಾಧು ಸ್ವಭಾವದವರು..ನನ್ನಂತೆ.." ಎನ್ನುತ್ತಾ ನಕ್ಕ..
"ಮಗನಿಗೊಂದು ಸೊಸೆಗೊಂದು ನೀತಿ ಮಾಡಿದರೆ ಅಂತ.."
"ಏನೂ ಆಗಲ್ಲ.. ನಾನು ಭರವಸೆ ಕೊಡ್ತೀನಿ.." ಅಂದಾಗ ಅವಳ ಮನಸು ಹಗುರವಾಯಿತು.
"ಆಫೀಸ್ ಮುಗಿಸಿ ಬೇಗ ಹೊರಟಿರೋ ಹಾಗಿದೆ."
"ಹೌದು ಅದೇ ಹೇಳೋದೇ ಮರೆತೆ.."
"ಏನಪ್ಪಾ ಅಂತಹ ವಿಶೇಷ.."
"ರಿಂಗ್ ಮಾಡಿಸೋಕೆ ಹೊರಟಿದೀನಿ.. ಶಾಪ್ ಗೆ ಹೋಗಿ ಡಿಸೈನ್ ಫೊಟೋ ಕಳಿಸ್ತೀನಿ.ಸೆಲೆಕ್ಟ್ ಮಾಡಿ ಹೇಳು ಆಯ್ತಾ.. ಅದ್ಕೇ ಕರೆ ಮಾಡಿದ್ದು.." ಎಂದ.
ಅಪ್ಪ ನನ್ನಲ್ಲಿ ಒಂದು ಮಾತೂ ಹೇಳದೆ ಸೀರೆ ತಂದರು.ಕಿಶನ್ ದೂರದಲ್ಲಿದ್ದರೂ ಕರೆಮಾಡಿ ಸೆಲೆಕ್ಟ್ ಮಾಡಲು ಹೇಳಿದ..ಇಲ್ಲೇ ಭಿನ್ನತೆಯನ್ನು ಕಂಡಳು ಅಪ್ಪನ ಮತ್ತು ಕಿಶನ್ ನ ವರ್ತನೆಯಲ್ಲಿ.. ಸ್ವಲ್ಪ ಹೊತ್ತಿನಲ್ಲಿ ಕಳುಹಿಸಿದ ಫೊಟೋ ಗಳಲ್ಲಿ ತನಗಿಷ್ಟವಾದದ್ದನ್ನು ಸೆಲೆಕ್ಟ್ ಮಾಡಿದಳು. ಕಿಶನ್ ಅದೇ ಪ್ಯಾಟರ್ನ್ ರೆಡಿ ಮಾಡಲು ಹೇಳಿದ..
ಕಿಶನ್ ನ ಮನೆಯಲ್ಲಿ ಕಳೆದ ಬಾರಿ ಬಂದಾಗ ಮೈತ್ರಿಗೆಂದು ಕಿಶನ್ ತಂದಿದ್ದ ಸೀರೆ ಬ್ಲೌಸ್ ಹೊಲಿಯಲು ಕೊಟ್ಟು ಬಂದಿದ್ದರು ಮಮತಾ.ನಿನಗೆ ಯಾವ ಡಿಸೈನ್ ಬೇಕು ಎಂದು ಮೈತ್ರಿ ಯಲ್ಲೇ ಕೇಳಲು ಕರೆ ಮಾಡಿದರು.ಅದು ಆಕೆಗೆ ಇನ್ನಷ್ಟು ಸಂತಸಕ್ಕೆ ಕಾರಣವಾಯಿತು...ನನ್ನ ಆಸೆಗಳಿಗೂ ಬೆಲೆಯಿದೆಯಲ್ಲಾ..ಎಂದು.ಭಾವೀ ಅತ್ತೆ ಸೊಸೆ ಸ್ವಲ್ಪ ಹೊತ್ತು ಹರಟಿದರು..
****
ಸೌಜನ್ಯಳ ಕಡೆಯವರು ಮನೆಗೆ ತೆರಳಿದರು.ಇಳಿಸಂಜೆ ಕೇಶವ್ ಸೌಜನ್ಯಳ ಮಧುರ ನೆನಪುಗಳನ್ನು ಮೆಲಕುಹಾಕಿ ನಸುನಗುತ್ತಿದ್ದ ..ಆಗ ಅನಾಮಧೇಯ ಕರೆಯೊಂದು ಬಂದಿತು..
"ಹಲೋ ಕೇಶವ್..."ಎಂದ ದನಿ ಗಡುಸಾಗಿ .
"ಹಲೋ.. " ಎಂದನು.
ಅತ್ತಲಿಂದ ಏನೋ ಗಂಭೀರವಾದ ಮಾತುಗಳು.ಕಿವಿಗೆ ಸೀಸವೆರೆದಂತಿತ್ತು.ಆದರೂ ತೋರಗೊಡದೆ ಸಾವರಿಸಿಕೊಂಡ ಕೇಶವ್.
"ಏಯ್..ಯಾವನೋ ನೀನು..ಹಾಗೆಲ್ಲ ನನ್ನ ಹುಡುಗಿ ಬಗ್ಗೆ ಹೇಳೋನು.."
ಅತ್ತಲಿಂದ ಅಷ್ಟೇ ಎತ್ತರದ ದನಿಯಲ್ಲಿ ಬಂತು ಮಾತು..
ಸ್ವಲ್ಪ ವೇ ಹೊತ್ತಲ್ಲಿ ಕರೆ ನಿಲುಗಡೆಯಾಯಿತು.
ಕೇಶವ್ ಅದಕ್ಕೆ ಸೊಪ್ಪು ಹಾಕಲಿಲ್ಲ.ಆತನಿಗೆ ಅದರಲ್ಲಿ ಎಷ್ಟು ಸತ್ಯವಿದೆಯೋ ಅಥವಾ ಸುಳ್ಳೇ ಆಗಿರಲೂಬಹುದು ಎಂಬ ಸಂಶಯ.ಸೌಜನ್ಯಳ ಮೇಲೆ ನಂಬಿಕೆಯಿದೆ..ಅದಕ್ಕಿಂತ ಹೆಚ್ಚಾಗಿ ಅಪ್ರತಿಯ ಸುಂದರಿಯನ್ನು ತನ್ನವಳನ್ನಾಗಿಸಿಕೊಳ್ಳುವ ಅದಮ್ಯ ಬಯಕೆ.
ರಾತ್ರಿಯಾಗುತ್ತಿದ್ದಂತೆ ಸೌಜನ್ಯ ಕೇಶವ್ ನ ಚಾಟಿಂಗ್ ಎಗ್ಗಿಲ್ಲದೆ ಸಾಗಿತು.ಅನಾಮಧೇಯ ಕರೆಯನ್ನೂ ಮರೆಸುವಂತೆ ಮೋಡಿಗೊಳಗಾದ ಕೇಶವ್.
ಸೌಜನ್ಯ:"ನನ್ನನ್ನು ನಿಮ್ಮ ಮನೆಯವರು ಮೆಚ್ಚಿಕೊಂಡ್ರಾ..?"
"ನನ್ನಮ್ಮ ನಂತೂ ಭಾವೀ ಸೊಸೆಯನ್ನು ಹೊಗಳಿ ಅಟ್ಟಕ್ಕೇರಿಸಿದ್ರು ಗೊತ್ತಾ...?"
"ಹೂಂ.. ಹೌದಾ.." ಎಂದಳು ನಗುತ್ತಾ.
"ನನ್ನನೇನಂದ್ರು ಮಹಾರಾಣಿಯವರ ತಂದೆಯವರು.."
"ಅವರಿಗೆ ಹಳ್ಳಿ ಅಂದ್ರೆ ಪಂಚಪ್ರಾಣ.ಮಗಳೂ ಹಳ್ಳಿ ಮನೆಗೇ ಹೋಗ್ತಾ ಇದ್ದಾಳೇಂತ ಖುಷಿಪಟ್ಟರು."
ಕೇಶವ್:ಪೇಟೆ ಹುಡುಗಿಯಾದರೂ .. ತೀರಾ ಫ್ಯಾಷನ್ ಇಲ್ಲ.. ಸಿಂಪಲ್..ಬಳೆ ಬಿಂದಿ ಹಾಕ್ಕೊಂಡು ಜಡೆ ನೆಯ್ದು ಹೂವು ಮುಡಿದು ಸರಳವಾಗಿ ಸೀರೆಯುಟ್ಟು ಬಂದದ್ದು ಎಲ್ಲರಿಗೂ ಇಷ್ಟವಾಯ್ತು.. ನಾನಂತೂ..💞💞
"ಏನು..ನೀವಂತೂ.. ಹೇಳಿ.."
"ಹೇಳೋದೇನು ನಿಂಗೆ ಗೊತ್ತಲ್ಲಾ..?"
"ಇಲ್ಲಪ್ಪಾ ನಂಗೇನು ಗೊತ್ತು..?"
"ನಾನು ಜಾರೋದಷ್ಟೇ ಬಾಕಿ... ಅಷ್ಟರಲ್ಲಿ ಮನೆಯಿಂದ ಕರೆ ಬಂತು.."
"ಹ್ಹ ಹ್ಹ ಹ್ಹಾ.. ನಾನಂತೂ ಬಚಾವ್...ರಾಯರಿಂದ.."
"ನಾಡಿದ್ದು ಭಾನುವಾರ ಬರ್ತಿದೀವಿ.ನಿಮ್ಮ ಕಡೆ..."
"ಬನ್ನಿ ಬನ್ನಿ.."
"ಅಮ್ಮಾವ್ರಿಗೆ ಏನು ತರ್ಲೀ.."
"ನಂಗೇನೂ ಹೆಚ್ಚು ಬೇಡ.. ಎಂಗೇಜ್ಮೆಂಟ್ ಗೆ ರಿಂಗ್.. ಒಂದು ಕಾಂಜೀವರಂ ಸೀರೆ.." ಎಂದು ಹೇಳಿದಾಗ ಆಕೆಗೆ ಅಮ್ಮ ಹೇಳಿದ ಬುದ್ಧಿವಾದ ನೆನಪಾಯಿತು..
ಫಕ್ಕನೆ ಸಾವರಿಸಿಕೊಂಡು .." ಇಲ್ಲಪ್ಪಾ .. ಸುಮ್ನೆ ತಮಾಷೆಗೆ ಹೇಳಿದೆ..ಬೇಕಂತಲ್ಲ.. ಅಷ್ಟಕ್ಕೂ ನಮ್ಮಲ್ಲಿ ನಿಶ್ಚಿತಾರ್ಥ ಕ್ಕೆ ರಿಂಗ್ ಹಾಕಿಸೋ ;ಸೀರೆ ಕೊಡಿಸೋ ಅಭ್ಯಾಸ ಇಲ್ಲ ತಾನೇ .."
"ಹೊಸ ಕ್ರಮ ಮಾಡ್ತಾ ಇದ್ದಾರೆ.ನಾವೂ ಭರ್ಜರಿಯಾಗಿಯೇ ಮಾಡೋಣ.." ಎಂದಾಗ ಸೌಜನ್ಯಳಿಗೆ ಅಪೂರ್ವ ಆನಂದವಾಯಿತು..
ರೋಗಿ ಬಯಸಿದ್ದೂ ಹಾಲು ವೈದ್ಯ ಕೊಟ್ಟದ್ದೂ ಹಾಲು ಎಂದಂತಾಯಿತು..
"ಹೂಂ..ನಿಮ್ಮಿಷ್ಟ.. " ಎಂದಾಗ ಸಹಜವಾಗಿಯೇ ನಾಚಿದಳು..
"ನಾಚಿದಾಗ ಕೆನ್ನೆಯ ರಂಗೇರಿದ್ದನ್ನು ನೋಡುವ ತವಕ.."ಎಂದಿದ್ದೇ ತಡ
ನಾಚಿಕೆ ಸುಂದರಿಯ ಹಾಟ್ ಫೊಟೋ ರವಾನೆಯಾಯಿತು.ಕೇಶವನ ಬಯಕೆ ಬಲವಾಯಿತು.ಇನ್ನು ಕೆಲವೇ ದಿನಗಳಲ್ಲಿ ನನ್ನರಸಿ ಆಗುವವಳ ನೆನೆಯುತ್ತಾ ಅವಳ ಯೌವ್ವನದ ಸಿರಿಯನ್ನು ಸವಿಯುವ ಸೌಭಾಗ್ಯ ವನ್ನು ನೆನೆದು ದಿಂಬನ್ನು ತಬ್ಬಿಕೊಂಡು
ಮಲಗಿದ ಕೇಶವ್..
ಇತ್ತ ಸೌಜನ್ಯ ತನ್ನ ಹಳೆಯ ನೆನಪಿನ ಪುಟಗಳನ್ನು ತೆರೆದು ಕಣ್ಣೀರಿಡುತ್ತಿದ್ದಳು . ಕಣ್ಣೀರು ಹನಿಹನಿಯಾಗಿ ಜಿನುಗಿ ನೋವೆಲ್ಲಾ ಕರಗಿ ...ಹೊಸ ಬಾಳ ಕನಸು ಕಟ್ಟತೊಡಗಿದಳು..ಚುಚ್ಚುವ ಗಡ್ಡದ ಹಳ್ಳಿಯ ಯುವಕನ ಬಿಸಿ ಬಿಸಿ ಆಲಿಂಗನವನ್ನು ನೆನೆದು ಅವನಿಗಾಗಿ ಹಾತೊರೆದಳು..
ಮುಂದುವರಿಯುವುದು..
✍️... ಅನಿತಾ ಜಿ.ಕೆ.ಭಟ್.
27-03-2020.
👏👏👏
ReplyDelete💐🙏 ಧನ್ಯವಾದಗಳು
ReplyDelete