ಜೀವನ ಮೈತ್ರಿ-ಭಾಗ 51
ಬೆಳಿಗ್ಗೆ ಕೇಶವ್ ಹಾಸಿಗೆಯಿಂದ ಏಳುವ ಮುನ್ನವೇ ಸೌಜನ್ಯಳಿಗೊಂದು ಸಂದೇಶ ಕಳುಹಿಸಿಯೇ ದಿನದ ಶುಭಾರಂಭ.ಆಗಾಗ್ಗೆ ಚಾಟಿಂಗ್ , ಹರಟೆ,ನಗು.. ಇಬ್ಬರಿಗೂ ಆತುರ ಕಾತುರತೆ..ಅಮ್ಮ ಸುಮಾ ಡಯಟ್ ಆಹಾರ ಇನ್ನೂ ಮುಂದುವರಿಸಿದ್ದರು.."ಸಾಕಮ್ಮಾ ಇನ್ನು ಡಯಟ್" ಎಂದು ಗೋಗರೆದಿದ್ದ ಕೇಶವ್..
"ಮದುವೆವರೆಗೆ ಡಯಟ್ ಆಮೇಲೆ ನಿನಗೆ ಬೇಕಾದ್ದನ್ನು ಸೌಜನ್ಯಳಲ್ಲಿ ಮಾಡಿಸಿ ತಿನ್ನು.. ನನ್ನದೂ ಸ್ಪೆಷಲ್ ಅಡುಗೆಗಳು ಆಗಾಗ ಇರುತ್ತೆ.."
"ಅಮ್ಮಾ...ಸೌಜನ್ಯಳಿಗೆ ಅಡುಗೆ ಮಾಡಲು ಬರಲ್ಲಂತೆ.."
"ಅದೇನು ಮಹಾವಿದ್ಯೇನಾ ... ಸ್ವಲ್ಪ ಸಮಯ ಅಡುಗೆ ಮಾಡಿದಾಗ ಅಭ್ಯಾಸವಾಗುತ್ತೆ .ನಂಗೂ ಮದುವೆಯಾದಾಗ ಅಡುಗೆ ಮಾಡೋಕೆ ಬರ್ತಿರ್ಲಿಲ್ಲ.."
"ಹೂಂ.. "ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತ.ಸೌಜನ್ಯಳ ಜೊತೆಗೆ ಚಾಟಿಂಗ್ ನಡೆಸಲು..
"ಇವತ್ತೇನು ತಿಂಡಿ.."ಕೇಳಿದಳು ಸೌಜನ್ಯ.
ಕೇಶವನಿಗೆ ಇರುಸು ಮುರುಸು.ಗಂಜಿಯೂಟ ಅಂತ ಹೇಳಲೋ ಬೇಡವೋ.ಹೇಳಿದರೆ ಏನಾದರೂ ಅಂದುಕೊಂಡರೂ ಕಷ್ಟ.ಎಂದುಕೊಂಡು ಮೊದಲು ಅವಳನ್ನೇ ಕೇಳಿದ..
"ನಂಗೆ ಇವತ್ತು ಉಪ್ಪಿಟ್ಟು..ಅಮ್ಮಂಗೆ ಇವತ್ತು ಮೀಟಿಂಗ್ ಅಂತ ಬೇಗ ಹೋಗ್ಬೇಕಿತ್ತು..ಅದಕ್ಕೆ ಮನೆ ಸಹಾಯಕಿ ಉಪ್ಪಿಟ್ಟು ಮಾಡಿದ್ರು..ನಂಗೆ ಸೇರೇ ಇಲ್ಲ ಅದು.. ಚೂರುತಿಂದ ಶಾಸ್ತ್ರ ಮಾಡಿ ಹಾಲು ಕುಡಿದೆ.ಫ್ರೂಟ್ಸ್ ತರಕಾರಿ ಮಧ್ಯೆ ಮಧ್ಯೆ ತಿಂತೀನಿ.ಆಗ ಮಧ್ಯಾಹ್ನ ಆಗುತ್ತೆ.. ಸುನೀತಾ ಮಧ್ಯಾಹ್ನದ ಅಡುಗೆ ಮಾಡ್ತಾ ಇದಾರೆ.. ಹ್ಮ್..ಕೆಳಗಿನಿಂದ ಪರಿಮಳ ಚೆನ್ನಾಗಿ ಬರುತ್ತಿದೆ.."
"ಹೌದು ನಿಂಗೆ ಏನೂ ಅಡುಗೆ ಮಾಡೋಕೆ ಬರಲ್ವಾ.."
"ಇಲ್ಲ.. ಇದುವರೆಗೆ ಓದು ಅಂತ ಆಯ್ತು.. ಇನ್ನು ಮದುವೆಗೆ ಕೆಲವೇ ದಿನ ಇರುವುದು ಈಗ ಹಾಯಾಗಿರು ಅಂತಾರೆ ಅಮ್ಮ.. ಮತ್ತೆ ನಿಮ್ಮನೆಗೆ ಬಂದ ಮೇಲೆ ಕಲೀತೀನಿ..ಆಗದೇ ರಾಜಾ.."
"ಹೂಂ.. ಆಗಬಹುದು.. ನನ್ನದೇನೂ ಅಭ್ಯಂತರವಿಲ್ಲ... ನಾನು ಮಹಾ ತಿಂಡಿಪೋತ ಮಾತ್ರ.."
"ಹೌದು ತಿಂಡಿಪೋತನಿಗೆ ಇವತ್ತೇನು ಗಂಜಿ ಊಟ..?"
"ನಿಂಗೆ ಹೇಗೆ ಗೊತ್ತಾಯ್ತು..?"
"ಆಗಲೇ ನಿಮ್ಮಮ್ಮನ ಜೊತೆ ಒಂದು ರೌಂಡ್ ಚಾಟಿಂಗ್ ಆಯ್ತು.."
"ಹಾಂ..ಬಹಳ ಚಾಲಾಕಿ ನೀನು..ಆಗಲೇ ನಮ್ಮಮ್ಮನನ್ನು ಬುಟ್ಟಿಗೆ ಹಾಕೊಂಡಿದೀಯಾ.."
"ಅಷ್ಟೇ ಅಲ್ಲ..ಈ ಜಂಟಲ್ ಮ್ಯಾನ್ ನನ್ನೂ..💞💞"
"ಸೋ ಸ್ವೀಟ್.. ಉತ್ಪ್ರೇಕ್ಷೆ ಅಲ್ಲ ನಿನ್ನ ಮಾತು.. ನಾನು ಸೋತಿದೀನಿ..ನಿನ್ನ ತಾಳಕ್ಕೆ ತಕ್ಕಂತೆ ಕುಣಿಯಲು ಶುರುಮಾಡಿದೆ ಈ ಹೃದಯ.."
"ಹೌದು ...ಹೃದಯ ಕುಣಿಯುವುದು ಅಂದರೇನು..?"
"ಒಬ್ಬರ ಭಾವನೆಗೆ ತಕ್ಕಂತೆ ವರ್ತಿಸುವುದು ಎಂಬರ್ಥದಲ್ಲಿ ಬಳಸಿದೆ.ಮಾತಲ್ಲಿ ಹೇಳದೆಯೆ ಮನಸ್ಸನ್ನು ಓದಬೇಕಾದರೆ ಹೃದಯ ಅರಿಯಬೇಕು.ಹೃದಯ ಹೃದಯಗಳ ಸಂಗಮವೇ ಪ್ರೇಮ.ತಾಯಿಮಗುವಿನ ನಡುವಿನ ಪ್ರೇಮ ವಾತ್ಸಲ್ಯ ಭರಿತವಾಗಿದ್ದರೆ ಗಂಡು ಹೆಣ್ಣಿನ ನಡುವಿನ ಪ್ರೇಮ ಶೃಂಗಾರಮಯ ವಾಗಿರುತ್ತದೆ.."
"ಪ್ರೇಮದ ಬಗ್ಗೆ ಬಹಳ ಡೀಪ್ ಸ್ಟಡಿ ಮಾಡಿದ್ದೀರಿ ಅನಿಸುತ್ತದೆ..."
"ಹಾಗೇನಿಲ್ಲ..ಜೀವನದ ಅನುಭವಗಳು.."
"ಜೀವನದ ಅನುಭವಗಳು ಮಹತ್ವದ ಪಾಠವನ್ನು ಕಲಿಸುತ್ತವೆ.ತಪ್ಪಿನಡೆದಾಗ ಕಿವಿ ಹಿಂಡುವುದು ಜೀವನದ ಪಾಠಗಳಿಂದ ಕಲಿತ ಜಾಗೃತಪ್ರಜ್ಞೆ.."
"ಒಮ್ಮೆ ಎಡವಿದಾಗ ಆದ ನೋವು ಮತ್ತೊಮ್ಮೆ ಎಡವದಂತೆ ಎಚ್ಚರವಹಿಸುವಂತೆ ಪ್ರೇರೇಪಿಸುತ್ತದೆ.ಇದು ಇತರರು ಹೇಳಿ ಬರುವ ಬುದ್ಧಿಗಿಂತ ಪರಿಣಾಮಕಾರಿ.ಸ್ವಯಂಪ್ರಜ್ಞೆ ಜಾಗೃತವಾದರೆ ನಮಗದುವೇ ಬಾಳಿಗೆ ದಾರಿದೀಪ."
"ಹೌದು ರಾಜಾ.. ಎಷ್ಟು ಚೆನ್ನಾಗಿ ಹೇಳಿದಿರಿ.. ಒಂದು ತಪ್ಪು ಹೆಜ್ಜೆ ಇಡೀ ಬದುಕನ್ನೇ ಅಂಧಕಾರಕ್ಕೆ ತಳ್ಳಬಹುದು.ಒಂದು ಜಾಗೃತ ನಡೆ ಕಾರ್ಗತ್ತಲ ಬಾಳಿಗೆ ಬೆಳಕಿನ ಅಮೃತಸಿಂಚನಗೈಯಬಹುದು. ಬದುಕಿನ ಪುಟ್ಟ ಪುಟ್ಟ ಸಂತೋಷಗಳನ್ನು ಅನುಭವಿಸುತ್ತಾ ಮಹತ್ತರ ಸಂತೋಷಕ್ಕಾಗಿ ಕನಸು ಕಾಣುತ್ತಿರಬೇಕು.ಅದು ಬಿಟ್ಟು ದೂರದಲ್ಲಿರುವ ಸುಖಕ್ಕೆಂದೇ ಆಸೆ ಪಟ್ಟರೆ ಹತ್ತಿರದಲ್ಲಿರುವ ಅನುದಿನವೂ ಅನುಭವಿಸುತ್ತಿರುವ ನೆಮ್ಮದಿ ಸಂತೃಪ್ತಿ ಮರೀಚಿಕೆಯಾದೀತು .."
"ಗಹನವಾಗಿ ಬದುಕಿನ ಆಳ ಅಗಲದ ಅರಿವಾದಂತಿದೆ ನಿಮ್ಮ ಮಾತಿನ ಧಾಟಿ.."
ಒಂದು ಕ್ಷಣ ನಾನೇನು ಹೇಳಿದ್ದೇನೆ..ಹೇಳುತ್ತಿದ್ದೇನೆ ಎಂದು ಪ್ರಶ್ನಿಸಿಕೊಂಡ ಸೌಜನ್ಯ.. "ನಾನು ನಿನ್ನೆ ಮಹಾತ್ಮರ ಬದುಕಿನ ಬಗೆಗಿನ ಪುಸ್ತಕ ವೊಂದನ್ನು ಓದಿದ್ದೆ..ಅದೇ ತಲೆಯಲ್ಲಿತ್ತು..ಸಾರಿ ಡಿಯರ್.. " ಎನ್ನುತ್ತಾ ಬೆವರುತ್ತಿದ್ದ ತನ್ನ ಹಣೆಯನ್ನು ಒರೆಸಿಕೊಂಡು "ಬಾಯ್" ಎಂದಳು..
ಕೇಶವನಿಗೆ ದಿಢೀರನೆ ನಿಶ್ಚಿತಾರ್ಥ ನಿಗದಿಯಾದದ್ದು ಎಲ್ಲರಿಗೂ ಆಶ್ಚರ್ಯ ದ ಸಂಗತಿಯಾಗಿತ್ತು.ನಿಶ್ಚಿತಾರ್ಥಕ್ಕೆ ಆಮಂತ್ರಿಸಲು ಕರೆ ಮಾಡಿದಾಗ ಎಲ್ಲರದೂ ಒಂದೇ ತೆರನಾದ ಪ್ರಶ್ನೆಗಳು.ಬಂಗಾರಣ್ಣನಿಗೆ ಉತ್ತರಿಸಿ ಸಾಕುಬೇಕಾಯ್ತು.. ಸುಮಾ ಮಾತ್ರ ತನ್ನ ಬಳಗದವರಲ್ಲಿ ಬಹಳ ಹೆಮ್ಮೆಯಿಂದಲೇ ಹೇಳಿಕೊಂಡರು.ಕೇಶವ್ ತನ್ನ ಮತ್ತು ಸೌಜನ್ಯಳ ಫೊಟೋ ವನ್ನು ಎಫ್ ಬಿ ಯಲ್ಲಿ ಅಪ್ಲೋಡ್ ಮಾಡಿದ್ದೇ ತಡ ಭಾಗವತ ವೆಂಕಟ್ ಹುಬ್ಬೇರಿಸಿ ನೋಡಿದ.
"ಅರೇ..ಇವನಿಗೆ ಒಲಿದೇಬಿಟ್ಟಳಾ ಸುರಸುಂದರಿ.. ಯಾವುದಕ್ಕೂ ಅದೃಷ್ಟವಿರಬೇಕು.."ಎಂದು ಕೊಂಡ.
ಅಮ್ಮನಿಗೂ ತೋರಿಸಿದ."ಅಮ್ಮಾ ಮೈತ್ರಿ ಯನ್ನು ನೋಡಲು ಬಂದಿದ್ದ ಬಾರಂತಡ್ಕದ ಕೇಶವನಿಗೆ ಅಂತಿಂಥ ಹೆಣ್ಣಲ್ಲ ಅಪ್ಸರೆಯೇ ದೊರೆತಿದ್ದಾಳೆ ."
"ಹೌದಲ್ವಾ...ಅಲ್ಲ ವೆಂಕಟ್..ನಿನ್ನಣ್ಣ ಮುರಲಿಗೆ ಇಷ್ಟು ಸಮಯ ಹುಡುಕಿದ್ರೂ ಇಂತಹ ಹುಡುಗಿ ಸಿಕ್ಕಿಲ್ಲ..ಈ ಹಳ್ಳಿಯ ಮನೆಯಲ್ಲಿರುವವನನ್ನು ಹೇಗೆ ಒಪ್ಪಿದಳೋ.."
"ಅದೇ ಅಮ್ಮಾ..ಲಕ್ ಅನ್ನೋದು.."
"ಇರಬಹುದು ಮಗ.."
ನಂತರ ಫೋನ್ ಮಾಡಿ ಮಂಗಳಾಗೆ ತಿಳಿಸಿದರು.ಅವರು
"ಯಾರಿಗೆ ಯಾವ ಮನೆಯ ಹೊಸ್ತಿಲು ದಾಟುವ ಯೋಗವಿದೆಯೋ ಅಲ್ಲಿಗೇ ಸಲ್ಲುವುದು..ಅವನಿಗೆ ಒಳ್ಳೆ ಸಂಬಂಧ ಸಿಗಲಿ.ಬದುಕು ಸುಖಮಯವಾಗಿರಲಿ.." ಎಂದು ಒಂದೇ ಭರದಲ್ಲಿ ಶುಭಕೋರಿದ್ದನ್ನು ಕಂಡು ಶಶಿಗೇ ಆಶ್ಚರ್ಯ.
ನಾನು ಮಂಗಳಾಳ ಹೊಟ್ಟೆಯುರಿಸಿಬೇಕೆಂದು ಕರೆಮಾಡಿದರೆ ಸ್ವಲ್ಪವೂ ಅಸೂಯೆಪಡದೆ ಹೇಗೆ ಮಂಗಳಾ ಅವನಿಗೆ ಒಳ್ಳೆಯದು ಬಗೆಯುತ್ತಾಳೋ.. ಎಂದು ಹೊಟ್ಟೆಕಿಚ್ಚು ಪಟ್ಟುಕೊಂಡಳು.
******
ಕಿಶನ್ ಮೈತ್ರಿ ಗೆ ಕರೆಮಾಡಿ ದಿನಕ್ಕೆರಡು ಬಾರಿ ಮಾತನಾಡುತ್ತಿದ್ದ.ಮೈತ್ರಿ ಪರೀಕ್ಷಾ ತಯಾರಿಯಲ್ಲಿದ್ದಳು.ಮನೆಯಲ್ಲಿ ನಿಶ್ಚಿತಾರ್ಥ,ಮದುವೆಯ ತಯಾರಿಗಳು ಒಂದೊಂದಾಗಿ ಆರಂಭವಾಗಿದ್ದವು.
*****
ಅಂದು ಶನಿವಾರ ಸಂಜೆ ಆರು ಗಂಟೆಯ ಸಮಯ.ಬಾರಂತಡ್ಕದ ಮನೆಯ ಅಂಗಳದಲ್ಲಿ ರಾಜಹಂಸ ಬಸ್, ಬಾಡಿಗೆ ಕಾರು ಬಂದು ನಿಂತಿತ್ತು.ಬೆಂಗಳೂರಿಗೆ ತೆರಳಲು ಬಂಧುಮಿತ್ರರು ಆಗಮಿಸಿದ್ದರು.ರಾತ್ರಿಯಾಗುತ್ತಿದ್ದಂತೆ ಬಸ್ ಕಾರು ಬೆಂಗಳೂರಿನತ್ತ ಪ್ರಯಾಣ ಬೆಳೆಸಿತು.
ಕಣ್ಣ ತುಂಬಾ ಕನಸುಗಳನ್ನು ಹೊತ್ತು ಕೇಶವ್ ಕಾರಿನ ಮುಂಭಾಗದಲ್ಲಿ ಆಸೀನನಾದ..
ಬೆಳಗಿನ ಜಾವ ಬೆಂಗಳೂರು ತಲುಪಿ ಲಾಡ್ಜ್ ಒಂದರಲ್ಲಿ ತಂಗಿ ಫ್ರೆಶ್ ಆದರು.ತಿಂಡಿತಿಂದರು.ಆಗಲೇ ಸೌಜನ್ಯ ಫೋನ್ ಮಾಡಿ ಕೇಶವ್ ನನ್ನು ವಿಚಾರಿಸಿಕೊಂಡಳು.
ಇದನ್ನು ಅರಿತ ಬಂಧುಗಳು ಅಡ್ಡಿಯಿಲ್ಲ ಮದುಮಗಳು.ಈಗಲೇ ಕೇಶವ್ ನ ಬಗ್ಗೆ ಎಷ್ಟು ಕೇರ್..ಎಂದು ಕಾಲೆಳೆದರು..
"ಮತ್ತೇನು ಅಂತ ಅಂದುಕೊಂಡಿರಿ.ನಮ್ಮ ಬಂಗಾರಣ್ಣನ ಸೊಸೆಯಾಗುವವರನ್ನು.. ಬಂಗಾರದಂತಹ ಹುಡುಗಿ.". ಎಂದು ಶೇಷಣ್ಣ ತನ್ನ ಬಾಯಗಲಿಸಿ ನಕ್ಕು ಸೆಟ್ಟಿನ ಹಲ್ಲಿನ ಪ್ರದರ್ಶನ ಮಾಡಿದ.
ಸರಿಯಾದ ಸಮಯಕ್ಕೆ ನರಸಿಂಹ ರಾಯರ ಮನೆ ಮುಂದೆ ಬಸ್, ಕಾರ್ ನಿಂತಿತು.ಎಲ್ಲರಿಗೂ ಸತ್ಕಾರ, ಉಪಚಾರ ಸಾಂಗವಾಗಿ ನೆರವೇರಿತು.ಕೇಶವನ ಕಣ್ಣುಗಳು ಸೌಜನ್ಯಳನ್ನು ಅರಸುತ್ತಿದ್ದವು.
ಮುಂದುವರಿಯುವುದು..
✍️...ಅನಿತಾ ಜಿ.ಕೆ.ಭಟ್.
28-03-2020.
ಮುಂದೆ....???
ReplyDeleteಕಾಯುತ್ತಿದ್ದೇನೆ...
ಥ್ಯಾಂಕ್ಯೂ 💐🙏
ReplyDelete