ಜೀವನ ಮೈತ್ರಿ - ಭಾಗ ೫೨
ಕಿಶನ್ ಮೈತ್ರಿಗೆ ನಿಶ್ಚಿತಾರ್ಥ ದ ದಿನ ತೊಡಿಸಲು ಉಂಗುರಕ್ಕೆ ಆರ್ಡರ್ ಮಾಡಿದ್ದ.ಅದು ಇಂದು ಅವನ ಕೈಸೇರಿತು.ರೂಮಿಗೆ ಬಂದವನೇ ಕಣ್ಣಲ್ಲಿ ದಿಟ್ಟಿಸಿ ನೋಡಿದ.ಮೈತ್ರಿಯ ಕೈಬೆರಳಿಗೆ ಹೇಗೆ ಕಾಣಬಹುದು ತಾನೇ ಕಲ್ಪಿಸಿಕೊಂಡ.ಆತನ ಮುದ್ದಿನ ರಾಣಿಗೆ ಅದ್ಹೇಗೆ ಗೊತ್ತಾಯ್ತೋ ಏನೋ..ಕರೆಮಾಡಿದಳು.
"ಹಾಯ್ ಕಿಶನ್.. ಏನು ಸಮಾಚಾರ...?"
"ಮುದ್ಗೊಂಬೆ... ನಿನ್ನನ್ನೇ ನೆನಪುಮಾಡಿಕೊಳ್ಳುತ್ತಿದ್ದೆ..ನಿನ್ನ ಮನಸ್ಸು ಅದನ್ನರಿತು ಕರೆಮಾಡಲು ಹೇಳಿರಬೇಕು."
"ತಮಾಷೆ ಮಾಡ್ತಿಲ್ಲ ತಾನೇ.. ನಂಗೆ ಈಗ ಫೋನ್ ಮಾಡ್ಲೇ ಬೇಕು ಅಂತನಿಸಿತು..ಏನೋ.ಏಕೋ..ನಾನರಿಯೆ..ಓದೋದಕ್ಕೆ ಅಂತ ಜಗಲಿಯ ಮೂಲೆಯಲ್ಲಿ ಕುಳಿತಿದ್ದೀನಿ . ಇಲ್ಲಿ ಸಿಗ್ನಲ್ ಕೂಡ ತಕ್ಕಮಟ್ಟಿಗೆ ಸರಿಯಾಗಿ ಸಿಗುತ್ತೆ..ಸೋ.."
"ಮುದ್ಗೊಂಬೆ... ನೋಡು ಏನಿದೆ ನನ್ನ ಕೈಲಿ ಅಂತ.. " ಎನ್ನುತ್ತಾ ಫೊಟೋ ಕಳುಹಿಸಿದ..
"ವಾವ್... ಎಷ್ಟು ಚೆನ್ನಾಗಿದೆ.ನಂಗಂತೂ ತುಂಬಾನೇ ಹಿಡಿಸಿತು.ಇದನ್ನು ನೀವು ನಿಮ್ಮ ಕೈಯಾರೆ ನಂಗೆ ತೊಡಿಸೋ ದಿನ ಯಾವಾಗ ಬರುತ್ತೆ ..ಹೇಗಿರಬಹುದು ಆ ಕ್ಷಣ ...ಎಂದು ಏನೇನೋ ಯೋಚನೆ ಬರ್ತಿದೆ.."
"ನಂಗೂ ಹಾಗೇನೇ.ಅದೇ ಯೋಚನೆಯಲ್ಲಿ ಮುಳುಗಿದ್ದಾಗಲೇ ಮುದ್ಗೊಂಬೆ ಕರೆಮಾಡಿದ್ದು..ಸೋ ಡಬಲ್ ಖುಷಿ.."
"ಓಹೋಹೋ..ಈ ಡಬಲ್ ಖುಷಿಗೊಂದು ಹಾಯ್ಕು, ಚುಟುಕು ..ಹೊರಬರ್ಲಿ ನೋಡೋಣ.."
"ಆ ಮೊನಚು ನೋಟಕೆ
ಸೋತು ಗೆದ್ದವ
ಈ ಮಾನಸಿ ಕೂಟಕೆ
ಜೊತೆಯಾಗುವ
ಆಗಸದ ಚುಕ್ಕಿತಾರೆಯ
ಎಣಿಸುತಲಿ ನಲ್ಲೆ
ಭೋಗದ ಮುಸುಕೆಳೆದು
ಉಣಿಸುವೆ ಚೆಲ್ವೆ.."
"ಅಬ್ಬಾ.. ನಾನಂತೂ ಸೋತೆ ನಿನ್ನ ಪದವೈಭವಕೆ..
ಹೆಣ್ಣು ಮಾಟಗಾತಿ ಮರೆತರೆ ಜೋಕೆ.."
"ಇಲ್ಲ ..ಮರೆಯಲ್ಲ.. ಮಾಟಗಾತಿಯೇ ಆಗಿರ್ಲಿ ..
ಮಾಯಗಾತಿಯೇ ಆಗಿರ್ಲಿ...ನನ್ನ ಮನದನ್ನೆ ಎಂದೆನಿಸಿದ ಮೇಲೆ ನಾ ಕರೆದಾಗ ಬರ್ಲಿ...ಪ್ರೇಮದ ಹೊಳೆಯ ಹರಿಸುತಲಿರ್ಲಿ.."
"ಹೂಂ...ಜಾಣ ಮಾಣಿ.."
"ನಿಂದು ಪರೀಕ್ಷೆ ಎಲ್ಲಿವರೆಗೆ ಬಂತು..?"
"ಒಂದು ಪರೀಕ್ಷೆ ಪಾಸಾಯ್ತು.. ಇನ್ನೊಂದು ನಡೀತಾಯಿದೆ.."
"ಯಾವ್ದೇ ಮುದ್ಗೊಂಬೆ ನೀ ಪಾಸಾಗಿದ್ದು..?"
"ವಧು ಪರೀಕ್ಷೆ..."
"ಹ್ಹ ಹ್ಹ ಹ್ಹಾ...ಆ ಪರೀಕ್ಷೆಯ ಒಂದು ಹಂತ ಪಾಸಾಗಿ ನಾಲ್ಕು ವರ್ಷದ ಮೇಲಾಯಿತು..."
"ಎಲ್ಲ ನಿನ್ನೆ ಮೊನ್ನೆ ನಡೆದಂತೆ ಭಾಸವಾಗುತ್ತಿದೆ ನಂಗೆ..ಹಾಂ...ಅಪ್ಪನೋ ಅಜ್ಜನೋ ಈ ಕಡೆಗೆ ಬರುವಂತಿದೆ...ಇಡ್ತೀನಿ ಬಾಯ್.". ಎಂದಳು..
ಪಾಪ.. ಮೈತ್ರಿಗೆ ಮದುವೆ ನಿಶ್ಚಯವಾದರೂ ಮನೆಯವರಿಗೆ ಹೆದರೋದು ತಪ್ಪಿಲ್ಲ.. ಮದುವೆ ಆಗ್ಲಿ.. ಆಮೇಲೆ ರಾಣಿ... ರಾಣಿ ಹಾಗೆ ನೋಡ್ಕೋತೀನಿ.. ಎಂದು ತನ್ನಲ್ಲೇ ಆಡಿಕೊಂಡ ಕಿಶನ್...
********
ಸರಿಯಾದ ಸಮಯಕ್ಕೆ ನರಸಿಂಹ ರಾಯರ ಮನೆ ಮುಂದೆ ಬಸ್, ಕಾರ್ ನಿಂತಿತು.ಐವತ್ತು ಜನ ಇಳಿದು ಮನೆಯತ್ತ ಸಾಗಿದರು.
ಎಲ್ಲರಿಗೂ ಸತ್ಕಾರ, ಉಪಚಾರ ಸಾಂಗವಾಗಿ ನೆರವೇರಿತು.ಕೇಶವನ ಕಣ್ಣುಗಳು ಸೌಜನ್ಯಳನ್ನು ಅರಸುತ್ತಿದ್ದವು.ಕೆಲವು ಹೆಣ್ಣುಮಕ್ಕಳಂತೂ ಕುತೂಹಲ ತಡೆಯಲಾರದೆ ಅವಳ ರೂಮಿಗೇ ನುಗ್ಗಿಬಿಟ್ಟಿದ್ದರು.ನಾಲ್ಕಾರು ಪ್ರಶ್ನೆ ಗಳನ್ನು ಕೇಳಿ ಅವಳ ತಲೆತಿಂದರು.
ದೊಡ್ಡದಾದ ಮನೆಯ ಹಾಲ್ ನಲ್ಲಿ ಇದಿರು ಬದುರಾಗಿ ಎಲ್ಲರಿಗೂ ಕುಳಿತುಕೊಳ್ಳಲು ವ್ಯವಸ್ಥೆಯನ್ನು ಮಾಡಲಾಯಿತು.ಒಂದಿಬ್ಬರು ಹೆಣ್ಣುಮಕ್ಕಳ ಜೊತೆ ರೇಖಾ ಮಗಳನ್ನು ಕರೆದುಕೊಂಡು ಬಂದು ಸಭೆಯಲ್ಲಿ ಕುಳ್ಳಿರಿಸಿದರು.ಎಲ್ಲರ ಕಣ್ಣೂ ಅವಳ ಮೇಲೆ.ಕೇಶವ ಅವಳ ಕಡೆಗೆ ನೋಡಿ ನಸುನಕ್ಕ.ಅವಳೂ ಪ್ರತಿಕ್ರಿಯಿಸಿದಳು.ಮುಗುಳ್ನಗು ವಿನಿಮಯವಾದದ್ದನ್ನು ಕಂಡು ಹಲವರು ನಸುನಕ್ಕರು.ನೋಡಿದಷ್ಟೂ ನೋಡಬೇಕೆನ್ನುವ ಅವಳ ಚೆಲುವು ಎಲ್ಲರನ್ನೂ ಮಂತ್ರಮುಗ್ಧರನ್ನಾಗಿಸಿತ್ತು.ಒಂದಿಬ್ಬರು ಹೆಣ್ಣುಮಕ್ಕಳು ಹಿಂದೆ ಗುಸುಗುಸು ಮಾತನಾಡಿಕೊಂಡರು.
"ಇಷ್ಟು ರೂಪವತಿ, ವಿದ್ಯಾವಂತೆ ಹಳ್ಳಿಯ ಮಾಣಿಯನ್ನು ಒಪ್ಪಿದ್ದಾಳೆ ಎಂದಾದರೆ ನಂಗೇನೋ ಸಂಶಯ.."
"ಹೌದು ಕಣೇ..ಹಳ್ಳಿಯೆಂದರೆ ಮೂಗುಮುರಿಯುವ ಆಧುನಿಕ ಕಾಲದ ಯುವತಿಯರು.. ಅಂತಹುದರಲ್ಲಿ ಜೀವನವಿಡೀ ಹಳ್ಳಿಯಲ್ಲಿ ಕಳೆಯಲು ಒಪ್ಪಿದ್ದಾದರೂ ಹೇಗೆ..?"
ಇದು ರೇಖಾಳ ಕಿವಿಗೆ ಬಿದ್ದರೂ ಸುಮ್ಮನಿದ್ದಳು ಕೇಳಿಸಿಲ್ಲ ಎಂಬಂತೆ.
ನರಸಿಂಹ ರಾಯರು ಸಭೆಯನ್ನುದ್ದೇಶಿಸಿ ಮಾತನಾಡಿದರು."ಬಂದರೆಲ್ಲರೂ ಕ್ಷೇಮ ಎಂದು ಭಾವಿಸಿದ್ದೇನೆ."ಎಂದು ಹೇಳಿ ಕೈಮುಗಿದರು."ಇಂದು ನನ್ನ ಮಗಳ ನಿಶ್ಚಿತಾರ್ಥ ದ ಸಲುವಾಗಿ ಎಲ್ಲರೂ ಒಟ್ಟು ಸೇರಿದ್ದೇವೆ.ನಾನು ನರಸಿಂಹ ರಾಯ..ರೇಖಾಳತ್ತ ಕೈ ತೋರಿಸಿ ಆಕೆ ನನ್ನ ಶ್ರೀಮತಿ ರೇಖಾ.. ಇವಳು ನಮ್ಮ ಏಕೈಕ ಪುತ್ರಿ ಸೌಜನ್ಯ.ಇಂಜಿನಿಯರಿಂಗ್ ಪದವೀಧರೆ.. ಸಂಗೀತ ,ಭರತನಾಟ್ಯ ಎರಡರಲ್ಲೂ ಪಳಗಿದವಳು.. ಎನ್ನುತ್ತಾ ತನ್ನ ಕಡೆಯ ಸುಮಾರು ಹದಿನೈದು ಜನರನ್ನು ಪರಿಚಯ ಮಾಡಿಕೊಟ್ಟರು.ಒಬ್ಬರು ಸಭೆಯಿಂದ ಹೇಳಿದ್ದು ಕೇಳಿಸಿತು "ನಾವು ಹುಡುಗನ ಕಡೆಯವರೇ ಹೆಚ್ಚು ಮಂದಿ ಬಂದದ್ದು.ನಿಮ್ಮ ಕಡೆಯವರು ಬೆರಳೆಣಿಕೆಯಷ್ಟು ಮಂದಿ.. ಅದೇನು..?" ಎಂದು
"ನಾವು ಊರಲ್ಲೇ ಮಗಳ ವಿವಾಹ ಕಾರ್ಯಕ್ರಮ ಇಟ್ಟುಕೊಳ್ಳುವ ಯೋಜನೆ ಹಾಕಿಕೊಂಡಿದ್ದೇವೆ.ಆದ್ದರಿಂದ ನಮ್ಮ ನೇಂಟರಿಷ್ಟರನ್ನು ಅಲ್ಲಿಗೇ ಕರೆಸಿಕೊಳ್ಳೋಣ ಮರುವೆಗೆ.ಈಗ ಅತಿ ಹತ್ತಿರದ ಬಂಧುಗಳಿಗೆ ಮಾತ್ರ ಕರೆದಿದ್ದೇವೆ " ಎಂದು ಸಮಜಾಯಿಷಿ ನೀಡಿದರು.ಆ ಪ್ರಶ್ನೆ ಎಸೆದಿದ್ದ ದಿವಾಕರ ಭಾವವನ್ನು ಬಂಗಾರಣ್ಣ ಕಣ್ಣಲ್ಲೇ ಗದರಿದರು.ಸುಮ್ಮನಿರು ಭಾವ ಎಂಬಂತೆ.
ಗಂಡಿನ ಕಡೆಯಿಂದ ಬಂಗಾರಣ್ಣ ಎದ್ದು ನಿಂತು ಎಲ್ಲರಿಗೂ ಕೈಮುಗಿದು ನರಸಿಂಹ ರಾಯರ ಆದರಾತಿಥ್ಯವನ್ನು ಕೊಂಡಾಡಿ ತನ್ನ ಪರಿಚಯ ಮಾಡಿಕೊಂಡರು."ನಾನು ಜನಾರ್ಧನ ರಾಯ ಅಂತ.ಆದರೆ ಬಂಗಾರಣ್ಣ ಎಂದೇ ಎಲ್ಲರೂ ಕರೆಯುವುದು ರೂಢಿ.ಇವಳು ನನ್ನ ಮಡದಿ ಸುಮಾ . ಪಕ್ಕದಲ್ಲಿದ್ದ ಸುಮಾ ಕೈಮುಗಿದರು.ಇವನು ನನ್ನ ಮಗ ಕೇಶವ್".ಎಂದಾಗ ಕೇಶವ್ ಎದ್ದು ನಿಂತು ಕೈಮುಗಿದು ಸಭೆಯನ್ನೊಮ್ಮೆ ದಿಟ್ಟಿಸಿದ.ಆ ನೋಟದಲ್ಲಿ ಗಾಂಭೀರ್ಯವಿತ್ತು. ಮದುವೆಗಂಡಿನ ಗತ್ತು ,ಠೀವಿ ಎದ್ದು ಕಾಣುತ್ತಿತ್ತು.ಮುಖದಲ್ಲಿ ಶ್ರೀಮಂತಿಕೆಯ ಕಳೆಯಿತ್ತು.ನಂತರ ಬಂಗಾರಣ್ಣ "ಇನ್ನು ಎಲ್ಲರನ್ನೂ ನನ್ನ ಮಗ ಕೇಶವ್ ಪರಿಚಯ ಮಾಡಿಕೊಡುತ್ತಾನೆ" ಎಂದು ತನ್ನ ಮಗನಿಗೆ ಜವಾಬ್ದಾರಿ ಹಸ್ತಾಂತರಿಸಿದರು.ಕೇಶವ್ ತಮ್ಮ ಜೊತೆ ಬಂದಿದ್ದ ಸುಮಾರು ಐವತ್ತರಷ್ಟು ಮಂದಿಯನ್ನು ಕೂಡ ಅವರ ಹೆಸರು ಊರು ಸಂಬಂಧವನ್ನು ಹೇಳಿ ಪರಿಚಯಿಸಿದ್ದು ನರಸಿಂಹ ರಾಯರಿಗೆ ಬಹಳ ಮೆಚ್ಚುಗೆಯಾಯಿತು.ಈಗಿನ ಕಾಲದಲ್ಲೂ ಇಷ್ಟು ಚೆನ್ನಾಗಿ ಸಂಬಂಧ ಹೇಳುವ ಸಾಮರ್ಥ್ಯ ಇರುವುದು ಬಹಳ ಅಪರೂಪ ಎಂದು ಭಾವೀ ಅಳಿಯನ ಬಗ್ಗೆ ಅಭಿಮಾನ ಉಂಟಾಯಿತು.ಹುಡುಗಿ ಕಡೆಯ ಹೆಂಗಸರು "ಒಳ್ಳೆ ರಾಜಕುಮಾರನಂತೆ ಇದ್ದಾನೆ.ಒಬ್ಬನೆ ಮಗನಂತೆ.ಸೌಜನ್ಯಳಿಗೆ ಧಾರಾಳ ಸಾಕು.ಹೊಂದಿಕೊಂಡು ಬದುಕುವ ಮನಸ್ಸು ಇವಳಿಗಿದ್ದರೆ."
"ಹುಡುಗನನ್ನು ಕಂಡಾಗ ಸೌಜನ್ಯ ಹೊಂದಾಣಿಕೆ ಮಾಡಿಕೊಳ್ಳದಿದ್ದರೂ ಬಲವಂತವಾಗಿ ಒಪ್ಪಿಸಿ ನಡೆಸಿಕೊಳ್ಳುವಂತೆ ಕಾಣುತ್ತಿದೆ..ಹಳ್ಳಿ ಹುಡುಗ ಸ್ವಲ್ಪ ಒರಟನಿರಬಹುದು.."
"ಹೌದು ಕಣೇ..ಪೇಟೆಯಂತೆ ಅಲ್ಲ ಹಳ್ಳಿಯಲ್ಲಿ..ಸಂಬಂಧಗಳಿಗೆ ಬೆಲೆ ಹೆಚ್ಚು..ಸರಿಯಾಗುತ್ತೋ ಇಲ್ವೋ ...ಗಂಡನಿಗಂಜಿ ನಡೆಯಲೇಬೇಕು...ಮದುವೆಯೆಂಬ ಪವಿತ್ರ ಬಂಧನ ಹಳ್ಳಿಯಲ್ಲಿ ಈಗಲೂ ಮಹತ್ವವನ್ನು ಉಳಿಸಿಕೊಂಡಿದೆ.ಸಿಟಿಯಂತೆ ಎಲ್ಲಿ ನೋಡಿದರೂ ವಿಚ್ಛೇದನ , ಸಾಂಸಾರಿಕ ರಾದ್ಧಾಂತ ಗಳು ಅಲ್ಲಿ ಕಾಣಸಿಗುವುದು ಅಪರೂಪ.."
"ಏನೇ ಹೇಳಿ..ಈ ಲಂಗುಲಗಾಮಿಲ್ಲದ ಬೆಡಗಿಗೆ ಕಡಿವಾಣ ಹಾಕಲು ಈ ಯುವಕ ಹೇಳಿಮಾಡಿಸಿದ ಜೋಡಿ..
ನೋಡಿ.. ಈಗಲೇ ಸೌಜನ್ಯಳ ಮೇಲೆ ಕಣ್ಣಿಟ್ಟಿದ್ದಾನೆ.."
ಎಂದೆಲ್ಲ ಮಾತನಾಡಿಕೊಳ್ಳುತ್ತಿದ್ದರು.
ಬಂಗಾರಣ್ಣ ಮುಂದಿನ ಶುಕ್ರವಾರ ಒಳ್ಳೆಯ ಮುಹೂರ್ತ ಇದೆಯೆಂದು ಪುರುಷೋತ್ತಮ ಜೋಯಿಸರು ಬರೆದು ಕೊಟ್ಟಿದ್ದನ್ನು ತೋರಿಸುತ್ತಾ ಹೇಳಿದರು.ಹೆಣ್ಣಿನಕಡೆಯವರು "ಅದು ಬೇಗವಾಯಿತು" ಎಂದರು.ಕೆಲವರು "ಒಂದು ತಿಂಗಳಾದರು ಅಂತರವಿರಲಿ" ಎಂದರು.
ಬಂಗಾರಣ್ಣ "ಇನ್ನು ಸರಿಹೊಂದುವ ಮುಹೂರ್ತ ಮೂರು ತಿಂಗಳ ನಂತರ ಇರುವುದು" ಎಂದರು.ನರಸಿಂಹ ರಾಯರು ರೇಖಾಳನ್ನು ಒಳಗೆ ಕರೆದು ಮಾತನಾಡಿದರು."ಏನು ಮಾಡೋಣ.ಮುಂದಿನ ಶುಕ್ರವಾರಕ್ಕೆ ನಮಗೆ ತಯಾರಾಗಲು ಸಾಧ್ಯನಾ...?"
"ಕಷ್ಟವಿದೆ.ಆದರೆ ಯಾವತ್ತಿದ್ದರೂ ಮಗಳ ಮದುವೆ ಮಾಡಲೇಬೇಕು.ಆಫೀಸಿಗೆ ರಜೆ ಹಾಕಿ ತಯಾರಿ ಮಾಡೋಣ."
"ಹೂಂ.. ಮತ್ತೆ ಮೂರು ತಿಂಗಳು ಅಂತರವಿಟ್ಟರೆ ಯಾರಾದರೂ ಸೌಜನ್ಯಳ ವಿಷಯದಲ್ಲಿ ಗುಲ್ಲೆಬ್ಬಿಸಿದರೆ ಕಷ್ಟ."
"ಹೌದು ರೀ..ನಿಜ.ಪಾಲಿಗೆ ಬಂದದ್ದು ಪಂಚಾಮೃತ ಎಂದು ಒಪ್ಪಿಕೊಳ್ಳೋಣ.ಇದು ಒಂದು ಜವಾಬ್ದಾರಿ ಸರಿಯಾಗಿ ನಿಭಾಯಿಸಿ ಬಿಟ್ಟರೆ ಸಾಕಪ್ಪಾ ಎನ್ನುವಂತಾಗಿದೆ..ಆಮೇಲೆಯೇ ನಿದ್ರೆ ಬಂದೀತಷ್ಟೆ ನಂಗೆ.."
"ಹಾಗಾದರೆ ಒಪ್ಪಿಗೆ ಎಂದು ಹೇಳೋಣ ಅಲ್ವೇ..?"
"ಹಾಗೇ ಹೇಳಿ.."
ಇಬ್ಬರೂ ಹೊರಗೆ ಹಾಲ್ ಗೆ ಬಂದರು."ನಿಮ್ಮ ಮಾತಿನಂತೆ ಮುಂದಿನ ಶುಕ್ರವಾರ ಮಗಳನ್ನು ಧಾರೆಯೆರೆದು ಕೊಡಲು ಸಿದ್ಧ" ಎಂದರು ನರಸಿಂಹ ರಾಯರು.ಸಣ್ಣಪುಟ್ಟ ಅಪಸ್ವರಗಳು ಬಂದವು.ಆದರೂ ಗಂಡುಹೆಣ್ಣಿನ ಮನೆಯವರು ಅದಕ್ಕೆಲ್ಲ ಸಮಜಾಯಿಷಿ ಕೊಟ್ಟು ಲಗ್ನ ಪತ್ರಿಕೆ ಬರೆಯಲು ಆರಂಭಿಸಿದರು.ನರಸಿಂಹ ರಾಯರು ಪುತ್ತೂರಿನ ಸಮೀಪದ ತಮ್ಮ ಊರಿನ ದೇವಸ್ಥಾನದಲ್ಲಿ ಹಾಲ್ ಬುಕ್ ಮಾಡಿದರು.ಅಡುಗೆಗೆ ಕಾಂಟ್ರಾಕ್ಟ್ ವ್ಯವಸ್ಥೆಯನ್ನು ಮಾತನಾಡಿದರು.ಬಂಗಾರಣ್ಣ ತಮ್ಮ ಮನೆಯಲ್ಲೇ ವಧೂಗೃಹಪ್ರವೇಶಾಂಗ ಸಮಾರಂಭವನ್ನು ಇಟ್ಟುಕೊಂಡರು.ವಿಶಾಲವಾದ ಮನೆ ,ಅಂಗಳವಿದೆ ..ಹಾಲ್ ಬೇಡ ಎಂಬ ಅವರ ನಿರ್ಧಾರವನ್ನು ಕೇಳಿ ಹೆಣ್ಣಿನ ಕಡೆಯವರು "ಸೌಜನ್ಯ ಳ ಮನೆಯನ್ನು ನಮಗೂ ನೋಡಿದಂತೆ ಆಯ್ತು.. ಒಳ್ಳೆಯದಾಯಿತು" ಎಂದು ಮಾತನಾಡಿಕೊಂಡರು.
ಕೇಶವ್ ಲಗ್ನಪತ್ರಿಕೆ ಓದಿದ.ಗಂಭೀರವಾದ ಗಡಸು ಧ್ವನಿ.ಕನ್ನಡ ತಪ್ಪಿಲ್ಲದ ಉಚ್ಛಾರಣೆ.ಎಲ್ಲರಿಗೂ ಲಗ್ನ ಪತ್ರಿಕೆ ಓದಿದ್ದು ಕೇಳಿಸಿತು.ಭಾವೀಮದುಮಗ ಎಲ್ಲರ ಮನಸ್ಸನ್ನೂ ಗೆದ್ದನು.ಸೌಜನ್ಯಳ ಹೃದಯದ ತುಂಬಾ ಅವನದೇ ಮಾಧುರ್ಯ ತುಂಬಿಕೊಂಡು ಯಾವಾಗ ಅವನ ದನಿ ಸನಿಹದಿಂದ ಆಲಿಸುವೆನೋ ಎಂದು ಕಾತರಿಸುತ್ತಿತ್ತು.
ಎಲ್ಲರೂ ಸಭೆಯಿಂದ ಚದುರಿದರು.ಸುನೀತಾ ಎಲ್ಲಾ ಚಾಪೆಗಳನ್ನು ಮಡಚಿಟ್ಟು ಸ್ವಚ್ಛಗೊಳಿಸಿದಳು.ಪುರೋಹಿತರು ಮಂಗಳಾರತಿಗಾಯಿತು ಎಂದಾಗ ನರಸಿಂಹ ರಾಯರು ಬಂಗಾರಣ್ಣನನ್ನು ದೇವರ ಕೋಣೆಗೆ ಕರೆದೊಯ್ದು ಮಣೆಯಲ್ಲಿ ಕುಳ್ಳಿರಿಸಿದರು.ಪಕ್ಕದಲ್ಲಿ ಕೇಶವ್ ಗೂ ಮಣೆಯಿಟ್ಟರು."ನಂಗೆ ಬೇಡ" ಎಂದು ಹೇಳಿ ನಿಂತೇ ಇದ್ದ ಕೇಶವ್.ಪುರೋಹಿತರು ಆರತಿ ಬೆಳಗಿದರು.ಸೌಜನ್ಯ, ರೇಖಾ ಇಬ್ಬರೂ ದೇವರ ಮುಂದೆ ದೀನರಾಗಿ ಸೆರಗೊಡ್ಡಿ ಬೇಡಿದಂತೆ ಕಾಣುತ್ತಿತ್ತು ಕೇಶವ್ ಗೆ.ಎಲ್ಲರೂ ಆರತಿ ತೆಗೆದುಕೊಂಡರು.ಕೈಗೆನೀರುಕೊಟ್ಟು ಬೊಗಸೆಯಲ್ಲಿ ಹಿಡಿಯಲು ಹೂವು ಕೊಟ್ಟಾಗ ಗಂಡಸರೆಲ್ಲ ಶರ್ಟ್ ಬನಿಯನ್ ಕಳಚಿ,ಶಾಲು ಹೊದ್ದುಕೊಂಡು
ಓಂ. ಗಣಾನಾಂತ್ವಾ ಗಣಪತಿಗ್೦ ಹವಾಮಹೇ ಕವಿಂಕವೀನಾ ಮುಪಮಶ್ರವಸ್ತಮಮ್ ||
ಜ್ಯೇಷ್ಠ ರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತಆನಃ ಶ್ರುಣ್ವನ್ನೂತಿ ಭಿಃ ಸೀದ ಸಾಧನಮ್ ||1||
ಎನ್ನುತ್ತಾ ಮಂತ್ರಪುಷ್ಪವನ್ನು ಪುರೋಹಿತರ ಜೊತೆಗೆ ಉಚ್ಛರಿಸಿದರು.ಸೌಜನ್ಯ ಕೇಶವನ ಕಡೆಗೆ ಆಗಾಗ ದೃಷ್ಟಿ ಹರಿಸುತ್ತಿದ್ದಳು.ಅಗಲವಾದ ಎದೆಹರವು , ಅಲ್ಲಲ್ಲಿ ಕುರುಚಲು ಹುಲ್ಲುಗಾವಲಿನಂತೆ ರೋಮಕೂಪಗಳು ಅವಳನ್ನು ರೋಮಾಂಚನಗೊಳಿಸಿದವು.ಕಲ್ಪನಾಲೋಕದಲ್ಲಿ ವಿಹರಿಸುತ್ತಿದ್ದವಳನ್ನು ಅಮ್ಮ.."ಮಗಳೇ ಹೋಗು ದೇವರಿಗೆ. ಶ್ಲೋಕ ಹೇಳಿ ಹೂವು ಸಮರ್ಪಿಸಿ ಮೂರು ಸುತ್ತು ಬಂದು ನಮಸ್ಕರಿಸು."ಎಂದು ಹೇಳಿದರು.
ಪುರೋಹಿತರು ವಧೂವರರ ತಂದೆಯನ್ನು ಕರೆದರು.ಈಗ ಎಲೆ ಅಡಿಕೆ ಪರಸ್ಪರ ಬದಲಾಯಿಸಿಕೊಳ್ಳಿ ಎಂದಾಗ ನರಸಿಂಹ ರಾಯರು ಮತ್ತು ಬಂಗಾರಣ್ಣ ಎಲೆ ಅಡಿಕೆ ಹೂವು ಹಿಡಿದು ತಯಾರಾದರು.ನರಸಿಂಹ ರಾಯರು ಬಂಗಾರಣ್ಣನ ಕೈಗೆ ಎಲೆ ಅಡಿಕೆ ನೀಡಿದರು.ಹಿಂದಿನಿಂದ ಬಂದ ತುಂಟ ಪುಟ್ಟಮಾಣಿಯೊಬ್ಬ ನರಸಿಂಹ ರಾಯರನ್ನು ಬಲವಾಗಿ ತಳ್ಳಿಕೊಂಡು ಓಡಿದ.ಕೈಯಲ್ಲಿ ಹಿಡಿದದ್ದು ಬಂಗಾರಣ್ಣನ ಕೈಗೆ ಕೊಡುವ ಮೊದಲೇ ಕೆಳಗೆ ಬಿದ್ದಿತು.
ನರಸಿಂಹ ರಾಯರು ಹೆಕ್ಕುವ ಪ್ರಯತ್ನ ಮಾಡಿದರು.ಕೈಗಳು ಕಂಪಿಸತೊಡಗಿದವು.ರೇಖಾಳ ಮುಖ ವಿವರ್ಣವಾಯಿತು.ನಿರ್ವಿಘ್ನವಾಗಿ ಮಗಳ ಮದುವೆ ನೆರವೇರಿದರೆ ಸಾಕಪ್ಪಾ ಎಂದು ದೇವರಿಗೆ ಕೈಮುಗಿದರು.ಸೌಜನ್ಯ ತಲೆತಗ್ಗಿಸಿ ಹನಿಗಣ್ಣಾದಳು.
"ಛೇ..ಇದೇನಾಯಿತು" ಎಂದರು ಪುರೋಹಿತರು..
ಮುಂದುವರಿಯುವುದು..
✍️... ಅನಿತಾ ಜಿ.ಕೆ.ಭಟ್.
30-03-2020.
ಮುಂದೇನಾಯ್ತು..ಕುತೂಹಲ ಮೂಡಿದೆ
ReplyDeleteಕಾದು ನೋಡೋಣ...
ReplyDelete