ಜೀವನ ಮೈತ್ರಿ-ಭಾಗ ೫೩
ಪುರೋಹಿತರು ವಧೂವರರ ತಂದೆಯನ್ನು ಕರೆದರು.ಈಗ ಎಲೆ ಅಡಿಕೆ ಪರಸ್ಪರ ಬದಲಾಯಿಸಿಕೊಳ್ಳಿ ಎಂದಾಗ ನರಸಿಂಹ ರಾಯರು ಮತ್ತು ಬಂಗಾರಣ್ಣ ಎಲೆ, ಅಡಿಕೆ ,ಹೂವು ಹಿಡಿದು ತಯಾರಾದರು.ನರಸಿಂಹ ರಾಯರು ಬಂಗಾರಣ್ಣನ ಕೈಗೆ ಎಲೆ ಅಡಿಕೆ ನೀಡಿದರು.ಹಿಂದಿನಿಂದ ಬಂದ ತುಂಟ ಪುಟ್ಟಮಾಣಿಯೊಬ್ಬ ನರಸಿಂಹ ರಾಯರನ್ನು ಬಲವಾಗಿ ತಳ್ಳಿಕೊಂಡು ಓಡಿದ.ಕೈಯಲ್ಲಿ ಹಿಡಿದದ್ದು ಬಂಗಾರಣ್ಣನ ಕೈಗೆ ಕೊಡುವ ಮೊದಲೇ ಕೆಳಗೆ ಬಿದ್ದಿತು.
ನರಸಿಂಹ ರಾಯರು ಹೆಕ್ಕುವ ಪ್ರಯತ್ನ ಮಾಡಿದರು.ಕೈಗಳು ಕಂಪಿಸತೊಡಗಿದವು.ರೇಖಾಳ ಮುಖ ವಿವರ್ಣವಾಯಿತು.ನಿರ್ವಿಘ್ನವಾಗಿ ಮಗಳ ಮದುವೆ ನೆರವೇರಿದರೆ ಸಾಕಪ್ಪಾ ಎಂದು ದೇವರಿಗೆ ಕೈಮುಗಿದರು.ಸೌಜನ್ಯ ತಲೆತಗ್ಗಿಸಿ ಹನಿಗಣ್ಣಾದಳು.
"ಛೇ..ಇದೇನಾಯಿತು" ಎಂದರು ಪುರೋಹಿತರು..
ಬಿದ್ದಿರುವುದನ್ನು ಹೆಕ್ಕುತ್ತಿದ್ದ ನರಸಿಂಹ ರಾಯರಲ್ಲಿ ಪುರೋಹಿತರು.."ಇನ್ನು ಪುನಃ ಅದನ್ನು ನೀಡುವುದು ಬೇಡ.ಬೇರೆ ಎಲೆ ಅಡಿಕೆ ನೀಡಿ.."ಎಂದರು."ಸರಿ .."ಎಂದ ರಾಯರು ಹಾಗೆಯೇ ಮಾಡಿದರು.ಬಂಗಾರಣ್ಣ ಸ್ವೀಕರಿಸಿದರು.ಬಂಗಾರಣ್ಣನೂ ತಾವು ತಂದದ್ದನ್ನು ನರಸಿಂಹ ರಾಯರಿಗೆ ನೀಡಿದರು.ಎಲೆ ಅಡಿಕೆ ಬದಲಾಯಿಸಿಕೊಳ್ಳುವ ಶಾಸ್ತ್ರ ನೆರವೇರಿತು.ಪುರೋಹಿತರಲ್ಲಿ ಕೇಶವ್ "ಇನ್ನು ನಾವು ತಂದಿದ್ದ ಉಂಗುರವನ್ನು ತೊಡಿಸಬಹುದಾ .."ಎಂದು ಕೇಳಿದ.
"ಆ ಕೆಲಸವೂ ಈಗಲೇ ಆದರೆ ಮತ್ತೆ ಊಟಕ್ಕೆ ತಯಾರು ಮಾಡಬಹುದು "...ಎಂದರು.
ಎದುರು ಬದುರು ಮಣೆಯಲ್ಲಿ ಕುಳಿತುಕೊಂಡು ಕೇಶವ್ ತಾನು ತಂದಿದ್ದ ವಜ್ರದ ಉಂಗುರವನ್ನು ಸೌಜನ್ಯಳಿಗೆ ತೊಡಿಸಿದನು.ಸೌಜನ್ಯ ತಾನು ಕೇಶವ್ ಗೆ ಚಿನ್ನದುಂಗುರವನ್ನು ತೊಡಿಸಿದಳು...
ಅಲ್ಲಿದ್ದವರೆಲ್ಲ ಕುತೂಹಲದಿಂದ ಇಣುಕುತ್ತಿದ್ದರೆ ಸೌಜನ್ಯ ನಗುನಗುತ್ತಾ ಕೇಶವನ ಕಣ್ಣುಗಳನ್ನು ದಿಟ್ಟಿಸಿದಳು.ಮಧುರವಾದ ಭಾವಪರವಶತೆ.ಮಾತಿಗಿಂತ ಬಲವಾದ ಸಂವಹನ ನೋಟದಲ್ಲೇ ಮೀಟಿದಳು.ಪರಿಣಾಮ ಕೇಶವನ ಕೈ ಸೌಜನ್ಯ ಳ ಕೈಯನ್ನು ಬಲವಾಗಿ ಬಂಧಿಸಿತು.ಇಬ್ಬರೂ ಕೈ ಹಿಡಿದುಕೊಂಡು ಅಲ್ಲಿಂದೆದ್ದರು . ಊಟಕ್ಕೆ ತೆರಳಿದರು.ಅಕ್ಕಪಕ್ಕ ಕುಳಿತು ಇಬ್ಬರೂ ಮಾತನಾಡಿಕೊಂಡು ಉಣ್ಣುತ್ತಿದ್ದಾಗ
"ಹೆಚ್ಚು ಮಾತನಾಡಿದರೆ ಏನು ತಿನ್ನುತ್ತಿದ್ದೀರಿ ಎಂದೇ ಗೊತ್ತಾಗದು .." ಎಂದು ಕೆಲವರು ಛೇಡಿಸಿದರು.ಇನ್ನೊಬ್ಬರು ಸೇಮಿಗೆ ಪಾಯಸ ಬಡಿಸಿ ...
"ಹೆಸರು ಪಾಯಸ ಹೇಗಿದೆ ..?"ಅಂತ ಕೇಳಿದರೆ "ಚೆನ್ನಾಗಿದೆ " ಅಂತ ಹೇಳಲು ಬಾಯೊಡೆದ ಸೌಜನ್ಯ ಳನ್ನು ಮೆದುವಾಗಿ ಕೈಗಳನ್ನು ಅದುಮಿ ತಡೆದ ಕೇಶವ್.
"ಊಟವಾಗುವ ತನಕ ದೇವರ ದೀಪ ಉರಿಯುತ್ತಿರಲಿ" ಎಂದಿದ್ದರು ರೇಖಾಳ ಅಮ್ಮ.ಎಲ್ಲರೂ ಉಣ್ಣುತ್ತಿದ್ದಾಗ ಒಳಬಂದಳು ರೇಖಾ.ದೀಪ ಆರಿದೆ.ಯಾರಾದರೂ ಆರಿಸಿದರಾ..ಈಗ ಚೆನ್ನಾಗಿ ಉರಿಯುತ್ತಿತ್ತು ಎಂದು ಆತಂಕಿತರಾದರು.ಮಗಳ ಕಳವಳವನ್ನು ಕಂಡ ತಾಯಿ "ಆಯ್ತಮ್ಮ ರೇಖಾ.. ಪೂಜೆ ಮುಗಿಯುವ ತನಕ ಉರಿಯುತಿತ್ತಲ್ವಾ.. ವಿಘ್ನವೆಂದು ಭಾವಿಸುವುದು ಬೇಡ.. ಎಲ್ಲವೂ ಸುಸೂತ್ರವಾಗಿ ನೆರವೇರಲಿ.."ಎಂದು ಸಮಾಧಾನಪಡಿಸಿದರು.
ಅಮ್ಮ ಏನೇ ಹೇಳಿದರೂ ರೇಖಾಳ ಮನಸ್ಸಿನಲ್ಲಿ ಆಂದೋಲನ ಏರ್ಪಟ್ಟಿತ್ತು.ಮಗಳ ಮದುವೆ ನಿರ್ವಿಘ್ನವಾಗಿ ನೆರವೇರಿದರೆ ಆ ಊರಿನ ಗ್ರಾಮ ದೇವರಿಗೆ ಮಗಳು ಅಳಿಯನ ಹೆಸರಿನಲ್ಲಿ ಅರ್ಚನೆ ಮಾಡಿಸುತ್ತೇನೆ ಎಂದು ಹರಕೆ ಹೊತ್ತರು.
ಊಟ ಮಾಡಿದ ಜೋಡಿ ಹಕ್ಕಿಯನ್ನು ಮತ್ತೆ ಯಾರೂ ಕಂಡೇಯಿಲ್ಲ.ಪರಸ್ಪರ ಕೈ ಕೈ ಹಿಡಿದು ಮಾಳಿಗೆಗೆ ತೆರಳಿದರು.ಕೇಶವ್ ನ ಸನಿಹದಲ್ಲಿ ಅವಳಿಗೆ ಅದೇನೋ ಪುಳಕ ..ಅವಳ ಮೃದುಕೈಗಳ ಸ್ಪರ್ಶ ಅವನಲ್ಲಿ ಸೃಷ್ಟಿಸಿದೆ ಸಂಚಲನ..ಮಾಳಿಗೆಯಲ್ಲಿದ್ದ ಪುಟ್ಟ ಕೈತೋಟದ ಸುತ್ತ ಸುತ್ತಿ ಹಸಿರಿನ ನಡುವಲ್ಲಿ ಉಸಿರಿಗುಸಿರು ತಾಕುವಂತೆ ವಿಹರಿಸಿದರು.ಅಲ್ಲಿಂದ ಕೆಳಗಿಳಿದು ಮೊದಲನೇ ಮಹಡಿಯಲ್ಲಿದ್ದ ಸೌಜನ್ಯ ಳ ರೂಮಿಗೆ ಹೊಕ್ಕರು.ಮಾತು ಸಾಗಿತ್ತು.
"ಇತ್ತೀಚೆಗೆ ಓದು ಮುಗಿಸಿದೆ ಅಂದೆ ಸೌಜನ್ಯ..ಒಂದೂ ಬುಕ್ ಕಾಣ್ತಾ ಇಲ್ಲ.."
"ಹೋ..ಅದಾ.. ಆಗಿಂದಾಗ್ಗೆ ಕ್ಲೀನ್ ಮಾಡುವುದು ನಮ್ಮನೆ ಅಭ್ಯಾಸ.ಹೇಗೂ ಸುನಿತಾ ಇದ್ದಾಳಲ್ಲ.."
"ಈ ಫೋಟೋ ದಲ್ಲಿ ನಿನ್ನನ್ನು ನೋಡಿದರೆ ಬಹಳ ವ್ಯತ್ಯಾಸ ಕಾಣಿಸುತ್ತದೆ.. ಘಟಿಕೋತ್ಸವದಲ್ಲಿ ಭಾಗವಹಿಸಿ ತುಂಬಾ ಸಮಯ.."
ಕೇಶವ್ ನ ಮಾತನ್ನು ಅರ್ಧದಲ್ಲೇ ತುಂಡರಿಸಿ..
"ಇಲ್ಲ ಕೇಶವ್.. ನಾನು ಇತ್ತೀಚೆಗೆ ಘಟಿಕೋತ್ಸವದಲ್ಲಿ ಭಾಗವಹಿಸಿದ್ದು.ಆದರೆ ಆಗ ಮೂರು ನಾಲ್ಕು ದಿನದಿಂದ ಜ್ವರದಿಂದ ಬಳಲುತ್ತಿದ್ದೆ.ಹಾಗಾಗಿ ಬಹಳ ಬಸವಳಿದು ಸಣ್ಣಗೆ ಕಾಣಿಸುತ್ತಿದ್ದೇನೆ .."
"ಓಹೋ ಹಾಗಾ..?"
"ಕೇಶವ್.. ನೀವು ಬೆಂಗಳೂರಲ್ಲಿ ಜಾಬ್ ನಲ್ಲಿದ್ರಂತಲ್ಲ..ಯಾವ ಕಂಪೆನಿಲಿದ್ರಿ.."
"ಅದಾ... ಅದೊಂದು ಸಣ್ಣ ಕಂಪೆನಿ.. ಇಂಜಿನಿಯರಿಂಗ್ ಮುಗಿದು ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಕೆಲಸ ಸಿಕ್ಕಿತ್ತು.." ಎಂದ ಉಗುಳು ನುಂಗಿಕೊಂಡು..
"ನೀವೇನೂ ಅಂದುಕೊಳ್ಳಲ್ಲ ಅಂದ್ರೆ ಒಂದು ಪ್ರಶ್ನೆ.."
"ಮದುವೆ ಫಿಕ್ಸ್ ಆದ ಮೇಲೆ ಸಂಕೋಚ ಯಾಕೆ ಕೇಳು.."ಎಂದ ಕಣ್ಣಲ್ಲೇ ಕಾಡಿಸುತ್ತಾ..
"ಉದ್ಯೋಗ ಯಾಕೆ ಬಿಟ್ರೀ.. ಕೃಷಿಗಿಂತ ಉದ್ಯೋಗ ಒಳ್ಳೇದಲ್ವಾ..?"
ತಲೆಕೆರೆದುಕೊಂಡ ಕೇಶವ್ ತನ್ನ ಅಸಲಿ ಬಣ್ಣ ಈಗಂತೂ ಬಯಲಾಗಲೇಬಾರದು ಎಂದು
" ಒಬ್ಬನೇ ಮಗ.ರಾಜನಂತೆ ಸಾಕಿದ್ದಾರೆ.ಇಲ್ಲಿ ದಿನವಿಡೀ ದುಡಿಯೋದು,ಕೈ ಅಡುಗೆ ಮಾಡಿ ಉಣ್ಣುವುದು ಅಪ್ಪ ಅಮ್ಮನಿಗೆ ಸರಿ ಕಾಣಲಿಲ್ಲ..ಸೋ ಊರಿಗೆ ಕರೆಸಿಕೊಂಡರು.. ಕೃಷಿಯಲ್ಲಿ ಜೀವನಸಾಗುವಷ್ಟಿದೆ ಸಾಲದೇ..?"
"ರಾಜಾ.. ಸಾಕು.. ನಾನು ಸಾಲಲ್ಲ ಅಂತ ಕೇಳಿದ್ದಲ್ಲ.. ಸುಮ್ನೆ ಕುತೂಹಲಕ್ಕಾಗಿ.."
ಅಂದವಳ ಮುಖದಲ್ಲಿ ಮಂದಹಾಸವಿತ್ತು.
ಅವನ ಕೈಗಳು ಅವಳ ಬೆನ್ನನ್ನು ಆವರಿಸಿದವು.ಅವಳು ನಿಧಾನವಾಗಿ ಅವನು ಎದೆಹರವಿನಲ್ಲಿ ತಲೆಯಿಟ್ಟಳು.ಹಣೆಯ ಸಿಂಧುರವೂ ಇನಿಯನ ಪ್ರೇಮಮುದ್ರೆಗೆ ನಾಚಿತ್ತು.ಅವಳ ತುಟಿಗಳು ಕಾಣಿಕೆಯ ಬಯಸಿದವು.ತೆಳುವಾದ ಕೆಂದುಟಿಗೆ ತನ್ನಧರವ ಬೆಸೆದು ಮೈಮರೆತ ಕೇಶವ್.
"ಛೀ..ತುಂಟ.". ಎನ್ನುತ್ತಾ ಅವನ ತೋಳುಗಳಿಂದ ಬಿಡಿಸಿಕೊಳ್ಳುವ ಪ್ರಯತ್ನ ಮಾಡಿದಳು...ಅವಳಿಚ್ಛೆಯಂತೆ ಬಂಧನದ ಬಿಗಿ ಸಡಿಲಿಸಿದ ಕೇಶವ..
ಪರಸ್ಪರ ವಿಶ್ವಾಸ, ಗೆಳೆತನ ಬಲವಾಯಿತು.ನನಗೆ ನೀನು ನಿನಗೆ ನಾನು ಜೀವನವಿಡೀ ಜೊತೆಗೆ ಬಾಳೋಣ ಎಂಬ ಒಮ್ಮತ ಮೂಡಿತು.ತಮ್ಮ ವಿದ್ಯಾಭ್ಯಾಸ ಉದ್ಯೋಗದ ವಿಷಯಗಳನ್ನು ವಿನಿಮಯ ಮಾಡಿಕೊಂಡು ನಿನ್ನಪ್ರತಿ ಹೆಜ್ಜೆಗೂ ನಾನೇ ಕಾವಲುಗಾರ ಎಂಬ ಧೈರ್ಯವನ್ನು ನೀಡಿದ ಕೇಶವ್.
"ನಮಗೆ ಹೊರಡುವ ಸಮಯವಾಯಿತು.ಈಗ ನಾನು ನಿನಗೆ ಬಾಯ್ ಹೇಳಲೇಬೇಕು."..ಎನ್ನುತ್ತಾ ಮತ್ತೊಮ್ಮೆ ಅವಳೆಡೆಗೆ
ತುಂಟನಗೆ ಬೀರಿ ಹಗ್ ಮಾಡಿ ಬೀಳ್ಕೊಂಡ ಕೇಶವ್.. ರೂಮಿನಿಂದ ಕೇಶವ್ ಕೆಳಗಿಳಿದು ಬಂದ.ಸೌಜನ್ಯ ಸ್ವಲ್ಪ ಹೊತ್ತು ಅಲ್ಲೇ ಇದ್ದು ತನ್ನ ಇಂದಿನ ಖುಷಿ ಹಿಂದಿನ ನೋವು ಎಲ್ಲವನ್ನೂ ಸಮೀಕರಿಸಿ ಯೋಚನೆಯಲ್ಲಿ ಮುಳುಗಿದಳು.ಕೇಶವ ಗೆ ಏನಾದರೂ ಸಂಶಯ ಬಂದಿರಬಹುದಾ..? ಎಂಬ ಸಣ್ಣ ಗುಮಾನಿಯೂ ಇತ್ತು ಅವನ ಮಾತಿನ ವರಸೆಯಿಂದಾಗಿ.ಸರಿ ದೆವರು ನಡೆಸಿದಂತೆ ಜೀವನ.. ಎಂದುಕೊಳ್ಳುತ್ತಾ ಕೆಳಗಿಳಿದು ಬಂದಳು..
ಕೇಶವನ ಕಡೆಯವರು ಎಲ್ಲರೂ ಹೊರಟು ನಿಂತಿದ್ದರು.ಒಬ್ಬಾಕೆ "ಆಯ್ತಾ ಕೇಶವನಲ್ಲಿ ಸರಿಯಾಗಿ ಮಾತನಾಡಿ " ಎಂದು ಕಾಲೆಳೆದರೆ
ಕೇಶವನ ಮಾವ "ಶುಕ್ರವಾರ ಸರಿಯಾಗಿ ಮಾತನಾಡಬಹುದು.. " ಎಂದು ರೇಗಿಸಿದರು.ಕೇಶವನಿದ್ದ ಕಾರು ಮುಂದೆ ಚಲೀಸಿದಾಗ ಕೈ ಬೀಸಿದಳು ಸೌಜನ್ಯ..
ಮುಂದುವರಿಯುವುದು..
✍️ ಅನಿತಾ ಜಿ.ಕೆ.ಭಟ್.
31-03-2020.
This comment has been removed by the author.
ReplyDelete👏👏👏
ReplyDeleteಥ್ಯಾಂಕ್ಯೂ 💐🙏
ReplyDelete