ಮಹಿಳೆ ಅರಮನೆಯಲ್ಲಿ ರಾಣಿಯಂತೆಯೂ ಮೆರೆಯಬಲ್ಲಳು.. ಗುಡಿಸಲಲ್ಲಿ ಬಡವಿಯಂತೆಯೂ ವಾಸಿಸಬಲ್ಲಳು.ಸಮಯ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ ಚಾಕಚಕ್ಯತೆ ಅವಳಲ್ಲಿದೆ.ಪೋಷಕರು ಹಾಕಿಕೊಟ್ಟ ಸಂಸ್ಕಾರವನ್ನು ಎತ್ತಿಹಿಡಿದು, ತನ್ನ ಬದುಕನ್ನು ತಾನೇ ಕಟ್ಟಿಕೊಳ್ಳಬಲ್ಲ ಆತ್ಮಸ್ಥೈರ್ಯ ಅವಳಲ್ಲಿದೆ.ಸಮಾಜದ ಅನ್ಯಾಯ,ಅವಮಾನಗಳಿಗೆ ಎದೆಗುಂದದೆ ಗುರಿಯೆಡೆಗೆ ಚಿತ್ತವನೆಟ್ಟು ಮುನ್ನಡೆಯಬಲ್ಲಳು. ಮಹಿಳಾ ಸಮುದಾಯಕ್ಕೆ ಮಾದರಿಯಾಗಿ ಗೆಲುವಿನ ಉತ್ತುಂಗಕ್ಕೇರಿದ ಮಹಿಳೆಯರು ಇಂದಿಗೂ ಮನೆಯೊಳಗೆ ಕಾಲಿಟ್ಟರೆ "ನಾನು ಅಪ್ಪಟ ಗೃಹಿಣಿ" ಎನ್ನುತ್ತಾ "ಕುಟುಂಬದ ಜೊತೆ ಕಾಲಕಳೆಯುವುದೂ ಇಷ್ಟ " ಎನ್ನುತ್ತಾರೆ.
ಪೆಪ್ಸಿಕೊ ಕಂಪೆನಿಯ ಮಾಜಿ ಸಿಇಒ ಇಂದ್ರಾನೂಯಿ ಭಾರತೀಯ ಸಂಜಾತೆ.ವಿಶ್ವದ ಪ್ರಭಾವಿ ನೂರು ಮಹಿಳೆಯರ ಪಟ್ಟಿಯಲ್ಲಿ ಇವರ ಹೆಸರು ಸತತವಾಗಿ ಕಂಡುಬಂದಿದೆ.ಆಕೆ ಉನ್ನತ ಹುದ್ದೆಯನ್ನು ಅಲಂಕರಿಸಿದ್ದು ಆಕೆಯ ವಿದ್ಯೆ , ಸವಾಲನ್ನು ಸ್ವೀಕರಿಸುವ ಬುದ್ಧಿಮತ್ತೆ ಮತ್ತು ಔದ್ಯೋಗಿಕ ಕೌಶಲ್ಯ,ವ್ಯಾಪಾರ ವಹಿವಾಟು ವೃದ್ಧಿಸುವ ಕಾರ್ಯವೈಖರಿಯಿಂದಾಗಿಯೇ ಹೊರತು ಸಮಾನತೆಯ ಮಾನದಂಡದಿಂದ ಅಲ್ಲ.ಒಂದು ದಿನ ತಡವಾಗಿ ಆಫೀಸಿನಿಂದ ಬಂದಿದ್ದರಂತೆ.ಅಲ್ಲಿಯವರೆಗೂ ಅಮ್ಮ ಒಂದು ಲೋಟ ಹಾಲಿಗಾಗಿ ಕಾದಿದ್ದರಂತೆ."ಯಾಕಮ್ಮಾ..ನಿನ್ನ ಅಳಿಯನನ್ನು ಕೇಳಬಾರದೇ..?"
ಅಂದಾಗ "ಇಂದ್ರಾ.. ನೀನು ಮನೆಗೆ ಬಂದ ಮೇಲೆ ಗೃಹಿಣಿ ನೆನಪಿಟ್ಟುಕೋ .. " ಎಂದಿದ್ದರಂತೆ.. ಇದನ್ನು ಇಂದ್ರಾ ಅವರು ಒಂದು ಸಂದರ್ಶನದಲ್ಲಿ ಹಂಚಿಕೊಂಡಿದ್ದರು. "ನನ್ನ ಕುಟುಂಬದ ಜವಾಬ್ದಾರಿ ನನ್ನದೇ..ಅಮ್ಮನ ಎಚ್ಚರಿಕೆಯ ಮಾತುಗಳು ನನಗೆ ದಾರಿದೀಪವಾದವು.."ಎಂದಿದ್ದಾರೆ.ಇಂದಿಗೂ ಆಕೆ ತನ್ನ ಪತಿಯ ಹುಟ್ಟೂರಾದ ದಕ್ಷಿಣ ಕನ್ನಡಕ್ಕೆ ಆಗಮಿಸಿದರೆ ಯಾವುದೇ ಹಮ್ಮುಬಿಮ್ಮಿಲ್ಲದೆ ಎಲ್ಲರೊಂದಿಗೆ ಬೆರೆತು ಊಟಬಡಿಸಲೂ ಸಹಕರಿಸುತ್ತಾರಂತೆ.. ಇದನ್ನು ಇಲ್ಲಿನ ಸ್ಥಳೀಯ ಪತ್ರಿಕೆಯೊಂದು ವರದಿಮಾಡಿತ್ತು.
ಐಸಿಐಸಿಐ ಬ್ಯಾಂಕಿನ ಮಾಜಿ ಸಿಇಒ ಚಂದಾಕೊಚ್ಚರ್ ತಾನು ಕುಟುಂಬ ಮತ್ತು ಉದ್ಯೋಗವನ್ನು ಹೇಗೆ ಸರಿದೂಗಿಸಿಕೊಂಡು ಹೋದೆ ಎಂದು ವಿವರಿಸಿ ತನ್ನ ಮಗಳಿಗೆ ಬರೆದ ಪತ್ರ ಸಾಕಷ್ಟು ಸುದ್ದಿಮಾಡಿತ್ತು.ಎಷ್ಟೇ ಔದ್ಯೋಗಿಕ ಒತ್ತಡವಿದ್ದರೂ ದಿನದ ಸ್ವಲ್ಪ ಹೊತ್ತು ಮಕ್ಕಳಿಗಾಗಿ ,ಪತಿಗಾಗಿ ಮೀಸಲಿಡುತ್ತಿದ್ದರಂತೆ.
ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು ತಮ್ಮ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮುಗಿಯುವ ಹಂತಕ್ಕೆ ಬಂದಾಗ ಟಾಟಾ ಕಂಪೆನಿಯ ಉದ್ಯೋಗದ ಜಾಹೀರಾತನ್ನು ನೋಡಿದರಂತೆ .ಅದರಲ್ಲಿ 'ಪುರುಷರು ಮಾತ್ರ' ಎಂದು ಬರೆದಿದ್ದನ್ನು ಕಂಡು ನಿರ್ದೇಶಕರಿಗೆ ಪತ್ರವೊಂದನ್ನು ಬರೆದಿದ್ದರಂತೆ "ಯಾಕೆ ಹೆಣ್ಣುಮಕ್ಕಳು ಬೇಡ ?"ಎಂದು. "ಬದಲಾಯಿಸುತ್ತೇವೆ ನಮ್ಮ ಉದ್ಯೋಗ ನೀತಿಯನ್ನು ;ನೀವು ಉದ್ಯೋಗ ಸಂದರ್ಶನಕ್ಕೆ ಬನ್ನಿ" ಎಂದುತ್ತರಿಸಿದ್ದರಂತೆ.ನಂತರ ಅದೇ ಕಂಪೆನಿಯ ಮೊದಲ ಮಹಿಳಾ ಇಂಜಿನಿಯರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ನಮ್ಮೂರಿನ ಒಂದು ಕುಟುಂಬವೊಂದರಲ್ಲಿ ಐದು ಜನ ಸಹೋದರಿಯರ ನಂತರ ಜನಿಸಿದವಳು ಸಾವಿತ್ರಿ.ವಯಸ್ಸಿಗೆ ಬಂದ ಮಕ್ಕಳಿಗೆ ಮದುವೆ ಮಾಡಲು ಸೂಕ್ತ ವರನನ್ನು ಹುಡುಕುವುದೇ ತಂದೆಗೆ ಕಷ್ಟದ ಕೆಲಸವಾಗಿತ್ತು.ಮೂವತ್ತು ವರ್ಷ ದಾಟುತ್ತಿದ್ದಂತೆ ಅನಿವಾರ್ಯವಾಗಿ ಒಬ್ಬ ಕಿವುಡನಿಗೆ ಮದುವೆ ಮಾಡಿ ಕೊಟ್ಟರು.ಸಂಜ್ಞೆಯನ್ನು ಅರ್ಥೈಸಿಕೊಂಡು ವಿಷಯ ಗ್ರಹಿಸುತ್ತಿದ್ದ ರಾಘವ ಸಾಧು ಸ್ವಭಾವದ ವ್ಯಕ್ತಿ.ಮನೆಯಲ್ಲಿ ಭಾವಂದಿರು ಅಕ್ಕಂದಿರು ಇನ್ನು ವಿವಾಹವಾಗಬೇಕಿದ್ದ ಹೆಣ್ಣುಮಕ್ಕಳು ಸೇರಿದಂತೆ ಇಪ್ಪತ್ತೈದು ಮಂದಿ.ಇವರೆಲ್ಲರ ಮಧ್ಯೆ ಕಾಲಕಸದಂತಾಗಿತ್ತು ರಾಘವನ ಕುಟುಂಬ.ಇಬ್ಬರು ಮಕ್ಕಳಾದ ನಂತರ ಕೆಲವು ವರ್ಷಗಳಲ್ಲಿ ಕುಟುಂಬದ ಪಾಲಿನಲ್ಲಿ ದೊರೆತ ಪುಟ್ಟ ಭೂಮಿಯನ್ನು ಹಸನು ಮಾಡಿದರು.ಸಾವಿತ್ರಿ ತಾನೇ ಮುಂದಾಗಿ ಅಡಿಕೆ, ತೆಂಗು ,ಬಾಳೆ ಕೃಷಿಯಲ್ಲಿ ತೊಡಗಿಸಿಕೊಂಡಳು.ಯಾವ ಸಮಯದಲ್ಲಿ ಏನು ಆರೈಕೆ, ಯಾವ ಗೊಬ್ಬರ ಕೊಡಬೇಕು, ಫಸಲು ಕೊಯ್ಯಬೇಕು ಎಂದು ಸಾವಿತ್ರಿ ತಿಳಿದಿರುವವರಿಂದ ಮಾಹಿತಿ ಸಂಗ್ರಹಿಸಿ ಪತಿಯ ಜತೆಗೂಡಿ ಗಿಡಗಳನ್ನು ಪೊರೆದಳು.ಕೆಲವೇ ವರ್ಷಗಳಲ್ಲಿ ಹಚ್ಚಹಸಿರಾದ ಫಲಭರಿತ ಅಡಿಕೆ ತೆಂಗಿನ ತೋಟ ಕಂಗೊಳಿಸಿತು.ಕೇವಲ ಐದನೇ ತರಗತಿವರೆಗೆ ಓದಿದ್ದ ಸಾವಿತ್ರಿ ಸರಕಾರಿ ಕಛೇರಿ, ಬ್ಯಾಂಕ್ ಸೇರಿದಂತೆ ತನಗೆ ಅವಶ್ಯಕವಾದ ವ್ಯವಹಾರಗಳನ್ನೆಲ್ಲ ಕಲಿತಳು...ಬದುಕೇ ಕಲಿಸಿತು ಎಂದರೂ ತಪ್ಪಾಗಲಾರದು..ಮಕ್ಕಳಿಬ್ಬರಿಗೂ ವಿದ್ಯಾಭ್ಯಾಸ ಕೊಡಿಸಿ ತನ್ನದೇ ಸ್ವಂತ ಸೂರನ್ನು ನಿರ್ಮಿಸಿಕೊಂಡು ಮಗಸೊಸೆಯೊಂದಿಗೆ ಹೆಮ್ಮೆಯಿಂದ ಬದುಕುತ್ತಿದ್ದಾಳೆ.ತನ್ನದೇ ಸ್ವಂತ ಪರಿಶ್ರಮದಿಂದ , ಇರುಳು ಹಗಲು ಬೆವರುಸುರಿಸಿ ಸಮಾಜದಲ್ಲಿ ತಾನು ಒಳ್ಳೆಯ ಸ್ಥಾನ ಪಡೆದುಕೊಂಡಳು.
ಮಂಗಳೂರಿನಲ್ಲಿ ಪತಿ ,ಮೂರುವರ್ಷದ ಮಗನೊಂದಿಗೆ ಬದುಕುತ್ತಿದ್ದವಳು ಶಿಲ್ಪಾ.ಉದ್ಯೋಗ ನಿಮಿತ್ತ ದೂರದೂರಿಗೆ ತೆರಳಿದ ಪತಿ ಬರಲೇಯಿಲ್ಲ.ಕಾದು ಕಾದು ಕೊನೆಗೆ ಬದುಕಿನ ದಾರಿ ಹುಡುಕುತ್ತಾ ಹೊರಟಳು.ನಾನಾಕಡೆ ಕೆಲಸ ಮಾಡಿದಳು.ಓದುತ್ತಿರುವ ತಮ್ಮ ವಯಸ್ಸಾದ ತಂದೆತಾಯಿ ಪುಟ್ಟ ಮಗನ ಜವಾಬ್ದಾರಿ ಹೆಗಲಮೇಲಿತ್ತು.ಒಬ್ಬರ ದುಡಿಮೆಯಿಂದ ಐವರ ಹೊಟ್ಟೆತುಂಬಬೇಕಿತ್ತು. ಯೋಚನೆ ಮಾಡುತ್ತಿದ್ದಾಗ ಹೊಳೆದದ್ದು ಹೇಗೂ ಅಡುಗೆ ಚೆನ್ನಾಗಿ ಮಾಡಲು ಬರುತ್ತಿದೆ.ಅದನ್ನೇ ಉದ್ಯಮವನ್ನಾಗಿ ಮಾಡಿದರೆ ಹೇಗೆ ಎಂದು..ಹಾಗೆ ಆರಂಭವಾದದ್ದೇ 'ಹಳ್ಳಿಮನೆ ರೋಟೀಸ್' ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಮೊಬೈಲ್ ಕ್ಯಾಂಟೀನ್ ನಡೆಸುತ್ತಾ ಜೀವನ ನಡೆಸುತ್ತಿದ್ದಾರೆ ಶಿಲ್ಪಾ.ಬೆಳಗ್ಗೆ ಐದು ಗಂಟೆಗೆ ಮಾರುಕಟ್ಟೆಯಿಂದ ತರಕಾರಿಗಳನ್ನು ತಂದು ಸ್ವಚ್ಛಗೊಳಿಸಿ ರೋಟಿಗೆ ಬೇಕಾದ ಹಿಟ್ಟು ತಯಾರು ಮಾಡಿ ಸಂಜೆ ಮೊಬೈಲ್ ಕ್ಯಾಂಟೀನ್ ನಲ್ಲಿ ಮಂಗಳೂರಿಗರಿಗೆ ತನ್ನ ಕೈರುಚಿಯನ್ನು ಉಣಬಡಿಸುತ್ತಾಳೆ.. ರೊಟ್ಟಿ ,ರಾಗಿಮುದ್ದೆಯ ರುಚಿಗೆ ಸೋತವರು ಖಾಯಂ ಗಿರಾಕಿಗಳು. ಅಪರೂಪಕ್ಕೊಮ್ಮೆ ಮಂಗಳೂರಿಗೆ ಭೇಟಿಕೊಡುವವರೂ ಅವರ ಕೈರುಚಿಯ ರೋಟಿಯನ್ನೊಮ್ಮೆ ಸವಿದೇ ತೆರಳಬೇಕು ಎಂದು ಬಯಸುತ್ತಾರೆ.ಇವರ ಸ್ವ ಉದ್ಯೋಗವನ್ನು ಕಂಡು ಮಹೀಂದ್ರಾ ಕಂಪೆನಿಯ ಆನಂದ ಮಹೀಂದ್ರಾ ಅವರು ವಾಹನವೊಂದನ್ನು ಆಕೆಗೆ ನೀಡಿದ್ದಾರೆ.
ಇವರೆಲ್ಲ ನಮ್ಮ ನಾಡಿನ ಹೆಮ್ಮೆಯ ಮಹಿಳೆಯರು.ಸಮಾಜದಲ್ಲಿ ತಮ್ಮ ಕಾರ್ಯದಕ್ಷತೆ , ಕಠಿಣ ಪರಿಶ್ರಮದಿಂದ ತಮ್ಮದೇ ಆದ ಛಾಪನ್ನು ಮೂಡಿಸಿದವರು.ಪುರುಷ, ಮಹಿಳೆ ಎಂಬ ಭೇದವನ್ನು ತೋರದೆ ಎಲ್ಲರೊಂದಿಗೆ ಸಹಬಾಳ್ವೆ ನಡೆಸುತ್ತಾ ಒಬ್ಬರಿಗೊಬ್ಬರು ಸಹಕರಿಸುತ್ತಾ ಮುನ್ನಡೆದವರು.ಇವರೆಲ್ಲ ನನ್ನಿಂದ ಸಾಧ್ಯವಿಲ್ಲ ಎಂದು ಕೈಕಟ್ಟಿ ಕುಳಿತರೆ ಸಾಧ್ಯವೇ ಇರುತ್ತಿರಲಿಲ್ಲ.ನಾನೂ ಮಾಡಬಲ್ಲೆ ಎಂಬ ಆತ್ಮವಿಶ್ವಾಸದಿಂದ ಸೋಲುಗಳಿಗೆ ಜಗ್ಗದೆ ಏಕಾಗ್ರತೆಯಿಂದ ನಡೆದರೆ ಯಶಸ್ಸು ಕಟ್ಟಿಟ್ಟ ಬುತ್ತಿ.ಯಶಸ್ಸೆಂಬುದು ಪುರುಷರ ಸ್ವತ್ತಲ್ಲ.ಅದು ಸಾಧಕನ ಬಳಿಯಿರಲು ಬಯಸುತ್ತದೆ.ಆಲಸಿಗೂ ಯಶಸ್ಸಿಗೂ ಬದ್ಧ ವೈರತ್ವ.
ಮಹಿಳೆಯರು ಉದ್ಯೋಗದಲ್ಲಿ ತಾರತಮ್ಯ , ಪುರುಷಪ್ರಧಾನ ಧೋರಣೆಯಿಂದ ಅವಮಾನ ಎದುರಿಸಬೇಕಾಗುವುದಿಲ್ಲವೇ ..? ಹೌದು.ಹಲವಾರು ಬಾರಿ ಎದುರಿಸಬೇಕಾಗಿ ಬರಬಹುದು.ಪ್ರಾಜೆಕ್ಟ್ ಒಂದರ ಯಶಸ್ಸಿಗೆ ಪುರುಷ ಟೀಂ ಲೀಡರ್ ನಷ್ಟೇ ಶ್ರಮವಹಿಸಿದ್ದರೂ ತನ್ನ ಹೆಸರನ್ನೇ ನಮೂದಿಸದೇ ಕೇವಲ ಆತನ ಹೆಸರು ಮಾತ್ರ ನಮೂದಿಸಿ ಎಲ್ಲಾ ಹೊಗಳಿಕೆಯನ್ನು ಪಡೆದುಕೊಳ್ಳುವ ಹುನ್ನಾರದಲ್ಲಿದ್ದ ಟೀಂ ಲೀಡರ್ ನನ್ನು ಹಿರಿಯ ಅಧಿಕಾರಿಗಳ ಮುಂದೆಯೇ ತರಾಟೆಗೆ ತೆಗೆದುಕೊಂಡಿದ್ದರಂತೆ ಗೆಳತಿ ಸುಪ್ರೀತಾ ವೆಂಕಟ್."ಪ್ರಾಜೆಕ್ಟ್ ಮಾಡಿದ್ದು ಎಲ್ಲರೂ ಸೇರಿ.ಹೆಸರು ಒಬ್ಬನದೇ.. ಯಾಕೆ..? ಎಂದು ಪ್ರಶ್ನಿಸಿ ಆತನ ಬೆವರಿಳಿಸಿದ್ದೆ .ಕೊನೆಗೆ ತಪ್ಪೊಪ್ಪಿಕೊಂಡಿದ್ದ.." ಎಂದು ಗೆಳತಿ ಇತ್ತೀಚೆಗೆ ತಮ್ಮ ಲೇಖನವೊಂದರಲ್ಲಿ ಬರೆದಿದ್ದರು.ಆಕೆಯೇನೋ ಧೈರ್ಯವಂತೆ. ನ್ಯಾಯ ಪಡಕೊಂಡಳು.ಎಲ್ಲಾ ಮಹಿಳೆಯರಿಗೂ ಸಾಧ್ಯವಾ..? ಕೆಲವರಿಗೆ ಹಿಂಜರಿಕೆ, ನನ್ನನ್ನು ಟಾರ್ಗೆಟ್ ಮಾಡಿದರೆ ಎಂಬ ಭಯ, ಉದ್ಯೋಗ ಕಳೆದುಕೊಂಡರೆ ಏನು ಮಾಡಲಿ..? ಎಂಬ ಅನಿವಾರ್ಯತೆ ...ಇಂತಹ ಕಾರಣಗಳು ಹೆಣ್ಣಿನ ಬಾಯಿಯನ್ನು ಕಟ್ಟಿಹಾಕುತ್ತವೆ .
ಮಕ್ಕಳಿಗೆ ಎಳವೆಯಲ್ಲೇ ಧೈರ್ಯವಾಗಿ ಬದುಕನ್ನು ಎದುರಿಸಲು ಕಲಿಸುವುದು ಪೋಷಕರ ಜವಾಬ್ದಾರಿ.ಈ ಕೆಳಗಿನ ವಿಷಯಗಳು ಗಮನದಲ್ಲಿರಲಿ.
*ಪ್ರತಿಯೊಂದು ಕೆಲಸದಲ್ಲೂ ನೀನು ಹಾಗೆ ಮಾಡಬಾರದು.ಹೀಗೆ ಮಾಡಬಾರದು.ಇದು ಪುರುಷರ ಕೆಲಸ.ಇದು ಹೆಣ್ಣುಮಕ್ಕಳದೇ ಕೆಲಸ ಎಂಬ ಭೇದವನ್ನು ಬಿತ್ತದೆ ಎಲ್ಲದರಲ್ಲೂ ಆಕೆಯನ್ನು ತೊಡಗಿಕೊಳ್ಳುವಂತೆ ಪ್ರೋತ್ಸಾಹಿಸಿ.
*ವೀರ ಮಹಿಳೆಯರ ,ಪುರುಷರ ,ವಿಜ್ಞಾನಿಗಳ ಜೀವನ ಚರಿತ್ರೆಯನ್ನು ಆಕೆಗೆ ಹೇಳುತ್ತಿರಿ.ಪುಟ್ಟ ಮಗು ಪ್ರಶ್ನೆ ಕೇಳುತ್ತೆ.ತಾಳ್ಮೆಯಿಂದ ಉತ್ತರಿಸಿ.. ಮಕ್ಕಳು ಕನಸು ಕಾಣಬೇಕು.ಇಂದಿನ ಪುಟ್ಟ ಕನಸುಗಳು ಮುಂದೆ ದೊಡ್ಡ ಸಾಧನೆಗೆ ಪ್ರೇರಣೆಯಾಗಲಿ.
*ಪುಟ್ಟ ಪುಟ್ಟ ಧೈರ್ಯದ ಹೆಜ್ಜೆಯನ್ನು ಗುರುತಿಸಿ ಹುರಿದುಂಬಿಸಿ.ಇಂದು ಸಿಕ್ಕ ಹೆತ್ತವರ ಪ್ರೋತ್ಸಾಹ ಆಕೆಯನ್ನು ಭವಿಷ್ಯದಲ್ಲಿ ಧೈರ್ಯವಂತೆಯನ್ನಾಗಿ ಮಾಡಬಲ್ಲುದು.
*ಹೆಣ್ಣು ಮಗುವಿನ ವಿದ್ಯಾಭ್ಯಾಸಕ್ಕೆ ಒತ್ತು ನೀಡಿ.ಇಂದು ನಾವು ಆಕೆಯ ಜೊತೆಗಿರಬಹುದು.ಮುಂದೊಂದು ದಿನ ಬಾಳದಾರಿಯಲ್ಲಿ ಅನೀರಿಕ್ಷಿತ ತಿರುವುಗಳಲ್ಲಿ ಆಕೆ ಸಿಕ್ಕಿಹಾಕಿಕೊಂಡಾಗ ವಿದ್ಯೆ ಆಕೆಯ ಬದುಕಿಗೆ ಭರವಸೆಯನ್ನು ತುಂಬಬಹುದು.
*ಹೆಣ್ಣು ಮಗು ನಡೆವ ಹಾದಿಯಲ್ಲಿ ಗಮನವಿರಿಸಿ.ಆದರೆ ಎಲ್ಲದಕ್ಕೂ ಗದರಿಸದಿರಿ.ಆಕೆಗೆ ಸರಿಯಾದ ಮಾರ್ಗದರ್ಶನ ಮಾಡಿದರೆ ಸಾಕು.
*ಗಂಡುಮಕ್ಕಳಿಗೆ ಹೆಣ್ಣುಮಕ್ಕಳನ್ನು ಗೌರವಿಸುವ ಗುಣವನ್ನು ಎಳವೆಯಿಂದಲೇ ಕಲಿಸಬೇಕು.ಅವರ ಪರಿಶ್ರಮಕ್ಕೂ ಬೆಲೆಯಿದೆ ಎಂಬ ಭಾವನೆ ಮೂಡಿಸಬೇಕು.
*ಮಗುವಿನೆದುರು ಯಾರನ್ನೂ ಅವಳೇನು ಮಹತ್ಸಾಧನೆ ಮಾಡಿದ್ದಾಳೆ..? ಎಂದು ಜರೆಯದಿರಿ.
ಹೆಣ್ಣು ಮುಂದೆ ಸಾಧನೆ ಮಾಡಿ ಹೆಸರು ತರಬೇಕಾದರೆ ,ತನ್ನ ಜೀವನವನ್ನು ತಾನೇ ರೂಪಿಸಿಕೊಳ್ಳಬೇಕಾದರೆ ಪೋಷಕರು ಇಂದು ಮಗುವಿಗೆ ಜೀವನದ ಆದರ್ಶಗಳನ್ನು ತಾವು ಪಾಲಿಸಿ ಮಾದರಿಯಾಗಬೇಕು.ಹೆಣ್ಣಿಗೆ ಹೆಣ್ಣೇ ಸ್ಫೂರ್ತಿಯಾಗಬೇಕು.
ಹೆಣ್ಣು ಗಂಡೆಂಬ ಭೇದವನ್ನು ಪ್ರಕೃತಿ ಇಟ್ಟಿದೆ.
ಹೆಣ್ಣು ಗಂಡೆಂಬ ತಾರತಮ್ಯ ಸಮಾಜ ಕಟ್ಟಿದೆ
ಹೆಣ್ಣು ಯುಕ್ತಿಯಿಂದ ಉದ್ಯೋಗಕ್ಕೂ ಸೈ
ಹೆಣ್ಣು ಶಕ್ತಿಯಿಂದ ದುಡಿಯಲೂ ಸೈ.
✍️... ಅನಿತಾ ಜಿ.ಕೆ.ಭಟ್.
10-03-2020.
momspresso Kannadaದ #ಸಮಾನತೆಗಾಗಿ ನಾವೆಲ್ಲರೂ# ಸರಣಿಯ ಐದನೇ ಬರಹ.
ಮನಸಿದ್ದರೆ ಏನನ್ನು ಸಾಧಿಸಬಹುದು....,👌👌
ReplyDeleteಥ್ಯಾಂಕ್ಯೂ 💐🙏
ReplyDelete