Wednesday, 11 March 2020

ಮಕ್ಕಳ ಪರೀಕ್ಷಾ ತಯಾರಿ -ತಾಯಂದಿರಿಗೆ ಕಿವಿಮಾತು




  ಪರೀಕ್ಷೆ ಸಮೀಪಿಸುತ್ತಿದ್ದಂತೆ ಮಕ್ಕಳು ಎಷ್ಟು ಒತ್ತಡಕ್ಕೆ ಒಳಗಾಗುತ್ತಾರೋ ಅದಕ್ಕಿಂತ ಹೆಚ್ಚಾಗಿ ತಾಯಂದಿರು ಆತಂಕಪಡುತ್ತಾರೆ.. ಇದು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯ ಸಂಗತಿ.ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಹೇಗೆ ಸಮಂಜಸವಲ್ಲವೋ ಹಾಗೆಯೇ ಪರೀಕ್ಷೆ ಸಮೀಪಿಸುತ್ತಿದ್ದಂತೆ ಓದಲು ಆರಂಭಿಸುವುದು ಎಂಬ ಅಭ್ಯಾಸ ಒಳ್ಳೆಯದಲ್ಲ.ಕಲಿಕೆ ನಿರಂತರವಾಗಿರಬೇಕು.ಆಯಾಯಾ ದಿನದ ವಿಷಯಗಳನ್ನು ಅಂದೇ ಓದಿ ಮನದಟ್ಟು ಮಾಡಿಕೊಳ್ಳಬೇಕು.

ಹಲವು ತಾಯಂದಿರ ಸಮಸ್ಯೆಯೇನೆಂದರೆ ಮಗ ಅಥವಾ ಮಗಳು ಓದುವುದೇ ಇಲ್ಲ.ಬರೀ ದೂರದರ್ಶನ, ಮೊಬೈಲ್, ಲ್ಯಾಪ್ ಟಾಪ್ ನಲ್ಲಿ ಸಮಯ ಕಳೆಯುತ್ತಾರೆ ಎಂಬುದು.ಇದಕ್ಕಿರುವ ಸರಳ ಪರಿಹಾರಗಳು ಏನೆಂದು ನೋಡೋಣ.

*ಮಗುವಿಗೆ ದಿನನಿತ್ಯ ಒಂದು ನಿಗದಿತ ಸಮಯದಲ್ಲಿ ಹೋಂ ವರ್ಕ್ ಮಾಡಲು ಅಭ್ಯಾಸ ಮಾಡಿ.ತಾಯಂದಿರೂ ಕೂಡ ಆ ಸಮಯದಲ್ಲಿ ಮೊಬೈಲ್ ,ಟಿವಿ ಧಾರಾವಾಹಿ ಗಳಿಂದ ದೂರವಿರಿ.ಯಾವತ್ತೂ ಕೂಡಾ ನೀವು ಟೀವಿ ಮೊಬೈಲ್ ನೋಡುತ್ತಾ ಮಕ್ಕಳನ್ನು ಓದಿ ಬರೆ ಎಂದು ಗದರಬೇಡಿ.ಏಕೆಂದರೆ ನಿಮಗಿಂತ ಹೆಚ್ಚು ಕುತೂಹಲ ಮಕ್ಕಳಿಗಿರುತ್ತದೆ ಧಾರಾವಾಹಿ ಹೇಗೆ ಮುಂದುವರಿಯುತ್ತಿದೆ, ಮೊಬೈಲ್ ನಲ್ಲಿ ಏನಿದೆ ಎಂಬುದಾಗಿ..ಆದ್ದರಿಂದ ಮೊದಲು ನಾವು ನಮ್ಮ ಮನಸ್ಸನ್ನು ಹತೋಟಿಯಲ್ಲಿಡೋಣ .ಓದಿಬರೆಯುವ ಸಂದರ್ಭದಲ್ಲಿ ಮನೆಯಲ್ಲಿ ಪ್ರಶಾಂತ ವಾತಾವರಣ ಇರುವಂತೆ ನೋಡಿಕೊಳ್ಳಿ.ಇದನ್ನು ದಿನವೂ ತಪ್ಪದೇ ರೂಢಿಸುವ ಜವಾಬ್ದಾರಿ ಹೆತ್ತವರದು.

*ಮಕ್ಕಳಲ್ಲಿ ಓದಿನ ಕಡೆ ಆಸಕ್ತಿ ಬೆಳೆಯುವಂತೆ ಮಾಡಬೇಕು.ಅರ್ಥವಾಗದ ಗಣಿತ ವಿಷಯವನ್ನು ಸರಳವಾಗಿ ದಿನನಿತ್ಯದ ಅವರು ಇಷ್ಟಪಡುವ ಚಾಕಲೇಟ್, ಐಸ್ಕ್ರೀಮ್, ಗೋಲಿಗಳು... ಇತ್ಯಾದಿಗಳನ್ನು ಉದಾಹರಿಸುತ್ತಾ ಕಲಿಸಿ..

*ಮಕ್ಕಳಿಗೆ ಅತಿಯಾಗಿ ನೀನು ಪ್ರತಿಭಾವಂತ ಅಥವಾ ಶತದಡ್ಡ ಎಂಬುದಾಗಿ ಹೇಳಬೇಡಿ.ಇದೇ ಮುಂದೆ ಅಹಂಕಾರ ಅಥವಾ ಕೀಳರಿಮೆಗೆ ಕಾರಣವಾಗಬಹುದು.ಮಕ್ಕಳ ಜ್ಞಾನವೃದ್ಧಿಗೆ ಹೆಚ್ಚಿನ ಆದ್ಯತೆ ಇರಲಿ.ಬರೀ ಅಂಕಗಳಿಕೆಯನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು ಉಚಿತವಲ್ಲ. ಒಂದು ವಿಷಯದಲ್ಲಿ ಮಗು ಕಡಿಮೆ ಅಂಕ ಗಳಿಸಿದರೆ ನಿನ್ನಿಂದ ಇನ್ನೂ ಹೆಚ್ಚು ಸಾಧನೆ ಸಾಧ್ಯ ಎಂಬುದಾಗಿ ಆತ್ಮವಿಶ್ವಾಸ ಮೂಡಿಸಿ.

*ಪುಟ್ಟ ಮಕ್ಕಳ ತಾಯಂದಿರು ಮಕ್ಕಳೊಂದಿಗೆ ತಾವೂ ಕುಳಿತು ಅಭ್ಯಾಸಮಾಡಿಸುವುದು ಸೂಕ್ತ.ಆಗ ಮಕ್ಕಳು ಓದು ಬರಹದಲ್ಲಿ ಇನ್ನಷ್ಟು ಖುಷಿಯಿಂದ ತೊಡಗಿಸಿಕೊಳ್ಳುತ್ತಾರೆ.ಉದ್ಯೋಗದಲ್ಲಿರುವ ಪೋಷಕರು ಕೂಡ ದಿನಕ್ಕೆ ಅರ್ಧಗಂಟೆಯಾದರೂ ಮಕ್ಕಳ ಶಾಲೆಯ ಪಾಠಪ್ರವಚನಗಳ ಬಗ್ಗೆ,ಅವರ ಹೋಂ ವರ್ಕ್ ವಿಷಯಗಳನ್ನು ಚರ್ಚಿಸುವಷ್ಟು ಬಿಡುವುಮಾಡಿಕೊಳ್ಳಿ.

*ಪರೀಕ್ಷಾ ಸಮಯದಲ್ಲಿ ಆರೋಗ್ಯಕೆಡದಂತೆ ಜಾಗರೂಕತೆವಹಿಸಿ.ದೂರಪ್ರಯಾಣ ಮೊಟಕುಗೊಳಿಸಿ.ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸಬೇಕು.ಜಂಕ್ ಫುಡ್ ನಿಂದ ದೂರವಿರುವುದು ಒಳ್ಳೆಯದು.ರಾತ್ರಿ ಸರಿಯಾಗಿ ವಿಶ್ರಾಂತಿ ಇರಲಿ.ತಡರಾತ್ರಿಯವರೆಗೆ ಓದಿ ಬೆಳಿಗ್ಗೆ ತಡಮಾಡಿ ಏಳುವುದಕ್ಕಿಂತ ರಾತ್ರಿ ಬೇಗ ಮಲಗಿ ಬೆಳಗ್ಗೆ ಬೇಗ ಏಳುವುದು ಸೂಕ್ತ.

*ಮಕ್ಕಳಲ್ಲಿ ನಿನ್ನ ಗೆಳೆಯ/ಗೆಳತಿಗೆ ಎಷ್ಟು ಅಂಕ ದೊರೆತಿದೆ ಎಂದು ಕೇಳಿ ಹೋಲಿಸಬೇಡಿ.ಕಡಿಮೆಯೆಂದು ಅವಮಾನಿಸುವುದು/ಹೆಚ್ಚೆಂದು ಬೀಗುವುದು ಸಮಂಜಸವಲ್ಲ.ಇದು ಮಕ್ಕಳ ನಡುವಿನ ಗೆಳೆತನದ ಬಾಂಧವ್ಯವನ್ನು ಸಡಿಲಗೊಳಿಸೀತು.

*ಸೋಲೇ ಗೆಲುವಿನ ಸೋಪಾನ ಎಂಬುದನ್ನು ಬಾಲ್ಯದಿಂದಲೇ ಮಕ್ಕಳಿಗೆ ತಿಳಿಸಿಹೇಳಬೇಕು.ಒಮ್ಮೆ ಸೋತರೆ ಜೀವಮಾನವಿಡೀ ಸೋಲು ಎಂಬುದಲ್ಲ.ಇಂದು ಸೋತವನಿಗೆ ನಾಳೆ ಗೆಲುವಿನ ದಿನ ಬಂದೇ ಬರುವುದು.ತಾಳ್ಮೆ,ಶ್ರದ್ಧೆ ರೂಢಿಸಿಕೊಳ್ಳಬೇಕು.

*ಪರೀಕ್ಷೆ ಸಮೀಪಿಸುತ್ತಿದ್ದಂತೆ ಶಿಕ್ಷಕರು ಆ ಪಾಠ ಮಾಡಿಲ್ಲ, ಇದನ್ನು ಹೇಳಿಕೊಟ್ಟಿಲ್ಲವೇ ಎಂದು ಮಕ್ಕಳೆದುರು ಶಿಕ್ಷಕರನ್ನು ತೆಗಳುವುದು ಸರಿಯಲ್ಲ.ಇದು ಮಕ್ಕಳಿಗೆ ಶಿಕ್ಷಕರಲ್ಲಿದ್ದ ಗೌರವಭಾವನೆಗೆ ಧಕ್ಕೆ ತರಬಹುದು.ಶಿಕ್ಷಕರಿಗೆ ಗೌರವವನ್ನು ಕೊಟ್ಟು ಮಾತನಾಡಿ.ಆಗ ಮಗು ಕೂಡಾ ಅಧ್ಯಾಪಕರು ಹೇಳಿಕೊಟ್ಟ ವಿಷಯಗಳನ್ನು ಆಸಕ್ತಿಯಿಂದ ಕಲಿತುಕೊಳ್ಳುತ್ತದೆ.

*ತಾಯಂದಿರು ಪರೀಕ್ಷಾ ಭಯದಿಂದ ಮೊದಲು ಹೊರಬಂದು ಧನಾತ್ಮಕವಾಗಿ ಯೋಚಿಸಿ.ತಾಯಿಯ ವರ್ತನೆಗಳು ಮಗುವಿಗೆ ಪೂರಕ,ಪ್ರೇರಕ ಶಕ್ತಿ ಆಗಬಲ್ಲುದು.

*ಪರೀಕ್ಷೆಗೆ ಕೊಂಡೊಯ್ಯಬೇಕಾದ ಅಗತ್ಯ ವಸ್ತುಗಳನ್ನು ಹಿಂದಿನ ದಿನವೇ ಬ್ಯಾಗ್ ಗೆ ತುಂಬಿಸಲು ಹೇಳಿ.ನೀವೂ ಕೂಡ ಒಮ್ಮೆ ಪರಿಶೀಲಿಸಿ.ಕೊನೆಯ ಕ್ಷಣದಲ್ಲಿ ಅದನ್ನು ಕೊಂಡೊಯ್ದಿಲ್ಲ,ಇದು ಕಾಣುತ್ತಿಲ್ಲ,ಎಲ್ಲಿ ಹೋಯಿತು ನನ್ನಿಷ್ಟದ ಪೆನ್ನು ಪೆನ್ಸಿಲ್ ಎಂಬಿತ್ಯಾದಿ ಹುಡುಕಾಟ ಆತಂಕಗಳಿಂದ ಓದಿದ ವಿಷಯಗಳು ಮರೆತು ಹೋಗುವ ಸಾಧ್ಯತೆಯಿದೆ.

*ಮಕ್ಕಳು ಓದಿನಲ್ಲಿ ಏಕಾಗ್ರತೆ ಹೊಂದಿಲ್ಲದಿದ್ದರೆ ಓದಲು ಆರಂಭಿಸುವ ಮೊದಲು ಜ್ಞಾನ ಮುದ್ರೆಯನ್ನು ಒಂದೈದು ನಿಮಿಷ ಮಾಡಿಸಿ, ನೀವೂ ಮಾಡಿ.ಅಮ್ಮಮಗು ಇಬ್ಬರೂ ಏಕಾಗ್ರತೆಯಿಂದ ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ..

*ಮಕ್ಕಳ ಊಟದಲ್ಲಿ ಹಣ್ಣುಹಂಪಲು, ತರಕಾರಿಗಳು ಯಥೇಚ್ಛವಾಗಿ ಇರಲಿ.ನೀರು ಆಗಾಗ ಕುಡಿಸಿ.

*ಮಾತುಮಾತಿಗೂ ಗದರದಿರಿ.ನಿಮ್ಮ ಬಾಲ್ಯದಲ್ಲಿ ಹೇಗೆ ಪರೀಕ್ಷೆಗೆ ಅಧ್ಯಯನ ಮಾಡುತ್ತಿದ್ದಿರಿ , ಅಂಕಗಳಿಕೆ ಹೇಗಿತ್ತು ಎಂಬುದನ್ನು ನೆನಪಿಸಿಕೊಳ್ಳಿ.

*ಬರೀ ಪರೀಕ್ಷೆಯೊಂದನ್ನೇ ಮಾನದಂಡವಾಗಿ ಇಟ್ಟುಕೊಳ್ಳದೆ ಶಿಸ್ತು, ಸಂಸ್ಕಾರ, ದೇಶಪ್ರೇಮ, ಸ್ವಚ್ಛತೆ,ನಯವಿನಯ, ಶ್ರದ್ಧೆ,ಸಮಯಪಾಲನೆಯಂತಹ ಗುಣಗಳನ್ನು ಮಗುವಿನಲ್ಲಿ ಬಿತ್ತಲು ಪ್ರಯತ್ನಿಸಿ.ಇಂದು ಬಿತ್ತಿದ ಬೀಜ ಮೊಳಕೆಯೊಡೆದು ಫಲಕೊಟ್ಟಾಗ ನೀವೇ ಆನಂದಿಸಿ.ಹೆಮ್ಮೆಪಟ್ಟುಕೊಳ್ಳಿ .

  ಮಕ್ಕಳು ಓದಿ ಉನ್ನತ ಸ್ಥಾನವನ್ನು ಅಲಂಕರಿಸಬೇಕು.ಅದನ್ನು ನೋಡಿ ಹೆಮ್ಮೆಪಟ್ಟುಕೊಳ್ಳಬೇಕು ಎಂಬುದು ಎಲ್ಲ ಪೋಷಕರ ಆಸೆಯಾಗಿರುತ್ತದೆ.ಅದಕ್ಕೆ ಬಾಲ್ಯದಿಂದಲೇ   ಮಕ್ಕಳ ಕೌಶಲ್ಯಗಳನ್ನು ಪ್ರೋತ್ಸಾಹಿಸಿ.ಓದಿನೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಹುರಿದುಂಬಿಸಿ.ಪರೀಕ್ಷೆಯ ಸಿದ್ಧತೆಯಲ್ಲಿರುವ ಮಕ್ಕಳಿಗೂ ಅವರ ತಾಯಂದಿರಿಗೂ ಶುಭಹಾರೈಕೆಗಳು..ಪ್ರತೀ ಮಗು ಕೂಡಾ ಭಾರತಮಾತೆ ಹೆಮ್ಮೆಪಡುವಂತಹ ಪ್ರಜೆಯಾಗಲಿ.


✍️... ಅನಿತಾ ಜಿ.ಕೆ.ಭಟ್.
12-03-2020.

2 comments: